219 ಅಂಗೀರಸೋಪಾಖ್ಯಾನೇ ಮನುಷ್ಯಗ್ರಹಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 219

ಸಾರ

ಸಪ್ತಮಾತೃಕೆಯರನ್ನು ತನ್ನ ತಾಯಂದಿರಾಗಿ ಸ್ಕಂದನು ಸ್ವೀಕರಿಸುವುದು (1-15). ಮನುಷ್ಯರನ್ನು ಬಾಧಿಸುವ ಗ್ರಹಗಳ ವರ್ಣನೆ (16-58).

03219001 ಮಾರ್ಕಂಡೇಯ ಉವಾಚ।
03219001a ಶ್ರಿಯಾ ಜುಷ್ಟಂ ಮಹಾಸೇನಂ ದೇವಸೇನಾಪತಿಂ ಕೃತಂ।
03219001c ಸಪ್ತರ್ಷಿಪತ್ನ್ಯಃ ಷಡ್ದೇವ್ಯಸ್ತತ್ಸಕಾಶಮಥಾಗಮನ್।।

ಮಾರ್ಕಂಡೇಯನು ಹೇಳಿದನು: “ಮಹಾಸೇನನನ್ನು ಶ್ರೀಯು ಆರಿಸಿದ ಮತ್ತು ಅವನು ದೇವಸೇನಾಪತಿಯಾದ ನಂತರ ಸಪ್ತರ್ಷಿಗಳ ಆರು ದೇವಿ ಪತ್ನಿಯರು ಅವನ ಬಳಿ ಆಗಮಿಸಿದರು.

03219002a ಋಷಿಭಿಃ ಸಂಪರಿತ್ಯಕ್ತಾ ಧರ್ಮಯುಕ್ತಾ ಮಹಾವ್ರತಾಃ।
03219002c ದ್ರುತಮಾಗಮ್ಯ ಚೋಚುಸ್ತಾ ದೇವಸೇನಾಪತಿಂ ಪ್ರಭುಂ।।

ಆ ಧರ್ಮಯುಕ್ತ ಮಹಾವ್ರತರು ಋಷಿಗಳಿಂದ ಪರಿತ್ಯಕ್ತರಾಗಿದ್ದರು. ಅವರು ಬೇಗನೇ ಪ್ರಭು ದೇವಸೇನಾಪತಿಯ ಬಳಿಬಂದು ಅವನಿಗೆ ಹೇಳಿದರು:

03219003a ವಯಂ ಪುತ್ರ ಪರಿತ್ಯಕ್ತಾ ಭರ್ತೃಭಿರ್ದೇವಸಮ್ಮಿತೈಃ।
03219003c ಅಕಾರಣಾದ್ರುಷಾ ತಾತ ಪುಣ್ಯಸ್ಥಾನಾತ್ಪರಿಚ್ಯುತಾಃ।।

“ಪುತ್ರ! ಅಕಾರಣವಾಗಿ ನಾವು ದೇವಸಮ್ಮತರಾದ ನಮ್ಮ ಪತಿಗಳಿಂದ ಪರಿತ್ಯಕ್ತರಾಗಿದ್ದೇವೆ. ಮಗೂ! ರೋಷಗೊಂಡು ನಮ್ಮನ್ನು ಪುಣ್ಯಸ್ಥಾನದಿಂದ ತಳ್ಳಿದ್ದಾರೆ.

03219004a ಅಸ್ಮಾಭಿಃ ಕಿಲ ಜಾತಸ್ತ್ವಮಿತಿ ಕೇನಾಪ್ಯುದಾಹೃತಂ।
03219004c ಅಸತ್ಯಮೇತತ್ಸಂಶ್ರುತ್ಯ ತಸ್ಮಾನ್ನಸ್ತ್ರಾತುಮರ್ಹಸಿ।।

ಕೆಲವರು ನಾವೇ ನಿನ್ನನ್ನು ಹುಟ್ಟಿಸಿದೆವು ಎಂದು ಅಪವಾದವನ್ನು ಹಬ್ಬಿಸಿದರು. ಅವರು ಆ ಅಸತ್ಯವನ್ನು ಕೇಳಿ ನಡೆದುಕೊಂಡರು. ಆದುದರಿಂದ ನೀನು ನಮ್ಮನ್ನು ಪಾರುಮಾಡಬೇಕು.

03219005a ಅಕ್ಷಯಶ್ಚ ಭವೇತ್ಸ್ವರ್ಗಸ್ತ್ವತ್ಪ್ರಸಾದಾದ್ಧಿ ನಃ ಪ್ರಭೋ।
03219005c ತ್ವಾಂ ಪುತ್ರಂ ಚಾಪ್ಯಭೀಪ್ಸಾಮಃ ಕೃತ್ವೈತದನೃಣೋ ಭವ।।

ಪ್ರಭೋ! ನಾವು ನಿನ್ನನ್ನು ಪುತ್ರನನ್ನಾಗಿ ಮಾಡಿಕೊಳ್ಳಲು ಬಯಸುತ್ತೇವೆ. ನಿನ್ನ ಈ ಪ್ರಸಾದದಿಂದ ನಮಗೆ ಅಕ್ಷಯ ಸ್ವರ್ಗಸ್ತ್ವವು ದೊರೆಯುತ್ತದೆ. ಇದನ್ನು ಮಾಡಿ ನೀನು ಅನೃಣನಾಗು.”

03219006 ಸ್ಕಂದ ಉವಾಚ।
03219006a ಮಾತರೋ ಹಿ ಭವತ್ಯೋ ಮೇ ಸುತೋ ವೋಽಹಮನಿಂದಿತಾಃ।
03219006c ಯಚ್ಚಾಭೀಪ್ಸಥ ತತ್ಸರ್ವಂ ಸಂಭವಿಷ್ಯತಿ ವಸ್ತಥಾ।।

ಸ್ಕಂದನು ಹೇಳಿದನು: “ಅನಿಂದಿತರೇ! ತಾಯಂದಿರೇ! ನಾನು ನಿಮ್ಮ ಮಗನಾಗುತ್ತೇನೆ. ನೀವು ಬಯಸಿದುದೆಲ್ಲವೂ ಹಾಗೆಯೇ ಆಗುತ್ತದೆ.”

