ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 198
ಸಾರ
ಗೃಹಿಣಿಯು ಹೇಳಿದ್ದರಲ್ಲಿ ಶ್ರದ್ಧೆಯಿಟ್ಟು ಕೌಶಿಕನು ಮಿಥಿಲೆಗೆ ಹೋಗಿ ವ್ಯಾಧನ ಅಂಗಡಿಯ ಮುಂದೆ ನಿಂತುಕೊಳ್ಳುವುದು (1-13). ಪತಿವ್ರತೆಯು ನಿನ್ನನ್ನು ಕಳುಹಿಸಿದ್ದಾಳೆಂದೂ ಬಂದಿರುವ ಕಾರಣವನ್ನೂ ತಿಳಿದಿದ್ದೇನೆ ಎಂದು ಹೇಳಿ ವ್ಯಾಧನು ಕೌಶಿಕನನ್ನು ತನ್ನ ಮನೆಗೆ ಕರೆದೊಯ್ಯುವುದು (14-17). ಈ ರೀತಿಯ ಘೋರಕೃತ್ಯವನ್ನು ಮಾಡುತ್ತಿರುವ ನಿನ್ನ ಕುರಿತು ಅನುತಾಪವುಂಟಾಗುತ್ತಿದೆ ಎಂದು ಕೌಶಿಕನು ಹೇಳಲು ವ್ಯಾಧನು ಧಾತೃವು ವಿಹಿಸಿದ, ಪಿತೃಗಳು ಮಾಡಿಕೊಂಡು ಬಂದ ಕುಲವೃತ್ತಿಯನ್ನು ಮಾಡುತ್ತಿರುವುದಾಗಿ ಹೇಳುವುದು (18-20). ವೃತ್ತಿಯ ಜೊತೆಗೆ ತಾನು ಪಾಲಿಸುವ ಇತರ ಧರ್ಮಗಳ ಕುರಿತು ವ್ಯಾಧನು ಹೇಳಿದುದು (21-32). ಯಾವುದೇ ಪಾಪಗಳಿಂದ ಬಿಡುಗಡೆ ಹೊಂದಬಹುದಾದ ಶೀಲವೃತ್ತಿಗಳ ಕುರಿತು ವ್ಯಾಧನು ಹೇಳಿದುದು (33-55). ಶಿಷ್ಟಾಚಾರವೇನೆಂದು ಕೇಳಿದ ಕೌಶಿಕನಿಗೆ ವ್ಯಾಧನು ಶಿಷ್ಟಾಚಾರಗಳನ್ನೂ, ಶಿಷ್ಟಾಚಾರಿಗಳ ಲಕ್ಷಣಗಳನ್ನೂ ವಿವರಿಸಿದುದು (56-94).
03198001 ಮಾರ್ಕಂಡೇಯ ಉವಾಚ।
03198001a ಚಿಂತಯಿತ್ವಾ ತದಾಶ್ಚರ್ಯಂ ಸ್ತ್ರಿಯಾ ಪ್ರೋಕ್ತಮಶೇಷತಃ।
03198001c ವಿನಿಂದನ್ಸ ದ್ವಿಜೋಽತ್ಮಾನಮಾಗಸ್ಕೃತ ಇವಾಬಭೌ।।
ಮಾರ್ಕಂಡೇಯನು ಹೇಳಿದನು: “ಸ್ತ್ರೀಯು ಹೇಳಿದ ಆಶ್ಚರ್ಯಕರ ವಿಷಯದ ಕುರಿತು ಸಂಪೂರ್ಣವಾಗಿ ಆಲೋಚಿಸಿ ದ್ವಿಜನು ತನ್ನನ್ನು ತಾನೇ ನಿಂದಿಸಿಕೊಂಡು ತಪ್ಪಿತಸ್ಥನಂತಾದನು.
03198002a ಚಿಂತಯಾನಃ ಸ ಧರ್ಮಸ್ಯ ಸೂಕ್ಷ್ಮಾಂ ಗತಿಮಥಾಬ್ರವೀತ್।
03198002c ಶ್ರದ್ದಧಾನೇನ ಭಾವ್ಯಂ ವೈ ಗಚ್ಚಾಮಿ ಮಿಥಿಲಾಮಹಂ।।
ಧರ್ಮದ ಸೂಕ್ಷ್ಮಗತಿಯ ಕುರಿತು ಚಿಂತಿಸುತ್ತಾ ಅವನು ತನ್ನಲ್ಲಿಯೇ ಹೇಳಿಕೊಂಡನು: “ಇದರಲ್ಲಿ ಶ್ರದ್ಧೆಯನ್ನಿಡಬೇಕು. ನಾನು ಮಿಥಿಲಿಗೆ ಹೋಗುತ್ತೇನೆ.
03198003a ಕೃತಾತ್ಮಾ ಧರ್ಮವಿತ್ತಸ್ಯಾಂ ವ್ಯಾಧೋ ನಿವಸತೇ ಕಿಲ।
03198003c ತಂ ಗಚ್ಚಾಮ್ಯಹಮದ್ಯೈವ ಧರ್ಮಂ ಪ್ರಷ್ಟುಂ ತಪೋಧನಂ।।
ಅಲ್ಲಿ ಕೃತಾತ್ಮ ಧರ್ಮಾತ್ಮ ವ್ಯಾಧನು ವಾಸಿಸುತ್ತಿದ್ದಾನೆಂದು ಅವಳು ಹೇಳಿಲ್ಲವೇ? ಇಂದೇ ನಾನು ಅಲ್ಲಿಗೆ ಹೋಗಿ ಆ ತಪೋಧನನಲ್ಲಿ ಧರ್ಮದ ಕುರಿತು ಕೇಳುತ್ತೇನೆ.”
03198004a ಇತಿ ಸಂಚಿಂತ್ಯ ಮನಸಾ ಶ್ರದ್ದಧಾನಃ ಸ್ತ್ರಿಯಾ ವಚಃ।
03198004c ಬಲಾಕಾಪ್ರತ್ಯಯೇನಾಸೌ ಧರ್ಮ್ಯೈಶ್ಚ ವಚನೈಃ ಶುಭೈಃ।।
03198004e ಸಂಪ್ರತಸ್ಥೇ ಸ ಮಿಥಿಲಾಂ ಕೌತೂಹಲಸಮನ್ವಿತಃ।।
ಹೀಗೆ ಅವಳು ಬಲಾಕದ ಕುರಿತು ಹೇಳಿದ್ದುದನ್ನೂ ಮತ್ತು ಧರ್ಮಕರ ಶುಭವಚನಗಳನ್ನೂ ಮನಸ್ಸಿನಲ್ಲಿ ಆಲೋಚಿಸಿ ಅವನು ಸ್ತ್ರೀಯ ಮಾತುಗಳಲ್ಲಿ ಶ್ರದ್ಧೆಯನ್ನಿರಿಸಿದನು. ಮತ್ತು ಕುತೂಹಲದಿಂದ ಮಿಥಿಲೆಗೆ ಪ್ರಯಾಣ ಬೆಳೆಸಿದನು.
03198005a ಅತಿಕ್ರಾಮನ್ನರಣ್ಯಾನಿ ಗ್ರಾಮಾಂಶ್ಚ ನಗರಾಣಿ ಚ।
03198005c ತತೋ ಜಗಾಮ ಮಿಥಿಲಾಂ ಜನಕೇನ ಸುರಕ್ಷಿತಾಂ।।
ಅರಣ್ಯಗಳನ್ನೂ, ಗ್ರಾಮಗಳನ್ನೂ, ನಗರಗಳನ್ನೂ ದಾಟಿ ಜನಕನಿಂದ ಸುರಕ್ಷಿತವಾಗಿದ್ದ ಮಿಥಿಲೆಗೆ ಹೋದನು.
03198006a ಧರ್ಮಸೇತುಸಮಾಕೀರ್ಣಾಂ ಯಜ್ಞೋತ್ಸವವತೀಂ ಶುಭಾಂ।
03198006c ಗೋಪುರಾಟ್ಟಾಲಕವತೀಂ ಗೃಹಪ್ರಾಕಾರಶೋಭಿತಾಂ।।
ಧರ್ಮಕ್ಕನುಗುಣವಾಗಿ ವಿಭಜಿಸಲ್ಪಟ್ಟ ಆ ನಗರಿಯು ಯಜ್ಞ-ಉತ್ಸವಗಳಿಂದ ತುಂಬಿ ಪುಣ್ಯಕರವಾಗಿತ್ತು. ದ್ವಾರ-ಗೋಪುರಗಳಿಂದ ರಕ್ಷಿತವಾಗಿತ್ತು ಮತ್ತು ಗೃಹ-ಪ್ರಾಕಾರಗಳಿಂದ ಶೋಭಿಸುತ್ತಿತ್ತು.
03198007a ಪ್ರವಿಶ್ಯ ಸ ಪುರೀಂ ರಮ್ಯಾಂ ವಿಮಾನೈರ್ಬಹುಭಿರ್ವೃತಾಂ।
03198007c ಪಣ್ಯೈಶ್ಚ ಬಹುಭಿರ್ಯುಕ್ತಾಂ ಸುವಿಭಕ್ತಮಹಾಪಥಾಂ।।
03198008a ಅಶ್ವೈ ರಥೈಸ್ತಥಾ ನಾಗೈರ್ಯಾನೈಶ್ಚ ಬಹುಭಿರ್ವೃತಾಂ।
03198008c ಹೃಷ್ಟಪುಷ್ಟಜನಾಕೀರ್ಣಾಂ ನಿತ್ಯೋತ್ಸವಸಮಾಕುಲಾಂ।।
ಬಹಳಷ್ಟು ಐಶ್ವರ್ಯಗಳಿಂದ ತುಂಬಿದ್ದ, ಬಹು ವಿಮಾನಗಳಿಂದ ಆವೃತವಾಗಿದ್ದ, ಚೆನ್ನಾಗಿ ರಚಿಸಲ್ಪಟ್ಟ ಹೆದ್ದಾರಿಗಳನ್ನುಳ್ಳ, ಬಹುಸಂಖ್ಯೆಯ ಕುದುರೆ, ರಥ, ಮತ್ತು ಆನೆಗಳೇ ಮೊದಲಾದ ವಾಹನಗಳಿಂದ ತುಂಬಿದ್ದ, ಸಂತೋಷದಿಂದ, ಆರೋಗ್ಯದಿಂದ ಕೂಡಿರುವ ಜನಸಮೂಹಗಳನ್ನು ಹೊಂದಿದ್ದ, ನಿತ್ಯವೂ ಉತ್ಸವವೋ ಎಂಬಂತಿದ್ದ ಆ ರಮ್ಯ ಪುರಿಯನ್ನು ಪ್ರವೇಶಿಸಿದನು.
03198009a ಸೋಽಪಶ್ಯದ್ಬಹುವೃತ್ತಾಂತಾಂ ಬ್ರಾಹ್ಮಣಃ ಸಮತಿಕ್ರಮನ್।
03198009c ಧರ್ಮವ್ಯಾಧಮಪೃಚ್ಚಚ್ಚ ಸ ಚಾಸ್ಯ ಕಥಿತೋ ದ್ವಿಜೈಃ।।
ಸಂಚರಿಸುತ್ತಾ ಆ ಬ್ರಾಹ್ಮಣನು ಅಲ್ಲಿ ನಡೆಯುತ್ತಿದ್ದ ಬಹಳಷ್ಟನ್ನು ನೋಡಿದನು; ಧರ್ಮವ್ಯಾಧನ ಕುರಿತು ಕೇಳಲು, ದ್ವಿಜರು ಅವನಿಗೆ ಹೇಳಿದರು.
