ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 227
ಸಾರ
ಪಾಂಡವರಿರುವಲ್ಲಿಗೆ ಹೋಗಲು ತನಗೆ ಅನುಜ್ಞೆಯು ಖಂಡಿತವಾಗಿಯೂ ದೊರೆಯುವುದಿಲ್ಲವೆಂದು ದುರ್ಯೋಧನನು ಹೇಳಲು (1-16), ಕರ್ಣನು ಘೋಷಯಾತ್ರೆಯ ನೆಪದಲ್ಲಿ ಹೋಗಬಹುದೆಂದು ಸೂಚಿಸುವುದು (17-24).
03227001 ವೈಶಂಪಾಯನ ಉವಾಚ।
03227001a ಕರ್ಣಸ್ಯ ವಚನಂ ಶ್ರುತ್ವಾ ರಾಜಾ ದುರ್ಯೋಧನಸ್ತದಾ।
03227001c ಹೃಷ್ಟೋ ಭೂತ್ವಾ ಪುನರ್ದೀನ ಇದಂ ವಚನಮಬ್ರವೀತ್।।
ವೈಶಂಪಾಯನನು ಹೇಳಿದನು: “ಕರ್ಣನ ಮಾತನ್ನು ಕೇಳಿ ರಾಜಾ ದುರ್ಯೋಧನನು ಮೊದಲು ಸಂತೋಷಗೊಂಡು, ನಂತರ ದೀನನಾಗಿ ಈ ಮಾತನ್ನಾಡಿದನು.
03227002a ಬ್ರವೀಷಿ ಯದಿದಂ ಕರ್ಣ ಸರ್ವಂ ಮೇ ಮನಸಿ ಸ್ಥಿತಂ।
03227002c ನ ತ್ವಭ್ಯನುಜ್ಞಾಂ ಲಪ್ಸ್ಯಾಮಿ ಗಮನೇ ಯತ್ರ ಪಾಂಡವಾಃ।।
“ಕರ್ಣ! ನೀನು ಹೇಳಿದುದೆಲ್ಲವೂ ನನ್ನ ಮನಸ್ಸಿಗೂ ಬಂದಿತ್ತು. ಆದರೆ ಪಾಂಡವರಿರುವಲ್ಲಿಗೆ ಹೋಗಲು ನನಗೆ ಅನುಜ್ಞೆಯು ಖಂಡಿತವಾಗಿಯೂ ದೊರೆಯುವುದಿಲ್ಲ.
03227003a ಪರಿದೇವತಿ ತಾನ್ವೀರಾನ್ಧೃತರಾಷ್ಟ್ರೋ ಮಹೀಪತಿಃ।
03227003c ಮನ್ಯತೇಽಭ್ಯಧಿಕಾಂಶ್ಚಾಪಿ ತಪೋಯೋಗೇನ ಪಾಂಡವಾನ್।।
ಮಹೀಪತಿ ಧೃತರಾಷ್ಟ್ರನು ಆ ವೀರರ ಕುರಿತು ಪರಿತಪಿಸುತ್ತಾನೆ. ಈಗಂತೂ ಪಾಂಡವರ ತಪೋಯೋಗದಿಂದ ಅವರನ್ನು ಇನ್ನೂ ಹೆಚ್ಚಾಗಿ ಗೌರವಿಸುತ್ತಾನೆ.
03227004a ಅಥ ವಾಪ್ಯನುಬುಧ್ಯೇತ ನೃಪೋಽಸ್ಮಾಕಂ ಚಿಕೀರ್ಷಿತಂ।
03227004c ಏವಮಪ್ಯಾಯತಿಂ ರಕ್ಷನ್ನಾಭ್ಯನುಜ್ಞಾತುಮರ್ಹತಿ।।
ಈಗ ನೃಪನು ನಮ್ಮ ಇಂಗಿತವನ್ನು ತಿಳಿದರೆ, ಭವಿಷ್ಯದಿಂದ ರಕ್ಷಿತನಾಗಲು ನಮ್ಮನ್ನು ಹೋಗಲು ಬಿಡುವುದಿಲ್ಲ.
