ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 232
ಸಾರ
ಗಡುಸಾಗಿ ಮಾತನಾಡಬಾರದೆಂದು ಭೀಮನಿಗೆ ಹೇಳಿ ಯುಧಿಷ್ಠಿರನು ತಮ್ಮಂದಿರಿಗೆ ದುರ್ಯೋಧನಾದಿಗಳನ್ನು ಗಂಧರ್ವರ ಸೆರೆಯಿಂದ ಬಿಡಿಸಿಕೊಂಡು ಬರಲು ಆದೇಶಿಸಿದುದು (1-18). ಅರ್ಜುನನು ಕೌರವರನ್ನು ಬಿಡುಗಡೆಗೊಳಿಸುವ ಪ್ರತಿಜ್ಞೆಮಾಡಿದುದು (19-21).
03232001 ಯುಧಿಷ್ಠಿರ ಉವಾಚ।
03232001a ಅಸ್ಮಾನಭಿಗತಾಂಸ್ತಾತ ಭಯಾರ್ತಾಂ ಶರಣೈಷಿಣಃ।
03232001c ಕೌರವಾನ್ವಿಷಮಪ್ರಾಪ್ತಾನ್ಕಥಂ ಬ್ರೂಯಾಸ್ತ್ವಮೀದೃಶಂ।।
ಯುಧಿಷ್ಠಿರನು ಹೇಳಿದನು: “ಕಷ್ಟದಲ್ಲಿರುವ, ಭಯಾರ್ತರಾಗಿ ನಮ್ಮ ಶರಣು ಬಂದಿರುವ ಇವರಿಗೆ ನೀನು ಏಕೆ ಈ ರೀತಿ ಮಾತನಾಡಬೇಕು ಮಗೂ!
03232002a ಭವಂತಿ ಭೇದಾ ಜ್ಞಾತೀನಾಂ ಕಲಹಾಶ್ಚ ವೃಕೋದರ।
03232002c ಪ್ರಸಕ್ತಾನಿ ಚ ವೈರಾಣಿ ಜ್ಞಾತಿಧರ್ಮೋ ನ ನಶ್ಯತಿ।।
ವೃಕೋದರ! ದಾಯಾದಿಗಳಲ್ಲಿ ಭೇದ ಕಲಹಗಳು ನಡೆಯುತ್ತವೆ. ವೈರತ್ವವು ಮುಂದುವರೆದರೂ ಕುಟುಂಬ ಧರ್ಮವು ನಶಿಸುವುದಿಲ್ಲ.
03232003a ಯದಾ ತು ಕಶ್ಚಿಜ್ಞಾತೀನಾಂ ಬಾಹ್ಯಃ ಪ್ರಾರ್ಥಯತೇ ಕುಲಂ।
03232003c ನ ಮರ್ಷಯಂತಿ ತತ್ಸಂತೋ ಬಾಹ್ಯೇನಾಭಿಪ್ರಮರ್ಷಣಂ।।
ಆದರೆ ಹೊರಗಿನವರು ಯಾರಾದರೂ ಕುಲದವರನ್ನು ಆಕ್ರಮಿಸಿದರೆ ಸಂತರು ಆ ಹೊರಗಿನವರ ಉದ್ಧಟತನವನ್ನು ಸಹಿಸುವುದಿಲ್ಲ.
03232004a ಜಾನಾತಿ ಹ್ಯೇಷ ದುರ್ಬುದ್ಧಿರಸ್ಮಾನಿಹ ಚಿರೋಷಿತಾನ್।
03232004c ಸ ಏಷ ಪರಿಭೂಯಾಸ್ಮಾನಕಾರ್ಷೀದಿದಮಪ್ರಿಯಂ।।
ಈ ದುರ್ಬುದ್ಧಿ ಗಂಧರ್ವನು ನಾವು ಇಲ್ಲಿ ಬಹುಕಾಲದಿಂದ ಉಳಿದುಕೊಂಡಿದ್ದೇವೆ ಎಂದು ತಿಳಿದಿದ್ದಾನೆ. ಆದರೂ ಅವನು ನಮ್ಮನ್ನು ನಿರ್ಲಕ್ಷಿಸಿ ನಮಗೆ ಅಪ್ರಿಯವಾದುದನ್ನು ಮಾಡಿದ್ದಾನೆ.