03198010a ಅಪಶ್ಯತ್ತತ್ರ ಗತ್ವಾ ತಂ ಸೂನಾಮಧ್ಯೇ ವ್ಯವಸ್ಥಿತಂ।
03198010c ಮಾರ್ಗಮಾಹಿಷಮಾಂಸಾನಿ ವಿಕ್ರೀಣಂತಂ ತಪಸ್ವಿನಂ।
03198010e ಆಕುಲತ್ವಾತ್ತು ಕ್ರೇತೄಣಾಮೇಕಾಂತೇ ಸಂಸ್ಥಿತೋ ದ್ವಿಜಃ।।
ಅಲ್ಲಿ, ಅಂಗಡಿಗಳ ಮಧ್ಯೆ ನೆಲಸಿದ್ದ, ಮಾರ್ಗ-ಮಾಹಿಷ ಮಾಂಸಗಳನ್ನು ಮಾರುತ್ತಿದ್ದ ತಪಸ್ವಿಯನ್ನು ಕಂಡನು. ಗ್ರಾಹಕರ ಗುಂಪನ್ನು ನೋಡಿ ದ್ವಿಜನು ಒಬ್ಬನೇ ಒಂದು ಸ್ಥಳದಲ್ಲಿ ನಿಂತುಕೊಂಡನು.
03198011a ಸ ತು ಜ್ಞಾತ್ವಾ ದ್ವಿಜಂ ಪ್ರಾಪ್ತಂ ಸಹಸಾ ಸಂಭ್ರಮೋತ್ಥಿತಃ।
03198011c ಆಜಗಾಮ ಯತೋ ವಿಪ್ರಃ ಸ್ಥಿತ ಏಕಾಂತ ಆಸನೇ।।
ದ್ವಿಜನು ಬಂದಿದ್ದಾನೆಂದು ತಿಳಿದು ಅವನು ತಕ್ಷಣವೇ ಎದ್ದು ವಿಪ್ರನು ಏಕಾಂತನಾಗಿ ಕುಳಿತಿದ್ದಲ್ಲಿಗೆ ಬಂದನು.
03198012 ವ್ಯಾಧ ಉವಾಚ।
03198012a ಅಭಿವಾದಯೇ ತ್ವಾ ಭಗವನ್ಸ್ವಾಗತಂ ತೇ ದ್ವಿಜೋತ್ತಮ।
03198012c ಅಹಂ ವ್ಯಾಧಸ್ತು ಭದ್ರಂ ತೇ ಕಿಂ ಕರೋಮಿ ಪ್ರಶಾಧಿ ಮಾಂ।।
ವ್ಯಾಧನು ಹೇಳಿದನು: “ಭಗವನ್! ನಿನಗೆ ನಮಸ್ಕಾರಗಳು. ದ್ವಿಜೋತ್ತಮ! ನಿನಗೆ ಸ್ವಾಗತ! ನಾನು ವ್ಯಾಧ! ನಿನಗೆ ಮಂಗಳವಾಗಲಿ! ನಾನೇನು ಮಾಡಲಿ? ಚಿತ್ತೈಸು.
03198013a ಏಕಪತ್ನ್ಯಾ ಯದುಕ್ತೋಽಸಿ ಗಚ್ಚ ತ್ವಂ ಮಿಥಿಲಾಮಿತಿ।
03198013c ಜಾನಾಮ್ಯೇತದಹಂ ಸರ್ವಂ ಯದರ್ಥಂ ತ್ವಮಿಹಾಗತಃ।।
ಓರ್ವ ಪತಿವ್ರತೆಯು ನಿನಗೆ ಮಿಥಿಲೆಗೆ ಹೋಗೆಂದು ಹೇಳಿದ್ದಾಳೆ. ನೀನು ಇಲ್ಲಿಗೆ ಏಕೆ ಬಂದಿರುವೆಯೆಂಬ ಕಾರಣಗಳೆಲ್ಲವೂ ನನಗೆ ತಿಳಿದಿದೆ.””
03198014 ಮಾರ್ಕಂಡೇಯ ಉವಾಚ।
03198014a ಶ್ರುತ್ವಾ ತು ತಸ್ಯ ತದ್ವಾಕ್ಯಂ ಸ ವಿಪ್ರೋ ಭೃಶಹರ್ಷಿತಃ।
03198014c ದ್ವಿತೀಯಮಿದಮಾಶ್ಚರ್ಯಮಿತ್ಯಚಿಂತಯತ ದ್ವಿಜಃ।।
ಮಾರ್ಕಂಡೇಯನು ಹೇಳಿದನು: “ಅವನ ಆ ಮಾತುಗಳನ್ನು ಕೇಳಿದ ವಿಪ್ರನು ತುಂಬಾ ಹರ್ಷಿತನಾದನು. ಇದು ಎರಡನೆಯ ಆಶ್ಚರ್ಯವೆಂದು ದ್ವಿಜನು ಆಲೋಚಿಸಿದನು.
03198015a ಅದೇಶಸ್ಥಂ ಹಿ ತೇ ಸ್ಥಾನಮಿತಿ ವ್ಯಾಧೋಽಬ್ರವೀದ್ದ್ವಿಜಂ।
03198015c ಗೃಹಂ ಗಚ್ಚಾವ ಭಗವನ್ಯದಿ ರೋಚಯಸೇಽನಘ।।
“ನೀನು ನಿಲ್ಲಬಾರದ ಸ್ಥಳದಲ್ಲಿ ನಿಂತಿದ್ದೀಯೆ! ಅನಘ! ನಿನಗಿಷ್ಟವಾದರೆ ಭಗವನ್! ಮನೆಗೆ ಹೋಗೋಣ!” ಎಂದು ವ್ಯಾಧನು ದ್ವಿಜನಿಗೆ ಹೇಳಿದನು.
03198016a ಬಾಢಮಿತ್ಯೇವ ಸಂಹೃಷ್ಟೋ ವಿಪ್ರೋ ವಚನಮಬ್ರವೀತ್।
03198016c ಅಗ್ರತಸ್ತು ದ್ವಿಜಂ ಕೃತ್ವಾ ಸ ಜಗಾಮ ಗೃಹಾನ್ಪ್ರತಿ।।
ಸಂತೋಷದಿಂದ ವಿಪ್ರನು “ಧಾರಾಳವಾಗಿ!” ಎಂದು ಉತ್ತರಿಸಿದನು. ದ್ವಿಜನನ್ನು ಮುಂದಿರಿಸಿಕೊಂಡು ಅವನ ಮನೆಯ ಕಡೆ ನಡೆದನು.
03198017a ಪ್ರವಿಶ್ಯ ಚ ಗೃಹಂ ರಮ್ಯಮಾಸನೇನಾಭಿಪೂಜಿತಃ।
03198017c ಪಾದ್ಯಮಾಚಮನೀಯಂ ಚ ಪ್ರತಿಗೃಹ್ಯ ದ್ವಿಜೋತ್ತಮಃ।।
ಆ ಸುಂದರ ಗೃಹವನ್ನು ಪ್ರವೇಶಿಸಿ. ಆಸನ ಸತ್ಕಾರಗಳನ್ನೂ, ಪಾದ್ಯ ಆಚಮನೀಯಗಳನ್ನು ದ್ವಿಜೋತ್ತಮನು ಸ್ವೀಕರಿಸಿದನು.
03198018a ತತಃ ಸುಖೋಪವಿಷ್ಟಸ್ತಂ ವ್ಯಾಧಂ ವಚನಮಬ್ರವೀತ್।
03198018c ಕರ್ಮೈತದ್ವೈ ನ ಸದೃಶಂ ಭವತಃ ಪ್ರತಿಭಾತಿ ಮೇ।
03198018e ಅನುತಪ್ಯೇ ಭೃಶಂ ತಾತ ತವ ಘೋರೇಣ ಕರ್ಮಣಾ।।
ಸುಖವಾಗಿ ಕುಳಿತುಕೊಂಡನಂತರ ವ್ಯಾಧನಿಗೆ ಹೇಳಿದನು: “ನೀನು ಮಾಡುವ ಕೆಲಸವು ನಿನಗೆ ಸರಿಯಾದುದಲ್ಲವೆಂದು ನನಗನ್ನಿಸುತ್ತದೆ. ಮಗೂ! ನೀನು ಈ ರೀತಿಯ ಘೋರ ಕರ್ಮಗಳನ್ನು ಮಾಡುತ್ತಿರುವೆಯೆಂದು ನನಗೆ ಅನುತಾಪವುಂಟಾಗುತ್ತಿದೆ.”
03198019 ವ್ಯಾಧ ಉವಾಚ।
03198019a ಕುಲೋಚಿತಮಿದಂ ಕರ್ಮ ಪಿತೃಪೈತಾಮಹಂ ಮಮ।
03198019c ವರ್ತಮಾನಸ್ಯ ಮೇ ಧರ್ಮೇ ಸ್ವೇ ಮನ್ಯುಂ ಮಾ ಕೃಥಾ ದ್ವಿಜ।।
ವ್ಯಾಧನು ಹೇಳಿದನು: “ಇದು ನನ್ನ ಪಿತೃಪಿತಾಮಹರಿಂದ ಬಂದ ಕುಲೋಚಿತವಾದ ಕರ್ಮ. ದ್ವಿಜ! ನಾನು ನನ್ನ ಕೆಲಸವನ್ನು ಮಾಡುತ್ತಿದ್ದೇನೆಂದು ಸಿಟ್ಟಾಗದಿರು.
03198020a ಧಾತ್ರಾ ತು ವಿಹಿತಂ ಪೂರ್ವಂ ಕರ್ಮ ಸ್ವಂ ಪಾಲಯಾಮ್ಯಹಂ।
03198020c ಪ್ರಯತ್ನಾಚ್ಚ ಗುರೂ ವೃದ್ಧೌ ಶುಶ್ರೂಷೇಽಹಂ ದ್ವಿಜೋತ್ತಮ।।
ಧಾತ್ರುವು ಮೊದಲೇ ವಿಹಿತಗೊಳಿಸಿದ ಕೆಲಸವನ್ನು ನಾನು ಮಾಡುತ್ತಿದ್ದೇನೆ. ದ್ವಿಜೋತ್ತಮ! ಹಿರಿಯರ ಮತ್ತು ವೃದ್ಧರ ಸೇವೆ ಮಾಡುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ.
03198021a ಸತ್ಯಂ ವದೇ ನಾಭ್ಯಸೂಯೇ ಯಥಾಶಕ್ತಿ ದದಾಮಿ ಚ।
03198021c ದೇವತಾತಿಥಿಭೃತ್ಯಾನಾಮವಶಿಷ್ಟೇನ ವರ್ತಯೇ।।
ಸತ್ಯವನ್ನು ಮಾತನಾಡುತ್ತೇನೆ. ಅಸೂಯೆ ಪಡುವುದಿಲ್ಲ. ಮತ್ತು ಯಥಾಶಕ್ತಿ ದಾನಮಾಡುತ್ತೇನೆ. ದೇವತೆಗಳು, ಅತಿಥಿಗಳು ಮತ್ತು ನನ್ನನ್ನೇ ಅವಲಂಬಿಸಿರುವವರು ಬಿಟ್ಟಿದ್ದುದನ್ನು ತಿಂದು ಬದುಕುತ್ತೇನೆ.
