ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ವ್ರೀಹಿದ್ರೌಣಿಕಮಾಖ್ಯಾನ ಪರ್ವ
ಅಧ್ಯಾಯ 245
ಸಾರ
ವನವಾಸದ ಹನ್ನೊಂದು ವರ್ಷಗಳು ಕಳೆಯಲು, ಇನ್ನು ಸ್ವಲ್ಪವೇ ಸಮಯವು ಉಳಿದಿದೆ ಎಂದು ಪಾಂಡವರು, ತಮ್ಮ ಮುಖಗಳನ್ನೇ ಬದಲಾದಂತೆ ತೋರುತ್ತಿದ್ದ ಸಿಟ್ಟು ಉತ್ಸಾಹಗಳನ್ನು ತಳೆದುದು (1-7). ಆಗಮಿಸಿದ ವ್ಯಾಸನು ಯುಧಿಷ್ಠಿರನಿಗೆ ತಪಸ್ಸನ್ನು ತಪಿಸದೆಯೇ ಮಹಾ ಸುಖವು ದೊರೆಯುವುದಿಲ್ಲವೆಂದು ಉಪದೇಶಿಸುವುದು (8-25). ದಾನ ಮತ್ತು ತಪಸ್ಸುಗಳಲ್ಲಿ ಹೆಚ್ಚು ಯಶಸ್ಕರವಾದುದು ಯಾವುದೆಂದು ಯುಧಿಷ್ಠಿರನು ಕೇಳಲು ವ್ಯಾಸನು “ಕಷ್ಟಪಟ್ಟು ಸಂಪಾದಿಸಿದುದನ್ನು ಪರಿತ್ಯಾಗಮಾಡುವುದು ತುಂಬಾ ಕಷ್ಟವಾದುದು. ದಾನಕ್ಕಿಂತ ದುಷ್ಕರವಾದುದು ಇನ್ನೊಂದಿಲ್ಲ” ಎಂದು ಹೇಳಿ ಮುದ್ಗಲನು ಹೇಗೆ ಒಂದು ಅಳತೆ ಅನ್ನವನ್ನು ಪರಿತ್ಯಜಿಸಿ ಫಲವನ್ನು ಪಡೆದ ಎಂಬ ಪುರಾತನ ಇತಿಹಾಸವನ್ನು ಹೇಳಲು ಪ್ರಾರಂಭಿಸಿದುದು (26-34).
03245001 ವೈಶಂಪಾಯನ ಉವಾಚ।
03245001a ವನೇ ನಿವಸತಾಂ ತೇಷಾಂ ಪಾಂಡವಾನಾಂ ಮಹಾತ್ಮನಾಂ।
03245001c ವರ್ಷಾಣ್ಯೇಕಾದಶಾತೀಯುಃ ಕೃಚ್ಚ್ರೇಣ ಭರತರ್ಷಭ।।
ವೈಶಂಪಾಯನನು ಹೇಳಿದನು: “ಭರತರ್ಷಭ! ಆ ಮಹಾತ್ಮ ಪಾಂಡವರು ವನದಲ್ಲಿ ವಾಸಿಸುತ್ತಿರಲು ಹನ್ನೊಂದು ವರ್ಷಗಳು ಕಷ್ಟದಿಂದ ಕಳೆದವು.
03245002a ಫಲಮೂಲಾಶನಾಸ್ತೇ ಹಿ ಸುಖಾರ್ಹಾ ದುಃಖಮುತ್ತಮಂ।
03245002c ಪ್ರಾಪ್ತಕಾಲಮನುಧ್ಯಾಂತಃ ಸೇಹುರುತ್ತಮಪೂರುಷಾಃ।।
ಆ ಉತ್ತಮಪುರುಷರು ಸುಖಾರ್ಹರಾಗಿದ್ದರೂ ಫಲಮೂಲಗಳನ್ನು ತಿನ್ನುತ್ತಾ, ಸಮಯವೊದಗುವುದನ್ನೇ ಕಾಯುತ್ತಾ ಮಹಾದುಃಖವನ್ನು ಸಹಿಸಿಕೊಂಡರು.
