196 ಪತಿವ್ರತೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 196

ಸಾರ

ಉತ್ತಮ ಸ್ತ್ರೀಯರ ಮಹಾತ್ಮೆಯನ್ನು ಹೇಳೆಂದು ಯುಧಿಷ್ಠಿರನು ಕೇಳಲು (1=13) ಮಾರ್ಕಂಡೇಯನು ಪತಿವ್ರತಾ ಧರ್ಮದ ಕುರಿತು ಹೇಳುವುದು (14-21).

03196001 ವೈಶಂಪಾಯನ ಉವಾಚ।
03196001a ತತೋ ಯುಧಿಷ್ಠಿರೋ ರಾಜಾ ಮಾರ್ಕಂಡೇಯಂ ಮಹಾದ್ಯುತಿಂ।
03196001c ಪಪ್ರಚ್ಚ ಭರತಶ್ರೇಷ್ಠೋ ಧರ್ಮಪ್ರಶ್ನಂ ಸುದುರ್ವಚಂ।।

ವೈಶಂಪಾಯನನು ಹೇಳಿದನು: “ಆಗ ಭರತಶ್ರೇಷ್ಠ ರಾಜ ಯುಧಿಷ್ಠಿರನು ಮಹಾದ್ಯುತಿ ಮಾರ್ಕಂಡೇಯನನ್ನು ಒಳ್ಳೆಯ ಮಾತಿನಿಂದ ಧರ್ಮಪ್ರಶ್ನೆಯನ್ನು ಕೇಳಿದನು.

03196002a ಶ್ರೋತುಮಿಚ್ಚಾಮಿ ಭಗವನ್ಸ್ತ್ರೀಣಾಂ ಮಾಹಾತ್ಮ್ಯಮುತ್ತಮಂ।
03196002c ಕಥ್ಯಮಾನಂ ತ್ವಯಾ ವಿಪ್ರ ಸೂಕ್ಷ್ಮಂ ಧರ್ಮಂ ಚ ತತ್ತ್ವತಃ।।

“ಭಗವನ್! ವಿಪ್ರ! ನೀನು ಉತ್ತಮ ಸ್ತ್ರೀಯರ ಮಹಾತ್ಮೆಯನ್ನು ಮತ್ತು ಧರ್ಮ ಸೂಕ್ಷವನ್ನು ತತ್ವತವಾಗಿ ಹೇಳುವುದನ್ನು ಕೇಳಬಯಸುತ್ತೇನೆ.

03196003a ಪ್ರತ್ಯಕ್ಷೇಣ ಹಿ ವಿಪ್ರರ್ಷೇ ದೇವಾ ದೃಶ್ಯಂತಿ ಸತ್ತಮ।
03196003c ಸೂರ್ಯಾಚಂದ್ರಮಸೌ ವಾಯುಃ ಪೃಥಿವೀ ವಹ್ನಿರೇವ ಚ।।
03196004a ಪಿತಾ ಮಾತಾ ಚ ಭಗವನ್ಗಾವ ಏವ ಚ ಸತ್ತಮ।
03196004c ಯಚ್ಚಾನ್ಯದೇವ ವಿಹಿತಂ ತಚ್ಚಾಪಿ ಭೃಗುನಂದನ।।

ಭೃಗುನಂದನ! ವಿಪ್ರರ್ಷೇ! ಸತ್ತಮ! ಭಗವನ್! ದೇವತೆಗಳು, ಸೂರ್ಯ-ಚಂದ್ರರು, ವಾಯು, ಭೂಮಿ, ಅಗ್ನಿ ಮತ್ತು ಮಾತಾಪಿತೃಗಳು, ಗೋವುಗಳು, ಮತ್ತು ದೇವವೆಂದು ವಿಹಿತವಾಗಿರುವ ಎಲ್ಲವನ್ನೂ ನಾವು ಪ್ರತ್ಯಕ್ಷವಾಗಿಯೇ ಕಾಣುತ್ತೇವೆ.

