ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 202
ಸಾರ
ಪಂಚಭೂತಗಳಲ್ಲಿ ಪ್ರತಿಯೊಂದರ ಗುಣಗಳ ವರ್ಣನೆ (1-10). ಇಂದ್ರಿಯ ನಿಗ್ರಹದ ಮಹತ್ವ (11-25).
03202001 ಮಾರ್ಕಂಡೇಯ ಉವಾಚ।
03202001a ಏವಮುಕ್ತಃ ಸ ವಿಪ್ರಸ್ತು ಧರ್ಮವ್ಯಾಧೇನ ಭಾರತ।
03202001c ಕಥಾಮಕಥಯದ್ಭೂಯೋ ಮನಸಃ ಪ್ರೀತಿವರ್ಧನೀಂ।।
ಮಾರ್ಕಂಡೇಯನು ಹೇಳಿದನು: “ಭಾರತ! ಧರ್ಮವ್ಯಾಧನು ಹೀಗೆ ಹೇಳಲು, ವಿಪ್ರನು ಮನಸ್ಸಿಗೆ ಸುಖವನ್ನು ನೀಡುವ ಈ ಮಾತುಕತೆಯನ್ನು ಮುಂದುವರೆಸಿದನು.”
03202002 ಬ್ರಾಹ್ಮಣ ಉವಾಚ।
03202002a ಮಹಾಭೂತಾನಿ ಯಾನ್ಯಾಹುಃ ಪಂಚ ಧರ್ಮವಿದಾಂ ವರ।
03202002c ಏಕೈಕಸ್ಯ ಗುಣಾನ್ಸಮ್ಯಕ್ಪಂಚಾನಾಮಪಿ ಮೇ ವದ।।
ಬ್ರಾಹ್ಮಣನು ಹೇಳಿದನು: “ಧರ್ಮವನ್ನು ತಿಳಿದವರಲ್ಲಿ ಶ್ರೇಷ್ಠನೇ! ಐದು ಮಹಾಭೂತಗಳಿವೆಯೆಂದು ಹೇಳುತ್ತಾರೆ. ಈ ಐದರಲ್ಲಿ ಪ್ರತಿಯೊಂದರ ಗುಣಗಳನ್ನು ಸರಿಯಾಗಿ ನನಗೆ ತಿಳಿಸಿ ಹೇಳು.”
03202003 ವ್ಯಾಧ ಉವಾಚ।
03202003a ಭೂಮಿರಾಪಸ್ತಥಾ ಜ್ಯೋತಿರ್ವಾಯುರಾಕಾಶಮೇವ ಚ।
03202003c ಗುಣೋತ್ತರಾಣಿ ಸರ್ವಾಣಿ ತೇಷಾಂ ವಕ್ಷ್ಯಾಮಿ ತೇ ಗುಣಾನ್।।
ವ್ಯಾಧನು ಹೇಳಿದನು: “ಭೂಮಿ, ನೀರು, ಜ್ಯೋತಿ, ವಾಯು, ಆಕಾಶಗಳಿವೆ. ಅವೆಲ್ಲವುಗಳಲ್ಲಿ ಪ್ರತಿಯೊಂದರ ಗುಣಗಳನ್ನು ನಿನಗೆ ಹೇಳುತ್ತೇನೆ.
03202004a ಭೂಮಿಃ ಪಂಚಗುಣಾ ಬ್ರಹ್ಮನ್ನುದಕಂ ಚ ಚತುರ್ಗುಣಂ।
03202004c ಗುಣಾಸ್ತ್ರಯಸ್ತೇಜಸಿ ಚ ತ್ರಯಶ್ಚಾಕಾಶವಾತಯೋಃ।।
ಬ್ರಹ್ಮನ್! ಭೂಮಿಯು ಐದು ಗುಣಗಳನ್ನು ಮತ್ತು ಉದಕವು ನಾಲ್ಕು ಗುಣಗಳನ್ನು ಹೊಂದಿವೆ. ತೇಜಕ್ಕೆ ಮೂರು ಗುಣಗಳಿವೆ ಮತ್ತು ಆಕಾಶ ವಾತಗಳ ಮಧ್ಯೆ ಮೂರು ಗುಣಗಳಿವೆ.
