ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 215
ಸಾರ
ಕೆಲವರು ಆರು ಋಷಿಗಳ ಪತ್ನಿಯರು ಅಗ್ನಿಯನ್ನು ಕೂಡಿದುದರಿಂದ ಸ್ಕಂದನು ಜನಿಸಿದನೆಂದೂ, ಕೆಲವರು ಗರುಡಿಯಿಂದ ಜನಿಸಿದನೆಂದೂ ತಿಳಿದುಕೊಳ್ಳುವುದು; ಅರುಂಧತಿಯನ್ನು ಬಿಟ್ಟು ಆರು ಋಷಿಪತ್ನಿಯರನ್ನು ಗಂಡಂದಿರು ತೊರೆದುದು; ಸ್ವಾಹಾಳು ಸ್ಕಂದನು ತನ್ನ ಮಗನೆಂದು ಸಪ್ತರ್ಷಿಗಳಿಗೆ ಹೇಳುವುದು (1-6). ಸತ್ಯಸಂಗತಿಯನ್ನು ತಿಳಿದುಕೊಂಡಿದ್ದ ವಿಶ್ವಾಮಿತ್ರನು ಸ್ಕಂದನನ್ನು ಸ್ತುತಿಸಿದುದು (7-12). ಸ್ಕಂದನನ್ನು ಸಂಹರಿಸೆಂದು ದೇವತೆಗಳು ಇಂದ್ರನಿಗೆ ಹೇಳಲು, ಅವನನ್ನು ಗೆಲ್ಲಲು ಇಂದ್ರನು ಸಪ್ತಮಾತೃಕೆಯರನ್ನು ಅವನ ಬಳಿ ಕಳುಹಿಸಿದುದು; ಅಗ್ನಿಯು ಆಡಿನ ರೂಪವನ್ನು ತಾಳಿ ಮಗನನ್ನು ರಕ್ಷಿಸಿದುದು, ರಂಜಿಸಿದುದು (13-23).
03215001 ಮಾರ್ಕಂಡೇಯ ಉವಾಚ।
03215001a ಋಷಯಸ್ತು ಮಹಾಘೋರಾನ್ದೃಷ್ಟ್ವೋತ್ಪಾತಾನ್ಪೃಥಗ್ವಿಧಾನ್।
03215001c ಅಕುರ್ವಂ ಶಾಂತಿಮುದ್ವಿಗ್ನಾ ಲೋಕಾನಾಂ ಲೋಕಭಾವನಾಃ।।
ಮಾರ್ಕಂಡೇಯನು ಹೇಳಿದನು: “ಮಹಾಘೋರವಾದ ಉತ್ಪಾತಗಳನ್ನು ನೋಡಿದ ಲೋಕಭಾವನ ಋಷಿಗಳು ಉದ್ವಿಗ್ನ ಲೋಕಗಳ ಶಾಂತಿಗಾಗಿ ಕಾರ್ಯಕೈಗೊಂಡರು.
03215002a ನಿವಸಂತಿ ವನೇ ಯೇ ತು ತಸ್ಮಿಂಶ್ಚೈತ್ರರಥೇ ಜನಾಃ।
03215002c ತೇಽಬ್ರುವನ್ನೇಷ ನೋಽನರ್ಥಃ ಪಾವಕೇನಾಹೃತೋ ಮಹಾನ್।
03215002e ಸಂಗಮ್ಯ ಷಡ್ಭಿಃ ಪತ್ನೀಭಿಃ ಸಪ್ತರ್ಷೀಣಾಮಿತಿ ಸ್ಮ ಹ।।
ಚೈತ್ರರಥ ವನದಲ್ಲಿ ವಾಸಿಸುತ್ತಿದ್ದ ಜನರು ಹೇಳಿಕೊಂಡರು: “ಈ ಮಹಾನ್ ಅನರ್ಥವು ಪಾವಕನು ಸಪ್ತರ್ಷಿಗಳ ಆರು ಪತ್ನಿಯರೊಂದಿಗೆ ಗುಟ್ಟಾಗಿ ಕೂಡಿದ್ದುದರಿಂದ ಆಗಿದೆ.”
