ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 242
ಸಾರ
ದುಃಶಾಸನನು ಪಾಂಡವರಿಗೆ ಯಜ್ಞದ ಆಮಂತ್ರಣವನ್ನು ಕಳುಹಿಸಲು ಹದಿಮೂರು ವರ್ಷಗಳು ಮುಗಿಯುವವರೆಗೆ ತಮಗೆ ಬರಲಿಕ್ಕಾಗುವುದಿಲ್ಲವೆಂದು ಯುಧಿಷ್ಠಿರನೂ, ನಂತರ ದುರ್ಯೋಧನನನ್ನು ಆಹುತಿ ಕೊಡುವ ಯಜ್ಞಕ್ಕೆ ಬರುತ್ತೇವೆಂದು ಭೀಮನೂ ಹೇಳಿ ಕಳುಹಿಸುವುದು (1-16). ದುರ್ಯೋಧನನ ವೈಷ್ಣವ ಯಜ್ಞ ಸಮಾಪ್ತಿ (17-24).
03242001 ವೈಶಂಪಾಯನ ಉವಾಚ।
03242001a ತತಸ್ತು ಶಿಲ್ಪಿನಃ ಸರ್ವೇ ಅಮಾತ್ಯಪ್ರವರಾಶ್ಚ ಹ।
03242001c ವಿದುರಶ್ಚ ಮಹಾಪ್ರಾಜ್ಞೋ ಧಾರ್ತರಾಷ್ಟ್ರೇ ನ್ಯವೇದಯತ್।।
ವೈಶಂಪಾಯನನು ಹೇಳಿದನು: “ಆಗ ಎಲ್ಲ ಶಿಲ್ಪಿಗಳೂ ಅಮಾತ್ಯ ಪ್ರವರರೂ ಮತ್ತು ಮಹಾಪ್ರಾಜ್ಞ ವಿದುರನೂ ಧಾರ್ತರಾಷ್ಟ್ರನಿಗೆ ನಿವೇದಿಸಿದರು.
03242002a ಸಜ್ಜಂ ಕ್ರತುವರಂ ರಾಜನ್ಕಾಲಪ್ರಾಪ್ತಂ ಚ ಭಾರತ।
03242002c ಸೌವರ್ಣಂ ಚ ಕೃತಂ ದಿವ್ಯಂ ಲಾಂಗಲಂ ಸುಮಹಾಧನಂ।।
“ರಾಜನ್! ಭಾರತ! ಶ್ರೇಷ್ಠ ಕ್ರತುವಿಗೆ ಎಲ್ಲವೂ ಸಿದ್ಧವಾಗಿವೆ ಮತ್ತು ಕಾಲವೂ ಪ್ರಾಪ್ತವಾಗಿದೆ. ಮತ್ತು ಚಿನ್ನದಿಂದ ದಿವ್ಯವಾದ ನೇಗಿಲನ್ನೂ ನಿರ್ಮಿಸಿಯಾಗಿದೆ.”
03242003a ಏತಚ್ಚ್ರುತ್ವಾ ನೃಪಶ್ರೇಷ್ಠೋ ಧಾರ್ತರಾಷ್ಟ್ರೋ ವಿಶಾಂ ಪತೇ।
03242003c ಆಜ್ಞಾಪಯಾಮಾಸ ನೃಪಃ ಕ್ರತುರಾಜಪ್ರವರ್ತನಂ।।
ವಿಶಾಂಪತೇ! ಇದನ್ನು ಕೇಳಿ ನೃಪಶ್ರೇಷ್ಠ ನೃಪ ಧಾರ್ತರಾಷ್ಟ್ರನು ಆ ರಾಜಕ್ರತುವನ್ನು ಪ್ರಾರಂಭಿಸಲು ಆಜ್ಞೆಯನ್ನಿತ್ತನು.
