ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 218
ಸಾರ
ನೀನೇ ಇಂದ್ರನಾಗೆಂದು ಶಕ್ರನು ಸ್ಕಂದನಿಗೆ ಹೇಳಲು ಅದಕ್ಕೆ ಒಪ್ಪಿಕೊಳ್ಳದೇ ತಾನು ಕಿಂಕರನೆಂದು ಸ್ಕಂದನು ಏನು ಮಾಡಬೇಕೆಂದು ಕೇಳಿದುದು (1-19). ಇಂದ್ರನು ಸ್ಕಂದನನ್ನು ದೇವಸೇನೆಯ ಅಧಿಪತಿಯನ್ನಾಗಿ ಅಭಿಷೇಕಿಸಿದ್ದುದು (20-49).
03218001 ಮಾರ್ಕಂಡೇಯ ಉವಾಚ।
03218001a ಉಪವಿಷ್ಟಂ ತತಃ ಸ್ಕಂದಂ ಹಿರಣ್ಯಕವಚಸ್ರಜಂ।
03218001c ಹಿರಣ್ಯಚೂಡಮುಕುಟಂ ಹಿರಣ್ಯಾಕ್ಷಂ ಮಹಾಪ್ರಭಂ।।
03218002a ಲೋಹಿತಾಂಬರಸಂವೀತಂ ತೀಕ್ಷ್ಣದಂಷ್ಟ್ರಂ ಮನೋರಮಂ।
03218002c ಸರ್ವಲಕ್ಷಣಸಂಪನ್ನಂ ತ್ರೈಲೋಕ್ಯಸ್ಯಾಪಿ ಸುಪ್ರಿಯಂ।।
ಮಾರ್ಕಂಡೇಯನು ಹೇಳಿದನು: “ಆಗ ಹಿರಣ್ಯಾಕ್ಷ, ಮಹಾಪ್ರಭ, ಕೆಂಪುವಸ್ತ್ರವನ್ನುಟ್ಟಿದ್ದ, ತೀಕ್ಷ್ಣದಂಷ್ಟ್ರ, ಮನೋರಮ, ಸರ್ವಲಕ್ಷಣಸಂಪನ್ನ, ತ್ರೈಲೋಕ್ಯಗಳಿಗೂ ಪ್ರಿಯನಾದ ಸ್ಕಂದನು ಬಂಗಾರದ ಕವಚವನ್ನು ಧರಿಸಿ, ಬಂಗಾರದ ಮುಕುಟವನ್ನು ಧರಿಸಿ ಕುಳಿತುಕೊಂಡನು.
03218003a ತತಸ್ತಂ ವರದಂ ಶೂರಂ ಯುವಾನಂ ಮೃಷ್ಟಕುಂಡಲಂ।
03218003c ಅಭಜತ್ಪದ್ಮರೂಪಾ ಶ್ರೀಃ ಸ್ವಯಮೇವ ಶರೀರಿಣೀ।।
ಆಗ ಆ ವರದ, ಶೂರ, ಯುವಕ, ಮೃಷ್ಟಕುಂಡಲನನ್ನು ಪದ್ಮರೂಪಿ ಶ್ರೀಯು ಸ್ವಯಂ ಶರೀರವನ್ನು ತಳೆದು ಪ್ರೀತಿಸಿದಳು.
03218004a ಶ್ರಿಯಾ ಜುಷ್ಟಃ ಪೃಥುಯಶಾಃ ಸ ಕುಮಾರವರಸ್ತದಾ।
03218004c ನಿಷಣ್ಣೋ ದೃಶ್ಯತೇ ಭೂತೈಃ ಪೌರ್ಣಮಾಸ್ಯಾಂ ಯಥಾ ಶಶೀ।।
ಶ್ರೀಯಿಂದ ಆರಿಸಲ್ಪಟ್ಟ ಆ ಯಶಸ್ವಿ ಕೋಮಲ ಕುಮಾರವರನು ಪೂರ್ಣಿಮೆಯ ಶಶಿಯಂತೆ ಭೂತಗಳಿಗೆ ಕಾಣಿಸಿದನು.
03218005a ಅಪೂಜಯನ್ಮಹಾತ್ಮಾನೋ ಬ್ರಾಹ್ಮಣಾಸ್ತಂ ಮಹಾಬಲಂ।
03218005c ಇದಮಾಹುಸ್ತದಾ ಚೈವ ಸ್ಕಂದಂ ತತ್ರ ಮಹರ್ಷಯಃ।।
ಮಹಾತ್ಮ ಬ್ರಾಹ್ಮಣರು ಆ ಮಹಾಬಲನನ್ನು ಪೂಜಿಸಿದರು. ಅಲ್ಲಿದ್ದ ಮಹರ್ಷಿಗಳೂ ಕೂಡ ಸ್ಕಂದನನ್ನು ಈ ರೀತಿಯಲ್ಲಿ ಕರೆದರು:
03218006a ಹಿರಣ್ಯವರ್ಣ ಭದ್ರಂ ತೇ ಲೋಕಾನಾಂ ಶಂಕರೋ ಭವ।
03218006c ತ್ವಯಾ ಷಡ್ರಾತ್ರಜಾತೇನ ಸರ್ವೇ ಲೋಕಾ ವಶೀಕೃತಾಃ।।
“ಹಿರಣ್ಯವರ್ಣ! ನಿನಗೆ ಮಂಗಳವಾಗಲಿ! ಲೋಕಗಳ ಶಂಕರನಾಗು. ಆರೇ ರಾತ್ರಿಗಳ ಹಿಂದೆ ಹುಟ್ಟಿದ್ದರೂ ಸರ್ವ ಲೋಕಗಳೂ ನಿನ್ನ ವಶವಾಗಿವೆ.
