223

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ದ್ರೌಪದೀ-ಸತ್ಯಭಾಮಾಸಂವಾದ ಪರ್ವ

ಅಧ್ಯಾಯ 223

ಸಾರ

ಪತಿಯ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ದೋಷವಿಲ್ಲದ ಮಾರ್ಗವನ್ನು ದ್ರೌಪದಿಯು ಸತ್ಯಭಾಮೆಗೆ ಹೇಳುವುದು (1-12).

03223001 ದ್ರೌಪದ್ಯುವಾಚ।
03223001a ಇಮಂ ತು ತೇ ಮಾರ್ಗಮಪೇತದೋಷಂ। ವಕ್ಷ್ಯಾಮಿ ಚಿತ್ತಗ್ರಹಣಾಯ ಭರ್ತುಃ।
03223001c ಯಸ್ಮಿನ್ಯಥಾವತ್ಸಖಿ ವರ್ತಮಾನಾ। ಭರ್ತಾರಮಾಚ್ಚೇತ್ಸ್ಯಸಿ ಕಾಮಿನೀಭ್ಯಃ।।

ದ್ರೌಪದಿಯು ಹೇಳಿದಳು: “ಪತಿಯ ಚಿತ್ತವನ್ನು ಹಿಡಿದಿಟ್ಟುಕೊಳ್ಳುವ ದೋಷವಿಲ್ಲದ ಈ ಮಾರ್ಗವನ್ನು ನಾನು ನಿನಗೆ ಹೇಳುತ್ತೇನೆ. ಸಖೀ! ಈ ರೀತಿ ಸರಿಯಾಗಿ ನಡೆದು ಕೊಳ್ಳುವುದರಿಂದ ನಿನ್ನ ಪತಿಯನ್ನು ಇತರ ಕಾಮಿನಿಯರಿಂದ ದೂರವಿಡಬಹುದು.

03223002a ನೈತಾದೃಶಂ ದೈವತಮಸ್ತಿ ಸತ್ಯೇ। ಸರ್ವೇಷು ಲೋಕೇಷು ಸದೈವತೇಷು।
03223002c ಯಥಾ ಪತಿಸ್ತಸ್ಯ ಹಿ ಸರ್ವಕಾಮಾ। ಲಭ್ಯಾಃ ಪ್ರಸಾದೇ ಕುಪಿತಶ್ಚ ಹನ್ಯಾತ್।।

ಸತ್ಯೇ! ಎಲ್ಲ ಲೋಕಗಳಲ್ಲಿಯೂ ಎಲ್ಲ ದೇವತೆಗಳಲ್ಲಿಯೂ ಪತಿಯ ಸಮಾನನಾದ ದೇವರಿಲ್ಲ! ಅವನು ಒಲಿದರೆ ಸರ್ಮಕಾಮಗಳೂ ಪ್ರಾಪ್ತವಾಗುತ್ತವೆ. ಮುನಿದರೆ ಸತ್ತಹಾಗೆ!

03223003a ತಸ್ಮಾದಪತ್ಯಂ ವಿವಿಧಾಶ್ಚ ಭೋಗಾಃ। ಶಯ್ಯಾಸನಾನ್ಯದ್ಭುತದರ್ಶನಾನಿ।
03223003c ವಸ್ತ್ರಾಣಿ ಮಾಲ್ಯಾನಿ ತಥೈವ ಗಂಧಾಃ। ಸ್ವರ್ಗಶ್ಚ ಲೋಕೋ ವಿಷಮಾ ಚ ಕೀರ್ತಿಃ।।

ಅವನಿಂದ ಮಕ್ಕಳನ್ನು, ವಿವಿಧ ಭೋಗಗಳನ್ನು, ಹಾಸಿಗೆ, ಆಸನ, ಅದ್ಭುತ ನೋಟಗಳು, ವಸ್ತ್ರಗಳು, ಮಾಲೆಗಳು, ಹಾಗೆಯೇ ಸುಗಂಧಗಳು, ಸ್ವರ್ಗಲೋಕ ಮತ್ತು ವಿಷಮ ಕೀರ್ತಿಗಳು ದೊರೆಯುತ್ತವೆ.

