ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 203
ಸಾರ
ತ್ರಿಗುಣಗಳ ವರ್ಣನೆ (1-12). ಶರೀರಾಗ್ನಿ ಮತ್ತು ಪ್ರಾಣವಾಯುಗಳು ಜೀವವನ್ನು ನಡೆಸುವುದರ ವರ್ಣನೆ (13-32). ಜೀವಾತ್ಮ ಸ್ವರೂಪವನ್ನು ಕಂಡುಕೊಳ್ಳುವ ವಿಧಾನಗಳು (33-51).
03203001 ಮಾರ್ಕಂಡೇಯ ಉವಾಚ।
03203001a ಏವಂ ತು ಸೂಕ್ಷ್ಮೇ ಕಥಿತೇ ಧರ್ಮವ್ಯಾಧೇನ ಭಾರತ।
03203001c ಬ್ರಾಹ್ಮಣಃ ಸ ಪುನಃ ಸೂಕ್ಷ್ಮಂ ಪಪ್ರಚ್ಚ ಸುಸಮಾಹಿತಃ।
ಮಾರ್ಕಂಡೇಯನು ಹೇಳಿದನು: “ಭಾರತ! ಈ ರೀತಿ ಸೂಕ್ಷ್ಮವಾದ ವಿಚಾರಗಳನ್ನು ಧರ್ಮವ್ಯಾಧನು ಹೇಳಲು ಬ್ರಾಹ್ಮಣನು ಪುನಃ ಸುಸಮಾಹಿತನಾಗಿ ಸೂಕ್ಷ್ಮ ವಿಷಯದ ಕುರಿತು ಕೇಳಿದನು.
03203002 ಬ್ರಾಹ್ಮಣ ಉವಾಚ।
03203002a ಸತ್ತ್ವಸ್ಯ ರಜಸಶ್ಚೈವ ತಮಸಶ್ಚ ಯಥಾತಥಂ।
03203002c ಗುಣಾಂಸ್ತತ್ತ್ವೇನ ಮೇ ಬ್ರೂಹಿ ಯಥಾವದಿಹ ಪೃಚ್ಚತಃ।।
ಬ್ರಾಹ್ಮಣನು ಹೇಳಿದನು: “ಸತ್ವ, ರಜಸ್ ಮತ್ತು ತಮೋಗುಣಗಳ ತತ್ವಗಳನ್ನು ಯಥಾವತ್ತಾಗಿ ಕೇಳಿದುದಕ್ಕೆ ಇದ್ದಹಾಗೆ ಹೇಳು.”
03203003 ವ್ಯಾಧ ಉವಾಚ।
03203003a ಹಂತ ತೇ ಕಥಯಿಷ್ಯಾಮಿ ಯನ್ಮಾಂ ತ್ವಂ ಪರಿಪೃಚ್ಚಸಿ।
03203003c ಏಷಾಂ ಗುಣಾನ್ಪೃಥಕ್ತ್ವೇನ ನಿಬೋಧ ಗದತೋ ಮಮ।।
ವ್ಯಾಧನು ಹೇಳಿದನು: “ನೀನು ನನಗೆ ಕೇಳಿದ್ದುದನ್ನು ನಿನಗೆ ಹೇಳುತ್ತೇನೆ. ಈ ಗುಣಗಳ ಕುರಿತು ಒಂದೊಂದಾಗಿ ಹೇಳುತ್ತೇನೆ. ಕೇಳು.
03203004a ಮೋಹಾತ್ಮಕಂ ತಮಸ್ತೇಷಾಂ ರಜ ಏಷಾಂ ಪ್ರವರ್ತಕಂ।
03203004c ಪ್ರಕಾಶಬಹುಲತ್ವಾಚ್ಚ ಸತ್ತ್ವಂ ಜ್ಯಾಯ ಇಹೋಚ್ಯತೇ।।
ಅವುಗಳಲ್ಲಿ ತಮಸ್ಸು ಮೋಹಾತ್ಮಕವು. ಅವುಗಳಲ್ಲಿ ರಜಸ್ಸು ಪ್ರವರ್ತಕ. ಸತ್ವವು ಕತ್ತಲೆಗೆ ಪ್ರಕಾಶವನ್ನು ನೀಡುವುದು. ಆದುದರಿಂದ ಅದನ್ನು ಅತ್ಯುತ್ತಮವೆಂದು ಹೇಳುತ್ತಾರೆ.
03203005a ಅವಿದ್ಯಾಬಹುಲೋ ಮೂಢಃ ಸ್ವಪ್ನಶೀಲೋ ವಿಚೇತನಃ।
03203005c ದುರ್ದೃಶೀಕಸ್ತಮೋಧ್ವಸ್ತಃ ಸಕ್ರೋಧಸ್ತಾಮಸೋಽಲಸಃ।।
ಅವಿದ್ಯ, ಬಹಳ ಮೂಢ, ಸ್ವಪ್ನಶೀಲ, ವಿಚೇತನ, ಸೋಮಾರಿ, ಉತ್ಸಾಹವಿಲ್ಲದವನು, ಸಿಟ್ಟು ಮತ್ತು ಸೊಕ್ಕಿಗೆ ಸದಾ ಸಿಲುಕುವವನು ತಾಮಸನೆಂದು ಹೇಳುತ್ತಾರೆ.
03203006a ಪ್ರವೃತ್ತವಾಕ್ಯೋ ಮಂತ್ರೀ ಚ ಯೋಽನುರಾಗ್ಯಭ್ಯಸೂಯಕಃ।
03203006c ವಿವಿತ್ಸಮಾನೋ ವಿಪ್ರರ್ಷೇ ಸ್ತಬ್ಧೋ ಮಾನೀ ಸ ರಾಜಸಃ।।
ವಿಪ್ರರ್ಷೇ! ಉತ್ತಮ ಮಾತನಾಡುವವನು, ಚೆನ್ನಾಗಿ ಯೋಚಿಸುವ, ಅನುರಾಗವುಳ್ಳ, ಅಸೂಯೆಪಡದ, ಫಲಿತಾಂಶವನ್ನು ಬಯಸಿ ಕಾರ್ಯಶೀಲನಾಗಿರುವ ಮತ್ತು ಸ್ನೇಹಭಾವದಿಂದಿರುವವನು ರಾಜಸನೆಂದು ತಿಳಿಯಬೇಕು.
