ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 241
ಸಾರ
ಪಾಂಡವರ ಶೌರ್ಯವನ್ನು ಹೊಗಳುತ್ತಾ ಮತ್ತು ಕರ್ಣನ ಹೇಡಿತನವನ್ನು ತೆಗಳುತ್ತಾ ಭೀಷ್ಮನು ಸಂಧಿಯ ಕುರಿತು ಸೂಚಿಸುವುದು (1-10). ಭೀಷ್ಮನ ಮಾತನ್ನು ಕೇಳಿ ದುರ್ಯೋಧನನು ಜೋರಾಗಿ ನಕ್ಕು ತನ್ನ ಮಿತ್ರರೊಂದಿಗೆ ಸಭಾತ್ಯಾಗ ಮಾಡಿದುದು; ಭೀಷ್ಮನು ನಾಚಿ ತನ್ನ ಮನೆಗೆ ತೆರಳಿದುದು (11-12). ಪಾಂಡವರು ಮಾಡಿದ ರಾಜಸೂಯವನ್ನು ಮಾಡಬೇಕೆಂದು ಮುಂದಾದ ದುರ್ಯೋಧನನಿಗೆ ಯುಧಿಷ್ಠಿರ-ಧೃತರಾಷ್ಟ್ರರಿರುವಾಗಲೇ ಇದನ್ನು ಮಾಡಲಿಕ್ಕಾಗುವುದಿಲ್ಲವೆಂದೂ, ಬದಲಾಗಿ ವೈಷ್ಣವ ಯಜ್ಞವನ್ನು ಮಾಡಬಹುದೆಂದೂ ಪುರೋಹಿತರು ತಿಳಿಸುವುದು (13-33). ಯಜ್ಞಕ್ಕೆ ತಯಾರಿ (34-37).
03241001 ಜನಮೇಜಯ ಉವಾಚ।
03241001a ವಸಮಾನೇಷು ಪಾರ್ಥೇಷು ವನೇ ತಸ್ಮಿನ್ಮಹಾತ್ಮಸು।
03241001c ಧಾರ್ತರಾಷ್ಟ್ರಾ ಮಹೇಷ್ವಾಸಾಃ ಕಿಮಕುರ್ವಂತ ಸತ್ತಮ।।
03241002a ಕರ್ಣೋ ವೈಕರ್ತನಶ್ಚಾಪಿ ಶಕುನಿಶ್ಚ ಮಹಾಬಲಃ।
03241002c ಭೀಷ್ಮದ್ರೋಣಕೃಪಾಶ್ಚೈವ ತನ್ಮೇ ಶಂಸಿತುಮರ್ಹಸಿ।।
ಜನಮೇಜಯನು ಹೇಳಿದನು: “ಮಹಾತ್ಮ ಪಾರ್ಥರು ಆ ವನದಲ್ಲಿ ವಾಸಿಸುತ್ತಿರಲು, ಮಹೇಷ್ವಾಸ ಧಾರ್ತರಾಷ್ಟ್ರರು, ವೈಕರ್ತನ ಕರ್ಣ, ಮಹಾಬಲ ಶಕುನಿ, ಭೀಷ್ಮ, ದ್ರೋಣ, ಮತ್ತು ಕೃಪರು ಏನು ಮಾಡಿದರು? ಸತ್ತಮ! ಅದನ್ನು ನನಗೆ ಹೇಳಬೇಕು.”
