206 ಬ್ರಾಹ್ಮಣವ್ಯಾಧಸಂವಾದಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 206

ಸಾರ

ನಡತೆಯಿಂದಲೇ ದ್ವಿಜನಾಗುತ್ತಾನೆಂದು ಬ್ರಾಹ್ಮಣನು ಹೇಳಲು (1-14) ಜೀವಿಗಳಲ್ಲಿ ಯಾವುದೋ ಒಂದಕ್ಕೆ ಮಾತ್ರ ಶೋಕವಿರುತ್ತದೆ ಎನ್ನುವುದಿಲ್ಲ; ಆದರೆ ಜ್ಞಾನದಿಂದ ಅದನ್ನು ಅರ್ಥಮಾಡಿಕೊಂಡು ಕಾಲಾಕಾಂಕ್ಷಿಯಾಗಿದ್ದರೆ ಗೊಂದಲಕ್ಕೊಳಗಾಗುವುದಿಲ್ಲವೆಂದು ವ್ಯಾಧನು ಹೇಳಿದುದು (15-26). ಕೌಶಿಕನು ಹಿಂದಿರುಗಿ ತನ್ನ ತಂದೆ-ತಾಯಿಯರ ಶುಶ್ರೂಷೆಯಲ್ಲಿ ನಿರತನಾದುದು (27-34).

03206001 ವ್ಯಾಧ ಉವಾಚ।
03206001a ಏವಂ ಶಪ್ತೋಽಹಮೃಷಿಣಾ ತದಾ ದ್ವಿಜವರೋತ್ತಮ।
03206001c ಅಭಿಪ್ರಸಾದಯಮೃಷಿಂ ಗಿರಾ ವಾಕ್ಯವಿಶಾರದಂ।।
03206002a ಅಜಾನತಾ ಮಯಾಕಾರ್ಯಮಿದಮದ್ಯ ಕೃತಂ ಮುನೇ।
03206002c ಕ್ಷಂತುಮರ್ಹಸಿ ತತ್ಸರ್ವಂ ಪ್ರಸೀದ ಭಗವನ್ನಿತಿ।

ವ್ಯಾಧನು ಹೇಳಿದನು: “ದ್ವಿಜವರೋತ್ತಮ! ಈ ರೀತಿ ಆ ಋಷಿಯಿಂದ ಶಪಿತನಾದ ನಾನು ಅವನನ್ನು ಪ್ರಸೀದಗೊಳಿಸಲು ಈ ವಾಕ್ಯವಿಶಾರದ ಮಾತುಗಳನ್ನು ಆ ಋಷಿಗೆ ಹೇಳಿದೆನು: “ಮುನೇ! ತಿಳಿಯದೇ ಇಂದು ನನ್ನಿಂದ ಈ ಕಾರ್ಯವು ನಡೆದುಹೋಯಿತು. ಅವೆಲ್ಲವನ್ನೂ ನೀನು ಕ್ಷಮಿಸಬೇಕು. ಭಗವನ್! ಕರುಣೆತೋರು!”

03206003 ಋಷಿರುವಾಚ।
03206003a ನಾನ್ಯಥಾ ಭವಿತಾ ಶಾಪ ಏವಮೇತದಸಂಶಯಂ।
03206003c ಆನೃಶಂಸ್ಯಾದಹಂ ಕಿಂ ಚಿತ್ಕರ್ತಾನುಗ್ರಹಮದ್ಯ ತೇ।।

ಋಷಿಯು ಹೇಳಿದನು: “ಶಾಪವು ಅನ್ಯಥಾ ಆಗುವುದಿಲ್ಲ. ಇದರಲ್ಲಿ ಸಂಶಯವೇ ಇಲ್ಲ. ಆದರೆ ನಿನಗೆ ಅನುಗ್ರಹಿಸಲು ನಾನು ಕೊಂಚ ಸುಳ್ಳಾಗಿಸುತ್ತೇನೆ.

03206004a ಶೂದ್ರಯೋನೌ ವರ್ತಮಾನೋ ಧರ್ಮಜ್ಞೋ ಭವಿತಾ ಹ್ಯಸಿ।
03206004c ಮಾತಾಪಿತ್ರೋಶ್ಚ ಶುಶ್ರೂಷಾಂ ಕರಿಷ್ಯಸಿ ನ ಸಂಶಯಃ।।

ಶೂದ್ರಯೋನಿಯಲ್ಲಿ ಹುಟ್ಟಿದರೂ ಧರ್ಮಜ್ಞನಾಗಿ ನಡೆಯುತ್ತೀಯೆ. ಮಾತಾಪಿತೃಗಳ ಶುಶ್ರೂಷೆಯನ್ನೂ ಮಾಡುತ್ತೀಯೆ. ಸಂಶಯವಿಲ್ಲ.

