243 ಯುಧಿಷ್ಠಿರಚಿಂತಾ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಘೋಷಯಾತ್ರಾ ಪರ್ವ

ಅಧ್ಯಾಯ 243

ಸಾರ

ಅರ್ಜುನನನ್ನು ಕೊಲ್ಲುವವರೆಗೆ ತಾನೂ ಯಾರಿಂದಲೂ ಪಾದಗಳನ್ನು ತೊಳೆಸಿಕೊಳ್ಳುವುದಿಲ್ಲ ಮತ್ತು ಮಾಂಸವನ್ನು ತಿನ್ನುವುದಿಲ್ಲವೆಂದು ಕರ್ಣನು ಪ್ರತಿಜ್ಞೆ ಮಾಡಿದುದು (1-17). ಕರ್ಣನ ಕುರಿತು ಯುಧಿಷ್ಠಿರನು ಚಿಂತಿಸಿ ದ್ವೈತವನವನ್ನು ಬಿಟ್ಟುಹೋಗಲು ಯೋಚಿಸುವುದು (18-21). ದುರ್ಯೋಧನನು ಧನದ ಫಲವು ಕೊಡುವುದರಲ್ಲಿ ಮತ್ತು ಭೋಗಿಸುವುದರಲ್ಲಿದೆ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಅದರಂತೆ ನಡೆದುಕೊಂಡಿದುದು (22-24).

03243001 ವೈಶಂಪಾಯನ ಉವಾಚ।
03243001a ಪ್ರವಿಶಂತಂ ಮಹಾರಾಜ ಸೂತಾಸ್ತುಷ್ಟುವುರಚ್ಯುತಂ।
03243001c ಜನಾಶ್ಚಾಪಿ ಮಹೇಷ್ವಾಸಂ ತುಷ್ಟುವೂ ರಾಜಸತ್ತಮಂ।।

ವೈಶಂಪಾಯನನು ಹೇಳಿದನು: “ಮಹಾರಾಜನು ಪ್ರವೇಶಿಸುವಾಗ ಸೂತರು ಮತ್ತು ಜನರು ಆ ಅಚ್ಯುತ, ಮಹೇಷ್ವಾಸ ರಾಜಸತ್ತಮನನ್ನು ಹೊಗಳಿದರು.

03243002a ಲಾಜೈಶ್ಚಂದನಚೂರ್ಣೈಶ್ಚಾಪ್ಯವಕೀರ್ಯ ಜನಾಸ್ತದಾ।
03243002c ಊಚುರ್ದಿಷ್ಟ್ಯಾ ನೃಪಾವಿಘ್ನಾತ್ಸಮಾಪ್ತೋಽಯಂ ಕ್ರತುಸ್ತವ।।

ಲಾಜ ಚಂದನ ಚೂರ್ಣಗಳನ್ನು ಅವನ ಮೇಲೆ ಎಸೆಯುತ್ತಾ ಜನರು “ನೃಪ! ಅದೃಷ್ಟದಿಂದ ನಿನ್ನ ಕ್ರತುವು ನಿರ್ವಿಘ್ನವಾಗಿ ನಡೆಯಿತು” ಎಂದರು.

03243003a ಅಪರೇ ತ್ವಬ್ರುವಂಸ್ತತ್ರ ವಾತಿಕಾಸ್ತಂ ಮಹೀಪತಿಂ।
03243003c ಯುಧಿಷ್ಠಿರಸ್ಯ ಯಜ್ಞೇನ ನ ಸಮೋ ಹ್ಯೇಷ ತು ಕ್ರತುಃ।
03243003e ನೈವ ತಸ್ಯ ಕ್ರತೋರೇಷ ಕಲಾಮರ್ಹತಿ ಷೋಡಶೀಂ।।

ಇನ್ನು ಇತರರು, ಮಾತಿನಲ್ಲಿ ಶೂರರು, ಮಹೀಪತಿಗೆ ಹೇಳಿದರು: “ನಿನ್ನ ಕ್ರತುವು ಯುಧಿಷ್ಠಿರನ ಯಜ್ಞಕ್ಕೆ ಸ್ವಲ್ಪವೂ ಹೋಲುವುದಿಲ್ಲ. ನಿನ್ನ ಈ ಕ್ರತುವು ಹದಿನಾರರಲ್ಲಿ ಒಂದಾಣೆಯಷ್ಟೂ ಅಲ್ಲ.”

