ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 205
ಸಾರ
ತಾಳ್ಮೆ ಮತ್ತು ಸತ್ಯಶೀಲತೆಯಿಂದ ಶುಶ್ರೂಷೆ ಮಾಡುವುದೂ ತಪಸ್ಸೇ, ಆ ತಪಸ್ಸಿನ ಬಲದಿಂದಲೇ ಆ ಪತಿವ್ರತೆಯು ನಿನ್ನನ್ನು ಇಲ್ಲಿಗೆ ಕಳುಹಿಸಿದಳು ಎಂದು ವ್ಯಾಧನು ಕೌಶಿಕನಿಗೆ ಹೇಳಿ, ತನ್ನ ತಂದೆತಾಯಿಯರ ಬಳಿ ಹಿಂದಿರುಗಿ ಶುಶ್ರೂಷೆ ಮಾಡೆಂದು ಹೇಳುವುದು (1-10). ಧರ್ಮಾತ್ಮನಾದ ಅವನು ಶೂದ್ರಯೋನಿಯಲ್ಲಿ ಹೇಗೆ ಜನಿಸಿದನೆಂದು ಕೇಳಲು (11-20) ವ್ಯಾಧನು ತನ್ನ ಪೂರ್ವಜನ್ಮವೃತ್ತಾಂತವನ್ನು ಕೌಶಿಕನಿಗೆ ಹೇಳಿದುದು (21-29).
03205001 ಮಾರ್ಕಂಡೇಯ ಉವಾಚ।
03205001a ಗುರೂ ನಿವೇದ್ಯ ವಿಪ್ರಾಯ ತೌ ಮಾತಾಪಿತರಾವುಭೌ।
03205001c ಪುನರೇವ ಸ ಧರ್ಮಾತ್ಮಾ ವ್ಯಾಧೋ ಬ್ರಾಹ್ಮಣಮಬ್ರವೀತ್।।
ಮಾರ್ಕಂಡೇಯನು ಹೇಳಿದನು: “ಹಿರಿಯರಾದ ತಂದೆ ತಾಯಂದಿರಿಬ್ಬರನ್ನೂ ವಿಪ್ರನಿಗೆ ಪರಿಚಯ ಮಾಡಿಸಿಕೊಟ್ಟು ಆ ಧರ್ಮಾತ್ಮ ವ್ಯಾಧನು ಬ್ರಾಹ್ಮಣನಿಗೆ ಪುನಃ ಹೇಳಿದನು:
03205002a ಪ್ರವೃತ್ತಚಕ್ಷುರ್ಜಾತೋಽಸ್ಮಿ ಸಂಪಶ್ಯ ತಪಸೋ ಬಲಂ।
03205002c ಯದರ್ಥಮುಕ್ತೋಽಸಿ ತಯಾ ಗಚ್ಚಸ್ವ ಮಿಥಿಲಾಮಿತಿ।।
03205003a ಪತಿಶುಶ್ರೂಷಪರಯಾ ದಾಂತಯಾ ಸತ್ಯಶೀಲಯಾ।
03205003c ಮಿಥಿಲಾಯಾಂ ವಸನ್ವ್ಯಾಧಃ ಸ ತೇ ಧರ್ಮಾನ್ಪ್ರವಕ್ಷ್ಯತಿ।।
“ಅಂತರ್ಗತ ದೃಷ್ಟಿಯನ್ನು ನೀಡಿರುವ ನನ್ನ ತಪಸ್ಸಿನ ಬಲವನ್ನು ನೋಡು. ಆದುದರಿಂದಲೇ ತಾಳ್ಮೆಯಿಂದ ಮತ್ತು ಸತ್ಯಶೀಲತೆಯಿಂದ ಪತಿಶುಶ್ರೂಷಣೆಯಲ್ಲಿ ನಿರತಳಾಗಿರುವ ಅವಳು ನಿನಗೆ “ಮಿಥಿಲೆಗೆ ಹೋಗು! ಮಿಥಿಲೆಯಲ್ಲಿ ವಾಸಿಸುವ ವ್ಯಾಧನು ನಿನಗೆ ಧರ್ಮಗಳ ಕುರಿತು ಹೇಳುತ್ತಾನೆ” ಎಂದು ಹೇಳಿದಳು.”