03232005a ದುರ್ಯೋಧನಸ್ಯ ಗ್ರಹಣಾದ್ಗಂಧರ್ವೇಣ ಬಲಾದ್ರಣೇ।
03232005c ಸ್ತ್ರೀಣಾಂ ಬಾಹ್ಯಾಭಿಮರ್ಶಾಚ್ಚ ಹತಂ ಭವತಿ ನಃ ಕುಲಂ।।
ಗಂಧರ್ವರು ರಣದಲ್ಲಿ ಬಲವನ್ನುಪಯೋಗಿಸಿ ದುರ್ಯೋಧನನನ್ನು ಸೆರೆಹಿಡಿದುದರಿಂದ ಮತ್ತು ಹೊರಗಿನವರು ಸ್ತ್ರೀಯರನ್ನು ಅತಿಕ್ರಮಿಸಿರುವುದರಿಂದ ನಮ್ಮ ಕುಲಕ್ಕೆ ಪೆಟ್ಟು ಕೊಟ್ಟ ಹಾಗೆ ಆಗಲಿಲ್ಲವೇ?
03232006a ಶರಣಂ ಚ ಪ್ರಪನ್ನಾನಾಂ ತ್ರಾಣಾರ್ಥಂ ಚ ಕುಲಸ್ಯ ನಃ।
03232006c ಉತ್ತಿಷ್ಠಧ್ವಂ ನರವ್ಯಾಘ್ರಾಃ ಸಜ್ಜೀಭವತ ಮಾಚಿರಂ।।
ಶರಣು ಬಂದಿರುವವರನ್ನು ರಕ್ಷಿಸಲು ಮತ್ತು ಕುಲವನ್ನು ಉಳಿಸಲು ಎದ್ದೇಳು! ನರವ್ಯಾಘ್ರ! ಬೇಗನೇ ಸಿದ್ಧನಾಗು!
03232007a ಅರ್ಜುನಶ್ಚ ಯಮೌ ಚೈವ ತ್ವಂ ಚ ಭೀಮಾಪರಾಜಿತಃ।
03232007c ಮೋಕ್ಷಯಧ್ವಂ ಧಾರ್ತರಾಷ್ಟ್ರಂ ಹ್ರಿಯಮಾಣಂ ಸುಯೋಧನಂ।।
ಅರ್ಜುನ, ಯಮಳರು ಮತ್ತು ಅಪರಾಜಿತ ಭೀಮ ನೀನೂ ಕೂಡ ಧಾರ್ತರಾಷ್ಟ್ರ ಸುಯೋಧನನನ್ನು ಸೆರೆಯಿಂದ ಬಿಡುಗಡೆ ಮಾಡಿಸಬೇಕು.
03232008a ಏತೇ ರಥಾ ನರವ್ಯಾಘ್ರಾಃ ಸರ್ವಶಸ್ತ್ರಸಮನ್ವಿತಾಃ।
03232008c ಇಂದ್ರಸೇನಾದಿಭಿಃ ಸೂತೈಃ ಸಮ್ಯತಾಃ ಕನಕಧ್ವಜಾಃ।।
ನರವ್ಯಾಘ್ರರೇ! ಇಗೋ ಸರ್ವ ಶಸ್ತ್ರಗಳನ್ನೊಡಗೂಡಿದ, ಕನಕ ಧ್ವಜಗಳನ್ನು ಹೊಂದಿದ, ಇಂದ್ರಸೇನನೇ ಮೊದಲಾದ ಸೂತರು ನಡೆಸುವ ರಥಗಳಿವೆ.
