ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 200
ಸಾರ
ವ್ಯಾಧನು ಧರ್ಮದ ಸೂಕ್ಷ್ಮತೆಯನ್ನು ಉದಾಹರಣೆಗಳೊಂದಿಗೆ ವಿವರಿಸಿದುದು (1-4). ಕರ್ಮಫಲಗಳ ಮಹತ್ವವನ್ನು ಪ್ರತಿಪಾದಿಸಿದುದು (5-22). ಜೀವವು ಹೇಗೆ ಶಾಶ್ವತವಾಗಿರುತ್ತದೆ ಎಂದು ಕೌಶಿಕನು ಕೇಳಲು ವ್ಯಾಧನು ದೇಹಭೇದವಾದಾಗ ಜೀವವು ಮುಂದುವರೆದು ಮಾಡಿದ ಕರ್ಮಗಳಿಗನುಸಾರವಾಗಿ ಸುಖದುಃಖಗಳ ಭಾಗಿಯಾಗುತ್ತದೆ ಎಂದು ವಿವರಿಸಿದುದು (23-54).
03200001 ಮಾರ್ಕಂಡೇಯ ಉವಾಚ।
03200001a ಧರ್ಮವ್ಯಾಧಸ್ತು ನಿಪುಣಂ ಪುನರೇವ ಯುಧಿಷ್ಠಿರ।
03200001c ವಿಪ್ರರ್ಷಭಮುವಾಚೇದಂ ಸರ್ವಧರ್ಮಭೃತಾಂ ವರಃ।।
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಸರ್ವಧರ್ಮಗಳನ್ನು ಎತ್ತಿಹಿಡಿಯುವವರಲ್ಲಿ ಶ್ರೇಷ್ಠ ನಿಪುಣ ಧರ್ಮವ್ಯಾಧನು ಪುನಃ ವಿಪ್ರರ್ಷನನ್ನುದ್ದೇಶಿಸಿ ಇದನ್ನು ಹೇಳಿದನು.
03200002a ಶ್ರುತಿಪ್ರಮಾಣೋ ಧರ್ಮೋ ಹಿ ವೃದ್ಧಾನಾಮಿತಿ ಭಾಷಿತಂ।
03200002c ಸೂಕ್ಷ್ಮಾ ಗತಿರ್ಹಿ ಧರ್ಮಸ್ಯ ಬಹುಶಾಖಾ ಹ್ಯನಂತಿಕಾ।।
“ಶೃತಿಪ್ರಮಾಣವಾದುದೇ ಧರ್ಮವೆಂದು ವೃದ್ಧರು ಹೇಳುತ್ತಾರೆ. ಏಕೆಂದರೆ ಧರ್ಮದ ಗತಿಯು ಸೂಕ್ಷ್ಮವಾದುದು. ಅದಕ್ಕೆ ಹಲವಾರು ಕವಲುಗಳಿವೆ ಮತ್ತು ಕೊನೆಯೇ ಇಲ್ಲ.
03200003a ಪ್ರಾಣಾತ್ಯಯೇ ವಿವಾಹೇ ಚ ವಕ್ತವ್ಯಮನೃತಂ ಭವೇತ್।
03200003c ಅನೃತಂ ಚ ಭವೇತ್ಸತ್ಯಂ ಸತ್ಯಂ ಚೈವಾನೃತಂ ಭವೇತ್।।
ಮರಣಕಾಲದಲ್ಲಿ ಮತ್ತು ವಿವಾಹದಲ್ಲಿ ಸುಳ್ಳನ್ನು ಹೇಳಬಹುದು. ಆಗ ಸುಳ್ಳು ಸತ್ಯವಾಗಬಹುದು ಮತ್ತು ಸತ್ಯವು ಸುಳ್ಳಾಗಬಹುದು.
03200004a ಯದ್ಭೂತಹಿತಮತ್ಯಂತಂ ತತ್ಸತ್ಯಮಿತಿ ಧಾರಣಾ।
03200004c ವಿಪರ್ಯಯಕೃತೋಽಧರ್ಮಃ ಪಶ್ಯ ಧರ್ಮಸ್ಯ ಸೂಕ್ಷ್ಮತಾಂ।।
ಇರುವವುಗಳಿಗೆ ಅತ್ಯಂತ ಹಿತವಾದುದು ಯಾವುದೋ ಅದೇ ಸತ್ಯವೆಂದೂ, ಇದಕ್ಕೆ ವಿಪರ್ಯಾಸವಾದುದನ್ನು ಅಧರ್ಮವೆಂದೂ ಅಭಿಪ್ರಾಯಪಡುತ್ತಾರೆ. ಧರ್ಮದ ಸೂಕ್ಷ್ಮತೆಯನ್ನು ನೋಡು!
03200005a ಯತ್ಕರೋತ್ಯಶುಭಂ ಕರ್ಮ ಶುಭಂ ವಾ ದ್ವಿಜಸತ್ತಮ।
03200005c ಅವಶ್ಯಂ ತತ್ಸಮಾಪ್ನೋತಿ ಪುರುಷೋ ನಾತ್ರ ಸಂಶಯಃ।।
ದ್ವಿಜಸತ್ತಮ! ಶುಭ ಅಥವಾ ಅಶುಭ ಯಾವುದೇ ಕರ್ಮವನ್ನು ಮಾಡಲಿ, ಅವಶ್ಯವಾಗಿ ಪುರುಷನು ಅದರ ಫಲವನ್ನು ಅನುಭವಿಸುತ್ತಾನೆ. ಅದರಲ್ಲಿ ಸಂಶಯವೇ ಇಲ್ಲ.
03200006a ವಿಷಮಾಂ ಚ ದಶಾಂ ಪ್ರಾಪ್ಯ ದೇವಾನ್ಗರ್ಹತಿ ವೈ ಭೃಶಂ।
03200006c ಆತ್ಮನಃ ಕರ್ಮದೋಷಾಣಿ ನ ವಿಜಾನಾತ್ಯಪಂಡಿತಃ।।
ಪಂಡಿತನಲ್ಲದವನು ವಿಷಮ ದಶೆಗಳನ್ನು ಹೊಂದಿ ದೇವತೆಗಳನ್ನು ಚೆನ್ನಾಗಿ ಬೈಯುತ್ತಾನೆ. ತನ್ನ ಕರ್ಮಗಳಲ್ಲಿರುವ ದೋಷಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ.
