ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 229
ಸಾರ
ದುರ್ಯೋಧನನು ಪರಮ ವಿಜೃಂಭಣೆಯಿಂದ ದ್ವೈತವನದ ಸರೋವರದ ಬಳಿ ಬಂದು, ಕ್ರೀಡಾಭವನವನ್ನು ನಿರ್ಮಿಸಲು ಸೈನಿಕರಿಗೆ ಆಜ್ಞಾಪಿಸಿದುದು (1-16). ಅಲ್ಲಿಗೆ ಮೊದಲೇ ಕ್ರೀಡೆಯಾಡಲು ಅಪ್ಸರೆಯರು ಮತ್ತು ದೇವಪುತ್ರರೊಡನೆ ಬಂದಿದ್ದ ಗಂಧರ್ವರಾಜನ ಸೈನಿಕರು ದುರ್ಯೋಧನನ ಸೈನಿಕರನ್ನು ತಡೆದುದು (17-20). ಗಂಧರ್ವರ ಬೆದರಿಕೆಗೆ ಹೆದರಿ ದುರ್ಯೋಧನನ ಸೇನೆಯು ಪಲಾಯನ ಮಾಡಿದುದು (21-29).
03229001 ವೈಶಂಪಾಯನ ಉವಾಚ।
03229001a ಅಥ ದುರ್ಯೋಧನೋ ರಾಜಾ ತತ್ರ ತತ್ರ ವನೇ ವಸನ್।
03229001c ಜಗಾಮ ಘೋಷಾನಭಿತಸ್ತತ್ರ ಚಕ್ರೇ ನಿವೇಶನಂ।।
ವೈಶಂಪಾಯನನು ಹೇಳಿದನು: “ವನದಲ್ಲಿ ಅಲ್ಲಲ್ಲಿ ವಾಸಿಸುತ್ತಾ ರಾಜ ದುರ್ಯೋಧನನು ಘೋಷಗಳಲ್ಲಿಗೆ ಬಂದು ಅಲ್ಲಿ ಬೀಡು ಬಿಟ್ಟನು.
03229002a ರಮಣೀಯೇ ಸಮಾಜ್ಞಾತೇ ಸೋದಕೇ ಸಮಹೀರುಹೇ।
03229002c ದೇಶೇ ಸರ್ವಗುಣೋಪೇತೇ ಚಕ್ರುರಾವಸಥಂ ನರಾಃ।।
ಸೇವಕರು ಅವನಿಗೆ ರಮಣೀಯವಾದ ವಿಶಾಲ ಪ್ರದೇಶದಲ್ಲಿ, ಮರಗಿಡಗಳಿರುವಲ್ಲಿ, ನೀರಿನ ಸೌಲಭ್ಯವಿರುವಲ್ಲಿ, ಮತ್ತು ಅವರ ಎಲ್ಲ ಬಯಕೆಗಳನ್ನೂ ಪೂರೈಸಬಲ್ಲಲ್ಲಿ ಬಿಡದಿಯನ್ನು ನಿರ್ಮಿಸಿದರು.
03229003a ತಥೈವ ತತ್ಸಮೀಪಸ್ಥಾನ್ ಪೃಥಗಾವಸಥಾನ್ಬಹೂನ್।
03229003c ಕರ್ಣಸ್ಯ ಶಕುನೇಶ್ಚೈವ ಭ್ರಾತೄಣಾಂ ಚೈವ ಸರ್ವಶಃ।।
ಹಾಗೆಯೇ ಅದರ ಹತ್ತಿರದಲ್ಲಿಯೇ ಕರ್ಣನಿಗೆ, ಶಕುನಿಗೆ ಮತ್ತು ಎಲ್ಲ ಸಹೋದರರಿಗೆ ಬೇರೆ ಬೇರೆಯಾದ ಬಹಳಷ್ಟು ನಿವೇಶನಗಳನ್ನು ನಿರ್ಮಿಸಿದರು.
03229004a ದದರ್ಶ ಸ ತದಾ ಗಾವಃ ಶತಶೋಽಥ ಸಹಸ್ರಶಃ।
03229004c ಅಂಕೈರ್ಲಕ್ಷೈಶ್ಚ ತಾಃ ಸರ್ವಾ ಲಕ್ಷಯಾಮಾಸ ಪಾರ್ಥಿವಃ।।
ಆಗ ಆ ರಾಜನು ನೂರಾರು ಸಹಸ್ರಾರು ಗೋವುಗಳನ್ನು ನೋಡಿ ಪರೀಕ್ಷಿಸಿ ಅಂಕೆ ಮತ್ತು ಗುರುತುಗಳನ್ನು ಹಾಕಿದನು.