03223004a ಸುಖಂ ಸುಖೇನೇಹ ನ ಜಾತು ಲಭ್ಯಂ। ದುಃಖೇನ ಸಾಧ್ವೀ ಲಭತೇ ಸುಖಾನಿ।
03223004c ಸಾ ಕೃಷ್ಣಮಾರಾಧಯ ಸೌಹೃದೇನ। ಪ್ರೇಂಣಾ ಚ ನಿತ್ಯಂ ಪ್ರತಿಕರ್ಮಣಾ ಚ।।

ಸುಖದಿಂದ ಸುಖವು ಇಲ್ಲಿ ದೊರೆಯುವುದಿಲ್ಲ. ಸಾಧ್ವಿಯು ದುಃಖದಿಂದ ಸುಖಗಳನ್ನು ಪಡೆಯುತ್ತಾಳೆ. ಆದುದರಿಂದ ಕೃಷ್ಣನನ್ನು ಒಳ್ಳೆಯ ಹೃದಯದಿಂದ ಆರಾಧಿಸು. ನಿತ್ಯವೂ ಪ್ರೇಮದಿಂದ ಉಪಚರಿಸು.

03223005a ತಥಾಶನೈಶ್ಚಾರುಭಿರಗ್ರ್ಯಮಾಲ್ಯೈರ್। ದಾಕ್ಷಿಣ್ಯಯೋಗೈರ್ವಿವಿಧೈಶ್ಚ ಗಂಧೈಃ।
03223005c ಅಸ್ಯಾಃ ಪ್ರಿಯೋಽಸ್ಮೀತಿ ಯಥಾ ವಿದಿತ್ವಾ। ತ್ವಾಮೇವ ಸಂಶ್ಲಿಷ್ಯತಿ ಸರ್ವಭಾವೈಃ।।

ರುಚಿಯಾದ ಅಡುಗೆಗಳ ಮೂಲಕ, ಸುಂದರ ಮಾಲೆಗಳ ಮೂಲಕ, ದಾಕ್ಷಿಣ್ಯ ಯೋಗಗಳ ಮೂಲಕ, ವಿವಿಧ ಸುಗಂಧಗಳ ಮೂಲಕ ತಾನು ಇವಳಿಗೆ ಪ್ರೀತಿಯವನು ಎಂದು ಅವನು ತಿಳಿದು ಅವನೇ ಸರ್ವಭಾವಗಳಿಂದ ನಿನ್ನನ್ನು ಆಲಂಗಿಸುತ್ತಾನೆ.

03223006a ಶ್ರುತ್ವಾ ಸ್ವರಂ ದ್ವಾರಗತಸ್ಯ ಭರ್ತುಃ। ಪ್ರತ್ಯುತ್ಥಿತಾ ತಿಷ್ಠ ಗೃಹಸ್ಯ ಮಧ್ಯೇ।
03223006c ದೃಷ್ಟ್ವಾ ಪ್ರವಿಷ್ಟಂ ತ್ವರಿತಾಸನೇನ। ಪಾದ್ಯೇನ ಚೈವ ಪ್ರತಿಪೂಜಯ ತ್ವಂ।।

ಬಾಗಿಲಿನಲ್ಲಿ ನಿನ್ನ ಪತಿಯ ಸ್ವರವನ್ನು ಕೇಳಿದೊಡನೆಯೇ ಮೇಲೆದ್ದು ಮನೆಯ ಮಧ್ಯದಲ್ಲಿ ನಿಲ್ಲು. ಅವನು ಒಳ ಪ್ರವೇಶಿಸಿದನ್ನು ನೋಡಿ ಬೇಗನೇ ಆಸನದಿಂದ ಮತ್ತು ಪಾದ್ಯದಿಂದ ಅವನನ್ನು ಪೂಜಿಸು.

