221 ಅಂಗೀರಸೋಪಾಖ್ಯಾನೇ ಮಹಿಷಾಸುರವಧಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 221

ಸಾರ

ದೇವಸೇನೆಯ ಪ್ರಯಾಣ (1-29). ದೈತ್ಯ ಸೇನೆಯು ದೇವಸೇನೆಯ ಮೇಲೆ ಆಕ್ರಮಣ ಮಾಡಿದುದು (30-51). ಸ್ಕಂದನಿಂದ ಮಹಿಷಾಸುರ ವಧೆ (52-80).

03221001 ಮಾರ್ಕಂಡೇಯ ಉವಾಚ।
03221001a ಯದಾಭಿಷಿಕ್ತೋ ಭಗವಾನ್ಸೇನಾಪತ್ಯೇನ ಪಾವಕಿಃ।
03221001c ತದಾ ಸಂಪ್ರಸ್ಥಿತಃ ಶ್ರೀಮಾನ್ ಹೃಷ್ಟೋ ಭದ್ರವಟಂ ಹರಃ।
03221001e ರಥೇನಾದಿತ್ಯವರ್ಣೇನ ಪಾರ್ವತ್ಯಾ ಸಹಿತಃ ಪ್ರಭುಃ।।

ಮಾರ್ಕಂಡೇಯನು ಹೇಳಿದನು: “ಭಗವಾನ್ ಪಾವಕಿಯು ಸೇನಾಧಿಪತಿಯಾಗಿ ಅಭಿಷಿಕ್ತನಾಗಲು ಸಂತೋಷಗೊಂಡ ಶ್ರೀಮಾನ್ ಪ್ರಭು ಹರನು ಪಾರ್ವತಿಯ ಸಹಿತ ಆದಿತ್ಯವರ್ಣದ ರಥದಲ್ಲಿ ಭದ್ರವಟದ ಕಡೆ ಪ್ರಯಾಣಿಸಿದನು.

03221002a ಸಹಸ್ರಂ ತಸ್ಯ ಸಿಂಹಾನಾಂ ತಸ್ಮಿನ್ಯುಕ್ತಂ ರಥೋತ್ತಮೇ।
03221002c ಉತ್ಪಪಾತ ದಿವಂ ಶುಭ್ರಂ ಕಾಲೇನಾಭಿಪ್ರಚೋದಿತಃ।।
03221003a ತೇ ಪಿಬಂತ ಇವಾಕಾಶಂ ತ್ರಾಸಯಂತಶ್ಚರಾಚರಾನ್।
03221003c ಸಿಂಹಾ ನಭಸ್ಯಗಚ್ಚಂತ ನದಂತಶ್ಚಾರುಕೇಸರಾಃ।।

ಅವನ ಆ ಉತ್ತಮ ರಥಕ್ಕೆ ಸಾವಿರ ಸಿಂಹಗಳನ್ನು ಕಟ್ಟಲಾಗಿತ್ತು. ಕಾಲದಿಂದ ಪ್ರಚೋದಿತವಾಗಿ ಶುಭ್ರದಿವದಲ್ಲಿ ಉತ್ಪಪಾತಗಳು ಕಾಣಿಸಿದವು. ನಭದಲ್ಲಿ ಹೋಗುತ್ತಿದ್ದ, ಸುಂದರ ಕೇಸರಗಳನ್ನು ಹೊಂದಿದ್ದ ಸಿಂಹಗಳು ಗರ್ಜಿಸುತ್ತಿರಲು ಅವು ಆಕಾಶವನ್ನು ಕುಡಿಯುತ್ತಿರುವವೋ ಎನ್ನುವಂತೆ ಚರಾಚರಗಳನ್ನು ಹೆದರಿಸುತ್ತಾ ಹೋಗುತ್ತಿದ್ದವು.

03221004a ತಸ್ಮಿನ್ರಥೇ ಪಶುಪತಿಃ ಸ್ಥಿತೋ ಭಾತ್ಯುಮಯಾ ಸಹ।
03221004c ವಿದ್ಯುತಾ ಸಹಿತಃ ಸೂರ್ಯಃ ಸೇಂದ್ರಚಾಪೇ ಘನೇ ಯಥಾ।।

ಆ ರಥದಲ್ಲಿ ಉಮೆಯ ಸಹಿತ ನಿಂತಿದ್ದ ಪಶುಪತಿಯು ಕಾಮನ ಬಿಲ್ಲಿನ ಮೋಡಗಳ ಮಧ್ಯೆ ವಿದ್ಯುತ್ತಿನ ಸಹಿತ ಕುಳಿತಿದ್ದ ಸೂರ್ಯನಂತೆ ತೋರಿದನು.

03221005a ಅಗ್ರತಸ್ತಸ್ಯ ಭಗವಾನ್ಧನೇಶೋ ಗುಹ್ಯಕೈಃ ಸಹ।
03221005c ಆಸ್ಥಾಯ ರುಚಿರಂ ಯಾತಿ ಪುಷ್ಪಕಂ ನರವಾಹನಃ।।

ಅವನ ಮುಂದೆ ಭಗವಾನ್ ನರವಾಹನ ಧನೇಶನು ಗುಹ್ಯಕರೊಂದಿಗೆ ಸುಂದರ ಪುಷ್ಪಕದಲ್ಲಿ ಕುಳಿತು ಹೊರಟನು.

03221006a ಐರಾವತಂ ಸಮಾಸ್ಥಾಯ ಶಕ್ರಶ್ಚಾಪಿ ಸುರೈಃ ಸಹ।
03221006c ಪೃಷ್ಠತೋಽನುಯಯೌ ಯಾಂತಂ ವರದಂ ವೃಷಭಧ್ವಜಂ।।

ಐರಾವತವನ್ನೇರಿ ಶಕ್ರನೂ ಕೂಡ ಸುರರೊಂದಿಗೆ ವರದ ವೃಷಭಧ್ವಜನ ಹಿಂದೆ ಅನುಸರಿಸಿ ಹೊರಟನು.

03221007a ಜಂಭಕೈರ್ಯಕ್ಷರಕ್ಷೋಭಿಃ ಸ್ರಗ್ವಿಭಿಃ ಸಮಲಂಕೃತಃ।
03221007c ಯಾತ್ಯಮೋಘೋ ಮಹಾಯಕ್ಷೋ ದಕ್ಷಿಣಂ ಪಕ್ಷಮಾಸ್ಥಿತಃ।।

ಮಹಾಯಕ್ಷ ಅಮೋಘನು ಮಾಲೆಗಳಿಂದ ಸಮಲಂಕೃತರಾದ ಜಂಭಕ, ಯಕ್ಷ ಮತ್ತು ರಾಕ್ಷಸರೊಡಗೂಡಿ ಬಲಬದಿಯಲ್ಲಿ ನಿಂತನು.

03221008a ತಸ್ಯ ದಕ್ಷಿಣತೋ ದೇವಾ ಮರುತಶ್ಚಿತ್ರಯೋಧಿನಃ।
03221008c ಗಚ್ಚಂತಿ ವಸುಭಿಃ ಸಾರ್ಧಂ ರುದ್ರೈಶ್ಚ ಸಹ ಸಂಗತಾಃ।।

ಅವನ ಬಲಗಡೆಯಲ್ಲಿ ಚಿತ್ರಯೋಧರಾದ ದೇವತೆಗಳು, ಮರುತರು, ವಸುಗಳು ಮತ್ತು ರುದ್ರರು ಒಂದುಗೂಡಿ ಸಾಗುತ್ತಿದ್ದರು.

03221009a ಯಮಶ್ಚ ಮೃತ್ಯುನಾ ಸಾರ್ಧಂ ಸರ್ವತಃ ಪರಿವಾರಿತಃ।
03221009c ಘೋರೈರ್ವ್ಯಾಧಿಶತೈರ್ಯಾತಿ ಘೋರರೂಪವಪುಸ್ತಥಾ।।

ಮೃತ್ಯುವಿನ ಸಹಿತ, ಘೋರರೂಪೀ, ಘೋರಮುಖದ ನೂರಾರು ಘೋರವ್ಯಾಧಿಗಳಿಂದ ಎಲ್ಲ ಕಡೆಯಿಂದಲೂ ಸುತ್ತುವರೆಯಲ್ಪಟ್ಟು ಯಮನು ಹೊರಟನು.

03221010a ಯಮಸ್ಯ ಪೃಷ್ಠತಶ್ಚೈವ ಘೋರಸ್ತ್ರಿಶಿಖರಃ ಶಿತಃ।
03221010c ವಿಜಯೋ ನಾಮ ರುದ್ರಸ್ಯ ಯಾತಿ ಶೂಲಃ ಸ್ವಲಂಕೃತಃ।।

ಯಮನ ಹಿಂದೆಯೇ ಘೋರವಾಗಿದ್ದ ಮೂರು ಮೊನಚಾದ ತುದಿಗಳನ್ನುಳ್ಳ ವಿಜಯ ಎಂಬ ಹೆಸರಿನ ರುದ್ರನ ಶೂಲವನ್ನು ಅಲಂಕರಿಸಿ ಕೊಂಡೊಯ್ದರು.

