228 ದುರ್ಯೋಧನಪ್ರಸ್ಥಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಘೋಷಯಾತ್ರಾ ಪರ್ವ

ಅಧ್ಯಾಯ 228

ಸಾರ

ಗೋವುಗಳನ್ನು ಎಣಿಸಲು ಹೋಗುತ್ತೇವೆಂದು ದುರ್ಯೋಧನನು ಹೇಳಲು ಧೃತರಾಷ್ಟ್ರನು ಅಲ್ಲಿ ಹತ್ತಿರದಲ್ಲಿ ಪಾಂಡವರು ವಾಸಿಸುತ್ತಿರುವುದರಿಂದ ಬೇರೆ ಯಾರನ್ನಾದರೂ ಕಳುಹಿಸಲು ಸೂಚಿಸುವುದು (1-17). ಅಲ್ಲಿ ಅನಾರ್ಯ ಸಮಾಚಾರವು ನಡೆಯುವುದಿಲ್ಲ, ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೋ ಅಲ್ಲಿಗೆ ನಾವು ಹೋಗುವುದಿಲ್ಲವೆಂದು ಶಕುನಿಯು ಭರವಸೆಯಿತ್ತನಂತರ ಧೃತರಾಷ್ಟ್ರನು ಒಪ್ಪಿಕೊಳ್ಳುವುದು (18-22). ದುರ್ಯೋಧನನು ತನ್ನ ಆಪ್ತರು, ಪುರಜನರು ಮತ್ತು ಸೇನೆಯೊಡನೆ ದ್ವೈತವನ ಸರೋವರದತ್ತ ಪ್ರಯಾಣಿಸಿದುದು (23-29).

03228001 ವೈಶಂಪಾಯನ ಉವಾಚ।
03228001a ಧೃತರಾಷ್ಟ್ರಂ ತತಃ ಸರ್ವೇ ದದೃಶುರ್ಜನಮೇಜಯ।
03228001c ಪೃಷ್ಟ್ವಾ ಸುಖಮಥೋ ರಾಜ್ಞಃ ಪೃಷ್ಟ್ವಾ ರಾಜ್ಞಾ ಚ ಭಾರತ।।

ವೈಶಂಪಾಯನನು ಹೇಳಿದನು: “ಭಾರತ! ಜನಮೇಜಯ! ಆಗ ಅವರೆಲ್ಲರೂ ಧೃತರಾಷ್ಟ್ರನನ್ನು ಕಂಡರು ಮತ್ತು ರಾಜನ ಸೌಖ್ಯದ ಕುರಿತು ಕೇಳಿದರು. ರಾಜನೂ ಕೂಡ ಅವರಿಗೆ ಮರಳಿ ಕೇಳಿದನು.

03228002a ತತಸ್ತೈರ್ವಿಹಿತಃ ಪೂರ್ವಂ ಸಮಂಗೋ ನಾಮ ಬಲ್ಲವಃ।
03228002c ಸಮೀಪಸ್ಥಾಸ್ತದಾ ಗಾವೋ ಧೃತರಾಷ್ಟ್ರೇ ನ್ಯವೇದಯತ್।।

ಆಗ ಅದಕ್ಕೂ ಮೊದಲೇ ತಿಳಿಸಿದ್ದ ಸಮಂಗ ಎಂಬ ಹೆಸರಿನ ಗೊಲ್ಲನು ಸಮೀಪದಲ್ಲಿರುವ ಗೋವುಗಳ ಕುರಿತು ಧೃತರಾಷ್ಟ್ರನಿಗೆ ನಿವೇದಿಸಿದನು.

03228003a ಅನಂತರಂ ಚ ರಾಧೇಯಃ ಶಕುನಿಶ್ಚ ವಿಶಾಂ ಪತೇ।
03228003c ಆಹತುಃ ಪಾರ್ಥಿವಶ್ರೇಷ್ಠಂ ಧೃತರಾಷ್ಟ್ರಂ ಜನಾಧಿಪಂ।।

ವಿಶಾಂಪತೇ! ಅನಂತರ ರಾಧೇಯ ಮತ್ತು ಶಕುನಿಯರು ಜನಾಧಿಪ ಪಾರ್ಥಿವಶ್ರೇಷ್ಠ ಧೃತರಾಷ್ಟ್ರನಿಗೆ ಹೇಳಿದರು:

03228004a ರಮಣೀಯೇಷು ದೇಶೇಷು ಘೋಷಾಃ ಸಂಪ್ರತಿ ಕೌರವ।
03228004c ಸ್ಮಾರಣಾಸಮಯಃ ಪ್ರಾಪ್ತೋ ವತ್ಸಾನಾಮಪಿ ಚಾಂಕನಂ।।

“ಕೌರವ! ಈ ಸಮಯದಲ್ಲಿ ಗೋಶಾಲೆಗಳಿದ್ದ ಪ್ರದೇಶವು ರಮಣೀಯವಾಗಿದೆ. ಕರುಗಳನ್ನು ಎಣಿಸುವ ಮತ್ತು ಬರೆಹಾಕುವ ಸಮಯವೂ ಪ್ರಾಪ್ತವಾಗಿದೆ.

03228005a ಮೃಗಯಾ ಚೋಚಿತಾ ರಾಜನ್ನಸ್ಮಿನ್ಕಾಲೇ ಸುತಸ್ಯ ತೇ।
03228005c ದುರ್ಯೋಧನಸ್ಯ ಗಮನಂ ತ್ವಮನುಜ್ಞಾತುಮರ್ಹಸಿ।।

ರಾಜನ್! ನಿನ್ನ ಮಗನು ಬೇಟೆಗೆ ಹೋಗುವುದಕ್ಕೂ ಇದು ಸರಿಯಾದ ಸಮಯ. ದುರ್ಯೋಧನನಿಗೆ ಹೋಗುವುದಕ್ಕೆ ಅನುಮತಿಯನ್ನು ನೀಡಬೇಕು.”

03228006 ಧೃತರಾಷ್ಟ್ರ ಉವಾಚ।
03228006a ಮೃಗಯಾ ಶೋಭನಾ ತಾತ ಗವಾಂ ಚ ಸಮವೇಕ್ಷಣಂ।
03228006c ವಿಶ್ರಂಭಸ್ತು ನ ಗಂತವ್ಯೋ ಬಲ್ಲವಾನಾಮಿತಿ ಸ್ಮರೇ।।

ಧೃತರಾಷ್ಟ್ರನು ಹೇಳಿದನು: “ಮಗೂ! ಬೇಟೆಯಾಡುವುದೂ ಮತ್ತು ಗೋವುಗಳನ್ನು ನೋಡಿಬರುವುದೂ ಒಳ್ಳೆಯದು. ಗೋವಳರನ್ನು ನಂಬಬಾರದು ಎಂದೂ ನನ್ನ ನೆನಪಿನಲ್ಲಿದೆ.

03228007a ತೇ ತು ತತ್ರ ನರವ್ಯಾಘ್ರಾಃ ಸಮೀಪ ಇತಿ ನಃ ಶ್ರುತಂ।
03228007c ಅತೋ ನಾಭ್ಯನುಜಾನಾಮಿ ಗಮನಂ ತತ್ರ ವಃ ಸ್ವಯಂ।।

ಆದರೆ ಆ ನರವ್ಯಾಘ್ರರೂ ಅಲ್ಲಿಯೇ ಸಮೀಪದಲ್ಲಿದ್ದಾರೆಂದು ಕೇಳಿದ್ದೇನೆ. ಆದುದರಿಂದ ನೀವು ಸ್ವಯಂ ಅಲ್ಲಿಗೆ ಹೋಗುವುದನ್ನು ಒಪ್ಪುವುದಿಲ್ಲ.

03228008a ಚದ್ಮನಾ ನಿರ್ಜಿತಾಸ್ತೇ ಹಿ ಕರ್ಶಿತಾಶ್ಚ ಮಹಾವನೇ।
03228008c ತಪೋನಿತ್ಯಾಶ್ಚ ರಾಧೇಯ ಸಮರ್ಥಾಶ್ಚ ಮಹಾರಥಾಃ।।

ರಾಧೇಯ! ಸಮರ್ಥರೂ ಮಹಾರಥಿಗಳೂ ಆದ ಅವರು ಮೋಸದಿಂದ ಸೋಲಿಸಲ್ಪಟ್ಟು ಕಷ್ಟದಿಂದ ಅಲ್ಲಿ ತಪೋನಿರತರಾಗಿದ್ದಾರೆ.