03241003 ವೈಶಂಪಾಯನ ಉವಾಚ।
03241003a ಏವಂ ಗತೇಷು ಪಾರ್ಥೇಷು ವಿಸೃಷ್ಟೇ ಚ ಸುಯೋಧನೇ।
03241003c ಆಗತೇ ಹಾಸ್ತಿನಪುರಂ ಮೋಕ್ಷಿತೇ ಪಾಂಡುನಂದನೈಃ।
03241003e ಭೀಷ್ಮೋಽಬ್ರವೀನ್ಮಹಾರಾಜ ಧಾರ್ತರಾಷ್ಟ್ರಮಿದಂ ವಚಃ।।
ವೈಶಂಪಾಯನನು ಹೇಳಿದನು: “ಮಹಾರಾಜ! ಹೀಗೆ ಸುಯೋಧನನನ್ನು ಬಿಡಿಸಿ ಪಾಂಡವರು ಹೊರಟು ಹೋಗಲು, ಪಾಂಡುನಂದನರಿಂದ ಮೋಕ್ಷಿತನಾಗಿ ಹಸ್ತಿನಾಪುರಕ್ಕೆ ಮರಳಿದ ಧಾರ್ತರಾಷ್ಟ್ರನಿಗೆ ಭೀಷ್ಮನು ಈ ಮಾತನ್ನು ಹೇಳಿದನು:
03241004a ಉಕ್ತಂ ತಾತ ಮಯಾ ಪೂರ್ವಂ ಗಚ್ಚತಸ್ತೇ ತಪೋವನಂ।
03241004c ಗಮನಂ ಮೇ ನ ರುಚಿತಂ ತವ ತನ್ನ ಕೃತಂ ಚ ತೇ।।
“ಮಗನೇ! ಆ ತಪೋವನಕ್ಕೆ ನೀನು ಹೋಗುವ ಮೊದಲೇ ಹೋಗುವುದು ನನಗೆ ಇಷ್ಟವಾಗುತ್ತಿಲ್ಲವೆಂದು ನಿನಗೆ ಹೇಳಿದ್ದೆ. ಆದರೆ ನೀನು ಅದರಂತೆ ಮಾಡಲಿಲ್ಲ.
03241005a ತತಃ ಪ್ರಾಪ್ತಂ ತ್ವಯಾ ವೀರ ಗ್ರಹಣಂ ಶತ್ರುಭಿರ್ಬಲಾತ್।
03241005c ಮೋಕ್ಷಿತಶ್ಚಾಸಿ ಧರ್ಮಜ್ಞೈಃ ಪಾಂಡವೈರ್ನ ಚ ಲಜ್ಜಸೇ।।
ಅದರಿಂದಾಗಿ ವೀರ! ಶತ್ರುಗಳಿಂದ ಬಲಾತ್ಕಾರವಾಗಿ ಸೆರೆಹಿಡಿಯಲ್ಪಟ್ಟು, ಧರ್ಮಜ್ಞ ಪಾಂಡವರಿಂದ ಬಿಡಿಸಲ್ಪಟ್ಟರೂ ನಿನಗೆ ನಾಚಿಕೆಯಾಗುತ್ತಿಲ್ಲ!
03241006a ಪ್ರತ್ಯಕ್ಷಂ ತವ ಗಾಂಧಾರೇ ಸಸೈನ್ಯಸ್ಯ ವಿಶಾಂ ಪತೇ।
03241006c ಸೂತಪುತ್ರೋಽಪಯಾದ್ಭೀತೋ ಗಂಧರ್ವಾಣಾಂ ತದಾ ರಣಾತ್।।
03241006e ಕ್ರೋಶತಸ್ತವ ರಾಜೇಂದ್ರ ಸಸೈನ್ಯಸ್ಯ ನೃಪಾತ್ಮಜ।।
ಗಾಂಧಾರೇ! ವಿಶಾಂಪತೇ! ನಿನ್ನ ಮತ್ತು ನಿನ್ನ ಸೈನ್ಯದ ಪ್ರತ್ಯಕ್ಷದಲ್ಲಿಯೇ ಗಂಧರ್ವರ ಭಯದಿಂದ ಸೂತಪುತ್ರನು ರಣದಿಂದ ಓಡಿಹೋಗಲಿಲ್ಲವೇ?
03241007a ದೃಷ್ಟಸ್ತೇ ವಿಕ್ರಮಶ್ಚೈವ ಪಾಂಡವಾನಾಂ ಮಹಾತ್ಮನಾಂ।
03241007c ಕರ್ಣಸ್ಯ ಚ ಮಹಾಬಾಹೋ ಸೂತಪುತ್ರಸ್ಯ ದುರ್ಮತೇಃ।।
ರಾಜೇಂದ್ರ! ನೃಪಾತ್ಮಜ! ಆ ನಿನ್ನ ಸೇನೆಯು ಕಷ್ಟದಿಂದ ರೋದಿಸುತ್ತಿರುವಾಗ ಮಹಾತ್ಮ ಪಾಂಡವರ ವಿಕ್ರಮವನ್ನು ನೋಡಿದುದರೊಂದಿಗೆ ಸೂತಪುತ್ರ ದುರ್ಮತಿ ಕರ್ಣನನ್ನೂ ನೋಡಿದೆ.