03206005a ತಯಾ ಶುಶ್ರೂಷಯಾ ಸಿದ್ಧಿಂ ಮಹತೀಂ ಸಮವಾಪ್ಸ್ಯಸಿ।
03206005c ಜಾತಿಸ್ಮರಶ್ಚ ಭವಿತಾ ಸ್ವರ್ಗಂ ಚೈವ ಗಮಿಷ್ಯಸಿ।
03206005e ಶಾಪಕ್ಷಯಾಂತೇ ನಿರ್ವೃತ್ತೇ ಭವಿತಾಸಿ ಪುನರ್ದ್ವಿಜಃ।।

ನಿನ್ನ ಶುಶ್ರೂಷೆಯಿಂದ ಮಹಾ ಸಿದ್ಧಿಯನ್ನು ಪಡೆಯುತ್ತೀಯೆ. ನಿನ್ನ ಹಿಂದಿನ ಜನ್ಮಗಳನ್ನು ನೆನಪಿಸಿಕೊಳ್ಳುತ್ತೀಯೆ ಮತ್ತು ಸ್ವರ್ಗಕ್ಕೆ ಹೋಗುತ್ತೀಯೆ. ಶಾಪವು ಮುಗಿದನಂತರ ಪುನಃ ದ್ವಿಜನಾಗಿ ಹುಟ್ಟುತ್ತೀಯೆ.””

03206006 ವ್ಯಾಧ ಉವಾಚ।
03206006a ಏವಂ ಶಪ್ತಃ ಪುರಾ ತೇನ ಋಷಿಣಾಸ್ಮ್ಯುಗ್ರತೇಜಸಾ।
03206006c ಪ್ರಸಾದಶ್ಚ ಕೃತಸ್ತೇನ ಮಮೈವಂ ದ್ವಿಪದಾಂ ವರ।।

ವ್ಯಾಧನು ಹೇಳಿದನು: “ದ್ವಿಪದರಲ್ಲಿ ಶ್ರೇಷ್ಠನೇ! ಹಿಂದೆ ಹೀಗೆ ಆ ಉಗ್ರತೇಜಸ್ವಿ ಋಷಿಯಿಂದ ಶಪಿತನಾಗಿ, ಅವನಿಂದ ಕರುಣೆಯನ್ನೂ ಪಡೆದೆ.

03206007a ಶರಂ ಚೋದ್ಧೃತವಾನಸ್ಮಿ ತಸ್ಯ ವೈ ದ್ವಿಜಸತ್ತಮ।
03206007c ಆಶ್ರಮಂ ಚ ಮಯಾ ನೀತೋ ನ ಚ ಪ್ರಾಣೈರ್ವ್ಯಯುಜ್ಯತ।।

ದ್ವಿಜಸತ್ತಮ! ಅವನ ಶರೀರದಿಂದ ಆ ಬಾಣವನ್ನು ಕಿತ್ತೆ, ಅವನನ್ನು ಆಶ್ರಮಕ್ಕೆ ಕರೆದೊಯ್ದೆ. ಆದರೆ ಅವನು ಪ್ರಾಣದಿಂದ ವಂಚಿತನಾದನು.

03206008a ಏತತ್ತೇ ಸರ್ವಮಾಖ್ಯಾತಂ ಯಥಾ ಮಮ ಪುರಾಭವತ್।
03206008c ಅಭಿತಶ್ಚಾಪಿ ಗಂತವ್ಯಂ ಮಯಾ ಸ್ವರ್ಗಂ ದ್ವಿಜೋತ್ತಮ।।

ದ್ವಿಜೋತ್ತಮ! ನನಗೆ ಹಿಂದೆ ಏನೆಲ್ಲ ಆಯಿತೋ ಅವೆಲ್ಲವನ್ನೂ ಮತ್ತು ಇಲ್ಲಿಂದ ನಾನು ಸ್ವರ್ಗಕ್ಕೆ ಹೋಗುವವನಿದ್ದೇನೆ ಎನ್ನುವುದನ್ನೂ ನಿನಗೆ ಹೇಳಿದ್ದೇನೆ.”