03218007a ಅಭಯಂ ಚ ಪುನರ್ದತ್ತಂ ತ್ವಯೈವೈಷಾಂ ಸುರೋತ್ತಮ।
03218007c ತಸ್ಮಾದಿಂದ್ರೋ ಭವಾನಸ್ತು ತ್ರೈಲೋಕ್ಯಸ್ಯಾಭಯಂಕರಃ।।
ಆದುದರಿಂದ ನೀನು ಇಂದ್ರನಾಗಿ ಮೂರುಲೋಕಗಳಿಗೂ ಅಭಯವನ್ನು ನೀಡು. ಸುರೋತ್ತಮ! ಪುನಃ ಅಭಯವನ್ನಿತ್ತು ನಮ್ಮನ್ನು ಉಳಿಸು.”
03218008 ಸ್ಕಂದ ಉವಾಚ।
03218008a ಕಿಮಿಂದ್ರಃ ಸರ್ವಲೋಕಾನಾಂ ಕರೋತೀಹ ತಪೋಧನಾಃ।
03218008c ಕಥಂ ದೇವಗಣಾಂಶ್ಚೈವ ಪಾತಿ ನಿತ್ಯಂ ಸುರೇಶ್ವರಃ।।
ಸ್ಕಂದನು ಹೇಳಿದನು: “ತಪೋಧನರೇ! ಇಂದ್ರನು ಸರ್ವಲೋಕಗಳಿಂದ ಏನು ಮಾಡುತ್ತಾನೆ? ಸುರೇಶ್ವರನು ದೇವಗಣಗಳನ್ನು ಹೇಗೆ ನಿತ್ಯವೂ ಪಾಲಿಸುತ್ತಾನೆ?”
03218009 ಋಷಯ ಊಚುಃ।
03218009a ಇಂದ್ರೋ ದಿಶತಿ ಭೂತಾನಾಂ ಬಲಂ ತೇಜಃ ಪ್ರಜಾಃ ಸುಖಂ।
03218009c ತುಷ್ಟಃ ಪ್ರಯಚ್ಚತಿ ತಥಾ ಸರ್ವಾನ್ದಾಯಾನ್ಸುರೇಶ್ವರಃ।।
ಋಷಿಗಳು ಹೇಳಿದರು: “ಇಂದ್ರನು ಭೂತಗಳಿಗೆ ಬಲ, ತೇಜಸ್ಸು, ಮಕ್ಕಳು ಮತ್ತು ಸುಖವನ್ನು ನೀಡುತ್ತಾನೆ. ತೃಪ್ತಿಪಡಿಸಿದರೆ ಸುರೇಶ್ವರನು ಎಲ್ಲ ವರಗಳನ್ನೂ ನೀಡುತ್ತಾನೆ.
03218010a ದುರ್ವೃತ್ತಾನಾಂ ಸಂಹರತಿ ವೃತ್ತಸ್ಥಾನಾಂ ಪ್ರಯಚ್ಚತಿ।
03218010c ಅನುಶಾಸ್ತಿ ಚ ಭೂತಾನಿ ಕಾರ್ಯೇಷು ಬಲಸೂದನಃ।।
ಕೆಟ್ಟಾಗಿ ನಡೆದುಕೊಳ್ಳುವವರನ್ನು ಸಂಹರಿಸುತ್ತಾನೆ; ಉತ್ತಮ ನಡತೆಯುಳ್ಳವರನ್ನು ಪಾಲಿಸುತ್ತಾನೆ. ಬಲಸೂದನನು ಇರುವವುಗಳಿಗೆ ಕಾರ್ಯವೇನೆಂದು ಅನುಶಾಸನ ಮಾಡುತ್ತಾನೆ.
03218011a ಅಸೂರ್ಯೇ ಚ ಭವೇತ್ಸೂರ್ಯಸ್ತಥಾಚಂದ್ರೇ ಚ ಚಂದ್ರಮಾಃ।
03218011c ಭವತ್ಯಗ್ನಿಶ್ಚ ವಾಯುಶ್ಚ ಪೃಥಿವ್ಯಾಪಶ್ಚ ಕಾರಣಿಃ।
ಸೂರ್ಯನಿಲ್ಲದಿರುವಾಗ ಸೂರ್ಯನಾಗುತ್ತಾನೆ; ಹಾಗೆಯೇ ಚಂದ್ರನಿಲ್ಲದಿರುವಾಗ ಚಂದ್ರನಾಗುತ್ತಾನೆ. ಅವನು ಅಗ್ನಿ, ವಾಯು, ಪೃಥ್ವಿ ಮತ್ತು ನೀರಿನ ಕಾರಣ.
03218012a ಏತದಿಂದ್ರೇಣ ಕರ್ತವ್ಯಮಿಂದ್ರೇ ಹಿ ವಿಪುಲಂ ಬಲಂ।
03218012c ತ್ವಂ ಚ ವೀರ ಬಲಶ್ರೇಷ್ಠಸ್ತಸ್ಮಾದಿಂದ್ರೋ ಭವಸ್ವ ನಃ।।
ಇವು ಇಂದ್ರನ ಕರ್ತವ್ಯಗಳು. ಇಂದ್ರನು ವಿಪುಲ ಬಲಶಾಲಿ. ನೀನೂ ಕೂಡ ವೀರ, ಬಲಶ್ರೇಷ್ಠನಾಗಿದ್ದೀಯೆ. ಆದುದರಿಂದ ನೀನೇ ಇಂದ್ರನಾಗು.”