03198022a ನ ಕುತ್ಸಯಾಮ್ಯಹಂ ಕಿಂ ಚಿನ್ನ ಗರ್ಹೇ ಬಲವತ್ತರಂ।
03198022c ಕೃತಮನ್ವೇತಿ ಕರ್ತಾರಂ ಪುರಾ ಕರ್ಮ ದ್ವಿಜೋತ್ತಮ।।
ದ್ವಿಜೋತ್ತಮ! ಏನನ್ನೂ ಅಲ್ಲಗಳೆಯುವುದಿಲ್ಲ. ನನಗಿಂತ ಬಲಶಾಲಿಗಳನ್ನು ತಿರಸ್ಕರಿಸುವುದಿಲ್ಲ. ಏಕೆಂದರೆ ಹಿಂದೆ ಮಾಡಿದ ಕರ್ಮಗಳು ಕರ್ತಾರನನ್ನು ಅನುಸರಿಸಿ ಬರುತ್ತವೆ.
03198023a ಕೃಷಿಗೋರಕ್ಷ್ಯವಾಣಿಜ್ಯಮಿಹ ಲೋಕಸ್ಯ ಜೀವನಂ।
03198023c ದಂಡನೀತಿಸ್ತ್ರಯೀ ವಿದ್ಯಾ ತೇನ ಲೋಕಾ ಭವಂತ್ಯುತ।।
ಕೃಷಿ, ಗೋರಕ್ಷೆ, ವಾಣಿಜ್ಯ, ರಾಜಕೀಯಗಳು ಈ ಲೋಕದ ಜೀವನ. ಮೂರು ವೇದಗಳಿಂದ ಲೋಕಗಳು ನಡೆಯುತ್ತವೆ.
03198024a ಕರ್ಮ ಶೂದ್ರೇ ಕೃಷಿರ್ವೈಶ್ಯೇ ಸಂಗ್ರಾಮಃ ಕ್ಷತ್ರಿಯೇ ಸ್ಮೃತಃ।
03198024c ಬ್ರಹ್ಮಚರ್ಯಂ ತಪೋ ಮಂತ್ರಾಃ ಸತ್ಯಂ ಚ ಬ್ರಾಹ್ಮಣೇ ಸದಾ।।
ಶೂದ್ರರಿಗೆ ಕರ್ಮ, ವೈಶ್ಯರಿಗೆ ಕೃಷಿ ಮತ್ತು ಕ್ಷತ್ರಿಯರಿಗೆ ಸಂಗ್ರಾಮವೆಂದು ಕೇಳಿದ್ದೇವೆ. ಬ್ರಾಹ್ಮಣರಿಗೆ ಸದಾ ಬ್ರಹ್ಮಚರ್ಯೆ, ತಪಸ್ಸು, ಮಂತ್ರ, ಮತ್ತು ಸತ್ಯ.
03198025a ರಾಜಾ ಪ್ರಶಾಸ್ತಿ ಧರ್ಮೇಣ ಸ್ವಕರ್ಮನಿರತಾಃ ಪ್ರಜಾಃ।
03198025c ವಿಕರ್ಮಾಣಶ್ಚ ಯೇ ಕೇ ಚಿತ್ತಾನ್ಯುನಕ್ತಿ ಸ್ವಕರ್ಮಸು।।
ಸ್ವಕರ್ಮದಲ್ಲಿ ನಿರತರಾದ ಪ್ರಜೆಗಳನ್ನು ರಾಜನು ಧರ್ಮದಿಂದ ಆಳುತ್ತಾನೆ. ಯಾರಾದರೂ ವಿಕರ್ಮಗಳಲ್ಲಿ ನಿರತರಾದರೆ ಅವರನ್ನು ಸ್ವಕರ್ಮದಲ್ಲಿ ತೊಡಗಿಸುತ್ತಾನೆ.
03198026a ಭೇತವ್ಯಂ ಹಿ ಸದಾ ರಾಜ್ಞಾಂ ಪ್ರಜಾನಾಮಧಿಪಾ ಹಿ ತೇ।
03198026c ಮಾರಯಂತಿ ವಿಕರ್ಮಸ್ಥಂ ಲುಬ್ಧಾ ಮೃಗಮಿವೇಷುಭಿಃ।।
ಪ್ರಜೆಗಳ ಅಧಿಪತಿಯಾದ ರಾಜನನ್ನು ಸದಾ ಭಯಪಡಬೇಕು. ವಿಕರ್ಮದಲ್ಲಿ ನಿರತರಾದವರನ್ನು ಅವನು ಮೃಗಗಳನ್ನು ಬಾಣಗಳಿಂದ ಹೊಡೆಯುವಂತೆ ವಧಿಸುತ್ತಾನೆ.
03198027a ಜನಕಸ್ಯೇಹ ವಿಪ್ರರ್ಷೇ ವಿಕರ್ಮಸ್ಥೋ ನ ವಿದ್ಯತೇ।
03198027c ಸ್ವಕರ್ಮನಿರತಾ ವರ್ಣಾಶ್ಚತ್ವಾರೋಽಪಿ ದ್ವಿಜೋತ್ತಮ।।
ದ್ವಿಜೋತ್ತಮ! ವಿಪ್ರರ್ಷೇ! ಜನಕನಲ್ಲಿ ಯಾರೂ ವಿಕರ್ಮಿಗಳಿರುವುದು ತಿಳಿದಿಲ್ಲ. ನಾಲ್ಕೂ ವರ್ಣದವರೂ ಅವರವರ ಕರ್ಮಗಳಲ್ಲಿ ನಿರತರಾಗಿದ್ದಾರೆ.
03198028a ಸ ಏಷ ಜನಕೋ ರಾಜಾ ದುರ್ವೃತ್ತಮಪಿ ಚೇತ್ಸುತಂ।
03198028c ದಂಡ್ಯಂ ದಂಡೇ ನಿಕ್ಷಿಪತಿ ತಥಾ ನ ಗ್ಲಾತಿ ಧಾರ್ಮಿಕಂ।।
ದುರ್ವೃತ್ತಿಯು ತನ್ನ ಮಗನೇ ಆಗಿದ್ದರೂ ರಾಜ ಜನಕನು ಅವನನ್ನು ದಂಡದಿಂದ ದಂಡಿಸಿ ಬೀಳಿಸುತ್ತಾನೆ. ಆದರೆ ಧಾರ್ಮಿಕನನ್ನು ಬಾಧಿಸುವುದಿಲ್ಲ.
03198029a ಸುಯುಕ್ತಚಾರೋ ನೃಪತಿಃ ಸರ್ವಂ ಧರ್ಮೇಣ ಪಶ್ಯತಿ।
03198029c ಶ್ರೀಶ್ಚ ರಾಜ್ಯಂ ಚ ದಂಡಶ್ಚ ಕ್ಷತ್ರಿಯಾಣಾಂ ದ್ವಿಜೋತ್ತಮ।।
ದ್ವಿಜೋತ್ತಮ! ಸುಯುಕ್ತಚಾರರಿಂದ ಕೂಡಿದ ನೃಪತಿಯು ಸರ್ವರನ್ನೂ ಧರ್ಮದಿಂದ ನೋಡುತ್ತಾನೆ. ಸಂಪತ್ತು, ರಾಜ್ಯ ಮತ್ತು ಸೇನೆಯು ಕ್ಷತ್ರಿಯರದ್ದು.
03198030a ರಾಜಾನೋ ಹಿ ಸ್ವಧರ್ಮೇಣ ಶ್ರಿಯಮಿಚ್ಚಂತಿ ಭೂಯಸೀಂ।
03198030c ಸರ್ವೇಷಾಮೇವ ವರ್ಣಾನಾಂ ತ್ರಾತಾ ರಾಜಾ ಭವತ್ಯುತ।।
ರಾಜನೂ ಕೂಡ ಸ್ವಧರ್ಮದಿಂದಲೇ ಹೆಚ್ಚಿನ ಸಂಪತ್ತನ್ನು ಬಯಸುತ್ತಾನೆ. ರಾಜನು ಎಲ್ಲ ವರ್ಣದವರ ತ್ರಾತನಾಗಿದ್ದಾನೆ.
03198031a ಪರೇಣ ಹಿ ಹತಾನ್ಬ್ರಹ್ಮನ್ವರಾಹಮಹಿಷಾನಹಂ।
03198031c ನ ಸ್ವಯಂ ಹನ್ಮಿ ವಿಪ್ರರ್ಷೇ ವಿಕ್ರೀಣಾಮಿ ಸದಾ ತ್ವಹಂ।।
ಬ್ರಹ್ಮನ್! ವರಾಹ-ಮಹಿಷಗಳನ್ನು ಇತರರು ಕೊಲ್ಲುತ್ತಾರೆ. ಸ್ವಯಂ ನಾನು ಕೊಲ್ಲುವುದಿಲ್ಲ. ಸದಾ ನಾನು ಅವುಗಳನ್ನು ಮಾರುತ್ತೇನೆ ಮಾತ್ರ.
03198032a ನ ಭಕ್ಷಯಾಮಿ ಮಾಂಸಾನಿ ಋತುಗಾಮೀ ತಥಾ ಹ್ಯಹಂ।
03198032c ಸದೋಪವಾಸೀ ಚ ತಥಾ ನಕ್ತಭೋಜೀ ತಥಾ ದ್ವಿಜ।।
ದ್ವಿಜ! ಮಾಂಸಗಳನ್ನು ನಾನು ತಿನ್ನುವುದಿಲ್ಲ. ಯಾವಾಗ ಮಾಡಬೇಕೋ ಆವಾಗ ಮಾತ್ರ ನಾನು ನನ್ನ ಪತ್ನಿಯನ್ನು ಕೂಡುತ್ತೇನೆ. ಸದಾ ಉಪವಾಸದಲ್ಲಿದ್ದುಕೊಂಡು, ರಾತ್ರಿ ಮಾತ್ರ ಊಟ ಮಾಡುತ್ತೇನೆ.
03198033a ಅಶೀಲಶ್ಚಾಪಿ ಪುರುಷೋ ಭೂತ್ವಾ ಭವತಿ ಶೀಲವಾನ್।
03198033c ಪ್ರಾಣಿಹಿಂಸಾರತಶ್ಚಾಪಿ ಭವತೇ ಧಾರ್ಮಿಕಃ ಪುನಃ।।
ಅಶೀಲನಾಗಿದ್ದರೂ ಕೂಡ ಪುರುಷನು ಶೀಲವಂತನಾಗುತ್ತಾನೆ. ಪುನಃ ಧಾರ್ಮಿಕನೂ ಕೂಡ ಪ್ರಾಣಿಹಿಂಸೆಗಳಲ್ಲಿ ತೊಡಗುತ್ತಾನೆ.
03198034a ವ್ಯಭಿಚಾರಾನ್ನರೇಂದ್ರಾಣಾಂ ಧರ್ಮಃ ಸಂಕೀರ್ಯತೇ ಮಹಾನ್।
03198034c ಅಧರ್ಮೋ ವರ್ಧತೇ ಚಾಪಿ ಸಂಕೀರ್ಯಂತೇ ತಥಾ ಪ್ರಜಾಃ।।
ರಾಜರ ವ್ಯಬಿಚಾರದಿಂದ ಧರ್ಮವು ಮಹಾ ಗೊಂದಲಕ್ಕೊಳಗಾಗುತ್ತದೆ. ಅಧರ್ಮವು ಹೆಚ್ಚಾಗುತ್ತದೆ ಮತ್ತು ಪ್ರಜೆಗಳು ಗೊಂದಲಗಳಿಗೊಳಗಾಗುತ್ತಾರೆ.
