ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।। ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮೃಗಸ್ವಪ್ನಭಯ ಪರ್ವ
ಅಧ್ಯಾಯ 244
ಸಾರ
ದ್ವೈತವನದಲ್ಲಿ ರಾತ್ರಿ ಯುಧಿಷ್ಠಿರನು ಮಲಗಿಕೊಂಡಿರಲು ಸ್ವಪ್ನದಲ್ಲಿ ರೋದಿಸುತ್ತಿರುವ ಜಿಂಕೆಗಳು ಕಾಣಿಸಿಕೊಂಡು “ನಿನ್ನ ವಾಸಸ್ಥಾನವನ್ನು ಬದಲಾಯಿಸು. ಇಲ್ಲವಾದರೆ ನಾವೂ ಕೂಡ ಇಲ್ಲಿ ಇಲ್ಲವಾಗುತ್ತೇವೆ” ಎಂದು ಹೇಳಿದುದು (1-7). ಯುಧಿಷ್ಠಿರನು ಜಿಂಕೆಗಳನ್ನು ಮನ್ನಿಸಿ ಕಾಮ್ಯಕವನಕ್ಕೆ ಹೋದುದು (8-16).
03244001 ಜನಮೇಜಯ ಉವಾಚ।
03244001a ದುರ್ಯೋಧನಂ ಮೋಚಯಿತ್ವಾ ಪಾಂಡುಪುತ್ರಾ ಮಹಾಬಲಾಃ।
03244001c ಕಿಮಕಾರ್ಷುರ್ವನೇ ತಸ್ಮಿಂಸ್ತನ್ಮಮಾಖ್ಯಾತುಮರ್ಹಸಿ।।
ಜನಮೇಜಯನು ಹೇಳಿದನು: “ದುರ್ಯೋಧನನನ್ನು ಬಿಡಿಸಿದ ನಂತರ ಮಹಾಬಲಿ ಪಾಂಡುಪುತ್ರರು ವನದಲ್ಲಿ ಏನುಮಾಡಿದರು? ಅದನ್ನು ನನಗೆ ಹೇಳಬೇಕು.”
03244002 ವೈಶಂಪಾಯನ ಉವಾಚ।
03244002a ತತಃ ಶಯಾನಂ ಕೌಂತೇಯಂ ರಾತ್ರೌ ದ್ವೈತವನೇ ಮೃಗಾಃ।
03244002c ಸ್ವಪ್ನಾಂತೇ ದರ್ಶಯಾಮಾಸುರ್ಬಾಷ್ಪಕಂಠಾ ಯುಧಿಷ್ಠಿರಂ।।
ವೈಶಂಪಾಯನನು ಹೇಳಿದನು: “ದ್ವೈತವನದಲ್ಲಿ ರಾತ್ರಿ ಕೌಂತೇಯನು ಮಲಗಿಕೊಂಡಿರಲು ಸ್ವಪ್ನದಲ್ಲಿ ಯುಧಿಷ್ಠಿರನಿಗೆ ಕಣ್ಣೀರಿನಿಂದ ಕಟ್ಟಿದ ಕಂಠಗಳ ಜಿಂಕೆಗಳು ಕಾಣಿಸಿಕೊಂಡವು.
03244003a ತಾನಬ್ರವೀತ್ಸ ರಾಜೇಂದ್ರೋ ವೇಪಮಾನಾನ್ಕೃತಾಂಜಲೀನ್।
03244003c ಬ್ರೂತ ಯದ್ವಕ್ತುಕಾಮಾಃ ಸ್ಥ ಕೇ ಭವಂತಃ ಕಿಮಿಷ್ಯತೇ।।
ಅಂಜಲೀಬದ್ಧರಾಗಿ ನಡುಗುತ್ತಾ ನಿಂತಿದ್ದ ಅವುಗಳನ್ನುದ್ದೇಶಿಸಿ ರಾಜೇಂದ್ರನು ಹೇಳಿದನು: “ನೀವು ಏನು ಹೇಳಬೇಕೆಂದಿರುವಿರೋ ಹೇಳಿ. ನೀವು ಯಾರು ಮತ್ತು ನಿಮ್ಮ ಬಯಕೆಯೇನು?”
