ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 199
ಸಾರ
ಈಗಿನ ವೃತ್ತಿಯನ್ನು ಫಲವನ್ನಾಗಿತ್ತ ಹಿಂದಿನ ಕರ್ಮದೋಷಗಳನ್ನು ಕೊನೆಗೊಳಿಸಲು ಸಾಧ್ಯವಾದ ಪ್ರಯತ್ನವನ್ನು ಮಾಡುತ್ತಿದ್ದಾನೆಂದು ವ್ಯಾಧನು ಹೇಳುವುದು (1-2). ಔಷಧಗಳು, ತೋಟದ ಹಸಿರುಗಳ ಜೊತೆ ಪಶುಗಳು ಮತ್ತು ಮೃಗಪಕ್ಷಿಗಳೂ ಲೋಕದ ಆಹಾರಗಳೆಂದು ಶ್ರುತಿಯು ಹೇಳುತ್ತದೆಯೆಂದೂ; ಶಿಬಿ-ರಂತಿದೇವ ಮೊದಲಾದ ರಾಜರು ಮಾಂಸವನ್ನು ಬಳಸಿದ್ದರೆಂದೂ; ದೇವತೆಗಳಿಗೂ, ಪಿತೃಗಳಿಗೂ ಯಥಾವಿಧಿಯಾಗಿ ಯಥಾಶ್ರದ್ಧೆಯಿಂದ ನೀಡಿ ತಿಂದರೆ ತಿಂದುದರ ಪಾಪವನ್ನು ಪಡೆಯುವುದಿಲ್ಲವೆಂದೂ ವ್ಯಾಧನು ಕೌಶಿಕನಿಗೆ ವಿವರಿಸುವುದು (3-16). ಲೋಕದಲ್ಲಿ ಕಾಣುವ ಬಹಳಷ್ಟು ಧರ್ಮ ಮತ್ತು ಅಧರ್ಮಯುಕ್ತ ವಿಪರ್ಯಾಸಗಳನ್ನು ವರ್ಣಿಸಿ ಸ್ವಕರ್ಮದಲ್ಲಿ ನಿರತನಾದವನು ಯಶಸ್ವಿಯಾಗುತ್ತಾನೆ ಎನ್ನುವುದು (17-34).
03199001 ಮಾರ್ಕಂಡೇಯ ಉವಾಚ।
03199001a ಸ ತು ವಿಪ್ರಮಥೋವಾಚ ಧರ್ಮವ್ಯಾಧೋ ಯುಧಿಷ್ಠಿರ।
03199001c ಯದಹಂ ಹ್ಯಾಚರೇ ಕರ್ಮ ಘೋರಮೇತದಸಂಶಯಂ।।
ಮಾರ್ಕಂಡೇಯನು ಹೇಳಿದನು: “ಯುಧಿಷ್ಠಿರ! ಆಗ ಧರ್ಮವ್ಯಾಧನು ವಿಪ್ರನಿಗೆ ಹೇಳಿದನು. “ನಾನು ಆಚರಿಸುತ್ತಿರುವ ಈ ಕರ್ಮವು ಘೋರವಾದುದು ಎನ್ನುವುದರಲ್ಲಿ ಸಂಶಯವೇ ಇಲ್ಲ.
03199002a ವಿಧಿಸ್ತು ಬಲವಾನ್ಬ್ರಹ್ಮನ್ದುಸ್ತರಂ ಹಿ ಪುರಾಕೃತಂ।
03199002c ಪುರಾಕೃತಸ್ಯ ಪಾಪಸ್ಯ ಕರ್ಮದೋಷೋ ಭವತ್ಯಯಂ।
03199002e ದೋಷಸ್ಯೈತಸ್ಯ ವೈ ಬ್ರಹ್ಮನ್ವಿಘಾತೇ ಯತ್ನವಾನಹಂ।।
ಬ್ರಹ್ಮನ್! ಹಿಂದೆ ಮಾಡಿದ ಕರ್ಮಗಳ ವಿಧಿಯು ಬಲಶಾಲಿ ಮತ್ತು ದಾಟುವುದು ಕಷ್ಟ. ಇದು ನಾನು ಹಿಂದೆ ಮಾಡಿದ ಕರ್ಮದೋಷಗಳ ಫಲ. ಬ್ರಹ್ಮನ್! ಈ ದೋಷವನ್ನು ಕೊನೆಗೊಳಿಸಲು ನನಗಾದಷ್ಟು ಪ್ರಯತ್ನಿಸುತ್ತಿದ್ದೇನೆ.