03232009a ಏತಾನಾಸ್ಥಾಯ ವೈ ತಾತ ಗಂಧರ್ವಾನ್ಯೋದ್ಧುಮಾಹವೇ।
03232009c ಸುಯೋಧನಸ್ಯ ಮೋಕ್ಷಾಯ ಪ್ರಯತಧ್ವಮತಂದ್ರಿತಾಃ।।
ತಮ್ಮಂದಿರೇ! ಇವುಗಳನ್ನು ಏರಿ ಗಂಧರ್ವರೊಡನೆ ಯುದ್ಧಮಾಡಿ ಸುಯೋಧನನನ್ನು ಬಿಡುಗಡೆಗೊಳಿಸಲು ಎಡೆಬಿಡದೆ ಪ್ರಯತ್ನಿಸಿ.
03232010a ಯ ಏವ ಕಶ್ಚಿದ್ರಾಜನ್ಯಃ ಶರಣಾರ್ಥಮಿಹಾಗತಂ।
03232010c ಪರಂ ಶಕ್ತ್ಯಾಭಿರಕ್ಷೇತ ಕಿಂ ಪುನಸ್ತ್ವಂ ವೃಕೋದರ।।
ವೃಕೋದರ! ರಾಜನು ಯಾರೇ ಆದರೂ ಶರಣಾರ್ತಿಯಾಗಿ ಬಂದಿರುವವರನ್ನು ರಕ್ಷಿಸುವಾಗ ಪರಮ ಶಕ್ತಿಯುತನಾಗಿರುವ ನೀನು ಏಕೆ ರಕ್ಷಿಸುವುದಿಲ್ಲ?
03232011a ಕ ಇಹಾನ್ಯೋ ಭವೇತ್ತ್ರಾಣಮಭಿಧಾವೇತಿ ಚೋದಿತಃ।
03232011c ಪ್ರಾಂಜಲಿಂ ಶರಣಾಪನ್ನಂ ದೃಷ್ಟ್ವಾ ಶತ್ರುಮಪಿ ಧ್ರುವಂ।।
ಇಲ್ಲಿರುವ ಯಾರು ತಾನೇ ಬಿಡುಗಡೆ ಮಾಡು ಎಂದು ಪ್ರಚೋದನೆಗೊಳಪಟ್ಟು, ಅವನು ಹಿಂದೆ ಶತ್ರುವೇ ಆಗಿರಲಿ, ಈಗ ಕೈಮುಗಿದು ಶರಣು ಬಂದಾಗ, ಬೇರೆ ಮಾಡಿಯಾನು?
03232012a ವರಪ್ರದಾನಂ ರಾಜ್ಯಂ ಚ ಪುತ್ರಜನ್ಮ ಚ ಪಾಂಡವ।
03232012c ಶತ್ರೋಶ್ಚ ಮೋಕ್ಷಣಂ ಕ್ಲೇಶಾತ್ತ್ರೀಣಿ ಚೈಕಂ ಚ ತತ್ಸಮಂ।।
ಪಾಂಡವ! ವರಪ್ರದಾನ, ರಾಜ್ಯ, ಪುತ್ರಜನ್ಮ, ಶತ್ರುವನ್ನು ಕಷ್ಟದಿಂದ ಬಿಡುಗಡೆಮಾಡುವುದು ಇವುಗಳಲ್ಲಿ ಕೊನೆಯದು ಮೊದಲ ಮೂರಕ್ಕೆ ಸಮನಾದದ್ದು.
