ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 234
ಸಾರ
ಭೀಕರ ಯುದ್ಧವು ನಡೆಯುತ್ತಿರುವಾಗ ಹೋರಾಡುತ್ತಿದ್ದ ಗಂಧರ್ವರಾಜನ ಅಂತರ್ಧಾನತ್ವವನ್ನು ಶಬ್ಧವೇದಿ ಅಸ್ತ್ರವನ್ನು ಬಳಸಿ ಅರ್ಜುನನು ಕೊನೆಗೊಳಿಸಲು, ಹೋರಾಡುವವನು ತನ್ನ ಮಿತ್ರ ಚಿತ್ರರಥನೆಂದು ಗುರುತಿಸಿ, ಯುದ್ಧವು ನಿಲ್ಲುವುದು; ಪಾಂಡವ-ಗಂಧರ್ವರಾಜರು ರಥದಲ್ಲಿದ್ದುಕೊಂಡೇ ಪರಸ್ಪರರ ಕುಶಲಗಳನ್ನು ಕೇಳಿಕೊಂಡಿದುದು (1-28).
03234001 ವೈಶಂಪಾಯನ ಉವಾಚ।
03234001a ತತೋ ದಿವ್ಯಾಸ್ತ್ರಸಂಪನ್ನಾ ಗಂಧರ್ವಾ ಹೇಮಮಾಲಿನಃ।
03234001c ವಿಸೃಜಂತಃ ಶರಾನ್ದೀಪ್ತಾನ್ಸಮಂತಾತ್ಪರ್ಯವಾರಯನ್।।
ವೈಶಂಪಾಯನನು ಹೇಳಿದನು: “ಆಗ ದ್ವಿವ್ಯಾಸ್ತ್ರಸಂಪನ್ನರೂ ಹೇಮಮಾಲಿನಿಗಳೂ ಆದ ಗಂಧರ್ವರು ಅವರನ್ನು ಎಲ್ಲ ಕಡೆಗಳಿಂದಲೂ ಸುತ್ತುವರೆದು ಉರಿಯುತ್ತಿರುವ ಬಾಣಗಳನ್ನು ಪ್ರಯೋಗಿಸಿದರು.
03234002a ಚತ್ವಾರಃ ಪಾಂಡವಾ ವೀರಾ ಗಂಧರ್ವಾಶ್ಚ ಸಹಸ್ರಶಃ।
03234002c ರಣೇ ಸಂನ್ಯಪತನ್ರಾಜಂಸ್ತದದ್ಭುತಮಿವಾಭವತ್।।
ರಾಜನ್! ನಾಲ್ವರು ವೀರ ಪಾಂಡವರು ಮತ್ತು ಸಹಸ್ರಾರು ಗಂಧರ್ವರು ಪರಸ್ಪರರ ಮೇಲೆ ಎರಗಲು ಅದ್ಭುತವೆನಿಸಿತು.
03234003a ಯಥಾ ಕರ್ಣಸ್ಯ ಚ ರಥೋ ಧಾರ್ತರಾಷ್ಟ್ರಸ್ಯ ಚೋಭಯೋಃ।
03234003c ಗಂಧರ್ವೈಃ ಶತಶಶ್ಚಿನ್ನೌ ತಥಾ ತೇಷಾಂ ಪ್ರಚಕ್ರಿರೇ।।
ಕರ್ಣ ಮತ್ತು ಧಾರ್ತರಾಷ್ಟ್ರ ಇಬ್ಬರ ರಥವನ್ನು ಹೇಗೆ ನೂರಾರು ಚೂರುಗಳನ್ನಾಗಿ ಮಾಡಿದ್ದರೋ ಹಾಗೆ ಇವರದ್ದನ್ನೂ ಮಾಡಲು ಗಂಧರ್ವರು ತೊಡಗಿದರು.
03234004a ತಾನ್ಸಮಾಪತತೋ ರಾಜನ್ಗಂಧರ್ವಾಂ ಶತಶೋ ರಣೇ।
03234004c ಪ್ರತ್ಯಗೃಹ್ಣನ್ನರವ್ಯಾಘ್ರಾಃ ಶರವರ್ಷೈರನೇಕಶಃ।।
ರಾಜನ್! ರಣದಲ್ಲಿ ನೂರಾರು ಗಂಧರ್ವರು ಮೇಲೆ ಬೀಳಲು ನರವ್ಯಾಘ್ರರು ಅನೇಕ ಶರವರ್ಷಗಳಿಂದ ತಡೆಹಿಡಿದರು.