03198035a ಉರುಂಡಾ ವಾಮನಾಃ ಕುಬ್ಜಾಃ ಸ್ಥೂಲಶೀರ್ಷಾಸ್ತಥೈವ ಚ।
03198035c ಕ್ಲೀಬಾಶ್ಚಾಂಧಾಶ್ಚ ಜಾಯಂತೇ ಬಧಿರಾ ಲಂಬಚೂಚುಕಾಃ।
03198035e ಪಾರ್ಥಿವಾನಾಮಧರ್ಮತ್ವಾತ್ಪ್ರಜಾನಾಮಭವಃ ಸದಾ।।
ಜನರು ಸಣ್ಣವರಾಗಿ, ಕುಳ್ಳರಾಗಿ, ಕುಬ್ಜರಾಗಿ, ದೊಡ್ಡ ತಲೆಯುಳ್ಳವರಾಗಿ, ನಪುಂಸಕರಾಗಿ, ಕುರುಡರಾಗಿ, ಕಿವುಡರಾಗಿ, ಬಗ್ಗಿದವರಾಗಿ ಹುಟ್ಟುತ್ತಾರೆ. ರಾಜರ ಅಧರ್ಮದಿಂದ ಪ್ರಜೆಗಳು ಕಡಿಮೆಯಾಗುತ್ತಾರೆ.
03198036a ಸ ಏಷ ರಾಜಾ ಜನಕಃ ಸರ್ವಂ ಧರ್ಮೇಣ ಪಶ್ಯತಿ।
03198036c ಅನುಗೃಹ್ಣನ್ಪ್ರಜಾಃ ಸರ್ವಾಃ ಸ್ವಧರ್ಮನಿರತಾಃ ಸದಾ।।
ನಮ್ಮ ಈ ರಾಜ ಜನಕನು ಎಲ್ಲವನ್ನೂ ಧರ್ಮದಿಂದ ನೋಡುತ್ತಾನೆ. ಸದಾ ಸ್ವಧರ್ಮನಿರತರಾದ ಪ್ರಜೆಗಳಿಗೆ ಅನುಗ್ರಹಿಸುತ್ತಾನೆ.
03198037a ಯೇ ಚೈವ ಮಾಂ ಪ್ರಶಂಸಂತಿ ಯೇ ಚ ನಿಂದಂತಿ ಮಾನವಾಃ।
03198037c ಸರ್ವಾನ್ಸುಪರಿಣೀತೇನ ಕರ್ಮಣಾ ತೋಷಯಾಮ್ಯಹಂ।।
ನನ್ನನ್ನು ಪ್ರಶಂಸಿಸುವವರಿರಲಿ ನಿಂದಿಸುವವರಿರಲಿ, ಎಲ್ಲ ಜನರಿಗೂ ನಾನು ನನ್ನ ಸುಪರಿಣಿತ ಕರ್ಮಗಳಿಂದ ತೃಪ್ತಗೊಳಿಸುತ್ತೇನೆ.
03198038a ಯೇ ಜೀವಂತಿ ಸ್ವಧರ್ಮೇಣ ಸಂಭುಂಜಂತೇ ಚ ಪಾರ್ಥಿವಾಃ।
03198038c ನ ಕಿಂ ಚಿದುಪಜೀವಂತಿ ದಕ್ಷಾ ಉತ್ಥಾನಶೀಲಿನಃ।।
ಸ್ವಧರ್ಮದಂತೆ ಯಾರು ಜೀವಿಸುತ್ತಾರೋ ಮತ್ತು ಭೋಗಿಸುತ್ತಾರೋ ಹಾಗೂ ಬೇರೆಯವರ ಅಥವಾ ಬೇರೊಂದನ್ನು ಆಧರಿಸಿ ಜೀವಿಸುವುದಿಲ್ಲವೋ ಅಂಥಹ ಪಾರ್ಥಿವರು ಉತ್ಥಾನಶೀಲರಾಗಿರುತ್ತಾರೆ.
03198039a ಶಕ್ತ್ಯಾನ್ನದಾನಂ ಸತತಂ ತಿತಿಕ್ಷಾ ಧರ್ಮನಿತ್ಯತಾ।
03198039c ಯಥಾರ್ಹಂ ಪ್ರತಿಪೂಜಾ ಚ ಸರ್ವಭೂತೇಷು ವೈ ದಯಾ।।
03198039e ತ್ಯಾಗಾನ್ನಾನ್ಯತ್ರ ಮರ್ತ್ಯಾನಾಂ ಗುಣಾಸ್ತಿಷ್ಠಂತಿ ಪೂರುಷೇ।।
ಶಕ್ತಿಯಿದ್ದಷ್ಟು ಅನ್ನದಾನ ಮಾಡುವುದು, ಸತತ ತಾಳ್ಮೆಯಲ್ಲಿರುವುದು, ನಿತ್ಯವೂ ಧರ್ಮದಲ್ಲಿರುವುದು, ಯಥಾರ್ಹವಾಗಿ ಪ್ರತಿ ಗೌರವಿಸುವುದು, ಮತ್ತು ಸರ್ವಭೂತಗಳಲ್ಲಿ ದಯೆ ಮೊದಲಾದ ಉತ್ತಮ ಮನುಷ್ಯ ಗುಣಗಳು ಪುರುಷನ ತ್ಯಾಗದಿಂದಲ್ಲದೇ ಬೇರೆಯದರಿಂದ ಹುಟ್ಟುವುದಲ್ಲ.
03198040a ಮೃಷಾವಾದಂ ಪರಿಹರೇತ್ಕುರ್ಯಾತ್ಪ್ರಿಯಮಯಾಚಿತಃ।
03198040c ನ ಚ ಕಾಮಾನ್ನ ಸಂರಂಭಾನ್ನ ದ್ವೇಷಾದ್ಧರ್ಮಮುತ್ಸೃಜೇತ್।।
ಸುಳ್ಳನ್ನು ದೂರವಿಡಬೇಕು. ಕೇಳದೆಯೇ ಪ್ರಿಯವಾದುದನ್ನು ಮಾಡಬೇಕು. ಮತ್ತು ಕಾಮಕ್ಕಾಗಲೀ, ದುಡುಕಿಯಾಗಲೀ ದ್ವೇಷಕ್ಕಾಗಲೀ ಧರ್ಮವನ್ನು ಬಿಡಬಾರದು.
03198041a ಪ್ರಿಯೇ ನಾತಿಭೃಶಂ ಹೃಷ್ಯೇದಪ್ರಿಯೇ ನ ಚ ಸಂಜ್ವರೇತ್।
03198041c ನ ಮುಹ್ಯೇದರ್ಥಕೃಚ್ಚ್ರೇಷು ನ ಚ ಧರ್ಮಂ ಪರಿತ್ಯಜೇತ್।।
ಬೇಕಾದದ್ದು ನಡೆದಾಗ ತುಂಬಾ ಸಂತೋಷಪಡಬಾರದು. ಬೇಡದಿದ್ದದು ನಡೆದಾಗ ಜ್ವರಪೀಡಿತರಾಗಬಾರದು. ಅಥವಾ ಕಷ್ಟಗಳು ಬಂದಾಗ ಧರ್ಮವನ್ನು ಬಿಟ್ಟುಬಿಡುವಷ್ಟು ಮೋಹಿತರಾಗಬಾರದು.
03198042a ಕರ್ಮ ಚೇತ್ಕಿಂ ಚಿದನ್ಯತ್ಸ್ಯಾದಿತರನ್ನ ಸಮಾಚರೇತ್।
03198042c ಯತ್ಕಲ್ಯಾಣಮಭಿಧ್ಯಾಯೇತ್ತತ್ರಾತ್ಮಾನಂ ನಿಯೋಜಯೇತ್।।
ಯಾವ ಕರ್ಮವಾದರೂ ಒಂದು ವೇಳೆ ತಪ್ಪಾಗಿದ್ದರೆ ಅದನ್ನು ಪುನಃ ಮಾಡಬಾರದು. ತನಗೆ ಯಾವುದು ಸರಿಯೆನ್ನಿಸುತ್ತದೆಯೋ ಅದರಂತೆ ತನ್ನನ್ನು ತೊಡಗಿಸಿಕೊಳ್ಳಬೇಕು.
03198043a ನ ಪಾಪಂ ಪ್ರತಿ ಪಾಪಃ ಸ್ಯಾತ್ಸಾಧುರೇವ ಸದಾ ಭವೇತ್।
03198043c ಆತ್ಮನೈವ ಹತಃ ಪಾಪೋ ಯಃ ಪಾಪಂ ಕರ್ತುಮಿಚ್ಚತಿ।।
ಪಾಪಕ್ಕೆ ಹಿಂದಿರುಗಿ ಪಾಪ ಮಾಡಬಾರದು. ಸದಾ ಸಾಧುವಾಗಿರಬೇಕು. ಪಾಪವನ್ನು ಮಾಡಬಯಸುವ ಪಾಪಿಯು ತನ್ನನ್ನು ತಾನೇ ಕೊಂದುಕೊಳ್ಳುತ್ತಾನೆ.
03198044a ಕರ್ಮ ಚೈತದಸಾಧೂನಾಂ ವೃಜಿನಾನಾಮಸಾಧುವತ್।
03198044c ನ ಧರ್ಮೋಽಸ್ತೀತಿ ಮನ್ವಾನಾಃ ಶುಚೀನವಹಸಂತಿ ಯೇ।।
03198044e ಅಶ್ರದ್ದಧಾನಾ ಧರ್ಮಸ್ಯ ತೇ ನಶ್ಯಂತಿ ನ ಸಂಶಯಃ।।
ಕೆಟ್ಟ ಮೋಸಗಾರರ ಕರ್ಮಗಳು ಸಾಧುವಲ್ಲ. ಧರ್ಮವೇ ಇಲ್ಲವೆಂದು ಯೋಚಿಸಿ, ಧರ್ಮದಲ್ಲಿ ಶ್ರದ್ಧೆಯನ್ನಿಡದೇ, ಶುಚಿಯಾಗಿದ್ದವರನ್ನು ಯಾರು ಅವಹೇಳನ ಮಾಡುತ್ತಾರೋ ಅವರು ನಾಶ ಹೊಂದುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ.
03198045a ಮಹಾದೃತಿರಿವಾಧ್ಮಾತಃ ಪಾಪೋ ಭವತಿ ನಿತ್ಯದಾ।
03198045c ಮೂಢಾನಾಮವಲಿಪ್ತಾನಾಮಸಾರಂ ಭಾಷಿತಂ ಭವೇತ್।।
03198045e ದರ್ಶಯತ್ಯಂತರಾತ್ಮಾನಂ ದಿವಾ ರೂಪಮಿವಾಂಶುಮಾನ್।।
ಪಾಪಿಷ್ಟನು ನಿತ್ಯವೂ ಗಾಳಿತುಂಬಿದ ಚೀಲದಂತೆ ಉಬ್ಬಿಕೊಂಡಿರುತ್ತಾನೆ. ಮೂಢರ ಮಾತುಗಳಲ್ಲಿ ಸಾರವಿರುವುದಿಲ್ಲ ಮತ್ತು ರವಿಯು ಹೇಗೆ ಎಲ್ಲವನ್ನೂ ತೋರಿಸುತ್ತಾನೋ ಹಾಗೆ ಅದು ಅವರ ಅಂತರಾತ್ಮವನ್ನು ತೋರಿಸುತ್ತದೆ.
