ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 197
ಸಾರ
ಮರದ ಕೆಳಗೆ ಕುಳಿತು ವೇದಾಧ್ಯಯನ ಮಾಡುವಾಗ ತನ್ನ ಮೇಲೆ ಪಿಷ್ಟವನ್ನು ಹಾಕಿತೆಂದು ಕುಪಿತನಾಗಿ ಕೌಶಿಕ ಬ್ರಾಹ್ಮಣನು ಬಲಾಕಾ ಪಕ್ಷಿಯನ್ನು ಕೇವಲ ಯೋಚನೆಯನ್ನು ಪ್ರಯೋಗಿಸಿ ಕೊಂದು, ಆಮೇಲೆ ಸಂತಾಪಗೊಂಡಿದುದು (1-6). ಭಿಕ್ಷೆಬೇಡಲು ಹೋದಾಗ ಗೃಹಿಣಿಯೋರ್ವಳು ನಿಲ್ಲು ಎಂದು ಕೌಶಿಕನನ್ನು ನಿಲ್ಲಿಸಿ, ಅಷ್ಟರಲ್ಲಿಯೇ ಹಸಿದು ಮನೆಗೆ ಬಂದ ಗಂಡನನ್ನು ಉಪಚರಿಸುವಾಗ ಬ್ರಾಹ್ಮಣನನ್ನು ಮರೆತದ್ದು (7-15). ನೆನಪು ಬಂದಾಗ ಭಿಕ್ಷವನ್ನು ನೀಡಲು ಬಂದ ಗೃಹಿಣಿಯ ಮೇಲೆ ಕೌಶಿಕನು ಬ್ರಾಹ್ಮಣನನ್ನು ನಿರ್ಲಕ್ಷಿಸಿದುದಕ್ಕೆ ಕುಪಿತನಾಗುವುದು (16-22). ಬ್ರಹ್ಮವಾದಿಗಳು ಕೋಪಗೊಂಡಾಗ ಮತ್ತು ಪ್ರಸನ್ನರಾದಾಗ ಮಹಾ ಪ್ರಭಾವಶಾಲಿಗಳೆಂದು ತಿಳಿದುಕೊಂಡಿದ್ದರೂ ತನಗೆ ಪತಿಶುಶ್ರೂಷೆಯೇ ಪರಮ ಧರ್ಮವೆಂದೂ, ಅದರಿಂದ ಕೌಶಿಕನು ಪಕ್ಷಿಯೊಂದನ್ನು ಕೋಪದಿಂದ ಸಾಯಿಸಿದ ವಿಷಯವನ್ನೂ ಬಲ್ಲೆ ಎಂದು ಗೃಹಿಣಿಯು ಉತ್ತರಿಸುವುದು (23-30); ಬಾಹ್ಮಣರ ಗುಣಲಕ್ಷಣಗಳನ್ನು ವರ್ಣಿಸಿ, ಮಿಥಿಲೆಯಲ್ಲಿರುವ ವ್ಯಾಧನೊಬ್ಬನು ಧರ್ಮದ ಮಾರ್ಗವನ್ನು ತೋರಿಸುತ್ತಾನೆ ಎಂದು ಹೇಳಿದುದು (31-44).
03197001 ಮಾರ್ಕಂಡೇಯ ಉವಾಚ।
03197001a ಕಶ್ಚಿದ್ದ್ವಿಜಾತಿಪ್ರವರೋ ವೇದಾಧ್ಯಾಯೀ ತಪೋಧನಃ।
03197001c ತಪಸ್ವೀ ಧರ್ಮಶೀಲಶ್ಚ ಕೌಶಿಕೋ ನಾಮ ಭಾರತ।।
ಮಾರ್ಕಂಡೇಯನು ಹೇಳಿದನು: “ಭಾರತ! ಓರ್ವ ದ್ವಿಜಾತಿಪ್ರವರ, ವೇದಧ್ಯಾಯೀ, ತಪೋಧನ, ಧರ್ಮಶೀಲ ಕೌಶಿಕ ಎಂಬ ಹೆಸರಿನ ತಪಸ್ವಿಯಿದ್ದನು.
03197002a ಸಾಂಗೋಪನಿಷದಾನ್ವೇದಾನಧೀತೇ ದ್ವಿಜಸತ್ತಮಃ।
03197002c ಸ ವೃಕ್ಷಮೂಲೇ ಕಸ್ಮಿಂಶ್ಚಿದ್ವೇದಾನುಚ್ಚಾರಯನ್ಸ್ಥಿತಃ।।
ಆ ದ್ವಿಜಸತ್ತಮನು ಉಪನಿಷತ್ತುಗಳೊಂದಿಗೆ ವೇದಗಳನ್ನು ತಿಳಿದುಕೊಂಡಿದ್ದನು. ಒಮ್ಮೆ ಅವನು ಒಂದು ಮರದ ಕೆಳಗೆ ವೇದಗಳನ್ನು ಉಚ್ಚರಿಸುತ್ತಾ ನಿಂತಿದ್ದನು.
03197003a ಉಪರಿಷ್ಟಾಚ್ಚ ವೃಕ್ಷಸ್ಯ ಬಲಾಕಾ ಸಂನ್ಯಲೀಯತ।
03197003c ತಯಾ ಪುರೀಷಮುತ್ಸೃಷ್ಟಂ ಬ್ರಾಹ್ಮಣಸ್ಯ ತದೋಪರಿ।।
ಆ ವೃಕ್ಷದ ಮೇಲೆ ಒಂದು ಹೆಣ್ಣು ಬಲಾಕಾ ಪಕ್ಷಿಯು ಕುಳಿತಿತ್ತು. ಅದು ಬ್ರಾಹ್ಮಣನ ಮೇಲೆ ಪಿಷ್ಟವನ್ನು ಹಾಕಿತು.
