250 ದ್ರೌಪದೀವಾಕ್ಯಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 250

ಸಾರ

ದ್ರೌಪದಿಯು ತನ್ನ ಪರಿಚಯ ಹೇಳಿಕೊಂಡು, ಬೇಟೆಯಾಡಲು ಹೋದ ಪತಿ ಪಾಂಡವರು ಹಿಂದಿರುಗುವ ಸಮಯವಾಗಿದೆಯೆಂದೂ, ಅವರ ಆತಿಥ್ಯವನ್ನು ಸ್ವೀಕರಿಸಿ ಹೋಗಬೇಕೆಂದೂ ಹೇಳುವುದು (1-9).

03250001 ವೈಶಂಪಾಯನ ಉವಾಚ।
03250001a ಅಥಾಬ್ರವೀದ್ದ್ರೌಪದೀ ರಾಜಪುತ್ರೀ। ಪೃಷ್ಟಾ ಶಿಬೀನಾಂ ಪ್ರವರೇಣ ತೇನ।
03250001c ಅವೇಕ್ಷ್ಯ ಮಂದಂ ಪ್ರವಿಮುಚ್ಯ ಶಾಖಾಂ। ಸಂಗೃಹ್ಣತೀ ಕೌಶಿಕಮುತ್ತರೀಯಂ।।

ವೈಶಂಪಾಯನನು ಹೇಳಿದನು: “ಆಗ ರಾಜಪುತ್ರಿ ದ್ರೌಪದಿಯು ನಿಧಾನವಾಗಿ ಅವನನ್ನು ನೋಡುತ್ತಾ, ಶಾಖೆಯನ್ನು ಬಿಟ್ಟು, ತನ್ನ ಕೌಶಿಕದ ಉತ್ತರೀಯವನ್ನು ಒಟ್ಟುಮಾಡಿಕೊಂಡು ಆ ಶಿಬಿಗಳ ಪ್ರವರನು ಕೇಳಿದುದಕ್ಕೆ ಹೇಳಿದಳು.

03250002a ಬುದ್ಧ್ಯಾಭಿಜಾನಾಮಿ ನರೇಂದ್ರಪುತ್ರ। ನ ಮಾದೃಶೀ ತ್ವಾಮಭಿಭಾಷ್ಟುಮರ್ಹಾ।
03250002c ನ ತ್ವೇಹ ವಕ್ತಾಸ್ತಿ ತವೇಹ ವಾಕ್ಯಂ। ಅನ್ಯೋ ನರೋ ವಾಪ್ಯಥ ವಾಪಿ ನಾರೀ।।

“ನರೇಂದ್ರಪುತ್ರ! ನನ್ನಂಥವಳು ಉತ್ತರಿಸಬಾರದೆಂದು ನಾನು ಬುದ್ಧಿಯಿಂದ ತಿಳಿದುಕೊಂಡಿದ್ದೇನೆ. ಆದರೆ ಇಲ್ಲಿ ನಿನ್ನ ಪ್ರಶ್ನೆಗಳಿಗೆ ಉತ್ತರಿಸುವ - ನರನಾಗಲೀ ನಾರಿಯಾಗಲೀ - ಬೇರೆ ಯಾರೂ ಇಲ್ಲ.

03250003a ಏಕಾ ಹ್ಯಹಂ ಸಂಪ್ರತಿ ತೇನ ವಾಚಂ। ದದಾನಿ ವೈ ಭದ್ರ ನಿಬೋಧ ಚೇದಂ।
03250003c ಅಹಂ ಹ್ಯರಣ್ಯೇ ಕಥಮೇಕಮೇಕಾ। ತ್ವಾಮಾಲಪೇಯಂ ನಿರತಾ ಸ್ವಧರ್ಮೇ।।

ಭದ್ರ! ನಾನೊಬ್ಬಳೇ ಇಲ್ಲಿ ಇರುವುದರಿಂದ ನಾನೇ ನಿನಗೆ ಉತ್ತರವನ್ನು ಕೊಡುತ್ತಿದ್ದೇನೆ. ತಿಳಿದುಕೋ. ಅರಣ್ಯದಲ್ಲಿ ನಾನೊಬ್ಬಳೇ ಇರುವಾಗ, ಸ್ವಧರ್ಮದಲ್ಲಿ ನಿರತಳಾಗಿರುವ ನಾನು ನಿನ್ನೊಡನೆ ಹೇಗೆ ತಾನೇ ಸಂಭಾಷಿಸಲಿ?

