238 ದುರ್ಯೋಧನಪ್ರಾಯೋಪವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಘೋಷಯಾತ್ರಾ ಪರ್ವ

ಅಧ್ಯಾಯ 238

ಸಾರ

ಗಂಧರ್ವರು ಪಾಂಡವರೊಂದಿಗೆ ಯುಧಿಷ್ಠಿರನಲ್ಲಿಗೆ ಹೋಗಿ ನಮ್ಮ ಕೆಟ್ಟ ಉಪಾಯದ ಕುರಿತು ಹೇಳಿ ಬಂಧನದಲ್ಲಿದ್ದ ನಮ್ಮನ್ನು ಅರ್ಪಿಸಿದರು ಎಂದು ದುರ್ಯೋಧನನು ಹೇಳಿಕೊಂಡು ದುಃಖಿಸಿ ತಾನು ಪ್ರಾಯೋಪವೇಶ ಮಾಡಿ ಜೀವತೆಗೆದುಕೊಳ್ಳುತ್ತೇನೆಂದು ಕರ್ಣನಿಗೆ ಹೇಳುವುದು (1-20). ದುಃಶಾಸನನಿಗೆ ರಾಜ್ಯವಾಳು ಹೋಗು ಎಂದು ಹೇಳುವುದು (21-26). ದುಃಶಾಸನ ಮತ್ತು ಕರ್ಣರು ದುರ್ಯೋಧನನನ್ನು ತಡೆಯಲು ಪ್ರಯತ್ನಿಸಿದುದು (27-49).

03238001 ದುರ್ಯೋಧನ ಉವಾಚ।
03238001a ಚಿತ್ರಸೇನಂ ಸಮಾಗಮ್ಯ ಪ್ರಹಸನ್ನರ್ಜುನಸ್ತದಾ।
03238001c ಇದಂ ವಚನಮಕ್ಲೀಬಮಬ್ರವೀತ್ಪರವೀರಹಾ।।

ದುರ್ಯೋಧನನು ಹೇಳಿದನು: “ಚಿತ್ರಸೇನನನ್ನು ಸೇರಿ ಪರವೀರಹ ಅರ್ಜುನನು ನಕ್ಕು ಹೇಡಿತನದಲ್ಲದ ಈ ಮಾತುಗಳನ್ನಾಡಿದನು.

03238002a ಭ್ರಾತೄನರ್ಹಸಿ ನೋ ವೀರ ಮೋಕ್ತುಂ ಗಂಧರ್ವಸತ್ತಮ।
03238002c ಅನರ್ಹಾ ಧರ್ಷಣಂ ಹೀಮೇ ಜೀವಮಾನೇಷು ಪಾಂಡುಷು।।

“ಗಂಧರ್ವಸತ್ತಮ! ವೀರ! ನಮ್ಮ ಸಹೋದರನನ್ನು ನೀನು ಬಿಡಬೇಕು. ಪಾಂಡವರು ಜೀವಂತವಾಗಿರುವವರೆಗೆ ಇವರು ಪೀಡೆಗೊಳಗಾಗಲು ಅನರ್ಹರು.”

03238003a ಏವಮುಕ್ತಸ್ತು ಗಂಧರ್ವಃ ಪಾಂಡವೇನ ಮಹಾತ್ಮನಾ।
03238003c ಉವಾಚ ಯತ್ಕರ್ಣ ವಯಂ ಮಂತ್ರಯಂತೋ ವಿನಿರ್ಗತಾಃ।
03238003e ದ್ರಷ್ಟಾರಃ ಸ್ಮ ಸುಖಾದ್ಧೀನಾನ್ಸದಾರಾನ್ಪಾಂಡವಾನಿತಿ।।

ಕರ್ಣ! ಮಹಾತ್ಮ ಪಾಂಡವನು ಹೀಗೆ ಹೇಳಲು ಗಂಧರ್ವನು ನಾವು ಯಾವ ಉಪಾಯದಿಂದ ಅಲ್ಲಿಗೆ ಬಂದಿದ್ದೆವು - ಪತ್ನಿಯೊಂದಿಗೆ ಪಾಂಡವರು ದೀನರಾಗಿರುವುದನ್ನು ನೋಡಿ ಸುಖಪಡಲು - ಎನ್ನುವುದನ್ನು ಹೇಳಿದನು.

03238004a ತಸ್ಮಿನ್ನುಚ್ಚಾರ್ಯಮಾಣೇ ತು ಗಂಧರ್ವೇಣ ವಚಸ್ಯಥ।
03238004c ಭೂಮೇರ್ವಿವರಮನ್ವೈಚ್ಚಂ ಪ್ರವೇಷ್ಟುಂ ವ್ರೀಡಯಾನ್ವಿತಃ।।

ಗಂಧರ್ವನು ಈ ಮಾತುಗಳನ್ನಾಡುತ್ತಿರಲು ನಾಚಿಕೆಯಿಂದ ತುಂಬಿದ ನಾನು ಮನದಲ್ಲಿಯೇ ಭೂಮಿಯು ಸೀಳಿ ಅದರೊಳಗೆ ಪ್ರವೇಶಿಸಲು ಇಚ್ಛಿಸಿದೆ.

03238005a ಯುಧಿಷ್ಠಿರಮಥಾಗಮ್ಯ ಗಂಧರ್ವಾಃ ಸಹ ಪಾಂಡವೈಃ।
03238005c ಅಸ್ಮದ್ದುರ್ಮಂತ್ರಿತಂ ತಸ್ಮೈ ಬದ್ಧಾಂಶ್ಚಾಸ್ಮಾನ್ನ್ಯವೇದಯನ್।।

ಆಗ ಗಂಧರ್ವರು ಪಾಂಡವರೊಂದಿಗೆ ಯುಧಿಷ್ಠಿರನಲ್ಲಿಗೆ ಹೋಗಿ ನಮ್ಮ ಕೆಟ್ಟ ಉಪಾಯದ ಕುರಿತು ಹೇಳಿ ಬಂಧನದಲ್ಲಿದ್ದ ನಮ್ಮನ್ನು ಅರ್ಪಿಸಿದರು.