03234005a ಅವಕೀರ್ಯಮಾಣಾಃ ಖಗಮಾಃ ಶರವರ್ಷೈಃ ಸಮಂತತಃ।
03234005c ನ ಶೇಕುಃ ಪಾಂಡುಪುತ್ರಾಣಾಂ ಸಮೀಪೇ ಪರಿವರ್ತಿತುಂ।।
ಎಲ್ಲಕಡೆಯಿಂದಲೂ ಶರವರ್ಷಗಳಿಗೆ ಸಿಲುಕಿದ ಆಕಾಶಗಾಮಿಗಳು ಪಾಂಡುಪುತ್ರರ ಸಮೀಪ ಬರಲೂ ಅಶಕ್ಯರಾದರು.
03234006a ಅಭಿಕ್ರುದ್ಧಾನಭಿಪ್ರೇಕ್ಷ್ಯ ಗಂಧರ್ವಾನರ್ಜುನಸ್ತದಾ।
03234006c ಲಕ್ಷಯಿತ್ವಾಥ ದಿವ್ಯಾನಿ ಮಹಾಸ್ತ್ರಾಣ್ಯುಪಚಕ್ರಮೇ।।
ಗಂಧರ್ವರು ಸಿಟ್ಟಿಗೇಳುತ್ತಿದ್ದಾರೆ ಎಂದು ಕಂಡ ಅರ್ಜುನನು ದಿವ್ಯ ಮಹಾಸ್ತ್ರಗಳನ್ನು ಪ್ರಯೋಗಿಸಿದನು.
03234007a ಸಹಸ್ರಾಣಾಂ ಸಹಸ್ರಂ ಸ ಪ್ರಾಹಿಣೋದ್ಯಮಸಾದನಂ।
03234007c ಆಗ್ನೇಯೇನಾರ್ಜುನಃ ಸಂಖ್ಯೇ ಗಂಧರ್ವಾಣಾಂ ಬಲೋತ್ಕಟಃ।।
ಆ ಯುದ್ಧದಲ್ಲಿ ಬಲೋತ್ಕಟ ಅರ್ಜುನನು ಆಗ್ನೇಯದಿಂದ ಸಹಸ್ರ ಸಹಸ್ರ ಗಂಧರ್ವರನ್ನು ಯಮಸಾದನಕ್ಕೆ ಕಳುಹಿಸಿದನು.
03234008a ತಥಾ ಭೀಮೋ ಮಹೇಷ್ವಾಸಃ ಸಂಯುಗೇ ಬಲಿನಾಂ ವರಃ।
03234008c ಗಂಧರ್ವಾಂ ಶತಶೋ ರಾಜಂ ಜಘಾನ ನಿಶಿತೈಃ ಶರೈಃ।।
ರಾಜನ್! ಆಗ ಬಲಿಗಳಲ್ಲಿ ಶ್ರೇಷ್ಠ ಮಹೇಷ್ವಾಸ ಭೀಮನು ನಿಶಿತ ಶರಗಳಿಂದ ನೂರಾರು ಗಂಧರ್ವರನ್ನು ಸಂಹರಿಸಿದನು.
03234009a ಮಾದ್ರೀಪುತ್ರಾವಪಿ ತಥಾ ಯುಧ್ಯಮಾನೌ ಬಲೋತ್ಕಟೌ।
03234009c ಪರಿಗೃಹ್ಯಾಗ್ರತೋ ರಾಜಂ ಜಘ್ನತುಃ ಶತಶಃ ಪರಾನ್।।
ರಾಜನ್! ಯುದ್ಧಮಾಡುತ್ತಿದ್ದ ಬಲೋತ್ಕಟ ಮಾದ್ರೀಪುತ್ರರಿಬ್ಬರೂ ಕೂಡ ನೂರಾರು ಶತ್ರುಗಳನ್ನು ಕಟ್ಟಿ ಸಂಹರಿಸಿದರು.
