230 ಕರ್ಣಪರಾಭವಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಘೋಷಯಾತ್ರಾ ಪರ್ವ

ಅಧ್ಯಾಯ 230

ಸಾರ

ದುರ್ಯೋಧನನು ಸೇನೆಯೊಂದಿಗೆ ದ್ವೈತವನವನ್ನು ಬಲವಂತ ಮಾಡಿ ಪ್ರವೇಶಿಸಲು ಗಂಧರ್ವರೊಡನೆ ನಡೆದ ಯುದ್ಧ (1-20). ಕೋಪಗೊಂಡ ಗಂಧರ್ವರಾಜ ಚಿತ್ರಸೇನನು ಮಾಯಾಯುದ್ಧವನ್ನು ಪ್ರಾರಂಭಿಸಿದುದು; ಕರ್ಣನು ಪಲಾಯನ ಮಾಡಿದುದು (21-31).

03230001 ವೈಶಂಪಾಯನ ಉವಾಚ।
03230001a ತತಸ್ತೇ ಸಹಿತಾಃ ಸರ್ವೇ ದುರ್ಯೋಧನಮುಪಾಗಮನ್।
03230001c ಅಬ್ರುವಂಶ್ಚ ಮಹಾರಾಜ ಯದೂಚುಃ ಕೌರವಂ ಪ್ರತಿ।।

ವೈಶಂಪಾಯನನು ಹೇಳಿದನು: “ಮಹಾರಾಜ! ಅವರೆಲ್ಲರೂ ಒಟ್ಟಿಗೆ ದುರ್ಯೋಧನನ ಬಳಿಸಾರಿ ಅವರು ಕೌರವನ ಕುರಿತು ಹೇಳಿದುದನ್ನು ವರದಿಮಾಡಿದರು.

03230002a ಗಂಧರ್ವೈರ್ವಾರಿತೇ ಸೈನ್ಯೇ ಧಾರ್ತರಾಷ್ಟ್ರಃ ಪ್ರತಾಪವಾನ್।
03230002c ಅಮರ್ಷಪೂರ್ಣಃ ಸೈನ್ಯಾನಿ ಪ್ರತ್ಯಭಾಷತ ಭಾರತ।।

ಭಾರತ! ಗಂಧರ್ವರಿಂದ ಸೇನೆಯು ತಡೆಯಲ್ಪಟ್ಟಿತು ಎಂದು ಕೇಳಿ ಪ್ರತಾಪಿ ಧಾರ್ತರಾಷ್ಟ್ರನು ಸಿಟ್ಟಿನಿಂದ ಸೇನೆಗೆ ಉತ್ತರಿಸಿದನು:

03230003a ಶಾಸತೈನಾನಧರ್ಮಜ್ಞಾನ್ಮಮ ವಿಪ್ರಿಯಕಾರಿಣಃ।
03230003c ಯದಿ ಪ್ರಕ್ರೀಡಿತೋ ದೇವೈಃ ಸರ್ವೈಃ ಸಹ ಶತಕ್ರತುಃ।।

“ಎಲ್ಲ ದೇವತೆಗಳೊಂದಿಗೆ ಶತಕ್ರತುವೇ ಆಡುತ್ತಿದ್ದರೂ ಧರ್ಮವನ್ನು ತಿಳಿಯದೇ ನನಗೆ ಅಪ್ರಿಯವಾದುದನ್ನು ಮಾಡುವ ಅವರನ್ನು ಶಿಕ್ಷಿಸಿ.”

03230004a ದುರ್ಯೋಧನವಚಃ ಶ್ರುತ್ವಾ ಧಾರ್ತರಾಷ್ಟ್ರಾ ಮಹಾಬಲಾಃ।
03230004c ಸರ್ವ ಏವಾಭಿಸಮ್ನದ್ಧಾ ಯೋಧಾಶ್ಚಾಪಿ ಸಹಸ್ರಶಃ।।

ದುರ್ಯೋಧನನ ಮಾತನ್ನು ಕೇಳಿ ಎಲ್ಲ ಮಹಾಬಲಶಾಲಿ ಧಾರ್ತರಾಷ್ಟ್ರರೂ ಸಹಸ್ರಾರು ಯೋಧರೂ ಸನ್ನದ್ಧರಾದರು.