03238006a ಸ್ತ್ರೀಸಮಕ್ಷಮಹಂ ದೀನೋ ಬದ್ಧಃ ಶತ್ರುವಶಂ ಗತಃ।
03238006c ಯುಧಿಷ್ಠಿರಸ್ಯೋಪಹೃತಃ ಕಿಂ ನು ದುಃಖಮತಃ ಪರಂ।।

ಅಲ್ಲಿ ನಾನು ಸ್ತ್ರೀಯರ ಸಮಕ್ಷಮದಲ್ಲಿ ದೀನನಾಗಿ ಬಂದಿಯಾಗಿ ಶತ್ರುವಶನಾಗಿದ್ದ ಯುಧಿಷ್ಠಿರನಿಗೆ ಸಮರ್ಪಣಗೊಂಡಾಗ ಅದಕ್ಕಿಂತಲೂ ಹೆಚ್ಚಿನ ದುಃಖವಾದರೂ ಏನಿದೆ?

03238007a ಯೇ ಮೇ ನಿರಾಕೃತಾ ನಿತ್ಯಂ ರಿಪುರ್ಯೇಷಾಮಹಂ ಸದಾ।
03238007c ತೈರ್ಮೋಕ್ಷಿತೋಽಹಂ ದುರ್ಬುದ್ಧಿರ್ದತ್ತಂ ತೈರ್ಜೀವಿತಂ ಚ ಮೇ।।

ಯಾರನ್ನು ನಾನು ನಿತ್ಯವೂ ನಿರಾಕರಿಸಿ ಸದಾ ದ್ವೇಷಿಸುತ್ತೇನೋ ಅವರೇ ದುರ್ಬುದ್ಧಿಯಾದ ನನ್ನನ್ನು ಬಿಡುಗಡೆಗೊಳಿಸಿದರು. ನನ್ನ ಜೀವವು ಅವರ ಋಣಿಯಾಗಿದೆ.

03238008a ಪ್ರಾಪ್ತಃ ಸ್ಯಾಂ ಯದ್ಯಹಂ ವೀರ ವಧಂ ತಸ್ಮಿನ್ಮಹಾರಣೇ।
03238008c ಶ್ರೇಯಸ್ತದ್ಭವಿತಾ ಮಹ್ಯಮೇವಂಭೂತಂ ನ ಜೀವಿತಂ।।

ವೀರ! ಈ ರೀತಿಯ ಜೀವನವನ್ನು ಜೀವಿಸುವುದಕ್ಕಿಂತ ಆ ಮಹಾರಣದಲ್ಲಿ ನಾನು ವಧಿಸಲ್ಪಟ್ಟಿದ್ದರೇ ಒಳ್ಳೆಯದಾಗುತ್ತಿತ್ತು.

03238009a ಭವೇದ್ಯಶಃ ಪೃಥಿವ್ಯಾಂ ಮೇ ಖ್ಯಾತಂ ಗಂಧರ್ವತೋ ವಧಾತ್।
03238009c ಪ್ರಾಪ್ತಾಶ್ಚ ಲೋಕಾಃ ಪುಣ್ಯಾಃ ಸ್ಯುರ್ಮಹೇಂದ್ರಸದನೇಽಕ್ಷಯಾಃ।।

ಗಂಧರ್ವನಿಂದ ಹತನಾದೆನೆಂದು ನನ್ನ ಯಶವು ಭೂಮಿಯಲ್ಲಿ ಖ್ಯಾತಿಯಾಗುತ್ತಿತ್ತು ಮತ್ತು ಮಹೇಂದ್ರಸದನದಲ್ಲಿ ಅಕ್ಷಯವಾದ, ಪುಣ್ಯ ಲೋಕಗಳನ್ನು ಪಡೆಯುತ್ತಿದ್ದೆ.

03238010a ಯತ್ತ್ವದ್ಯ ಮೇ ವ್ಯವಸಿತಂ ತಚ್ಚೃಣುಧ್ವಂ ನರರ್ಷಭಾಃ।
03238010c ಇಹ ಪ್ರಾಯಮುಪಾಸಿಷ್ಯೇ ಯೂಯಂ ವ್ರಜತ ವೈ ಗೃಹಾನ್।
03238010e ಭ್ರಾತರಶ್ಚೈವ ಮೇ ಸರ್ವೇ ಪ್ರಯಾಂತ್ವದ್ಯ ಪುರಂ ಪ್ರತಿ।।

ನರಷರ್ಷಭರೇ! ಇಂದು ನಾನು ಏನು ಮಾಡಬೇಕೆಂದು ನಿರ್ಧರಿಸಿದ್ದೇನೆ ಎನ್ನುವುದನ್ನು ಕೇಳಿ. ನಾನು ಇಲ್ಲಿಯೇ ಕುಳಿತು ಸಾಯುವವರೆಗೆ ಉಪವಾಸಮಾಡುತ್ತೇನೆ. ನೀವು ಮನೆಗೆ ಹೋಗಿ. ನನ್ನ ಸಹೋದರರೆಲ್ಲರೂ ಕೂಡ ಪುರದ ಕಡೆ ಪ್ರಯಾಣಿಸಿ.

03238011a ಕರ್ಣಪ್ರಭೃತಯಶ್ಚೈವ ಸುಹೃದೋ ಬಾಂಧವಾಶ್ಚ ಯೇ।
03238011c ದುಃಶಾಸನಂ ಪುರಸ್ಕೃತ್ಯ ಪ್ರಯಾಂತ್ವದ್ಯ ಪುರಂ ಪ್ರತಿ।।

ಕರ್ಣನೇ ಮೊದಲಾದ ಸುಹೃದಯರೂ ಬಾಂಧವರೂ ದುಃಶಾಸನನನ್ನು ಮುಂದಿಟ್ಟುಕೊಂಡು ಪುರದ ಕಡೆ ಪ್ರಯಾಣಿಸಲಿ.

