ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀಹರಣ ಪರ್ವ
ಅಧ್ಯಾಯ 252
ಸಾರ
ದ್ರೌಪದಿಯು ಪಾಂಡವರ ಶೌರ್ಯವನ್ನು ಹೇಳಿಕೊಂಡು ಜಯದ್ರಥನನ್ನು ಎಚ್ಚರಿಸುವುದು (1-22). ಜಯದ್ರಥನು ಬಲಾತ್ಕಾರವಾಗಿ ಅವಳನ್ನು ಹಿಡಿಯಲು ಎಳೆಯಲ್ಪಡುತ್ತಾ ದ್ರೌಪದಿಯು ರಥವನ್ನೇರಿದುದು; ಧೌಮ್ಯನು ರಥದ ಹಿಂದೆ ಓಡಿ ಹೋದುದು (23-27).
03252001 ವೈಶಂಪಾಯನ ಉವಾಚ।
03252001a ಸರೋಷರಾಗೋಪಹತೇನ ವಲ್ಗುನಾ। ಸರಾಗನೇತ್ರೇಣ ನತೋನ್ನತಭ್ರುವಾ।
03252001c ಮುಖೇನ ವಿಸ್ಫೂರ್ಯ ಸುವೀರರಾಷ್ಟ್ರಪಂ। ತತೋಽಬ್ರವೀತ್ತಂ ದ್ರುಪದಾತ್ಮಜಾ ಪುನಃ।।
ವೈಶಂಪಾಯನನು ಹೇಳಿದನು: “ಅವಳ ಸುಂದರ ಮುಖವು ಸಿಟ್ಟಿನಿಂದ ಕೆಂಪಾಗಲು, ಅವಳ ಕಣ್ಣುಗಳು ರಕ್ತದಂತೆ ಕೆಂಪಾಗಲು, ಹುಬ್ಬುಗಳು ಮೇಲೇರಿ ಗಂಟಿಕ್ಕಿರಲು ಆ ದ್ರುಪದಾತ್ಮಜೆಯು ಪುನಃ ಸುವೀರರಾಷ್ಟ್ರಪತಿಗೆ ಮುಖವನ್ನು ತಿರುವಿ ಹೇಳಿದಳು.
03252002a ಯಶಸ್ವಿನಸ್ತೀಕ್ಷ್ಣವಿಷಾನ್ಮಹಾರಥಾನ್। ಅಧಿಕ್ಷಿಪನ್ಮೂಢ ನ ಲಜ್ಜಸೇ ಕಥಂ।
03252002c ಮಹೇಂದ್ರಕಲ್ಪಾನ್ನಿರತಾನ್ಸ್ವಕರ್ಮಸು। ಸ್ಥಿತಾನ್ಸಮೂಹೇಷ್ವಪಿ ಯಕ್ಷರಕ್ಷಸಾಂ।।
“ಮೂಢ! ಮಹೇಂದ್ರನಂತೆ ಸ್ವಕರ್ಮದಲ್ಲಿ ನಿರತರಾಗಿರುವ, ಯಕ್ಷ-ರಾಕ್ಷಸರನ್ನು ಯುದ್ಧದಲ್ಲಿ ಎದುರಿಸಿರುವ, ತೀಕ್ಷ್ಣವಿಷಸರ್ಪಗಳಂತಿರುವ ಯಶಸ್ವಿನಿ ಮಹಾರಥಿಗಳನ್ನು ಅಪಮಾನಿಸುತ್ತಿರುವೆ! ನಿನಗೆ ಏಕೆ ನಾಚಿಕೆಯಾಗುವುದಿಲ್ಲ?
03252003a ನ ಕಿಂ ಚಿದೀಡ್ಯಂ ಪ್ರವದಂತಿ ಪಾಪಂ। ವನೇಚರಂ ವಾ ಗೃಹಮೇಧಿನಂ ವಾ।
03252003c ತಪಸ್ವಿನಂ ಸಂಪರಿಪೂರ್ಣವಿದ್ಯಂ। ಭಷಂತಿ ಹೈವಂ ಶ್ವನರಾಃ ಸುವೀರ।।
ಪರಿಪೂರ್ಣವಿದ್ಯೆಯನ್ನು ಹೊಂದಿರುವ, ಪ್ರಶಂಸೆಗೆ ಪಾತ್ರನಾದ ತಪಸ್ವಿಯ ಕುರಿತು ಗ್ರಹಸ್ಥನಾಗಲೀ ವನಚರಿಯಾಗಲೀ ಯಾರೂ ಕೆಟ್ಟ ಮಾತುಗಳನ್ನಾಡುವುದಿಲ್ಲ. ಸುವೀರ! ನೀನು ಮಾತನಾಡುತ್ತಿದ್ದೀಯೆ!