03230005a ತತಃ ಪ್ರಮಥ್ಯ ಗಂಧರ್ವಾಂಸ್ತದ್ವನಂ ವಿವಿಶುರ್ಬಲಾತ್।
03230005c ಸಿಂಹನಾದೇನ ಮಹತಾ ಪೂರಯಂತೋ ದಿಶೋ ದಶ।।

ಅವರು ಗಂಧರ್ವರನ್ನು ಸದೆಬಡಿದು, ಹತ್ತುದಿಕ್ಕುಗಳನ್ನೂ ಮಹಾ ಸಿಂಹನಾದದಿಂದ ತುಂಬಿಸಿ, ಬಲಾತ್ಕಾರವಾಗಿ ಆ ವನವನ್ನು ಪ್ರವೇಶಿಸಿದರು.

03230006a ತತೋಽಪರೈರವಾರ್ಯಂತ ಗಂಧರ್ವೈಃ ಕುರುಸೈನಿಕಾಃ।
03230006c ತೇ ವಾರ್ಯಮಾಣಾ ಗಂಧರ್ವೈಃ ಸಾಮ್ನೈವ ವಸುಧಾಧಿಪ।
03230006e ತಾನನಾದೃತ್ಯ ಗಂಧರ್ವಾಂಸ್ತದ್ವನಂ ವಿವಿಶುರ್ಮಹತ್।।

ವಸುಧಾಧಿಪ! ಇತರ ಗಂಧರ್ವರು ಕುರುಸೈನಿಕರನ್ನು ತಡೆಯುತ್ತಿದ್ದರು; ಗಂಧರ್ವರು ಅವರನ್ನು ಸಾಮದಿಂದ ತಡೆಯುತ್ತಿದ್ದರು. ಆದರೆ ಅವರು ಗಂಧರ್ವರನ್ನು ಅನಾದರಿಸಿ ಆ ಮಹಾ ವನವನ್ನು ಪ್ರವೇಶಿಸಿದರು.

03230007a ಯದಾ ವಾಚಾ ನ ತಿಷ್ಠಂತಿ ಧಾರ್ತರಾಷ್ಟ್ರಾಃ ಸರಾಜಕಾಃ।
03230007c ತತಸ್ತೇ ಖೇಚರಾಃ ಸರ್ವೇ ಚಿತ್ರಸೇನೇ ನ್ಯವೇದಯನ್।।

ರಾಜರೊಂದಿಗೆ ಧಾರ್ತರಾಷ್ಟ್ರರು ಅವರ ಮಾತಿನಂತೆ ನಿಲ್ಲದಿದ್ದಾಗ ಅವರೆಲ್ಲರೂ ಆಕಾಶಕ್ಕೇರಿ ಚಿತ್ರಸೇನನಿಗೆ ನಿವೇದಿಸಿದರು.

03230008a ಗಂಧರ್ವರಾಜಸ್ತಾನ್ಸರ್ವಾನಬ್ರವೀತ್ಕೌರವಾನ್ ಪ್ರತಿ।
03230008c ಅನಾರ್ಯಾಂ ಶಾಸತೇತ್ಯೇವಂ ಚಿತ್ರಸೇನೋಽತ್ಯಮರ್ಷಣಃ।।

ಗಂಧರ್ವರಾಜ ಚಿತ್ರಸೇನನು ಕೋಪದಿಂದ ಕೌರವರ ಕುರಿತು “ಆ ಅನಾರ್ಯರನ್ನು ಶಿಕ್ಷಿಸಿ!” ಎಂದು ಅವರೆಲ್ಲರಿಗೂ ಹೇಳಿದನು.