03228009a ಧರ್ಮರಾಜೋ ನ ಸಂಕ್ರುಧ್ಯೇದ್ಭೀಮಸೇನಸ್ತ್ವಮರ್ಷಣಃ।
03228009c ಯಜ್ಞಸೇನಸ್ಯ ದುಹಿತಾ ತೇಜ ಏವ ತು ಕೇವಲಂ।।

ಧರ್ಮರಾಜನು ಸಿಟ್ಟಾಗುವುದಿಲ್ಲ. ಆದರೆ ಭೀಮಸೇನನಾದರೋ ಕುಪಿತನಾಗುವನು ಮತ್ತು ಯಜ್ಞಸೇನನ ಮಗಳು ಕೇವಲ ಬೆಂಕಿಯಂತೆ!

03228010a ಯೂಯಂ ಚಾಪ್ಯಪರಾಧ್ಯೇಯುರ್ದರ್ಪಮೋಹಸಮನ್ವಿತಾಃ।
03228010c ತತೋ ವಿನಿರ್ದಹೇಯುಸ್ತೇ ತಪಸಾ ಹಿ ಸಮನ್ವಿತಾಃ।।

ದರ್ಪಮೋಹಸಮನ್ವಿತರಾದ ನೀವು ಅಪರಾಧವನ್ನೆಸಗುವುದು ಖಂಡಿತ. ಆಗ ತಪಸ್ಸಿನಿಂದ ಸಮನ್ವಿತರಾದ ಅವರು ನಿಮ್ಮನ್ನು ಸುಟ್ಟುಬಿಡುತ್ತಾರೆ.

03228011a ಅಥ ವಾ ಸಾಯುಧಾ ವೀರಾ ಮನ್ಯುನಾಭಿಪರಿಪ್ಲುತಾಃ।
03228011c ಸಹಿತಾ ಬದ್ಧನಿಸ್ತ್ರಿಂಶಾ ದಹೇಯುಃ ಶಸ್ತ್ರತೇಜಸಾ।।

ಅಥವಾ, ಆ ವೀರರು ಸಿಟ್ಟಿನಿಂದ ತುಂಬಿದವರಾಗಿ, ಆಯುಧಗಳಿಂದ, ಖಡ್ಗಗಳ ಸಹಿತ ತಮ್ಮ ಶಸ್ತ್ರಗಳ ತೇಜಸ್ಸಿನಿಂದ ನಿಮ್ಮನ್ನು ಸುಡುತ್ತಾರೆ.

03228012a ಅಥ ಯೂಯಂ ಬಹುತ್ವಾತ್ತಾನಾರಭಧ್ವಂ ಕಥಂ ಚನ।
03228012c ಅನಾರ್ಯಂ ಪರಮಂ ತತ್ಸ್ಯಾದಶಕ್ಯಂ ತಚ್ಚ ಮೇ ಮತಂ।।

ಅಥವಾ ಒಂದುವೇಳೆ ಬಹುಸಂಖ್ಯೆಯಲ್ಲಿರುವ ನೀವು ಅವರನ್ನು ಕೊಂದರೆ ಅದು ಪರಮ ಅನಾರ್ಯವೆನಿಸಿಕೊಳ್ಳುತ್ತದೆ. ಅದಕ್ಕೆ ನೀವು ಅಶಕ್ತರೆಂದು ನನಗನ್ನಿಸುತ್ತದೆ.

03228013a ಉಷಿತೋ ಹಿ ಮಹಾಬಾಹುರಿಂದ್ರಲೋಕೇ ಧನಂಜಯಃ।
03228013c ದಿವ್ಯಾನ್ಯಸ್ತ್ರಾಣ್ಯವಾಪ್ಯಾಥ ತತಃ ಪ್ರತ್ಯಾಗತೋ ವನಂ।।

ಏಕೆಂದರೆ ಮಹಾಬಾಹು ಧನಂಜಯನು ಇಂದ್ರಲೋಕದಲ್ಲಿ ಉಳಿದುಕೊಂಡು ದಿವ್ಯಾಸ್ತ್ರಗಳನ್ನು ಪಡೆದುಕೊಂಡು ವನಕ್ಕೆ ಮರಳಿ ಬಂದಿದ್ದಾನೆ.