03238012a ನ ಹ್ಯಹಂ ಪ್ರತಿಯಾಸ್ಯಾಮಿ ಪುರಂ ಶತ್ರುನಿರಾಕೃತಃ।
03238012c ಶತ್ರುಮಾನಾಪಹೋ ಭೂತ್ವಾ ಸುಹೃದಾಂ ಮಾನಕೃತ್ತಥಾ।।

ಶತ್ರುಗಳ ಮಾನವನ್ನು ಅಪಹರಿಸಿದ ಮತ್ತು ಸುಹೃದರ ಮಾನವನ್ನು ಹೆಚ್ಚಿಸಿದ ನಾನು ಈಗ ಶತ್ರುಗಳಿಂದ ನಿರಾಕೃತನಾದುದರಿಂದ ಪುರಕ್ಕೆ ಹಿಂದಿರುಗುವುದಿಲ್ಲ.

03238013a ಸ ಸುಹೃಚ್ಚೋಕದೋ ಭೂತ್ವಾ ಶತ್ರೂಣಾಂ ಹರ್ಷವರ್ಧನಃ।
03238013c ವಾರಣಾಹ್ವಯಮಾಸಾದ್ಯ ಕಿಂ ವಕ್ಷ್ಯಾಮಿ ಜನಾಧಿಪಂ।।

ಸುಹೃದಯರ ಶೋಕವನ್ನು ಹೆಚ್ಚಿಸಿದವನಾಗಿ ಮತ್ತು ಶತ್ರುಗಳ ಹರ್ಷವನ್ನು ಹೆಚ್ಚಿಸಿದ ನಾನು ವಾರಣಾಹ್ವಯಕ್ಕೆ ಬಂದು ಜನಾಧಿಪನಿಗೆ ಏನು ಹೇಳಲಿ?

03238014a ಭೀಷ್ಮೋ ದ್ರೋಣಃ ಕೃಪೋ ದ್ರೌಣಿರ್ವಿದುರಃ ಸಂಜಯಸ್ತಥಾ।
03238014c ಬಾಹ್ಲೀಕಃ ಸೋಮದತ್ತಶ್ಚ ಯೇ ಚಾನ್ಯೇ ವೃದ್ಧಸಮ್ಮತಾಃ।।
03238015a ಬ್ರಾಹ್ಮಣಾಃ ಶ್ರೇಣಿಮುಖ್ಯಾಶ್ಚ ತಥೋದಾಸೀನವೃತ್ತಯಃ।
03238015c ಕಿಂ ಮಾಂ ವಕ್ಷ್ಯಂತಿ ಕಿಂ ಚಾಪಿ ಪ್ರತಿವಕ್ಷ್ಯಾಮಿ ತಾನಹಂ।।

ಭೀಷ್ಮ, ದ್ರೋಣ, ಕೃಪ, ದ್ರೌಣಿ, ವಿದುರ, ಸಂಜಯ, ಬಾಹ್ಲೀಕ, ಸೋಮದತ್ತ ಮತ್ತು ವೃದ್ಧರಿಂದ ಗೌರವಿಸಲ್ಪಟ್ಟ ಇತರರು, ಬ್ರಾಹ್ಮಣರು, ಶ್ರೇಣಿಮುಖ್ಯರು, ಮತ್ತು ತಮ್ಮದೇ ವೃತ್ತಿಯಲ್ಲಿರುವವರು - ಇವರೆಲ್ಲರೂ ನನಗೆ ಏನು ಹೇಳಬಹುದು ಮತ್ತು ನಾನು ಅವರಿಗೆ ಏನು ಉತ್ತರಿಸಿಯೇನು?

03238016a ರಿಪೂಣಾಂ ಶಿರಸಿ ಸ್ಥಿತ್ವಾ ತಥಾ ವಿಕ್ರಮ್ಯ ಚೋರಸಿ।
03238016c ಆತ್ಮದೋಷಾತ್ಪರಿಭ್ರಷ್ಟಃ ಕಥಂ ವಕ್ಷ್ಯಾಮಿ ತಾನಹಂ।।

ರಿಪುಗಳ ತಲೆಯನ್ನು ತುಳಿದು ಅವರ ಎದೆಯ ಮೇಲೆ ನಡೆದ ನಾನು ನನ್ನದೇ ತಪ್ಪಿನಿಂದ ಪರಿಭ್ರಷ್ಟನಾದೆನೆಂದು ಅವರಿಗೆ ಹೇಗೆ ಹೇಳಲಿ?

03238017a ದುರ್ವಿನೀತಾಃ ಶ್ರಿಯಂ ಪ್ರಾಪ್ಯ ವಿದ್ಯಾಮೈಶ್ವರ್ಯಮೇವ ಚ।
03238017c ತಿಷ್ಠಂತಿ ನ ಚಿರಂ ಭದ್ರೇ ಯಥಾಹಂ ಮದಗರ್ವಿತಃ।।

ನನ್ನಂಥ ಮದಗರ್ವಿತ ದುರ್ವಿನೀತರು ಶ್ರೀ, ವಿದ್ಯೆ, ಮತ್ತು ಐಶ್ವರ್ಯಗಳನ್ನು ಹೊಂದಿ ಬಹುಕಾಲ ಇಟ್ಟುಕೊಳ್ಳುವುದಿಲ್ಲ.

03238018a ಅಹೋ ಬತ ಯಥೇದಂ ಮೇ ಕಷ್ಟಂ ದುಶ್ಚರಿತಂ ಕೃತಂ।
03238018c ಸ್ವಯಂ ದುರ್ಬುದ್ಧಿನಾ ಮೋಹಾದ್ಯೇನ ಪ್ರಾಪ್ತೋಽಸ್ಮಿ ಸಂಶಯಂ।।

ಅಯ್ಯೋ! ನಾನು ಇದೆಂಥಹ ಕಷ್ಟ ದುಶ್ಚರಿತವನ್ನು ಮಾಡಿಬಿಟ್ಟೆ! ಸ್ವಯಂ ದುರ್ಬುದ್ಧಿ ಮೋಹದಿಂದ ಇದನ್ನು ಪಡೆದೆ ಎನ್ನುವುದರಲ್ಲಿ ಸಂಶಯವಿಲ್ಲ.