03229005a ಅಂಕಯಾಮಾಸ ವತ್ಸಾಂಶ್ಚ ಜಜ್ಞೇ ಚೋಪಸೃತಾಸ್ತ್ವಪಿ।
03229005c ಬಾಲವತ್ಸಾಶ್ಚ ಯಾ ಗಾವಃ ಕಾಲಯಾಮಾಸ ತಾ ಅಪಿ।।
ಕರುಗಳಿಗೆ ಗುರುತು ಹಾಕಿಸಿದನು; ಯಾವ ಗೋವುಗಳಿಗೆ ಹೋರಿ ಹಾರಿಸಿಯಾಗಿದೆ ಮತ್ತು ಯಾವುದಕ್ಕೆ ಹಾಲುಕುಡಿಯುವ ಕರುಗಳಿವೆಯೆಂದು ಗುರುತಿಸಿದನು.
03229006a ಅಥ ಸ ಸ್ಮಾರಣಂ ಕೃತ್ವಾ ಲಕ್ಷಯಿತ್ವಾ ತ್ರಿಹಾಯನಾನ್।
03229006c ವೃತೋ ಗೋಪಾಲಕೈಃ ಪ್ರೀತೋ ವ್ಯಹರತ್ಕುರುನಂದನಃ।।
ಮೂರುವರ್ಷದ ಕರುಗಳನ್ನು ಎಣಿಸಿ ಗುರುತುಹಾಕಿದನಂತರ, ಕುರುನಂದನನು ಗೋಪಾಲಕರೊಡನೆ ಸಂತೋಷದಿಂದ ಆಡಿ ವಿಹರಿಸಿದನು.
03229007a ಸ ಚ ಪೌರಜನಃ ಸರ್ವಃ ಸೈನಿಕಾಶ್ಚ ಸಹಸ್ರಶಃ।
03229007c ಯಥೋಪಜೋಷಂ ಚಿಕ್ರೀಡುರ್ವನೇ ತಸ್ಮಿನ್ಯಥಾಮರಾಃ।।
ಎಲ್ಲ ಪೌರಜನರೂ ಸಹಸ್ರಾರು ಸೈನಿಕರೂ ಅಮರರಂತೆ ತಮಗಿಷ್ಟಬಂದ ಹಾಗೆ ಆ ವನದಲ್ಲಿ ಆಡಿದರು.
03229008a ತತೋ ಗೋಪಾಃ ಪ್ರಗಾತಾರಃ ಕುಶಲಾ ನೃತ್ತವಾದಿತೇ।
03229008c ಧಾರ್ತರಾಷ್ಟ್ರಮುಪಾತಿಷ್ಠನ್ಕನ್ಯಾಶ್ಚೈವ ಸ್ವಲಂಕೃತಾಃ।।
ಆಗ ನೃತ್ಯ ವಾದ್ಯಗಳಲ್ಲಿ ಕುಶಲರಾದ ಗಾಯಕ ಗೋಪರು ಮತ್ತು ಸ್ವಲಂಕೃತರಾದ ಅವರ ಕನ್ಯೆಯರೂ ಕೂಡ ಧಾರ್ತರಾಷ್ಟ್ರರನ್ನು ಸೇವಿಸಿದರು.
03229009a ಸ ಸ್ತ್ರೀಗಣವೃತೋ ರಾಜಾ ಪ್ರಹೃಷ್ಟಃ ಪ್ರದದೌ ವಸು।
03229009c ತೇಭ್ಯೋ ಯಥಾರ್ಹಮನ್ನಾನಿ ಪಾನಾನಿ ವಿವಿಧಾನಿ ಚ।।
ಆ ಸ್ತ್ರೀಯರ ಗುಂಪಿನಿಂದ ಸುತ್ತುವರೆಯಲ್ಪಟ್ಟ ರಾಜನು ಸಂತೋಷಗೊಂಡು ಅವರಿಗೆ ತಕ್ಕುದಾದ ವಿವಿಧ ಆಹಾರ-ಪಾನೀಯಗಳನ್ನೂ ಹಣವನ್ನೂ ಕೊಟ್ಟನು.