03242004a ತತಃ ಪ್ರವವೃತೇ ಯಜ್ಞಃ ಪ್ರಭೂತಾನ್ನಃ ಸುಸಂಸ್ಕೃತಃ।
03242004c ದೀಕ್ಷಿತಶ್ಚಾಪಿ ಗಾಂಧಾರಿರ್ಯಥಾಶಾಸ್ತ್ರಂ ಯಥಾಕ್ರಮಂ।।
ಆಗ ಬಹು ಆಹಾರಗಳಿಂದ ಕೂಡಿದ್ದ, ಸುಸಂಸ್ಕೃತವಾದ ಯಜ್ಞವು ಪ್ರಾರಂಭಗೊಂಡಿತು. ಗಾಂಧಾರಿಯ ಮಗನು ಯಥಾಶಾಸ್ತ್ರವಾಗಿ ಯಥಾಕ್ರಮವಾಗಿ ದೀಕ್ಷಿತಗೊಂಡನು.
03242005a ಪ್ರಹೃಷ್ಟೋ ಧೃತರಾಷ್ಟ್ರೋಽಭೂದ್ವಿದುರಶ್ಚ ಮಹಾಯಶಾಃ।
03242005c ಭೀಷ್ಮೋ ದ್ರೋಣಃ ಕೃಪಃ ಕರ್ಣೋ ಗಾಂಧಾರೀ ಚ ಯಶಸ್ವಿನೀ।।
ಧೃತರಾಷ್ಟ್ರ, ವಿದುರ, ಮಹಾಯಶಸ್ವಿಗಳಾದ ಭೀಷ್ಮ, ದ್ರೋಣ, ಕೃಪ, ಕರ್ಣ ಮತ್ತು ಯಶಸ್ವಿನೀ ಗಾಂಧಾರಿಯರು ತುಂಬಾ ಸಂತೋಷಗೊಂಡರು.
03242006a ನಿಮಂತ್ರಣಾರ್ಥಂ ದೂತಾಂಶ್ಚ ಪ್ರೇಷಯಾಮಾಸ ಶೀಘ್ರಗಾನ್।
03242006c ಪಾರ್ಥಿವಾನಾಂ ಚ ರಾಜೇಂದ್ರ ಬ್ರಾಹ್ಮಣಾನಾಂ ತಥೈವ ಚ।
03242006e ತೇ ಪ್ರಯಾತಾ ಯಥೋದ್ದಿಷ್ಟಂ ದೂತಾಸ್ತ್ವರಿತವಾಹನಾಃ।।
ರಾಜೇಂದ್ರ! ರಾಜರ ಮತ್ತು ಬ್ರಾಹ್ಮಣರ ನಿಮಂತ್ರಣಕ್ಕಾಗಿ ಶೀಘ್ರವಾಗಿ ಹೋಗುವ ದೂತರನ್ನು ಕಳುಹಿಸಲಾಯಿತು. ಆ ದೂತರು ತಮಗೆ ಹೇಳಿದ ದಿಕ್ಕುಗಳಿಗೆ ತ್ವರಿತ ವಾಹನಗಳಲ್ಲಿ ಹೊರಟರು.
03242007a ತತ್ರ ಕಂ ಚಿತ್ಪ್ರಯಾತಂ ತು ದೂತಂ ದುಃಶಾಸನೋಽಬ್ರವೀತ್।
03242007c ಗಚ್ಚ ದ್ವೈತವನಂ ಶೀಘ್ರಂ ಪಾಂಡವಾನ್ಪಾಪಪೂರುಷಾನ್।
03242007e ನಿಮಂತ್ರಯ ಯಥಾನ್ಯಾಯಂ ವಿಪ್ರಾಂಸ್ತಸ್ಮಿನ್ಮಹಾವನೇ।।
ಆಗ ಹೊರಡುತ್ತಿರುವ ಓರ್ವ ದೂತನಿಗೆ ದುಃಶಾಸನನು ಹೇಳಿದನು: “ಶೀಘ್ರವಾಗಿ ದ್ವೈತವನಕ್ಕೆ ಹೋಗಿ ಪಾಪಪುರುಷರಾದ ಪಾಂಡವರಿಗೂ ಆ ಮಹಾವನದಲ್ಲಿರುವ ವಿಪ್ರರಿಗೂ ಯಥಾನ್ಯಾಯವಾಗಿ ನಿಮಂತ್ರಣವನ್ನು ನೀಡು.”
