ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 208
ಸಾರ
ಮಾರ್ಕಂಡೇಯನು ಯುಧಿಷ್ಠಿರನಿಗೆ ನಾನಾ ವಿಧದ ಅಗ್ನಿಗಳನ್ನು ವರ್ಣಿಸುವುದು (1-8).
03208001 ಮಾರ್ಕಂಡೇಯ ಉವಾಚ।
03208001a ಬ್ರಹ್ಮಣೋ ಯಸ್ತೃತೀಯಸ್ತು ಪುತ್ರಃ ಕುರುಕುಲೋದ್ವಹ।
03208001c ತಸ್ಯಾಪವಸುತಾ ಭಾರ್ಯಾ ಪ್ರಜಾಸ್ತಸ್ಯಾಪಿ ಮೇ ಶೃಣು।।
ಮಾರ್ಕಂಡೇಯನು ಹೇಳಿದನು: “ಕುರುಕುಲೋದ್ವಹ! ಬ್ರಹ್ಮನ ಈ ಮೂರನೆಯ ಮಗನು ಆಪವನ ಮಗಳನ್ನು ಮದುವೆಯಾದನು. ಅವನ ಮಕ್ಕಳ ಕುರಿತು ಕೇಳು:
03208002a ಬೃಹಜ್ಜ್ಯೋತಿರ್ಬೃಹತ್ಕೀರ್ತಿರ್ಬೃಹದ್ಬ್ರಹ್ಮಾ ಬೃಹನ್ಮನಾಃ।
03208002c ಬೃಹನ್ಮಂತ್ರೋ ಬೃಹದ್ಭಾಸಸ್ತಥಾ ರಾಜನ್ಬೃಹಸ್ಪತಿಃ।।
ರಾಜನ್! ಬೃಹಜ್ಯೋತಿ, ಬೃಹತ್ಕೀರ್ತಿ, ಬೃಹದ್ಬ್ರಹ್ಮ, ಬೃಹನ್ಮನ, ಬೃಹನ್ಮಂತ್ರ, ಬೃಹದ್ಭಾಸ ಮತ್ತು ಬೃಹಸ್ಪತಿ.
03208003a ಪ್ರಜಾಸು ತಾಸು ಸರ್ವಾಸು ರೂಪೇಣಾಪ್ರತಿಮಾಭವತ್।
03208003c ದೇವೀ ಭಾನುಮತೀ ನಾಮ ಪ್ರಥಮಾಂಗಿರಸಃ ಸುತಾ।।
ದೇವೀ ಭಾನುಮತಿ ಎಂಬ ಹೆಸರಿನ ಅಂಗಿರಸನ ಮೊದಲನೆಯ ಮಗಳು ಅವನ ಮಕ್ಕಳೆಲ್ಲರಲ್ಲಿ ಅಪ್ರತಿಮ ರೂಪವತಿಯಾಗಿದ್ದಳು.
03208004a ಭೂತಾನಾಮೇವ ಸರ್ವೇಷಾಂ ಯಸ್ಯಾಂ ರಾಗಸ್ತದಾಭವತ್।
03208004c ರಾಗಾದ್ರಾಗೇತಿ ಯಾಮಾಹುರ್ದ್ವಿತೀಯಾಂಗಿರಸಃ ಸುತಾ।।
ಹುಟ್ಟಿದಾಗ ಇರುವ ಎಲ್ಲವುಗಳಲ್ಲಿಯೂ ಅವಳ ಮೇಲೆ ಅನುರಾಗವುಂಟಾಗಿದುದರಿಂದ, ಅಂಗಿರಸನ ಎರಡನೆಯ ಮಗಳಿಗೆ ರಾಗದಿಂದ ರಾಗವೆನ್ನುವುದೇ ಹೆಸರಾಯಿತು1.
03208005a ಯಾಂ ಕಪರ್ದಿಸುತಾಮಾಹುರ್ದೃಶ್ಯಾದೃಶ್ಯೇತಿ ದೇಹಿನಃ।
03208005c ತನುತ್ವಾತ್ಸಾ ಸಿನೀವಾಲೀ ತೃತೀಯಾಂಗಿರಸಃ ಸುತಾ।।
ಅಂಗಿರಸನ ಮೂರನೆಯ ಮಗಳು ಸಿನೀವಾಲಿಯ ದೇಹವು ಎಷ್ಟೊಂದು ಸಣ್ಣದಾಗಿತ್ತಂದರೆ ಅವಳು ಕಾಣಿಸಿಕೊಳ್ಳುತ್ತಿರಲಿಲ್ಲ. ಆದುದರಿಂದ ಅವಳನ್ನು ಕಪರ್ದಿಯ ಮಗಳೆಂದು ಹೇಳುತ್ತಾರೆ2.