03245003a ಯುಧಿಷ್ಠಿರಸ್ತು ರಾಜರ್ಷಿರಾತ್ಮಕರ್ಮಾಪರಾಧಜಂ।
03245003c ಚಿಂತಯನ್ಸ ಮಹಾಬಾಹುರ್ಭ್ರಾತೄಣಾಂ ದುಃಖಮುತ್ತಮಂ।।
ರಾಜರ್ಷಿ ಯುಧಿಷ್ಠಿರನಾದರೋ ತನ್ನ ಅಪರಾಧದಿಂದ ಹುಟ್ಟಿದ ಮಹಾಬಾಹು ಸಹೋದರರಿಗಾದ ಮಹಾ ದುಃಖದ ಕುರಿತು ಚಿಂತಿಸಿದನು.
03245004a ನ ಸುಷ್ವಾಪ ಸುಖಂ ರಾಜಾ ಹೃದಿ ಶಲ್ಯೈರಿವಾರ್ಪಿತೈಃ।
03245004c ದೌರಾತ್ಮ್ಯಮನುಪಶ್ಯಂಸ್ತತ್ಕಾಲೇ ದ್ಯೂತೋದ್ಭವಸ್ಯ ಹಿ।।
ಇದು ಹೃದಯವನ್ನು ಮುಳ್ಳಿನಂತೆ ಚುಚ್ಚುತ್ತಿರಲು ರಾಜನು ಸುಖವಾದ ನಿದ್ರಿಸಲಾಗದೇ ದ್ಯೂತದ ಸಮಯದಲ್ಲಿ ಉಂಟಾದ ದೌರಾತ್ಮದ ಕುರಿತು ಚಿಂತಿಸುತ್ತಿದ್ದನು.
03245005a ಸಂಸ್ಮರನ್ಪರುಷಾ ವಾಚಃ ಸೂತಪುತ್ರಸ್ಯ ಪಾಂಡವಃ।
03245005c ನಿಃಶ್ವಾಸಪರಮೋ ದೀನೋ ಬಿಭ್ರತ್ಕೋಪವಿಷಂ ಮಹತ್।।
ಸೂತಪುತ್ರನ ಕಠೋರ ಮಾತುಗಳನ್ನು ನೆನಪಿಸಿಕೊಂಡು ಪಾಂಡವನು ಪರಮದೀನನಾಗಿ ನಿಟ್ಟುಸಿರು ಬಿಡುತ್ತಾ ಕೋಪದ ಮಹಾವಿಷವನ್ನು ಕಾರುತ್ತಿದ್ದನು.
03245006a ಅರ್ಜುನೋ ಯಮಜೌ ಚೋಭೌ ದ್ರೌಪದೀ ಚ ಯಶಸ್ವಿನೀ।
03245006c ಸ ಚ ಭೀಮೋ ಮಹಾತೇಜಾಃ ಸರ್ವೇಷಾಮುತ್ತಮೋ ಬಲೀ।
03245006e ಯುಧಿಷ್ಠಿರಮುದೀಕ್ಷಂತಃ ಸೇಹುರ್ದುಃಖಮನುತ್ತಮಂ।।
ಅರ್ಜುನ, ಯಮಳರಿಬ್ಬರು, ಯಶಸ್ವಿನೀ ದ್ರೌಪದೀ, ಮತ್ತು ಮಹಾತೇಜಸ್ವಿ, ಸರ್ವರಿಗಿಂತಲೂ ಉತ್ತಮ ಬಲಶಾಲಿ ಭೀಮರು ಯುಧಿಷ್ಠಿರನನ್ನು ಗಮನಿಸುತ್ತಾ ಮಹಾದುಃಖವನ್ನು ಅನುಭವಿಸಿದರು.