03230009a ಅನುಜ್ಞಾತಾಸ್ತು ಗಂಧರ್ವಾಶ್ಚಿತ್ರಸೇನೇನ ಭಾರತ।
03230009c ಪ್ರಗೃಹೀತಾಯುಧಾಃ ಸರ್ವೇ ಧಾರ್ತರಾಷ್ಟ್ರಾನಭಿದ್ರವನ್।।

ಭಾರತ! ಚಿತ್ರಸೇನನಿಂದ ಹೀಗೆ ಅನುಜ್ಞೆಗೊಳಲ್ಪಟ್ಟ ಗಂಧರ್ವರು ಎಲ್ಲರೂ ಆಯುಧಗಳನ್ನು ಹಿಡಿದು ಧಾರ್ತರಾಷ್ಟ್ರರ ಮೇಲೆ ಧಾಳಿ ಮಾಡಿದರು.

03230010a ತಾನ್ದೃಷ್ಟ್ವಾ ಪತತಃ ಶೀಘ್ರಾನ್ಗಂಧರ್ವಾನುದ್ಯತಾಯುಧಾನ್।
03230010c ಸರ್ವೇ ತೇ ಪ್ರಾದ್ರವನ್ಸಂಖ್ಯೇ ಧಾರ್ತರಾಷ್ಟ್ರಸ್ಯ ಪಶ್ಯತಃ।।

ಆಯುಧಗಳನ್ನು ಹಿಡಿದು ಶೀಘ್ರವಾಗಿ ಮೇಲೆ ಬೀಳುತ್ತಿರುವ ಗಂಧರ್ವರನ್ನು ನೋಡಿ ಸೇನೆಯಲ್ಲಿ ಎಲ್ಲರೂ ಧಾರ್ತರಾಷ್ಟ್ರನು ನೋಡುತ್ತಿದ್ದಂತೆಯೇ ಪಲಾಯನ ಮಾಡಿದರು.

03230011a ತಾನ್ದೃಷ್ಟ್ವಾ ದ್ರವತಃ ಸರ್ವಾನ್ಧಾರ್ತರಾಷ್ಟ್ರಾನ್ಪರಾಙ್ಮುಖಾನ್।
03230011c ವೈಕರ್ತನಸ್ತದಾ ವೀರೋ ನಾಸೀತ್ತತ್ರ ಪರಾಙ್ಮುಖಃ।।

ಆ ಎಲ್ಲ ಧಾರ್ತರಾಷ್ಟ್ರರೂ ಪಾರಾಙ್ಮುಖರಾಗಿ ಓಡಿದುದನ್ನು ನೋಡಿದ ವೀರ ವೈಕರ್ತನನು ಪರಾಙ್ಮುಖನಾಗಲಿಲ್ಲ.

03230012a ಆಪತಂತೀಂ ತು ಸಂಪ್ರೇಕ್ಷ್ಯ ಗಂಧರ್ವಾಣಾಂ ಮಹಾಚಮೂಂ।
03230012c ಮಹತಾ ಶರವರ್ಷೇಣ ರಾಧೇಯಃ ಪ್ರತ್ಯವಾರಯತ್।।

ಗಂಧರ್ವರ ಆ ಮಹಾಸೇನೆಯು ಕೆಳಗಿಳಿಯುತ್ತಿದ್ದುದನ್ನು ನೋಡಿ ರಾಧೇಯನು ಮಹಾ ಶರವರ್ಷದಿಂದ ಅವರನ್ನು ತಡೆದನು.

