ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ದ್ರೌಪದೀ-ಸತ್ಯಭಾಮಾಸಂವಾದ ಪರ್ವ
ಅಧ್ಯಾಯ 222
ಸಾರ
ಸತ್ಯಭಾಮೆಯು ದ್ರೌಪದಿಯಲ್ಲಿ ಅವಳು ಹೇಗೆ ಲೋಕಪಾಲರಂತೆ ವೀರರೂ ಸುಂದರರೂ ಆದ ಪಾಂಡವರನ್ನು ಆಳುತ್ತಾಳೆ ಎಂದು ಕೇಳಿದುದು (1-7). ಸ್ತ್ರೀಯರು ಅನುಸರಿಸುವ ಪಾಪದ ದಾರಿಗಳನ್ನು ಹೇಳಿ, ತಾನು ಪಾಂಡವರೊಂದಿಗೆ ನಡೆದುಕೊಳ್ಳುವ ರೀತಿಯನ್ನು ದ್ರೌಪದಿಯು ಹೇಳುವುದು (8-59).
03222001 ವೈಶಂಪಾಯನ ಉವಾಚ।
03222001a ಉಪಾಸೀನೇಷು ವಿಪ್ರೇಷು ಪಾಂಡವೇಷು ಮಹಾತ್ಮಸು।
03222001c ದ್ರೌಪದೀ ಸತ್ಯಭಾಮಾ ಚ ವಿವಿಶಾತೇ ತದಾ ಸಮಂ।
03222001e ಜಾಹಸ್ಯಮಾನೇ ಸುಪ್ರೀತೇ ಸುಖಂ ತತ್ರ ನಿಷೀದತುಃ।।
ವೈಶಂಪಾಯನನು ಹೇಳಿದನು: “ಮಹಾತ್ಮ ವಿಪ್ರರು ಮತ್ತು ಪಾಂಡವರು ಕುಳಿತುಕೊಂಡಿರಲು ದ್ರೌಪದೀ ಮತ್ತು ಸತ್ಯಭಾಮೆಯರು ಆಶ್ರಮವನ್ನು ಪ್ರವೇಶಿಸಿದರು. ಅಲ್ಲಿ ನಗುತ್ತಾ ಸಂತೋಷದಿಂದ ಸುಖವಾಗಿ ಕಾಲಕಳೆದರು.
03222002a ಚಿರಸ್ಯ ದೃಷ್ಟ್ವಾ ರಾಜೇಂದ್ರ ತೇಽನ್ಯೋನ್ಯಸ್ಯ ಪ್ರಿಯಂವದೇ।
03222002c ಕಥಯಾಮಾಸತುಶ್ಚಿತ್ರಾಃ ಕಥಾಃ ಕುರುಯದುಕ್ಷಿತಾಂ।।
ರಾಜೇಂದ್ರ! ಬಹುಕಾಲದ ನಂತರ ನೋಡಿದ ಅವರು ಅನ್ಯೋನ್ಯರೊಂದಿಗೆ ಪ್ರಿಯವಾಗಿ ಮಾತನಾಡುತ್ತಾ ಕುರು ಮತ್ತು ಯದುಗಳ ಕುರಿತಾದ ವಿಚಿತ್ರ ಕಥೆಗಳನ್ನು ಹೇಳತೊಡಗಿದರು.
03222003a ಅಥಾಬ್ರವೀತ್ಸತ್ಯಭಾಮಾ ಕೃಷ್ಣಸ್ಯ ಮಹಿಷೀ ಪ್ರಿಯಾ।
03222003c ಸಾತ್ರಾಜಿತೀ ಯಾಜ್ಞಸೇನೀಂ ರಹಸೀದಂ ಸುಮಧ್ಯಮಾ।।
ಆಗ ಕೃಷ್ಣನ ಪ್ರಿಯ ಮಹಿಷೀ ಸತ್ರಾಜಿತನ ಮಗಳು ಸುಮಧ್ಯಮೆ ಸತ್ಯಭಾಮೆಯು ಯಾಜ್ಞಸೇನಿಯಲ್ಲಿ ರಹಸ್ಯದಲ್ಲಿ ಕೇಳಿದಳು:
03222004a ಕೇನ ದ್ರೌಪದಿ ವೃತ್ತೇನ ಪಾಂಡವಾನುಪತಿಷ್ಠಸಿ।
03222004c ಲೋಕಪಾಲೋಪಮಾನ್ವೀರಾನ್ಯೂನಃ ಪರಮಸಮ್ಮತಾನ್।
“ದ್ರೌಪದಿ! ಯಾವ ನಡತೆಯಿಂದ ನೀನು ಲೋಕಪಾಲರಂತೆ ವೀರರೂ ಸುಂದರರೂ ಆದ ಪಾಂಡವರನ್ನು ಆಳುತ್ತೀಯೆ?
03222004e ಕಥಂ ಚ ವಶಗಾಸ್ತುಭ್ಯಂ ನ ಕುಪ್ಯಂತಿ ಚ ತೇ ಶುಭೇ।।
03222005a ತವ ವಶ್ಯಾ ಹಿ ಸತತಂ ಪಾಂಡವಾಃ ಪ್ರಿಯದರ್ಶನೇ।
ಶುಭೇ! ಹೇಗೆ ಅವರು ನಿನ್ನ ವಶದಲ್ಲಿಯೇ ನಡೆದುಕೊಳ್ಳುತ್ತಾರೆ? ನಿನ್ನ ಮೇಲೆ ಕೋಪಿಸಿಕೊಳ್ಳುವುದಿಲ್ಲ? ನೋಡಲು ಸುಂದರರಾಗಿರುವ ಪಾಂಡವರು ಹೇಗೆ ಸತತವೂ ನಿನ್ನ ವಶದಲ್ಲಿಯೇ ಇರುತ್ತಾರೆ?
03222005c ಮುಖಪ್ರೇಕ್ಷಾಶ್ಚ ತೇ ಸರ್ವೇ ತತ್ತ್ವಮೇತದ್ ಬ್ರವೀಹಿ ಮೇ।।
03222006a ವ್ರತಚರ್ಯಾ ತಪೋ ವಾಪಿ ಸ್ನಾನಮಂತ್ರೌಷಧಾನಿ ವಾ।
03222006c ವಿದ್ಯಾವೀರ್ಯಂ ಮೂಲವೀರ್ಯಂ ಜಪಹೋಮಸ್ತಥಾಗದಾಃ।।
ನನಗೆ ಏನನ್ನು ಹೇಳುತ್ತಾಳೆ ಎಂದು ಅವರೆಲ್ಲರೂ ನಿನ್ನ ಮುಖವನ್ನೇ ನೋಡುತ್ತಿರುತ್ತಾರೆ. ಹಾಗಾಗಲು ಏನಾದರೂ ವ್ರತಾಚರಣೆ, ತಪಸ್ಸು, ಮಂತ್ರಸ್ನಾನ, ಔಷಧಿ, ಅಥವಾ ವಿದ್ಯಾಶಕ್ತಿ ಅಥವಾ ಮೂಲಿಕೆಯ ಶಕ್ತಿ, ಅಥವಾ ಜಪ, ಹೋಮಗಳಿವೇ?
