ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 201
ಸಾರ
ರಾಗದೋಷಗಳ ಕುರಿತು ಹೇಳಿದುದು (1-11). ಇಪ್ಪತ್ನಾಲ್ಕು ಗುಣಗಳ ವರ್ಣನೆ (12-20).
03201001 ಮಾರ್ಕಂಡೇಯ ಉವಾಚ।
03201001a ಏವಮುಕ್ತಸ್ತು ವಿಪ್ರೇಣ ಧರ್ಮವ್ಯಾಧೋ ಯುಧಿಷ್ಠಿರ।
03201001c ಪ್ರತ್ಯುವಾಚ ಯಥಾ ವಿಪ್ರಂ ತಚ್ಚೃಣುಷ್ವ ನರಾಧಿಪ।।
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ನರಾಧಿಪ! ವಿಪ್ರನ ಈ ಮಾತುಗಳಿಗೆ ಧರ್ಮವ್ಯಾಧನು ಹೇಗೆ ವಿಪ್ರನಿಗೆ ಉತ್ತರಿಸಿದನು ಎನ್ನುವುದನ್ನು ಕೇಳು.
03201002 ವ್ಯಾಧ ಉವಾಚ।
03201002a ವಿಜ್ಞಾನಾರ್ಥಂ ಮನುಷ್ಯಾಣಾಂ ಮನಃ ಪೂರ್ವಂ ಪ್ರವರ್ತತೇ।
03201002c ತತ್ಪ್ರಾಪ್ಯ ಕಾಮಂ ಭಜತೇ ಕ್ರೋಧಂ ಚ ದ್ವಿಜಸತ್ತಮ।।
ವ್ಯಾಧನು ಹೇಳಿದನು: “ದ್ವಿಜಸತ್ತಮ! ತಿಳಿದುಕೊಳ್ಳುವುದಕ್ಕಾಗಿ ಮನುಷ್ಯರಲ್ಲಿ ಮೊದಲು ಮನಸ್ಸು ಕಾರ್ಯಗತವಾಗುತ್ತದೆ. ಅದನ್ನು ಪಡೆದನಂತರ ಕಾಮ, ಪ್ರೇಮ, ಕ್ರೋಧಗಳುಂಟಾಗುತ್ತವೆ.
03201003a ತತಸ್ತದರ್ಥಂ ಯತತೇ ಕರ್ಮ ಚಾರಭತೇ ಮಹತ್।
03201003c ಇಷ್ಟಾನಾಂ ರೂಪಗಂಧಾನಾಮಭ್ಯಾಸಂ ಚ ನಿಷೇವತೇ।।
ಅದನ್ನು ತೃಪ್ತಿಗೊಳಿಸಲು ಮಹಾ ಕರ್ಮಗಳನ್ನು ಮಾಡಲಾಗುತ್ತದೆ. ಇಷ್ಟವಾದ ರೂಪಗಂಧಗಳನ್ನು ಅಭ್ಯಾಸಬಲದಿಂದ ಸೇವಿಸಲಾಗುತ್ತದೆ.
03201004a ತತೋ ರಾಗಃ ಪ್ರಭವತಿ ದ್ವೇಷಶ್ಚ ತದನಂತರಂ।
03201004c ತತೋ ಲೋಭಃ ಪ್ರಭವತಿ ಮೋಹಶ್ಚ ತದನಂತರಂ।।
ಆಗ ರಾಗವು ಹುಟ್ಟುತ್ತದೆ ಮತ್ತು ಅದರ ನಂತರ ದ್ವೇಷ. ಅನಂತರ ಲೋಭವು ಹುಟ್ಟುತ್ತದೆ ಮತ್ತು ಅದರ ನಂತರ ಮೋಹ.