03221011a ತಮುಗ್ರಪಾಶೋ ವರುಣೋ ಭಗವಾನ್ಸಲಿಲೇಶ್ವರಃ।
03221011c ಪರಿವಾರ್ಯ ಶನೈರ್ಯಾತಿ ಯಾದೋಭಿರ್ವಿವಿಧೈರ್ವೃತಃ।।

ಆಗ ಉಗ್ರಪಾಶವನ್ನು ಹಿಡಿದು ಸಲಿಲೇಶ್ವರ ಭಗವಾನ್ ವರುಣನು ವಿವಿಧ ನೀರಿನ ಪ್ರಾಣಿಗಳಿಂದ ಸುತ್ತುವರೆಯಲ್ಪಟ್ಟು ಮೆಲ್ಲನೆ ಮುಂದುವರೆದನು.

03221012a ಪೃಷ್ಠತೋ ವಿಜಯಸ್ಯಾಪಿ ಯಾತಿ ರುದ್ರಸ್ಯ ಪಟ್ಟಿಶಃ।
03221012c ಗದಾಮುಸಲಶಕ್ತ್ಯಾದ್ಯೈರ್ವೃತಃ ಪ್ರಹರಣೋತ್ತಮೈಃ।।

ವಿಜಯದ ಹಿಂದೆ ರುದ್ರನ ಪಟ್ಟಿಷವು, ಗದೆ, ಮುಸಲ, ಶಕ್ತಿ ಮೊದಲಾದ ಉತ್ತಮ ಆಯುಧಗಳಿಂದ ಸುತ್ತವರೆಯಲ್ಪಟ್ಟು ಹಿಂಬಾಲಿತು.

03221013a ಪಟ್ಟಿಶಂ ತ್ವನ್ವಗಾದ್ರಾಜಂಶ್ಚತ್ರಂ ರೌದ್ರಂ ಮಹಾಪ್ರಭಂ।
03221013c ಕಮಂಡಲುಶ್ಚಾಪ್ಯನು ತಂ ಮಹರ್ಷಿಗಣಸಂವೃತಃ।।

ರಾಜನ್! ಆ ಪಟ್ಟಿಶದ ಮೇಲೆ ರುದ್ರನ ಮಹಾಪ್ರಭೆಯ ಬಿಳಿ ಕೊಡೆಯನ್ನು ಹಿಡಿಯಲಾಗಿತ್ತು. ಮಹರ್ಷಿಗಣಗಳಿಂದ ಸುತ್ತುವರೆಯಲ್ಪಟ್ಟು ಕಮಂಡಲುವೂ ಅದನ್ನು ಹಿಂಬಾಲಿಸಿತು.

03221014a ತಸ್ಯ ದಕ್ಷಿಣತೋ ಭಾತಿ ದಂಡೋ ಗಚ್ಚಂ ಶ್ರಿಯಾ ವೃತಃ।
03221014c ಭೃಗ್ವಂಗಿರೋಭಿಃ ಸಹಿತೋ ದೇವೈಶ್ಚಾಪ್ಯಭಿಪೂಜಿತಃ।।

ಅದರ ಬಲಗಡೆಯಲ್ಲಿ ಶ್ರೀಯಿಂದ ಆವೃತಗೊಂಡು ಹೊಳೆಯುತ್ತಿರುವ ದಂಡವು, ದೇವತೆಗಳಿಂದ ಪೂಜಿಸಲ್ಪಟ್ಟು ಭೃಗು ಅಂಗಿರಸರೊಡನೆ ಹೋಗುತ್ತಿತ್ತು.

03221015a ಏಷಾಂ ತು ಪೃಷ್ಠತೋ ರುದ್ರೋ ವಿಮಲೇ ಸ್ಯಂದನೇ ಸ್ಥಿತಃ।
03221015c ಯಾತಿ ಸಂಹರ್ಷಯನ್ಸರ್ವಾಂಸ್ತೇಜಸಾ ತ್ರಿದಿವೌಕಸಃ।।

ಇವೆಲ್ಲವುಗಳ ಹಿಂದೆ ರುದ್ರನು ಬಿಳಿಯ ರಥದಲ್ಲಿ ನಿಂತು ತನ್ನ ತೇಜಸ್ಸಿನಿಂದ ಎಲ್ಲ ತ್ರಿದಿವೌಕಸರನ್ನೂ ಹರ್ಷಗೊಳಿಸತ್ತಾ ಮುಂದುವರೆದನು.

03221016a ಋಷಯಶ್ಚೈವ ದೇವಾಶ್ಚ ಗಂಧರ್ವಾ ಭುಜಗಾಸ್ತಥಾ।
03221016c ನದ್ಯೋ ನದಾ ದ್ರುಮಾಶ್ಚೈವ ತಥೈವಾಪ್ಸರಸಾಂ ಗಣಾಃ।।
03221017a ನಕ್ಷತ್ರಾಣಿ ಗ್ರಹಾಶ್ಚೈವ ದೇವಾನಾಂ ಶಿಶವಶ್ಚ ಯೇ।
03221017c ಸ್ತ್ರಿಯಶ್ಚ ವಿವಿಧಾಕಾರಾ ಯಾಂತಿ ರುದ್ರಸ್ಯ ಪೃಷ್ಠತಃ।

ರುದ್ರನ ಹಿಂದೆ ಋಷಿಗಳೂ, ದೇವತೆಗಳೂ, ಗಂಧರ್ವರೂ, ಭುಜಗರೂ, ನದಿಗಳೂ, ಸರೋವರಗಳೂ, ವೃಕ್ಷಗಳೂ, ಅಪ್ಸರ ಗಣಗಳೂ, ನಕ್ಷತ್ರಗಳೂ, ಗ್ರಹಗಳೂ, ದೇವತೆಗಳ ಮಕ್ಕಳೂ, ಮತ್ತು ವಿವಿಧಾಕಾರದ ಸ್ತ್ರೀಯರೂ ಹೊರಟರು.

03221017e ಸೃಜಂತ್ಯಃ ಪುಷ್ಪವರ್ಷಾಣಿ ಚಾರುರೂಪಾ ವರಾಂಗನಾಃ।।
03221018a ಪರ್ಜನ್ಯಶ್ಚಾಪ್ಯನುಯಯೌ ನಮಸ್ಕೃತ್ಯ ಪಿನಾಕಿನಂ।

ಈ ಸುಂದರರೂಪಿನ ವರಾಂಗನೆಯರು ಹೂಗಳನ್ನು ದಾರಿಯಲ್ಲಿ ಬೀರುತ್ತಾ ಮತ್ತು ಮೋಡಗಳು ಪಿನಾಕಿನಿಯನ್ನು ನಮಸ್ಕರಿಸಿ ಹೂವಿನ ಮಳೆಯನ್ನು ಸುರಿಸುತ್ತಾ ಹೊರಟವು.

03221018c ಚತ್ರಂ ತು ಪಾಂಡುರಂ ಸೋಮಸ್ತಸ್ಯ ಮೂರ್ಧನ್ಯಧಾರಯತ್।
03221018e ಚಾಮರೇ ಚಾಪಿ ವಾಯುಶ್ಚ ಗೃಹೀತ್ವಾಗ್ನಿಶ್ಚ ವಿಷ್ಠಿತೌ।।

ಸೋಮನು ಅವನ ನೆತ್ತಿಯಮೇಲೆ ಬಿಳಿಗೊಡೆಯನ್ನು ಹಿಡಿದನು. ವಾಯು ಮತ್ತು ಅಗ್ನಿಯರು ಅವನಿಗೆ ಚಾಮರಗಳನ್ನು ಬೀಸಿದರು.

03221019a ಶಕ್ರಶ್ಚ ಪೃಷ್ಠತಸ್ತಸ್ಯ ಯಾತಿ ರಾಜಂ ಶ್ರಿಯಾ ವೃತಃ।
03221019c ಸಹ ರಾಜರ್ಷಿಭಿಃ ಸರ್ವೈಃ ಸ್ತುವಾನೋ ವೃಷಕೇತನಂ।।

ರಾಜನ್! ಅವನ ಹಿಂದೆ ಶ್ರೀಯಿಂದ ಆವೃತನಾಗಿ ಶಕ್ರನು ಎಲ್ಲ ರಾಜರ್ಷಿಗಳೊಂದಿಗೆ ವೃಷಕೇತನನ್ನು ಸ್ತುತಿಸುತ್ತಾ ಹೊರಟನು.