03219007 ಮಾರ್ಕಂಡೇಯ ಉವಾಚ।
03219007a ಏವಮುಕ್ತೇ ತತಃ ಶಕ್ರಂ ಕಿಂ ಕಾರ್ಯಮಿತಿ ಸೋಽಬ್ರವೀತ್।
03219007c ಉಕ್ತಃ ಸ್ಕಂದೇನ ಬ್ರೂಹೀತಿ ಸೋಽಬ್ರವೀದ್ವಾಸವಸ್ತತಃ।।

ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿದ ನಂತರ ಅವನು ಶಕ್ರನಿಗೆ ಈಗ ಏನು ಮಾಡೋಣವೆಂದು ಕೇಳಿದನು. ಸ್ಕಂದನ ಮಾತಿಗೆ ಅವನು ವಿಶ್ವಾಸದಿಂದ ಹೇಳಿದನು:

03219008a ಅಭಿಜಿತ್ಸ್ಪರ್ಧಮಾನಾ ತು ರೋಹಿಣ್ಯಾ ಕನ್ಯಸೀ ಸ್ವಸಾ।
03219008c ಇಚ್ಚಂತೀ ಜ್ಯೇಷ್ಠತಾಂ ದೇವೀ ತಪಸ್ತಪ್ತುಂ ವನಂ ಗತಾ।।

“ದೇವಿ ಕನ್ಯೆ ಅಭಿಜಿತಳು ಅಕ್ಕ ರೋಹಿಣಿಯೊಡನೆ ಸ್ಪರ್ಧಿಸುತ್ತಾ ಹಿರಿಯತನವನ್ನು ಬಯಸಿ ತಪಸ್ಸನ್ನು ಮಾಡಲು ವನಕ್ಕೆ ತೆರಳಿದ್ದಾಳೆ.

03219009a ತತ್ರ ಮೂಢೋಽಸ್ಮಿ ಭದ್ರಂ ತೇ ನಕ್ಷತ್ರಂ ಗಗನಾಚ್ಚ್ಯುತಂ।
03219009c ಕಾಲಂ ತ್ವಿಮಂ ಪರಂ ಸ್ಕಂದ ಬ್ರಹ್ಮಣಾ ಸಹ ಚಿಂತಯ।।

ಗಗನದಿಂದ ಕೆಳಗುರುಳಿದ ಈ ನಕ್ಷತ್ರದ ಕುರಿತಾಗಿ ನನಗೇನೂ ತೋಚದಾಗಿದೆ. ನಿನಗೆ ಮಂಗಳವಾಗಲಿ. ಸ್ಕಂದ! ಬ್ರಹ್ಮನೊಂದಿಗೆ ಸಮಾಲೋಚಿಸಲು ಇದು ಉತ್ತಮ ಕಾಲವಾಗಿದೆ.

03219010a ಧನಿಷ್ಠಾದಿಸ್ತದಾ ಕಾಲೋ ಬ್ರಹ್ಮಣಾ ಪರಿನಿರ್ಮಿತಃ।
03219010c ರೋಹಿಣ್ಯಾದ್ಯೋಽಭವತ್ಪೂರ್ವಮೇವಂ ಸಂಖ್ಯಾ ಸಮಾಭವತ್।।

ಧನಿಷ್ಠಾದಿ ನಕ್ಷತ್ರಗಳನ್ನು ಕಾಲಾಂತರದಲ್ಲಿ ಬ್ರಹ್ಮನು ನಿರ್ಮಿಸಿದ್ದನು1. ಹಿಂದೆಯೇ ರೋಹಿಣಿಯು ಈ ಗುಂಪಿನಲ್ಲಿ ಸೇರಿಕೊಂಡಿದ್ದಳು.”

03219011a ಏವಮುಕ್ತೇ ತು ಶಕ್ರೇಣ ತ್ರಿದಿವಂ ಕೃತ್ತಿಕಾ ಗತಾಃ।
03219011c ನಕ್ಷತ್ರಂ ಶಕಟಾಕಾರಂ ಭಾತಿ ತದ್ವಹ್ನಿದೈವತಂ।।

ಶಕ್ರನು ಹೀಗೆ ಹೇಳಲು ಕೃತ್ತಿಕೆಯರು ತ್ರಿದಿವಕ್ಕೆ ಹೋಗಿ ಶಕಟಾಕಾರದ ನಕ್ಷತ್ರವಾಗಿ ಮಿಂಚಿದರು. ಅಗ್ನಿಯು ಅವರ ದೇವತೆಯಾದನು.

03219012a ವಿನತಾ ಚಾಬ್ರವೀತ್ಸ್ಕಂದಂ ಮಮ ತ್ವಂ ಪಿಂಡದಃ ಸುತಃ।
03219012c ಇಚ್ಚಾಮಿ ನಿತ್ಯಮೇವಾಹಂ ತ್ವಯಾ ಪುತ್ರ ಸಹಾಸಿತುಂ।।

ವಿನತೆಯೂ ಕೂಡ ಸ್ಕಂದನಿಗೆ ಹೇಳಿದಳು: “ನೀನು ನನಗೆ ಪಿಂಡವನ್ನು ನೀಡುವ ಮಗನಾಗು. ಪುತ್ರ! ನಾನು ಸದಾ ನಿನ್ನ ಜೊತೆ ವಾಸಿಸಲು ಬಯಸುತ್ತೇನೆ.”

03219013 ಸ್ಕಂದ ಉವಾಚ।
03219013a ಏವಮಸ್ತು ನಮಸ್ತೇಽಸ್ತು ಪುತ್ರಸ್ನೇಹಾತ್ಪ್ರಶಾಧಿ ಮಾಂ।
03219013c ಸ್ನುಷಯಾ ಪೂಜ್ಯಮಾನಾ ವೈ ದೇವಿ ವತ್ಸ್ಯಸಿ ನಿತ್ಯದಾ।।

ಸ್ಕಂದನು ಹೇಳಿದನು: “ನಿನಗೆ ನಮಸ್ಕಾರ! ಹಾಗೆಯೇ ಆಗಲಿ! ಪುತ್ರಸ್ನೇಹದಿಂದ ನನಗೆ ಮಾರ್ಗದರ್ಶನ ನೀಡು. ದೇವೀ! ಸೊಸೆಯಿಂದ ಪೂಜಿಸಿಕೊಂಡು ಸದಾ ನೀನು ನನ್ನೊಂದಿಗೆ ವಾಸಿಸುತ್ತೀಯೆ.””

03219014 ಮಾರ್ಕಂಡೇಯ ಉವಾಚ।
03219014a ಅಥ ಮಾತೃಗಣಃ ಸರ್ವಃ ಸ್ಕಂದಂ ವಚನಮಬ್ರವೀತ್।
03219014c ವಯಂ ಸರ್ವಸ್ಯ ಲೋಕಸ್ಯ ಮಾತರಃ ಕವಿಭಿಃ ಸ್ತುತಾಃ।
03219014e ಇಚ್ಚಾಮೋ ಮಾತರಸ್ತುಭ್ಯಂ ಭವಿತುಂ ಪೂಜಯಸ್ವ ನಃ।।

ಮಾರ್ಕಂಡೇಯನು ಹೇಳಿದನು: “ಆಗ ಮಾತೃಗಣಗಳೆಲ್ಲವೂ ಸ್ಕಂದನಿಗೆ ಹೇಳಿದರು: “ನಾವು ಸರ್ವಲೋಕಗಳ ಮಾತರರೆಂದು ಕವಿಗಳು ಸ್ತುತಿಸುತ್ತಾರೆ. ನಾವು ನಿನ್ನ ಮಾತರರೆಂದೂ ಪೂಜಿಸಿಕೊಳ್ಳಲು ಬಯಸುತ್ತೇವೆ.”