03241008a ನ ಚಾಪಿ ಪಾದಭಾಕ್ಕರ್ಣಃ ಪಾಂಡವಾನಾಂ ನೃಪೋತ್ತಮ।
03241008c ಧನುರ್ವೇದೇ ಚ ಶೌರ್ಯೇ ಚ ಧರ್ಮೇ ವಾ ಧರ್ಮವತ್ಸಲ।।
ನೃಪೋತ್ತಮ! ಧರ್ಮವತ್ಸಲ! ಧನುರ್ವೇದದಲ್ಲಿಯಾಗಲೀ, ಶೌರ್ಯದಲ್ಲಿಯಾಗಲೀ, ಅಥವಾ ಧರ್ಮದಲ್ಲಿಯಾಗಲೀ ಕರ್ಣನು ಪಾಂಡವರ ಕಾಲುಭಾಗದಷ್ಟೂ ಇಲ್ಲ.
03241009a ತಸ್ಯ ತೇಽಹಂ ಕ್ಷಮಂ ಮನ್ಯೇ ಪಾಂಡವೈಸ್ತೈರ್ಮಹಾತ್ಮಭಿಃ।
03241009c ಸಂಧಿಂ ಸಂಧಿವಿದಾಂ ಶ್ರೇಷ್ಠ ಕುಲಸ್ಯಾಸ್ಯ ವಿವೃದ್ಧಯೇ।।
ಆದುದರಿಂದ ಈ ಕುಲದ ವೃದ್ಧಿಗಾಗಿ, ಜಗಳವನ್ನು ಕೊನೆಗೊಳಿಸುವುದಕ್ಕಾಗಿ ಮಹಾತ್ಮ ಪಾಂಡವರೊಂದಿಗೆ ಸಂಧಿಮಾಡಿಕೊಳ್ಳುವುದೇ ಶ್ರೇಷ್ಠವೆಂದು ನನಗನ್ನಿಸುತ್ತದೆ.”
03241010a ಏವಮುಕ್ತಸ್ತು ಭೀಷ್ಮೇಣ ಧಾರ್ತರಾಷ್ಟ್ರೋ ಜನೇಶ್ವರಃ।
03241010c ಪ್ರಹಸ್ಯ ಸಹಸಾ ರಾಜನ್ವಿಪ್ರತಸ್ಥೇ ಸಸೌಬಲಃ।।
03241011a ತಂ ತು ಪ್ರಸ್ಥಿತಮಾಜ್ಞಾಯ ಕರ್ಣದುಃಶಾಸನಾದಯಃ।
03241011c ಅನುಜಗ್ಮುರ್ಮಹೇಷ್ವಾಸಾ ಧಾರ್ತರಾಷ್ಟ್ರಂ ಮಹಾಬಲಂ।।
ರಾಜನ್! ಭೀಷ್ಮನು ಹೀಗೆ ಹೇಳಲು ಧಾರ್ತರಾಷ್ಟ್ರ ಜನೇಶ್ವರನು ಜೋರಾಗಿ ನಕ್ಕು ಸೌಬಲನೊಂದಿಗೆ ಹೊರ ಹೋದನು. ಅವನು ಹೊರಟು ಹೋದುದನ್ನು ತಿಳಿದು ಕರ್ಣ ದುಃಶಾಸನಾದಿಗಳು ಕೂಡ ಆ ಮಹೇಷ್ವಾಸ, ಮಹಾಬಲ, ಧಾರ್ತರಾಷ್ಟ್ರನನ್ನು ಹಿಂಬಾಲಿಸಿ ಹೋದರು.
03241012a ತಾಂಸ್ತು ಸಂಪ್ರಸ್ಥಿತಾನ್ದೃಷ್ಟ್ವಾ ಭೀಷ್ಮಃ ಕುರುಪಿತಾಮಹಃ।
03241012c ಲಜ್ಜಯಾ ವ್ರೀಡಿತೋ ರಾಜಂ ಜಗಾಮ ಸ್ವಂ ನಿವೇಶನಂ।।
ರಾಜನ್! ಅವರು ಹೊರಟುಹೋದುದನ್ನು ನೋಡಿದ ಕುರುಪಿತಾಮಹ ಭೀಷ್ಮನು ನಾಚಿಕೆಯಿಂದ ತಲೆತಗ್ಗಿಸಿ, ತನ್ನ ಮನೆಗೆ ತೆರಳಿದನು.