03206009 ಬ್ರಾಹ್ಮಣ ಉವಾಚ।
03206009a ಏವಮೇತಾನಿ ಪುರುಷಾ ದುಃಖಾನಿ ಚ ಸುಖಾನಿ ಚ।
03206009c ಪ್ರಾಪ್ನುವಂತಿ ಮಹಾಬುದ್ಧೇ ನೋತ್ಕಂಠಾಂ ಕರ್ತುಮರ್ಹಸಿ।
03206009e ದುಷ್ಕರಂ ಹಿ ಕೃತಂ ತಾತ ಜಾನತಾ ಜಾತಿಮಾತ್ಮನಃ।।

ಬ್ರಾಹ್ಮಣನು ಹೇಳಿದನು: “ಮಹಾಬುದ್ಧೇ! ಹೀಗೆ ಪುರುಷರು ದುಃಖ ಮತ್ತು ಸಖಗಳನ್ನು ಪಡೆಯುತ್ತಾರೆ. ಅದರಲ್ಲಿ ಶಂಕೆಯನ್ನು ಮಾಡಬಾರದು. ಮಿತ್ರ! ನಿನ್ನ ಹುಟ್ಟಿನ ಕುರಿತು ತಿಳಿದು ನೀನು ದುಷ್ಕರವಾದುದನ್ನೇ ಮಾಡಿದ್ದೀಯೆ.

03206010a ಕರ್ಮದೋಷಶ್ಚ ವೈ ವಿದ್ವನ್ನಾತ್ಮಜಾತಿಕೃತೇನ ವೈ।
03206010c ಕಂ ಚಿತ್ಕಾಲಂ ಮೃಷ್ಯತಾಂ ವೈ ತತೋಽಸಿ ಭವಿತಾ ದ್ವಿಜಃ।
03206010e ಸಾಂಪ್ರತಂ ಚ ಮತೋ ಮೇಽಸಿ ಬ್ರಾಹ್ಮಣೋ ನಾತ್ರ ಸಂಶಯಃ।।

ವಿದ್ವನ್! ನಿನ್ನ ಜಾತಿಯ ಕೆಲಸವನ್ನು ಮಾಡುತ್ತಿರುವುದರಿಂದ ನಿನ್ನಲ್ಲಿ ಕರ್ಮದೋಷವುಂಟಾಗುವುದಿಲ್ಲ. ಕೆಲವು ಕಾಲ ಹೀಗಿದ್ದುಕೊಂಡು ನಂತರ ನೀನು ದ್ವಿಜನಾಗುತ್ತೀಯೆ. ಈಗಲೂ ನೀನು ನನ್ನ ಅಭಿಪ್ರಾಯದಲ್ಲಿ ಬ್ರಾಹ್ಮಣನೇ! ಅದರಲ್ಲಿ ಸಂಶಯವಿಲ್ಲ.

03206011a ಬ್ರಾಹ್ಮಣಃ ಪತನೀಯೇಷು ವರ್ತಮಾನೋ ವಿಕರ್ಮಸು।
03206011c ದಾಂಭಿಕೋ ದುಷ್ಕೃತಪ್ರಾಯಃ ಶೂದ್ರೇಣ ಸದೃಶೋ ಭವೇತ್।।

ಕೀಳುರೀತಿಯಲ್ಲಿ ನಡೆದುಕೊಳ್ಳುವ, ಕೆಟ್ಟಕೆಲಸಗಳಲ್ಲಿ ನಿರತನಾಗಿರುವ, ಢಾಂಬಿಕ, ದುಷ್ಕೃತಪ್ರಾಯ ಬ್ರಾಹ್ಮಣನು ಶೂದ್ರನಂತೆಯೇ.

03206012a ಯಸ್ತು ಶೂದ್ರೋ ದಮೇ ಸತ್ಯೇ ಧರ್ಮೇ ಚ ಸತತೋತ್ಥಿತಃ।
03206012c ತಂ ಬ್ರಾಹ್ಮಣಮಹಂ ಮನ್ಯೇ ವೃತ್ತೇನ ಹಿ ಭವೇದ್ದ್ವಿಜಃ।।

ಯಾವ ಶೂದ್ರನು ದಮ, ಸತ್ಯ, ಮತ್ತು ಧರ್ಮಗಳಲ್ಲಿ ಸತತವೂ ನಿರತನಾಗಿರುತ್ತಾನೋ ಅವನನ್ನು ನಾನು ಬ್ರಾಹ್ಮಣನೆಂದು ಮನ್ನಿಸುತ್ತೇನೆ. ನಡತೆಯಿಂದಲೇ ದ್ವಿಜನಾಗುತ್ತಾನೆ ತಾನೇ?