03243004a ಏವಂ ತತ್ರಾಬ್ರುವನ್ಕೇ ಚಿದ್ವಾತಿಕಾಸ್ತಂ ನರೇಶ್ವರಂ।
03243004c ಸುಹೃದಸ್ತ್ವಬ್ರುವಂಸ್ತತ್ರ ಅತಿ ಸರ್ವಾನಯಂ ಕ್ರತುಃ।।

ಹೀಗೆ ಪರಿಣಾಮದ ಕುರಿತು ಯೋಚಿಸದೇ ಇದ್ದ ಕೆಲವರು ನರೇಶ್ವರನಿಗೆ ಹೇಳಿದರು. ಅವನ ಸುಹೃದಯರು “ಇದು ಎಲ್ಲ ಕ್ರತುಗಳನ್ನೂ ಮಿರಿಸುವಂತಿತ್ತು” ಎಂದು ಹೇಳಿದರು.

03243005a ಯಯಾತಿರ್ನಹುಷಶ್ಚಾಪಿ ಮಾಂಧಾತಾ ಭರತಸ್ತಥಾ।
03243005c ಕ್ರತುಮೇನಂ ಸಮಾಹೃತ್ಯ ಪೂತಾಃ ಸರ್ವೇ ದಿವಂ ಗತಾಃ।।

“ಯಯಾತಿ, ನಹುಷ, ಮಾಂಧಾತಾ ಮತ್ತು ಭರತರು ಇಂತಹ ಕ್ರತುವನ್ನು ಪೂರೈಸಿ ಪುಣ್ಯರಾಗಿ ಎಲ್ಲರೂ ಸ್ವರ್ಗಕ್ಕೆ ಹೋದರು.”

03243006a ಏತಾ ವಾಚಃ ಶುಭಾಃ ಶೃಣ್ವನ್ಸುಹೃದಾಂ ಭರತರ್ಷಭ।
03243006c ಪ್ರವಿವೇಶ ಪುರಂ ಹೃಷ್ಟಃ ಸ್ವವೇಶ್ಮ ಚ ನರಾಧಿಪಃ।।

ಭರತರ್ಷಭ! ಸುಹೃದಯರ ಈ ಶುಭ ಮಾತುಗಳನ್ನು ಕೇಳಿ ನರಾಧಿಪನು ಸಂತೋಷಗೊಂಡು ಪುರವನ್ನು ಮತ್ತು ಸ್ವಗೃಹವನ್ನು ಪ್ರವೇಶಿಸಿದನು.

03243007a ಅಭಿವಾದ್ಯ ತತಃ ಪಾದೌ ಮಾತಾಪಿತ್ರೋರ್ವಿಶಾಂ ಪತೇ।
03243007c ಭೀಷ್ಮದ್ರೋಣಕೃಪಾಣಾಂ ಚ ವಿದುರಸ್ಯ ಚ ಧೀಮತಃ।।
03243008a ಅಭಿವಾದಿತಃ ಕನೀಯೋಭಿರ್ಭ್ರಾತೃಭಿರ್ಭ್ರಾತೃವತ್ಸಲಃ।
03243008c ನಿಷಸಾದಾಸನೇ ಮುಖ್ಯೇ ಭ್ರಾತೃಭಿಃ ಪರಿವಾರಿತಃ।।

ವಿಶಾಂಪತೇ! ಆಗ ತಂದೆತಾಯಿಯರ, ಭೀಷ್ಮ, ದ್ರೋಣ, ಕೃಪ, ಮತ್ತು ಧೀಮಂತ ವಿದುರರ ಪಾದಗಳಿಗೆ ವಂದಿಸಿ, ಕಿರಿಯ ಸಹೋದರರಿಂದ ನಮಸ್ಕರಿಸಲ್ಪಟ್ಟು ಆ ಭ್ರಾತೃವತ್ಸಲನು ಸಹೋದರರಿಂದ ಸುತ್ತುವರೆದು ಪ್ರಮುಖ ಆಸನದಲ್ಲಿ ಕುಳಿತುಕೊಂಡನು.