03230013a ಕ್ಷುರಪ್ರೈರ್ವಿಶಿಖೈರ್ಭಲ್ಲೈರ್ವತ್ಸದಂತೈಸ್ತಥಾಯಸೈಃ।
03230013c ಗಂಧರ್ವಾಂ ಶತಶೋಽಭ್ಯಘ್ನಽಲ್ಲಘುತ್ವಾತ್ಸೂತನಂದನಃ।।

ಸೂತನಂದನನು ಅತಿ ಹರಿತವಾದ, ಕರಡಿಯ ಕರುವಿನ ಹಲ್ಲಿನಿಂದ ಮತ್ತು ಉಕ್ಕಿನಿಂದ ತಯಾರಿಸಿದ ಬಾಣಗಳಿಂದ, ತನ್ನ ಲಘುತ್ವದಿಂದ ನೂರಾರು ಗಂಧರ್ವರನ್ನು ಗಾಯಗೊಳಿಸಿದನು.

03230014a ಪಾತಯನ್ನುತ್ತಮಾಂಗಾನಿ ಗಂಧರ್ವಾಣಾಂ ಮಹಾರಥಃ।
03230014c ಕ್ಷಣೇನ ವ್ಯಧಮತ್ಸರ್ವಾಂ ಚಿತ್ರಸೇನಸ್ಯ ವಾಹಿನೀಂ।।

ಗಂಧರ್ವರ ಶಿರಗಳನ್ನು ಉರುಳಿಸುತ್ತಾ ಆ ಮಹಾರಥಿಯು ಕ್ಷಣದಲ್ಲಿ ಚಿತ್ರಸೇನನ ಆ ವಾಹಿನಿಯನ್ನು ಚದುರಿಸಿ ಒಡೆದನು.

03230015a ತೇ ವಧ್ಯಮಾನಾ ಗಂಧರ್ವಾಃ ಸೂತಪುತ್ರೇಣ ಧೀಮತಾ।
03230015c ಭೂಯ ಏವಾಭ್ಯವರ್ತಂತ ಶತಶೋಽಥ ಸಹಸ್ರಶಃ।।

ಧೀಮಂತ ಸೂತಪುತ್ರನಿಂದ ಹೀಗೆ ಗಂಧರ್ವರು ವಧಿಸಲ್ಪಡಲು, ನೂರಾರು ಸಹಸ್ರಾರು ಸಂಖ್ಯೆಗಳಲ್ಲಿ ಅವರು ಪುನಃ ಧಾವಿಸಿ ಬಂದರು.

03230016a ಗಂಧರ್ವಭೂತಾ ಪೃಥಿವೀ ಕ್ಷಣೇನ ಸಮಪದ್ಯತ।
03230016c ಆಪತದ್ಭಿರ್ಮಹಾವೇಗೈಶ್ಚಿತ್ರಸೇನಸ್ಯ ಸೈನಿಕೈಃ।।

ಕ್ಷಣಮಾತ್ರದಲ್ಲಿ ಪೃಥ್ವಿಯು ಮಹಾವೇಗದಿಂದ ಮೇಲೆ ಬೀಳುತ್ತಿರುವ ಚಿತ್ರಸೇನನ ಸೈನಿಕರಿಂದ ಗಂಧರ್ವಭೂತವಾಯಿತು.

03230017a ಅಥ ದುರ್ಯೋಧನೋ ರಾಜಾ ಶಕುನಿಶ್ಚಾಪಿ ಸೌಬಲಃ।
03230017c ದುಃಶಾಸನೋ ವಿಕರ್ಣಶ್ಚ ಯೇ ಚಾನ್ಯೇ ಧೃತರಾಷ್ಟ್ರಜಾಃ।
03230017e ನ್ಯಹನಂಸ್ತತ್ತದಾ ಸೈನ್ಯಂ ರಥೈರ್ಗಗರುಡನಿಸ್ವನೈಃ।।

ಅನಂತರ ಗರುಡನಂತೆ ಕಿರುಚಿತ್ತಿರುವ ಆ ಸೇನೆಯ ಮೇಲೆ ರಥಗಳಿಂದ ರಾಜ ದುರ್ಯೋಧನ, ಸೌಬಲ ಶಕುನಿ, ದುಃಶಾಸನ, ವಿಕರ್ಣ ಮತ್ತು ಧೃತರಾಷ್ಟ್ರನ ಇತರ ಮಕ್ಕಳು ಆಕ್ರಮಣ ಮಾಡಿದರು.