03244004a ಏವಮುಕ್ತಾಃ ಪಾಂಡವೇನ ಕೌಂತೇಯೇನ ಯಶಸ್ವಿನಾ।
03244004c ಪ್ರತ್ಯಬ್ರುವನ್ಮೃಗಾಸ್ತತ್ರ ಹತಶೇಷಾ ಯುಧಿಷ್ಠಿರಂ।।
ಯಶಸ್ವಿ ಕೌಂತೇಯ ಪಾಂಡವನು ಹೀಗೆ ಕೇಳಲು ಹತಶೇಷರಾದ ಜಿಂಕೆಗಳು ಯುಧಿಷ್ಠಿರನಿಗೆ ಉತ್ತರಿಸಿದವು.
03244005a ವಯಂ ಮೃಗಾ ದ್ವೈತವನೇ ಹತಶಿಷ್ಟಾಃ ಸ್ಮ ಭಾರತ।
03244005c ನೋತ್ಸೀದೇಮ ಮಹಾರಾಜ ಕ್ರಿಯತಾಂ ವಾಸಪರ್ಯಯಃ।।
“ಭಾರತ! ನಾವು ದ್ವೈತವನದಲ್ಲಿ ಸಾಯದೇ ಉಳಿದಿರುವ ಜಿಂಕೆಗಳು. ಮಹಾರಾಜ! ನಿನ್ನ ವಾಸಸ್ಥಾನವನ್ನು ಬದಲಾಯಿಸು. ಇಲ್ಲವಾದರೆ ನಾವೂ ಕೂಡ ಇಲ್ಲಿ ಇಲ್ಲವಾಗುತ್ತೇವೆ.
03244006a ಭವಂತೋ ಭ್ರಾತರಃ ಶೂರಾಃ ಸರ್ವ ಏವಾಸ್ತ್ರಕೋವಿದಾಃ।
03244006c ಕುಲಾನ್ಯಲ್ಪಾವಶಿಷ್ಟಾನಿ ಕೃತವಂತೋ ವನೌಕಸಾಂ।।
ನಿನ್ನ ತಮ್ಮಂದಿರೆಲ್ಲರೂ ಶೂರರು ಮತ್ತು ಅಸ್ತ್ರಕೋವಿದರು. ನೀನು ವನದಲ್ಲಿ ವಾಸಿಸುವರ ಕುಲಗಳನ್ನು ಕೆಲವೇ ಸಂಖ್ಯೆಗಳಲ್ಲಿ ಉಳಿಸಿರುವೆ.
03244007a ಬೀಜಭೂತಾ ವಯಂ ಕೇ ಚಿದವಶಿಷ್ಟಾ ಮಹಾಮತೇ।
03244007c ವಿವರ್ಧೇಮಹಿ ರಾಜೇಂದ್ರ ಪ್ರಸಾದಾತ್ತೇ ಯುಧಿಷ್ಠಿರ।।
ಯುಧಿಷ್ಠಿರ! ರಾಜೇಂದ್ರ! ಮಹಾಮತೇ! ಬೀಜಭೂತರಾಗಿ ನಾವೇ ಕೆಲವರು ಉಳಿದುಕೊಂಡಿದ್ದೇವೆ. ನಿನ್ನ ಪ್ರಸಾದದಿಂದ ನಾವು ಸಂಖ್ಯೆಯಲ್ಲಿ ಬೆಳೆಯುವಂಥವರಾಗಲಿ.”
03244008a ತಾನ್ವೇಪಮಾನಾನ್ವಿತ್ರಸ್ತಾನ್ಬೀಜಮಾತ್ರಾವಶೇಷಿತಾನ್।
03244008c ಮೃಗಾನ್ದೃಷ್ಟ್ವಾ ಸುದುಃಖಾರ್ತೋ ಧರ್ಮರಾಜೋ ಯುಧಿಷ್ಠಿರಃ।।
ಬೀಜಮಾತ್ರಗಳಾಗಿ ಉಳಿದುಕೊಂಡಿರುವ ಆ ಕಂಪಿಸಿ ವಿತ್ರಸ್ತರಾಗಿರುವ ಜಿಂಕೆಗಳನ್ನು ಕಂಡು ಧರ್ಮರಾಜ ಯುಧಿಷ್ಠಿರನು ದುಃಖಾರ್ತನಾದನು.