03222007a ಮಮ ಆಚಕ್ಷ್ವ ಪಾಂಚಾಲಿ ಯಶಸ್ಯಂ ಭಗವೇದನಂ।
03222007c ಯೇನ ಕೃಷ್ಣೇ ಭವೇನ್ನಿತ್ಯಂ ಮಮ ಕೃಷ್ಣೋ ವಶಾನುಗಃ।।
ಪಾಂಚಾಲಿ! ಕೃಷ್ಣೇ! ಕೃಷ್ಣನನ್ನು ನಿತ್ಯವೂ ನನ್ನ ವಶಾನುಗನಾಗಿರಿಸಬಲ್ಲ ಆ ಸಂಭೋಗದ ಯಶಸ್ಸನ್ನು ನನಗೆ ಹೇಳಿಕೊಡು.”
03222008a ಏವಮುಕ್ತ್ವಾ ಸತ್ಯಭಾಮಾ ವಿರರಾಮ ಯಶಸ್ವಿನೀ।
03222008c ಪತಿವ್ರತಾ ಮಹಾಭಾಗಾ ದ್ರೌಪದೀ ಪ್ರತ್ಯುವಾಚ ತಾಂ।।
ಹೀಗೆ ಹೇಳಿ ಯಶಸ್ವಿನೀ ಸತ್ಯಭಾಮೆಯು ಸುಮ್ಮನಾದಳು. ಆಗ ಅವಳಿಗೆ ಪತಿವ್ರತೆ, ಮಹಾಭಾಗೆ, ದ್ರೌಪದಿಯು ಉತ್ತರಿಸಿದಳು.
03222009a ಅಸತ್ಸ್ತ್ರೀಣಾಂ ಸಮಾಚಾರಂ ಸತ್ಯೇ ಮಾಮನುಪೃಚ್ಚಸಿ।
03222009c ಅಸದಾಚರಿತೇ ಮಾರ್ಗೇ ಕಥಂ ಸ್ಯಾದನುಕೀರ್ತನಂ।।
“ಸತ್ಯೇ! ಕೆಟ್ಟ ಸ್ತ್ರೀಯರ ಸಮಾಚಾರವನ್ನು ನನ್ನಲ್ಲಿ ಕೇಳುತ್ತಿದ್ದೀಯೆ! ಕೆಟ್ಟ ಮಾರ್ಗದಲ್ಲಿ ಹೋಗುವುದರ ಕುರಿತು ನಾನಾದರೂ ಹೇಗೆ ಹೇಳಲಿ?
03222010a ಅನುಪ್ರಶ್ನಃ ಸಂಶಯೋ ವಾ ನೈತತ್ತ್ವಯ್ಯುಪಪದ್ಯತೇ।
03222010c ತಥಾ ಹ್ಯುಪೇತಾ ಬುದ್ಧ್ಯಾ ತ್ವಂ ಕೃಷ್ಣಸ್ಯ ಮಹಿಷೀ ಪ್ರಿಯಾ।।
ಈ ಪ್ರಶ್ನೆಯನ್ನು ಮುಂದುವರೆಸುವುದು ಅಥವಾ ನನ್ನನ್ನು ಸಂಶಯಿಸುವುದು ಬುದ್ಧಿವಂತಳಾದ ಮತ್ತು ಕೃಷ್ಣನ ಪ್ರಿಯ ಮಹಿಷಿಯಾದ ನಿನಗೆ ಸರಿಯಾದುದಲ್ಲ.
03222011a ಯದೈವ ಭರ್ತಾ ಜಾನೀಯಾನ್ಮಂತ್ರಮೂಲಪರಾಂ ಸ್ತ್ರಿಯಂ।
03222011c ಉದ್ವಿಜೇತ ತದೈವಾಸ್ಯಾಃ ಸರ್ಪಾದ್ವೇಶ್ಮಗತಾದಿವ।।
ಸ್ತ್ರೀಯು ಮಂತ್ರ ಮೂಲಿಕೆಗಳನ್ನು ಬಳಸುತ್ತಾಳೆ ಎಂದು ತಿಳಿದಾಕ್ಷಣದಿಂದಲೇ ಮಲಗುವ ಕೋಣೆಯಲ್ಲಿ ವಾಸಿಸುತ್ತಿರುವ ಸರ್ಪವೋ ಎಂಬಂತೆ ಪತಿಯು ಅವಳಿಗೆ ಹೆದರುತ್ತಾನೆ.
03222012a ಉದ್ವಿಗ್ನಸ್ಯ ಕುತಃ ಶಾಂತಿರಶಾಂತಸ್ಯ ಕುತಃ ಸುಖಂ।
03222012c ನ ಜಾತು ವಶಗೋ ಭರ್ತಾ ಸ್ತ್ರಿಯಾಃ ಸ್ಯಾನ್ಮಂತ್ರಕಾರಣಾತ್।।
ಉದ್ವಿಗ್ನನಾಗಿರುವವನಿಗೆ ಎಲ್ಲಿಂದ ಶಾಂತಿ ಮತ್ತು ಶಾಂತಿಯಿಲ್ಲದವನಿಗೆ ಎಲ್ಲಿಂದ ಸುಖ? ಸ್ತ್ರೀಯು ಮಂತ್ರಗಳನ್ನು ಬಳಸುವುದರಿಂದ ಪತಿಯು ಎಂದೂ ವಶದಲ್ಲಿ ಬರುವುದಿಲ್ಲ.
03222013a ಅಮಿತ್ರಪ್ರಹಿತಾಂಶ್ಚಾಪಿ ಗದಾನ್ಪರಮದಾರುಣಾನ್।
03222013c ಮೂಲಪ್ರವಾದೈರ್ಹಿ ವಿಷಂ ಪ್ರಯಚ್ಚಂತಿ ಜಿಘಾಂಸವಃ।।
ಪರಮ ದಾರುಣ ರೋಗಗಳನ್ನು ಶತ್ರುಗಳು ಹರಡುತ್ತಾರೆ ಎಂದು ಕೇಳಿದ್ದೇವೆ. ಕೊಲ್ಲಲು ಬಯಸಿ ಅವರು ಸಾಂಪ್ರದಾಯಿಕ ಉಡುಗೊರೆಗಳ ಮೂಲಕ ವಿಷವನ್ನು ಕಳುಹಿಸುತ್ತಾರೆ.
03222014a ಜಿಹ್ವಯಾ ಯಾನಿ ಪುರುಷಸ್ತ್ವಚಾ ವಾಪ್ಯುಪಸೇವತೇ।
03222014c ತತ್ರ ಚೂರ್ಣಾನಿ ದತ್ತಾನಿ ಹನ್ಯುಃ ಕ್ಷಿಪ್ರಮಸಂಶಯಂ।।
ಪುರುಷನು ಆ ಪುಡಿಯನ್ನು ನಾಲಿಗೆಯಲ್ಲಾಗಲೀ ಚರ್ಮದಲ್ಲಿಯಾಗಲೀ ಸೇವಿಸಿ ತಕ್ಷಣವೇ ಸಾವನ್ನು ಹೊಂದುತ್ತಾನೆ ಎನ್ನುವುದರಲ್ಲಿ ಸಂಶಯವಿಲ್ಲ.