03202005a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ಪಂಚಮಃ।
03202005c ಏತೇ ಗುಣಾಃ ಪಂಚ ಭೂಮೇಃ ಸರ್ವೇಭ್ಯೋ ಗುಣವತ್ತರಾಃ।।
ಎಲ್ಲಕ್ಕಿಂತಲೂ ಹೆಚ್ಚು ಗುಣಗಳನ್ನುಳ್ಳ ಭೂಮಿಯು ಈ ಐದು ಗುಣಗಳನ್ನು ಹೊಂದಿದೆ: ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧ.
03202006a ಶಬ್ದಃ ಸ್ಪರ್ಶಶ್ಚ ರೂಪಂ ಚ ರಸಶ್ಚಾಪಿ ದ್ವಿಜೋತ್ತಮ।
03202006c ಅಪಾಮೇತೇ ಗುಣಾ ಬ್ರಹ್ಮನ್ಕೀರ್ತಿತಾಸ್ತವ ಸುವ್ರತ।।
ದ್ವಿಜೋತ್ತಮ! ಸುವ್ರತ! ಬ್ರಹ್ಮನ್! ಶಬ್ದ, ಸ್ಪರ್ಶ, ರೂಪ, ಮತ್ತು ರಸಗಳು ನೀರಿನ ಗುಣಗಳೆಂದು ಹೇಳುತ್ತಾರೆ.
03202007a ಶಬ್ದಃ ಸ್ಪರ್ಶಶ್ಚ ರೂಪಂ ಚ ತೇಜಸೋಽಥ ಗುಣಾಸ್ತ್ರಯಃ।
03202007c ಶಬ್ದಃ ಸ್ಪರ್ಶಶ್ಚ ವಾಯೌ ತು ಶಬ್ದ ಆಕಾಶ ಏವ ಚ।।
ಶಬ್ದ, ಸ್ಪರ್ಶ ಮತ್ತು ರೂಪ ಇವು ತೇಜಸ್ಸಿನ ಮೂರು ಗುಣಗಳು. ಗಾಳಿಯು ಶಬ್ದ ಸ್ಪರ್ಶಗಳನ್ನು ಹೊಂದಿದೆ ಮತ್ತು ಆಕಾಶಕ್ಕೆ ಶಬ್ದವು ಮಾತ್ರ.
03202008a ಏತೇ ಪಂಚದಶ ಬ್ರಹ್ಮನ್ಗುಣಾ ಭೂತೇಷು ಪಂಚಸು।
03202008c ವರ್ತಂತೇ ಸರ್ವಭೂತೇಷು ಯೇಷು ಲೋಕಾಃ ಪ್ರತಿಷ್ಠಿತಾಃ।
03202008e ಅನ್ಯೋನ್ಯಂ ನಾತಿವರ್ತಂತೇ ಸಂಪಚ್ಚ ಭವತಿ ದ್ವಿಜ।।
ಬ್ರಹ್ಮನ್! ಈ ಹದಿನೈದು ಗುಣಗಳು ಐದು ಭೂತಗಳಲ್ಲಿವೆ. ಮತ್ತು ಇವು ಲೋಕಗಳ ಆಧಾರವಾದ ಎಲ್ಲ ಭೂತಗಳಲ್ಲಿ ನಡೆಯುತ್ತವೆ. ದ್ವಿಜ! ಅವು ಅನ್ಯೋನ್ಯವನ್ನು ಅತಿಕ್ರಮಿಸುವುದಿಲ್ಲ; ಅವು ಒಂದಾಗಿರುತ್ತವೆ.
03202009a ಯದಾ ತು ವಿಷಮೀಭಾವಮಾಚರಂತಿ ಚರಾಚರಾಃ।
03202009c ತದಾ ದೇಹೀ ದೇಹಮನ್ಯಂ ವ್ಯತಿರೋಹತಿ ಕಾಲತಃ।।
ಆದರೆ ಚರಾಚರಗಳಲ್ಲಿ ಇವುಗಳ ವೈಷಮ್ಯವುಂಟಾದಾಗ, ಸಮಯದಲ್ಲಿ ದೇಹಿಯು ಅನ್ಯ ದೇಹವನ್ನು ಪ್ರವೇಶಿಸುತ್ತಾನೆ.