03242008a ಸ ಗತ್ವಾ ಪಾಂಡವಾವಾಸಮುವಾಚಾಭಿಪ್ರಣಮ್ಯ ತಾನ್।
03242008c ದುರ್ಯೋಧನೋ ಮಹಾರಾಜ ಯಜತೇ ನೃಪಸತ್ತಮಃ।।
03242009a ಸ್ವವೀರ್ಯಾರ್ಜಿತಮರ್ಥೌಘಮವಾಪ್ಯ ಕುರುನಂದನಃ।
ಅವನು ಪಾಂಡವರು ವಾಸಿಸುವಲ್ಲಿಗೆ ಹೋಗಿ ಅವರಿಗೆ ನಮಸ್ಕರಿಸಿ ಹೇಳಿದನು: “ಮಹಾರಾಜ! ಕುರುನಂದನ ನೃಪಸತ್ತಮ ದುರ್ಯೋಧನನು ತನ್ನ ವೀರ್ಯದಿಂದ ಅಮೋಘ ಸಂಪತ್ತನ್ನು ಗಳಿಸಿ ಯಜ್ಞವನ್ನು ನಡೆಸಿದ್ದಾನೆ.
03242009c ತತ್ರ ಗಚ್ಚಂತಿ ರಾಜಾನೋ ಬ್ರಾಹ್ಮಣಾಶ್ಚ ತತಸ್ತತಃ।।
03242010a ಅಹಂ ತು ಪ್ರೇಷಿತೋ ರಾಜನ್ಕೌರವೇಣ ಮಹಾತ್ಮನಾ।
03242010c ಆಮಂತ್ರಯತಿ ವೋ ರಾಜಾ ಧಾರ್ತರಾಷ್ಟ್ರೋ ಜನೇಶ್ವರಃ।
03242010e ಮನೋಽಭಿಲಷಿತಂ ರಾಜ್ಞಸ್ತಂ ಕ್ರತುಂ ದ್ರಷ್ಟುಮರ್ಹಥ।।
ಎಲ್ಲೆಡೆಯಿಂದ ರಾಜರು ಮತ್ತು ಬ್ರಾಹ್ಮಣರು ಅಲ್ಲಿಗೇ ಹೋಗುತ್ತಿದ್ದಾರೆ. ರಾಜನ್! ನಾನಾದರೋ ಮಹಾತ್ಮ ಕೌರವನಿಂದ ಕಳುಹಿಸಲ್ಪಟ್ಟಿದ್ದೇನೆ. ಆ ರಾಜಾ ಜನೇಶ್ವರ ಧಾರ್ತರಾಷ್ಟ್ರನು ಆಮಂತ್ರಣವನ್ನಿಟ್ಟಿದ್ದಾನೆ. ಆದುದರಿಂದ ರಾಜನ ಆ ಕ್ರತುವನ್ನು ನೋಡುವ ಮನಸ್ಸುಮಾಡಬೇಕು.”
03242011a ತತೋ ಯುಧಿಷ್ಠಿರೋ ರಾಜಾ ತಚ್ಚ್ರುತ್ವಾ ದೂತಭಾಷಿತಂ।
03242011c ಅಬ್ರವೀನ್ನೃಪಶಾರ್ದೂಲೋ ದಿಷ್ಟ್ಯಾ ರಾಜಾ ಸುಯೋಧನಃ।
03242011e ಯಜತೇ ಕ್ರತುಮುಖ್ಯೇನ ಪೂರ್ವೇಷಾಂ ಕೀರ್ತಿವರ್ಧನಃ।।
ಆಗ ಆ ದೂತನು ಹೇಳಿದುದನ್ನು ಕೇಳಿ ರಾಜಾ ಯುಧಿಷ್ಠಿರನು ಹೇಳಿದನು: “ನೃಪಶಾರ್ದೂಲ ರಾಜಾ ಸುಯೋಧನನು ಪೂರ್ವಜರ ಕೀರ್ತಿಯನ್ನು ಹೆಚ್ಚಿಸುವ ಮುಖ್ಯ ಕ್ರತುವನ್ನು ಮಾಡುತ್ತಿರುವುದು ಒಳ್ಳೆಯದೇ!
