212 ಅಂಗಿರಸೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 212

ಸಾರ

ಅಗ್ನಿಯು ನೀರನ್ನು ಪ್ರವೇಶಿಸಿದುದು, ಪುನಃ ಅಥರ್ವಾಂಗಿರಸನ ಮೂಲಕ ಪ್ರಕಟವಾದುದು (1-30).

03212001 ಮಾರ್ಕಂಡೇಯ ಉವಾಚ।
03212001a ಆಪಸ್ಯ ಮುದಿತಾ ಭಾರ್ಯಾ ಸಹಸ್ಯ ಪರಮಾ ಪ್ರಿಯಾ।
03212001c ಭೂಪತಿರ್ಭುವಭರ್ತಾ ಚ ಜನಯತ್ಪಾವಕಂ ಪರಂ।।

ಮಾರ್ಕಂಡೇಯನು ಹೇಳಿದನು: “ಆಪನ ಪರಮ ಪ್ರಿಯೆ ಭಾರ್ಯೆ ಮುದಿತಾಳು ಭೂಪತಿಯೂ ಭುವಭರ್ತನೂ ಪರಮನೂ ಆದ ಪಾವಕನಿಗೆ ಜನ್ಮವಿತ್ತಳು.

03212002a ಭೂತಾನಾಂ ಚಾಪಿ ಸರ್ವೇಷಾಂ ಯಂ ಪ್ರಾಹುಃ ಪಾವಕಂ ಪತಿಂ।
03212002c ಆತ್ಮಾ ಭುವನಭರ್ತೇತಿ ಸಾನ್ವಯೇಷು ದ್ವಿಜಾತಿಷು।।

ಈ ಅಗ್ನಿಯು ಎಲ್ಲ ಭೂತಗಳ ಒಡೆಯನೆಂದೂ, ಆತ್ಮನೆಂದೂ, ಭುವನವನ್ನು ಪಾಲಿಸುವವನೆಂದೂ ದ್ವಿಜರು ಹೇಳುತ್ತಾರೆ.

03212003a ಮಹತಾಂ ಚೈವ ಭೂತಾನಾಂ ಸರ್ವೇಷಾಮಿಹ ಯಃ ಪತಿಃ।
03212003c ಭಗವಾನ್ಸ ಮಹಾತೇಜಾ ನಿತ್ಯಂ ಚರತಿ ಪಾವಕಃ।।

ಆ ಭಗವಾನ್ ಪಾವಕನು ಮಹಾತೇಜಸ್ವಿ. ಇಲ್ಲಿರುವ ಎಲ್ಲ ಭೂತಗಳ ಪತಿ ಮತ್ತು ನಿತ್ಯವೂ ಸಂಚರಿಸುವವನು.

03212004a ಅಗ್ನಿರ್ಗೃಹಪತಿರ್ನಾಮ ನಿತ್ಯಂ ಯಜ್ಞೇಷು ಪೂಜ್ಯತೇ।
03212004c ಹುತಂ ವಹತಿ ಯೋ ಹವ್ಯಮಸ್ಯ ಲೋಕಸ್ಯ ಪಾವಕಃ।।

ಆ ಅಗ್ನಿಯು ಗೃಹಪತಿ ಎಂಬ ಹೆಸರಿನಲ್ಲಿ ನಿತ್ಯವೂ ಯಜ್ಞಗಳಲ್ಲಿ ಪೂಜಿಸಲ್ಪಡುತ್ತಾನೆ. ಮತ್ತು ಆ ಪಾವಕನು ಈ ಲೋಕದ ಎಲ್ಲ ಆಹುತಿಗೊಂಡ ಹವ್ಯಗಳನ್ನೂ ಕೊಂಡೊಯ್ಯುತ್ತಾನೆ.

