194 ಧುಂಧುಮಾರೋಪಾಖ್ಯಾನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 194

ಸಾರ

ಆ ಕಾರ್ಯವನ್ನು ತನ್ನ ಮಗ ಕುವಲಾಶ್ವನು ಮಾಡುತ್ತಾನೆಂದು ಹೇಳಿ ಬೃಹದಶ್ವನು ತೆರಳಿದುದು (1-5). ಯುಧಿಷ್ಠಿರನು ಧುಂಧುವಿನ ಕುರಿತು ಕೇಳಲು ಮಾರ್ಕಂಡೇಯನು ಮಧು-ಕೈಟಭರು ವಿಷ್ಣುವಿನಿಂದ ವಧಿಸಲ್ಪಟ್ಟಿದುದನ್ನು ವರ್ಣಿಸಿದುದು (6-30).

03194001 ಮಾರ್ಕಂಡೇಯ ಉವಾಚ।
03194001a ಸ ಏವಮುಕ್ತೋ ರಾಜರ್ಷಿರುತ್ತಂಕೇನಾಪರಾಜಿತಃ।
03194001c ಉತ್ತಂಕಂ ಕೌರವಶ್ರೇಷ್ಠ ಕೃತಾಂಜಲಿರಥಾಬ್ರವೀತ್।।

ಮಾರ್ಕಂಡೇಯನು ಹೇಳಿದನು: “ಉತ್ತಂಕನು ಹೀಗೆ ಹೇಳಲು ಆ ಅಪರಾಜಿತ ರಾಜರ್ಷಿಯು ಅಂಜಲೀಬದ್ಧನಾಗಿ ಉತ್ತಂಕನಿಗೆ ಹೇಳಿದನು:

03194002a ನ ತೇಽಭಿಗಮನಂ ಬ್ರಹ್ಮನ್ಮೋಘಮೇತದ್ಭವಿಷ್ಯತಿ।
03194002c ಪುತ್ರೋ ಮಮಾಯಂ ಭಗವನ್ಕುವಲಾಶ್ವ ಇತಿ ಸ್ಮೃತಃ।।

“ಬ್ರಹ್ಮನ್! ನಿನ್ನ ಆಗಮನವು ವ್ಯರ್ಥವಾಗುವುದಿಲ್ಲ. ಭಗವನ್! ನನ್ನ ಪುತ್ರ ಕುವಲಾಶ್ವನೆಂದು ಪ್ರಸಿದ್ಧ.

03194003a ಧೃತಿಮಾನ್ ಕ್ಷಿಪ್ರಕಾರೀ ಚ ವೀರ್ಯೇಣಾಪ್ರತಿಮೋ ಭುವಿ।
03194003c ಪ್ರಿಯಂ ವೈ ಸರ್ವಮೇತತ್ತೇ ಕರಿಷ್ಯತಿ ನ ಸಂಶಯಃ।।

ಅವನು ಧೃತಿವಂತ, ಕ್ಷಿಪ್ರಕಾರಿ ಮತ್ತು ವೀರ್ಯದಲ್ಲಿ ಭೂಮಿಯಲ್ಲಿಯೇ ಅಪ್ರತಿಮ. ಇವನು ನಿನ್ನ ಸರ್ವ ಪ್ರಿಯ ಕಾರ್ಯಗಳನ್ನು ಮಾಡುತ್ತಾನೆ. ಸಂಶಯವಿಲ್ಲ.

03194004a ಪುತ್ರೈಃ ಪರಿವೃತಃ ಸರ್ವೈಃ ಶೂರೈಃ ಪರಿಘಬಾಹುಭಿಃ।
03194004c ವಿಸರ್ಜಯಸ್ವ ಮಾಂ ಬ್ರಹ್ಮನ್ನ್ಯಸ್ತಶಸ್ತ್ರೋಽಸ್ಮಿ ಸಾಂಪ್ರತಂ।।

ಅವನು ಎಲ್ಲ ಶೂರ ಪರಿಘಬಾಹು ಮಕ್ಕಳಿಂದ ಸುತ್ತುವರೆದಿದ್ದಾನೆ. ನನ್ನನ್ನು ಬಿಟ್ಟುಬಿಡು ಬ್ರಹ್ಮನ್! ನಾನು ನನ್ನ ಶಸ್ತ್ರಗಳನ್ನು ವಿಸರ್ಜಿಸಿದ್ದೇನೆ.”