03222015a ಜಲೋದರಸಮಾಯುಕ್ತಾಃ ಶ್ವಿತ್ರಿಣಃ ಪಲಿತಾಸ್ತಥಾ।
03222015c ಅಪುಮಾಂಸಃ ಕೃತಾಃ ಸ್ತ್ರೀಭಿರ್ಜಡಾಂಧಬಧಿರಾಸ್ತಥಾ।।
ಸ್ತ್ರೀಯರು ಕೆಲವೊಮ್ಮೆ ಶಿಷ್ಣದಿಂದ ಸೋರುವಿಕೆ ಮತ್ತು ಗಾಯಗಳನ್ನು, ಪುರುಷತ್ವವನ್ನು ಕಳೆದುಕೊಳ್ಳುವುದನ್ನು, ಜಡತೆ, ಕಿವುಡುತನ ಮತ್ತು ಅಂಧತ್ವವನ್ನು ಉಂಟುಮಾಡುತ್ತಾರೆ.
03222016a ಪಾಪಾನುಗಾಸ್ತು ಪಾಪಾಸ್ತಾಃ ಪತೀನುಪಸೃಜಂತ್ಯುತ।
03222016c ನ ಜಾತು ವಿಪ್ರಿಯಂ ಭರ್ತುಃ ಸ್ತ್ರಿಯಾ ಕಾರ್ಯಂ ಕಥಂ ಚನ।।
ಪಾಪದ ದಾರಿಯನ್ನು ಅನುಸರಿಸುವ ಈ ಪಾಪಿ ಸ್ತ್ರೀಯರು ಪತಿಗಳಿಗೆ ಗಾಯಗಳನ್ನುಂಟುಮಾಡಿದ್ದೂ ಇದೆ. ಆದರೆ ಸ್ತ್ರೀಯು ಎಂದೂ ತನ್ನ ಪತಿಗೆ ವಿಪ್ರಿಯವನ್ನುಂಟು ಮಾಡುವ ಕಾರ್ಯವನ್ನು ಮಾಡಬಾರದು.
03222017a ವರ್ತಾಮ್ಯಹಂ ತು ಯಾಂ ವೃತ್ತಿಂ ಪಾಂಡವೇಷು ಮಹಾತ್ಮಸು।
03222017c ತಾಂ ಸರ್ವಾಂ ಶೃಣು ಮೇ ಸತ್ಯಾಂ ಸತ್ಯಭಾಮೇ ಯಶಸ್ವಿನಿ।।
ಯಶಸ್ವಿನಿ! ಸತ್ಯಭಾಮೆ! ನಾನು ಮಹಾತ್ಮ ಪಾಂಡವರೊಂದಿಗೆ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತೇನೆ ಎನ್ನುವುದನ್ನು ಸತ್ಯವಾಗಿ ಹೇಳುತ್ತೇನೆ. ಕೇಳು.
03222018a ಅಹಂಕಾರಂ ವಿಹಾಯಾಹಂ ಕಾಮಕ್ರೋಧೌ ಚ ಸರ್ವದಾ।
03222018c ಸದಾರಾನ್ಪಾಂಡವಾನ್ನಿತ್ಯಂ ಪ್ರಯತೋಪಚರಾಮ್ಯಹಂ।।
ಸರ್ವದಾ ಅಹಂಕಾರ, ಕಾಮ ಕ್ರೋಧಗಳನ್ನು ತೊರೆದು ನಾನು ನಿತ್ಯವೂ ಪಾಂಡವರನ್ನು, ಅವರ ಪತ್ನಿಯರೊಂದಿಗೆ, ಉಪಚಾರ ಮಾಡುತ್ತೇನೆ.
03222019a ಪ್ರಣಯಂ ಪ್ರತಿಸಂಗೃಹ್ಯ ನಿಧಾಯಾತ್ಮಾನಮಾತ್ಮನಿ।
03222019c ಶುಶ್ರೂಷುರ್ನಿರಭೀಮಾನಾ ಪತೀನಾಂ ಚಿತ್ತರಕ್ಷಿಣೀ।।
ಅಸೂಯೆ ಪಡದೇ, ಆತ್ಮದಲ್ಲಿ ಪ್ರಣಯಭಾವವನ್ನು ಇಟ್ಟುಕೊಂಡು, ನಾನು ಮಾಡುವ ಶುಶ್ರೂಷೆಗಳಲ್ಲಿ ಯಾವುದೇ ಅಸಹ್ಯಪಟ್ಟುಕೊಳ್ಳದೇ ನಾನು ನನ್ನ ಪತಿಗಳ ಮನಸ್ಸಿನಂತೆ ನಡೆದುಕೊಳ್ಳುತ್ತೇನೆ.
03222020a ದುರ್ವ್ಯಾಹೃತಾಚ್ಚಂಕಮಾನಾ ದುಃಸ್ಥಿತಾದ್ದುರವೇಕ್ಷಿತಾತ್।
03222020c ದುರಾಸಿತಾದ್ದುರ್ವ್ರಜಿತಾದಿಂಗಿತಾಧ್ಯಾಸಿತಾದಪಿ।।
03222021a ಸೂರ್ಯವೈಶ್ವಾನರನಿಭಾನ್ಸೋಮಕಲ್ಪಾನ್ಮಹಾರಥಾನ್।
03222021c ಸೇವೇ ಚಕ್ಷುರ್ಹಣಃ ಪಾರ್ಥಾನುಗ್ರತೇಜಃಪ್ರತಾಪಿನಃ।।
ಯಾವಾಗಲೂ ಕೆಟ್ಟದಾಗಿ ನಡೆದುಕೊಳ್ಳುವೆನೋ, ಅಥವಾ ಸರಿಯಾಗಿ ಕುಳಿತುಕೊಳ್ಳಲಿಲ್ಲವೋ, ನಿಂತುಕೊಳ್ಳಲಿಲ್ಲವೋ, ನಡೆಯಲಿಲ್ಲವೋ, ನೋಟದಲ್ಲಿಯೂ ಮನಸ್ಸಿನ ಇಂಗಿತವನ್ನು ತೋರಿಸದೇ ಇದ್ದೇನೆಯೋ ಎಂದು ನನ್ನ ಮೇಲೆ ನಾನೇ ಶಂಕಿಸುತ್ತಾ, ಅಗ್ನಿ ಮತ್ತು ಸೂರ್ಯರಂತೆ ತೇಜಸ್ವಿಗಳಾದ, ಸೋಮನ ಸಮರಾದ, ಮಹಾರಥಿ, ಉಗ್ರತೇಜಸ್ವಿಗಳೂ, ಪ್ರತಾಪಿಗಳೂ ಆದ ಪಾರ್ಥರ ಸೇವೆಯನ್ನು ನಾನು ಮಾಡುತ್ತೇನೆ.