03219015 ಸ್ಕಂದ ಉವಾಚ।
03219015a ಮಾತರಸ್ತು ಭವತ್ಯೋ ಮೇ ಭವತೀನಾಮಹಂ ಸುತಃ।
03219015c ಉಚ್ಯತಾಂ ಯನ್ಮಯಾ ಕಾರ್ಯಂ ಭವತೀನಾಮಥೇಪ್ಸಿತಂ।।

ಸ್ಕಂದನು ಹೇಳಿದನು: “ನೀವು ನನ್ನ ಮಾತರರಾಗುವಿರಿ. ನಾನು ನಿಮ್ಮ ಮಗನಾಗುತ್ತೇನೆ. ನಿಮಗಿಷ್ಟವಾದ ಏನನ್ನು ನಾನು ಮಾಡಲಿ ಹೇಳಿ!”

03219016 ಮಾತರ ಊಚುಃ।
03219016a ಯಾಸ್ತು ತಾ ಮಾತರಃ ಪೂರ್ವಂ ಲೋಕಸ್ಯಾಸ್ಯ ಪ್ರಕಲ್ಪಿತಾಃ।
03219016c ಅಸ್ಮಾಕಂ ತದ್ಭವೇತ್ಸ್ಥಾನಂ ತಾಸಾಂ ಚೈವ ನ ತದ್ಭವೇತ್।।

ಮಾತರರು ಹೇಳಿದರು: “ಹಿಂದೆ ಯಾರನ್ನು ಈ ಲೋಕಗಳ ಮಾತರರೆಂದು ಪರಿಕಲ್ಪಿಸಲಾಗಿತ್ತೋ ಅವರ ಆ ಸ್ಥಾನವು ನಮಗೆ ದೊರಕುವಂತಾಗಲಿ. ಅವರಿಗೆ ಅದು ಇಲ್ಲದಂತಾಗಲಿ.

03219017a ಭವೇಮ ಪೂಜ್ಯಾ ಲೋಕಸ್ಯ ನ ತಾಃ ಪೂಜ್ಯಾಃ ಸುರರ್ಷಭ।
03219017c ಪ್ರಜಾಸ್ಮಾಕಂ ಹೃತಾಸ್ತಾಭಿಸ್ತ್ವತ್ಕೃತೇ ತಾಃ ಪ್ರಯಚ್ಚ ನಃ।।

ಸುರರ್ಷಭ! ಅವರಿಂದ ನಾವು ಲೋಕಗಳಲ್ಲಿ ಪೂಜಿತರಾಗಲಿ. ನಿನ್ನಿಂದಾಗಿ ತೀರಿಕೊಂಡ ನಮ್ಮ ಮಕ್ಕಳನ್ನು ಹಿಂದಿರುಗಿಸು.”

03219018 ಸ್ಕಂದ ಉವಾಚ।
03219018a ದತ್ತಾಃ ಪ್ರಜಾ ನ ತಾಃ ಶಕ್ಯಾ ಭವತೀಭಿರ್ನಿಷೇವಿತುಂ।
03219018c ಅನ್ಯಾಂ ವಃ ಕಾಂ ಪ್ರಯಚ್ಚಾಮಿ ಪ್ರಜಾಂ ಯಾಂ ಮನಸೇಚ್ಚಥ।।

ಸ್ಕಂದನು ಹೇಳಿದನು: “ನೀವು ಹಿಂದೆ ಕಳೆದುಕೊಂಡ ಮಕ್ಕಳನ್ನು ಹಿಂದೆ ಪಡೆಯಲು ಶಕ್ಯವಿಲ್ಲ. ನೀವು ಬಯಸುವ ಅನ್ಯಮಕ್ಕಳನ್ನು ನೀಡುತ್ತೇನೆ.”

03219019 ಮಾತರ ಊಚುಃ।
03219019a ಇಚ್ಚಾಮ ತಾಸಾಂ ಮಾತೄಣಾಂ ಪ್ರಜಾ ಭೋಕ್ತುಂ ಪ್ರಯಚ್ಚ ನಃ।
03219019c ತ್ವಯಾ ಸಹ ಪೃಥಗ್ಭೂತಾ ಯೇ ಚ ತಾಸಾಮಥೇಶ್ವರಾಃ।।

ಮಾತರರು ಹೇಳಿದರು: “ನಿನ್ನ ಜೊತೆಯಿದ್ದು ಬೇಕಾದ ರೂಪಗಳನ್ನು ತಳೆದು ಆ ಮಾತರರ ಮಕ್ಕಳನ್ನು ತಿನ್ನಲು ಬಯಸುತ್ತೇವೆ. ಅದನ್ನು ನೀಡು.”

03219020 ಸ್ಕಂದ ಉವಾಚ।
03219020a ಪ್ರಜಾ ವೋ ದದ್ಮಿ ಕಷ್ಟಂ ತು ಭವತೀಭಿರುದಾಹೃತಂ।
03219020c ಪರಿರಕ್ಷತ ಭದ್ರಂ ವಃ ಪ್ರಜಾಃ ಸಾಧು ನಮಸ್ಕೃತಾಃ।।

ಸ್ಕಂದನು ಹೇಳಿದನು: “ಮಕ್ಕಳನ್ನು ಕೊಡುತ್ತೇನೆ. ಆದರೆ ನೀವು ಹೇಳಿದುದನ್ನು ಕೊಡುವುದು ಕಷ್ಟ. ನಿಮಗೆ ಮಂಗಳವಾಗಲಿ. ಮಕ್ಕಳಿಗೆ ನೀವು ನಮಸ್ಕೃತರಾಗಿ ಚೆನ್ನಾಗಿ ಪರಿರಕ್ಷಸಿ.”

03219021 ಮಾತರ ಊಚುಃ।
03219021a ಪರಿರಕ್ಷಾಮ ಭದ್ರಂ ತೇ ಪ್ರಜಾಃ ಸ್ಕಂದ ಯಥೇಚ್ಚಸಿ।
03219021c ತ್ವಯಾ ನೋ ರೋಚತೇ ಸ್ಕಂದ ಸಹವಾಸಶ್ಚಿರಂ ಪ್ರಭೋ।।

ಮಾತರರು ಹೇಳಿದರು: “ಸ್ಕಂದ! ನಿನಗೆ ಮಂಗಳವಾಗಲಿ! ನೀನು ಬಯಸಿದಂತೆ ಮಕ್ಕಳನ್ನು ರಕ್ಷಿಸುತ್ತೇವೆ. ಸ್ಕಂದ! ಪ್ರಭೋ! ನಾವು ಸದಾ ನಿನ್ನೊಡನೆ ವಾಸಿಸಲು ಬಯಸುತ್ತೇವೆ.”