03241013a ಗತೇ ಭೀಷ್ಮೇ ಮಹಾರಾಜ ಧಾರ್ತರಾಷ್ಟ್ರೋ ಜನಾಧಿಪಃ।
03241013c ಪುನರಾಗಮ್ಯ ತಂ ದೇಶಮಮಂತ್ರಯತ ಮಂತ್ರಿಭಿಃ।।
ಮಹಾರಾಜ! ಭೀಷ್ಮನು ಹೋದ ನಂತರ ಜನಾಧಿಪ ಧಾರ್ತರಾಷ್ಟ್ರನು ಪುನಃ ಬಂದು ತನ್ನ ಮಂತ್ರಿಗಳೊಂದಿಗೆ ಸಮಾಲೋಚನೆ ಮಾಡಿದನು.
03241014a ಕಿಮಸ್ಮಾಕಂ ಭವೇಚ್ಚ್ರೇಯಃ ಕಿಂ ಕಾರ್ಯಮವಶಿಷ್ಯತೇ।
03241014c ಕಥಂ ನು ಸುಕೃತಂ ಚ ಸ್ಯಾನ್ಮಂತ್ರಯಾಮಾಸ ಭಾರತ।।
ಭಾರತ! “ನಮಗೆ ಶ್ರೇಯಸ್ಕರವಾದುದು ಯಾವುದು? ಯಾವ ಕೆಲಸವನ್ನು ಮಾಡುವುದಿದೆ? ಹೇಗೆ ನಾವು ಒಳ್ಳೆಯದನ್ನು ಮಾಡಬಹುದು?” ಎಂದು ಅವನು ಮಂತ್ರಲೋಚನೆ ಮಾಡಿದನು.
03241015 ಕರ್ಣ ಉವಾಚ।
03241015a ದುರ್ಯೋಧನ ನಿಬೋಧೇದಂ ಯತ್ತ್ವಾ ವಕ್ಷ್ಯಾಮಿ ಕೌರವ।
03241015c ಶ್ರುತ್ವಾ ಚ ತತ್ತಥಾ ಸರ್ವಂ ಕರ್ತುಮರ್ಹಸ್ಯರಿಂದಮ।।
ಕರ್ಣನು ಹೇಳಿದನು: “ದುರ್ಯೋಧನ! ಕೌರವ! ನಾನು ಹೇಳುವುದನ್ನು ಕೇಳು. ಅರಿಂದಮ! ಅದನ್ನು ಕೇಳಿ ಎಲ್ಲವನ್ನೂ ಮಾಡಬೇಕು.
03241016a ತವಾದ್ಯ ಪೃಥಿವೀ ವೀರ ನಿಃಸಪತ್ನಾ ನೃಪೋತ್ತಮ।
03241016c ತಾಂ ಪಾಲಯ ಯಥಾ ಶಕ್ರೋ ಹತಶತ್ರುರ್ಮಹಾಮನಾಃ।।
ವೀರ! ನೃಪೋತ್ತಮ! ಇಂದು ಪೃಥ್ವಿಯು ಶತ್ರುಗಳಿಲ್ಲದಂತಾಗಿದೆ. ಶಕ್ರನಂತೆ ನೀನು ಶತ್ರುಗಳನ್ನು ಕಳೆದುಕೊಂಡು ಮಹಾಮನನಾಗಿ ಪಾಲಿಸು.””
03241017 ವೈಶಂಪಾಯನ ಉವಾಚ।
03241017a ಏವಮುಕ್ತಸ್ತು ಕರ್ಣೇನ ಕರ್ಣಂ ರಾಜಾಬ್ರವೀತ್ಪುನಃ।
03241017c ನ ಕಿಂ ಚಿದ್ದುರ್ಲಭಂ ತಸ್ಯ ಯಸ್ಯ ತ್ವಂ ಪುರುಷರ್ಷಭ।।
03241018a ಸಹಾಯಶ್ಚಾನುರಕ್ತಶ್ಚ ಮದರ್ಥಂ ಚ ಸಮುದ್ಯತಃ।
ವೈಶಂಪಾಯನನು ಹೇಳಿದನು: “ಕರ್ಣನು ಹೀಗೆ ಹೇಳಲು ಕರ್ಣನಿಗೆ ರಾಜನು ಪುನಃ ಹೇಳಿದನು: “ಪುರುಷರ್ಷಭ! ನಿನ್ನ ಸಹಾಯವಿರುವವನಿಗೆ ಯಾವುದೂ ದುರ್ಲಭವಲ್ಲ. ನನ್ನಲ್ಲಿ ನೀನು ಅನುರಕ್ತನಾಗಿದ್ದೀಯೆ ಮತ್ತು ಸದಾ ನನಗೆ ಒಳ್ಳೆಯದನ್ನು ಮಾಡಲು ಸಿದ್ದನಾಗಿದ್ದೀಯೆ.