03194005a ತಥಾಸ್ತ್ವಿತಿ ಚ ತೇನೋಕ್ತೋ ಮುನಿನಾಮಿತತೇಜಸಾ।
03194005c ಸ ತಮಾದಿಶ್ಯ ತನಯಮುತ್ತಂಕಾಯ ಮಹಾತ್ಮನೇ।।
03194005e ಕ್ರಿಯತಾಮಿತಿ ರಾಜರ್ಷಿರ್ಜಗಾಮ ವನಮುತ್ತಮಂ।।

ಹಾಗೆಯೆ ಆಗಲೆಂದು ಅಮಿತತೇಜಸ್ವಿ ಮುನಿಯು ಹೇಳಿದನು. ಆಗ ತನ್ನ ತನಯನನ್ನು ಮಹಾತ್ಮ ಉತ್ತಂಕನಿಗೆ ಒಪ್ಪಿಸಿ ಕಾರ್ಯವನ್ನು ನಡೆಸಿಕೊಡು ಎಂದು ಆದೇಶವನ್ನಿತ್ತು ರಾಜರ್ಷಿಯು ಉತ್ತಮ ವನಕ್ಕೆ ತೆರಳಿದನು.”

03194006 ಯುಧಿಷ್ಠಿರ ಉವಾಚ।
03194006a ಕ ಏಷ ಭಗವನ್ದೈತ್ಯೋ ಮಹಾವೀರ್ಯಸ್ತಪೋಧನ।
03194006c ಕಸ್ಯ ಪುತ್ರೋಽಥ ನಪ್ತಾ ವಾ ಏತದಿಚ್ಚಾಮಿ ವೇದಿತುಂ।।

ಯುದಿಷ್ಠಿರನು ಹೇಳಿದನು: “ಭಗವನ್! ತಪೋಧನ! ಈ ಮಹಾವೀರ್ಯ ದೈತ್ಯನು ಯಾರು? ಯಾರ ಮಗನಿವನು? ಇದನ್ನು ತಿಳಿಯಲು ಬಯಸುತ್ತೇನೆ.

03194007a ಏವಂ ಮಹಾಬಲೋ ದೈತ್ಯೋ ನ ಶ್ರುತೋ ಮೇ ತಪೋಧನ।
03194007c ಏತದಿಚ್ಚಾಮಿ ಭಗವನ್ಯಾಥಾತಥ್ಯೇನ ವೇದಿತುಂ।।
03194007e ಸರ್ವಮೇವ ಮಹಾಪ್ರಾಜ್ಞ ವಿಸ್ತರೇಣ ತಪೋಧನ।।

ತಪೋಧನ! ಮಹಾಪ್ರಾಜ್ಞ! ಈ ಮಹಾಬಲಿ ದೈತ್ಯನ ಕುರಿತು ನಾನು ಕೇಳಿಲ್ಲ. ಭಗವನ್! ಇವನ ಕುರಿತು ಯಥಾವತ್ತಾಗಿ ಎಲ್ಲವನ್ನೂ ವಿಸ್ತಾರದಲ್ಲಿ ತಿಳಿಯಲು ಬಯಸುತ್ತೇನೆ.”

03194008 ಮಾರ್ಕಂಡೇಯ ಉವಾಚ।
03194008a ಶೃಣು ರಾಜನ್ನಿದಂ ಸರ್ವಂ ಯಥಾವೃತ್ತಂ ನರಾಧಿಪ।
03194008c ಏಕಾರ್ಣವೇ ತದಾ ಘೋರೇ ನಷ್ಟೇ ಸ್ಥಾವರಜಂಗಮೇ।।
03194008e ಪ್ರನಷ್ಟೇಷು ಚ ಭೂತೇಷು ಸರ್ವೇಷು ಭರತರ್ಷಭ।।
03194009a ಪ್ರಭವಃ ಸರ್ವಭೂತಾನಾಂ ಶಾಶ್ವತಃ ಪುರುಷೋಽವ್ಯಯಃ।
03194009c ಸುಷ್ವಾಪ ಭಗವಾನ್ವಿಷ್ಣುರಪ್ಶಯ್ಯಾಮೇಕ ಏವ ಹ।।
03194009e ನಾಗಸ್ಯ ಭೋಗೇ ಮಹತಿ ಶೇಷಸ್ಯಾಮಿತತೇಜಸಃ।।