03227005a ನ ಹಿ ದ್ವೈತವನೇ ಕಿಂ ಚಿದ್ವಿದ್ಯತೇಽನ್ಯತ್ಪ್ರಯೋಜನಂ।
03227005c ಉತ್ಸಾದನಮೃತೇ ತೇಷಾಂ ವನಸ್ಥಾನಾಂ ಮಮ ದ್ವಿಷಾಂ।।
ಏಕೆಂದರೆ ವನದಲ್ಲಿ ವಾಸಿಸುವ ಆ ನನ್ನ ದ್ವೇಷಿಗಳನ್ನು ಕಿತ್ತೊಗೆಯುವ ಕಾರಣವೊಂದನ್ನು ಬಿಟ್ಟರೆ ದ್ವೈತವನಕ್ಕೆ ಹೋಗಲು ಬೇರೆ ಯಾವುದೇ ಕಾರಣವಿಲ್ಲ!
03227006a ಜಾನಾಸಿ ಹಿ ಯಥಾ ಕ್ಷತ್ತಾ ದ್ಯೂತಕಾಲ ಉಪಸ್ಥಿತೇ।
03227006c ಅಬ್ರವೀದ್ಯಚ್ಚ ಮಾಂ ತ್ವಾಂ ಚ ಸೌಬಲಂ ಚ ವಚಸ್ತದಾ।।
ದ್ಯೂತಕಾಲದಲ್ಲಿ ಉಪಸ್ಥಿತನಿದ್ದ ಆ ಕ್ಷತ್ತನು ನನಗೆ, ನಿನಗೆ ಮತ್ತು ಸೌಬಲನಿಗೆ ಹೇಳಿದ್ದುದು ಮತ್ತು ಅವನ ಇತರ ತಕರಾರುಗಳು ನಿನಗೆ ತಿಳಿದೇ ಇವೆ.
03227007a ತಾನಿ ಪೂರ್ವಾಣಿ ವಾಕ್ಯಾನಿ ಯಚ್ಚಾನ್ಯತ್ಪರಿದೇವಿತಂ।
03227007c ವಿಚಿಂತ್ಯ ನಾಧಿಗಚ್ಚಾಮಿ ಗಮನಾಯೇತರಾಯ ವಾ।।
ಹಿಂದಿನ ಆ ಮಾತುಗಳನ್ನು ಮತ್ತು ನಂತರದ ಚಾಡಿಗಳನ್ನು ನೆನಪಿಸಿಕೊಂಡರೆ ಹೋಗಬೇಕೋ ಬೇಡವೋ ಎಂದು ನನಗೂ ನಿರ್ಧರಿಸಲಾಗುತ್ತಿಲ್ಲ.
03227008a ಮಮಾಪಿ ಹಿ ಮಹಾನ್ ಹರ್ಷೋ ಯದಹಂ ಭೀಮಫಲ್ಗುನೌ।
03227008c ಕ್ಲಿಷ್ಟಾವರಣ್ಯೇ ಪಶ್ಯೇಯಂ ಕೃಷ್ಣಯಾ ಸಹಿತಾವಿತಿ।।
ಕೃಷ್ಣೆಯ ಸಹಿತ ಭೀಮ-ಫಲ್ಗುನರು ಅರಣ್ಯದಲ್ಲಿ ಕಷ್ಟದಲ್ಲಿರುವುದನ್ನು ನೋಡಲು ನನಗೂ ಮಹಾ ಹರ್ಷವಾಗುತ್ತದೆ.
03227009a ನ ತಥಾ ಪ್ರಾಪ್ನುಯಾಂ ಪ್ರೀತಿಮವಾಪ್ಯ ವಸುಧಾಮಪಿ।
03227009c ದೃಷ್ಟ್ವಾ ಯಥಾ ಪಾಂಡುಸುತಾನ್ವಲ್ಕಲಾಜಿನವಾಸಸಃ।।
ವಲ್ಕಲ ಜಿನಗಳನ್ನುಟ್ಟ ಪಾಂಡವರನ್ನು ನೋಡುವಾಗ ದೊರಕುವ ಸಂತೋಷವು ವಸುಧೆಯನ್ನು ಪಡೆದಾಗಲೂ ಆಗಿರಲಿಕ್ಕಿಲ್ಲ.
