ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 213
ಸಾರ
ದೇವಸೇನೆಯ ನಾಯಕನನ್ನು ಇಂದ್ರನು ಹುಡುಕುವುದು; ದೇವಸೇನಾ ಎಂಬ ಕನ್ಯೆಯನ್ನು ಕಾಡಿಸುತ್ತಿದ್ದ ದೈತ್ಯ ಕೇಶಿಯನ್ನು ಇಂದ್ರನು ಓಡಿಸಿದುದು (1-14). ದೇವಸೇನೆಯು ಇಂದ್ರನಿಗೆ ತನ್ನ ಪತಿಯಾಗಿರಬೇಕಾದವನ ಗುಣಲಕ್ಷಣಗಳನ್ನು ಹೇಳುವುದು (15-24). ಸೋಮ ಮತ್ತು ಅಗ್ನಿಗಳಿಂದ ಹುಟ್ಟುವವನು ದೇವಸೇನೆಯ ಪತಿಯಾಗುತ್ತಾನೆಂದು ಯೋಚಿಸಿ ಇಂದ್ರನು ಬ್ರಹ್ಮನಲ್ಲಿ ಕೇಳಲು ಅವನೂ ಕೂಡ ನೀನು ಯೋಚಿಸಿದಂತೆಯೇ ಆಗುತ್ತದೆ ಎನ್ನುವುದು (25-26). ವಸಿಷ್ಠಾದಿ ಋಷಿಗಳು ನಡೆಸಿದ ಅಧ್ವರದಲ್ಲಿ ಹವಿಸ್ಸನ್ನು ಕೊಂಡೊಯ್ಯುತ್ತಿದ್ದ ಅಗ್ನಿಯು ಹಾಸಿಗೆಯ ಮೇಲೆ ಮಲಗಿದ್ದ ಋಷಿಪತ್ನಿಯರನ್ನು ನೋಡಿ ಕಾಮವಶನಾದುದು (27-44). ಕಾಮಸಂತಪ್ತಹೃದಯನಾದ ಅಗ್ನಿಯು ದೇಹತ್ಯಾಗ ಮಾಡಲು ವನಕ್ಕೆ ಬಂದಾಗ ಅವನೊಡನೆ ಮೊದಲೇ ಅನುರಕ್ತಳಾಗಿದ್ದ ದಕ್ಷಸುತೆ ಸ್ವಾಹಾಳು ಸಪ್ತರ್ಷಿಗಳ ಪತ್ನಿಯರ ರೂಪವನ್ನು ತಾಳಿ ಅಗ್ನಿಯನ್ನು ಕಾಮಿಸುತ್ತೇನೆಂದು ಯೋಚಿಸುವುದು (45-52).
03213001 1ಮಾರ್ಕಂಡೇಯ ಉವಾಚ। 03213001a ಅಗ್ನೀನಾಂ ವಿವಿಧೋ ವಂಶಃ ಕೀರ್ತಿತಸ್ತೇ ಮಯಾನಘ।
03213001c ಶೃಣು ಜನ್ಮ ತು ಕೌರವ್ಯ ಕಾರ್ತ್ತಿಕೇಯಸ್ಯ ಧೀಮತಃ।।
ಮಾರ್ಕಂಡೇಯನು ಹೇಳಿದನು: “ಅನಘ! ಅಗ್ನಿಗಳ ವಿವಿಧ ವಂಶಗಳನ್ನು ನಿನಗೆ ವಿವರಿಸಿದ್ದೇನೆ. ಕೌರವ್ಯ! ಧೀಮಂತ ಕಾರ್ತಿಕೇಯನ ಜನ್ಮದ ಕುರಿತು ಕೇಳು.
03213002a ಅದ್ಭುತಸ್ಯಾದ್ಭುತಂ ಪುತ್ರಂ ಪ್ರವಕ್ಷ್ಯಾಮ್ಯಮಿತೌಜಸಂ।
03213002c ಜಾತಂ ಸಪ್ತರ್ಷಿಭಾರ್ಯಾಭಿರ್ಬ್ರಹ್ಮಣ್ಯಂ ಕೀರ್ತಿವರ್ಧನಂ।।
ಸಪ್ತ ಋಷಿಗಳ ಪತ್ನಿಯರಲ್ಲಿ ಅದ್ಭುತನಿಗೆ ಜನಿಸಿದ ಅಮಿತೌಜಸ, ಬ್ರಹ್ಮಣ್ಯ, ಕೀರ್ತಿವರ್ಧಕ, ಅದ್ಭುತ ಪುತ್ರನ ಕುರಿತು ಹೇಳುತ್ತೇನೆ.
03213003a ದೇವಾಸುರಾಃ ಪುರಾ ಯತ್ತಾ ವಿನಿಘ್ನಂತಃ ಪರಸ್ಪರಂ।
03213003c ತತ್ರಾಜಯನ್ಸದಾ ದೇವಾನ್ದಾನವಾ ಘೋರರೂಪಿಣಃ।।
ಹಿಂದೆ ದೇವತೆಗಳು ಮತ್ತು ಅಸುರರು ಪರಸ್ಪರರನ್ನು ಕೊಲ್ಲುವುದರಲ್ಲಿ ನಿರತರಾಗಿದ್ದರು. ಮತ್ತು ಘೋರರೂಪೀ ದಾನವರು ಯಾವಾಗಲೂ ದೇವತೆಗಳನ್ನು ಜಯಿಸುತ್ತಿದ್ದರು.
03213004a ವಧ್ಯಮಾನಂ ಬಲಂ ದೃಷ್ಟ್ವಾ ಬಹುಶಸ್ತೈಃ ಪುರಂದರಃ।
03213004c ಸ್ವಸೈನ್ಯನಾಯಕಾರ್ಥಾಯ ಚಿಂತಾಮಾಪ ಭೃಶಂ ತದಾ।।
ಬಹುಶಸ್ತ್ರಗಳಿಂದ ವಧಿಸಲ್ಪಡುತ್ತಿದ್ದ ತನ್ನ ಸೇನೆಯನ್ನು ನೋಡಿ ಪುರಂದರನು ತನ್ನ ಸೇನೆಯ ನಾಯಕನಿಗಾಗಿ ಬಹಳಷ್ಟು ಚಿಂತಿಸಿದನು.