03252004a ಅಹಂ ತು ಮನ್ಯೇ ತವ ನಾಸ್ತಿ ಕಶ್ಚಿದ್। ಏತಾದೃಶೇ ಕ್ಷತ್ರಿಯಸನ್ನಿವೇಶೇ।
03252004c ಯಸ್ತ್ವಾದ್ಯ ಪಾತಾಲಮುಖೇ ಪತಂತಂ। ಪಾಣೌ ಗೃಹೀತ್ವಾ ಪ್ರತಿಸಂಹರೇತ।।
ಇಲ್ಲಿರುವ ಕ್ಷತ್ರಿಯ ಸನ್ನಿವೇಶದಲ್ಲಿ ಇಂದು ಯಾರೂ ಪಾತಾಳಮುಖವಾಗಿ ಬೀಳುತ್ತಿರುವ ನಿನ್ನನ್ನು ಕೈಹಿಡಿದು ಮೇಲೆತ್ತುವವರು ಇಲ್ಲ ಎಂದು ನನಗನ್ನಿಸುತ್ತದೆ.
03252005a ನಾಗಂ ಪ್ರಭಿನ್ನಂ ಗಿರಿಕೂಟಕಲ್ಪಂ। ಉಪತ್ಯಕಾಂ ಹೈಮವತೀಂ ಚರಂತಂ।
03252005c ದಂಡೀವ ಯೂಥಾದಪಸೇಧಸೇ ತ್ವಂ। ಯೋ ಜೇತುಮಾಶಂಸಸಿ ಧರ್ಮರಾಜಂ।।
ಧರ್ಮರಾಜನನ್ನು ನೀನು ಜಯಿಸುವ ಆಸೆಯನ್ನಿಟ್ಟುಕೊಂಡಿದ್ದರೆ, ಒಂದು ಕಡ್ಡಿಯನ್ನು ಹಿಡಿದು ಗಿರಿಕೂಟದಲ್ಲಿ ತನ್ನ ಹಿಂಡಿನಲ್ಲಿ ಕೊಬ್ಬೆದ್ದ ಹಿಮಾಲಯದ ಸಲಗವನ್ನು ಓಡಿಸಲು ಪ್ರಯತ್ನಿಸಿರುವವನಂತೆ ತೋರುತ್ತಿದ್ದೀಯೆ.
03252006a ಬಾಲ್ಯಾತ್ಪ್ರಸುಪ್ತಸ್ಯ ಮಹಾಬಲಸ್ಯ। ಸಿಂಹಸ್ಯ ಪಕ್ಷ್ಮಾಣಿ ಮುಖಾಲ್ಲುನಾಸಿ।
03252006c ಪದಾ ಸಮಾಹತ್ಯ ಪಲಾಯಮಾನಃ। ಕ್ರುದ್ಧಂ ಯದಾ ದ್ರಕ್ಷ್ಯಸಿ ಭೀಮಸೇನಂ।।
ಮಲಗಿರುವ ಮಹಾಬಲಶಾಲಿ ಸಿಂಹವನ್ನು ಬಾಲತನದಿಂದ ಒದ್ದು, ಅದರ ಮುಖದ ಕಣ್ಣಿನ ಹುಬ್ಬಿನ ಕೂದಲನ್ನು ಕಿತ್ತು, ಅವಸರದಲ್ಲಿ ಪಲಾಯನ ಮಾಡುವಂತೆ ನೀನು ಸಿಟ್ಟಿಗೆದ್ದ ಭೀಮಸೇನನನ್ನು ನೋಡಿ ಮಾಡುವೆಯಂತೆ.