03219022 ಸ್ಕಂದ ಉವಾಚ।
03219022a ಯಾವತ್ಷೋಡಶ ವರ್ಷಾಣಿ ಭವಂತಿ ತರುಣಾಃ ಪ್ರಜಾಃ।
03219022c ಪ್ರಬಾಧತ ಮನುಷ್ಯಾಣಾಂ ತಾವದ್ರೂಪೈಃ ಪೃಥಗ್ವಿಧೈಃ।।

ಸ್ಕಂದನು ಹೇಳಿದನು: “ಮಕ್ಕಳು ಹದಿನಾರು ವರ್ಷದ ತರುಣರಾಗುವವರೆಗೆ ವಿವಿಧ ರೂಪಗಳಿಂದ ನೀವು ಮನುಷ್ಯರನ್ನು ಪ್ರಬಾಧಿಸಿ.

03219023a ಅಹಂ ಚ ವಃ ಪ್ರದಾಸ್ಯಾಮಿ ರೌದ್ರಮಾತ್ಮಾನಮವ್ಯಯಂ।
03219023c ಪರಮಂ ತೇನ ಸಹಿತಾ ಸುಖಂ ವತ್ಸ್ಯಥ ಪೂಜಿತಾಃ।।

ನಾನು ಕೂಡ ನಿಮಗೆ ಅವ್ಯಯವಾದ ರೌದ್ರ ಆತ್ಮವನ್ನು ದಯಪಾಲಿಸುತ್ತೇನೆ. ಮಕ್ಕಳ ಸಹಿತ ಪೂಜಿತರಾಗಿ ಪರಮ ಸುಖವನ್ನು ಪಡೆಯುತ್ತೀರಿ.””

03219024 ಮಾರ್ಕಂಡೇಯ ಉವಾಚ।
03219024a ತತಃ ಶರೀರಾತ್ಸ್ಕಂದಸ್ಯ ಪುರುಷಃ ಕಾಂಚನಪ್ರಭಃ।
03219024c ಭೋಕ್ತುಂ ಪ್ರಜಾಃ ಸ ಮರ್ತ್ಯಾನಾಂ ನಿಷ್ಪಪಾತ ಮಹಾಬಲಃ।।

ಮಾರ್ಕಂಡೇಯನು ಹೇಳಿದನು: “ಆಗ ಸ್ಕಂದನ ಶರೀರದಿಂದ ಮನುಷ್ಯರ ಮಕ್ಕಳನ್ನು ತಿನ್ನುವ ಕಾಂಚನಪ್ರಭೆಯ ಮಹಾಬಲಶಾಲಿ ಪುರುಷನು ಹೊರಬಿದ್ದನು.

03219025a ಅಪತತ್ಸ ತದಾ ಭೂಮೌ ವಿಸಂಜ್ಞೋಽಥ ಕ್ಷುಧಾನ್ವಿತಃ।
03219025c ಸ್ಕಂದೇನ ಸೋಽಭ್ಯನುಜ್ಞಾತೋ ರೌದ್ರರೂಪೋಽಭವದ್ಗ್ರಹಃ।

ಅವನು ಹಸಿವೆಯಿಂದ ಮೂರ್ಛಿತನಾಗಿ ನೆಲದಮೇಲೆ ಬಿದ್ದನು. ಸ್ಕಂದನ ಆಜ್ಞೆಯಂತೆ ಅವನು ರೌದ್ರರೂಪದ ಗ್ರಹವಾದನು.

03219025e ಸ್ಕಂದಾಪಸ್ಮಾರಮಿತ್ಯಾಹುರ್ಗ್ರಹಂ ತಂ ದ್ವಿಜಸತ್ತಮಾಃ।।
03219026a ವಿನತಾ ತು ಮಹಾರೌದ್ರಾ ಕಥ್ಯತೇ ಶಕುನಿಗ್ರಹಃ।
03219026c ಪೂತನಾಂ ರಾಕ್ಷಸೀಂ ಪ್ರಾಹುಸ್ತಂ ವಿದ್ಯಾತ್ಪೂತನಾಗ್ರಹಂ।।

ದ್ವಿಜಸತ್ತಮರು ಈ ಗ್ರಹವನ್ನು ಸ್ಕಂದಾಪಸ್ಮಾರವೆಂದು ಕರೆಯುತ್ತಾರೆ. ವಿನತೆಯನ್ನು ಮಹಾರೌದ್ರ ಶಕುನಿಗ್ರಹವೆಂದು ಹೇಳುತ್ತಾರೆ. ತಿಳಿದವರು ಪೂತನಿ ರಾಕ್ಷಸಿಯನ್ನು ಪೂತನಾಗ್ರಹವೆಂದು ಹೇಳುತ್ತಾರೆ.

03219027a ಕಷ್ಟಾ ದಾರುಣರೂಪೇಣ ಘೋರರೂಪಾ ನಿಶಾಚರೀ।
03219027c ಪಿಶಾಚೀ ದಾರುಣಾಕಾರಾ ಕಥ್ಯತೇ ಶೀತಪೂತನಾ।
03219027e ಗರ್ಭಾನ್ಸಾ ಮಾನುಷೀಣಾಂ ತು ಹರತೇ ಘೋರದರ್ಶನಾ।।

ದಾರುಣರೂಪೀ, ಘೋರರೂಪೀ, ನಿಶಾಚರೀ, ಪಿಶಾಚೀ, ದಾರಣಾಕಾರಿಣೀ ಶೀತಪೂತನಾ ಘೋರದರ್ಶನಳು ಮನುಷ್ಯರ ಗರ್ಭಗಳನ್ನು ಅಪಹರಿಸುತ್ತಾಳೆ.

03219028a ಅದಿತಿಂ ರೇವತೀಂ ಪ್ರಾಹುರ್ಗ್ರಹಸ್ತಸ್ಯಾಸ್ತು ರೈವತಃ।
03219028c ಸೋಽಪಿ ಬಾಲಾಂ ಶಿಶೂನ್ಘೋರೋ ಬಾಧತೇ ವೈ ಮಹಾಗ್ರಹಃ।।

ರೇವತಿಯೆಂದೂ ಕರೆಯಲ್ಪಡುವ ಅದಿತಿಯ ಗ್ರಹವನ್ನು ರೈವತವೆಂದು ಕರೆಯುತ್ತಾರೆ. ಈ ಘೋರ ಮಹಾಗ್ರಹವೂ ಕೂಡ ಬಾಲ ಶಿಶುಗಳನ್ನು ಬಾಧಿಸುತ್ತದೆ.