ಮಾರ್ಕಂಡೇಯನು ಹೇಳಿದನು: “ರಾಜನ್! ನರಾಧಿಪ! ನಡೆದಂತೆ ಎಲ್ಲವನ್ನೂ ಕೇಳು. ಭರತರ್ಷಭ! ಘೋರವಾದ ಸಾಗರವೊಂದೇ ಇದ್ದಾಗ, ಸ್ಥಾವರಜಂಗಮ ಸರ್ವ ಭೂತಗಳು ನಷ್ಟವಾಗಿದ್ದಾಗ, ಸರ್ವಭೂತಗಳ ಪ್ರಭವ, ಶಾಶ್ವತ, ಪುರುಷ, ಅವ್ಯಯ, ಭಗವಾನ್ ವಿಷ್ಣುವು ಈ ನೀರಿನ ಹಾಸಿಗೆಯ ಮೇಲೆ ಏಕಾಂಗಿಯಾಗಿ, ಅಮಿತ ತೇಜಸ್ವಿ ನಾಗ ಶೇಷನ ಸುರಳಿಯಲ್ಲಿ ಮಲಗಿದ್ದನು.

03194010a ಲೋಕಕರ್ತಾ ಮಹಾಭಾಗ ಭಗವಾನಚ್ಯುತೋ ಹರಿಃ।
03194010c ನಾಗಭೋಗೇನ ಮಹತಾ ಪರಿರಭ್ಯ ಮಹೀಮಿಮಾಂ।।

ಲೋಕಕರ್ತ, ಮಹಾಭಾಗ, ಭಗವಾನ, ಅಚ್ಯುತ ಹರಿಯು ನಾಗನ ಮಹಾಸುರುಳಿಯಲ್ಲಿ ಈ ಮಹಿಯನ್ನು ಸುತ್ತುವರೆದು ಮಲಗಿದ್ದನು.

03194011a ಸ್ವಪತಸ್ತಸ್ಯ ದೇವಸ್ಯ ಪದ್ಮಂ ಸೂರ್ಯಸಮಪ್ರಭಂ।
03194011c ನಾಭ್ಯಾಂ ವಿನಿಃಸೃತಂ ತತ್ರ ಯತ್ರೋತ್ಪನ್ನಃ ಪಿತಾಮಹಃ।।
03194011e ಸಾಕ್ಷಾಲ್ಲೋಕಗುರುರ್ಬ್ರಹ್ಮಾ ಪದ್ಮೇ ಸೂರ್ಯೇಂದುಸಪ್ರಭೇ।।
03194012a ಚತುರ್ವೇದಶ್ಚತುರ್ಮೂರ್ತಿಸ್ತಥೈವ ಚ ಚತುರ್ಮುಖಃ।
03194012c ಸ್ವಪ್ರಭಾವಾದ್ದುರಾಧರ್ಷೋ ಮಹಾಬಲಪರಾಕ್ರಮಃ।।

ದೇವನು ಮಲಗಿರಲು ಅವನ ಹೊಕ್ಕಳಿನಿಂದ ಸೂರ್ಯಸಮಪ್ರಭೆಯ ಪದ್ಮವು ಅರಳಿತು. ಸೂರ್ಯ-ಚಂದ್ರರ ಪ್ರಭೆಯುಳ್ಳ ಆ ಪದ್ಮದಲ್ಲಿ ಸಾಕ್ಷಾತ್ ಲೋಕಗುರು ಪಿತಾಮಹ ಬ್ರಹ್ಮನು - ಚತುರ್ವೇದ, ಚತುರ್ಮೂರ್ತಿ, ಚತುರ್ಮುಖ, ಸ್ವಪ್ರಭಾವದಿಂದ ದುರಾಧರ್ಷ ಮಹಾಬಲಪರಾಕ್ರಮಿಯು - ಉತ್ಪನ್ನನಾದನು.