03229010a ತತಸ್ತೇ ಸಹಿತಾಃ ಸರ್ವೇ ತರಕ್ಷೂನ್ಮಹಿಷಾನ್ಮೃಗಾನ್।
03229010c ಗವಯರ್ಕ್ಷವರಾಹಾಂಶ್ಚ ಸಮಂತಾತ್ಪರ್ಯಕಾಲಯನ್।।
03229011a ಸ ತಾಂ ಶರೈರ್ವಿನಿರ್ಭಿಂದನ್ಗಜಾನ್ಬಧ್ನನ್ಮಹಾವನೇ।
03229011c ರಮಣೀಯೇಷು ದೇಶೇಷು ಗ್ರಾಹಯಾಮಾಸ ವೈ ಮೃಗಾನ್।।
ಆಗ ಅವರೆಲ್ಲರೂ ಒಟ್ಟಿಗೇ ಹಯೀನ, ಕಾಡೆಮ್ಮೆ, ಜಿಂಕೆ, ಗಾಯಲ್, ಕರಡಿ, ಹಂದಿಗಳನ್ನು ಎಲ್ಲಕಡೆಯಿಂದ ಸುತ್ತುವರೆದು ಬೆನ್ನಟ್ಟಿದರು. ಬಾಣಗಳಿಂದ ಬೇಟೆಯನ್ನು ಹೊಡೆಯುತ್ತಾ ಮತ್ತು ವನದಲ್ಲಿ ಆನೆಗಳನ್ನು ಸೆರೆಹಿಡಿಯುತ್ತಾ ಅವನು ಆ ಮೃಗಗಳನ್ನು ರಮಣೀಯ ಪ್ರದೇಶದಲ್ಲಿ ಹಿಡಿದಿಟ್ಟನು.
03229012a ಗೋರಸಾನುಪಯುಂಜಾನ ಉಪಭೋಗಾಂಶ್ಚ ಭಾರತ।
03229012c ಪಶ್ಯನ್ಸುರಮಣೀಯಾನಿ ಪುಷ್ಪಿತಾನಿ ವನಾನಿ ಚ।।
03229013a ಮತ್ತಭ್ರಮರಜುಷ್ಟಾನಿ ಬರ್ಹಿಣಾಭಿರುತಾನಿ ಚ।
ಭಾರತ! ಸುರಮಣೀಯವಾದ ಹೂಬಿಟ್ಟ ವನಗಳನ್ನು, ಮತ್ತೇರಿದ ದುಂಬಿಗಳ ಗುಂಪುಗಳನ್ನು, ಮತ್ತು ಕೂಗುತ್ತಿರುವ ನವಿಲುಗಳನ್ನು ನೋಡುತ್ತಾ, ಆಕಳ ಹಾಲನ್ನು ಕುಡಿದನು ಮತ್ತು ರುಚಿಯಾದ ಅಡುಗೆಯನ್ನು ಊಟಮಾಡಿದನು.
03229013c ಅಗಚ್ಚದನುಪೂರ್ವ್ಯೇಣ ಪುಣ್ಯಂ ದ್ವೈತವನಂ ಸರಃ।
03229013e ಋದ್ಧ್ಯಾ ಪರಮಯಾ ಯುಕ್ತೋ ಮಹೇಂದ್ರ ಇವ ವಜ್ರಭೃತ್।।
ಕ್ರಮೇಣವಾಗಿ ವಜ್ರಧಾರಿ ಮಹೇಂದ್ರನಂತೆ ಪರಮ ವಿಜೃಂಭಣೆಯಿಂದ ಪುಣ್ಯ ದ್ವೈತವನದ ಸರೋವರದ ಬಳಿ ಬಂದನು.