03241018c ಅಭಿಪ್ರಾಯಸ್ತು ಮೇ ಕಶ್ಚಿತ್ತಂ ವೈ ಶೃಣು ಯಥಾತಥಂ।।
ನನ್ನದೊಂದು ಅಭಿಪ್ರಾಯವಿದೆ. ಅದನ್ನು ಇದ್ದಹಾಗೆ ಕೇಳು.
03241019a ರಾಜಸೂಯಂ ಪಾಂಡವಸ್ಯ ದೃಷ್ಟ್ವಾ ಕ್ರತುವರಂ ತದಾ।
03241019c ಮಮ ಸ್ಪೃಹಾ ಸಮುತ್ಪನ್ನಾ ತಾಂ ಸಂಪಾದಯ ಸೂತಜ।।
ಸೂತಜ! ಪಾಂಡವರ ಆ ಶ್ರೇಷ್ಠ ಕ್ರತು ರಾಜಸೂಯವನ್ನು ನೋಡಿ ನನಗೂ ಅದನ್ನು ಮಾಡುವ ಬಯಕೆಯು ಹುಟ್ಟಿದೆ. ಅದನ್ನು ನಡೆಸಿಕೊಡು.
03241020a ಏವಮುಕ್ತಸ್ತತಃ ಕರ್ಣೋ ರಾಜಾನಮಿದಮಬ್ರವೀತ್।
03241020c ತವಾದ್ಯ ಪೃಥಿವೀಪಾಲಾ ವಶ್ಯಾಃ ಸರ್ವೇ ನೃಪೋತ್ತಮ।।
ಇದನ್ನು ಕೇಳಿದ ಕರ್ಣನು ರಾಜನಿಗೆ ಹೇಳಿದನು: “ನೃಪೋತ್ತಮ! ಇಂದು ಪೃಥಿವೀಪಾಲರೆಲ್ಲರೂ ನಿನ್ನ ವಶದಲ್ಲಿದ್ದಾರೆ.
03241021a ಆಹೂಯಂತಾಂ ದ್ವಿಜವರಾಃ ಸಂಭಾರಾಶ್ಚ ಯಥಾವಿಧಿ।
03241021c ಸಂಭ್ರಿಯಂತಾಂ ಕುರುಶ್ರೇಷ್ಠ ಯಜ್ಞೋಪಕರಣಾನಿ ಚ।।
ಕುರುಶ್ರೇಷ್ಠ! ದ್ವಿಜವರರನ್ನು ಆಹ್ವಾನಿಸೋಣ. ಯಥಾವಿಧಿಯಾದ ಪದಾರ್ಥಗಳನ್ನು ಮತ್ತು ಯಜ್ಞೋಪಕರಣಗಳನ್ನು ಒಂದುಗೂಡಿಸೋಣ.
03241022a ಋತ್ವಿಜಶ್ಚ ಸಮಾಹೂತಾ ಯಥೋಕ್ತಂ ವೇದಪಾರಗಾಃ।
03241022c ಕ್ರಿಯಾಂ ಕುರ್ವಂತು ತೇ ರಾಜನ್ಯಥಾಶಾಸ್ತ್ರಮರಿಂದಮ।।
ರಾಜನ್! ಅರಿಂದಮ! ವೇದಪಾರಂಗತರಾದ ಋತ್ವಿಜರು ಯಥೋಕ್ತವಾಗಿ ಯಾಜಿಸಲಿ. ಅವರು ಯಥಾಶಾಸ್ತ್ರವಾಗಿ ಕಾರ್ಯ ನಿರ್ವಹಿಸಲಿ.
03241023a ಬಹ್ವನ್ನಪಾನಸಮ್ಯುಕ್ತಃ ಸುಸಮೃದ್ಧಗುಣಾನ್ವಿತಃ।
03241023c ಪ್ರವರ್ತತಾಂ ಮಹಾಯಜ್ಞಸ್ತವಾಪಿ ಭರತರ್ಷಭ।।
ಭರತರ್ಷಭ! ನಿನ್ನ ಮಹಾಯಜ್ಞವೂ ಕೂಡ ಬಹು ಅನ್ನ-ಪಾನಗಳಿಂದ ಕೂಡಿದ್ದು, ಸುಸಮೃದ್ಧಗುಣಾನ್ವಿತವಾಗಿರುವಂತೆ ನಡೆಯಲಿ.”