03202010a ಆನುಪೂರ್ವ್ಯಾ ವಿನಶ್ಯಂತಿ ಜಾಯಂತೇ ಚಾನುಪೂರ್ವಶಃ।
03202010c ತತ್ರ ತತ್ರ ಹಿ ದೃಶ್ಯಂತೇ ಧಾತವಃ ಪಾಂಚಭೌತಿಕಾಃ।
03202010e ಯೈರಾವೃತಮಿದಂ ಸರ್ವಂ ಜಗತ್ಸ್ಥಾವರಜಂಗಮಂ।।
ಧಾತುಗಳು ಒಂದರ ನಂತರ ಒಂದರಂತೆ ನಾಶಹೊಂದುತ್ತವೆ ಮತ್ತು ಒಂದರ ನಂತರ ಒಂದರಂತೆ ಹುಟ್ಟುತ್ತವೆ. ಪ್ರತಿ ಕ್ಷಣದಲ್ಲಿಯೂ ಪಂಚಭೌತಿಕಗಳ ಧಾತುಗಳು ಕಾಣಿಸಿಕೊಳ್ಳುತ್ತವೆ. ಅವು ಈ ಜಗತ್ತಿನ ಸ್ಥಾವರ ಜಂಗಮಗಳೆಲ್ಲವನ್ನೂ ಆವರಿಸಿವೆ.
03202011a ಇಂದ್ರಿಯೈಃ ಸೃಜ್ಯತೇ ಯದ್ಯತ್ತತ್ತದ್ವ್ಯಕ್ತಮಿತಿ ಸ್ಮೃತಂ।
03202011c ಅವ್ಯಕ್ತಮಿತಿ ವಿಜ್ಞೇಯಂ ಲಿಂಗಗ್ರಾಹ್ಯಮತೀಂದ್ರಿಯಂ।।
ಇಂದ್ರಿಯಗಳಿಂದ ಸೃಷ್ಟಿಸಿದವುಗಳನ್ನು ವ್ಯಕ್ತವೆಂದು ಹೇಳುತ್ತಾರೆ. ಅತೀಂದ್ರಿಯವಾದವುಗಳನ್ನು, ಲಿಂಗವೆಂದು ತಿಳಿಯಬೇಕಾದುದನ್ನು ಅವ್ಯಕ್ತವೆಂದು ಹೇಳುತ್ತಾರೆ1.
03202012a ಯಥಾಸ್ವಂ ಗ್ರಾಹಕಾನ್ಯೇಷಾಂ ಶಬ್ದಾದೀನಾಮಿಮಾನಿ ತು।
03202012c ಇಂದ್ರಿಯಾಣಿ ಯದಾ ದೇಹೀ ಧಾರಯನ್ನಿಹ ತಪ್ಯತೇ।।
ಶಬ್ದಾದಿಗಳನ್ನು ಯಾವುದರಿಂದ ಗ್ರಹಿಸುತ್ತಾನೋ ಆ ಇಂದ್ರಿಯಗಳು ತನ್ನವು ಎಂಬ ತಿಳುವಳಿಕೆಯಿಂದ ಇರುವಾಗ ದೇಹಿಯು ಪರಿತಪಿಸುತ್ತಾನೆ.
03202013a ಲೋಕೇ ವಿತತಮಾತ್ಮಾನಂ ಲೋಕಂ ಚಾತ್ಮನಿ ಪಶ್ಯತಿ।
03202013c ಪರಾವರಜ್ಞಃ ಸಕ್ತಃ ಸನ್ಸರ್ವಭೂತಾನಿ ಪಶ್ಯತಿ।।
ಆತ್ಮವನ್ನು ಮುಂದುವರಿಸಿ ಲೋಕವನ್ನೂ, ಲೋಕದಲ್ಲಿ ಆತ್ಮವನ್ನೂ ಕಾಣುವವನು ಮೇಲಿನ ಮತ್ತು ಕೆಳಗಿನ ಲೋಕಗಳೆರಡನ್ನೂ ತಿಳಿದುಕೊಂಡು, ಅಂಟಿಕೊಂಡಿದ್ದರೂ ಸರ್ವಭೂತಗಳನ್ನು ಕಾಣುತ್ತಾನೆ.