03218013 ಶಕ್ರ ಉವಾಚ।
03218013a ಭವಸ್ವೇಂದ್ರೋ ಮಹಾಬಾಹೋ ಸರ್ವೇಷಾಂ ನಃ ಸುಖಾವಹಃ।
03218013c ಅಭಿಷಿಚ್ಯಸ್ವ ಚೈವಾದ್ಯ ಪ್ರಾಪ್ತರೂಪೋಽಸಿ ಸತ್ತಮ।।
ಶಕ್ರನು ಹೇಳಿದನು: “ಮಹಾಬಾಹೋ! ಇಂದ್ರನಾಗಿ ಎಲ್ಲರಿಗೂ ಸುಖವನ್ನು ನೀಡು. ಸತ್ತಮ! ಪ್ರಾಪ್ತರೂಪನಾಗಿದ್ದೀಯೆ! ಇಂದೇ ನಿನ್ನನ್ನು ಅಭಿಷೇಕಿಸುತ್ತೇವೆ.”
03218014 ಸ್ಕಂದ ಉವಾಚ।
03218014a ಶಾಧಿ ತ್ವಮೇವ ತ್ರೈಲೋಕ್ಯಮವ್ಯಗ್ರೋ ವಿಜಯೇ ರತಃ।
03218014c ಅಹಂ ತೇ ಕಿಂಕರಃ ಶಕ್ರ ನ ಮಮೇಂದ್ರತ್ವಮೀಪ್ಸಿತಂ।।
ಸ್ಕಂದನು ಹೇಳಿದನು: “ಅವ್ಯಗ್ರನಾಗಿ ವಿಜಯರತನಾಗಿ ನೀನೇ ತ್ರೈಲೋಕ್ಯವನ್ನು ಶಾಸನಮಾಡು. ಶಕ್ರ! ನಾನು ನಿನ್ನ ಕಿಂಕರ. ನಿನ್ನ ಇಂದ್ರತ್ವವನ್ನು ನಾನು ಬಯಸುವುದಿಲ್ಲ.”
03218015 ಶಕ್ರ ಉವಾಚ।
03218015a ಬಲಂ ತವಾದ್ಭುತಂ ವೀರ ತ್ವಂ ದೇವಾನಾಮರೀಂ ಜಹಿ।
03218015c ಅವಜ್ಞಾಸ್ಯಂತಿ ಮಾಂ ಲೋಕಾ ವೀರ್ಯೇಣ ತವ ವಿಸ್ಮಿತಾಃ।।
ಶಕ್ರನು ಹೇಳಿದನು: “ವೀರ! ನಿನ್ನ ಬಲವು ಅದ್ಭುತವಾದುದು. ನೀನು ದೇವತೆಗಳ ಶತ್ರುಗಳನ್ನು ಗೆಲ್ಲು. ನಿನ್ನ ವೀರ್ಯದಿಂದ ವಿಸ್ಮಿತರಾಗಿ ಲೋಕಗಳು ತಿಳಿಯದಂತಾಗಿವೆ.
03218016a ಇಂದ್ರತ್ವೇಽಪಿ ಸ್ಥಿತಂ ವೀರ ಬಲಹೀನಂ ಪರಾಜಿತಂ।
03218016c ಆವಯೋಶ್ಚ ಮಿಥೋ ಭೇದೇ ಪ್ರಯತಿಷ್ಯಂತ್ಯತಂದ್ರಿತಾಃ।।
ನಾನು ಇಂದ್ರತ್ವವನ್ನು ಉಳಿಸಿಕೊಂಡಿದ್ದರೂ ವೀರ! ಬಲಹೀನನಾಗಿ ಸೋತಿದ್ದೇನೆ. ನನ್ನನ್ನು ಕೀಳಾಗಿ ಕಾಣುತ್ತಾರೆ ಮತ್ತು ನಮ್ಮೀರ್ವರಲ್ಲಿ ಭೇದಗಳನ್ನು ತರುತ್ತಾರೆ.
03218017a ಭೇದಿತೇ ಚ ತ್ವಯಿ ವಿಭೋ ಲೋಕೋ ದ್ವೈಧಮುಪೇಷ್ಯತಿ।
03218017c ದ್ವಿಧಾಭೂತೇಷು ಲೋಕೇಷು ನಿಶ್ಚಿತೇಷ್ವಾವಯೋಸ್ತಥಾ।
03218017e ವಿಗ್ರಹಃ ಸಂಪ್ರವರ್ತೇತ ಭೂತಭೇದಾನ್ಮಹಾಬಲ।।
ವಿಭೋ! ನಮ್ಮನ್ನು ಬೇರ್ಪಡಿಸಿ ಲೋಕವು ಎರಡು ಪಂಗಡಗಳಾಗುತ್ತವೆ. ಮಹಾಬಲ! ಲೋಕಗಳು ಎರಡಾದಾಗ ಸ್ವಾಭಾವಿಕವಾಗಿಯೇ ಅವುಗಳ ಮಧ್ಯೆ ಮೊದಲಿನಂತೆ ಯುದ್ಧವು ನಿಶ್ಚಯವಾಗಿಯೂ ನಡೆಯುತ್ತದೆ.
03218018a ತತ್ರ ತ್ವಂ ಮಾಂ ರಣೇ ತಾತ ಯಥಾಶ್ರದ್ಧಂ ವಿಜೇಷ್ಯಸಿ।
03218018c ತಸ್ಮಾದಿಂದ್ರೋ ಭವಾನದ್ಯ ಭವಿತಾ ಮಾ ವಿಚಾರಯ।।
ಮಗೂ! ಆಗ ಅಲ್ಲಿ ರಣದಲ್ಲಿ ನೀನು ನನ್ನನ್ನು ಯಥಾಶ್ರದ್ಧೆಯಿಂದ ಗೆಲ್ಲುತ್ತೀಯೆ ಮತ್ತು ನೀನೇ ಇಂದ್ರನಾಗುತ್ತೀಯೇ. ಆದುದರಿಂದ ವಿಚಾರಮಾಡದೇ ಇಂದೇ ನೀನು ಇಂದ್ರನಾಗು.”