03234010a ತೇ ವಧ್ಯಮಾನಾ ಗಂಧರ್ವಾ ದಿವ್ಯೈರಸ್ತ್ರೈರ್ಮಹಾತ್ಮಭಿಃ।
03234010c ಉತ್ಪೇತುಃ ಖಮುಪಾದಾಯ ಧೃತರಾಷ್ಟ್ರಸುತಾಂಸ್ತತಃ।।
ಆ ಮಹಾತ್ಮರ ದಿವ್ಯಾಸ್ತ್ರಗಳಿಂದ ಗಂಧರ್ವರು ವಧೆಗೊಳ್ಳುತ್ತಿರಲು ಅವರು ಧೃತರಾಷ್ಟ್ರನ ಮಕ್ಕಳೊಂದಿಗೆ ಆಕಾಶದ ಕಡೆ ಏರಿದರು.
03234011a ತಾನುತ್ಪತಿಷ್ಣೂನ್ಬುದ್ಧ್ವಾ ತು ಕುಂತೀಪುತ್ರೋ ಧನಂಜಯಃ।
03234011c ಮಹತಾ ಶರಜಾಲೇನ ಸಮಂತಾತ್ಪರ್ಯವಾರಯತ್।।
ಆಗ ಕುಂತೀಪುತ್ರ ಧನಂಜಯನು ಮಹಾ ಶರಜಾಲದಿಂದ ಎಲ್ಲ ಕಡೆಯಿಂದಲೂ ಅವರನ್ನು ಮುಚ್ಚಿ ತಡೆಹಿಡಿದನು.
03234012a ತೇ ಬದ್ಧಾಃ ಶರಜಾಲೇನ ಶಕುಂತಾ ಇವ ಪಂಜರೇ।
03234012c ವವರ್ಷುರರ್ಜುನಂ ಕ್ರೋಧಾದ್ಗದಾಶಕ್ತ್ಯೃಷ್ಟಿವೃಷ್ಟಿಭಿಃ।।
ಪಕ್ಷಿಗಳಂತೆ ಪಂಜರದಲ್ಲಿ ಬಂಧಿತರಾದ ಅವರು ಕ್ರೋಧದಿಂದ ಅರ್ಜುನನ ಮೇಲೆ ಗದೆ-ಶಕ್ತಿಗಳ ಮಳೆಯನ್ನು ಸುರಿಸಿದರು.
03234013a ಗದಾಶಕ್ತ್ಯಸಿವೃಷ್ಟೀಸ್ತಾ ನಿಹತ್ಯ ಸ ಮಹಾಸ್ತ್ರವಿತ್।
03234013c ಗಾತ್ರಾಣಿ ಚಾಹನದ್ಭಲ್ಲೈರ್ಗಂಧರ್ವಾಣಾಂ ಧನಂಜಯಃ।।
ಆ ಮಹಾಸ್ತ್ರವಿದು ಧನಂಜಯನು ಗದೆ-ಶಕ್ತಿ-ಖಡ್ಗಗಳ ಮಳೆಯಿಂದ ಅವರನ್ನು ಸಂಹರಿಸಿ ಗಂಧರ್ವರ ಶರೀರಗಳನ್ನು ಭಲ್ಲೆಗಳಿಂದ ಹೊಡೆದನು.
03234014a ಶಿರೋಭಿಃ ಪ್ರಪತದ್ಭಿಶ್ಚ ಚರಣೈರ್ಬಾಹುಭಿಸ್ತಥಾ।
03234014c ಅಶ್ಮವೃಷ್ಟಿರಿವಾಭಾತಿ ಪರೇಷಾಮಭವದ್ಭಯಂ।।
ತಲೆ-ಕಾಲು-ಬಾಹುಗಳು ಬೀಳುತ್ತಿರಲು ಕಲ್ಲುಗಳ ಮಳೆಯೋ ಎಂಬಂತೆ ಭಯಂಕರವಾಗಿ ತೋರಿತು.