03205004 ಬ್ರಾಹ್ಮಣ ಉವಾಚ।
03205004a ಪತಿವ್ರತಾಯಾಃ ಸತ್ಯಾಯಾಃ ಶೀಲಾಢ್ಯಾಯಾ ಯತವ್ರತ।
03205004c ಸಂಸ್ಮೃತ್ಯ ವಾಕ್ಯಂ ಧರ್ಮಜ್ಞ ಗುಣವಾನಸಿ ಮೇ ಮತಃ।।
ಬ್ರಾಹ್ಮಣನು ಹೇಳಿದನು: “ಧರ್ಮಜ್ಞ! ಯತವ್ರತ! ಆ ಪತಿವ್ರತೆ, ಸತ್ಯೆ, ಶೀಲಾಧ್ಯೆಯು ತಿಳಿದೇ ಹೇಳಿರಬೇಕು. ಏಕೆಂದರೆ ಅವೆಲ್ಲ ಗುಣಗಳೂ ನಿನ್ನಲ್ಲಿವೆ ಎಂದು ನನಗನ್ನಿಸುತ್ತದೆ.”
03205005 ವ್ಯಾಧ ಉವಾಚ।
03205005a ಯತ್ತದಾ ತ್ವಂ ದ್ವಿಜಶ್ರೇಷ್ಠ ತಯೋಕ್ತೋ ಮಾಂ ಪ್ರತಿ ಪ್ರಭೋ।
03205005c ದೃಷ್ಟಮೇತತ್ತಯಾ ಸಮ್ಯಗೇಕಪತ್ನ್ಯಾ ನ ಸಂಶಯಃ।।
ವ್ಯಾಧನು ಹೇಳಿದನು: “ದ್ವಿಜಶ್ರೇಷ್ಠ! ಪ್ರಭೋ! ನನ್ನ ಕುರಿತು ಅವಳು ನಿನಗೆ ಏನು ಹೇಳಿದ್ದಾಳೋ ಅದನ್ನು ಅವಳು ಎಲ್ಲವನ್ನು ನೋಡಿಯೇ ಹೇಳಿದ್ದಾಳೆ ಎನ್ನುವುದರಲ್ಲಿ ಸಂಶಯವಿಲ್ಲ.
03205006a ತ್ವದನುಗ್ರಹಬುದ್ಧ್ಯಾ ತು ವಿಪ್ರೈತದ್ದರ್ಶಿತಂ ಮಯಾ।
03205006c ವಾಕ್ಯಂ ಚ ಶೃಣು ಮೇ ತಾತ ಯತ್ತೇ ವಕ್ಷ್ಯೇ ಹಿತಂ ದ್ವಿಜ।।
ವಿಪ್ರ! ದ್ವಿಜ! ಮಿತ್ರ! ಅನುಗ್ರಹಿಸಲೆಂದೇ ನಾನು ನಿನಗೆ ಇವೆಲ್ಲವನ್ನೂ ತಿಳಿಸಿದ್ದೇನೆ. ಈಗ ಕೇಳು. ನಿನಗೆ ಹಿತವಾದುದು ಏನೆಂದು ಹೇಳುತ್ತೇನೆ.
03205007a ತ್ವಯಾ ವಿನಿಕೃತಾ ಮಾತಾ ಪಿತಾ ಚ ದ್ವಿಜಸತ್ತಮ।
03205007c ಅನಿಸೃಷ್ಟೋಽಸಿ ನಿಷ್ಕ್ರಾಂತೋ ಗೃಹಾತ್ತಾಭ್ಯಾಮನಿಂದಿತ।
03205007e ವೇದೋಚ್ಚಾರಣಕಾರ್ಯಾರ್ಥಮಯುಕ್ತಂ ತತ್ತ್ವಯಾ ಕೃತಂ।।
ದ್ವಿಜಸತ್ತಮ! ನೀನು ನಿನ್ನ ತಾಯಿ-ತಂದೆಯರೊಂದಿಗೆ ಸರಿಯಾಗಿ ನಡೆದುಕೊಂಡಿಲ್ಲ. ಅನಿಂದಿತ! ಅವರಿಗೆ ಹೇಳದೇ ನೀನು ವೇದೋಚ್ಛಾರಣಕ್ಕೆಂದು ಮನೆಯಿಂದ ಹೊರಗೆ ಹೋದೆ.