03228014a ಅಕೃತಾಸ್ತ್ರೇಣ ಪೃಥಿವೀ ಜಿತಾ ಬೀಭತ್ಸುನಾ ಪುರಾ।
03228014c ಕಿಂ ಪುನಃ ಸ ಕೃತಾಸ್ತ್ರೋಽದ್ಯ ನ ಹನ್ಯಾದ್ವೋ ಮಹಾರಥಃ।।

ಹಿಂದೆ ಈ ಅಸ್ತ್ರಗಳಿಲ್ಲದೆಯೇ ಬೀಭತ್ಸುವು ಪೃಥ್ವಿಯನ್ನು ಗೆದ್ದಿದ್ದನು. ಈಗ ಕೃತಾಸ್ತ್ರನಾದ ಆ ಮಹಾರಥಿಯು ಪುನಃ ನಿಮ್ಮನ್ನು ಕೊಲ್ಲದೆಯೇ ಇರುತ್ತಾನೆಯೇ?

03228015a ಅಥ ವಾ ಮದ್ವಚಃ ಶ್ರುತ್ವಾ ತತ್ರ ಯತ್ತಾ ಭವಿಷ್ಯಥ।
03228015c ಉದ್ವಿಗ್ನವಾಸೋ ವಿಶ್ರಂಭಾದ್ದುಃಖಂ ತತ್ರ ಭವಿಷ್ಯತಿ।।

ಆಥವಾ ನನ್ನ ಮಾತನ್ನು ಕೇಳಿ ಅಲ್ಲಿ ಜಾಗರೂಕರಾಗಿದ್ದರೆ ನೀವು ಅವರ ಮೇಲಿನ ಶಂಕೆಯಿಂದ ಉದ್ವಿಗ್ನರಾಗಿ ವಾಸಿಸಬೇಕಾಗುತ್ತದೆ.

03228016a ಅಥ ವಾ ಸೈನಿಕಾಃ ಕೇ ಚಿದಪಕುರ್ಯುರ್ಯುಧಿಷ್ಠಿರೇ।
03228016c ತದಬುದ್ಧಿಕೃತಂ ಕರ್ಮ ದೋಷಮುತ್ಪಾದಯೇಚ್ಚ ವಃ।।

ಅಥವಾ ಕೆಲವು ಸೈನಿಕರು ಯುಧಿಷ್ಠಿರನಿಗೆ ಅಪಕಾರವನ್ನೆಸಗಿದರೆ, ತಿಳಿಯದೇ ಮಾಡಿದ್ದರೂ, ಆ ಕರ್ಮದ ದೋಷವು ನಿನ್ನ ಮೇಲೆ ಬರುತ್ತದೆ.

03228017a ತಸ್ಮಾದ್ಗಚ್ಚಂತು ಪುರುಷಾಃ ಸ್ಮಾರಣಾಯಾಪ್ತಕಾರಿಣಃ।
03228017c ನ ಸ್ವಯಂ ತತ್ರ ಗಮನಂ ರೋಚಯೇ ತವ ಭಾರತ।।

ಭಾರತ! ಆದುದರಿಂದ ಎಣಿಸಲು ಆಪ್ತಕಾರಿಣಿಗಳು ಯಾರಾದರೂ ಹೋಗಲಿ! ಸ್ವಯಂ ನೀನು ಅಲ್ಲಿಗೆ ಹೋಗುವುದು ನನಗೆ ಇಷ್ಟವಾಗುವುದಿಲ್ಲ.”

03228018 ಶಕುನಿರುವಾಚ।
03228018a ಧರ್ಮಜ್ಞಃ ಪಾಂಡವೋ ಜ್ಯೇಷ್ಠಃ ಪ್ರತಿಜ್ಞಾತಂ ಚ ಸಂಸದಿ।
03228018c ತೇನ ದ್ವಾದಶ ವರ್ಷಾಣಿ ವಸ್ತವ್ಯಾನೀತಿ ಭಾರತ।।

ಶಕುನಿಯು ಹೇಳಿದನು: “ಭಾರತ! ಜ್ಯೇಷ್ಠ ಪಾಂಡವನು ಧರ್ಮಜ್ಞ ಮತ್ತು ಹನ್ನೆರಡು ವರ್ಷಗಳು ವನದಲ್ಲಿ ವಾಸಿಸುತ್ತೇನೆಂದು ಮಾಡಿದ ಪ್ರತಿಜ್ಞೆಯನ್ನು ಮರೆಯುವುದಿಲ್ಲ.

