ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 216
ಸಾರ
ಸ್ಕಂದನ ಮೇಲೆ ಆಕ್ರಮಣ ಮಾಡಲು ದೇವಸೇನೆಯೊಂದಿಗೆ ಇಂದ್ರನು ಬರಲು ಅಗ್ನಿಯು ತಡೆದುದು; ದೇವಸೇನೆಯು ಅಗ್ನಿಯ ಪಕ್ಷವನ್ನು ಸೇರಿದುದು (1-11). ಒಬ್ಬಂಟಿಗನಾದ ಇಂದ್ರನು ವಜ್ರವನ್ನು ಸ್ಕಂದನ ಮೇಲೆಸೆಯಲು, ಅವನಿಂದ ವಿಶಾಖನು ಜನಿಸಲು, ಇಂದ್ರನು ಭಯದಿಂದ ಸ್ಕಂದನನ್ನು ಸ್ತುತಿಸಿದುದು (12-15).
03216001 ಮಾರ್ಕಂಡೇಯ ಉವಾಚ।
03216001a ಗ್ರಹಾಃ ಸೋಪಗ್ರಹಾಶ್ಚೈವ ಋಷಯೋ ಮಾತರಸ್ತಥಾ।
03216001c ಹುತಾಶನಮುಖಾಶ್ಚಾಪಿ ದೀಪ್ತಾಃ ಪಾರಿಷದಾಂ ಗಣಾಃ।।
03216002a ಏತೇ ಚಾನ್ಯೇ ಚ ಬಹವೋ ಘೋರಾಸ್ತ್ರಿದಿವವಾಸಿನಃ।
03216002c ಪರಿವಾರ್ಯ ಮಹಾಸೇನಂ ಸ್ಥಿತಾ ಮಾತೃಗಣೈಃ ಸಹ।।
ಮಾರ್ಕಂಡೇಯನು ಹೇಳಿದನು: “ಗ್ರಹಗಳು, ಉಪಗ್ರಹಗಳು, ಋಷಿಗಳು, ಮಾತೃಗಳು, ಹುತಾಶನನೇ ಮೊದಲಾದ ಉರಿಯುವವು, ಪಾರಿಷದ ಗಣಗಳು ಮತ್ತು ಇನ್ನೂ ಅನ್ಯ ಬಹುಸಂಖ್ಯೆಯ ಘೋರ ತ್ರಿದಿವವಾಸಿಗಳು ಮಾತೃಗಣಗಳೊಂದಿಗೆ ಮಹಾಸೇನನನ್ನು ಸುತ್ತುವರೆದು ನಿಂತರು.
03216003a ಸಂದಿಗ್ಧಂ ವಿಜಯಂ ದೃಷ್ಟ್ವಾ ವಿಜಯೇಪ್ಸುಃ ಸುರೇಶ್ವರಃ।
03216003c ಆರುಹ್ಯೈರಾವತಸ್ಕಂಧಂ ಪ್ರಯಯೌ ದೈವತೈಃ ಸಹ।
ವಿಜಯವು ಸಂದಿಗ್ಧವೆಂದು ನೋಡಿ ವಿಜಯವನ್ನು ಬಯಸಿದ ಸುರೇಶ್ವರನು ಐರಾವತವನ್ನೇರಿ ದೇವತೆಗಳ ಸಹಿತ ಸ್ಕಂದನಲ್ಲಿಗೆ ಮುಂದುವರೆದನು.
03216003e ವಿಜಿಘಾಂಸುರ್ಮಹಾಸೇನಮಿಂದ್ರಸ್ತೂರ್ಣತರಂ ಯಯೌ।।
03216004a ಉಗ್ರಂ ತಚ್ಚ ಮಹಾವೇಗಂ ದೇವಾನೀಕಂ ಮಹಾಪ್ರಭಂ।
03216004c ವಿಚಿತ್ರಧ್ವಜಸನ್ನಾಹಂ ನಾನಾವಾಹನಕಾರ್ಮುಕಂ।
ಮಹಾಸೇನನನ್ನು ಕೊಲ್ಲಲು ಇಂದ್ರನ ಉತ್ತಮ ಮಹಾಪ್ರಭೆಯುಳ್ಳ, ವಿಚಿತ್ರ ಧ್ವಜಗಳಿಂದ ಸನ್ನಿದ್ಧವಾದ, ನಾನಾ ವಾಹನ-ಕಾರ್ಮುಕಗಳಿಂದ ಕೂಡಿದ ದೇವತೆಗಳ ಸೇನೆಯು ಉಗ್ರವಾಗಿ ಕೂಗುತ್ತಾ ಮಹಾವೇಗದಿಂದ ಹೊರಟಿತು.