03215003a ಅಪರೇ ಗರುಡೀಮಾಹುಸ್ತ್ವಯಾನರ್ಥೋಽಯಮಾಹೃತಃ।
03215003c ಯೈರ್ದೃಷ್ಟಾ ಸಾ ತದಾ ದೇವೀ ತಸ್ಯಾ ರೂಪೇಣ ಗಚ್ಚತೀ।
03215003e ನ ತು ತತ್ಸ್ವಾಹಯಾ ಕರ್ಮ ಕೃತಂ ಜಾನಾತಿ ವೈ ಜನಃ।।
ಆ ದೇವಿಯು ಗರುಡಿಯ ರೂಪವನ್ನು ಧರಿಸಿ ಹೋಗುತ್ತಿದ್ದುದನ್ನು ನೋಡಿದ ಇತರರು ಇದು ಸ್ವಾಹಾಳ ಕೆಲಸ ಎಂದು ತಿಳಿಯದೇ “ಈ ಅನರ್ಥವನ್ನು ಪಕ್ಷಿಯೊಂದು ತಂದೊಡ್ಡಿದೆ” ಎಂದೂ ಹೇಳಿದರು.
03215004a ಸುಪರ್ಣೀ ತು ವಚಃ ಶ್ರುತ್ವಾ ಮಮಾಯಂ ತನಯಸ್ತ್ವಿತಿ।
03215004c ಉಪಗಮ್ಯ ಶನೈಃ ಸ್ಕಂದಮಾಹಾಹಂ ಜನನೀ ತವ।।
ಈ ಮಾತುಗಳನ್ನು ಕೇಳಿದ ಸುಪರ್ಣಿಯು ಇವನು ನನ್ನ ಮಗನೆಂದು ನಿಧಾನವಾಗಿ ಸ್ಕಂದನ ಬಳಿಬಂದು “ನಾನು ನಿನ್ನ ತಾಯಿ” ಎಂದು ಹೇಳಿದಳು.
03215005a ಅಥ ಸಪ್ತರ್ಷಯಃ ಶ್ರುತ್ವಾ ಜಾತಂ ಪುತ್ರಂ ಮಹೌಜಸಂ।
03215005c ತತ್ಯಜುಃ ಷಟ್ತದಾ ಪತ್ನೀರ್ವಿನಾ ದೇವೀಮರುಂಧತೀಂ।।
03215006a ಷಡ್ಭಿರೇವ ತದಾ ಜಾತಮಾಹುಸ್ತದ್ವನವಾಸಿನಃ।
ಆಗ ಮಹೌಜಸ ಪುತ್ರನು ಹುಟ್ಟಿದ್ದಾನೆಂದು ಕೇಳಿ ಸಪ್ತರ್ಷಿಗಳು ದೇವೀ ಅರುಂಧತಿಯನ್ನು ಬಿಟ್ಟು ಉಳಿದ ಆರು ಪತ್ನಿಯರನ್ನು ತ್ಯಜಿಸಿದರು. ಏಕೆಂದರೆ ವನವಾಸಿಗಳು “ಈ ಆರರಿಂದಲೇ ಅವನು ಹುಟ್ಟಿದ್ದಾನೆ” ಎಂದು ಹೇಳಿದರು.
03215006c ಸಪ್ತರ್ಷೀನಾಹ ಚ ಸ್ವಾಹಾ ಮಮ ಪುತ್ರೋಽಯಮಿತ್ಯುತ।
03215006e ಅಹಂ ಜಾನೇ ನೈತದೇವಮಿತಿ ರಾಜನ್ಪುನಃ ಪುನಃ।।
ಸ್ವಾಹಳೂ ಕೂಡ “ಇವನು ನನ್ನ ಮಗ” ಎಂದೂ, “ನಿಮ್ಮ ಪತ್ನಿಯರು ಇವನ ತಾಯಿಯರಲ್ಲ” ಎಂದೂ ಪುನಃ ಪುನಃ ಸಪ್ತರ್ಷಿಗಳಿಗೆ ಹೇಳಿದಳು.