03199003a ವಿಧಿನಾ ವಿಹಿತೇ ಪೂರ್ವಂ ನಿಮಿತ್ತಂ ಘಾತಕೋ ಭವೇತ್।
03199003c ನಿಮಿತ್ತಭೂತಾ ಹಿ ವಯಂ ಕರ್ಮಣೋಽಸ್ಯ ದ್ವಿಜೋತ್ತಮ।।
ದ್ವಿಜೋತ್ತಮ! ಹಿಂದೆಯೇ ವಿಧಿಯಿಂದ ವಿಹಿತವಾದುದಕ್ಕೆ ಘಾತಕನು ನಿಮಿತ್ತಮಾತ್ರವಾಗುತ್ತಾನೆ. ಆದುದರಿಂದ ನಾವು ಹಿಂದಿನ ಕರ್ಮಗಳ ನಿಮಿತ್ತಗಳಾಗಿರುತ್ತೇವೆ.
03199004a ಯೇಷಾಂ ಹತಾನಾಂ ಮಾಂಸಾನಿ ವಿಕ್ರೀಣಾಮೋ ವಯಂ ದ್ವಿಜ।
03199004c ತೇಷಾಮಪಿ ಭವೇದ್ಧರ್ಮ ಉಪಭೋಗೇನ ಭಕ್ಷಣಾತ್।
03199004e ದೇವತಾತಿಥಿಭೃತ್ಯಾನಾಂ ಪಿತೄಣಾಂ ಪ್ರತಿಪೂಜನಾತ್।।
ದ್ವಿಜ! ಯಾರಿಗೆ ನಾವು ಕೊಲ್ಲಲ್ಪಟ್ಟಿದುದರ ಮಾಂಸವನ್ನು ಮಾರುತ್ತೇವೋ ಅವರಿಗೂ ದೇವತೆ, ಅತಿಥಿ, ಸೇವಕರು ಮತ್ತು ಪಿತೃಗಳನ್ನು ಪೂಜಿಸಿದ ನಂತರ ಅದನ್ನು ತಿಂದು ಭೋಗಿಸುವ ಧರ್ಮವಿರುತ್ತದೆ.
03199005a ಓಷಧ್ಯೋ ವೀರುಧಶ್ಚಾಪಿ ಪಶವೋ ಮೃಗಪಕ್ಷಿಣಃ।
03199005c ಅನ್ನಾದ್ಯಭೂತಾ ಲೋಕಸ್ಯ ಇತ್ಯಪಿ ಶ್ರೂಯತೇ ಶ್ರುತಿಃ।।
ಔಷಧಗಳು, ತೋಟದ ಹಸಿರುಗಳು, ಪಶುಗಳು, ಮೃಗಪಕ್ಷಿಗಳು ಲೋಕದ ಅನ್ನಗಳು ಎಂದು ಶ್ರುತಿಗಳು ತಿಳಿಸುತ್ತವೆ.
03199006a ಆತ್ಮಮಾಂಸಪ್ರದಾನೇನ ಶಿಬಿರೌಶೀನರೋ ನೃಪಃ।
03199006c ಸ್ವರ್ಗಂ ಸುದುರ್ಲಭಂ ಪ್ರಾಪ್ತಃ ಕ್ಷಮಾವಾನ್ದ್ವಿಜಸತ್ತಮ।।
ದ್ವಿಜಸತ್ತಮ! ನೃಪ ಔಶೀನರ ಕ್ಷಮವಂತ ಶಿಬಿಯು ತನ್ನದೇ ಮಾಂಸವನ್ನು ನೀಡಿ ತುಂಬಾ ದುರ್ಲಭವಾದ ಸ್ವರ್ಗವನ್ನು ಪಡೆದನು.
03199007a ರಾಜ್ಞೋ ಮಹಾನಸೇ ಪೂರ್ವಂ ರಂತಿದೇವಸ್ಯ ವೈ ದ್ವಿಜ।
03199007c ದ್ವೇ ಸಹಸ್ರೇ ತು ವಧ್ಯೇತೇ ಪಶೂನಾಮನ್ವಹಂ ತದಾ।।
ದ್ವಿಜ! ಹಿಂದೆ ರಾಜ ರಂತಿದೇವನ ಅಡುಗೆಮನೆಯಲ್ಲಿ ದಿನವೂ ಎರಡು ಸಾವಿರ ಪಶುಗಳನ್ನು ವಧಿಸಲಾಗುತ್ತಿತ್ತು.