03213005a ದೇವಸೇನಾಂ ದಾನವೈರ್ಯೋ ಭಗ್ನಾಂ ದೃಷ್ಟ್ವಾ ಮಹಾಬಲಃ।
03213005c ಪಾಲಯೇದ್ವೀರ್ಯಮಾಶ್ರಿತ್ಯ ಸ ಜ್ಞೇಯಃ ಪುರುಷೋ ಮಯಾ।।
“ದಾನವರಿಂದ ಭಗ್ನವಾಗುತ್ತಿರುವ ದೇವಸೇನೆಯನ್ನು ನೋಡಿ ವೀರತನದಿಂದ ಅದನ್ನು ಪಾಲಿಸುವ ಮಹಾಬಲಿ ಪುರುಷನನ್ನು ನಾನು ಹುಡುಕಬೇಕು.”
03213006a ಸ ಶೈಲಂ ಮಾನಸಂ ಗತ್ವಾ ಧ್ಯಾಯನ್ನರ್ಥಮಿಮಂ ಭೃಶಂ।
03213006c ಶುಶ್ರಾವಾರ್ತಸ್ವರಂ ಘೋರಮಥ ಮುಕ್ತಂ ಸ್ತ್ರಿಯಾ ತದಾ।।
ಆಗ ಅವನು ಮಾನಸ ಪರ್ವತಕ್ಕೆ ಹೋಗಿ ತುಂಬಾ ಆಳವಾದ ಧ್ಯಾನದಲ್ಲಿರಲು ಅಲ್ಲಿ ಘೋರವೂ ಆರ್ತವೂ ಆದ ಸ್ವರದಲ್ಲಿ ಸ್ತ್ರೀಯೋರ್ವಳ ಕೂಗನ್ನು ಕೇಳಿದನು:
03213007a ಅಭಿಧಾವತು ಮಾ ಕಶ್ಚಿತ್ಪುರುಷಸ್ತ್ರಾತು ಚೈವ ಹ।
03213007c ಪತಿಂ ಚ ಮೇ ಪ್ರದಿಶತು ಸ್ವಯಂ ವಾ ಪತಿರಸ್ತು ಮೇ।।
“ಯಾರಾದರೂ ಬೇಗ ಬಂದು ನನ್ನನ್ನು ರಕ್ಷಿಸಿ. ಅವನು ನನ್ನ ಪತಿಯಾಗಲಿ ಅಥವಾ ನನಗೆ ಓರ್ವ ಪತಿಯನ್ನು ಹುಡುಕಿಕೊಡಲಿ!”
03213008a ಪುರಂದರಸ್ತು ತಾಮಾಹ ಮಾ ಭೈರ್ನಾಸ್ತಿ ಭಯಂ ತವ।
03213008c ಏವಮುಕ್ತ್ವಾ ತತೋಽಪಶ್ಯತ್ಕೇಶಿನಂ ಸ್ಥಿತಮಗ್ರತಃ।।
“ಹೆದರಬೇಡ! ನಿನಗೇನೂ ಭಯವಿಲ್ಲ!” ಎಂದು ಅವಳಿಗೆ ಪುರಂದರನು ಹೇಳಿದನು. ಹೀಗೆ ಹೇಳುತ್ತಿದ್ದಂತೆಯೇ ಮುಂದೆ ನಿಂತಿರುವ ಕೇಶಿನಿಯನ್ನು ನೋಡಿದನು.
03213009a ಕಿರೀಟಿನಂ ಗದಾಪಾಣಿಂ ಧಾತುಮಂತಮಿವಾಚಲಂ।
03213009c ಹಸ್ತೇ ಗೃಹೀತ್ವಾ ತಾಂ ಕನ್ಯಾಮಥೈನಂ ವಾಸವೋಽಬ್ರವೀತ್।।
ಕಿರೀಟವನ್ನು ಧರಿಸಿ, ಗದೆಯನ್ನು ಹಿಡಿದು, ಕೈಯಲ್ಲಿ ಆ ಕನ್ಯೆಯನ್ನು ಹಿಡಿದು, ಖನಿಜಗಳ ಪರ್ವತದಂತೆ ನಿಂತಿದ್ದ ಅವನಿಗೆ ವಾಸವನು ಹೇಳಿದನು.
03213010a ಅನಾರ್ಯಕರ್ಮನ್ಕಸ್ಮಾತ್ತ್ವಮಿಮಾಂ ಕನ್ಯಾಂ ಜಿಹೀರ್ಷಸಿ।
03213010c ವಜ್ರಿಣಂ ಮಾಂ ವಿಜಾನೀಹಿ ವಿರಮಾಸ್ಯಾಃ ಪ್ರಬಾಧನಾತ್।।
“ಈ ಕನ್ಯೆಯಮೇಲೆ ಅನಾರ್ಯಕರ್ಮವನ್ನು ಎಸೆಗಲು ಏಕೆ ತೊಡಗಿದ್ದೀಯೆ. ನನ್ನನ್ನು ವಜ್ರಿಯೆಂದು ತಿಳಿ. ಇವಳಿಗೆ ಏನೂ ಅಪಾಯಮಾಡದಂತೆ ನಿನ್ನನ್ನು ತಡೆಯುತ್ತೇನೆ.”
03213011 ಕೇಶ್ಯುವಾಚ।
03213011a ವಿಸೃಜಸ್ವ ತ್ವಮೇವೈನಾಂ ಶಕ್ರೈಷಾ ಪ್ರಾರ್ಥಿತಾ ಮಯಾ।
03213011c ಕ್ಷಮಂ ತೇ ಜೀವತೋ ಗಂತುಂ ಸ್ವಪುರಂ ಪಾಕಶಾಸನ।।
ಕೇಶಿಯು ಹೇಳಿದನು: “ಶಕ್ರ! ಇವಳನ್ನು ನೀನು ಬಿಟ್ಟುಬಿಡು. ಇವಳನ್ನು ನಾನು ಬಯಸಿದ್ದೇನೆ. ಪಾಕಶಾಸನ! ಜೀವಂತವಾಗಿ ನೀನು ನಿನ್ನ ಪುರಕ್ಕೆ ಹೋಗಬಲ್ಲೆ.””
03213012 ಮಾರ್ಕಂಡೇಯ ಉವಾಚ।
03213012a ಏವಮುಕ್ತ್ವಾ ಗದಾಂ ಕೇಶೀ ಚಿಕ್ಷೇಪೇಂದ್ರವಧಾಯ ವೈ।
03213012c ತಾಮಾಪತಂತೀಂ ಚಿಚ್ಚೇದ ಮಧ್ಯೇ ವಜ್ರೇಣ ವಾಸವಃ।।
ಮಾರ್ಕಂಡೇಯನು ಹೇಳಿದನು: “ಹೀಗೆ ಹೇಳಿ ಕೇಶಿಯು ಇಂದ್ರನನ್ನು ವಧಿಸಲು ಗದೆಯನ್ನು ಎಸೆದನು. ಮೇಲೆ ಬೀಳುತ್ತಿರುವ ಅದನ್ನು ಮಧ್ಯದಲ್ಲಿಯೇ ವಾಸವನು ವಜ್ರದಿಂದ ತುಂಡರಿಸಿದನು.
