ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 237
ಸಾರ
ದುಃಖದಿಂದ ದುರ್ಯೋಧನನು ಕರ್ಣನಿಗೆ ಪಾಂಡವರು ತನ್ನನ್ನು ಹೇಗೆ ಬಿಡುಗಡೆಮಾಡಿದರೆಂದೂ, ಪಾಂಡವರ ಮತ್ತು ಗಂಧರ್ವರ ಸ್ನೇಹವನ್ನೂ ಹೇಳಿಕೊಳ್ಳುವುದು (1-15).
03237001 ದುರ್ಯೋಧನ ಉವಾಚ।
03237001a ಅಜಾನತಸ್ತೇ ರಾಧೇಯ ನಾಭ್ಯಸೂಯಾಮ್ಯಹಂ ವಚಃ।
03237001c ಜಾನಾಸಿ ತ್ವಂ ಜಿತಾಂ ಶತ್ರೂನ್ಗಂಧರ್ವಾಂಸ್ತೇಜಸಾ ಮಯಾ।।
ದುರ್ಯೋಧನನು ಹೇಳಿದನು: “ರಾಧೇಯ! ನಿನ್ನ ಮಾತಿಗೆ ನಾನು ಅಸೂಯೆಪಡುವುದಿಲ್ಲ. ಯಾಕೆಂದರೆ ನಿನಗೆ ಗೊತ್ತಿಲ್ಲ. ನನ್ನದೇ ತೇಜಸ್ಸಿನಿಂದ ಶತ್ರು ಗಂಧರ್ವರನ್ನು ಗೆದ್ದೆ ಎಂದು ನೀನು ತಿಳಿದುಕೊಂಡಿರುವೆ.
03237002a ಆಯೋಧಿತಾಸ್ತು ಗಂಧರ್ವಾಃ ಸುಚಿರಂ ಸೋದರೈರ್ಮಮ।
03237002c ಮಯಾ ಸಹ ಮಹಾಬಾಹೋ ಕೃತಶ್ಚೋಭಯತಃ ಕ್ಷಯಃ।।
ನನ್ನೊಂದಿಗೆ ನನ್ನ ಸೋದರರು ಗಂಧರ್ವರ ವಿರುದ್ಧ ಬಹಳ ಹೊತ್ತು ಹೋರಾಡಿದರು. ಮಹಾಬಾಹೋ! ಇಬ್ಬರ ಕಡೆಯಲ್ಲಿಯೂ ನಷ್ಟವಾಯಿತು.
03237003a ಮಾಯಾಧಿಕಾಸ್ತ್ವಯುಧ್ಯಂತ ಯದಾ ಶೂರಾ ವಿಯದ್ಗತಾಃ।
03237003c ತದಾ ನೋ ನಸಮಂ ಯುದ್ಧಮಭವತ್ಸಹ ಖೇಚರೈಃ।।
ಆದರೆ ತಮ್ಮ ಮಾಯೆಯನ್ನು ಬಳಸಿ ಆಕಾಶವನ್ನೇರಿದಾಗ ಆ ಶೂರ ಖೇಚರರೊಂದಿಗೆ ನಮ್ಮ ಯುದ್ಧವು ಅಸಮವಾಯಿತು.
03237004a ಪರಾಜಯಂ ಚ ಪ್ರಾಪ್ತಾಃ ಸ್ಮ ರಣೇ ಬಂಧನಮೇವ ಚ।
03237004c ಸಭೃತ್ಯಾಮಾತ್ಯಪುತ್ರಾಶ್ಚ ಸದಾರಧನವಾಹನಾಃ।
03237004e ಉಚ್ಚೈರಾಕಾಶಮಾರ್ಗೇಣ ಹ್ರಿಯಾಮಸ್ತೈಃ ಸುದುಃಖಿತಾಃ।।
ರಣದಲ್ಲಿ ನಾವು ಪರಾಜಿತರಾಗಿ, ಸೇವಕರು, ಅಮಾತ್ಯರು, ಪುತ್ರರು, ಪತ್ನಿಯರು ಮತ್ತು ವಾಹನಗಳೊಂದಿಗೆ ಬಂಧಿತರಾದೆವು. ದುಃಖಿತರಾದ ನಮ್ಮನ್ನು ಮೇಲೆ ಆಕಾಶಮಾರ್ಗದಲ್ಲಿ ಕೊಂಡೊಯ್ಯಲಾಯಿತು.