03245007a ಅವಶಿಷ್ಟಮಲ್ಪಕಾಲಂ ಮನ್ವಾನಾಃ ಪುರುಷರ್ಷಭಾಃ।
03245007c ವಪುರನ್ಯದಿವಾಕಾರ್ಷುರುತ್ಸಾಹಾಮರ್ಷಚೇಷ್ಟಿತೈಃ।।
ಸ್ವಲ್ಪವೇ ಸಮಯವು ಉಳಿದಿದೆ ಎಂದು ಒಪ್ಪಿಕೊಂಡ ಪುರುಷರ್ಷಭರು ಎಷ್ಟು ಸಿಟ್ಟು ಉತ್ಸಾಹಗಳನ್ನು ತಳೆದಿದ್ದರೆಂದರೆ ಅವರ ಮುಖಗಳೇ ಬದಲಾದಂತೆ ತೋರುತ್ತಿದ್ದವು.
03245008a ಕಸ್ಯ ಚಿತ್ತ್ವಥ ಕಾಲಸ್ಯ ವ್ಯಾಸಃ ಸತ್ಯವತೀಸುತಃ।
03245008c ಆಜಗಾಮ ಮಹಾಯೋಗೀ ಪಾಂಡವಾನವಲೋಕಕಃ।।
ಕೆಲವು ಸಮಯದ ನಂತರ ಸತ್ಯವತೀಸುತ ಮಹಾಯೋಗಿ ವ್ಯಾಸನು ಪಾಂಡವರನ್ನು ಕಾಣಲು ಬಂದನು.
03245009a ತಮಾಗತಮಭಿಪ್ರೇಕ್ಷ್ಯ ಕುಂತೀಪುತ್ರೋ ಯುಧಿಷ್ಠಿರಃ।
03245009c ಪ್ರತ್ಯುದ್ಗಮ್ಯ ಮಹಾತ್ಮಾನಂ ಪ್ರತ್ಯಗೃಹ್ಣಾದ್ಯಥಾವಿಧಿ।।
ಅವನ ಬರವನ್ನು ಕಂಡ ಕುಂತೀಪುತ್ರ ಯುಧಿಷ್ಠಿರನು ಎದ್ದು ಮಹಾತ್ಮನನ್ನು ಯಥಾವಿಧಿಯಾಗಿ ಬರಮಾಡಿಕೊಂಡನು.
03245010a ತಮಾಸೀನಮುಪಾಸೀನಃ ಶುಶ್ರೂಷುರ್ನಿಯತೇಂದ್ರಿಯಃ।
03245010c ತೋಷಯನ್ಪ್ರಣಿಪಾತೇನ ವ್ಯಾಸಂ ಪಾಂಡವನಂದನಃ।।
ಆ ನಿಯತೇಂದ್ರಿಯ ಪಾಂಡವನಂದನನು ವ್ಯಾಸನ ಆಸೀನದ ಕೆಳಗಿನ ಆಸನದಲ್ಲಿ ಕುಳಿತು ಶುಶ್ರೂಷೆ ಮಾಡಿದನು ಮತ್ತು ಸಾಷ್ಟಾಂಗ ನಮಸ್ಕಾರಮಾಡಿ ಸಂತೋಷಗೊಳಿಸಿದನು.
03245011a ತಾನವೇಕ್ಷ್ಯ ಕೃಶಾನ್ಪೌತ್ರಾನ್ವನೇ ವನ್ಯೇನ ಜೀವತಃ।
03245011c ಮಹರ್ಷಿರನುಕಂಪಾರ್ಥಮಬ್ರವೀದ್ಬಾಷ್ಪಗದ್ಗದಂ।।
ವನದಲ್ಲಿ ವನ್ಯಗಳಿಂದ ಜೀವಿಸಿ ಕೃಶರಾಗಿದ್ದ ಆ ಮೊಮ್ಮಕ್ಕಳನ್ನು ನೋಡಿ ಮಹರ್ಷಿಯು ಅನುಕಂಪದಿಂದ ಬಾಷ್ಪಗದ್ಗಿತನಾಗಿ ಹೇಳಿದನು:
03245012a ಯುಧಿಷ್ಠಿರ ಮಹಾಬಾಹೋ ಶೃಣು ಧರ್ಮಭೃತಾಂ ವರ।
03245012c ನಾತಪ್ತತಪಸಃ ಪುತ್ರ ಪ್ರಾಪ್ನುವಂತಿ ಮಹತ್ಸುಖಂ।।
“ಮಹಾಬಾಹೋ! ಯುಧಿಷ್ಠಿರ! ಧರ್ಮಭೃತರಲ್ಲಿ ಶ್ರೇಷ್ಠ! ಪುತ್ರ! ಕೇಳು! ತಪಸ್ಸನ್ನು ತಪಿಸದೆಯೇ ಮಹಾ ಸುಖವನ್ನು ಪಡೆಯುವುದಿಲ್ಲ.