03205008a ತವ ಶೋಕೇನ ವೃದ್ಧೌ ತಾವಂಧೌ ಜಾತೌ ತಪಸ್ವಿನೌ।
03205008c ತೌ ಪ್ರಸಾದಯಿತುಂ ಗಚ್ಚ ಮಾ ತ್ವಾ ಧರ್ಮೋಽತ್ಯಗಾನ್ಮಹಾನ್।।
ನಿನ್ನ ಶೋಕದಿಂದ ಆ ವೃದ್ಧ ತಪಸ್ವಿಗಳು ಕುರುಡರಾಗಿದ್ದಾರೆ. ಅವರನ್ನು ಸಂತವಿಸಲು ಹೋಗು. ನೀನು ಈ ಮಹಾ ಧರ್ಮದ ಮಾರ್ಗವನ್ನು ತಪ್ಪದಿರು.
03205009a ತಪಸ್ವೀ ತ್ವಂ ಮಹಾತ್ಮಾ ಚ ಧರ್ಮೇ ಚ ನಿರತಃ ಸದಾ।
03205009c ಸರ್ವಮೇತದಪಾರ್ಥಂ ತೇ ಕ್ಷಿಪ್ರಂ ತೌ ಸಂಪ್ರಸಾದಯ।।
ಮಹಾತ್ಮಾ! ನೀನು ತಪಸ್ವಿ ಮತ್ತು ಸದಾ ಧರ್ಮದಲ್ಲಿ ನಿರತನಾಗಿರುವೆ. ಆದರೆ ಇವೆಲ್ಲವೂ ನಿನಗೆ ಅಪಾರ್ಥಗಳಾಗಿವೆ. ತ್ವರೆಮಾಡಿ ಅವರೀರ್ವರನ್ನು ಸಂತವಿಸು.
03205010a ಶ್ರದ್ದಧಸ್ವ ಮಮ ಬ್ರಹ್ಮನ್ನಾನ್ಯಥಾ ಕರ್ತುಮರ್ಹಸಿ।
03205010c ಗಮ್ಯತಾಮದ್ಯ ವಿಪ್ರರ್ಷೇ ಶ್ರೇಯಸ್ತೇ ಕಥಯಾಮ್ಯಹಂ।।
ಬ್ರಹ್ಮನ್! ನನ್ನಲ್ಲಿ ಶ್ರದ್ಧೆಯನ್ನಿಡು. ಅನ್ಯಥಾ ಮಾಡಬೇಡ! ವಿಪ್ರರ್ಷೇ! ಇಂದೇ ಹೋಗು. ನಿನಗೆ ಒಳ್ಳೆಯದಾಗುತ್ತದೆಯೆಂದು ನಾನು ಹೇಳುತ್ತೇನೆ.”
03205011 ಬ್ರಾಹ್ಮಣ ಉವಾಚ।
03205011a ಯದೇತದುಕ್ತಂ ಭವತಾ ಸರ್ವಂ ಸತ್ಯಮಸಂಶಯಂ।
03205011c ಪ್ರೀತೋಽಸ್ಮಿ ತವ ಧರ್ಮಜ್ಞ ಸಾಧ್ವಾಚಾರ ಗುಣಾನ್ವಿತ।।
ಬ್ರಾಹ್ಮಣನು ಹೇಳಿದನು: “ನೀನು ಹೇಳುವುದೆಲ್ಲವೂ ಸತ್ಯ ಎನ್ನುವುದರಲ್ಲಿ ಸಂಶಯವಿಲ್ಲ. ಧರ್ಮಜ್ಞ! ಸಾಧ್ವಾಚಾರ ಗುಣಾನ್ವಿತ! ನಿನ್ನಿಂದ ನಾನು ಸಂತೋಷಗೊಂಡಿದ್ದೇನೆ.”
03205012 ವ್ಯಾಧ ಉವಾಚ।
03205012a ದೈವತಪ್ರತಿಮೋ ಹಿ ತ್ವಂ ಯಸ್ತ್ವಂ ಧರ್ಮಮನುವ್ರತಃ।
03205012c ಪುರಾಣಂ ಶಾಶ್ವತಂ ದಿವ್ಯಂ ದುಷ್ಪ್ರಾಪಮಕೃತಾತ್ಮಭಿಃ।।
ವ್ಯಾಧನು ಹೇಳಿದನು: “ನೀನು ದೈವತ ಪ್ರತಿಮೆಯಾಗಿದ್ದೀಯೆ. ನೀನು ಅನುಸರಿಸುವ ಧರ್ಮವು ಪುರಾಣವು, ಶಾಶ್ವತವು, ದಿವ್ಯವು. ಮತ್ತು ಕೃತಾತ್ಮರಿಗೂ ಕಷ್ಟಸಾಧ್ಯವಾದುದು.