03250004a ಜಾನಾಮಿ ಚ ತ್ವಾಂ ಸುರಥಸ್ಯ ಪುತ್ರಂ। ಯಂ ಕೋಟಿಕಾಶ್ಯೇತಿ ವಿದುರ್ಮನುಷ್ಯಾಃ।
03250004c ತಸ್ಮಾದಹಂ ಶೈಬ್ಯ ತಥೈವ ತುಭ್ಯಂ। ಆಖ್ಯಾಮಿ ಬಂಧೂನ್ಪ್ರತಿ ತನ್ನಿಬೋಧ।।

ನೀನು ಸುರಥನ ಪುತ್ರನೆಂದೂ ಮತ್ತು ಜನರು ನಿನ್ನನ್ನು ಕೋಟಿಕಾಶ್ಯನೆಂದು ಕರೆಯುತ್ತಾರೆಂದೂ ನಾನು ಬಲ್ಲೆ. ಶೈಬ್ಯ! ಆದುದರಿಂದ ನಾನು ಹಾಗೆಯೇ ನನ್ನ ಬಂಧುಗಳ ಕುರಿತೂ ಹೇಳುತ್ತೇನೆ.

03250005a ಅಪತ್ಯಮಸ್ಮಿ ದ್ರುಪದಸ್ಯ ರಾಜ್ಞಃ। ಕೃಷ್ಣೇತಿ ಮಾಂ ಶೈಬ್ಯ ವಿದುರ್ಮನುಷ್ಯಾಃ।
03250005c ಸಾಹಂ ವೃಣೇ ಪಂಚ ಜನಾನ್ಪತಿತ್ವೇ। ಯೇ ಖಾಂಡವಪ್ರಸ್ಥಗತಾಃ ಶ್ರುತಾಸ್ತೇ।।

ಶೈಬ್ಯ! ರಾಜ ದ್ರುಪದನ ಮಗಳು ನಾನು ಮತ್ತು ಕೃಷ್ಣೆಯೆಂದು ಜನರು ನನ್ನನ್ನು ತಿಳಿದಿದ್ದಾರೆ. ನಾನು ಐವರನ್ನು ಪತಿಗಳನ್ನಾಗಿ ವರಿಸಿದ್ದೇನೆ. ಅವರು ಖಾಂಡವಪ್ರಸ್ಥದವರು. ನೀನು ಕೇಳಿರಬಹುದು.

03250006a ಯುಧಿಷ್ಠಿರೋ ಭೀಮಸೇನಾರ್ಜುನೌ ಚ। ಮಾದ್ರ್ಯಾಶ್ಚ ಪುತ್ರೌ ಪುರುಷಪ್ರವೀರೌ।
03250006c ತೇ ಮಾಂ ನಿವೇಶ್ಯೇಹ ದಿಶಶ್ಚತಸ್ರೋ। ವಿಭಜ್ಯ ಪಾರ್ಥಾ ಮೃಗಯಾಂ ಪ್ರಯಾತಾಃ।।

ಯುಧಿಷ್ಠಿರ, ಭೀಮಸೇನ, ಅರ್ಜುನ, ಮತ್ತು ಮಾದ್ರಿಯ ಪುರುಷಪ್ರವೀರರಾದ ಇಬ್ಬರು ಮಕ್ಕಳು. ಆ ಪಾರ್ಥರು ನನ್ನನ್ನು ಇಲ್ಲಿಯೇ ಇರಿಸಿ ನಾಲ್ಕು ದಿಕ್ಕುಗಳಲ್ಲಿ ವಿಭಜನೆಗೊಂಡು ಬೇಟೆಗೆಂದು ಹೋಗಿದ್ದಾರೆ.