03245013a ಸುಖದುಃಖೇ ಹಿ ಪುರುಷಃ ಪರ್ಯಾಯೇಣೋಪಸೇವತೇ।
03245013c ನಾತ್ಯಂತಮಸುಖಂ ಕಶ್ಚಿತ್ಪ್ರಾಪ್ನೋತಿ ಪುರುಷರ್ಷಭ।।
ಪುರುಷರ್ಷಭ! ಪುರುಷನು ಸುಖದುಃಖಗಳನ್ನು ಒಂದಾದನಂತರ ಮತ್ತೊಂದರಂತೆ ಅನುಭವಿಸುತ್ತಾನೆ. ಅತ್ಯಂತವಾದ ಅಸುಖವನ್ನು ಯಾರೂ ಹೊಂದುವುದಿಲ್ಲ.
03245014a ಪ್ರಜ್ಞಾವಾಂಸ್ತ್ವೇವ ಪುರುಷಃ ಸಂಯುಕ್ತಃ ಪರಯಾ ಧಿಯಾ।
03245014c ಉದಯಾಸ್ತಮಯಜ್ಞೋ ಹಿ ನ ಶೋಚತಿ ನ ಹೃಷ್ಯತಿ।।
ಆಧ್ಯಾತ್ಮಿಕ ಬುದ್ಧಿಯಿಂದ ಕೂಡಿದ ಪ್ರಜ್ಞಾವಂತ ಪುರುಷನು ಅದೃಷ್ಟವು ಉದಯವಾಗುತ್ತದೆ ಮತ್ತು ಅಸ್ತವಾಗುತ್ತದೆ ಎನ್ನುವುದನ್ನು ತಿಳಿದು ಶೋಕಿಸುವುದಿಲ್ಲ ಮತ್ತು ಹರ್ಷಿಸುವುದೂ ಇಲ್ಲ.
03245015a ಸುಖಮಾಪತಿತಂ ಸೇವೇದ್ದುಃಖಮಾಪತಿತಂ ಸಹೇತ್।
03245015c ಕಾಲಪ್ರಾಪ್ತಮುಪಾಸೀತ ಸಸ್ಯಾನಾಮಿವ ಕರ್ಷಕಃ।।
ಸುಖವು ಬಂದು ಬಿದ್ದಾಗ ಅನುಭವಿಸು. ದುಃಖವು ಬಂದು ಬಿದ್ದಾಗ ಸಹಿಸಿಕೋ! ಕೃಷಿಕನು ತನ್ನ ಸಸ್ಯಗಳ ಕುರಿತು ಮಾಡುವಂತೆ ಕಾಲಪ್ರಾಪ್ತವಾಗುವುದನ್ನು ಕಾಯಿ.
03245016a ತಪಸೋ ಹಿ ಪರಂ ನಾಸ್ತಿ ತಪಸಾ ವಿಂದತೇ ಮಹತ್।
03245016c ನಾಸಾಧ್ಯಂ ತಪಸಃ ಕಿಂಚಿದಿತಿ ಬುಧ್ಯಸ್ವ ಭಾರತ।।
ತಪಸ್ಸಿಗಿಂತ ಶ್ರೇಷ್ಠವಾದುದು ಇನ್ನೊಂದಿಲ್ಲ. ತಪಸ್ಸಿನಿಂದ ಮಹತ್ತರವಾದುದನ್ನು ಪಡೆಯುತ್ತಾರೆ. ಭಾರತ! ತಪಸ್ಸಿಗೆ ಅಸಾಧ್ಯವಾದುದು ಯಾವುದೂ ಇಲ್ಲವೆಂದು ತಿಳಿ.