03212005a ಅಪಾಂ ಗರ್ಭೋ ಮಹಾಭಾಗಃ ಸಹಪುತ್ರೋ ಮಹಾದ್ಭುತಃ।
03212005c ಭೂಪತಿರ್ಭುವಭರ್ತಾ ಚ ಮಹತಃ ಪತಿರುಚ್ಯತೇ।।

ಆಪನ ಗರ್ಭದಲ್ಲಿ ಹುಟ್ಟಿದ ಆ ಮಹಾದ್ಭುತ ಮಹಾಭಾಗ ಪುತ್ರನು ಭೂಪತಿಯೆಂದು ಭುವನಪಾಲಕನೆಂದೂ ಪುನಃ ಮಹತ್ತನೆಂದೂ ಕರೆಯುತ್ತಾರೆ.

03212006a ದಹನ್ಮೃತಾನಿ ಭೂತಾನಿ ತಸ್ಯಾಗ್ನಿರ್ಭರತೋಽಭವತ್।
03212006c ಅಗ್ನಿಷ್ಟೋಮೇ ಚ ನಿಯತಃ ಕ್ರತುಶ್ರೇಷ್ಠೋ ಭರಸ್ಯ ತು।।

ಅವನ ಮಗ ಅಗ್ನಿ ಭರತನು ಮೃತ ಭೂತಗಳನ್ನು ದಹಿಸುತ್ತಾನೆ. ಅಗ್ನಿಷ್ಟೋಮದಲ್ಲಿ ಅವನ ಶ್ರೇಷ್ಠವಾದ ಕ್ರತುವು ನಡೆಯುತ್ತದೆ.

03212007a ಆಯಾಂತಂ ನಿಯತಂ ದೃಷ್ಟ್ವಾ ಪ್ರವಿವೇಶಾರ್ಣವಂ ಭಯಾತ್।
03212007c ದೇವಾಸ್ತಂ ನಾಧಿಗಚ್ಚಂತಿ ಮಾರ್ಗಮಾಣಾ ಯಥಾದಿಶಂ।।

ನಿಯತನು ಬರುತ್ತಿರುವುದನ್ನು ನೋಡಿ ಭಯದಿಂದ ಅವನು ಸಮುದ್ರವನ್ನು ಪ್ರವೇಶಿಸಿದನು. ಮಾರ್ಗದಲ್ಲಿ ಎಲ್ಲ ದಿಕ್ಕುಗಳಲ್ಲಿ ಹುಡುಕಿದರೂ ದೇವತೆಗಳಿಗೆ ಅವನು ದೊರಕಲಿಲ್ಲ.

03212008a ದೃಷ್ಟ್ವಾ ತ್ವಗ್ನಿರಥರ್ವಾಣಂ ತತೋ ವಚನಮಬ್ರವೀತ್।
03212008c ದೇವಾನಾಂ ವಹ ಹವ್ಯಂ ತ್ವಮಹಂ ವೀರ ಸುದುರ್ಬಲಃ।
03212008e ಅಥರ್ವನ್ಗಚ್ಚ ಮಧ್ವಕ್ಷಂ ಪ್ರಿಯಮೇತತ್ಕುರುಷ್ವ ಮೇ।।

ಆಗ ಅಥರ್ವಣ ಅಗ್ನಿಯನ್ನು ನೋಡಿ ಅವನನ್ನು ಕೇಳಿದರು: “ವೀರ! ನೀನು ದೇವತೆಗಳ ಹವ್ಯವನ್ನು ಕೊಂಡೊಯ್ಯುತ್ತೀಯಾ? ನಾನು ದುರ್ಬಲನಾಗಿದ್ದೇನೆ! ಅಥರ್ವನ್! ಕೆಂಪುಕಣ್ಣಿನವನ ಬಳಿ ಹೋಗು! ನನಗೆ ಪ್ರಿಯವಾದುದನ್ನು ಮಾಡು!”