03215007a ವಿಶ್ವಾಮಿತ್ರಸ್ತು ಕೃತ್ವೇಷ್ಟಿಂ ಸಪ್ತರ್ಷೀಣಾಂ ಮಹಾಮುನಿಃ।
03215007c ಪಾವಕಂ ಕಾಮಸಂತಪ್ತಮದೃಷ್ಟಃ ಪೃಷ್ಠತೋಽನ್ವಗಾತ್।
03215007e ತತ್ತೇನ ನಿಖಿಲಂ ಸರ್ವಮವಬುದ್ಧಂ ಯಥಾತಥಂ।।
ಮಹಾಮುನಿ ವಿಶ್ವಾಮಿತ್ರನು ಸಪ್ತರ್ಷಿಗಳ ಆ ಇಷ್ಟಿಯನ್ನು ಪೂರೈಸಿ ಕಾಮಸಂತಪ್ತನಾದ ಪಾವಕನನ್ನು ಹಿಂಬಾಲಿಸಿ ಹೋಗಿ ನೋಡಿದ್ದನು. ಆದುದರಿಂದ ಅವನಿಗೆ ನಡೆದುದೆಲ್ಲವೂ ಸರಿಯಾಗಿ ತಿಳಿದಿತ್ತು.
03215008a ವಿಶ್ವಾಮಿತ್ರಸ್ತು ಪ್ರಥಮಂ ಕುಮಾರಂ ಶರಣಂ ಗತಃ।
03215008c ಸ್ತವಂ ದಿವ್ಯಂ ಸಂಪ್ರಚಕ್ರೇ ಮಹಾಸೇನಸ್ಯ ಚಾಪಿ ಸಃ।।
03215009a ಮಂಗಲಾನಿ ಚ ಸರ್ವಾಣಿ ಕೌಮಾರಾಣಿ ತ್ರಯೋದಶ।
03215009c ಜಾತಕರ್ಮಾದಿಕಾಸ್ತಸ್ಯ ಕ್ರಿಯಾಶ್ಚಕ್ರೇ ಮಹಾಮುನಿಃ।।
ಪ್ರಥಮವಾಗಿ ವಿಶ್ವಾಮಿತ್ರನು ಕುಮಾರನಿಗೆ ಶರಣು ಹೋದನು. ಮಹಾಸೇನನನ್ನು ದಿವ್ಯ ಸ್ತವದಿಂದ ಸ್ತುತಿಸಿದನು ಕೂಡ. ಜಾತಕರ್ಮಾದಿ ಎಲ್ಲ ಹದಿಮೂರು ಮಂಗಲ ಕಾರ್ಯಗಳನ್ನು ಆ ಮಹಾಮುನಿಯು ಕುಮಾರನಿಗೆ ನೆರವೇರಿಸಿದನು.
03215010a ಷಡ್ವಕ್ತ್ರಸ್ಯ ತು ಮಾಹಾತ್ಮ್ಯಂ ಕುಕ್ಕುಟಸ್ಯ ಚ ಸಾಧನಂ।
03215010c ಶಕ್ತ್ಯಾ ದೇವ್ಯಾಃ ಸಾಧನಂ ಚ ತಥಾ ಪಾರಿಷದಾಮಪಿ।।
03215011a ವಿಶ್ವಾಮಿತ್ರಶ್ಚಕಾರೈತತ್ಕರ್ಮ ಲೋಕಹಿತಾಯ ವೈ।
ಲೋಕಹಿತಾರ್ಥವಾಗಿ ವಿಶ್ವಾಮಿತ್ರನು ಆ ಷಡ್ವಕ್ತ್ರನ ಮಹಾತ್ಮೆಯನ್ನೂ, ಕುಕ್ಕುಟದ ಸಾಧನೆಯನ್ನೂ, ದೇವಿ ಶಕ್ತಿಯ ಸಾಧನೆಯನ್ನೂ ಮತ್ತು ಅವನಿಗೆ ಸೇವೆಸಲ್ಲಿಸಿದ ಜನರನ್ನೂ ಸ್ತುತಿಸಿದನು.