03202014a ಪಶ್ಯತಃ ಸರ್ವಭೂತಾನಿ ಸರ್ವಾವಸ್ಥಾಸು ಸರ್ವದಾ।
03202014c ಬ್ರಹ್ಮಭೂತಸ್ಯ ಸಂಯೋಗೋ ನಾಶುಭೇನೋಪಪದ್ಯತೇ।।
ಸರ್ವದಾ ಸರ್ವ ಭೂತಗಳ ಸರ್ವಾವಸ್ಥೆಗಳನ್ನು ನೋಡುವವನು ಬ್ರಹ್ಮನಾಗುತ್ತಾನೆ. ಅವನು ಎಂದೂ ಅಶುಭದೊಂದಿಗೆ ಕೂಡುವುದಿಲ್ಲ.
03202015a ಜ್ಞಾನಮೂಲಾತ್ಮಕಂ ಕ್ಲೇಶಮತಿವೃತ್ತಸ್ಯ ಮೋಹಜಂ।
03202015c ಲೋಕೋ ಬುದ್ಧಿಪ್ರಕಾಶೇನ ಜ್ಞೇಯಮಾರ್ಗೇಣ ದೃಶ್ಯತೇ।।
ಮೋಹದಿಂದ ಉಂಟಾಗುವ ಅತಿಕ್ಲೇಶದ ನಡತೆಯನ್ನು ಜ್ಞಾನದ ಮೂಲದಿಂದ ತೆಗೆಯಬಹುದು. ಜ್ಞಾನಮಾರ್ಗದ ಬುದ್ಧಿಪ್ರಕಾಶದಿಂದ ಲೋಕವು ಕಾಣುತ್ತದೆ.
03202016a ಅನಾದಿನಿಧನಂ ಜಂತುಮಾತ್ಮಯೋನಿಂ ಸದಾವ್ಯಯಂ।
03202016c ಅನೌಪಮ್ಯಮಮೂರ್ತಂ ಚ ಭಗವಾನಾಹ ಬುದ್ಧಿಮಾನ್।
03202016e ತಪೋಮೂಲಮಿದಂ ಸರ್ವಂ ಯನ್ಮಾಂ ವಿಪ್ರಾನುಪೃಚ್ಚಸಿ।।
ಅಂಥವನು ಅನಾದಿನಿಧನ, ಸದಾ ಅವ್ಯಯನಾಗಿರುವ, ಅನೌಪಮ, ಅಮುಹೂರ್ತ, ಬುದ್ಧಿವಂತ ಪ್ರಾಣಿಯೋನಿಯಲ್ಲಿ ಹುಟ್ಟುತ್ತಾನೆ. ವಿಪ್ರ! ನೀನು ಏನು ನನ್ನನ್ನು ಕೇಳುತ್ತಿದ್ದೀಯೋ ಇವೆಲ್ಲವುಗಳ ಮೂಲವೂ ತಪಸ್ಸು.
03202017a ಇಂದ್ರಿಯಾಣ್ಯೇವ ತತ್ಸರ್ವಂ ಯತ್ಸ್ವರ್ಗನರಕಾವುಭೌ।
03202017c ನಿಗೃಹೀತವಿಸೃಷ್ಟಾನಿ ಸ್ವರ್ಗಾಯ ನರಕಾಯ ಚ।।
ಇಂದ್ರಿಯಗಳಿಂದಲೇ ಸ್ವರ್ಗ ನರಕಗಳೆರಡೂ ಇವೆ. ಅವುಗಳನ್ನು ನಿಗ್ರಹದಲ್ಲಿಟ್ಟುಕೊಂಡರೆ ಸ್ವರ್ಗ, ಸ್ವಚ್ಛಂದವಾಗಿ ಬಿಟ್ಟರೆ ನರಕ.