03203007a ಪ್ರಕಾಶಬಹುಲೋ ಧೀರೋ ನಿರ್ವಿವಿತ್ಸೋಽನಸೂಯಕಃ।
03203007c ಅಕ್ರೋಧನೋ ನರೋ ಧೀಮಾನ್ದಾಂತಶ್ಚೈವ ಸ ಸಾತ್ತ್ವಿಕಃ।।
ಅಚಲನಾಗಿರುವ, ಧೀರನಾಗಿರುವ, ಫಲಿತಾಂಶಕ್ಕೆ ಮಾತ್ರ ಕಾರ್ಯನಿರತನಾಗಿರದ, ತಾಳ್ಮೆಯನ್ನಿಟ್ಟುಕೊಂಡಿರುವ, ಅಸೂಯೆಪಡದ, ಸಿಟ್ಟಿಗೇಳದ, ಧೀಮಾನ್, ನರನು ಸಾತ್ವಿಕ.
03203008a ಸಾತ್ತ್ವಿಕಸ್ತ್ವಥ ಸಂಬುದ್ಧೋ ಲೋಕವೃತ್ತೇನ ಕ್ಲಿಶ್ಯತೇ।
03203008c ಯದಾ ಬುಧ್ಯತಿ ಬೋದ್ಧವ್ಯಂ ಲೋಕವೃತ್ತಂ ಜುಗುಪ್ಸತೇ।।
ಸಾತ್ವಿಕನು ಲೋಕವೃತ್ತಿಯಲ್ಲಿ ಸಿಲುಕಿದಾಗ ಕಷ್ಟವನ್ನು ಅನುಭವಿಸುತ್ತಾನೆ. ತಿಳುವಳಿಕೆಯು ಬಂದಾಗ ಲೋಕವೃತ್ತಿಯ ಕುರಿತು ಜಿಗುಪ್ಸೆಯನ್ನು ತಾಳುತ್ತಾನೆ.
03203009a ವೈರಾಗ್ಯಸ್ಯ ಹಿ ರೂಪಂ ತು ಪೂರ್ವಮೇವ ಪ್ರವರ್ತತೇ।
03203009c ಮೃದುರ್ಭವತ್ಯಹಂಕಾರಃ ಪ್ರಸೀದತ್ಯಾರ್ಜವಂ ಚ ಯತ್।।
ವೈರಾಗ್ಯದ ರೂಪವನ್ನು ಈ ಮೊದಲೇ ಹೇಳಿಯಾಗಿದೆ. ಅವನ ಅಹಂಕಾರವು ಕಡಿಮೆಯಾಗುತ್ತದೆ. ಮತ್ತು ಆರ್ಜವವು ಹೆಚ್ಚಾಗುತ್ತದೆ.
03203010a ತತೋಽಸ್ಯ ಸರ್ವದ್ವಂದ್ವಾನಿ ಪ್ರಶಾಮ್ಯಂತಿ ಪರಸ್ಪರಂ।
03203010c ನ ಚಾಸ್ಯ ಸಮ್ಯಮೋ ನಾಮ ಕ್ವ ಚಿದ್ಭವತಿ ಕಶ್ಚನ।।
ಆಗ ಅವನ ಎಲ್ಲ ದ್ವಂದ್ವಗಳೂ ಪರಸ್ಪರ ನಾಶಗೊಳ್ಳುತ್ತವೆ. ಆಗ ಅವನಿಗೆ ಸಂಯಮ ಎನ್ನುವುದು ಎಂದೂ ಬೇಕಾಗುವುದಿಲ್ಲ.
03203011a ಶೂದ್ರಯೋನೌ ಹಿ ಜಾತಸ್ಯ ಸದ್ಗುಣಾನುಪತಿಷ್ಠತಃ।
03203011c ವೈಶ್ಯತ್ವಂ ಭವತಿ ಬ್ರಹ್ಮನ್ ಕ್ಷತ್ರಿಯತ್ವಂ ತಥೈವ ಚ।।
ಬ್ರಹ್ಮನ್! ಶೂದ್ರಯೋನಿಯಲ್ಲಿ ಹುಟ್ಟಿದ್ದರೂ ಕೂಡ ಸದ್ಗುಣಗಳಿದ್ದರೆ ವೈಶ್ಯತ್ವವನ್ನು ಪಡೆಯಬಹುದು ಅಥವಾ ಕ್ಷತ್ರಿಯತ್ವವನ್ನೂ ಪಡೆಯಬಹುದು.
03203012a ಆರ್ಜವೇ ವರ್ತಮಾನಸ್ಯ ಬ್ರಾಹ್ಮಣ್ಯಮಭಿಜಾಯತೇ।
03203012c ಗುಣಾಸ್ತೇ ಕೀರ್ತಿತಾಃ ಸರ್ವೇ ಕಿಂ ಭೂಯಃ ಶ್ರೋತುಮಿಚ್ಚಸಿ।।
ನಡತೆಯಲ್ಲಿ ಆರ್ಜವವಿದ್ದರೆ ಬ್ರಾಹ್ಮಣ್ಯತ್ವವನ್ನೂ ಪಡೆಯಬಹುದು. ಗುಣಗಳ ಕುರಿತು ಎಲ್ಲವನ್ನೂ ಹೇಳಿದ್ದೇನೆ. ಇನ್ನೂ ಏನನ್ನು ಕೇಳಲು ಬಯಸುತ್ತೀಯೆ?”
03203013 ಬ್ರಾಹ್ಮಣ ಉವಾಚ।
03203013a ಪಾರ್ಥಿವಂ ಧಾತುಮಾಸಾದ್ಯ ಶಾರೀರೋಽಗ್ನಿಃ ಕಥಂ ಭವೇತ್।
03203013c ಅವಕಾಶವಿಶೇಷೇಣ ಕಥಂ ವರ್ತಯತೇಽನಿಲಃ।।
ಬ್ರಾಹ್ಮಣನು ಹೇಳಿದನು: “ಪಾರ್ಥಿವವು ಧಾತುವನ್ನು ಸೇರಿ ಹೇಗೆ ಶರೀರೋಗ್ನಿಯಾಗುತ್ತದೆ? ಗಾಳಿಯು ಅವಕಾಶ ವಿಶೇಷದಿಂದ ಜೀವಿಯನ್ನು ಹೇಗೆ ನಡೆಸುತ್ತದೆ?””
03203014 ಮಾರ್ಕಂಡೇಯ ಉವಾಚ।
03203014a ಪ್ರಶ್ನಮೇತಂ ಸಮುದ್ದಿಷ್ಟಂ ಬ್ರಾಹ್ಮಣೇನ ಯುಧಿಷ್ಠಿರ।
03203014c ವ್ಯಾಧಃ ಸ ಕಥಯಾಮಾಸ ಬ್ರಾಹ್ಮಣಾಯ ಮಹಾತ್ಮನೇ।।
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಬ್ರಾಹ್ಮಣನಿಟ್ಟ ಈ ಪ್ರಶ್ನೆಗೆ ವ್ಯಾಧನು ಮಹಾತ್ಮ ಬ್ರಾಹ್ಮಣನಿಗೆ ಹೇಳಿದನು.