03201005a ತಸ್ಯ ಲೋಭಾಭಿಭೂತಸ್ಯ ರಾಗದ್ವೇಷಹತಸ್ಯ ಚ।
03201005c ನ ಧರ್ಮೇ ಜಾಯತೇ ಬುದ್ಧಿರ್ವ್ಯಾಜಾದ್ಧರ್ಮಂ ಕರೋತಿ ಚ।
ಲೋಭದಿಂದ ಆಳಲ್ಪಡುತ್ತಾನೆ, ರಾಗದ್ವೇಷಗಳಿಂದ ಪೆಟ್ಟು ತಿನ್ನುತ್ತಾನೆ. ಬುದ್ಧಿಯು ಧರ್ಮದ ಕಡೆ ಹೋಗುವುದಿಲ್ಲ. ಧರ್ಮದಲ್ಲಿರುವಂತೆ ನಟಿಸುತ್ತಾನೆ.
03201006a ವ್ಯಾಜೇನ ಚರತೇ ಧರ್ಮಮರ್ಥಂ ವ್ಯಾಜೇನ ರೋಚತೇ।
03201006c ವ್ಯಾಜೇನ ಸಿಧ್ಯಮಾನೇಷು ಧನೇಷು ದ್ವಿಜಸತ್ತಮ।
03201006e ತತ್ರೈವ ರಮತೇ ಬುದ್ಧಿಸ್ತತಃ ಪಾಪಂ ಚಿಕೀರ್ಷತಿ।।
ಕಪಟ ಧರ್ಮದಲ್ಲಿ ನಡೆಯುತ್ತಾನೆ. ಕಪಟನಾಗಿ ಸಂಪತ್ತನ್ನು ಬಯಸುತ್ತಾನೆ. ದ್ವಿಜಸತ್ತಮ! ಕಪಟತನದಲ್ಲಿ ಸಂಪತ್ತನ್ನು ಗಳಿಸುತ್ತಾನೆ. ಆಗ ಬುದ್ಧಿಯು ಅದರಲ್ಲಿಯೇ ರಮಿಸಿ ಪಾಪವನ್ನೆಸಗುತ್ತಾನೆ.
03201007a ಸುಹೃದ್ಭಿರ್ವಾರ್ಯಮಾಣಶ್ಚ ಪಂಡಿತೈಶ್ಚ ದ್ವಿಜೋತ್ತಮ।
03201007c ಉತ್ತರಂ ಶ್ರುತಿಸಂಬದ್ಧಂ ಬ್ರವೀತಿ ಶ್ರುತಿಯೋಜಿತಂ।।
ದ್ವಿಜೋತ್ತಮ! ಸ್ನೇಹಿತರು ಮತ್ತು ಪಂಡಿತರು ಅವನನ್ನು ತಡೆದರೂ ಅವನು ಶ್ರುತಿಸಂಬದ್ಧವಾದ ಶ್ರುತಿಯೋಜಿತವಾದ ಉತ್ತರವನ್ನೇ ಅವರಿಗೆ ಹೇಳುತ್ತಾನೆ.
03201008a ಅಧರ್ಮಸ್ತ್ರಿವಿಧಸ್ತಸ್ಯ ವರ್ಧತೇ ರಾಗದೋಷತಃ।
03201008c ಪಾಪಂ ಚಿಂತಯತೇ ಚಾಪಿ ಬ್ರವೀತಿ ಚ ಕರೋತಿ ಚ।।
ರಾಗ ದೋಷದಿಂದ ಅವನ ಅಧರ್ಮವು ಮೂರುವಿಧಗಳಲ್ಲಿ ಹೆಚ್ಚಾಗುತ್ತದೆ; ಪಾಪವನ್ನು ಯೋಚಿಸುತ್ತಾನೆ, ಮಾತನಾಡುತ್ತಾನೆ ಮತ್ತು ಮಾಡುತ್ತಾನೆ ಕೂಡ.
03201009a ತಸ್ಯಾಧರ್ಮಪ್ರವೃತ್ತಸ್ಯ ಗುಣಾ ನಶ್ಯಂತಿ ಸಾಧವಃ।
03201009c ಏಕಶೀಲಾಶ್ಚ ಮಿತ್ರತ್ವಂ ಭಜಂತೇ ಪಾಪಕರ್ಮಿಣಃ।।
ಅವನ ಅಧರ್ಮಪ್ರವೃತ್ತಿಯಿಂದ ಒಳ್ಳೆಯ ಗುಣಗಳು ನಾಶವಾಗುತ್ತವೆ. ಅದೇ ನಡತೆಯ ಪಾಪಕರ್ಮಿಗಳು ಅವನ ಮಿತ್ರತ್ವವನ್ನು ಬಯಸುತ್ತಾರೆ.