03237005a ಅಥ ನಃ ಸೈನಿಕಾಃ ಕೇ ಚಿದಮಾತ್ಯಾಶ್ಚ ಮಹಾರಥಾನ್।
03237005c ಉಪಗಮ್ಯಾಬ್ರುವನ್ದೀನಾಃ ಪಾಂಡವಾಂ ಶರಣಪ್ರದಾನ್।।
ಆಗ ಕೆಲವು ಸೈನಿಕರು ಮತ್ತು ಅಮಾತ್ಯರು, ಶರಣವನ್ನಿತ್ತ ಮಹಾರಥಿ ಪಾಂಡವರ ಬಳಿ ಹೋಗಿ ದೀನರಾಗಿ ಹೇಳಿದರು:
03237006a ಏಷ ದುರ್ಯೋಧನೋ ರಾಜಾ ಧಾರ್ತರಾಷ್ಟ್ರಃ ಸಹಾನುಜಃ।
03237006c ಸಾಮಾತ್ಯದಾರೋ ಹ್ರಿಯತೇ ಗಂಧರ್ವೈರ್ದಿವಮಾಸ್ಥಿತೈಃ।।
“ರಾಜ ದುರ್ಯೋಧನ ಧಾರ್ತರಾಷ್ಟ್ರನನ್ನು ಅನುಜರೊಂದಿಗೆ, ಪತ್ನಿ-ಅಮಾತ್ಯರೊಂದಿಗೆ ಗಂಧರ್ವರು ಆಕಾಶದಲ್ಲಿ ಕೊಂಡೊಯ್ಯುತ್ತಿದ್ದಾರೆ.
03237007a ತಂ ಮೋಕ್ಷಯತ ಭದ್ರಂ ವಃ ಸಹದಾರಂ ನರಾಧಿಪಂ।
03237007c ಪರಾಮರ್ಶೋ ಮಾ ಭವಿಷ್ಯತ್ಕುರುದಾರೇಷು ಸರ್ವಶಃ।।
ನಿನಗೆ ಮಂಗಳವಾಗಲಿ! ಎಲ್ಲ ಕುರು ಪತ್ನಿಯರೂ ಪರಾಮರ್ಶರಾಗುವುದರ ಮೊದಲು ಪತ್ನಿಯರೊಂದಿಗೆ ನರಾಧಿಪನನ್ನು ಬಿಡುಗಡೆಗೊಳಿಸು.”
03237008a ಏವಮುಕ್ತೇ ತು ಧರ್ಮಾತ್ಮಾ ಜ್ಯೇಷ್ಠಃ ಪಾಂಡುಸುತಸ್ತದಾ।
03237008c ಪ್ರಸಾದ್ಯ ಸೋದರಾನ್ಸರ್ವಾನಾಜ್ಞಾಪಯತ ಮೋಕ್ಷಣೇ।।
ಇದನ್ನು ಕೇಳಿ ಧರ್ಮಾತ್ಮ ಜ್ಯೇಷ್ಠ ಪಾಂಡುಸುತನು ತನ್ನ ಎಲ್ಲ ಸೋದರರನ್ನೂ ಒಪ್ಪಿಸಿ ನಮ್ಮನ್ನು ಬಿಡುಗಡೆಗೊಳಿಸಲು ಅಜ್ಞಾಪಿಸಿದನು.
03237009a ಅಥಾಗಮ್ಯ ತಮುದ್ದೇಶಂ ಪಾಂಡವಾಃ ಪುರುಷರ್ಷಭಾಃ।
03237009c ಸಾಂತ್ವಪೂರ್ವಮಯಾಚಂತ ಶಕ್ತಾಃ ಸಂತೋ ಮಹಾರಥಾಃ।।
ಆಗ ಪುರುಷರ್ಷಭ ಪಾಂಡವರು, ಸಂತ ಮಹಾರಥರು ಆ ಪ್ರದೇಶಕ್ಕೆ ಬಂದು ಶಕ್ತರಾಗಿದ್ದರೂ ಸಾಮಪೂರ್ವಕವಾಗಿ ಕೇಳಿಕೊಂಡರು.
03237010a ಯದಾ ಚಾಸ್ಮಾನ್ನ ಮುಮುಚುರ್ಗಂಧರ್ವಾಃ ಸಾಂತ್ವಿತಾ ಅಪಿ।
03237010c ತತೋಽರ್ಜುನಶ್ಚ ಭೀಮಶ್ಚ ಯಮಜೌ ಚ ಬಲೋತ್ಕಟೌ।
03237010e ಮುಮುಚುಃ ಶರವರ್ಷಾಣಿ ಗಂಧರ್ವಾನ್ಪ್ರತ್ಯನೇಕಶಃ।।
ಸಂತವಿಸಿದರೂ ಕೂಡ ಗಂಧರ್ವರು ನಮ್ಮನ್ನು ಬಿಡದಿದ್ದಾಗ ಬಲೋತ್ಕಟರಾದ ಅರ್ಜುನ, ಭೀಮ ಮತ್ತು ಯಮಳರು ಗಂಧರ್ವರ ಮೇಲೆ ಅನೇಕ ಶರವರ್ಷಗಳನ್ನು ಸುರಿಸಿದರು.