03241024a ಏವಮುಕ್ತಸ್ತು ಕರ್ಣೇನ ಧಾರ್ತರಾಷ್ಟ್ರೋ ವಿಶಾಂ ಪತೇ।
03241024c ಪುರೋಹಿತಂ ಸಮಾನಾಯ್ಯ ಇದಂ ವಚನಮಬ್ರವೀತ್।।
ವಿಶಾಂಪತೇ! ಕರ್ಣನು ಹೀಗೆ ಹೇಳಲು ಧಾರ್ತರಾಷ್ಟ್ರನು ಪುರೋಹಿತನನ್ನು ಕರೆಯಿಸಿ ಹೀಗೆ ಹೇಳಿದನು:
03241025a ರಾಜಸೂಯಂ ಕ್ರತುಶ್ರೇಷ್ಠಂ ಸಮಾಪ್ತವರದಕ್ಷಿಣಂ।
03241025c ಆಹರ ತ್ವಂ ಮಮ ಕೃತೇ ಯಥಾನ್ಯಾಯಂ ಯಥಾಕ್ರಮಂ।।
“ಶ್ರೇಷ್ಠ ಕ್ರತು ಶ್ರೇಷ್ಠ ದಕ್ಷಿಣೆಗಳಿಂದ ಸಮಾಪ್ತಗೊಳ್ಳುವ ರಾಜಸೂಯವನ್ನು ಯಥಾನ್ಯಾಯವಾಗಿ ಯಥಾಕ್ರಮವಾಗಿ ನನ್ನಿಂದ ಮಾಡಿಸಿ.”
03241026a ಸ ಏವಮುಕ್ತೋ ನೃಪತಿಮುವಾಚ ದ್ವಿಜಪುಂಗವಃ।
03241026c ನ ಸ ಶಕ್ಯಃ ಕ್ರತುಶ್ರೇಷ್ಠೋ ಜೀವಮಾನೇ ಯುಧಿಷ್ಠಿರೇ।
03241026e ಆಹರ್ತುಂ ಕೌರವಶ್ರೇಷ್ಠ ಕುಲೇ ತವ ನೃಪೋತ್ತಮ।।
ನೃಪತಿಯು ಹೀಗೆ ಹೇಳಲು ದ್ವಿಜಪುಂಗವನು ಹೇಳಿದನು: “ಕೌರವಶ್ರೇಷ್ಠ! ನೃಪೋತ್ತಮ! ಯುಧಿಷ್ಠಿರನು ಜೀವಂತವಿರುವಾಗ ನಿನ್ನ ಕುಲದಲ್ಲಿ ಈ ಶ್ರೇಷ್ಠ ಕ್ರತುವನ್ನು ಮಾಡಲು ಶಕ್ಯವಿಲ್ಲ.
03241027a ದೀರ್ಘಾಯುರ್ಜೀವತಿ ಚ ವೈ ಧೃತರಾಷ್ಟ್ರಃ ಪಿತಾ ತವ।
03241027c ಅತಶ್ಚಾಪಿ ವಿರುದ್ಧಸ್ತೇ ಕ್ರತುರೇಷ ನೃಪೋತ್ತಮ।।
ನಿನ್ನ ತಂದೆ ದೀರ್ಘಾಯು ಧೃತರಾಷ್ಟ್ರನು ಜೀವಿಸಿದ್ದಾನೆ. ನೃಪೋತ್ತಮ! ಇದೂ ಕೂಡ ನೀನು ಕ್ರತುವನ್ನು ಆಚರಿಸುವುದನ್ನು ವಿರೋಧಿಸುತ್ತದೆ.
03241028a ಅಸ್ತಿ ತ್ವನ್ಯನ್ಮಹತ್ಸತ್ರಂ ರಾಜಸೂಯಸಮಂ ಪ್ರಭೋ।
03241028c ತೇನ ತ್ವಂ ಯಜ ರಾಜೇಂದ್ರ ಶೃಣು ಚೇದಂ ವಚೋ ಮಮ।।
ಪ್ರಭೋ! ರಾಜಸೂಯಕ್ಕೆ ಸಮನಾದ ಇನ್ನೊಂದು ಮಹಾ ಸತ್ರವಿದೆ. ರಾಜೇಂದ್ರ! ಅದನ್ನು ನೀನು ಯಾಜಿಸು. ನನ್ನ ಮಾತನ್ನು ಕೇಳು.