03213013a ಅಥಾಸ್ಯ ಶೈಲಶಿಖರಂ ಕೇಶೀ ಕ್ರುದ್ಧೋ ವ್ಯವಾಸೃಜತ್।
03213013c ತದಾಪತಂತಂ ಸಂಪ್ರೇಕ್ಷ್ಯ ಶೈಲಶೃಂಗಂ ಶತಕ್ರತುಃ।
03213013e ಬಿಭೇದ ರಾಜನ್ವಜ್ರೇಣ ಭುವಿ ತನ್ನಿಪಪಾತ ಹ।।
ರಾಜನ್! ಆಗ ಕೃದ್ಧನಾದ ಕೇಶಿಯು ಕಲ್ಲುಗಳ ಶಿಖರವನ್ನು ಅವನ ಮೇಲೆ ಎಸೆದನು. ಬೀಳುತ್ತಿದ್ದ ಆ ಶೈಲಶೃಂಗವನ್ನು ನೋಡಿ ಶತಕ್ರತುವು ವಜ್ರದಿಂದ ತುಂಡರಿಸಲು ಅದು ಭೂಮಿಯ ಮೇಲೆ ಬಿದ್ದಿತು.
03213014a ಪತತಾ ತು ತದಾ ಕೇಶೀ ತೇನ ಶೃಂಗೇಣ ತಾಡಿತಃ।
03213014c ಹಿತ್ವಾ ಕನ್ಯಾಂ ಮಹಾಭಾಗಾಂ ಪ್ರಾದ್ರವದ್ಭೃಶಪೀಡಿತಃ।।
ಬೀಳುತ್ತಿರುವ ಆ ಶೃಂಗದಿಂದ ಪೆಟ್ಟುತಿಂದು ತುಂಬಾ ಪೀಡಿತನಾದ ಕೇಶಿಯು ಆ ಮಹಾಭಾಗೆ ಕನ್ಯೆಯನ್ನು ಅಲ್ಲಿಯೇ ಬಿಟ್ಟು ಓಡಿಹೋದನು.
03213015a ಅಪಯಾತೇಽಸುರೇ ತಸ್ಮಿಂಸ್ತಾಂ ಕನ್ಯಾಂ ವಾಸವೋಽಬ್ರವೀತ್।
03213015c ಕಾಸಿ ಕಸ್ಯಾಸಿ ಕಿಂ ಚೇಹ ಕುರುಷೇ ತ್ವಂ ಶುಭಾನನೇ।।
ಆ ಅಸುರನು ಹೊರಟುಹೋಗಲು ವಾಸವನು ಕನ್ಯೆಯನ್ನು ಕೇಳಿದನು: “ಶುಭಾನನೇ! ನೀನು ಯಾರು ಮತ್ತು ಯಾರವಳು? ಮತ್ತು ಇಲ್ಲಿ ನೀನು ಏನು ಮಾಡುತ್ತಿರುವೆ?”
03213016 ಕನ್ಯೋವಾಚ।
03213016a ಅಹಂ ಪ್ರಜಾಪತೇಃ ಕನ್ಯಾ ದೇವಸೇನೇತಿ ವಿಶ್ರುತಾ।
03213016c ಭಗಿನೀ ದೈತ್ಯಸೇನಾ ಮೇ ಸಾ ಪೂರ್ವಂ ಕೇಶಿನಾ ಹೃತಾ।।
ಕನ್ಯೆಯು ಹೇಳಿದಳು: “ನಾನು ದೇವಸೇನಾ ಎಂದು ವಿಶ್ರುತಳಾದ ಪ್ರಜಾಪತಿಯ ಮಗಳು. ನನ್ನ ತಂಗಿ ದೈತ್ಯಸೇನಳನ್ನು ಮೊದಲೇ ಕೇಶಿಯು ಅಪಹರಿಸಿಕೊಂಡು ಹೋಗಿದ್ದಾನೆ.
03213017a ಸಹೈವಾವಾಂ ಭಗಿನ್ಯೌ ತು ಸಖೀಭಿಃ ಸಹ ಮಾನಸಂ।
03213017c ಆಗಚ್ಚಾವೇಹ ರತ್ಯರ್ಥಮನುಜ್ಞಾಪ್ಯ ಪ್ರಜಾಪತಿಂ।।
ಪ್ರಜಾಪತಿಯ ಅಪ್ಪಣೆಯನ್ನು ಪಡೆದು ನಾವಿಬ್ಬರು ಸಹೋದರಿಯರೂ ಸಖಿಗಳ ಸಹಿತ ಈ ಮಾನಸ ಪರ್ವತಕ್ಕೆ ಸಂತೋಷಪಡಲು ಬರುತ್ತಿದ್ದೆವು.
03213018a ನಿತ್ಯಂ ಚಾವಾಂ ಪ್ರಾರ್ಥಯತೇ ಹರ್ತುಂ ಕೇಶೀ ಮಹಾಸುರಃ।
03213018c ಇಚ್ಚತ್ಯೇನಂ ದೈತ್ಯಸೇನಾ ನ ತ್ವಹಂ ಪಾಕಶಾಸನ।।
ಪಾಕಶಾಸನ! ನಿತ್ಯವೂ ಮಹಾಸುರ ಕೇಶಿಯು ನಮ್ಮನ್ನು ಬಯಸಿ ಕಾಡುತ್ತಿದ್ದನು. ದೈತ್ಯಸೇನೆಯು ಅವನನ್ನು ಕೇಳಿದಳು. ಆದರೆ ನಾನು ಕೇಳಲಿಲ್ಲ.
03213019a ಸಾ ಹೃತಾ ತೇನ ಭಗವನ್ಮುಕ್ತಾಹಂ ತ್ವದ್ಬಲೇನ ತು।
03213019c ತ್ವಯಾ ದೇವೇಂದ್ರ ನಿರ್ದಿಷ್ಟಂ ಪತಿಮಿಚ್ಚಾಮಿ ದುರ್ಜಯಂ।।
ಭಗವನ್! ಅವಳನ್ನು ಅವನು ಅಪಹರಿಸಿಕೊಂಡು ಹೋದನು. ಆದರೆ ನಿನ್ನ ಬಲದಿಂದ ನಾನು ಬಿಡುಗಡೆಹೊಂದಿದೆನು. ದೇವೇಂದ್ರ! ಈಗ ನೀನು ನನಗೆ ದುರ್ಜಯನಾದ ಪತಿಯನ್ನು ನಿರ್ಧರಿಸಿಕೊಡಬೇಕೆಂದು ಬಯಸುತ್ತೇನೆ.”