03245017a ಸತ್ಯಮಾರ್ಜವಮಕ್ರೋಧಃ ಸಂವಿಭಾಗೋ ದಮಃ ಶಮಃ।
03245017c ಅನಸೂಯಾವಿಹಿಂಸಾ ಚ ಶೌಚಮಿಂದ್ರಿಯಸಂಯಮಃ।
03245017e ಸಾಧನಾನಿ ಮಹಾರಾಜ ನರಾಣಾಂ ಪುಣ್ಯಕರ್ಮಣಾಂ।।
ಮಹಾರಾಜ! ಸತ್ಯ, ಪ್ರಾಮಾಣಿಕತೆ, ಅಕ್ರೋಧ, ಸಂವಿಭಾಗ, ದಮ, ಶಮ, ಅನಸೂಯೆ, ಅವಿಹಿಂಸೆ, ಶೌಚ, ಮತ್ತು ಇಂದ್ರಿಯಸಂಯಮಗಳು ಪುಣ್ಯಕರ್ಮಿಗಳಾದ ನರರ ಸಾಧನೆಗಳು.
03245018a ಅಧರ್ಮರುಚಯೋ ಮೂಢಾಸ್ತಿರ್ಯಗ್ಗತಿಪರಾಯಣಾಃ।
03245018c ಕೃಚ್ಚ್ರಾಂ ಯೋನಿಮನುಪ್ರಾಪ್ಯ ನ ಸುಖಂ ವಿಂದತೇ ಜನಾಃ।।
ಅಧರ್ಮದಲ್ಲಿ ರುಚಿಯನ್ನಿಡುವ ಮೂಢರು, ಪಶುಗಳ ದಾರಿಯನ್ನು ಹಿಡಿಯುವ ಜನರು ಕೃಚ್ಛ್ರಯೋನಿಯನ್ನು ಸೇರಿ ಸುಖವನ್ನು ಪಡೆಯುವುದಿಲ್ಲ.
03245019a ಇಹ ಯತ್ಕ್ರಿಯತೇ ಕರ್ಮ ತತ್ಪರತ್ರೋಪಭುಜ್ಯತೇ।
03245019c ತಸ್ಮಾಚ್ಚರೀರಂ ಯುಂಜೀತ ತಪಸಾ ನಿಯಮೇನ ಚ।।
ಇಲ್ಲಿ ಯಾವ ಕರ್ಮವನ್ನು ಮಾಡಲಾಗುತ್ತದೆಯೋ ಅದನ್ನು ಇನ್ನೊಂದರಲ್ಲಿ ಅನುಭವಿಸಲಾಗುತ್ತದೆ. ಆದುದರಿಂದ ಶರೀರವನ್ನು ತಪಸ್ಸು ಮತ್ತು ನಿಯಮಗಳಲ್ಲಿ ತೊಡಗಿಸಬೇಕು.
03245020a ಯಥಾಶಕ್ತಿ ಪ್ರಯಚ್ಚೇಚ್ಚ ಸಂಪೂಜ್ಯಾಭಿಪ್ರಣಮ್ಯ ಚ।
03245020c ಕಾಲೇ ಪಾತ್ರೇ ಚ ಹೃಷ್ಟಾತ್ಮಾ ರಾಜನ್ವಿಗತಮತ್ಸರಃ।।
ರಾಜನ್! ಮತ್ಸರವನ್ನು ತೊರೆದು ಸರಿಯಾದ ಕಾಲದಲ್ಲಿ ಪಾತ್ರನಾದವನಿಗೆ ಹೃಷ್ಟಾತ್ಮನಾಗಿ ಯಥಾಶಕ್ತಿಯಾಗಿ ಸಂಪೂಜಿಸಿ ನಮಸ್ಕರಿಸಿ ನೀಡಬೇಕು.
03245021a ಸತ್ಯವಾದೀ ಲಭೇತಾಯುರನಾಯಾಸಮಥಾರ್ಜವೀ।
03245021c ಅಕ್ರೋಧನೋಽನಸೂಯಶ್ಚ ನಿರ್ವೃತಿಂ ಲಭತೇ ಪರಾಂ।।
ಸತ್ಯವಾದಿ ಪ್ರಾಮಾಣಿಕನು ಅನಾಯಾಸ ಜೀವನವನ್ನು ಪಡೆಯುತ್ತಾನೆ. ಅಕ್ರೋಧಿ-ಅನಸೂಯನು ಶ್ರೇಷ್ಠವಾದ ಶಾಂತಿಯನ್ನು ಹೊಂದುತ್ತಾನೆ.
