ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಘೋಷಯಾತ್ರಾ ಪರ್ವ
ಅಧ್ಯಾಯ 225
ಸಾರ
ಬ್ರಾಹ್ಮಣನೋರ್ವನು ಧೃತರಾಷ್ಟ್ರನಲ್ಲಿಗೆ ಆಗಮಿಸಿ ಪಾಂಡವರ ವನವಾಶದ ಕ್ಲೇಶಗಳನ್ನು ವರದಿಮಾಡಿದುದು (1-6). ಅದನ್ನು ಕೇಳಿ ಧೃತರಾಷ್ಟ್ರನು ಕರುಣೆಯಿಂದ ತಪಿಸುವುದು (7-31).
03225001 ಜನಮೇಜಯ ಉವಾಚ।
03225001a ಏವಂ ವನೇ ವರ್ತಮಾನಾ ನರಾಗ್ರ್ಯಾಃ। ಶೀತೋಷ್ಣವಾತಾತಪಕರ್ಶಿತಾಂಗಾಃ।
03225001c ಸರಸ್ತದಾಸಾದ್ಯ ವನಂ ಚ ಪುಣ್ಯಂ। ತತಃ ಪರಂ ಕಿಮಕುರ್ವಂತ ಪಾರ್ಥಾಃ।।
ಜನಮೇಜಯನು ಹೇಳಿದನು: “ಈ ನರಾಗ್ರ ಪಾರ್ಥರು ವನದಲ್ಲಿ ವಾಸಿಸುತ್ತಿರುವಾಗ ಛಳಿ, ಸೆಖೆ, ಗಾಳಿ ಮತ್ತು ಬಿಸಿಲಿನಿಂದ ಕೃಶರಾಗಿ ಪುಣ್ಯವನವನ್ನೂ ಸರೋವರವನ್ನೂ ತಲುಪಿದ ನಂತರ ಏನು ಮಾಡಿದರು?”
03225002 ವೈಶಂಪಾಯನ ಉವಾಚ।
03225002a ಸರಸ್ತದಾಸಾದ್ಯ ತು ಪಾಂಡುಪುತ್ರಾ। ಜನಂ ಸಮುತ್ಸೃಜ್ಯ ವಿಧಾಯ ಚೈಷಾಂ।
03225002c ವನಾನಿ ರಮ್ಯಾಣ್ಯಥ ಪರ್ವತಾಂಶ್ಚ। ನದೀಪ್ರದೇಶಾಂಶ್ಚ ತದಾ ವಿಚೇರುಃ।।
ವೈಶಂಪಾಯನನು ಹೇಳಿದನು: “ಪಾಂಡುಪುತ್ರರು ಸರೋವರವನ್ನು ತಲುಪಿ ಜನರನ್ನು ತೊರೆದು ಹೋಗಲು ಅನುಮತಿಯನ್ನಿತ್ತು ರಮ್ಯ ವನ, ಪರ್ವತ ಮತ್ತು ನದೀಪ್ರದೇಶಗಳಲ್ಲಿ ವಿಹರಿಸಿದರು.
03225003a ತಥಾ ವನೇ ತಾನ್ವಸತಃ ಪ್ರವೀರಾನ್। ಸ್ವಾಧ್ಯಾಯವಂತಶ್ಚ ತಪೋಧನಾಶ್ಚ 03225003c ಅಭ್ಯಾಯಯುರ್ವೇದವಿದಃ ಪುರಾಣಾಸ್। ತಾನ್ಪೂಜಯಾಮಾಸುರಥೋ ನರಾಗ್ರ್ಯಾಃ।।
ಆ ಪ್ರವೀರರು ವನದಲ್ಲಿ ಹೀಗೆ ಸ್ವಾಧ್ಯಾಯ-ತಪಸ್ಸಿನಲ್ಲಿ ನಿರತರಾಗಿ ವಾಸಿಸುತ್ತಿರುವಾಗ ವೇದವಿದರೂ ಪುರಾಣವಿದರೂ ಅಲ್ಲಿಗೆ ಬಂದರು ಮತ್ತು ಆ ನರಾಗ್ರರು ಅವರನ್ನು ಪೂಜಿಸಿದರು.