03213020 ಇಂದ್ರ ಉವಾಚ।
03213020a ಮಮ ಮಾತೃಷ್ವಸೇಯಾ ತ್ವಂ ಮಾತಾ ದಾಕ್ಷಾಯಣೀ ಮಮ।
03213020c ಆಖ್ಯಾತಂ ತ್ವಹಮಿಚ್ಚಾಮಿ ಸ್ವಯಮಾತ್ಮಬಲಂ ತ್ವಯಾ।।
ಇಂದ್ರನು ಹೇಳಿದನು: “ನೀನು ನನ್ನ ಮಾತೆ ದಾಕ್ಷಾಯಣಿಯ ತಂಗಿಯ ಮಗಳು. ಈಗ ನಿನ್ನ ಬಲದ ಕುರಿತು ನೀನೇ ಹೇಳಬೇಕೆಂದು ನಾನು ಬಯಸುತ್ತೇನೆ.”
03213021 ಕನ್ಯೋವಾಚ।
03213021a ಅಬಲಾಹಂ ಮಹಾಬಾಹೋ ಪತಿಸ್ತು ಬಲವಾನ್ಮಮ।
03213021c ವರದಾನಾತ್ಪಿತುರ್ಭಾವೀ ಸುರಾಸುರನಮಸ್ಕೃತಃ।।
ಕನ್ಯೆಯು ಹೇಳಿದಳು: “ಮಹಾಬಾಹೋ! ನಾನು ಅಬಲೆ; ಆದರೆ ನನ್ನ ಪತಿಯು ಬಲವಂತ. ತಂದೆಯ ವರದಾನದಂತೆ ಅವನನ್ನು ಸುರಾಸರರಿಂದಲೂ ನಮಸ್ಕರಿಸಲ್ಪಡುವವನಾಗುತ್ತಾನೆ.”
03213022 ಇಂದ್ರ ಉವಾಚ।
03213022a ಕೀದೃಶಂ ವೈ ಬಲಂ ದೇವಿ ಪತ್ಯುಸ್ತವ ಭವಿಷ್ಯತಿ।
03213022c ಏತದಿಚ್ಚಾಮ್ಯಹಂ ಶ್ರೋತುಂ ತವ ವಾಕ್ಯಮನಿಂದಿತೇ।।
ಇಂದ್ರನು ಹೇಳಿದನು: “ದೇವಿ! ಅನಿಂದಿತೇ! ನಿನ್ನ ಪತಿಯು ಯಾವರೀತಿಯ ಬಲವನ್ನು ಹೊಂದಿರುತ್ತಾನೆ? ಇದರ ಕುರಿತಾದ ನಿನ್ನ ಮಾತನ್ನು ಕೇಳಲು ಬಯಸುತ್ತೇನೆ.”
03213023 ಕನ್ಯೋವಾಚ।
03213023a ದೇವದಾನವಯಕ್ಷಾಣಾಂ ಕಿನ್ನರೋರಗರಕ್ಷಸಾಂ।
03213023c ಜೇತಾ ಸ ದೃಷ್ಟೋ ದುಷ್ಟಾನಾಂ ಮಹಾವೀರ್ಯೋ ಮಹಾಬಲಃ।।
03213024a ಯಸ್ತು ಸರ್ವಾಣಿ ಭೂತಾನಿ ತ್ವಯಾ ಸಹ ವಿಜೇಷ್ಯತಿ।
03213024c ಸ ಹಿ ಮೇ ಭವಿತಾ ಭರ್ತಾ ಬ್ರಹ್ಮಣ್ಯಃ ಕೀರ್ತಿವರ್ಧನಃ।।
ಕನ್ಯೆಯು ಹೇಳಿದಳು: “ದೇವ-ದಾನವ-ಯಕ್ಷ-ಕಿನ್ನರ-ಉರಗ- ರಾಕ್ಷಸರನ್ನು ಗೆಲ್ಲುವ, ನಿನ್ನೊಡನೆ ಎಲ್ಲ ಭೂತಗಳನ್ನೂ ಜಯಿಸಬಲ್ಲ, ದುಷ್ಟರನ್ನು ನಿಯಂತ್ರಿಸುವ, ಮಹಾವೀರ್ಯ, ಮಹಾಬಲ, ಕೀರ್ತಿವರ್ಧನ, ಬ್ರಹ್ಮಣ್ಯನೇ ನನ್ನ ಪತಿಯಾಗುತ್ತಾನೆ.””
03213025 ಮಾರ್ಕಂಡೇಯ ಉವಾಚ।
03213025a ಇಂದ್ರಸ್ತಸ್ಯಾ ವಚಃ ಶ್ರುತ್ವಾ ದುಃಖಿತೋಽಚಿಂತಯದ್ಭೃಶಂ।
03213025c ಅಸ್ಯಾ ದೇವ್ಯಾಃ ಪತಿರ್ನಾಸ್ತಿ ಯಾದೃಶಂ ಸಂಪ್ರಭಾಷತೇ।।
ಮಾರ್ಕಂಡೇಯನು ಹೇಳಿದನು: “ಅವಳ ಮಾತುಗಳನ್ನು ಕೇಳಿ ಇಂದ್ರನು ತುಂಬಾ ದುಃಖಿತನಾಗಿ ಆಲೋಚಿಸಿದನು: “ಈ ದೇವಿಯು ಹೇಳುವಂತಹ ಪತಿಯು ಇವಳಿಗೆ ಇಲ್ಲವಲ್ಲ!”
03213026a ಅಥಾಪಶ್ಯತ್ಸ ಉದಯೇ ಭಾಸ್ಕರಂ ಭಾಸ್ಕರದ್ಯುತಿಃ।
03213026c ಸೋಮಂ ಚೈವ ಮಹಾಭಾಗಂ ವಿಶಮಾನಂ ದಿವಾಕರಂ।।
ಆಗ ಆ ಭಾಸ್ಕರದ್ಯುತಿಯು ಉದಯಿಸುತ್ತಿರುವ ಭಾಸ್ಕರನನ್ನೂ ಮತ್ತು ದಿವಾಕರನನ್ನು ಪ್ರವೇಶಿಸುತ್ತಿರುವ ಮಹಾಭಾಗ ಸೋಮನನ್ನು ನೋಡಿದನು.