03221020a ಗೌರೀ ವಿದ್ಯಾಥ ಗಾಂಧಾರೀ ಕೇಶಿನೀ ಮಿತ್ರಸಾಃವಯಾ।
03221020c ಸಾವಿತ್ರ್ಯಾ ಸಹ ಸರ್ವಾಸ್ತಾಃ ಪಾರ್ವತ್ಯಾ ಯಾಂತಿ ಪೃಷ್ಠತಃ।।
03221021a ತತ್ರ ವಿದ್ಯಾಗಣಾಃ ಸರ್ವೇ ಯೇ ಕೇ ಚಿತ್ಕವಿಭಿಃ ಕೃತಾಃ।

ಪಾರ್ವತಿಯನ್ನು ಅನುಸರಿಸಿ ಗೌರಿ, ವಿದ್ಯಾ, ಗಾಂಧಾರೀ, ಕೇಶಿನೀ, ಮಿತ್ರಸಾಹ್ವ ಎಲ್ಲರೂ, ಕವಿಗಳು ಯಾರೆಲ್ಲ ವಿದ್ಯಾಗಣಗಳನ್ನು ಮಾಡಿದ್ದರೋ ಅವರೆಲ್ಲರೂ ಸಾವಿತ್ರಿಯೊಡನೆ ಹೋದರು.

03221021c ಯಸ್ಯ ಕುರ್ವಂತಿ ವಚನಂ ಸೇಂದ್ರಾ ದೇವಾಶ್ಚಮೂಮುಖೇ।।
03221022a ಸ ಗೃಹೀತ್ವಾ ಪತಾಕಾಂ ತು ಯಾತ್ಯಗ್ರೇ ರಾಕ್ಷಸೋ ಗ್ರಹಃ।

ಇಂದ್ರನ ವಚನದಂತೆ ಮಾಡುವ ರಾಕ್ಷಸರು ಪತಾಕೆಗಳನ್ನು ಹಿಡಿದು ದೇವತೆಗಳ ಸೇನೆಯ ಮುಂದೆ ಹೊರಟರು.

03221022c ವ್ಯಾಪೃತಸ್ತು ಶ್ಮಶಾನೇ ಯೋ ನಿತ್ಯಂ ರುದ್ರಸ್ಯ ವೈ ಸಖಾ।।
03221022e ಪಿಂಗಲೋ ನಾಮ ಯಕ್ಷೇಂದ್ರೋ ಲೋಕಸ್ಯಾನಂದದಾಯಕಃ।।
03221023a ಏಭಿಃ ಸ ಸಹಿತಸ್ತತ್ರ ಯಯೌ ದೇವೋ ಯಥಾಸುಖಂ।
03221023c ಅಗ್ರತಃ ಪೃಷ್ಠತಶ್ಚೈವ ನ ಹಿ ತಸ್ಯ ಗತಿರ್ಧ್ರುವಾ।।

ಶ್ಮಶಾನದಲ್ಲಿ ನಿತ್ಯವೂ ತಿರುಗಾಡುವ ರುದ್ರನ ಸಖನಾದ ಪಿಂಗಲ ಎಂಬ ಹೆಸರಿನ ಲೋಕಗಳ ಆನಂದದಾಯಕ ಯಕ್ಷೇಂದ್ರನು ಕೂಡ ದೇವತೆಗಳ ಸಹಿತ ಅಲ್ಲಿ ಯಥಾಸುಖನಾಗಿ ಹೊರಟನು. ಒಮ್ಮೆ ಮುಂದೆ ಹೋಗುತ್ತಿದ್ದರೆ ಇನ್ನೊಮ್ಮೆ ಹಿಂದೆ ಬೀಳುತ್ತಿದ್ದ ಅವನ ಗತಿಯು ನಿರ್ಧಿಷ್ಠವಾಗಿರಲಿಲ್ಲ.

03221024a ರುದ್ರಂ ಸತ್ಕರ್ಮಭಿರ್ಮರ್ತ್ಯಾಃ ಪೂಜಯಂತೀಹ ದೈವತಂ।
03221024c ಶಿವಮಿತ್ಯೇವ ಯಂ ಪ್ರಾಹುರೀಶಂ ರುದ್ರಂ ಪಿನಾಕಿನಂ।
03221024e ಭಾವೈಸ್ತು ವಿವಿಧಾಕಾರೈಃ ಪೂಜಯಂತಿ ಮಹೇಶ್ವರಂ।।

ಮನುಷ್ಯರು ಸತ್ಕರ್ಮಗಳಿಂದ ಪೂಜಿಸುವ ದೈವತನು ರುದ್ರ. ಅವನನ್ನು ಶಿವನೆಂದೂ, ಈಶನೆಂದೂ, ರುದ್ರನೆಂದೂ, ಪಿನಾಕಿಯೆಂದು ಕರೆಯುತ್ತಾರೆ. ವಿವಿಧಾಕಾರದ ಭಾವಗಳಿಂದ ಮಹೇಶ್ವರನನ್ನು ಪೂಜಿಸುತ್ತಾರೆ.

03221025a ದೇವಸೇನಾಪತಿಸ್ತ್ವೇವಂ ದೇವಸೇನಾಭಿರಾವೃತಃ।
03221025c ಅನುಗಚ್ಚತಿ ದೇವೇಶಂ ಬ್ರಹ್ಮಣ್ಯಃ ಕೃತ್ತಿಕಾಸುತಃ।।

ಆಗ ದೇವಸೇನಾಪತಿ, ಬ್ರಹ್ಮಣ್ಯ, ಕೃತ್ತಿಕಾಸುತನೂ ಕೂಡ ದೇವಸೇನೆಯಿಂದ ಸುತ್ತುವರೆಯಲ್ಪಟ್ಟು ದೇವೇಶನನ್ನು ಅನುಸರಿಸಿ ಹೋದನು.

03221026a ಅಥಾಬ್ರವೀನ್ಮಹಾಸೇನಂ ಮಹಾದೇವೋ ಬೃಹದ್ವಚಃ।
03221026c ಸಪ್ತಮಂ ಮಾರುತಸ್ಕಂಧಂ ರಕ್ಷ ನಿತ್ಯಮತಂದ್ರಿತಃ।।

ಆಗ ಮಹಾದೇವನು ಮಹಾಸೇನನಿಗೆ ಈ ಮಹತ್ತರ ಮಾತನ್ನಾಡಿದನು: “ಜಾಗರೂಕತೆಯಿಂದ ನಿತ್ಯವೂ ಏಳನೆಯ ಮಾರುತಗಣವನ್ನು ರಕ್ಷಿಸು.”

03221027 ಸ್ಕಂದ ಉವಾಚ।
03221027a ಸಪ್ತಮಂ ಮಾರುತಸ್ಕಂಧಂ ಪಾಲಯಿಷ್ಯಾಮ್ಯಹಂ ಪ್ರಭೋ।
03221027c ಯದನ್ಯದಪಿ ಮೇ ಕಾರ್ಯಂ ದೇವ ತದ್ವದ ಮಾಚಿರಂ।।

ಸ್ಕಂದನು ಹೇಳಿದನು: “ಪ್ರಭೋ! ಏಳನೆಯ ಮಾರುತಗಣವನ್ನು ನಾನು ಪಾಲಿಸುತ್ತಿದ್ದೇನೆ. ಇನ್ನೂ ಏನನ್ನಾದರೂ ಮಾಡಬೇಕಾಗಿದ್ದರೆ ಅದನ್ನೂ ಬೇಗನೆ ಹೇಳು.”

03221028 ರುದ್ರ ಉವಾಚ।
03221028a ಕಾರ್ಯೇಷ್ವಹಂ ತ್ವಯಾ ಪುತ್ರ ಸಂದ್ರಷ್ಟವ್ಯಃ ಸದೈವ ಹಿ।
03221028c ದರ್ಶನಾನ್ಮಮ ಭಕ್ತ್ಯಾ ಚ ಶ್ರೇಯಃ ಪರಮವಾಪ್ಸ್ಯಸಿ।।

ರುದ್ರನು ಹೇಳಿದನು: “ಪುತ್ರ! ಸದಾ ನನ್ನನ್ನು ಕಾರ್ಯಗಳಲ್ಲಿ ತೊಡಗಿರುವುದನ್ನು ನೋಡುವೆ. ನನ್ನ ಮೇಲಿನ ಭಕ್ತಿ ಮತ್ತು ದರ್ಶನಗಳಿಂದ ಪರಮ ಶ್ರೇಯಸ್ಸನ್ನು ಹೊಂದುತ್ತೀಯೆ.”

03221029 ಮಾರ್ಕಂಡೇಯ ಉವಾಚ।
03221029a ಇತ್ಯುಕ್ತ್ವಾ ವಿಸಸರ್ಜೈನಂ ಪರಿಷ್ವಜ್ಯ ಮಹೇಷ್ವರಃ।
03221029c ವಿಸರ್ಜಿತೇ ತತಃ ಸ್ಕಂದೇ ಬಭೂವೌತ್ಪಾತಿಕಂ ಮಹತ್।
03221029e ಸಹಸೈವ ಮಹಾರಾಜ ದೇವಾನ್ಸರ್ವಾನ್ ಪ್ರಮೋಹಯತ್।।

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಮಹೇಶ್ವರನು ಅವನನ್ನು ಬಿಗಿದಪ್ಪಿ ಬಿಟ್ಟನು. ಸ್ಕಂದನು ಹೀಗೆ ಬಿಡಲ್ಪಟ್ಟ ನಂತರ ಒಮ್ಮಿಂದೊಮ್ಮೆಲೇ ಅಲ್ಲಿ ಸರ್ವ ದೇವತೆಗಳನ್ನೂ ತಲ್ಲಣಿಸುವ ಮಹಾ ಉತ್ಪಾತಗಳು ನಡೆದವು.

