231 ದುರ್ಯೋಧನಾದಿಹರಣಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಘೋಷಯಾತ್ರಾ ಪರ್ವ

ಅಧ್ಯಾಯ 231

ಸಾರ

ದುರ್ಯೋಧನ, ದುಃಶಾಸನ, ಮತ್ತು ಇತರ ಯೋಧರನ್ನೂ ರಾಜಪತ್ನಿಯರನ್ನೂ ಗಂಧರ್ವರು ಸೆರೆಹಿಡಿದು ಆಕಾಶಮಾರ್ಗದಲ್ಲಿ ಕೊಂಡೊಯ್ದುದು (1-12). ದುರ್ಯೋಧನನ ಅಮಾತ್ಯರು ಯುಧಿಷ್ಠಿರನಲ್ಲಿ ಬಂದು ಸಹಾಯ ಕೋರಿದಾಗ ಭೀಮನು ಚುಚ್ಚುಮಾತುಗಳಿಂದ ಮೂದಲಿಸಿದ್ದುದು (13-21).

03231001 ವೈಶಂಪಾಯನ ಉವಾಚ।
03231001a ಗಂಧರ್ವೈಸ್ತು ಮಹಾರಾಜ ಭಗ್ನೇ ಕರ್ಣೇ ಮಹಾರಥೇ।
03231001c ಸಂಪ್ರಾದ್ರವಚ್ಚಮೂಃ ಸರ್ವಾ ಧಾರ್ತರಾಷ್ಟ್ರಸ್ಯ ಪಶ್ಯತಃ।।

ವೈಶಂಪಾಯನನು ಹೇಳಿದನು: “ಮಹಾರಾಜ! ಗಂಧರ್ವರು ಮಹಾರಥಿ ಕರ್ಣನನ್ನು ಭಗ್ನಗೊಳಿಸಲು ಸೇನೆಯೆಲ್ಲವೂ ಧಾರ್ತರಾಷ್ಟ್ರನು ನೋಡುತ್ತಿದ್ದಂತೆಯೇ ಪಲಾಯನಗೈಯಿತು.

03231002a ತಾನ್ದೃಷ್ಟ್ವಾ ದ್ರವತಃ ಸರ್ವಾನ್ಧಾರ್ತರಾಷ್ಟ್ರಾನ್ಪರಾಙ್ಮುಖಾನ್।
03231002c ದುರ್ಯೋಧನೋ ಮಹಾರಾಜ ನಾಸೀತ್ತತ್ರ ಪರಾಙ್ಮುಖಃ।।

ಮಹಾರಾಜ! ಅವರೆಲ್ಲ ಧಾರ್ತರಾಷ್ಟ್ರರು ಓಡಿ ಹೋದುದನ್ನು ನೋಡಿ ದುರ್ಯೋಧನನು ಪಾರಾಂಙ್ಮುಖನಾಗದೇ ಅಲ್ಲಿಯೇ ನಿಂತನು.

03231003a ತಾಮಾಪತಂತೀಂ ಸಂಪ್ರೇಕ್ಷ್ಯ ಗಂಧರ್ವಾಣಾಂ ಮಹಾಚಮೂಂ।
03231003c ಮಹತಾ ಶರವರ್ಷೇಣ ಸೋಽಭ್ಯವರ್ಷದರಿಂದಮಃ।।

ಗಂಧರ್ವರ ಮಹಾಸೇನೆಯು ತನ್ನ ಮೇಲೆರಗುತ್ತಿದ್ದುದನ್ನು ನೋಡಿದ ಆ ಅರಿಂದಮನು ಅವರ ಮೇಲೆ ಮಹಾ ಶರವರ್ಷವನ್ನು ಸುರಿಸಿದನು.

03231004a ಅಚಿಂತ್ಯ ಶರವರ್ಷಂ ತು ಗಂಧರ್ವಾಸ್ತಸ್ಯ ತಂ ರಥಂ।
03231004c ದುರ್ಯೋಧನಂ ಜಿಘಾಂಸಂತಃ ಸಮಂತಾತ್ಪರ್ಯವಾರಯನ್।।

ಶರವರ್ಷವನ್ನು ಲಕ್ಷಿಸದೇ ಆ ಗಂಧರ್ವರು ದುರ್ಯೋಧನನನ್ನು ಸಂಹರಿಸುವ ಉದ್ದೇಶದಿಂದ ಎಲ್ಲ ಕಡೆಯಿಂದಲೂ ಅವನ ರಥವನ್ನು ಸುತ್ತುವರೆದರು.