03197004a ತಾಮವೇಕ್ಷ್ಯ ತತಃ ಕ್ರುದ್ಧಃ ಸಮಪಧ್ಯಾಯತ ದ್ವಿಜಃ।
03197004c ಭೃಶಂ ಕ್ರೋಧಾಭಿಭೂತೇನ ಬಲಾಕಾ ಸಾ ನಿರೀಕ್ಷಿತಾ।।
ಆಗ ಕೃದ್ಧನಾದ ದ್ವಿಜನು ಅದನ್ನು ನೋಡಿ, ಆ ಬಲಾಕದ ಮೇಲೆ ಕ್ರೋಧಯುಕ್ತವಾದ ಯೋಚನೆಯನ್ನು ಪ್ರಯೋಗಿಸಿದನು.
03197005a ಅಪಧ್ಯಾತಾ ಚ ವಿಪ್ರೇಣ ನ್ಯಪತದ್ವಸುಧಾತಲೇ।
03197005c ಬಲಾಕಾಂ ಪತಿತಾಂ ದೃಷ್ಟ್ವಾ ಗತಸತ್ತ್ವಾಮಚೇತನಾಂ।
03197005e ಕಾರುಣ್ಯಾದಭಿಸಂತಪ್ತಃ ಪರ್ಯಶೋಚತ ತಾಂ ದ್ವಿಜಃ।।
ನೃಪತೇ! ವಿಪ್ರನ ಆ ಯೋಚನೆಯ ಪೆಟ್ಟು ತಿಂದ ಬಲಾಕವು ನೆಲದಮೇಲೆ ಬಿದ್ದಿತು. ಸತ್ತು ಅಚೇತಸವಾಗಿ ಬಿದ್ದಿದ್ದ ಅದನ್ನು ನೋಡಿ ದ್ವಿಜನು ಕಾರುಣ್ಯದಿಂದ ಸಂತಪ್ತನಾಗಿ ಶೋಕಿಸಿದನು.
03197006a ಅಕಾರ್ಯಂ ಕೃತವಾನಸ್ಮಿ ರಾಗದ್ವೇಷಬಲಾತ್ಕೃತಃ।
03197006c ಇತ್ಯುಕ್ತ್ವಾ ಬಹುಶೋ ವಿದ್ವಾನ್ಗ್ರಾಮಂ ಭೈಕ್ಷಾಯ ಸಂಶ್ರಿತಃ।।
“ರಾಗದ್ವೇಷಗಳ ಬಲಕ್ಕೆ ಬಂದು ನಾನು ಅಕಾರ್ಯವನ್ನು ಮಾಡಿಬಿಟ್ಟೆ!” ಎಂದು ಬಹುಬಾರಿ ಹೇಳಿಕೊಳ್ಳುತ್ತಾ ಆ ವಿದ್ವಾಂಸಿ ಸಂಶ್ರಿತನು ಗ್ರಾಮಕ್ಕೆ ಭಿಕ್ಷೆ ಬೇಡಲು ಹೋದನು.
03197007a ಗ್ರಾಮೇ ಶುಚೀನಿ ಪ್ರಚರನ್ಕುಲಾನಿ ಭರತರ್ಷಭ।
03197007c ಪ್ರವಿಷ್ಟಸ್ತತ್ಕುಲಂ ಯತ್ರ ಪೂರ್ವಂ ಚರಿತವಾಂಸ್ತು ಸಃ।।
ಭರತರ್ಷಭ! ಗ್ರಾಮದಲ್ಲಿ ಶುಚಿಯಾದ ಕುಲಗಳನ್ನು ಸುತ್ತಾಡಿಕೊಂಡು ಹಿಂದೆ ಭೇಟಿಕೊಟ್ಟಿದ್ದ ಕುಲವನ್ನು ಪ್ರವೇಶಿಸಿದನು.
03197008a ದೇಹೀತಿ ಯಾಚಮಾನೋ ವೈ ತಿಷ್ಠೇತ್ಯುಕ್ತಃ ಸ್ತ್ರಿಯಾ ತತಃ।
03197008c ಶೌಚಂ ತು ಯಾವತ್ಕುರುತೇ ಭಾಜನಸ್ಯ ಕುಟುಂಬಿನೀ।।
“ದೇಹಿ!” ಎಂದು ಬೇಡುತ್ತಾ ನಿಂತಿದ್ದ ಅವನಿಗೆ “ನಿಲ್ಲು!” ಎಂದು ಸ್ತ್ರೀಯು ಹೇಳಿ, ಆ ಕುಂಟುಂಬಿನಿಯು ಪಾತ್ರೆಯನ್ನು ತೊಳೆಯತೊಡಗಿದಳು.
03197009a ಏತಸ್ಮಿನ್ನಂತರೇ ರಾಜನ್ ಕ್ಷುಧಾಸಂಪೀಡಿತೋ ಭೃಶಂ।
03197009c ಭರ್ತಾ ಪ್ರವಿಷ್ಟಃ ಸಹಸಾ ತಸ್ಯಾ ಭರತಸತ್ತಮ।।
ರಾಜನ್! ಭರತಸತ್ತಮ! ಇದೇ ಸಮಯದಲ್ಲಿ ತುಂಬಾ ಹಸಿವೆಯಿಂದ ಬಳಲಿದ ಅವಳ ಪತಿಯು ಅವಸರದಲ್ಲಿ ಪ್ರವೇಶಿಸಿದನು.
