236 ಕರ್ಣದುರ್ಯೋಧನಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಘೋಷಯಾತ್ರಾ ಪರ್ವ

ಅಧ್ಯಾಯ 236

ಸಾರ

ಹಿಂದಿರುಗಿ ಪ್ರಯಾಣ ಬೆಳೆಸುತ್ತಿರುವಾಗ ಕರ್ಣನು ದುರ್ಯೋಧನನು ಗಂಧರ್ವರಿಂದ ಬದುಕುಳಿದು ಬಂದದ್ದರಿಂದ ಸಂತೋಷವನ್ನು ವ್ಯಕ್ತಪಡಿಸಲು ದುರ್ಯೋಧನನು ದುಃಖಿತನಾದುದು (1-15).

03236001 ಜನಮೇಜಯ ಉವಾಚ।
03236001a ಶತ್ರುಭಿರ್ಜಿತಬದ್ಧಸ್ಯ ಪಾಂಡವೈಶ್ಚ ಮಹಾತ್ಮಭಿಃ।
03236001c ಮೋಕ್ಷಿತಸ್ಯ ಯುಧಾ ಪಶ್ಚಾನ್ಮಾನಸ್ಥಸ್ಯ ದುರಾತ್ಮನಃ।।
03236002a ಕತ್ಥನಸ್ಯಾವಲಿಪ್ತಸ್ಯ ಗರ್ವಿತಸ್ಯ ಚ ನಿತ್ಯಶಃ।
03236002c ಸದಾ ಚ ಪೌರುಷೌದಾರ್ಯೈಃ ಪಾಂಡವಾನವಮನ್ಯತಃ।।
03236003a ದುರ್ಯೋಧನಸ್ಯ ಪಾಪಸ್ಯ ನಿತ್ಯಾಹಂಕಾರವಾದಿನಃ।
03236003c ಪ್ರವೇಶೋ ಹಾಸ್ತಿನಪುರೇ ದುಷ್ಕರಃ ಪ್ರತಿಭಾತಿ ಮೇ।।

ಜನಮೇಜಯನು ಹೇಳಿದನು: “ಶತ್ರುಗಳಿಂದ ಸೋತು ಬಂಧಿತನಾಗಿ ನಂತರ ಮಹಾತ್ಮ ಪಾಂಡವರಿಂದ ಯುದ್ಧದ ಮೂಲಕ ಬಿಡುಗಡೆಗೊಂಡ ನಂತರ ಅಭಿಮಾನಿ, ದುರಾತ್ಮ, ನಿತ್ಯವೂ ಸೊಕ್ಕಿನಲ್ಲಿದ್ದ, ಗರ್ವಿತನಾದ, ಸದಾ ಪೌರುಷ ಔದಾರ್ಯಗಳಿಂದಿದ್ದು ಪಾಂಡವರನ್ನು ಅಪಮಾನಿಸುವ ಪಾಪಿ, ನಿತ್ಯವೂ ಅಹಂಕಾರವಾದಿಯಾದ ದುರ್ಯೋಧನನಿಗೆ ಹಸ್ತಿನಾಪುರವನ್ನು ಪ್ರವೇಶಿಸುವುದು ತುಂಬಾ ದುಷ್ಕರವಾಗಿರಬಹುದು ಎಂದು ನನಗನ್ನಿಸುತ್ತದೆ.

03236004a ತಸ್ಯ ಲಜ್ಜಾನ್ವಿತಸ್ಯೈವ ಶೋಕವ್ಯಾಕುಲಚೇತಸಃ।
03236004c ಪ್ರವೇಶಂ ವಿಸ್ತರೇಣ ತ್ವಂ ವೈಶಂಪಾಯನ ಕೀರ್ತಯ।।

ವೈಶಂಪಾಯನ! ನಾಚಿಕೆಗೊಂಡ ಶೋಕವ್ಯಾಕುಲ ಚೇತನನನಾದ ಅವನ ನಗರ ಪ್ರವೇಶವನ್ನು ವಿಸ್ತಾರವಾಗಿ ನೀನು ಹೇಳಬೇಕು.”