03198046a ನ ಲೋಕೇ ರಾಜತೇ ಮೂರ್ಖಃ ಕೇವಲಾತ್ಮಪ್ರಶಂಸಯಾ।
03198046c ಅಪಿ ಚೇಹ ಮೃಜಾ ಹೀನಃ ಕೃತವಿದ್ಯಃ ಪ್ರಕಾಶತೇ।।
ಕೇವಲ ಆತ್ಮಪ್ರಶಂಸನೆಯಿಂದ ಮೂರ್ಖನು ಲೋಕದಲ್ಲಿ ರಾಜಿಸುವುದಿಲ್ಲ. ಆದರೆ ವಿದ್ಯಾವಂತನು, ಹೀನನಾಗಿದ್ದರೂ ಪ್ರಕಾಶಿಸುತ್ತಾನೆ.
03198047a ಅಬ್ರುವನ್ಕಸ್ಯ ಚಿನ್ನಿಂದಾಮಾತ್ಮಪೂಜಾಮವರ್ಣಯನ್।
03198047c ನ ಕಶ್ಚಿದ್ಗುಣಸಂಪನ್ನಃ ಪ್ರಕಾಶೋ ಭುವಿ ದೃಶ್ಯತೇ।।
ಯಾರಿಗೂ ನಿಂದನೆಯನ್ನು ಮಾಡದ, ಆತ್ಮವರ್ಣನೆಯನ್ನು ಮಾಡಿ ಪೂಜಿಸಿಕೊಳ್ಳದವನು ಗುಣಸಂಪನ್ನನಾಗಿ ಭೂಮಿಯಲ್ಲಿ ಪ್ರಕಾಶಿತನಾಗಿ ಕಂಡುಬರುತ್ತಾನೆ.
03198048a ವಿಕರ್ಮಣಾ ತಪ್ಯಮಾನಃ ಪಾಪಾದ್ವಿಪರಿಮುಚ್ಯತೇ।
03198048c ನೈತತ್ಕುರ್ಯಾಂ ಪುನರಿತಿ ದ್ವಿತೀಯಾತ್ಪರಿಮುಚ್ಯತೇ।।
ತಪ್ಪುಗಳಿಗೆ ಪರಿತಪಿಸಿದರೆ ಅದರ ಪಾಪದಿಂದ ಮುಕ್ತರಾಗುತ್ತಾರೆ. ಪುನಃ ಇದನ್ನು ಮಾಡುವುದಿಲ್ಲ ಎಂದು ಅದು ಮರುಕಳಿಸುವುದನ್ನು ತಪ್ಪಿಸಬೇಕು.
03198049a ಕರ್ಮಣಾ ಯೇನ ತೇನೇಹ ಪಾಪಾದ್ದ್ವಿಜವರೋತ್ತಮ।
03198049c ಏವಂ ಶ್ರುತಿರಿಯಂ ಬ್ರಹ್ಮನ್ಧರ್ಮೇಷು ಪರಿದೃಶ್ಯತೇ।।
ದ್ವಿಜೋತ್ತಮ! ಈ ರೀತಿ ಯಾವುದೇ ಪಾಪದಿಂದ ಬಿಡುಗಡೆ ಹೊಂದಬಹುದು. ಬ್ರಹ್ಮನ್! ಇದು ಧರ್ಮಗಳಲ್ಲಿ ಕಂಡುಬಂದಿರುವುದು ಎಂದು ಕೇಳುತ್ತೇವೆ.
03198050a ಪಾಪಾನ್ಯಬುದ್ಧ್ವೇಹ ಪುರಾ ಕೃತಾನಿ। ಪ್ರಾಗ್ಧರ್ಮಶೀಲೋ ವಿನಿಹಂತಿ ಪಶ್ಚಾತ್।
03198050c ಧರ್ಮೋ ಬ್ರಹ್ಮನ್ನುದತೇ ಪೂರುಷಾಣಾಂ। ಯತ್ಕುರ್ವತೇ ಪಾಪಮಿಹ ಪ್ರಮಾದಾತ್।।
ಹಿಂದೆ ಮಾಡಿದ ಪಾಪಗಳನ್ನು ತಿಳಿಯದೇ, ಧರ್ಮಶೀಲನು ನಂತರದಲ್ಲಿ ಅವುಗಳನ್ನು ನಾಶಪಡಿಸುತ್ತಾನೆ. ಧರ್ಮವು ತಪ್ಪಿತಸ್ಥ ಭಾವನೆಯನ್ನು, ಇಲ್ಲಿ ತಿಳಿಯದೇ ಮಾಡಿದ ಪಾಪವನ್ನು ಹೋಗಲಾಡಿಸುತ್ತದೆ.
03198051a ಪಾಪಂ ಕೃತ್ವಾ ಹಿ ಮನ್ಯೇತ ನಾಹಮಸ್ಮೀತಿ ಪೂರುಷಃ।
03198051c ಚಿಕೀರ್ಷೇದೇವ ಕಲ್ಯಾಣಂ ಶ್ರದ್ದಧಾನೋಽನಸೂಯಕಃ।।
ಪಾಪವನ್ನು ಮಾಡಿ, ಇದು ನಾನಲ್ಲ ಎಂದು ತಿಳಿಯಬೇಕು. ಶ್ರದ್ಧೆಯಿಂದ ವಿರೋಧಿಸದೇ ಯಾವುದು ಸರಿಯೋ ಅದನ್ನು ಮಾಡಲು ನೋಡಬೇಕು.
03198052a ವಸನಸ್ಯೇವ ಚಿದ್ರಾಣಿ ಸಾಧೂನಾಂ ವಿವೃಣೋತಿ ಯಃ।
03198052c ಪಾಪಂ ಚೇತ್ಪುರುಷಃ ಕೃತ್ವಾ ಕಲ್ಯಾಣಮಭಿಪದ್ಯತೇ।
03198052e ಮುಚ್ಯತೇ ಸರ್ವಪಾಪೇಭ್ಯೋ ಮಹಾಭ್ರೈರಿವ ಚಂದ್ರಮಾಃ।।
ಸಾಧುಗಳ ಬಟ್ಟೆಯ ಹರಕುಗಳನ್ನು ಮುಚ್ಚಿದರೂ ಕೂಡ ಪಾಪಗಳನ್ನು ಕಳೆದುಕೊಂಡು ಪುರುಷನು ಕಲ್ಯಾಣವನ್ನು ಹೊಂದುತ್ತಾನೆ. ಚಂದ್ರನು ಮಹಾಮೋಡಗಳಿಂದ ಹೇಗೋ ಹಾಗೆ ಸರ್ವ ಪಾಪಗಳಿಂದ ಬಿಡುಗಡೆ ಹೊಂದುತ್ತಾನೆ.
03198053a ಯಥಾದಿತ್ಯಃ ಸಮುದ್ಯನ್ವೈ ತಮಃ ಸರ್ವಂ ವ್ಯಪೋಹತಿ।
03198053c ಏವಂ ಕಲ್ಯಾಣಮಾತಿಷ್ಠನ್ಸರ್ವಪಾಪೈಃ ಪ್ರಮುಚ್ಯತೇ।।
ಉದಯವಾಗುವ ಸೂರ್ಯನು ಹೇಗೆ ಎಲ್ಲ ಕತ್ತಲೆಯನ್ನೂ ಕಳೆಯುತ್ತಾನೋ ಹಾಗೆ ಕಲ್ಯಾಣ ಕಾರ್ಯಗಳನ್ನು ಮಾಡುವುದರಿಂದ ಸರ್ವಪಾಪಗಳಿಂದ ಬಿಡುಗಡೆಯಾಗುತ್ತದೆ.
03198054a ಪಾಪಾನಾಂ ವಿದ್ಧ್ಯಧಿಷ್ಠಾನಂ ಲೋಭಮೇವ ದ್ವಿಜೋತ್ತಮ।
03198054c ಲುಬ್ಧಾಃ ಪಾಪಂ ವ್ಯವಸ್ಯಂತಿ ನರಾ ನಾತಿಬಹುಶ್ರುತಾಃ।
03198054e ಅಧರ್ಮಾ ಧರ್ಮರೂಪೇಣ ತೃಣೈಃ ಕೂಪಾ ಇವಾವೃತಾಃ।।
ದ್ವಿಜೋತ್ತಮ! ಲೋಭವೇ ಪಾಪಗಳ ಕೇಂದ್ರಬಿಂದುವೆಂದು ತಿಳಿ. ದುರಾಸಿ ನರರು, ಬಹಳಷ್ಟು ವಿವೇಕವಿಲ್ಲದೇ, ಪಾಪಕರ್ಮಗಳಲ್ಲಿ ತೊಡಗುತ್ತಾರೆ ಮತ್ತು ಹುಲ್ಲುಗಳಿಂದ ಮುಚ್ಚಲ್ಪಟ್ಟ ಬಾವಿಯಂತೆ ಧರ್ಮದ ರೂಪವನ್ನು ತೊಟ್ಟಿರುವ ಅವರು ಅಧರ್ಮಿಗಳು.
03198055a ತೇಷಾಂ ದಮಃ ಪವಿತ್ರಾಣಿ ಪ್ರಲಾಪಾ ಧರ್ಮಸಂಶ್ರಿತಾಃ।
03198055c ಸರ್ವಂ ಹಿ ವಿದ್ಯತೇ ತೇಷು ಶಿಷ್ಟಾಚಾರಃ ಸುದುರ್ಲಭಃ।।
ಅವರಲ್ಲಿ ದಮವಿದೆ. ಪವಿತ್ರ ಮಾತುಗಳನ್ನಾಡುತ್ತಾರೆ. ಧರ್ಮಸಂಶ್ರಿತರಾಗಿರುತ್ತಾರೆ. ಎಲ್ಲವನ್ನು ತಿಳಿದುಕೊಂಡಿರುತ್ತಾರೆ. ಆದರೆ ಅವರಲ್ಲಿ ಶಿಷ್ಟಾಚಾರವು ದುರ್ಲಭವಾಗಿರುತ್ತದೆ.””
03198056 ಮಾರ್ಕಂಡೇಯ ಉವಾಚ।
03198056a ಸ ತು ವಿಪ್ರೋ ಮಹಾಪ್ರಾಜ್ಞೋ ಧರ್ಮವ್ಯಾಧಮಪೃಚ್ಚತ।
03198056c ಶಿಷ್ಟಾಚಾರಂ ಕಥಮಹಂ ವಿದ್ಯಾಮಿತಿ ನರೋತ್ತಮ।
03198056e ಏತನ್ಮಹಾಮತೇ ವ್ಯಾಧ ಪ್ರಬ್ರವೀಹಿ ಯಥಾತಥಂ।।
ಮಾರ್ಕಂಡೇಯನು ಹೇಳಿದನು: “ಆಗ ಮಹಾಪ್ರಾಜ್ಞ ವಿಪ್ರನು ಧರ್ಮವ್ಯಾಧನನ್ನು ಕೇಳಿದನು: “ಶಿಷ್ಟಾಚಾರವೆಂದರೆ ಏನೆಂದು ತಿಳಿಸು. ಮಹಾಮತಿ! ನರೋತ್ತಮ! ವ್ಯಾಧ! ಇದರ ಕುರಿತು ಯಥಾವತ್ತಾಗಿ ಹೇಳು.”
03198057 ವ್ಯಾಧ ಉವಾಚ।
03198057a ಯಜ್ಞೋ ದಾನಂ ತಪೋ ವೇದಾಃ ಸತ್ಯಂ ಚ ದ್ವಿಜಸತ್ತಮ।
03198057c ಪಂಚೈತಾನಿ ಪವಿತ್ರಾಣಿ ಶಿಷ್ಟಾಚಾರೇಷು ನಿತ್ಯದಾ।।
ವ್ಯಾಧನು ಹೇಳಿದನು: “ದ್ವಿಜಸತ್ತಮ! ಯಜ್ಞ, ದಾನ, ತಪಸ್ಸು, ವೇದಗಳು ಮತ್ತು ಸತ್ಯ ಈ ಐದು ನಿತ್ಯವೂ ಪವಿತ್ರವಾಗಿರುವ ಶಿಷ್ಟಾಚಾರಗಳು.