03213027a ಅಮಾವಾಸ್ಯಾಂ ಸಂಪ್ರವೃತ್ತಂ ಮುಹೂರ್ತಂ ರೌದ್ರಮೇವ ಚ।
03213027c ದೇವಾಸುರಂ ಚ ಸಂಗ್ರಾಮಂ ಸೋಽಪಶ್ಯದುದಯೇ ಗಿರೌ।।
ಆ ಅಮವಾಸ್ಯೆಯ ರೌದ್ರ ಮುಹೂರ್ತದಲ್ಲಿ ಅವನು ಉದಯಗಿರಿಯಲ್ಲಿ ದೇವಾಸುರರ ಸಂಗ್ರಾಮವನ್ನು ನೋಡಿದನು.
03213028a ಲೋಹಿತೈಶ್ಚ ಘನೈರ್ಯುಕ್ತಾಂ ಪೂರ್ವಾಂ ಸಂಧ್ಯಾಂ ಶತಕ್ರತುಃ।
03213028c ಅಪಶ್ಯಲ್ಲೋಹಿತೋದಂ ಚ ಭಗವಾನ್ವರುಣಾಲಯಂ।।
ಶತಕ್ರತುವು ಆ ಪೂರ್ವ ಸಂಧ್ಯೆಯು ಕೆಂಪು ಮೋಡಗಳಿಂದ ಕವಿದಿರುವುದನ್ನೂ, ಭಗವಾನ್ ಸಮುದ್ರವು ಕೆಂಪಾಗಿರುವುದನ್ನು ನೋಡಿದನು.
03213029a ಭೃಗುಭಿಶ್ಚಾಂಗಿರೋಭಿಶ್ಚ ಹುತಂ ಮಂತ್ರೈಃ ಪೃಥಗ್ವಿಧೈಃ।
03213029c ಹವ್ಯಂ ಗೃಹೀತ್ವಾ ವಹ್ನಿಂ ಚ ಪ್ರವಿಶಂತಂ ದಿವಾಕರಂ।।
ಅಗ್ನಿಯು ಭೃಗು ಮತ್ತು ಅಂಗಿರಸರು ಮಂತ್ರಗಳಿಂದ ಹಾಕಿದ ವಿವಿಧ ಹವಿಸ್ಸುಗಳನ್ನು ಎತ್ತಿಕೊಂಡು ದಿವಾಕರನನ್ನು ಪ್ರವೇಶಿಸುತ್ತಿರುವುದನ್ನೂ ನೋಡಿದನು.
03213030a ಪರ್ವ ಚೈವ ಚತುರ್ವಿಂಶಂ ತದಾ ಸೂರ್ಯಮುಪಸ್ಥಿತಂ।
03213030c ತಥಾ ಧರ್ಮಗತಂ ರೌದ್ರಂ ಸೋಮಂ ಸೂರ್ಯಗತಂ ಚ ತಂ।।
ಆಗ ಹದಿನಾಲ್ಕು ಪರ್ವಗಳೂ ಸೂರ್ಯನ ಉಪಸ್ಥಿತಿಯಲ್ಲಿರುವುದನ್ನು ಮತ್ತು ಹಾಗೆಯೇ ರೌದ್ರನಾದ ಸೋಮನು ಸೂರ್ಯನಲ್ಲಿಗೆ ಹೋಗುವುದನ್ನು ನೋಡಿದನು.
03213031a ಸಮಾಲೋಕ್ಯೈಕತಾಮೇವ ಶಶಿನೋ ಭಾಸ್ಕರಸ್ಯ ಚ।
03213031c ಸಮವಾಯಂ ತು ತಂ ರೌದ್ರಂ ದೃಷ್ಟ್ವಾ ಶಕ್ರೋ ವ್ಯಚಿಂತಯತ್।।
ಈ ರೀತಿಯ ಶಶಿ ಮತ್ತು ಭಾಸ್ಕರರು ಒಂದಾಗುವ ಆ ರೌದ್ರಸಮಯವನ್ನು ನೋಡಿ ಶಕ್ರನು ಯೋಚಿಸಿದನು:
03213032a ಏಷ ರೌದ್ರಶ್ಚ ಸಂಘಾತೋ ಮಹಾನ್ಯುಕ್ತಶ್ಚ ತೇಜಸಾ।
03213032c ಸೋಮಸ್ಯ ವಹ್ನಿಸೂರ್ಯಾಭ್ಯಾಮದ್ಭುತೋಽಯಂ ಸಮಾಗಮಃ।
03213032e ಜನಯೇದ್ಯಂ ಸುತಂ ಸೋಮಃ ಸೋಽಸ್ಯಾ ದೇವ್ಯಾಃ ಪತಿರ್ಭವೇತ್।।
“ಈ ಸೋಮ ಮತ್ತು ಸೂರ್ಯರ ಅದ್ಭುತ ಸಮಾಗಮದ ವಹ್ನಿಯು ರೌದ್ರ ಮತ್ತು ತೇಜಸ್ವಿಯಾಗಿದ್ದು ಮಹಾ ಯುದ್ಧವನ್ನು ಸೂಚಿಸುತ್ತದೆ. ಇಂದು ಸೋಮನಲ್ಲಿ ಜನಿಸುವ ಮಗನು ಈ ದೇವಿಯ ಪತಿಯಾಗುತ್ತಾನೆ.
03213033a ಅಗ್ನಿಶ್ಚೈತೈರ್ಗುಣೈರ್ಯುಕ್ತಃ ಸರ್ವೈರಗ್ನಿಶ್ಚ ದೇವತಾ।
03213033c ಏಷ ಚೇಜ್ಜನಯೇದ್ಗರ್ಭಂ ಸೋಽಸ್ಯಾ ದೇವ್ಯಾಃ ಪತಿರ್ಭವೇತ್।।
ಅಗ್ನಿಯೂ ಕೂಡ ಈ ಗುಣಗಳಿಂದ ಕೂಡಿದ್ದು ಅಗ್ನಿಯೂ ಎಲ್ಲರ ದೇವತೆಯಾಗಿದ್ದಾನೆ. ಇವನ ಗರ್ಭದಿಂದಲೂ ಜನಿಸುವವನು ಈ ದೇವಿಯ ಪತಿಯಾಗುತ್ತಾನೆ.”