03215011c ತಸ್ಮಾದೃಷಿಃ ಕುಮಾರಸ್ಯ ವಿಶ್ವಾಮಿತ್ರೋಽಭವತ್ಪ್ರಿಯಃ।।
03215012a ಅನ್ವಜಾನಾಚ್ಚ ಸ್ವಾಹಾಯಾ ರೂಪಾನ್ಯತ್ವಂ ಮಹಾಮುನಿಃ।
03215012c ಅಬ್ರವೀಚ್ಚ ಮುನೀನ್ಸರ್ವಾನ್ನಾಪರಾಧ್ಯಂತಿ ವೈ ಸ್ತ್ರಿಯಃ।
03215012e ಶ್ರುತ್ವಾ ತು ತತ್ತ್ವತಸ್ತಸ್ಮಾತ್ತೇ ಪತ್ನೀಃ ಸರ್ವತೋಽತ್ಯಜನ್।।
ಆದುದರಿಂದ ಋಷಿ ವಿಶ್ವಾಮಿತ್ರನು ಕುಮಾರನ ಪ್ರಿಯಕರನಾದನು. ಆಗ ಆ ಮಹಾಮುನಿಯು ಸ್ವಾಹಾಳು ಯಾರಿಗೂ ತಿಳಿಯದೇ ರೂಪವನ್ನು ಬದಲಾಯಿಸಿಕೊಂಡಿದ್ದುದನ್ನು ಮುನಿಗಳಿಗೆ ಹೇಳಿ ಅವರ ಸ್ತ್ರೀಯರದ್ದು ಏನೂ ಅಪರಾಧವಿಲ್ಲವೆಂದೂ ಹೇಳಿದನು. ಅದನ್ನು ಕೇಳಿಯೂ ಅವರು ಅವರ ಪತ್ನಿಯರನ್ನು ಸರ್ವತಾ ತ್ಯಜಿಸಿದರು.
03215013a ಸ್ಕಂದಂ ಶ್ರುತ್ವಾ ತತೋ ದೇವಾ ವಾಸವಂ ಸಹಿತಾಬ್ರುವನ್।
03215013c ಅವಿಷಹ್ಯಬಲಂ ಸ್ಕಂದಂ ಜಹಿ ಶಕ್ರಾಶು ಮಾಚಿರಂ।।
ಸ್ಕಂದನ ಕುರಿತು ಕೇಳಿದ ದೇವತೆಗಳು ಒಟ್ಟಿಗೇ ವಾಸವನಿಗೆ ಹೇಳಿದರು: “ಶಕ್ರ! ಈ ಬಲಶಾಲಿಯಾದ ಸ್ಕಂದನನ್ನು ಬೇಗನೇ ಸಂಹರಿಸು!
03215014a ಯದಿ ವಾ ನ ನಿಹಂಸ್ಯೇನಮದ್ಯೇಂದ್ರೋಽಯಂ ಭವಿಷ್ಯತಿ।
03215014c ತ್ರೈಲೋಕ್ಯಂ ಸನ್ನಿಗೃಹ್ಯಾಸ್ಮಾಂಸ್ತ್ವಾಂ ಚ ಶಕ್ರ ಮಹಾಬಲಃ।।
ಶಕ್ರ! ಒಂದುವೇಳೆ ನೀನು ಇವನನ್ನು ಕೊಲ್ಲದಿದ್ದರೆ ಈ ಮಹಾಬಲನು ನಮ್ಮೊಂದಿಗೆ ಮೂರು ಲೋಕಗಳನ್ನೂ ಗೆದ್ದು ಇವನೇ ಇಂದ್ರನಾಗುತ್ತಾನೆ!”