03245022a ದಾಂತಃ ಶಮಪರಃ ಶಶ್ವತ್ಪರಿಕ್ಲೇಶಂ ನ ವಿಂದತಿ।
03245022c ನ ಚ ತಪ್ಯತಿ ದಾಂತಾತ್ಮಾ ದೃಷ್ಟ್ವಾ ಪರಗತಾಂ ಶ್ರಿಯಂ।।
ದಾಂತ-ಶಮಪರನು ಶಾಶ್ವತವಾಗಿ ಪರಿಕ್ಲೇಶವನ್ನು ಪಡೆಯುವುದಿಲ್ಲ. ಹಾಗೆಯೇ ದಾಂತಾತ್ಮನು ಸಂಪತ್ತು ಇತರರಿಗೆ ಹೋಗುವುದನ್ನು ನೋಡಿಯೂ ಪರಿತಪಿಸುವುದಿಲ್ಲ.
03245023a ಸಂವಿಭಕ್ತಾ ಚ ದಾತಾ ಚ ಭೋಗವಾನ್ಸುಖವಾನ್ನರಃ।
03245023c ಭವತ್ಯಹಿಂಸಕಶ್ಚೈವ ಪರಮಾರೋಗ್ಯಮಶ್ನುತೇ।।
ಹಂಚಿಕೊಳ್ಳುವವನು ಮತ್ತು ದಾನಿ ನರನು ಸುಖವನ್ನು ಭೋಗಿಸುತ್ತಾನೆ. ಮತ್ತು ಅಹಿಂಸಕನು ಪರಮ ಆರೋಗ್ಯವನ್ನು ಪಡೆಯುತ್ತಾನೆ.
03245024a ಮಾನ್ಯಾನ್ಮಾನಯಿತಾ ಜನ್ಮ ಕುಲೇ ಮಹತಿ ವಿಂದತಿ।
03245024c ವ್ಯಸನೈರ್ನ ತು ಸಮ್ಯೋಗಂ ಪ್ರಾಪ್ನೋತಿ ವಿಜಿತೇಂದ್ರಿಯಃ।।
ಮಾನ್ಯವಂತರನ್ನು ಮನ್ನಿಸುವವರು ಮಹಾಕುಲದಲ್ಲಿ ಜನ್ಮವನ್ನು ಪಡೆಯುತ್ತಾರೆ. ಜಿತೇಂದ್ರಿಯನು ವ್ಯಸವನವನ್ನೇ ಪಡೆಯುವುದಿಲ್ಲ.
03245025a ಶುಭಾನುಶಯಬುದ್ಧಿರ್ಹಿ ಸಂಯುಕ್ತಃ ಕಾಲಧರ್ಮಣಾ।
03245025c ಪ್ರಾದುರ್ಭವತಿ ತದ್ಯೋಗಾತ್ಕಲ್ಯಾಣಮತಿರೇವ ಸಃ।।
ಶುಭಕರ್ಮಗಳ ಮೇಲೆಯೇ ಬುದ್ಧಿಯನ್ನಿಟ್ಟಿರುವವನು ಕಾಲಧರ್ಮವು ಒದಗಿಬಂದಾಗ ಆ ಯೋಗದಿಂದ ಕಲ್ಯಾಣವನ್ನೇ ಹೊಂದುತ್ತಾನೆ.”
03245026 ಯುಧಿಷ್ಠಿರ ಉವಾಚ।
03245026a ಭಗವನ್ದಾನಧರ್ಮಾಣಾಂ ತಪಸೋ ವಾ ಮಹಾಮುನೇ।
03245026c ಕಿಂ ಸ್ವಿದ್ಬಹುಗುಣಂ ಪ್ರೇತ್ಯ ಕಿಂ ವಾ ದುಷ್ಕರಮುಚ್ಯತೇ।।
ಯುಧಿಷ್ಠಿರನು ಹೇಳಿದನು: “ಭಗವನ್! ಮಹಾಮುನೇ! ಪರದಲ್ಲಿ ಯಾವುದು ಬಹುಗುಣವಾದದ್ದು – ದಾನದರ್ಮಗಳದ್ದೋ ಅಥವಾ ತಪಸ್ಸಿನದ್ದೋ? ಮತ್ತು ಇವುಗಳಲ್ಲಿ ಯಾವುದು ದುಷ್ಕರವಾದುದೆಂದು ಹೇಳುತ್ತಾರೆ?”