03194013a ಕಸ್ಯ ಚಿತ್ತ್ವಥ ಕಾಲಸ್ಯ ದಾನವೌ ವೀರ್ಯವತ್ತರೌ।
03194013c ಮಧುಶ್ಚ ಕೈಟಭಶ್ಚೈವ ದೃಷ್ಟವಂತೌ ಹರಿಂ ಪ್ರಭುಂ।।
03194014a ಶಯಾನಂ ಶಯನೇ ದಿವ್ಯೇ ನಾಗಭೋಗೇ ಮಹಾದ್ಯುತಿಂ।
03194014c ಬಹುಯೋಜನವಿಸ್ತೀರ್ಣೇ ಬಹುಯೋಜನಮಾಯತೇ।।
03194015a ಕಿರೀಟಕೌಸ್ತುಭಧರಂ ಪೀತಕೌಶೇಯವಾಸಸಂ।
03194015c ದೀಪ್ಯಮಾನಂ ಶ್ರಿಯಾ ರಾಜಂಸ್ತೇಜಸಾ ವಪುಷಾ ತಥಾ।।
03194015e ಸಹಸ್ರಸೂರ್ಯಪ್ರತಿಮಮದ್ಭುತೋಪಮದರ್ಶನಂ।।

ಇದೇ ಕಾಲದಲ್ಲಿ ವೀರ್ಯವಂತರಾದ ಮಧು-ಕೈಟಭರು ಜನಿಸಿದರು. ಮಧು-ಕೈಟಭರು ಬಹುಯೋಜನ ವಿಸ್ತೀರ್ಣದ ಬಹು ಯೋಜನ ಅಗಲದ ದಿವ್ಯವಾದ ನಾಗಭೋಗದ ಶಯನದಲ್ಲಿ ಮಲಗಿದ್ದ ಮಹಾದ್ಯುತಿ, ಕಿರೀಟ-ಕೌಸ್ತುಭಗಳನ್ನು ಧರಿಸಿದ್ದ, ಪೀತಕೌಶೇಯವನ್ನು ಉಟ್ಟಿದ್ದ, ಸಹಸ್ರಸೂರ್ಯಪ್ರತಿಮನಾದ, ಅದ್ಭುತವಾಗಿ ತೋರುತ್ತಿದ್ದ ಹರಿ ಪ್ರಭುವನ್ನು ನೋಡಿದರು.

03194016a ವಿಸ್ಮಯಃ ಸುಮಹಾನಾಸೀನ್ಮಧುಕೈಟಭಯೋಸ್ತದಾ।
03194016c ದೃಷ್ಟ್ವಾ ಪಿತಾಮಹಂ ಚೈವ ಪದ್ಮೇ ಪದ್ಮನಿಭೇಕ್ಷಣಂ।।

ಪದ್ಮದಲ್ಲಿ ಪದ್ಮನಿಭೇಕ್ಷಣ ಪಿತಾಮಹನನ್ನು ನೋಡಿ ಮಧು-ಕೈಟಭರಿಗೆ ಮಹಾ ವಿಸ್ಮಯವುಂಟಾಯಿತು.

03194017a ವಿತ್ರಾಸಯೇತಾಮಥ ತೌ ಬ್ರಹ್ಮಾಣಮಮಿತೌಜಸಂ।
03194017c ವಿತ್ರಾಸ್ಯಮಾನೋ ಬಹುಶೋ ಬ್ರಹ್ಮಾ ತಾಭ್ಯಾಂ ಮಹಾಯಶಾಃ।।
03194017e ಅಕಂಪಯತ್ಪದ್ಮನಾಲಂ ತತೋಽಬುಧ್ಯತ ಕೇಶವಃ।।

ಅವರಿಬ್ಬರೂ ಆಗ ಅಮಿತೌಜಸ ಬ್ರಹ್ಮನನ್ನು ಪೀಡಿಸತೊಡಗಿದರು. ಆ ಮಹಾಯಶರಿಂದ ಬಹಳಷ್ಟು ಪೀಡಿತನಾದ ಬ್ರಹ್ಮನು ಪದ್ಮದ ತೊಟ್ಟನ್ನು ಅಲುಗಾಡಿಸಲು, ಅದರಿಂದ ಕೇಶವನು ಎಚ್ಚೆತ್ತನು.