03197010a ಸಾ ತು ದೃಷ್ಟ್ವಾ ಪತಿಂ ಸಾಧ್ವೀ ಬ್ರಾಹ್ಮಣಂ ವ್ಯಪಹಾಯ ತಂ।
03197010c ಪಾದ್ಯಮಾಚಮನೀಯಂ ಚ ದದೌ ಭರ್ತ್ರೇ ತಥಾಸನಂ।।
ಪತಿಯನ್ನು ನೋಡಿ ಆ ಸಾಧ್ವಿಯು ಬ್ರಾಹ್ಮಣನನ್ನು ಮರೆತುಬಿಟ್ಟಳು. ಗಂಡನಿಗೆ ಪಾದ್ಯ ಆಚಮನೀಯಗಳನ್ನೂ ಆಸನವನ್ನು ನೀಡಿದಳು.
03197011a ಪ್ರಹ್ವಾ ಪರ್ಯಚರಚ್ಚಾಪಿ ಭರ್ತಾರಮಸಿತೇಕ್ಷಣಾ।
03197011c ಆಹಾರೇಣಾಥ ಭಕ್ಷ್ಯೈಶ್ಚ ವಾಕ್ಯೈಃ ಸುಮಧುರೈಸ್ತಥಾ।।
ಆ ಕಪ್ಪುಕಣ್ಣಿನವಳು ವಿನಯದಿಂದ ಆಹಾರ-ಭಕ್ಷಗಳಿಂದ ಮತ್ತು ಸುಮಧುರ ಮಾತುಗಳಿಂದ ತನ್ನ ಪತಿಯ ಸೇವೆಗಳನ್ನು ಮಾಡಿದಳು.
03197012a ಉಚ್ಚಿಷ್ಟಂ ಭುಂಜತೇ ಭರ್ತುಃ ಸಾ ತು ನಿತ್ಯಂ ಯುಧಿಷ್ಠಿರ।
03197012c ದೈವತಂ ಚ ಪತಿಂ ಮೇನೇ ಭರ್ತುಶ್ಚಿತ್ತಾನುಸಾರಿಣೀ।।
ಯುಧಿಷ್ಠಿರ! ನಿತ್ಯವೂ ಅವಳು ಪತಿಯು ತಿಂದು ಬಿಟ್ಟುದುದನ್ನು ತಿನ್ನುತ್ತಿದ್ದಳು. ಪತಿಯು ದೇವರೆಂದು ತಿಳಿದು ಪತಿಯ ಮನಸ್ಸಿನಂತೆ ನಡೆದುಕೊಳ್ಳುತ್ತಿದ್ದಳು.
03197013a ನ ಕರ್ಮಣಾ ನ ಮನಸಾ ನಾತ್ಯಶ್ನಾನ್ನಾಪಿ ಚಾಪಿಬತ್।
03197013c ತಂ ಸರ್ವಭಾವೋಪಗತಾ ಪತಿಶುಶ್ರೂಷಣೇ ರತಾ।।
ಕರ್ಮದಲ್ಲಿಯಾಗಲೀ ಮನಸ್ಸಿನಲ್ಲಿಯಾಗಲೀ ಅವಳು ಅವನ ಮೊದಲು ಉಣ್ಣುತ್ತಿರಲಿಲ್ಲ; ಅವಳು ಎಲ್ಲ ಭಾವಗಳಲ್ಲಿ ಪತಿಯ ಸೇವೆಮಾಡುವುದರಲ್ಲಿ ಆನಂದ ಹೊಂದುತ್ತಿದ್ದಳು.
03197014a ಸಾಧ್ವಾಚಾರಾ ಶುಚಿರ್ದಕ್ಷಾ ಕುಟುಂಬಸ್ಯ ಹಿತೈಷಿಣೀ।
03197014c ಭರ್ತುಶ್ಚಾಪಿ ಹಿತಂ ಯತ್ತತ್ಸತತಂ ಸಾನುವರ್ತತೇ।।
ಒಳ್ಳೆಯ ನಡತೆಯ, ಶುಚಿ, ದಕ್ಷೆಯಾಗಿದ್ದು, ಕುಟುಂಬದ ಹಿತೈಷಿಣಿಯಾಗಿದ್ದು ಅವಳು ಸತತವೂ ತನ್ನ ಪತಿಯ ಒಳಿತಿಗಾಗಿ ನಡೆದುಕೊಳ್ಳುತ್ತಿದ್ದಳು.
03197015a ದೇವತಾತಿಥಿಭೃತ್ಯಾನಾಂ ಶ್ವಶ್ರೂಶ್ವಶುರಯೋಸ್ತಥಾ।
03197015c ಶುಶ್ರೂಷಣಪರಾ ನಿತ್ಯಂ ಸತತಂ ಸಂಯತೇಂದ್ರಿಯಾ।।
ಸತತವೂ ಇಂದ್ರಿಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ಅವಳು ದೇವತೆಗಳ, ಅತಿಥಿಗಳ, ಪತಿಯ, ಅತ್ತೆಮಾವಂದಿರ ಸೇವೆಯಲ್ಲಿ ನಿತ್ಯವೂ ನಿರತಳಾಗಿದ್ದಳು.
03197016a ಸಾ ಬ್ರಾಹ್ಮಣಂ ತದಾ ದೃಷ್ಟ್ವಾ ಸಂಸ್ಥಿತಂ ಭೈಕ್ಷಕಾಂಕ್ಷಿಣಂ।
03197016c ಕುರ್ವತೀ ಪತಿಶುಶ್ರೂಷಾಂ ಸಸ್ಮಾರಾಥ ಶುಭೇಕ್ಷಣಾ।।
ಅಗ ಪತಿಸೇವೆಯನ್ನು ಮಾಡುತ್ತಿದ್ದ ಆ ಶುಭೇಕ್ಷಣೆಯು ಭಿಕ್ಷೆಯನ್ನು ಬೇಡಿ ನಿಂತಿದ್ದ ಆ ಬ್ರಾಹ್ಮಣನನ್ನು ನೋಡಿ ನೆನಪಿಸಿಕೊಂಡಳು.