03200007a ಮೂಢೋ ನೈಕೃತಿಕಶ್ಚಾಪಿ ಚಪಲಶ್ಚ ದ್ವಿಜೋತ್ತಮ।
03200007c ಸುಖದುಃಖವಿಪರ್ಯಾಸೋ ಯದಾ ಸಮುಪಪದ್ಯತೇ।
03200007e ನೈನಂ ಪ್ರಜ್ಞಾ ಸುನೀತಂ ವಾ ತ್ರಾಯತೇ ನೈವ ಪೌರುಷಂ।।
ದ್ವಿಜೋತ್ತಮ! ಮೂಡನು, ಮೋಸಗಾರನು ಮತ್ತು ಚಪಲನು ಸುಖದುಃಖಗಳಲ್ಲಿ ವಿಪರ್ಯಾಸಗಳನ್ನು ಅನುಭವಿಸಿದಾಗ ಉತ್ತಮ ದಾರಿಗೆ ಕರೆದೊಯ್ಯುವ ಪ್ರಜ್ಞೆಯನ್ನಾಗಲೀ ತಮ್ಮನ್ನು ದಾಟಿಸಿಕೊಳ್ಳಲು ಪೌರುಷವನ್ನಾಗಲೀ ಹೊಂದಿರುವುದಿಲ್ಲ.
03200008a ಯೋ ಯಮಿಚ್ಚೇದ್ಯಥಾ ಕಾಮಂ ತಂ ತಂ ಕಾಮಂ ಸಮಶ್ನುಯಾತ್।
03200008c ಯದಿ ಸ್ಯಾದಪರಾಧೀನಂ ಪುರುಷಸ್ಯ ಕ್ರಿಯಾಫಲಂ।।
ಪುರುಷನ ಕ್ರಿಯಾಫಲವು ಬೇರೆಯಾವುದರ ಅದೀನದಲ್ಲಿಲ್ಲವಾದರೆ, ಅವನು ಯಾವ ಯಾವ ಕಾಮವನ್ನು ಬಯಸುತ್ತಾನೋ ಆ ಆ ಕಾಮವನ್ನು ಪಡೆಯುತ್ತಾನೆ.
03200009a ಸಮ್ಯತಾಶ್ಚಾಪಿ ದಕ್ಷಾಶ್ಚ ಮತಿಮಂತಶ್ಚ ಮಾನವಾಃ।
03200009c ದೃಶ್ಯಂತೇ ನಿಷ್ಫಲಾಃ ಸಂತಃ ಪ್ರಹೀಣಾಃ ಸರ್ವಕರ್ಮಭಿಃ।।
03200010a ಭೂತಾನಾಮಪರಃ ಕಶ್ಚಿದ್ಧಿಂಸಾಯಾಂ ಸತತೋತ್ಥಿತಃ।
03200010c ವಂಚನಾಯಾಂ ಚ ಲೋಕಸ್ಯ ಸ ಸುಖೇನೇಹ ಜೀವತಿ।।
ಸಮ್ಯತ, ದಕ್ಷ, ಮತ್ತು ಮತಿಮಂತ ಮಾನವರು ನಿಷ್ಫಲರಾಗಿ ಸರ್ವ ಕರ್ಮಗಳನ್ನು ಕಳೆದುಕೊಂಡಿದುದನ್ನು ಮತ್ತು ಇರುವವುಗಳನ್ನು ಸದಾ ಹಿಂಸಿಸುವವರು ಲೋಕಕ್ಕೆ ಮೋಸಮಾಡಿಕೊಂಡು ಸುಖವಾಗಿ ಜೀವಿಸುತ್ತಾರೆ ಎನ್ನುವುದನ್ನೂ ಇನ್ನೂ ನೋಡಬೇಕಷ್ಟೆ.
03200011a ಅಚೇಷ್ಟಮಾನಮಾಸೀನಂ ಶ್ರೀಃ ಕಂ ಚಿದುಪತಿಷ್ಠತಿ।
03200011c ಕಶ್ಚಿತ್ ಕರ್ಮಾಣಿ ಕುರ್ವನ್ ಹಿ ನ ಪ್ರಾಪ್ಯಮಧಿಗಚ್ಚತಿ।।
ಏನನ್ನೂ ಮಾಡದೇ ಕುಳಿತುಕೊಂಡಿರುವವನಿಗೆ ಅದೃಷ್ಟವು ಒಲಿಯಬಹುದು. ಕೆಲವೊಮ್ಮೆ ಕರ್ಮಗಳನ್ನು ಮಾಡುವವನು ತನ್ನ ಗುರಿಯನ್ನು ತಲುಪದೇ ಇರಬಹುದು.
03200012a ದೇವಾನಿಷ್ಟ್ವಾ ತಪಸ್ತಪ್ತ್ವಾ ಕೃಪಣೈಃ ಪುತ್ರಗೃದ್ಧಿಭಿಃ।
03200012c ದಶಮಾಸಧೃತಾ ಗರ್ಭೇ ಜಾಯಂತೇ ಕುಲಪಾಂಸನಾಃ।।
ಪುತ್ರನನ್ನು ಬಯಸಿ ಕೃಪಣರಾದವರು ದೇವನಿಷ್ಟರಾಗಿ ತಪಸ್ಸನ್ನು ತಪಿಸಿ ಹತ್ತು ತಿಂಗಳು ಗರ್ಭವನ್ನು ಧರಿಸಿ ಕುಲಪಾಂಸಕರಿಗೆ ಜನ್ಮ ನೀಡಬಹುದು.
03200013a ಅಪರೇ ಧನಧಾನ್ಯೈಶ್ಚ ಭೋಗೈಶ್ಚ ಪಿತೃಸಂಚಿತೈಃ।
03200013c ವಿಪುಲೈರಭಿಜಾಯಂತೇ ಲಬ್ಧಾಸ್ತೈರೇವ ಮಂಗಲೈಃ।।
ಇದೇ ಮಂಗಲ ವಿಧಗಳಿಂದ ಪಡೆದರೂ ಹುಟ್ಟಿದವರು ತಂದೆತಾಯಿಗಳು ಕೂಡಿಟ್ಟ ಧನ-ಧಾನ್ಯ-ಭೋಗಗಳನ್ನು ಪಡೆಯುವ ಆಸೆಯುಳ್ಳವರಾಗಿರಬಹುದು.