03219029a ದೈತ್ಯಾನಾಂ ಯಾ ದಿತಿರ್ಮಾತಾ ತಾಮಾಹುರ್ಮುಖಮಂಡಿಕಾಂ।
03219029c ಅತ್ಯರ್ಥಂ ಶಿಶುಮಾಂಸೇನ ಸಂಪ್ರಹೃಷ್ಟಾ ದುರಾಸದಾ।।

ದೈತ್ಯರ ಮಾತೆ ದಿತಿಯನ್ನು ಮುಖಮಂಡಿಕಾ ಎಂದು ಕರೆಯುತ್ತಾರೆ. ಈ ದುರಾಸದಳು ಶಿಶುಮಾಂಸದಿಂದ ಸಂತುಷ್ಟಳಾಗುತ್ತಾಳೆ.

03219030a ಕುಮಾರಾಶ್ಚ ಕುಮಾರ್ಯಶ್ಚ ಯೇ ಪ್ರೋಕ್ತಾಃ ಸ್ಕಂದಸಂಭವಾಃ।
03219030c ತೇಽಪಿ ಗರ್ಭಭುಜಃ ಸರ್ವೇ ಕೌರವ್ಯ ಸುಮಹಾಗ್ರಹಾಃ।।

ಕೌರವ್ಯ! ಸ್ಕಂದನಿಂದ ಹುಟ್ಟಿದ ಕುಮಾರ ಕುಮಾರಿಯರು ಎಲ್ಲರೂ ಮಹಾಗ್ರಹಗಳಾಗಿ ಗರ್ಭವನ್ನು ತಿನ್ನುವವು ಎಂದು ಹೇಳುತ್ತಾರೆ.

03219031a ತಾಸಾಮೇವ ಕುಮಾರೀಣಾಂ ಪತಯಸ್ತೇ ಪ್ರಕೀರ್ತಿತಾಃ।
03219031c ಅಜ್ಞಾಯಮಾನಾ ಗೃಹ್ಣಂತಿ ಬಾಲಕಾನ್ರೌದ್ರಕರ್ಮಿಣಃ।।

ಅವರೇ ಆ ಕುಮಾರಿಯರ ಪತಿಗಳೆಂದು ಹೇಳುತ್ತಾರೆ. ಆ ರೌದ್ರಕರ್ಮಿಗಳು ತಿಳಿಯದಂತೆ ಬಾಲಕರನ್ನು ಹಿಡಿಯುತ್ತಾರೆ.

03219032a ಗವಾಂ ಮಾತಾ ತು ಯಾ ಪ್ರಾಜ್ಞೈಃ ಕಥ್ಯತೇ ಸುರಭಿರ್ನೃಪ।
03219032c ಶಕುನಿಸ್ತಾಮಥಾರುಹ್ಯ ಸಹ ಭುಂಕ್ತೇ ಶಿಶೂನ್ಭುವಿ।।

ನೃಪ! ಗೋವುಗಳ ಮಾತೆಯೆಂದು ಪ್ರಾಜ್ಞರಿಂದ ಕರೆಯಲ್ಪಡುವ ಸುರಭಿಯು ಶಕುನಿಯನ್ನೇರಿ ಅವಳೊಡನೆ ಭೂಮಿಯಲ್ಲಿ ಶಿಶುಗಳನ್ನು ಭಕ್ಷಿಸುತ್ತಾಳೆ.

03219033a ಸರಮಾ ನಾಮ ಯಾ ಮಾತಾ ಶುನಾಂ ದೇವೀ ಜನಾಧಿಪ।
03219033c ಸಾಪಿ ಗರ್ಭಾನ್ಸಮಾದತ್ತೇ ಮಾನುಷೀಣಾಂ ಸದೈವ ಹಿ।।

ಜನಾಧಿಪ! ನಾಯಿಗಳ ಮಾತೆ ಸರಮಾ ಎಂಬ ಹೆಸರಿನ ದೇವಿಯೂ ಕೂಡ ಸದಾ ಮನುಷ್ಯರ ಗರ್ಭಗಳನ್ನು ಕೊಲ್ಲುತ್ತಾಳೆ.

03219034a ಪಾದಪಾನಾಂ ಚ ಯಾ ಮಾತಾ ಕರಂಜನಿಲಯಾ ಹಿ ಸಾ।
03219034c ಕರಂಜೇ ತಾಂ ನಮಸ್ಯಂತಿ ತಸ್ಮಾತ್ಪುತ್ರಾರ್ಥಿನೋ ನರಾಃ।।

ವೃಕ್ಷಗಳ ಮಾತಾ ಕರಂಜನಿಲಯಾ. ಆ ಕರಂಜೆಗೆ ಪುತ್ರಾರ್ಥಿಗಳಾದ ನರರು ನಮಸ್ಕರಿಸುತ್ತಾರೆ.

03219035a ಇಮೇ ತ್ವಷ್ಟಾದಶಾನ್ಯೇ ವೈ ಗ್ರಹಾ ಮಾಂಸಮಧುಪ್ರಿಯಾಃ।
03219035c ದ್ವಿಪಂಚರಾತ್ರಂ ತಿಷ್ಠಂತಿ ಸತತಂ ಸೂತಿಕಾಗೃಹೇ।।

ಮಾಂಸ ಮತ್ತು ಮದಿರಗಳ ಪ್ರಿಯರಾದ ಈ ಹದಿನೆಂಟು ಗ್ರಹಗಳು ಮತ್ತು ಇತರರು ಸೂತಿಕಾಗೃಹದಲ್ಲಿ ಸತತವಾಗಿ ಹತ್ತು ರಾತ್ರಿಗಳು ನಿಂತಿರುತ್ತಾರೆ.

03219036a ಕದ್ರೂಃ ಸೂಕ್ಷ್ಮವಪುರ್ಭೂತ್ವಾ ಗರ್ಭಿಣೀಂ ಪ್ರವಿಶೇದ್ಯದಾ।
03219036c ಭುಂಕ್ತೇ ಸಾ ತತ್ರ ತಂ ಗರ್ಭಂ ಸಾ ತು ನಾಗಂ ಪ್ರಸೂಯತೇ।।

ಕದ್ರುವು ಸೂಕ್ಷರೂಪವನ್ನು ತಳೆದು ಗರ್ಭಿಣಿಯನ್ನು ಪ್ರವೇಶಿಸಿ ಅಲ್ಲಿ ಅವಳು ಗರ್ಭವನ್ನು ನಾಶಪಡಿಸಿ ನಾಗವನ್ನು ಹುಟ್ಟಿಸುತ್ತಾಳೆ.