03212009a ಪ್ರೇಷ್ಯ ಚಾಗ್ನಿರಥರ್ವಾಣಮನ್ಯಂ ದೇಶಂ ತತೋಽಗಮತ್।
03212009c ಮತ್ಸ್ಯಾಸ್ತಸ್ಯ ಸಮಾಚಖ್ಯುಃ ಕ್ರುದ್ಧಸ್ತಾನಗ್ನಿರಬ್ರವೀತ್।।

ಅಥರ್ವಣನಿಗೆ ಹೀಗೆ ಹೇಳಿ ಅಗ್ನಿಯು ಬೇರೆ ಕಡೆ ಹೊರಟು ಹೋದನು. ಆದರೆ ಅವನ ಇರುವಿಕೆಯನ್ನು ಮೀನುಗಳು ಹೇಳಿದವು. ಆಗ ಅಗ್ನಿಯು ಕೃದ್ಧನಾಗಿ ಹೇಳಿದನು:

03212010a ಭಕ್ಷ್ಯಾ ವೈ ವಿವಿಧೈರ್ಭಾವೈರ್ಭವಿಷ್ಯಥ ಶರೀರಿಣಾಂ।
03212010c ಅಥರ್ವಾಣಂ ತಥಾ ಚಾಪಿ ಹವ್ಯವಾಹೋಽಬ್ರವೀದ್ವಚಃ।।

“ವಿವಿಧ ರೀತಿಗಳಲ್ಲಿ ಶರೀರಿಗಳ ಆಹಾರವಾಗಿರಿ!” ಅಥರ್ವಣನಿಗೂ ಕೂಡ ಹವ್ಯವಾಹನನು ಈ ಮಾತುಗಳನ್ನಾಡಿದನು.

03212011a ಅನುನೀಯಮಾನೋಽಪಿ ಭೃಶಂ ದೇವವಾಕ್ಯಾದ್ಧಿ ತೇನ ಸಃ।
03212011c ನೈಚ್ಚದ್ವೋಢುಂ ಹವಿಃ ಸರ್ವಂ ಶರೀರಂ ಚ ಸಮತ್ಯಜತ್।।

ದೇವತೆಗಳ ಮಾತುಗಳಿಂದ ತುಂಬಾ ಒತ್ತಾಯಿಸಲ್ಪಟ್ಟರೂ ಕೂಡ ಅವನು ಹವಿಸ್ಸನ್ನು ಕೊಂಡೊಯ್ಯಲಿಲ್ಲ. ಆಗ ಅವನು ಎಲ್ಲ ಶರೀರವನ್ನೂ ತೊರೆದನು.

03212012a ಸ ತಚ್ಚರೀರಂ ಸಂತ್ಯಜ್ಯ ಪ್ರವಿವೇಶ ಧರಾಂ ತದಾ।
03212012c ಭೂಮಿಂ ಸ್ಪೃಷ್ಟ್ವಾಸೃಜದ್ಧಾತೂನ್ಪೃಥಕ್ ಪೃಥಗತೀವ ಹಿ।।

ಅವನು ಶರೀರವನ್ನು ತೊರೆದು ಭೂಮಿಯನ್ನು ಪ್ರವೇಶಿಸಿದನು. ಭೂಮಿಯ ಸ್ಪರ್ಷದಲ್ಲಿ ಬಂದು ಅವನು ವಿವಿಧ ರೀತಿಯ ಅತೀವ ಖನಿಜಗಳನ್ನು ಸೃಷ್ಟಿಸಿದನು.

03212013a ಆಸ್ಯಾತ್ಸುಗಂಧಿ ತೇಜಶ್ಚ ಅಸ್ಥಿಭ್ಯೋ ದೇವದಾರು ಚ।
03212013c ಶ್ಲೇಷ್ಮಣಃ ಸ್ಫಟಿಕಂ ತಸ್ಯ ಪಿತ್ತಾನ್ಮರಕತಂ ತಥಾ।।

ಅವನ ತೇಜಸ್ಸಿನಿಂದ ಸುಗಂಧವೂ, ಅಸ್ತಿಗಳಿಂದ ದೇವದಾರುವೂ, ಕಫದಿಂದ ಸ್ಪಟಿಕವೂ ಮತ್ತು ಪಿತ್ತದಿಂದ ಮರಕತವೂ ಆದವು.