03200014a ಕರ್ಮಜಾ ಹಿ ಮನುಷ್ಯಾಣಾಂ ರೋಗಾ ನಾಸ್ತ್ಯತ್ರ ಸಂಶಯಃ।
0320004c ಆಧಿಭಿಶ್ಚೈವ ಬಾಧ್ಯಂತೇ ವ್ಯಾಧೈಃ ಕ್ಷುದ್ರಮೃಗಾ ಇವ।।
ಮನುಷ್ಯರ ರೋಗಗಳು ಕರ್ಮದಿಂದಲೇ ಹುಟ್ಟುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಬೇಟೆಯಲ್ಲಿ ಕ್ಷುದ್ರಮೃಗಗಳಂತೆ ಅವರು ವ್ಯಾಧಿಗಳ ಬಾಧೆಗೊಳಗಾಗುತ್ತಾರೆ.
03200015a ತೇ ಚಾಪಿ ಕುಶಲೈರ್ವೈದ್ಯೈರ್ನಿಪುಣೈಃ ಸಂಭೃತೌಷಧೈಃ।
03200015c ವ್ಯಾಧಯೋ ವಿನಿವಾರ್ಯಂತೇ ಮೃಗಾ ವ್ಯಾಧೈರಿವ ದ್ವಿಜ।।
ದ್ವಿಜ! ಕುಶಲ ನಿಪುಣ ವೈದ್ಯರು ಔಷಧಿಗಳನ್ನು ಸಂಗ್ರಹಿಸಿಕೊಂಡು ವ್ಯಾಧನು ಮೃಗಗಳನ್ನು ಬೆನ್ನಟ್ಟಿ ಹೋಗುವಂತೆ ವ್ಯಾಧಿಗಳ ಹಿಂದೆ ಹೋಗುತ್ತಾರೆ.
03200016a ಯೇಷಾಮಸ್ತಿ ಚ ಭೋಕ್ತವ್ಯಂ ಗ್ರಹಣೀದೋಷಪೀಡಿತಾಃ।
03200016c ನ ಶಕ್ನುವಂತಿ ತೇ ಭೋಕ್ತುಂ ಪಶ್ಯ ಧರ್ಮಭೃತಾಂ ವರ।।
ಧರ್ಮಭೃತರಲ್ಲಿ ಶ್ರೇಷ್ಠನೇ! ಭೋಗಿಸಲು ಎಷ್ಟೇ ಇದ್ದರೂ ಅಜೀರ್ಣದಿಂದ ಪೀಡಿತರಾದವರು ಅದನ್ನು ಭೋಗಿಸಲು ಅಶಕ್ತರಾಗಿರುತ್ತಾರೆ. ನೋಡು!
03200017a ಅಪರೇ ಬಾಹುಬಲಿನಃ ಕ್ಲಿಶ್ಯಂತೇ ಬಹವೋ ಜನಾಃ।
03200017c ದುಃಖೇನ ಚಾಧಿಗಚ್ಚಂತಿ ಭೋಜನಂ ದ್ವಿಜಸತ್ತಮ।।
ದ್ವಿಜಸತ್ತಮ! ಬಾಹುಬಲವುಳ್ಳ ಇತರ ಬಹುಜನರು ದುಃಖದಿಂದ ಭೋಜನವನ್ನು ಕಂಡುಕೊಳ್ಳಲಾರರು.
03200018a ಇತಿ ಲೋಕಮನಾಕ್ರಂದಂ ಮೋಹಶೋಕಪರಿಪ್ಲುತಂ।
03200018c ಸ್ರೋತಸಾಸಕೃದಾಕ್ಷಿಪ್ತಂ ಹ್ರಿಯಮಾಣಂ ಬಲೀಯಸಾ।।
ಹೀಗೆ ಲೋಕವು ಆಕ್ರಂದದಿಂದ, ಮೋಹಶೋಕಗಳಿಂದ ತುಂಬಿ, ಯಾವಾಗಲೂ ಬಲಶಾಲಿ ಪ್ರವಾಹದಿಂದ ಕೊಚ್ಚಿಕೊಂಡು ಹೋಗುತ್ತದೆ.
03200019a ನ ಮ್ರಿಯೇಯುರ್ನ ಜೀರ್ಯೇಯುಃ ಸರ್ವೇ ಸ್ಯುಃ ಸಾರ್ವಕಾಮಿಕಾಃ।
03200019c ನಾಪ್ರಿಯಂ ಪ್ರತಿಪಶ್ಯೇಯುರ್ವಶಿತ್ವಂ ಯದಿ ವೈ ಭವೇತ್।।
ತಮ್ಮ ವಿಧಿಯ ಒಡೆಯರಾಗಿದ್ದರೆ ಯಾರೂ ಸಾಯುತ್ತಿರಲಿಲ್ಲ, ಯಾರೂ ವೃದ್ಧರಾಗುತ್ತಿರಲಿಲ್ಲ, ಎಲ್ಲರಿಗೂ ಬಯಸಿದುದೆಲ್ಲವೂ ದೊರೆಯುತ್ತಿದ್ದವು, ಯಾರೂ ಅಪ್ರಿಯವಾದುದನ್ನು ನೋಡುತ್ತಿರಲಿಲ್ಲ.
03200020a ಉಪರ್ಯುಪರಿ ಲೋಕಸ್ಯ ಸರ್ವೋ ಗಂತುಂ ಸಮೀಹತೇ।
03200020c ಯತತೇ ಚ ಯಥಾಶಕ್ತಿ ನ ಚ ತದ್ವರ್ತತೇ ತಥಾ।।
ಲೋಕದಲ್ಲಿ ಎಲ್ಲರೂ ಇತರರಿಗಿಂತ ಮೇಲೆ ಹೋಗಲು ಬಯಸುತ್ತಾರೆ, ಯಥಾಶಕ್ತಿಯಾಗಿ ಪ್ರಯತ್ನಿಸುತ್ತಾರೆ. ಆದರೆ ಅದು ಹಾಗಾಗುವುದಿಲ್ಲ.
03200021a ಬಹವಃ ಸಂಪ್ರದೃಶ್ಯಂತೇ ತುಲ್ಯನಕ್ಷತ್ರಮಂಗಲಾಃ।
03200021c ಮಹಚ್ಚ ಫಲವೈಷಮ್ಯಂ ದೃಶ್ಯತೇ ಕರ್ಮಸಂಧಿಷು।।
ಬಹುಮಂದಿ ಒಂದೇ ನಕ್ಷತ್ರ ಮಂಗಲ ಕಾಲಗಳಲ್ಲಿ ಹುಟ್ಟಿದ್ದರೂ ಅವರ ಕರ್ಮಸಂಧಿಗಳಲ್ಲಿ ಪಡೆಯುವ ಫಲಗಳಲ್ಲಿ ಬಹಳಷ್ಟು ವ್ಯತ್ಯಾಸಗಳನ್ನು ನೋಡುತ್ತೇವೆ.