03231005a ಯುಗಂ ಈಷಾಂ ವರೂಥಂ ಚ ತಥೈವ ಧ್ವಜಸಾರಥೀ।
03231005c ಅಶ್ವಾಂಸ್ತ್ರಿವೇಣುಂ ತಲ್ಪಂ ಚ ತಿಲಶೋಽಭ್ಯಹನನ್ರಥಂ।।

ನೊಗ, ಆವರಣ, ವರೂಥ, ಧ್ವಜ ಮತ್ತು ಸಾರಥಿ, ಕುದುರೆ, ತ್ರಿವೇಣು, ಮತ್ತು ರಥವನ್ನು ಎಳ್ಳಿನಷ್ಟು ಸಣ್ಣಗೆ ಪುಡಿಪುಡಿ ಮಾಡಿದರು.

03231006a ದುರ್ಯೋಧನಂ ಚಿತ್ರಸೇನೋ ವಿರಥಂ ಪತಿತಂ ಭುವಿ।
03231006c ಅಭಿದ್ರುತ್ಯ ಮಹಾಬಾಹುರ್ಜೀವಗ್ರಾಹಮಥಾಗ್ರಹೀತ್।।

ವಿರಥನಾಗಿ ದುರ್ಯೋಧನನು ಭೂಮಿಯ ಮೇಲೆ ಬೀಳಲು ಮಹಾಬಾಹು ಚಿತ್ರಸೇನನು ಓಡಿಬಂದು ಅವನನ್ನು ಸೆರೆ ಹಿಡಿದನು.

03231007a ತಸ್ಮಿನ್ಗೃಹೀತೇ ರಾಜೇಂದ್ರ ಸ್ಥಿತಂ ದುಃಶಾಸನಂ ರಥೇ।
03231007c ಪರ್ಯಗೃಹ್ಣಂತ ಗಂಧರ್ವಾಃ ಪರಿವಾರ್ಯ ಸಮಂತತಃ।।

ರಾಜೇಂದ್ರ! ಅವನು ಬಂಧಿಯಾಗಲು ರಥದಲ್ಲಿ ನಿಂತಿದ್ದ ದುಃಶಾಸನನ್ನು ಗಂಧರ್ವರು ಎಲ್ಲಕಡೆಯಿಂದ ಸುತ್ತುವರೆದು ಸೆರೆಹಿಡಿದರು.

03231008a ವಿವಿಂಶತಿಂ ಚಿತ್ರಸೇನಮಾದಾಯಾನ್ಯೇ ಪ್ರದುದ್ರುವುಃ।
03231008c ವಿಂದಾನುವಿಂದಾವಪರೇ ರಾಜದಾರಾಂಶ್ಚ ಸರ್ವಶಃ।।

ಇತರರು ಚಿತ್ರಸೇನನನ್ನು ಕರೆದುಕೊಂಡು ವಿವಿಂಶತಿಯ ಮೇಲೆ, ಇತರರು ವಿಂದ-ಅನುವಿಂದರ ಮೇಲೆ ಮತ್ತು ರಾಜಪತ್ನಿಯರೆಲ್ಲರ ಮೇಲೆ ಆಕ್ರಮಣ ಮಾಡಿದರು.

03231009a ಸೈನ್ಯಾಸ್ತು ಧಾರ್ತರಾಷ್ಟ್ರಸ್ಯ ಗಂಧರ್ವೈಃ ಸಮಭಿದ್ರುತಾಃ।
03231009c ಪೂರ್ವಂ ಪ್ರಭಗ್ನೈಃ ಸಹಿತಾಃ ಪಾಂಡವಾನಭ್ಯಯುಸ್ತದಾ।।

ಗಂಧರ್ವರಿಂದ ಹೊಡೆದೋಡಿಸಲ್ಪಟ್ಟ ಧಾರ್ತರಾಷ್ಟ್ರನ ಸೇನೆಯು ಮೊದಲೇ ಗಾಯಗೊಂಡವರ ಸಹಿತ ಪಾಂಡವರ ಬಳಿ ಹೋಯಿತು.

03231010a ಶಕಟಾಪಣವೇಶ್ಯಾಶ್ಚ ಯಾನಯುಗ್ಯಂ ಚ ಸರ್ವಶಃ।
03231010c ಶರಣಂ ಪಾಂಡವಾಂ ಜಗ್ಮುರ್ಹ್ರಿಯಮಾಣೇ ಮಹೀಪತೌ।।

ಅವರ ರಾಜರು ಬಂಧಿಗಳಾಗಲು ಮಾರುವ ಬಂಡಿಗಳು, ವೇಶ್ಯೆಯರು, ಯಾನ-ವಾಹನಗಳೆಲ್ಲವೂ ಪಾಂಡವರ ಶರಣು ಹೊಕ್ಕರು.