03232013a ಕಿಂ ಹ್ಯಭ್ಯಧಿಕಮೇತಸ್ಮಾದ್ಯದಾಪನ್ನಃ ಸುಯೋಧನಃ।
03232013c ತ್ವದ್ಬಾಹುಬಲಮಾಶ್ರಿತ್ಯ ಜೀವಿತಂ ಪರಿಮಾರ್ಗತಿ।।
ಸುಯೋಧನನು ಸಹಾಯವನ್ನು ಕೇಳುತ್ತಿದ್ದಾನೆ ಮತ್ತು ಅವನು ಜೀವಂತನಾಗಿರಲು ನಿನ್ನ ಬಾಹುಬಲವನ್ನು ಆಶ್ರಯಿಸಿದ್ದಾನೆ ಎನ್ನುವುದಕ್ಕಿಂದ ಹೆಚ್ಚಿನದು ಏನಿದೆ?
03232014a ಸ್ವಯಮೇವ ಪ್ರಧಾವೇಯಂ ಯದಿ ನ ಸ್ಯಾದ್ವೃಕೋದರ।
03232014c ವಿತತೋಽಯಂ ಕ್ರತುರ್ವೀರ ನ ಹಿ ಮೇಽತ್ರ ವಿಚಾರಣಾ।।
ವೃಕೋದರ! ವೀರ! ಈ ಯಜ್ಞವು ನಡೆಯದೇ ಇರುತ್ತಿದ್ದರೆ ಸ್ವಯಂ ನಾನೇ ಅವಸರಮಾಡಿ ಹೋಗುತ್ತಿದ್ದೆ. ಅದರಲ್ಲಿ ವಿಚಾರಮಾಡುವುದು ಏನೂ ಇಲ್ಲ.
03232015a ಸಾಮ್ನೈವ ತು ಯಥಾ ಭೀಮ ಮೋಕ್ಷಯೇಥಾಃ ಸುಯೋಧನಂ।
03232015c ತಥಾ ಸರ್ವೈರುಪಾಯೈಸ್ತ್ವಂ ಯತೇಥಾಃ ಕುರುನಂದನ।।
ಭೀಮ! ಕುರುನಂದನ! ಸಾಮದಿಂದಲೇ ಸುಯೋಧನನನ್ನು ಬಿಡುಗಡೆಗೊಳಿಸಲು ಎಲ್ಲ ಉಪಾಯಗಳನ್ನೂ ಬಳಸು.
03232016a ನ ಸಾಮ್ನಾ ಪ್ರತಿಪದ್ಯೇತ ಯದಿ ಗಂಧರ್ವರಾಡಸೌ।
03232016c ಪರಾಕ್ರಮೇಣ ಮೃದುನಾ ಮೋಕ್ಷಯೇಥಾಃ ಸುಯೋಧನಂ।।
ಆದರೆ ಸಾಮದಿಂದ ಗಂಧರ್ವರಾಜನು ಅವನನ್ನು ಹಿಂದಿರುಗಿಸದೇ ಇದ್ದರೆ ಮೃದುವಾದ ಪರಾಕ್ರಮವನ್ನು ಉಪಯೋಗಿಸಿ ಸುಯೋಧನನನ್ನು ಬಿಡುಗಡೆಗೊಳಿಸು.
03232017a ಅಥಾಸೌ ಮೃದುಯುದ್ಧೇನ ನ ಮುಂಚೇದ್ಭೀಮ ಕೌರವಾನ್।
03232017c ಸರ್ವೋಪಾಯೈರ್ವಿಮೋಚ್ಯಾಸ್ತೇ ನಿಗೃಹ್ಯ ಪರಿಪಂಥಿನಃ।।
ಭೀಮ! ಮೃದು ಯುದ್ಧಕ್ಕೂ ಅವನು ಕೌರವನನ್ನು ಬಿಡುಗಡೆಗೊಳಿಸದೇ ಇದ್ದರೆ ಸರ್ವ ಉಪಾಯಗಳಿಂದ ಶತ್ರುವನ್ನು ನಿಗ್ರಹಿಸಿ ಅವನನ್ನು ಬಿಡುಗಡೆಮಾಡಿ ಬಾ.