03196005a ಮನ್ಯೇಽಹಂ ಗುರುವತ್ಸರ್ವಮೇಕಪತ್ನ್ಯಸ್ತಥಾ ಸ್ತ್ರಿಯಃ।
03196005c ಪತಿವ್ರತಾನಾಂ ಶುಶ್ರೂಷಾ ದುಷ್ಕರಾ ಪ್ರತಿಭಾತಿ ಮೇ।।

ಈ ಎಲ್ಲವನ್ನೂ ನಾನು ಗುರುವೆಂದು ಮನ್ನಿಸುತ್ತೇನೆ. ಹಾಗೆಯೇ ಪತ್ರಿವ್ರತೆಯರಾದ ಸ್ತ್ರೀಯರನ್ನು ಕೂಡ. ಪತಿವ್ರತೆಯರು ಮಾಡುವ ಶುಶ್ರೂಷೆಗಳು ದುಷ್ಕರವೆಂದು ನನಗನ್ನಿಸುತ್ತವೆ.

03196006a ಪತಿವ್ರತಾನಾಂ ಮಾಹಾತ್ಮ್ಯಂ ವಕ್ತುಮರ್ಹಸಿ ನಃ ಪ್ರಭೋ।
03196006c ನಿರುಧ್ಯ ಚೇಂದ್ರಿಯಗ್ರಾಮಂ ಮನಃ ಸಂರುಧ್ಯ ಚಾನಘ।।
03196006e ಪತಿಂ ದೈವತವಚ್ಚಾಪಿ ಚಿಂತಯಂತ್ಯಃ ಸ್ಥಿತಾ ಹಿ ಯಾಃ।।

ಪ್ರಭೋ! ಸದಾ ಪತಿಯೇ ದೈವವೆಂದು ಯೋಚಿಸುವ, ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸನ್ನು ನಿಯಂತ್ರಿಸಿರುವ ಪತಿವ್ರತೆಯರ ಮಹಾತ್ಮೆಯನ್ನು ಹೇಳಬೇಕು.

03196007a ಭಗವನ್ದುಷ್ಕರಂ ಹ್ಯೇತತ್ಪ್ರತಿಭಾತಿ ಮಮ ಪ್ರಭೋ।
03196007c ಮಾತಾಪಿತೃಷು ಶುಶ್ರೂಷಾ ಸ್ತ್ರೀಣಾಂ ಭರ್ತೃಷು ಚ ದ್ವಿಜ।।

ಭಗವನ್! ಪ್ರಭೋ! ದ್ವಿಜ! ಸ್ತ್ರೀಯರು ಮಾತಾ-ಪಿತೃಗಳ ಮತ್ತು ಪತಿಯ ಶುಶ್ರೂಷೆ ಮಾಡುವುದು ದುಷ್ಕರವೆಂದು ನನಗನ್ನಿಸುತ್ತದೆ.

03196008a ಸ್ತ್ರೀಣಾಂ ಧರ್ಮಾತ್ಸುಘೋರಾದ್ಧಿ ನಾನ್ಯಂ ಪಶ್ಯಾಮಿ ದುಷ್ಕರಂ।
03196008c ಸಾಧ್ವಾಚಾರಾಃ ಸ್ತ್ರಿಯೋ ಬ್ರಹ್ಮನ್ಯತ್ಕುರ್ವಂತಿ ಸದಾದೃತಾಃ।।
03196008e ದುಷ್ಕರಂ ಬತ ಕುರ್ವಂತಿ ಪಿತರೋ ಮಾತರಶ್ಚ ವೈ।।

ಬ್ರಹ್ಮನ್! ಸ್ತ್ರೀಯರ ಧರ್ಮಕ್ಕಿಂತ ಘೋರವೂ ದುಷ್ಕರವೂ ಆದ ಇನ್ನೊಂದನ್ನು ನಾನು ಕಾಣೆ. ಸದಾ ನಿಷ್ಠೆಯಿಂದ ಸದಾಚಾರ ಸ್ತ್ರೀಯರು ಏನನ್ನು ಮಾಡುತ್ತಾರೋ ಅದನ್ನು ತಂದೆ ತಾಯಂದಿರು ದುಷ್ಕರವನ್ನಾಗಿಸುತ್ತಾರೆ.