03221030a ಜಜ್ವಾಲ ಖಂ ಸನಕ್ಷತ್ರಂ ಪ್ರಮೂಢಂ ಭುವನಂ ಭೃಶಂ।
03221030c ಚಚಾಲ ವ್ಯನದಚ್ಚೋರ್ವೀ ತಮೋಭೂತಂ ಜಗತ್ಪ್ರಭೋ।।

ನಕ್ಷತ್ರಗಳೊಂದಿಗಿನ ಆಕಾಶವು ಭುಗಿಲೆದ್ದು ಉರಿಯತೊಡಗಿತು; ಇಡೀ ಭುವನವೇ ತುಂಬಾ ಗೊಂದಲಕ್ಕೊಳಗಾಯಿತು. ಭೂಮಿಯು ಗುಡುಗಿ ನಡುಗಿತು ಮತ್ತು ಪ್ರಭೋ! ಜಗತ್ತು ಕತ್ತಲೆಯಿಂದ ತುಂಬಿತು.

03221031a ತತಸ್ತದ್ದಾರುಣಂ ದೃಷ್ಟ್ವಾ ಕ್ಷುಭಿತಃ ಶಂಕರಸ್ತದಾ।
03221031c ಉಮಾ ಚೈವ ಮಹಾಭಾಗಾ ದೇವಾಶ್ಚ ಸಮಹರ್ಷಯಃ।।

ಆಗ ಆ ದಾರುಣವನ್ನು ನೋಡಿ ಶಂಕರ, ಮಹಾಭಾಗೆ ಉಮೆ ಮತ್ತು ಮಹರ್ಷಿಗಳೊಂದಿಗೆ ದೇವತೆಗಳು ಕೂಡ ಗೊಂದಲಕ್ಕೀಡಾದರು.

03221032a ತತಸ್ತೇಷು ಪ್ರಮೂಢೇಷು ಪರ್ವತಾಂಬುದಸನ್ನಿಭಂ।
03221032c ನಾನಾಪ್ರಹರಣಂ ಘೋರಮದೃಶ್ಯತ ಮಹದ್ಬಲಂ।।

ಹೀಗೆ ಅವರು ಪ್ರಮೂಢರಾಗಲು ಅಲ್ಲಿ ಮೋಡಗಳ ಪರ್ವತದಂತೆ ತೋರುವ, ಘೋರರಾದ, ನಾನಾ ಪ್ರಹರಣಗಳನ್ನು ಮಾಡುತ್ತಿರುವ ಮಹಾ ಸೇನೆಯು ಕಾಣಿಸಿಕೊಂಡಿತು.

03221033a ತದ್ಧಿ ಘೋರಮಸಂಖ್ಯೇಯಂ ಗರ್ಜಚ್ಚ ವಿವಿಧಾ ಗಿರಃ।
03221033c ಅಭ್ಯದ್ರವದ್ರಣೇ ದೇವಾನ್ಭಗವಂತಂ ಚ ಶಂಕರಂ।।

ಆ ಘೋರ ಅಸಂಖ್ಯ ಸೇನೆಯು ವಿವಿಧ ಭಾಷೆಗಳಲ್ಲಿ ಗರ್ಜಿಸುತ್ತಾ ದೇವತೆಗಳು ಮತ್ತು ಭಗವಾನ್ ಶಂಕರನ ರಣದೆಡೆಗೆ ಓಡಿ ಬಂದಿತು.

03221034a ತೈರ್ವಿಸೃಷ್ಟಾನ್ಯನೀಕೇಷು ಬಾಣಜಾಲಾನ್ಯನೇಕಶಃ।
03221034c ಪರ್ವತಾಶ್ಚ ಶತಘ್ನ್ಯಶ್ಚ ಪ್ರಾಸಾಶ್ಚ ಪರಿಘಾ ಗದಾಃ।।

ಅವರು ದೇವಸೇನೆಯ ಮೇಲೆ ಎಲ್ಲ ದಿಕ್ಕುಗಳಿಂದಲೂ ಅನೇಕ ಬಾಣಜಾಲಗಳನ್ನು, ಪರ್ವತಗಳನ್ನು, ಶತಘ್ನಗಳನ್ನೂ, ಪ್ರಾಸಗಳನ್ನೂ, ಪರಿಘಗಳನ್ನೂ ಗದೆಗಳನ್ನೂ ಎಸೆದರು.

03221035a ನಿಪತದ್ಭಿಶ್ಚ ತೈರ್ಘೋರೈರ್ದೇವಾನೀಕಂ ಮಹಾಯುಧೈಃ।
03221035c ಕ್ಷಣೇನ ವ್ಯದ್ರವತ್ಸರ್ವಂ ವಿಮುಖಂ ಚಾಪ್ಯದೃಶ್ಯತ।।

ಆ ಘೋರ ಮಹಾಯುಧಗಳು ಬೀಳಲು ದೇವಸೇನೆಯು ಕ್ಷಣದಲ್ಲಿ ತಲ್ಲಣಿಸಿ ಎಲ್ಲರೂ ವಿಮುಖರಾಗುತ್ತಿರುವುದು ಕಂಡುಬಂದಿತು.

03221036a ನಿಕೃತ್ತಯೋಧನಾಗಾಶ್ವಂ ಕೃತ್ತಾಯುಧಮಹಾರಥಂ।
03221036c ದಾನವೈರರ್ದಿತಂ ಸೈನ್ಯಂ ದೇವಾನಾಂ ವಿಮುಖಂ ಬಭೌ।

ದಾನವರು ದೇವತೆಗಳ ಸೇನೆಯ ಯೋಧರನ್ನು, ಆನೆಗಳನ್ನು, ಅಶ್ವಗಳನ್ನು ಮತ್ತು ಮಹಾರಥಗಳನ್ನು ಆಯುಧಗಳಿಂದ ತುಂಡರಿಸಿ ಪೀಡೆಗೊಳಗಾಗಲು ಅವರು ವಿಮುಖರಾದರು.

03221037e ಅಪತದ್ದಗ್ಧಭೂಯಿಷ್ಠಂ ಮಹಾದ್ರುಮವನಂ ಯಥಾ।।
03221038a ತೇ ವಿಭಿನ್ನಶಿರೋದೇಹಾಃ ಪ್ರಚ್ಯವಂತೇ ದಿವೌಕಸಃ।
03221038c ನ ನಾಥಮಧ್ಯಗಚ್ಚಂತ ವಧ್ಯಮಾನಾ ಮಹಾರಣೇ।।

ಕಾಡ್ಗಿಚ್ಚಿಗೆ ಸಿಲುಕಿ ಸುಟ್ಟು ಉರುಳುವ ಮರಗಳಂತೆ ದಿವೌಕಸರು ಶಿರ-ದೇಹಗಳು ವಿಭಿನ್ನವಾಗಿ, ಮಹಾರಣದಲ್ಲಿ ನಾಥರಿಲ್ಲದಂತೆ ವಧಿಸಲ್ಪಟ್ಟು ಬಿದ್ದರು.

03221039a ಅಥ ತದ್ವಿದ್ರುತಂ ಸೈನ್ಯಂ ದೃಷ್ಟ್ವಾ ದೇವಃ ಪುರಂದರಃ।
03221039c ಆಶ್ವಾಸಯನ್ನುವಾಚೇದಂ ಬಲವದ್ದಾನವಾರ್ದಿತಂ।।

ಆಗ ತಲ್ಲಣಿಸಿದ ಸೇನೆಯನ್ನು ನೋಡಿ ದೇವ ಪುರಂದರ ಬಲವತನು ದಾನವರಿಂದ ಆರ್ದಿತರಾದವರಿಗೆ ಆಶ್ವಾಸನೆಯನ್ನು ನೀಡುತ್ತಾ ಈ ಮಾತನ್ನಾಡಿದನು.