03215015a ಸ ತಾನುವಾಚ ವ್ಯಥಿತೋ ಬಾಲೋಽಯಂ ಸುಮಹಾಬಲಃ।
03215015c ಸ್ರಷ್ಟಾರಮಪಿ ಲೋಕಾನಾಂ ಯುಧಿ ವಿಕ್ರಮ್ಯ ನಾಶಯೇತ್।।
ಅವನು ಅವರಿಗೆ ವ್ಯಥಿತನಾಗಿ ಹೇಳಿದನು: “ಈ ಬಾಲಕನು ತುಂಬಾ ಬಲಶಾಲಿಯು. ಲೋಕಗಳ ಸೃಷ್ಟಾರನನ್ನು ಕೂಡ ಯುದ್ಧದಲ್ಲಿ ವಿಕ್ರಮದಿಂದ ನಾಶಪಡಿಸಬಲ್ಲನು.
03215016a ಸರ್ವಾಸ್ತ್ವದ್ಯಾಭಿಗಚ್ಚಂತು ಸ್ಕಂದಂ ಲೋಕಸ್ಯ ಮಾತರಃ।
03215016c ಕಾಮವೀರ್ಯಾ ಘ್ನಂತು ಚೈನಂ ತಥೇತ್ಯುಕ್ತ್ವಾ ಚ ತಾ ಯಯುಃ।।
ಲೋಕಮಾತೆಯರು ಎಲ್ಲರೂ ಸ್ಕಂದನಲ್ಲಿಗೆ ಇಂದು ಹೋಗಿ ಅವನ ವೀರ್ಯವನ್ನು ಗೆಲ್ಲಲಿ.” ಹಾಗೆಯೇ ಆಗಲೆಂದು ಅವರು ಹೋದರು.
03215017a ತಮಪ್ರತಿಬಲಂ ದೃಷ್ಟ್ವಾ ವಿಷಣ್ಣವದನಾಸ್ತು ತಾಃ।
03215017c ಅಶಕ್ಯೋಽಯಂ ವಿಚಿಂತ್ಯೈವಂ ತಮೇವ ಶರಣಂ ಯಯುಃ।।
ಆ ಅಪ್ರತಿಮಬಲಶಾಲಿಯನ್ನು ಕಂಡು ವಿಷಣ್ಣವದನರಾಗಿ ಅವರು ಇವನನ್ನು ಗೆಲ್ಲಲು ನಾವು ಅಶಕ್ಯರು ಎಂದು ಚಿಂತಿಸಿ ಅವನಿಗೇ ಶರಣು ಹೊಕ್ಕರು.
03215018a ಊಚುಶ್ಚಾಪಿ ತ್ವಮಸ್ಮಾಕಂ ಪುತ್ರೋಽಸ್ಮಾಭಿರ್ಧೃತಂ ಜಗತ್।
03215018c ಅಭಿನಂದಸ್ವ ನಃ ಸರ್ವಾಃ ಪ್ರಸ್ನುತಾಃ ಸ್ನೇಹವಿಕ್ಲವಾಃ।।
ಅವನಿಗೆ ಹೇಳಿದರು: “ನೀನು ನಮ್ಮ ಮಗ. ನಾವು ಜಗತ್ತನ್ನೇ ಪಾಲಿಸುವವರು. ಸ್ನೇಹದಿಂದ ಚಿಮ್ಮುತ್ತಿರುವ ನಮ್ಮ ಮೊಲೆಹಾಲನ್ನು ಉಣ್ಣು.”
03215019a ತಾಃ ಸಂಪೂಜ್ಯ ಮಹಾಸೇನಃ ಕಾಮಾಂಶ್ಚಾಸಾಂ ಪ್ರದಾಯ ಸಃ।
03215019c ಅಪಶ್ಯದಗ್ನಿಮಾಯಾಂತಂ ಪಿತರಂ ಬಲಿನಾಂ ಬಲೀ।।
ಅವರನ್ನು ಪೂಜಿಸಿ ಮಹಾಸೇನನು ಅವರ ಆಸೆಯನ್ನು ಈಡೇರಿಸಿದನು. ಇದನ್ನು ನೋಡಿ ಬಲಿಗಳಲ್ಲಿ ಬಲಿಯಾದ ತಂದೆ ಅಗ್ನಿಯು ಅಲ್ಲಿಗೆ ಆಗಮಿಸಿದನು.