03234015a ತೇ ವಧ್ಯಮಾನಾ ಗಂಧರ್ವಾಃ ಪಾಂಡವೇನ ಮಹಾತ್ಮನಾ।
03234015c ಭೂಮಿಷ್ಠಮಂತರಿಕ್ಷಸ್ಥಾಃ ಶರವರ್ಷೈರವಾಕಿರನ್।।
ಮಹಾತ್ಮ ಪಾಂಡವನಿಂದ ಗಂಧರ್ವರು ಹೀಗೆ ಸಾಯುತ್ತಿರಲು ಅವರು ಆಕಾಶದಲ್ಲಿ ನಿಂತು ಭೂಮಿಯ ಮೇಲಿದ್ದ ಅವನ ಮೇಲೆ ಶರಗಳ ಮಳೆಯನ್ನು ಸುರಿಸಿದರು.
03234016a ತೇಷಾಂ ತು ಶರವರ್ಷಾಣಿ ಸವ್ಯಸಾಚೀ ಪರಂತಪಃ।
03234016c ಅಸ್ತ್ರೈಃ ಸಂವಾರ್ಯ ತೇಜಸ್ವೀ ಗಂಧರ್ವಾನ್ಪ್ರತ್ಯವಿಧ್ಯತ।।
ಆದರೆ ಅವರ ಶರವರ್ಷಗಳನ್ನು ಪರಂತಪ ಸವ್ಯಸಾಚಿಯು ಅಸ್ತ್ರಗಳಿಂದ ತಡೆದನು. ಆ ತೇಜಸ್ವಿಯು ಗಂಧರ್ವರನ್ನು ತಿರುಗಿ ಹೊಡೆದನು.
03234017a ಸ್ಥೂಣಾಕರ್ಣೇಂದ್ರಜಾಲಂ ಚ ಸೌರಂ ಚಾಪಿ ತಥಾರ್ಜುನಃ।
03234017c ಆಗ್ನೇಯಂ ಚಾಪಿ ಸೌಮ್ಯಂ ಚ ಸಸರ್ಜ ಕುರುನಂದನಃ।।
ಕುರುನಂದನ ಅರ್ಜುನನು ಸ್ಥೂಣಕರ್ಣ, ಇಂದ್ರಜಾಲ, ಸೌರ ಮತ್ತು ಸೌಮ್ಯಾಸ್ತ್ರಗಳನ್ನು ಪ್ರಯೋಗಿಸಿದನು.
03234018a ತೇ ದಹ್ಯಮಾನಾ ಗಂಧರ್ವಾಃ ಕುಂತೀಪುತ್ರಸ್ಯ ಸಾಯಕೈಃ।
03234018c ದೈತೇಯಾ ಇವ ಶಕ್ರೇಣ ವಿಷಾದಮಗಮನ್ಪರಂ।।
ಕುಂತೀಪುತ್ರನ ಶರಗಳಿಂದ ಸುಡುತ್ತಿದ್ದ ಗಂಧರ್ವರು ಶಕ್ರನಿಂದ ದೈತ್ಯರು ಹೇಗೋ ಹಾಗೆ ಪರಮ ದುಃಖವನ್ನು ಅನುಭವಿಸಿದರು.
03234019a ಊರ್ಧ್ವಮಾಕ್ರಮಮಾಣಾಶ್ಚ ಶರಜಾಲೇನ ವಾರಿತಾಃ।
03234019c ವಿಸರ್ಪಮಾಣಾ ಭಲ್ಲೈಶ್ಚ ವಾರ್ಯಂತೇ ಸವ್ಯಸಾಚಿನಾ।।
ಮೇಲೆ ಹಾರಲು ಪ್ರಯತ್ನಿಸಿದಾಗ ಶರಜಾಲವು ಅವರನ್ನು ತಡೆಯುತ್ತಿತ್ತು; ಭೂಮಿಯ ಮೇಲೆ ಹರಿದು ಹೋಗಬೇಕೆಂದರೆ ಸವ್ಯಸಾಚಿಯ ಭಲ್ಲೆಗಳು ತಡೆಯುತ್ತಿದ್ದವು.