03200022a ನ ಕಶ್ಚಿದೀಶತೇ ಬ್ರಹ್ಮನ್ಸ್ವಯಂಗ್ರಾಹಸ್ಯ ಸತ್ತಮ।
03200022c ಕರ್ಮಣಾಂ ಪ್ರಾಕೃತಾನಾಂ ವೈ ಇಹ ಸಿದ್ಧಿಃ ಪ್ರದೃಶ್ಯತೇ।।
ಬ್ರಾಹ್ಮಣಸತ್ತಮ! ಸ್ವಯಂ ಯಾರೂ ತಮ್ಮ ವಿಧಿಯ ಈಶರಲ್ಲ. ಪ್ರಾಕೃತವಾಗಿ ಕರ್ಮಗಳು ಸಿದ್ಧಿಯಾಗುವುದನ್ನೇ ನಾವು ಇಲ್ಲಿ ಕಾಣುತ್ತೇವೆ.
03200023a ಯಥಾ ಶ್ರುತಿರಿಯಂ ಬ್ರಹ್ಮಂ ಜೀವಃ ಕಿಲ ಸನಾತನಃ।
03200023c ಶರೀರಮಧ್ರುವಂ ಲೋಕೇ ಸರ್ವೇಷಾಂ ಪ್ರಾಣಿನಾಮಿಹ।।
ಬ್ರಾಹ್ಮಣ! ಇದು ಶ್ರುತಿಗಳು ಹೇಳಿದಂತೆ: ಜೀವವು ಸನಾತನವಾದುದು. ಈ ಲೋಕದ ಎಲ್ಲ ಪ್ರಾಣಿಗಳ ಶರೀರಗಳೂ ನಿರ್ದಿಷ್ಟವಾದವುಗಳಲ್ಲ.
03200024a ವಧ್ಯಮಾನೇ ಶರೀರೇ ತು ದೇಹನಾಶೋ ಭವತ್ಯುತ।
03200024c ಜೀವಃ ಸಂಕ್ರಮತೇಽನ್ಯತ್ರ ಕರ್ಮಬಂಧನಿಬಂಧನಃ।।
ಶರೀರವನ್ನು ಕೊಲ್ಲುವಾಗ ದೇಹನಾಶವಾಗುತ್ತದೆ. ಜೀವವು ಕರ್ಮಬಂಧಗಳ ಪ್ರಕಾರ ಬೇರೆ ಕಡೆ ವರ್ಗಾಯಿಸಲ್ಪಡುತ್ತದೆ.”
03200025 ಬ್ರಾಹ್ಮಣ ಉವಾಚ।
03200025a ಕಥಂ ಧರ್ಮಭೃತಾಂ ಶ್ರೇಷ್ಠ ಜೀವೋ ಭವತಿ ಶಾಶ್ವತಃ।
03200025c ಏತದಿಚ್ಚಾಮ್ಯಹಂ ಜ್ಞಾತುಂ ತತ್ತ್ವೇನ ವದತಾಂ ವರ।।
ಬ್ರಾಹ್ಮಣನು ಹೇಳಿದನು: “ಧರ್ಮಭೃತರಲ್ಲಿ ಶ್ರೇಷ್ಠನೇ! ಮಾತನಾಡುವವರಲ್ಲಿ ಶ್ರೇಷ್ಠನೇ! ಜೀವವು ಹೇಗೆ ಶಾಶ್ವತವಾದುದು? ಇದನ್ನು ಇದ್ದಹಾಗೆ ಕೇಳಲು ಬಯಸುತ್ತೇನೆ.”
03200026 ವ್ಯಾಧ ಉವಾಚ।
03200026a ನ ಜೀವನಾಶೋಽಸ್ತಿ ಹಿ ದೇಹಭೇದೇ। ಮಿಥ್ಯೈತದಾಹುರ್ಮ್ರಿಯತೇತಿ ಮೂಢಾಃ।
03200026c ಜೀವಸ್ತು ದೇಹಾಂತರಿತಃ ಪ್ರಯಾತಿ। ದಶಾರ್ಧತೈವಾಸ್ಯ ಶರೀರಭೇದಃ।।
ವ್ಯಾಧನು ಹೇಳಿದನು: “ದೇಹಭೇದವಾದಾಗ ಜೀವವು ಸಾಯುವುದಿಲ್ಲ. ಆದರೆ ಮೂಡರು ಅದು ಕಳೆದುಹೋಗುತ್ತದೆ ಎಂದು ತಪ್ಪಾಗಿ ತಿಳಿದುಕೊಂಡಿರುತ್ತಾರೆ. ದೇಹದೊಳಗಿರುವ ಜೀವವು ಮುಂದುವರೆದು ಹೋಗುತ್ತದೆ. ಬೇರೆಯಾದ ಶರೀರವು ಪಂಚಭೂತಗಳನ್ನು ಸೇರುತ್ತದೆ.
03200027a ಅನ್ಯೋ ಹಿ ನಾಶ್ನಾತಿ ಕೃತಂ ಹಿ ಕರ್ಮ। ಸ ಏವ ಕರ್ತಾ ಸುಖದುಃಖಭಾಗೀ।
03200027c ಯತ್ತೇನ ಕಿಂ ಚಿದ್ಧಿ ಕೃತಂ ಹಿ ಕರ್ಮ। ತದಶ್ನುತೇ ನಾಸ್ತಿ ಕೃತಸ್ಯ ನಾಶಃ।।
ಮಾಡಿದ ಕರ್ಮಗಳನ್ನು ಬೇರೆ ಯಾರೂ ಪಡೆಯುವುದಿಲ್ಲ. ಕರ್ತನು ಮಾತ್ರ ಅವುಗಳಿಂದುಂಟಾಗುವ ಸುಖ ದುಃಖಗಳ ಭಾಗಿಯಾಗುತ್ತಾನೆ. ಏನೇ ಕರ್ಮಗಳನ್ನು ಮಾಡಿದ್ದರೂ ಅವನೇ ಅದನ್ನು ಪಡೆಯುತ್ತಾನೆ. ಕೃತನ ನಾಶವಾಗುವುದಿಲ್ಲ.