03218019 ಸ್ಕಂದ ಉವಾಚ।
03218019a ತ್ವಮೇವ ರಾಜಾ ಭದ್ರಂ ತೇ ತ್ರೈಲೋಕ್ಯಸ್ಯ ಮಮೈವ ಚ।
03218019c ಕರೋಮಿ ಕಿಂ ಚ ತೇ ಶಕ್ರ ಶಾಸನಂ ತದ್ಬ್ರವೀಹಿ ಮೇ।।
ಸ್ಕಂದನು ಹೇಳಿದನು: “ನೀನೇ ರಾಜ – ನನ್ನ ಮತ್ತು ತ್ರೈಲೋಕ್ಯದ! ನಿನಗೆ ಮಂಗಳವಾಗಲಿ! ಶಕ್ರ! ನಿನ್ನ ಶಾಸನದಂತೆ ನಾನೇನು ಮಾಡಬೇಕೆಂದು ನನಗೆ ಹೇಳು.”
03218020 ಶಕ್ರ ಉವಾಚ।
03218020a ಯದಿ ಸತ್ಯಮಿದಂ ವಾಕ್ಯಂ ನಿಶ್ಚಯಾದ್ಭಾಷಿತಂ ತ್ವಯಾ।
03218020c ಯದಿ ವಾ ಶಾಸನಂ ಸ್ಕಂದ ಕರ್ತುಮಿಚ್ಚಸಿ ಮೇ ಶೃಣು।।
ಶಕ್ರನು ಹೇಳಿದನು: “ಒಂದುವೇಳೆ ನೀನು ನಿಶ್ಚಯದಿಂದ ಹೇಳಿದ ಈ ಮಾತುಗಳು ಸತ್ಯವಾದುದೇ ಆದರೆ ಮತ್ತು ಸ್ಕಂದ! ನನ್ನ ಆಜ್ಞೆಯಂತೆ ಮಾಡಬಯಸಿದರೆ ನನ್ನನ್ನು ಕೇಳು.
03218021a ಅಭಿಷಿಚ್ಯಸ್ವ ದೇವಾನಾಂ ಸೇನಾಪತ್ಯೇ ಮಹಾಬಲ।
03218021c ಅಹಮಿಂದ್ರೋ ಭವಿಷ್ಯಾಮಿ ತವ ವಾಕ್ಯಾನ್ಮಹಾಬಲ।।
ಮಹಾಬಲ! ದೇವತೆಗಳ ಸೇನಾಪತಿಯಾಗಿ ಅಭಿಷಿಕ್ತನಾಗು! ಮಹಾಬಲ! ನಿನ್ನ ಮಾತಿನಂತೆ ನಾನೇ ಇಂದ್ರನಾಗಿರುತ್ತೇನೆ.”
03218022 ಸ್ಕಂದ ಉವಾಚ।
03218022a ದಾನವಾನಾಂ ವಿನಾಶಾಯ ದೇವಾನಾಮರ್ಥಸಿದ್ಧಯೇ।
03218022c ಗೋಬ್ರಾಹ್ಮಣಸ್ಯ ತ್ರಾಣಾರ್ಥಂ ಸೇನಾಪತ್ಯೇಽಭಿಷಿಂಚ ಮಾಂ।।
ಸ್ಕಂದನು ಹೇಳಿದನು: “ದಾನವರ ವಿನಾಶಕ್ಕಾಗಿ, ದೇವತೆಗಳ ಕಾರ್ಯಸಿದ್ಧಿಗಾಗಿ, ಮತ್ತು ಗೋ-ಬ್ರಾಹ್ಮಣರ ರಕ್ಷಣೆಗಾಗಿ ನನ್ನನ್ನು ಸೇನಾಪತಿಯಾಗಿ ಅಭಿಷೇಕಿಸು.””
03218023 ಮಾರ್ಕಂಡೇಯ ಉವಾಚ।
03218023a ಸೋಽಭಿಷಿಕ್ತೋ ಮಘವತಾ ಸರ್ವೈರ್ದೇವಗಣೈಃ ಸಹ।
03218023c ಅತೀವ ಶುಶುಭೇ ತತ್ರ ಪೂಜ್ಯಮಾನೋ ಮಹರ್ಷಿಭಿಃ।।
ಮಾರ್ಕಂಡೇಯನು ಹೇಳಿದನು: “ಅವನು ಸರ್ವದೇವಗಣಗಳೊಂದಿಗೆ ಮಘವತ ಮತ್ತು ಮಹರ್ಷಿಗಳಿಂದ ಪೂಜಿತನಾಗಿ ಅಭಿಷಿಕ್ತನಾಗಿ ಶೋಭಿಸಿದನು.
03218024a ತಸ್ಯ ತತ್ಕಾಂಚನಂ ಚತ್ರಂ ಧ್ರಿಯಮಾಣಂ ವ್ಯರೋಚತ।
03218024c ಯಥೈವ ಸುಸಮಿದ್ಧಸ್ಯ ಪಾವಕಸ್ಯಾತ್ಮಮಂಡಲಂ।।
ಅವನಿಗೆ ಹಿಡಿದಿದ್ದ ಕಾಂಚನ ಛತ್ರವು ಚೆನ್ನಾಗಿ ಉರಿಯುತ್ತಿರುವ ಅಗ್ನಿಯ ಆತ್ಮ ಮಂಡಲದಂತೆ ಪ್ರಜ್ವಲಿಸುತ್ತಿತ್ತು.