03197017a ವ್ರೀಡಿತಾ ಸಾಭವತ್ಸಾಧ್ವೀ ತದಾ ಭರತಸತ್ತಮ।
03197017c ಭಿಕ್ಷಾಮಾದಾಯ ವಿಪ್ರಾಯ ನಿರ್ಜಗಾಮ ಯಶಸ್ವಿನೀ।।
ಭರತಸತ್ತಮ! ಆಗ ಆ ಯಶಸ್ವಿನೀ ಸಾಧ್ವಿಯು ನಾಚಿಕೊಂಡು ವಿಪ್ರನಿಗೆ ಭಿಕ್ಷವನ್ನು ತೆಗೆದುಕೊಂಡು ಹೊರಬಂದಳು.
03197018 ಬ್ರಾಹ್ಮಣ ಉವಾಚ।
03197018a ಕಿಮಿದಂ ಭವತಿ ತ್ವಂ ಮಾಂ ತಿಷ್ಠೇತ್ಯುಕ್ತ್ವಾ ವರಾಂಗನೇ।
03197018c ಉಪರೋಧಂ ಕೃತವತೀ ನ ವಿಸರ್ಜಿತವತ್ಯಸಿ।।
ಬ್ರಾಹ್ಮಣನು ಹೇಳಿದನು: “ವರಾಂಗನೇ! ಇದೇನಾಯಿತು? ನನಗೆ ನಿಲ್ಲಲು ಹೇಳಿ, ಹೋಗು ಎಂದೂ ಹೇಳದೇ, ತಡಮಾಡಿದೆ!””
03197019 ಮಾರ್ಕಂಡೇಯ ಉವಾಚ।
03197019a ಬ್ರಾಹ್ಮಣಂ ಕ್ರೋಧಸಂತಪ್ತಂ ಜ್ವಲಂತಮಿವ ತೇಜಸಾ।
03197019c ದೃಷ್ಟ್ವಾ ಸಾಧ್ವೀ ಮನುಷ್ಯೇಂದ್ರ ಸಾಂತ್ವಪೂರ್ವಂ ವಚೋಽಬ್ರವೀತ್।।
ಮಾರ್ಕಂಡೇಯನು ಹೇಳಿದನು: “ಮನುಷ್ಯೇಂದ್ರ! ಕ್ರೋಧಸಂತಪ್ತನಾದ ಬ್ರಾಹ್ಮಣನು ತೇಜಸ್ಸಿನಿಂದ ಸುಟ್ಟುಬಿಡುವನೋ ಎಂದು ಅವಳನ್ನು ನೋಡಲು, ಸಾಧ್ವಿಯು ಸಾಂತ್ವನದ ಮಾತುಗಳನ್ನಾಡಿದಳು.
03197020a ಕ್ಷಂತುಮರ್ಹಸಿ ಮೇ ವಿಪ್ರ ಭರ್ತಾ ಮೇ ದೈವತಂ ಮಹತ್।
03197020c ಸ ಚಾಪಿ ಕ್ಷುಧಿತಃ ಶ್ರಾಂತಃ ಪ್ರಾಪ್ತಃ ಶುಶ್ರೂಷಿತೋ ಮಯಾ।।
“ವಿಪ್ರ! ಕ್ಷಮಿಸಬೇಕು. ನನಗೆ ನನ್ನ ಪತಿಯು ಮಹಾ ದೇವತೆ. ಅವನೂ ಕೂಡ ಹಸಿದಿದ್ದ, ಬಳಲಿದ್ದ. ಅವನಿಗೆ ನಾನು ಶುಶ್ರೂಷೆ ಮಾಡುತ್ತಿದ್ದೆ.”
03197021 ಬ್ರಾಹ್ಮಣ ಉವಾಚ।
03197021a ಬ್ರಾಹ್ಮಣಾ ನ ಗರೀಯಾಂಸೋ ಗರೀಯಾಂಸ್ತೇ ಪತಿಃ ಕೃತಃ।
03197021c ಗೃಹಸ್ಥಧರ್ಮೇ ವರ್ತಂತೀ ಬ್ರಾಹ್ಮಣಾನವಮನ್ಯಸೇ।।
ಬ್ರಾಹ್ಮಣನು ಹೇಳಿದನು: “ಬ್ರಾಹ್ಮಣರು ಹೆಚ್ಚಿನವರಲ್ಲವೇ? ನೀನು ನಿನ್ನ ಪತಿಯನ್ನು ಹೆಚ್ಚಿನವನನ್ನಾಗಿ ಮಾಡಿಬಿಟ್ಟೆಯಲ್ಲ! ಗೃಹಸ್ಥ ಧರ್ಮದಲ್ಲಿದ್ದುಕೊಂಡು ನೀನು ಬ್ರಾಹ್ಮಣನನ್ನು ಕೀಳಾಗಿ ಮಾಡಿಬಿಟ್ಟೆಯಲ್ಲ!