03242012a ವಯಮಪ್ಯುಪಯಾಸ್ಯಾಮೋ ನ ತ್ವಿದಾನೀಂ ಕಥಂ ಚನ।
03242012c ಸಮಯಃ ಪರಿಪಾಲ್ಯೋ ನೋ ಯಾವದ್ವರ್ಷಂ ತ್ರಯೋದಶಂ।।
ನಾವು ಖಂಡಿತವಾಗಿಯೂ ಅಲ್ಲಿಗೆ ಬರಬೇಕು. ಆದರೆ ಹದಿಮೂರು ವರ್ಷಗಳು ಮುಗಿಯುವವರೆಗೆ ಒಪ್ಪಂದವನ್ನು ಪಾಲಿಸಬೇಕಾಗಿರುವುದರಿಂದ ನಾವು ಹಾಗೆ ಮಾಡಲಾರೆವು.”
03242013a ಶ್ರುತ್ವೈತದ್ಧರ್ಮರಾಜಸ್ಯ ಭೀಮೋ ವಚನಮಬ್ರವೀತ್।
03242013c ತದಾ ತು ನೃಪತಿರ್ಗಂತಾ ಧರ್ಮರಾಜೋ ಯುಧಿಷ್ಠಿರಃ।।
03242014a ಅಸ್ತ್ರಶಸ್ತ್ರಪ್ರದೀಪ್ತೇಽಗ್ನೌ ಯದಾ ತಂ ಪಾತಯಿಷ್ಯತಿ।
ಧರ್ಮರಾಜನ ಆ ಮಾತನ್ನು ಕೇಳಿ ಭೀಮನು ಹೇಳಿದನು: “ಆಗ ನೃಪತಿ ಧರ್ಮರಾಜ ಯುಧಿಷ್ಠಿರನು ಹೋಗಿ ಅವನನ್ನು ಅಸ್ತ್ರ-ಶಸ್ತ್ರಗಳಿಂದ ಉರಿಸಿದ ಅಗ್ನಿಯಲ್ಲಿ ಕೆಡಹುತ್ತಾನೆ.
03242014c ವರ್ಷಾತ್ತ್ರಯೋದಶಾದೂರ್ಧ್ವಂ ರಣಸತ್ರೇ ನರಾಧಿಪಃ।।
03242015a ಯದಾ ಕ್ರೋಧಹವಿರ್ಮೋಕ್ತಾ ಧಾರ್ತರಾಷ್ಟ್ರೇಷು ಪಾಂಡವಃ।
03242015c ಆಗಂತಾರಸ್ತದಾ ಸ್ಮೇತಿ ವಾಚ್ಯಸ್ತೇ ಸ ಸುಯೋಧನಃ।।
ಹದಿಮೂರನೆಯ ವರ್ಷವು ಕೊನೆಗೊಳ್ಳಲು ರಣಸತ್ರದಲ್ಲಿ ನರಾಧಿಪ ಪಾಂಡವನು ಕ್ರೋಧದ ಹವಿಸ್ಸಾಗಿ ಧಾರ್ತರಾಷ್ಟ್ರರನ್ನು ಹಾಕುತ್ತಾನೆ. ಆಗ ನಾನು ಬರುತ್ತೇನೆ ಎಂದು ಸುಯೋಧನನಿಗೆ ಹೇಳು.”