03227010a ಕಿಂ ನು ಸ್ಯಾದಧಿಕಂ ತಸ್ಮಾದ್ಯದಹಂ ದ್ರುಪದಾತ್ಮಜಾಂ।
03227010c ದ್ರೌಪದೀಂ ಕರ್ಣ ಪಶ್ಯೇಯಂ ಕಾಷಾಯವಸನಾಂ ವನೇ।।
ಕರ್ಣ! ವನದಲ್ಲಿ ಕಾಷಾಯವಸ್ತ್ರಗಳನ್ನುಟ್ಟಿರುವ ದ್ರುಪದಾತ್ಮಜೆ ದ್ರೌಪದಿಯನ್ನು ನಾನು ನೋಡುತ್ತೇನಾದರೆ, ಅದಕ್ಕಿಂತಲೂ ಹೆಚ್ಚಿನ ಸಂತೋಷವು ನನಗೆ ಇನ್ನ್ಯಾವುದಿದೆ?
03227011a ಯದಿ ಮಾಂ ಧರ್ಮರಾಜಶ್ಚ ಭೀಮಸೇನಶ್ಚ ಪಾಂಡವಃ।
03227011c ಯುಕ್ತಂ ಪರಮಯಾ ಲಕ್ಷ್ಮ್ಯಾ ಪಶ್ಯೇತಾಂ ಜೀವಿತಂ ಭವೇತ್।।
ಪಾಂಡವ ಧರ್ಮರಾಜ ಮತ್ತು ಭೀಮಸೇನರು ಪರಮ ಸಂಪದ್ಭರಿತನಾದ ನನ್ನನ್ನು ನೋಡಿದರೆಂದರೆ ಅದೇ ಬದುಕೆನೆಸಿಕೊಳ್ಳುತ್ತದೆ!
03227012a ಉಪಾಯಂ ನ ತು ಪಶ್ಯಾಮಿ ಯೇನ ಗಚ್ಚೇಮ ತದ್ವನಂ।
03227012c ಯಥಾ ಚಾಭ್ಯನುಜಾನೀಯಾದ್ಗಚ್ಚಂತಂ ಮಾಂ ಮಹೀಪತಿಃ।।
ಆದರೆ ನಾನು ವನಕ್ಕೆ ಹೋಗುವ ಯಾವ ಉಪಾಯವನ್ನೂ ಕಾಣುತ್ತಿಲ್ಲ. ಮಹೀಪತಿಯು ಹೋಗಲು ಹೇಗೆ ಅನುಮತಿಯನ್ನು ನೀಡುತ್ತಾನೆ ಎನ್ನುವುದೂ ತಿಳಿಯುತ್ತಿಲ್ಲ.
03227013a ಸ ಸೌಬಲೇನ ಸಹಿತಸ್ತಥಾ ದುಃಶಾಸನೇನ ಚ।
03227013c ಉಪಾಯಂ ಪಶ್ಯ ನಿಪುಣಂ ಯೇನ ಗಚ್ಚೇಮ ತದ್ವನಂ।।
ಸೌಬಲ ಮತ್ತು ದುಃಶಾಸನನೊಂದಿಗೆ ನಾವು ಹೇಗೆ ಆ ವನಕ್ಕೆ ಹೋಗಬಹುದೆಂಬ ಉಪಾಯವನ್ನು ನಿಪುಣತೆಯಿಂದ ನೀನು ಕಂಡು ಹೇಳಬೇಕು.
03227014a ಅಹಮಪ್ಯದ್ಯ ನಿಶ್ಚಿತ್ಯ ಗಮನಾಯೇತರಾಯ ವಾ।
03227014c ಕಾಲ್ಯಮೇವ ಗಮಿಷ್ಯಾಮಿ ಸಮೀಪಂ ಪಾರ್ಥಿವಸ್ಯ ಹ।।
ನಾನೂ ಕೂಡ ಹೋಗಬೇಕೋ ಬೇಡವೋ ಎಂದು ನಿಶ್ಚಯಿಸಿ, ನಾಳೆ ಬೆಳಿಗ್ಗೆ ಹೋಗುತ್ತೇನೆ.