03213034a ಏವಂ ಸಂಚಿಂತ್ಯ ಭಗವಾನ್ಬ್ರಹ್ಮಲೋಕಂ ತದಾ ಗತಃ।
03213034c ಗೃಹೀತ್ವಾ ದೇವಸೇನಾಂ ತಾಮವಂದತ್ಸ ಪಿತಾಮಹಂ।
03213034e ಉವಾಚ ಚಾಸ್ಯಾ ದೇವ್ಯಾಸ್ತ್ವಂ ಸಾಧು ಶೂರಂ ಪತಿಂ ದಿಶ।।
ಹೀಗೆ ಯೋಚಿಸಿ ಆ ಭಗವಾನನು ದೇವಸೇನೆಯನ್ನು ಕರೆದುಕೊಂಡು ಬ್ರಹ್ಮಲೋಕಕ್ಕೆ ಹೋದನು. ಪಿತಾಮಹನಿಗೆ ವಂದಿಸಿ “ಈ ದೇವಿಗೆ ನೀನು ಓರ್ವ ಸಾಧು ಶೂರನನ್ನು ಪತಿಯನ್ನಾಗಿ ನಿರ್ಧರಿಸು” ಎಂದನು.
03213035 ಬ್ರಹ್ಮೋವಾಚ।
03213035a ಯಥೈತಚ್ಚಿಂತಿತಂ ಕಾರ್ಯಂ ತ್ವಯಾ ದಾನವಸೂದನ।
03213035c ತಥಾ ಸ ಭವಿತಾ ಗರ್ಭೋ ಬಲವಾನುರುವಿಕ್ರಮಃ।।
ಬ್ರಹ್ಮನು ಹೇಳಿದನು: “ದಾನವಸೂದನ! ನೀನು ಏನನ್ನು ಯೋಚಿಸಿದ್ದೀಯೋ ಹಾಗೆಯೇ ಆಗುತ್ತದೆ. ಆ ಗರ್ಭವು ಬಲವಾನನೂ ವಿಕ್ರಮಿಯೂ ಆಗುತ್ತಾನೆ.
03213036a ಸ ಭವಿಷ್ಯತಿ ಸೇನಾನೀಸ್ತ್ವಯಾ ಸಹ ಶತಕ್ರತೋ।
03213036c ಅಸ್ಯಾ ದೇವ್ಯಾಃ ಪತಿಶ್ಚೈವ ಸ ಭವಿಷ್ಯತಿ ವೀರ್ಯವಾನ್।।
ಶತಕ್ರತೋ! ನಿನ್ನೊಡನೆ ಅವನು ಸೇನಾನಿಯಾಗುತ್ತಾನೆ. ಆ ವೀರ್ಯವಾನನು ಈ ದೇವಿಯ ಪತಿಯೂ ಆಗುತ್ತಾನೆ.””
03213037 ಮಾರ್ಕಂಡೇಯ ಉವಾಚ।
03213037a ಏತಚ್ಚ್ರುತ್ವಾ ನಮಸ್ತಸ್ಮೈ ಕೃತ್ವಾಸೌ ಸಹ ಕನ್ಯಯಾ।
03213037c ತತ್ರಾಭ್ಯಗಚ್ಚದ್ದೇವೇಂದ್ರೋ ಯತ್ರ ದೇವರ್ಷಯೋಽಭವನ್।
03213037e ವಸಿಷ್ಠಪ್ರಮುಖಾ ಮುಖ್ಯಾ ವಿಪ್ರೇಂದ್ರಾಃ ಸುಮಹಾವ್ರತಾಃ।।
ಮಾರ್ಕಂಡೇಯನು ಹೇಳಿದನು: “ಇದನ್ನು ಕೇಳಿ ಅವನಿಗೆ ನಮಸ್ಕರಿಸಿ ದೇವೇಂದ್ರನು ಆ ಕನ್ಯೆಯೊಡನೆ ವಸಿಷ್ಠ ಪ್ರಮುಖರಾದ ಮುಖ್ಯ ಸುಮಹಾವ್ರತ ವಿಪ್ರೇಂದ್ರ ದೇವರ್ಷಿಗಳಿರುವಲ್ಲಿಗೆ ಹೋದನು.
03213038a ಭಾಗಾರ್ಥಂ ತಪಸೋಪಾತ್ತಂ ತೇಷಾಂ ಸೋಮಂ ತಥಾಧ್ವರೇ।
03213038c ಪಿಪಾಸವೋ ಯಯುರ್ದೇವಾಃ ಶತಕ್ರತುಪುರೋಗಮಾಃ।।
ಸೋಮದ ಭಾಗಾರ್ಥಿಗಳಾಗಿ ಆ ತಪಸ್ವಿಗಳ ಅಧ್ವರಕ್ಕೆ ಶತಕ್ರತುವನ್ನು ಮುಂದಿರಿಸಿಕೊಂಡು ದೇವತೆಗಳು ಹೋದರು.
03213039a ಇಷ್ಟಿಂ ಕೃತ್ವಾ ಯಥಾನ್ಯಾಯಂ ಸುಸಮಿದ್ಧೇ ಹುತಾಶನೇ।
03213039c ಜುಹುವುಸ್ತೇ ಮಹಾತ್ಮಾನೋ ಹವ್ಯಂ ಸರ್ವದಿವೌಕಸಾಂ।।
ಯಥಾನ್ಯಾಯವಾಗಿ ಚೆನ್ನಾಗಿ ಉರಿಯುತ್ತಿದ್ದ ಅಗ್ನಿಯಲ್ಲಿ ಇಷ್ಟಿಯನ್ನು ಮಾಡಿ ಆ ಮಹಾತ್ಮರು ಎಲ್ಲ ದಿವೌಕಸರಿಗೆ ಹವಿಸ್ಸನ್ನು ನೀಡಿದರು.
03213040a ಸಮಾಹೂತೋ ಹುತವಹಃ ಸೋಽದ್ಭುತಃ ಸೂರ್ಯಮಂಡಲಾತ್।
03213040c ವಿನಿಃಸೃತ್ಯಾಯಯೌ ವಹ್ನಿರ್ವಾಗ್ಯತೋ ವಿಧಿವತ್ಪ್ರಭುಃ।
03213040e ಆಗಮ್ಯಾಹವನೀಯಂ ವೈ ತೈರ್ದ್ವಿಜೈರ್ಮಂತ್ರತೋ ಹುತಂ।।
ಸೂರ್ಯಮಂಡಲದಿಂದ ಅಗ್ನಿ ಅದ್ಭುತನನ್ನು ಮಂತ್ರಗಳ ಮೂಲಕ ಕರೆಯಲಾಯಿತು. ಆ ಪ್ರಭು ಅಗ್ನಿಯು ವಿಧಿವತ್ತಾಗಿ ಅಲ್ಲಿಂದ ಹೊರಟು ದ್ವಿಜರು ಮಂತ್ರಪೂರ್ವಕವಾಗಿ ನೀಡುತ್ತಿದ್ದ ಆಹುತಿಯನ್ನು ಕೊಂಡೊಯ್ಯಲು ಆಗಮಿಸಿದನು.