03221040a ಭಯಂ ತ್ಯಜತ ಭದ್ರಂ ವಃ ಶೂರಾಃ ಶಸ್ತ್ರಾಣಿ ಗೃಹ್ಣತ।
03221040c ಕುರುಧ್ವಂ ವಿಕ್ರಮೇ ಬುದ್ಧಿಂ ಮಾ ವಃ ಕಾ ಚಿದ್ವ್ಯಥಾ ಭವೇತ್।।
03221041a ಜಯತೈನಾನ್ಸುದುರ್ವೃತ್ತಾನ್ದಾನವಾನ್ಘೋರದರ್ಶನಾನ್।
03221041c ಅಭಿದ್ರವತ ಭದ್ರಂ ವೋ ಮಯಾ ಸಹ ಮಹಾಸುರಾನ್।।

“ಶೂರರೇ! ಭಯವನ್ನು ತೊರೆಯಿರಿ! ನಿಮಗೆ ಮಂಗಳವಾಗಲಿ! ನೀವೆಲ್ಲರೂ ಶಸ್ತ್ರಗಳನ್ನು ಹಿಡಿದು ವಿಕ್ರಮದಿಂದ ಹೋರಾಡಬೇಕು. ಇದರಿಂದ ಎಂದೂ ದುಃಖಿಗಳಾಗುವುದಿಲ್ಲ. ಈ ಕೆಟ್ಟ ನಡತೆಯ, ಘೋರದರ್ಶನ ಮಹಾಸುರ ದಾನವರನ್ನು ನನ್ನೊಡಗೂಡಿ ಸೋಲಿಸಿ. ನಿಮಗೆ ಮಂಗಳವಾಗಲಿ!”

03221042a ಶಕ್ರಸ್ಯ ವಚನಂ ಶ್ರುತ್ವಾ ಸಮಾಶ್ವಸ್ತಾ ದಿವೌಕಸಃ।
03221042c ದಾನವಾನ್ಪ್ರತ್ಯಯುಧ್ಯಂತ ಶಕ್ರಂ ಕೃತ್ವಾ ವ್ಯಪಾಶ್ರಯಂ।।

ಶಕ್ರನ ಮಾತುಗಳನ್ನು ಕೇಳಿ ದಿವೌಕಸರು ಆಶ್ವಾಸನೆ ಪಡೆದು ಶಕ್ರನ ನೇತೃತ್ವದಲ್ಲಿ ದಾನವರ ವಿರುದ್ಧ ಹೋರಾಡಿದರು.

03221043a ತತಸ್ತೇ ತ್ರಿದಶಾಃ ಸರ್ವೇ ಮರುತಶ್ಚ ಮಹಾಬಲಾಃ।
03221043c ಪ್ರತ್ಯುದ್ಯಯುರ್ಮಹಾವೇಗಾಃ ಸಾಧ್ಯಾಶ್ಚ ವಸುಭಿಃ ಸಹ।।

ಆಗ ತ್ರಿದಶರೆಲ್ಲರೂ ಮಹಾಬಲ ಮರುತರೂ ಮಹಾವೇಗ ಸಾಧ್ಯರೂ ವಸುಗಳೊಂದಿಗೆ ಪ್ರತಿಯುದ್ಧವನ್ನು ಮಾಡಿದರು.

03221044a ತೈರ್ವಿಸೃಷ್ಟಾನ್ಯನೀಕೇಷು ಕ್ರುದ್ಧೈಃ ಶಸ್ತ್ರಾಣಿ ಸಂಯುಗೇ।
03221044c ಶರಾಶ್ಚ ದೈತ್ಯಕಾಯೇಷು ಪಿಬಂತಿ ಸ್ಮಾಸೃಗುಲ್ಬಣಂ।।

ಕ್ರುದ್ಧರಾಗಿ ಅವರು ಪ್ರಯೋಗಿಸಿದ ಶಸ್ತ್ರಗಳು ಮತ್ತು ಬಿಲ್ಲುಗಳಿಂದ ಬಿಡಲ್ಪಟ್ಟ ಬಾಣಗಳು ದೈತ್ಯರ ದೇಹಗಳನ್ನು ಹೊಕ್ಕು ಅವರ ರಕ್ತವನ್ನು ಕುಡಿದವು.

03221045a ತೇಷಾಂ ದೇಹಾನ್ವಿನಿರ್ಭಿದ್ಯ ಶರಾಸ್ತೇ ನಿಶಿತಾಸ್ತದಾ।
03221045c ನಿಷ್ಪತಂತೋ ಅದೃಶ್ಯಂತ ನಗೇಭ್ಯ ಇವ ಪನ್ನಗಾಃ।।

ಅವರ ದೇಹಗಳನ್ನು ಭೇದಿಸಿ ಹೊರಬೀಳುವ ಹರಿತ ಶರಗಳು ಪರ್ವತದಿಂದ ಬೀಳುತ್ತಿರುವ ಸರ್ಪಗಳಂತೆ ತೋರಿದವು.

03221046a ತಾನಿ ದೈತ್ಯಶರೀರಾಣಿ ನಿರ್ಭಿನ್ನಾನಿ ಸ್ಮ ಸಾಯಕೈಃ।
03221046c ಅಪತನ್ಭೂತಲೇ ರಾಜಂಶ್ಚಿನ್ನಾಭ್ರಾಣೀವ ಸರ್ವಶಃ।।

ರಾಜನ್! ಬಾಣಗಳಿಂದ ತುಂಡರಿಸಿ ದೈತ್ಯರ ಶರೀರಗಳು ಚದುರಿದ ಮೋಡಗಳ ತುಂಡುಗಳಂತೆ ಎಲ್ಲೆಡೆಯಲ್ಲಿಯೂ ಭೂಮಿಯಮೇಲೆ ಬಿದ್ದವು.

03221047a ತತಸ್ತದ್ದಾನವಂ ಸೈನ್ಯಂ ಸರ್ವೈರ್ದೇವಗಣೈರ್ಯುಧಿ।
03221047c ತ್ರಾಸಿತಂ ವಿವಿಧೈರ್ಬಾಣೈಃ ಕೃತಂ ಚೈವ ಪರಾಙ್ಮುಖಂ।।

ಆಗ ಯುದ್ಧದಲ್ಲಿ ಆ ದಾನವ ಸೇನೆಯನ್ನು ಎಲ್ಲ ದೇವಗಣಗಳೂ ವಿವಿಧ ಬಾಣಗಳಿಂದ ಪೀಡಿಸಿ ಅವರನ್ನೂ ಪರಾಙ್ಮುಖರಾಗುವಂತೆ ಮಾಡಿದವು.

03221048a ಅಥೋತ್ಕ್ರುಷ್ಟಂ ತದಾ ಹೃಷ್ಟೈಃ ಸರ್ವೈರ್ದೇವೈರುದಾಯುಧೈಃ।
03221048c ಸಂಹತಾನಿ ಚ ತೂರ್ಯಾಣಿ ತದಾ ಸರ್ವಾಣ್ಯನೇಕಶಃ।।

ಆಗ ಎಲ್ಲ ದೇವತೆಗಳೂ ಹರ್ಷದಿಂದ ಜೋರಾಗಿ ಕೂಗಿ ಹೊಡೆಯಲು ಸಿದ್ಧವಾಗಿದ್ದ ಆಯುಧಗಳನ್ನು ಹಿಡಿದು, ಎಲ್ಲರೂ ಅನೇಕ ತೂರ್ಯಗಳಿಂದ ಸಂಹರಿಸತೊಡಗಿದರು.

03221049a ಏವಮನ್ಯೋನ್ಯಸಮ್ಯುಕ್ತಂ ಯುದ್ಧಮಾಸೀತ್ಸುದಾರುಣಂ।
03221049c ದೇವಾನಾಂ ದಾನವಾನಾಂ ಚ ಮಾಂಸಶೋಣಿತಕರ್ದಮಂ।।

ಹೀಗೆ ಅನ್ಯೋನ್ಯರನ್ನು ಹೊಡೆದು, ದೇವತೆಗಳ ಮತ್ತು ದಾನವರ ಮಾಂಸ-ರಕ್ತ-ದೇಹಗಳು ಅಲ್ಲಲ್ಲಿ ಚದುರಿ ಬಿದ್ದಿದ್ದ ಅತಿ ದಾರುಣ ಯುದ್ಧವು ನಡೆಯಿತು.

03221050a ಅನಯೋ ದೇವಲೋಕಸ್ಯ ಸಹಸೈವ ವ್ಯದೃಶ್ಯತ।
03221050c ತಥಾ ಹಿ ದಾನವಾ ಘೋರಾ ವಿನಿಘ್ನಂತಿ ದಿವೌಕಸಃ।।

ಆದರೆ ಒಮ್ಮಿಂದೊಮ್ಮೆಗೇ ದೇವಲೋಕದವರು ಸೋಲನ್ನು ಕಂಡರು. ಓರ್ವ ಘೋರ ದಾನವನು ದಿವೌಕಸರನ್ನು ಸಂಹರಿಸುತ್ತಿದ್ದನು.

03221051a ತತಸ್ತೂರ್ಯಪ್ರಣಾದಾಶ್ಚ ಭೇರೀಣಾಂ ಚ ಮಹಾಸ್ವನಾಃ।
03221051c ಬಭೂವುರ್ದಾನವೇಂದ್ರಾಣಾಂ ಸಿಂಹನಾದಾಶ್ಚ ದಾರುಣಾಃ।।

ಆಗ ತೂರ್ಯ-ಪ್ರಣಾದ-ಭೇರಿಗಳ ಮಹಾಸ್ವನವು ಮತ್ತು ದಾನವೇಂದ್ರರ ದಾರುಣ ಸಿಂಹನಾದವು ಕೇಳಿಬಂದಿತು.