03203015 ವ್ಯಾಧ ಉವಾಚ।
03203015a ಮೂರ್ಧಾನಮಾಶ್ರಿತೋ ವಹ್ನಿಃ ಶರೀರಂ ಪರಿಪಾಲಯನ್।
03203015c ಪ್ರಾಣೋ ಮೂರ್ಧನಿ ಚಾಗ್ನೌ ಚ ವರ್ತಮಾನೋ ವಿಚೇಷ್ಟತೇ।
03203015e ಭೂತಂ ಭವ್ಯಂ ಭವಿಷ್ಯಚ್ಚ ಸರ್ವಂ ಪ್ರಾಣೇ ಪ್ರತಿಷ್ಠಿತಂ।।
ವ್ಯಾಧನು ಹೇಳಿದನು: “ಮೂರ್ಧನಿಯಲ್ಲಿ ಆಶ್ರಿತನಾಗಿರುವ ವಹ್ನಿಯು ಶರೀರವನ್ನು ಪರಿಪಾಲಿಸುತ್ತಾನೆ. ಪ್ರಾಣ ಮತ್ತು ಮೂರ್ಧನಿಗಳಲ್ಲಿರುವ ಅಗ್ನಿಗಳೆರಡೂ ಕ್ರಿಯೆಗಳನ್ನುಂಟುಮಾಡುತ್ತವೆ. ಭೂತ, ವರ್ತಮಾನ, ಭವಿಷ್ಯಗಳೆಲ್ಲವುಗಳಲ್ಲಿ ಪ್ರಾಣವು ಪ್ರತಿಷ್ಠಿತವಾಗಿರುತ್ತದೆ.
03203016a ಶ್ರೇಷ್ಠಂ ತದೇವ ಭೂತಾನಾಂ ಬ್ರಹ್ಮಜ್ಯೋತಿರುಪಾಸ್ಮಹೇ।
03203016c ಸ ಜಂತುಃ ಸರ್ವಭೂತಾತ್ಮಾ ಪುರುಷಃ ಸ ಸನಾತನಃ।
03203016e ಮನೋ ಬುದ್ಧಿರಹಂಕಾರೋ ಭೂತಾನಾಂ ವಿಷಯಶ್ಚ ಸಃ।।
ಇದೇ ಜೀವಿಗಳಿಗೆ ಶ್ರೇಷ್ಠವಾದುದು; ಬ್ರಹ್ಮಜ್ಯೋತಿಯೆಂದು ಉಪಾಸನೆಗೊಳ್ಳುವುದು. ಇದೇ ಎಲ್ಲ ಜಂತುಗಳ ಭೂತಾತ್ಮ, ಪುರುಷ, ಸನಾತನ. ಭೂತಗಳ ಮನಸ್ಸು, ಬುದ್ಧಿ, ಅಹಂಕಾರ ಮತ್ತು ವಿಷಯ.
03203017a ಏವಂ ತ್ವಿಹ ಸ ಸರ್ವತ್ರ ಪ್ರಾಣೇನ ಪರಿಪಾಲ್ಯತೇ।
03203017c ಪೃಷ್ಠತಸ್ತು ಸಮಾನೇನ ಸ್ವಾಂ ಸ್ವಾಂ ಗತಿಮುಪಾಶ್ರಿತಃ।।
ಇಲ್ಲಿದ್ದುಕೊಂಡು ಪ್ರಾಣವು ಎಲ್ಲಕಡೆಯಿಂದಲೂ ಪರಿಪಾಲಿಸುತ್ತದೆ. ಮುಂದೆ ಅದು ಸಮಾನವಾಗಿ ಬೇರೆ ಬೇರೆ ದಾರಿಗಳಲ್ಲಿ ಮುಂದುವರೆಯುತ್ತದೆ.
03203018a ಬಸ್ತಿಮೂಲೇ ಗುದೇ ಚೈವ ಪಾವಕಃ ಸಮುಪಾಶ್ರಿತಃ।
03203018c ವಹನ್ಮೂತ್ರಂ ಪುರೀಷಂ ಚಾಪ್ಯಪಾನಃ ಪರಿವರ್ತತೇ।।
ಹೊಟ್ಟೆಯಲ್ಲಿ ಪಾವಕನೊಂದಿರುವ ಇದು (ಈ ಪ್ರಾಣವು) ಅಪಾನವಾಗಿ ಪರಿವರ್ತನೆಗೊಂಡು ಪಚನಮಾಡಿ ಮೂತ್ರ ಪುರೀಷಗಳನ್ನು ಕೊಂಡೊಯ್ದು ಗುದದಲ್ಲಿ ಹೊರಬರುತ್ತದೆ.
03203019a ಪ್ರಯತ್ನೇ ಕರ್ಮಣಿ ಬಲೇ ಯ ಏಕಸ್ತ್ರಿಷು ವರ್ತತೇ।
03203019c ಉದಾನ ಇತಿ ತಂ ಪ್ರಾಹುರಧ್ಯಾತ್ಮವಿದುಷೋ ಜನಾಃ।।
ಇದೇ ಪ್ರಯತ್ನ, ಕೆಲಸ ಮತ್ತು ಬಲ ಈ ಮೂರರಲ್ಲಿ ಒಂದಾಗಿರುತ್ತದೆ. ಇದನ್ನು ಉದಾನ ಎಂದು ಆಧ್ಯಾತ್ಮ ವಿದುಷೀ ಜನರು ಹೇಳುತ್ತಾರೆ.
03203020a ಸಂಧೌ ಸಂಧೌ ಸಮ್ನಿವಿಷ್ಟಃ ಸರ್ವೇಷ್ವಪಿ ತಥಾನಿಲಃ।
03203020c ಶರೀರೇಷು ಮನುಷ್ಯಾಣಾಂ ವ್ಯಾನ ಇತ್ಯುಪದಿಷ್ಯತೇ।।
ಮನುಷ್ಯರ ಶರೀರಗಳ ಎಲ್ಲ ಸಂಧಿ ಸಂಧಿಗಳಲ್ಲಿ ಸಮಾವೇಶಗೊಂಡು ಇರುವ ಅನಿಲಕ್ಕೆ ವ್ಯಾನವೆಂದು ಕರೆಯುತ್ತಾರೆ.