03222022a ದೇವೋ ಮನುಷ್ಯೋ ಗಂಧರ್ವೋ ಯುವಾ ಚಾಪಿ ಸ್ವಲಂಕೃತಃ।
03222022c ದ್ರವ್ಯವಾನಭಿರೂಪೋ ವಾ ನ ಮೇಽನ್ಯಃ ಪುರುಷೋ ಮತಃ।।
ದೇವತೆಯಾಗಿರಲಿ, ಮನುಷ್ಯನಾಗಿರಲಿ, ಗಂಧರ್ವನಾಗಿರಲಿ, ಅಥವಾ ಸ್ವಲಂಕೃತನಾದ ಶ್ರೀಮಂತನಾಗಿರಲಿ, ಸುಂದರನಾಗಿರಲಿ, ಯುವಕನಾಗಿರಲಿ, ನನಗೆ ಅನ್ಯ ಪುರುಷರು ಹಿಡಿಸುವುದಿಲ್ಲ.
03222023a ನಾಭುಕ್ತವತಿ ನಾಸ್ನಾತೇ ನಾಸಂವಿಷ್ಟೇ ಚ ಭರ್ತರಿ।
03222023c ನ ಸಂವಿಶಾಮಿ ನಾಶ್ನಾಮಿ ಸದಾ ಕರ್ಮಕರೇಷ್ವಪಿ।।
ನಾನು ನನ್ನ ಪತಿಯಂದಿರು ಮತ್ತು ಅಷ್ಟೇ ಏಕೆ, ಸೇವಕರೂ ಕೂಡ ಊಟಮಾಡದೇ, ಸ್ನಾನಮಾಡದೇ, ಮಲಗಿಕೊಳ್ಳದೇ ನಾನು ಉಣ್ಣುವುದಿಲ್ಲ, ಸ್ನಾನಮಾಡುವುದಿಲ್ಲ ಮತ್ತು ಮಲಗಿಕೊಳ್ಳುವುದಿಲ್ಲ.
03222024a ಕ್ಷೇತ್ರಾದ್ವನಾದ್ವಾ ಗ್ರಾಮಾದ್ವಾ ಭರ್ತಾರಂ ಗೃಹಮಾಗತಂ।
03222024c ಪ್ರತ್ಯುತ್ಥಾಯಾಭಿನಂದಾಮಿ ಆಸನೇನೋದಕೇನ ಚ।।
ಕ್ಷೇತ್ರದಿಂದಾಗಲೀ, ವನದಿಂದಾಗಲೀ ಅಥವಾ ಗ್ರಾಮಗಳಿಂದಾಗಲೀ ಪತಿಯಂದಿರು ಮನೆಗೆ ಬಂದಾಗ ನಾನು ಮೇಲೆದ್ದು, ಆಸನ ನೀರುಗಳನ್ನಿತ್ತು ಅವರನ್ನು ಅಭಿನಂದಿಸುತ್ತೇನೆ.
03222025a ಪ್ರಮೃಷ್ಟಭಾಂಡಾ ಮೃಷ್ಟಾನ್ನಾ ಕಾಲೇ ಭೋಜನದಾಯಿನೀ।
03222025c ಸಮ್ಯತಾ ಗುಪ್ತಧಾನ್ಯಾ ಚ ಸುಸಮ್ಮೃಷ್ಟನಿವೇಶನಾ।।
ನನ್ನ ಅಡುಗೆಮನೆಯನ್ನು ಸ್ವಚ್ಛವಾಗಿಟ್ಟುಕೊಂಡಿರುತ್ತೇನೆ ಮತ್ತು ಸರಿಯಾದ ಕಾಲಕ್ಕೆ ಮೃಷ್ಟಾನ್ನ ಭೋಜನವನ್ನು ನೀಡುತ್ತೇನೆ. ಮನೆಯ ಎಲ್ಲ ವಸ್ತುಗಳನ್ನೂ ಜೋಡಿಸಿ ಸ್ವಚ್ಛವಾಗಿರಿಸಿಕೊಂಡಿರುತ್ತೇನೆ.
03222026a ಅತಿರಸ್ಕೃತಸಂಭಾಷಾ ದುಃಸ್ತ್ರಿಯೋ ನಾನುಸೇವತೀ।
03222026c ಅನುಕೂಲವತೀ ನಿತ್ಯಂ ಭವಾಮ್ಯನಲಸಾ ಸದಾ।।
ನಾನು ಎಂದೂ ಸಿಟ್ಟಿನಿಂದ ಅವಹೇಳನದ ಮಾತುಗಳನ್ನಾಡುವುದಿಲ್ಲ ಮತ್ತು ಕೆಟ್ಟ ಸ್ತ್ರೀಯರನ್ನು ಅನುಸರಿಸುವುದಿಲ್ಲ. ಸೋಮಾರಿತನವನ್ನು ಬದಿಗೊತ್ತಿ ನಿತ್ಯವೂ ಏನು ಮಾಡಬೇಕೋ ಅವೆಲ್ಲವನ್ನೂ ಮಾಡುತ್ತೇನೆ.
03222027a ಅನರ್ಮೇ ಚಾಪಿ ಹಸನಂ ದ್ವಾರಿ ಸ್ಥಾನಮಭೀಕ್ಷ್ಣಶಃ।
03222027c ಅವಸ್ಕರೇ ಚಿರಸ್ಥಾನಂ ನಿಷ್ಕುಟೇಷು ಚ ವರ್ಜಯೇ।।
ಕಾರಣವಿಲ್ಲದೇ ನಾನು ನಗುವುದಿಲ್ಲ, ಬಾಗಿಲಿನಲ್ಲಿ ತುಂಬಾ ಹೊತ್ತು ನಿಲ್ಲುವುದಿಲ್ಲ, ಬಯಲಿನಲ್ಲಿಯಾಗಲೀ ಉದ್ಯಾನವನದಲ್ಲಿಯಾಗಲೀ ತುಂಬಾ ಹೊತ್ತು ನಿಲ್ಲುವುದಿಲ್ಲ.
03222028a ಅತಿಹಾಸಾತಿರೋಷೌ ಚ ಕ್ರೋಧಸ್ಥಾನಂ ಚ ವರ್ಜಯೇ।
03222028c ನಿರತಾಹಂ ಸದಾ ಸತ್ಯೇ ಭರ್ತೄಣಾಮುಪಸೇವನೇ।
03222028e ಸರ್ವಥಾ ಭರ್ತೃರಹಿತಂ ನ ಮಮೇಷ್ಟಂ ಕಥಂ ಚನ।।
ನಾನು ಯಾವಾಗಲೂ ಅತಿಯಾಗಿ ನಗುವುದರಿಂದ, ಅತಿಯಾಗಿ ಸಿಟ್ಟುಮಾಡಿಕೊಳ್ಳುವುದರಿಂದ, ಮತ್ತು ಅವರಿಗೆ ಕೋಪವನ್ನುಂಟುಮಾಡುವ ಸ್ಥಳಗಳಿಂದ ದೂರವಿರುತ್ತೇನೆ. ಸತ್ಯೇ! ನಾನು ಸದಾ ಪತಿಗಳ ಸೇವೆಯಲ್ಲಿಯೇ ನಿರತಳಾಗಿರುತ್ತೇನೆ. ಪತಿಗಳಿಲ್ಲದೇ ಇರಲು ನನಗೆ ಸರ್ವಥಾ ಎಂದೂ ಇಷ್ಟವಿಲ್ಲ.
