248 ಜಯದ್ರಥಾಗಮನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀಹರಣ ಪರ್ವ

ಅಧ್ಯಾಯ 248

ಸಾರ

ಕಾಮ್ಯಕವನದಲ್ಲಿರುವಾಗ ಒಂದುದಿನ ದ್ರೌಪದಿಯನ್ನು ಆಶ್ರಮದಲ್ಲಿರಿಸಿ ಬೇಟೆಯಾಡಲು ಪಾಂಡವರು ಹೋದುದು (1-5). ಅದೇ ಸಮಯದಲ್ಲಿ ವಿವಾಹಕ್ಕಾಗಿ ಬಹು ರಾಜರೊಂದಿಗೆ ಮತ್ತು ಸೇನೆಯೊಂದಿಗೆ ಶಾಲ್ವದ ಕಡೆ ಪ್ರಯಾಣಿಸುತ್ತಿದ್ದ ಜಯದ್ರಥನು ದ್ರೌಪದಿಯನ್ನು ನೋಡಿ, ಕಾಮಮೋಹಿತನಾಗಿ, ಅವಳ್ಯಾರೆಂದು ಕಂಡುಕೊಂಡು ಬಾ ಎಂದು ಮಿತ್ರ ಕೋಟಿಕಾಶ್ಯನನ್ನು ಕಳುಹಿಸಿದುದು (6-17).

03248001 ವೈಶಂಪಾಯನ ಉವಾಚ।
03248001a ತಸ್ಮಿನ್ಬಹುಮೃಗೇಽರಣ್ಯೇ ರಮಮಾಣಾ ಮಹಾರಥಾಃ।
03248001c ಕಾಮ್ಯಕೇ ಭರತಶ್ರೇಷ್ಠಾ ವಿಜಹ್ರುಸ್ತೇ ಯಥಾಮರಾಃ।।

ವೈಶಂಪಾಯನನು ಹೇಳಿದನು: “ಮಹಾರಥಿ ಭರತಶ್ರೇಷ್ಠರು ಆ ಬಹುಮೃಗಗಳಿದ್ದ ಕಾಮ್ಯಕ ಅರಣ್ಯದಲ್ಲಿ ಅಮರರಂತೆ ವಿಹರಿಸುತ್ತಾ ರಮಿಸಿದರು.

03248002a ಪ್ರೇಕ್ಷಮಾಣಾ ಬಹುವಿಧಾನ್ವನೋದ್ದೇಶಾನ್ಸಮಂತತಃ।
03248002c ಯಥರ್ತುಕಾಲರಮ್ಯಾಶ್ಚ ವನರಾಜೀಃ ಸುಪುಷ್ಪಿತಾಃ।।

ಅವರು ಋತುಕಾಲವನ್ನು ಸೂಚಿಸುವ ಸುಪುಷ್ಪಿತವಾಗಿದ್ದ ವನರಾಜಿಗಳನ್ನೂ, ಸುತ್ತಲೂ ಇದ್ದ ಬಹುವಿಧದ ವನಪ್ರದೇಶಗಳನ್ನು ನೋಡುತ್ತಿದ್ದರು.

03248003a ಪಾಂಡವಾ ಮೃಗಯಾಶೀಲಾಶ್ಚರಂತಸ್ತನ್ಮಹಾವನಂ।
03248003c ವಿಜಹ್ರುರಿಂದ್ರಪ್ರತಿಮಾಃ ಕಂ ಚಿತ್ಕಾಲಮರಿಂದಮಾಃ।।

ಆ ಮಹಾವನದಲ್ಲಿ ಬೇಟೆಯಾಡುತ್ತಾ ಇಂದ್ರನ ಸರಿಸಮಾನರಂತೆ ಆ ಅರಿಂದಮ ಪಾಂಡವರು ಸ್ವಲ್ಪಸಮಯವನ್ನು ಕಳೆದರು.