03223007a ಸಂಪ್ರೇಷಿತಾಯಾಮಥ ಚೈವ ದಾಸ್ಯಾಂ। ಉತ್ಥಾಯ ಸರ್ವಂ ಸ್ವಯಮೇವ ಕುರ್ಯಾಃ।
03223007c ಜಾನಾತು ಕೃಷ್ಣಸ್ತವ ಭಾವಮೇತಂ। ಸರ್ವಾತ್ಮನಾ ಮಾಂ ಭಜತೀತಿ ಸತ್ಯೇ।।

ಈಗ ದಾಸಿಯನ್ನು ಕಳುಹಿಸಿಕೊಡು. ಎದ್ದು ಎಲ್ಲವನ್ನೂ ಸ್ವಯಂ ನೀನೇ ಮಾಡು. ಸತ್ಯೇ! ಆಗ ಕೃಷ್ಣನು ನಿನ್ನ ಭಾವವನ್ನು ತಿಳಿಯುತ್ತಾನೆ. ಇವಳು ಸಂಪೂರ್ಣವಾಗಿ ನನ್ನನ್ನೇ ಪ್ರೀತಿಸುತ್ತಾಳೆ ಎಂದು ಯೋಚಿಸುತ್ತಾನೆ.

03223008a ತ್ವತ್ಸನ್ನಿಧೌ ಯತ್ಕಥಯೇತ್ಪತಿಸ್ತೇ। ಯದ್ಯಪ್ಯಗುಹ್ಯಂ ಪರಿರಕ್ಷಿತವ್ಯಂ।
03223008c ಕಾ ಚಿತ್ಸಪತ್ನೀ ತವ ವಾಸುದೇವಂ। ಪ್ರತ್ಯಾದಿಶೇತ್ತೇನ ಭವೇದ್ವಿರಾಗಃ।।

ನಿನ್ನ ಸನ್ನಿಧಿಯಲ್ಲಿ ನಿನ್ನ ಪತಿಯು ಏನನ್ನೇ ಹೇಳಿದರೂ, ಗುಟ್ಟಲ್ಲದಿದ್ದರೂ, ಗುಟ್ಟಾಗಿಯೇ ಇಡು. ನಿನ್ನ ಸವತಿಯೋರ್ವಳು ನಿನ್ನ ಕುರಿತು ವಾಸುದೇವನಿಗೆ ಹೇಳಿ ನಿನ್ನ ಕುರಿತು ವಿರಾಗನಾಗಬಹುದು.

03223009a ಪ್ರಿಯಾಂಶ್ಚ ರಕ್ತಾಂಶ್ಚ ಹಿತಾಂಶ್ಚ ಭರ್ತುಸ್। ತಾನ್ಭೋಜಯೇಥಾ ವಿವಿಧೈರುಪಾಯೈಃ।
03223009c ದ್ವೇಷ್ಯೈರಪಕ್ಷೈರಹಿತೈಶ್ಚ ತಸ್ಯ। ಭಿದ್ಯಸ್ವ ನಿತ್ಯಂ ಕುಹಕೋದ್ಧತೈಶ್ಚ।।

ವಿವಿಧ ಉಪಾಯಗಳನ್ನು ಬಳಸಿ ನಿನ್ನ ಪತಿಯ ಪ್ರೀತಿಪಾತ್ರರನ್ನು, ವಿಧೇಯರನ್ನು, ಹಿತೈಷಿಗಳನ್ನು ಭೋಜನಕ್ಕೆ ಕರೆ. ಅವನ ದ್ವೇಷಿಗಳನ್ನು, ವಿರುದ್ಧ ಪಕ್ಷದಲ್ಲಿರುವವರನ್ನು, ಹಿತೈಷಿಗಳಲ್ಲದವರನ್ನು, ಕುಹಕರನ್ನು, ಉದ್ಧಟರಾಗಿ ನಡೆದುಕೊಳ್ಳುವವರನ್ನು ನಿತ್ಯವೂ ಬೇರೆಯಾಗಿಡು.