03199008a ಸಮಾಂಸಂ ದದತೋ ಹ್ಯನ್ನಂ ರಂತಿದೇವಸ್ಯ ನಿತ್ಯಶಃ।
03199008c ಅತುಲಾ ಕೀರ್ತಿರಭವನ್ನೃಪಸ್ಯ ದ್ವಿಜಸತ್ತಮ।
03199008e ಚಾತುರ್ಮಾಸ್ಯೇಷು ಪಶವೋ ವಧ್ಯಂತ ಇತಿ ನಿತ್ಯಶಃ।।
ರಂತಿದೇವನು ದಿನವೂ ಮಾಂಸವನ್ನು ಕೂಡಿದ ಊಟವನ್ನು ಬಡಿಸುತ್ತಿದ್ದನು. ಆ ನೃಪನು ಅತುಲ ಕೀರ್ತಿಯನ್ನು ಹೊಂದಿದನು. ಚಾತುರ್ಮಾಸದಲ್ಲಿ ನಿತ್ಯವೂ ಪಶುಗಳ ವಧೆಯಾಗುತ್ತಿತ್ತು.
03199009a ಅಗ್ನಯೋ ಮಾಂಸಕಾಮಾಶ್ಚ ಇತ್ಯಪಿ ಶ್ರೂಯತೇ ಶ್ರುತಿಃ।
03199009c ಯಜ್ಞೇಷು ಪಶವೋ ಬ್ರಹ್ಮನ್ವಧ್ಯಂತೇ ಸತತಂ ದ್ವಿಜೈಃ।
03199009e ಸಂಸ್ಕೃತಾಃ ಕಿಲ ಮಂತ್ರೈಶ್ಚ ತೇಽಪಿ ಸ್ವರ್ಗಮವಾಪ್ನುವನ್।।
ಅಗ್ನಿಗಳು ಮಾಂಸವನ್ನು ಬಯಸುತ್ತವೆ ಎಂದು ಶ್ರುತಿಗಳೂ ಹೇಳುತ್ತವೆ. ಬ್ರಹ್ಮನ್! ಯಜ್ಞಗಳಲ್ಲಿ ಸತತವೂ ದ್ವಿಜರು ಪಶುಗಳನ್ನು ವಧಿಸುತ್ತಾರೆ. ಮಂತ್ರಗಳಿಂದ ಸಂಸ್ಕೃತರಾಗಿ ಅವೂ ಸ್ವರ್ಗವನ್ನು ತಲುಪುತ್ತವೆ ಎನ್ನುವುದಿಲ್ಲವೇ?
03199010a ಯದಿ ನೈವಾಗ್ನಯೋ ಬ್ರಹ್ಮನ್ಮಾಂಸಕಾಮಾಭವನ್ಪುರಾ।
03199010c ಭಕ್ಷ್ಯಂ ನೈವ ಭವೇನ್ಮಾಂಸಂ ಕಸ್ಯ ಚಿದ್ದ್ವಿಜಸತ್ತಮ।।
ದ್ವಿಜಸತ್ತಮ! ಹಿಂದೆ ಅಗ್ನಿಗಳು ಮಾಂಸಕಾಮಿಗಳಾಗಿರದಿದ್ದರೆ ಈಗ ಯಾರೂ ಮಾಂಸವನ್ನು ತಿನ್ನುತ್ತಿರಲಿಲ್ಲ.
03199011a ಅತ್ರಾಪಿ ವಿಧಿರುಕ್ತಶ್ಚ ಮುನಿಭಿರ್ಮಾಂಸಭಕ್ಷಣೇ।
03199011c ದೇವತಾನಾಂ ಪಿತೄಣಾಂ ಚ ಭುಂಕ್ತೇ ದತ್ತ್ವಾ ತು ಯಃ ಸದಾ।
03199011e ಯಥಾವಿಧಿ ಯಥಾಶ್ರದ್ಧಂ ನ ಸ ದುಷ್ಯತಿ ಭಕ್ಷಣಾತ್।।
ಈಗಲೂ ಕೂಡ ಮುನಿಗಳು ಮಾಂಸಭಕ್ಷಣದ ವಿಷಯದಲ್ಲಿ ನಿಶ್ಚಯವನ್ನು ಹೇಳುತ್ತಾರೆ: ದೇವತೆಗಳಿಗೂ, ಪಿತೃಗಳಿಗೂ ಯಥಾವಿಧಿಯಾಗಿ ಯಥಾಶ್ರದ್ಧೆಯಿಂದ ನೀಡಿ ತಿಂದರೆ ತಿಂದಿದುದರ ಪಾಪವನ್ನು ಪಡೆಯುವುದಿಲ್ಲ.