03243009a ತಮುತ್ಥಾಯ ಮಹಾರಾಜ ಸೂತಪುತ್ರೋಽಬ್ರವೀದ್ವಚಃ।
03243009c ದಿಷ್ಟ್ಯಾ ತೇ ಭರತಶ್ರೇಷ್ಠ ಸಮಾಪ್ತೋಽಯಂ ಮಹಾಕ್ರತುಃ।।

ಮಹಾರಾಜ! ಆಗ ಮೇಲೆದ್ದು ಸೂತಪುತ್ರನು ಹೇಳಿದನು: “ಭರತಶ್ರೇಷ್ಠ! ನಿನ್ನ ಈ ಮಹಾಕ್ರತುವು ಸಮಾಪ್ತವಾದುದು ಒಳ್ಳೆಯದಾಯಿತು.

03243010a ಹತೇಷು ಯುಧಿ ಪಾರ್ಥೇಷು ರಾಜಸೂಯೇ ತಥಾ ತ್ವಯಾ।
03243010c ಆಹೃತೇಽಹಂ ನರಶ್ರೇಷ್ಠ ತ್ವಾಂ ಸಭಾಜಯಿತಾ ಪುನಃ।।

ಆದರೆ ಯುದ್ಧದಲ್ಲಿ ಪಾರ್ಥರು ಹತರಾಗಿ ನೀನು ರಾಜಸೂಯವನ್ನು ನೆರವೇರಿಸಿದಾಗ ನಾನು ನಿನಗೆ ಸಭೆಯಲ್ಲಿ ಪುನಃ ಈ ಜಯಘೋಷವನ್ನು ಹೇಳುತ್ತೇನೆ.”

03243011a ತಮಬ್ರವೀನ್ಮಹಾರಾಜೋ ಧಾರ್ತರಾಷ್ಟ್ರೋ ಮಹಾಯಶಾಃ।
03243011c ಸತ್ಯಮೇತತ್ತ್ವಯಾ ವೀರ ಪಾಂಡವೇಷು ದುರಾತ್ಮಸು।।
03243012a ನಿಹತೇಷು ನರಶ್ರೇಷ್ಠ ಪ್ರಾಪ್ತೇ ಚಾಪಿ ಮಹಾಕ್ರತೌ।
03243012c ರಾಜಸೂಯೇ ಪುನರ್ವೀರ ತ್ವಂ ಮಾಂ ಸಂವರ್ಧಯಿಷ್ಯಸಿ।।

ಆಗ ಮಹಾರಾಜ ಮಹಾಯಶಸ್ವಿ ಧಾರ್ತರಾಷ್ಟ್ರನು ಅವನಿಗೆ ಹೇಳಿದನು: “ವೀರ! ನೀನು ಸತ್ಯವನ್ನೇ ಹೇಳಿದ್ದೀಯೆ. ನರಶ್ರೇಷ್ಠ! ವೀರ! ದುರಾತ್ಮ ಪಾಂಡವರು ಹತರಾದ ಮೇಲೆ ಆ ಮಹಾಕ್ರತು ರಾಜಸೂಯವನ್ನು ಪೂರೈಸಿದ ನಂತರ ನೀನು ನನ್ನನ್ನು ಪುನಃ ಸತ್ಕರಿಸುವೆ.”

03243013a ಏವಮುಕ್ತ್ವಾ ಮಹಾಪ್ರಾಜ್ಞಃ ಕರ್ಣಮಾಶ್ಲಿಷ್ಯ ಭಾರತ।
03243013c ರಾಜಸೂಯಂ ಕ್ರತುಶ್ರೇಷ್ಠಂ ಚಿಂತಯಾಮಾಸ ಕೌರವಃ।।

ಭಾರತ! ಹೀಗೆ ಹೇಳಿ ಆ ಮಹಾಪ್ರಾಜ್ಞನು ಕರ್ಣನನ್ನು ಅಪ್ಪಿಕೊಂಡನು ಮತ್ತು ಕೌರವನು ಆ ಶ್ರೇಷ್ಠ ಕ್ರತು ರಾಜಸೂಯದ ಕುರಿತು ಆಲೋಚಿಸಿದನು.

