ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ವ್ರೀಹಿದ್ರೌಣಿಕಮಾಖ್ಯಾನ ಪರ್ವ
ಅಧ್ಯಾಯ 246
ಸಾರ
ಅಕ್ಕಿಕುಟ್ಟುವ ವೃತ್ತಿಯಲ್ಲಿ ನಿರತನಾದ ಮುದ್ಗಲನು ಒಂದು ಪಕ್ಷ ತಿನ್ನುತ್ತಿದ್ದು ಇನ್ನೊಂದು ಪಕ್ಷದಲ್ಲಿ ಪಾರಿವಾಳದಂತೆ ಒಂದು ಅಳತೆ ಭತ್ತವನ್ನು ಸುಲಿದು ತಿನ್ನುವ ಇಷ್ಟೀಕೃತ ಎಂಬ ವ್ರತವನ್ನು ಪರಿವಾರದೊಂದಿಗೆ ನಡೆಸುತ್ತಿದ್ದುದು (1-5). ಅವನು ಅನ್ನವನ್ನು ನೀಡುತ್ತಿದ್ದಂತಲೆಲ್ಲ ಪಾತ್ರೆಯಲ್ಲಿನ ಉಳಿದ ಅನ್ನವು ಅತಿಥಿಗಳ ದರ್ಶನದಿಂದ ಹಿಗ್ಗಿ ಹೆಚ್ಚಾಗುತ್ತಿದ್ದುದು (6-10). ಅವನನ್ನು ಪರೀಕ್ಷಿಸಲು ದುರ್ವಾಸನು ಆರು ಋತುಗಳು ಪಕ್ಷ-ಪಕ್ಷದಲ್ಲಿಯೂ ಬಂದು ಮುದ್ಗಲನು ಸುಲಿದ ಭತ್ತದ ಅನ್ನವನ್ನು ಪೂರ್ಣ ತಿಂದುಹೋದುದು (11-21). ಮುದ್ಗಲನ ಮನಸ್ಸಿನಲ್ಲಿ ಸ್ವಲ್ಪವೂ ವಿಕಾರಗಳನ್ನು ಕಾಣದೇ ಅವನ ನಿರ್ಮಲ ಮನಸ್ಸು ಶುದ್ಧವಾಗಿರುವುದನ್ನೇ ನೋಡಿ ದುರ್ವಾಸನು ನೀನು ಸಶರೀರನಾಗಿಯೇ ಸ್ವರ್ಗಕ್ಕೆ ಹೋಗುತ್ತೀಯೆ ಎನ್ನುವುದು (22-29). ಅವನನ್ನು ಕರೆದುಕೊಂಡು ಹೋಗಲು ದೇವದೂತನು ಬರಲು ಸ್ವರ್ಗದ ವಿಶೇಷತೆಯೇನೆಂದು ಮುದ್ಗಲನು ಅವನಲ್ಲಿ ಪಶ್ನಿಸುವುದು (30-36).
03246001 ಯುಧಿಷ್ಠಿರ ಉವಾಚ।
03246001a ವ್ರೀಹಿದ್ರೋಣಃ ಪರಿತ್ಯಕ್ತಃ ಕಥಂ ತೇನ ಮಹಾತ್ಮನಾ।
03246001c ಕಸ್ಮೈ ದತ್ತಶ್ಚ ಭಗವನ್ವಿಧಿನಾ ಕೇನ ಚಾತ್ಥ ಮೇ।।
ಯುಧಿಷ್ಠಿರನು ಹೇಳಿದನು: “ಭಗವನ್! ಮಹಾತ್ಮನು ಯಾವ ಕಾರಣಕ್ಕಾಗಿ ಒಂದು ಅಳತೆ ಅನ್ನವನ್ನು ಪರಿತ್ಯಜಿಸಿದನು? ಅವನು ಯಾರಿಗೆ ಯಾವರೀತಿಯಲ್ಲಿ ಕೊಟ್ಟನು? ಹೇಳು!
03246002a ಪ್ರತ್ಯಕ್ಷಧರ್ಮಾ ಭಗವಾನ್ಯಸ್ಯ ತುಷ್ಟೋ ಹಿ ಕರ್ಮಭಿಃ।
03246002c ಸಫಲಂ ತಸ್ಯ ಜನ್ಮಾಹಂ ಮನ್ಯೇ ಸದ್ಧರ್ಮಚಾರಿಣಃ।।
ಪ್ರತ್ಯಕ್ಷ ಭಗವಾನ್ ಧರ್ಮನು ಅವನ ಕರ್ಮಗಳಿಂದ ತುಷ್ಟನಾಗಿದ್ದಾನೆಂದರೆ ಆ ಸದ್ಧರ್ಮಚಾರಿಯ ಜನ್ಮವು ಸಫಲವಾದಂತೆಯೇ!”