03238019a ತಸ್ಮಾತ್ಪ್ರಾಯಮುಪಾಸಿಷ್ಯೇ ನ ಹಿ ಶಕ್ಷ್ಯಾಮಿ ಜೀವಿತುಂ।
03238019c ಚೇತಯಾನೋ ಹಿ ಕೋ ಜೀವೇತ್ಕೃಚ್ಚ್ರಾಚ್ಚತ್ರುಭಿರುದ್ಧೃತಃ।।

ಆದುದರಿಂದ ಪ್ರಾಯದಲ್ಲಿ ಕುಳಿತುಕೊಳ್ಳುತ್ತೇನೆ. ಜೀವಿಸಲು ಶಕ್ತನಾಗಿಲ್ಲ. ಚೇತನವಿರುವ ಯಾರು ತಾನೇ ಕಷ್ಟದಲ್ಲಿ ಶತ್ರುವಿನಿಂದ ಜೀವ ಉಳಿಸಿಕೊಂಡು ಜೀವಿಸಿರುತ್ತಾನೆ?

03238020a ಶತ್ರುಭಿಶ್ಚಾವಹಸಿತೋ ಮಾನೀ ಪೌರುಷವರ್ಜಿತಃ।
03238020c ಪಾಂಡವೈರ್ವಿಕ್ರಮಾಢ್ಯೈಶ್ಚ ಸಾವಮಾನಮವೇಕ್ಷಿತಃ।।

ಮಾನಿಯಾದ ನನ್ನನ್ನು ಶತ್ರುಗಳು ಅಣಗಿಸಿದ್ದಾರೆ. ನನ್ನಿಂದ ಪುರುಷತ್ವವನ್ನು ತೆಗೆದುಹಾಕಿದ್ದಾರೆ. ವಿಕ್ರಮಾಢ್ಯರಾದ ಪಾಂಡವರು ನನ್ನನ್ನು ಕೀಳಾಗಿ ಕಂಡಿದ್ದಾರೆ.””

03238021 ವೈಶಂಪಾಯನ ಉವಾಚ।
03238021a ಏವಂ ಚಿಂತಾಪರಿಗತೋ ದುಃಶಾಸನಮಥಾಬ್ರವೀತ್।
03238021c ದುಃಶಾಸನ ನಿಬೋಧೇದಂ ವಚನಂ ಮಮ ಭಾರತ।।

ವೈಶಂಪಾಯನನು ಹೇಳಿದನು: “ಹೀಗೆ ಚಿಂತಾಪರನಾಗಿ ದುಃಶಾಸನನಿಗೆ ಹೇಳಿದನು: “ಭಾರತ! ದುಃಶಾಸನ! ನನ್ನ ಈ ಮಾತನ್ನು ಕೇಳು.

03238022a ಪ್ರತೀಚ್ಚ ತ್ವಂ ಮಯಾ ದತ್ತಮಭಿಷೇಕಂ ನೃಪೋ ಭವ।
03238022c ಪ್ರಶಾಧಿ ಪೃಥಿವೀಂ ಸ್ಫೀತಾಂ ಕರ್ಣಸೌಬಲಪಾಲಿತಾಂ।।

ನಾನು ನೀಡುವ ಅಭಿಷೇಕವನ್ನು ಸ್ವೀಕರಿಸು. ನೃಪನಾಗು. ಕರ್ಣ-ಸೌಬಲರಿಂದ ರಕ್ಷಿತವಾದ ಈ ಸಮೃದ್ಧ ಭೂಮಿಯನ್ನು ಆಳು.

03238023a ಭ್ರಾತೄನ್ಪಾಲಯ ವಿಸ್ರಬ್ಧಂ ಮರುತೋ ವೃತ್ರಹಾ ಯಥಾ।
03238023c ಬಾಂಧವಾಸ್ತ್ವೋಪಜೀವಂತು ದೇವಾ ಇವ ಶತಕ್ರತುಂ।

ವೃತ್ರಹನು ಮರುತರನ್ನು ಹೇಗೋ ಹಾಗೆ ತಮ್ಮಂದಿರನ್ನು ಘನತೆಯಿಂದ ಪಾಲಿಸು. ದೇವತೆಗಳು ಶತಕ್ರತುವಿನ ಮೇಲೆ ಹೇಗೋ ಹಾಗೆ ಬಾಂಧವರು ನಿನ್ನಿಂದ ಉಪಜೀವನವನ್ನು ಪಡೆಯಲಿ.

03238024a ಬ್ರಾಹ್ಮಣೇಷು ಸದಾ ವೃತ್ತಿಂ ಕುರ್ವೀಥಾಶ್ಚಾಪ್ರಮಾದತಃ।
03238024c ಬಂಧೂನಾಂ ಸುಹೃದಾಂ ಚೈವ ಭವೇಥಾಸ್ತ್ವಂ ಗತಿಃ ಸದಾ।।

ತಪ್ಪದೇ ಸದಾ ಬ್ರಾಹ್ಮಣರ ವೃತ್ತಿಯನ್ನು ನಡೆಸುತ್ತಿರು. ಸದಾ ಬಂಧುಗಳ ಮತ್ತು ಸುಹೃದಯರ ಗತಿಯಾಗಿರು.

03238025a ಜ್ಞಾತೀಂಶ್ಚಾಪ್ಯನುಪಶ್ಯೇಥಾ ವಿಷ್ಣುರ್ದೇವಗಣಾನಿವ।
03238025c ಗುರವಃ ಪಾಲನೀಯಾಸ್ತೇ ಗಚ್ಚ ಪಾಲಯ ಮೇದಿನೀಂ।।

ವಿಷ್ಣುವು ದೇವಗಣವನ್ನು ನೋಡಿಕೊಳ್ಳುವಂತೆ ನಿನ್ನ ಕುಲದವರನ್ನು ನೋಡಿಕೋ! ಹಿರಿಯರನ್ನು ಪಾಲಿಸು. ಹೋಗು! ಮೇದಿನಿಯನ್ನು ಪಾಲಿಸು.