03200028a ಅಪುಣ್ಯಶೀಲಾಶ್ಚ ಭವಂತಿ ಪುಣ್ಯಾ। ನರೋತ್ತಮಾಃ ಪಾಪಕೃತೋ ಭವಂತಿ।
03200028c ನರೋಽನುಯಾತಸ್ತ್ವಿಹ ಕರ್ಮಭಿಃ ಸ್ವೈಸ್। ತತಃ ಸಮುತ್ಪದ್ಯತಿ ಭಾವಿತಸ್ತೈಃ।।
ಅಪುಣ್ಯಶೀಲರು ಪುಣ್ಯಶೀಲರಾಗುತ್ತಾರೆ. ನರೋತ್ತಮರು ಪಾಪಕೃತರಾಗುತ್ತಾರೆ. ಕರ್ಮಗಳು ನರನ ಬೆನ್ನುಹತ್ತಿ ಹೋಗುತ್ತವೆ. ಅವನೇನಾಗಬೇಕೆಂದು ನಿರ್ಧರಿಸುತ್ತವೆ ಮತ್ತು ಅನಂತರ ಅವನು ಹುಟ್ಟುತ್ತಾನೆ.”
03200029 ಬ್ರಾಹ್ಮಣ ಉವಾಚ।
03200029a ಕಥಂ ಸಂಭವತೇ ಯೋನೌ ಕಥಂ ವಾ ಪುಣ್ಯಪಾಪಯೋಃ।
03200029c ಜಾತೀಃ ಪುಣ್ಯಾ ಹ್ಯಪುಣ್ಯಾಶ್ಚ ಕಥಂ ಗಚ್ಚತಿ ಸತ್ತಮ।।
ಬ್ರಾಹ್ಮಣನು ಹೇಳಿದನು: “ಸತ್ತಮ! ಅವನು ಹೇಗೆ ಯೋನಿಗಳಲ್ಲಿ ಹುಟ್ಟಿಕೊಳ್ಳುತ್ತಾನೆ? ಮತ್ತು ಪುಣ್ಯಪಾಪಗಳಿಂದ ಪುಣ್ಯನು ಪುಣ್ಯನಾಗಿಯೇ ಮತ್ತು ಪಾಪಿಯು ಪಾಪಿಯಾಗಿಯೇ ಹೇಗೆ ಹುಟ್ಟಿಕೊಳ್ಳುತ್ತಾನೆ? ಅವನು ಹೇಗೆ ಹೋಗುತ್ತಾನೆ?”
03200030 ವ್ಯಾಧ ಉವಾಚ।
03200030a ಗರ್ಭಾಧಾನಸಮಾಯುಕ್ತಂ ಕರ್ಮೇದಂ ಸಂಪ್ರದೃಶ್ಯತೇ।
03200030c ಸಮಾಸೇನ ತು ತೇ ಕ್ಷಿಪ್ರಂ ಪ್ರವಕ್ಷ್ಯಾಮಿ ದ್ವಿಜೋತ್ತಮ।।
ವ್ಯಾಧನು ಹೇಳಿದನು: “ಕರ್ಮವು ಗರ್ಭಾಧಾನದೊಂದಿಗೆ ಕೂಡಿರುತ್ತದೆಯೆಂದು ಕಾಣುತ್ತದೆ. ದ್ವಿಜೋತ್ತಮ! ಇದರ ಕುರಿತು ಬೇಗನೇ ಸಂಕ್ಷಿಪ್ತವಾಗಿ ಹೇಳುತ್ತೇನೆ.
03200031a ಯಥಾ ಸಂಭೃತಸಂಭಾರಃ ಪುನರೇವ ಪ್ರಜಾಯತೇ।
03200031c ಶುಭಕೃಚ್ಚುಭಯೋನೀಷು ಪಾಪಕೃತ್ಪಾಪಯೋನಿಷು।।
ಒಟ್ಟುಹಾಕಿಕೊಂಡ ಸಂಭಾರ-ಸಾಮಾಗ್ರಿಗಳಿಗೆ ತಕ್ಕುದಾಗಿ ಶುಭಕಾರ್ಯಗಳನ್ನು ಮಾಡಿದವರು ಶುಭಯೋನಿಗಳಲ್ಲಿ ಮತ್ತು ಪಾಪಕಾರ್ಯಗಳನ್ನು ಮಾಡಿದವರು ಪಾಪಯೋನಿಗಳಲ್ಲಿ ಪುನಃ ಹುಟ್ಟುತ್ತಾರೆ.
03200032a ಶುಭೈಃ ಪ್ರಯೋಗೈರ್ದೇವತ್ವಂ ವ್ಯಾಮಿಶ್ರೈರ್ಮಾನುಷೋ ಭವೇತ್।
03200032c ಮೋಹನೀಯೈರ್ವಿಯೋನೀಷು ತ್ವಧೋಗಾಮೀ ಚ ಕಿಲ್ಬಿಷೈಃ।।
ಶುಭಕರ್ಮಗಳಿಂದ ದೇವತ್ವವನ್ನು ಪಡೆಯುತ್ತಾರೆ. ಮಿಶ್ರಕರ್ಮಗಳಿಂದ ಮನುಷ್ಯನಾಗುತ್ತಾರೆ. ಮೋಹದಿಂದ ಪ್ರಾಣಿಯೋನಿಗಳಲ್ಲಿ, ಮತ್ತು ಕಿಲ್ಬಿಷಗಳಿಂದ ಅಧೋಯೋನಿಗಳಲ್ಲಿ ಹುಟ್ಟುತ್ತಾರೆ.
03200033a ಜಾತಿಮೃತ್ಯುಜರಾದುಃಖೈಃ ಸತತಂ ಸಮಭಿದ್ರುತಃ।
03200033c ಸಂಸಾರೇ ಪಚ್ಯಮಾನಶ್ಚ ದೋಷೈರಾತ್ಮಕೃತೈರ್ನರಃ।।
ಮನುಷ್ಯನು ತಾನೇ ಮಾಡಿದ ದೋಷಗಳಿಂದ ಸಂಸಾರದಲ್ಲಿ ಹುಟ್ಟು, ಮೃತ್ಯು, ವೃದ್ಧಾಪ್ಯಗಳಿಂದ ಸುಡಲ್ಪಡುತ್ತಾನೆ.
03200034a ತಿರ್ಯಗ್ಯೋನಿಸಹಸ್ರಾಣಿ ಗತ್ವಾ ನರಕಮೇವ ಚ।
03200034c ಜೀವಾಃ ಸಂಪರಿವರ್ತಂತೇ ಕರ್ಮಬಂಧನಿಬಂಧನಾಃ।।
ಕರ್ಮಬಂಧನ ನಿಬಂಧನೆಗಳಿಗೆ ಸಿಲುಕಿ ಜೀವಗಳು ನರಕಕ್ಕೂ ಹೋಗಿ ಸಹಸ್ರಾರು ಕೀಳು ಯೋನಿಗಳಲ್ಲಿ ತಿರುಗುತ್ತಿರುತ್ತವೆ.