03228019a ಅನುವೃತ್ತಾಶ್ಚ ತೇ ಸರ್ವೇ ಪಾಂಡವಾ ಧರ್ಮಚಾರಿಣಃ।
03228019c ಯುಧಿಷ್ಠಿರಶ್ಚ ಕೌಂತೇಯೋ ನ ನಃ ಕೋಪಂ ಕರಿಷ್ಯತಿ।।

ಎಲ್ಲ ಪಾಂಡವರೂ ಆ ಧರ್ಮಚಾರಿಣಿಯನ್ನು ಅನುಸರಿಸುತ್ತಾರೆ. ಕೌಂತೇಯ ಯುಧಿಷ್ಠಿರನು ನಮ್ಮ ಮೇಲೆ ಕೋಪ ಮಾಡುವುದಿಲ್ಲ.

03228020a ಮೃಗಯಾಂ ಚೈವ ನೋ ಗಂತುಮಿಚ್ಚಾ ಸಂವರ್ಧತೇ ಭೃಶಂ।
03228020c ಸ್ಮಾರಣಂ ಚ ಚಿಕೀರ್ಷಾಮೋ ನ ತು ಪಾಂಡವದರ್ಶನಂ।।

ಮತ್ತು ಬೇಟೆಗೆ ಹೋಗಬೇಕೆನ್ನುವ ಬಯಕೆಯೂ ತುಂಬಾ ಹೆಚ್ಚಾಗಿದೆ. ಗೋವುಗಳನ್ನು ಎಣಿಸಲು ಬಯಸುತ್ತೇವೆಯೇ ಹೊರತು ಪಾಂಡವರನ್ನು ಕಾಣಬೇಕೆಂದಲ್ಲ.

03228021a ನ ಚಾನಾರ್ಯಸಮಾಚಾರಃ ಕಶ್ಚಿತ್ತತ್ರ ಭವಿಷ್ಯತಿ।
03228021c ನ ಚ ತತ್ರ ಗಮಿಷ್ಯಾಮೋ ಯತ್ರ ತೇಷಾಂ ಪ್ರತಿಶ್ರಯಃ।।

ಅಲ್ಲಿ ಯಾವುದೇ ರೀತಿಯ ಅನಾರ್ಯ ಸಮಾಚಾರವು ನಡೆಯುವುದಿಲ್ಲ. ಮತ್ತು ಅವರು ಎಲ್ಲಿ ವಾಸಿಸುತ್ತಿದ್ದಾರೋ ಅಲ್ಲಿಗೆ ನಾವು ಹೋಗುವುದಿಲ್ಲ.””

03228022 ವೈಶಂಪಾಯನ ಉವಾಚ।
03228022a ಏವಮುಕ್ತಃ ಶಕುನಿನಾ ಧೃತರಾಷ್ಟ್ರೋ ಜನೇಶ್ವರಃ।
03228022c ದುರ್ಯೋಧನಂ ಸಹಾಮಾತ್ಯಮನುಜಜ್ಞೇ ನ ಕಾಮತಃ।।

ವೈಶಂಪಾಯನನು ಹೇಳಿದನು: “ಶಕುನಿಯ ಈ ಮಾತಿಗೆ ಜನೇಶ್ವರ ಧೃತರಾಷ್ಟ್ರನು ಇಷ್ವವಿಲ್ಲದೆಯೇ ದುರ್ಯೋಧನ ಮತ್ತು ಅವನ ಅಮಾತ್ಯರಿಗೆ ಅನುಜ್ಞೆಯನ್ನಿತ್ತನು.

03228023a ಅನುಜ್ಞಾತಸ್ತು ಗಾಂಧಾರಿಃ ಕರ್ಣೇನ ಸಹಿತಸ್ತದಾ।
03228023c ನಿರ್ಯಯೌ ಭರತಶ್ರೇಷ್ಠೋ ಬಲೇನ ಮಹತಾ ವೃತಃ।।
03228024a ದುಃಶಾಸನೇನ ಚ ತಥಾ ಸೌಬಲೇನ ಚ ದೇವಿನಾ।
03228024c ಸಂವೃತೋ ಭ್ರಾತೃಭಿಶ್ಚಾನ್ಯೈಃ ಸ್ತ್ರೀಭಿಶ್ಚಾಪಿ ಸಹಸ್ರಶಃ।।

ಅಪ್ಪಣೆಯನ್ನು ಪಡೆದು ಗಾಂಧಾರಿಯ ಮಗ ಭರತಶ್ರೇಷ್ಠನು ಕರ್ಣನೊಂದಿಗೆ ಮಹಾಸೇನೆಯಿಂದ ಆವೃತನಾಗಿ, ದುಃಶಾಸನ, ಜೂಜುಗಾರ ಸೌಬಲರೊಂದಿಗೆ, ಇತರ ಸಹೋದರರು ಮತ್ತು ಸಹಸ್ರಾರು ಸ್ತ್ರೀಯರೊಂದಿಗೆ ಹೊರಟನು.