03238026a ನಂದಯನ್ಸುಹೃದಃ ಸರ್ವಾಂ ಶಾತ್ರವಾಂಶ್ಚಾವಭರ್ತ್ಸಯನ್।
03238026c ಕಂಠೇ ಚೈನಂ ಪರಿಷ್ವಜ್ಯ ಗಮ್ಯತಾಮಿತ್ಯುವಾಚ ಹ।।

ಸುಹೃದರೆಲ್ಲರನ್ನೂ ಸಂತೋಷಗೊಳಿಸುತ್ತಾ ಮತ್ತು ಶತ್ರುಗಳನ್ನು ಬೆದರಿಸುತ್ತಿರು.” ಅವನ ಕುತ್ತಿಗೆಯನ್ನು ಹಿಡಿದು ಬಿಗಿದಪ್ಪಿ “ಹೋಗು!” ಎಂದು ಹೇಳಿದನು.

03238027a ತಸ್ಯ ತದ್ವಚನಂ ಶ್ರುತ್ವಾ ದೀನೋ ದುಃಶಾಸನೋಽಬ್ರವೀತ್।
03238027c ಅಶ್ರುಕಂಠಃ ಸುದುಃಖಾರ್ತಃ ಪ್ರಾಂಜಲಿಃ ಪ್ರಣಿಪತ್ಯ ಚ।
03238027e ಸಗದ್ಗದಮಿದಂ ವಾಕ್ಯಂ ಭ್ರಾತರಂ ಜ್ಯೇಷ್ಠಮಾತ್ಮನಃ।।

ಅವನ ಆ ವಚನವನ್ನು ಕೇಳಿ ದೀನನಾದ ದುಃಶಾಸನನು, ಕಂಠದಲ್ಲಿ ಕಣ್ಣೀರನ್ನು ತುಂಬಿಕೊಂಡು, ತುಂಬಾ ದುಃಖಾರ್ತನಾಗಿ, ಕೈಮುಗಿದು, ತನ್ನ ಹಿರಿಯ ಅಣ್ಣನ ಕಾಲಿಗೆ ಬಿದ್ದು, ಗದ್ಗದಭರಿತ ಈ ಮಾತನ್ನು ಹೇಳಿದನು.

03238028a ಪ್ರಸೀದೇತ್ಯಪತದ್ಭೂಮೌ ದೂಯಮಾನೇನ ಚೇತಸಾ।
03238028c ದುಃಖಿತಃ ಪಾದಯೋಸ್ತಸ್ಯ ನೇತ್ರಜಂ ಜಲಮುತ್ಸೃಜನ್।।

“ಪ್ರಸೀದ!” ಎಂದು ಹೇಳಿ ಚೇತನವೇ ಕುಂದಿ ಅವನು ಭೂಮಿಯ ಮೇಲೆ ಬಿದ್ದನು. ದುಃಖಿತನಾಗಿ ಅವನ ಪಾದಗಳನ್ನು ಕಣ್ಣೀರಿನಿಂದ ತೊಳೆದನು.

03238029a ಉಕ್ತವಾಂಶ್ಚ ನರವ್ಯಾಘ್ರೋ ನೈತದೇವಂ ಭವಿಷ್ಯತಿ।
03238029c ವಿದೀರ್ಯೇತ್ಸನಗಾ ಭೂಮಿರ್ದ್ಯೌಶ್ಚಾಪಿ ಶಕಲೀಭವೇತ್।
03238029e ರವಿರಾತ್ಮಪ್ರಭಾಂ ಜಹ್ಯಾತ್ಸೋಮಃ ಶೀತಾಂಶುತಾಂ ತ್ಯಜೇತ್।।

ಆಗ ಆ ನರವ್ಯಾಘ್ರನು ಪುನಃ ಹೇಳಿದನು: “ಹೀಗೆ ಎಂದೂ ಆಗುವುದಿಲ್ಲ! ಭೂಮಿಯು ಸೀಳಬಹುದು, ಸ್ವರ್ಗದ ಮಳಿಗೆಯು ಚೂರಾಗಿ ಕೆಳಗೆ ಬೀಳಬಹುದು, ಸೂರ್ಯನು ತನ್ನ ಪ್ರಭೆಯನ್ನು ತೊರೆದಾನು, ಚಂದ್ರನು ತನ್ನ ಶೀತಾಂಶುವನ್ನು ತ್ಯಜಿಸಿಯಾನು!

03238030a ವಾಯುಃ ಶೈಘ್ರ್ಯಮಥೋ ಜಹ್ಯಾದ್ಧಿಮವಾಂಶ್ಚ ಪರಿವ್ರಜೇತ್।
03238030c ಶುಷ್ಯೇತ್ತೋಯಂ ಸಮುದ್ರೇಷು ವಹ್ನಿರಪ್ಯುಷ್ಣತಾಂ ತ್ಯಜೇತ್।।

ವಾಯುವು ತನ್ನ ವೇಗವನ್ನು ಕಡಿಮೆಮಾಡಿಯಾನು, ಹಿಮಾಲಯವು ತನ್ನ ಸ್ಥಳವನ್ನು ಬದಲಾಯಿಸಬಹುದು, ಸಮುದ್ರಗಳ ನೀರು ಬತ್ತಿಹೋಗಬಹುದು, ಮತ್ತು ಅಗ್ನಿಯು ಉಷ್ಣತೆಯನ್ನು ತ್ಯಜಿಸಬಹುದು.

03238031a ನ ಚಾಹಂ ತ್ವದೃತೇ ರಾಜನ್ಪ್ರಶಾಸೇಯಂ ವಸುಂಧರಾಂ।
03238031c ಪುನಃ ಪುನಃ ಪ್ರಸೀದೇತಿ ವಾಕ್ಯಂ ಚೇದಮುವಾಚ ಹ।

ಆದರೆ, ರಾಜನ್! ನೀನಿಲ್ಲದೇ ನಾನು ಈ ಭೂಮಿಯನ್ನು ಆಳುವುದಿಲ್ಲ!” ಪುನಃ ಪುನಃ “ಪ್ರಸೀದ!” ಎಂದು ಹೇಳುತ್ತಾ ಈ ಮಾತನ್ನಾಡಿದನು.