03206013a ಕರ್ಮದೋಷೇಣ ವಿಷಮಾಂ ಗತಿಮಾಪ್ನೋತಿ ದಾರುಣಾಂ।
03206013c ಕ್ಷೀಣದೋಷಮಹಂ ಮನ್ಯೇ ಚಾಭಿತಸ್ತ್ವಾಂ ನರೋತ್ತಮ।।

ತನ್ನದೇ ಕರ್ಮದೋಷಗಳಿಂದ ವಿಷಮ ದಾರುಣ ಗತಿಯನ್ನು ಹೊಂದುತ್ತಾನೆ. ನರೋತ್ತಮ! ನಿನ್ನ ದೋಷಗಳು ಕಡಿಮೆಯಾಗಿವೆ ಎಂದು ನನಗನ್ನಿಸುತ್ತದೆ.

03206014a ಕರ್ತುಮರ್ಹಸಿ ನೋತ್ಕಂಠಾಂ ತ್ವದ್ವಿಧಾ ಹ್ಯವಿಷಾದಿನಃ।
03206014c ಲೋಕವೃತ್ತಾಂತವೃತ್ತಜ್ಞಾ ನಿತ್ಯಂ ಧರ್ಮಪರಾಯಣಾಃ।।

ಇದಕ್ಕೆ ನೀನು ಶೋಕಿಸಬೇಕಾದುದಿಲ್ಲ. ಲೋಕದ ಆಗುಹೋಗುಗಳ, ನಡವಳಿಕೆಗಳ ಜ್ಞಾನವಿರುವ ಮತ್ತು ನಿತ್ಯವೂ ಧರ್ಮ ಪರಾಯಣನಾಗಿರುವ ನೀನು ಶೋಕಿಸಲು ಕಾರಣವಿಲ್ಲ.”

03206015 ವ್ಯಾಧ ಉವಾಚ।
03206015a ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಚಾರೀರಮೌಷಧೈಃ।
03206015c ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಂ ವ್ರಜೇತ್।।

ವ್ಯಾಧನು ಹೇಳಿದನು: “ಪ್ರಜ್ಞೆಯಿಂದ ಮನಸ್ಸಿನ ದುಃಖವನ್ನು, ಔಷಧಗಳಿಂದ ಶಾರೀರಿಕ ದುಃಖವನ್ನು ಹನನಮಾಡಿಕೊಳ್ಳಬೇಕು. ಇದು ವಿಜ್ಞಾನದ ಸಾಮರ್ಥ್ಯ. ಇದನ್ನು ತಿಳಿದವನು ಬಾಲಕನಂತೆ ನಡೆದುಕೊಳ್ಳುವುದನ್ನು ಬಿಟ್ಟುಬಿಡಬೇಕು.

03206016a ಅನಿಷ್ಟಸಂಪ್ರಯೋಗಾಚ್ಚ ವಿಪ್ರಯೋಗಾತ್ಪ್ರಿಯಸ್ಯ ಚ।
03206016c ಮಾನುಷಾ ಮಾನಸೈರ್ದುಃಖೈರ್ಯುಜ್ಯಂತೇ ಅಲ್ಪಬುದ್ಧಯಃ।।

ಅಲ್ಪಬುದ್ಧಿಯ ಮನುಷ್ಯರು ತಮಗೆ ಪ್ರಿಯವಾಗದೇ ಇದ್ದ ಅನಿಷ್ಟ ಸಂಗತಿಗಳಾದಾಗ ಮಾನಸಿಕ ದುಃಖಗಳಿಂದ ಬಳಲುತ್ತಾರೆ.