03212014a ಯಕೃತ್ಕೃಷ್ಣಾಯಸಂ ತಸ್ಯ ತ್ರಿಭಿರೇವ ಬಭುಃ ಪ್ರಜಾಃ।
03212014c ನಖಾಸ್ತಸ್ಯಾಭ್ರಪಟಲಂ ಶಿರಾಜಾಲಾನಿ ವಿದ್ರುಮಂ।
03212014e ಶರೀರಾದ್ವಿವಿಧಾಶ್ಚಾನ್ಯೇ ಧಾತವೋಽಸ್ಯಾಭವನ್ನೃಪ।।

ಅವನ ಯಕೃತ್ತಿನಿಂದ ಕಪ್ಪು ಕಬ್ಬಿಣವೂ ಬಂದಿತು. ಎಲ್ಲ ಜಗತ್ತೂ ಈ ಮೂರರಿಂದ ವ್ಯಾಪಿತವಾಗಿದೆ. ಅವನ ಉಗುರಿನಿಂದ ಮೋಡಗಳಾದವು, ರಕ್ತನಾಳಗಳಿಂದ ಶಿಲಾಜಾಲಗಳಾದವು. ನೃಪ! ಅವನ ಶರೀರದಿಂದ ಬಹುವಿಧದ ಖನಿಜಗಳಾದವು.

03212015a ಏವಂ ತ್ಯಕ್ತ್ವಾ ಶರೀರಂ ತು ಪರಮೇ ತಪಸಿ ಸ್ಥಿತಃ।
03212015c ಭೃಗ್ವಂಗಿರಾದಿಭಿರ್ಭೂಯಸ್ತಪಸೋತ್ಥಾಪಿತಸ್ತದಾ।।

ಹೀಗೆ ತನ್ನ ಶರೀರವನ್ನು ತೊರೆದು ಅವನು ಪರಮ ತಪಸ್ಸಿನಲ್ಲಿ ನಿಂತನು. ಭೃಗು ಅಂಗಿರಸ ಮೊದಲಾದವರು ಅವನನ್ನು ತಪಸ್ಸಿನಿಂದ ಎಬ್ಬಿಸಿದರು.

03212016a ಭೃಶಂ ಜಜ್ವಾಲ ತೇಜಸ್ವೀ ತಪಸಾಪ್ಯಾಯಿತಃ ಶಿಖೀ।
03212016c ದೃಷ್ಟ್ವಾ ಋಷೀನ್ಭಯಾಚ್ಚಾಪಿ ಪ್ರವಿವೇಶ ಮಹಾರ್ಣವಂ।।

ತಪಸ್ಸಿನಲ್ಲಿ ತೊಡಗಿದ್ದ ಆ ಅಗ್ನಿಯು ತುಂಬಾ ತೇಜಸ್ಸಿನಿಂದ ಉರಿಯ ತೊಡಗಿದನು. ಋಷಿಯನ್ನು ನೋಡಿ ಭಯದಿಂದ ಮಹಾಸಾಗರವನ್ನು ಪ್ರವೇಶಿಸಿದನು.

03212017a ತಸ್ಮಿನ್ನಷ್ಟೇ ಜಗದ್ಭೀತಮಥರ್ವಾಣಮಥಾಶ್ರಿತಂ।
03212017c ಅರ್ಚಯಾಮಾಸುರೇವೈನಮಥರ್ವಾಣಂ ಸುರರ್ಷಯಃ।।

ಅವನು ನಷ್ಟವಾಗಲು ಜಗತ್ತು ಭೀತವಾಗಿ ಅಥರ್ವಣವನ್ನು ಮೊರೆಹೊಕ್ಕಿತು. ಸುರರೂ ಸುರರ್ಷಿಗಳೂ ಅಥರ್ವಣನನ್ನು ಅರ್ಚಿಸಿದರು.