03246003 ವ್ಯಾಸ ಉವಾಚ।
03246003a ಶಿಲೋಂಚವೃತ್ತಿರ್ಧರ್ಮಾತ್ಮಾ ಮುದ್ಗಲಃ ಸಂಶಿತವ್ರತಃ।
03246003c ಆಸೀದ್ರಾಜನ್ಕುರುಕ್ಷೇತ್ರೇ ಸತ್ಯವಾಗನಸೂಯಕಃ।।
ವ್ಯಾಸನು ಹೇಳಿದನು: “ರಾಜನ್! ಕುರುಕ್ಷೇತ್ರದಲ್ಲಿ ಅಕ್ಕಿಕುಟ್ಟುವ ವೃತ್ತಿಯಲ್ಲಿ ನಿರತನಾದ ಮುದ್ಗಲನೆನ್ನುವ ಧರ್ಮಾತ್ಮ, ಸಂಶಿತವ್ರತನಿದ್ದನು1.
03246004a ಅತಿಥಿವ್ರತೀ ಕ್ರಿಯಾವಾಂಶ್ಚ ಕಾಪೋತೀಂ ವೃತ್ತಿಮಾಸ್ಥಿತಃ।
03246004c ಸತ್ರಮಿಷ್ಟೀಕೃತಂ ನಾಮ ಸಮುಪಾಸ್ತೇ ಮಹಾತಪಾಃ।।
ಪಾರಿವಾಳದಂತೆ ಜೀವಿಸುತ್ತಿದ್ದ ಅವನು ಅತಿಥಿಗಳನ್ನು ಸತ್ಕರಿಸುತ್ತಿದ್ದನು. ಆ ಮಹಾತಪಸ್ವಿಯು ಇಷ್ಟೀಕೃತ ಎಂಬ ಹೆಸರಿನ ಸತ್ರವನ್ನು ಕೈಗೊಂಡನು.
03246005a ಸಪುತ್ರದಾರೋ ಹಿ ಮುನಿಃ ಪಕ್ಷಾಹಾರೋ ಬಭೂವ ಸಃ।
03246005c ಕಪೋತವೃತ್ತ್ಯಾ ಪಕ್ಷೇಣ ವ್ರೀಹಿದ್ರೋಣಮುಪಾರ್ಜಯತ್।।
ಅವನು ಪತ್ನಿ ಪುತ್ರರೊಂದಿಗೆ ಒಂದು ಪಕ್ಷ ತಿನ್ನುತ್ತಿದ್ದನು. ಮತ್ತು ಇನ್ನೊಂದು ಪಕ್ಷದಲ್ಲಿ ಪಾರಿವಾಳದಂತೆ ಒಂದು ಅಳತೆ ಭತ್ತವನ್ನು ಸುಲಿದು ತಿನ್ನುತ್ತಿದ್ದನು.
03246006a ದರ್ಶಂ ಚ ಪೌರ್ಣಮಾಸಂ ಚ ಕುರ್ವನ್ವಿಗತಮತ್ಸರಃ।
03246006c ದೇವತಾತಿಥಿಶೇಷೇಣ ಕುರುತೇ ದೇಹಯಾಪನಂ।।
ದರ್ಶ ಮತ್ತು ಪೌರ್ಣಮಾಸಗಳನ್ನು ಆಚರಿಸುವ ಆ ವಿಗತಮತ್ಸರನು ದೇವತೆಗಳು ಮತ್ತು ಅತಿಥಿಗಳು ತಿಂದು ಉಳಿದುದರಿಂದ ದೇಹಧರ್ಮವನ್ನು ಪಾಲಿಸುತ್ತಿದ್ದನು.