03213041a ಸ ತತ್ರ ವಿವಿಧಂ ಹವ್ಯಂ ಪ್ರತಿಗೃಹ್ಯ ಹುತಾಶನಃ।
03213041c ಋಷಿಭ್ಯೋ ಭರತಶ್ರೇಷ್ಠ ಪ್ರಾಯಚ್ಚತ ದಿವೌಕಸಾಂ।।
ಭರತಶ್ರೇಷ್ಠ! ಅಲ್ಲಿ ಋಷಿಗಳು ನೀಡಿದ ವಿವಿಧ ಹವ್ಯಗಳನ್ನು ತೆಡೆದುಕೊಂಡು ಆ ಅಗ್ನಿಯು ದಿವೌಕಸರಿಗೆ ನೀಡಿದನು.
03213042a ನಿಷ್ಕ್ರಾಮಂಶ್ಚಾಪ್ಯಪಶ್ಯತ್ಸ ಪತ್ನೀಸ್ತೇಷಾಂ ಮಹಾತ್ಮನಾಂ।
03213042c ಸ್ವೇಷ್ವಾಶ್ರಮೇಷೂಪವಿಷ್ಟಾಃ ಸ್ನಾಯಂತೀಶ್ಚ ಯಥಾಸುಖಂ।।
ಹಿಂದಿರುಗಿ ಬರುವಾಗ ಅವನು ಮಹಾತ್ಮ ಋಷಿಗಳ ಪತ್ನಿಯರು ಯಥಾಸುಖವಾಗಿ ಹಾಸಿಗೆಗಳ ಮೇಲೆ ಮಲಗಿಕೊಂಡಿರುವುದನ್ನು ನೋಡಿದನು.
03213043a ರುಕ್ಮವೇದಿನಿಭಾಸ್ತಾಸ್ತು ಚಂದ್ರಲೇಖಾ ಇವಾಮಲಾಃ।
03213043c ಹುತಾಶನಾರ್ಚಿಪ್ರತಿಮಾಃ ಸರ್ವಾಸ್ತಾರಾ ಇವಾದ್ಭುತಾಃ।।
ಅವರೆಲ್ಲರೂ ಬಂಗಾರದ ವೇದಿಗಳಂತೆ ಹೊಳೆಯುತ್ತಿದ್ದರು; ಚಂದ್ರಲೇಖದಂತೆ ಶುಭ್ರರಾಗಿದ್ದರು; ಉರಿಯುತ್ತಿರುವ ಅಗ್ನಿಯಂತಿದ್ದರು ಮತ್ತು ನಕ್ಷತ್ರಗಳಂತೆ ಅದ್ಭುತರಾಗಿದ್ದರು.
03213044a ಸ ತದ್ಗತೇನ ಮನಸಾ ಬಭೂವ ಕ್ಷುಭಿತೇಂದ್ರಿಯಃ।
03213044c ಪತ್ನೀರ್ದೃಷ್ಟ್ವಾ ದ್ವಿಜೇಂದ್ರಾಣಾಂ ವಹ್ನಿಃ ಕಾಮವಶಂ ಯಯೌ।।
ಆ ದ್ವಿಜೇಂದ್ರರ ಪತ್ನಿಯರನ್ನು ನೋಡಿ ಅಗ್ನಿಯ ಮನಸ್ಸು ಕ್ಷೋಭೆಗೊಂಡಿತು, ಮತ್ತು ಇಂದ್ರಿಯವು ಕಾಮವಶವಾಯಿತು.
03213045a ಸ ಭೂಯಶ್ಚಿಂತಯಾಮಾಸ ನ ನ್ಯಾಯ್ಯಂ ಕ್ಷುಭಿತೋಽಸ್ಮಿ ಯತ್।
03213045c ಸಾಧ್ವೀಃ ಪತ್ನೀರ್ದ್ವಿಜೇಂದ್ರಾಣಾಮಕಾಮಾಃ ಕಾಮಯಾಮ್ಯಹಂ।।
ಅವನು ಮತ್ತೆ ಮತ್ತೆ ಯೋಚಿಸಿದನು: “ನಾನು ಹೀಗೆ ಕ್ಷೋಭೆಗೊಳಗಾಗುವುದು ಸರಿಯಲ್ಲ. ದ್ವಿಜೇಂದ್ರರ ಈ ಪತ್ನಿಯರು ಸಾಧ್ವಿಯರು. ಬಯಸಬಾರದವರನ್ನು ನಾನು ಬಯಸುತ್ತಿದ್ದೇನೆ.
03213046a ನೈತಾಃ ಶಕ್ಯಾ ಮಯಾ ದ್ರಷ್ಟುಂ ಸ್ಪ್ರಷ್ಟುಂ ವಾಪ್ಯನಿಮಿತ್ತತಃ।
03213046c ಗಾರ್ಹಪತ್ಯಂ ಸಮಾವಿಶ್ಯ ತಸ್ಮಾತ್ಪಶ್ಯಾಮ್ಯಭೀಕ್ಷ್ಣಶಃ।।
ನಾನು ಇವರ ಮೇಲೆ ನನ್ನ ದೃಷ್ಟಿಯನ್ನು ಹಾಯಿಸಲೂ ಶಕ್ಯನಿಲ್ಲ. ಅವರಾಗಿ ಬಯಸದೇ ನಾನು ಅವರನ್ನು ಸ್ಪರ್ಷಿಸಲೂ ಸಾಧ್ಯವಿಲ್ಲ. ಆದುದರಿಂದ ನಾನು ಗಾರ್ಹಪತ್ಯನಾಗಿದ್ದುಕೊಂಡು ಅವರನ್ನು ನಿತ್ಯವೂ ನೋಡುತ್ತಾ ತೃಪ್ತಿಪಡೆಯುತ್ತೇನೆ.”
03213047a ಸಂಸ್ಪೃಶನ್ನಿವ ಸರ್ವಾಸ್ತಾಃ ಶಿಖಾಭಿಃ ಕಾಂಚನಪ್ರಭಾಃ।
03213047c ಪಶ್ಯಮಾನಶ್ಚ ಮುಮುದೇ ಗಾರ್ಹಪತ್ಯಂ ಸಮಾಶ್ರಿತಃ।।
ಅವನು ಗಾರ್ಹಪತ್ಯನಾಗಿ ಆ ಎಲ್ಲ ಕಾಂಚನಪ್ರಭೆಗಳುಳ್ಳವರನ್ನೂ ತನ್ನ ಜ್ವಾಲೆಗಳಿಂದ ಸ್ಪರ್ಷಿಸುತ್ತಾ ನೋಡುತ್ತಾ ಮುದದಿಂದಿದ್ದನು.