03196009a ಏಕಪತ್ನ್ಯಶ್ಚ ಯಾ ನಾರ್ಯೋ ಯಾಶ್ಚ ಸತ್ಯಂ ವದಂತ್ಯುತ।
03196009c ಕುಕ್ಷಿಣಾ ದಶ ಮಾಸಾಂಶ್ಚ ಗರ್ಭಂ ಸಂಧಾರಯಂತಿ ಯಾಃ।।
03196009e ನಾರ್ಯಃ ಕಾಲೇನ ಸಂಭೂಯ ಕಿಮದ್ಭುತತರಂ ತತಃ।।

ಸ್ತ್ರೀಯಾಗಿ ಹುಟ್ಟಿ, ಪತಿವ್ರತೆಯಾಗಿದ್ದು, ಸದಾ ಸತ್ಯವನ್ನೇ ಆಡಿಕೊಂಡು, ಹೊಟ್ಟೆಯಲ್ಲಿ ಹತ್ತು ತಿಂಗಳು ಗರ್ಭವನ್ನು ಧರಿಸುವುದಕ್ಕಿಂತ ಅದ್ಭುತವಾದುದು ಬೇರೆ ಏನಿದೆ?

03196010a ಸಂಶಯಂ ಪರಮಂ ಪ್ರಾಪ್ಯ ವೇದನಾಮತುಲಾಮಪಿ।
03196010c ಪ್ರಜಾಯಂತೇ ಸುತಾನ್ನಾರ್ಯೋ ದುಃಖೇನ ಮಹತಾ ವಿಭೋ।।
03196010e ಪುಷ್ಣಂತಿ ಚಾಪಿ ಮಹತಾ ಸ್ನೇಹೇನ ದ್ವಿಜಸತ್ತಮ।।

ವಿಭೋ! ದ್ವಿಜಸತ್ತಮ! ಪರಮ ಸಂಶಯವನ್ನು ಹೊಂದಿ, ಅತುಲ ವೇದನೆಯನ್ನನ್ನುಭವಿಸಿ ನಾರಿಯರು ಮಹಾ ದುಃಖದಿಂದ ಮಕ್ಕಳನ್ನು ಹಡೆಯುತ್ತಾರೆ ಮತ್ತು ಮಹಾ ಸ್ನೇಹದಿಂದ ಬೆಳೆಸುತ್ತಾರೆ.

03196011a ಯೇ ಚ ಕ್ರೂರೇಷು ಸರ್ವೇಷು ವರ್ತಮಾನಾ ಜುಗುಪ್ಸಿತಾಃ।
03196011c ಸ್ವಕರ್ಮ ಕುರ್ವಂತಿ ಸದಾ ದುಷ್ಕರಂ ತಚ್ಚ ಮೇ ಮತಂ।।

ಹಾಗೆಯೇ ಕ್ರೂರಕರ್ಮಗಳನ್ನು ಮಾಡುವ, ಎಲ್ಲರ ಜಿಗುಪ್ಸೆಗೆ ಪಾತ್ರರಾದವರೂ ಕೂಡ ಸದಾ ದುಷ್ಕರ ಸ್ವಕರ್ಮವನ್ನು ಮಾಡುತ್ತಿರುತ್ತಾರೆ ಎಂದು ನನಗನ್ನಿಸುತ್ತದೆ.

03196012a ಕ್ಷತ್ರಧರ್ಮಸಮಾಚಾರಂ ತಥ್ಯಂ ಚಾಖ್ಯಾಹಿ ಮೇ ದ್ವಿಜ।
03196012c ಧರ್ಮಃ ಸುದುರ್ಲಭೋ ವಿಪ್ರ ನೃಶಂಸೇನ ದುರಾತ್ಮನಾ।।

ದ್ವಿಜ! ಕ್ಷತ್ರಧರ್ಮವನ್ನು ಸದಾಚಾರದಲ್ಲಿರಿಸುಕೊಳ್ಳುವುದರ ಸತ್ಯವನ್ನೂ ನನಗೆ ಹೇಳು. ವಿಪ್ರ! ಕ್ರೂರ ಮತ್ತು ದುರಾತ್ಮನು ಧರ್ಮದಲ್ಲಿ ನಡೆದುಕೊಳ್ಳುವುದು ಕಷ್ಟ.