03231011a ಪ್ರಿಯದರ್ಶನೋ ಮಹಾಬಾಹುರ್ಧಾರ್ತರಾಷ್ಟ್ರೋ ಮಹಾಬಲಃ।
03231011c ಗಂಧರ್ವೈರ್ಹ್ರಿಯತೇ ರಾಜಾ ಪಾರ್ಥಾಸ್ತಮನುಧಾವತ।।

ಗಂಧರ್ವರು ಆ ಪ್ರಿಯದರ್ಶನ ಮಹಾಬಾಹು ಮಹಾಬಲ ರಾಜಾ ಧಾರ್ತರಾಷ್ಟ್ರನನ್ನು ಕೊಂಡೊಯ್ದರು ಮತ್ತು ಪಾರ್ಥರು ಅವನ ಹಿಂದೆಯೇ ಹೋದರು.

03231012a ದುಃಶಾಸನೋ ದುರ್ವಿಷಹೋ ದುರ್ಮುಖೋ ದುರ್ಜಯಸ್ತಥಾ।
03231012c ಬದ್ಧ್ವಾ ಹ್ರಿಯಂತೇ ಗಂಧರ್ವೈ ರಾಜದಾರಾಶ್ಚ ಸರ್ವಶಃ।।

ದುಃಶಾಸನ, ದುರ್ವಿಷಹ, ದುರ್ಮುಖ, ದುರ್ಜಯ ಮತ್ತು ರಾಜಪತ್ನಿಯರೆಲ್ಲರೂ ಗಂಧರ್ವರಿಂದ ಕಟ್ಟಲ್ಪಟ್ಟಿದ್ದರು.

03231013a ಇತಿ ದುರ್ಯೋಧನಾಮಾತ್ಯಾಃ ಕ್ರೋಶಂತೋ ರಾಜಗೃದ್ಧಿನಃ।
03231013c ಆರ್ತಾ ದೀನಸ್ವರಾಃ ಸರ್ವೇ ಯುಧಿಷ್ಠಿರಮುಪಾಗಮನ್।।

ಈ ರೀತಿ ದುರ್ಯೋಧನನ ಎಲ್ಲ ಅಮಾತ್ಯರು ತಮ್ಮ ರಾಜನಿಗೆ ಅರಸಿ ದೀನಸ್ವರದಲ್ಲಿ ಕೂಗುತ್ತಾ ಯುಧಿಷ್ಠಿರನಲ್ಲಿಗೆ ಬಂದರು.

03231014a ತಾಂಸ್ತಥಾ ವ್ಯಥಿತಾನ್ದೀನಾನ್ಭಿಕ್ಷಮಾಣಾನ್ಯುಧಿಷ್ಠಿರಂ।
03231014c ವೃದ್ಧಾನ್ದುರ್ಯೋಧನಾಮಾತ್ಯಾನ್ಭೀಮಸೇನೋಽಭ್ಯಭಾಷತ।।

ಆಗ ಯುಧಿಷ್ಠಿರನನ್ನು ಬೇಡುತ್ತಿದ್ದ ವ್ಯಥಿತ-ದೀನ ದುರ್ಯೋಧನನ ವೃದ್ಧ ಅಮಾತ್ಯರನ್ನುದ್ದೇಶಿಸಿ ಭೀಮಸೇನನು ಹೇಳಿದನು:

03231015a ಅನ್ಯಥಾ ವರ್ತಮಾನಾನಾಮರ್ಥೋ ಜಾತೋಽಯಮನ್ಯಥಾ।
03231015c ಅಸ್ಮಾಭಿರ್ಯದನುಷ್ಠೇಯಂ ಗಂಧರ್ವೈಸ್ತದನುಷ್ಠಿತಂ।।

“ನಾವೇ ಮಾಡಬೇಕಾದುದನ್ನು ಗಂಧರ್ವರು ಮಾಡಿದರೆಂದರೆ ತಪ್ಪು ಮಾಡಿದವರಿಗೆ ಶಿಕ್ಷೆ ದೊರೆದಂತಾಯಿತು!

03231016a ದುರ್ಮಂತ್ರಿತಮಿದಂ ತಾತ ರಾಜ್ಞೋ ದುರ್ದ್ಯೂತದೇವಿನಃ।
03231016c ದ್ವೇಷ್ಟಾರಮನ್ಯೇ ಕ್ಲೀಬಸ್ಯ ಪಾತಯಂತೀತಿ ನಃ ಶ್ರುತಂ।।

ಕೆಟ್ಟ ಸಲಹೆಯಿಂದ ರಾಜನು ಕೆಟ್ಟ ದ್ಯೂತದ ಆಟವನ್ನಾಡಿದನೆಂದೂ, ಹೇಡಿಗಳ ದ್ವೇಷಿಗಳನ್ನು ಇತರರು ಕೆಳಗುರಿಳಿಸುತ್ತಾರೆ ಎಂದೂ ಕೇಳಿದ್ದೇವೆ.