03223010a ಮದಂ ಪ್ರಮಾದಂ ಪುರುಷೇಷು ಹಿತ್ವಾ। ಸಮ್ಯಚ್ಚ ಭಾವಂ ಪ್ರತಿಗೃಹ್ಯ ಮೌನಂ।
03223010c ಪ್ರದ್ಯುಮ್ನಸಾಂಬಾವಪಿ ತೇ ಕುಮಾರೌ। ನೋಪಾಸಿತವ್ಯೌ ರಹಿತೇ ಕದಾ ಚಿತ್।।

ನಿನ್ನ ಪುರುಷನು ಮತ್ತಿನಲ್ಲಿ ಏನಾದರೂ ಪ್ರಮಾದವನ್ನೆಸಗಿದರೆ ನಿನ್ನ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಂಡು ಮೌನವನ್ನು ತಾಳು. ಪ್ರದ್ಯುಮ್ನ- ಸಾಂಬ1 ಇಬ್ಬರೂ ನಿನ್ನ ಪುತ್ರರೇ. ಎಂದೂ ಅವರನ್ನು ಬೇರೆ ಬೇರೆಯಾಗಿ ನೋಡಿಕೊಳ್ಳಬೇಡ.

03223011a ಮಹಾಕುಲೀನಾಭಿರಪಾಪಿಕಾಭಿಃ। ಸ್ತ್ರೀಭಿಃ ಸತೀಭಿಸ್ತವ ಸಖ್ಯಮಸ್ತು।
03223011c ಚಂಡಾಶ್ಚ ಶೌಂಡಾಶ್ಚ ಮಹಾಶನಾಶ್ಚ। ಚೌರಾಶ್ಚ ದುಷ್ಟಾಶ್ಚಪಲಾಶ್ಚ ವರ್ಜ್ಯಾಃ।।

ಉತ್ತಮ ಕುಲದಲ್ಲಿ ಜನಿಸಿದ, ಕೆಟ್ಟವರಲ್ಲದ, ಸತೀ ಸ್ತ್ರೀಯರೊಂದಿಗೆ ಸಖ್ಯವನ್ನು ಮಾಡು. ಚಂಡರೂ, ಶುಂಡರೂ, ತುಂಬಾ ಊಟಮಾಡುವವರೂ, ಕಳ್ಳರೂ, ದುಷ್ಟರೂ, ಚಪಲರೂ ಆದವರನ್ನು ದೂರವಿಡು.

03223012a ಏತದ್ಯಶಸ್ಯಂ ಭಗವೇದನಂ ಚ। ಸ್ವರ್ಗ್ಯಂ ತಥಾ ಶತ್ರುನಿಬರ್ಹಣಂ ಚ।
03223012c ಮಹಾರ್ಹಮಾಲ್ಯಾಭರಣಾಂಗರಾಗಾ। ಭರ್ತಾರಮಾರಾಧಯ ಪುಣ್ಯಗಂಧಾ।।

ಇದು ಉತ್ತಮವಾದ, ಸ್ವರ್ಗಸುಖವನ್ನು ನೀಡುವ, ಶತ್ರುಗಳನ್ನು ದೂರವಿಡುವ ದಾಂಪತ್ಯ ಜೀವನದ ಗುಟ್ಟು. ಬೆಲೆಬಾಳುವ ಮಾಲೆಗಳನ್ನು, ಆಭರಣಗಳನ್ನು, ಪುಣ್ಯ ಸುಗಂಧಗಳನ್ನು ಧರಿಸಿ ನಿನ್ನ ಪತಿಯನ್ನು ಆರಾಧಿಸು.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಸತ್ಯಭಾಮಾಸಂವಾದ ಪರ್ವಣಿ ತ್ರಿವಿಂಶತ್ಯಾಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಸತ್ಯಭಾಮಾಸಂವಾದ ಪರ್ವದಲ್ಲಿ ಇನ್ನೂರಾಇಪ್ಪತ್ಮೂರನೆಯ ಅಧ್ಯಾಯವು.


  1. ಪ್ರದ್ಯುಮ್ನನು ರುಕ್ಮಿಣಿಯ ಮಗ ಮತ್ತು ಸಾಂಬನು ಜಾಂಬವತಿಯ ಮಗ. ↩︎