03246007a ತಸ್ಯೇಂದ್ರಃ ಸಹಿತೋ ದೇವೈಃ ಸಾಕ್ಷಾತ್ತ್ರಿಭುವನೇಶ್ವರಃ।
03246007c ಪ್ರತ್ಯಗೃಹ್ಣಾನ್ಮಹಾರಾಜ ಭಾಗಂ ಪರ್ವಣಿ ಪರ್ವಣಿ।।
ಮಹಾರಾಜ! ಸಾಕ್ಷಾತ್ ತ್ರಿಭುವನೇಶ್ವರ ಇಂದ್ರನು ದೇವತೆಗಳ ಸಹಿತ ಪರ್ವ ಪರ್ವಗಳಲ್ಲಿ ಯಜ್ಞದ ಭಾಗವನ್ನು ಸ್ವೀಕರಿಸುತ್ತಿದ್ದನು.
03246008a ಸ ಪರ್ವಕಾಲಂ ಕೃತ್ವಾ ತು ಮುನಿವೃತ್ತ್ಯಾ ಸಮನ್ವಿತಃ।
03246008c ಅತಿಥಿಭ್ಯೋ ದದಾವನ್ನಂ ಪ್ರಹೃಷ್ಟೇನಾಂತರಾತ್ಮನಾ।।
ಪರ್ವಕಾಲದಲ್ಲಿ ಅವನು ಮುನಿವೃತ್ತಿಯನ್ನು ಅನುಸರಿಸಿ ಅಂತರಾತ್ಮದಲ್ಲಿ ಪ್ರಹೃಷ್ಟನಾಗಿ ಅತಿಥಿಗಳಿಗೆ ಅನ್ನವನ್ನು ನೀಡುತ್ತಿದ್ದನು.
03246009a ವ್ರೀಹಿದ್ರೋಣಸ್ಯ ತದಹೋ ದದತೋಽನ್ನಂ ಮಹಾತ್ಮನಃ।
03246009c ಶಿಷ್ಟಂ ಮಾತ್ಸರ್ಯಹೀನಸ್ಯ ವರ್ಧತ್ಯತಿಥಿದರ್ಶನಾತ್।।
ಆ ಮಹಾತ್ಮನು ಅನ್ನವನ್ನು ನೀಡುತ್ತಿದ್ದಂತಲೆಲ್ಲ ಆ ಮಾತ್ಸರ್ಯಹೀನನ ಪಾತ್ರೆಯಲ್ಲಿನ ಉಳಿದ ಅನ್ನವು ಅತಿಥಿಗಳ ದರ್ಶನದಿಂದ ಹಿಗ್ಗಿ ಹೆಚ್ಚಾಗುತ್ತಿತ್ತು.
03246010a ತಚ್ಚತಾನ್ಯಪಿ ಭುಂಜಂತಿ ಬ್ರಾಹ್ಮಣಾನಾಂ ಮನೀಷಿಣಾಂ।
03246010c ಮುನೇಸ್ತ್ಯಾಗವಿಶುದ್ಧ್ಯಾ ತು ತದನ್ನಂ ವೃದ್ಧಿಮೃಚ್ಚತಿ।।
ವಿಶುದ್ಧನಾಗಿ ತ್ಯಾಗಭಾವದಿಂದ ಆ ಅನ್ನವನ್ನು ನೀಡಿದಾಗಲೆಲ್ಲ ಅದು ನೂರಾರು ಪಟ್ಟು ವೃದ್ಧಿಯಾಗಿ ನೂರಾರು ಪಾರಂಗತ ಬ್ರಾಹ್ಮಣರು ಊಟಮಾಡುತ್ತಿದ್ದರು.
03246011a ತಂ ತು ಶುಶ್ರಾವ ಧರ್ಮಿಷ್ಠಂ ಮುದ್ಗಲಂ ಸಂಶಿತವ್ರತಂ।
03246011c ದುರ್ವಾಸಾ ನೃಪ ದಿಗ್ವಾಸಾಸ್ತಮಥಾಭ್ಯಾಜಗಾಮ ಹ।।
03246012a ಬಿಭ್ರಚ್ಚಾನಿಯತಂ ವೇಷಮುನ್ಮತ್ತ ಇವ ಪಾಂಡವ।
03246012c ವಿಕಚಃ ಪರುಷಾ ವಾಚೋ ವ್ಯಾಹರನ್ವಿವಿಧಾ ಮುನಿಃ।।
ನೃಪ! ಧರ್ಮಿಷ್ಟ ಸಂಶಿತವ್ರತ ಮುದ್ಗಲನ ಕುರಿತು ದಿಕ್ಕನ್ನೇ ಬಟ್ಟೆಯನ್ನಾಗಿ ಧರಿಸಿದ ದುರ್ವಾಸನು ಕೇಳಿದನು. ಪಾಂಡವ! ಆಗ ಉನ್ಮತ್ತನಂತೆ ಧರಿಸಿದ, ತಲೆಬೋಳಿಸಿಕೊಂಡ ಆ ಮುನಿಯು ವಿವಿಧ ಬೈಗಳಗಳನ್ನು ಉಚ್ಛರಿಸುತ್ತಾ ಅಲ್ಲಿಗೆ ಬಂದನು.