03236005 ವೈಶಂಪಾಯನ ಉವಾಚ।
03236005a ಧರ್ಮರಾಜನಿಸೃಷ್ಟಸ್ತು ಧಾರ್ತರಾಷ್ಟ್ರಃ ಸುಯೋಧನಃ।
03236005c ಲಜ್ಜಯಾಧೋಮುಖಃ ಸೀದನ್ನುಪಾಸರ್ಪತ್ಸುದುಃಖಿತಃ।।

ವೈಶಂಪಾಯನನು ಹೇಳಿದನು: “ಧರ್ಮರಾಜನಿಂದ ಕಳುಹಿಸಲ್ಪಟ್ಟ ಧಾರ್ತರಾಷ್ಟ್ರ ಸುಯೋಧನನು ಲಜ್ಜೆಯಿಂದ ಮುಖವನ್ನು ಕೆಳಗೆ ಮಾಡಿಕೊಂಡು ದುಃಖಿತನಾಗಿ ಎಲ್ಲವನ್ನೂ ಕಳೆದುಕೊಂಡವನಂತೆ ನಿಧಾನವಾಗಿ ಹಿಂದಿರುಗಿದನು.

03236006a ಸ್ವಪುರಂ ಪ್ರಯಯೌ ರಾಜಾ ಚತುರಂಗಬಲಾನುಗಃ।
03236006c ಶೋಕೋಪಹತಯಾ ಬುದ್ಧ್ಯಾ ಚಿಂತಯಾನಃ ಪರಾಭವಂ।।

ಚತುರಂಗ ಬಲವು ಹಿಂಬಾಲಿಸಲು, ಶೋಕದಿಂದ ಸೋತು, ಪರಾಭವವನ್ನು ಮನಸ್ಸಿನಲ್ಲಿಯೇ ಚಿಂತಿಸುತ್ತಾ ರಾಜನು ತನ್ನ ಪುರಕ್ಕೆ ಪ್ರಯಾಣ ಬೆಳೆಸಿದನು.

03236007a ವಿಮುಚ್ಯ ಪಥಿ ಯಾನಾನಿ ದೇಶೇ ಸುಯವಸೋದಕೇ।
03236007c ಸನ್ನಿವಿಷ್ಟಃ ಶುಭೇ ರಮ್ಯೇ ಭೂಮಿಭಾಗೇ ಯಥೇಪ್ಸಿತಂ।
03236007e ಹಸ್ತ್ಯಶ್ವರಥಪಾದಾತಂ ಯಥಾಸ್ಥಾನಂ ನ್ಯವೇಶಯತ್।।

ಮಾರ್ಗದಲ್ಲಿ ವಿಪುಲ ಹುಲ್ಲು ನೀರಿರುವ ಪ್ರದೇಶದಲ್ಲಿ ವಾಹನಗಳನ್ನು ವಿಸರ್ಜಿಸಿ, ಶುಭ-ರಮ್ಯ ಭೂಮಿಭಾಗದಲ್ಲಿ ಇಷ್ಟಪಟ್ಟು ನೆಲೆಮಾಡಿದನು. ಆನೆ, ಕುದುರೆ, ರಥ, ಮತ್ತು ಪಾದಾತಿಗಳು ಯಥಾಸ್ಥಾನದಲ್ಲಿ ನೆಲೆಸಿದರು.