03225004a ತತಃ ಕದಾ ಚಿತ್ಕುಶಲಃ ಕಥಾಸು। ವಿಪ್ರೋಽಭ್ಯಗಚ್ಚದ್ಭುವಿ ಕೌರವೇಯಾನ್।
03225004c ಸ ತೈಃ ಸಮೇತ್ಯಾಥ ಯದೃಚ್ಚಯೈವ। ವೈಚಿತ್ರವೀರ್ಯಂ ನೃಪಮಭ್ಯಗಚ್ಚತ್।।
ಆಗ ಒಂದು ದಿನ ಕಥೆಗಳಲ್ಲಿ ಕುಶಲನಾದ ಓರ್ವ ವಿಪ್ರನು ಕೌರವರ ನಾಡಿಗೆ ಬಂದನು. ಅಷ್ಟರವರೆಗೆ ಬಂದಿದ್ದ ಅವನು ನೃಪ ವೈಚಿತ್ರವೀರ್ಯನಲ್ಲಿಗೆ ಬಂದನು.
03225005a ಅಥೋಪವಿಷ್ಟಃ ಪ್ರತಿಸತ್ಕೃತಶ್ಚ। ವೃದ್ಧೇನ ರಾಜ್ಞಾ ಕುರುಸತ್ತಮೇನ।
03225005c ಪ್ರಚೋದಿತಃ ಸನ್ಕಥಯಾಂ ಬಭೂವ। ಧರ್ಮಾನಿಲೇಂದ್ರಪ್ರಭವಾನ್ಯಮೌ ಚ।।
03225006a ಕೃಶಾಂಶ್ಚ ವಾತಾತಪಕರ್ಶಿತಾಂಗಾನ್। ದುಃಖಸ್ಯ ಚೋಗ್ರಸ್ಯ ಮುಖೇ ಪ್ರಪನ್ನಾನ್।
03225006c ತಾಂ ಚಾಪ್ಯನಾಥಾಮಿವ ವೀರನಾಥಾಂ। ಕೃಷ್ಣಾಂ ಪರಿಕ್ಲೇಶಗುಣೇನ ಯುಕ್ತಾಂ।।
ವೃದ್ಧ ರಾಜ ಕುರುಸತ್ತಮನಿಂದ ಕುಳ್ಳಿರಿಸಿ ಸತ್ಕರಿಸಲ್ಪಟ್ಟು, ಅವನಿಂದ ಪ್ರಚೋದಿತನಾಗಿ, ಗಾಳಿಬಿಸಿಲುಗಳಿಂದ ಕೃಶಾಂಗರಾಗಿ ತಮ್ಮ ದುಃಖಿತ-ಉಗ್ರ ಮುಖಗಳನ್ನು ಮುಚ್ಚಿಕೊಂಡಿರುವ ಧರ್ಮ, ಅನಿಲ, ಇಂದ್ರರಿಂದ ಹುಟ್ಟಿದವರ ಮತ್ತು ಯಮಳರ ಕುರಿತಾದ ಮತ್ತು ವೀರನಾಥರಿದ್ದೂ ಅನಾಥಳಂತೆ ಪರಿಕ್ಲೇಶ-ಗುಣಗಳಿಂದ ಕೂಡಿದ ಕೃಷ್ಣೆಯು ಹೇಗಿದ್ದಾಳೆಂದು ವೃತ್ತಾಂತವನ್ನು ಪ್ರರಂಭಿಸಿದನು.
03225007a ತತಃ ಕಥಾಂ ತಸ್ಯ ನಿಶಮ್ಯ ರಾಜಾ। ವೈಚಿತ್ರವೀರ್ಯಃ ಕೃಪಯಾಭಿತಪ್ತಃ।
03225007c ವನೇ ಸ್ಥಿತಾನ್ಪಾರ್ಥಿವಪುತ್ರಪೌತ್ರಾಂ। ಶ್ರುತ್ವಾ ತದಾ ದುಃಖನದೀಂ ಪ್ರಪನ್ನಾನ್।।
ಆಗ ಅವನ ಕಥೆಯನ್ನು ಕೇಳಿ, ವನದಲ್ಲಿ ರಾಜನ ಮಕ್ಕಳು ಮತ್ತು ಮೊಮ್ಮಕ್ಕಳು ದುಃಖದ ನದಿಯಲ್ಲಿ ಮುಳುಗಿದ್ದಾರೆ ಎಂದು ಕೇಳಿ ರಾಜ ವೈಚಿತ್ರವೀರ್ಯನು ಕರುಣೆಯಿಂದ ತಪಿಸಿದನು.