03215020a ಸ ತು ಸಂಪೂಜಿತಸ್ತೇನ ಸಹ ಮಾತೃಗಣೇನ ಹ।
03215020c ಪರಿವಾರ್ಯ ಮಹಾಸೇನಂ ರಕ್ಷಮಾಣಃ ಸ್ಥಿತಃ ಸ್ಥಿರಂ।।
ಮಾತೃಗಣಗಳೊಂದಿಗೆ ಅವನಿಂದಲೂ ಗೌರವಿಸಲ್ಪಟ್ಟ ಅವನು ಮಹಾಸೇನನನ್ನು ಸುತ್ತುವರೆದು ಅವನನ್ನು ರಕ್ಷಿಸಲು ಸ್ಥಿರವಾಗಿ ನಿಂತನು.
03215021a ಸರ್ವಾಸಾಂ ಯಾ ತು ಮಾತೄಣಾಂ ನಾರೀ ಕ್ರೋಧಸಮುದ್ಭವಾ।
03215021c ಧಾತ್ರೀ ಸಾ ಪುತ್ರವತ್ಸ್ಕಂದಂ ಶೂಲಹಸ್ತಾಭ್ಯರಕ್ಷತ।।
ಆ ಎಲ್ಲ ಮಾತೆಯರಲ್ಲಿ ಕ್ರೋಧದಿಂದ ಹುಟ್ಟಿದ ನಾರಿಯು ಕೈಯಲ್ಲಿ ಶೂಲವನ್ನು ಹಿಡಿದು ತನ್ನದೇ ಮಗನನ್ನು ಕಾಯುವಂತೆ ಅವನನ್ನು ರಕ್ಷಿಸಿ ಕಾದಳು.
03215022a ಲೋಹಿತಸ್ಯೋದಧೇಃ ಕನ್ಯಾ ಕ್ರೂರಾ ಲೋಹಿತಭೋಜನಾ।
03215022c ಪರಿಷ್ವಜ್ಯ ಮಹಾಸೇನಂ ಪುತ್ರವತ್ಪರ್ಯರಕ್ಷತ।।
ಕೆಂಪುಬಣ್ಣದ ಸಮುದ್ರದ ಮಗಳು, ರಕ್ತವನ್ನು ಕುಡಿಯುವ ಕ್ರೂರಳು ಮಹಾಸೇನನನ್ನು ಪುತ್ರನಂತೆ ಬಿಗಿದಪ್ಪಿ ರಕ್ಷಿಸಿದಳು.
03215023a ಅಗ್ನಿರ್ಭೂತ್ವಾ ನೈಗಮೇಯಶ್ಚಾಗವಕ್ತ್ರೋ ಬಹುಪ್ರಜಃ।
03215023c ರಮಯಾಮಾಸ ಶೈಲಸ್ಥಂ ಬಾಲಂ ಕ್ರೀಡನಕೈರಿವ।।
ಅಗ್ನಿಯು ಆಡಿನ ಮುಖವನ್ನು ಧರಿಸಿ, ಬಹಳ ಮಕ್ಕಳೊಂದಿಗೆ ಆ ಗಿರಿಯ ಮೇಲಿದ್ದ ಬಾಲಕನೊಂದಿಗೆ ಆಟವಾಡುತ್ತಾ ರಂಜಿಸಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವ ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತೌ ಪಂಚದಶಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಸ್ಕಂದೋತ್ಪತ್ತಿಯಲ್ಲಿ ಇನ್ನೂರಾಹದಿನೈದನೆಯ ಅಧ್ಯಾಯವು.