03248004a ತತಸ್ತೇ ಯೌಗಪದ್ಯೇನ ಯಯುಃ ಸರ್ವೇ ಚತುರ್ದಿಶಂ।
03248004c ಮೃಗಯಾಂ ಪುರುಷವ್ಯಾಘ್ರಾ ಬ್ರಾಹ್ಮಣಾರ್ಥೇ ಪರಂತಪಾಃ।।
03248005a ದ್ರೌಪದೀಮಾಶ್ರಮೇ ನ್ಯಸ್ಯ ತೃಣಬಿಂದೋರನುಜ್ಞಯಾ।
03248005c ಮಹರ್ಷೇರ್ದೀಪ್ತತಪಸೋ ಧೌಮ್ಯಸ್ಯ ಚ ಪುರೋಧಸಃ।।

ಆಗ ಒಂದು ದಿನ ಯೋಗವೋ ಎಂಬಂತೆ ಬ್ರಾಹ್ಮಣರಿಗೋಸ್ಕರ ಬೇಟೆಯಾಡಲು ಆ ಪರಂತಪ ಪುರುಷವ್ಯಾಘ್ರರೆಲ್ಲರೂ, ದ್ರೌಪದಿಯನ್ನು ತೃಣಬಿಂದುವಿನ ಆಶ್ರಮದಲ್ಲಿರಿಸಿ, ಮಹರ್ಷಿ, ದೀಪ್ತತಪಸ್ವಿ, ಪುರೋಹಿತ ಧೌಮ್ಯನ ಅಪ್ಪಣೆಯನ್ನು ಪಡೆದು, ನಾಲ್ಕು ದಿಕ್ಕುಗಳಲ್ಲಿ ಹೋದರು.

03248006a ತತಸ್ತು ರಾಜಾ ಸಿಂಧೂನಾಂ ವಾರ್ದ್ಧಕ್ಷತ್ರಿರ್ಮಹಾಯಶಾಃ।
03248006c ವಿವಾಹಕಾಮಃ ಶಾಲ್ವೇಯಾನ್ಪ್ರಯಾತಃ ಸೋಽಭವತ್ತದಾ।।

ಅದೇ ಸಮಯದಲ್ಲಿ ವೃದ್ಧಕ್ಷತ್ರನ ಮಗ ಮಹಾಯಶಸ್ವಿ ಸಿಂಧುರಾಜನು ವಿವಾಹಾರ್ಥವಾಗಿ ಶಾಲ್ವದ ಕಡೆ ಪ್ರಯಾಣಮಾಡುತ್ತಿದ್ದನು.

03248007a ಮಹತಾ ಪರಿಬರ್ಹೇಣ ರಾಜಯೋಗ್ಯೇನ ಸಂವೃತಃ।
03248007c ರಾಜಭಿರ್ಬಹುಭಿಃ ಸಾರ್ಧಮುಪಾಯಾತ್ಕಾಮ್ಯಕಂ ಚ ಸಃ।।

ರಾಜನಿಗೆ ಯೋಗ್ಯವಾದಂತೆ ಅತಿದೊಡ್ಡ ಪರಿಚಾರಕ ಗಣಗಳಿಂದ ಸುತ್ತುವರೆಯಲ್ಪಟ್ಟು ಬಹಳ ರಾಜರುಗಳೊಂದಿಗೆ ಹೋಗುತ್ತಿದ್ದ ಅವನು ಕಾಮ್ಯಕವನ್ನು ತಲುಪಿದನು.

03248008a ತತ್ರಾಪಶ್ಯತ್ಪ್ರಿಯಾಂ ಭಾರ್ಯಾಂ ಪಾಂಡವಾನಾಂ ಯಶಸ್ವಿನೀಂ।
03248008c ತಿಷ್ಠಂತೀಮಾಶ್ರಮದ್ವಾರಿ ದ್ರೌಪದೀಂ ನಿರ್ಜನೇ ವನೇ।।

ಅಲ್ಲಿ ಅವನು ಆ ನಿರ್ಜನ ವನದಲ್ಲಿ ಆಶ್ರಮದ್ವಾರದಲ್ಲಿ ನಿಂತಿದ್ದ ಪಾಂಡವರ ಪ್ರಿಯ ಭಾರ್ಯೆ ಯಶಸ್ವಿನಿ ದ್ರೌಪದಿಯನ್ನು ನೋಡಿದನು.