03194018a ಅಥಾಪಶ್ಯತ ಗೋವಿಂದೋ ದಾನವೌ ವೀರ್ಯವತ್ತರೌ।
03194018c ದೃಷ್ಟ್ವಾ ತಾವಬ್ರವೀದ್ದೇವಃ ಸ್ವಾಗತಂ ವಾಂ ಮಹಾಬಲೌ।।
03194018e ದದಾನಿ ವಾಂ ವರಂ ಶ್ರೇಷ್ಠಂ ಪ್ರೀತಿರ್ಹಿ ಮಮ ಜಾಯತೇ।।

ಆಗ ಗೋವಿಂದನು ವೀರ್ಯವತ್ತರರಾದ ಈರ್ವರು ದಾನವರನ್ನು ನೋಡಿದನು. ನೋಡಿ ಅವರಿಗೆ ದೇವನು ಹೇಳಿದನು: “ನೀವಿಬ್ಬರು ಮಹಾಬಲರಿಗೆ ಸ್ವಾಗತ! ಶ್ರೇಷ್ಠವಾದ ವರವನ್ನು ನೀಡುತ್ತೇನೆ. ನಿಮ್ಮಮೇಲೆ ನನಗೆ ಪ್ರೀತಿಯುಂಟಾಗಿದೆ.”

03194019a ತೌ ಪ್ರಹಸ್ಯ ಹೃಷೀಕೇಶಂ ಮಹಾವೀರ್ಯೌ ಮಹಾಸುರೌ।
03194019c ಪ್ರತ್ಯಬ್ರೂತಾಂ ಮಹಾರಾಜ ಸಹಿತೌ ಮಧುಸೂದನಂ।।

ಮಹಾರಾಜ! ಆ ಮಹಾವೀರ್ಯ ಮಹಾಸುರರು ಹೃಷೀಕೇಶನ ಮೇಲೇ ನಗತೊಡಗಿದರು. ಒಟ್ಟಿಗೇ ಮಧುಸೂದನನಿಗೆ ಉತ್ತರಿಸಿದರು.

03194020a ಆವಾಂ ವರಯ ದೇವ ತ್ವಂ ವರದೌ ಸ್ವಃ ಸುರೋತ್ತಮ।
03194020c ದಾತಾರೌ ಸ್ವೋ ವರಂ ತುಭ್ಯಂ ತದ್ಬ್ರವೀಹ್ಯವಿಚಾರಯನ್।।

“ದೇವ! ಸುರೋತ್ತಮ! ನೀನೇ ನಮ್ಮಲ್ಲಿ ವರವನ್ನು ಕೇಳು! ನಾವೇ ನಿನಗೆ ನಿಜಯಾಗಿಯೂ ವರವನ್ನು ನೀಡುತ್ತೇವೆ. ವಿಚಾರಿಸದೇ ಕೇಳು.”

03194021 ಭಗವಾನುವಾಚ।
03194021a ಪ್ರತಿಗೃಹ್ಣೇ ವರಂ ವೀರಾವೀಪ್ಸಿತಶ್ಚ ವರೋ ಮಮ।
03194021c ಯುವಾಂ ಹಿ ವೀರ್ಯಸಂಪನ್ನೌ ನ ವಾಮಸ್ತಿ ಸಮಃ ಪುಮಾನ್।।

ಭಗವಂತನು ಹೇಳಿದನು: “ವೀರರೇ! ನಿಮ್ಮ ವರವನ್ನು ಸ್ವೀಕರಿಸುತ್ತೇನೆ. ನಾನು ಬಯಸುವ ವರವೊಂದಿದೆ. ನೀವಿಬ್ಬರೂ ವೀರ್ಯ ಸಂಪನ್ನರು. ನಿಮ್ಮ ಸಮನಾದ ಪುರುಷನು ಇಲ್ಲವೇ ಇಲ್ಲ.