03203021a ಧಾತುಷ್ವಗ್ನಿಸ್ತು ವಿತತಃ ಸ ತು ವಾಯುಸಮೀರಿತಃ।
03203021c ರಸಾನ್ಧಾತೂಂಶ್ಚ ದೋಷಾಂಶ್ಚ ವರ್ತಯನ್ಪರಿಧಾವತಿ।।
ಧಾತುಗಳಲ್ಲಿರುವ ಅಗ್ನಿ ಮತ್ತು ಒಳಗಿರುವ ವಾಯು ಸೇರಿಕೊಂಡು ನಮ್ಮ ಆಹಾರವನ್ನು, ಧಾತುಗಳನ್ನು, ಮತ್ತು ದೋಷಗಳನ್ನು ಪರಿವರ್ತಿಸುತ್ತವೆ.
03203022a ಪ್ರಾಣಾನಾಂ ಸನ್ನಿಪಾತಾತ್ತು ಸನ್ನಿಪಾತಃ ಪ್ರಜಾಯತೇ।
03203022c ಊಷ್ಮಾ ಚಾಗ್ನಿರಿತಿ ಜ್ಞೇಯೋ ಯೋಽನ್ನಂ ಪಚತಿ ದೇಹಿನಾಂ।।
ಈ ಪ್ರಾಣಗಳ ಮಿಲನದಿಂದ ಪ್ರತಿಕ್ರಿಯೆಗಳುಂಟಾಗಿ ಅದರಿಂದ ಉಂಟಾದ ಒಳಗಿನ ಅಗ್ನಿಯೇ ನಮ್ಮ ದೇಹದ ಅನ್ನವನ್ನು ಪಚನಗೊಳಿಸುತ್ತದೆ.
03203023a ಅಪಾನೋದಾನಯೋರ್ಮಧ್ಯೇ ಪ್ರಾಣವ್ಯಾನೌ ಸಮಾಹಿತೌ।
03203023c ಸಮನ್ವಿತಸ್ತ್ವಧಿಷ್ಠಾನಂ ಸಮ್ಯಕ್ಪಚತಿ ಪಾವಕಃ।।
ಅಪಾನ ಉದಾನಗಳ ಮಧ್ಯೆ ಪ್ರಾಣ ವ್ಯಾನಗಳು ಸೇರಿಕೊಂಡಿವೆ. ಅವುಗಳ ಸಮನ್ವಯದಿಂದುಂಟಾದ ಅಗ್ನಿಯು ಚೆನ್ನಾಗಿ ಪಚನ ಮಾಡಿಸುತ್ತದೆ.
03203024a ತಸ್ಯಾಪಿ ಪಾಯುಪರ್ಯಂತಸ್ತಥಾ ಸ್ಯಾದ್ಗುದಸಂಜ್ಞಿತಃ।
03203024c ಸ್ರೋತಾಂಸಿ ತಸ್ಮಾಜ್ಜಾಯಂತೇ ಸರ್ವಪ್ರಾಣೇಷು ದೇಹಿನಾಂ।।
ಅದರ ಸ್ಥಾನದಿಂದ ಗುದದ ವರೆಗಿನ ಭಾಗವನ್ನು ಅಪಾನವೆಂದು ಕರೆಯುತ್ತಾರೆ. ಅದರಿಂದ ದೇಹಿಗಳ ಸರ್ವಪ್ರಾಣಗಳು ಹುಟ್ಟುತ್ತವೆ.
03203025a ಅಗ್ನಿವೇಗವಹಃ ಪ್ರಾಣೋ ಗುದಾಂತೇ ಪ್ರತಿಹನ್ಯತೇ।
03203025c ಸ ಊರ್ಧ್ವಮಾಗಮ್ಯ ಪುನಃ ಸಮುತ್ಕ್ಷಿಪತಿ ಪಾವಕಂ।।
ಅಗ್ನಿವೇಗದಿಂದ ಹರಿಯುವ ಪ್ರಾಣವು ಗುದದ ಕೊನೆಯಲ್ಲಿ ಹಿಂದಿರುಗುತ್ತದೆ. ಅದು ಮೇಲೆ ಬಂದು ಪುನಃ ಅಗ್ನಿಯನ್ನು ಉರಿಸಿ ಎಬ್ಬಿಸುತ್ತದೆ.
03203026a ಪಕ್ವಾಶಯಸ್ತ್ವಧೋ ನಾಭ್ಯಾ ಊರ್ಧ್ವಮಾಮಾಶಯಃ ಸ್ಥಿತಃ।
03203026c ನಾಭಿಮಧ್ಯೇ ಶರೀರಸ್ಯ ಪ್ರಾಣಾಃ ಸರ್ವೇ ಪ್ರತಿಷ್ಠಿತಾಃ।।
ನಾಭಿಯ ಮೇಲೆ ಪಚನವಾಗದ ಆಹಾರದ ಭಾಗವಿದೆ. ಕೆಳಗಿರುವುದು ಪಚನವಾದ ಆಹಾರದ ಭಾಗ. ನಾಭಿಮಧ್ಯದಲ್ಲಿ ಶರೀರದ ಎಲ್ಲ ಪ್ರಾಣಗಳೂ ಪ್ರತಿಷ್ಠಿತವಾಗಿವೆ.
03203027a ಪ್ರವೃತ್ತಾ ಹೃದಯಾತ್ಸರ್ವಾಸ್ತಿರ್ಯಗೂರ್ಧ್ವಮಧಸ್ತಥಾ।
03203027c ವಹಂತ್ಯನ್ನರಸಾನ್ನಾಡ್ಯೋ ದಶ ಪ್ರಾಣಪ್ರಚೋದಿತಾಃ।।
ಹೃದಯದಿಂದ ಹೊರಟ ನಾಡಿಗಳು ಮೇಲೆ ಕೆಳಗೆ ಮತ್ತು ಅಡ್ಡವಾಗಿ ಅನ್ನರಸಗಳನ್ನು ಹತ್ತು ಪ್ರಾಣಗಳಿಂದ1 ಪ್ರಚೋದಿತವಾಗಿ ಕೊಂಡೊಯ್ಯುತ್ತವೆ.