03213048a ನಿರುಷ್ಯ ತತ್ರ ಸುಚಿರಮೇವಂ ವಹ್ನಿರ್ವಶಂ ಗತಃ।
03213048c ಮನಸ್ತಾಸು ವಿನಿಕ್ಷಿಪ್ಯ ಕಾಮಯಾನೋ ವರಾಂಗನಾಃ।।
ಆ ವರಾಂಗನೆಯರನ್ನು ಕಾಮಿಸುತ್ತಾ ಮನಸ್ಸನ್ನು ಅವರ ವಶದಲ್ಲಿಟ್ಟು ಅಗ್ನಿಯು ಅಲ್ಲಿ ಬಹಳ ಕಾಲ ವಾಸಿಸಿದನು.
03213049a ಕಾಮಸಂತಪ್ತಹೃದಯೋ ದೇಹತ್ಯಾಗೇ ಸುನಿಶ್ಚಿತಃ।
03213049c ಅಲಾಭೇ ಬ್ರಾಹ್ಮಣಸ್ತ್ರೀಣಾಮಗ್ನಿರ್ವನಮುಪಾಗತಃ।।
ಬ್ರಾಹ್ಮಣಸ್ತ್ರೀಯರು ದೊರಕದೇ ಇದ್ದಾಗ ಕಾಮಸಂತಪ್ತಹೃದಯನಾಗಿ ಅಗ್ನಿಯು ದೇಹತ್ಯಾಗಮಾಡಲು ನಿರ್ಧರಿಸಿ ವನಕ್ಕೆ ಬಂದನು.
03213050a ಸ್ವಾಹಾ ತಂ ದಕ್ಷದುಹಿತಾ ಪ್ರಥಮಂ ಕಾಮಯತ್ತದಾ।
03213050c ಸಾ ತಸ್ಯ ಚಿದ್ರಮನ್ವೈಚ್ಚಚ್ಚಿರಾತ್ಪ್ರಭೃತಿ ಭಾಮಿನೀ।।
03213050e ಅಪ್ರಮತ್ತಸ್ಯ ದೇವಸ್ಯ ನ ಚಾಪಶ್ಯದನಿಂದಿತಾ।।
ಇದಕ್ಕೆ ಮೊದಲೇ ದಕ್ಷನ ಮಗಳು ಸ್ವಾಹಾಳು ಅವನನ್ನು ಬಯಸಿದ್ದಳು. ಅವಳು ತುಂಬಾ ಸಮಯದಿಂದ ಅವನಲ್ಲಿಯ ದುರ್ಬಲತೆಯನ್ನು ಕಾಣಲು ಕಾದುಕೊಂಡಿದ್ದಳು. ಆದರೆ ಆ ಭಾಮಿನಿ ಅನಿಂದಿತೆಯು ಅಲ್ಲಿಯವರೆಗೆ ಆ ದೇವನಲ್ಲಿ ಅಪ್ರಮತ್ತತೆಯನ್ನು ಕಂಡಿರಲಿಲ್ಲ.
03213051a ಸಾ ತಂ ಜ್ಞಾತ್ವಾ ಯಥಾವತ್ತು ವಹ್ನಿಂ ವನಮುಪಾಗತಂ।
03213051c ತತ್ತ್ವತಃ ಕಾಮಸಂತಪ್ತಂ ಚಿಂತಯಾಮಾಸ ಭಾಮಿನೀ।।
ಕಾಮಸಂತಪ್ತನಾಗಿ ಅಗ್ನಿಯು ವನಕ್ಕೆ ಬಂದಿರುವುದನ್ನು ತಿಳಿದ ಆ ಭಾಮಿನಿಯು ಆಲೋಚಿಸಿದಳು:
03213052a ಅಹಂ ಸಪ್ತರ್ಷಿಪತ್ನೀನಾಂ ಕೃತ್ವಾ ರೂಪಾಣಿ ಪಾವಕಂ।
03213052c ಕಾಮಯಿಷ್ಯಾಮಿ ಕಾಮಾರ್ತಂ ತಾಸಾಂ ರೂಪೇಣ ಮೋಹಿತಂ।
03213052e ಏವಂ ಕೃತೇ ಪ್ರೀತಿರಸ್ಯ ಕಾಮಾವಾಪ್ತಿಶ್ಚ ಮೇ ಭವೇತ್।।
“ನಾನು ಸಪ್ತರ್ಷಿಗಳ ಪತ್ನಿಯರ ರೂಪವನ್ನು ತಾಳಿ ಅವರ ರೂಪಗಳಿಂದ ಮೋಹಿತನಾಗಿ ಕಾಮಾರ್ತನಾಗಿರುವ ಪಾವಕನನ್ನು ಕಾಮಿಸುತ್ತೇನೆ. ಹೀಗೆ ಮಾಡುವುದರಿಂದ ಅವನೂ ಸಂತೋಷಗೊಳ್ಳುತ್ತಾನೆ ಮತ್ತು ನನ್ನ ಆಸೆಯೂ ಪೂರೈಸುತ್ತದೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗೀರಸೋಪಾಖ್ಯಾನೇ ಸ್ಕಂದೋತ್ಪತ್ತೌ ತ್ರಯೋದಶಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗೀರಸೋಪಾಖ್ಯಾನದಲ್ಲಿ ಸ್ಕಂದೋತ್ಪತ್ತಿಯಲ್ಲಿ ಇನ್ನೂರಾಹದಿಮೂರನೆಯ ಅಧ್ಯಾಯವು.
-
ಸ್ಕಂದನ ಜನನದ ಕುರಿತಾದ ಹಲವಾರು ಕಥೆಗಳಿವೆ. ಮಹಾಭಾರತದಲ್ಲಿಯೇ ಮುಂದೆ ಶಲ್ಯಪರ್ವದಲ್ಲಿ ಬರುವ ಸ್ಕಂದನ ಕಥೆಗೂ ಇಲ್ಲಿಯ ಕಥೆಗೂ ವ್ಯತ್ಯಾಸಗಳಿವೆ. ಮಹಾಭಾರತದಲ್ಲಿಯೇ ಇರುವ ಈ ಎರಡು ಕಥೆಗಳು ಸ್ಕಾಂದ ಪುರಾಣದ ಮಾಹೇಶ್ವರ ಖಂಡದ ಎರಡನೆಯ ಕುಮಾರಿಕಾ ಖಂಡದಲ್ಲಿ 29ನೆಯ ಅಧ್ಯಾಯದಲ್ಲಿ ಕೊಟ್ಟಿರುವ ಸ್ಕಂದೋತ್ಪತ್ತಿಯ ಕಥೆಗಿಂಥ ಭಿನ್ನವಾಗಿವೆ. ↩︎