03216004e ಪ್ರವರಾಂಬರಸಂವೀತಂ ಶ್ರಿಯಾ ಜುಷ್ಟಮಲಂಕೃತಂ।।
03216005a ವಿಜಿಘಾಂಸುಂ ತದಾಯಾಂತಂ ಕುಮಾರಃ ಶಕ್ರಮಭ್ಯಯಾತ್।
ಶ್ರೇಷ್ಠವಾದ ಬಟ್ಟೆಗಳನ್ನು ಧರಿಸಿದ್ದ, ಆಭರಣಗಳಿಂದ ಸುಂದರವಾಗಿ ಅಲಂಕೃತನಾಗಿ ಕೊಲ್ಲಲು ಅಲ್ಲಿಗೆ ಬರುತ್ತಿದ್ದ ಶಕ್ರನನ್ನು ಕುಮಾರನು ಎದುರಿಸಿದನು.
03216005c ವಿನದನ್ಪಥಿ ಶಕ್ರಸ್ತು ದ್ರುತಂ ಯಾತಿ ಮಹಾಬಲಃ।
03216005e ಸಂಹರ್ಷಯನ್ದೇವಸೇನಾಂ ಜಿಘಾಂಸುಃ ಪಾವಕಾತ್ಮಜಂ।।
ದಾರಿಯಲ್ಲಿ ಶಕ್ರನು ಮಹಾಬಲವನ್ನುಪಯೋಗಿಸಿ ಜೋರಾಗಿ ಕೂಗಲು ಪಾವಕಾತ್ಮಜನನ್ನು ಕೊಲ್ಲಲು ಬರುತ್ತಿದ್ದ ದೇವಸೇನೆಯು ಹರ್ಷಗೊಂಡಿತು.
03216006a ಸಂಪೂಜ್ಯಮಾನಸ್ತ್ರಿದಶೈಸ್ತಥೈವ ಪರಮರ್ಷಿಭಿಃ।
03216006c ಸಮೀಪಮುಪಸಂಪ್ರಾಪ್ತಃ ಕಾರ್ತ್ತಿಕೇಯಸ್ಯ ವಾಸವಃ।।
ತ್ರಿದಶಸ್ತರಿಂದ ಮತ್ತು ಪರಮಋಷಿಗಳಿಂದ ಸಂಪೂಜ್ಯನಾಗಿ ವಾಸವನು ಕಾರ್ತಿಕೇಯನ ಸಮೀಪಕ್ಕೆ ಬಂದನು.
03216007a ಸಿಂಹನಾದಂ ತತಶ್ಚಕ್ರೇ ದೇವೇಶಃ ಸಹಿತಃ ಸುರೈಃ।
03216007c ಗುಹೋಽಪಿ ಶಬ್ದಂ ತಂ ಶ್ರುತ್ವಾ ವ್ಯನದತ್ಸಾಗರೋ ಯಥಾ।।
ಆಗ ಸುರರೊಂದಿಗೆ ದೇವೇಶನು ಸಿಂಹನಾದವನ್ನು ಗೈದನು. ಅದನ್ನು ಕೇಳಿ ಗುಹನೂ ಕೂಡ ಸಾಗರದಂತೆ ಜೋರಾಗಿ ಕೂಗಿದನು.