03243014a ಸೋಽಬ್ರವೀತ್ಸುಹೃದಶ್ಚಾಪಿ ಪಾರ್ಶ್ವಸ್ಥಾನ್ನೃಪಸತ್ತಮಃ।
03243014c ಕದಾ ತು ತಂ ಕ್ರತುವರಂ ರಾಜಸೂಯಂ ಮಹಾಧನಂ।
03243014e ನಿಹತ್ಯ ಪಾಂಡವಾನ್ಸರ್ವಾನಾಹರಿಷ್ಯಾಮಿ ಕೌರವಾಃ।।

ಆ ನೃಪಸತ್ತಮನು ಪಕ್ಕದಲ್ಲಿದ್ದ ಸುಹೃದಯರಿಗೂ ಹೇಳಿದನು: “ಕೌರವರೇ! ಪಾಂಡವರೆಲ್ಲರನ್ನೂ ಕೊಂದು ನಂತರ ನಾನು ಆ ಕ್ರತುವರ ಮಹಾಧನದ ರಾಜಸೂಯವನ್ನು ಆಚರಿಸುತ್ತೇನೆ.”

03243015a ತಮಬ್ರವೀತ್ತದಾ ಕರ್ಣಃ ಶೃಣು ಮೇ ರಾಜಕುಂಜರ।
03243015c ಪಾದೌ ನ ಧಾವಯೇ ತಾವದ್ಯಾವನ್ನ ನಿಹತೋಽರ್ಜುನಃ।।

ಆಗ ಕರ್ಣನು ಅವನಿಗೆ ಹೇಳಿದನು: “ರಾಜಕುಂಜರ! ನನ್ನನ್ನು ಕೇಳು. ನಾನು ಅರ್ಜುನನನ್ನು ಕೊಲ್ಲುವವರೆಗೆ ನನ್ನ ಪಾದಗಳನ್ನು ತೊಳೆಯಲು ಯಾರಿಗೂ ಬಿಡುವುದಿಲ್ಲ ಮತ್ತು ಮಾಂಸವನ್ನು ತಿನ್ನುವುದಿಲ್ಲ.

03243016a ಅಥೋತ್ಕ್ರುಷ್ಟಂ ಮಹೇಷ್ವಾಸೈರ್ಧಾರ್ತರಾಷ್ಟ್ರೈರ್ಮಹಾರಥೈಃ।
03243016c ಪ್ರತಿಜ್ಞಾತೇ ಫಲ್ಗುನಸ್ಯ ವಧೇ ಕರ್ಣೇನ ಸಂಯುಗೇ।
03243016e ವಿಜಿತಾಂಶ್ಚಾಪ್ಯಮನ್ಯಂತ ಪಾಂಡವಾನ್ಧೃತರಾಷ್ಟ್ರಜಾಃ।।

ಯುದ್ಧದಲ್ಲಿ ಫಲ್ಗುನನನ್ನು ವಧಿಸುತ್ತೇನೆ” ಎಂದು ಕರ್ಣನು ಪ್ರತಿಜ್ಞೆಮಾಡಿದಾಗ ಆ ಮಹೇಷ್ವಾಸ ಮಹಾರಥಿ ಧಾರ್ತರಾಷ್ಟ್ರರು ಹರ್ಷೋದ್ಗಾರ ಮಾಡಿದರು. ಧೃತರಾಷ್ಟ್ರನ ಮಕ್ಕಳು ಪಾಂಡವರನ್ನು ಈಗಾಗಲೇ ಗೆದ್ದರೋ ಎನ್ನುವಂತೆ ತೋರಿದರು.