03199012a ಅಮಾಂಸಾಶೀ ಭವತ್ಯೇವಮಿತ್ಯಪಿ ಶ್ರೂಯತೇ ಶ್ರುತಿಃ।
03199012c ಭಾರ್ಯಾಂ ಗಚ್ಚನ್ಬ್ರಹ್ಮಚಾರೀ ಋತೌ ಭವತಿ ಬ್ರಾಹ್ಮಣಃ।।
ಹೇಗೆ ಋತುಮತಿಯಾಗಿದ್ದಾಗ ಪತ್ನಿಯನ್ನು ಕೂಡುವ ಬ್ರಾಹ್ಮಣನು ಬ್ರಹ್ಮಚಾರಿಯಾಗಿಯೇ ಇರುತ್ತಾನೋ ಹಾಗೆ ಇದರಿಂದ ಮಾಂಸಾಹಾರಿಯಾಗುವುದಿಲ್ಲ ಎಂದು ಶ್ರುತಿಗಳು ಹೇಳುತ್ತವೆ.
03199013a ಸತ್ಯಾನೃತೇ ವಿನಿಶ್ಚಿತ್ಯ ಅತ್ರಾಪಿ ವಿಧಿರುಚ್ಯತೇ।
03199013c ಸೌದಾಸೇನ ಪುರಾ ರಾಜ್ಞಾ ಮಾನುಷಾ ಭಕ್ಷಿತಾ ದ್ವಿಜ।
03199013e ಶಾಪಾಭಿಭೂತೇನ ಭೃಶಮತ್ರ ಕಿಂ ಪ್ರತಿಭಾತಿ ತೇ।।
ಈಗಲೂ ಕೂಡ ಸತ್ಯ ಮತ್ತು ಸುಳ್ಳುಗಳನ್ನು ನಿಶ್ಚಯಿಸುವ ವಿಧಿಗಳನ್ನು ಹೇಳುತ್ತಾರೆ. ದ್ವಿಜ! ಹಿಂದೆ ಶಾಪದ ಮಹಾ ಪ್ರಭಾವಕ್ಕೆ ಸಿಲುಕಿದ ರಾಜ ಸೌದಾಸನು ನರಮಾಂಸವನ್ನು ಭಕ್ಷಿಸಿದನು1. ಇದರ ಕುರಿತು ನಿನಗೆ ಏನನ್ನಿಸುತ್ತದೆ?
03199014a ಸ್ವಧರ್ಮ ಇತಿ ಕೃತ್ವಾ ತು ನ ತ್ಯಜಾಮಿ ದ್ವಿಜೋತ್ತಮ।
03199014c ಪುರಾಕೃತಮಿತಿ ಜ್ಞಾತ್ವಾ ಜೀವಾಮ್ಯೇತೇನ ಕರ್ಮಣಾ।।
ದ್ವಿಜೋತ್ತಮ! ಇದು ನನ್ನ ಧರ್ಮವೆಂದು ಮಾಡುತ್ತೇನೆ. ಇದನ್ನು ಬಿಡುವುದಿಲ್ಲ. ಇದು ಹಿಂದೆ ಮಾಡಿದುದರಿಂದ ಎಂದು ತಿಳಿದು ಇದೇ ಕರ್ಮದಿಂದ ಜೀವಿಸುತ್ತೇನೆ.
03199015a ಸ್ವಕರ್ಮ ತ್ಯಜತೋ ಬ್ರಹ್ಮನ್ನಧರ್ಮ ಇಹ ದೃಶ್ಯತೇ।
03199015c ಸ್ವಕರ್ಮನಿರತೋ ಯಸ್ತು ಸ ಧರ್ಮ ಇತಿ ನಿಶ್ಚಯಃ।।
ಬ್ರಹ್ಮನ್! ಇಲ್ಲಿ ತನ್ನ ಕರ್ಮವನ್ನು ಬಿಡುವುದು ಅಧರ್ಮವೆಂದು ಕಾಣುತ್ತದೆ. ತನ್ನ ಕರ್ಮದಲ್ಲಿ ಯಾರು ನಿರತನಾಗಿರುತ್ತಾನೋ ಅದೇ ಧರ್ಮವೆಂದು ನಿಶ್ಚಿತಗೊಂಡಿದೆ.
03199016a ಪೂರ್ವಂ ಹಿ ವಿಹಿತಂ ಕರ್ಮ ದೇಹಿನಂ ನ ವಿಮುಂಚತಿ।
03199016c ಧಾತ್ರಾ ವಿಧಿರಯಂ ದೃಷ್ಟೋ ಬಹುಧಾ ಕರ್ಮನಿರ್ಣಯೇ।।
ಏಕೆಂದರೆ, ಹಿಂದೆಯೇ ವಿಹಿತವಾಗಿರುವ ಕರ್ಮವು ದೇಹಿಯನ್ನು ಬಿಡುವುದಿಲ್ಲ. ಕರ್ಮವನ್ನು ನಿರ್ಣಯಿಸುವಾಗ ಧಾತ್ರುವು ಈ ವಿಧಿಯನ್ನು ಬಹುರೀತಿಗಳಲ್ಲಿ ನೋಡಿದನು.