03219037a ಗಂಧರ್ವಾಣಾಂ ತು ಯಾ ಮಾತಾ ಸಾ ಗರ್ಭಂ ಗೃಹ್ಯ ಗಚ್ಚತಿ।
03219037c ತತೋ ವಿಲೀನಗರ್ಭಾ ಸಾ ಮಾನುಷೀ ಭುವಿ ದೃಶ್ಯತೇ।।

ಗಂಧರ್ವರ ಮಾತೆಯು ಗರ್ಭವನ್ನು ಅಪಹರಿಸಿಕೊಂಡು ಹೋಗುತ್ತಾಳೆ. ಆಗ ಅದು ಭೂಮಿಯಲ್ಲಿ ಮನುಷ್ಯರ ಗರ್ಭಪಾತವಾಗಿ ಕಾಣುತ್ತದೆ.

03219038a ಯಾ ಜನಿತ್ರೀ ತ್ವಪ್ಸರಸಾಂ ಗರ್ಭಮಾಸ್ತೇ ಪ್ರಗೃಹ್ಯ ಸಾ।
03219038c ಉಪವಿಷ್ಟಂ ತತೋ ಗರ್ಭಂ ಕಥಯಂತಿ ಮನೀಷಿಣಃ।।

ಅಪ್ಸರರ ತಾಯಿಯು ಗರ್ಭವನ್ನು ತೆಗೆಯುತ್ತಾಳೆ. ತಿಳಿದವರು ಅದನ್ನು ಕುಳಿತ ಗರ್ಭವೆಂದು ಕರೆಯುತ್ತಾರೆ.

03219039a ಲೋಹಿತಸ್ಯೋದಧೇಃ ಕನ್ಯಾ ಧಾತ್ರೀ ಸ್ಕಂದಸ್ಯ ಸಾ ಸ್ಮೃತಾ।
03219039c ಲೋಹಿತಾಯನಿರಿತ್ಯೇವಂ ಕದಂಬೇ ಸಾ ಹಿ ಪೂಜ್ಯತೇ।।

ಕೆಂಪುಸಮುದ್ರನ ಮಗಳು ಸ್ಕಂದನ ಧಾತ್ರಿಯೆಂದು ಹೇಳುತ್ತಾರೆ. ಅವಳನ್ನು ಲೋಹಿತಾಯನಿಯೆಂದು ಕದಂಬದಲ್ಲಿ ಪೂಜಿಸುತ್ತಾರೆ.

03219040a ಪುರುಷೇಷು ಯಥಾ ರುದ್ರಸ್ತಥಾರ್ಯಾ ಪ್ರಮದಾಸ್ವಪಿ।
03219040c ಆರ್ಯಾ ಮಾತಾ ಕುಮಾರಸ್ಯ ಪೃಥಕ್ಕಾಮಾರ್ಥಮಿಜ್ಯತೇ।।

ಪುರುಷರಲ್ಲಿ ರುದ್ರನು ಹೇಗೋ ಹಾಗೆ ಆರ್ಯೆಯು ಸ್ತ್ರೀಯರಲ್ಲಿ ಕಾರ್ಯನಡೆಸುತ್ತಾಳೆ. ಆರ್ಯಳು ಎಲ್ಲಾ ಕುಮಾರರ ಮಾತೆ ಮತ್ತು ಅವರ ರಕ್ಷಣೆಗಾಗಿ ಪೂಜಿತಳಾಗಿದ್ದಾಳೆ.

03219041a ಏವಮೇತೇ ಕುಮಾರಾಣಾಂ ಮಯಾ ಪ್ರೋಕ್ತಾ ಮಹಾಗ್ರಹಾಃ।
03219041c ಯಾವತ್ಷೋಡಶ ವರ್ಷಾಣಿ ಅಶಿವಾಸ್ತೇ ಶಿವಾಸ್ತತಃ।।

ನಾನು ಹೇಳಿದ ಈ ಮಹಾಗ್ರಹಗಳು ಕುಮಾರರನ್ನು ಹದಿನಾರು ವರ್ಷಗಳವರೆಗೆ ಕಾಡುತ್ತವೆ ಮತ್ತು ಅದರ ನಂತರ ಅವರ ಮಂಗಳಕ್ಕಾಗಿ ಕೆಲಸಮಾಡುತ್ತವೆ.

03219042a ಯೇ ಚ ಮಾತೃಗಣಾಃ ಪ್ರೋಕ್ತಾಃ ಪುರುಷಾಶ್ಚೈವ ಯೇ ಗ್ರಹಾಃ।
03219042c ಸರ್ವೇ ಸ್ಕಂದಗ್ರಹಾ ನಾಮ ಜ್ಞೇಯಾ ನಿತ್ಯಂ ಶರೀರಿಭಿಃ।।

ನಾನು ಹೇಳಿದ ಮಾತೃಗಣಗಳಲ್ಲಿ ಪುರುಷರೂ ಸೇರಿದ್ದಾರೆ. ಈ ಎಲ್ಲ ಗ್ರಹಗಳೂ ಸ್ಕಂದಗ್ರಹಗಳೆಂದು ಕರೆಯಲ್ಪಟ್ಟು ನಿತ್ಯವೂ ಶರೀರಗಳಲ್ಲಿರುತ್ತವೆ.

03219043a ತೇಷಾಂ ಪ್ರಶಮನಂ ಕಾರ್ಯಂ ಸ್ನಾನಂ ಧೂಪಮಥಾಂಜನಂ।
03219043c ಬಲಿಕರ್ಮೋಪಹಾರಶ್ಚ ಸ್ಕಂದಸ್ಯೇಜ್ಯಾ ವಿಶೇಷತಃ।।

ಅವರ ಪ್ರಶಮನಕಾರ್ಯವನ್ನು ಸ್ನಾನ, ಧೂಪ, ದೀಪ, ಬಲಿಕರ್ಮೋಪಹಾರಗಳಿಂದ ಮತ್ತು ವಿಶೇಷವಾಗಿ ಸ್ಕಂದನ ಪೂಜೆಯಿಂದ ಮಾಡಬಹುದು.

03219044a ಏವಮೇತೇಽರ್ಚಿತಾಃ ಸರ್ವೇ ಪ್ರಯಚ್ಚಂತಿ ಶುಭಂ ನೃಣಾಂ।
03219044c ಆಯುರ್ವೀರ್ಯಂ ಚ ರಾಜೇಂದ್ರ ಸಮ್ಯಕ್ಪೂಜಾನಮಸ್ಕೃತಾಃ।।

ರಾಜನ್! ಈ ರೀತಿ ಅವರನ್ನು ಪೂಜಿಸುವುದರಿಂದ ಎಲ್ಲರೂ ನರರಿಗೆ ಶುಭ, ಆಯಸ್ಸು, ವೀರ್ಯ, ಉತ್ತಮ ಗೌರವ ಪದವಿಗಳನ್ನು ನೀಡುತ್ತಾರೆ.