03252007a ಮಹಾಬಲಂ ಘೋರತರಂ ಪ್ರವೃದ್ಧಂ। ಜಾತಂ ಹರಿಂ ಪರ್ವತಕಂದರೇಷು।
03252007c ಪ್ರಸುಪ್ತಮುಗ್ರಂ ಪ್ರಪದೇನ ಹಂಸಿ। ಯಃ ಕ್ರುದ್ಧಮಾಸೇತ್ಸ್ಯಸಿ ಜಿಷ್ಣುಮುಗ್ರಂ।।
ಮಹಾಬಲಶಾಲಿಯಾದ, ಘೋರತರವಾದ, ಪ್ರವೃದ್ಧವಾದ, ಹಳದೀ ಬಣ್ಣವನ್ನು ಹೊಂದಿದ್ದ, ಪರ್ವತಕಂದರದಲ್ಲಿ ಮಲಗಿದ್ದ ಉಗ್ರ ಸಿಂಹವನ್ನು ಪಾದದಲ್ಲಿ ಒದ್ದವನಂತೆ ನೀನು ಸಿಟ್ಟಿಗೆದ್ದ ಉಗ್ರ ಜಿಷ್ಣುವನ್ನು ಎದುರಿಸಬೇಕಾಗುತ್ತದೆ.
03252008a ಕೃಷ್ಣೋರಗೌ ತೀಕ್ಷ್ಣವಿಷೌ ದ್ವಿಜಿಹ್ವೌ। ಮತ್ತಃ ಪದಾಕ್ರಾಮಸಿ ಪುಚ್ಚದೇಶೇ।
03252008c ಯಃ ಪಾಂಡವಾಭ್ಯಾಂ ಪುರುಷೋತ್ತಮಾಭ್ಯಾಂ। ಜಘನ್ಯಜಾಭ್ಯಾಂ ಪ್ರಯುಯುತ್ಸಸೇ ತ್ವಂ।।
ಎರಡು ಕೃಷ್ಣವರ್ಣದ, ತೀಕ್ಷ್ಣವಿಷದ ಹಾವುಗಳ ಬಾಲಗಳನ್ನು ಹುಚ್ಚನು ಮೆಟ್ಟುವಂತೆ ಆ ಕಿರಿಯ ಪಾಂಡವರೀರ್ವರು ಪುರುಷೋತ್ತಮರೊಡನೆ ನೀನು ಯುದ್ಧಮಾಡಬೇಕಾಗುತ್ತದೆ.
03252009a ಯಥಾ ಚ ವೇಣುಃ ಕದಲೀ ನಲೋ ವಾ। ಫಲಂತ್ಯಭಾವಾಯ ನ ಭೂತಯೇಽತ್ಮನಃ।
03252009c ತಥೈವ ಮಾಂ ತೈಃ ಪರಿರಕ್ಷ್ಯಮಾಣಾಂ। ಆದಾಸ್ಯಸೇ ಕರ್ಕಟಕೀವ ಗರ್ಭಂ।
ಹೇಗೆ ಬಿದಿರು, ಹುಲ್ಲು ಅಥವಾ ಬಾಳೆಗಳು ತಮ್ಮನ್ನು ಇಲ್ಲವಾಗಿಸುವುದಕ್ಕಾಗಿಯೇ ಫಲವನ್ನು ನೀಡುತ್ತವೆಯೋ, ಹೇಗೆ ಏಡಿಯು ಮರಿಹಾಕಿ ಸಾಯುತ್ತದೆಯೋ ಹಾಗೆಯೇ ನೀನು ಅವರಿಂದ ರಕ್ಷಿತಳಾದ ನನ್ನನ್ನು ಪಡೆಯಲು ಬಯಸುತ್ತಿರುವೆ.”