03206017a ಗುಣೈರ್ಭೂತಾನಿ ಯುಜ್ಯಂತೇ ವಿಯುಜ್ಯಂತೇ ತಥೈವ ಚ।
03206017c ಸರ್ವಾಣಿ ನೈತದೇಕಸ್ಯ ಶೋಕಸ್ಥಾನಂ ಹಿ ವಿದ್ಯತೇ।।

ಎಲ್ಲ ಭೂತಗಳೂ ಈ ಗುಣವನ್ನು ಹೊಂದಿರುತ್ತವೆ. ಯಾವುದೋ ಒಂದೇ ಈ ಶೋಕವನ್ನು ಪಡೆಯುತ್ತದೆ ಎನ್ನುವುದಿಲ್ಲ.

03206018a ಅನಿಷ್ಟೇನಾನ್ವಿತಂ ಪಶ್ಯಂಸ್ತಥಾ ಕ್ಷಿಪ್ರಂ ವಿರಜ್ಯತೇ।
03206018c ತತಶ್ಚ ಪ್ರತಿಕುರ್ವಂತಿ ಯದಿ ಪಶ್ಯಂತ್ಯುಪಕ್ರಮಂ।
03206018e ಶೋಚತೋ ನ ಭವೇತ್ಕಿಂ ಚಿತ್ಕೇವಲಂ ಪರಿತಪ್ಯತೇ।।

ಈ ಅನಿಷ್ಟವನ್ನು ನೋಡಿ, ಜನರು ಬೇಗನೇ ತಮ್ಮ ರೀತಿಗಳನ್ನು ಬದಲಾಯಿಸಿಕೊಳ್ಳುತ್ತಾರೆ. ಅದು ಬರುತ್ತಿರುವುದನ್ನು ಮೊದಲೇ ತಿಳಿದುಕೊಂಡಿದ್ದರೆ ಅದನ್ನು ನಿವಾರಿಸಲು ಸುಲಭವಾಗುತ್ತದೆ. ಇದರ ಕುರಿತು ಶೋಕಿಸುವವನು ತನ್ನನ್ನು ಕೇವಲ ಪರಿತಪಿಸಿಕೊಳ್ಳುತ್ತಾನೆ.

03206019a ಪರಿತ್ಯಜಂತಿ ಯೇ ದುಃಖಂ ಸುಖಂ ವಾಪ್ಯುಭಯಂ ನರಾಃ।
03206019c ತ ಏವ ಸುಖಮೇಧಂತೇ ಜ್ಞಾನತೃಪ್ತಾ ಮನೀಷಿಣಃ।।

ಜ್ಞಾನದಿಂದ ತೃಪ್ತರಾದ ಮತ್ತು ಸುಖವನ್ನು ಹೊಂದಿದ ತಿಳುವಳಿಕೆಯಿದ್ದ ನರರು ಮಾತ್ರ ಈ ಸುಖ ದುಃಖಗಳೆರಡನ್ನೂ ತೊರೆದು ನಿಜವಾಗಿಯೂ ಸುಖಿಗಳಾಗಿರುತ್ತಾರೆ.

03206020a ಅಸಂತೋಷಪರಾ ಮೂಢಾಃ ಸಂತೋಷಂ ಯಾಂತಿ ಪಂಡಿತಾಃ।
03206020c ಅಸಂತೋಷಸ್ಯ ನಾಸ್ತ್ಯಂತಸ್ತುಷ್ಟಿಸ್ತು ಪರಮಂ ಸುಖಂ।
03206020e ನ ಶೋಚಂತಿ ಗತಾಧ್ವಾನಃ ಪಶ್ಯಂತಃ ಪರಮಾಂ ಗತಿಂ।।

ಮೂಢರು ಯಾವಾಗಲೂ ಅಸಂತೋಷದಲ್ಲಿರುತ್ತಾರೆ ಮತ್ತು ಪಂಡಿತರು ಸಂತೋಷವನ್ನು ಹೊಂದಿರುತ್ತಾರೆ. ಅಸಂತೋಷಕ್ಕೆ ಅಂತ್ಯವೇ ಇಲ್ಲ. ತುಷ್ಟಿಯೇ ಪರಮ ಸುಖ. ಸರಿಯಾದ ಗತಿಯನ್ನು ಹೊಂದಿದವರು ಪರಮ ಗತಿಯನ್ನು ಕಂಡುಕೊಂಡು ದುಃಖಿಸುವುದಿಲ್ಲ.