03212018a ಅಥರ್ವಾ ತ್ವಸೃಜಲ್ಲೋಕಾನಾತ್ಮನಾಲೋಕ್ಯ ಪಾವಕಂ।
03212018c ಮಿಷತಾಂ ಸರ್ವಭೂತಾನಾಮುನ್ಮಮಾಥ ಮಹಾರ್ಣವಂ।।

ಸರ್ವಭೂತಗಳು ನೋಡುತ್ತಿದ್ದಂತೆ ಅಥರ್ವನು ಮಹಾರ್ಣವವನ್ನು ಮೇಲೆ ಕೆಳಮಾಡಿ ಹುಡುಕಿದನು. ಆಗ ತಾನೇ ಲೋಕಗಳನ್ನು ಸೃಷ್ಟಿಸಿದನು.

03212019a ಏವಮಗ್ನಿರ್ಭಗವತಾ ನಷ್ಟಃ ಪೂರ್ವಮಥರ್ವಣಾ।
03212019c ಆಹೂತಃ ಸರ್ವಭೂತಾನಾಂ ಹವ್ಯಂ ವಹತಿ ಸರ್ವದಾ।।

ಹೀಗೆ ಹಿಂದೆ ಅತರ್ವಣನು ಭಗವಾನ್ ಅಗ್ನಿಯು ನಷ್ಟವಾಗಲು ಸರ್ವದಾ ಸರ್ವಭೂತಗಳು ಆಹುತಿಯಿತ್ತ ಹವಿಸ್ಸನ್ನು ಕೊಂಡೊಯ್ಯುತ್ತಿದ್ದನು.

03212020a ಏವಂ ತ್ವಜನಯದ್ಧಿಷ್ಣ್ಯಾನ್ವೇದೋಕ್ತಾನ್ವಿಬುಧಾನ್ಬಹೂನ್।
03212020c ವಿಚರನ್ವಿವಿಧಾನ್ದೇಶಾನ್ಭ್ರಮಮಾಣಸ್ತು ತತ್ರ ವೈ।।

ಹೀಗೆ ವಿವಿಧ ದೇಶಗಳಲ್ಲಿ ಸಂಚರಿಸುತ್ತಾ ತಿರುಗಾಡುತ್ತಾ ವೇದಗಳಲ್ಲಿ ವಿಬುಧರು ಹೇಳಿದ ವಿವಿಧ ಅಗ್ನಿಗಳನ್ನು ಸೃಷ್ಟಿದನು.

03212021a ಸಿಂಧುವರ್ಜಂ ಪಂಚ ನದ್ಯೋ ದೇವಿಕಾಥ ಸರಸ್ವತೀ।
03212021c ಗಂಗಾ ಚ ಶತಕುಂಭಾ ಚ ಶರಯೂರ್ಗಂಡಸಾಹ್ವಯಾ।।
03212022a ಚರ್ಮಣ್ವತೀ ಮಹೀ ಚೈವ ಮೇಧ್ಯಾ ಮೇಧಾತಿಥಿಸ್ತಥಾ।
03212022c ತಾಮ್ರಾವತೀ ವೇತ್ರವತೀ ನದ್ಯಸ್ತಿಸ್ರೋಽಥ ಕೌಶಿಕೀ।।
03212023a ತಮಸಾ ನರ್ಮದಾ ಚೈವ ನದೀ ಗೋದಾವರೀ ತಥಾ।
03212023c ವೇಣ್ಣಾ ಪ್ರವೇಣೀ ಭೀಮಾ ಚ ಮೇದ್ರಥಾ ಚೈವ ಭಾರತ।।
03212024a ಭಾರತೀ ಸುಪ್ರಯೋಗಾ ಚ ಕಾವೇರೀ ಮುರ್ಮುರಾ ತಥಾ।
03212024c ಕೃಷ್ಣಾ ಚ ಕೃಷ್ಣವೇಣ್ಣಾ ಚ ಕಪಿಲಾ ಶೋಣ ಏವ ಚ।।
03212024e ಏತಾ ನದ್ಯಸ್ತು ಧಿಷ್ಣ್ಯಾನಾಂ ಮಾತರೋ ಯಾಃ ಪ್ರಕೀರ್ತಿತಾಃ।।