03199017a ದ್ರಷ್ಟವ್ಯಂ ತು ಭವೇತ್ಪ್ರಾಜ್ಞ ಕ್ರೂರೇ ಕರ್ಮಣಿ ವರ್ತತಾ।
03199017c ಕಥಂ ಕರ್ಮ ಶುಭಂ ಕುರ್ಯಾಂ ಕಥಂ ಮುಚ್ಯೇ ಪರಾಭವಾತ್।
03199017e ಕರ್ಮಣಸ್ತಸ್ಯ ಘೋರಸ್ಯ ಬಹುಧಾ ನಿರ್ಣಯೋ ಭವೇತ್।।
ಬ್ರಾಹ್ಮಣ! ಕ್ರೂರಕರ್ಮಗಳಲ್ಲಿ ತೊಡಗಿರುವವನು ಹೇಗೆ ಆ ಕರ್ಮವನ್ನು ಶುಭವನ್ನಾಗಿ ಮಾಡಬೇಕು ಮತ್ತು ಹೇಗೆ ಪರಾಭವದಿಂದ ತಪ್ಪಿಸಿಕೊಳ್ಳಬೇಕು ಎನ್ನುವುದನ್ನು ನೋಡಬೇಕಾಗುತ್ತದೆ. ಈ ಘೋರ ಕರ್ಮಗಳ ಕುರಿತು ಬಹುರೀತಿಯ ನಿರ್ಣಯಗಳಾಗುತ್ತವೆ.
03199018a ದಾನೇ ಚ ಸತ್ಯವಾಕ್ಯೇ ಚ ಗುರುಶುಶ್ರೂಷಣೇ ತಥಾ।
03199018c ದ್ವಿಜಾತಿಪೂಜನೇ ಚಾಹಂ ಧರ್ಮೇ ಚ ನಿರತಃ ಸದಾ।
03199018e ಅತಿವಾದಾತಿಮಾನಾಭ್ಯಾಂ ನಿವೃತ್ತೋಽಸ್ಮಿ ದ್ವಿಜೋತ್ತಮ।।
ದ್ವಿಜೋತ್ತಮ! ನಾನು ಸದಾ ದಾನ, ಸತ್ಯವಾಕ್ಯ, ಗುರುಶುಶ್ರೂಷೆ, ದ್ವಿಜರ ಪೂಜೆ ಮತ್ತು ಧರ್ಮದಲ್ಲಿ ನಿರತನಾಗಿದ್ದೇನೆ. ನಾನು ಅತಿಯಾಗಿ ಮಾತನಾಡುವುದರಿಂದ ಮತ್ತು ಅತಿಯಾಗಿ ಜಂಬಕೊಚ್ಚಿಕೊಳ್ಳುವುದರಿಂದ ದೂರವಿರುತ್ತೇನೆ.
03199019a ಕೃಷಿಂ ಸಾಧ್ವಿತಿ ಮನ್ಯಂತೇ ತತ್ರ ಹಿಂಸಾ ಪರಾ ಸ್ಮೃತಾ।
03199019c ಕರ್ಷಂತೋ ಲಾಂಗಲೈಃ ಪುಂಸೋ ಘ್ನಂತಿ ಭೂಮಿಶಯಾನ್ಬಹೂನ್।
03199019e ಜೀವಾನನ್ಯಾಂಶ್ಚ ಬಹುಶಸ್ತತ್ರ ಕಿಂ ಪ್ರತಿಭಾತಿ ತೇ।।
ಕೃಷಿಯು ಒಳ್ಳೆಯದೆಂದು ಅಭಿಪ್ರಾಯಪಡುತ್ತಾರೆ. ಅದರಲ್ಲಿಯೂ ಬಹಳಷ್ಟು ಹಿಂಸೆಗಳಾಗುತ್ತದೆ ಎಂದು ತಿಳಿದಿದೆ. ನೇಗಿಲನ್ನು ಎಳೆದು ಹೂಳುವ ನರರು ಭೂಮಿಯೊಳಗೆ ಜೀವಿಸುವ ಬಹಳ ಜೀವಿಗಳನ್ನು ಮತ್ತು ಇತರ ಅನೇಕಗಳನ್ನು ಕೊಲ್ಲುತ್ತಾರೆ. ನಿನಗೇನನ್ನಿಸುತ್ತದೆ?