03230018a ಭೂಯಶ್ಚ ಯೋಧಯಾಮಾಸುಃ ಕೃತ್ವಾ ಕರ್ಣಮಥಾಗ್ರತಃ।
03230018c ಮಹತಾ ರಥಘೋಷೇಣ ಹಯಚಾರೇಣ ಚಾಪ್ಯುತ।
03230018e ವೈಕರ್ತನಂ ಪರೀಪ್ಸಂತೋ ಗಂಧರ್ವಾನ್ಸಮವಾರಯನ್।।

ಮತ್ತೊಮ್ಮೆ ಕರ್ಣನನ್ನು ಮುಂದಿರಿಸಿಕೊಂಡು ಯುದ್ಧಮಾಡಿ, ವೈಕರ್ತನನನ್ನು ಬೆಂಬಲಿಸುತ್ತಾ, ಮಹಾ ರಥಘೋಷದಿಂದ ಮತ್ತು ಕುದುರೆಗಳ ತುಳಿತದಿಂದ ಗಂಧರ್ವರನ್ನು ತಡೆದರು.

03230019a ತತಃ ಸಮ್ನ್ಯಪತನ್ಸರ್ವೇ ಗಂಧರ್ವಾಃ ಕೌರವೈಃ ಸಹ।
03230019c ತದಾ ಸುತುಮುಲಂ ಯುದ್ಧಮಭವಲ್ಲೋಮಹರ್ಷಣಂ।।

ಆಗ ಗಂಧರ್ವರೆಲ್ಲರೂ ಕೌರವರ ಮೇಲೆರಗಿದರು ಮತ್ತು ಅಲ್ಲಿ ಮೈನವಿರೇಳಿಸುವ ಮಹಾ ತುಮುಲ ಯುದ್ದವು ನಡೆಯಿತು.

03230020a ತತಸ್ತೇ ಮೃದವೋಽಭೂವನ್ಗಂಧರ್ವಾಃ ಶರಪೀಡಿತಾಃ।
03230020c ಉಚ್ಚುಕ್ರುಶುಶ್ಚ ಕೌರವ್ಯಾ ಗಂಧರ್ವಾನ್ಪ್ರೇಕ್ಷ್ಯ ಪೀಡಿತಾನ್।।

ಆಗ ಶರಪೀಡಿತರಾದ ಗಂಧರ್ವರು ಸ್ವಲ್ಪ ಮೃದುವಾಗಲು ಪೀಡಿತರಾದ ಗಂಧರ್ವರನ್ನು ನೋಡಿ ಕೌರವರು ಜೋರಾಗಿ ಕೂಗಿದರು.

03230021a ಗಂಧರ್ವಾಂಸ್ತ್ರಾಸಿತಾನ್ದೃಷ್ಟ್ವಾ ಚಿತ್ರಸೇನೋಽತ್ಯಮರ್ಷಣಃ।
03230021c ಉತ್ಪಪಾತಾಸನಾತ್ಕ್ರುದ್ಧೋ ವಧೇ ತೇಷಾಂ ಸಮಾಹಿತಃ।।

ಗಂಧರ್ವರು ಹಿಂಜರಿಯುತ್ತಿದ್ದನ್ನು ನೋಡಿ ರೋಷಗೊಂಡ ಚಿತ್ರಸೇನನು ಕೋಪದಿಂದ ಅವರೆಲ್ಲರನ್ನೂ ಒಟ್ಟಿಗೇ ಸಂಹರಿಸಲು ಆಸನದಿಂದ ಮೇಲೆದ್ದನು.