03221052a ಅಥ ದೈತ್ಯಬಲಾದ್ಘೋರಾನ್ನಿಷ್ಪಪಾತ ಮಹಾಬಲಃ।
03221052c ದಾನವೋ ಮಹಿಷೋ ನಾಮ ಪ್ರಗೃಹ್ಯ ವಿಪುಲಂ ಗಿರಿಂ।।

ಆಗ ದೈತ್ಯ ಸೇನೆಯಿಂದ ಘೋರನಾದ ಮಹಾಬಲಿ ಮಹಿಷ1 ಎಂಬ ಹೆಸರಿನ ದಾನವನು ದೊಡ್ಡದಾದ ಗಿರಿಯನ್ನು ಕೈಯಲ್ಲಿ ಹಿಡಿದು ಹೊರಬಿದ್ದನು.

03221053a ತೇ ತಂ ಘನೈರಿವಾದಿತ್ಯಂ ದೃಷ್ಟ್ವಾ ಸಂಪರಿವಾರಿತಂ।
03221053c ಸಮುದ್ಯತಗಿರಿಂ ರಾಜನ್ವ್ಯದ್ರವಂತ ದಿವೌಕಸಃ।।

ಅವನು ಘನ ಮೋಡಗಳ ಹಿಂದಿನಿಂದ ಇಣುಕುವ ಆದಿತ್ಯನಂತೆ ಕಂಡನು. ರಾಜನ್! ಅವನು ಗಿರಿಯನ್ನು ಎತ್ತಿಹಿಡಿದು ದಿವೌಕಸರೆಡೆಗೆ ಓಡಿಬಂದು ಎಸೆದನು.

03221054a ಅಥಾಭಿದ್ರುತ್ಯ ಮಹಿಷೋ ದೇವಾಂಶ್ಚಿಕ್ಷೇಪ ತಂ ಗಿರಿಂ।
03221054c ಪತತಾ ತೇನ ಗಿರಿಣಾ ದೇವಸೈನ್ಯಸ್ಯ ಪಾರ್ಥಿವ।
03221054e ಭೀಮರೂಪೇಣ ನಿಹತಮಯುತಂ ಪ್ರಾಪತದ್ಭುವಿ।।

ಮಹಿಷನು ಆ ಗಿರಿಯನ್ನು ತಮ್ಮ ಮೇಲೆ ಎಸೆಯುವವನಿದ್ದಾನೆ ಎಂದು ತಿಳಿದ ದೇವರು ಎಲ್ಲೆಡೆ ಚದುರಿ ಓಡಿದರು. ಪಾರ್ಥಿವ! ಆ ಭೀಮರೂಪದ ಗಿರಿಯು ಬೀಳುವುದರಿಂದ ದೇವಸೇನೆಯ ಹತ್ತು ಸಾವಿರ ಜನರು ಭೂಮಿಯ ಮೇಲೆ ಉರುಳಿಬಿದ್ದರು.

03221055a ಅಥ ತೈರ್ದಾನವೈಃ ಸಾರ್ಧಂ ಮಹಿಷಸ್ತ್ರಾಸಯನ್ಸುರಾನ್।
03221055c ಅಭ್ಯದ್ರವದ್ರಣೇ ತೂರ್ಣಂ ಸಿಂಹಃ ಕ್ಷುದ್ರಮೃಗಾನಿವ।।

ಆ ದಾನವ ಮಹಿಷನು ಸುರರನ್ನು ಈ ರೀತಿ ಸದೆಬಡಿದು ಒಂದು ಜಿಂಕೆಗಳ ಹಿಂಡಿನ ಮೇಲೆ ಎರಗುವ ಸಿಂಹದಂತೆ ರಣದ ಮೇಲೆ ಎರಗಿದನು.

03221056a ತಮಾಪತಂತಂ ಮಹಿಷಂ ದೃಷ್ಟ್ವಾ ಸೇಂದ್ರಾ ದಿವೌಕಸಃ।
03221056c ವ್ಯದ್ರವಂತ ರಣೇ ಭೀತಾ ವಿಶೀರ್ಣಾಯುಧಕೇತನಾಃ।।

ತಮ್ಮ ಮೇಲೆ ಬೀಳುತ್ತಿದ್ದ ಮಹಿಷನನ್ನು ನೋಡಿ ಇಂದ್ರನೊಡನೆ ದಿವೌಕಸರು ತಮ್ಮ ಆಯುಧ ಧ್ವಜಗಳನ್ನು ರಣದಲ್ಲಿಯೇ ಬಿಟ್ಟು ಭೀತರಾಗಿ ಓಡಿಹೋದರು.

03221057a ತತಃ ಸ ಮಹಿಷಃ ಕ್ರುದ್ಧಸ್ತೂರ್ಣಂ ರುದ್ರರಥಂ ಯಯೌ।
03221057c ಅಭಿದ್ರುತ್ಯ ಚ ಜಗ್ರಾಹ ರುದ್ರಸ್ಯ ರಥಕೂಬರಂ।।

ಆಗ ಆ ಮಹಿಷನು ಕೃದ್ಧನಾಗಿ ರುದ್ರನ ರಥದ ಬಳಿಗೆ ಓಡಿ ಬಂದು ರುದ್ರನ ರಥಕಂಬವನ್ನು ಹಿಡಿದನು.

03221058a ಯದಾ ರುದ್ರರಥಂ ಕ್ರುದ್ಧೋ ಮಹಿಷಃ ಸಹಸಾ ಗತಃ।
03221058c ರೇಸತೂ ರೋದಸೀ ಗಾಢಂ ಮುಮುಹುಶ್ಚ ಮಹರ್ಷಯಃ।।

ಕೃದ್ಧನಾದ ಮಹಿಷನು ರುದ್ರನ ರಥದ ಮೇಲೆ ಒಮ್ಮಿಂದೊಮ್ಮಲೇ ಬೀಳಲು ಭೂಮಿಯು ನರಳಿತು ಮತ್ತು ಮಹರ್ಷಿಗಳು ಗಾಢ ಮೂರ್ಛಿತರಾದರು.

03221059a ವ್ಯನದಂಶ್ಚ ಮಹಾಕಾಯಾ ದೈತ್ಯಾ ಜಲಧರೋಪಮಾಃ।
03221059c ಆಸೀಚ್ಚ ನಿಶ್ಚಿತಂ ತೇಷಾಂ ಜಿತಮಸ್ಮಾಭಿರಿತ್ಯುತ।।

ಮೋಡದಂತೆ ಮಹಾಕಾಯನಾಗಿದ್ದ ಆ ದೈತ್ಯನು ಅವರಿಗೆ ಜಯವು ನಿಶ್ಚಿತವಾದುದೆಂದು ಆನಂದಿಸಿದನು.

03221060a ತಥಾಭೂತೇ ತು ಭಗವಾನ್ನಾವಧೀನ್ಮಹಿಷಂ ರಣೇ।
03221060c ಸಸ್ಮಾರ ಚ ತದಾ ಸ್ಕಂದಂ ಮೃತ್ಯುಂ ತಸ್ಯ ದುರಾತ್ಮನಃ।।

ಆಗ ತಾನೇ ಮಹಿಷನನ್ನು ರಣದಲ್ಲಿ ಕೊಲ್ಲಬಹುದಾಗಿದ್ದರೂ ಆ ದುರಾತ್ಮನ ಮೃತ್ಯುವು ಸ್ಕಂದನಿಂದ ಆಗಬೇಕೆಂದು ಭಗವಾನನು ನೆನಪಿಸಿಕೊಂಡನು.

03221061a ಮಹಿಷೋಽಪಿ ರಥಂ ದೃಷ್ಟ್ವಾ ರೌದ್ರಂ ರುದ್ರಸ್ಯ ನಾನದತ್।
03221061c ದೇವಾನ್ಸಂತ್ರಾಸಯಂಶ್ಚಾಪಿ ದೈತ್ಯಾಂಶ್ಚಾಪಿ ಪ್ರಹರ್ಷಯನ್।।

ಮಹಿಷನೂ ಕೂಡ ರುದ್ರನ ರಥವನ್ನು ನೋಡಿ ರೌದ್ರವಾಗಿ ಕೂಗಿ, ದೇವತೆಗಳಲ್ಲಿ ಭಯವನ್ನೂ ದೈತ್ಯರಲ್ಲಿ ಸಂತೋಷವನ್ನೂ ಉಂಟುಮಾಡಿದನು.