03219045a ಊರ್ಧ್ವಂ ತು ಷೋಡಶಾದ್ವರ್ಷಾದ್ಯೇ ಭವಂತಿ ಗ್ರಹಾ ನೃಣಾಂ।
03219045c ತಾನಹಂ ಸಂಪ್ರವಕ್ಷ್ಯಾಮಿ ನಮಸ್ಕೃತ್ಯ ಮಹೇಶ್ವರಂ।।

ಈಗ ನಾನು ಮಹೇಶ್ವರನಿಗೆ ನಮಸ್ಕರಿಸಿ ನರರು ಹದಿನಾರು ವರ್ಷಗಳನ್ನು ಕಳೆದನಂತರ ಯಾವ ಗ್ರಹಗಳು ಕೆಲಸಮಾಡುತ್ತವೆ ಎನ್ನುವುದನ್ನು ಹೇಳುತ್ತೇನೆ.

03219046a ಯಃ ಪಶ್ಯತಿ ನರೋ ದೇವಾಂ ಜಾಗ್ರದ್ವಾ ಶಯಿತೋಽಪಿ ವಾ।
03219046c ಉನ್ಮಾದ್ಯತಿ ಸ ತು ಕ್ಷಿಪ್ರಂ ತಂ ತು ದೇವಗ್ರಹಂ ವಿದುಃ।।

ಯಾವ ನರನು ಜಾಗ್ರತನಾಗಿರುವಾಗ ಮತ್ತು ಮಲಗಿರುವಾಗ ಕೂಡ ದೇವನನ್ನು ಕಾಣುತ್ತಾನೋ ಅವನು ಉನ್ಮಾದದಲ್ಲಿರುತ್ತಾನೆ. ಆಗ ಅದು ದೇವಗ್ರಹವೆಂದು ತಿಳಿಯಬೇಕು.

03219047a ಆಸೀನಶ್ಚ ಶಯಾನಶ್ಚ ಯಃ ಪಶ್ಯತಿ ನರಃ ಪಿತೄನ್।
03219047c ಉನ್ಮಾದ್ಯತಿ ಸ ತು ಕ್ಷಿಪ್ರಂ ಸ ಜ್ಞೇಯಸ್ತು ಪಿತೃಗ್ರಹಃ।।

ಕುಳಿತಿರುವಾಗ ಮತ್ತು ಮಲಗಿರುವಾಗ ಯಾವ ನರನು ಪಿತೃಗಳನ್ನು ಕಾಣುತ್ತಾನೋ ಅವನ ಪಿತೃಗ್ರಹದ ಉನ್ಮಾದದಲ್ಲಿದ್ದಾನೆ ಎಂದು ಬೇಗನೆ ತಿಳಿಯಬೇಕು.

03219048a ಅವಮನ್ಯತಿ ಯಃ ಸಿದ್ಧಾನ್ಕ್ರುದ್ಧಾಶ್ಚಾಪಿ ಶಪಂತಿ ಯಂ।
03219048c ಉನ್ಮಾದ್ಯತಿ ಸ ತು ಕ್ಷಿಪ್ರಂ ಜ್ಞೇಯಃ ಸಿದ್ಧಗ್ರಹಸ್ತು ಸಃ।।

ಯಾರು ಸಿದ್ಧರನ್ನು ಅವಮಾನಿಸಿ ಅವರ ಸಿಟ್ಟಿನಿಂದ ಶಾಪವನ್ನು ಪಡೆದು ಉನ್ಮಾದಹೊಂದುತ್ತಾರೋ ಅವರನ್ನು ಸಿದ್ಧಗ್ರಹವು ಪೀಡಿಸುತ್ತಿದ್ದೆ ಎಂದು ತಿಳಿಯಬೇಕು.

03219049a ಉಪಾಘ್ರಾತಿ ಚ ಯೋ ಗಂಧಾನ್ರಸಾಂಶ್ಚಾಪಿ ಪೃಥಗ್ವಿಧಾನ್।
03219049c ಉನ್ಮಾದ್ಯತಿ ಸ ತು ಕ್ಷಿಪ್ರಂ ಸ ಜ್ಞೇಯೋ ರಾಕ್ಷಸೋ ಗ್ರಹಃ।।

ಯಾರು ವಿವಿಧರೀತಿಯ ವಾಸನೆಗಳನ್ನು ಮತ್ತು ರುಚಿಗಳನ್ನು ಪದೇ ಪದೇ ಅನುಭವಿಸಿ ಉನ್ಮಾದದಲ್ಲಿತ್ತಾರೋ ಅದು ರಾಕ್ಷಸಗ್ರಹವೆಂದು ತಿಳಿಯಬೇಕು.

03219050a ಗಂಧರ್ವಾಶ್ಚಾಪಿ ಯಂ ದಿವ್ಯಾಃ ಸಂಸ್ಪೃಶಂತಿ ನರಂ ಭುವಿ।
03219050c ಉನ್ಮಾದ್ಯತಿ ಸ ತು ಕ್ಷಿಪ್ರಂ ಗ್ರಹೋ ಗಾಂಧರ್ವ ಏವ ಸಃ।।

ದಿವ್ಯ ಗಂಧರ್ವರೂ ಕೂಡ ಭೂಮಿಯಲ್ಲಿರುವ ನರರನ್ನು ಮುಟ್ಟಿ ಉನ್ಮಾದಗೊಳಿಸಿದರೆ ಅದು ಗಾಂಧರ್ವಗ್ರಹವೇ ಸರಿ.

03219051a ಆವಿಶಂತಿ ಚ ಯಂ ಯಕ್ಷಾಃ ಪುರುಷಂ ಕಾಲಪರ್ಯಯೇ।
03219051c ಉನ್ಮಾದ್ಯತಿ ಸ ತು ಕ್ಷಿಪ್ರಂ ಜ್ಞೇಯೋ ಯಕ್ಷಗ್ರಹಸ್ತು ಸಃ।।

ಕಾಲಪರ್ಯಯದಲ್ಲಿ ಯಕ್ಷರು ಯಾವ ಪುರುಷರನ್ನು ಆವೇಶಗೊಂಡು ಉನ್ಮಾದಿಸುತ್ತಾರೋ ಅದನ್ನು ಯಕ್ಷಗ್ರಹವೆಂದು ತಿಳಿದುಕೊಳ್ಳಬೇಕು.

03219052a ಅಧಿರೋಹಂತಿ ಯಂ ನಿತ್ಯಂ ಪಿಶಾಚಾಃ ಪುರುಷಂ ಕ್ವ ಚಿತ್।
03219052c ಉನ್ಮಾದ್ಯತಿ ಸ ತು ಕ್ಷಿಪ್ರಂ ಪೈಶಾಚಂ ತಂ ಗ್ರಹಂ ವಿದುಃ।।

ಪಿಶಾಚಿಗಳು ನಿತ್ಯವೂ ಯಾರಾದರೂ ಪುರುಷರನ್ನು ಏರಿ ಉನ್ಮಾದಗೊಳಿಸುತ್ತಾರೆ. ಆಗ ಅದನ್ನು ಪೈಶಾಚ ಗ್ರಹವೆಂದು ತಿಳಿಯಬೇಕು.