03202018a ಏಷ ಯೋಗವಿಧಿಃ ಕೃತ್ಸ್ನೋ ಯಾವದಿಂದ್ರಿಯಧಾರಣಂ।
03202018c ಏತನ್ಮೂಲಂ ಹಿ ತಪಸಃ ಕೃತ್ಸ್ನಸ್ಯ ನರಕಸ್ಯ ಚ।।
ಈ ಇಂದ್ರಿಯ ಧಾರಣೆಯೇ ಸಂಪೂರ್ಣ ಯೋಗವಿಧಿ. ಇಂದ್ರಿಯಗಳೇ ನಮ್ಮ ತಪಸ್ಸಿನ ಅಥವಾ ನರಕದ ಮೂಲ.
03202019a ಇಂದ್ರಿಯಾಣಾಂ ಪ್ರಸಂಗೇನ ದೋಷಮೃಚ್ಚತ್ಯಸಂಶಯಂ।
03202019c ಸಂನಿಯಮ್ಯ ತು ತಾನ್ಯೇವ ತತಃ ಸಿದ್ಧಿಮವಾಪ್ನುತೇ।।
ಇಂದ್ರಿಯಗಳ ಪ್ರಸಂಗದಿಂದ ದೋಷವುಂಟಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಅವುಗಳನ್ನೇ ಸಂಯಮದಲ್ಲಿಟ್ಟುಕೊಂಡರೆ ಸಿದ್ಧಿಯನ್ನು ಹೊಂದುತ್ತೇವೆ.
03202020a ಷಣ್ಣಾಮಾತ್ಮನಿ ನಿತ್ಯಾನಾಮೈಶ್ವರ್ಯಂ ಯೋಽಧಿಗಚ್ಚತಿ।
03202020c ನ ಸ ಪಾಪೈಃ ಕುತೋಽನರ್ಥೈರ್ಯುಜ್ಯತೇ ವಿಜಿತೇಂದ್ರಿಯಃ।।
ನಮ್ಮಲ್ಲಿರುವ ಆರು ಇಂದ್ರಿಯಗಳ ಮೇಲೆ ಅಧಿಕಾರವನ್ನು ಸಾಧಿಸುವ ಜಿಂತೇಂದ್ರಿಯನನ್ನು ಪಾಪಗಳು ಅಂಟುವುದಿಲ್ಲ. ಅನರ್ಥವು ಎಲ್ಲಿಂದ?
03202021a ರಥಃ ಶರೀರಂ ಪುರುಷಸ್ಯ ದೃಷ್ಟಂ। ಆತ್ಮಾ ನಿಯಂತೇಂದ್ರಿಯಾಣ್ಯಾಹುರಶ್ವಾನ್।
03202021c ತೈರಪ್ರಮತ್ತಃ ಕುಶಲೀ ಸದಶ್ವೈರ್। ದಾಂತೈಃ ಸುಖಂ ಯಾತಿ ರಥೀವ ಧೀರಃ।।
ಪುರುಷನ ಶರೀರವನ್ನು ರಥಕ್ಕೆ, ಆತ್ಮವನ್ನು ಸಾರಥಿಗೆ ಮತ್ತು ಇಂದ್ರಿಯಗಳನ್ನು ರಥಕ್ಕೆ ಕಟ್ಟಿದ ಕುದುರೆಗಳಿಗೆ ಹೋಲಿಸುತ್ತಾರೆ. ಕುಶಲ ಸಾರಥಿಯು ಅಪ್ರಮತ್ತನಾಗಿ ಅಶ್ವಗಳನ್ನು ನಡೆಸುತ್ತಾನೆ. ಮತ್ತು ಧೀರ ರಥಿಕನಿಗೆ ನಿಯಂತ್ರಣದ ಮೂಲಕ ಸುಖವನ್ನು ತರುತ್ತಾನೆ.
03202022a ಷಣ್ಣಾಮಾತ್ಮನಿ ನಿತ್ಯಾನಾಮಿಂದ್ರಿಯಾಣಾಂ ಪ್ರಮಾಥಿನಾಂ।
03202022c ಯೋ ಧೀರೋ ಧಾರಯೇದ್ರಶ್ಮೀನ್ಸ ಸ್ಯಾತ್ಪರಮಸಾರಥಿಃ।।
ಅಶ್ವಗಳಂತಿರುವ ನಮ್ಮಲ್ಲಿರುವ ಆರು ಇಂದ್ರಿಯಗಳನ್ನು (ಪಂಚೇಂದ್ರಿಯಗಳು ಮತ್ತು ಮನಸ್ಸು) ಯಾರು ತಾಳ್ಮೆಯಿಂದ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾನೋ ಆ ಧೀರನೇ ಪರಮ ಸಾರಥಿ.