03200035a ಜಂತುಸ್ತು ಕರ್ಮಭಿಸ್ತೈಸ್ತೈಃ ಸ್ವಕೃತೈಃ ಪ್ರೇತ್ಯ ದುಃಖಿತಃ।
03200035c ತದ್ದುಃಖಪ್ರತಿಘಾತಾರ್ಥಮಪುಣ್ಯಾಂ ಯೋನಿಮಶ್ನುತೇ।।
ತಾವೇ ಮಾಡುವ ಕರ್ಮಗಳಿಂದ ಮತ್ತು ದುಃಖಗಳಿಗೆ ನೀಡುವ ಪ್ರತಿಕ್ರಿಯೆಗಳಿಂದ ಜಂತುಗಳು ಅಪುಣ್ಯ ಯೋನಿಗಳನ್ನು ಹೊಂದುತ್ತವೆ.
03200036a ತತಃ ಕರ್ಮ ಸಮಾದತ್ತೇ ಪುನರನ್ಯನ್ನವಂ ಬಹು।
03200036c ಪಚ್ಯತೇ ತು ಪುನಸ್ತೇನ ಭುಕ್ತ್ವಾಪಥ್ಯಮಿವಾತುರಃ।।
ಅಲ್ಲಿ ಪುನಃ ಅನ್ಯ ಹೊಸಕರ್ಮಗಳನ್ನು ಒಟ್ಟುಹಾಕಿಕೊಂಡು ಪುನಃ, ರೋಗಿಯು ಅಪಥ್ಯ ಆಹಾರವನ್ನು ಸೇವಿಸಿದರೆ ಹೇಗೋ ಹಾಗೆ, ದುಃಖವನ್ನು ಅನುಭವಿಸುತ್ತವೆ.
03200037a ಅಜಸ್ರಮೇವ ದುಃಖಾರ್ತೋಽದುಃಖಿತಃ ಸುಖಸಂಜ್ಞಿತಃ।
03200037c ತತೋಽನಿವೃತ್ತಬಂಧತ್ವಾತ್ಕರ್ಮಣಾಮುದಯಾದಪಿ।
03200037e ಪರಿಕ್ರಾಮತಿ ಸಂಸಾರೇ ಚಕ್ರವದ್ಬಹುವೇದನಃ।।
ಆಗ ದುಃಖಾರ್ತರಾಗಿದ್ದರೂ ಅದುಃಖಿತರಾಗಿದ್ದೇವೆ ಸುಖವಾಗಿದ್ದೇವೆ ಎಂದು ತಪ್ಪು ತಿಳಿದುಕೊಂಡು ತಮ್ಮ ಸರಪಳಿಗಳನ್ನು ಕಳಚಿಕೊಳ್ಳದೇ ಹೊಸ ಕರ್ಮಗಳಿಂದ ಬಂಧನವನ್ನು ಹೆಚ್ಚಿಸಿಕೊಳ್ಳುತ್ತಾರೆ. ಹೀಗೆ ಬಹುವೇದನೆಯ ಸಂಸಾರಚಕ್ರದಲ್ಲಿ ತಿರುಗುತ್ತಿರುತ್ತವೆ.
03200038a ಸ ಚೇನ್ನಿವೃತ್ತಬಂಧಸ್ತು ವಿಶುದ್ಧಶ್ಚಾಪಿ ಕರ್ಮಭಿಃ।
03200038c ಪ್ರಾಪ್ನೋತಿ ಸುಕೃತಾಽಲ್ಲೋಕಾನ್ಯತ್ರ ಗತ್ವಾ ನ ಶೋಚತಿ।।
ವಿಶುದ್ಧ ಕರ್ಮಗಳ ಮೂಲಕ ಈ ಬಂಧನದಿಂದ ನಿವೃತ್ತನಾದವನು ಎಲ್ಲಿಗೆ ಹೋದರೆ ದುಃಖವಿಲ್ಲವೋ ಆ ಸುಕೃತ ಲೋಕಗಳನ್ನು ಪಡೆಯುತ್ತಾನೆ.
03200039a ಪಾಪಂ ಕುರ್ವನ್ಪಾಪವೃತ್ತಃ ಪಾಪಸ್ಯಾಂತಂ ನ ಗಚ್ಚತಿ।
03200039c ತಸ್ಮಾತ್ಪುಣ್ಯಂ ಯತೇತ್ಕರ್ತುಂ ವರ್ಜಯೇತ ಚ ಪಾತಕಂ।।
ಪಾಪದಲ್ಲಿ ನಿರತನಾದವನು ಪಾಪವನ್ನೇ ಮಾಡಿಕೊಂಡು ಪಾಪದ ಅಂತ್ಯವನ್ನು ಪಡೆಯುವುದೇ ಇಲ್ಲ. ಆದುದರಿಂದ ಪಾತಕ ಕರ್ಮವನ್ನು ವರ್ಜಿಸಿ ಪುಣ್ಯವನ್ನು ಮಾಡಬೇಕು.
03200040a ಅನಸೂಯುಃ ಕೃತಜ್ಞಶ್ಚ ಕಲ್ಯಾಣಾನ್ಯೇವ ಸೇವತೇ।
03200040c ಸುಖಾನಿ ಧರ್ಮಮರ್ಥಂ ಚ ಸ್ವರ್ಗಂ ಚ ಲಭತೇ ನರಃ।।
ಅನಸೂಯನಾಗಿ, ಕೃತಜ್ಞನಾಗಿದ್ದುಕೊಂಡು ಕಲ್ಯಾಣಕರ ಸೇವೆಸಲ್ಲಿಸುವ ನರನು ಸುಖ-ಧರ್ಮ-ಅರ್ಥ-ಸ್ವರ್ಗಗಳನ್ನು ಪಡೆಯುತ್ತಾನೆ.
03200041a ಸಂಸ್ಕೃತಸ್ಯ ಹಿ ದಾಂತಸ್ಯ ನಿಯತಸ್ಯ ಯತಾತ್ಮನಃ।
03200041c ಪ್ರಾಜ್ಞಸ್ಯಾನಂತರಾ ವೃತ್ತಿರಿಹ ಲೋಕೇ ಪರತ್ರ ಚ।।
ಉತ್ತಮ ನಡತೆಯುಳ್ಳವನು, ತಾಳ್ಮೆಯುಳ್ಳವನು, ನಿಯತನಾದವನು, ಮತ್ತು ಯತಾತ್ಮನು ನಿರಂತರ ಸುಖವನ್ನು ಇಲ್ಲಿಯೂ ಇದರ ನಂತರವೂ ಪಡೆಯುತ್ತಾನೆ.
