ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 192
ಸಾರ
ಇಕ್ಷ್ವಾಕು ರಾಜ ಕುವಲಾಶ್ವನು ಹೇಗೆ ಧುಂಧುಮಾರನೆಂದಾದನೆಂದು ಯುಧಿಷ್ಠಿರನು ಕೇಳಲು ಮಾರ್ಕಂಡೇಯನು ಧುಂಧುಮಾರನ ಚರಿತ್ರೆಯನ್ನು ಹೇಳುವುದು (1-7). ಮರುಭೂಮಿಯಲ್ಲಿ ತಪಸ್ಸನ್ನಾಚರಿಸಿದ ಮಹರ್ಷಿ ಉತ್ತಂಕನಿಗೆ ವಿಷ್ಣುವು ಪ್ರತ್ಯಕ್ಷನಾಗಿ ತಪಸ್ಸನ್ನಾಚರಿಸುತ್ತಿದ್ದ ಧುಂಧು ಎಂಬ ಅಸುರನ ಮೃತ್ಯುವಿಗೆ ಉತ್ತಂಕನೂ ಕುವಲಾಶ್ವನೂ ಕಾರಣರಾಗುತ್ತಾರೆ ಎಂದು ವರವನ್ನು ನೀಡಿದುದು (8-29).
03192001 ವೈಶಂಪಾಯನ ಉವಾಚ।
03192001a ಯುಧಿಷ್ಠಿರೋ ಧರ್ಮರಾಜಃ ಪಪ್ರಚ್ಚ ಭರತರ್ಷಭ।
03192001c ಮಾರ್ಕಂಡೇಯಂ ತಪೋವೃದ್ಧಂ ದೀರ್ಘಾಯುಷಮಕಲ್ಮಷಂ।।
ವೈಶಂಪಾಯನನು ಹೇಳಿದನು: “ಭರತರ್ಷಭ! ಧರ್ಮರಾಜ ಯುಧಿಷ್ಠಿರನು ತಪೋವೃದ್ಧ, ಅಕಲ್ಮಷ, ದೀರ್ಘಾಯು ಮಾರ್ಕಂಡೇಯನಲ್ಲಿ ಪುನಃ ಕೇಳಿದನು:
03192002a ವಿದಿತಾಸ್ತವ ಧರ್ಮಜ್ಞ ದೇವದಾನವರಾಕ್ಷಸಾಃ।
03192002c ರಾಜವಂಶಾಶ್ಚ ವಿವಿಧಾ ಋಷಿವಂಶಾಶ್ಚ ಶಾಶ್ವತಾಃ।।
03192002e ನ ತೇಽಸ್ತ್ಯವಿದಿತಂ ಕಿಂ ಚಿದಸ್ಮಿಽಲ್ಲೋಕೇ ದ್ವಿಜೋತ್ತಮ।।
“ಧರ್ಮಜ್ಞ! ನಿನಗೆ ದೇವ, ದಾನವ, ರಾಕ್ಷಸರ ಮತ್ತು ಶಾಶ್ವತವಾಗಿರುವ ವಿವಿಧ ರಾಜವಂಶಗಳ ಋಷಿವಂಶಗಳ ಕುರಿತು ತಿಳಿದಿದೆ. ದ್ವಿಜೋತ್ತಮ! ಈ ಲೋಕದಲ್ಲಿ ನಿನಗೆ ತಿಳಿಯದೇ ಇರುವುದು ಯಾವುದೂ ಇಲ್ಲ.
03192003a ಕಥಾಂ ವೇತ್ಸಿ ಮುನೇ ದಿವ್ಯಾಂ ಮನುಷ್ಯೋರಗರಕ್ಷಸಾಂ।
03192003c ಏತದಿಚ್ಚಾಮ್ಯಹಂ ಶ್ರೋತುಂ ತತ್ತ್ವೇನ ಕಥಿತಂ ದ್ವಿಜ।।
ಮುನೇ! ದೇವತೆಗಳ, ಮನುಷ್ಯರ, ಉರಗ ರಾಕ್ಷಸರ ದಿವ್ಯ ಕಥೆಗಳು ನಿನಗೆ ತಿಳಿದಿವೆ. ದ್ವಿಜ! ನಿನ್ನಿಂದ ಈ ವಿಷಯದ ಕುರಿತು ನೀನು ಹೇಳುವುದನ್ನು ಕೇಳಲು ಬಯಸುತ್ತೇನೆ.