03225008a ಪ್ರೋವಾಚ ದೈನ್ಯಾಭಿಹತಾಂತರಾತ್ಮಾ। ನಿಃಶ್ವಾಸಬಾಷ್ಪೋಪಹತಃ ಸ ಪಾರ್ಥಾನ್।
03225008c ವಾಚಂ ಕಥಂ ಚಿತ್ಸ್ಥಿರತಾಮುಪೇತ್ಯ। ತತ್ಸರ್ವಮಾತ್ಮಪ್ರಭವಂ ವಿಚಿಂತ್ಯ।।
ಅಂತರಾತ್ಮದಲ್ಲಿ ದೀನನಾಗಿ ಪಾರ್ಥರಿಗಾಗಿ ಕಣ್ಣೀರಿಟ್ಟು ನಿಟ್ಟುಸಿರು ಬಿಡುತ್ತಾ ಅವೆಲ್ಲವಕ್ಕೂ ಮೂಲನು ತಾನೇ ಎಂದು ಚಿಂತಿಸಿ, ಹೇಗೋ ತನ್ನ ಮನಸ್ಸನ್ನು ಸ್ಥಿತಿಗೆ ತಂದುಕೊಂಡು ಹೇಳಿದನು:
03225009a ಕಥಂ ನು ಸತ್ಯಃ ಶುಚಿರಾರ್ಯವೃತ್ತೋ। ಜ್ಯೇಷ್ಠಃ ಸುತಾನಾಂ ಮಮ ಧರ್ಮರಾಜಃ।
03225009c ಅಜಾತಶತ್ರುಃ ಪೃಥಿವೀತಲಸ್ಥಃ। ಶೇತೇ ಪುರಾ ರಾಂಕವಕೂಟಶಾಯೀ।।
“ನನ್ನ ಮಕ್ಕಳಲ್ಲಿ ಜ್ಯೇಷ್ಠನಾದ ಧರ್ಮರಾಜ, ಸತ್ಯವಂತ, ಶುಚಿ, ಆರ್ಯನಡತೆಯ, ಅಜಾತಶತ್ರುವು ಹಿಂದೆ ರಂಕುವಿನ ಉಣ್ಣೆಯ ಮೇಲೆ ಮಲಗಿಕೊಳ್ಳುತ್ತಿದ್ದವನು ಏಕೆ ಇಂದು ನೆಲದಮೇಲೆ ಮಲಗಿಕೊಳ್ಳುತ್ತಿದ್ದಾನೆ?
03225010a ಪ್ರಬೋಧ್ಯತೇ ಮಾಗಧಸೂತಪೂಗೈರ್। ನಿತ್ಯಂ ಸ್ತುವದ್ಭಿಃ ಸ್ವಯಮಿಂದ್ರಕಲ್ಪಃ।
03225010c ಪತತ್ರಿಸಂಘೈಃ ಸ ಜಘನ್ಯರಾತ್ರೇ। ಪ್ರಬೋಧ್ಯತೇ ನೂನಮಿಡಾತಲಸ್ಥಃ।।
ಮಾಗಧ-ಸೂತರ ಪಂಗಡಗಳು ನಿತ್ಯವೂ ಆ ಸ್ವಯಂ ಇಂದ್ರನಂತಿದ್ದವನನ್ನು ಸ್ತುತಿಗಳಿಂದ ಎಚ್ಚರಿಸುತ್ತಿದ್ದರು. ಈಗ ನೆಲದಮೇಲೆ ಮಲಗುವ ಅವನನ್ನು ಪಕ್ಷಿಗಳ ಗುಂಪುಗಳು ಸೂರ್ಯೋದಯದ ಒಳಗೇ ಅವನನ್ನು ಎಚ್ಚರಿಸುತ್ತವೆ!
03225011a ಕಥಂ ನು ವಾತಾತಪಕರ್ಶಿತಾಂಗೋ। ವೃಕೋದರಃ ಕೋಪಪರಿಪ್ಲುತಾಂಗಃ।
03225011c ಶೇತೇ ಪೃಥಿವ್ಯಾಮತಥೋಚಿತಾಂಗಃ। ಕೃಷ್ಣಾಸಮಕ್ಷಂ ವಸುಧಾತಲಸ್ಥಃ।।
ಗಾಳಿ-ಬಿಸಿಲಿನಿಂದ ಅಂಗಾಂಗಗಳು ಸೋತುಹೋದ ವೃಕೋದರನು ಕೋಪದಿಂದ ಅಂಗಾಂಗಗಳು ಉರಿಯುತ್ತಿರಲು ಹೇಗೆ ತಾನೇ ಉಚಿತವಲ್ಲದಿದ್ದರೂ ಭೂಮಿತಾಯಿಯ ಮೇಲೆ ಕೃಷ್ಣೆಯ ಎದಿರು ನೆಲದಮೇಲೆ ಇರುತ್ತಾನೆ?