03208006a ಪಶ್ಯತ್ಯರ್ಚಿಷ್ಮತೀ ಭಾಭಿರ್ಹವಿರ್ಭಿಶ್ಚ ಹವಿಷ್ಮತೀ।
03208006c ಷಷ್ಠೀಮಂಗಿರಸಃ ಕನ್ಯಾಂ ಪುಣ್ಯಾಮಾಹುರ್ಹವಿಷ್ಮತೀಂ।।
ಅರ್ಚಿಷ್ಮತಿಯು ಕಾಂತಿಯೊಂದಿಗೆ ಕಂಡುಬಂದಳು3, ಹವಿಷ್ಮತಿಯು ಹವಿಸ್ಸಿನೊಂದಿಗೆ4, ಮತ್ತು ಅಂಗಿರಸನ ಆರನೆಯ ಮಗಳು ಪುಣ್ಯೆಯನ್ನು ಮಹಿಷ್ಮತೀ ಎಂದು ಕರೆದರು.
03208007a ಮಹಾಮಖೇಷ್ವಾಂಗಿರಸೀ ದೀಪ್ತಿಮತ್ಸು ಮಹಾಮತೀ।
03208007c ಮಹಾಮತೀತಿ ವಿಖ್ಯಾತಾ ಸಪ್ತಮೀ ಕಥ್ಯತೇ ಸುತಾ।।
ಅಂಗಿರಸನ ಏಳನೆಯವಳು ಮಹಾಮಖಗಳಲ್ಲಿ ಸತ್ಕೃತಳಾಗುವವಳು ಮಹಾಮತಿಯೆಂದು ವಿಖ್ಯಾತಳಾದವಳು.
03208008a ಯಾಂ ತು ದೃಷ್ಟ್ವಾ ಭಗವತೀಂ ಜನಃ ಕುಹುಕುಹಾಯತೇ।
03208008c ಏಕಾನಂಶೇತಿ ಯಾಮಾಹುಃ ಕುಹೂಮಂಗಿರಸಃ ಸುತಾಂ।।
ಯಾರನ್ನು ನೋಡಿ ಜನರು ಆಶ್ಚರ್ಯಚತರಾಗುವರೋ ಅವಳು ಭಗವತಿ, ಅಂಗಿರಸನ ಎಂಟನೆಯ ಮಗಳು. ಕುಹೂ5 ಎನ್ನುವವಳು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಅಂಗಿರಸೋಪಾಖ್ಯಾನೇ ಅಷ್ಟಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಅಂಗಿರಸೋಪಾಖ್ಯಾನದಲ್ಲಿ ಇನ್ನೂರಾಎಂಟನೆಯ ಅಧ್ಯಾಯವು.
-
ಅರ್ಥಾತ್ ಪ್ರೇಮದೇವತೆಯಿವಳು. ↩︎
-
ಚತುರ್ದಶೀಸಹಿತವಾದ ಅಮವಾಸ್ಯೆಗೆ ಸಿನೀವಾಲೀ ಎಂದು ಹೆಸರು. ಯಾ ಪೂರ್ವಾಮಾವಾಸ್ಯಾ ಸಾ ಸಿನೀವಾಲೀ| (ಶ್ರುತಿ) ಸಾ ದೃಷ್ಟೇಂದುಃ ಸಿನೀವಾಲೀ - ಆ ದಿವಸ ಚಂದ್ರನ ಕಲೆಯು ಕಂಡೂ ಕಾಣದಂತಿರುತ್ತದೆ(ಅಮರಕೋಶ). ಚತುರ್ದಶೀಯುಕ್ತವಾದ ಅಮವಾಸ್ಯೆಯ ದಿನ ಚಂದ್ರಕಲೆಯಂತೆ ಸಿನೀವಾಲಿಯು ಕಂಡೂ ಕಾಣದಂತೆ ಬಹಳ ಕೃಶಳಾಗಿದ್ದಳು. ಇವಳನ್ನೇ ರುದ್ರನು ತನ್ನ ಜಡೆಯಲ್ಲಿ ಧರಿಸಿರುವನಾದುದರಿಂದ ಇವಳನ್ನು ‘ಕಪರ್ದಿಸುತಾ’ ಎಂದೂ ಕರೆಯುತ್ತಾರೆ (ಭಾರತ ದರ್ಶನ ಪ್ರಕಾಶನ, ಸಂಪುಟ 7, ಪುಟ 3417). ↩︎
-
ಪ್ರಕಾಶಮಾನ ಪ್ರಭೆಯಿಂದ ಕೂಡಿದವಳಾಗಿದ್ದುದರಿಂದ ಅವಳಿಗೆ ಅರ್ಚಿಷ್ಮತೀ ಎಂಬ ಹೆಸರು. ↩︎
-
ಸರ್ವಕಾಲದಲ್ಲಿಯೂ ಯಜ್ಞೇಶ್ವರನಲ್ಲಿ ಅರ್ಪಿಸಿದ ಹವಿಸ್ಸನ್ನು ಸ್ವೀಕರಿಸುತ್ತಿರುವುದರಿಂದ ಅವಳ ಹೆಸರು ಹವಿಷ್ಮತೀ. ↩︎
-
ಚಂದ್ರನು ಕಾಣದಿರುವ ಅಮವಾಸ್ಯೆಗೆ ಕುಹೂ ಎಂದು ಹೆಸರು. ಸಾ ನಷ್ಟೇಂದುಕಲಾ ಕುಹೂಃ (ಅಮರಕೋಶ). ↩︎