03206021a ನ ವಿಷಾದೇ ಮನಃ ಕಾರ್ಯಂ ವಿಷಾದೋ ವಿಷಮುತ್ತಮಂ।
03206021c ಮಾರಯತ್ಯಕೃತಪ್ರಜ್ಞಂ ಬಾಲಂ ಕ್ರುದ್ಧ ಇವೋರಗಃ।।

ಮನಸ್ಸನ್ನು ವಿಷಾದಕ್ಕೆ ಒಳಪಡಿಸಬಾರದು. ವಿಷಾದವು ಉತ್ತಮ ವಿಷದಂತೆ. ಪ್ರಜ್ಞೆಯು ಬೆಳೆದಿರುವವನನ್ನು ಅದು ಬಾಲಕನನ್ನು ಒಂದು ಕೃದ್ಧ ಸರ್ಪದಂತೆ ಕೊಲ್ಲುತ್ತದೆ.

03206022a ಯಂ ವಿಷಾದೋಽಭಿಭವತಿ ವಿಷಮೇ ಸಮುಪಸ್ಥಿತೇ।
03206022c ತೇಜಸಾ ತಸ್ಯ ಹೀನಸ್ಯ ಪುರುಷಾರ್ಥೋ ನ ವಿದ್ಯತೇ।।

ವಿಷಮ ಪರಿಸ್ಥಿತಿಯಲ್ಲಿ ವಿಷಾದಪಡುವವನಲ್ಲಿ, ತನ್ನ ತೇಜಸ್ಸನ್ನು ಕಳೆದುಕೊಂಡವನಲ್ಲಿ ಪುರುಷಾರ್ಥವೇ ಇಲ್ಲ ಎಂದು ತಿಳಿಯಬೇಕು.

03206023a ಅವಶ್ಯಂ ಕ್ರಿಯಮಾಣಸ್ಯ ಕರ್ಮಣೋ ದೃಶ್ಯತೇ ಫಲಂ।
03206023c ನ ಹಿ ನಿರ್ವೇದಮಾಗಮ್ಯ ಕಿಂ ಚಿತ್ಪ್ರಾಪ್ನೋತಿ ಶೋಭನಂ।।

ನಾವು ಮಾಡುವ ಕರ್ಮಗಳಿಗೆ ಅವಶ್ಯವಾಗಿಯೂ ಫಲವನ್ನು ಕಾಣುತ್ತೇವೆ. ಏನನ್ನೂ ಅರಿಯದೇ ಮಾಡುವುದರಿಂದ ಒಳ್ಳೆಯದೇನೂ ದೊರಕುವುದಿಲ್ಲ.

03206024a ಅಥಾಪ್ಯುಪಾಯಂ ಪಶ್ಯೇತ ದುಃಖಸ್ಯ ಪರಿಮೋಕ್ಷಣೇ।
03206024c ಅಶೋಚನ್ನಾರಭೇತೈವ ಯುಕ್ತಶ್ಚಾವ್ಯಸನೀ ಭವೇತ್।।

ಶೋಕಿಸುವುದರ ಬದಲಾಗಿ ದುಃಖದ ಪರಿಮೋಕ್ಷಣದ ಉಪಾಯವನ್ನು ನೋಡಬೇಕು ಮತ್ತು ಅವ್ಯಸನಿಯಾಗಬೇಕು.

03206025a ಭೂತೇಷ್ವಭಾವಂ ಸಂಚಿಂತ್ಯ ಯೇ ತು ಬುದ್ಧೇಃ ಪರಂ ಗತಾಃ।
03206025c ನ ಶೋಚಂತಿ ಕೃತಪ್ರಜ್ಞಾಃ ಪಶ್ಯಂತಃ ಪರಮಾಂ ಗತಿಂ।।

ಪರಮ ಬುದ್ಧಿಯನ್ನು ಪಡೆದವನು ಎಲ್ಲ ಭೂತಗಳ ಅಭಾವದ ಕುರಿತು ಯಾವಾಗಲೂ ಚಿಂತಿಸುತ್ತಿರುತ್ತಾನೆ. ಕೃತಪ್ರಜ್ಞನು ಶೋಕಿಸುವುದಿಲ್ಲ. ಪರಮ ಗತಿಯನ್ನೇ ಕಾಣುತ್ತಿರುತ್ತಾನೆ.