03246013a ಅಭಿಗಮ್ಯಾಥ ತಂ ವಿಪ್ರಮುವಾಚ ಮುನಿಸತ್ತಮಃ।
03246013c ಅನ್ನಾರ್ಥಿನಮನುಪ್ರಾಪ್ತಂ ವಿದ್ಧಿ ಮಾಂ ಮುನಿಸತ್ತಮ।।
ಆಗಮಿಸಿದ ಆ ಮುನಿಸತ್ತಮನು ವಿಪ್ರನಿಗೆ ಹೇಳಿದನು: “ಮುನಿಸತ್ತಮ! ನಾನು ಅನ್ನಾರ್ಥಿಯಾಗಿ ಬಂದಿದ್ದೇನೆ ಎಂದು ತಿಳಿ.”
03246014a ಸ್ವಾಗತಂ ತೇಽಸ್ತ್ವಿತಿ ಮುನಿಂ ಮುದ್ಗಲಃ ಪ್ರತ್ಯಭಾಷತ।
03246014c ಪಾದ್ಯಮಾಚಮನೀಯಂ ಚ ಪ್ರತಿವೇದ್ಯಾನ್ನಮುತ್ತಮಂ।।
“ನಿನಗೆ ಇದೋ ಸ್ವಾಗತ!” ಎಂದು ಮುದ್ಗಲನು ಮುನಿಗೆ ಉತ್ತರಿಸಿದನು. ಪಾದ್ಯ ಆಚಮನೀಯಗಳೊಂದಿಗೆ ಉತ್ತಮ ಅನ್ನವನ್ನು ಬಡಿಸಿದನು.
03246015a ಪ್ರಾದಾತ್ಸ ತಪಸೋಪಾತ್ತಂ ಕ್ಷುಧಿತಾಯಾತಿಥಿವ್ರತೀ।
03246015c ಉನಿನ್ಮತ್ತಾಯ ಪರಾಂ ಶ್ರದ್ಧಾಮಾಸ್ಥಾಯ ಸ ಧೃತವ್ರತಃ।।
ಆ ಧೃತವ್ರತ ಅತಿಥಿವ್ರತಿಯು ಹಸಿವೆಯಿಂದ ಬಳಲಿದ್ದ ಹುಚ್ಚನಂತಿದ್ದ ಆ ತಪಸ್ವಿಗೆ ಪರಮ ಶ್ರದ್ಧೆಯಿಂದ ಕುಳ್ಳಿರಿಸಿ ನೀಡಿದನು.
03246016a ತತಸ್ತದನ್ನಂ ರಸವತ್ಸ ಏವ ಕ್ಷುಧಯಾನ್ವಿತಃ।
03246016c ಬುಭುಜೇ ಕೃತ್ಸ್ನಮುನ್ಮತ್ತಃ ಪ್ರಾದಾತ್ತಸ್ಮೈ ಚ ಮುದ್ಗಲಃ।।
ತುಂಬಾ ಹಸಿದಿದ್ದ ಆ ಹುಚ್ಚನು ರಸವತ್ತಾಗಿದ್ದ ಆ ಅನ್ನವೆಲ್ಲವನ್ನೂ ತಿನ್ನಲು ಮುದ್ಗಲನು ಇನ್ನೂ ಹೆಚ್ಚು ನೀಡಿದನು.
03246017a ಭುಕ್ತ್ವಾ ಚಾನ್ನಂ ತತಃ ಸರ್ವಮುಚ್ಚಿಷ್ಟೇನಾತ್ಮನಸ್ತತಃ।
03246017c ಅಥಾನುಲಿಲಿಪೇಽಂಗಾನಿ ಜಗಾಮ ಚ ಯಥಾಗತಂ।।
ಆ ಅನ್ನವನ್ನೂ ತಿಂದು ಎಂಜಲೆಲ್ಲವನ್ನೂ ತನ್ನ ದೇಹಕ್ಕೆ ಬಳಿದುಕೊಂಡು ದುರ್ವಾಸನು ಎಲ್ಲಿಂದ ಬಂದಿದ್ದನೋ ಅಲ್ಲಿಗೆ ತೆರಳಿದನು.