03201010a ಸ ತೇನಾಸುಖಮಾಪ್ನೋತಿ ಪರತ್ರ ಚ ವಿಹನ್ಯತೇ।
03201010c ಪಾಪಾತ್ಮಾ ಭವತಿ ಹ್ಯೇವಂ ಧರ್ಮಲಾಭಂ ತು ಮೇ ಶೃಣು।।
ಅವನು ಅಸುಖವನ್ನೇ ಹೊಂದುತ್ತಾನೆ ಮತ್ತು ನಂತರದಲ್ಲಿ ನಾಶಹೊಂದುತ್ತಾನೆ. ಪಾಪಾತ್ಮನು ಹೀಗೆಯೇ ಆಗುತ್ತಾನೆ. ಈಗ ಧರ್ಮಲಾಭದ ಕುರಿತು ನನ್ನಿಂದ ಕೇಳು.
03201011a ಯಸ್ತ್ವೇತಾನ್ಪ್ರಜ್ಞಯಾ ದೋಷಾನ್ಪೂರ್ವಮೇವಾನುಪಶ್ಯತಿ।
03201011c ಕುಶಲಃ ಸುಖದುಃಖೇಷು ಸಾಧೂಂಶ್ಚಾಪ್ಯುಪಸೇವತೇ।
03201011e ತಸ್ಯ ಸಾಧುಸಮಾರಂಭಾದ್ಬುದ್ಧಿರ್ಧರ್ಮೇಷು ಜಾಯತೇ।।
ಯಾರು ತನ್ನ ಪ್ರಜ್ಞೆಯ ಮೂಲಕ ಈ ದೋಷಗಳನ್ನು ಮೊದಲೇ ಕಂಡುಕೊಳ್ಳುತ್ತಾನೋ ಮತ್ತು ಸುಖ ದುಃಖಗಳೇನೆಂದು ತಿಳಿದಿರುವನೋ ಅವನು ಒಳ್ಳೆಯ ಜನರೊಡನೆ ಒಡನಾಡುತ್ತಾನೆ. ಒಳ್ಳೆಯ ಕಾರ್ಯಗಳನ್ನು ಆರಂಭಿಸಿದುದರಿಂದ ಅವನ ಬುದ್ಧಿಯು ಧರ್ಮದ ಕಡೆ ನಡೆಯುತ್ತದೆ.”
03201012 ಬ್ರಾಹ್ಮಣ ಉವಾಚ।
03201012a ಬ್ರವೀಷಿ ಸೂನೃತಂ ಧರ್ಮಂ ಯಸ್ಯ ವಕ್ತಾ ನ ವಿದ್ಯತೇ।
03201012c ದಿವ್ಯಪ್ರಭಾವಃ ಸುಮಹಾನೃಷಿರೇವ ಮತೋಽಸಿ ಮೇ।।
ಬ್ರಾಹ್ಮಣನು ಹೇಳಿದನು: “ವಕ್ತಾರನೇ ಇಲ್ಲದ ಸುಖಕರವಾದ ಧರ್ಮದ ಕುರಿತು ನೀನು ಹೇಳುತ್ತಿರುವೆ. ನೀನು ಓರ್ವ ದಿವ್ಯದೃಷ್ಟಿಯ ಮಹಾ ಋಷಿಯೆಂದೇ ನನಗನ್ನಿಸುತ್ತದೆ.”