03241029a ಯ ಇಮೇ ಪೃಥಿವೀಪಾಲಾಃ ಕರದಾಸ್ತವ ಪಾರ್ಥಿವ।
03241029c ತೇ ಕರಾನ್ಸಂಪ್ರಯಚ್ಚಂತು ಸುವರ್ಣಂ ಚ ಕೃತಾಕೃತಂ।।
ಪಾರ್ಥಿವ! ಇದರಲ್ಲಿ ನಿನಗೆ ಕರವನ್ನು ಕೊಡುತ್ತಿರುವ ಪೃಥಿವೀಪಾಲರು ಸಂಸ್ಕರಿಸಿದ ಅಥವಾ ಸಂಸ್ಕರಿಸದೇ ಇದ್ದ ಚಿನ್ನವನ್ನು ಕರವಾಗಿ ಕೊಡುತ್ತಾರೆ.
03241030a ತೇನ ತೇ ಕ್ರಿಯತಾಮದ್ಯ ಲಾಂಗಲಂ ನೃಪಸತ್ತಮ।
03241030c ಯಜ್ಞವಾಟಸ್ಯ ತೇ ಭೂಮಿಃ ಕೃಷ್ಯತಾಂ ತೇನ ಭಾರತ।।
ನೃಪಸತ್ತಮ! ಭಾರತ! ಅದರಿಂದ ನೀನು ನೇಗಿಲನ್ನು ಮಾಡಿ ಅದರಿಂದ ಯಜ್ಞವಾಟಿಕೆಯ ಭೂಮಿಯನ್ನು ಹೂಳಬೇಕು.
03241031a ತತ್ರ ಯಜ್ಞೋ ನೃಪಶ್ರೇಷ್ಠ ಪ್ರಭೂತಾನ್ನಃ ಸುಸಂಸ್ಕೃತಃ।
03241031c ಪ್ರವರ್ತತಾಂ ಯಥಾನ್ಯಾಯಂ ಸರ್ವತೋ ಹ್ಯನಿವಾರಿತಃ।।
ನೃಪಶ್ರೇಷ್ಠ! ಅಲ್ಲಿ ಯಥಾನ್ಯಾಯವಾಗಿ ಸುಸಂಸ್ಕರಿಸಿದ ಹೇರಳ ಅನ್ನದಿಂದ ವಿಘ್ನವಿಲ್ಲದೇ ಯಜ್ಞವು ನಡೆಯಲಿ.
03241032a ಏಷ ತೇ ವೈಷ್ಣವೋ ನಾಮ ಯಜ್ಞಃ ಸತ್ಪುರುಷೋಚಿತಃ।
03241032c ಏತೇನ ನೇಷ್ಟವಾನ್ಕಶ್ಚಿದೃತೇ ವಿಷ್ಣುಂ ಪುರಾತನಂ।।
ವೈಷ್ಣವ ಎಂಬ ಹೆಸರಿನ ಈ ಯಜ್ಞವು ಸತ್ಪುರುಷರಿಗೆ ಉಚಿತವಾದುದು. ಹಿಂದೆ ವಿಷ್ಣುವಿನ ಹೊರತಾಗಿ ಯಾರೂ ಈ ಯಜ್ಞವನ್ನು ಮಾಡಿಲ್ಲ.
03241033a ರಾಜಸೂಯಂ ಕ್ರತುಶ್ರೇಷ್ಠಂ ಸ್ಪರ್ಧತ್ಯೇಷ ಮಹಾಕ್ರತುಃ।
03241033c ಅಸ್ಮಾಕಂ ರೋಚತೇ ಚೈವ ಶ್ರೇಯಶ್ಚ ತವ ಭಾರತ।
03241033e ಅವಿಘ್ನಶ್ಚ ಭವೇದೇಷ ಸಫಲಾ ಸ್ಯಾತ್ಸ್ಪೃಹಾ ತವ।।
ಭಾರತ! ಈ ಮಹಾಕ್ರತುವು ಶ್ರೇಷ್ಠ ಕ್ರತುವಾದ ರಾಜಸೂಯದೊಂದಿಗೆ ಸ್ಪರ್ಧಿಸುತ್ತದೆ. ನಿನಗೂ ಕೂಡ ಇದು ಶ್ರೇಯಸ್ಕರವಾದುದು ಎಂದು ನನಗನ್ನಿಸುತ್ತದೆ. ಇದು ಅವಿಘ್ನವಾಗಿ ನಡೆಯುತ್ತದೆ. ನಿನ್ನ ಬಯಕೆಗಳನ್ನು ಸಫಲಗೊಳಿಸುತ್ತದೆ.”