03234020a ಗಂಧರ್ವಾಂಸ್ತ್ರಾಸಿತಾನ್ದೃಷ್ಟ್ವಾ ಕುಂತೀಪುತ್ರೇಣ ಧೀಮತಾ।
03234020c ಚಿತ್ರಸೇನೋ ಗದಾಂ ಗೃಹ್ಯ ಸವ್ಯಸಾಚಿನಮಾದ್ರವತ್।।
ಧೀಮಂತ ಕುಂತೀಪುತ್ರನಿಂದ ಗಂಧರ್ವರು ಕಾಟಕ್ಕೊಳಗಾಗಿದ್ದುದನ್ನು ನೋಡಿ ಚಿತ್ರಸೇನನು ಗದೆಯನ್ನು ಹಿಡಿದು ಸವ್ಯಸಾಚಿಯ ಕಡೆ ಧಾವಿಸಿ ಬಂದನು.
03234021a ತಸ್ಯಾಭಿಪತತಸ್ತೂರ್ಣಂ ಗದಾಹಸ್ತಸ್ಯ ಸಂಯುಗೇ।
03234021c ಗದಾಂ ಸರ್ವಾಯಸೀಂ ಪಾರ್ಥಃ ಶರೈಶ್ಚಿಚ್ಚೇದ ಸಪ್ತಧಾ।।
ಅವನ ಮೇಲೆರಗಲು ಪಾರ್ಥನು ಆ ಬಲವಾದ ಉಕ್ಕಿನ ಗದೆಯನ್ನು ಬಾಣಗಳಿಂದ ಏಳು ಭಾಗಗಳನ್ನಾಗಿ ತುಂಡರಿಸಿದನು.
03234022a ಸ ಗದಾಂ ಬಹುಧಾ ದೃಷ್ಟ್ವಾ ಕೃತ್ತಾಂ ಬಾಣೈಸ್ತರಸ್ವಿನಾ।
03234022c ಸಂವೃತ್ಯ ವಿದ್ಯಯಾತ್ಮಾನಂ ಯೋಧಯಾಮಾಸ ಪಾಂಡವಂ।
03234022e ಅಸ್ತ್ರಾಣಿ ತಸ್ಯ ದಿವ್ಯಾನಿ ಯೋಧಯಾಮಾಸ ಖೇ ಸ್ಥಿತಃ।।
ಆ ತರಸ್ವಿಯ ಬಾಣಗಳಿಂದ ಗದೆಯು ತುಂಡಾದುದನ್ನು ನೋಡಿ ಅವನು ತನ್ನ ಮಾಯೆಯಿಂದ ತನ್ನನ್ನು ಅದೃಷ್ಯನನ್ನಾಗಿಸಿಕೊಂಡು ಆಕಾಶದಲ್ಲಿ ನಿಂತು ದಿವ್ಯಾಸ್ತ್ರಗಳೊಂದಿಗೆ ಪಾಂಡವನೊಡನೆ ಯುದ್ಧ ಮಾಡಿದನು.
03234023a ಗಂಧರ್ವರಾಜೋ ಬಲವಾನ್ಮಾಯಯಾಂತರ್ಹಿತಸ್ತದಾ।
03234023c ಅಂತರ್ಹಿತಂ ಸಮಾಲಕ್ಷ್ಯ ಪ್ರಹರಂತಮಥಾರ್ಜುನಃ।
03234023e ತಾಡಯಾಮಾಸ ಖಚರೈರ್ದಿವ್ಯಾಸ್ತ್ರಪ್ರತಿಮಂತ್ರಿತೈಃ।।
ಆಗ ಬಲವಾನ್ ಗಂಧರ್ವರಾಜನು ಮಾಯೆಯಿಂದ ಅಂತರ್ಧಾನನಾದನು. ಅವನು ಅಂತರ್ಧಾನನಾದುದನ್ನು ಕಂಡು ಅರ್ಜುನನು ಆಕಾಶಗಾಮಿ ಅಸ್ತ್ರಗಳನ್ನು ಅಭಿಮಂತ್ರಿಸಿ ಪ್ರಯೋಗಿಸಿ ಅವನನ್ನು ಹೊಡೆದನು.