03230022a ತತೋ ಮಾಯಾಸ್ತ್ರಮಾಸ್ಥಾಯ ಯುಯುಧೇ ಚಿತ್ರಮಾರ್ಗವಿತ್।
03230022c ತಯಾಮುಹ್ಯಂತ ಕೌರವ್ಯಾಶ್ಚಿತ್ರಸೇನಸ್ಯ ಮಾಯಯಾ।।

ಆಗ ಅವನು ಮಾಯಾಸ್ತ್ರವನ್ನು ಬಳಸಿ ಚಿತ್ರಮಾರ್ಗದಲ್ಲಿ ಯುದ್ಧಮಾಡಿದನು. ಚಿತ್ರಸೇನನ ಮಾಯೆಯು ಕೌರವರನ್ನು ಮೋಸಗೊಳಿಸಿತು.

03230023a ಏಕೈಕೋ ಹಿ ತದಾ ಯೋಧೋ ಧಾರ್ತರಾಷ್ಟ್ರಸ್ಯ ಭಾರತ।
03230023c ಪರ್ಯವರ್ತತ ಗಂಧರ್ವೈರ್ದಶಭಿರ್ದಶಭಿಃ ಸಹ।।

ಭಾರತ! ಧಾರ್ತರಾಷ್ಟ್ರನ ಪ್ರತಿಯೊಬ್ಬ ಯೋಧನನ್ನೂ ಹತ್ತು ಹತ್ತು ಮಂದಿ ಗಂಧರ್ವರು ಸುತ್ತುವರೆದು ತಡೆದರು.

03230024a ತತಃ ಸಂಪೀಡ್ಯಮಾನಾಸ್ತೇ ಬಲೇನ ಮಹತಾ ತದಾ।
03230024c ಪ್ರಾದ್ರವಂತ ರಣೇ ಭೀತಾ ಯತ್ರ ರಾಜಾ ಯುಧಿಷ್ಠಿರಃ।।

ಆ ಮಹಾಬಲದಿಂದ ಪೀಡಿತರಾದ ಅವರು ರಣದಲ್ಲಿ ಭೀತಿಗೊಂಡು ರಾಜಾ ಯುಧಿಷ್ಠಿರನಿದ್ದಲ್ಲಿಗೆ ಓಡಿಹೋದರು.

03230025a ಭಜ್ಯಮಾನೇಷ್ವನೀಕೇಷು ಧಾರ್ತರಾಷ್ಟ್ರೇಷು ಸರ್ವಶಃ।
03230025c ಕರ್ಣೋ ವೈಕರ್ತನೋ ರಾಜಂಸ್ತಸ್ಥೌ ಗಿರಿರಿವಾಚಲಃ।।

ರಾಜನ್! ಧಾರ್ತರಾಷ್ಟ್ರರೆಲ್ಲರೂ ಪೀಡಿತರಾಗಿರಲು ವೈಕರ್ತನ ಕರ್ಣನು ಗಿರಿಯಂತೆ ಅಚಲವಾಗಿದ್ದನು.

03230026a ದುರ್ಯೋಧನಶ್ಚ ಕರ್ಣಶ್ಚ ಶಕುನಿಶ್ಚಾಪಿ ಸೌಬಲಃ।
03230026c ಗಂಧರ್ವಾನ್ಯೋಧಯಾಂ ಚಕ್ರುಃ ಸಮರೇ ಭೃಶವಿಕ್ಷತಾಃ।।

ಚೆನ್ನಾಗಿ ಗಾಯಗೊಂಡಿದ್ದರೂ ದುರ್ಯೋಧನ, ಕರ್ಣ ಮತ್ತು ಸೌಬಲ ಶಕುನಿಯರು ಸಮರದಲ್ಲಿ ಗಂಧರ್ವರೊಡನೆ ಹೋರಾಡಿದರು.

03230027a ಸರ್ವ ಏವ ತು ಗಂಧರ್ವಾಃ ಶತಶೋಽಥ ಸಹಸ್ರಶಃ।
03230027c ಜಿಘಾಂಸಮಾನಾಃ ಸಹಿತಾಃ ಕರ್ಣಮಭ್ಯದ್ರವನ್ರಣೇ।।

ನೂರಾರು ಸಹಸ್ರಾರು ಗಂಧರ್ವರೆಲ್ಲರೂ ಒಟ್ಟಿಗೇ ಅವನನ್ನು ಕೊಲ್ಲುವ ಉದ್ದೇಶದಿಂದ ರಣದಲ್ಲಿ ಕರ್ಣನ ಮೇಲೆ ಎರಗಿದರು.