03252010 ಜಯದ್ರಥ ಉವಾಚ।
03252010a ಜಾನಾಮಿ ಕೃಷ್ಣೇ ವಿದಿತಂ ಮಮೈತದ್। ಯಥಾವಿಧಾಸ್ತೇ ನರದೇವಪುತ್ರಾಃ।
03252010c ನ ತ್ವೇವಮೇತೇನ ವಿಭೀಷಣೇನ। ಶಕ್ಯಾ ವಯಂ ತ್ರಾಸಯಿತುಂ ತ್ವಯಾದ್ಯ।।
ಜಯದ್ರಥನು ಹೇಳಿದನು: “ಆ ನರದೇವಪುತ್ರರು ಹೇಗಿದ್ದಾರೆಂದು ನನಗೆ ಈಗಾಗಲೇ ತಿಳಿದಿದೆ ಕೃಷ್ಣೇ! ಆದರೆ ನೀನು ಇಂದು ಕೊಡುತ್ತಿರುವ ಬೆದರಿಕೆಯು ನಮ್ಮನ್ನು ಓಡಿಸಲು ಅಸಮರ್ಥವಾಗಿದೆ.
03252011a ವಯಂ ಪುನಃ ಸಪ್ತದಶೇಷು ಕೃಷ್ಣೇ। ಕುಲೇಷು ಸರ್ವೇಽನವಮೇಷು ಜಾತಾಃ।
03252011c ಷಡ್ಭ್ಯೋ ಗುಣೇಭ್ಯೋಽಭ್ಯಧಿಕಾ ವಿಹೀನಾನ್। ಮನ್ಯಾಮಹೇ ದ್ರೌಪದಿ ಪಾಂಡುಪುತ್ರಾನ್।।
ಕೃಷ್ಣೇ! ನಾವು ಎಲ್ಲರೂ ಕೂಡ ಹದಿನೇಳು ಉಚ್ಛಕುಲಗಳಲ್ಲಿ ಜನಿಸಿದ್ದೇವೆ. ದ್ರೌಪದೀ! ಪಾಂಡುಪುತ್ರರಲ್ಲಿ ಕಡಿಮೆಯಾಗಿರುವ ಆ ಆರು ಗುಣಗಳು ನಮ್ಮಲ್ಲಿ ಅಧಿಕವಾಗಿವೆ ಎಂದು ನಾವು ಅಭಿಪ್ರಾಯಪಡುತ್ತೇವೆ.
03252012a ಸಾ ಕ್ಷಿಪ್ರಮಾತಿಷ್ಠ ಗಜಂ ರಥಂ ವಾ। ನ ವಾಕ್ಯಮಾತ್ರೇಣ ವಯಂ ಹಿ ಶಕ್ಯಾಃ।
03252012c ಆಶಂಸ ವಾ ತ್ವಂ ಕೃಪಣಂ ವದಂತೀ। ಸೌವೀರರಾಜಸ್ಯ ಪುನಃ ಪ್ರಸಾದಂ।।
ಕ್ಷಿಪ್ರವಾಗಿ ರಥವನ್ನಾಗಲೀ ಆನೆಯನ್ನಾಗಲೀ ಏರು. ಕೇವಲ ಮಾತಿನಿಂದಲೇ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಅಥವಾ ದೀನಳಾಗಿ ಮಾತನಾಡು. ಈ ಸೌವೀರರಾಜನು ನಿನ್ನ ಮೇಲೆ ಕರುಣೆತೋರಿಸಿಯಾನು.”
03252013 ದ್ರೌಪದ್ಯುವಾಚ।
03252013a ಮಹಾಬಲಾ ಕಿಂ ತ್ವಿಹ ದುರ್ಬಲೇವ। ಸೌವೀರರಾಜಸ್ಯ ಮತಾಹಮಸ್ಮಿ।
03252013c ಯಾಹಂ ಪ್ರಮಾಥಾದಿಹ ಸಂಪ್ರತೀತಾ। ಸೌವೀರರಾಜಂ ಕೃಪಣಂ ವದೇಯಂ।।
ದ್ರೌಪದಿಯು ಹೇಳಿದಳು: “ನಾನು ಮಹಾಬಲಶಾಲಿ! ಆದರೆ ಸೌವಿರರಾಜನು ಈಗ ನಾನು ದುರ್ಬಲಳೆಂದು ತಿಳಿದಿದ್ದಾನೆ. ಸಂಪ್ರತೀತಳಾದ ನಾನು ಹೆದರಿ ದುರ್ಬಲಳಂತೆ ದೀನಳಾಗಿ ಸವೀರರಾಜನಲ್ಲಿ ಬೇಡಿಕೊಳ್ಳಬೇಕಂತೆ!