03250007a ಪ್ರಾಚೀಂ ರಾಜಾ ದಕ್ಷಿಣಾಂ ಭೀಮಸೇನೋ। ಜಯಃ ಪ್ರತೀಚೀಂ ಯಮಜಾವುದೀಚೀಂ।
03250007c ಮನ್ಯೇ ತು ತೇಷಾಂ ರಥಸತ್ತಮಾನಾಂ। ಕಾಲೋಽಭಿತಃ ಪ್ರಾಪ್ತ ಇಹೋಪಯಾತುಂ।।

ಉತ್ತರಕ್ಕೆ ರಾಜ, ದಕ್ಷಿಣಕ್ಕೆ ಭೀಮಸೇನ, ಪೂರ್ವಕ್ಕೆ ಜಯ ಮತ್ತು ಪಶ್ಚಿಮಕ್ಕೆ ಯಮಳರು ಹೋಗಿದ್ದಾರೆ. ಆ ರಥಸತ್ತಮರು ಹಿಂದಿರುಗಿ ಇಲ್ಲಿಗೆ ಬರುವ ಸಮಯವಾಯಿತೆಂದು ನನಗನ್ನಿಸುತ್ತದೆ.

03250008a ಸಮ್ಮಾನಿತಾ ಯಾಸ್ಯಥ ತೈರ್ಯಥೇಷ್ಟಂ। ವಿಮುಚ್ಯ ವಾಹಾನವಗಾಹಯಧ್ವಂ।
03250008c ಪ್ರಿಯಾತಿಥಿರ್ಧರ್ಮಸುತೋ ಮಹಾತ್ಮಾ। ಪ್ರೀತೋ ಭವಿಷ್ಯತ್ಯಭಿವೀಕ್ಷ್ಯ ಯುಷ್ಮಾನ್।।

ಅವರು ನಿಮ್ಮನ್ನು ಸಮ್ಮಾನಿಸಿದ ನಂತರ ನಿಮಗಿಷ್ಟಬಂದಲ್ಲಿಗೆ ಹೋಗಿ. ವಾಹನಗಳನ್ನು ಬಿಚ್ಚಿ ಕೆಳಗಿಳಿಯಿರಿ. ಮಹಾತ್ಮ ಧರ್ಮಸುತನು ಅತಿಥಿಗಳನ್ನು ಬಯಸುತ್ತಾನೆ. ನಿಮ್ಮನ್ನು ಇಲ್ಲಿ ನೋಡಿ ಅವನು ಸಂತೋಷಪಡುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.”

03250009a ಏತಾವದುಕ್ತ್ವಾ ದ್ರುಪದಾತ್ಮಜಾ ಸಾ। ಶೈಬ್ಯಾತ್ಮಜಂ ಚಂದ್ರಮುಖೀ ಪ್ರತೀತಾ।
03250009c ವಿವೇಶ ತಾಂ ಪರ್ಣಕುಟೀಂ ಪ್ರಶಸ್ತಾಂ। ಸಂಚಿಂತ್ಯ ತೇಷಾಮತಿಥಿಸ್ವಧರ್ಮಂ।।

ಈ ರೀತಿ ಶೈಭ್ಯಾತ್ಮಜನನ್ನು ನಂಬಿ ಚಂದ್ರಮುಖಿ ದ್ರುಪದಾತ್ಮಜೆಯು ಹೇಳಿದಳು. ಈ ಅತಿಥಿಗಳಿಗೆ ಸ್ವಧರ್ಮದಂತೆ ಸತ್ಕರಿಸುವ ಕುರಿತು ಯೋಚಿಸುತ್ತಾ ಅವಳು ಆ ಪುಣ್ಯ ಪರ್ಣಕುಟೀರವನ್ನು ಪ್ರವೇಶಿಸಿದಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ದ್ರೌಪದೀವಾಕ್ಯೇ ಪಂಚದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ದ್ರೌಪದೀವಾಕ್ಯದಲ್ಲಿ ಇನ್ನೂರಾಐವತ್ತನೆಯ ಅಧ್ಯಾಯವು.