03199020a ಧಾನ್ಯಬೀಜಾನಿ ಯಾನ್ಯಾಹುರ್ವ್ರೀಹ್ಯಾದೀನಿ ದ್ವಿಜೋತ್ತಮ।
03199020c ಸರ್ವಾಣ್ಯೇತಾನಿ ಜೀವಾನಿ ತತ್ರ ಕಿಂ ಪ್ರತಿಭಾತಿ ತೇ।।
ದ್ವಿಜೋತ್ತಮ! ಧಾನ್ಯಬೀಜಗಳೆಂದು ಕರೆಯಲ್ಪಡುವ ಭತ್ತ ಮೊದಲಾದವುಗಳೆಲ್ಲವೂ ಜೀವಿಗಳೇ. ನಿನಗೇನನ್ನಿಸುತ್ತದೆ?
03199021a ಅಧ್ಯಾಕ್ರಮ್ಯ ಪಶೂಂಶ್ಚಾಪಿ ಘ್ನಂತಿ ವೈ ಭಕ್ಷಯಂತಿ ಚ।
03199021c ವೃಕ್ಷಾನಥೌಷಧೀಶ್ಚೈವ ಚಿಂದಂತಿ ಪುರುಷಾ ದ್ವಿಜ।।
ದ್ವಿಜ! ಪುರುಷನು ಪಶುಗಳನ್ನು ಅತಿಕ್ರಮಿಸಿ ಕೊಂದು ತಿನ್ನುತ್ತಾನೆ. ಮರ ಔಷಧಗಳನ್ನೂ ಕಡಿಯುತ್ತಾನೆ.
03199022a ಜೀವಾ ಹಿ ಬಹವೋ ಬ್ರಹ್ಮನ್ವೃಕ್ಷೇಷು ಚ ಫಲೇಷು ಚ।
03199022c ಉದಕೇ ಬಹವಶ್ಚಾಪಿ ತತ್ರ ಕಿಂ ಪ್ರತಿಭಾತಿ ತೇ।।
ಬ್ರಹ್ಮನ್! ಮರಗಳಲ್ಲಿ ಮತ್ತು ಫಲಗಳಲ್ಲಿಯೂ ಬಹಳಷ್ಟು ಜೀವಿಗಳಿರುತ್ತವೆ. ನೀರಿನಲ್ಲಿಯೂ ಕೂಡ ಅನೇಕವಿವೆ. ಇದರ ಕುರಿತು ನಿನಗೇನನ್ನಿಸುತ್ತದೆ?
03199023a ಸರ್ವಂ ವ್ಯಾಪ್ತಮಿದಂ ಬ್ರಹ್ಮನ್ಪ್ರಾಣಿಭಿಃ ಪ್ರಾಣಿಜೀವನೈಃ।
03199023c ಮತ್ಸ್ಯಾ ಗ್ರಸಂತೇ ಮತ್ಸ್ಯಾಂಶ್ಚ ತತ್ರ ಕಿಂ ಪ್ರತಿಭಾತಿ ತೇ।।
ಬ್ರಹ್ಮನ್! ಎಲ್ಲವೂ ಪ್ರಾಣವಿರುವವುಗಳಿಂದ ಪ್ರಾಣಿಜೀವಿಗಳಿಂದ ತುಂಬಿದೆ. ಮೀನುಗಳು ಮೀನುಗಳನ್ನು ತಿನ್ನುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?
03199024a ಸತ್ತ್ವೈಃ ಸತ್ತ್ವಾನಿ ಜೀವಂತಿ ಬಹುಧಾ ದ್ವಿಜಸತ್ತಮ।
03199024c ಪ್ರಾಣಿನೋಽನ್ಯೋನ್ಯಭಕ್ಷಾಶ್ಚ ತತ್ರ ಕಿಂ ಪ್ರತಿಭಾತಿ ತೇ।।
ದ್ವಿಜಸತ್ತಮ! ಸತ್ವವುಳ್ಳವುಗಳು ಬಹಳಷ್ಟು ಸತ್ವವುಳ್ಳವುಗಳನ್ನು ಆಧರಿಸಿ ಜೀವಿಸುತ್ತವೆ. ಪ್ರಾಣಿಗಳು ಅನ್ಯೋನ್ಯರನ್ನು ತಿನ್ನುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?