03205013a ಅತಂದ್ರಿತಃ ಕುರು ಕ್ಷಿಪ್ರಂ ಮಾತಾಪಿತ್ರೋರ್ಹಿ ಪೂಜನಂ।
03205013c ಅತಃ ಪರಮಹಂ ಧರ್ಮಂ ನಾನ್ಯಂ ಪಶ್ಯಾಮಿ ಕಂ ಚನ।।
ಆದರೆ ಬೇಗನೆ ಹೋಗಿ ನೀನು ನಿನ್ನ ಮಾತಾಪಿತೃಗಳ ಪೂಜನೆಯನ್ನು ಮಾಡು. ಇದಕ್ಕಿಂತ ಹೆಚ್ಚಿನ ಧರ್ಮವನ್ನು ನಾನು ಬೇರೆ ಯಾವುದರಲ್ಲಿಯೂ ಕಾಣುವುದಿಲ್ಲ.”
03205014 ಬ್ರಾಹ್ಮಣ ಉವಾಚ।
03205014a ಇಹಾಹಮಾಗತೋ ದಿಷ್ಟ್ಯಾ ದಿಷ್ಟ್ಯಾ ಮೇ ಸಂಗತಂ ತ್ವಯಾ।
03205014c ಈದೃಶಾ ದುರ್ಲಭಾ ಲೋಕೇ ನರಾ ಧರ್ಮಪ್ರದರ್ಶಕಾಃ।।
ಬ್ರಾಹ್ಮಣನು ಹೇಳಿದನು: “ನಾನು ಇಲ್ಲಿಗೆ ಬಂದುದು ಒಳ್ಳೆಯದಾಯಿತು. ನಿನ್ನನ್ನು ಭೇಟಿಮಾಡಿದೆನೆಂದು ಒಳ್ಳೆಯದಾಯಿತು. ಈ ರೀತಿಯ ಧರ್ಮಪ್ರದರ್ಶಕ ನರರು ಲೋಕದಲ್ಲಿ ದುರ್ಲಭ.
03205015a ಏಕೋ ನರಸಹಸ್ರೇಷು ಧರ್ಮವಿದ್ವಿದ್ಯತೇ ನ ವಾ।
03205015c ಪ್ರೀತೋಽಸ್ಮಿ ತವ ಸತ್ಯೇನ ಭದ್ರಂ ತೇ ಪುರುಷೋತ್ತಮ।।
ಸಾವಿರರಲ್ಲಿ ಒಬ್ಬ ನರನು ಧರ್ಮವನ್ನು ತಿಳಿದಿರಬಹುದು. ಪುರುಷೋತ್ತಮ! ನಿನ್ನ ಸತ್ಯದಿಂದ ಪ್ರೀತನಾಗಿದ್ದೇನೆ. ನಿನಗೆ ಮಂಗಳವಾಗಲಿ!
03205016a ಪತಮಾನೋ ಹಿ ನರಕೇ ಭವತಾಸ್ಮಿ ಸಮುದ್ಧೃತಃ।
03205016c ಭವಿತವ್ಯಮಥೈವಂ ಚ ಯದ್ದೃಷ್ಟೋಽಸಿ ಮಯಾನಘ।।
ನರಕದಲ್ಲಿ ಬೀಳುತ್ತಿದ್ದ ನನ್ನನ್ನು ನೀನು ಮೇಲಕ್ಕೆತ್ತಿದ್ದೀಯೆ. ಅನಘ! ನೀನು ನನ್ನ ದಾರಿಯಲ್ಲಿ ದೊರೆಯಬೇಕೆಂದು ಮೊದಲೇ ನಿರ್ಧಿತವಾಗಿರಬೇಕು.
03205017a ರಾಜಾ ಯಯಾತಿರ್ದೌಹಿತ್ರೈಃ ಪತಿತಸ್ತಾರಿತೋ ಯಥಾ।
03205017c ಸದ್ಭಿಃ ಪುರುಷಶಾರ್ದೂಲ ತಥಾಹಂ ಭವತಾ ತ್ವಿಹ।।
ಪುರುಷಶಾರ್ದೂಲ! ರಾಜಾ ಯಯಾತಿಯು ಕೆಳಗೆ ಬೀಳುತ್ತಿರುವಾಗ ಹೇಗೆ ಅವನ ಉತ್ತಮ ಮಗಳ ಮಕ್ಕಳಿಂದ ಪಾರುಗೊಳಿಸಲ್ಪಟ್ಟನೋ1 ಹಾಗೆ ನಿನ್ನಿಂದ ನಾನು ಪಾರುಗೊಂಡೆ.