03203028a ಯೋಗಿನಾಮೇಷ ಮಾರ್ಗಸ್ತು ಯೇನ ಗಚ್ಚಂತಿ ತತ್ಪರಂ।
03203028c ಜಿತಕ್ಲಮಾಸನಾ ಧೀರಾ ಮೂರ್ಧನ್ಯಾತ್ಮಾನಮಾದಧುಃ।
03203028e ಏವಂ ಸರ್ವೇಷು ವಿತತೌ ಪ್ರಾಣಾಪಾನೌ ಹಿ ದೇಹಿಷು।।
ಮೂರ್ಧನಿಯಲ್ಲಿರುವ ಆತ್ಮದಿಂದ ಎಲ್ಲವನ್ನೂ ಸಮನಾಗಿ ಕಾಣುವ, ದುಃಖಗಳನ್ನು ಜಯಿಸಿದ, ಧೀರ ಯೋಗಿಗಳು ಈ ಮಾರ್ಗದಲ್ಲಿಯೇ ಆ ತತ್ಪರವನ್ನು ಸೇರುತ್ತಾರೆ. ಹೀಗೆ ಎಲ್ಲ ದೇಹಿಗಳಲ್ಲಿ ಪ್ರಾಣಾಪಾನಗಳು ಸಂಚರಿಸುತ್ತಿರುತ್ತವೆ.
03203029a ಏಕಾದಶವಿಕಾರಾತ್ಮಾ ಕಲಾಸಂಭಾರಸಂಭೃತಃ।
03203029c ಮೂರ್ತಿಮಂತಂ ಹಿ ತಂ ವಿದ್ಧಿ ನಿತ್ಯಂ ಕರ್ಮಜಿತಾತ್ಮಕಂ।।
ಹನ್ನೊಂದು (ಪ್ರಾಣ, ಇಂದ್ರಿಯ ಮೊದಲಾದ) ವಿಕಾರಗಳನ್ನು ಹೊಂದಿ, ಕಲಾಸಂಭಾರಸಂಭೃತನಾಗಿ2 ಕರ್ಮಜಿತಾತ್ಮಕನು ಮೂರ್ತಿಮಂತನಾಗಿ ನಿತ್ಯವೂ ಇರುತ್ತಾನೆಂದು ತಿಳಿ.
03203030a ತಸ್ಮಿನ್ಯಃ ಸಂಸ್ಥಿತೋ ಹ್ಯಗ್ನಿರ್ನಿತ್ಯಂ ಸ್ಥಾಲ್ಯಾಮಿವಾಹಿತಃ।
03203030c ಆತ್ಮಾನಂ ತಂ ವಿಜಾನೀಹಿ ನಿತ್ಯಂ ಯೋಗಜಿತಾತ್ಮಕಂ।।
ಪಾತ್ರೆಯಲ್ಲಿ ಇಡಲ್ಪಟ್ಟ ಅಗ್ನಿಯಂತೆ ಈ ಶರೀರಮಧ್ಯದಲ್ಲಿ ಜೀವವೆಂಬ ಅಗ್ನಿಯು ಉರಿಯುತ್ತಿರುತ್ತದೆ. ಯೋಗಜಿತಾತ್ಮಕನಾದ ಅವನನ್ನೇ ನಿತ್ಯ-ಆತ್ಮನೆಂದು ತಿಳಿ.
03203031a ದೇವೋ ಯಃ ಸಂಸ್ಥಿತಸ್ತಸ್ಮಿನ್ನಬ್ಬಿಂದುರಿವ ಪುಷ್ಕರೇ।
03203031c ಕ್ಷೇತ್ರಜ್ಞಂ ತಂ ವಿಜಾನೀಹಿ ನಿತ್ಯಂ ತ್ಯಾಗಜಿತಾತ್ಮಕಂ।।
ದೇಹದಲ್ಲಿ ಸಂಸ್ಥಿತವಾಗಿರುವ ಆ ದೇವನು ತಾವರೆಯ ಮೇಲಿರುವ ನೀರಿನ ಬಿಂದುವಿನಂತೆ. ಅವನೇ ತ್ಯಾಗಜಿತಾತ್ಮಕನಾದ ಆ ನಿತ್ಯ-ಕ್ಷೇತ್ರಜ್ಞನೆಂದು ತಿಳಿ.
03203032a ಜೀವಾತ್ಮಕಾನಿ ಜಾನೀಹಿ ರಜಃ ಸತ್ತ್ವಂ ತಮಸ್ತಥಾ।
03203032c ಜೀವಮಾತ್ಮಗುಣಂ ವಿದ್ಧಿ ತಥಾತ್ಮಾನಂ ಪರಾತ್ಮಕಂ।।
ರಜ, ಸತ್ವ ಮತ್ತು ತಮಗಳಿಗೂ ಇವನು ಜೀವಾತ್ಮಕನೆಂದು ತಿಳಿ. ಜೀವವು ಆತ್ಮಗುಣವೆಂದೂ ಆತ್ಮವು ಪರಾತ್ಮಕವೆಂದೂ ತಿಳಿ.
03203033a ಸಚೇತನಂ ಜೀವಗುಣಂ ವದಂತಿ। ಸ ಚೇಷ್ಟತೇ ಚೇಷ್ಟಯತೇ ಚ ಸರ್ವಂ।
03203033c ತತಃ ಪರಂ ಕ್ಷೇತ್ರವಿದೋ ವದಂತಿ। ಪ್ರಾಕಲ್ಪಯದ್ಯೋ ಭುವನಾನಿ ಸಪ್ತ।।
ಸಚೇತನವು ಜೀವಗುಣವೆಂದು ಹೇಳುತ್ತಾರೆ. ಅದು ಎಲ್ಲವನ್ನೂ ಚೇಷ್ಟೆಗೊಳಪಡಿಸುತ್ತದೆ ಮತ್ತು ಚೇಷ್ಟೆಗೊಳಗಾಗುತ್ತದೆ. ಅದರ ನಂತರದ್ದನ್ನು, ಈ ಏಳು ಭುವನಗಳನ್ನೂ ನಡೆಸುವ ಕ್ಷೇತ್ರವಿದುವೆಂದು ಹೇಳುತ್ತಾರೆ.
03203034a ಏವಂ ಸರ್ವೇಷು ಭೂತೇಷು ಭೂತಾತ್ಮಾ ನ ಪ್ರಕಾಶತೇ।
03203034c ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ ಸೂಕ್ಷ್ಮಯಾ ಜ್ಞಾನವೇದಿಭಿಃ।।
ಹೀಗೆ ಎಲ್ಲ ಭೂತಗಳಲ್ಲಿ ಭೂತಾತ್ಮನು ಪ್ರಕಾಶಿಸುತ್ತಾನೆ. ಜ್ಞಾನವೇದಿಗಳು ಅವನನ್ನು ಸೂಕ್ಷ್ಮ ಬುದ್ಧಿಯಿಂದ ನೋಡುತ್ತಾರೆ.