03206026a ನ ಶೋಚಾಮಿ ಚ ವೈ ವಿದ್ವನ್ಕಾಲಾಕಾಂಕ್ಷೀ ಸ್ಥಿತೋಽಸ್ಮ್ಯಹಂ।
03206026c ಏತೈರ್ನಿದರ್ಶನೈರ್ಬ್ರಹ್ಮನ್ನಾವಸೀದಾಮಿ ಸತ್ತಮ।।

ವಿದ್ವನ್! ನಾನೂ ಕೂಡ ಶೋಕಿಸುವುದಿಲ್ಲ. ಕಾಲಾಕಾಂಕ್ಷಿಯಾಗಿ ಇಲ್ಲಿಯೇ ನಿಂತಿರುತ್ತೇನೆ. ಆದುದರಿಂದ ಬ್ರಹ್ಮನ್! ಸತ್ತಮ! ನಾನು ಗೊಂದಲಕ್ಕೊಳಗಾಗುವುದಿಲ್ಲ.”

03206027 ಬ್ರಾಹ್ಮಣ ಉವಾಚ।
03206027a ಕೃತಪ್ರಜ್ಞೋಽಸಿ ಮೇಧಾವೀ ಬುದ್ಧಿಶ್ಚ ವಿಪುಲಾ ತವ।
03206027c ನಾಹಂ ಭವಂತಂ ಶೋಚಾಮಿ ಜ್ಞಾನತೃಪ್ತೋಽಸಿ ಧರ್ಮವಿತ್।।

ಬ್ರಾಹ್ಮಣನು ಹೇಳಿದನು: “ಮೇಧಾವೀ! ನೀನು ಕೃತಪ್ರಜ್ಞನಾಗಿರುವೆ. ನಿನ್ನ ಬುದ್ಧಿಯು ವಿಪುಲವಾದುದು. ಧರ್ಮವಿದನಾದ ನೀನು ಜ್ಞಾನತೃಪ್ತನಾಗಿದ್ದೀಯೆ. ನಿನಗಾಗಿ ನಾನು ಚಿಂತಿಸುವುದಿಲ್ಲ.

03206028a ಆಪೃಚ್ಚೇ ತ್ವಾಂ ಸ್ವಸ್ತಿ ತೇಽಸ್ತು ಧರ್ಮಸ್ತ್ವಾ ಪರಿರಕ್ಷತು।
03206028c ಅಪ್ರಮಾದಸ್ತು ಕರ್ತವ್ಯೋ ಧರ್ಮೇ ಧರ್ಮಭೃತಾಂ ವರ।।

ಧರ್ಮಭೃತರಲ್ಲಿ ಶ್ರೇಷ್ಠನೇ! ನಿನಗೆ ಮಂಗಳವಾಗಲಿ. ನಿನ್ನಲ್ಲಿ ಅಪ್ಪಣೆಯನ್ನು ಕೇಳುತ್ತೇನೆ. ಧರ್ಮವು ನಿನ್ನನ್ನು ಪರಿರಕ್ಷಿಸಲಿ. ಧರ್ಮದ ಕರ್ತವ್ಯಗಳಲ್ಲಿ ನೀನು ತಪ್ಪದಿರುವಂತಾಗಲಿ.””

03206029 ಮಾರ್ಕಂಡೇಯ ಉವಾಚ।
03206029a ಬಾಢಮಿತ್ಯೇವ ತಂ ವ್ಯಾಧಃ ಕೃತಾಂಜಲಿರುವಾಚ ಹ।
03206029c ಪ್ರದಕ್ಷಿಣಮಥೋ ಕೃತ್ವಾ ಪ್ರಸ್ಥಿತೋ ದ್ವಿಜಸತ್ತಮಃ।।

ಮಾರ್ಕಂಡೇಯನು ಹೇಳಿದನು: “ಹಾಗೆಯೇ ಆಗಲಿ ಎಂದು ವ್ಯಾಧನು ಕೈಮುಗಿದು ಹೇಳಿದನು. ಆ ದ್ವಿಜಸತ್ತಮನು ಪ್ರದಕ್ಷಿಣೆಯನ್ನು ಹಾಕಿ ಹೊರಟನು.