03245027 ವ್ಯಾಸ ಉವಾಚ।
03245027a ದಾನಾನ್ನ ದುಷ್ಕರತರಂ ಪೃಥಿವ್ಯಾಮಸ್ತಿ ಕಿಂ ಚನ।
03245027c ಅರ್ಥೇ ಹಿ ಮಹತೀ ತೃಷ್ಣಾ ಸ ಚ ದುಃಖೇನ ಲಭ್ಯತೇ।।
ವ್ಯಾಸನು ಹೇಳಿದನು: “ದಾನಕ್ಕಿಂತ ದುಷ್ಕರವಾದುದು ಪೃಥ್ವಿಯಲ್ಲಿ ಯಾವುದೂ ಇಲ್ಲ. ಯಾಕೆಂದರೆ ಅರ್ಥದ ತೃಷ್ಣೆಯು ಹೆಚ್ಚಿನದು ಮತ್ತು ಅದು ಬಹುದುಃಖದಿಂದ ದೊರೆಯುತ್ತದೆ.
03245028a ಪರಿತ್ಯಜ್ಯ ಪ್ರಿಯಾನ್ಪ್ರಾಣಾನ್ಧನಾರ್ಥಂ ಹಿ ಮಹಾಹವಂ।
03245028c ಪ್ರವಿಶಂತಿ ನರಾ ವೀರಾಃ ಸಮುದ್ರಮಟವೀಂ ತಥಾ।।
ವೀರ ನರರು ಧನಕ್ಕಾಗಿ ತಮ್ಮ ಪ್ರಿಯ ಪ್ರಾಣವನ್ನೇ ಪರಿತ್ಯಜಿಸಿ ಮಹಾರಣವನ್ನು ಅಥವಾ ಸಮುದ್ರವನ್ನು ಅಥವಾ ಕಾಡನ್ನು ಪ್ರವೇಶಿಸುವರು.
03245029a ಕೃಷಿಗೋರಕ್ಷ್ಯಮಿತ್ಯೇಕೇ ಪ್ರತಿಪದ್ಯಂತಿ ಮಾನವಾಃ।
03245029c ಪುರುಷಾಃ ಪ್ರೇಷ್ಯತಾಮೇಕೇ ನಿರ್ಗಚ್ಚಂತಿ ಧನಾರ್ಥಿನಃ।।
ಧನಾರ್ಥಿ ಮಾನವರು ಕೆಲವರು ಕೃಷಿ ಅಥವಾ ಗೋರಕ್ಷಣೆಯನ್ನು ಮಾಡುತ್ತಾರೆ ಇನ್ನು ಕೆಲವು ಪುರುಷರು ಸೇವಾಕೆಲಸಗಳಲ್ಲಿ ತೊಡಗಿಕೊಂಡಿರುವರು.
03245030a ತಸ್ಯ ದುಃಖಾರ್ಜಿತಸ್ಯೈವಂ ಪರಿತ್ಯಾಗಃ ಸುದುಷ್ಕರಃ।
03245030c ನ ದುಷ್ಕರತರಂ ದಾನಾತ್ತಸ್ಮಾದ್ದಾನಂ ಮತಂ ಮಮ।।
ಕಷ್ಟಪಟ್ಟು ಸಂಪಾದಿಸಿದುದನ್ನು ಪರಿತ್ಯಾಗಮಾಡುವುದು ತುಂಬಾ ಕಷ್ಟವಾದುದು. ದಾನಕ್ಕಿಂತ ದುಷ್ಕರವಾದುದು ಇನ್ನೊಂದಿಲ್ಲ. ಆದುದರಿಂದ ದಾನವೇ ಮೇಲೆಂದು ನನ್ನ ಮತ.