03192004a ಕುವಲಾಶ್ವ ಇತಿ ಖ್ಯಾತ ಇಕ್ಷ್ವಾಕುರಪರಾಜಿತಃ।
03192004c ಕಥಂ ನಾಮ ವಿಪರ್ಯಾಸಾದ್ಧುಂಧುಮಾರತ್ವಮಾಗತಃ।।
ಕುವಲಾಶ್ವನೆಂದು ಪ್ರಖ್ಯಾತನಾದ ಅಪರಾಜಿತ ಇಕ್ಷ್ವಾಕುವು ಹೇಗೆ ಹೆಸರನ್ನು ಬದಲಾಯಿಸಿಕೊಂಡು ದುಂಧುಮಾರನಾದ?
03192005a ಏತದಿಚ್ಚಾಮಿ ತತ್ತ್ವೇನ ಜ್ಞಾತುಂ ಭಾರ್ಗವಸತ್ತಮ।
03192005c ವಿಪರ್ಯಸ್ತಂ ಯಥಾ ನಾಮ ಕುವಲಾಶ್ವಸ್ಯ ಧೀಮತಃ।।
ಭಾರ್ಗವಸತ್ತಮ! ಇದನ್ನು ತತ್ವದಿಂದ ನಿನ್ನಿಂದ ಕೇಳಬಯಸುತ್ತೇನೆ. ಧೀಮತ ಕುವಲಾಶ್ವನ ಹೆಸರನ್ನು ಏಕೆ ಬದಲಾಯಿಸಲಾಯಿತು?”
03192006 ಮಾರ್ಕಂಡೇಯ ಉವಾಚ।
03192006a ಹಂತ ತೇ ಕಥಯಿಷ್ಯಾಮಿ ಶೃಣು ರಾಜನ್ಯುಧಿಷ್ಠಿರ।
03192006c ಧರ್ಮಿಷ್ಠಮಿದಮಾಖ್ಯಾನಂ ಧುಂಧುಮಾರಸ್ಯ ತಚ್ಛೃಣು।।
ಮಾರ್ಕಂಡೇಯನು ಹೇಳಿದನು: “ರಾಜನ್! ಯುಧಿಷ್ಠಿರ! ಆ ಧರ್ಮಿಷ್ಠ ಧುಂಧುಮಾರನ ಆಖ್ಯಾನ1ವನ್ನು ನಿನಗೆ ಹೇಳುತ್ತೇನೆ. ಕೇಳು.
03192007a ಯಥಾ ಸ ರಾಜಾ ಇಕ್ಷ್ವಾಕುಃ ಕುವಲಾಶ್ವೋ ಮಹೀಪತಿಃ।
03192007c ಧುಂಧುಮಾರತ್ವಮಗಮತ್ತಚ್ಛೃಣುಷ್ವ ಮಹೀಪತೇ।।
ಮಹೀಪತೇ! ಮಹೀಪತಿ ಇಕ್ಷ್ವಾಕು ರಾಜ ಕುವಲಾಶ್ವನು ಧುಂಧುಮಾರನೆಂದು ಹೇಗಾದನು ಎಂದು ಕೇಳು.
03192008a ಮಹರ್ಷಿರ್ವಿಶ್ರುತಸ್ತಾತ ಉತ್ತಂಕ ಇತಿ ಭಾರತ।
03192008c ಮರುಧನ್ವಸು ರಮ್ಯೇಷು ಆಶ್ರಮಸ್ತಸ್ಯ ಕೌರವ।।
ಭಾರತ! ಕೌರವ! ಮಗೂ! ಮಹರ್ಷಿಯೆಂದು ವಿಶ್ರುತನಾದ ಉತ್ತಂಕನು ರಮ್ಯವಾದ ಮರುಭೂಮಿಯಲ್ಲಿ ತನ್ನ ಆಶ್ರಮದಲ್ಲಿದ್ದನು.