03243017a ದುರ್ಯೋಧನೋಽಪಿ ರಾಜೇಂದ್ರ ವಿಸೃಜ್ಯ ನರಪುಂಗವಾನ್।
03243017c ಪ್ರವಿವೇಶ ಗೃಹಂ ಶ್ರೀಮಾನ್ಯಥಾ ಚೈತ್ರರಥಂ ಪ್ರಭುಃ।
03243017e ತೇಽಪಿ ಸರ್ವೇ ಮಹೇಷ್ವಾಸಾ ಜಗ್ಮುರ್ವೇಶ್ಮಾನಿ ಭಾರತ।।

ರಾಜೇಂದ್ರ! ದುರ್ಯೋಧನನಾದರೋ ನರಪುಂಗವರನ್ನು ಕಳುಹಿಸಿ ಪ್ರಭು ಚೈತ್ರರಥನಂತೆ ತನ್ನ ಶ್ರೀಮಂತ ಅರಮನೆಯನ್ನು ಪ್ರವೇಶಿಸಿದನು. ಭಾರತ! ಉಳಿದ ಎಲ್ಲ ಮಹೇಷ್ವಾಸರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು.

03243018a ಪಾಂಡವಾಶ್ಚ ಮಹೇಷ್ವಾಸಾ ದೂತವಾಕ್ಯಪ್ರಚೋದಿತಾಃ।
03243018c ಚಿಂತಯಂತಸ್ತಮೇವಾರ್ಥಂ ನಾಲಭಂತ ಸುಖಂ ಕ್ವ ಚಿತ್।।

ಮಹೇಷ್ವಾಸ ಪಾಂಡವರಾದರೋ ದೂತರ ಮಾತುಗಳನ್ನು ಕೇಳಿ ಪ್ರಚೋದಿತರಾಗಿ ಚಿಂತೆಗೊಳಗಾದರು ಮತ್ತು ಅಂದಿನಿಂದ ಸ್ವಲ್ಪವೂ ಸುಖವನ್ನು ಹೊಂದಲಿಲ್ಲ.

03243019a ಭೂಯಶ್ಚ ಚಾರೈ ರಾಜೇಂದ್ರ ಪ್ರವೃತ್ತಿರುಪಪಾದಿತಾ।
03243019c ಪ್ರತಿಜ್ಞಾ ಸೂತಪುತ್ರಸ್ಯ ವಿಜಯಸ್ಯ ವಧಂ ಪ್ರತಿ।।

ರಾಜೇಂದ್ರ! ವಿಜಯನ ವಧೆಯ ಕುರಿತು ಸೂತಪುತ್ರನ ಪ್ರತಿಜ್ಞೆಯ ವಿಷಯವನ್ನೂ ಚಾರರು ಸಂಗ್ರಹಿಸಿ ವರದಿಮಾಡಿದರು.

03243020a ಏತಚ್ಚ್ರುತ್ವಾ ಧರ್ಮಸುತಃ ಸಮುದ್ವಿಗ್ನೋ ನರಾಧಿಪ।
03243020c ಅಭೇದ್ಯಕವಚಂ ಮತ್ವಾ ಕರ್ಣಮದ್ಭುತವಿಕ್ರಮಂ।
03243020e ಅನುಸ್ಮರಂಶ್ಚ ಸಂಕ್ಲೇಶಾನ್ನ ಶಾಂತಿಮುಪಯಾತಿ ಸಃ।।

ನರಾಧಿಪ! ಇದನ್ನು ಕೇಳಿ ಧರ್ಮಸುತನು ಸಮುದ್ವಿಗ್ನನಾದನು. ಕರ್ಣನ ಕವಚವು ಅಭೇದ್ಯ ಮತ್ತು ಅವನು ಅದ್ಭುತ ವಿಕ್ರಮಿಯೆಂದು ತಿಳಿದು ಕಷ್ಟಗಳನ್ನು ನೆನಪಿಸಿಕೊಳ್ಳುತ್ತಾ ಶಾಂತಿಯನ್ನು ಕಳೆದುಕೊಂಡನು.