03198058a ಕಾಮಕ್ರೋಧೌ ವಶೇ ಕೃತ್ವಾ ದಂಭಂ ಲೋಭಮನಾರ್ಜವಂ।
03198058c ಧರ್ಮ ಇತ್ಯೇವ ಸಂತುಷ್ಟಾಸ್ತೇ ಶಿಷ್ಟಾಃ ಶಿಷ್ಟಸಮ್ಮತಾಃ।।
ಕಾಮ-ಕ್ರೋಧಗಳನ್ನು, ಜಂಬ, ಲೋಭ, ಮತ್ತು ಅಪ್ರಾಮಾಣಿಕತೆಗಳನ್ನು ವಶದಲ್ಲಿಟ್ಟುಕೊಂಡು ಶಿಷ್ಟರು, ಶಿಷ್ಟರಿಂದ ಒಪ್ಪಿಗೆಯನ್ನು ಪಡೆದು, ಧರ್ಮದಲ್ಲಿಯೇ ಸಂತುಷ್ಟರಾಗಿರುತ್ತಾರೆ.
03198059a ನ ತೇಷಾಂ ವಿದ್ಯತೇಽವೃತ್ತಂ ಯಜ್ಞಸ್ವಾಧ್ಯಾಯಶೀಲಿನಾಂ।
03198059c ಆಚಾರಪಾಲನಂ ಚೈವ ದ್ವಿತೀಯಂ ಶಿಷ್ಟಲಕ್ಷಣಂ।।
ಯಜ್ಞ ಮತ್ತು ಸ್ವಾಧ್ಯಾಯದಲ್ಲಿ ತೊಡಗಿಸಿಕೊಂಡವರಿಗೆ ವೃತ್ತಿಯಿಲ್ಲದೇ ಇರುವುದಿಲ್ಲ. ಅವರು ಸರಿಯಾದ ಆಚಾರಗಳನ್ನು ಪಾಲಿಸುತ್ತಾರೆ. ಇದು ಶಿಷ್ಟರ ಎರಡನೆಯ ಲಕ್ಷಣ.
03198060a ಗುರುಶುಶ್ರೂಷಣಂ ಸತ್ಯಮಕ್ರೋಧೋ ದಾನಮೇವ ಚ।
03198060c ಏತಚ್ಚತುಷ್ಟಯಂ ಬ್ರಹ್ಮಂ ಶಿಷ್ಟಾಚಾರೇಷು ನಿತ್ಯದಾ।।
ಬ್ರಾಹ್ಮಣ! ಗುರುಶುಶ್ರೂಷಣ, ಸತ್ಯ, ಅಕ್ರೋಧ, ಮತ್ತು ದಾನ ಈ ನಾಲ್ಕು ನಿತ್ಯವೂ ಶಿಷ್ಟಾಚಾರಗಳು.
03198061a ಶಿಷ್ಟಾಚಾರೇ ಮನಃ ಕೃತ್ವಾ ಪ್ರತಿಷ್ಠಾಪ್ಯ ಚ ಸರ್ವಶಃ।
03198061c ಯಾಮಯಂ ಲಭತೇ ತುಷ್ಟಿಂ ಸಾ ನ ಶಕ್ಯಾ ಹ್ಯತೋಽನ್ಯಥಾ।।
ಶಿಷ್ಟಾಚಾರದಲ್ಲಿ ಮನಸ್ಸು ಮಾಡಿ ಯಾವಾಗಲೂ ಅದರಲ್ಲಿಯೇ ಇರುವವನು ಬೇರೆ ಯಾವುದರಿಂದಲೂ ಪಡೆಯಲಾಗದ ತೃಪ್ತಿಯನ್ನು ಪಡೆಯುತ್ತಾನೆ.
03198062a ವೇದಸ್ಯೋಪನಿಷತ್ಸತ್ಯಂ ಸತ್ಯಸ್ಯೋಪನಿಷದ್ದಮಃ।
03198062c ದಮಸ್ಯೋಪನಿಷತ್ತ್ಯಾಗಃ ಶಿಷ್ಟಾಚಾರೇಷು ನಿತ್ಯದಾ।।
ನಿತ್ಯದ ಶಿಷ್ಟಾಚಾರಗಳಲ್ಲಿ ವೇದದ ಗುಟ್ಟು ಸತ್ಯ, ಸತ್ಯದ ಗುಟ್ಟು ದಮ, ಮತ್ತು ದಮದ ಗುಟ್ಟು ತ್ಯಾಗ.
03198063a ಯೇ ತು ಧರ್ಮಮಸೂಯಂತೇ ಬುದ್ಧಿಮೋಹಾನ್ವಿತಾ ನರಾಃ।
03198063c ಅಪಥಾ ಗಚ್ಚತಾಂ ತೇಷಾಮನುಯಾತಾಪಿ ಪೀಡ್ಯತೇ।।
ಬುದ್ಧಿಮೋಹಾನ್ವಿತರಾಗಿ ಧರ್ಮವನ್ನು ವಿರೋಧಿಸಿ ಬೇರೆಯೇ ಮಾರ್ಗದಲ್ಲಿ ಹೋಗುವವರನ್ನು ಹಿಂಬಾಲಿಸುವವರೂ ಕೂಡ ಪೀಡೆಗೊಳಗಾಗುತ್ತಾರೆ.
03198064a ಯೇ ತು ಶಿಷ್ಟಾಃ ಸುನಿಯತಾಃ ಶ್ರುತಿತ್ಯಾಗಪರಾಯಣಾಃ।
03198064c ಧರ್ಮ್ಯಂ ಪಂಥಾನಮಾರೂಢಾಃ ಸತ್ಯಧರ್ಮಪರಾಯಣಾಃ।।
ಆದರೆ ಸುನಿಯತರಾದ, ಶ್ರುತಿತ್ಯಾಗಪರಾಯಣರಾದ ಶಿಷ್ಟರು ಧರ್ಮದ ದಾರಿಯನ್ನು ಏರಿ, ಸತ್ಯಧರ್ಮಪರಾಯಣರಾಗಿರುತ್ತಾರೆ.
03198065a ನಿಯಚ್ಚಂತಿ ಪರಾಂ ಬುದ್ಧಿಂ ಶಿಷ್ಟಾಚಾರಾನ್ವಿತಾ ನರಾಃ।
03198065c ಉಪಾಧ್ಯಾಯಮತೇ ಯುಕ್ತಾಃ ಸ್ಥಿತ್ಯಾ ಧರ್ಮಾರ್ಥದರ್ಶಿನಃ।।
ಶಿಷ್ಟಾಚಾರದಂತೆ ನಡೆದುಕೊಳ್ಳುವ ನರರು ಪರಮ ಬುದ್ಧಿಯನ್ನು ನಿಯಂತ್ರಣದಲ್ಲಿಟ್ಟುಕೊಂಡಿರುತ್ತಾರೆ. ಧರ್ಮಾರ್ಥದರ್ಶಿಗಳಾಗಿದ್ದುಕೊಂಡು ತಮ್ಮ ಉಪಾಧ್ಯಾಯರಿಗೆ ವಿನೀತರಾಗಿರುತ್ತಾರೆ.
03198066a ನಾಸ್ತಿಕಾನ್ಭಿನ್ನಮರ್ಯಾದಾನ್ಕ್ರೂರಾನ್ಪಾಪಮತೌ ಸ್ಥಿತಾನ್।
03198066c ತ್ಯಜ ತಾಂ ಜ್ಞಾನಮಾಶ್ರಿತ್ಯ ಧಾರ್ಮಿಕಾನುಪಸೇವ್ಯ ಚ।।
ನಾಸ್ತಿಕರನ್ನು, ಮರ್ಯಾದೆಯನ್ನು ಮೀರುವವರನ್ನು, ಕ್ರೂರರನ್ನು ಮತ್ತು ಪಾಪಮತಿಗಳನ್ನು ತ್ಯಜಿಸು. ಜ್ಞಾನವನ್ನು ಅವಲಂಬಿಸಿ, ಧಾರ್ಮಿಕರನ್ನು ಅನುಸರಿಸು.
03198067a ಕಾಮಲೋಭಗ್ರಹಾಕೀರ್ಣಾಂ ಪಂಚೇಂದ್ರಿಯಜಲಾಂ ನದೀಂ।
03198067c ನಾವಂ ಧೃತಿಮಯೀಂ ಕೃತ್ವಾ ಜನ್ಮದುರ್ಗಾಣಿ ಸಂತರ।।
ಧೃತಿಯೆನ್ನುವ ನಾವೆಯನ್ನು ಕಟ್ಟಿ ಕಾಮಲೋಭಗಳೆಂಬ ಮೊಸಳೆಗಳನ್ನುಳ್ಳ, ಪಂಚೇಂದ್ರಿಯಗಳೇ ನೀರಾಗಿ ಹರಿಯುವ ನದಿಯನ್ನು ದಾಟಿ ಜನ್ಮದ ಆಚೆ ಹೋಗು.
03198068a ಕ್ರಮೇಣ ಸಂಚಿತೋ ಧರ್ಮೋ ಬುದ್ಧಿಯೋಗಮಯೋ ಮಹಾನ್।
03198068c ಶಿಷ್ಟಾಚಾರೇ ಭವೇತ್ಸಾಧೂ ರಾಗಃ ಶುಕ್ಲೇವ ವಾಸಸಿ।।
ಕ್ರಮೇಣವಾಗಿ ಸಂಚಿತಗೊಳಿಸಿದ, ಬುದ್ಧಿಯೋಗಮಯವಾದ ಧರ್ಮವು ಬೆಳೆದು ಸಾಧುಗಳ ಶಿಷ್ಟಾಚಾರವಾಗಿ ಬಿಳೀ ಬಟ್ಟೆಯ ಮೇಲೆ ಕೆಂಪು ಬಿಂದುವಿನಂತೆ ತೋರುತ್ತದೆ.
03198069a ಅಹಿಂಸಾ ಸತ್ಯವಚನಂ ಸರ್ವಭೂತಹಿತಂ ಪರಂ।
03198069c ಅಹಿಂಸಾ ಪರಮೋ ಧರ್ಮಃ1 ಸ ಚ ಸತ್ಯೇ ಪ್ರತಿಷ್ಠಿತಃ।
03198069e ಸತ್ಯೇ ಕೃತ್ವಾ ಪ್ರತಿಷ್ಠಾಂ ತು ಪ್ರವರ್ತಂತೇ ಪ್ರವೃತ್ತಯಃ।।
ಅಹಿಂಸೆ ಮತ್ತು ಸತ್ಯವಚನಗಳು ಸರ್ವಭೂತಗಳಿಗೂ ಪರಮ ಹಿತವಾದವುಗಳು. ಅಹಿಂಸೆಯು ಪರಮ ಧರ್ಮ ಮತ್ತು ಅದು ಸತ್ಯದಲ್ಲಿ ನೆಲೆಗೊಂಡಿದೆ. ಸತ್ಯದಲ್ಲಿದ್ದುಕೊಂಡು ಮಾಡುವವೆಲ್ಲವೂ ಪ್ರವೃತ್ತಿಯಂತೆ ವೃದ್ಧಿಯಾಗುತ್ತವೆ.