03242016a ಶೇಷಾಸ್ತು ಪಾಂಡವಾ ರಾಜನ್ನೈವೋಚುಃ ಕಿಂ ಚಿದಪ್ರಿಯಂ।
03242016c ದೂತಶ್ಚಾಪಿ ಯಥಾವೃತ್ತಂ ಧಾರ್ತರಾಷ್ಟ್ರೇ ನ್ಯವೇದಯತ್।।
ರಾಜನ್! ಉಳಿದ ಪಾಂಡವರು ಯಾರೂ ಅಪ್ರಿಯವಾದುದನ್ನು ಹೇಳಲಿಲ್ಲ. ದೂತನೂ ಕೂಡ ನಡೆದುದನ್ನು ಹಾಗೆಯೇ ಧಾರ್ತರಾಷ್ಟ್ರನಿಗೆ ನಿವೇದಿಸಿದನು.
03242017a ಅಥಾಜಗ್ಮುರ್ನರಶ್ರೇಷ್ಠಾ ನಾನಾಜನಪದೇಶ್ವರಾಃ।
03242017c ಬ್ರಾಹ್ಮಣಾಶ್ಚ ಮಹಾಭಾಗಾ ಧಾರ್ತರಾಷ್ಟ್ರಪುರಂ ಪ್ರತಿ।।
ಆಗ ಧಾರ್ತರಾಷ್ಟ್ರನ ಪುರಕ್ಕೆ ನರಶ್ರೇಷ್ಠರೂ, ನಾನಾ ಜನಪದೇಶ್ವರರೂ, ಮಹಾಭಾಗ ಬ್ರಾಹ್ಮಣರೂ ಬಂದರು.
03242018a ತೇ ತ್ವರ್ಚಿತಾ ಯಥಾಶಾಸ್ತ್ರಂ ಯಥಾವರ್ಣಂ ಯಥಾಕ್ರಮಂ।
03242018c ಮುದಾ ಪರಮಯಾ ಯುಕ್ತಾಃ ಪ್ರೀತ್ಯಾ ಚಾಪಿ ನರೇಶ್ವರ।।
ನರೇಶ್ವರ! ಅವರು ಯಥಾಶಾಸ್ತ್ರವಾಗಿ, ಯಥಾವರ್ಣವಾಗಿ, ಯಥಾಕ್ರಮವಾಗಿ ಅರ್ಚಿತರಾದರು ಮತ್ತು ಪರಮ ಸಂತೋಷದಿಂದ ಮುದಿತರಾದರು.
03242019a ಧೃತರಾಷ್ಟ್ರೋಽಪಿ ರಾಜೇಂದ್ರ ಸಂವೃತಃ ಸರ್ವಕೌರವೈಃ।
03242019c ಹರ್ಷೇಣ ಮಹತಾ ಯುಕ್ತೋ ವಿದುರಂ ಪ್ರತ್ಯಭಾಷತ।।
ರಾಜೇಂದ್ರ! ಧೃತರಾಷ್ಟ್ರನೂ ಕೂಡ ಎಲ್ಲ ಕೌರವರಿಂದ ಸುತ್ತುವರೆಯಲ್ಪಟ್ಟು ಮಹಾ ಹರ್ಷಿತಾಗಿ ವಿದುರನಿಗೆ ಹೇಳಿದನು:
03242020a ಯಥಾ ಸುಖೀ ಜನಃ ಸರ್ವಃ ಕ್ಷತ್ತಃ ಸ್ಯಾದನ್ನಸಮ್ಯುತಃ।
03242020c ತುಷ್ಯೇಚ್ಚ ಯಜ್ಞಸದನೇ ತಥಾ ಕ್ಷಿಪ್ರಂ ವಿಧೀಯತಾಂ।।
“ಕ್ಷತ್ತ! ಬೇಗನೇ ಯಜ್ಞಸದನದಲ್ಲಿರುವ ಎಲ್ಲರೂ ಸುಖಿಗಳಾಗಿ ಆಹಾರ ಪಾನೀಯಗಳಿಂದ ತೃಪ್ತರಾಗುವಂತೆ ನೋಡಿಕೋ!”