03244009a ತಾಂಸ್ತಥೇತ್ಯಬ್ರವೀದ್ರಾಜಾ ಸರ್ವಭೂತಹಿತೇ ರತಃ।
03244009c ತಥ್ಯಂ ಭವಂತೋ ಬ್ರುವತೇ ಕರಿಷ್ಯಾಮಿ ಚ ತತ್ತಥಾ।।
ಸರ್ವಭೂತಹಿತರತನಾದ ಆ ರಾಜನು “ಹಾಗೆಯೇ ಆಗಲಿ. ನೀವು ಹೇಳಿದಂತೆ ಮಾಡುತ್ತೇನೆ” ಎಂದು ಅವರಿಗೆ ಹೇಳಿದನು.
03244010a ಇತ್ಯೇವಂ ಪ್ರತಿಬುದ್ಧಃ ಸ ರಾತ್ರ್ಯಂತೇ ರಾಜಸತ್ತಮಃ।
03244010c ಅಬ್ರವೀತ್ಸಹಿತಾನ್ ಭ್ರಾತೄನ್ದಯಾಪನ್ನೋ ಮೃಗಾನ್ಪ್ರತಿ।।
ರಾತ್ರಿಯು ಕಳೆಯಲು ಎಚ್ಚೆತ್ತ ರಾಜಸತ್ತಮನು ದಯಾಪನ್ನನಾಗಿ ತನ್ನ ತಮ್ಮಂದಿರಿಗೆ ಜಿಂಕೆಗಳ ಕುರಿತು ಹೇಳಿದನು.
03244011a ಉಕ್ತೋ ರಾತ್ರೌ ಮೃಗೈರಸ್ಮಿ ಸ್ವಪ್ನಾಂತೇ ಹತಶೇಷಿತೈಃ।
03244011c ತನುಭೂತಾಃ ಸ್ಮ ಭದ್ರಂ ತೇ ದಯಾ ನಃ ಕ್ರಿಯತಾಮಿತಿ।।
“ಸಾಯದೇ ಉಳಿದಿರುವ ಜಿಂಕೆಗಳು ರಾತ್ರಿ ಸ್ವಪ್ನದಲ್ಲಿ ಬಂದು ಹೇಳಿದವು: “ನಾವು ಕಡಿಮೆಯಾಗಿದ್ದೇವೆ. ನಿನಗೆ ಮಂಗಳವಾಗಲಿ. ದಯೆಯನ್ನು ತೋರಿಸು.”
03244012a ತೇ ಸತ್ಯಮಾಹುಃ ಕರ್ತವ್ಯಾ ದಯಾಸ್ಮಾಭಿರ್ವನೌಕಸಾಂ।
03244012c ಸಾಷ್ಟಮಾಸಂ ಹಿ ನೋ ವರ್ಷಂ ಯದೇನಾನುಪಯುಂಜ್ಮಹೇ।।
ಅವುಗಳು ಸತ್ಯವನ್ನೇ ಆಡುತ್ತಿವೆ. ನಾವು ವನೌಕಸರಿಗೆ ದಯೆಯನ್ನು ತೋರಿಸಬೇಕು. ಅವುಗಳನ್ನು ಅವಲಂಬಿಸಿದ್ದು ಈಗ ಒಂದು ವರ್ಷ ಎಂಟು ತಿಂಗಳಾಯಿತು.
03244013a ಪುನರ್ಬಹುಮೃಗಂ ರಮ್ಯಂ ಕಾಮ್ಯಕಂ ಕಾನನೋತ್ತಮಂ।
03244013c ಮರುಭೂಮೇಃ ಶಿರಃ ಖ್ಯಾತಂ ತೃಣಬಿಂದುಸರಃ ಪ್ರತಿ।
03244013e ತತ್ರೇಮಾ ವಸತೀಃ ಶಿಷ್ಟಾ ವಿಹರಂತೋ ರಮೇಮಹಿ।।
ಉತ್ತಮ ರಮ್ಯ ಕಾಮ್ಯಕ ಕಾನನದಲ್ಲಿ ಮರುಭೂಮಿಯ ತಲೆಯಲ್ಲಿ ತೃಣಬಿಂದು ಸರೋವರದ ಬಳಿ ಬಹಳಷ್ಟು ಜಿಂಕೆಗಳಿವೆ. ಅಲ್ಲಿಯೇ ಉಳಿದುಕೊಂಡು ಉಳಿದ ಸಮಯವನ್ನು ವಿಹರಿಸಿ ಸಂತೋಷದಿಂದ ಕಳೆಯೋಣ.”