03225012a ತಥಾರ್ಜುನಃ ಸುಕುಮಾರೋ ಮನಸ್ವೀ। ವಶೇ ಸ್ಥಿತೋ ಧರ್ಮಸುತಸ್ಯ ರಾಜ್ಞಃ।
03225012c ವಿದೂಯಮಾನೈರಿವ ಸರ್ವಗಾತ್ರೈರ್। ಧ್ರುವಂ ನ ಶೇತೇ ವಸತೀರಮರ್ಷಾತ್।।
ಹಾಗೆಯೇ ಸುಕುಮಾರ ಮನಸ್ವಿ ಅರ್ಜುನನು ರಾಜ ಧರ್ಮಸುತನ ವಶದಲ್ಲಿದ್ದುಕೊಂಡು ಅಂಗಾಂಗಗಳೆಲ್ಲವೂ ನೋಯುತ್ತಿರಲು ನಿಶ್ಚಯವಾಗಿಯೂ ಸಿಟ್ಟಿಲ್ಲದೇ ರಾತ್ರಿಗಳನ್ನು ಕಳೆದಿರಲಿಕ್ಕಿಲ್ಲ.
03225013a ಯಮೌ ಚ ಕೃಷ್ಣಾಂ ಚ ಯುಧಿಷ್ಠಿರಂ ಚ। ಭೀಮಂ ಚ ದೃಷ್ಟ್ವಾ ಸುಖವಿಪ್ರಯುಕ್ತಾನ್।
03225013c ವಿನಿಃಶ್ವಸನ್ಸರ್ಪ ಇವೋಗ್ರತೇಜಾ। ಧ್ರುವಂ ನ ಶೇತೇ ವಸತೀರಮರ್ಷಾತ್।।
ಸುಖವಿಲ್ಲದ ಯಮಳರನ್ನೂ, ಕೃಷ್ಣೆಯನ್ನೂ, ಯುಧಿಷ್ಠಿರನನ್ನೂ, ಭೀಮನನ್ನೂ ನೋಡಿ ಅವನು ಉಗ್ರತೇಜಸ್ವಿ ಸರ್ಪದಂತೆ ಭುಸುಗುಟ್ಟುತ್ತಾ ಸಿಟ್ಟಿಲ್ಲದೇ ರಾತ್ರಿಯನ್ನು ಕಳೆಯಲಾರ!
03225014a ತಥಾ ಯಮೌ ಚಾಪ್ಯಸುಖೌ ಸುಖಾರ್ಹೌ। ಸಮೃದ್ಧರೂಪಾವಮರೌ ದಿವೀವ।
03225014c ಪ್ರಜಾಗರಸ್ಥೌ ಧ್ರುವಮಪ್ರಶಾಂತೌ। ಧರ್ಮೇಣ ಸತ್ಯೇನ ಚ ವಾರ್ಯಮಾಣೌ।।
ಸುಖಾರ್ಹರಾದ, ದಿವಿಯಲ್ಲಿಯ ಅಮರರಿಗಿಂತಲೂ ಸಮೃದ್ಧ ರೂಪಿಗಳಾದ ಯಮಳರೂ ಅಸುಖಿಗಳಾಗಿದ್ದಾರೆ; ಧರ್ಮ ಮತ್ತು ಸತ್ಯಗಳಿಂದ ತಡೆಯಲ್ಪಟ್ಟ ಅವರೂ ಈಗ ನಿಜವಾಗಿಯೂ ನಿದ್ದೆಗೆಟ್ಟಿರಬಹುದು ಮತ್ತು ಅಪ್ರಶಾಂತರಾಗಿರಬಹುದು.
03225015a ಸಮೀರಣೇನಾಪಿ ಸಮೋ ಬಲೇನ। ಸಮೀರಣಸ್ಯೈವ ಸುತೋ ಬಲೀಯಾನ್।
03225015c ಸ ಧರ್ಮಪಾಶೇನ ಸಿತೋಗ್ರತೇಜಾ। ಧ್ರುವಂ ವಿನಿಃಶ್ವಸ್ಯ ಸಹತ್ಯಮರ್ಷಂ।।
ಆ ವಾಯುವಿನ ಬಲಶಾಲಿ ಪುತ್ರ, ಅವನಷ್ಟೇ ಬಲವುಳ್ಳವ ವಾಯುಪುತ್ರನ ಉಗ್ರತೇಜಸ್ಸು ಧರ್ಮಪಾಶದಿಂದ ಕಟ್ಟಲ್ಪಟ್ಟಿದೆ. ಅವನು ನಿಜವಾಗಿಯು ನಿಟ್ಟುಸಿರು ಬಿಡುತ್ತಾ ಕೋಪವನ್ನು ಸಹಿಸಿಕೊಳ್ಳುತ್ತಿರಬಹುದು.