03202023a ಇಂದ್ರಿಯಾಣಾಂ ಪ್ರಸೃಷ್ಟಾನಾಂ ಹಯಾನಾಮಿವ ವರ್ತ್ಮಸು।
03202023c ಧೃತಿಂ ಕುರ್ವೀತ ಸಾರಥ್ಯೇ ಧೃತ್ಯಾ ತಾನಿ ಜಯೇದ್ಧ್ರುವಂ।।
ಹೆದ್ದಾರಿಯಲ್ಲಿ ಹೋಗುತ್ತಿರುವ ಕುದುರೆಗಳನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಂಡಿರಬೇಕೋ ಹಾಗೆ ಸಾರಥಿಯು ಧೃತನಾಗಿದ್ದರೆ ಜಯವು ನಿರ್ಧಿಷ್ಟ.
03202024a ಇಂದ್ರಿಯಾಣಾಂ ಹಿ ಚರತಾಂ ಯನ್ಮನೋಽನುವಿಧೀಯತೇ।
03202024c ತದಸ್ಯ ಹರತೇ ಬುದ್ಧಿಂ ನಾವಂ ವಾಯುರಿವಾಂಭಸಿ।।
ಯಾರ ಇಂದ್ರಿಯವು ಮನಸ್ಸಿನ ಮೇಲೆ ಅತಿಯಾದ ನಿಯಂತ್ರಣವನ್ನು ಹಾಕುತ್ತದೆಯೋ ಅಂಥವನ ಬುದ್ಧಿಯು ಸಮುದ್ರದಲ್ಲಿ ಗಾಳಿಗೆ ಸಿಲುಕಿದ ನಾವೆಯಂತೆ ಕಳೆದುಹೋಗುತ್ತದೆ.
03202025a ಯೇಷು ವಿಪ್ರತಿಪದ್ಯಂತೇ ಷಟ್ಸು ಮೋಹಾತ್ಫಲಾಗಮೇ।
03202025c ತೇಷ್ವಧ್ಯವಸಿತಾಧ್ಯಾಯೀ ವಿಂದತೇ ಧ್ಯಾನಜಂ ಫಲಂ।।
ಈ ಆರು ಇಂದ್ರಿಯಗಳ ಫಲಗಳ ಆಸೆಯಿಂದ ಜನರು ಮೋಹಿತರಾಗುತ್ತಾರೆ. ಆದರೆ ಅವುಗಳನ್ನು ಅಧ್ಯಯನ ಮಾಡುವವನು ಧ್ಯಾನದ ಮೂಲಕವೇ ಅವುಗಳ ಫಲವನ್ನು ಅನುಭವಿಸುತ್ತಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಬ್ರಾಹ್ಮಣವ್ಯಾಧಸಂವಾದೇ ದ್ವ್ಯಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರಾಎರಡನೆಯ ಅಧ್ಯಾಯವು.
-
ಇಂದ್ರಿಯಗಳಿಂದ ಯಾವುದು ತಿಳಿಯಲ್ಪಡುವುದೋ ಅದಕ್ಕೆ ವ್ಯಕ್ತವೆಂದೂ, ಇಂದ್ರಿಯಗಳಿಗೆ ತಿಳಿಯಲ್ಪಡದೇ ಕೇವಲ ಊಹಾಮಾತ್ರದಿಂದ ತಿಳಿಯಲ್ಪಡುವ ಅತೀಂದ್ರಿಯ ವಸ್ತುಗಳಿಗೆ ಅವ್ಯಕ್ತವೆಂದೂ ಹೆಸರು (ಭಾರತ ದರ್ಶನ ಪ್ರಕಾಶನ, ಸಂಪುಟ 7, ಪುಟ 3448). ↩︎