03199025a ಚಂಕ್ರಮ್ಯಮಾಣಾ ಜೀವಾಂಶ್ಚ ಧರಣೀಸಂಶ್ರಿತಾನ್ಬಹೂನ್।
03199025c ಪದ್ಭ್ಯಾಂ ಘ್ನಂತಿ ನರಾ ವಿಪ್ರ ತತ್ರ ಕಿಂ ಪ್ರತಿಭಾತಿ ತೇ।।
ವಿಪ್ರ! ಕೇವಲ ನೆಲದ ಮೇಲೆ ನಡೆಯುವುದರಿಂದ ನರರು ನೆಲಕ್ಕೆ ಅಂಟಿಕೊಂಡಿರುವ ಅನೇಕ ಜೀವಿಗಳನ್ನು ಕಾಲಿನಿಂದ ತುಳಿಯುತ್ತಾರೆ. ಇದರ ಕುರಿತು ನಿನಗೇನನ್ನಿಸುತ್ತದೆ?
03199026a ಉಪವಿಷ್ಟಾಃ ಶಯಾನಾಶ್ಚ ಘ್ನಂತಿ ಜೀವಾನನೇಕಶಃ।
03199026c ಜ್ಞಾನವಿಜ್ಞಾನವಂತಶ್ಚ ತತ್ರ ಕಿಂ ಪ್ರತಿಭಾತಿ ತೇ।।
ಕುಳಿತಿರುವ, ಮಲಗಿರುವ, ಜ್ಞಾನ-ವಿವೇಕಗಳಿರುವ ಅನೇಕಾನೇಕ ಜೀವಿಗಳು ನಾಶಹೊಂದುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?
03199027a ಜೀವೈರ್ಗ್ರಸ್ತಮಿದಂ ಸರ್ವಮಾಕಾಶಂ ಪೃಥಿವೀ ತಥಾ।
03199027c ಅವಿಜ್ಞಾನಾಚ್ಚ ಹಿಂಸಂತಿ ತತ್ರ ಕಿಂ ಪ್ರತಿಭಾತಿ ತೇ।।
ತಿಳಿಯದೇ ಅವರು ಈ ಆಕಾಶ ಮತ್ತು ಭೂಮಿಯಲ್ಲಿ ತುಂಬಿರುವ ಎಲ್ಲ ಜೀವಗಳನ್ನು ಹಿಂಸಿಸುತ್ತಾರೆ. ಇದರ ಕುರಿತು ನಿನಗೇನನ್ನಿಸುತ್ತದೆ?
03199028a ಅಹಿಂಸೇತಿ ಯದುಕ್ತಂ ಹಿ ಪುರುಷೈರ್ವಿಸ್ಮಿತೈಃ ಪುರಾ।
03199028c ಕೇ ನ ಹಿಂಸಂತಿ ಜೀವನ್ವೈ ಲೋಕೇಽಸ್ಮಿನ್ದ್ವಿಜಸತ್ತಮ।
03199028e ಬಹು ಸಂಚಿಂತ್ಯ ಇಹ ವೈ ನಾಸ್ತಿ ಕಶ್ಚಿದಹಿಂಸಕಃ।।
ದ್ವಿಜಸತ್ತಮ! ಹಿಂದೆ ಪುರುಷರು ವಿಸ್ಮಿತರಾಗಿ ಅಹಿಂಸೆ ಎಂದು ಹೇಳಿದ್ದರು. ಆದರೆ ಈ ಲೋಕದಲ್ಲಿ ಯಾರುತಾನೇ ಜೀವವಿರುವ ಯಾವುದನ್ನೂ ಹಿಂಸಿಸದೇ ಇದ್ದಾನೆ? ಬಹಳಷ್ಟು ಚಿಂತಿಸಿದರೂ ಇಲ್ಲಿ ಅಹಿಂಸಕನು ಯಾರೂ ಇಲ್ಲ.
03199029a ಅಹಿಂಸಾಯಾಂ ತು ನಿರತಾ ಯತಯೋ ದ್ವಿಜಸತ್ತಮ।
03199029c ಕುರ್ವಂತ್ಯೇವ ಹಿ ಹಿಂಸಾಂ ತೇ ಯತ್ನಾದಲ್ಪತರಾ ಭವೇತ್।।
ದ್ವಿಜಸತ್ತಮ! ಅಹಿಂಸೆಯಲ್ಲಿ ನಿರತರಾದ ಯತಿಗಳೂ ಕೂಡ ಹಿಂಸೆಯನ್ನೆಸಗುತ್ತಾರೆ. ಆದರೆ ಅವರ ಪ್ರಯತ್ನದಿಂದ ಅವು ಕಡಿಮೆಯಾಗುತ್ತವೆ.