03203035a ಚಿತ್ತಸ್ಯ ಹಿ ಪ್ರಸಾದೇನ ಹಂತಿ ಕರ್ಮ ಶುಭಾಶುಭಂ।
03203035c ಪ್ರಸನ್ನಾತ್ಮಾತ್ಮನಿ ಸ್ಥಿತ್ವಾ ಸುಖಮಾನಂತ್ಯಮಶ್ನುತೇ।।
ಚಿತ್ತದ ಪ್ರಸಾದದಿಂದಲೇ ಶುಭಾಶುಭಕರ್ಮಗಳನ್ನು ನಾಶಗೊಳಿಸಬಹುದು. ಆತ್ಮವನ್ನು ಆತ್ಮನಲ್ಲಿ ಪ್ರಸನ್ನವಾಗಿಟ್ಟುಕೊಂಡರೆ ಅನಂತ ಸುಖವು ದೊರೆಯುತ್ತದೆ.
03203036a ಲಕ್ಷಣಂ ತು ಪ್ರಸಾದಸ್ಯ ಯಥಾ ತೃಪ್ತಃ ಸುಖಂ ಸ್ವಪೇತ್।
03203036c ನಿವಾತೇ ವಾ ಯಥಾ ದೀಪೋ ದೀಪ್ಯೇತ್ಕುಶಲದೀಪಿತಃ।।
ಆ ಪ್ರಸಾದದ ಲಕ್ಷಣವನ್ನು ಸುಖವಾಗಿ ನಿದ್ರಿಸುವ ತೃಪ್ತನಿಗೂ ಕುಶಲತೆಯಿಂದ ಬತ್ತಿಯ ಕರಿಯನ್ನು ಉದುರಿಸಿ ಉರಿಸುವ ದೀಪದ ಬೆಳಕಿಗೂ ಹೋಲಿಸಬಹುದು.
03203037a ಪೂರ್ವರಾತ್ರೇ ಪರೇ ಚೈವ ಯುಂಜಾನಃ ಸತತಂ ಮನಃ।
03203037c ಲಘ್ವಾಹಾರೋ ವಿಶುದ್ಧಾತ್ಮಾ ಪಶ್ಯನ್ನಾತ್ಮಾನಮಾತ್ಮನಿ।।
ಸಾಯಂಕಾಲ ಮುಂಜಾನೆಯ ಸಮಯಗಳಲ್ಲಿ ಸತತವಾಗಿ ಮನಸ್ಸನ್ನಿಟ್ಟು, ಲಘು ಆಹಾರದಲ್ಲಿದ್ದುಕೊಂಡ ವಿಶುದ್ಧಾತ್ಮನು ತನ್ನಲ್ಲಿಯೇ ಆತ್ಮನನ್ನು ಕಂಡುಕೊಳ್ಳುತ್ತಾನೆ.
03203038a ಪ್ರದೀಪ್ತೇನೇವ ದೀಪೇನ ಮನೋದೀಪೇನ ಪಶ್ಯತಿ।
03203038c ದೃಷ್ಟ್ವಾತ್ಮಾನಂ ನಿರಾತ್ಮಾನಂ ತದಾ ಸ ತು ವಿಮುಚ್ಯತೇ।।
ಚೆನ್ನಾಗಿ ಉರಿಯುತ್ತಿರುವ ದೀಪದಂತಿರುವ ಮನೋದೀಪದಲ್ಲಿಯೇ ಅವನು ನಿರಾತ್ಮನಾದ ಆತ್ಮನನ್ನು ಕಾಣುತ್ತಾನೆ ಮತ್ತು ಮುಕ್ತಿಯನ್ನು ಹೊಂದುತ್ತಾನೆ.
03203039a ಸರ್ವೋಪಾಯೈಸ್ತು ಲೋಭಸ್ಯ ಕ್ರೋಧಸ್ಯ ಚ ವಿನಿಗ್ರಹಃ।
03203039c ಏತತ್ಪವಿತ್ರಂ ಯಜ್ಞಾನಾಂ ತಪೋ ವೈ ಸಂಕ್ರಮೋ ಮತಃ।।
ಸರ್ವೋಪಾಯಗಳಿಂದ ಲೋಭ ಕ್ರೋಧಗಳನ್ನು ನಿಗ್ರಹಿಸಬೇಕು. ಏಕೆಂದರೆ ಇದು ದಾಟಿಸಬಲ್ಲದೆಂದು ತಿಳಿಯಲ್ಪಟ್ಟ ಯಜ್ಞಗಳಲ್ಲಿಯೇ ಪವಿತ್ರವಾದ ತಪಸ್ಸು.
03203040a ನಿತ್ಯಂ ಕ್ರೋಧಾತ್ತಪೋ ರಕ್ಷೇಚ್ಚ್ರಿಯಂ ರಕ್ಷೇತ ಮತ್ಸರಾತ್।
03203040c ವಿದ್ಯಾಂ ಮಾನಾಪಮಾನಾಭ್ಯಾಮಾತ್ಮಾನಂ ತು ಪ್ರಮಾದತಃ।।
ನಿತ್ಯವೂ ತಪಸ್ಸನ್ನು ಕ್ರೋಧದಿಂದ, ಸಂಪತ್ತನ್ನು ಮತ್ಸರದಿಂದ, ವಿದ್ಯೆಯನ್ನು ಮಾನಾಪಮಾನದಿಂದ ಮತ್ತು ಆತ್ಮವನ್ನು ಭ್ರಮೆಯಿಂದ ರಕ್ಷಿಸಿಕೊಳ್ಳಬೇಕು.
03203041a ಆನೃಶಂಸ್ಯಂ ಪರೋ ಧರ್ಮಃ ಕ್ಷಮಾ ಚ ಪರಮಂ ಬಲಂ।
03203041c ಆತ್ಮಜ್ಞಾನಂ ಪರಂ ಜ್ಞಾನಂ ಪರಂ ಸತ್ಯವ್ರತಂ ವ್ರತಂ।।
ಸುಳ್ಳು ಹೇಳದೇ ಇರುವುದು ಪರಮ ಧರ್ಮ, ಕ್ಷಮೆಯು ಪರಮ ಬಲ, ಆತ್ಮಜ್ಞಾನವು ಪರಮಜ್ಞಾನ ಮತ್ತು ಸತ್ಯನಡತೆಯು ಪರಮ ವ್ರತ.