03201013 ವ್ಯಾಧ ಉವಾಚ।
03201013a ಬ್ರಾಹ್ಮಣಾ ವೈ ಮಹಾಭಾಗಾಃ ಪಿತರೋಽಗ್ರಭುಜಃ ಸದಾ।
03201013c ತೇಷಾಂ ಸರ್ವಾತ್ಮನಾ ಕಾರ್ಯಂ ಪ್ರಿಯಂ ಲೋಕೇ ಮನೀಷಿಣಾ।।
ವ್ಯಾಧನು ಹೇಳಿದನು: “ಪಿತೃಗಳಂತೆ ಮಹಾಭಾಗ ಬ್ರಾಹ್ಮಣರೂ ಸದಾ ಮೊದಲು ಆಹಾರಕ್ಕೆ ಅರ್ಹರು. ಈ ಲೋಕದಲ್ಲಿ ತಿಳಿದವನು ಅವರಿಗೆ ತೃಪ್ತಿಕೊಡುವ ಕಾರ್ಯವನ್ನು ಕೈಗೊಳ್ಳಬೇಕು.
03201014a ಯತ್ತೇಷಾಂ ಚ ಪ್ರಿಯಂ ತತ್ತೇ ವಕ್ಷ್ಯಾಮಿ ದ್ವಿಜಸತ್ತಮ।
03201014c ನಮಸ್ಕೃತ್ವಾ ಬ್ರಾಹ್ಮಣೇಭ್ಯೋ ಬ್ರಾಹ್ಮೀಂ ವಿದ್ಯಾಂ ನಿಬೋಧ ಮೇ।।
ದ್ವಿಜಸತ್ತಮ! ಅವರಿಗೆ ಪ್ರಿಯವಾದುದು ಏನೆಂದು ಹೇಳುತ್ತೇನೆ. ಬ್ರಾಹ್ಮಣರಿಗೆ ನಮಸ್ಕರಿಸಿ, ಬ್ರಾಹ್ಮೀ ವಿದ್ಯೆಯನ್ನು ನನ್ನಿಂದ ಕೇಳು.
03201015a ಇದಂ ವಿಶ್ವಂ ಜಗತ್ಸರ್ವಮಜಯ್ಯಂ ಚಾಪಿ ಸರ್ವಶಃ।
03201015c ಮಹಾಭೂತಾತ್ಮಕಂ ಬ್ರಹ್ಮನ್ನಾತಃ ಪರತರಂ ಭವೇತ್।।
ಬ್ರಹ್ಮನ್! ಯಾವುದರಿಂದಲೂ ಅಜೇಯವಾಗಿರುವ, ಈ ಸರ್ವ ವಿಶ್ವ, ಜಗತ್ತೂ, ಮಹಾಭೂತಗಳಿಂದ ಕೂಡಿದೆ. ಅವುಗಳಿಗೂ ಮಿಗಿಲಾದುದು ಬೇರೊಂದಿಲ್ಲ.
03201016a ಮಹಾಭೂತಾನಿ ಖಂ ವಾಯುರಗ್ನಿರಾಪಸ್ತಥಾ ಚ ಭೂಃ।
03201016c ಶಬ್ದಃ ಸ್ಪರ್ಶಶ್ಚ ರೂಪಂ ಚ ರಸೋ ಗಂಧಶ್ಚ ತದ್ಗುಣಾಃ।।
ಈ ಮಹಾಭೂತಗಳು - ಆಕಾಶ, ವಾಯು, ಅಗ್ನಿ, ನೀರು, ಮತ್ತು ಭೂಮಿ. ಅವುಗಳ ಗುಣಗಳು - ಶಬ್ದ, ಸ್ಪರ್ಶ, ರೂಪ, ರಸ, ಮತ್ತು ಗಂಧ.