03229014a ಯದೃಚ್ಚಯಾ ಚ ತದಹೋ ಧರ್ಮಪುತ್ರೋ ಯುಧಿಷ್ಠಿರಃ।
03229014c ಈಜೇ ರಾಜರ್ಷಿಯಜ್ಞೇನ ಸದ್ಯಸ್ಕೇನ ವಿಶಾಂ ಪತೇ।
03229014e ದಿವ್ಯೇನ ವಿಧಿನಾ ರಾಜಾ ವನ್ಯೇನ ಕುರುಸತ್ತಮಃ।।
ವಿಶಾಂಪತೇ! ಅದೇ ದಿವಸ ರಾಜಾ ಕುರುಸತ್ತಮ ಧರ್ಮಪುತ್ರ ಯುಧಿಷ್ಠಿರನು ರಾಜರ್ಷಿಗಳು ಮಾಡುವ ಸದ್ಯಸ್ಕ ಯಜ್ಞವನ್ನು ದಿವ್ಯ ವಿಧಿಗಳೊಂದಿಗೆ ವನ್ಯ ವಸ್ತುಗಳಿಂದ ನೆರವೇರಿಸಿದ್ದನು.
03229015a ಕೃತ್ವಾ ನಿವೇಶಮಭಿತಃ ಸರಸಸ್ತಸ್ಯ ಕೌರವಃ।
03229015c ದ್ರೌಪದ್ಯಾ ಸಹಿತೋ ಧೀಮಾನ್ಧರ್ಮಪತ್ನ್ಯಾ ನರಾಧಿಪಃ।।
ಅದನ್ನು ಪೂರೈಸಿ ಧೀಮಾನ್ ನರಾಧಿಪ ಕೌರವನು ಧರ್ಮಪತ್ನಿ ದ್ರೌಪದಿಯ ಸಹಿತ ಸರೋವರದ ಹತ್ತಿರದ ತನ್ನ ಬಿಡಾರಕ್ಕೆ ಬಂದಿದ್ದನು.
03229016a ತತೋ ದುರ್ಯೋಧನಃ ಪ್ರೇಷ್ಯಾನಾದಿದೇಶ ಸಹಾನುಜಃ।
03229016c ಆಕ್ರೀಡಾವಸಥಾಃ ಕ್ಷಿಪ್ರಂ ಕ್ರಿಯಂತಾಮಿತಿ ಭಾರತ।।
ಭಾರತ! ಆಗ ಅನುಜರೊಂದಿಗೆ ದುರ್ಯೋಧನನು ಸೇವಕರಿಗೆ ಬೇಗನೇ ಕ್ರೀಡಾಭವನಗಳನ್ನು ನಿರ್ಮಿಸಿ ಎಂದು ಆದೇಶವನ್ನಿತ್ತನು.
03229017a ತೇ ತಥೇತ್ಯೇವ ಕೌರವ್ಯಮುಕ್ತ್ವಾ ವಚನಕಾರಿಣಃ।
03229017c ಚಿಕೀರ್ಷಂತಸ್ತದಾಕ್ರೀಡಾಂ ಜಗ್ಮುರ್ದ್ವೈತವನಂ ಸರಃ।।
ಹಾಗೆಯೇ ಆಗಲೆಂದು ಕೌರವನಿಗೆ ಹೇಳಿ ಆ ವಚನಪಾಲಕರು ಕ್ರೀಡಾಭವನಗಳನ್ನು ನಿರ್ಮಿಸಲು ದ್ವೈತವನ ಸರೋವರಕ್ಕೆ ಹೋದರು.
03229018a ಸೇನಾಗ್ರಂ ಧಾರ್ತರಾಷ್ಟ್ರಸ್ಯ ಪ್ರಾಪ್ತಂ ದ್ವೈತವನಂ ಸರಃ।
03229018c ಪ್ರವಿಶಂತಂ ವನದ್ವಾರಿ ಗಂಧರ್ವಾಃ ಸಮವಾರಯನ್।।
ಧಾರ್ತರಾಷ್ಟ್ರನ ಸೇನೆಯು ದ್ವೈತವನದ ಸರೋವರವನ್ನು ಪ್ರವೇಶಿಸುವಾಗ ವನದ ದ್ವಾರದಲ್ಲಿಯೇ ಅವರನ್ನು ಗಂಧರ್ವರು ತಡೆದು ನಿಲ್ಲಿಸಿದರು.
03229019a ತತ್ರ ಗಂಧರ್ವರಾಜೋ ವೈ ಪೂರ್ವಮೇವ ವಿಶಾಂ ಪತೇ।
03229019c ಕುಬೇರಭವನಾದ್ರಾರಾಜನ್ನಾಜಗಾಮ ಗಣಾವೃತಃ।।
ವಿಶಾಂಪತೇ! ರಾಜನ್! ಅದಕ್ಕೆ ಮೊದಲೇ ಕುಬೇರ ಭವನದಿಂದ ಗಂಧರ್ವರಾಜನು ತನ್ನ ಗಣಗಳೊಂದಿಗೆ ಅಲ್ಲಿಗೆ ಆಗಮಿಸಿದ್ದನು.