03238031e ತ್ವಮೇವ ನಃ ಕುಲೇ ರಾಜಾ ಭವಿಷ್ಯಸಿ ಶತಂ ಸಮಾಃ।।
03238032a ಏವಮುಕ್ತ್ವಾ ಸ ರಾಜೇಂದ್ರ ಸಸ್ವನಂ ಪ್ರರುರೋದ ಹ।
03238032c ಪಾದೌ ಸಂಗೃಹ್ಯ ಮಾನಾರ್ಹೌ ಭ್ರಾತುರ್ಜ್ಯೇಷ್ಠಸ್ಯ ಭಾರತ।।

“ನಮ್ಮ ಕುಲದಲ್ಲಿ ನೀನೇ ನೂರುವರ್ಷಗಳು ರಾಜನಾಗಿರುತ್ತೀಯೆ!” ರಾಜೇಂದ್ರ! ಭಾರತ! ಹೀಗೆ ಹೇಳಿ ಅವನು ಮಾನಾರ್ಹನಾದ ಹಿರಿಯಣ್ಣನ ಪಾದಗಳನ್ನು ಹಿಡಿದು ಜೋರಾಗಿ ಅತ್ತನು.

03238033a ತಥಾ ತೌ ದುಃಖಿತೌ ದೃಷ್ಟ್ವಾ ದುಃಶಾಸನಸುಯೋಧನೌ।
03238033c ಅಭಿಗಮ್ಯ ವ್ಯಥಾವಿಷ್ಟಃ ಕರ್ಣಸ್ತೌ ಪ್ರತ್ಯಭಾಷತ।।

ಆಗ ದುಃಶಾಸನ-ಸುಯೋಧನರಿಬ್ಬರೂ ದುಃಖಿತರಾಗಿದುದನ್ನು ನೋಡಿ ವ್ಯಥೆಯಿಂದ ತುಂಬಿದ್ದ ಅವರ ಬಳಿ ಬಂದು ಕರ್ಣನು ಹೇಳಿದನು.

03238034a ವಿಷೀದಥಃ ಕಿಂ ಕೌರವ್ಯೌ ಬಾಲಿಶ್ಯಾತ್ಪ್ರಾಕೃತಾವಿವ।
03238034c ನ ಶೋಕಃ ಶೋಚಮಾನಸ್ಯ ವಿನಿವರ್ತೇತ ಕಸ್ಯ ಚಿತ್।।

“ಕೌರವರೇ! ಸಾಮಾನ್ಯ ಜನರಂತೆ ಹೀಗೆ ಏಕೆ ಬಾಲತನದಿಂದ ಶೋಕಿಸುತ್ತಿರುವಿರಿ? ಶೋಕಿಸುವುದರಿಂದ ಶೋಕಿಸುತ್ತಿರುವವನ ಶೋಕವು ಕಡಿಮೆಯೇನೂ ಆಗುವುದಿಲ್ಲ.

03238035a ಯದಾ ಚ ಶೋಚತಃ ಶೋಕೋ ವ್ಯಸನಂ ನಾಪಕರ್ಷತಿ।
03238035c ಸಾಮರ್ಥ್ಯಂ ಕಿಂ ತ್ವತಃ ಶೋಕೇ ಶೋಚಮಾನೌ ಪ್ರಪಶ್ಯಥಃ।

ಯಾವಾಗ ಶೋಕಿಸುವುದರಿಂದ ಶೋಕವು ಕಡಿಮೆಯಾಗುವುದಿಲ್ಲವೋ ಆಗ ಶೋಕಿಸುವುದರಿಂದ ಶೋಕಿಸುವವನು ಏನು ಲಾಭವನ್ನು ಪಡೆಯಲು ಸಾಧ್ಯ?

03238035e ಧೃತಿಂ ಗೃಹ್ಣೀತ ಮಾ ಶತ್ರೂಂ ಶೋಚಂತೌ ನಂದಯಿಷ್ಯಥಃ।।
03238036a ಕರ್ತವ್ಯಂ ಹಿ ಕೃತಂ ರಾಜನ್ಪಾಂಡವೈಸ್ತವ ಮೋಕ್ಷಣಂ।

ಧೃತಿಯನ್ನು ತೆಗೆದುಕೊಳ್ಳಿ! ಹೀಗೆ ಶೋಕಿಸಿ ಶತ್ರುಗಳನ್ನು ಸಂತೋಷಗೊಳಿಸಬೇಡಿ! ರಾಜನ್! ಪಾಂಡವರು ನಿನ್ನನ್ನು ಬಿಡಿಸಿ ತಮ್ಮ ಕರ್ತವ್ಯವನ್ನು ಮಾತ್ರ ಮಾಡಿದ್ದಾರೆ.

03238036c ನಿತ್ಯಮೇವ ಪ್ರಿಯಂ ಕಾರ್ಯಂ ರಾಜ್ಞೋ ವಿಷಯವಾಸಿಭಿಃ।
03238036e ಪಾಲ್ಯಮಾನಾಸ್ತ್ವಯಾ ತೇ ಹಿ ನಿವಸಂತಿ ಗತಜ್ವರಾಃ।।

ರಾಜನ ರಾಜ್ಯದೊಳಗಿರುವವರು ನಿತ್ಯವೂ ಅವನಿಗೆ ಪ್ರಿಯವಾದ ಕಾರ್ಯವನ್ನು ಮಾಡಬೇಕು. ನಿನ್ನಿಂದಲೇ ಪಾಲನೆಗೊಂಡು ತಾನೇ ಅವರು ಭಯವಿಲ್ಲದೇ ವಾಸಿಸುತ್ತಿದ್ದಾರೆ?

03238037a ನಾರ್ಹಸ್ಯೇವಂಗತೇ ಮನ್ಯುಂ ಕರ್ತುಂ ಪ್ರಾಕೃತವದ್ಯಥಾ।
03238037c ವಿಷಣ್ಣಾಸ್ತವ ಸೋದರ್ಯಾಸ್ತ್ವಯಿ ಪ್ರಾಯಂ ಸಮಾಸ್ಥಿತೇ।
03238037e ಉತ್ತಿಷ್ಠ ವ್ರಜ ಭದ್ರಂ ತೇ ಸಮಾಶ್ವಾಸಯ ಸೋದರಾನ್।।

ಸಾಮಾನ್ಯರಂತೆ ಈ ರೀತಿ ದುಃಖಪಡುವುದಕ್ಕೆ ನೀನು ಅನರ್ಹ. ಪ್ರಾಯದಲ್ಲಿ ಕುಳಿತಿರುವ ನಿನ್ನನ್ನು ನೋಡಿ ನಿನ್ನ ಸೋದರರು ವಿಷಣ್ಣರಾಗಿದ್ದಾರೆ. ನಿನಗೆ ಮಂಗಳವಾಗಲಿ! ಎದ್ದೇಳು! ಸೋದರರಿಗೆ ಅಶ್ವಾಸನೆಯನ್ನು ನೀಡು.