03203042a ಸತ್ಯಸ್ಯ ವಚನಂ ಶ್ರೇಯಃ ಸತ್ಯಂ ಜ್ಞಾನಂ ಹಿತಂ ಭವೇತ್।
03203042c ಯದ್ಭೂತಹಿತಮತ್ಯಂತಂ ತದ್ವೈ ಸತ್ಯಂ ಪರಂ ಮತಂ।।
ಸತ್ಯವಚನವು ಶ್ರೇಯಸ್ಕರವು; ಸತ್ಯ ಜ್ಞಾನವು ಹಿತವೆನಿಸುತ್ತದೆ. ಆದರೆ ಹೆಚ್ಚಿನ ಭೂತಗಳಿಗೆ ಹಿತವಾದುದೇ ಪರಮ ಸತ್ಯವೆಂದು ಮತವಿದೆ.
03203043a ಯಸ್ಯ ಸರ್ವೇ ಸಮಾರಂಭಾಃ ನಿರಾಶೀರ್ಬಂಧನಾಃ ಸದಾ।
03203043c ತ್ಯಾಗೇ ಯಸ್ಯ ಹುತಂ ಸರ್ವಂ ಸ ತ್ಯಾಗೀ ಸ ಚ ಬುದ್ಧಿಮಾನ್।।
ಯಾರ ಎಲ್ಲ ಕಾರ್ಯಗಳೂ ಆಸೆಗಳಿಲ್ಲದೇ ಬಂಧನಗಳಿಲ್ಲದೇ ಸದಾ ಇರುತ್ತವೆಯೋ ಮತ್ತು ಎಲ್ಲವನ್ನೂ ಯಾರು ತ್ಯಾಗದಿಂದ ತೊರೆದಿದ್ದಾನೋ ಅವನೇ ತ್ಯಾಗೀ ಮತ್ತು ಬುದ್ಧಿವಂತ.
03203044a ಯತೋ ನ ಗುರುರಪ್ಯೇನಂ ಚ್ಯಾವಯೇದುಪಪಾದಯನ್।
03203044c ತಂ ವಿದ್ಯಾದ್ಬ್ರಹ್ಮಣೋ ಯೋಗಂ ವಿಯೋಗಂ ಯೋಗಸಂಜ್ಞಿತಂ।।
ಬ್ರಹ್ಮನೊಡನೆ ಸೇರುವ ವಿದ್ಯೆಯನ್ನು ಗುರುವೂ ಕೂಡ ನೀಡಲು ಸಾಧ್ಯವಿಲ್ಲ. ಆದುದರಿಂದ ವಿಯೋಗವೇ ಯೋಗವೆಂದು ತಿಳಿಯಲ್ಪಟ್ಟಿದೆ.
03203045a ನ ಹಿಂಸ್ಯಾತ್ಸರ್ವಭೂತಾನಿ ಮೈತ್ರಾಯಣಗತಶ್ಚರೇತ್।
03203045c ನೇದಂ ಜೀವಿತಮಾಸಾದ್ಯ ವೈರಂ ಕುರ್ವೀತ ಕೇನ ಚಿತ್।।
ಎಲ್ಲ ಭೂತಗಳ ಮೇಲೂ ಹಿಂಸೆಯನ್ನು ಮಾಡಬಾರದು; ಎಲ್ಲದರೊಡನೆ ಮಿತ್ರತ್ವದಿಂದ ನಡೆದುಕೊಳ್ಳಬೇಕು. ಈ ಜೀವಿತದಲ್ಲಿ ಯಾರೊಂದಿಗೂ ವೈರತ್ವವನ್ನು ಸಾಧಿಸಬಾರದು.
03203046a ಆಕಿಂಚನ್ಯಂ ಸುಸಂತೋಷೋ ನಿರಾಶಿತ್ವಮಚಾಪಲಂ।
03203046c ಏತದೇವ ಪರಂ ಜ್ಞಾನಂ ಸದಾತ್ಮಜ್ಞಾನಮುತ್ತಮಂ।।
ಅನ್ಯರನ್ನು ಕೀಳಾಗಿ ಕಾಣದೇ ಇರುವುದು, ಸಂತೋಷವಾಗಿರುವುದು, ಆಸೆಗಳನ್ನಿಟ್ಟುಕೊಳ್ಳದೇ ಇರುವುದು, ಚಪಲನಾಗದೇ ಇರುವುದು ಇವುಗಳಿಂದಲೇ ಪರಮ ಜ್ಞಾನವನ್ನು ಪಡೆಯಬಹುದು. ಸದಾತ್ಮಜ್ಞಾನವೇ ಉತ್ತಮವಾದುದು.
03203047a ಪರಿಗ್ರಹಂ ಪರಿತ್ಯಜ್ಯ ಭವ ಬುದ್ಧ್ಯಾ ಯತವ್ರತಃ।
03203047c ಅಶೋಕಂ ಸ್ಥಾನಮಾತಿಷ್ಠೇನ್ನಿಶ್ಚಲಂ ಪ್ರೇತ್ಯ ಚೇಹ ಚ।।
ಹಿಡಿದಿಟ್ಟುಕೊಂಡಿದ್ದುದನ್ನು ಬಿಟ್ಟು ಬುದ್ಧಿಯಿಂದ ಯತವ್ರತನಾಗಿದ್ದರೆ, ಸ್ಥಾನದಲ್ಲಿ ನಿಶ್ಚಲನಾಗಿದ್ದರೆ ಇಲ್ಲಿಯೂ ಮತ್ತು ನಂತರದಲ್ಲಿಯೂ ಶೋಕವಿರುವುದಿಲ್ಲ.
03203048a ತಪೋನಿತ್ಯೇನ ದಾಂತೇನ ಮುನಿನಾ ಸಂಯತಾತ್ಮನಾ।
03203048c ಅಜಿತಂ ಜೇತುಕಾಮೇನ ಭಾವ್ಯಂ ಸಂಗೇಷ್ವಸಂಗಿನಾ।।
ಗಳಿಸಲಾಗದ ಭಾವವನ್ನು ಗಳಿಸಲು ಬಯಸುವ ಮುನಿಯು ನಿತ್ಯವೂ ತಪೋನಿರತನಾಗಿದ್ದು, ತಾಳ್ಮೆ, ಆತ್ಮನಲ್ಲಿ ಸಮತೆ ಮತ್ತು ಸಂಗಗಳಲ್ಲಿ ಅಸಂಗನಾಗಿರಬೇಕು.