03236008a ಅಥೋಪವಿಷ್ಟಂ ರಾಜಾನಂ ಪರ್ಯಂಕೇ ಜ್ವಲನಪ್ರಭೇ।
03236008c ಉಪಪ್ಲುತಂ ಯಥಾ ಸೋಮಂ ರಾಹುಣಾ ರಾತ್ರಿಸಂಕ್ಷಯೇ।
03236008e ಉಪಗಮ್ಯಾಬ್ರವೀತ್ಕರ್ಣೋ ದುರ್ಯೋಧನಮಿದಂ ತದಾ।।

ಆಗ ರಾಜನು ಉರಿಯುತ್ತಿರುವ ಬೆಂಕಿಯಂತೆ ಹೊಳೆಯುತ್ತಿದ್ದ ಪರ್ಯಂಕದಲ್ಲಿ ರಾಹುವಿನ ಗ್ರಹಣಕ್ಕೊಳಗಾದ ಚಂದ್ರನಂತೆ ಕುಂದಿ ಕುಳಿತು ರಾತ್ರಿಯನ್ನು ಕಳೆಯಲು ಕರ್ಣನು ದುರ್ಯೋಧನನ ಬಳಿಬಂದು ಹೇಳಿದನು.

03236009a ದಿಷ್ಟ್ಯಾ ಜೀವಸಿ ಗಾಂಧಾರೇ ದಿಷ್ಟ್ಯಾ ನಃ ಸಂಗಮಃ ಪುನಃ।
03236009c ದಿಷ್ಟ್ಯಾ ತ್ವಯಾ ಜಿತಾಶ್ಚೈವ ಗಂಧರ್ವಾಃ ಕಾಮರೂಪಿಣಃ।।

“ಗಾಂಧಾರೇ! ನೀನು ಜೀವಿಸಿರುವೆ ಎನ್ನುವುದೇ ಅದೃಷ್ಟ! ಪುನಃ ಭೇಟಿಯಾಗುತ್ತಿದ್ದೇವೆ ಎನ್ನುವುದೇ ಅದೃಷ್ಟ! ಕಾಮರೂಪಿಗಳಾದ ಗಂಧರ್ವರನ್ನು ನೀನು ಗೆದ್ದೆ ಎನ್ನುವುದೂ ಅದೃಷ್ಟವೇ!

03236010a ದಿಷ್ಟ್ಯಾ ಸಮಗ್ರಾನ್ಪಶ್ಯಾಮಿ ಭ್ರಾತೄಂಸ್ತೇ ಕುರುನಂದನ।
03236010c ವಿಜಿಗೀಷೂನ್ರಣಾನ್ಮುಕ್ತಾನ್ನಿರ್ಜಿತಾರೀನ್ಮಹಾರಥಾನ್।।

ಕುರುನಂದನ! ಅದೃಷ್ಟವಶಾತ್ ರಣದಲ್ಲಿ ಅರಿಗಳನ್ನು ಗೆದ್ದು ವಿಜಯದಿಂದ ಹಿಂದಿರುಗಿದ ನಿನ್ನ ಮಹಾರಥಿ ಸಹೋದರರೆಲ್ಲರನ್ನೂ ನೋಡುತ್ತಿದ್ದೇನೆ.

03236011a ಅಹಂ ತ್ವಭಿದ್ರುತಃ ಸರ್ವೈರ್ಗಂಧರ್ವೈಃ ಪಶ್ಯತಸ್ತವ।
03236011c ನಾಶಕ್ನುವಂ ಸ್ಥಾಪಯಿತುಂ ದೀರ್ಯಮಾಣಾಂ ಸ್ವವಾಹಿನೀಂ।।

ನೀನು ನೋಡುತ್ತಿದ್ದಂತೆಯೇ ಆ ಗಂಧರ್ವರೆಲ್ಲರೂ ನನ್ನನ್ನು ಓಡಿಹೋಗುವಂತೆ ಮಾಡಿದರು. ಓಡಿಹೋಗುತ್ತಿದ್ದ ನನ್ನ ಸೇನೆಯನ್ನೂ ಕೂಡ ನಿಲ್ಲಿಸಲು ಅಶಕ್ತನಾಗಿ ಹೋದೆ.