03218025a ವಿಶ್ವಕರ್ಮಕೃತಾ ಚಾಸ್ಯ ದಿವ್ಯಾ ಮಾಲಾ ಹಿರಣ್ಮಯೀ।
03218025c ಆಬದ್ಧಾ ತ್ರಿಪುರಘ್ನೇನ ಸ್ವಯಮೇವ ಯಶಸ್ವಿನಾ।।
ಸ್ವಯಂ ಯಶಸ್ವೀ ತ್ರಿಪುರಘ್ನನು ವಿಶ್ವಕರ್ಮನು ರಚಿಸಿದ್ದ ಹಿರಣ್ಮಯ ದಿವ್ಯ ಮಾಲೆಯನ್ನು ಅವನಿಗೆ ಕಟ್ಟಿದನು.
03218026a ಆಗಮ್ಯ ಮನುಜವ್ಯಾಘ್ರ ಸಹ ದೇವ್ಯಾ ಪರಂತಪ।
03218026c ಅರ್ಚಯಾಮಾಸ ಸುಪ್ರೀತೋ ಭಗವಾನ್ಗೋವೃಷಧ್ವಜಃ।।
ಮನುಜವ್ಯಾಘ್ರ! ದೇವಿಯೊಂದಿಗೆ ಆ ಪರಂತಪ ಭಗವಾನ್ ಗೋವೃಷಧ್ವಜನು ಅಲ್ಲಿಗೆ ಬಂದು ಅವನನ್ನು ಸಂತೋಷದಿಂದ ಪೂಜಿಸಿದನು.
03218027a ರುದ್ರಮಗ್ನಿಂ ದ್ವಿಜಾಃ ಪ್ರಾಹೂ ರುದ್ರಸೂನುಸ್ತತಸ್ತು ಸಃ।
03218027c ರುದ್ರೇಣ ಶುಕ್ರಮುತ್ಸೃಷ್ಟಂ ತಚ್ಚ್ವೇತಃ ಪರ್ವತೋಽಭವತ್।
03218027e ಪಾವಕಸ್ಯೇಂದ್ರಿಯಂ ಶ್ವೇತೇ ಕೃತ್ತಿಕಾಭಿಃ ಕೃತಂ ನಗೇ।।
ಅಗ್ನಿಯನ್ನು ರುದ್ರನೆಂದು ಮತ್ತು ಅದರಂತೆ ಸ್ಕಂದನನ್ನು ರುದ್ರಸೂನುವೆಂದು ದ್ವಿಜರು ಕರೆಯುತ್ತಾರೆ. ರುದ್ರನ ಶುಕ್ರವು ಬಿದ್ದು ಆ ಶ್ವೇತಪರ್ವತವಾಯಿತು. ಅದೇ ಶ್ವೇತಪರ್ವತದಲ್ಲಿ ಪಾವಕನ ಇಂದ್ರಿಯವು ಕೃತ್ತಿಕೆಯರೊಂದಿಗೆ ಸೇರಿತು.
03218028a ಪೂಜ್ಯಮಾನಂ ತು ರುದ್ರೇಣ ದೃಷ್ಟ್ವಾ ಸರ್ವೇ ದಿವೌಕಸಃ।
03218028c ರುದ್ರಸೂನುಂ ತತಃ ಪ್ರಾಹುರ್ಗುಹಂ ಗುಣವತಾಂ ವರಂ।।
ರುದ್ರನಿಂದ ಪೂಜಿಸಲ್ಪಟ್ಟಿದ್ದುದನ್ನು ನೋಡಿ ಎಲ್ಲ ದಿವೌಕಸರೂ ಆ ಗುಣವಂತರಲ್ಲಿ ಶ್ರೇಷ್ಠ ಗುಹನನ್ನು ರುದ್ರಸೂನುವೆಂದು ಕರೆದರು.
03218029a ಅನುಪ್ರವಿಶ್ಯ ರುದ್ರೇಣ ವಹ್ನಿಂ ಜಾತೋ ಹ್ಯಯಂ ಶಿಶುಃ।
03218029c ತತ್ರ ಜಾತಸ್ತತಃ ಸ್ಕಂದೋ ರುದ್ರಸೂನುಸ್ತತೋಽಭವತ್।।
ರುದ್ರನು ವಹ್ನಿಯನ್ನು ಅನುಪ್ರವೇಶಿಸಿ ಈ ಶಿಶುವು ಹುಟ್ಟಿದ್ದುದರಿಂದ ಅಲ್ಲಿ ಹುಟ್ಟಿದ ಸ್ಕಂದನು ರುದ್ರಸೂನುವಾದನು.
03218030a ರುದ್ರಸ್ಯ ವಹ್ನೇಃ ಸ್ವಾಹಾಯಾಃ ಷಣ್ಣಾಂ ಸ್ತ್ರೀಣಾಂ ಚ ತೇಜಸಾ।
03218030c ಜಾತಃ ಸ್ಕಂದಃ ಸುರಶ್ರೇಷ್ಠೋ ರುದ್ರಸೂನುಸ್ತತೋಽಭವತ್।।
ರುದ್ರನ ವಹ್ನಿಯಲ್ಲಿ ಸ್ವಾಹಾಳಿಂದ ಆರು ಸ್ತ್ರೀಯರ ತೇಜಸ್ಸಿನಿಂದ ಹುಟ್ಟಿದ ಸ್ಕಂದ ಸುರಶ್ರೇಷ್ಠನು ರುದ್ರಸೂನುವಾದನು.