03201017a ತೇಷಾಮಪಿ ಗುಣಾಃ ಸರ್ವೇ ಗುಣವೃತ್ತಿಃ ಪರಸ್ಪರಂ।
03201017c ಪೂರ್ವಪೂರ್ವಗುಣಾಃ ಸರ್ವೇ ಕ್ರಮಶೋ ಗುಣಿಷು ತ್ರಿಷು।।
ಅವೆಲ್ಲವುಗಳಲ್ಲಿ ತಮ್ಮದೇ ಆದ ಪ್ರತ್ಯೇಕ ಗುಣಗಳಿದ್ದರೂ, ಅವು ಪರಸ್ಪರರ ಗುಣಗಳನ್ನೂ ಹೊಂದಿವೆ. ಕ್ರಮವಾಗಿ ಪ್ರತಿಯೊಂದರಲ್ಲಿಯೂ ಅದರ ಹಿಂದಿನ ಮೂರು ಭೂತಗಳ ಗುಣಗಳೂ ಸೇರಿವೆ.
03201018a ಷಷ್ಠಸ್ತು ಚೇತನಾ ನಾಮ ಮನ ಇತ್ಯಭಿಧೀಯತೇ।
03201018c ಸಪ್ತಮೀ ತು ಭವೇದ್ಬುದ್ಧಿರಹಂಕಾರಸ್ತತಃ ಪರಂ।।
ಆರನೆಯದು ಚೇತನ. ಇದನ್ನು ಮನಸ್ಸು ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಏಳನೆಯದು ಬುದ್ಧಿ. ಅಹಂಕಾರವು ಅದರ ನಂತರದ್ದು.
03201019a ಇಂದ್ರಿಯಾಣಿ ಚ ಪಂಚೈವ ರಜಃ ಸತ್ತ್ವಂ ತಮಸ್ತಥಾ।
03201019c ಇತ್ಯೇಷ ಸಪ್ತದಶಕೋ ರಾಶಿರವ್ಯಕ್ತಸಂಜ್ಞಕಃ।।
ಇಂದ್ರಿಯಗಳು ಐದು. ರಜ, ಸತ್ವ ಮತ್ತು ತಮಗಳು ಕೂಡ. ಈ ಹದಿನೇಳರ ಗುಂಪು ಅವ್ಯಕ್ತ ಎಂದು ತಿಳಿಯಲ್ಪಟ್ಟಿದೆ.
03201020a ಸರ್ವೈರಿಹೇಂದ್ರಿಯಾರ್ಥೈಸ್ತು ವ್ಯಕ್ತಾವ್ಯಕ್ತೈಃ ಸುಸಂವೃತಃ।
03201020c ಚತುರ್ವಿಂಶಕ ಇತ್ಯೇಷ ವ್ಯಕ್ತಾವ್ಯಕ್ತಮಯೋ ಗುಣಃ।
03201020e ಏತತ್ತೇ ಸರ್ವಮಾಖ್ಯಾತಂ ಕಿಂ ಭೂಯೋ ಶ್ರೋತುಮಿಚ್ಚಸಿ।।
ಎಲ್ಲ ಇಂದ್ರಿಯ ವಸ್ತುಗಳಲ್ಲಿ, ಮನಸ್ಸು ಮತ್ತು ಬುದ್ಧಿಗಳಲ್ಲಿ ಹುದುಗಿರುವ ವ್ಯಕ್ತ ಮತ್ತು ಅವ್ಯಕ್ತಗಳನ್ನೂ ಸೇರಿ ಇಪ್ಪತ್ನಾಲ್ಕು ವ್ಯಕ್ತ-ಅವ್ಯಕ್ತ ಗುಣಗಳೆಂದು ಕರೆಯಲ್ಪಟ್ಟಿದೆ. ಈ ಎಲ್ಲವನ್ನೂ ನಿನಗೆ ಹೇಳಿದ್ದೇನೆ. ಇನ್ನು ಏನನ್ನು ಕೇಳ ಬಯಸುತ್ತೀಯೆ?””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವ ಬ್ರಾಹ್ಮಣವಾಕ್ಯೇ ಏಕಾಧಿಕದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕ ಪರ್ವದಲ್ಲಿ ಮಾರ್ಕಂಡೇಯಸಮಸ್ಯಾ ಪರ್ವದಲ್ಲಿ ಬ್ರಾಹ್ಮಣವಾಕ್ಯದಲ್ಲಿ ಇನ್ನೂರಾಒಂದನೆಯ ಅಧ್ಯಾಯವು.