03236012a ಶರಕ್ಷತಾಂಗಶ್ಚ ಭೃಶಂ ವ್ಯಪಯಾತೋಽಭಿಪೀಡಿತಃ।
03236012c ಇದಂ ತ್ವತ್ಯದ್ಭುತಂ ಮನ್ಯೇ ಯದ್ಯುಷ್ಮಾನಿಹ ಭಾರತ।।

ಭಾರತ! ಬಾಣಗಳಿಂದ ಚೆನ್ನಾಗಿ ಗಾಯಗೊಂಡು ಪೀಡಿತನಾಗಿ ನಾನು ಪಲಾಯನಗೈದೆ. ಈಗ ನಿನ್ನನ್ನು ಇಲ್ಲಿ ಕಾಣುತ್ತಿದ್ದೇನೆ ಎನ್ನುವುದೇ ಒಂದು ಅದ್ಭುತವೆಂದು ತಿಳಿಯುತ್ತೇನೆ.

03236013a ಅರಿಷ್ಟಾನಕ್ಷತಾಂಶ್ಚಾಪಿ ಸದಾರಧನವಾಹನಾನ್।
03236013c ವಿಮುಕ್ತಾನ್ಸಂಪ್ರಪಶ್ಯಾಮಿ ತಸ್ಮಾದ್ಯುದ್ಧಾದಮಾನುಷಾತ್।।

ಪೀಡಿತನಾಗದೇ, ಗಾಯಗೊಳ್ಳದೇ, ಪತ್ನಿಯರೊಂದಿಗೆ, ಸಂಪತ್ತಿನೊಂದಿಗೆ, ವಾಹನಗಳೊಂದಿಗೆ ಕ್ಷೇಮವಾಗಿ ನೀನು ಆ ಅಮಾನುಷ ಯುದ್ಧದಿಂದ ಬಿಡುಗಡೆ ಹೊಂದಿರುವುದನ್ನು ಕಾಣುತ್ತಿದ್ದೇನೆ.

03236014a ನೈತಸ್ಯ ಕರ್ತಾ ಲೋಕೇಽಸ್ಮಿನ್ಪುಮಾನ್ವಿದ್ಯೇತ ಭಾರತ।
03236014c ಯತ್ಕೃತಂ ತೇ ಮಹಾರಾಜ ಸಹ ಭ್ರಾತೃಭಿರಾಹವೇ।।

ಭಾರತ! ಮಹಾರಾಜ! ಭ್ರಾತೃಗಳೊಂದಿಗೆ ಯುದ್ಧದಲ್ಲಿ ನೀನು ಮಾಡಿದ ಕಾರ್ಯವನ್ನು ಈ ಲೋಕದ ಬೇರೆ ಯಾವ ಪುರುಷನೂ ಮಾಡಿದ್ದುದು ತಿಳಿದಿಲ್ಲ.”

03236015a ಏವಮುಕ್ತಸ್ತು ಕರ್ಣೇನ ರಾಜಾ ದುರ್ಯೋಧನಸ್ತದಾ।
03236015c ಉವಾಚಾವಾಕ್ಶಿರಾ ರಾಜನ್ಬಾಷ್ಪಗದ್ಗದಯಾ ಗಿರಾ।।

ರಾಜನ್! ಕರ್ಣನು ಹೀಗೆ ಹೇಳಲು ರಾಜಾ ದುರ್ಯೋಧನನು ಕಣ್ಣೀರು ತುಂಬಿದ ಗಂಟಲಿನ ಸ್ವರದಲ್ಲಿ ಈ ಮಾತುಗಳನ್ನಾಡಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಕರ್ಣದುರ್ಯೋಧನಸಂವಾದೇ ಷಟ್‌ತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಕರ್ಣದುರ್ಯೋಧನರ ಸಂವಾದದಲ್ಲಿ ಇನ್ನೂರಾಮೂವತ್ತಾರನೆಯ ಅಧ್ಯಾಯವು.