03205018a ಮಾತಾಪಿತೃಭ್ಯಾಂ ಶುಶ್ರೂಷಾಂ ಕರಿಷ್ಯೇ ವಚನಾತ್ತವ।
03205018c ನಾಕೃತಾತ್ಮಾ ವೇದಯತಿ ಧರ್ಮಾಧರ್ಮವಿನಿಶ್ಚಯಂ।।
ನಿನ್ನ ಮಾತಿನಂತೆ ಮಾತಾಪಿತೃಗಳ ಶುಶ್ರೂಷೆಯನ್ನು ಮಾಡುತ್ತೇನೆ. ಏಕೆಂದರೆ ಅಕೃತಾತ್ಮನು ಧರ್ಮಾಧರ್ಮ ವಿನಿಶ್ಚಿಯವನ್ನು ತಿಳಿದಿರಲಾರ.
03205019a ದುರ್ಜ್ಞೇಯಃ ಶಾಶ್ವತೋ ಧರ್ಮಃ ಶೂದ್ರಯೋನೌ ಹಿ ವರ್ತತಾ।
03205019c ನ ತ್ವಾಂ ಶೂದ್ರಮಹಂ ಮನ್ಯೇ ಭವಿತವ್ಯಂ ಹಿ ಕಾರಣಂ।
03205019e ಯೇನ ಕರ್ಮವಿಪಾಕೇನ ಪ್ರಾಪ್ತೇಯಂ ಶೂದ್ರತಾ ತ್ವಯಾ।।
ಶೂದ್ರಯೋನಿಯಲ್ಲಿ ಜನಿಸಿದವನಿಗೆ ಶಾಶ್ವತ ಧರ್ಮವನ್ನು ಅರಿತಿರುವುದು ಅಸಾಧ್ಯವಾದುದರಿಂದ ನಾನು ನಿನ್ನನ್ನು ಶೂದ್ರನೆಂದು ಪರಿಗಣಿಸುವುದಿಲ್ಲ. ನೀನು ಯಾವ ಕರ್ಮವಿಪಾಕದಿಂದ ಈ ಶೂದ್ರತ್ವವನ್ನು ಪಡೆದಿರುವೆಯೋ ಅದೂ ಕೂಡ ಭವಿತವ್ಯದ ಕಾರಣದಿಂದಿರಬಹುದು.
03205020a ಏತದಿಚ್ಚಾಮಿ ವಿಜ್ಞಾತುಂ ತತ್ತ್ವೇನ ಹಿ ಮಹಾಮತೇ।
03205020c ಕಾಮಯಾ ಬ್ರೂಹಿ ಮೇ ತಥ್ಯಂ ಸರ್ವಂ ತ್ವಂ ಪ್ರಯತಾತ್ಮವಾನ್।।
ಮಹಾಮತೇ! ಇದನ್ನು ತಿಳಿಯಲು ಬಯಸುತ್ತೇನೆ. ಪ್ರಯತಾತ್ಮವಾನ್! ಇದರ ತತ್ವವನ್ನು ನಿನಗಿಷ್ಟವಾದರೆ ಎಲ್ಲವನ್ನೂ ಇದ್ದಹಾಗೆ ನನಗೆ ಹೇಳುವವನಾಗು.”
03205021 ವ್ಯಾಧ ಉವಾಚ।
03205021a ಅನತಿಕ್ರಮಣೀಯಾ ಹಿ ಬ್ರಾಹ್ಮಣಾ ವೈ ದ್ವಿಜೋತ್ತಮ।
03205021c ಶೃಣು ಸರ್ವಮಿದಂ ವೃತ್ತಂ ಪೂರ್ವದೇಹೇ ಮಮಾನಘ।।
ವ್ಯಾಧನು ಹೇಳಿದನು: “ದ್ವಿಜೋತ್ತಮ! ಬ್ರಾಹ್ಮಣರು ಅನತಿಕ್ರಮಣೀಯರಲ್ಲವೇ? ಅನಘ! ನನ್ನ ಪೂರ್ವದೇಹದ ಎಲ್ಲ ಈ ವೃತ್ತಾಂತವನ್ನೂ ಕೇಳು.