03216008a ತಸ್ಯ ಶಬ್ದೇನ ಮಹತಾ ಸಮುದ್ಧೂತೋದಧಿಪ್ರಭಂ।
03216008c ಬಭ್ರಾಮ ತತ್ರ ತತ್ರೈವ ದೇವಸೈನ್ಯಮಚೇತನಂ।।
ಅವನ ಆ ಮಹಾ ಶಬ್ಧದಿಂದ ದೇವಸೇನೆಯು ಸಮುದ್ರದಂತೆ ಕ್ಷೋಭೆಗೊಂಡಿತು ಮತ್ತು ಎಲ್ಲರೂ ಎಲ್ಲಿದ್ದರೋ ಅಲ್ಲಿಯೇ ಅಚೇತನರಾಗಿ ನಿಂತರು.
03216009a ಜಿಘಾಂಸೂನುಪಸಂಪ್ರಾಪ್ತಾನ್ದೇವಾನ್ದೃಷ್ಟ್ವಾ ಸ ಪಾವಕಿಃ।
03216009c ವಿಸಸರ್ಜ ಮುಖಾತ್ಕ್ರುದ್ಧಃ ಪ್ರವೃದ್ಧಾಃ ಪಾವಕಾರ್ಚಿಷಃ।
03216009e ತಾ ದೇವಸೈನ್ಯಾನ್ಯದಹನ್ವೇಷ್ಟಮಾನಾನಿ ಭೂತಲೇ।।
ತನ್ನನ್ನು ಕೊಲ್ಲಲು ಬಂದ ದೇವತೆಗಳನ್ನು ನೋಡಿ ಆ ಪಾವಕಿಯು ಕೃದ್ಧನಾಗಿ ಬಾಯಿಯಿಂದ ಜೋರಾಗಿ ಉರಿಯುತ್ತಿರುವ ಅಗ್ನಿಯ ಜ್ವಾಲೆಗಳನ್ನು ಹೊರಹಾಕಿದನು. ಅದು ದೇವಸೇನೆಯನ್ನು ಸುಟ್ಟು ನೆಲದಮೇಲೆ ಬೀಳಿಸಿತು.
03216010a ತೇ ಪ್ರದೀಪ್ತಶಿರೋದೇಹಾಃ ಪ್ರದೀಪ್ತಾಯುಧವಾಹನಾಃ।
03216010c ಪ್ರಚ್ಯುತಾಃ ಸಹಸಾ ಭಾಂತಿ ಚಿತ್ರಾಸ್ತಾರಾಗಣಾ ಇವ।।
ಅವರ ಶಿರಗಳು, ದೇಹಗಳು, ಆಯುಧ, ವಾಹನಗಳು ಆ ಬೆಂಕಿಯಲ್ಲಿ ಹತ್ತಿ ಉರಿಯತೊಡಗಿದವು. ಕ್ಷಣದಲ್ಲಿಯೇ ಅವರು ಮಂಡಲಗಳಿಂದ ಕಿತ್ತುಬಿದ್ದ ನಕ್ಷತ್ರಗಳ ಗುಂಪುಗಳಂತೆ ತೋರಿದರು.
03216011a ದಹ್ಯಮಾನಾಃ ಪ್ರಪನ್ನಾಸ್ತೇ ಶರಣಂ ಪಾವಕಾತ್ಮಜಂ।
03216011c ದೇವಾ ವಜ್ರಧರಂ ತ್ಯಕ್ತ್ವಾ ತತಃ ಶಾಂತಿಮುಪಾಗತಾಃ।।
ಉರಿಯುತ್ತಿದ್ದ ದೇವತೆಗಳು ವಜ್ರಧರನನ್ನು ತ್ಯಜಿಸಿ ಪಾವಕಾತ್ಮಜನನ್ನು ಶರಣು ಹೊಕ್ಕರು. ಹಾಗೆ ಅಲ್ಲಿ ಶಾಂತಿಯುಂಟಾಯಿತು.