03225016a ಸ ಚಾಪಿ ಭೂಮೌ ಪರಿವರ್ತಮಾನೋ। ವಧಂ ಸುತಾನಾಂ ಮಮ ಕಾಂಕ್ಷಮಾಣಃ।
03225016c ಸತ್ಯೇನ ಧರ್ಮೇಣ ಚ ವಾರ್ಯಮಾಣಃ। ಕಾಲಂ ಪ್ರತೀಕ್ಷತ್ಯಧಿಕೋ ರಣೇಽನ್ಯೈಃ।।
ಅವನು ನನ್ನ ಮಕ್ಕಳ ವಧೆಯನ್ನು ಬಯಸುತ್ತಾ ನೆಲದ ಮೇಲೆ ಹೊರಳಾಡುತ್ತಿರಬಹುದು. ಸತ್ಯ ಮತ್ತು ಧರ್ಮಗಳಿಂದ ತಡೆಯಲ್ಪಟ್ಟು, ರಣದಲ್ಲಿ ಅನ್ಯರಿಗಿಂತ ಅಧಿಕನಾದ ಅವನು ಕಾಲವನ್ನು ಕಾಯುತ್ತಿದ್ದಾನೆ.
03225017a ಅಜಾತಶತ್ರೌ ತು ಜಿತೇ ನಿಕೃತ್ಯಾ। ದುಃಶಾಸನೋ ಯತ್ಪರುಷಾಣ್ಯವೋಚತ್।
03225017c ತಾನಿ ಪ್ರವಿಷ್ಟಾನಿ ವೃಕೋದರಾಂಗಂ। ದಹಂತಿ ಮರ್ಮಾಗ್ನಿರಿವೇಂಧನಾನಿ।।
ಮೋಸದಿಂದ ಅಜಾತಶತ್ರುವನ್ನು ಗೆದ್ದಾಗ ದುಃಶಾಸನನು ಈ ಮೂದಲಿಕೆಯ ಮಾತುಗಳನ್ನಾಡಿದ್ದನು. ಅವು ವೃಕೋದರನ ದೇಹವನ್ನು ಚುಚ್ಚಿರಬಹುದು ಮತ್ತು ಇಂಧನವನ್ನು ಬೆಂಕಿಯು ಸುಡುವಂತೆ ಅವನ ಕರುಳುಗಳನ್ನು ಸುಡುತ್ತಿರಬಹುದು.
03225018a ನ ಪಾಪಕಂ ಧ್ಯಾಸ್ಯತಿ ಧರ್ಮಪುತ್ರೋ। ಧನಂಜಯಶ್ಚಾಪ್ಯನುವರ್ತತೇ ತಂ।
03225018c ಅರಣ್ಯವಾಸೇನ ವಿವರ್ಧತೇ ತು। ಭೀಮಸ್ಯ ಕೋಪೋಽಗ್ನಿರಿವಾನಿಲೇನ।।
ಧರ್ಮಪುತ್ರನು ಪಾಪಕೃತ್ಯದ ಕುರಿತು ಯೋಚಿಸುವವನಲ್ಲ; ಧನಂಜಯನಾದರೋ ಅವನಂತೆಯೇ ನಡೆದುಕೊಳ್ಳುವವನು. ಆದರೆ ಅರಣ್ಯವಾಸದಿಂದ ಭೀಮನ ಕೋಪಾಗ್ನಿಯು ಗಾಳಿಯಿಂದ ಉರಿದಂತೆ ಹೆಚ್ಚಾಗುತ್ತಿದೆ.
03225019a ಸ ತೇನ ಕೋಪೇನ ವಿದೀರ್ಯಮಾಣಃ। ಕರಂ ಕರೇಣಾಭಿನಿಪೀಡ್ಯ ವೀರಃ।
03225019c ವಿನಿಃಶ್ವಸತ್ಯುಷ್ಣಮತೀವ ಘೋರಂ। ದಹನ್ನಿವೇಮಾನ್ಮಮ ಪುತ್ರಪೌತ್ರಾನ್।।
ಆ ವೀರನು ಈ ಕೋಪದಿಂದ ಭುಗಿಲೆದ್ದು ಮುಷ್ಟಿಯನ್ನು ಅಂಗೈಗೆ ಹೊಡೆದುಕೊಳ್ಳುತ್ತಾ, ಘೋರವಾದ ಬಿಸಿಉಸಿರು ಬಿಡುತ್ತಾ ನನ್ನ ಪುತ್ರಪೌತ್ರರನ್ನು ಸುಡುವವನಂತಿದ್ದಾನೆ.