03198070a ಸತ್ಯಮೇವ ಗರೀಯಸ್ತು ಶಿಷ್ಟಾಚಾರನಿಷೇವಿತಂ।
03198070c ಆಚಾರಶ್ಚ ಸತಾಂ ಧರ್ಮಃ ಸಂತಶ್ಚಾಚಾರಲಕ್ಷಣಾಃ।।
ಶಿಷ್ಟಾಚಾರದಲ್ಲಿರುವವರ ಸತ್ಯವು ಇನ್ನೂ ಹೆಚ್ಚಿನದು. ಸತ್ಯವಂತರ ಆಚಾರವೇ ಧರ್ಮ. ಆಚಾರವೇ ಸತ್ಯವಂತರ ಲಕ್ಷಣ.
03198071a ಯೋ ಯಥಾಪ್ರಕೃತಿರ್ಜಂತುಃ ಸ್ವಾಂ ಸ್ವಾಂ ಪ್ರಕೃತಿಮಶ್ನುತೇ।
03198071c ಪಾಪಾತ್ಮಾ ಕ್ರೋಧಕಾಮಾದೀನ್ದೋಷಾನಾಪ್ನೋತ್ಯನಾತ್ಮವಾನ್।।
ಪ್ರತಿಯೊಂದು ಜಂತುವೂ ಅದರ ಪ್ರಕೃತಿಯನ್ನು, ಅದು ಏನೇ ಇರಲಿ, ಅನುಸರಿಸುತ್ತದೆ. ತನ್ನನ್ನು ನಿಯಂತ್ರಣದಲ್ಲಿಟ್ಟುಕೊಂಡಿರದ ಪಾಪಾತ್ಮನು ಕಾಮ-ಕ್ರೋಧಾದಿ ದೋಷಗಳನ್ನು ಹೊಂದುತ್ತಾನೆ.
03198072a ಆರಂಭೋ ನ್ಯಾಯಯುಕ್ತೋ ಯಃ ಸ ಹಿ ಧರ್ಮ ಇತಿ ಸ್ಮೃತಃ।
03198072c ಅನಾಚಾರಸ್ತ್ವಧರ್ಮೇತಿ ಏತಚ್ಚಿಷ್ಟಾನುಶಾಸನಂ।।
ನ್ಯಾಯಯುಕ್ತವಾಗಿ ಆರಂಭಿಸಿದುದನ್ನೇ ಧರ್ಮವೆಂದು ಹೇಳುತ್ತಾರೆ. ಅನಾಚಾರವು ಅಧರ್ಮ ಎಂದು ಶಿಷ್ಟಾಚಾರಿಗಳು ಹೇಳುತ್ತಾರೆ.
03198073a ಅಕ್ರುಧ್ಯಂತೋಽನಸೂಯಂತೋ ನಿರಹಂಕಾರಮತ್ಸರಾಃ।
03198073c ಋಜವಃ ಶಮಸಂಪನ್ನಾಃ ಶಿಷ್ಟಾಚಾರಾ ಭವಂತಿ ತೇ।।
ಸಿಟ್ಟಾಗದವರು, ಅಸೂಯೆ ಪಡದವರು, ನಿರಹಂಕಾರಿಗಳು, ಮತ್ಸರಕ್ಕೊಳಗಾಗದವರು, ವಿಧೇಯರಾಗಿರುವವರು ಮತ್ತು ಶಾಂತರಾಗಿರುವವರು ಶಿಷ್ಟಾಚಾರಿಗಳು.
03198074a ತ್ರೈವಿದ್ಯವೃದ್ಧಾಃ ಶುಚಯೋ ವೃತ್ತವಂತೋ ಮನಸ್ವಿನಃ।
03198074c ಗುರುಶುಶ್ರೂಷವೋ ದಾಂತಾಃ ಶಿಷ್ಟಾಚಾರಾ ಭವಂತ್ಯುತ।।
ಮೂರು ವೇದಗಳಲ್ಲಿ ವೃದ್ಧರಾಗಿರುವವರು, ಶುಚಿಗಳು, ವೃತ್ತಿವಂತರು, ಮನಸ್ವಿಗಳು, ಗುರುಶುಶ್ರೂಷೆ ಮಾಡುವವರು ಮತ್ತು ತಮ್ಮನ್ನು ತಾವು ನಿಯಂತ್ರಣದಲ್ಲಿಟ್ಟುಕೊಂಡಿರುವವರು ಶಿಷ್ಟಾಚಾರಿಗಳು.
03198075a ತೇಷಾಮದೀನಸತ್ತ್ವಾನಾಂ ದುಷ್ಕರಾಚಾರಕರ್ಮಣಾಂ।
03198075c ಸ್ವೈಃ ಕರ್ಮಭಿಃ ಸತ್ಕೃತಾನಾಂ ಘೋರತ್ವಂ ಸಂಪ್ರಣಶ್ಯತಿ।।
ದೀನರಲ್ಲದವರು, ಸತ್ವವಿಲ್ಲದವರು, ದುಷ್ಕರ ಆಚಾರಕರ್ಮಿಗಳು, ಮತ್ತು ತಮ್ಮದೇ ಕರ್ಮಗಳಿಂದ ಸತ್ಕೃತರಾದವರಲ್ಲಿ ಘೋರತ್ವವು ನಾಶಗೊಳ್ಳುತ್ತದೆ.
03198076a ತಂ ಸದಾಚಾರಮಾಶ್ಚರ್ಯಂ ಪುರಾಣಂ ಶಾಶ್ವತಂ ಧ್ರುವಂ।
03198076c ಧರ್ಮಂ ಧರ್ಮೇಣ ಪಶ್ಯಂತಃ ಸ್ವರ್ಗಂ ಯಾಂತಿ ಮನೀಷಿಣಃ।।
ಈ ಸದಾಚಾರ ಧರ್ಮವನ್ನು ಆಶ್ಚರ್ಯ, ಪುರಾಣ, ಶಾಶ್ವತ, ಧ್ರುವವೆಂದು ಧರ್ಮದಿಂದ ನೋಡುವ ಮನೀಷಿಗಳು ಸ್ವರ್ಗಕ್ಕೆ ಹೋಗುತ್ತಾರೆ.
03198077a ಆಸ್ತಿಕಾ ಮಾನಹೀನಾಶ್ಚ ದ್ವಿಜಾತಿಜನಪೂಜಕಾಃ।
03198077c ಶ್ರುತವೃತ್ತೋಪಸಂಪನ್ನಾಃ ತೇ ಸಂತಃ ಸ್ವರ್ಗಗಾಮಿನಃ।।
ಆಸ್ತಿಕರು, ಜಂಬವಿಲ್ಲದವರು, ದ್ವಿಜಾತಿಯವರನ್ನು ಪೂಜಿಸುವವರು, ಮತ್ತು ಶ್ರುತಿಗಳಂತೆ ನಡೆದುಕೊಳ್ಳುವ ಸಂತರು ಸ್ವರ್ಗಗಾಮಿಗಳಾಗುತ್ತಾರೆ.
03198078a ವೇದೋಕ್ತಃ ಪರಮೋ ಧರ್ಮೋ ಧರ್ಮಶಾಸ್ತ್ರೇಷು ಚಾಪರಃ।
03198078c ಶಿಷ್ಟಾಚೀರ್ಣಶ್ಚ ಶಿಷ್ಟಾನಾಂ ತ್ರಿವಿಧಂ ಧರ್ಮಲಕ್ಷಣಂ।।
ವೇದಗಳಲ್ಲಿ ಹೇಳಿದುದು ಪರಮ ಧರ್ಮ. ಧರ್ಮಶಾಸ್ತ್ರಗಳಲ್ಲಿರುವವು ಇನ್ನೊಂದು ಧರ್ಮ. ಶಿಷ್ಟರ ಶಿಷ್ಟಾಚಾರಗಳು ಇನ್ನೊಂದು. ಹೀಗೆ ಮೂರು ವಿಧದ ಧರ್ಮ ಲಕ್ಷಣಗಳಿವೆ.
03198079a ಪಾರಣಂ ಚಾಪಿ ವಿದ್ಯಾನಾಂ ತೀರ್ಥಾನಾಮವಗಾಹನಂ।
03198079c ಕ್ಷಮಾ ಸತ್ಯಾರ್ಜವಂ ಶೌಚಂ ಶಿಷ್ಟಾಚಾರನಿದರ್ಶನಂ।।
ವೇದಗಳ ಪಾರಾಯಣ, ತೀರ್ಥಗಳಲ್ಲಿ ಸ್ನಾನ, ಕ್ಷಮೆ, ಸತ್ಯ, ವಿಧೇಯತೆ ಮತ್ತು ಶುಚಿ ಇವು ಶಿಷ್ಟಾಚಾರಿಗಳ ನಿದರ್ಶನಗಳು.
03198080a ಸರ್ವಭೂತದಯಾವಂತೋ ಅಹಿಂಸಾನಿರತಾಃ ಸದಾ।
03198080c ಪರುಷಂ ನ ಪ್ರಭಾಷಂತೇ ಸದಾ ಸಂತೋ ದ್ವಿಜಪ್ರಿಯಾಃ।।
ಸರ್ವಭೂತಗಳ ಮೇಲೂ ದಯಾವಂತನಾಗಿರುವ, ಸದಾ ಅಹಿಂಸ ನಿರತನಾಗಿರುವ, ದ್ವಿಜಪ್ರಿಯ ಪುರುಷನನ್ನು ಸದಾ ಸಂತನೆಂದು ಕರೆಯುತ್ತಾರೆ.
03198081a ಶುಭಾನಾಮಶುಭಾನಾಂ ಚ ಕರ್ಮಣಾಂ ಫಲಸಂಚಯೇ।
03198081c ವಿಪಾಕಮಭಿಜಾನಂತಿ ತೇ ಶಿಷ್ಟಾಃ ಶಿಷ್ಟಸಮ್ಮತಾಃ।।
ಶುಭಾಶುಭ ಕರ್ಮಗಳ ಫಲಸಂಚಯಗಳಿಂದ ಯಾವುದು ತಯಾರಾಗಿದೆ ಎಂದು ತಿಳಿದವರನ್ನು ಶಿಷ್ಟರು ಶಿಷ್ಟರೆಂದು ಒಪ್ಪಿಕೊಳ್ಳುತ್ತಾರೆ.
03198082a ನ್ಯಾಯೋಪೇತಾ ಗುಣೋಪೇತಾಃ ಸರ್ವಲೋಕಹಿತೈಷಿಣಃ।
03198082c ಸಂತಃ ಸ್ವರ್ಗಜಿತಃ ಶುಕ್ಲಾಃ ಸನ್ನಿವಿಷ್ಟಾಶ್ಚ ಸತ್ಪಥೇ।।
ನ್ಯಾಯೋಪೇತರಾದ, ಗುಣೋಪೇತರಾದ, ಸರ್ವಲೋಕ ಹಿತೈಷಿಗಳಾದ, ಪರಿಶುದ್ಧ ಸಂತರು ಸ್ವರ್ಗವನ್ನು ಗೆದ್ದು ಸತ್ಪಥದಲ್ಲಿಯೇ ಇರುತ್ತಾರೆ.
03198083a ದಾತಾರಃ ಸಂವಿಭಕ್ತಾರೋ ದೀನಾನುಗ್ರಹಕಾರಿಣಃ।
03198083c ಸರ್ವಭೂತದಯಾವಂತಸ್ತೇ ಶಿಷ್ಟಾಃ ಶಿಷ್ಟಸಮ್ಮತಾಃ।।
ಕೊಡುವವರು, ಹಂಚಿಕೊಳ್ಳುವವರು, ದೀನರಿಗೆ ಅನುಗ್ರಹವನ್ನು ಮಾಡುವವರು, ಸರ್ವಭೂತಗಳಿಗೂ ದಯೆಯನ್ನು ತೋರಿಸುವವರು ಶಿಷ್ಟರಿಂದ ಶಿಷ್ಟರಾಗಿ ಸ್ವೀಕೃತಗೊಳ್ಳುವರು.