03222029a ಯದಾ ಪ್ರವಸತೇ ಭರ್ತಾ ಕುಟುಂಬಾರ್ಥೇನ ಕೇನ ಚಿತ್।
03222029c ಸುಮನೋವರ್ಣಕಾಪೇತಾ ಭವಾಮಿ ವ್ರತಚಾರಿಣೀ।।
ಒಂದುವೇಳೆ ಕುಟುಂಬದ ಕೆಲಸಕ್ಕಾಗಿ ಪತಿಯಂದಿರು ಹೊರಗೆ ಹೋಗಬೇಕಾಗಿ ಬಂದರೆ ನಾನು ಹೂವು ಸುಗಂಧಗಳನ್ನು ತೊರೆದು ವ್ರತಚಾರಿಣಿಯಾಗಿರುತ್ತೇನೆ.
03222030a ಯಚ್ಚ ಭರ್ತಾ ನ ಪಿಬತಿ ಯಚ್ಚ ಭರ್ತಾ ನ ಖಾದತಿ।
03222030c ಯಚ್ಚ ನಾಶ್ನಾತಿ ಮೇ ಭರ್ತಾ ಸರ್ವಂ ತದ್ವರ್ಜಯಾಮ್ಯಹಂ।।
ನನ್ನ ಪತಿಗಳು ಕುಡಿಯದೇ ಇರುವುದನ್ನು, ತಿನ್ನದೇ ಇರುವುದನ್ನು, ಸಂತೋಷಪಡದೇ ಇರುವುದನ್ನೆಲ್ಲವನ್ನೂ ನಾನು ತ್ಯಜಿಸುತ್ತೇನೆ.
03222031a ಯಥೋಪದೇಶಂ ನಿಯತಾ ವರ್ತಮಾನಾ ವರಾಂಗನೇ।
03222031c ಸ್ವಲಂಕೃತಾ ಸುಪ್ರಯತಾ ಭರ್ತುಃ ಪ್ರಿಯಹಿತೇ ರತಾ।।
ವರಾಂಗನೇ! ಹೇಗೆ ಉಪದೇಶವಿದೆಯೋ ಹಾಗೆ ನಡೆದುಕೊಂಡು ಸ್ವಲಂಕೃತಳಾಗಿದ್ದುಕೊಂಡು ಪತಿಗಳ ಪ್ರೀತಿ ಮತ್ತು ಹಿತಗಳ ಪ್ರಯತ್ನಗಳಲ್ಲಿಯೇ ನಿರತಳಾಗಿರುತ್ತೇನೆ.
03222032a ಯೇ ಚ ಧರ್ಮಾಃ ಕುಟುಂಬೇಷು ಶ್ವಶ್ರ್ವಾ ಮೇ ಕಥಿತಾಃ ಪುರಾ।
03222032c ಭಿಕ್ಷಾಬಲಿಶ್ರಾದ್ಧಮಿತಿ ಸ್ಥಾಲೀಪಾಕಾಶ್ಚ ಪರ್ವಸು।
03222032e ಮಾನ್ಯಾನಾಂ ಮಾನಸತ್ಕಾರಾ ಯೇ ಚಾನ್ಯೇ ವಿದಿತಾ ಮಯಾ।।
03222033a ತಾನ್ಸರ್ವಾನನುವರ್ತಾಮಿ ದಿವಾರಾತ್ರಮತಂದ್ರಿತಾ।
ಹಿಂದೆ ನನ್ನ ಅತ್ತೆಯು ಹೇಳಿದ್ದ ಕುಟುಂಬದ ಧರ್ಮಗಳೆಲ್ಲವನ್ನೂ – ಭಿಕ್ಷೆ, ಬಲಿ, ಶ್ರಾದ್ಧ, ಪರ್ವಗಳಲ್ಲಿ ಚರಿಗೆ ಅನ್ನ, ಮಾನ್ಯರ ಸತ್ಕಾರ ಇವು ಮತ್ತು ನನಗೆ ತಿಳಿದ ಇತರೆಗಳು - ಇವೆಲ್ಲವನ್ನೂ ಹಗಲು ರಾತ್ರಿ ಆಯಾಸವಿಲ್ಲದೇ ನಾನು ಅನುಸರಿಸುತ್ತೇನೆ.
03222033c ವಿನಯಾನ್ನಿಯಮಾಂಶ್ಚಾಪಿ ಸದಾ ಸರ್ವಾತ್ಮನಾ ಶ್ರಿತಾ।।
03222034a ಮೃದೂನ್ಸತಃ ಸತ್ಯಶೀಲಾನ್ಸತ್ಯಧರ್ಮಾನುಪಾಲಿನಃ।
03222034c ಆಶೀವಿಷಾನಿವ ಕ್ರುದ್ಧಾನ್ಪತೀನ್ಪರಿಚರಾಮ್ಯಹಂ।।
ಸದಾ ನನ್ನನ್ನು ವಿನಯ ಮತ್ತು ನಿಯಮಗಳಲ್ಲಿರಿಸಿಕೊಂಡು ಮೃದು, ಒಳ್ಳೆಯ, ಸತ್ಯಶೀಲ, ಸತ್ಯಧರ್ಮಾನುಪಾಲಿಗಳಾದ ಪತಿಗಳು ಯಾವಾಗ ವಿಷಪೂರಿತ ಸರ್ಪಗಳಂತೆ ಕೃದ್ಧರಾಗುತ್ತಾರೋ ಎಂದು ಯೋಚಿಸುತ್ತಾ ನಾನು ಅವರ ಸೇವೆ ಮಾಡುತ್ತೇನೆ.
03222035a ಪತ್ಯಾಶ್ರಯೋ ಹಿ ಮೇ ಧರ್ಮೋ ಮತಃ ಸ್ತ್ರೀಣಾಂ ಸನಾತನಃ।
03222035c ಸ ದೇವಃ ಸಾ ಗತಿರ್ನಾನ್ಯಾ ತಸ್ಯ ಕಾ ವಿಪ್ರಿಯಂ ಚರೇತ್।।
ಪತಿಯ ಆಶ್ರಯದಲ್ಲಿರುವುದೇ ಸ್ತ್ರೀಯ ಸನಾತನ ಧರ್ಮವೆಂದು ನನ್ನ ಮತ. ಅವಳಿಗೆ ಅವನ ಹೊರತಾದ ದೇವನಿಲ್ಲ, ಗತಿಯಿಲ್ಲ. ಅವನಲ್ಲಿ ಹೇಗೆ ಅವಳು ವಿಪ್ರಿಯವಾಗಿ ನಡೆದುಕೊಳ್ಳಬಹುದು?