03252014a ಯಸ್ಯಾ ಹಿ ಕೃಷ್ಣೌ ಪದವೀಂ ಚರೇತಾಂ। ಸಮಾಸ್ಥಿತಾವೇಕರಥೇ ಸಹಾಯೌ।
03252014c ಇಂದ್ರೋಽಪಿ ತಾಂ ನಾಪಹರೇತ್ಕಥಂ ಚಿನ್। ಮನುಷ್ಯಮಾತ್ರಃ ಕೃಪಣಃ ಕುತೋಽನ್ಯಃ।।
ಇಬ್ಬರು ಕೃಷ್ಣರೂ ಒಟ್ಟಿಗೇ ಒಂದೇರಥದಲ್ಲಿ ಕುಳಿತು ನನ್ನ ಸುಳಿವನ್ನು ಅರಸಿಕೊಂಡು ಬರುತ್ತಾರೆ! ಇಂದ್ರನೂ ಕೂಡ ನನ್ನನ್ನು ಎಂದೂ ಅಪಹರಿಸಿಕೊಂಡು ಹೋಗಲು ಶಕ್ಯನಿಲ್ಲ. ಮನುಷ್ಯಮಾತ್ರನಾದ ಈ ಕೃಪಣನು ಹೇಗೆತಾನೇ ಇದನ್ನು ಮಾಡಿಯಾನು?
03252015a ಯದಾ ಕಿರೀಟೀ ಪರವೀರಘಾತೀ। ನಿಘ್ನನ್ರಥಸ್ಥೋ ದ್ವಿಷತಾಂ ಮನಾಂಸಿ।
03252015c ಮದಂತರೇ ತ್ವದ್ಧ್ವಜಿನೀಂ ಪ್ರವೇಷ್ಟಾ। ಕಕ್ಷಂ ದಹನ್ನಗ್ನಿರಿವೋಷ್ಣಗೇಷು।।
ರಥದಲ್ಲಿ ನಿಂತು ವೈರಿಗಳ ಮನಸ್ಸನ್ನು ಒಡೆಯುವ, ಪರವೀರಘಾತಿ ಕಿರೀಟಿಯು ನಿನ್ನ ಸೇನೆಯ ಮೇಲೆರಗಿದಾಗ ಬೇಸಿಗೆಯಲ್ಲಿ ಒಣಗಿದ ವನವನ್ನು ಬೆಂಕಿಯು ಹೇಗೋ ಹಾಗೆ ಸುಟ್ಟುಹಾಕುತ್ತಾನೆ.
03252016a ಜನಾರ್ದನಸ್ಯಾನುಗಾ ವೃಷ್ಣಿವೀರಾ। ಮಹೇಷ್ವಾಸಾಃ ಕೇಕಯಾಶ್ಚಾಪಿ ಸರ್ವೇ।
03252016c ಏತೇ ಹಿ ಸರ್ವೇ ಮಮ ರಾಜಪುತ್ರಾಃ। ಪ್ರಹೃಷ್ಟರೂಪಾಃ ಪದವೀಂ ಚರೇಯುಃ।।
ಜನಾರ್ದನನ ಅನುಯಾಯಿ ವಷ್ಣಿವೀರರು, ಮಹೇಷ್ವಾಸ ಕೇಕಯರೆಲ್ಲರೂ ಮತ್ತು ನನ್ನ ಎಲ್ಲ ರಾಜಪುತ್ರರೂ ಸಂತೋಷದಿಂದ ಒಂದುಗೂಡಿ ನನ್ನನ್ನು ಹಿಂಬಾಲಿಸಿ ಬರುತ್ತಾರೆ.