03246018a ಏವಂ ದ್ವಿತೀಯೇ ಸಂಪ್ರಾಪ್ತೇ ಪರ್ವಕಾಲೇ ಮನೀಷಿಣಃ।
03246018c ಆಗಮ್ಯ ಬುಭುಜೇ ಸರ್ವಮನ್ನಮುಂಚೋಪಜೀವಿನಃ।।
ಹೀಗೆ ಎರಡನೇ ಪರ್ವಕಾಲವು ಬಂದಾಗಲೂ, ಭತ್ತವನ್ನು ಕುಟ್ಟಿ ಜೀವಿಸುತ್ತಿದ್ದ ಆ ಮನೀಷಣನ ಬಳಿ ಬಂದು ಅನ್ನವೆಲ್ಲವನ್ನೂ ತಿಂದನು.
03246019a ನಿರಾಹಾರಸ್ತು ಸ ಮುನಿರುಂಚಮಾರ್ಜಯತೇ ಪುನಃ।
03246019c ನ ಚೈನಂ ವಿಕ್ರಿಯಾಂ ನೇತುಮಶಕನ್ಮುದ್ಗಲಂ ಕ್ಷುಧಾ।।
ಆಗ ನಿರಾಹಾರನಾಗಿ ಆ ಮುನಿಯು ಪುನಃ ಭತ್ತವನ್ನು ಕುಟ್ಟಿದನು. ಹಸಿವೆಯು ಮುದ್ಗಲನ ಸಮಭಾವನೆಯನ್ನು ಕೆಡಿಸಲಿಲ್ಲ.
03246020a ನ ಕ್ರೋಧೋ ನ ಚ ಮಾತ್ಸರ್ಯಂ ನಾವಮಾನೋ ನ ಸಂಭ್ರಮಃ।
03246020c ಸಪುತ್ರದಾರಮುಂಚಂತಮಾವಿವೇಶ ದ್ವಿಜೋತ್ತಮಂ।।
ಮಕ್ಕಳು-ಪತ್ನಿಯೊಂದಿಗೆ ಭತ್ತ ಕುಟ್ಟುತ್ತಿದ್ದ ಆ ದ್ವಿಜೋತ್ತಮನನ್ನು ಕ್ರೋಧವಾಗಲೀ, ಮಾತ್ಸರ್ಯವಾಗಲೀ, ಅಪಮಾನವಾಗಲೀ, ಸಂಭ್ರಮವಾಗಲೀ, ಹೊಗಲಿಲ್ಲ.
03246021a ತಥಾ ತಮುಂಚಧರ್ಮಾಣಂ ದುರ್ವಾಸಾ ಮುನಿಸತ್ತಮಂ।
03246021c ಉಪತಸ್ಥೇ ಯಥಾಕಾಲಂ ಷಟ್ಕೃತ್ವಃ ಕೃತನಿಶ್ಚಯಃ।।
ದುರ್ವಾಸನು ನಿಶ್ಚಯಿಸಿ ಕಾಲಕ್ಕೆ ತಕ್ಕಂತೆ ಆರು ಋತುಗಳಲ್ಲಿ ಭತ್ತಕುಟ್ಟುವ ಧರ್ಮದಲ್ಲಿ ನಿರತನಾದ ಮುನಿಸತ್ತಮನಲ್ಲಿಗೆ ಬಂದನು.
03246022a ನ ಚಾಸ್ಯ ಮಾನಸಂ ಕಿಂ ಚಿದ್ವಿಕಾರಂ ದದೃಶೇ ಮುನಿಃ।
03246022c ಶುದ್ಧಸತ್ತ್ವಸ್ಯ ಶುದ್ಧಂ ಸ ದದೃಶೇ ನಿರ್ಮಲಂ ಮನಃ।।
ಆದರೆ ಮುನಿಯು ಅವನ ಮನಸ್ಸಿನಲ್ಲಿ ಸ್ವಲ್ಪವೂ ವಿಕಾರಗಳನ್ನು ಕಾಣಲಿಲ್ಲ. ಆ ಶುದ್ಧಸತ್ವನ ನಿರ್ಮಲ ಮನಸ್ಸು ಶುದ್ಧವಾಗಿರುವುದನ್ನೇ ನೋಡಿದನು.