03218031a ಅರಜೇ ವಾಸಸೀ ರಕ್ತೇ ವಸಾನಃ ಪಾವಕಾತ್ಮಜಃ।
03218031c ಭಾತಿ ದೀಪ್ತವಪುಃ ಶ್ರೀಮಾನ್ರಕ್ತಾಭ್ರಾಭ್ಯಾಮಿವಾಂಶುಮಾನ್।।
ಕೆಂಪುಬಣ್ಣದ ಶುಭ್ರವಸ್ತ್ರಗಳಲ್ಲಿದ್ದ ಪಾವಕಾತ್ಮಜನು ಕೆಂಪು ಮೋಡಗಳ ಮಧ್ಯದಿಂದ ಇಣುಕುತ್ತಿರುವ ಶ್ರೀಮಾನ್ ಸೂರ್ಯನು ಬೆಳಗುತ್ತಿರುವಂತೆ ಕಂಡನು.
03218032a ಕುಕ್ಕುಟಶ್ಚಾಗ್ನಿನಾ ದತ್ತಸ್ತಸ್ಯ ಕೇತುರಲಂಕೃತಃ।
03218032c ರಥೇ ಸಮುಚ್ಚ್ರಿತೋ ಭಾತಿ ಕಾಲಾಗ್ನಿರಿವ ಲೋಹಿತಃ।।
ಅಗ್ನಿಯು ಕೊಟ್ಟಿದ್ದ ಕುಕ್ಕುಟವು ಧ್ವಜವನ್ನು ಅಲಂಕರಿಸಿ ರಥದ ಮೇಲೆ ಹಾರಿ ಕುಳಿತುಕೊಂಡು ಕಾಲಾಗ್ನಿಯಂತೆ ಕೆಂಪಾಗಿ ಹೊಳೆಯುತ್ತಿತ್ತು.
03218033a ವಿವೇಶ ಕವಚಂ ಚಾಸ್ಯ ಶರೀರಂ ಸಹಜಂ ತತಃ।
03218033c ಯುಧ್ಯಮಾನಸ್ಯ ದೇವಸ್ಯ ಪ್ರಾದುರ್ಭವತಿ ತತ್ಸದಾ।।
ಅವನ ಶರೀರದೊಂದಿಗೇ ಹುಟ್ಟಿದ್ದ ಕವಚವನ್ನು ದೇವನಿಗೆ ಯುದ್ಧದಲ್ಲಿ ಸದಾ ಜಯವನ್ನು ತರುವ ಶಕ್ತಿಯು ಪ್ರವೇಶಿಸಿತು.
03218034a ಶಕ್ತಿರ್ವರ್ಮ ಬಲಂ ತೇಜಃ ಕಾಂತತ್ವಂ ಸತ್ಯಮಕ್ಷತಿಃ।
03218034c ಬ್ರಹ್ಮಣ್ಯತ್ವಮಸಮ್ಮೋಹೋ ಭಕ್ತಾನಾಂ ಪರಿರಕ್ಷಣಂ।।
03218035a ನಿಕೃಂತನಂ ಚ ಶತ್ರೂಣಾಂ ಲೋಕಾನಾಂ ಚಾಭಿರಕ್ಷಣಂ।
03218035c ಸ್ಕಂದೇನ ಸಹ ಜಾತಾನಿ ಸರ್ವಾಣ್ಯೇವ ಜನಾಧಿಪ।।
ಜನಾಧಿಪ! ಶಕ್ತಿ, ವರ್ಮ, ಬಲ, ತೇಜಸ್ಸು, ಕಾಂತತ್ವ, ಸತ್ಯ, ಅಕ್ಷತಿ, ಬ್ರಹ್ಮಣ್ಯತ್ಯ, ಅಸಮ್ಮೋಹ, ಭಕ್ತರ ಪರಿರಕ್ಷಣೆ, ಶತ್ರುಗಳ ನಾಶ ಮತ್ತು ಲೋಕಗಳ ರಕ್ಷಣೆ ಇವು ಎಲ್ಲವೂ ಸ್ಕಂದನ ಜೊತೆಗೇ ಹುಟ್ಟಿದವು.
03218036a ಏವಂ ದೇವಗಣೈಃ ಸರ್ವೈಃ ಸೋಽಭಿಷಿಕ್ತಃ ಸ್ವಲಂಕೃತಃ।
03218036c ಬಭೌ ಪ್ರತೀತಃ ಸುಮನಾಃ ಪರಿಪೂರ್ಣೇಂದುದರ್ಶನಃ।।
ಹೀಗೆ ಎಲ್ಲ ದೇವಗಣಗಳಿಂದ ಅವನು ಅಭಿಷಿಕ್ತನಾಗಿ, ಸ್ವಲಂಕೃತನಾಗಿ, ಸುಮನಸ್ಕನೂ ಪ್ರತೀತನೂ ಆಗಿ ಪರಿಪೂರ್ಣ ಚಂದ್ರನಂತೆ ತೋರಿದನು.