03242021a ವಿದುರಸ್ತ್ವೇವಮಾಜ್ಞಪ್ತಃ ಸರ್ವವರ್ಣಾನರಿಂದಮ।
03242021c ಯಥಾಪ್ರಮಾಣತೋ ವಿದ್ವಾನ್ಪೂಜಯಾಮಾಸ ಧರ್ಮವಿತ್।।
03242022a ಭಕ್ಷ್ಯಭೋಜ್ಯಾನ್ನಪಾನೇನ ಮಾಲ್ಯೈಶ್ಚಾಪಿ ಸುಗಂಧಿಭಿಃ।
ಅರಿಂದಮ! ಆಜ್ಞೆಯಂತೆ ವಿದ್ವಾನ್ ವಿದುರನು ಎಲ್ಲ ವರ್ಣದವರನ್ನೂ ಧರ್ಮವತ್ತಾಗಿ ಭಕ್ಷ್ಯ, ಭೋಜನ, ಪಾನೀಯ, ಮಾಲೆ ಸುಗಂಧಗಳಿಂದ ಪೂಜಿಸಿದನು.
03242022c ವಾಸೋಭಿರ್ವಿವಿಧೈಶ್ಚೈವ ಯೋಜಯಾಮಾಸ ಹೃಷ್ಟವತ್।।
03242023a ಕೃತ್ವಾ ಹ್ಯವಭೃಥಂ ವೀರೋ ಯಥಾಶಾಸ್ತ್ರಂ ಯಥಾಕ್ರಮಂ।
03242023c ಸಾಂತ್ವಯಿತ್ವಾ ಚ ರಾಜೇಂದ್ರೋ ದತ್ತ್ವಾ ಚ ವಿವಿಧಂ ವಸು।
03242023e ವಿಸರ್ಜಯಾಮಾಸ ನೃಪಾನ್ಬ್ರಾಹ್ಮಣಾಂಶ್ಚ ಸಹಸ್ರಶಃ।।
ಸಂತೋಷದಿಂದ ವಾಸಿಸಲು ವಿವಿಧ ಕಟ್ಟಡಗಳನ್ನು ನಿರ್ಮಿಸಿದರು. ವೀರ ರಾಜೇಂದ್ರನು ಯಥಾಶಾಸ್ತ್ರವಾಗಿ ಯಥಾಕ್ರಮವಾಗಿ ಅವಭೃತವನ್ನು ಮಾಡಿ, ವಿವಿಧ ಸಂಪತ್ತನ್ನು ದಾನವನ್ನಿತ್ತು ಸಂತವಿಸಿ ಸಹಸ್ರಾರು ನೃಪರನ್ನೂ ಬ್ರಾಹ್ಮಣರನ್ನೂ ಕಳುಹಿಸಿಕೊಟ್ಟನು.
03242024a ವಿಸರ್ಜಯಿತ್ವಾ ಸ ನೃಪಾನ್ಭ್ರಾತೃಭಿಃ ಪರಿವಾರಿತಃ।
03242024c ವಿವೇಶ ಹಾಸ್ತಿನಪುರಂ ಸಹಿತಃ ಕರ್ಣಸೌಬಲೈಃ।।
ನೃಪರನ್ನು ಕಳುಹಿಸಿಕೊಟ್ಟು ಸಹೋದರರಿಂದ ಸುತ್ತುವರೆಯಲ್ಪಟ್ಟು ಅವನು ಕರ್ಣ-ಸೌಬಲರೊಂದಿಗೆ ಹಸ್ತಿನಾಪುರವನ್ನು ಪ್ರವೇಶಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಯಜ್ಞೇ ದ್ವಿಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಯಜ್ಞದಲ್ಲಿ ಇನ್ನೂರಾನಲ್ವತ್ತೆರಡನೆಯ ಅಧ್ಯಾಯವು.