03196013a ಏತದಿಚ್ಚಾಮಿ ಭಗವನ್ಪ್ರಶ್ನಂ ಪ್ರಶ್ನವಿದಾಂ ವರ।
03196013c ಶ್ರೋತುಂ ಭೃಗುಕುಲಶ್ರೇಷ್ಠ ಶುಶ್ರೂಷೇ ತವ ಸುವ್ರತ।।

ಪ್ರಶ್ನೆಗಳನ್ನು ತಿಳಿದುಕೊಳ್ಳುವವರಲ್ಲಿ ಶ್ರೇಷ್ಠ! ಭಗವನ್! ಭೃಗುಕುಲಶ್ರೇಷ್ಠ! ಸುವ್ರತ! ಈ ಪ್ರಶ್ನೆಯ ಕುರಿತು ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.”

03196014 ಮಾರ್ಕಂಡೇಯ ಉವಾಚ।
03196014a ಹಂತ ತೇ ಸರ್ವಮಾಖ್ಯಾಸ್ಯೇ ಪ್ರಶ್ನಮೇತಂ ಸುದುರ್ವಚಂ।
03196014c ತತ್ತ್ವೇನ ಭರತಶ್ರೇಷ್ಠ ಗದತಸ್ತನ್ನಿಬೋಧ ಮೇ।।

ಮಾರ್ಕಂಡೇಯನು ಹೇಳಿದನು: “ಭರತಶ್ರೇಷ್ಠ! ನಿನ್ನ ಈ ಕಷ್ಟದ ಪ್ರಶ್ನೆಯನ್ನು ಉತ್ತರಿಸುತ್ತೇನೆ. ಸತ್ಯವನ್ನು ಹೇಳಿದಂತೆ ನನ್ನನ್ನು ಕೇಳು.

03196015a ಮಾತರಂ ಸದೃಶೀಂ ತಾತ ಪಿತೄನನ್ಯೇ ಚ ಮನ್ಯತೇ।
03196015c ದುಷ್ಕರಂ ಕುರುತೇ ಮಾತಾ ವಿವರ್ಧಯತಿ ಯಾ ಪ್ರಜಾಃ।।

ಮಗೂ! ಕೆಲವರು ತಾಯಿಯನ್ನು ಮತ್ತೆ ಕೆಲವರು ತಂದೆಯನ್ನು ಉಚ್ಛರೆಂದು ಪರಿಗಣಿಸುತ್ತಾರೆ. ಆದರೆ ಮಕ್ಕಳನ್ನು ಬೆಳೆಸುವ ದುಷ್ಕರ ಕಾರ್ಯವನ್ನು ತಾಯಂದಿರೇ ಮಾಡುತ್ತಾರೆ.

03196016a ತಪಸಾ ದೇವತೇಜ್ಯಾಭಿರ್ವಂದನೇನ ತಿತಿಕ್ಷಯಾ।
03196016c ಅಭಿಚಾರೈರುಪಾಯೈಶ್ಚ ಈಹಂತೇ ಪಿತರಃ ಸುತಾನ್।।

ತಪಸ್ಸಿನ ಮೂಲಕ, ದೇವತೆಗಳನ್ನು ಪೂಜಿಸಿ ವಂದಿಸುವುದರ ಮೂಲಕ, ಧೃಢತೆಯ ಮೂಲಕ, ಅಭಿಚಾರ ಉಪಾಯಗಳ ಮೂಲಕ ತಂದೆಯರು ಪುತ್ರರನ್ನು ಪಡೆಯಲು ಬಯಸುತ್ತಾರೆ.

03196017a ಏವಂ ಕೃಚ್ಚ್ರೇಣ ಮಹತಾ ಪುತ್ರಂ ಪ್ರಾಪ್ಯ ಸುದುರ್ಲಭಂ।
03196017c ಚಿಂತಯಂತಿ ಸದಾ ವೀರ ಕೀದೃಶೋಽಯಂ ಭವಿಷ್ಯತಿ।।

ವೀರ! ಈ ರೀತಿ ಮಹಾ ಕಷ್ಟಪಟ್ಟು ದುರ್ಲಭನಾದ ಪುತ್ರನನ್ನು ಪಡೆದು ಇವನು ಏನಾಗುತ್ತಾನೋ ಎಂದು ಸದಾ ಚಿಂತಿಸುತ್ತಿರುತ್ತಾರೆ.