03200042a ಸತಾಂ ಧರ್ಮೇಣ ವರ್ತೇತ ಕ್ರಿಯಾಂ ಶಿಷ್ಟವದಾಚರೇತ್।
03200042c ಅಸಂಕ್ಲೇಶೇನ ಲೋಕಸ್ಯ ವೃತ್ತಿಂ ಲಿಪ್ಸೇತ ವೈ ದ್ವಿಜ।।
ದ್ವಿಜ! ಮನುಷ್ಯನು ಉತ್ತಮರ ಧರ್ಮದಂತೆ ನಡೆದುಕೊಳ್ಳಬೇಕು ಮತ್ತು ಶಿಷ್ಟರಂತೆ ಕ್ರಿಯೆಗಳನ್ನು ಆಚರಿಸಬೇಕು. ಲೋಕದ ವೃತ್ತಿಯನ್ನು ಅನುಸರಿಸುವುದರಿಂದ ಸಂಕ್ಲೇಶಗಳುಂಟಾಗುವುದಿಲ್ಲ.
03200043a ಸಂತಿ ಹ್ಯಾಗತವಿಜ್ಞಾನಾಃ ಶಿಷ್ಟಾಃ ಶಾಸ್ತ್ರವಿಚಕ್ಷಣಾಃ।
03200043c ಸ್ವಧರ್ಮೇಣ ಕ್ರಿಯಾ ಲೋಕೇ ಕರ್ಮಣಃ ಸೋಽಪ್ಯಸಂಕರಃ।।
ವಿಜ್ಞಾನಿಗಳೂ, ಶಾಸ್ತ್ರಗಳನ್ನು ಕಂಡುಕೊಂಡವರೂ, ಶಿಷ್ಟರೂ ಇದ್ದಾರೆ. ಸ್ವಧರ್ಮದಂತೆ ಕ್ರಿಯೆಯಲ್ಲಿ ತೊಡಗಿರುವುದರಿಂದ ಲೋಕದಲ್ಲಿ ಕರ್ಮಸಂಕರವು ಆಗುವುದಿಲ್ಲ.
03200044a ಪ್ರಾಜ್ಞೋ ಧರ್ಮೇಣ ರಮತೇ ಧರ್ಮಂ ಚೈವೋಪಜೀವತಿ।
03200044c ತಸ್ಯ ಧರ್ಮಾದವಾಪ್ತೇಷು ಧನೇಷು ದ್ವಿಜಸತ್ತಮ।
03200044e ತಸ್ಯೈವ ಸಿಂಚತೇ ಮೂಲಂ ಗುಣಾನ್ಪಶ್ಯತಿ ಯತ್ರ ವೈ।।
ಪ್ರಾಜ್ಞರು ಧರ್ಮದಂತೆ ನಡೆದುಕೊಳ್ಳುವುದರಲ್ಲಿ ಸಂತೋಷವನ್ನು ಪಡೆಯುತ್ತಾರೆ. ಧರ್ಮದಿಂದ ಜೀವನವನ್ನು ನಡೆಸುತ್ತಾರೆ. ದ್ವಿಜಸತ್ತಮ! ಅವನು ಧರ್ಮದಿಂದ ಧನವನ್ನು ಗಳಿಸುತ್ತಾನೆ. ಅದರಿಂದಲೇ ಬೇರಿಗೆ ನೀರನ್ನು ಹಾಕುತ್ತಾನೆ ಮತ್ತು ಎಲ್ಲಿಯೂ ಗುಣಗಳನ್ನು ಕಾಣುತ್ತಾನೆ.
03200045a ಧರ್ಮಾತ್ಮಾ ಭವತಿ ಹ್ಯೇವಂ ಚಿತ್ತಂ ಚಾಸ್ಯ ಪ್ರಸೀದತಿ।
03200045c ಸ ಮೈತ್ರಜನಸಂತುಷ್ಟ ಇಹ ಪ್ರೇತ್ಯ ಚ ನಂದತಿ।।
ಅಂಥವನು ಧರ್ಮಾತ್ಮನಾಗಿರುತ್ತಾನೆ. ಅವನ ಚಿತ್ತವು ಸದಾ ಸಂತೃಪ್ತವಾಗಿರುತ್ತದೆ. ಅವನು ಮಿತ್ರಜನರೊಡನೆ ಸಂತುಷ್ಟನಾಗಿ ಇಲ್ಲಿಯೂ ಮತ್ತು ನಂತರದಲ್ಲಿಯೂ ಆನಂದಿಸುತ್ತಾನೆ.
03200046a ಶಬ್ದಂ ಸ್ಪರ್ಶಂ ತಥಾ ರೂಪಂ ಗಂಧಾನಿಷ್ಟಾಂಶ್ಚ ಸತ್ತಮ।
03200046c ಪ್ರಭುತ್ವಂ ಲಭತೇ ಚಾಪಿ ಧರ್ಮಸ್ಯೈತತ್ಫಲಂ ವಿದುಃ।।
ಸತ್ತಮ! ಧರ್ಮದಲ್ಲಿರುವವರು ಸುಖವನ್ನು ನೀಡುವ ಶಬ್ಧ, ಸ್ಪರ್ಶ, ರೂಪ, ಗಂಧಗಳ ಮೇಲೆ ಪ್ರಭುತ್ವವನ್ನು ಪಡೆಯುತ್ತಾರೆ. ಇವು ಧರ್ಮದ ಫಲವೆಂದು ತಿಳಿಯಲ್ಪಟ್ಟಿವೆ.
03200047a ಧರ್ಮಸ್ಯ ಚ ಫಲಂ ಲಬ್ಧ್ವಾ ನ ತೃಪ್ಯತಿ ಮಹಾದ್ವಿಜ।
03200047c ಅತೃಪ್ಯಮಾಣೋ ನಿರ್ವೇದಮಾದತ್ತೇ ಜ್ಞಾನಚಕ್ಷುಷಾ।।
ಮಹಾದ್ವಿಜ! ಜ್ಞಾನಚಕ್ಷುಷಿಯು ಧರ್ಮದ ಫಲವನ್ನು ಪಡೆದು ತೃಪ್ತನಾಗುವುದಿಲ್ಲ. ಅವನು ನೋವು ಸುಖಗಳಿಗೆ ನಿರ್ವೇದನಾಗುತ್ತಾನೆ.