03248009a ವಿಭ್ರಾಜಮಾನಾಂ ವಪುಷಾ ಬಿಭ್ರತೀಂ ರೂಪಮುತ್ತಮಂ।
03248009c ಭ್ರಾಜಯಂತೀಂ ವನೋದ್ದೇಶಂ ನೀಲಾಭ್ರಮಿವ ವಿದ್ಯುತಂ।।
03248010a ಅಪ್ಸರಾ ದೇವಕನ್ಯಾ ವಾ ಮಾಯಾ ವಾ ದೇವನಿರ್ಮಿತಾ।
03248010c ಇತಿ ಕೃತ್ವಾಂಜಲಿಂ ಸರ್ವೇ ದದೃಶುಸ್ತಾಮನಿಂದಿತಾಂ।।

ಉತ್ತಮ ರೂಪದಿಂದ ಮತ್ತು ವಿಭ್ರಾಜಮಾನ ಶರೀರದಿಂದ ಬೆಳಗುತ್ತಿದ್ದ, ಕಪ್ಪುಮೋಡಗಳಿಂದ ಬಂದ ವಿದ್ಯುತ್ತಿನಂತೆ ವನೋದ್ದೇಶವನ್ನು ಬೆಳಗುತ್ತಿದ್ದ, ಅಪ್ಸರೆಯೋ, ದೇವಕನ್ಯೆಯೋ ಅಥವಾ ದೇವನಿರ್ಮಿತ ಮಾಯೆಯೋ ಎಂಬಂತಿದ್ದ, ಕೈಮುಗಿದು ನಿಂತಿದ್ದ ಆ ಅನಿಂದಿತೆಯನ್ನು ಎಲ್ಲರೂ ನೋಡಿದರು.

03248011a ತತಃ ಸ ರಾಜಾ ಸಿಂಧೂನಾಂ ವಾರ್ದ್ಧಕ್ಷತ್ರಿರ್ಜಯದ್ರಥಃ।
03248011c ವಿಸ್ಮಿತಸ್ತಾಮನಿಂದ್ಯಾಂಗೀಂ ದೃಷ್ಟ್ವಾಸೀದ್ಧೃಷ್ಟಮಾನಸಃ।

ಆಗ ವಾರ್ಧಕ್ಷತ್ರಿ ಸಿಂಧುರಾಜ ಜಯದ್ರಥನು ಆ ಅನವದ್ಯಾಂಗಿಯನ್ನು ನೋಡಿ ವಿಸ್ಮಿತನಾಗಿ ಸಂತೋಷಗೊಂಡನು.

03248012a ಸ ಕೋಟಿಕಾಶ್ಯಂ ರಾಜಾನಮಬ್ರವೀತ್ಕಾಮಮೋಹಿತಃ।
03248012c ಕಸ್ಯ ತ್ವೇಷಾನವದ್ಯಾಂಗೀ ಯದಿ ವಾಪಿ ನ ಮಾನುಷೀ।।

ಕಾಮಮೋಹಿತನಾದ ಅವನು ಕೋಟಿಕಾಶ್ಯ ರಾಜನಿಗೆ ಹೇಳಿದನು: “ಮನುಷ್ಯಳೇ ಆಗಿದ್ದರೆ ಈ ಅನವದ್ಯಾಂಗಿಯು ಯಾರಾಗಿರಬಹುದು?

03248013a ವಿವಾಹಾರ್ಥೋ ನ ಮೇ ಕಶ್ಚಿದಿಮಾಂ ದೃಷ್ಟ್ವಾತಿಸುಂದರೀಂ।
03248013c ಏತಾಮೇವಾಹಮಾದಾಯ ಗಮಿಷ್ಯಾಮಿ ಸ್ವಮಾಲಯಂ।।

ಈ ಅತಿಸುಂದರಿಯನ್ನು ನೋಡಿದ ನಂತರ ನನಗೆ ವಿವಾಹದಲ್ಲಿ ಅರ್ಥವಿಲ್ಲ. ಇವಳನ್ನೇ ಕರೆದುಕೊಂಡು ನನ್ನ ಮನೆಗೆ ಹಿಂದಿರುಗುತ್ತೇನೆ.