03241034a ಏವಮುಕ್ತಸ್ತು ತೈರ್ವಿಪ್ರೈರ್ಧಾರ್ತರಾಷ್ಟ್ರೋ ಮಹೀಪತಿಃ।
03241034c ಕರ್ಣಂ ಚ ಸೌಬಲಂ ಚೈವ ಭ್ರಾತೄಂಶ್ಚೈವೇದಮಬ್ರವೀತ್।।
ಆ ವಿಪ್ರರು ಹೀಗೆ ಹೇಳಲು ಮಹೀಪತಿ ಧಾರ್ತರಾಷ್ಟ್ರನು ಕರ್ಣ, ಸೌಬಲ, ಮತ್ತು ಸಹೋದರರಿಗೆ ಇಂತೆಂದನು.
03241035a ರೋಚತೇ ಮೇ ವಚಃ ಕೃತ್ಸ್ನಂ ಬ್ರಾಹ್ಮಣಾನಾಂ ನ ಸಂಶಯಃ।
03241035c ರೋಚತೇ ಯದಿ ಯುಷ್ಮಾಕಂ ತನ್ಮಾ ಪ್ರಬ್ರೂತ ಮಾಚಿರಂ।।
“ಬ್ರಾಹ್ಮಣರ ಮಾತುಗಳು ಸಂಪೂರ್ಣವಾಗಿ ನನಗೆ ಇಷ್ಟವಾದವು ಎನ್ನುವುದರಲ್ಲಿ ಸಂಶಯವಿಲ್ಲ. ಇದು ನಿಮಗೂ ಇಷ್ಟವಾದರೆ ಬೇಗನೇ ನನಗೆ ಹೇಳಿ.”
03241036a ಏವಮುಕ್ತಾಸ್ತು ತೇ ಸರ್ವೇ ತಥೇತ್ಯೂಚುರ್ನರಾಧಿಪಂ।
03241036c ಸಂದಿದೇಶ ತತೋ ರಾಜಾ ವ್ಯಾಪಾರಸ್ಥಾನ್ಯಥಾಕ್ರಮಂ।।
ಹಾಗೆಯೇ ಆಗಲೆಂದು ಅವರೆಲ್ಲರೂ ನರಾಧಿಪನಿಗೆ ಹೇಳಿದರು. ಆಗ ರಾಜನು ಅವರಿಗೆ ಒಂದೊಂದಾಗಿ ಕೆಲಸಗಳನ್ನು ವಹಿಸಿಕೊಟ್ಟನು.
03241037a ಹಲಸ್ಯ ಕರಣೇ ಚಾಪಿ ವ್ಯಾದಿಷ್ಟಾಃ ಸರ್ವಶಿಲ್ಪಿನಃ।
03241037c ಯಥೋಕ್ತಂ ಚ ನೃಪಶ್ರೇಷ್ಠ ಕೃತಂ ಸರ್ವಂ ಯಥಾಕ್ರಮಂ।।
ಎಲ್ಲ ಶಿಲ್ಪಿಗಳನ್ನೂ ನೇಗಿಲನ್ನು ಮಾಡುವುದಕ್ಕೆ ನೇಮಿಸಿದನು. ನೃಪಶ್ರೇಷ್ಠ! ಹೇಳಿದಂತೆ ಎಲ್ಲ ಕೆಲಸಗಳೂ ಯಥಾಕ್ರಮವಾಗಿ ಮಾಡಲ್ಪಟ್ಟವು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಯಜ್ಞಸಮಾರಂಭೇ ಏಕಚತ್ವಾರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಯಜ್ಞಸಮಾರಂಭದಲ್ಲಿ ಇನ್ನೂರಾನಲ್ವತ್ತೊಂದನೆಯ ಅಧ್ಯಾಯವು.