03222036a ಅಹಂ ಪತೀನ್ನಾತಿಶಯೇ ನಾತ್ಯಶ್ನೇ ನಾತಿಭೂಷಯೇ।
03222036c ನಾಪಿ ಪರಿವದೇ ಶ್ವಶ್ರೂಂ ಸರ್ವದಾ ಪರಿಯಂತ್ರಿತಾ।।
ಮಲಗುವುದರಲ್ಲಾಗಲೀ, ಊಟಮಾಡುವುದರಲ್ಲಾಗಲೀ, ಅಲಂಕಾರ ಮಾಡಿಕೊಳ್ಳುವುದರಲ್ಲಾಗಲೀ ನಾನು ನನ್ನ ಪತಿಗಳನ್ನು ಮೀರುವುದಿಲ್ಲ. ಸರ್ವದಾ ನಾನು ಅತ್ತೆಯನ್ನು ನಿಂದಿಸುವುದಿಲ್ಲ.
03222037a ಅವಧಾನೇನ ಸುಭಗೇ ನಿತ್ಯೋತ್ಥಾನತಯೈವ ಚ।
03222037c ಭರ್ತಾರೋ ವಶಗಾ ಮಹ್ಯಂ ಗುರುಶುಶ್ರೂಷಣೇನ ಚ।।
ಸುಭಗೇ! ನನ್ನ ನಿತ್ಯದ ಅವಧಾನ, ಕುಳಿತುಕೊಳ್ಳುವ ಮತ್ತು ನಿಂತುಕೊಳ್ಳುವ ರೀತಿ ಮತ್ತು ಹಿರಿಯರ ಸೇವೆಗಳಿಂದ ಪತಿಗಳು ನನ್ನ ವಶರಾಗಿದ್ದಾರೆ.
03222038a ನಿತ್ಯಮಾರ್ಯಾಮಹಂ ಕುಂತೀಂ ವೀರಸೂಂ ಸತ್ಯವಾದಿನೀಂ।
03222038c ಸ್ವಯಂ ಪರಿಚರಾಮ್ಯೇಕಾ ಸ್ನಾನಾಚ್ಚಾದನಭೋಜನೈಃ।।
03222039a ನೈತಾಮತಿಶಯೇ ಜಾತು ವಸ್ತ್ರಭೂಷಣಭೋಜನೈಃ।
03222039c ನಾಪಿ ಪರಿವದೇ ಚಾಹಂ ತಾಂ ಪೃಥಾಂ ಪೃಥಿವೀಸಮಾಂ।।
ಈ ವೀರರ ತಾಯಿ ಸತ್ಯವಾದಿನೀ ಕುಂತಿಯನ್ನು ನಿತ್ಯವೂ ನಾನು ಒಬ್ಬಳೇ ಸ್ನಾನ, ಬಟ್ಟೆ ಮತ್ತು ಭೋಜನಗಳ ಕುರಿತು ಅವಳ ಸೇವೆ ಮಾಡುತ್ತೇನೆ. ನಾನು ವಸ್ತ್ರ ಭೂಷಣ ಭೋಜನಗಳಲ್ಲಿ ಅವಳನ್ನು ಮೀರುವುದಿಲ್ಲ. ಪೃಥ್ವಿಯ ಸಮಳಾದ ಪೃಥಾಳನ್ನು ನಾನು ಎಂದೂ ನೋಯಿಸುವುದಿಲ್ಲ.
03222040a ಅಷ್ಟಾವಗ್ರೇ ಬ್ರಾಹ್ಮಣಾನಾಂ ಸಹಸ್ರಾಣಿ ಸ್ಮ ನಿತ್ಯದಾ।
03222040c ಭುಂಜತೇ ರುಕ್ಮಪಾತ್ರೀಷು ಯುಧಿಷ್ಠಿರನಿವೇಶನೇ।।
ಮೊದಲು ಯುಧಿಷ್ಠಿರನ ಮನೆಯಲ್ಲಿ ನಿತ್ಯವೂ ಎಂಟುಸಾವಿರ ಬ್ರಾಹ್ಮಣರು ಬಂಗಾರದ ತಟ್ಟೆಗಳಲ್ಲಿ ಊಟಮಾಡುತ್ತಿದ್ದರು.
03222041a ಅಷ್ಟಾಶೀತಿಸಹಸ್ರಾಣಿ ಸ್ನಾತಕಾ ಗೃಹಮೇಧಿನಃ।
03222041c ತ್ರಿಂಶದ್ದಾಸೀಕ ಏಕೈಕೋ ಯಾನ್ಬಿಭರ್ತಿ ಯುಧಿಷ್ಠಿರಃ।।
ಎಂಭತ್ತು ಸಾವಿರ ಗೃಹಸ್ಥರಾಗಿದ್ದ ಸ್ನಾತಕರು ಊಟಮಾಡುತ್ತಿದ್ದರು. ಅವರಲ್ಲಿ ಪ್ರತಿಯೊಬ್ಬರಿಗೂ ಯುಧಿಷ್ಠಿರನು ಮೂವತ್ತು ದಾಸಿಯರನ್ನು ಬಿಟ್ಟಿದ್ದನು.
03222042a ದಶಾನ್ಯಾನಿ ಸಹಸ್ರಾಣಿ ಯೇಷಾಮನ್ನಂ ಸುಸಂಸ್ಕೃತಂ।
03222042c ಹ್ರಿಯತೇ ರುಕ್ಮಪಾತ್ರೀಭಿರ್ಯತೀನಾಂ ಊರ್ಧ್ವರೇತಸಾಂ।।
ಇದಲ್ಲದೇ ಇನ್ನೂ ಹತ್ತುಸಾವಿರ ಊರ್ಧ್ವರೇತಸ ಯತಿಗಳಿಗೆ ಬಂಗಾರದ ಪಾತ್ರೆಗಳಲ್ಲಿ ಶುದ್ಧವಾದ ಊಟವನ್ನು ಕೊಂಡೊಯ್ಯುತ್ತಿದ್ದರು.
03222043a ತಾನ್ಸರ್ವಾನಗ್ರಹಾರೇಣ ಬ್ರಾಹ್ಮಣಾನ್ಬ್ರಹ್ಮವಾದಿನಃ।
03222043c ಯಥಾರ್ಹಂ ಪೂಜಯಾಮಿ ಸ್ಮ ಪಾನಾಚ್ಚಾದನಭೋಜನೈಃ।।
ಆ ಎಲ್ಲ ಅಗ್ರಹಾರಿ ಬ್ರಹ್ಮವಾದಿ ಬ್ರಾಹ್ಮಣರನ್ನು ನಾನು ಪಾನೀಯ, ವಸ್ತ್ರ ಭೋಜನಗಳಿಂದ ಯಥಾರ್ಹವಾಗಿ ಪೂಜಿಸುತ್ತಿದ್ದೆ.