03194022a ವಧ್ಯತ್ವಮುಪಗಚ್ಚೇತಾಂ ಮಮ ಸತ್ಯಪರಾಕ್ರಮೌ।
03194022c ಏತದಿಚ್ಚಾಮ್ಯಹಂ ಕಾಮಂ ಪ್ರಾಪ್ತುಂ ಲೋಕಹಿತಾಯ ವೈ।।

ಸತ್ಯಪರಾಕ್ರಮಿಗಳಾದ ನೀವಿಬ್ಬರೂ ನನ್ನ ಕೈಗಳಿಂದ ವಧಿಸಲ್ಪಡಿರಿ. ಲೋಕಕ್ಕೆ ಹಿತವನ್ನುಂಟುಮಾಡಲು ಬಯಸಿ ನಾನು ಇದನ್ನು ಇಚ್ಛಿಸುತ್ತೇನೆ.”

03194023 ಮಧುಕೈಟಭೌ ಊಚತುಃ।
03194023a ಅನೃತಂ ನೋಕ್ತಪೂರ್ವಂ ನೌ ಸ್ವೈರೇಷ್ವಪಿ ಕುತೋಽನ್ಯಥಾ।
03194023c ಸತ್ಯೇ ಧರ್ಮೇ ಚ ನಿರತೌ ವಿದ್ಧ್ಯಾವಾಂ ಪುರುಷೋತ್ತಮ।।

ಮಧು-ಕೈಟಭರು ಹೇಳಿದರು: “ವಿನೋದಕ್ಕಾಗಿಯಾದರೂ ನಾವು ಇದೂವರೆಗೆ ಸುಳ್ಳನ್ನು ಹೇಳಲಿಲ್ಲ. ಅನ್ಯಥಾ ಏನು? ಪುರುಷೋತ್ತಮ! ನಾವಿಬ್ಬರೂ ಸತ್ಯ ಮತ್ತು ಧರ್ಮಗಳಲ್ಲಿ ನಿರತರಾಗಿದ್ದೇವೆಂದು ತಿಳಿ.

03194024a ಬಲೇ ರೂಪೇ ಚ ವೀರ್ಯೇ ಚ ಶಮೇ ಚ ನ ಸಮೋಽಸ್ತಿ ನೌ।
03194024c ಧರ್ಮೇ ತಪಸಿ ದಾನೇ ಚ ಶೀಲಸತ್ತ್ವದಮೇಷು ಚ।।

ಬಲದಲ್ಲಿ, ರೂಪದಲ್ಲಿ, ವೀರ್ಯದಲ್ಲಿ, ಶಮದಲ್ಲಿ, ಧರ್ಮದಲ್ಲಿ, ತಪಸ್ಸಿನಲ್ಲಿ, ಶೀಲ, ಸತ್ವ, ದಮಗಳಲ್ಲಿ ನಮ್ಮೀರ್ವರ ಸಮರಿಲ್ಲ.

03194025a ಉಪಪ್ಲವೋ ಮಹಾನಸ್ಮಾನುಪಾವರ್ತತ ಕೇಶವ।
03194025c ಉಕ್ತಂ ಪ್ರತಿಕುರುಷ್ವ ತ್ವಂ ಕಾಲೋ ಹಿ ದುರತಿಕ್ರಮಃ।।

ಕೇಶವ! ಒಂದು ಮಹಾ ಉಪಪ್ಲವವು ನಮಗೆ ಬಂದೊದಗಿದೆ. ಆದರೆ ನೀನು ಹೇಳಿದಂತೆ ಮಾಡು. ಕಾಲವನ್ನು ಅತಿಕ್ರಮಿಸಲು ಸಾಧ್ಯವಿಲ್ಲ.