03192009a ಉತ್ತಂಕಸ್ತು ಮಹಾರಾಜ ತಪೋಽತಪ್ಯತ್ಸುದುಶ್ಚರಂ।
03192009c ಆರಿರಾಧಯಿಷುರ್ವಿಷ್ಣುಂ ಬಹೂನ್ವರ್ಷಗಣಾನ್ವಿಭೋ।।
ಮಹಾರಾಜ! ವಿಭೋ! ಈ ಉತ್ತಂಕನು ವಿಷ್ಣುವನ್ನು ಮೆಚ್ಚಿಸಲು ಬಹಳ ವರ್ಷಗಳ ದುಶ್ಚರ ತಪಸ್ಸನ್ನು ನಡೆಸಿದನು.
03192010a ತಸ್ಯ ಪ್ರೀತಃ ಸ ಭಗವಾನ್ಸಾಕ್ಷಾದ್ದರ್ಶನಮೇಯಿವಾನ್।
03192010c ದೃಷ್ಟ್ವೈವ ಚರ್ಷಿಃ ಪ್ರಹ್ವಸ್ತಂ ತುಷ್ಟಾವ ವಿವಿಧೈಃ ಸ್ತವೈಃ।।
ಅವನಿಂದ ಪ್ರೀತನಾದ ಭಗವಂತನು ಸಾಕ್ಷಾತ್ ದರ್ಶನವನ್ನಿತ್ತನು. ನೋಡಿದಾಕ್ಷಣವೇ ಋಷಿಯು ನಮಸ್ಕರಿಸಿ, ವಿವಿಧ ಸ್ತವಗಳಿಂದ ಅವನನ್ನು ತುಷ್ಟಿಗೊಳಿಸಿದನು.
03192011a ತ್ವಯಾ ದೇವ ಪ್ರಜಾಃ ಸರ್ವಾಃ ಸದೇವಾಸುರಮಾನವಾಃ।
03192011c ಸ್ಥಾವರಾಣಿ ಚ ಭೂತಾನಿ ಜಂಗಮಾನಿ ತಥೈವ ಚ।।
03192011e ಬ್ರಹ್ಮ ವೇದಾಶ್ಚ ವೇದ್ಯಂ ಚ ತ್ವಯಾ ಸೃಷ್ಟಂ ಮಹಾದ್ಯುತೇ।।
“ದೇವ! ಮಹಾದ್ಯುತೇ! ನಿನ್ನಿಂದಲೇ ಈ ಸರ್ವ ಪ್ರಜೆಗಳೂ, ದೇವ-ಅಸುರ-ಮಾನವರೂ ಸೇರಿ, ಇರುವ ಸ್ಥಾವರ ಜಂಗಮಗಳೂ ಬ್ರಹ್ಮ, ವೇದಗಳೂ, ವೇದ್ಯಗಳೂ ಸೃಷ್ಟಿಸಲ್ಪಟ್ಟಿವೆ.
03192012a ಶಿರಸ್ತೇ ಗಗನಂ ದೇವ ನೇತ್ರೇ ಶಶಿದಿವಾಕರೌ।
03192012c ನಿಃಶ್ವಾಸಃ ಪವನಶ್ಚಾಪಿ ತೇಜೋಽಗ್ನಿಶ್ಚ ತವಾಚ್ಯುತ।।
03192012e ಬಾಹವಸ್ತೇ ದಿಶಃ ಸರ್ವಾಃ ಕುಕ್ಷಿಶ್ಚಾಪಿ ಮಹಾರ್ಣವಃ।।
ದೇವ! ನಿನ್ನ ಶಿರವು ಗಗನ, ನೇತ್ರಗಳು ಶಶಿ-ದಿವಾಕರರು. ಅಚ್ಯುತ! ನಿನ್ನ ಉಸಿರು ವಾಯು ಮತ್ತು ತೇಜಸ್ಸು ಅಗ್ನಿ. ಎಲ್ಲ ದಿಕ್ಕುಗಳೂ ನಿನ್ನ ಬಾಹುಗಳು ಮತ್ತು ಮಹಾಸಾಗರವೇ ನಿನ್ನ ಒಡಲು.