03221062a ತತಸ್ತಸ್ಮಿನ್ಭಯೇ ಘೋರೇ ದೇವಾನಾಂ ಸಮುಪಸ್ಥಿತೇ।
03221062c ಆಜಗಾಮ ಮಹಾಸೇನಃ ಕ್ರೋಧಾತ್ಸೂರ್ಯ ಇವ ಜ್ವಲನ್।।

ದೇವತೆಗಳು ಆ ಘೋರವಾದ ಭಯದಲ್ಲಿರಲು ಮಹಾಸೇನನು ಕ್ರೋಧದಿಂದ ಉರಿಯುವ ಜ್ವಾಲೆಗಳ ರಾಶಿಯೋ ಎಂಬಂತೆ ಆಗಮಿಸಿದನು.

03221063a ಲೋಹಿತಾಂಬರಸಂವೀತೋ ಲೋಹಿತಸ್ರಗ್ವಿಭೂಷಣಃ।
03221063c ಲೋಹಿತಾಸ್ಯೋ ಮಹಾಬಾಹುರ್ಹಿರಣ್ಯಕವಚಃ ಪ್ರಭುಃ।।
03221064a ರಥಮಾದಿತ್ಯಸಂಕಾಶಮಾಸ್ಥಿತಃ ಕನಕಪ್ರಭಂ।
03221064c ತಂ ದೃಷ್ಟ್ವಾ ದೈತ್ಯಸೇನಾ ಸಾ ವ್ಯದ್ರವತ್ಸಹಸಾ ರಣೇ।।

ಕೆಂಪುಬಟ್ಟೆಯನ್ನು ಧರಿಸಿದ್ದ, ಕೆಂಪುಹಾರಗಳಿಂದ ಅಲಂಕೃತನಾಗಿದ್ದ, ಲೋಹಿತಾಸ್ಕನಾಗಿದ್ದ ಆ ಪ್ರಭು ಮಹಾಬಾಹುವು ಹಿರಣ್ಯಕವಚವನ್ನು ಧರಿಸಿ ಕನಕಪ್ರಭೆಯ ಆದಿತ್ಯಸಂಕಾಶ ರಥದಲ್ಲಿ ಕುಳಿತಿದ್ದುದನ್ನು ನೋಡಿ ತಕ್ಷಣವೇ ದೈತ್ಯಸೇನೆಯು ರಣದಲ್ಲಿ ಉತ್ಸಾಹವನ್ನು ಕಳೆದುಕೊಂಡಿತು.

03221065a ಸ ಚಾಪಿ ತಾಂ ಪ್ರಜ್ವಲಿತಾಂ ಮಹಿಷಸ್ಯ ವಿದಾರಿಣೀಂ।
03221065c ಮುಮೋಚ ಶಕ್ತಿಂ ರಾಜೇಂದ್ರ ಮಹಾಸೇನೋ ಮಹಾಬಲಃ।।

ರಾಜೇಂದ್ರ! ಮಹಾಬಲ ಮಹಾಸೇನನು ಮಹಿಷನನ್ನು ಕೊಲ್ಲಲು ಪ್ರಜ್ವಲಿಸುತ್ತಿರುವ ಶಕ್ತಿಯನ್ನು ಪ್ರಯೋಗಿಸಿದನು.

03221066a ಸಾ ಮುಕ್ತಾಭ್ಯಹನಚ್ಚಕ್ತಿರ್ಮಹಿಷಸ್ಯ ಶಿರೋ ಮಹತ್।
03221066c ಪಪಾತ ಭಿನ್ನೇ ಶಿರಸಿ ಮಹಿಷಸ್ತ್ಯಕ್ತಜೀವಿತಃ।।

ಅವನಿಂದ ಬಿಡಲ್ಪಟ್ಟ ಶಕ್ತಿಯು ಮಹಿಷನ ಮಹಾಶಿರವನ್ನು ಕತ್ತರಿಸಿತು ಮತ್ತು ಶಿರದಿಂದ ಭಿನ್ನನಾಗಿ ಜೀವಕಳೆದುಕೊಂಡ ಮಹಿಷನು ಕೆಳಗೆ ಬಿದ್ದನು2.

03221067a ಕ್ಷಿಪ್ತಾಕ್ಷಿಪ್ತಾ ತು ಸಾ ಶಕ್ತಿರ್ಹತ್ವಾ ಶತ್ರೂನ್ಸಹಸ್ರಶಃ।
03221067c ಸ್ಕಂದಹಸ್ತಮನುಪ್ರಾಪ್ತಾ ದೃಶ್ಯತೇ ದೇವದಾನವೈಃ।।

ಸ್ಕಂದನು ಆ ಶಕ್ತಿಯನ್ನು ಮತ್ತೆ ಮತ್ತೆ ಎಸೆದಾಗಲೆಲ್ಲಾ ಅದು ಸಹಸ್ರಾರು ಶತ್ರುಗಳನ್ನು ಕೊಂದು ಅವನ ಕೈಸೇರುತ್ತಿದ್ದುದ್ದನ್ನು ದೇವದಾನವರಿಬ್ಬರೂ ನೋಡಿದರು.

03221068a ಪ್ರಾಯಃ ಶರೈರ್ವಿನಿಹತಾ ಮಹಾಸೇನೇನ ಧೀಮತಾ।
03221068c ಶೇಷಾ ದೈತ್ಯಗಣಾ ಘೋರಾ ಭೀತಾಸ್ತ್ರಸ್ತಾ ದುರಾಸದೈಃ।
03221068e ಸ್ಕಂದಸ್ಯ ಪಾರ್ಷದೈರ್ಹತ್ವಾ ಭಕ್ಷಿತಾಃ ಶತಸಂಘಶಃ।।

ಧೀಮತ ಮಹಾಸೇನನ ಬಾಣಗಳಿಂದ ಪೆಟ್ಟುತಿಂದು ಉಳಿದ ದುರಾಸದ ದೈತ್ಯಗಣಗಳು ಘೋರವಾದ ಭೀತಿಗೊಳಗಾಗಿ ಪೀಡಿತರಾಗಿರಲು ಸ್ಕಂದನ ಪಾರ್ಷದರು ನೂರಾರು ಹಿಂಡುಗಳಲ್ಲಿ ಅವರನ್ನು ಕೊಂದು ಭಕ್ಷಿಸಿದರು.

03221069a ದಾನವಾನ್ಭಕ್ಷಯಂತಸ್ತೇ ಪ್ರಪಿಬಂತಶ್ಚ ಶೋಣಿತಂ।
03221069c ಕ್ಷಣಾನ್ನಿರ್ದಾನವಂ ಸರ್ವಮಕಾರ್ಷುರ್ಭೃಶಹರ್ಷಿತಾಃ।।

ದಾನವರನ್ನು ಭಕ್ಷಿಸಿ ಮತ್ತು ಅವರ ರಕ್ತವನ್ನು ಕುಡಿದು ಕ್ಷಣಾರ್ಧದಲ್ಲಿ ದಾನವರಿಲ್ಲದಂತೆ ಮಾಡಿ ಎಲ್ಲರೂ ಹರ್ಷಿತರಾದರು.

03221070a ತಮಾಂಸೀವ ಯಥಾ ಸೂರ್ಯೋ ವೃಕ್ಷಾನಗ್ನಿರ್ಘನಾನ್ಖಗಃ।
03221070c ತಥಾ ಸ್ಕಂದೋಽಜಯಚ್ಚತ್ರೂನ್ಸ್ವೇನ ವೀರ್ಯೇಣ ಕೀರ್ತಿಮಾನ್।।

ಸೂರ್ಯನು ಕತ್ತಲೆಯನ್ನು ಹೇಗೋ ಹಾಗೆ, ಅಗ್ನಿಯು ಮರಗಳನ್ನು ಹೇಗೋ ಹಾಗೆ ಮತ್ತು ವಾಯುವು ಮೋಡಗಳನ್ನು ಹೇಗೋ ಹಾಗೆ ಕೀರ್ತಿಮಾನ್ ಸ್ಕಂದನು ತನ್ನ ವೀರ್ಯದಿಂದ ಶತ್ರುಗಳನ್ನು ಜಯಿಸಿದನು.

03221071a ಸಂಪೂಜ್ಯಮಾನಸ್ತ್ರಿದಶೈರಭಿವಾದ್ಯ ಮಹೇಶ್ವರಂ।
03221071c ಶುಶುಭೇ ಕೃತ್ತಿಕಾಪುತ್ರಃ ಪ್ರಕೀರ್ಣಾಂಶುರಿವಾಂಶುಮಾನ್।।

ತ್ರಿದಶರಿಂದ ಸತ್ಕೃತನಾದ ಅವನು ಮಹೇಶ್ವರನನ್ನು ಅಭಿವಂದಿಸಿದನು. ಕೃತ್ತಿಕಾಪುತ್ರನು ಸೂರ್ಯನಂತೆ ಕಿರಣಗಳನ್ನು ಪ್ರಸರಿಸುತ್ತಾ ಶೋಭಾಯಮಾನನಾಗಿ ಕಂಡನು.