03225020a ಗಾಂಡೀವಧನ್ವಾ ಚ ವೃಕೋದರಶ್ಚ। ಸಂರಂಭಿಣಾವಂತಕಕಾಲಕಲ್ಪೌ।
03225020c ನ ಶೇಷಯೇತಾಂ ಯುಧಿ ಶತ್ರುಸೇನಾಂ। ಶರಾನ್ಕಿರಂತಾವಶನಿಪ್ರಕಾಶಾನ್।।
ಗಾಂಡೀವಧನ್ವಿ ಮತ್ತು ವೃಕೋದರರು ಕಲ್ಪವು ಅಂತ್ಯವಾಗುವ ಕಾಲದ ಅಗ್ನಿಯಂತೆ ಧ್ವಂಸಮಾಡುವವರು; ಸಿಡಿಲುಗಳಂಥ ಬಾಣಗಳನ್ನು ಅವರು ತೂರುವಾಗ ಯುದ್ಧದಲ್ಲಿ ಶತ್ರುಸೇನೆಯು ಉಳಿಯುವುದಿಲ್ಲ.
03225021a ದುರ್ಯೋಧನಃ ಶಕುನಿಃ ಸೂತಪುತ್ರೋ। ದುಃಶಾಸನಶ್ಚಾಪಿ ಸುಮಂದಚೇತಾಃ।
03225021c ಮಧು ಪ್ರಪಶ್ಯಂತಿ ನ ತು ಪ್ರಪಾತಂ। ವೃಕೋದರಂ ಚೈವ ಧನಂಜಯಂ ಚ।।
ಮಂದಚೇತಸರಾದ ದುರ್ಯೋಧನ, ಶಕುನಿ, ಸೂತಪುತ್ರ ಮತ್ತು ದುಃಶಾಸನರು ಮಧುವನ್ನು ಕಾಣುತ್ತಾರೆ. ಪ್ರಪಾತವನ್ನಾಗಲೀ ವೃಕೋದರನನ್ನಾಗಲೀ ಮತ್ತು ಧನಂಜಯನನ್ನಾಗಲೀ ಅಲ್ಲ.
03225022a ಶುಭಾಶುಭಂ ಪುರುಷಃ ಕರ್ಮ ಕೃತ್ವಾ। ಪ್ರತೀಕ್ಷತೇ ತಸ್ಯ ಫಲಂ ಸ್ಮ ಕರ್ತಾ।
03225022c ಸ ತೇನ ಯುಜ್ಯತ್ಯವಶಃ ಫಲೇನ। ಮೋಕ್ಷಃ ಕಥಂ ಸ್ಯಾತ್ಪುರುಷಸ್ಯ ತಸ್ಮಾತ್।।
ಶುಭಾಶುಭ ಕರ್ಮಗಳನ್ನು ಮಾಡಿ ಪುರುಷನು ತಾನು ಮಾಡಿದುದರ ಫಲವನ್ನು ಪ್ರತೀಕ್ಷಿಸುತ್ತಿರುತ್ತಾನೆ. ಅವನು ಅವಶ್ಯವಾಗಿ ಆ ಫಲಕ್ಕೆ ಬದ್ಧನಾಗಿರುವಾಗ ಪುರುಷನಿಗೆ ಅದರಿಂದ ಹೇಗೆ ತಾನೇ ಮುಕ್ತಿ ದೊರೆಯುವುದು?
03225023a ಕ್ಷೇತ್ರೇ ಸುಕೃಷ್ಟೇ ಹ್ಯುಪಿತೇ ಚ ಬೀಜೇ। ದೇವೇ ಚ ವರ್ಷತ್ಯೃತುಕಾಲಯುಕ್ತಂ।
03225023c ನ ಸ್ಯಾತ್ಫಲಂ ತಸ್ಯ ಕುತಃ ಪ್ರಸಿದ್ಧಿರ್। ಅನ್ಯತ್ರ ದೈವಾದಿತಿ ಚಿಂತಯಾಮಿ।।
ಹೊಲವನ್ನು ಹೂಳಿ, ಬೀಜವನ್ನು ಬಿತ್ತಿ, ದೇವತೆಗಳು ಋತುಕಾಲಕ್ಕೆ ತಕ್ಕಂತೆ ಮಳೆಯನ್ನು ಸುರಿಸಿದಾಗ ಬೆಳೆಯು ಬೆಳೆಯುವುದಿಲ್ಲವೇ? ಅದನ್ನು ಯಾರುತಾನೇ ನೋಡಿಲ್ಲ? ಬೇರೆ ಏನಾದರೂ ಆದರೆ ಅದು ದೈವವೆಂದು ಯೋಚಿಸುತ್ತೇನೆ.