03252017a ಮೌರ್ವೀವಿಸೃಷ್ಟಾಃ ಸ್ತನಯಿತ್ನುಘೋಷಾ। ಗಾಂಡೀವಮುಕ್ತಾಸ್ತ್ವತಿವೇಗವಂತಃ।
03252017c ಹಸ್ತಂ ಸಮಾಹತ್ಯ ಧನಂಜಯಸ್ಯ। ಭೀಮಾಃ ಶಬ್ಧಂ ಘೋರತರಂ ನದಂತಿ।।
ಧನಂಜಯನ ಕೈಯಲ್ಲಿರುವ ಗಾಂಡೀವದಿಂದ ಹೊರಟ ಗುಡುಗಿನಂತೆ ಗರ್ಜಿಸುವ, ವೇಗದಲ್ಲಿ ಭುಸುಗುಟ್ಟುವ ಬಾಣಗಳು ಭಯಂಕರವಾಗಿ ಶಬ್ಧಮಾಡಿ ಘೋರವಾಗಿ ನಿನಾದಿಸುತ್ತವೆ.
03252018a ಗಾಂಡೀವಮುಕ್ತಾಂಶ್ಚ ಮಹಾಶರೌಘಾನ್। ಪತಂಗಸಂಘಾನಿವ ಶೀಘ್ರವೇಗಾನ್।
03252018c ಸಶಂಖಘೋಷಃ ಸತಲತ್ರಘೋಷೋ। ಗಾಂಡೀವಧನ್ವಾ ಮುಹುರುದ್ವಮಂಶ್ಚ।।
03252018e ಯದಾ ಶರಾನರ್ಪಯಿತಾ ತವೋರಸಿ। ತದಾ ಮನಸ್ತೇ ಕಿಮಿವಾಭವಿಷ್ಯತ್।।
ಗಾಂಡೀವಧನ್ವಿಯು ಪುನಃ ಪುನಃ ಕೋಪದಿಂದ ಗಾಂಡೀವದಿಂದ ಮಹಾಶರಗಳನ್ನು ಬಿಟ್ಟು, ಚಿಟ್ಟೆಗಳ ಹಿಂಡುಗಳಂತೆ ಅವು ವೇಗವಾಗಿ ಹಾರಿಬಂದು, ಶಂಖದ ಘೋಷದೊಂದಿಗೆ, ಕೈಬಂಧಗಳ ಶಬ್ಧಗಳೊಂದಿಗೆ, ಆ ಶರಗಳು ನಿನ್ನ ಎದೆಗೆ ಹೊಡೆದಾಗ ಮನಸ್ಸಿನಲ್ಲಿ ಏನು ನಡೆಯಬಹುದು?
03252019a ಗದಾಹಸ್ತಂ ಭೀಮಮಭಿದ್ರವಂತಂ। ಮಾದ್ರೀಪುತ್ರೌ ಸಂಪತಂತೌ ದಿಶಶ್ಚ।
03252019c ಅಮರ್ಷಜಂ ಕ್ರೋಧವಿಷಂ ವಮಂತೌ। ದೃಷ್ಟ್ವಾ ಚಿರಂ ತಾಪಮುಪೈಷ್ಯಸೇಽಧಮ।।
ಗದೆಯನ್ನು ಹಿಡಿದು ಭೀಮನು ಸಿಟ್ಟಿನಿಂದ ಓಡಿಬರಲು, ಮಾದ್ರಿಯ ಮಕ್ಕಳು ಮಹಾಶಕ್ತಿಯ ಕ್ರೋಧವಿಷವನ್ನು ಕಾರುತ್ತಾ ಎಲ್ಲಕಡೆಯಿಂದಲೂ ಬಂದೆರಗಲು, ನೀನು ಬಹುಕಾಲದವರೆಗೆ ಅದನ್ನು ಅನುಭವಿಸುವೆ, ಅಧಮ!
03252020a ಯಥಾ ಚಾಹಂ ನಾತಿಚರೇ ಕಥಂ ಚಿತ್। ಪತೀನ್ಮಹಾರ್ಹಾನ್ಮನಸಾಪಿ ಜಾತು।
03252020c ತೇನಾದ್ಯ ಸತ್ಯೇನ ವಶೀಕೃತಂ ತ್ವಾಂ। ದ್ರಷ್ಟಾಸ್ಮಿ ಪಾರ್ಥೈಃ ಪರಿಕೃಷ್ಯಮಾಣಂ।।
ಇದೂವರೆಗೆ ಎಂದೂ ನಾನು ನನ್ನ ಮಹಾತ್ಮ, ಗೌರವಾನ್ವಿತ ಪತಿಗಳನ್ನು ಮೀರಿನಡೆಯದೇ ಇದ್ದರೆ, ಅದೇ ಸತ್ಯದಿಂದ ನಾನು ಇಂದು ನೀನು ಪಾರ್ಥರಿಂದ ಬಂಧಿಯಾಗಿ ಎಳೆದಾಡಲ್ಪಡುವುದನ್ನು ನೋಡುತ್ತೇನೆ.