03245031a ವಿಶೇಷಸ್ತ್ವತ್ರ ವಿಜ್ಞೇಯೋ ನ್ಯಾಯೇನೋಪಾರ್ಜಿತಂ ಧನಂ।
03245031c ಪಾತ್ರೇ ದೇಶೇ ಚ ಕಾಲೇ ಚ ಸಾಧುಭ್ಯಃ ಪ್ರತಿಪಾದಯೇತ್।।
ಆದರೆ ಇದರಲ್ಲಿ ವಿಶೇಷವಾದ ವಿಷಯವೇನೆಂದರೆ ನ್ಯಾಯದಿಂದ ಗಳಿಸಿದ ಧನವನ್ನು ಪಾತ್ರನಾದವನಿಗೆ ಒಳ್ಳೆಯ ದೇಶ ಕಾಲಗಳಲ್ಲಿ ನೀಡಬೇಕು.
03245032a ಅನ್ಯಾಯಸಮುಪಾತ್ತೇನ ದಾನಧರ್ಮೋ ಧನೇನ ಯಃ।
03245032c ಕ್ರಿಯತೇ ನ ಸ ಕರ್ತಾರಂ ತ್ರಾಯತೇ ಮಹತೋ ಭಯಾತ್।।
ಆದರೆ ಅನ್ಯಾಯವಾಗಿ ಗಳಿಸಿದ ಧನವನ್ನು ದಾನಧರ್ಮ ಮಾಡುವುದರಿಂದ ಅದು ಕರ್ತಾರನನ್ನು ಮಹಾ ಭಯದಿಂದ ರಕ್ಷಿಸುವುದಿಲ್ಲ.
03245033a ಪಾತ್ರೇ ದಾನಂ ಸ್ವಲ್ಪಮಪಿ ಕಾಲೇ ದತ್ತಂ ಯುಧಿಷ್ಠಿರ।
03245033c ಮನಸಾ ಸುವಿಶುದ್ಧೇನ ಪ್ರೇತ್ಯಾನಂತಫಲಂ ಸ್ಮೃತಂ।।
ಯುಧಿಷ್ಠಿರ! ದಾನವು ಸ್ವಲ್ಪವಾದರೂ ಪಾತ್ರನಿಗೆ ಕಾಲದಲ್ಲಿ ಶುದ್ಧಮನಸ್ಸಿನಿಂದ ನೀಡಿದುದಾರೆ ಸಾವಿನ ನಂತರ ಅನಂತಫಲವನ್ನು ಅನುಭವಿಸುತ್ತಾನೆ.
03245034a ಅತ್ರಾಪ್ಯುದಾಹರಂತೀಮಮಿತಿಹಾಸಂ ಪುರಾತನಂ।
03245034c ವ್ರೀಹಿದ್ರೋಣಪರಿತ್ಯಾಗಾದ್ಯತ್ಫಲಂ ಪ್ರಾಪ ಮುದ್ಗಲಃ।।
ಇದರ ಕುರಿತಾಗಿ, ಮುದ್ಗಲನು ಹೇಗೆ ಒಂದು ಅಳತೆ ಅನ್ನವನ್ನು ಪರಿತ್ಯಜಿಸಿ ಫಲವನ್ನು ಪಡೆದ ಎಂಬ ಒಂದು ಪುರಾತನ ಇತಿಹಾಸವನ್ನು ಹೇಳುತ್ತಾರೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ವ್ರೀಹಿದ್ರೌಣಿಕಮಾಖ್ಯಾನ ಪರ್ವಣಿ ದಾನದುಷ್ಕರತ್ವಕಥನೇ ಪಂಚಚತ್ವಾರಿಂಶದಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ವ್ರೀಹಿದ್ರೌಣಿಕಮಾಖ್ಯಾನ ಪರ್ವದಲ್ಲಿ ದಾನದುಷ್ಕರತ್ವಕಥನದಲ್ಲಿ ಇನ್ನೂರಾನಲ್ವತ್ತೈದನೆಯ ಅಧ್ಯಾಯವು.