03237011a ಅಥ ಸರ್ವೇ ರಣಂ ಮುಕ್ತ್ವಾ ಪ್ರಯಾತಾಃ ಖಚರಾ ದಿವಂ।
03237011c ಅಸ್ಮಾನೇವಾಭಿಕರ್ಷಂತೋ ದೀನಾನ್ಮುದಿತಮಾನಸಾಃ।।
ಆಗ ಅವರೆಲ್ಲರೂ ರಣವನ್ನು ತೊರೆದು, ದೀನರಾದ ನಮ್ಮನ್ನೂ ಎಳೆದುಕೊಂಡು ಸಂತೋಷದಿಂದ ಆಕಾಶವನ್ನು ಏರಿದರು.
03237012a ತತಃ ಸಮಂತಾತ್ಪಶ್ಯಾಮಿ ಶರಜಾಲೇನ ವೇಷ್ಟಿತಂ।
03237012c ಅಮಾನುಷಾಣಿ ಚಾಸ್ತ್ರಾಣಿ ಪ್ರಯುಂಜಾನಂ ಧನಂಜಯಂ।।
ಆಗ ಅಮಾನುಷ ಅಸ್ತ್ರಗಳನ್ನು ಪ್ರಯೋಗಿಸಿ ಶರಜಾಲದಿಂದ ಎಲ್ಲ ಕಡೆಯಿಂದಲೂ ಧನಂಜಯನು ಮುಚ್ಚಿದ್ದುದನ್ನು ನಾನು ನೋಡಿದೆ.
03237013a ಸಮಾವೃತಾ ದಿಶೋ ದೃಷ್ಟ್ವಾ ಪಾಂಡವೇನ ಶಿತೈಃ ಶರೈಃ।
03237013c ಧನಂಜಯಸಖಾತ್ಮಾನಂ ದರ್ಶಯಾಮಾಸ ವೈ ತದಾ।।
ಪಾಂಡವನ ಹರಿತ ಬಾಣಗಳಿಂದ ದಿಕ್ಕುಗಳು ತುಂಬಿಕೊಂಡಿರುವುದನ್ನು ನೋಡಿದ ಧನಂಜಯನ ಸಖನು ಸ್ವಯಂ ಕಾಣಿಸಿಕೊಂಡನು.
03237014a ಚಿತ್ರಸೇನಃ ಪಾಂಡವೇನ ಸಮಾಶ್ಲಿಷ್ಯ ಪರಂತಪಃ।
03237014c ಕುಶಲಂ ಪರಿಪಪ್ರಚ್ಚ ತೈಃ ಪೃಷ್ಟಶ್ಚಾಪ್ಯನಾಮಯಂ।।
ಚಿತ್ರಸೇನನು ಪರಂತಪ ಪಾಂಡವನನ್ನು ಆಲಂಗಿಸಿದನು ಮತ್ತು ಪರಸ್ಪರರ ಕುಶಲವನ್ನು ಕೇಳಿದರು.
03237015a ತೇ ಸಮೇತ್ಯ ತಥಾನ್ಯೋನ್ಯಂ ಸಮ್ನಾಹಾನ್ವಿಪ್ರಮುಚ್ಯ ಚ।
03237015c ಏಕೀಭೂತಾಸ್ತತೋ ವೀರಾ ಗಂಧರ್ವಾಃ ಸಹ ಪಾಂಡವೈಃ।।
03237015e ಅಪೂಜಯೇತಾಮನ್ಯೋನ್ಯಂ ಚಿತ್ರಸೇನಧನಂಜಯೌ।।
ಅನ್ಯೋನ್ಯರನ್ನು ಭೇಟಿ ಮಾಡಿ, ಕವಚಗಳನ್ನು ಕಳಚಿ, ಪಾಂಡವರೂ ವೀರ ಗಂಧರ್ವರೂ ಒಂದಾದರು. ಚಿತ್ರಸೇನ ಮತ್ತು ಧನಂಜಯರು ಅನ್ಯೋನ್ಯರನ್ನು ಗೌರವಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನವಾಕ್ಯೇ ಸಪ್ತತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನವಾಕ್ಯದಲ್ಲಿ ಇನ್ನೂರಾಮೂವತ್ತೇಳನೆಯ ಅಧ್ಯಾಯವು.