03198084a ಸರ್ವಪೂಜ್ಯಾಃ ಶ್ರುತಧನಾಸ್ತಥೈವ ಚ ತಪಸ್ವಿನಃ।
03198084c ದಾನನಿತ್ಯಾಃ ಸುಖಾಽಲ್ಲೋಕಾನಾಪ್ನುವಂತೀಹ ಚ ಶ್ರಿಯಂ।।
ಸರ್ವರಿಗೂ ಪೂಜ್ಯರಾಗಿ, ಶ್ರದ್ಧೆ ಮತ್ತು ತಪಸ್ಸುಗಳಿಂದ ಕೂಡಿಕೊಂಡು, ಸದಾ ದಾನವನ್ನು ನೀಡುವವರು ಸುಖ ಲೋಕಗಳನ್ನು ಮತ್ತು ಇಲ್ಲಿ ಸಂಪತ್ತನ್ನೂ ಹೊಂದುತ್ತಾರೆ.
03198085a ಪೀಡಯಾ ಚ ಕಲತ್ರಸ್ಯ ಭೃತ್ಯಾನಾಂ ಚ ಸಮಾಹಿತಾಃ।
03198085c ಅತಿಶಕ್ತ್ಯಾ ಪ್ರಯಚ್ಚಂತಿ ಸಂತಃ ಸದ್ಭಿಃ ಸಮಾಗತಾಃ।।
ಸಂತರು ಸಂತರನ್ನು ಕೂಡಿದಾಗ ಪತ್ನಿ ಮತ್ತು ಅವಲಂಬಿಗಳಿಗೆ ಪೀಡೆಯೊದಗಿದರೂ ಶಕ್ತಿಗಿಂತ ಅತಿಯಾದುದನ್ನು ಕೊಡುತ್ತಾರೆ.
03198086a ಲೋಕಯಾತ್ರಾಂ ಚ ಪಶ್ಯಂತೋ ಧರ್ಮಮಾತ್ಮಹಿತಾನಿ ಚ।
03198086c ಏವಂ ಸಂತೋ ವರ್ತಮಾನಾ ಏಧಂತೇ ಶಾಶ್ವತೀಃ ಸಮಾಃ।।
ಸಂತರು ಹೀಗೆ ಲೋಕಯಾತ್ರೆ, ಧರ್ಮ ಮತ್ತು ಆತ್ಮಹಿತವನ್ನು ನೋಡಿಕೊಂಡು, ಬಹು ವರ್ಷಗಳು ವೃದ್ಧಿ ಹೊಂದುತ್ತಾರೆ.
03198087a ಅಹಿಂಸಾ ಸತ್ಯವಚನಮಾನೃಶಂಸ್ಯಮಥಾರ್ಜವಂ।
03198087c ಅದ್ರೋಹೋ ನಾತಿಮಾನಶ್ಚ ಹ್ರೀಸ್ತಿತಿಕ್ಷಾ ದಮಃ ಶಮಃ।।
03198088a ಧೀಮಂತೋ ಧೃತಿಮಂತಶ್ಚ ಭೂತಾನಾಮನುಕಂಪಕಾಃ।
03198088c ಅಕಾಮದ್ವೇಷಸಮ್ಯುಕ್ತಾಸ್ತೇ ಸಂತೋ ಲೋಕಸತ್ಕೃತಾಃ।।
ಅಹಿಂಸೆ, ಸತ್ಯವಚನ, ವೃದುತ್ವ, ವಿಧೇಯತೆಗಳಿರುವ, ಭಯದಿಂದ ದೂರವಿರುವ, ಜಂಬವಿಲ್ಲದಿರುವ, ಅದ್ರೋಹಿ, ವಿನಯ, ಧೀಮಂತ, ಧೃತಿವಂತ, ಭೂತಗಳ ಮೇಲೆ ಅನುಕಂಪವಿರುವ, ಕಾಮ ದ್ವೇಷರಹಿತರಾದ ಸಂತರು ಲೋಕದಲ್ಲಿ ಸತ್ಕೃತರಾಗಿರುತ್ತಾರೆ.
03198089a ತ್ರೀಣ್ಯೇವ ತು ಪದಾನ್ಯಾಹುಃ ಸತಾಂ ವೃತ್ತಮನುತ್ತಮಂ।
03198089c ನ ದ್ರುಹ್ಯೇಚ್ಚೈವ ದದ್ಯಾಚ್ಚ ಸತ್ಯಂ ಚೈವ ಸದಾ ವದೇತ್।।
ಈ ಮೂರು ಸಂತರ ಲಕ್ಷಣಗಳು ಮತ್ತು ಅನುತ್ತಮ ನಡತೆಯೆಂದು ಹೇಳುತ್ತಾರೆ: ದ್ರೋಹವೆಸಗದಿಲ್ಲದಿರುವುದು, ದಾನ ಮಾಡುವುದು, ಮತ್ತು ಸದಾ ಸತ್ಯವನ್ನೇ ಮಾತನಾಡುವುದು.
03198090a ಸರ್ವತ್ರ ಚ ದಯಾವಂತಃ ಸಂತಃ ಕರುಣವೇದಿನಃ।
03198090c ಗಚ್ಚಂತೀಹ ಸುಸಂತುಷ್ಟಾ ಧರ್ಮ್ಯಂ ಪಂಥಾನಮುತ್ತಮಂ।।
ಎಲ್ಲರ ಮೇಲೂ ದಯಾವಂತರಾದ, ಕರುಣವೇದಿ ಸಂತರು ತುಂಬಾ ಸಂತುಷ್ಟರಾಗಿ, ಉತ್ತಮ ಧರ್ಮಮಾರ್ಗದಲ್ಲಿ ನಡೆಯುತ್ತಾರೆ.
03198090e ಶಿಷ್ಟಾಚಾರಾ ಮಹಾತ್ಮಾನೋ ಯೇಷಾಂ ಧರ್ಮಃ ಸುನಿಶ್ಚಿತಃ।।
03198091a ಅನಸೂಯಾ ಕ್ಷಮಾ ಶಾಂತಿಃ ಸಂತೋಷಃ ಪ್ರಿಯವಾದಿತಾ।
03198091c ಕಾಮಕ್ರೋಧಪರಿತ್ಯಾಗಃ ಶಿಷ್ಟಾಚಾರನಿಷೇವಣಂ।।
ಮಹಾತ್ಮ ಶಿಷ್ಟಾಚಾರಿಗಳು ಈ ಧರ್ಮವನ್ನು ಸುನಿಶ್ಚಿತ ಮಾಡಿಕೊಂಡು ಅಸೂಯೆ ಪಡೆಯುವುದಿಲ್ಲ. ಕಾಮಕ್ರೋಧವನ್ನು ಪರಿತ್ಯಜಿಸಿ, ಕ್ಷಮಾ, ಶಾಂತಿ, ಸಂತೋಷ, ಪ್ರಿಯವಾದಿ, ಶಿಷ್ಟಾಚಾರವನ್ನು ಪಾಲಿಸುತ್ತಾರೆ.
03198092a ಕರ್ಮಣಾ ಶ್ರುತಸಂಪನ್ನಂ ಸತಾಂ ಮಾರ್ಗಮನುತ್ತಮಂ।
03198092c ಶಿಷ್ಟಾಚಾರಂ ನಿಷೇವಂತೇ ನಿತ್ಯಂ ಧರ್ಮೇಷ್ವತಂದ್ರಿತಾಃ।।
ಧರ್ಮದಿಂದ ಆಯಾಸಗೊಳ್ಳದೇ ಇರುವವರು ಶಿಷ್ಟಾಚಾರಗಳಲ್ಲಿ ರುಚಿಯನ್ನಿಟ್ಟುಕೊಂಡಿರುತ್ತಾರೆ; ಮತ್ತು ಈ ಸಂತರ ಶ್ರುತಸಂಪನ್ನವಾದ ಅನುತ್ತಮ ಕರ್ಮ ಮಾರ್ಗವನ್ನು ಅನುಸರಿಸುತ್ತಾರೆ.
03198093a ಪ್ರಜ್ಞಾಪ್ರಾಸಾದಮಾರುಹ್ಯ ಮುಹ್ಯತೋ ಮಹತೋ ಜನಾನ್।
03198093c ಪ್ರೇಕ್ಷಂತೋ ಲೋಕವೃತ್ತಾನಿ ವಿವಿಧಾನಿ ದ್ವಿಜೋತ್ತಮ।।
03198093e ಅತಿಪುಣ್ಯಾನಿ ಪಾಪಾನಿ ತಾನಿ ದ್ವಿಜವರೋತ್ತಮ।।
ದ್ವಿಜೋತ್ತಮ! ದ್ವಿಜವರೋತ್ತಮ! ಪ್ರಜ್ಞೆಯೆನ್ನುವ ಮಹಡಿಯನ್ನೇರಿ ಮಹಾ ಜನತೆಯು ಗೊಂದಲದಲ್ಲಿದ್ದುಕೊಂಡು ವಿವಿಧ ಲೋಕವೃತ್ತಿಗಳಲ್ಲಿ ತೊಡಗಿರುವುದನ್ನು, ಅತಿಯಾದ ಪುಣ್ಯಗಳನ್ನೂ ಪಾಪಗಳನ್ನೂ ನೋಡುತ್ತಿರುತ್ತಾರೆ.
03198094a ಏತತ್ತೇ ಸರ್ವಮಾಖ್ಯಾತಂ ಯಥಾಪ್ರಜ್ಞಂ ಯಥಾಶ್ರುತಂ।
03198094c ಶಿಷ್ಟಾಚಾರಗುಣಾನ್ ಬ್ರಹ್ಮನ್ ಪುರಸ್ಕೃತ್ಯ ದ್ವಿಜರ್ಷಭ।।
ಧ್ವಿಜರ್ಷಭ! ಬ್ರಹ್ಮನ್! ಇವೆಲ್ಲವೂ ಶಿಷ್ಟಾಚಾರರ ಮುಖ್ಯ ಗುಣಗಳೆಂದು ನನಗೆ ತಿಳಿದಷ್ಟನ್ನು, ಕೇಳಿದುದನ್ನು ಹೇಳಿದ್ದೇನೆ.””
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕ ಪರ್ವಣಿ ಮಾರ್ಕಂಡೇಯಸಮಸ್ಯಾ ಪರ್ವಣಿ ಪತಿವ್ರತೋಪಾಖ್ಯಾನೇ ಬ್ರಾಹ್ಮಣವ್ಯಾಧಸಂವಾದೇ ಅಷ್ಟನವತ್ಯಧಿಕಶತತಮೋಽಧ್ಯಾಯಃ।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ಬ್ರಾಹ್ಮಣವ್ಯಾಧಸಂವಾದದಲ್ಲಿ ನೂರಾತೊಂಭತ್ತೆಂಟನೆಯ ಅಧ್ಯಾಯವು.
-
“ಅಹಿಂಸಾ ಪರಮೋ ಧರ್ಮಃ” ಎನ್ನುವುದು ಆದಿಪರ್ವದ ಅಧ್ಯಾಯ 11ರಲ್ಲಿ ರುರು-ಡುಂಡುಭ ಸಂವಾದದಲ್ಲಿಯೂ ಬಂದಿದೆ. ↩︎