03238038a ರಾಜನ್ನದ್ಯಾವಗಚ್ಚಾಮಿ ತವೇಹ ಲಘುಸತ್ತ್ವತಾಂ।
03238038c ಕಿಮತ್ರ ಚಿತ್ರಂ ಯದ್ವೀರ ಮೋಕ್ಷಿತಃ ಪಾಂಡವೈರಸಿ।
03238038e ಸದ್ಯೋ ವಶಂ ಸಮಾಪನ್ನಃ ಶತ್ರೂಣಾಂ ಶತ್ರುಕರ್ಶನ।।

ರಾಜನ್! ಇಂದಿನ ಈ ನಡತೆಯು ಕಡಿಮೆ ಸತ್ವದ್ದು ಎಂದೆನಿಸುತ್ತಿದೆ. ವೀರ! ಶತ್ರುಕರ್ಶನ! ಶತ್ರುಗಳ ವಶಕ್ಕೆ ಸಿಲುಕಿದ ನಿನ್ನನ್ನು ಪಾಂಡವರು ಬಿಡಿಸಿದರು ಎನ್ನುವುದರಲ್ಲಿ ವಿಶೇಷವೇನಿದೆ?

03238039a ಸೇನಾಜೀವೈಶ್ಚ ಕೌರವ್ಯ ತಥಾ ವಿಷಯವಾಸಿಭಿಃ।
03238039c ಅಜ್ಞಾತೈರ್ಯದಿ ವಾ ಜ್ಞಾತೈಃ ಕರ್ತವ್ಯಂ ನೃಪತೇಃ ಪ್ರಿಯಂ।।

ಕೌರವ! ಸೇನಾಜೀವನನ್ನು ನಡೆಸುವವರು, ಅವರು ರಾಜನಿಗೆ ಗೊತ್ತಿದ್ದವರಿರಲಿ ಅಥವಾ ಗೊತ್ತಿಲ್ಲದೇ ಇರುವವರು ಇರಲಿ, ರಾಜ್ಯದಲ್ಲಿ ವಾಸಿಸುವವರು ರಾಜನಿಗೆ ಪ್ರಿಯವಾದುದನ್ನು ಮಾಡುವುದು ಕರ್ತವ್ಯ.

03238040a ಪ್ರಾಯಃ ಪ್ರಧಾನಾಃ ಪುರುಷಾಃ ಕ್ಷೋಭಯಂತ್ಯರಿವಾಹಿನೀಂ।
03238040c ನಿಗೃಹ್ಯಂತೇ ಚ ಯುದ್ಧೇಷು ಮೋಕ್ಷ್ಯಂತೇ ಚ ಸ್ವಸೈನಿಕೈಃ।।

ಎಷ್ಟೋ ಬಾರಿ ಅರಿವಾಹಿನಿಯನ್ನು ಸದೆಬಡಿಯುವ ಪ್ರಧಾನ ಪುರುಷರು ಯುದ್ಧದಲ್ಲಿ ಅವರಿಂದ ಗೆಲ್ಲಲ್ಪಡಲು, ತನ್ನದೇ ಸೈನಿಕರಿಂದ ಬಿಡುಗಡೆಗೊಳ್ಳುತ್ತಾರೆ.

03238041a ಸೇನಾಜೀವಾಶ್ಚ ಯೇ ರಾಜ್ಞಾಂ ವಿಷಯೇ ಸಂತಿ ಮಾನವಾಃ।
03238041c ತೈಃ ಸಂಗಮ್ಯ ನೃಪಾರ್ಥಾಯ ಯತಿತವ್ಯಂ ಯಥಾತಥಂ।।

ರಾಜ್ಯದಲ್ಲಿ ವಾಸಿಸುವ ಸೇನಾಜೀವನವನ್ನು ಮಾಡುವ ಮಾನವರು ನೃಪನಿಗಾಗಿ ಎಷ್ಟಾಗುತ್ತದೆಯೋ ಅಷ್ಟು ಪ್ರಯತ್ನವನ್ನು ಮಾಡಬೇಕು.

03238042a ಯದ್ಯೇವಂ ಪಾಂಡವೈ ರಾಜನ್ಭವದ್ವಿಷಯವಾಸಿಭಿಃ।
03238042c ಯದೃಚ್ಚಯಾ ಮೋಕ್ಷಿತೋಽದ್ಯ ತತ್ರ ಕಾ ಪರಿದೇವನಾ।।

ಆದುದರಿಂದ ರಾಜನ್! ನಿನ್ನ ರಾಜ್ಯದಲ್ಲಿ ವಾಸಿಸುತ್ತಿರುವ ಪಾಂಡವರು ಇಂದು ನಿನ್ನನ್ನು ಬಿಡಿಸಿದ್ದರೆ ಅದರಲ್ಲಿ ದುಃಖಪಡುವ ವಿಷಯವಾದರೂ ಏನಿದೆ?

03238043a ನ ಚೈತತ್ಸಾಧು ಯದ್ರಾಜನ್ಪಾಂಡವಾಸ್ತ್ವಾಂ ನೃಪೋತ್ತಮ।
03238043c ಸ್ವಸೇನಯಾ ಸಂಪ್ರಯಾಂತಂ ನಾನುಯಾಂತಿ ಸ್ಮ ಪೃಷ್ಠತಃ।।

ರಾಜನ್! ನೃಪೋತ್ತಮ! ನೀನು ನಿನ್ನ ಸೇನೆಯ ಮುಂದೆ ನಿಂತು ಯುದ್ಧಮಾಡುವಾಗಲೇ ಪಾಂಡವರು ನಿನ್ನನ್ನು ಕೂಡಿ ಹೋರಾಡದೇ ಇದ್ದುದು ಸರಿಯಲ್ಲ.