03200048a ಪ್ರಜ್ಞಾಚಕ್ಷುರ್ನರ ಇಹ ದೋಷಂ ನೈವಾನುರುಧ್ಯತೇ।
03200048c ವಿರಜ್ಯತಿ ಯಥಾಕಾಮಂ ನ ಚ ಧರ್ಮಂ ವಿಮುಂಚತಿ।।
ಪ್ರಜ್ಞಾಚಕ್ಷು ನರನನ್ನು ಇಲ್ಲಿಯ ದೋಷಗಳು ತಾಗುವುದಿಲ್ಲ. ತಾನೇ ಬಯಸಿ ವೈರಾಗ್ಯನಾಗುತ್ತಾನೆ. ಆದರೆ ಧರ್ಮವನ್ನು ಬಿಡುವುದಿಲ್ಲ.
03200049a ಸರ್ವತ್ಯಾಗೇ ಚ ಯತತೇ ದೃಷ್ಟ್ವಾ ಲೋಕಂ ಕ್ಷಯಾತ್ಮಕಂ।
03200049c ತತೋ ಮೋಕ್ಷೇ ಪ್ರಯತತೇ ನಾನುಪಾಯಾದುಪಾಯತಃ।।
ಲೋಕ ಮತ್ತು ತಾನೂ ಕ್ಷಯವಾಗುವವೆನ್ನುವುದನ್ನು ಕಂಡುಕೊಂಡು ಎಲ್ಲವನ್ನೂ ತ್ಯಜಿಸಲು ಪ್ರಯತ್ನಿಸುತ್ತಾನೆ. ಇನ್ನೂ ಉಪಾಯಗಳನ್ನು ಹುಡುಕಿಕೊಳ್ಳುತ್ತಾ ಮೋಕ್ಷಕ್ಕೆ ಪ್ರಯತ್ನಿಸುತ್ತಾನೆ.
03200050a ಏವಂ ನಿರ್ವೇದಮಾದತ್ತೇ ಪಾಪಂ ಕರ್ಮ ಜಹಾತಿ ಚ।
03200050c ಧಾರ್ಮಿಕಶ್ಚಾಪಿ ಭವತಿ ಮೋಕ್ಷಂ ಚ ಲಭತೇ ಪರಂ।।
ಹೀಗೆ ನಿರ್ವೇದಭಾವವನ್ನು ತಳೆದು ಪಾಪ ಕರ್ಮಗಳನ್ನು ಕಳೆದುಕೊಳ್ಳುತ್ತಾನೆ. ಧಾರ್ಮಿಕನಾಗಿದ್ದುಕೊಂಡು ಪರಮ ಮೋಕ್ಷವನ್ನು ಪಡೆಯುತ್ತಾನೆ.
03200051a ತಪೋ ನಿಃಶ್ರೇಯಸಂ ಜಂತೋಸ್ತಸ್ಯ ಮೂಲಂ ಶಮೋ ದಮಃ।
03200051c ತೇನ ಸರ್ವಾನವಾಪ್ನೋತಿ ಕಾಮಾನ್ಯಾನ್ಮನಸೇಚ್ಚತಿ।।
ತಪಸ್ಸು ಜಂತುವಿನ ಶ್ರೇಯಸ್ಸಿಗೆ ಕಾರಣ ಮತ್ತು ಅದರ ಮೂಲವು ಶಮ ಮತ್ತು ದಮ. ಇವುಗಳ ಮೂಲಕ ಅವನ ಮನಸ್ಸು ಬಯಸಿದ ಕಾಮಗಳೆಲ್ಲವನ್ನೂ ಪಡೆಯುತ್ತಾನೆ.
03200052a ಇಂದ್ರಿಯಾಣಾಂ ನಿರೋಧೇನ ಸತ್ಯೇನ ಚ ದಮೇನ ಚ।
03200052c ಬ್ರಹ್ಮಣಃ ಪದಮಾಪ್ನೋತಿ ಯತ್ಪರಂ ದ್ವಿಜಸತ್ತಮ।।
ದ್ವಿಜಸತ್ತಮ! ಇಂದ್ರಿಯಗಳ ನಿರೋಧ, ಸತ್ಯ ಮತ್ತು ದಮಗಳ ಮೂಲಕ ಶ್ರೇಷ್ಠ ಬ್ರಹ್ಮಪದವನ್ನು ಪಡೆಯುತ್ತಾನೆ.”
03200053 ಬ್ರಾಹ್ಮಣ ಉವಾಚ।
03200053a ಇಂದ್ರಿಯಾಣಿ ತು ಯಾನ್ಯಾಹುಃ ಕಾನಿ ತಾನಿ ಯತವ್ರತ।
03200053c ನಿಗ್ರಹಶ್ಚ ಕಥಂ ಕಾರ್ಯೋ ನಿಗ್ರಹಸ್ಯ ಚ ಕಿಂ ಫಲಂ।।
ಬ್ರಾಹ್ಮಣನು ಹೇಳಿದನು: “ಯತವ್ರತ! ಇಂದ್ರಿಯಗಳೆಂದು ನೀನು ಹೇಳಿದೆಯಲ್ಲ ಅವು ಏನು? ಅವುಗಳ ನಿಗ್ರಹವನ್ನು ಹೇಗೆ ಮಾಡಬೇಕು ಮತ್ತು ನಿಗ್ರಹದ ಫಲವೇನು?
03200054a ಕಥಂ ಚ ಫಲಮಾಪ್ನೋತಿ ತೇಷಾಂ ಧರ್ಮಭೃತಾಂ ವರ।
03200054c ಏತದಿಚ್ಚಾಮಿ ತತ್ತ್ವೇನ ಧರ್ಮಂ ಜ್ಞಾತುಂ ಸುಧಾರ್ಮಿಕ।।
ಧರ್ಮಭೃತರಲ್ಲಿ ಶ್ರೇಷ್ಠ! ಸುಧಾರ್ಮಿಕ! ಇವುಗಳ ಫಲವನ್ನು ಹೇಗೆ ಪಡೆಯಬೇಕು? ತತ್ವದಿಂದ ಈ ಧರ್ಮವನ್ನು ತಿಳಿಯಲು ಬಯಸುತ್ತೇನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಪತಿವ್ರತೋಪಾಖ್ಯಾನೇ ಬ್ರಾಹ್ಮಣವ್ಯಾಧಸಂವಾದೇ ದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ಇನ್ನೂರನೆಯ ಅಧ್ಯಾಯವು.