03227015a ಮಯಿ ತತ್ರೋಪವಿಷ್ಟೇ ತು ಭೀಷ್ಮೇ ಚ ಕುರುಸತ್ತಮೇ।
03227015c ಉಪಾಯೋ ಯೋ ಭವೇದ್ದೃಷ್ಟಸ್ತಂ ಬ್ರೂಯಾಃ ಸಹಸೌಬಲಃ।।
ಅಲ್ಲಿ ನಾನು ಕುರುಸತ್ತಮ ಭೀಷ್ಮನ ಬಳಿ ಕುಳಿತುಕೊಂಡಿರುವಾಗ ಸೌಬಲನೊಂದಿಗೆ ನೀನು ಕಂಡುಕೊಂಡ ಉಪಾಯವೇನಿದೆಯೋ ಅದನ್ನು ಹೇಳಬೇಕು.
03227016a ತತೋ ಭೀಷ್ಮಸ್ಯ ರಾಜ್ಞಶ್ಚ ನಿಶಮ್ಯ ಗಮನಂ ಪ್ರತಿ।
03227016c ವ್ಯವಸಾಯಂ ಕರಿಷ್ಯೇಽಹಮನುನೀಯ ಪಿತಾಮಹಂ।।
ಆಗ ಭೀಷ್ಮ ಮತ್ತು ರಾಜನು ನನ್ನ ಹೋಗುವಿಕೆಯ ಕುರಿತು ಏನನ್ನು ಹೇಳುತ್ತಾರೋ ಅದನ್ನು ಕೇಳಿ, ನನ್ನ ನಿರ್ಧಾರವನ್ನು ಮಾಡಿ ಪಿತಾಮಹನಲ್ಲಿ ವಿನಯದಿಂದ ಕೇಳಿಕೊಳ್ಳುತ್ತೇನೆ.”
03227017a ತಥೇತ್ಯುಕ್ತ್ವಾ ತು ತೇ ಸರ್ವೇ ಜಗ್ಮುರಾವಸಥಾನ್ಪ್ರತಿ।
03227017c ವ್ಯುಷಿತಾಯಾಂ ರಜನ್ಯಾಂ ತು ಕರ್ಣೋ ರಾಜಾನಮಭ್ಯಯಾತ್।।
ಹಾಗೆಯೇ ಆಗಲೆಂದು ಅವರೆಲ್ಲರೂ ತಮ್ಮ ವಸತಿಗಳಿಗೆ ತೆರಳಿದರು. ರಾತ್ರಿಯು ಕಳೆಯಲು ಕರ್ಣನು ರಾಜನಲ್ಲಿಗೆ ಹೋದನು.
03227018a ತತೋ ದುರ್ಯೋಧನಂ ಕರ್ಣಃ ಪ್ರಹಸನ್ನಿದಮಬ್ರವೀತ್।
03227018c ಉಪಾಯಃ ಪರಿದೃಷ್ಟೋಽಯಂ ತಂ ನಿಬೋಧ ಜನೇಶ್ವರ।।
ಆಗ ಕರ್ಣನು ನಗುತ್ತಾ ದುರ್ಯೋಧನನಿಗೆ ಹೇಳಿದನು: “ಜನೇಶ್ವರ! ಉಪಾಯವನ್ನು ಕಂಡುಕೊಂಡಿದ್ದೇನೆ. ಅದನ್ನು ಕೇಳು.
03227019a ಘೋಷಾ ದ್ವೈತವನೇ ಸರ್ವೇ ತ್ವತ್ಪ್ರತೀಕ್ಷಾ ನರಾಧಿಪ।
03227019c ಘೋಷಯಾತ್ರಾಪದೇಶೇನ ಗಮಿಷ್ಯಾಮೋ ನ ಸಂಶಯಃ।।
ನರಾಧಿಪ! ದ್ವೈತವನದಲ್ಲಿರುವ ಗೋಶಾಲೆಗಳೆಲ್ಲವೂ ನಿನ್ನನ್ನು ಕಾಯುತ್ತಿವೆ. ನಾವು ಅಲ್ಲಿಗೆ ನಿಸ್ಸಂಶಯವಾಗಿಯೂ ಘೋಷಯಾತ್ರೆಯ ನೆಪದಲ್ಲಿ ಹೋಗಬಹುದು.