03246023a ತಮುವಾಚ ತತಃ ಪ್ರೀತಃ ಸ ಮುನಿರ್ಮುದ್ಗಲಂ ತದಾ।
03246023c ತ್ವತ್ಸಮೋ ನಾಸ್ತಿ ಲೋಕೇಽಸ್ಮಿನ್ದಾತಾ ಮಾತ್ಸರ್ಯವರ್ಜಿತಃ।।
ಆಗ ಆ ಮುನಿಯು ಸಂತೋಷಗೊಂಡು ಮುದ್ಗಲನಿಗೆ ಹೇಳಿದನು: “ನಿನ್ನ ಸಮನಾದ ಮಾತ್ಸರ್ಯವರ್ಜಿತ ದಾನಿಯು ಈ ಲೋಕದಲ್ಲಿ ಇಲ್ಲ.
03246024a ಕ್ಷುದ್ಧರ್ಮಸಂಜ್ಞಾಂ ಪ್ರಣುದತ್ಯಾದತ್ತೇ ಧೈರ್ಯಮೇವ ಚ।
03246024c ವಿಷಯಾನುಸಾರಿಣೀ ಜಿಃವಾ ಕರ್ಷತ್ಯೇವ ರಸಾನ್ಪ್ರತಿ।।
ಹಸಿವೆಯು ಧರ್ಮಸಂಜ್ಞೆಯನ್ನು ಮತ್ತು ಧೈರ್ಯವನ್ನು ಬಹುದೂರ ಬಿಸಾಡುತ್ತದೆ. ವಿಷಯಾನುಸರಿಣೀ ನಾಲಿಗೆಯು ರುಚಿಯಿಂದ ಆಕರ್ಶಿತಗೊಳ್ಳುತ್ತದೆ.
03246025a ಆಹಾರಪ್ರಭವಾಃ ಪ್ರಾಣಾ ಮನೋ ದುರ್ನಿಗ್ರಹಂ ಚಲಂ।
03246025c ಮನಸಶ್ಚೇಂದ್ರಿಯಾಣಾಂ ಚಾಪ್ಯೈಕಾಗ್ರ್ಯಂ ನಿಶ್ಚಿತಂ ತಪಃ।।
ಪ್ರಾಣವು ಆಹಾರವನ್ನು ಅವಲಂಬಿಸಿದೆ. ಮನಸ್ಸು ಚಂಚಲ ಮತ್ತು ಅದನ್ನು ನಿಗ್ರಹಿಸುವುದು ಕಷ್ಟ. ಮನಸ್ಸು ಮತ್ತು ಇಂದ್ರಿಯಗಳನ್ನು ಏಕಾಗ್ರವಾಗಿ ಇಟ್ಟುಕೊಳ್ಳುವುದೇ ತಪಸ್ಸೆಂದು ನಿರ್ಧರಿಸಲ್ಪಟ್ಟಿದೆ.
03246026a ಶ್ರಮೇಣೋಪಾರ್ಜಿತಂ ತ್ಯಕ್ತುಂ ದುಃಖಂ ಶುದ್ಧೇನ ಚೇತಸಾ।
03246026c ತತ್ಸರ್ವಂ ಭವತಾ ಸಾಧೋ ಯಥಾವದುಪಪಾದಿತಂ।।
ಶ್ರಮದಿಂದ ಸಂಪಾದಿಸಿದುದನ್ನು ಶುದ್ಧಮನಸ್ಸಿನಿಂದ ತ್ಯಜಿಸುವುದು ಕಷ್ಟ. ಆದರೂ ಸಾಧೋ! ಇವೆಲ್ಲವನ್ನೂ ನೀನು ಸಾಧಿಸಿದ್ದೀಯೆ.