03218037a ಇಷ್ಟೈಃ ಸ್ವಾಧ್ಯಾಯಘೋಷೈಶ್ಚ ದೇವತೂರ್ಯರವೈರಪಿ।
03218037c ದೇವಗಂಧರ್ವಗೀತೈಶ್ಚ ಸರ್ವೈರಪ್ಸರಸಾಂ ಗಣೈಃ।।
03218038a ಏತೈಶ್ಚಾನ್ಯೈಶ್ಚ ವಿವಿಧೈರ್ಹೃಷ್ಟತುಷ್ಟೈರಲಂಕೃತೈಃ।
03218038c ಕ್ರೀಡನ್ನಿವ ತದಾ ದೇವೈರಭಿಷಿಕ್ತಃ ಸ ಪಾವಕಿಃ।।
ಇಷ್ಟಿಗಳಿಂದ, ಸ್ವಾಧ್ಯಾಯಘೋಷಗಳಿಂದ, ದೇವತೂರ್ಯರವಗಳಿಂದ, ದೇವಗಂಧರ್ವಗೀತಗಳಿಂದ, ಎಲ್ಲ ಅಪ್ಸರ ಗಣಗಳಿಂದ, ಇವರು ಮತ್ತು ಇನ್ನೂ ಇತರ ವಿವಿಧ ಹೃಷ್ಟ-ತುಷ್ಟರಾದ, ಅಲಂಕೃತರಾದ, ಆಡುತ್ತಿದ್ದಾರೋ ಎಂದು ತೋರುತ್ತಿದ್ದ ದೇವತೆಗಳಿಂದ ಪಾವಕಿಯು ಅಭಿಷಿಕ್ತನಾದನು1.
03218039a ಅಭಿಷಿಕ್ತಂ ಮಹಾಸೇನಮಪಶ್ಯಂತ ದಿವೌಕಸಃ।
03218039c ವಿನಿಹತ್ಯ ತಮಃ ಸೂರ್ಯಂ ಯಥೇಹಾಭ್ಯುದಿತಂ ತಥಾ।।
ಅಭಿಷಿಕ್ತನಾದ ಮಹಾಸೇನನು ದಿವೌಕಸರಿಗೆ ಕತ್ತಲೆಯನ್ನು ಕೊಂದು ಉದಯಿಸುವ ಸೂರ್ಯನಂತೆ ತೋರಿದನು.
03218040a ಅಥೈನಮಭ್ಯಯುಃ ಸರ್ವಾ ದೇವಸೇನಾಃ ಸಹಸ್ರಶಃ।
03218040c ಅಸ್ಮಾಕಂ ತ್ವಂ ಪತಿರಿತಿ ಬ್ರುವಾಣಾಃ ಸರ್ವತೋದಿಶಂ।।
ಆಗ ಸರ್ವ ದೇವಸೇನೆಯೂ ನೀನು ನಮ್ಮ ಒಡೆಯನೆಂದು ಹೇಳುತ್ತಾ ಸಹಸ್ರಾರು ಸಂಖ್ಯೆಗಳಲ್ಲಿ ಅವನನ್ನು ಸುತ್ತುವರೆದು ನಿಂತರು.
03218041a ತಾಃ ಸಮಾಸಾದ್ಯ ಭಗವಾನ್ಸರ್ವಭೂತಗಣೈರ್ವೃತಃ।
03218041c ಅರ್ಚಿತಶ್ಚ ಸ್ತುತಶ್ಚೈವ ಸಾಂತ್ವಯಾಮಾಸ ತಾ ಅಪಿ।।
ಭಗವಾನನು ಸುತ್ತುವರೆದು ಅರ್ಚಿಸುತ್ತಿದ್ದ, ಸ್ತುತಿಸುತ್ತಿದ್ದ ಸರ್ವಭೂತಗಣಗಳ ಬಳಿಸಾರಿ ಅವರನ್ನು ಸಂತವಿಸತೊಡಗಿದನು.
03218042a ಶತಕ್ರತುಶ್ಚಾಭಿಷಿಚ್ಯ ಸ್ಕಂದಂ ಸೇನಾಪತಿಂ ತದಾ।
03218042c ಸಸ್ಮಾರ ತಾಂ ದೇವಸೇನಾಂ ಯಾ ಸಾ ತೇನ ವಿಮೋಕ್ಷಿತಾ।।
ಸ್ಕಂದನನ್ನು ಸೇನಾಪತಿಯನ್ನಾಗಿ ಅಭಿಷೇಕಿಸಿದ ಶತಕ್ರತುವು ತನ್ನಿಂದ ಬಿಡುಗಡೆಗೊಳಿಸಲ್ಪಟ್ಟಿದ್ದ ದೇವಸೇನೆಯನ್ನು ನೆನಪಿಸಿಕೊಂಡನು.
03218043a ಅಯಂ ತಸ್ಯಾಃ ಪತಿರ್ನೂನಂ ವಿಹಿತೋ ಬ್ರಹ್ಮಣಾ ಸ್ವಯಂ।
03218043c ಇತಿ ಚಿಂತ್ಯಾನಯಾಮಾಸ ದೇವಸೇನಾಂ ಸ್ವಲಂಕೃತಾಂ।।
ಇವನೇ ಸ್ವಯಂ ಬ್ರಹ್ಮನು ಅವಳಿಗೆ ವಿಹಿಸಿದ ಪತಿಯೆಂದು ಆಲೋಚಿಸಿ ಸ್ವಲಂಕೃತಳಾದ ದೇವಸೇನೆಯನ್ನು ಕರೆಯಿಸಿದನು.
03218044a ಸ್ಕಂದಂ ಚೋವಾಚ ಬಲಭಿದಿಯಂ ಕನ್ಯಾ ಸುರೋತ್ತಮ।
03218044c ಅಜಾತೇ ತ್ವಯಿ ನಿರ್ದಿಷ್ಟಾ ತವ ಪತ್ನೀ ಸ್ವಯಂಭುವಾ।।
ಆಗ ಬಲಭಿದಿಯು ಸ್ಕಂದನಿಗೆ ಹೇಳಿದನು: “ಸುರೋತ್ತಮ! ಈ ಕನ್ಯೆಯನ್ನು ನೀನು ಹುಟ್ಟುವ ಮೊದಲೇ ನಿನ್ನ ಪತ್ನಿಯೆಂದು ಸ್ವಯಂಭುವು ನಿರ್ಧಿಷ್ಟಗೊಳಿಸಿದ್ದನು.