03205022a ಅಹಂ ಹಿ ಬ್ರಾಹ್ಮಣಃ ಪೂರ್ವಮಾಸಂ ದ್ವಿಜವರಾತ್ಮಜ।
03205022c ವೇದಾಧ್ಯಾಯೀ ಸುಕುಶಲೋ ವೇದಾಂಗಾನಾಂ ಚ ಪಾರಗಃ।
03205022e ಆತ್ಮದೋಷಕೃತೈರ್ಬ್ರಹ್ಮನ್ನವಸ್ಥಾಂ ಪ್ರಾಪ್ತವಾನಿಮಾಂ।।
ದ್ವಿಜವರಾತ್ಮಜ! ಹಿಂದೆ ನಾನೂ ಕೂಡ ವಿದ್ಯಾಧ್ಯಾಯೀ, ಸುಕುಶಲ, ವೇದಾಂಗಗಳ ಪಾರಂಗತ ಬ್ರಾಹ್ಮಣನಾಗಿದ್ದೆ. ಬ್ರಹ್ಮನ್! ನಾನೇ ಮಾಡಿದ ದೋಷದಿಂದ ಈ ಅವಸ್ಥೆಯನ್ನು ಪಡೆದಿದ್ದೇನೆ.
03205023a ಕಶ್ಚಿದ್ರಾಜಾ ಮಮ ಸಖಾ ಧನುರ್ವೇದಪರಾಯಣಃ।
03205023c ಸಂಸರ್ಗಾದ್ಧನುಷಿ ಶ್ರೇಷ್ಠಸ್ತತೋಽಹಮಭವಂ ದ್ವಿಜ।।
ದ್ವಿಜ! ಯಾರೋ ಒಬ್ಬ ಧನುರ್ವೇದಪರಾಯಣ ರಾಜನು ನನ್ನ ಸಖನಾಗಿದ್ದನು. ಅವನ ಸಂಸರ್ಗದಿಂದ ನಾನೂ ಕೂಡ ಶ್ರೇಷ್ಠ ಧನುಷಿಯಾದೆ.
03205024a ಏತಸ್ಮಿನ್ನೇವ ಕಾಲೇ ತು ಮೃಗಯಾಂ ನಿರ್ಗತೋ ನೃಪಃ।
03205024c ಸಹಿತೋ ಯೋಧಮುಖ್ಯೈಶ್ಚ ಮಂತ್ರಿಭಿಶ್ಚ ಸುಸಂವೃತಃ।
03205024e ತತೋಽಭ್ಯಹನ್ಮೃಗಾಂಸ್ತತ್ರ ಸುಬಹೂನಾಶ್ರಮಂ ಪ್ರತಿ।।
ಹೀಗಿರುವಾಗ ಒಮ್ಮೆ ನೃಪನು ಸೇನಾಪತಿಗಳೊಂದಿಗೆ ಮಂತ್ರಿಗಳಿಂದ ಸುತ್ತುವರೆಯಲ್ಪಟ್ಟು ಬೇಟೆಗೆ ಹೊರಟನು. ಒಂದು ಆಶ್ರಮದ ಬಳಿ ಬಹಳಷ್ಟು ಜಿಂಕೆಗಳನ್ನು ಅವನು ಬೇಟೆಯಾಡಿದನು.
03205025a ಅಥ ಕ್ಷಿಪ್ತಃ ಶರೋ ಘೋರೋ ಮಯಾಪಿ ದ್ವಿಜಸತ್ತಮ।
03205025c ತಾಡಿತಶ್ಚ ಮುನಿಸ್ತೇನ ಶರೇಣಾನತಪರ್ವಣಾ।।
ದ್ವಿಜಸತ್ತಮ! ಆಗ ನಾನೂ ಕೂಡ ಘೋರವಾದ ಬಾಣವನ್ನು ಬಿಟ್ಟೆನು. ಆ ಶರವು ಒಂದು ಮುನಿಯನ್ನು ಹೊಡೆದು ಮೊಂಡಾಯಿತು.