03203049a ಗುಣಾಗುಣಮನಾಸಂಗಮೇಕಕಾರ್ಯಮನಂತರಂ।
03203049c ಏತದ್ಬ್ರಾಹ್ಮಣ ತೇ ವೃತ್ತಮಾಹುರೇಕಪದಂ ಸುಖಂ।
ಬ್ರಾಹ್ಮಣ! ಅಂಥಹವನಲ್ಲಿ ಗುಣಗಳು ಅಗುಣಗಳಾಗುತ್ತವೆ. ಅವನು ಅಸಂಗನಾಗಿರುತ್ತಾನೆ. ಅವನ ಈ ನಡತೆಯೇ ಸುಖಕ್ಕಿರುವ ಒಂದೇ ದಾರಿಯೆಂದು ಹೇಳುತ್ತಾರೆ.
03203050a ಪರಿತ್ಯಜತಿ ಯೋ ದುಃಖಂ ಸುಖಂ ಚಾಪ್ಯುಭಯಂ ನರಃ।
03203050c ಬ್ರಹ್ಮ ಪ್ರಾಪ್ನೋತಿ ಸೋಽತ್ಯಂತಮಸಂಗೇನ ಚ ಗಚ್ಚತಿ।।
ದುಃಖ ಸುಖಗಳೆರಡನ್ನೂ ಯಾರು ತ್ಯಜಿಸುತ್ತಾನೋ ಅವನು ಬ್ರಹ್ಮನನ್ನು ಪಡೆಯುತ್ತಾನೆ ಮತ್ತು ಅತ್ಯಂತ ಅಸಂಗತ್ವದಿಂದ ನಡೆಯುತ್ತಾನೆ.
03203051a ಯಥಾಶ್ರುತಮಿದಂ ಸರ್ವಂ ಸಮಾಸೇನ ದ್ವಿಜೋತ್ತಮ।
03203051c ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯಃ ಶ್ರೋತುಮಿಚ್ಚಸಿ।।
ದ್ವಿಜೋತ್ತಮ! ನಾನು ಕೇಳಿದುದೆಲ್ಲವನ್ನೂ ನಿನಗೆ ಸಂಕ್ಷಿಪ್ತವಾಗಿ ಹೇಳಿದ್ದೇನೆ. ಇನ್ನೂ ಏನನ್ನು ಕೇಳ ಬಯಸುತ್ತೀಯೆ?””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಬ್ರಾಹ್ಮಣವ್ಯಾಧಸಂವಾದೇ ತ್ರ್ಯಧಿಕದ್ವಿಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರಾಮೂರನೆಯ ಅಧ್ಯಾಯವು.
-
ದೇಹದಲ್ಲಿರುವ ದಶಪ್ರಾಣಗಳು ಮತ್ತು ಅವುಗಳಿರುವ ಸ್ಥಾನಗಳು ಈ ರೀತಿ ಇವೆ: ಪ್ರಾಣೋಽಪಾನಃ ಸಮಾನಶ್ಚೋದಾನವ್ಯಾನೌಚ ವಾಯವಃ। ಹೃದಿ ಪ್ರಾಣೋ ಗುದೇಽಪಾನಃ ಸಮಾನೋ ನಾಭಿಸಂಸ್ಥಿತಃ।। ಉದಾನಃ ಕಂಠದೇಶಸ್ಥೋ ವ್ಯಾನಃ ಸರ್ವ ಶರೀರಗಃ। ನಾಗಶ್ಚ ಕೂರ್ಮಕೃಕರೋ ದೇವದತ್ತೋ ಧನಂಜಯಃ।। ವಾಗ್ದ್ವಾರೇ ನಾಗ ಆಖ್ಯಾತಃ ಕೂರ್ಮ ಉನ್ಮೀಲನೇ ಸ್ಮೃತಃ। ಕೃಕರಾಚ್ಚಕ್ಷುತಂ ಜ್ಞೇಯಂ ದೇವದತ್ತಾದ್ವಿಜೃಂಭಣಂ। ನ ಜಹಾತಿ ಮೃತಂ ವಾಪಿ ಸರ್ವವ್ಯಾಪೀ ಧನಂಜಯಃ।। ಅರ್ಥಾತ್ - ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನಗಳೆಂಬ ಐದು ವಾಯುಗಳು ನಮ್ಮ ದೇಹದಲ್ಲಿವೆ. ಪ್ರಾಣವು ಹೃದಯದಲ್ಲಿಯೂ, ಅಪಾನವು ಗುದದ್ವಾರದಲ್ಲಿಯೂ, ಸಮಾನವು ನಾಭಿಯಲ್ಲಿಯೂ, ಉದಾನವು ಕುತ್ತಿಗೆಯಲ್ಲಿಯೂ, ಮತ್ತು ವ್ಯಾನವು ಸರ್ವವ್ಯಾಪಿಯಾಗಿ, ಅಂದರೆ ಶರೀರದ ಎಲ್ಲ ಕೀಲು ಪ್ರದೇಶಗಳಲ್ಲಿ ಇರುವುದು. ನಾಗ, ಕೂರ್ಮ, ಕೃಕರ, ದೇವದತ್ತ ಮತ್ತು ಧನಂಜಯಗಳೆಂಬ ಐದು ಉಪವಾಯುಗಳಿವೆ. ನಾಗವು ನಾವು ಆಡುವ ಮಾತಿನ ದ್ವಾರದಲ್ಲಿಯೂ, ಕೂರ್ವವು ರೆಪ್ಪೆ ಬಡಿಯುವ ಕಾರ್ಯದಲ್ಲಿಯೂ, ಕೃಕರವು ಶೀನುವುದರಲ್ಲಿಯೂ, ದೇವದತ್ತವು ಆಕಳಿಕೆಯಲ್ಲಿಯೂ, ಧನಂಜಯವು ದೇಹದ ಎಲ್ಲೆಡೆಯಲ್ಲಿಯೂ ಇರುತ್ತದೆ. ಪ್ರಾಣವಾಯು ಹೊರಟ ನಂತರವೂ ಧನಂಜಯವು ದೇಹವನ್ನು ಬಿಡುವುದಿಲ್ಲ (ಭಾರತ ದರ್ಶನ ಪ್ರಕಾಶನ, ಸಂಪುಟ 7, ಪುಟ 3466-67). ↩︎
-
ಹದಿನಾರು ಕಲೆಗಳು: ಪ್ರಾಣ, ಶ್ರದ್ಧೆ, ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ, ಇಂದ್ರಿಯ, ಮನಸ್ಸು, ಅನ್ನ, ವೀರ್ಯ, ತಪಸ್ಸು, ಮಂತ್ರ, ಕರ್ಮ, ಲೋಕ ಮತ್ತು ನಾಮ. (ಭಾರತ ದರ್ಶನ ಪ್ರಕಾಶನ, ಸಂಪುಟ 7, ಪುಟ 3467). ↩︎