ಭಾರತ! ಸಿಂಧು, ಐದು ನದಿಗಳು, ದೇವಿಕಾ, ಸರಸ್ವತೀ, ಗಂಗಾ, ಶತಕುಂಭಾ, ಶರಯೂ, ಗಂಡಸಾಹ್ವಯ, ಚರ್ವಣ್ವತೀ, ಮಹೀ, ಮೇಧಾ, ಮೇಧಾತಿಥಿ, ತಾಮ್ರವತೀ, ವೇತ್ರವತೀ, ನದೀ ಅಸ್ತಿಸ್ರೋಥ, ಕೌಶಿಕೀ, ತಮಸಾ, ನರ್ಮದಾ, ನದೀ ಗೋದಾವರೀ, ವೇಣೀ, ಪ್ರವೇಣೀ, ಭೀಮಾ, ಮೇದ್ರಥಾ, ಭಾರತೀ, ಸುಪ್ರಯಾಗಾ, ಕಾವೇರೀ, ಮುರ್ಮುರಾ, ಕೃಷ್ಣಾ, ಕೃಷ್ಣವೇಣೀ, ಕಪಿಲಾ, ಶೋಣಾ, ಈ ಎಲ್ಲ ನದಿಗಳನ್ನೂ ಅಗ್ನಿಗಳ ತಾಯಂದಿರೆಂದು ಹೇಳುತ್ತಾರೆ.

03212025a ಅದ್ಭುತಸ್ಯ ಪ್ರಿಯಾ ಭಾರ್ಯಾ ತಸ್ಯಾಃ ಪುತ್ರೋ ವಿಡೂರಥಃ।
03212025c ಯಾವಂತಃ ಪಾವಕಾಃ ಪ್ರೋಕ್ತಾಃ ಸೋಮಾಸ್ತಾವಂತ ಏವ ಚ।।

ಅದ್ಭುತನ ಪತ್ನಿ ಪ್ರಿಯಾ, ಅವಳ ಪುತ್ರ ವಿಡೂರಥ. ಮೊದಲು ಹೇಳಿದ ಅಗ್ನಿಗಳಷ್ಟೇ ಸೋಮ ಯಾಗಗಳಿವೆ.

03212026a ಅತ್ರೇಶ್ಚಾಪ್ಯನ್ವಯೇ ಜಾತಾ ಬ್ರಹ್ಮಣೋ ಮಾನಸಾಃ ಪ್ರಜಾಃ।
03212026c ಅತ್ರಿಃ ಪುತ್ರಾನ್ ಸ್ರಷ್ಟುಕಾಮಸ್ತಾನೇವಾತ್ಮನ್ಯಧಾರಯತ್।
03212026e ತಸ್ಯ ತದ್ಬ್ರಹ್ಮಣಃ ಕಾಯಾನ್ನಿರ್ಹರಂತಿ ಹುತಾಶನಾಃ।।

ಬ್ರಹ್ಮನ ಮಾನಸಪುತ್ರರಿಂದ ಹುಟ್ಟಿದ ಮಕ್ಕಳು ಅತ್ರಿಯ ಕುಲದವರೂ ಇದ್ದಾರೆ. ಸೃಷ್ಟಿಯನ್ನು ಮುಂದುವರೆಸಲು ಅತ್ರಿಯು ತನ್ನಿಂದಲೇ ಈ ಪುತ್ರರನ್ನು ಸೃಷ್ಟಿಸಿದನು. ಅವನ ದೇಹದಿಂದಲೇ ಈ ಅಗ್ನಿಗಳು ಹೊರಬಂದವು.