03234024a ಅಂತರ್ಧಾನವಧಂ ಚಾಸ್ಯ ಚಕ್ರೇ ಕ್ರುದ್ಧೋಽರ್ಜುನಸ್ತದಾ।
03234024c ಶಬ್ದವೇಧ್ಯಮುಪಾಶ್ರಿತ್ಯ ಬಹುರೂಪೋ ಧನಂಜಯಃ।।
ಆಗ ಕೃದ್ಧನಾದ ಬಹುರೂಪಿ ಧನಂಜಯ ಅರ್ಜುನನು ಶಬ್ಧವೇದಿಯನ್ನು ಉಪಯೋಗಿಸಿ ಅವನ ಅಂತರ್ಧಾನತ್ವವನ್ನು ಕೊನೆಗೊಳಿಸಿದನು.
03234025a ಸ ವಧ್ಯಮಾನಸ್ತೈರಸ್ತ್ರೈರರ್ಜುನೇನ ಮಹಾತ್ಮನಾ।
03234025c ಅಥಾಸ್ಯ ದರ್ಶಯಾಮಾಸ ತದಾತ್ಮಾನಂ ಪ್ರಿಯಃ ಸಖಾ।।
ಮಹಾತ್ಮ ಅರ್ಜುನನ ಅಸ್ತ್ರಗಳಿಂದ ಹೊಡೆಯಲ್ಪಟ್ಟ ಅವನು ಪ್ರಿಯಸಖನಾಗಿ ಕಾಣಿಸಿಕೊಂಡನು.
03234026a ಚಿತ್ರಸೇನಮಥಾಲಕ್ಷ್ಯ ಸಖಾಯಂ ಯುಧಿ ದುರ್ಬಲಂ।
03234026c ಸಂಜಹಾರಾಸ್ತ್ರಮಥ ತತ್ಪ್ರಸೃಷ್ಟಂ ಪಾಂಡವರ್ಷಭಃ।।
ಯುದ್ಧದಲ್ಲಿ ದರ್ಬಲನಾಗಿದ್ದ ಸಖ ಚಿತ್ರಸೇನನನ್ನು ನೋಡಿ ಪಾಂಡವರ್ಷಭನು ತಾನು ಬಿಟ್ಟಿದ್ದ ಅಸ್ತ್ರಗಳನ್ನು ಹಿಂದೆ ತೆಗೆದುಕೊಂಡನು.
03234027a ದೃಷ್ಟ್ವಾ ತು ಪಾಂಡವಾಃ ಸರ್ವೇ ಸಂಹೃತಾಸ್ತ್ರಂ ಧನಂಜಯಂ।
03234027c ಸಂಜಹ್ರುಃ ಪ್ರದ್ರುತಾನಶ್ವಾಂ ಶರವೇಗಾನ್ಧನೂಂಷಿ ಚ।।
ಧನಂಜಯನು ಅಸ್ತ್ರಗಳನ್ನು ಹಿಂದೆ ತೆಗೆದುಕೊಂಡಿದ್ದುದನ್ನು ನೋಡಿದ ಎಲ್ಲ ಪಾಂಡವರೂ ಹಾರುತ್ತಿದ್ದ ಕುದುರೆಗಳನ್ನು, ವೇಗವಾಗಿ ಹೋಗುತ್ತಿದ್ದ ಬಾಣಗಳನ್ನೂ ಬಿಲ್ಲುಗಳನ್ನೂ ತಡೆಹಿಡಿದರು.
03234028a ಚಿತ್ರಸೇನಶ್ಚ ಭೀಮಶ್ಚ ಸವ್ಯಸಾಚೀ ಯಮಾವಪಿ।
03234028c ಪೃಷ್ಟ್ವಾ ಕೌಶಲಮನ್ಯೋನ್ಯಂ ರಥೇಷ್ವೇವಾವತಸ್ಥಿರೇ।।
ಚಿತ್ರಸೇನ, ಭೀಮ, ಸವ್ಯಸಾಚೀ, ಮತ್ತು ಯಮಳರು ರಥದಲ್ಲಿ ಇದ್ದುಕೊಂಡೇ ಪರಸ್ಪ್ವರರ ಕುಶಲವನ್ನು ಕೇಳಿಕೊಂಡರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಗಂಧರ್ವಪರಾಭವೇ ಚತುಸ್ತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಗಂಧರ್ವಪರಾಭವದಲ್ಲಿ ಇನ್ನೂರಾಮೂವತ್ನಾಲ್ಕನೆಯ ಅಧ್ಯಾಯವು.