03197022a ಇಂದ್ರೋಽಪ್ಯೇಷಾಂ ಪ್ರಣಮತೇ ಕಿಂ ಪುನರ್ಮಾನುಷಾ ಭುವಿ।
03197022c ಅವಲಿಪ್ತೇ ನ ಜಾನೀಷೇ ವೃದ್ಧಾನಾಂ ನ ಶ್ರುತಂ ತ್ವಯಾ।
03197022e ಬ್ರಾಹ್ಮಣಾ ಹ್ಯಗ್ನಿಸದೃಶಾ ದಹೇಯುಃ ಪೃಥಿವೀಮಪಿ।।
ಇಂದ್ರನೇ ಅವನಿಗೆ ತಲೆಬಾಗುವಾಗ ಭುವಿಯಲ್ಲಿರುವ ಮನುಷ್ಯರೇನು? ಅವಲಿಪ್ತೇ! ನಿನಗೆ ಇದು ತಿಳಿದಿಲ್ಲವೇ? ಹಿರಿಯರಿಂದ ಇದನ್ನು ನೀನು ಕೇಳಿಲ್ಲವೇ? ಅಗ್ನಿಯಂತೆ ಬ್ರಾಹ್ಮಣರು ಇಡೀ ಭೂಮಿಯನ್ನೇ ಸುಡಬಲ್ಲರು!”
03197023 ಸ್ತ್ರೀ ಉವಾಚ।
03197023a ನಾವಜಾನಾಮ್ಯಹಂ ವಿಪ್ರಾನ್ದೇವೈಸ್ತುಲ್ಯಾನ್ಮನಸ್ವಿನಃ।
03197023c ಅಪರಾಧಮಿಮಂ ವಿಪ್ರ ಕ್ಷಂತುಮರ್ಹಸಿ ಮೇಽನಘ।।
ಸ್ತ್ರೀಯು ಹೇಳಿದಳು: “ವಿಪ್ರ! ಅನಘ! ನಾನು ದೇವಸಮರಾದ ಮನಸ್ವಿ ವಿಪ್ರರನ್ನು ಕೀಳಾಗಿ ನೋಡುತ್ತಿಲ್ಲ! ಈ ಅಪರಾಧವನ್ನು ಕ್ಷಮಿಸಬೇಕು.
03197024a ಜಾನಾಮಿ ತೇಜೋ ವಿಪ್ರಾಣಾಂ ಮಹಾಭಾಗ್ಯಂ ಚ ಧೀಮತಾಂ।
03197024c ಅಪೇಯಃ ಸಾಗರಃ ಕ್ರೋಧಾತ್ಕೃತೋ ಹಿ ಲವಣೋದಕಃ।।
ಧೀಮಂತ ಮಹಾಭಾಗ್ಯ ವಿಪ್ರರ ತೇಜಸ್ಸನ್ನು ತಿಳಿದಿದ್ದೇನೆ. ಕ್ರೋಧದಿಂದ ಅವರು ಸಾಗರವನ್ನು ಉಪ್ಪಾಗಿ, ಕುಡಿಯಲು ಅಯೋಗ್ಯವಾಗಿ ಮಾಡಿದರು.
03197025a ತಥೈವ ದೀಪ್ತತಪಸಾಂ ಮುನೀನಾಂ ಭಾವಿತಾತ್ಮನಾಂ।
03197025c ಯೇಷಾಂ ಕ್ರೋಧಾಗ್ನಿರದ್ಯಾಪಿ ದಂಡಕೇ ನೋಪಶಾಮ್ಯತಿ।।
ಹಾಗೆಯೇ ದೀಪ್ತತಪಸ್ವಿಗಳ, ಭಾವಿತಾತ್ಮ ಮುನಿಗಳ ಕ್ರೋಧಾಗ್ನಿಯು ಇಂದೂ ಕೂಡ ದಂಡಕದಲ್ಲಿ ಆರದೇ ಉರಿಯುತ್ತಿದೆ.
03197026a ಬ್ರಾಹ್ಮಣಾನಾಂ ಪರಿಭವಾದ್ವಾತಾಪಿಶ್ಚ ದುರಾತ್ಮವಾನ್।
03197026c ಅಗಸ್ತ್ಯಮೃಷಿಮಾಸಾದ್ಯ ಜೀರ್ಣಃ ಕ್ರೂರೋ ಮಹಾಸುರಃ।।
ಬ್ರಾಹ್ಮಣರನ್ನು ಪೀಡಿಸುತ್ತಿದ್ದ ದುರಾತ್ಮ ಕ್ರೂರ ಮಹಾಸುರ ವಾತಾಪಿಯೂ ಕೂಡ ಅಗಸ್ತ್ಯಮುನಿಗಳಿಂದ ಜೀರ್ಣಗೊಂಡನು.
03197027a ಪ್ರಭಾವಾ ಬಹವಶ್ಚಾಪಿ ಶ್ರೂಯಂತೇ ಬ್ರಹ್ಮವಾದಿನಾಂ।
03197027c ಕ್ರೋಧಃ ಸುವಿಪುಲೋ ಬ್ರಹ್ಮನ್ಪ್ರಸಾದಶ್ಚ ಮಹಾತ್ಮನಾಂ।।
ಬ್ರಹ್ಮನ್! ಬ್ರಹ್ಮವಾದಿಗಳ ಬಹಳಷ್ಟು ಪ್ರಭಾವಗಳ ಕುರಿತು ಕೇಳಿದ್ದೇವೆ. ಆ ಮಹಾತ್ಮರ ಕ್ರೋಧದಷ್ಟೇ ಪ್ರಸಾದವೂ ತುಂಬಾ ಫಲವನ್ನೀಯುತ್ತದೆ.
03197028a ಅಸ್ಮಿಂಸ್ತ್ವತಿಕ್ರಮೇ ಬ್ರಹ್ಮನ್ ಕ್ಷಂತುಮರ್ಹಸಿ ಮೇಽನಘ।
03197028c ಪತಿಶುಶ್ರೂಷಯಾ ಧರ್ಮೋ ಯಃ ಸ ಮೇ ರೋಚತೇ ದ್ವಿಜ।।
ಬ್ರಹ್ಮನ್! ಅನಘ! ಈ ಅತಿಕ್ರಮವನ್ನು ಕ್ಷಮಿಸಬೇಕು. ದ್ವಿಜ! ಪತಿಶುಶ್ರೂಷವೇ ನನ್ನ ಧರ್ಮವೆಂದು ನನಗನ್ನಿಸುತ್ತದೆ.