03238044a ಶೂರಾಶ್ಚ ಬಲವಂತಶ್ಚ ಸಂಯುಗೇಷ್ವಪಲಾಯಿನಃ।
03238044c ಭವತಸ್ತೇ ಸಭಾಯಾಂ ವೈ ಪ್ರೇಷ್ಯತಾಂ ಪೂರ್ವಮಾಗತಾಃ।।

ಈ ಹಿಂದೆ ಪಾಂಡವರು ಸಭೆಯಲ್ಲಿ ನಿನ್ನ ದಾಸರಾಗಿ ನಿನ್ನ ಅಧಿಕಾರದಡಿಯಲ್ಲಿ ಬಂದಿದ್ದರು. ಆದುದರಿಂದ ಶೂರರಾದ, ಬಲವಂತರಾದ ಮತ್ತು ಯುದ್ಧದಲ್ಲಿ ಪಲಾಯನ ಮಾಡಲಾರದ ಅವರು ಈಗ ನಿನ್ನ ಸಹಾಯಮಾಡಲೇ ಬೇಕಿತ್ತು.

03238045a ಪಾಂಡವೇಯಾನಿ ರತ್ನಾನಿ ತ್ವಮದ್ಯಾಪ್ಯುಪಭುಂಜಸೇ।
03238045c ಸತ್ತ್ವಸ್ಥಾನ್ಪಾಂಡವಾನ್ಪಶ್ಯ ನ ತೇ ಪ್ರಾಯಮುಪಾವಿಶನ್।
03238045e ಉತ್ತಿಷ್ಠ ರಾಜನ್ಭದ್ರಂ ತೇ ನ ಚಿಂತಾಂ ಕರ್ತುಮರ್ಹಸಿ।।

ಪಾಂಡವರ ರತ್ನಗಳನ್ನು ಇಂದು ನೀನು ಅನುಭೋಗಿಸುತ್ತಿದ್ದೀಯೆ. ಆದರೆ ಸತ್ವಸ್ಥರಾದ ಪಾಂಡವರು ಪ್ರಾಯವನ್ನು ಪ್ರವೇಶಿಸಲಿಲ್ಲ ನೋಡು! ಎದ್ದೇಳು ರಾಜನ್! ನಿನಗೆ ಮಂಗಳವಾಗಲಿ! ಚಿಂತೆಯನ್ನು ಮಾಡಬೇಕಾಗಿಲ್ಲ.

03238046a ಅವಶ್ಯಮೇವ ನೃಪತೇ ರಾಜ್ಞೋ ವಿಷಯವಾಸಿಭಿಃ।
03238046c ಪ್ರಿಯಾಣ್ಯಾಚರಿತವ್ಯಾನಿ ತತ್ರ ಕಾ ಪರಿದೇವನಾ।।

ನೃಪತೇ! ರಾಜನ ರಾಜ್ಯದಲ್ಲಿ ವಾಸಿಸುವವರು ರಾಜನಿಗೆ ಪ್ರಿಯವಾಗಿ ನಡೆದುಕೊಂಡರೆ ಅದರಲ್ಲಿ ದುಃಖಿಸುವುದೇನಿದೆ?

03238047a ಮದ್ವಾಕ್ಯಮೇತದ್ರಾಜೇಂದ್ರ ಯದ್ಯೇವಂ ನ ಕರಿಷ್ಯಸಿ।
03238047c ಸ್ಥಾಸ್ಯಾಮೀಹ ಭವತ್ಪಾದೌ ಶುಶ್ರೂಷನ್ನರಿಮರ್ದನ।।

ರಾಜೇಂದ್ರ! ಅರಿಮರ್ದನ! ನನ್ನ ಈ ಮಾತಿನಂತೆ ಮಾಡದೇ ಇದ್ದರೆ ನಿನ್ನ ಪಾದಗಳಲ್ಲಿ ಶುಶ್ರೂಷೆ ಮಾಡುತ್ತಾ ನಾನು ಇಲ್ಲಿಯೇ ನಿಲ್ಲುತ್ತೇನೆ.

03238048a ನೋತ್ಸಹೇ ಜೀವಿತುಮಹಂ ತ್ವದ್ವಿಹೀನೋ ನರರ್ಷಭ।
03238048c ಪ್ರಾಯೋಪವಿಷ್ಟಸ್ತು ನೃಪ ರಾಜ್ಞಾಂ ಹಾಸ್ಯೋ ಭವಿಷ್ಯಸಿ।।

ನರರ್ಷಭ! ನೀನಿಲ್ಲದೇ ಜೀವಿಸಲು ನನಗೆ ಉತ್ಸಾಹವಿಲ್ಲ. ನೃಪ! ಪ್ರಾಯಕ್ಕೆ ಕುಳಿತುಕೊಳ್ಳುವ ರಾಜನು ಹಾಸ್ಯಾಸ್ಪದಕ್ಕೊಳಗಾಗುತ್ತಾನೆ.””

03238049 ವೈಶಂಪಾಯನ ಉವಾಚ।
03238049a ಏವಮುಕ್ತಸ್ತು ಕರ್ಣೇನ ರಾಜಾ ದುರ್ಯೋಧನಸ್ತದಾ।
03238049c ನೈವೋತ್ಥಾತುಂ ಮನಶ್ಚಕ್ರೇ ಸ್ವರ್ಗಾಯ ಕೃತನಿಶ್ಚಯಃ।।

ವೈಶಂಪಾಯನನು ಹೇಳಿದನು: “ಕರ್ಣನು ಹೀಗೆ ಹೇಳಲು ರಾಜಾ ದುರ್ಯೋಧನನು ಸ್ವರ್ಗದ ಕುರಿತು ನಿಶ್ಚಯಿಸಿ ಮೇಲೇಳಬಾರದೆಂದು ಮನಸ್ಸು ಮಾಡಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಪ್ರಾಯೋಪವೇಶೇ ಅಷ್ಟತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಪ್ರಾಯೋಪವೇಶದಲ್ಲಿ ಇನ್ನೂರಾಮೂವತ್ತೆಂಟನೆಯ ಅಧ್ಯಾಯವು.