03243021a ತಸ್ಯ ಚಿಂತಾಪರೀತಸ್ಯ ಬುದ್ಧಿರ್ಜಜ್ಞೇ ಮಹಾತ್ಮನಃ।
03243021c ಬಹುವ್ಯಾಲಮೃಗಾಕೀರ್ಣಂ ತ್ಯಕ್ತುಂ ದ್ವೈತವನಂ ವನಂ।।

ಚಿಂತೆಯಿಂದ ಪರಿತಪಿಸುತ್ತಿದ್ದ ಆ ಮಹಾತ್ಮನ ಮನಸ್ಸಿನಲ್ಲಿ, ಬಹಳ ವ್ಯಾಲಮೃಗಗಳಿಂದ ಕೂಡಿದ ದ್ವೈತವನವನ್ನು ಬಿಡುವ, ಯೋಚನೆಯು ಹುಟ್ಟಿತು.

03243022a ಧಾರ್ತರಾಷ್ಟ್ರೋಽಪಿ ನೃಪತಿಃ ಪ್ರಶಶಾಸ ವಸುಂಧರಾಂ।
03243022c ಭ್ರಾತೃಭಿಃ ಸಹಿತೋ ವೀರೈರ್ಭೀಷ್ಮದ್ರೋಣಕೃಪೈಸ್ತಥಾ।।

ನೃಪತಿ ಧಾರ್ತರಾಷ್ಟ್ರನಾದರೋ ವೀರ ಭ್ರಾತೃಗಳ ಮತ್ತು ಭೀಷ್ಮ, ದ್ರೋಣ, ಕೃಪರ ಸಹಿತ ವಸುಂಧರೆಯನ್ನು ಆಳಿದನು.

03243023a ಸಂಗಮ್ಯ ಸೂತಪುತ್ರೇಣ ಕರ್ಣೇನಾಹವಶೋಭಿನಾ।
03243023c ದುರ್ಯೋಧನಃ ಪ್ರಿಯೇ ನಿತ್ಯಂ ವರ್ತಮಾನೋ ಮಹೀಪತಿಃ।
03243023e ಪೂಜಯಾಮಾಸ ವಿಪ್ರೇಂದ್ರಾನ್ಕ್ರತುಭಿರ್ಭೂರಿದಕ್ಷಿಣೈಃ।।

ಯುದ್ಧದಲ್ಲಿ ಶೋಭಿಸುವ ಸೂತಪುತ್ರ ಕರ್ಣನನ್ನು ಸೇರಿ ಮಹೀಪತಿ ದುರ್ಯೋಧನನು ನಿತ್ಯವೂ ಚೆನ್ನಾಗಿ ನಡೆದುಕೊಂಡಿದ್ದನು ಮತ್ತು ವಿಪ್ರೇಂದ್ರರನ್ನು ಭೂರಿದಕ್ಷಿಣೆಗಳ ಕ್ರತುಗಳಿಂದ ಪೂಜಿಸಿದನು.

03243024a ಭ್ರಾತೄಣಾಂ ಚ ಪ್ರಿಯಂ ರಾಜನ್ಸ ಚಕಾರ ಪರಂತಪಃ।
03243024c ನಿಶ್ಚಿತ್ಯ ಮನಸಾ ವೀರೋ ದತ್ತಭುಕ್ತಫಲಂ ಧನಂ।।

ರಾಜನ್! ಆ ಪರಂತಪನು ಧನದ ಫಲವು ಕೊಡುವುದರಲ್ಲಿ ಮತ್ತು ಭೋಗಿಸುವುದರಲ್ಲಿದೆ ಎಂದು ಮನಸ್ಸಿನಲ್ಲಿ ನಿಶ್ಚಯಿಸಿ ಭ್ರಾತೃಗಳಿಗೆ ಪ್ರಿಯವಾದುದನ್ನು ಮಾಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಯುಧಿಷ್ಠಿರಚಿಂತಾಯಾಂ ತ್ರಿಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಯುಧಿಷ್ಠಿರಚಿಂತೆಯಲ್ಲಿ ಇನ್ನೂರಾನಲ್ವತ್ಮೂರನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-39/100, ಅಧ್ಯಾಯಗಳು-540/1995, ಶ್ಲೋಕಗಳು-18031/73784.