03197029a ದೈವತೇಷ್ವಪಿ ಸರ್ವೇಷು ಭರ್ತಾ ಮೇ ದೈವತಂ ಪರಂ।
03197029c ಅವಿಶೇಷೇಣ ತಸ್ಯಾಹಂ ಕುರ್ಯಾಂ ಧರ್ಮಂ ದ್ವಿಜೋತ್ತಮ।।
ಎಲ್ಲ ದೇವತೆಗಳಲ್ಲಿಯೂ ಕೂಡ ಪತಿಯು ನನ್ನ ಪರಮ ದೇವತೆ. ದ್ವಿಜೋತ್ತಮ! ಏನನ್ನೂ ಬಿಡದೇ ಅವನ ಧರ್ಮವನ್ನು ನಾನು ಮಾಡುತ್ತೇನೆ.
03197030a ಶುಶ್ರೂಷಾಯಾಃ ಫಲಂ ಪಶ್ಯ ಪತ್ಯುರ್ಬ್ರಾಹ್ಮಣ ಯಾದೃಶಂ।
03197030c ಬಲಾಕಾ ಹಿ ತ್ವಯಾ ದಗ್ಧಾ ರೋಷಾತ್ತದ್ವಿದಿತಂ ಮಮ।।
ಬ್ರಾಹ್ಮಣ! ಪತಿಯ ಶುಶ್ರೂಷೆಯ ಫಲವು ಎಂಥಹುದೆಂದು ನೋಡು! ನಿನ್ನ ರೋಷದಿಂದ ಬಲಾಕ ಪಕ್ಷಿಯೊಂದು ಸುಟ್ಟುಹೋಯಿತೆಂದು ನನಗೆ ತಿಳಿದಿದೆ.
03197031a ಕ್ರೋಧಃ ಶತ್ರುಃ ಶರೀರಸ್ಥೋ ಮನುಷ್ಯಾಣಾಂ ದ್ವಿಜೋತ್ತಮ।
03197031c ಯಃ ಕ್ರೋಧಮೋಹೌ ತ್ಯಜತಿ ತಂ ದೇವಾ ಬ್ರಾಹ್ಮಣಂ ವಿದುಃ।।
ದ್ವಿಜೋತ್ತಮ! ಕ್ರೋಧವು ಮನುಷ್ಯರ ಶರೀರದಲ್ಲಿರುವ ಶತ್ರು. ಕ್ರೋಧ ಮೋಹಗಳನ್ನು ತ್ಯಜಿಸಿದವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿಯುತ್ತಾರೆ.
03197032a ಯೋ ವದೇದಿಹ ಸತ್ಯಾನಿ ಗುರುಂ ಸಂತೋಷಯೇತ ಚ।
03197032c ಹಿಂಸಿತಶ್ಚ ನ ಹಿಂಸೇತ ತಂ ದೇವಾ ಬ್ರಾಹ್ಮಣಂ ವಿದುಃ।।
ಯಾರು ಸತ್ಯವನ್ನೇ ಮಾತನಾಡುತ್ತಾರೋ, ಗುರುವನ್ನು ಸಂತೋಷಪಡಿಸುತ್ತಾರೋ, ಮತ್ತು ಹಿಂಸೆಯನ್ನು ಹಿಂಸೆಯಿಂದ ಉತ್ತರಿಸುವುದಿಲ್ಲವೋ ಅಂಥವರನ್ನು ದೇವತೆಗಳು ಬ್ರಾಹ್ಮಣರೆಂದು ತಿಳಿಯುತ್ತಾರೆ.
03197033a ಜಿತೇಂದ್ರಿಯೋ ಧರ್ಮಪರಃ ಸ್ವಾಧ್ಯಾಯನಿರತಃ ಶುಚಿಃ।
03197033c ಕಾಮಕ್ರೋಧೌ ವಶೇ ಯಸ್ಯ ತಂ ದೇವಾ ಬ್ರಾಹ್ಮಣಂ ವಿದುಃ।।
ಜಿತೇಂದ್ರಿಯರನ್ನು, ಧರ್ಮಪರರನ್ನು, ಸ್ವಾಧ್ಯಾಯನಿರತರನ್ನು, ಶುಚಿಯಾಗಿರುವವರನ್ನು, ಮತ್ತು ಕಾಮಕ್ರೋಧಗಳನ್ನು ವಶದಲ್ಲಿಟ್ಟುಕೊಂಡವರನ್ನು ದೇವತೆಗಳು ಬ್ರಾಹ್ಮಣರೆಂದು ತಿಳಿದಿದ್ದಾರೆ.
03197034a ಯಸ್ಯ ಚಾತ್ಮಸಮೋ ಲೋಕೋ ಧರ್ಮಜ್ಞಸ್ಯ ಮನಸ್ವಿನಃ।
03197034c ಸರ್ವಧರ್ಮೇಷು ಚ ರತಸ್ತಂ ದೇವಾ ಬ್ರಾಹ್ಮಣಂ ವಿದುಃ।।
ಲೋಕಗಳನ್ನು ತನ್ನಂತಯೇ ಕಾಣುವ, ಮನಸ್ವಿ, ಧರ್ಮಜ್ಞ, ಸರ್ವಧರ್ಮಗಳನ್ನೂ ಪ್ರೀತಿಸುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.