03222044a ಶತಂ ದಾಸೀಸಹಸ್ರಾಣಿ ಕೌಂತೇಯಸ್ಯ ಮಹಾತ್ಮನಃ।
03222044c ಕಂಬುಕೇಯೂರಧಾರಿಣ್ಯೋ ನಿಷ್ಕಕಂಠ್ಯಃ ಸ್ವಲಂಕೃತಾಃ।।
03222045a ಮಹಾರ್ಹಮಾಲ್ಯಾಭರಣಾಃ ಸುವರ್ಣಾಶ್ಚಂದನೋಕ್ಷಿತಾಃ।
03222045c ಮಣೀನ್ ಹೇಮ ಚ ಬಿಭ್ರತ್ಯೋ ನೃತ್ಯಗೀತವಿಶಾರದಾಃ।।
03222046a ತಾಸಾಂ ನಾಮ ಚ ರೂಪಂ ಚ ಭೋಜನಾಚ್ಚಾದನಾನಿ ಚ।
03222046c ಸರ್ವಾಸಾಮೇವ ವೇದಾಹಂ ಕರ್ಮ ಚೈವ ಕೃತಾಕೃತಂ।।
ಮಹಾತ್ಮ ಕೌಂತೇಯನ - ಕಂಬುಕೇಯೂರಗಳನ್ನು ಧರಿಸಿದ್ದ, ನಿಷ್ಕಕಂಠರಾದ, ಸ್ವಲಂಕೃತರಾಗಿದ್ದ, ಮಹಾ ಬೆಲೆಬಾಳುವ ಮಾಲೆ ಆಭರಣಗಳನ್ನು ಧರಿಸಿದ್ದ, ಸುವರ್ಣ, ಚಂದನಗಳನ್ನು ಲೇಪಿಸಿಕೊಂಡಿದ್ದ, ಮಣಿ ಹೇಮಗಳಿಂದ ಬೆಳಗುತ್ತಿದ್ದ, ನೃತ್ಯಗೀತವಿಶಾರದರಾದ - ನೂರುಸಾವಿರ ದಾಸಿಯರ ಹೆಸರು, ರೂಪ, ಊಟ-ಉಡುಗೆಗಳು, ಏನು ಮಾಡುತ್ತಿದ್ದರು, ಏನು ಮಾಡುತ್ತಿರಲಿಲ್ಲ ಇವೆಲ್ಲವನ್ನೂ ನಾನು ತಿಳಿದುಕೊಂಡಿದ್ದೆನು.
03222047a ಶತಂ ದಾಸೀಸಹಸ್ರಾಣಿ ಕುಂತೀಪುತ್ರಸ್ಯ ಧೀಮತಃ।
03222047c ಪಾತ್ರೀಹಸ್ತಾ ದಿವಾರಾತ್ರಮತಿಥೀನ್ಭೋಜಯಂತ್ಯುತ।।
ಧೀಮಂತ ಕುಂತೀಪುತ್ರನ ನೂರುಸಾವಿರ ದಾಸಿಯರು ಹಗಲು ರಾತ್ರಿ ಕೈಗಳಲ್ಲಿ ಪಾತ್ರೆಗಳನ್ನು ಹಿಡಿದು ಅತಿಥಿಗಳಿಗೆ ಭೋಜನವನ್ನು ಬಡಿಸುತ್ತಿದ್ದರು.
03222048a ಶತಮಶ್ವಸಹಸ್ರಾಣಿ ದಶ ನಾಗಾಯುತಾನಿ ಚ।
03222048c ಯುಧಿಷ್ಠಿರಸ್ಯಾನುಯಾತ್ರಮಿಂದ್ರಪ್ರಸ್ಥನಿವಾಸಿನಃ।।
ಯುಧಿಷ್ಠಿರನು ಇಂದ್ರಪ್ರಸ್ಥದಲ್ಲಿ ವಾಸಿಸುತ್ತಿರುವಾಗ ನೂರು ಸಾವಿರ ಕುದುರೆಗಳೂ, ಹತ್ತು ಸಾವಿರ ಆನೆಗಳೂ ಅವನನ್ನು ಹಿಂಬಾಲಿಸಿ ಹೋಗುತ್ತಿದ್ದವು.
03222049a ಏತದಾಸೀತ್ತದಾ ರಾಜ್ಞೋ ಯನ್ಮಹೀಂ ಪರ್ಯಪಾಲಯತ್।
03222049c ಯೇಷಾಂ ಸಂಖ್ಯಾವಿಧಿಂ ಚೈವ ಪ್ರದಿಶಾಮಿ ಶೃಣೋಮಿ ಚ।।
ರಾಜನು ಭೂಮಿಯನ್ನು ಆಳುತ್ತಿರುವಾಗ ಇವೆಲ್ಲವೂ ಇದ್ದವು. ಇವುಗಳ ಸಂಖ್ಯೆಯನ್ನು ನಾನೇ ನಿರ್ಧರಿಸುತ್ತಿದ್ದೆ ಮತ್ತು ಅವರ ತಕರಾರುಗಳನ್ನು ನಾನೇ ಕೇಳುತ್ತಿದ್ದೆ.
03222050a ಅಂತಃಪುರಾಣಾಂ ಸರ್ವೇಷಾಂ ಭೃತ್ಯಾನಾಂ ಚೈವ ಸರ್ವಶಃ।
03222050c ಆ ಗೋಪಾಲಾವಿಪಾಲೇಭ್ಯಃ ಸರ್ವಂ ವೇದ ಕೃತಾಕೃತಂ।।
ಅಂತಃಪುರದಲಿದ್ದ ಎಲ್ಲರ ಕುರಿತು ಸೇವಕರು, ಗೋಪಾಲಕರು, ವಿಪಾಲರು ಎಲ್ಲರೂ ಏನು ಮಾಡುತ್ತಿದ್ದರು ಏನು ಮಾಡುತ್ತಿರಲಿಲ್ಲ ಎಲ್ಲವನ್ನೂ ನಾನು ತಿಳಿದುಕೊಂಡಿದ್ದೆ.
03222051a ಸರ್ವಂ ರಾಜ್ಞಃ ಸಮುದಯಮಾಯಂ ಚ ವ್ಯಯಮೇವ ಚ।
03222051c ಏಕಾಹಂ ವೇದ್ಮಿ ಕಲ್ಯಾಣಿ ಪಾಂಡವಾನಾಂ ಯಶಸ್ವಿನಾಂ।।
ಕಲ್ಯಾಣೀ! ಯಶಸ್ವಿ ಪಾಂಡವರಲ್ಲಿ ನನಗೊಬ್ಬಳಿಗೇ ರಾಜನ ಆದಾಯ-ವೆಚ್ಚಗಳೇನು, ಒಟ್ಟು ಸಂಪತ್ತೇನು ಎನ್ನುವುದು ತಿಳಿದಿತ್ತು.
03222052a ಮಯಿ ಸರ್ವಂ ಸಮಾಸಜ್ಯ ಕುಟುಂಬಂ ಭರತರ್ಷಭಾಃ।
03222052c ಉಪಾಸನರತಾಃ ಸರ್ವೇ ಘಟಂತೇ ಸ್ಮ ಶುಭಾನನೇ।।
ಶುಭಾನನೇ! ಅವರ ಕುಟುಂಬದ ಸಮಸ್ಯೆಗಳ ಭಾರವೆಲ್ಲವನ್ನೂ ನನ್ನ ಮೇಲೆ ಹಾಕಿ ಎಲ್ಲರೂ ನನ್ನನ್ನು ಮೆಚ್ಚಿಸುವಲ್ಲಿ ನಿರತರಾಗಿರುತ್ತಾರೆ.