03221072a ನಷ್ಟಶತ್ರುರ್ಯದಾ ಸ್ಕಂದಃ ಪ್ರಯಾತಶ್ಚ ಮಹೇಶ್ವರಂ।
03221072c ಅಥಾಬ್ರವೀನ್ಮಹಾಸೇನಂ ಪರಿಷ್ವಜ್ಯ ಪುರಂದರಃ।।

ಶತ್ರುಗಳ ನಷ್ಟವಾದ ನಂತರ ಮತ್ತು ಮಹೇಶ್ವರನು ಹೊರಟುಹೋದ ನಂತರ ಪುರಂದರನು ಮಹಾಸೇನ ಸ್ಕಂದನನ್ನು ಆಲಂಗಿಸಿ ಹೀಗೆ ಹೇಳಿದನು:

03221073a ಬ್ರಹ್ಮದತ್ತವರಃ ಸ್ಕಂದ ತ್ವಯಾಯಂ ಮಹಿಷೋ ಹತಃ।
03221073c ದೇವಾಸ್ತೃಣಮಯಾ ಯಸ್ಯ ಬಭೂವುರ್ಜಯತಾಂ ವರ।
03221073e ಸೋಽಯಂ ತ್ವಯಾ ಮಹಾಬಾಹೋ ಶಮಿತೋ ದೇವಕಂಟಕಃ।।

“ಸ್ಕಂದ! ಬ್ರಹ್ಮನಿಂದ ವರವನ್ನು ಪಡೆದಿದ್ದ ಈ ಮಹಿಷನು ನಿನ್ನಿಂದ ಹತನಾದನು. ವಿಜಯಿಗಳಲ್ಲಿ ಶ್ರೇಷ್ಠನೇ! ದೇವತೆಗಳು ಅವನಿಗೆ ತೃಣಸಮಾನರಾಗಿದ್ದರು. ಮಹಾಬಾಹೋ! ಆ ದೇವಕಂಟಕನನ್ನು ನೀನು ಇಂದು ನಾಶಗೊಳಿಸಿದ್ದೀಯೆ.

03221074a ಶತಂ ಮಹಿಷತುಲ್ಯಾನಾಂ ದಾನವಾನಾಂ ತ್ವಯಾ ರಣೇ।
03221074c ನಿಹತಂ ದೇವಶತ್ರೂಣಾಂ ಯೈರ್ವಯಂ ಪೂರ್ವತಾಪಿತಾಃ।।

ಈ ಮೊದಲು ನಮ್ಮನ್ನು ಕಾಡಿಸುತ್ತಿದ್ದ ಮಹಿಷನ ಸರಿಸಮರಾದ ನೂರಾರು ದೇವಶತ್ರು ದಾನವರನ್ನು ನೀನು ರಣದಲ್ಲಿ ಸಂಹರಿಸಿದ್ದೀಯೆ.

03221075a ತಾವಕೈರ್ಭಕ್ಷಿತಾಶ್ಚಾನ್ಯೇ ದಾನವಾಃ ಶತಸಂಘಶಃ।
03221075c ಅಜೇಯಸ್ತ್ವಂ ರಣೇಽರೀಣಾಮುಮಾಪತಿರಿವ ಪ್ರಭುಃ।।

ಮತ್ತು ನಿನ್ನ ಕಿಂಕರರು ಇನ್ನೂ ನೂರಾರು ದಾನವರನ್ನು ಭಕ್ಷಿಸಿದ್ದಾರೆ. ಪ್ರಭು ಉಮಾಪತಿಯಂತೆ ನೀನು ರಣದಲ್ಲಿ ಅರಿಗಳಿಗೆ ಅಜೇಯನಾಗಿದ್ದೀಯೆ.

03221076a ಏತತ್ತೇ ಪ್ರಥಮಂ ದೇವ ಖ್ಯಾತಂ ಕರ್ಮ ಭವಿಷ್ಯತಿ।
03221076c ತ್ರಿಷು ಲೋಕೇಷು ಕೀರ್ತಿಶ್ಚ ತವಾಕ್ಷಯ್ಯಾ ಭವಿಷ್ಯತಿ।
03221076e ವಶಗಾಶ್ಚ ಭವಿಷ್ಯಂತಿ ಸುರಾಸ್ತವ ಸುರಾತ್ಮಜ।।

ದೇವ! ಇದು ನಿನ್ನ ಮೊದಲನೆಯ ಖ್ಯಾತ ಕರ್ಮವೆಂದಾಗುತ್ತದೆ. ಮೂರು ಲೋಕಗಳಲ್ಲಿ ನಿನ್ನ ಕೀರ್ತಿಯು ಅಕ್ಷಯವಾಗುತ್ತದೆ. ಸುರಾತ್ಮಜ! ಸುರರು ನಿನ್ನ ವಶಗರಾಗಿರುತ್ತಾರೆ.”

03221077a ಮಹಾಸೇನೇತ್ಯೇವಮುಕ್ತ್ವಾ ನಿವೃತ್ತಃ ಸಹ ದೈವತೈಃ।
03221077c ಅನುಜ್ಞಾತೋ ಭಗವತಾ ತ್ರ್ಯಂಬಕೇನ ಶಚೀಪತಿಃ।।

ಮಹಾಸೇನನಿಗೆ ಹೀಗೆ ಹೇಳಿ ಶಚೀಪತಿಯು ಭಗವಾನ್ ತ್ರ್ಯಂಬಕನಿಂದ ಅನುಜ್ಞೆಯನ್ನು ಪಡೆದು ದೇವತೆಗಳೊಂದಿಗೆ ಹಿಂದಿರುಗಿದನು.

03221078a ಗತೋ ಭದ್ರವಟಂ ರುದ್ರೋ ನಿವೃತ್ತಾಶ್ಚ ದಿವೌಕಸಃ।
03221078c ಉಕ್ತಾಶ್ಚ ದೇವಾ ರುದ್ರೇಣ ಸ್ಕಂದಂ ಪಶ್ಯತ ಮಾಮಿವ।।

ರುದ್ರನು ಭದ್ರವಟಕ್ಕೆ ಹೋದನು. ರುದ್ರನು ದೇವತೆಗಳಿಗೆ ಸ್ಕಂದನನ್ನು ನನ್ನಂತೆಯೇ ನೋಡಿಕೊಳ್ಳಿ ಎಂದು ಹೇಳಲು, ದಿವೌಕಸರು ಹಿಂದಿರುಗಿದರು.

03221079a ಸ ಹತ್ವಾ ದಾನವಗಣಾನ್ಪೂಜ್ಯಮಾನೋ ಮಹರ್ಷಿಭಿಃ।
03221079c ಏಕಾಹ್ನೈವಾಜಯತ್ಸರ್ವಂ ತ್ರೈಲೋಕ್ಯಂ ವಹ್ನಿನಂದನಃ।।

ಹೀಗೆ ಆ ವಹ್ನಿನಂದನನು ಒಂದೇ ದಿನದಲ್ಲಿ ದಾನವಗಣಗಳನ್ನು ಕೊಂದು ತ್ರೈಲೋಕ್ಯವೆಲ್ಲವನ್ನೂ ಗೆದ್ದು ಮಹರ್ಷಿಗಳಿಂದ ಪೂಜಿತನಾದನು.

03221080a ಸ್ಕಂದಸ್ಯ ಯ ಇದಂ ಜನ್ಮ ಪಠತೇ ಸುಸಮಾಹಿತಃ।
03221080c ಸ ಪುಷ್ಟಿಮಿಹ ಸಂಪ್ರಾಪ್ಯ ಸ್ಕಂದಸಾಲೋಕ್ಯತಾಮಿಯಾತ್।।

ಸ್ಕಂದನ ಈ ಜನ್ಮವನ್ನು ಸುಸಮಾಹಿತನಾಗಿ ಯಾರು ಓದುತ್ತಾರೋ ಅವರಿಗೆ ಇಲ್ಲಿ ಸಮೃದ್ಧಿಯೂ ಮತ್ತು ಇಲ್ಲಿಯ ನಂತರ ಸ್ಕಂದಲೋಕವೂ ದೊರೆಯುತ್ತದೆ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಮಹಿಷಾಸುರವಧೇ ಏಕವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಮಹಿಷಾಸುರವಧೆಯಲ್ಲಿ ಇನ್ನೂರಾಇಪ್ಪತ್ತೊಂದನೆಯ ಅಧ್ಯಾಯವು. ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವವು. ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-37/100, ಅಧ್ಯಾಯಗಳು-518/1995, ಶ್ಲೋಕಗಳು-17424/73784.


  1. ಮಾರ್ಕಂಡೇಯ ಪುರಾಣದ ದೇವೀ ಮಹಾತ್ಮೆಯಲ್ಲಿ ಬರುವ ಮಹಿಷಾಸುರನು ಬೇರೆ. ↩︎

  2. ಸ್ಕಂದನು ಮಹಿಷಾಸುರನನ್ನು ಕೊಂದ ಕಥೆಯು ಮುಂದೆ ಶಲ್ಯ ಪರ್ವದ ಅಧ್ಯಾಯ 45ರಲ್ಲಿಯೂ ಬರುತ್ತದೆ. ↩︎