03197035a ಯೋಽಧ್ಯಾಪಯೇದಧೀಯೀತ ಯಜೇದ್ವಾ ಯಾಜಯೀತ ವಾ।
03197035c ದದ್ಯಾದ್ವಾಪಿ ಯಥಾಶಕ್ತಿ ತಂ ದೇವಾ ಬ್ರಾಹ್ಮಣಂ ವಿದುಃ।।
ಕಲಿಸುವ ಮತ್ತು ಕಲಿಯುವ, ಯಜ್ಞಗಳನ್ನು ಮಾಡುವ ಮತ್ತು ಮಾಡಿಸುವ, ಶಕ್ತಿಯಿದ್ದಷ್ಟು ದಾನಮಾಡುವವನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.
03197036a ಬ್ರಹ್ಮಚಾರೀ ಚ ವೇದಾನ್ಯೋ ಅಧೀಯೀತ ದ್ವಿಜೋತ್ತಮಃ।
03197036c ಸ್ವಾಧ್ಯಾಯೇ ಚಾಪ್ರಮತ್ತೋ ವೈ ತಂ ದೇವಾ ಬ್ರಾಹ್ಮಣಂ ವಿದುಃ।।
ಬ್ರಹ್ಮಚಾರಿಯಾಗಿದ್ದು ಕೊಂಡು, ವೇದಗಳನ್ನು ಅಧ್ಯಯನ ಮಾಡುವ, ಸ್ವಾಧ್ಯಾಯದಲ್ಲಿ ಅಪ್ರಮತ್ತನಾಗದೇ ಇರುವ ದ್ವಿಜೋತ್ತಮನನ್ನು ದೇವತೆಗಳು ಬ್ರಾಹ್ಮಣನೆಂದು ತಿಳಿದಿದ್ದಾರೆ.
03197037a ಯದ್ಬ್ರಾಹ್ಮಣಾನಾಂ ಕುಶಲಂ ತದೇಷಾಂ ಪರಿಕೀರ್ತಯೇತ್।
03197037c ಸತ್ಯಂ ತಥಾ ವ್ಯಾಹರತಾಂ ನಾನೃತೇ ರಮತೇ ಮನಃ।।
ಬ್ರಾಹ್ಮಣರಿಗೆ ಕುಶಲವಾದುದೇನೆಂದು ಅವರೇ ಹೇಳುತ್ತಾರೆ. ಸತ್ಯದಲ್ಲಿಯೇ ವ್ಯವಹರಿಸುವ ಅವರ ಮನಸ್ಸು ಸುಳ್ಳಿನಲ್ಲಿ ಸಂತೋಷ ಹೊಂದುವುದಿಲ್ಲ.
03197038a ಧನಂ ತು ಬ್ರಾಹ್ಮಣಸ್ಯಾಹುಃ ಸ್ವಾಧ್ಯಾಯಂ ದಮಮಾರ್ಜವಂ।
03197038c ಇಂದ್ರಿಯಾಣಾಂ ನಿಗ್ರಹಂ ಚ ಶಾಶ್ವತಂ ದ್ವಿಜಸತ್ತಮ।
03197038e ಸತ್ಯಾರ್ಜವೇ ಧರ್ಮಮಾಹುಃ ಪರಂ ಧರ್ಮವಿದೋ ಜನಾಃ।।
ದ್ವಿಜಸತ್ತಮ! ಬ್ರಾಹ್ಮಣರ ಸಂಪತ್ತು ಅವರ ಸ್ವಾಧ್ಯಾಯ, ದಮ, ಆರ್ಜವ, ಮತ್ತು ಶಾಶ್ವತವಾದ ಇಂದ್ರಿಯಗಳ ನಿಗ್ರಹಗಳೆಂದು ಹೇಳುತ್ತಾರೆ. ಧರ್ಮವಿದರು ಸತ್ಯ ಮತ್ತು ಆರ್ಜವಗಳು ಪರಮ ಧರ್ಮವೆಂದು ಹೇಳುತ್ತಾರೆ.
03197039a ದುರ್ಜ್ಞೇಯಃ ಶಾಶ್ವತೋ ಧರ್ಮಃ ಸ ತು ಸತ್ಯೇ ಪ್ರತಿಷ್ಠಿತಃ।
03197039c ಶ್ರುತಿಪ್ರಮಾಣೋ ಧರ್ಮಃ ಸ್ಯಾದಿತಿ ವೃದ್ಧಾನುಶಾಸನಂ।।
ಶಾಶ್ವತವಾದ ಧರ್ಮವನ್ನು ತಿಳಿದುಕೊಳ್ಳುವುದು ಕಷ್ಟ. ಅದು ಸತ್ಯದಲ್ಲಿ ಪ್ರತಿಷ್ಠಿತವಾಗಿದೆ. ಧರ್ಮವು ಶ್ರುತಿಪ್ರಮಾಣವಾಗಿರಬೇಕೆಂದು ವೃದ್ಧರು ಉಪದೇಶಿಸುತ್ತಾರೆ.
03197040a ಬಹುಧಾ ದೃಶ್ಯತೇ ಧರ್ಮಃ ಸೂಕ್ಷ್ಮ ಏವ ದ್ವಿಜೋತ್ತಮ।
03197040c ಭವಾನಪಿ ಚ ಧರ್ಮಜ್ಞಃ ಸ್ವಾಧ್ಯಾಯನಿರತಃ ಶುಚಿಃ।
03197040e ನ ತು ತತ್ತ್ವೇನ ಭಗವನ್ಧರ್ಮಾನ್ವೇತ್ಸೀತಿ ಮೇ ಮತಿಃ।।
ದ್ವಿಜೋತ್ತಮ! ಬಹುಬಾರಿ ಧರ್ಮವು ಸೂಕ್ಷ್ಮವೆಂದು ತೋರುತ್ತದೆ. ನೀನಾದರೋ ಶುಚಿಯಾಗಿದ್ದು ಸ್ವಾಧ್ಯಾಯದಲ್ಲಿ ನಿರತನಾಗಿದ್ದು ಧರ್ಮವನ್ನು ತಿಳಿದುಕೊಂಡಿದ್ದೀಯೆ. ಭಗವನ್! ಆದರೂ ನೀನು ಧರ್ಮವನ್ನು ನಿಜವಾಗಿ ತಿಳಿದುಕೊಂಡಿಲ್ಲವೆಂದು ನನಗನ್ನಿಸುತ್ತದೆ.