03199030a ಆಲಕ್ಷ್ಯಾಶ್ಚೈವ ಪುರುಷಾಃ ಕುಲೇ ಜಾತಾ ಮಹಾಗುಣಾಃ।
03199030c ಮಹಾಘೋರಾಣಿ ಕರ್ಮಾಣಿ ಕೃತ್ವಾ ಲಜ್ಜಂತಿ ವೈ ನ ಚ।।
ನಾವು ನೋಡುವಂತೆಯೇ ಮಹಾಗುಣಗಳ, ಉತ್ತಮ ಕುಲದಲ್ಲಿ ಜನಿಸಿದವರು ಮಹಾ ಘೋರ ಕರ್ಮಗಳನ್ನು ಮಾಡಿಯೂ ಅದರಿಂದ ನಾಚಿಕೆಪಟ್ಟುಕೊಂಡಿಲ್ಲ.
03199031a ಸುಹೃದಃ ಸುಹೃದೋಽನ್ಯಾಂಶ್ಚ ದುರ್ಹೃದಶ್ಚಾಪಿ ದುರ್ಹೃದಃ।
03199031c ಸಮ್ಯಕ್ಪ್ರವೃತ್ತಾನ್ಪುರುಷಾನ್ನ ಸಮ್ಯಗನುಪಶ್ಯತಃ।।
ಸ್ನೇಹಿತರು ಸ್ನೇಹಿತರನ್ನು, ವೈರಿಗಳು ವೈರಿಗಳನ್ನು, ಒಳ್ಳೆಯ ನಡತೆಯುಳ್ಳವರು ಒಳ್ಳೆಯ ನಡತೆಯಲ್ಲಿರುವವರನ್ನು ಸ್ವಾಗತಿಸುವುದಿಲ್ಲ.
03199032a ಸಮೃದ್ಧೈಶ್ಚ ನ ನಂದಂತಿ ಬಾಂಧವಾ ಬಾಂಧವೈರಪಿ।
03199032c ಗುರೂಂಶ್ಚೈವ ವಿನಿಂದಂತಿ ಮೂಢಾಃ ಪಂಡಿತಮಾನಿನಃ।।
ಬಾಂಧವರು ಶ್ರೀಮಂತ ಬಾಂಧವರನ್ನು ನೋಡಿ ಸಂತೋಷ ಪಡುವುದಿಲ್ಲ. ಪಂಡಿತರೆಂದು ತಿಳಿದುಕೊಂಡ ಮೂಢರು ಗುರುಗಳನ್ನೂ ನಿಂದಿಸುತ್ತಾರೆ.
03199033a ಬಹು ಲೋಕೇ ವಿಪರ್ಯಸ್ತಂ ದೃಶ್ಯತೇ ದ್ವಿಜಸತ್ತಮ।
03199033c ಧರ್ಮಯುಕ್ತಮಧರ್ಮಂ ಚ ತತ್ರ ಕಿಂ ಪ್ರತಿಭಾತಿ ತೇ।।
ಲೋಕದಲ್ಲಿ ಧರ್ಮ ಮತ್ತು ಅಧರ್ಮಯುಕ್ತವಾದ ಬಹಳಷ್ಟು ವಿಪರ್ಯಾಸಗಳು ಕಾಣುತ್ತವೆ. ಇದರ ಕುರಿತು ನಿನಗೇನನ್ನಿಸುತ್ತದೆ?
03199034a ವಕ್ತುಂ ಬಹುವಿಧಂ ಶಕ್ಯಂ ಧರ್ಮಾಧರ್ಮೇಷು ಕರ್ಮಸು।
03199034c ಸ್ವಕರ್ಮನಿರತೋ ಯೋ ಹಿ ಸ ಯಶಃ ಪ್ರಾಪ್ನುಯಾನ್ಮಹತ್।।
ಧರ್ಮ ಮತ್ತು ಅಧರ್ಮ ಕರ್ಮಗಳ ಕುರಿತು ಬಹಳಷ್ಟನ್ನು ಹೇಳಬಹುದು. ಆದರೆ ಸ್ವಕರ್ಮದಲ್ಲಿ ನಿರತನಾದವನು ಮಹಾ ಯಶಸ್ಸನ್ನು ಪಡೆಯುತ್ತಾನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಪತಿವ್ರತೋಪಾಖ್ಯಾನೇ ಬ್ರಾಹ್ಮಣವ್ಯಾಧಸಂವಾದೇ ಏಕೋನದ್ವಿಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ಬ್ರಾಹ್ಮಣವ್ಯಾಧಸಂವಾದಲ್ಲಿ ನೂರಾತೊಂಭತ್ತೊಂಭತ್ತನೆಯ ಅಧ್ಯಾಯವು.
-
ಸೌದಾಸನು ನರಮಾಂಸ ಭಕ್ಷಕ ನಾದ ಕಥೆಯು ಆದಿಪರ್ವದ ಅಧ್ಯಾಯ 167ರಲ್ಲಿ ಬಂದಿದೆ. ↩︎