03230028a ಅಸಿಭಿಃ ಪಟ್ಟಿಶೈಃ ಶೂಲೈರ್ಗದಾಭಿಶ್ಚ ಮಹಾಬಲಾಃ।
03230028c ಸೂತಪುತ್ರಂ ಜಿಘಾಂಸಂತಃ ಸಮಂತಾತ್ಪರ್ಯವಾರಯನ್।।

ಎಲ್ಲಕಡೆಯಿಂದಲೂ ಸುತ್ತುವರೆದು ಸೂತಪುತ್ರನನ್ನು ಖಡ್ಗಗಳಿಂದ, ಪಟ್ಟಿಶಗಳಿಂದ, ಶೂಲಗಳಿಂದ ಮತ್ತು ಗದೆಗಳಿಂದ ಆ ಮಹಾಬಲರು ಹೊಡೆದರು.

03230029a ಅನ್ಯೇಽಸ್ಯ ಯುಗಮಚ್ಚಿಂದನ್ಧ್ವಜಮನ್ಯೇ ನ್ಯಪಾತಯನ್।
03230029c ಈಷಾಮನ್ಯೇ ಹಯಾನನ್ಯೇ ಸೂತಮನ್ಯೇ ನ್ಯಪಾತಯನ್।।

ಕೆಲವರು ನೊಗವನ್ನು ಮುರಿದರು, ಅನ್ಯರು ಧ್ವಜವನ್ನು ಕೆಳಗಿಳಿಸಿದರು, ಇನ್ನೂ ಕೆಲವರು ಕುದುರೆಗಳನ್ನು ಮತ್ತು ಇತರರು ಸೂತನನ್ನು ಕೆಳಗುರುಳಿಸಿದರು.

03230030a ಅನ್ಯೇ ಚತ್ರಂ ವರೂಥಂ ಚ ಬಂಧುರಂ ಚ ತಥಾಪರೇ।
03230030c ಗಂಧರ್ವಾ ಬಹುಸಾಹಸ್ರಾಃ ಖಂಡಶೋಽಭ್ಯಹನನ್ರಥಂ।।

ಕೆಲವರು ಛತ್ರವನ್ನು ಮತ್ತು ವರೂಥವನ್ನು ಇನ್ನು ಕೆಲವರು ಬಂಧುರವನ್ನು ಹೀಗೆ ಬಹಳ ಸಹಸ್ರ ಗಂಧರ್ವರು ಅವನ ರಥವನ್ನು ತುಂಡು ತುಂಡು ಮಾಡಿದರು.

03230031a ತತೋ ರಥಾದವಪ್ಲುತ್ಯ ಸೂತಪುತ್ರೋಽಸಿಚರ್ಮಭೃತ್।
03230031c ವಿಕರ್ಣರಥಮಾಸ್ಥಾಯ ಮೋಕ್ಷಾಯಾಶ್ವಾನಚೋದಯತ್।।

ಆಗ ಸೂತಪುತ್ರನು ಖಡ್ಗ ತುಮುರಗಳನ್ನು ಹಿಡಿದು ಹಾರಿ ವಿಕರ್ಣನ ರಥದ ಮೇಲೆ ಕುಳಿತು ತಪ್ಪಿಸಿಕೊಳ್ಳಲು ಕುದುರೆಗಳನ್ನು ಪ್ರಚೋದಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಕರ್ಣಪರಾಭವೇ ತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಕರ್ಣಪರಾಭವದಲ್ಲಿ ಇನ್ನೂರಾಮೂವತ್ತನೆಯ ಅಧ್ಯಾಯವು.