03197041a ಮಾತಾಪಿತೃಭ್ಯಾಂ ಶುಶ್ರೂಷುಃ ಸತ್ಯವಾದೀ ಜಿತೇಂದ್ರಿಯಃ।
03197041c ಮಿಥಿಲಾಯಾಂ ವಸನ್ವ್ಯಾಧಃ ಸ ತೇ ಧರ್ಮಾನ್ಪ್ರವಕ್ಷ್ಯತಿ।
03197041e ತತ್ರ ಗಚ್ಚಸ್ವ ಭದ್ರಂ ತೇ ಯಥಾಕಾಮಂ ದ್ವಿಜೋತ್ತಮ।।
ಮಾತಾಪಿತೃಗಳ ಸೇವಾನಿರತನಾದ, ಸತ್ಯವಾದೀ, ಜಿತೇಂದ್ರಿಯ ವ್ಯಾಧನೊಬ್ಬನು ಮಿಥಿಲೆಯಲ್ಲಿ ವಾಸಿಸುತ್ತಾನೆ. ಅವನು ನಿನಗೆ ಧರ್ಮಗಳನ್ನು ತೋರಿಸಿಕೊಡುತ್ತಾನೆ. ದ್ವಿಜೋತ್ತಮ! ನಿನಗಿಷ್ಟವಾದರೆ ಅಲ್ಲಿಗೆ ಹೋಗು. ನಿನಗೆ ಮಂಗಳವಾಗಲಿ!
03197042a ಅತ್ಯುಕ್ತಮಪಿ ಮೇ ಸರ್ವಂ ಕ್ಷಂತುಮರ್ಹಸ್ಯನಿಂದಿತ।
03197042c ಸ್ತ್ರಿಯೋ ಹ್ಯವಧ್ಯಾಃ ಸರ್ವೇಷಾಂ ಯೇ ಧರ್ಮವಿದುಷೋ ಜನಾಃ।।
ಅನಿಂದಿತ! ನಾನು ಹೆಚ್ಚಾಗಿಯೇ ಮಾತನಾಡಿದ್ದಿದ್ದರೆ ಅವೆಲ್ಲವನ್ನೂ ಕ್ಷಮಿಸಬೇಕು. ಯಾಕೆಂದರೆ ಧರ್ಮವಿದುಷ ಜನರಿಗೆ ಸ್ತ್ರೀಯರು ಅವಧ್ಯರಲ್ಲವೇ?”
03197043 ಬ್ರಾಹ್ಮಣ ಉವಾಚ।
03197043a ಪ್ರೀತೋಽಸ್ಮಿ ತವ ಭದ್ರಂ ತೇ ಗತಃ ಕ್ರೋಧಶ್ಚ ಶೋಭನೇ।
03197043c ಉಪಾಲಂಭಸ್ತ್ವಯಾ ಹ್ಯುಕ್ತೋ ಮಮ ನಿಃಶ್ರೇಯಸಂ ಪರಂ।
03197043e ಸ್ವಸ್ತಿ ತೇಽಸ್ತು ಗಮಿಷ್ಯಾಮಿ ಸಾಧಯಿಷ್ಯಾಮಿ ಶೋಭನೇ।।
ಬ್ರಾಹ್ಮಣನು ಹೇಳಿದನು: “ಶೋಭನೇ! ನಿನಗೆ ಮಂಗಳವಾಗಲಿ. ನಿನ್ನಿಂದ ಸಂತೋಷಗೊಂಡಿದ್ದೇನೆ. ಸಿಟ್ಟು ಹೊರಟುಹೋಗಿದೆ. ನೀನು ನೀಡಿದ ಟೀಕೆಗಳು ನನಗೆ ಪರಮ ಶ್ರೇಯಸ್ಕರವಾದವುಗಳು. ಶೋಭನೇ! ನಾನು ಹೋಗಿ ಉತ್ತಮ ಪುರುಷನಾಗುವುದನ್ನು ಸಾಧಿಸುತ್ತೇನೆ.””
03197044 ಮಾರ್ಕಂಡೇಯ ಉವಾಚ।
03197044a ತಯಾ ವಿಸೃಷ್ಟೋ ನಿರ್ಗಮ್ಯ ಸ್ವಮೇವ ಭವನಂ ಯಯೌ।
03197044c ವಿನಿಂದನ್ಸ ದ್ವಿಜೋಽತ್ಮಾನಂ ಕೌಶಿಕೋ ನರಸತ್ತಮ।।
ಮಾರ್ಕಂಡೇಯನು ಹೇಳಿದನು: “ಅವಳಿಂದ ಬೀಳ್ಕೊಂಡು ಆ ದ್ವಿಜ ನರಸತ್ತಮ ಕೌಶಿಕನು ತನ್ನನ್ನು ತಾನೇ ನಿಂದಿಸಿಕೊಳ್ಳುತ್ತಾ ತನ್ನ ಮನೆಗೆ ಹಿಂದುರಿಗಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಪತಿವ್ರತೋಪಾಖ್ಯಾನೇ ಸಪ್ತನವತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ನೂರಾತೊಂಭತ್ತೇಳನೆಯ ಅಧ್ಯಾಯವು.