03228025a ತಂ ನಿರ್ಯಾಂತಂ ಮಹಾಬಾಹುಂ ದ್ರಷ್ಟುಂ ದ್ವೈತವನಂ ಸರಃ।
03228025c ಪೌರಾಶ್ಚಾನುಯಯುಃ ಸರ್ವೇ ಸಹದಾರಾ ವನಂ ಚ ತತ್।।

ಆ ಮಹಾಬಾಹುವು ದ್ವೈತವನದ ಸರೋವರವನ್ನು ನೋಡಲು ಹೊರಟಾಗ ವನಕ್ಕೆ ಅವನನ್ನು ಅನುಸರಿಸಿ ಎಲ್ಲ ಪೌರರೂ ಪತ್ನಿಯರನ್ನು ಕೂಡಿಕೊಂಡು ಹೊರಟರು.

03228026a ಅಷ್ಟೌ ರಥಸಹಸ್ರಾಣಿ ತ್ರೀಣಿ ನಾಗಾಯುತಾನಿ ಚ।
03228026c ಪತ್ತಯೋ ಬಹುಸಾಹಸ್ರಾ ಹಯಾಶ್ಚ ನವತಿಃ ಶತಾಃ।।
03228027a ಶಕಟಾಪಣವೇಶ್ಯಾಶ್ಚ ವಣಿಜೋ ಬಂದಿನಸ್ತಥಾ।
03228027c ನರಾಶ್ಚ ಮೃಗಯಾಶೀಲಾಃ ಶತಶೋಽಥ ಸಹಸ್ರಶಃ।।

ಎಂಟು ಸಾವಿರ ರಥಗಳು, ಮೂವತ್ತು ಸಾವಿರ ಆನೆಗಳು, ಹಲವಾರು ಸಾವಿರ ಪಾದಾತಿಗಳು, ಒಂಭೈನೂರು ಕುದುರೆಗಳು, ಚಕ್ಕಡಿಗಳು, ಮಾರಾಟದ ಗಾಡಿಗಳು, ವೇಶ್ಯೆಯರು, ವರ್ತಕರು, ಬಂದಿಗಳು, ಮತ್ತು ನೂರಾರು ಸಹಸ್ರಾರು ಮೃಗಯಾಶೀಲ ಜನರು ಸೇರಿದ್ದರು.

03228028a ತತಃ ಪ್ರಯಾಣೇ ನೃಪತೇಃ ಸುಮಹಾನಭವತ್ಸ್ವನಃ।
03228028c ಪ್ರಾವೃಷೀವ ಮಹಾವಾಯೋರುದ್ಧತಸ್ಯ ವಿಶಾಂ ಪತೇ।।

ವಿಶಾಂಪತೇ! ಆ ನೃಪತಿಯ ಪ್ರಯಾಣವು ಮಳೆಗಾಲದ ಭಿರುಗಾಳಿಯಂತೆ ಮಹಾಶಬ್ಧವನ್ನುಂಟು ಮಾಡಿತು.

03228029a ಗವ್ಯೂತಿಮಾತ್ರೇ ನ್ಯವಸದ್ರಾಜಾ ದುರ್ಯೋಧನಸ್ತದಾ।
03228029c ಪ್ರಯಾತೋ ವಾಹನೈಃ ಸರ್ವೈಸ್ತತೋ ದ್ವೈತವನಂ ಸರಃ।।

ದ್ವೈತವನ ಸರೋವರಕ್ಕೆ ಎರಡು ಕ್ರೋಶಮಾತ್ರದ ದೂರದಲ್ಲಿ ರಾಜಾ ದುರ್ಯೋಧನನು ವಾಹನಗಳೊಂದಿಗೆ ಬೀಡು ಬಿಟ್ಟನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ದುರ್ಯೋಧನಪ್ರಸ್ಥಾನೇ ಅಷ್ಟವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ದುರ್ಯೋಧನಪ್ರಸ್ಥಾನದಲ್ಲಿ ಇನ್ನೂರಾಇಪ್ಪತ್ತೆಂಟನೆಯ ಅಧ್ಯಾಯವು.