03218045a ತಸ್ಮಾತ್ತ್ವಮಸ್ಯಾ ವಿಧಿವತ್ಪಾಣಿಂ ಮಂತ್ರಪುರಸ್ಕೃತಂ।
03218045c ಗೃಹಾಣ ದಕ್ಷಿಣಂ ದೇವ್ಯಾಃ ಪಾಣಿನಾ ಪದ್ಮವರ್ಚಸಂ।।
ಆದುದರಿಂದ ಪದ್ಮವರ್ಚಸಳಾದ ಈ ದೇವಿಯ ಕೈಯನ್ನು ಮಂತ್ರಪುರಸ್ಕೃತವಾಗಿ ವಿಧಿವತ್ತಾಗಿ ನಿನ್ನ ಬಲಕೈಯಿಂದ ಹಿಡಿ.”
03218046a ಏವಮುಕ್ತಃ ಸ ಜಗ್ರಾಹ ತಸ್ಯಾಃ ಪಾಣಿಂ ಯಥಾವಿಧಿ।
03218046c ಬೃಹಸ್ಪತಿರ್ಮಂತ್ರವಿಧಿಂ ಜಜಾಪ ಚ ಜುಹಾವ ಚ।।
ಹೀಗೆ ಹೇಳಲು ಅವನು ಯಥಾವಿಧಿಯಾಗಿ ಅವಳ ಪಾಣಿಗ್ರಹಣಮಾಡಿಕೊಂಡನು. ಮಂತ್ರಗಳನ್ನು ತಿಳಿದಿದ್ದ ಬೃಹಸ್ಪತಿಯು ಮಂತ್ರಗಳನ್ನು ಉಚ್ಚರಿಸಿ ಯಾಜಿಸಿದನು.
03218047a ಏವಂ ಸ್ಕಂದಸ್ಯ ಮಹಿಷೀಂ ದೇವಸೇನಾಂ ವಿದುರ್ಬುಧಾಃ।
03218047c ಷಷ್ಠೀಂ ಯಾಂ ಬ್ರಾಹ್ಮಣಾಃ ಪ್ರಾಹುರ್ಲಕ್ಷ್ಮೀಮಾಶಾಂ ಸುಖಪ್ರದಾಂ।
03218047e ಸಿನೀವಾಲೀಂ ಕುಹೂಂ ಚೈವ ಸದ್ವೃತ್ತಿಮಪರಾಜಿತಾಂ।।
ಹೀಗೆ ದೇವಸೇನೆಯೆಂದು ಬುಧರಿಗೆ ತಿಳಿದವಳು, ಷಷ್ಠಿಯೆಂದು ಬ್ರಾಹ್ಮಣರು ಕರೆಯುವ, ಲಕ್ಷ್ಮೀ, ಆಶಾ, ಸುಖಪ್ರದಾ, ಸಿನೀವಾಲೀ, ಕುಹೂ, ಸದ್ವತ್ತಿ, ಅಪರಾಜಿತಳು ಸ್ಕಂದನ ರಾಣಿಯಾದಳು.
03218048a ಯದಾ ಸ್ಕಂದಃ ಪತಿರ್ಲಬ್ಧಃ ಶಾಶ್ವತೋ ದೇವಸೇನಯಾ।
03218048c ತದಾ ತಮಾಶ್ರಯಲ್ಲಕ್ಷ್ಮೀಃ ಸ್ವಯಂ ದೇವೀ ಶರೀರಿಣೀ।।
ಸ್ಕಂದನನ್ನು ಶಾಶ್ವತ ಪತಿಯನ್ನಾಗಿ ಪಡೆದ ದೇವಸೇನೆ, ದೇವೀ ಲಕ್ಷ್ಮಿಯು ಸ್ವಯಂ ಶರೀರಿಣಿಯಾಗಿ ಅವನನ್ನು ಆಶ್ರಯಿಸಿದಳು.
03218049a ಶ್ರೀಜುಷ್ಟಃ ಪಂಚಮೀಂ ಸ್ಕಂದಸ್ತಸ್ಮಾಚ್ಚ್ರೀಪಂಚಮೀ ಸ್ಮೃತಾ।
03218049c ಷಷ್ಠ್ಯಾಂ ಕೃತಾರ್ಥೋಽಭೂದ್ಯಸ್ಮಾತ್ತಸ್ಮಾತ್ಷಷ್ಠೀ ಮಹಾತಿಥಿಃ।।
ಪಂಚಮಿಯಂದು ಸ್ಕಂದನು ಶ್ರೀಮಂತನಾದುದರಿಂದ ಅದು ಶ್ರೀಪಂಚಮಿಯೆಂದು ನೆನಪಿನಲ್ಲಿದೆ. ಮತ್ತು ಷಷ್ಠಿಯಂದು ಅವನು ಕೃತಾರ್ಥನಾದುದರಿಂದ ಷಷ್ಠಿಯನ್ನು ಮಹಾತಿಥಿಯೆಂದು ಪರಿಗಣಿಸುತ್ತಾರೆ.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತೌ ಅಷ್ಟದಶಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಸ್ಕಂದೋತ್ಪತ್ತಿಯಲ್ಲಿ ಇನ್ನೂರಾಹದಿನೆಂಟನೆಯ ಅಧ್ಯಾಯವು.
-
ಸ್ಕಂದನ ದೇವಸೇನಾಪತ್ಯಾಭಿಷೇಕದ ವರ್ಣನೆಯು ಮುಂದೆ ಶಲ್ಯ ಪರ್ವದ ಅಧ್ಯಾಯ 44ರಲ್ಲಿಯೂ ಬರುತ್ತದೆ. ↩︎