03252021a ನ ಸಂಭ್ರಮಂ ಗಂತುಮಹಂ ಹಿ ಶಕ್ಷ್ಯೇ। ತ್ವಯಾ ನೃಶಂಸೇನ ವಿಕೃಷ್ಯಮಾಣಾ।
03252021c ಸಮಾಗತಾಹಂ ಹಿ ಕುರುಪ್ರವೀರೈಃ। ಪುನರ್ವನಂ ಕಾಮ್ಯಕಮಾಗತಾ ಚ।।
ನೀನು ಎಷ್ಟೇ ಕಷ್ಟಪಟ್ಟು ಕಾಡಿದರೂ ನನ್ನನ್ನು ಸಂಭ್ರಾಂತಳನ್ನಾಗಿ ಮಾಡಲಾರೆ. ಯಾಕೆಂದರೆ ನಾನು ಪುನಃ ಕುರುವೀರರನ್ನು ಸೇರಿ ಕಾಮ್ಯಕಕ್ಕೆ ಹಿಂದಿರುಗುತ್ತೇನೆ.””
03252022 ವೈಶಂಪಾಯನ ಉವಾಚ।
03252022a ಸಾ ತಾನನುಪ್ರೇಕ್ಷ್ಯ ವಿಶಾಲನೇತ್ರಾ। ಜಿಘೃಕ್ಷಮಾಣಾನವಭರ್ತ್ಸಯಂತೀ।
03252022c ಪ್ರೋವಾಚ ಮಾ ಮಾ ಸ್ಪೃಶತೇತಿ ಭೀತಾ। ಧೌಮ್ಯಂ ಪ್ರಚುಕ್ರೋಶ ಪುರೋಹಿತಂ ಸಾ।।
ವೈಶಂಪಾಯನನು ಹೇಳಿದನು: “ಅವಳನ್ನು ಹಿಡಿಯಲು ಪ್ರಯತ್ನಿಸುತ್ತಿರುವ ಅವರನ್ನು ಕಣ್ಣುಗಳನ್ನು ಅಗಲುಮಾಡಿಕೊಂಡು ಕೋಪದಿಂದ ನೋಡಿ ಭೀತಳಾಗಿ ದ್ರೌಪದಿಯು “ನನ್ನನ್ನು ಮುಟ್ಟಬೇಡ! ಮುಟ್ಟಬೇಡ!” ಎಂದು ಕೂಗುತ್ತಾ ಪುರೋಹಿತ ಧೌಮ್ಯನ ಸಹಾಯಕ್ಕೆ ಕೂಗಿದಳು.
03252023a ಜಗ್ರಾಹ ತಾಮುತ್ತರವಸ್ತ್ರದೇಶೇ। ಜಯದ್ರಥಸ್ತಂ ಸಮವಾಕ್ಷಿಪತ್ಸಾ।
03252023c ತಯಾ ಸಮಾಕ್ಷಿಪ್ತತನುಃ ಸ ಪಾಪಃ। ಪಪಾತ ಶಾಖೀವ ನಿಕೃತ್ತಮೂಲಃ।।
ಜಯದ್ರಥನು ಅವಳ ಕೆಳವಸ್ತ್ರವನ್ನು ಹಿಡಿದನು. ಆದರೆ ತನ್ನ ಎಲ್ಲ ಶಕ್ತಿಯನ್ನೂ ಸೇರಿಸಿ ಅವಳು ಅವನನ್ನು ದೂರ ನೂಕಿದಳು. ಅವಳಿಂದ ನೂಕಲಟ್ಟ ಆ ಪಾಪಿಯು ಬೇರುಕಿತ್ತ ಮರದಂತೆ ಕೆಳಗೆ ಬಿದ್ದನು.