03196018a ಆಶಂಸತೇ ಚ ಪುತ್ರೇಷು ಪಿತಾ ಮಾತಾ ಚ ಭಾರತ।
03196018c ಯಶಃ ಕೀರ್ತಿಮಥೈಶ್ವರ್ಯಂ ಪ್ರಜಾ ಧರ್ಮಂ ತಥೈವ ಚ।।

ಭಾರತ! ತಂದೆ-ತಾಯಿಯರು ತಮ್ಮ ಪುತ್ರರು ಯಶಸ್ಸು, ಕೀರ್ತಿ, ಐಶ್ವರ್ಯ ಮತ್ತು ಧರ್ಮದಲ್ಲಿ ಮಕ್ಕಳನ್ನೂ ಪಡೆಯಲೆಂದು ಆಶಿಸುತ್ತಾರೆ.

03196019a ತಯೋರಾಶಾಂ ತು ಸಫಲಾಂ ಯಃ ಕರೋತಿ ಸ ಧರ್ಮವಿತ್।
03196019c ಪಿತಾ ಮಾತಾ ಚ ರಾಜೇಂದ್ರ ತುಷ್ಯತೋ ಯಸ್ಯ ನಿತ್ಯದಾ।।
03196019e ಇಹ ಪ್ರೇತ್ಯ ಚ ತಸ್ಯಾಥ ಕೀರ್ತಿರ್ಧರ್ಮಶ್ಚ ಶಾಶ್ವತಃ।।

ರಾಜೇಂದ್ರ! ಅವರ ಆಶೆಗಳನ್ನು ಸಫಲಗೊಳಿಸುವವನು ಧರ್ಮವಿದು. ತಂದೆ-ತಾಯಿಯರನ್ನು ನಿತ್ಯವೂ ತೃಪ್ತಿಗೊಳಿಸುವವನು ಇಲ್ಲಿ ಮತ್ತು ಪರದಲ್ಲಿ ಶಾಶ್ವತ ಕೀರ್ತಿ-ಧರ್ಮಗಳನ್ನು ಪಡೆಯುತ್ತಾನೆ.

03196020a ನೈವ ಯಜ್ಞಃ ಸ್ತ್ರಿಯಃ ಕಶ್ಚಿನ್ನ ಶ್ರಾದ್ಧಂ ನೋಪವಾಸಕಂ।
03196020c ಯಾ ತು ಭರ್ತರಿ ಶುಶ್ರೂಷಾ ತಯಾ ಸ್ವರ್ಗಮುಪಾಶ್ನುತೇ।।

ಸ್ತ್ರೀಯರಿಗೆ ಯಜ್ಞ, ಶ್ರಾದ್ಧ, ಉಪವಾಸಗಳು ಉಪಯೋಗಕ್ಕೆ ಬರುವವಲ್ಲವು. ಪತಿಯ ಶುಶ್ರೂಷೆ ಮಾಡುವುದರಿಂದ ಅವಳಿಗೆ ಸ್ವರ್ಗವು ದೊರೆಯುತ್ತದೆ.

03196021a ಏತತ್ಪ್ರಕರಣಂ ರಾಜನ್ನಧಿಕೃತ್ಯ ಯುಧಿಷ್ಠಿರ।
03196021c ಪ್ರತಿವ್ರತಾನಾಂ ನಿಯತಂ ಧರ್ಮಂ ಚಾವಹಿತಃ ಶೃಣು।।

ರಾಜನ್! ಯುಧಿಷ್ಠಿರ! ಈ ವಿಷಯದಲ್ಲಿ ಪತಿವ್ರತೆಯರ ನಿಯತ ಧರ್ಮವನ್ನು ಗಮನವಿಟ್ಟು ಕೇಳು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಪತಿವ್ರತೋಪಾಖ್ಯಾನೇ ಷಟ್‌ನವತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಪತಿವ್ರತೋಪಾಖ್ಯಾನದಲ್ಲಿ ನೂರಾತೊಂಭತ್ತಾರನೆಯ ಅಧ್ಯಾಯವು.