03212027a ಏವಮೇತೇ ಮಹಾತ್ಮಾನಃ ಕೀರ್ತಿತಾಸ್ತೇಽಗ್ನಯೋ ಮಯಾ।
03212027c ಅಪ್ರಮೇಯಾ ಯಥೋತ್ಪನ್ನಾಃ ಶ್ರೀಮಂತಸ್ತಿಮಿರಾಪಹಾಃ।।

ನಾನು ಹೇಳಿದ ಇವೇ ಹೀಗೆ ಉದ್ಭವಿಸಿದ ಆ ಮಹಾತ್ಮ, ಅಪ್ರಮೇಯ, ಶ್ರೀಮಂತ, ಕತ್ತಲೆಯನ್ನು ಕಳೆಯುವ ಅಗ್ನಿಗಳು.

03212028a ಅದ್ಭುತಸ್ಯ ತು ಮಾಹಾತ್ಮ್ಯಂ ಯಥಾ ವೇದೇಷು ಕೀರ್ತಿತಂ।
03212028c ತಾದೃಶಂ ವಿದ್ಧಿ ಸರ್ವೇಷಾಮೇಕೋ ಹ್ಯೇಷ ಹುತಾಶನಃ।।

ವೇದಗಳಲ್ಲಿ ಹೇಳಿದಂತೆ ಎಲ್ಲಾ ಈ ಅಗ್ನಿಗಳೂ ಮಹಾತ್ಮ ಅದ್ಭುತನಂತೆಯೇ ಇವೆ ಎಂದು ತಿಳಿದುಕೋ.

03212029a ಏಕ ಏವೈಷ ಭಗವಾನ್ವಿಜ್ಞೇಯಃ ಪ್ರಥಮೋಽಂಗಿರಾಃ।
03212029c ಬಹುಧಾ ನಿಃಸೃತಃ ಕಾಯಾಜ್ಜ್ಯೋತಿಷ್ಟೋಮಃ ಕ್ರತುರ್ಯಥಾ।।

ಮೊದಲನೆಯ ಅಂಗಿರಸನಾದ ಈ ಭಗವಾನನೇ ಜ್ಯೋತಿಷ್ಠೋಮ ಯಾಗದಂತೆ ಅವನ ದೇಹದಿಂದ ಬಹುವಿಧದಿಂದ ಹೊರಬಂದನು1.

03212030a ಇತ್ಯೇಷ ವಂಶಃ ಸುಮಹಾನಗ್ನೀನಾಂ ಕೀರ್ತಿತೋ ಮಯಾ।
03212030c ಪಾವಿತೋ ವಿವಿಧೈರ್ಮಂತ್ರೈರ್ಹವ್ಯಂ ವಹತಿ ದೇಹಿನಾಂ।।

ಇದು ನಾನು ಹೇಳಿದ ಸುಮಹಾ ಅಗ್ನಿಗಳ, ವಿವಿಧ ಮಂತ್ರಗಳಿಂದ ಹಾಕಿದ ಹವ್ಯಗಳನ್ನು ಕೊಂಡೊಯ್ಯುವವರ ವಂಶಾವಳಿ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ಅಗ್ನಿಸಮುದ್ಭವೇ ದ್ವಾದಶಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಅಗ್ನಿಸಮುದ್ಭವದಲ್ಲಿ ಇನ್ನೂರಾಹನ್ನೆರಡನೆಯ ಅಧ್ಯಾಯವು.


  1. ಒಂದೇ ಅಗ್ನಿಷ್ಟೋಮವು ಇತರ ಸೋಮಯಾಗಗಳಿಗೂ ಪ್ರಕೃತಿಯಾಗಿ ಬಹುವಿಧವಾಗಿರುವಂತೆ ಅಂಗಿರಸನು ಒಬ್ಬನೇ ಆದರೂ ಅವನಿಂದ ಹುಟ್ಟಿದ ಅಗ್ನಿಗಳು ಬಹುವಿಧವಾಗಿ ಕಾಣುತ್ತವೆ (ಭಾರತ ದರ್ಶನ ಪ್ರಕಾಶನ, ಸಂಪುಟ 7, ಪುಟ 3512). ↩︎