03192013a ಊರೂ ತೇ ಪರ್ವತಾ ದೇವ ಖಂ ನಾಭಿರ್ಮಧುಸೂದನ।
03192013c ಪಾದೌ ತೇ ಪೃಥಿವೀ ದೇವೀ ರೋಮಾಣ್ಯೋಷಧಯಸ್ತಥಾ।।
ದೇವ! ಮಧುಸೂದನ! ಪರ್ವತಗಳೇ ನಿನ್ನ ತೊಡೆಗಳು. ಆಕಾಶವೇ ನಾಭಿ. ಪೃಥಿವೀ ದೇವಿಯು ನಿನ್ನ ಪಾದಗಳು ಮತ್ತು ಅರಣ್ಯೌಷಧಿಗಳು ನಿನ್ನ ರೋಮಗಳು.
03192014a ಇಂದ್ರಸೋಮಾಗ್ನಿವರುಣಾ ದೇವಾಸುರಮಹೋರಗಾಃ।
03192014c ಪ್ರಹ್ವಾಸ್ತ್ವಾಮುಪತಿಷ್ಠಂತಿ ಸ್ತುವಂತೋ ವಿವಿಧೈಃ ಸ್ತವೈಃ।।
ಇಂದ್ರ, ಸೋಮ, ಅಗ್ನಿ, ವರುಣರು, ದೇವಾಸುರಮಹೋರಗರು ನಿನ್ನನ್ನು ವಿವಿಧ ಸ್ತವಗಳಿಂದ ಸ್ತುತಿಸಿ ತಲೆಬಾಗಿ ನಮಸ್ಕರಿಸಿ ನಿಂತಿರುವರು.
03192015a ತ್ವಯಾ ವ್ಯಾಪ್ತಾನಿ ಸರ್ವಾಣಿ ಭೂತಾನಿ ಭುವನೇಶ್ವರ।
03192015c ಯೋಗಿನಃ ಸುಮಹಾವೀರ್ಯಾಃ ಸ್ತುವಂತಿ ತ್ವಾಂ ಮಹರ್ಷಯಃ।।
ಭುವನೇಶ್ವರ! ಸರ್ವ ಭೂತಗಳಲ್ಲಿ ನೀನು ವ್ಯಾಪಿಸಿರುವೆ. ಯೋಗಿಗಳು, ಮಹಾವೀರರು, ಮುಹರ್ಷಿಗಳು ನಿನ್ನನ್ನು ಸ್ತುತಿಸುತ್ತಾರೆ.
03192016a ತ್ವಯಿ ತುಷ್ಟೇ ಜಗತ್ಸ್ವಸ್ಥಂ ತ್ವಯಿ ಕ್ರುದ್ಧೇ ಮಹದ್ಭಯಂ।
03192016c ಭಯಾನಾಮಪನೇತಾಸಿ ತ್ವಮೇಕಃ ಪುರುಷೋತ್ತಮ।।
ಪುರುಷೋತ್ತಮ! ನೀನು ತುಷ್ಟನಾದರೆ ಜಗತ್ತು ಸ್ವಸ್ಥವಾಗಿರುತ್ತದೆ. ನೀನು ಕ್ರುದ್ಧನಾದರೆ ಮಹಾ ಭಯವುಂಟಾಗುತ್ತದೆ. ನೀನು ಭಯಗಳನ್ನು ಹೋಗಲಾಡಿಸುವವನು.