03227020a ಉಚಿತಂ ಹಿ ಸದಾ ಗಂತುಂ ಘೋಷಯಾತ್ರಾಂ ವಿಶಾಂ ಪತೇ।
03227020c ಏವಂ ಚ ತ್ವಾಂ ಪಿತಾ ರಾಜನ್ಸಮನುಜ್ಞಾತುಮರ್ಹತಿ।।
ರಾಜನ್! ವಿಶಾಂಪತೇ! ಘೋಷಯಾತ್ರೆಗೆ ಹೋಗುವುದು ಸದಾ ಉಚಿತ; ಆದುದರಿಂದ ತಂದೆಯು ನಿನಗೆ ಹೋಗಲು ಅನುಮತಿಯನ್ನು ನೀಡಲೇಬೇಕು.”
03227021a ತಥಾ ಕಥಯಮಾನೌ ತೌ ಘೋಷಯಾತ್ರಾವಿನಿಶ್ಚಯಂ।
03227021c ಗಾಂಧಾರರಾಜಃ ಶಕುನಿಃ ಪ್ರತ್ಯುವಾಚ ಹಸನ್ನಿವ।।
ಹೀಗೆ ಘೋಷಯಾತ್ರೆಯ ಕುರಿತು ನಿರ್ಧರಿಸಿ ಮಾತನಾಡಿಕೊಳ್ಳುತ್ತಿರಲು ಗಾಂಧಾರರಾಜ ಶಕುನಿಯು ನಗುತ್ತಿರುವಂತೆ ಹೀಗೆ ಹೇಳಿದನು:
03227022a ಉಪಾಯೋಽಯಂ ಮಯಾ ದೃಷ್ಟೋ ಗಮನಾಯ ನಿರಾಮಯಃ।
03227022c ಅನುಜ್ಞಾಸ್ಯತಿ ನೋ ರಾಜಾ ಚೋದಯಿಷ್ಯತಿ ಚಾಪ್ಯುತ।।
“ಹೋಗಲು ಈ ಉಪಾಯವು ನಿರಾಮಯವೆಂದು ನನಗೆ ತೋರುತ್ತದೆ. ರಾಜನು ಅನುಮತಿಯನ್ನು ನೀಡುವನಲ್ಲದೇ ಹೋಗಿ ಎಂದು ಒತ್ತಾಯವನ್ನೂ ಮಾಡಬಹುದು.
03227023a ಘೋಷಾ ದ್ವೈತವನೇ ಸರ್ವೇ ತ್ವತ್ಪ್ರತೀಕ್ಷಾ ನರಾಧಿಪ।
03227023c ಘೋಷಯಾತ್ರಾಪದೇಶೇನ ಗಮಿಷ್ಯಾಮೋ ನ ಸಂಶಯಃ।।
ನರಾಧಿಪ! ದ್ವೈತವನದಲ್ಲಿ ಎಲ್ಲ ಗೋಶಾಲೆಗಳೂ ನಿನ್ನ ನಿರೀಕ್ಷೆಯಲ್ಲಿದ್ದಾರೆ. ಮತ್ತು ನಿಸ್ಸಂಶಯವಾಗಿಯೂ ನಾವು ಘೋಷಯಾತ್ರದ ನೆಪದಲ್ಲಿ ಹೋಗಬಹುದು.”
03227024a ತತಃ ಪ್ರಹಸಿತಾಃ ಸರ್ವೇ ತೇಽನ್ಯೋನ್ಯಸ್ಯ ತಲಾನ್ದದುಃ।
03227024c ತದೇವ ಚ ವಿನಿಶ್ಚಿತ್ಯ ದದೃಶುಃ ಕುರುಸತ್ತಮಂ।।
ಆಗ ಸಂತೋಷದಿಂದ ನಗುತ್ತಾ ಆ ಮೂವರೂ ತಾಲಿಗಳನ್ನು ಕೊಟ್ಟರು. ಅದನ್ನು ನಿಶ್ಚಯಿಸಿ ಕುರುಸತ್ತಮನನ್ನು ಕಾಣಲು ಹೋದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಘೋಷಯಾತ್ರಾಮಂತ್ರಣೇ ಸಪ್ತವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಘೋಷಯಾತ್ರಾಮಂತ್ರಣದಲ್ಲಿ ಇನ್ನೂರಾಇಪ್ಪತ್ತೇಳನೆಯ ಅಧ್ಯಾಯವು.