03231017a ತದಿದಂ ಕೃತಂ ನಃ ಪ್ರತ್ಯಕ್ಷಂ ಗಂಧರ್ವೈರತಿಮಾನುಷಂ।
03231017c ದಿಷ್ಟ್ಯಾ ಲೋಕೇ ಪುಮಾನಸ್ತಿ ಕಶ್ಚಿದಸ್ಮತ್ಪ್ರಿಯೇ ಸ್ಥಿತಃ।
03231017e ಯೇನಾಸ್ಮಾಕಂ ಹೃತೋ ಭಾರ ಆಸೀನಾನಾಂ ಸುಖಾವಹಃ।।

ಗಂಧರ್ವರ ಈ ಅಮಾನುಷ ಕೃತ್ಯವನ್ನು ನಾವು ಪ್ರತ್ಯಕ್ಷವಾಗಿ ನೋಡಿದೆವು. ಲೋಕದಲ್ಲಿ ನಮ್ಮ ಒಳ್ಳೆಯದನ್ನು ಬಯಸುವ ಪುರುಷರಿದ್ದಾರೆ ಮತ್ತು ನಾವು ಹತ್ತಿರವೇ ನಿಂತು ನೋಡುತ್ತಿರುವಾಗ ನಮ್ಮ ಭಾರವನ್ನು ಕಳೆದು ಸಂತೋಷವನ್ನು ತಂದಿದ್ದಾರೆಂದರೆ ನಮ್ಮ ಅದೃಷ್ಠವೇ ಸರಿ.

03231018a ಶೀತವಾತಾತಪಸಹಾಂಸ್ತಪಸಾ ಚೈವ ಕರ್ಶಿತಾನ್।
03231018c ಸಮಸ್ಥೋ ವಿಷಮಸ್ಥಾನ್ ಹಿ ದ್ರಷ್ಟುಮಿಚ್ಚತಿ ದುರ್ಮತಿಃ।।

ಸುಖವಾಗಿರುವ ಆ ದುರ್ಮತಿಯು ನಾವು ಕಷ್ಟದಲ್ಲಿರುವುದನ್ನು, ಛಳಿ, ಗಾಳಿ, ಬಿಸಿಲುಗಳಿಂದ ಬಳಲುವುದನ್ನು ಮತ್ತು ತಪಸ್ಸಿನಿಂದ ಸೋತಿರುವುದನ್ನು ನೋಡಲು ಬಯಸಿದ್ದನು.

03231019a ಅಧರ್ಮಚಾರಿಣಸ್ತಸ್ಯ ಕೌರವ್ಯಸ್ಯ ದುರಾತ್ಮನಃ।
03231019c ಯೇ ಶೀಲಮನುವರ್ತಂತೇ ತೇ ಪಶ್ಯಂತಿ ಪರಾಭವಂ।।

ಆ ಅಧರ್ಮಚಾರಿಣಿ ದುರಾತ್ಮ ಕೌರವನ ನಡತೆಯನ್ನು ಅನುಸರಿಸುವವರು ಪರಾಭವವನ್ನು ಕಾಣುತ್ತಾರೆ.

03231020a ಅಧರ್ಮೋ ಹಿ ಕೃತಸ್ತೇನ ಯೇನೈತದುಪಶಿಕ್ಷಿತಂ।
03231020c ಅನೃಶಂಸಾಸ್ತು ಕೌಂತೇಯಾಸ್ತಸ್ಯಾಧ್ಯಕ್ಷಾನ್ಬ್ರವೀಮಿ ವಃ।।

ಅವನ ಅಧರ್ಮಕ್ಕಾಗಿಯೇ ಅವನು ಈ ರೀತಿಯ ಶಿಕ್ಷೆಗೊಳಗಾಗಿದ್ದಾನೆ. ಆ ಕ್ರೂರಿ ಕೌರವನಿಗೆ ನೀವೇ ಸಾಕ್ಷಿಗಳಾಗಿರುವಿರಿ ಎಂದು ಹೇಳುತ್ತೇನೆ.”

03231021a ಏವಂ ಬ್ರುವಾಣಂ ಕೌಂತೇಯಂ ಭೀಮಸೇನಮಮರ್ಷಣಂ।
03231021c ನ ಕಾಲಃ ಪರುಷಸ್ಯಾಯಮಿತಿ ರಾಜಾಭ್ಯಭಾಷತ।।

ಈ ರೀತಿ ಕೋಪದಿಂದ ಮಾತನಾಡುತ್ತಿರುವ ಕೌಂತೇಯ ಭೀಮಸೇನನಿಗೆ ರಾಜನು “ಇದು ಗಡುಸಾಗಿರುವ ಕಾಲವಲ್ಲ” ಎಂದು ನುಡಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಾದಿಹರಣೇ ಏಕತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಾದಿಹರಣದಲ್ಲಿ ಇನ್ನೂರಾಮೂವತ್ತೊಂದನೆಯ ಅಧ್ಯಾಯವು.