03232018a ಏತಾವದ್ಧಿ ಮಯಾ ಶಕ್ಯಂ ಸಂದೇಷ್ಟುಂ ವೈ ವೃಕೋದರ।
03232018c ವೈತಾನೇ ಕರ್ಮಣಿ ತತೇ ವರ್ತಮಾನೇ ಚ ಭಾರತ।।
ವೃಕೋದರ! ಭಾರತ! ನನ್ನ ಈ ಕರ್ಮಗಳು ನಡೆಯುವವರೆಗೆ ನಾನು ಈ ಆದೇಶವನ್ನು ನಿನಗೆ ಕೊಡಬಲ್ಲೆ.””
03232019 ವೈಶಂಪಾಯನ ಉವಾಚ।
03232019a ಅಜಾತಶತ್ರೋರ್ವಚನಂ ತಚ್ಚ್ರುತ್ವಾ ತು ಧನಂಜಯಃ।
03232019c ಪ್ರತಿಜಜ್ಞೇ ಗುರೋರ್ವಾಕ್ಯಂ ಕೌರವಾಣಾಂ ವಿಮೋಕ್ಷಣಂ।।
ವೈಶಂಪಾಯನನು ಹೇಳಿದನು: “ಅಜಾತಶತ್ರುವಿನ ಆ ಮಾತನ್ನು ಕೇಳಿದ ಧನಂಜಯನು ಕೌರವರನ್ನು ಬಿಡುಗಡೆಗೊಳಿಸುವ ಆ ಗುರುವಾಕ್ಯದಂತೆ ಈ ಪ್ರತಿಜ್ಞೆಯನ್ನು ಮಾಡಿದನು.
03232020 ಅರ್ಜುನ ಉವಾಚ।
03232020a ಯದಿ ಸಾಮ್ನಾ ನ ಮೋಕ್ಷ್ಯಂತಿ ಗಂಧರ್ವಾ ಧೃತರಾಷ್ಟ್ರಜಾನ್।
03232020c ಅದ್ಯ ಗಂಧರ್ವರಾಜಸ್ಯ ಭೂಮಿಃ ಪಾಸ್ಯತಿ ಶೋಣಿತಂ।।
ಅರ್ಜುನನು ಹೇಳಿದನು: “ಒಂದುವೇಳೆ ಗಂಧರ್ವನು ಸಾಮದಿಂದ ಧೃತರಾಷ್ಟ್ರನ ಮಕ್ಕಳನ್ನು ಬಿಡುಗಡೆ ಮಾಡದೇ ಇದ್ದರೆ ಇಂದು ಗಂಧರ್ವರಾಜನ ರಕ್ತವು ಭೂಮಿಯ ಮೇಲೆ ಬೀಳುತ್ತದೆ!””
03232021 ವೈಶಂಪಾಯನ ಉವಾಚ।
03232021a ಅರ್ಜುನಸ್ಯ ತು ತಾಂ ಶ್ರುತ್ವಾ ಪ್ರತಿಜ್ಞಾಂ ಸತ್ಯವಾದಿನಃ।
03232021c ಕೌರವಾಣಾಂ ತದಾ ರಾಜನ್ಪುನಃ ಪ್ರತ್ಯಾಗತಂ ಮನಃ।।
ವೈಶಂಪಾಯನನು ಹೇಳಿದನು: “ರಾಜನ್! ಸತ್ಯವಾದಿ ಅರ್ಜುನನ ಈ ಪ್ರತಿಜ್ಞೆಯನ್ನು ಕೇಳಿ ಕೌರವರ ಮನಸ್ಸು ಪುನಃ ಹಿಂದಿರುಗಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಮೋಚನಾನುಜ್ಞಾಯಾಯಾಂ ದ್ವಿತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಮೋಚನಾನುಜ್ಞೆಯಲ್ಲಿ ಇನ್ನೂರಾಮೂವತ್ತೆರಡನೆಯ ಅಧ್ಯಾಯವು.