03246027a ಪ್ರೀತಾಃ ಸ್ಮೋಽನುಗೃಹೀತಾಶ್ಚ ಸಮೇತ್ಯ ಭವತಾ ಸಹ।
03246027c ಇಂದ್ರಿಯಾಭಿಜಯೋ ಧೈರ್ಯಂ ಸಂವಿಭಾಗೋ ದಮಃ ಶಮಃ।।
03246028a ದಯಾ ಸತ್ಯಂ ಚ ಧರ್ಮಶ್ಚ ತ್ವಯಿ ಸರ್ವಂ ಪ್ರತಿಷ್ಠಿತಂ।
ನಿನ್ನ ಜೊತೆಯಲ್ಲಿರುವಾಗ ನಾವು ಸಂತೋಷಪಡುತ್ತೇವೆ ಮತ್ತು ಅನುಗೃಹೀತರಾಗಿದ್ದೇವೆ ಎಂದೆನಿಸುತ್ತದೆ. ಇಂದ್ರಿಯಗಳ ಮೇಲಿನ ಜಯ, ಧೈರ್ಯ, ಹಂಚಿಕೊಳ್ಳುವಿಕೆ, ದಮ, ಶಮ, ದಯೆ, ಸತ್ಯ, ಮತ್ತು ಧರ್ಮ ಎಲ್ಲವೂ ನಿನ್ನಲ್ಲಿ ನೆಲಸಿವೆ.
03246028c ಜಿತಾಸ್ತೇ ಕರ್ಮಭಿರ್ಲೋಕಾಃ ಪ್ರಾಪ್ತೋಽಸಿ ಪರಮಾಂ ಗತಿಂ।।
03246029a ಅಹೋ ದಾನಂ ವಿಘುಷ್ಟಂ ತೇ ಸುಮಹತ್ಸ್ವರ್ಗವಾಸಿಭಿಃ।
03246029c ಸಶರೀರೋ ಭವಾನ್ಗಂತಾ ಸ್ವರ್ಗಂ ಸುಚರಿತವ್ರತ।।
ನೀನು ಕರ್ಮಗಳಿಂದ ಲೋಕಗಳನ್ನು ಗೆದ್ದಿದ್ದೀಯೆ ಮತ್ತು ಪರಮ ಗತಿಯನ್ನು ಪಡೆದಿದ್ದೀಯೆ. ಸ್ವರ್ಗವಾಸಿಗಳೂ ಕೂಡ ನಿನ್ನ ದಾನವನ್ನು ತುಂಬಾ ಹೊಗಳುತ್ತಿದ್ದಾರೆ. ಸುಚರಿತವ್ರತ! ಸಶರೀರನಾಗಿಯೇ ನೀನು ಸ್ವರ್ಗಕ್ಕೆ ಹೋಗುತ್ತೀಯೆ.”
03246030a ಇತ್ಯೇವಂ ವದತಸ್ತಸ್ಯ ತದಾ ದುರ್ವಾಸಸೋ ಮುನೇಃ।
03246030c ದೇವದೂತೋ ವಿಮಾನೇನ ಮುದ್ಗಲಂ ಪ್ರತ್ಯುಪಸ್ಥಿತಃ।।
03246031a ಹಂಸಸಾರಸಯುಕ್ತೇನ ಕಿಂಕಿಣೀಜಾಲಮಾಲಿನಾ।
03246031c ಕಾಮಗೇನ ವಿಚಿತ್ರೇಣ ದಿವ್ಯಗಂಧವತಾ ತಥಾ।।
ಮುನಿ ದುರ್ವಾಸನು ಹೀಗೆ ಹೇಳುತ್ತಿದ್ದಂತೆಯೇ ಹಂಸ ಸಾರಸಗಳಿಂದ ಕೂಡಿದ, ಕಿಂಕಿಣೀಜಾಲಮಾಲೆಗಳಿಂದ ಕೂಡಿದ, ಬಣ್ಣಬಣ್ಣದ, ದಿವ್ಯ ಸುಗಂಧವನ್ನು ಸೂಸುವ, ಬೇಕಾದಲ್ಲಿ ಹೋಗಬಲ್ಲ ವಿಮಾನದಲ್ಲಿ ಕುಳಿತಿದ್ದ ದೇವದೂತನು ಮುದ್ಗಲನ ಬಳಿ ಬಂದನು.
03246032a ಉವಾಚ ಚೈನಂ ವಿಪ್ರರ್ಷಿಂ ವಿಮಾನಂ ಕರ್ಮಭಿರ್ಜಿತಂ।
03246032c ಸಮುಪಾರೋಹ ಸಂಸಿದ್ಧಿಂ ಪ್ರಾಪ್ತೋಽಸಿ ಪರಮಾಂ ಮುನೇ।।
ಅವನು ಆ ವಿಪ್ರರ್ಷಿಗೆ ಹೇಳಿದನು: “ನಿನ್ನ ಕರ್ಮಗಳಿಂದ ಗಳಿಸಿರುವ ಈ ವಿಮಾನವನ್ನೇರು. ಮುನೇ! ಪರಮ ಸಂಸಿದ್ಧಿಯನ್ನು ಪಡೆದಿದ್ದೀಯೆ.”