03252024a ಪ್ರಗೃಹ್ಯಮಾಣಾ ತು ಮಹಾಜವೇನ। ಮುಹುರ್ವಿನಿಃಶ್ವಸ್ಯ ಚ ರಾಜಪುತ್ರೀ।
03252024c ಸಾ ಕೃಷ್ಯಮಾಣಾ ರಥಮಾರುರೋಹ। ಧೌಮ್ಯಸ್ಯ ಪಾದಾವಭಿವಾದ್ಯ ಕೃಷ್ಣಾ।।
ಮತ್ತೊಮ್ಮೆ ಮಹಾಜವೆಯಿಂದ ಹಿಡಿಯಲ್ಪಡಲು ರಾಜಪುತ್ರಿಯು ಪುನಃ ಪುನಃ ಉಸಿರನ್ನು ಕಳೆದುಕೊಂಡಳು. ಧೌಮ್ಯನ ಪಾದಗಳಿಗೆ ವಂದಿಸಿ ಕೃಷ್ಣೆಯು ಎಳೆಯಲ್ಪಡುತ್ತಾ ರಥವನ್ನೇರಿದಳು.
03252025 ಧೌಮ್ಯ ಉವಾಚ।
03252025a ನೇಯಂ ಶಕ್ಯಾ ತ್ವಯಾ ನೇತುಮವಿಜಿತ್ಯ ಮಹಾರಥಾನ್।
03252025c ಧರ್ಮಂ ಕ್ಷತ್ರಸ್ಯ ಪೌರಾಣಮವೇಕ್ಷಸ್ವ ಜಯದ್ರಥ।।
ಧೌಮ್ಯನು ಹೇಳಿದನು: “ಜಯದ್ರಥ! ಮಹಾರಥಿಗಳನ್ನು ಗೆಲ್ಲದೆಯೇ ಇವಳನ್ನು ಎತ್ತಿಕೊಂಡು ಹೋಗಲಾರಿರಿ. ಪೌರಾಣಿಕ ಕ್ಷತ್ರಿಯನ ಧರ್ಮವನ್ನಾದರೂ ಗಮನಿಸು.
03252026a ಕ್ಷುದ್ರಂ ಕೃತ್ವಾ ಫಲಂ ಪಾಪಂ ಪ್ರಾಪ್ಸ್ಯಸಿ ತ್ವಮಸಂಶಯಂ।
03252026c ಆಸಾದ್ಯ ಪಾಂಡವಾನ್ವೀರಾನ್ಧರ್ಮರಾಜಪುರೋಗಮಾನ್।।
ಈ ಕ್ಷುದ್ರ ಕಾರ್ಯವನ್ನೆಸಗಿ, ಧರ್ಮರಾಜನ ನಾಯಕತ್ವದಲ್ಲಿ ವೀರ ಪಾಂಡವರನ್ನು ಎದುರಿಸುವಾಗ, ನೀನು ಪಾಪವನ್ನು ಪಡೆಯುತ್ತೀಯೆ ಎನ್ನುವುದರಲ್ಲಿ ಸಂಶಯವಿಲ್ಲ.””
03252027 ವೈಶಂಪಾಯನ ಉವಾಚ।
03252027a ಇತ್ಯುಕ್ತ್ವಾ ಹ್ರಿಯಮಾಣಾಂ ತಾಂ ರಾಜಪುತ್ರೀಂ ಯಶಸ್ವಿನೀಂ।
03252027c ಅನ್ವಗಚ್ಚತ್ತದಾ ಧೌಮ್ಯಃ ಪದಾತಿಗಣಮಧ್ಯಗಃ।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ಅಪಹರಿಸಲ್ಪಟ್ಟು ಹೋಗುತ್ತಿರುವ ಆ ಯಶಸ್ವಿನೀ ರಾಜಪುತ್ರಿಯನ್ನು ಹಿಂಬಾಲಿಸಿ ಧೌಮ್ಯನು ಪದಾತಿಗಳ ಮಧ್ಯದಲ್ಲಿ ಹೋದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಹರಣ ಪರ್ವಣಿ ದ್ವಿಪಂಚಾಶದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಹರಣ ಪರ್ವದಲ್ಲಿ ಇನ್ನೂರಾಐವತ್ತೆರಡನೆಯ ಅಧ್ಯಾಯವು.