03205026a ಭೂಮೌ ನಿಪತಿತೋ ಬ್ರಹ್ಮನ್ನುವಾಚ ಪ್ರತಿನಾದಯನ್।
03205026c ನಾಪರಾಧ್ಯಾಮ್ಯಹಂ ಕಿಂ ಚಿತ್ಕೇನ ಪಾಪಮಿದಂ ಕೃತಂ।।
ಭೂಮಿಯಲ್ಲಿ ಬಿದ್ದ ಬ್ರಾಹ್ಮಣನು ಜೋರಾಗಿ ಹೇಳಿದನು: “ನಾನು ಏನೂ ಅಪರಾಧವನ್ನು ಮಾಡಲಿಲ್ಲ. ಈ ಪಾಪವನ್ನು ಮಾಡಿದವನು ಯಾರು?”
03205027a ಮನ್ವಾನಸ್ತಂ ಮೃಗಂ ಚಾಹಂ ಸಂಪ್ರಾಪ್ತಃ ಸಹಸಾ ಮುನಿಂ।
03205027c ಅಪಶ್ಯಂ ತಮೃಷಿಂ ವಿದ್ಧಂ ಶರೇಣಾನತಪರ್ವಣಾ।
03205027e ತಮುಗ್ರತಪಸಂ ವಿಪ್ರಂ ನಿಷ್ಟನಂತಂ ಮಹೀತಲೇ।।
03205028a ಅಕಾರ್ಯಕರಣಾಚ್ಚಾಪಿ ಭೃಶಂ ಮೇ ವ್ಯಥಿತಂ ಮನಃ।
ಅದು ಮೃಗವೆಂದು ತಿಳಿದು ನಾನು ಒಮ್ಮೆಲೇ ಮುನಿಯ ಬಳಿಸಾರಿ ಆ ಋಷಿಯ ದೇಹವನ್ನು ನನ್ನ ಬಾಣವು ಸೀಳಿದ್ದುದನ್ನು ನೋಡಿದೆ. ನನ್ನ ಈ ಕೆಟ್ಟ ಕೆಲಸದಿಂದ ಮನಸ್ಸು ತುಂಬಾ ವ್ಯಥಿತಗೊಂಡಿತು. ಆಗ ನೆಲದಮೇಲೆ ಬಿದ್ದು ನರಳುತ್ತಿದ್ದ ಆ ಉಗ್ರತಪಸ್ವಿಗೆ ಹೇಳಿದೆನು.
03205028c ಅಜಾನತಾ ಕೃತಮಿದಂ ಮಯೇತ್ಯಥ ತಮಬ್ರುವಂ।
03205028e ಕ್ಷಂತುಮರ್ಹಸಿ ಮೇ ಬ್ರಹ್ಮನ್ನಿತಿ ಚೋಕ್ತೋ ಮಯಾ ಮುನಿಃ।।
“ಬ್ರಹ್ಮನ್! ತಿಳಿಯದೇ ಈ ಕೆಲಸವನ್ನು ನಾನು ಮಾಡಿಬಿಟ್ಟೆ. ನನ್ನನ್ನು ಕ್ಷಮಿಸಬೇಕು” ಎಂದು ಮುನಿಗೆ ಹೇಳಿದೆನು.
03205029a ತತಃ ಪ್ರತ್ಯಬ್ರವೀದ್ವಾಕ್ಯಮೃಷಿರ್ಮಾಂ ಕ್ರೋಧಮೂರ್ಚಿತಃ।
03205029c ವ್ಯಾಧಸ್ತ್ವಂ ಭವಿತಾ ಕ್ರೂರ ಶೂದ್ರಯೋನಾವಿತಿ ದ್ವಿಜ।।
ಆಗ ಕ್ರೋಧಮೂರ್ಛಿತನಾದ ಋಷಿಯು ನನಗೆ ಉತ್ತರಿಸಿದನು: “ಕ್ರೂರ! ದ್ವಿಜ! ನೀನು ಶೂದ್ರ ವ್ಯಾಧನಾಗುತ್ತೀಯೆ!””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಬ್ರಾಹ್ಮಣವ್ಯಾಧಸಂವಾದೇ ಪಂಚಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರಾಐದನೆಯ ಅಧ್ಯಾಯವು.
-
ಈ ವೃತ್ತಾಂತವು ಉದ್ಯೋಗಪರ್ವದ ಭಗವದ್ಯಾನಪರ್ವದಲ್ಲಿ ವಿಸ್ತಾರವಾಗಿ ಬರುತ್ತದೆ. ↩︎