03216012a ತ್ಯಕ್ತೋ ದೇವೈಸ್ತತಃ ಸ್ಕಂದೇ ವಜ್ರಂ ಶಕ್ರೋಽಭ್ಯವಾಸೃಜತ್।
03216012c ತದ್ವಿಸೃಷ್ಟಂ ಜಘಾನಾಶು ಪಾರ್ಶ್ವಂ ಸ್ಕಂದಸ್ಯ ದಕ್ಷಿಣಂ।
03216012e ಬಿಭೇದ ಚ ಮಹಾರಾಜ ಪಾರ್ಶ್ವಂ ತಸ್ಯ ಮಹಾತ್ಮನಃ।।
ದೇವತೆಗಳಿಂದ ತ್ಯಜಿಸಲ್ಪಟ್ಟ ಶಕ್ರನು ವಜ್ರವನ್ನು ಸ್ಕಂದನ ಮೇಲೆ ಎಸೆದನು. ಅದು ಸ್ಕಂದನ ಬಲಪಾರ್ಶ್ವವನ್ನು ಹೊಕ್ಕು ಆ ಮಹಾತ್ಮನ ಪಾರ್ಶ್ವವನ್ನು ಕತ್ತರಿಸಿತು.
03216013a ವಜ್ರಪ್ರಹಾರಾತ್ಸ್ಕಂದಸ್ಯ ಸಂಜಾತಃ ಪುರುಷೋಽಪರಃ।
03216013c ಯುವಾ ಕಾಂಚನಸನ್ನಾಹಃ ಶಕ್ತಿಧೃಗ್ದಿವ್ಯಕುಂಡಲಃ।
03216013e ಯದ್ವಜ್ರವಿಶನಾಜ್ಜಾತೋ ವಿಶಾಖಸ್ತೇನ ಸೋಽಭವತ್।।
ವಜ್ರಪ್ರಹಾರದಿಂದ ಸ್ಕಂದನಲ್ಲಿ ಇನ್ನೊಬ್ಬ ಪುರುಷನು ಹುಟ್ಟಿದನು. ಆ ಯುವಕನು ಕಾಂಚನದ ಪ್ರಭೆಯನ್ನು ಹೊಂದಿದ್ದು, ಶಕ್ತಿಯನ್ನು ಹಿಡಿದಿದ್ದನು ಮತ್ತು ದಿವ್ಯಕುಂಡಲಗಳನ್ನು ಧರಿಸಿದ್ದನು. ವಜ್ರದ ಹೊಡೆತಕ್ಕೆ ಸಿಕ್ಕು ಹುಟ್ಟಿದುದರಿಂದ ಅವನು ವಿಶಾಖ ಎಂದಾದನು.
03216014a ತಂ ಜಾತಮಪರಂ ದೃಷ್ಟ್ವಾ ಕಾಲಾನಲಸಮದ್ಯುತಿಂ।
03216014c ಭಯಾದಿಂದ್ರಸ್ತತಃ ಸ್ಕಂದಂ ಪ್ರಾಂಜಲಿಃ ಶರಣಂ ಗತಃ।।
ಕಾಲಾನಲಸಮದ್ಯುತಿಯಾಗಿದ್ದ ಇನ್ನೊಬ್ಬನು ಹುಟ್ಟಿದ್ದುದನ್ನು ನೋಡಿ ಇಂದ್ರನು ಭಯದಿಂದ ಕೈಮುಗಿದು ಸ್ತುತಿಸಿ ಸ್ಕಂದನ ಶರಣು ಹೋದನು.
03216015a ತಸ್ಯಾಭಯಂ ದದೌ ಸ್ಕಂದಃ ಸಹಸೈನ್ಯಸ್ಯ ಸತ್ತಮ।
03216015c ತತಃ ಪ್ರಹೃಷ್ಟಾಸ್ತ್ರಿದಶಾ ವಾದಿತ್ರಾಣ್ಯಭ್ಯವಾದಯನ್।।
ಆಗ ಸತ್ತಮ ಸ್ಕಂದನು ಸೈನ್ಯದೊಂದಿಗೆ ಅವನಿಗೆ ಅಭಯವನ್ನಿತ್ತನು. ತ್ರಿದಶರು ಪ್ರಹೃಷ್ಠರಾಗಿ ಕೈಗಳನ್ನು ಮೇಲೆತ್ತಿ ನಮಸ್ಕರಿಸಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಇಂದ್ರಸ್ಕಂದಸಮಾಗಮೇ ಷಷ್ಟದಶಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಇಂದ್ರಸ್ಕಂದಸಮಾಗಮದಲ್ಲಿ ಇನ್ನೂರಾಹದಿನಾರನೆಯ ಅಧ್ಯಾಯವು.