03229020a ಗಣೈರಪ್ಸರಸಾಂ ಚೈವ ತ್ರಿದಶಾನಾಂ ತಥಾತ್ಮಜೈಃ।
03229020c ವಿಹಾರಶೀಲಃ ಕ್ರೀಡಾರ್ಥಂ ತೇನ ತತ್ಸಂವೃತಂ ಸರಃ।।
ಅಪ್ಸರೆಯರ ಗಣಗಳೊಂದಿಗೆ ಮತ್ತು ದೇವತೆಗಳ ಮಕ್ಕಳೊಂದಿಗೆ ವಿಹರಿಸುತ್ತಿದ್ದ ಅವನು ಕ್ರೀಡೆಗಾಗಿ ಆ ಸರೋವರವನ್ನು ಸುತ್ತುವರೆದಿದ್ದನು.
03229021a ತೇನ ತತ್ಸಂವೃತಂ ದೃಷ್ಟ್ವಾ ತೇ ರಾಜಪರಿಚಾರಕಾಃ।
03229021c ಪ್ರತಿಜಗ್ಮುಸ್ತತೋ ರಾಜನ್ಯತ್ರ ದುರ್ಯೋಧನೋ ನೃಪಃ।।
ರಾಜನ್! ಅವನಿಂದ ಆವೃತವಾದುದನ್ನು ನೋಡಿದ ರಾಜ ಪರಿಚಾರಕರು ನೃಪ ದುರ್ಯೋಧನನಿದ್ದಲ್ಲಿಗೆ ಹಿಂದಿರುಗಿದರು.
03229022a ಸ ತು ತೇಷಾಂ ವಚಃ ಶ್ರುತ್ವಾ ಸೈನಿಕಾನ್ಯುದ್ಧದುರ್ಮದಾನ್।
03229022c ಪ್ರೇಷಯಾಮಾಸ ಕೌರವ್ಯ ಉತ್ಸಾರಯತ ತಾನಿತಿ।।
ಅವರ ವರದಿಯನ್ನು ಕೇಳಿ ಕೌರವನು ಯುದ್ಧ ದುರ್ಮದರಾದ ಸೈನಿಕರರಿಗೆ “ಅವರನ್ನು ಹೊಡೆದೋಡಿಸಿ!” ಎಂದು ಹೇಳಿ ಕಳುಹಿಸಿದನು.
03229023a ತಸ್ಯ ತದ್ವಚನಂ ಶ್ರುತ್ವಾ ರಾಜ್ಞಃ ಸೇನಾಗ್ರಯಾಯಿನಃ।
03229023c ಸರೋ ದ್ವೈತವನಂ ಗತ್ವಾ ಗಂಧರ್ವಾನಿದಮಬ್ರುವನ್।।
ರಾಜನ ಆ ಮಾತುಗಳನ್ನು ಕೇಳಿ ಸೇನೆಯು ಶೀಘ್ರದಲ್ಲಿ ದ್ವೈತವನ ಸರೋವರಕ್ಕೆ ಹೋಗಿ ಗಂದರ್ವರಿಗೆ ಹೇಳಿತು:
03229024a ರಾಜಾ ದುರ್ಯೋಧನೋ ನಾಮ ಧೃತರಾಷ್ಟ್ರಸುತೋ ಬಲೀ।
03229024c ವಿಜಿಹೀರ್ಷುರಿಹಾಯಾತಿ ತದರ್ಥಮಪಸರ್ಪತ।।
“ರಾಜಾ ದುರ್ಯೋಧನನೆಂಬ ಹೆಸರಿನ ಧೃತರಾಷ್ಟ್ರನ ಬಲಶಾಲೀ ಪುತ್ರನು ತನ್ನ ವಿನೋದಕ್ಕಾಗಿ ಇಲ್ಲಿಗೆ ಬಂದಿದ್ದಾನೆ. ಆದುದರಿಂದ ಈ ಸ್ಥಳವನ್ನು ಖಾಲಿಮಾಡಿ!”