03244014a ತತಸ್ತೇ ಪಾಂಡವಾಃ ಶೀಘ್ರಂ ಪ್ರಯಯುರ್ಧರ್ಮಕೋವಿದಾಃ।
03244014c ಬ್ರಾಹ್ಮಣೈಃ ಸಹಿತಾ ರಾಜನ್ಯೇ ಚ ತತ್ರ ಸಹೋಷಿತಾಃ।
03244014e ಇಂದ್ರಸೇನಾದಿಭಿಶ್ಚೈವ ಪ್ರೇಷ್ಯೈರನುಗತಾಸ್ತದಾ।।
ರಾಜನ್! ನಂತರ ಶೀಘ್ರದಲ್ಲಿಯೇ ಆ ಧರ್ಮಕೋವಿದ ಪಾಂಡವರು ತಮ್ಮೊಂದಿಗೆ ವಾಸಿಸುತ್ತಿದ್ದ ಇಂದ್ರಸೇನಾದಿ ಸೇವಕರು ಮತ್ತು ಹಿಂಬಾಲಿಸಿ ಬಂದ ಬ್ರಾಹ್ಮಣರೊಂದಿಗೆ ಹೊರಟರು.
03244015a ತೇ ಯಾತ್ವಾನುಸೃತೈರ್ಮಾರ್ಗೈಃ ಸ್ವನ್ನೈಃ ಶುಚಿಜಲಾನ್ವಿತೈಃ।
03244015c ದದೃಶುಃ ಕಾಮ್ಯಕಂ ಪುಣ್ಯಮಾಶ್ರಮಂ ತಾಪಸಾಯುತಂ।।
ಉತ್ತಮ ಆಹಾರ ಮತ್ತು ಶುಚಿಯಾದ ನೀರಿರುವ ಸರಿ ದಾರಿಯಲ್ಲಿ ಪ್ರಯಾಣಿಸಿ ತಾಪಸರಿಂದ ಕೂಡಿದ್ದ ಪುಣ್ಯ ಕಾಮ್ಯಕ ಆಶ್ರಮವನ್ನು ಕಂಡರು.
03244016a ವಿವಿಶುಸ್ತೇ ಸ್ಮ ಕೌರವ್ಯಾ ವೃತಾ ವಿಪ್ರರ್ಷಭೈಸ್ತದಾ।
03244016c ತದ್ವನಂ ಭರತಶ್ರೇಷ್ಠಾಃ ಸ್ವರ್ಗಂ ಸುಕೃತಿನೋ ಯಥಾ।।
ಭರತಶ್ರೇಷ್ಠ! ವಿಪ್ರರ್ಷಿಗಳಿಂದ ಸುತ್ತುವರೆಯಲ್ಪಟ್ಟ ಆ ಕೌರವರು ಸುಕೃತರು ಸ್ವರ್ಗವನ್ನು ಹೇಗೋ ಹಾಗೆ ಆ ವನವನ್ನು ಪ್ರವೇಶಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮೃಗಸ್ವಪ್ನಭಯ ಪರ್ವಣಿ ಕಾಮ್ಯಕಪ್ರವೇಶೇ ಚತುಶ್ಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮೃಗಸ್ವಪ್ನಭಯ ಪರ್ವದಲ್ಲಿ ಕಾಮ್ಯಕಪ್ರವೇಶದಲ್ಲಿ ಇನ್ನೂರಾನಲ್ವತ್ನಾಲ್ಕನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮೃಗಸ್ವಪ್ನಭಯ ಪರ್ವಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮೃಗಸ್ವಪ್ನಭಯ ಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-40/100, ಅಧ್ಯಾಯಗಳು-541/1995, ಶ್ಲೋಕಗಳು-18047/73784.