03222053a ತಮಹಂ ಭಾರಮಾಸಕ್ತಮನಾಧೃಷ್ಯಂ ದುರಾತ್ಮಭಿಃ।
03222053c ಸುಖಂ ಸರ್ವಂ ಪರಿತ್ಯಜ್ಯ ರಾತ್ರ್ಯಹಾನಿ ಘಟಾಮಿ ವೈ।।
ದುರಾತ್ಮರಿಗೆ ಅಸಾಧ್ಯವಾದ ಈ ಭಾರವನ್ನು ನಾನು ಸುಖವೆಲ್ಲವನ್ನೂ ತೊರೆದು, ಹಗಲು ರಾತ್ರಿ ಅವರಲ್ಲಿ ಆಸಕ್ತಿಯನ್ನಿಟ್ಟುಕೊಂಡು ಹೊರುತ್ತಿದ್ದೇನೆ.
03222054a ಅಧೃಷ್ಯಂ ವರುಣಸ್ಯೇವ ನಿಧಿಪೂರ್ಣಮಿವೋದಧಿಂ।
03222054c ಏಕಾಹಂ ವೇದ್ಮಿ ಕೋಶಂ ವೈ ಪತೀನಾಂ ಧರ್ಮಚಾರಿಣಾಂ।।
ಪತಿಗಳು ಧರ್ಮದಲ್ಲಿ ನಡೆದುಕೊಂಡಿರಲು ನಾನು ವರುಣನ ಮಹಾ ಸಾಗರವು ಹೇಗೆ ತುಂಬಿದೆಯೋ ಹಾಗೆ ಅವರ ಕೋಶವು ತುಂಬಿಕೊಂಡಿರುವಂತೆ ನಾನೊಬ್ಬಳೇ ನೋಡಿಕೊಂಡಿರುತ್ತೇನೆ.
03222055a ಅನಿಶಾಯಾಂ ನಿಶಾಯಾಂ ಚ ಸಹಾಯಾಃ ಕ್ಷುತ್ಪಿಪಾಸಯೋಃ।
03222055c ಆರಾಧಯಂತ್ಯಾಃ ಕೌರವ್ಯಾಂಸ್ತುಲ್ಯಾ ರಾತ್ರಿರಹಶ್ಚ ಮೇ।।
ಹಸಿವು ಬಾಯಾರಿಕೆಗಳನ್ನು ತೊರೆದು ಹಗಲು ರಾತ್ರಿ ಕೌರವರನ್ನು ಆರಾಧಿಸುತ್ತಿರುವ ನನಗೆ ಹಗಲು ರಾತ್ರಿಗಳೆರಡೂ ಒಂದೇ ಸಮನಾಗಿವೆ.
03222056a ಪ್ರಥಮಂ ಪ್ರತಿಬುಧ್ಯಾಮಿ ಚರಮಂ ಸಂವಿಶಾಮಿ ಚ।
03222056c ನಿತ್ಯಕಾಲಮಹಂ ಸತ್ಯೇ ಏತತ್ಸಂವನನಂ ಮಮ।।
ನಾನು ಮೊದಲು ಏಳುತ್ತೇನೆ ಮತ್ತು ಕೊನೆಯಲ್ಲಿ ಮಲಗಿಕೊಳ್ಳುತ್ತೇನೆ. ಸತ್ಯೇ! ನಿತ್ಯವೂ ಈ ರೀತಿ ನಡೆದುಕೊಂಡಿರುವುದೇ ಅವರನ್ನು ನನ್ನೆಡೆಗೆ ಎಳೆದಿಟ್ಟಿದೆ.
03222057a ಏತಜ್ಜಾನಾಮ್ಯಹಂ ಕರ್ತುಂ ಭರ್ತೃಸಂವನನಂ ಮಹತ್।
03222057c ಅಸತ್ಸ್ತ್ರೀಣಾಂ ಸಮಾಚಾರಂ ನಾಹಂ ಕುರ್ಯಾನ್ನ ಕಾಮಯೇ।।
ಪತಿಯಂದಿರನ್ನು ನನ್ನೊಡನಿಟ್ಟುಕೊಂಡಿರುವ ಈ ಮಹಾ ಕಾರ್ಯವು ನನಗೆ ತಿಳಿದಿದೆ. ಅಸತ್ ಸ್ತ್ರೀಯರ ಸಮಾಚಾರವನ್ನು ನಾನು ಮಾಡುವುದಿಲ್ಲ ಮತ್ತು ಮಾಡುವುದನ್ನು ಬಯಸುವುದೂ ಇಲ್ಲ.”
03222058a ತಚ್ಚ್ರುತ್ವಾ ಧರ್ಮಸಹಿತಂ ವ್ಯಾಹೃತಂ ಕೃಷ್ಣಯಾ ತದಾ।
03222058c ಉವಾಚ ಸತ್ಯಾ ಸತ್ಕೃತ್ಯ ಪಾಂಚಾಲೀಂ ಧರ್ಮಚಾರಿಣೀಂ।।
ಕೃಷ್ಣೆಯು ಮಾತನಾಡಿದ ಈ ಧರ್ಮಸಹಿತ ಮಾತುಗಳನ್ನು ಕೇಳಿ ಸತ್ಯೆಯು ಧರ್ಮಚಾರಿಣೀ ಪಾಂಚಾಲಿಯನ್ನು ಗೌರವಿಸಿ ಹೇಳಿದಳು:
03222059a ಅಭಿಪನ್ನಾಸ್ಮಿ ಪಾಂಚಾಲಿ ಯಾಜ್ಞಸೇನಿ ಕ್ಷಮಸ್ವ ಮೇ।
03222059c ಕಾಮಕಾರಃ ಸಖೀನಾಂ ಹಿ ಸೋಪಹಾಸಂ ಪ್ರಭಾಷಿತುಂ।।
“ಪಾಂಚಾಲೀ! ಯಾಜ್ಞಸೇನೀ! ತಪ್ಪುಮಾಡಿದೆ. ನನ್ನನ್ನು ಕ್ಷಮಿಸು. ಸಖಿಯರಲ್ಲಿ ಉದ್ದೇಶಗಳಿಲ್ಲದೇ ಉಪಹಾಸದ ಮಾತುಗಳು ನಡೆಯುತ್ತವೆಯಲ್ಲವೇ?”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ದ್ರೌಪದೀಸತ್ಯಭಾಮಾಸಂವಾದ ಪರ್ವಣಿ ದ್ವಿವಿಂಶತ್ಯಾಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ದ್ರೌಪದೀಸತ್ಯಭಾಮಾಸಂವಾದ ಪರ್ವದಲ್ಲಿ ಇನ್ನೂರಾಇಪ್ಪತ್ತೆರಡನೆಯ ಅಧ್ಯಾಯವು.