03206030a ಸ ತು ಗತ್ವಾ ದ್ವಿಜಃ ಸರ್ವಾಂ ಶುಶ್ರೂಷಾಂ ಕೃತವಾಂಸ್ತದಾ।
03206030c ಮಾತಾಪಿತೃಭ್ಯಾಂ ವೃದ್ಧಾಭ್ಯಾಂ ಯಥಾನ್ಯಾಯಂ ಸುಸಂಶಿತಃ।।

ಆ ದ್ವಿಜನಾದರೋ ಹೋಗಿ ಯಥಾನ್ಯಾಯವಾಗಿ ವೃದ್ಧರಾಗಿದ್ದ ಮಾತಾಪಿತೃಗಳ ಎಲ್ಲ ಶುಶ್ರೂಷೆಗಳನ್ನು ಮಾಡಿದನು.

03206031a ಏತತ್ತೇ ಸರ್ವಮಾಖ್ಯಾತಂ ನಿಖಿಲೇನ ಯುಧಿಷ್ಠಿರ।
03206031c ಪೃಷ್ಟವಾನಸಿ ಯಂ ತಾತ ಧರ್ಮಂ ಧರ್ಮಭೃತಾಂ ವರ।।

ಯುಧಿಷ್ಠಿರ! ಮಗೂ! ಧರ್ಮಭೃತರಲ್ಲಿ ಶ್ರೇಷ್ಠ! ನೀನು ಧರ್ಮದ ಕುರಿತು ಕೇಳಿದುದೆಲ್ಲವನ್ನೂ ಸಂಪೂರ್ಣವಾಗಿ ನಿನಗೆ ಹೇಳಿದ್ದೇನೆ.

03206032a ಪತಿವ್ರತಾಯಾ ಮಾಹಾತ್ಮ್ಯಂ ಬ್ರಾಹ್ಮಣಸ್ಯ ಚ ಸತ್ತಮ।
03206032c ಮಾತಾಪಿತ್ರೋಶ್ಚ ಶುಶ್ರೂಷಾ ವ್ಯಾಧೇ ಧರ್ಮಶ್ಚ ಕೀರ್ತಿತಃ।।

ಪತಿವ್ರತೆಯ, ಸತ್ತಮ ಬ್ರಾಹ್ಮಣನ ಮತ್ತು ಮಾತಾಪಿತೃಗಳ ಶುಶ್ರೂಷಣೆಯಲ್ಲಿದ್ದ ವ್ಯಾಧನ ಧರ್ಮದ ಮಹಾತ್ಮೆಗಳನ್ನು ಹೇಳಿದ್ದೇನೆ.”

03206033 ಯುಧಿಷ್ಠಿರ ಉವಾಚ।
03206033a ಅತ್ಯದ್ಭುತಮಿದಂ ಬ್ರಹ್ಮನ್ಧರ್ಮಾಖ್ಯಾನಮನುತ್ತಮಂ।
03206033c ಸರ್ವಧರ್ಮಭೃತಾಂ ಶ್ರೇಷ್ಠ ಕಥಿತಂ ದ್ವಿಜಸತ್ತಮ।।

ಯುಧಿಷ್ಠಿರನು ಹೇಳಿದನು: “ಸರ್ವಧರ್ಮಭೃತರಲ್ಲಿ ಶ್ರೇಷ್ಠ! ದ್ವಿಜಸತ್ತಮ! ಬ್ರಹ್ಮನ್! ನೀನು ಹೇಳಿದ ಈ ಧರ್ಮಾಖ್ಯಾನವು ಅನುತ್ತಮವಾದುದು! ಅದ್ಭುತವಾದುದು!

03206034a ಸುಖಶ್ರವ್ಯತಯಾ ವಿದ್ವನ್ಮುಹೂರ್ತಮಿವ ಮೇ ಗತಂ।
03206034c ನ ಹಿ ತೃಪ್ತೋಽಸ್ಮಿ ಭಗವಂ ಶೃಣ್ವಾನೋ ಧರ್ಮಮುತ್ತಮಂ।।

ವಿದ್ವನ್! ಭಗವನ್! ನಿನ್ನನ್ನು ಕೇಳುತ್ತಾ ಸಮಯವು ಸುಖವಾಗಿ ಮುಹೂರ್ತದಂತೆ ಕಳೆದುಹೋಯಿತು. ಉತ್ತಮ ಧರ್ಮದ ಕುರಿತು ಕೇಳಿ ಇನ್ನೂ ತೃಪ್ತನಾಗಿಲ್ಲ.””

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಬ್ರಾಹ್ಮಣವ್ಯಾಧಸಂವಾದೇ ಷಷ್ಟಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರಾಆರನೆಯ ಅಧ್ಯಾಯವು.