03219053a ಯಸ್ಯ ದೋಷೈಃ ಪ್ರಕುಪಿತಂ ಚಿತ್ತಂ ಮುಹ್ಯತಿ ದೇಹಿನಃ।
03219053c ಉನ್ಮಾದ್ಯತಿ ಸ ತು ಕ್ಷಿಪ್ರಂ ಸಾಧನಂ ತಸ್ಯ ಶಾಸ್ತ್ರತಃ।।

ದೋಷಗಳ ಪ್ರಕೋಪದಿಂದ ಚಿತ್ತವನ್ನು ಕಳೆದುಕೊಂಡು ಉನ್ಮಾದದಲ್ಲಿರುವವನಿಗೆ ಕ್ಷಿಪ್ರವಾಗಿ ಶಾಸ್ತ್ರಗಳಲ್ಲಿರುವಂತೆ ಸಾಧನಗಳನ್ನು ಮಾಡಬೇಕು.

03219054a ವೈಕ್ಲವ್ಯಾಚ್ಚ ಭಯಾಚ್ಚೈವ ಘೋರಾಣಾಂ ಚಾಪಿ ದರ್ಶನಾತ್।
03219054c ಉನ್ಮಾದ್ಯತಿ ಸ ತು ಕ್ಷಿಪ್ರಂ ಸತ್ತ್ವಂ ತಸ್ಯ ತು ಸಾಧನಂ।।

ಘೋರರೂಪಿಗಳನ್ನು ನೋಡಿ ಭಯದಿಂದ ಹುಚ್ಚಾಗಿ ಓಡಿಕೊಂಡು ಉನ್ಮಾದದಲ್ಲಿರುವವರನ್ನು ಬೇಗನೇ ಸತ್ವವನ್ನು ನೀಡುವ ಸಾಧನವನ್ನು ಮಾಡಬೇಕು.

03219055a ಕಶ್ಚಿತ್ಕ್ರೀಡಿತುಕಾಮೋ ವೈ ಭೋಕ್ತುಕಾಮಸ್ತಥಾಪರಃ।
03219055c ಅಭಿಕಾಮಸ್ತಥೈವಾನ್ಯ ಇತ್ಯೇಷ ತ್ರಿವಿಧೋ ಗ್ರಹಃ।।

ಕೆಲವು ಆಟವಾಡುವ ಆಸೆಯನ್ನಿಟ್ಟುಕೊಂಡಿರುತ್ತವೆ, ಇನ್ನು ಕೆಲವು ಭೋಗಿಸಲು ಬಯಸುತ್ತವೆ ಮತ್ತು ಅನ್ಯರು ಅಭಿಕಾಮಿಸುತ್ತವೆ. ಈ ರೀತಿ ಮೂರು ವಿಧದ ಗ್ರಹಗಳಿವೆ.

03219056a ಯಾವತ್ಸಪ್ತತಿವರ್ಷಾಣಿ ಭವಂತ್ಯೇತೇ ಗ್ರಹಾ ನೃಣಾಂ।
03219056c ಅತಃ ಪರಂ ದೇಹಿನಾಂ ತು ಗ್ರಹತುಲ್ಯೋ ಭವೇಜ್ಜ್ವರಃ।।

ಮನುಷ್ಯನಿಗೆ ಎಪ್ಪತ್ತುವರ್ಷಗಳಾಗುವವರೆಗೆ ಈ ಗ್ರಹಗಳು ಇರುತ್ತವೆ. ಅದರ ನಂತರ ದೇಹಿಗಳಿಗೆ ಜ್ವರವೇ ಗ್ರಹಗಳ ಸಮಾನವಾಗಿರುತ್ತದೆ.

03219057a ಅಪ್ರಕೀರ್ಣೇಂದ್ರಿಯಂ ದಾಂತಂ ಶುಚಿಂ ನಿತ್ಯಮತಂದ್ರಿತಂ।
03219057c ಆಸ್ತಿಕಂ ಶ್ರದ್ದಧಾನಂ ಚ ವರ್ಜಯಂತಿ ಸದಾ ಗ್ರಹಾಃ।।

ಇಂದ್ರಿಯಗಳನ್ನು ಹರಡದೇ ಇಟ್ಟುಕೊಳ್ಳುವುದರಿಂದ, ತಾಳ್ಮೆಯಿಂದಿರುವುದರಿಂದ, ಶುಚಿಯಾಗಿರುವುದರಿಂದ, ನಿತ್ಯವೂ ಆಸ್ತಿಕರನ್ನು, ಶದ್ಧೆ, ದಾನಗಳನ್ನು ಮಾಡುವವರನ್ನು ಸದಾ ಗ್ರಹಗಳು ತೊರೆಯುತ್ತವೆ.

03219058a ಇತ್ಯೇಷ ತೇ ಗ್ರಹೋದ್ದೇಶೋ ಮಾನುಷಾಣಾಂ ಪ್ರಕೀರ್ತಿತಃ।
03219058c ನ ಸ್ಪೃಶಂತಿ ಗ್ರಹಾ ಭಕ್ತಾನ್ನರಾನ್ದೇವಂ ಮಹೇಶ್ವರಂ।।

ಮನುಷ್ಯರ ಬಳಿಬರುವ ಈ ಗ್ರಹಗಳ ಕುರಿತು ನಾನು ಹೇಳಿದ್ದೇನೆ. ದೇವ ಮಹೇಶ್ವರನ ಭಕ್ತ ನರರನ್ನು ಗ್ರಹಗಳು ಮುಟ್ಟುವುದಿಲ್ಲ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಮನುಷ್ಯಗ್ರಹಕಥನೇ ಏಕೋನವಿಂಶತ್ಯಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಮನುಷ್ಯಗ್ರಹಕಥನದಲ್ಲಿ ಇನ್ನೂರಾಹತ್ತೊಂಭತ್ತನೆಯ ಅಧ್ಯಾಯವು.


  1. ಈ ಪ್ರಕರಣವನ್ನು ನೋಡಿದರೆ ಈಗಿರುವಂತೆ ಇತರ ಯುಗಗಳಲ್ಲಿಯೂ ನಕ್ಷತ್ರಗಳಲ್ಲಿ ಅಶ್ವಿನಿಯೇ ಮೊದಲ ನಕ್ಷತ್ರವಾಗಿತ್ತೆಂದು ಹೇಳಲಿಕ್ಕಾಗುವುದಿಲ್ಲ (ಭಾರತ ದರ್ಶನ ಪ್ರಕಾಶನ, ಸಂಪುಟ 7, ಪುಟ 3551]. ↩︎