03225024a ಕೃತಂ ಮತಾಕ್ಷೇಣ ಯಥಾ ನ ಸಾಧು। ಸಾಧುಪ್ರವೃತ್ತೇನ ಚ ಪಾಂಡವೇನ।
03225024c ಮಯಾ ಚ ದುಷ್ಪುತ್ರವಶಾನುಗೇನ। ಯಥಾ ಕುರೂಣಾಮಯಮಂತಕಾಲಃ।।
ಸಾಧುಪ್ರವೃತ್ತಿಯ ಪಾಂಡವರೊಂದಿಗೆ ಜೂಜನ್ನು ಸರಿಯಾಗಿ ಆಡಲಿಲ್ಲ ಎಂದು ತಿಳಿದೂ ದುಷ್ಟ ಮಕ್ಕಳನ್ನು ಅನುಸರಿಸಿದ ನಾನು ಕುರುಗಳ ಅಂತ್ಯಕಾಲವನ್ನು ತಂದೆನಲ್ಲ!
03225025a ಧ್ರುವಂ ಪ್ರವಾಸ್ಯತ್ಯಸಮೀರಿತೋಽಪಿ। ಧ್ರುವಂ ಪ್ರಜಾಸ್ಯತ್ಯುತ ಗರ್ಭಿಣೀ ಯಾ।
03225025c ಧ್ರುವಂ ದಿನಾದೌ ರಜನೀಪ್ರಣಾಶಸ್। ತಥಾ ಕ್ಷಪಾದೌ ಚ ದಿನಪ್ರಣಾಶಃ।।
ನಿಶ್ಚಯವಾಗಿಯೂ ಗಾಳಿಯು ತಡೆಯಿಲ್ಲದೇ ಬೀಸುತ್ತದೆ. ನಿಶ್ಚಯವಾಗಿಯೂ ಗರ್ಭಿಣಿಯು ಹಡೆಯುತ್ತಾಳೆ. ನಿಶ್ಚಯವಾಗಿಯೂ ಉದಯವು ರಾತ್ರಿಯನ್ನು ನಾಶಪಡಿಸುತ್ತದೆ ಮತ್ತು ಹಾಗೆಯೇ ಸಂಜೆಯು ದಿನವನ್ನು ನಾಶಪಡಿಸುತ್ತದೆ.
03225026a ಕ್ರಿಯೇತ ಕಸ್ಮಾನ್ನ ಪರೇ ಚ ಕುರ್ಯುರ್। ವಿತ್ತಂ ನ ದದ್ಯುಃ ಪುರುಷಾಃ ಕಥಂ ಚಿತ್।
03225026c ಪ್ರಾಪ್ಯಾರ್ಥಕಾಲಂ ಚ ಭವೇದನರ್ಥಃ। ಕಥಂ ನು ತತ್ಸ್ಯಾದಿತಿ ತತ್ಕುತಃ ಸ್ಯಾತ್।।
ಇತರರು ದುಡಿಯದಿರುವಾಗ ಏಕೆ ದುಡಿಯಬೇಕು? ಪುರುಷರು ಎಂದೂ ವಿತ್ತವನ್ನು ದಾನಮಾಡದಿದ್ದರೆ ಏಕೆ ಮಾಡಬೇಕು? ಸಂಪತ್ತಿನ ಕಾಲ ಬಂದರೂ ಸಂಪತ್ತು ಇಲ್ಲವಲ್ಲ! ಏಕೆ ಮಾಡಬೇಕೆಂದು ಯಾರೂ ಏನನ್ನೂ ಮಾಡುವುದಿಲ್ಲ.
03225027a ಕಥಂ ನ ಭಿದ್ಯೇತ ನ ಚ ಸ್ರವೇತ। ನ ಚ ಪ್ರಸಿಚ್ಯೇದಿತಿ ರಕ್ಷಿತವ್ಯಂ।
03225027c ಅರಕ್ಷ್ಯಮಾಣಃ ಶತಧಾ ವಿಶೀರ್ಯೇದ್। ಧ್ರುವಂ ನ ನಾಶೋಽಸ್ತಿ ಕೃತಸ್ಯ ಲೋಕೇ।।
ನಾವು ನಮ್ಮ ಸಂಪತ್ತನ್ನು ಭಾಗವಾಗಬಾರದು, ಒಡೆದುಹೋಗಬಾರದು ಮತ್ತು ಸೋರಿಹೋಗಬಾರದೆಂದು ರಕ್ಷಿಸುತ್ತೇವೆ. ರಕ್ಷಿಸದೇ ಇದ್ದರೆ ಅದು ನೂರು ತುಂಡಾಗಬಹುದು. ನಿಶ್ಚಯವಾಗಿಯೂ ಲೋಕದಲ್ಲಿ ಮಾಡಿದುದು ನಾಶವಾಗುವುದಿಲ್ಲ.