03229025a ಏವಮುಕ್ತಾಸ್ತು ಗಂಧರ್ವಾಃ ಪ್ರಹಸಂತೋ ವಿಶಾಂ ಪತೇ।
03229025c ಪ್ರತ್ಯಬ್ರುವಂಸ್ತಾನ್ಪುರುಷಾನಿದಂ ಸುಪರುಷಂ ವಚಃ।।
ವಿಶಾಂಪತೇ! ಇದನ್ನು ಕೇಳಿದ ಗಂಧರ್ವರು ನಕ್ಕರು ಮತ್ತು ಆ ಪುರುಷರಿಗೆ ಪೌರುಷದ ಈ ಮಾತುಗಳನ್ನಾಡಿದರು.
03229026a ನ ಚೇತಯತಿ ವೋ ರಾಜಾ ಮಂದಬುದ್ಧಿಃ ಸುಯೋಧನಃ।
03229026c ಯೋಽಸ್ಮಾನಾಜ್ಞಾಪಯತ್ಯೇವಂ ವಶ್ಯಾನಿವ ದಿವೌಕಸಃ।।
“ತನ್ನ ವಶದಲ್ಲಿರುವವರೋ ಎಂಬಂತೆ ದಿವೌಕಸರಾದ ನಮ್ಮಂಥವರಿಗೆ ಈ ರೀತಿ ಆಜ್ಞಾಪಿಸುತ್ತಿರುವ ನಿಮ್ಮ ರಾಜ ಸುಯೋಧನನು ಮೂಢನೇ ಸರಿ!
03229027a ಯೂಯಂ ಮುಮೂರ್ಷವಶ್ಚಾಪಿ ಮಂದಪ್ರಜ್ಞಾ ನ ಸಂಶಯಃ।
03229027c ಯೇ ತಸ್ಯ ವಚನಾದೇವಮಸ್ಮಾನ್ಬ್ರೂತ ವಿಚೇತಸಃ।।
ಅವನ ಆಜ್ಞೆಯಂತೆ ನಮ್ಮೊಂದಿಗೆ ಈ ರೀತಿ ಬುದ್ಧಿಯಿಲ್ಲದೇ ಮಾತನಾಡುವ ನೀವು ಸಾಯುತ್ತೀರಿ ಎನ್ನುವುದರಲ್ಲಿ ಸಂಶಯವಿಲ್ಲ.
03229028a ಗಚ್ಚತ ತ್ವರಿತಾಃ ಸರ್ವೇ ಯತ್ರ ರಾಜಾ ಸ ಕೌರವಃ।
03229028c ದ್ವೇಷ್ಯಂ ಮಾದ್ಯೈವ ಗಚ್ಚಧ್ವಂ ಧರ್ಮರಾಜನಿವೇಶನಂ।।
ಯಾರಿಗೂ ಇಷ್ಟವಿಲ್ಲದ ಧರ್ಮರಾಜನ ಮನೆಗೆ ಹೋಗುವ ಮೊದಲು ಕೌರವ ರಾಜನ ಬಳಿ ಈಗಲೇ ಹಿಂದಿರುಗಿ! ತಡಮಾಡಬೇಡಿ!”
03229029a ಏವಮುಕ್ತಾಸ್ತು ಗಂಧರ್ವೈ ರಾಜ್ಞಃ ಸೇನಾಗ್ರಯಾಯಿನಃ।
03229029c ಸಂಪ್ರಾದ್ರವನ್ಯತೋ ರಾಜಾ ಧೃತರಾಷ್ಟ್ರಸುತೋಽಭವತ್।।
ಗಂಧರ್ವರು ಹೀಗೆ ಹೇಳಲು ರಾಜನ ಸೇನೆಯು ರಾಜ ಧೃತರಾಷ್ಟ್ರನ ಮಗನಿದ್ದಲ್ಲಿಗೆ ಪಲಾಯನ ಮಾಡಿತು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಗಂಧರ್ವದುರ್ಯೋಧನಸೇನಾಸಂವಾದೇ ಏಕೋನತ್ರಿಂಶದಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಗಂಧರ್ವದುರ್ಯೋಧನಸೇನಾಸಂವಾದದಲ್ಲಿ ಇನ್ನೂರಾಇಪ್ಪತ್ತೊಂಭತ್ತನೆಯ ಅಧ್ಯಾಯವು.