03194026a ಆವಾಮಿಚ್ಚಾವಹೇ ದೇವ ಕೃತಮೇಕಂ ತ್ವಯಾ ವಿಭೋ।
03194026c ಅನಾವೃತೇಽಸ್ಮಿನ್ನಾಕಾಶೇ ವಧಂ ಸುರವರೋತ್ತಮ।।

ಆದರೆ ದೇವ! ವಿಭೋ! ನಿನ್ನಿಂದ ಒಂದು ಆಗಬೇಕೆಂದು ಬಯಸುತ್ತೇವೆ. ಸುರವರೋತ್ತಮ! ಆಕಾಶವು ಅನಾವೃತವಾದಲ್ಲಿ ನಮ್ಮನ್ನು ವಧಿಸು.

03194027a ಪುತ್ರತ್ವಮಭಿಗಚ್ಚಾವ ತವ ಚೈವ ಸುಲೋಚನ।
03194027c ವರ ಏಷ ವೃತೋ ದೇವ ತದ್ವಿದ್ಧಿ ಸುರಸತ್ತಮ।।

ಸುಲೋಚನ! ನಿನ್ನ ಪುತ್ರರಾಗಲು ಬಯಸುತ್ತೇವೆ. ದೇವ! ಸುರಸತ್ತಮ! ಇದೇ ನಮ್ಮ ವರವೆಂದು ತಿಳಿ.”

03194028 ಭಗವಾನುವಾಚ।
03194028a ಬಾಢಮೇವಂ ಕರಿಷ್ಯಾಮಿ ಸರ್ವಮೇತದ್ ಭವಿಷ್ಯತಿ।

ಭಗವಂತನು ಹೇಳಿದನು: “ಅವಶ್ಯವಾಗಿ ನಾನು ಅದನ್ನು ಮಾಡುತ್ತೇನೆ. ಎಲ್ಲವೂ ಹಾಗೆಯೇ ಆಗುತ್ತದೆ.””

03194029 ಮಾರ್ಕಂಡೇಯ ಉವಾಚ।
03194029a ವಿಚಿಂತ್ಯ ತ್ವಥ ಗೋವಿಂದೋ ನಾಪಶ್ಯದ್ಯದನಾವೃತಂ।
03194029c ಅವಕಾಶಂ ಪೃಥಿವ್ಯಾಂ ವಾ ದಿವಿ ವಾ ಮಧುಸೂದನಃ।।

ಮಾರ್ಕಂಡೇಯನು ಹೇಳಿದನು: “ಆಗ ಮಧುಸೂದನ ಗೋವಿಂದನು ಅನಾವೃತವಾದ ಅವಕಾಶವನ್ನು ಭೂಮಿಯಲ್ಲಾಗಲೀ ದಿವಿಯಲ್ಲಾಗಲೇ ಕಾಣದೇ ಚಿಂತಿಸಿದನು.

03194030a ಸ್ವಕಾವನಾವೃತಾವೂರೂ ದೃಷ್ಟ್ವಾ ದೇವವರಸ್ತದಾ।
03194030c ಮಧುಕೈಟಭಯೋ ರಾಜಂ ಶಿರಸೀ ಮಧುಸೂದನಃ।।
03194030e ಚಕ್ರೇಣ ಶಿತಧಾರೇಣ ನ್ಯಕೃಂತತ ಮಹಾಯಶಾಃ।।

ರಾಜನ್! ಆಗ ಅನಾವೃತವಾಗಿದ್ದ ತನ್ನ ತೊಡೆಗಳನ್ನೇ ನೋಡಿ, ದೇವವರ ಮಧುಸೂದನನು ಮಹಾಯಶ ಮಧು-ಕೈಟಭರ ಶಿರಗಳನ್ನು ಹರಿತವಾದ ಚಕ್ರದಿಂದ ಕತ್ತರಿಸಿದನು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಧುಂಧುಮಾರೋಪಾಖ್ಯಾನೇ ಚತುರ್ನವತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಧುಂಧುಮಾರೋಪಾಖ್ಯಾನದಲ್ಲಿ ನೂರಾತೊಂಭತ್ನಾಲ್ಕನೆಯ ಅಧ್ಯಾಯವು.