03225028a ಗತೋ ಹ್ಯರಣ್ಯಾದಪಿ ಶಕ್ರಲೋಕಂ। ಧನಂಜಯಃ ಪಶ್ಯತ ವೀರ್ಯಮಸ್ಯ।
03225028c ಅಸ್ತ್ರಾಣಿ ದಿವ್ಯಾನಿ ಚತುರ್ವಿಧಾನಿ। ಜ್ಞಾತ್ವಾ ಪುನರ್ಲೋಕಮಿಮಂ ಪ್ರಪನ್ನಃ।।
ಅರಣ್ಯದಿಂದ ಶಕ್ರಲೋಕಕ್ಕೆ ಹೋದ ಧನಂಜಯನ ವೀರ್ಯವನ್ನು ನೋಡು! ಅವನು ಪುನಃ ಈ ಲೋಕಕ್ಕೆ ಬಂದಾಗ ಅವನಿಗೆ ನಾಲ್ಕು ವಿಧದ ದಿವ್ಯ ಅಸ್ತ್ರಗಳು ತಿಳಿದಿದ್ದವು.
03225029a ಸ್ವರ್ಗಂ ಹಿ ಗತ್ವಾ ಸಶರೀರ ಏವ। ಕೋ ಮಾನುಷಃ ಪುನರಾಗಂತುಮಿಚ್ಚೇತ್।
03225029c ಅನ್ಯತ್ರ ಕಾಲೋಪಹತಾನನೇಕಾನ್। ಸಮೀಕ್ಷಮಾಣಸ್ತು ಕುರೂನ್ಮುಮೂರ್ಷೂನ್।।
ಸಶರೀರನಾಗಿಯೇ ಸ್ವರ್ಗಕ್ಕೆ ಹೋಗಿ, ಲೆಕ್ಕವಿಲ್ಲದಷ್ಟು ಕುರುಗಳು ಕಾಲನಿಂದ ಹತರಾಗುವುದನ್ನು ಕಾಣದ ಯಾವ ಮನುಷ್ಯನು ಪುನಃ ಬರಲು ಬಯಸುತ್ತಾನೆ?
03225030a ಧನುರ್ಗ್ರಾಹಶ್ಚಾರ್ಜುನಃ ಸವ್ಯಸಾಚೀ। ಧನುಶ್ಚ ತದ್ಗಾಂಡಿವಂ ಲೋಕಸಾರಂ।
03225030c ಅಸ್ತ್ರಾಣಿ ದಿವ್ಯಾನಿ ಚ ತಾನಿ ತಸ್ಯ। ತ್ರಯಸ್ಯ ತೇಜಃ ಪ್ರಸಹೇತ ಕೋ ನು।।
ಆ ಧನುಷ್ಪಾಣಿ ಅರ್ಜುನ ಸವ್ಯಸಾಚಿಯ, ಲೋಕಸಾರವಾದ ಆ ಗಾಂಡೀವ ಧನುಸ್ಸಿನ, ಮತ್ತು ಅವನ ದಿವ್ಯಾಸ್ತ್ರಗಳ - ಈ ಮೂರರ ತೇಜಸ್ಸನ್ನು ಯಾರುತಾನೇ ಸಹಿಸಿಯಾರು?”
03225031a ನಿಶಮ್ಯ ತದ್ವಚನಂ ಪಾರ್ಥಿವಸ್ಯ। ದುರ್ಯೋಧನೋ ರಹಿತೇ ಸೌಬಲಶ್ಚ।
03225031c ಅಬೋಧಯತ್ಕರ್ಣಮುಪೇತ್ಯ ಸರ್ವಂ। ಸ ಚಾಪ್ಯಹೃಷ್ಟೋಽಭವದಲ್ಪಚೇತಾಃ।।
ದುರ್ಯೋಧನ ಮತ್ತು ಸೌಬಲರು ಗುಟ್ಟಿನಲ್ಲಿ ಪಾರ್ಥಿವನ ಆ ಮಾತುಗಳನ್ನು ಕೇಳಿ ಎಲ್ಲವನ್ನೂ ಕರ್ಣನಿಗೆ ಹೋಗಿ ಹೇಳಿದರು. ಅದರಿಂದ ಅವನು ಸಂತೋಷವನ್ನು ಕಳೆದುಕೊಂಡು ಅಲ್ಪಚೇತಸನಾದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಘೋಷಯಾತ್ರಾ ಪರ್ವಣಿ ಧೃತರಾಷ್ಟ್ರಖೇದವಾಕ್ಯೇ ಪಂಚವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಘೋಷಯಾತ್ರಾ ಪರ್ವದಲ್ಲಿ ಧೃತರಾಷ್ಟ್ರಖೇದವಾಕ್ಯದಲ್ಲಿ ಇನ್ನೂರಾಇಪ್ಪತ್ತೈದನೆಯ ಅಧ್ಯಾಯವು.