03248014a ಗಚ್ಚ ಜಾನೀಹಿ ಸೌಮ್ಯೈನಾಂ ಕಸ್ಯ ಕಾ ಚ ಕುತೋಽಪಿ ವಾ।
03248014c ಕಿಮರ್ಥಮಾಗತಾ ಸುಭ್ರೂರಿದಂ ಕಂಟಕಿತಂ ವನಂ।।

ಸೌಮ್ಯ! ಹೋಗಿ ಇವಳು ಯಾರವಳು? ಯಾರು ಮತ್ತು ಎಲ್ಲಿಂದ ಬಂದಿದ್ದಾಳೆಂದು ತಿಳಿದುಕೋ. ಯಾವ ಕಾರಣಕ್ಕಾಗಿ ಈ ಸುಂದರ ಹುಬ್ಬಿನವಳು ಮುಳ್ಳಿನ ಈ ವನಕ್ಕೆ ಬಂದಿದ್ದಾಳೆ?

03248015a ಅಪಿ ನಾಮ ವರಾರೋಹಾ ಮಾಮೇಷಾ ಲೋಕಸುಂದರೀ।
03248015c ಭಜೇದದ್ಯಾಯತಾಪಾಂಗೀ ಸುದತೀ ತನುಮಧ್ಯಮಾ।

ಇಂದು ಈ ವರಾರೋಹೆ, ಲೋಕಸುಂದರಿ, ಆಯತಪಾಂಗೀ, ಸುಂದರ ಹಲ್ಲಿನ ತನುಮಧ್ಯಮೆಯು ನನ್ನ ಪ್ರೀತಿಯಲ್ಲಿ ಪಾಲ್ಗೊಳ್ಳುತ್ತಾಳೆಯೇ?

03248016a ಅಪ್ಯಹಂ ಕೃತಕಾಮಃ ಸ್ಯಾಮಿಮಾಂ ಪ್ರಾಪ್ಯ ವರಸ್ತ್ರಿಯಂ।
03248016c ಗಚ್ಚ ಜಾನೀಹಿ ಕೋ ನ್ವಸ್ಯಾ ನಾಥ ಇತ್ಯೇವ ಕೋಟಿಕ।।

ಈ ವರಸ್ತ್ರೀಯನ್ನು ಪಡೆದು ಇಂದು ನಾನು ನನ್ನ ಕಾಮವನ್ನು ಪೂರೈಸಿಕೊಳ್ಳಬಹುದೇ? ಕೋಟಿಕ! ಇವಳ ರಕ್ಷಕರು ಯಾರು ಎನ್ನುವುದನ್ನೂ ಕೇಳಿಕೊಂಡು ಬಾ.”

03248017a ಸ ಕೋಟಿಕಾಶ್ಯಸ್ತಚ್ಚ್ರುತ್ವಾ ರಥಾತ್ಪ್ರಸ್ಕಂದ್ಯ ಕುಂಡಲೀ।
03248017c ಉಪೇತ್ಯ ಪಪ್ರಚ್ಚ ತದಾ ಕ್ರೋಷ್ಟಾ ವ್ಯಾಘ್ರವಧೂಮಿವ।।

ಇದನ್ನು ಕೇಳಿದ ಕುಂಡಲಗಳನ್ನು ಧರಿಸಿದ್ದ ಕೋಟಿಕನು ರಥದಿಂದ ಹಾರಿ ನರಿಯು ವ್ಯಾಘ್ರದ ಬಳಿಸಾರುವಂತೆ ಅವಳ ಹತ್ತಿರ ಬಂದು ಕೇಳಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ದ್ರೌಪದೀಹರಣಪರ್ವಣಿ ಜಯದ್ರಥಾಗಮನೇ ಅಷ್ಟಚತ್ವಾರಿಂಶದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ದ್ರೌಪದೀಹರಣಪರ್ವದಲ್ಲಿ ಜಯದ್ರಥಾಗಮನದಲ್ಲಿ ಇನ್ನೂರಾನಲ್ವತ್ತೆಂಟನೆಯ ಅಧ್ಯಾಯವು.