03246033a ತಮೇವಂವಾದಿನಮೃಷಿರ್ದೇವದೂತಮುವಾಚ ಹ।
03246033c ಇಚ್ಚಾಮಿ ಭವತಾ ಪ್ರೋಕ್ತಾನ್ಗುಣಾನ್ಸ್ವರ್ಗನಿವಾಸಿನಾಂ।।
ಹೀಗೆ ಹೇಳಿದ ದೇವದೂತನಿಗೆ ಋಷಿಯು ಕೇಳಿದನು: “ನಿನ್ನಿಂದ ಸ್ವರ್ಗನಿವಾಸಿಗಳ ಗುಣಗಳನ್ನು ಕೇಳಲು ಬಯಸುತ್ತೇನೆ.
03246034a ಕೇ ಗುಣಾಸ್ತತ್ರ ವಸತಾಂ ಕಿಂ ತಪಃ ಕಶ್ಚ ನಿಶ್ಚಯಃ।
03246034c ಸ್ವರ್ಗೇ ಸ್ವರ್ಗಸುಖಂ ಕಿಂ ಚ ದೋಷೋ ವಾ ದೇವದೂತಕ।।
ದೇವದೂತಕ! ಅಲ್ಲಿ ವಾಸಿಸುವವರ ಗುಣಗಳೇನು? ಅವರ ತಪಸ್ಸೇನು? ಅವರ ಗುರಿಗಳೇನು? ಸ್ವರ್ಗದಲ್ಲಿ ಸ್ವರ್ಗಸುಖವೆಂದರೇನು? ದೋಷಗಳೇನು?
03246035a ಸತಾಂ ಸಪ್ತಪದಂ ಮಿತ್ರಮಾಹುಃ ಸಂತಃ ಕುಲೋಚಿತಾಃ।
03246035c ಮಿತ್ರತಾಂ ಚ ಪುರಸ್ಕೃತ್ಯ ಪೃಚ್ಚಾಮಿ ತ್ವಾಮಹಂ ವಿಭೋ।।
ವಿಭೋ! ಒಳ್ಳೆಯವರೊಂದಿಗೆ ಏಳೇ ಹೆಜ್ಜೆಗಳನ್ನು ಜೊತೆಯಲ್ಲಿ ನಡೆಯುವುದರಿಂದ ಮಿತ್ರರಾಗುತ್ತಾರೆ ಎಂದು ಕುಲೋಚಿತ ಸಂತರು ಹೇಳುತ್ತಾರೆ2. ಮಿತ್ರತ್ವವನ್ನು ಗೌರವಿಸಿ ನಾನು ನಿನ್ನಲ್ಲಿ ಕೇಳುತ್ತಿದ್ದೇನೆ.
03246036a ಯದತ್ರ ತಥ್ಯಂ ಪಥ್ಯಂ ಚ ತದ್ಬ್ರವೀಹ್ಯವಿಚಾರಯನ್।
03246036c ಶ್ರುತ್ವಾ ತಥಾ ಕರಿಷ್ಯಾಮಿ ವ್ಯವಸಾಯಂ ಗಿರಾ ತವ।।
ಏನೂ ವಿಚಾರಮಾಡದೇ ಅಲ್ಲಿ ಇದ್ದುದನ್ನು ಇದ್ದಹಾಗೆ ನನಗೆ ಯಾವುದು ಒಳ್ಳೆಯದು ಎನ್ನುವುದನ್ನು ಹೇಳು. ನಿನ್ನ ಮಾತನ್ನು ಕೇಳಿದ ನಂತರ ಏನುಮಾಡಬೇಕೋ ಅದನ್ನು ಮಾಡುತ್ತೇನೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ವ್ರೀಹಿದ್ರೌಣಿಕಮಾಖ್ಯಾನ ಪರ್ವಣಿ ಮುದ್ಗಲೋಪಾಖ್ಯಾನೇ ಷಟ್ಚತ್ವಾರಿಂಶದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ವ್ರೀಹಿದ್ರೌಣಿಕಮಾಖ್ಯಾನ ಪರ್ವದಲ್ಲಿ ಮುದ್ಗಲೋಪಾಖ್ಯಾನದಲ್ಲಿ ಇನ್ನೂರಾನಲ್ವತ್ತಾರನೆಯ ಅಧ್ಯಾಯವು.