03192017a ದೇವಾನಾಂ ಮಾನುಷಾಣಾಂ ಚ ಸರ್ವಭೂತಸುಖಾವಹಃ।
03192017c ತ್ರಿಭಿರ್ವಿಕ್ರಮಣೈರ್ದೇವ ತ್ರಯೋ ಲೋಕಾಸ್ತ್ವಯಾಹೃತಾಃ।।
03192017e ಅಸುರಾಣಾಂ ಸಮೃದ್ಧಾನಾಂ ವಿನಾಶಶ್ಚ ತ್ವಯಾ ಕೃತಃ।।
ದೇವತೆಗಳ, ಮನುಷ್ಯರ ಮತ್ತು ಸರ್ವಭೂತಗಳ ಹಿತಕಾರಕನು ನೀನು. ದೇವ! ತ್ರಿವಿಕ್ರಮನಾಗಿ ಮೂರೂ ಲೋಕಗಳನ್ನು ವ್ಯಾಪಿಸಿ ಸಮೃದ್ಧರಾಗಿದ್ದ ಅಸುರರನ್ನು ನೀನು ನಾಶಗೊಳಿಸಿದೆ.
03192018a ತವ ವಿಕ್ರಮಣೈರ್ದೇವಾ ನಿರ್ವಾಣಮಗಮನ್ ಪರಂ।
03192018c ಪರಾಭವಂ ಚ ದೈತ್ಯೇಂದ್ರಾಸ್ತ್ವಯಿ ಕ್ರುದ್ಧೇ ಮಹಾದ್ಯುತೇ।।
ದೇವ! ನಿನ್ನ ವಿಕ್ರಮದಿಂದ ದೇವತೆಗಳು ಪರಮ ನಿರ್ವಾಣವನ್ನು ಹೊಂದಿದರು. ಮಹಾದ್ಯುತೇ! ನಿನ್ನ ಕ್ರೋಧದಿಂದ ದೈತ್ಯೇಂದ್ರರು ಪರಾಭವ ಹೊಂದಿದರು.
03192019a ತ್ವಂ ಹಿ ಕರ್ತಾ ವಿಕರ್ತಾ ಚ ಭೂತಾನಾಮಿಹ ಸರ್ವಶಃ।
03192019c ಆರಾಧಯಿತ್ವಾ ತ್ವಾಂ ದೇವಾಃ ಸುಖಮೇಧಂತಿ ಸರ್ವಶಃ।।
ಇಲ್ಲಿರುವ ಎಲ್ಲವುಗಳ ಕರ್ತನೂ ನೀನೇ. ವಿಕರ್ತನೂ ನೀನೇ. ನಿನ್ನನ್ನು ಆರಾಧಿಸಿ ದೇವತೆಗಳೆಲ್ಲರೂ ಸುಖವನ್ನು ಪಡೆಯುತ್ತಾರೆ.”
03192020a ಏವಂ ಸ್ತುತೋ ಹೃಷೀಕೇಶ ಉತ್ತಂಕೇನ ಮಹಾತ್ಮನಾ।
03192020c ಉತ್ತಂಕಮಬ್ರವೀದ್ವಿಷ್ಣುಃ ಪ್ರೀತಸ್ತೇಽಹಂ ವರಂ ವೃಣು।।
ಮಹಾತ್ಮ ಉತ್ತಂಕನು ಹೀಗೆ ಸ್ತುತಿಸಲು ಹೃಷೀಕೇಶ ವಿಷ್ಣುವು “ಉತ್ತಂಕ! ನಿನ್ನಿಂದ ಪ್ರೀತನಾಗಿದ್ದೇನೆ. ವರವನ್ನು ಕೇಳು” ಎಂದನು.
03192021 ಉತ್ತಂಕ ಉವಾಚ।
03192021a ಪರ್ಯಾಪ್ತೋ ಮೇ ವರೋ ಹ್ಯೇಷ ಯದಹಂ ದೃಷ್ಟವಾನ್ ಹರಿಂ।
03192021c ಪುರುಷಂ ಶಾಶ್ವತಂ ದಿವ್ಯಂ ಸ್ರಷ್ಟಾರಂ ಜಗತಃ ಪ್ರಭುಂ।।
ಉತ್ತಂಕನು ಹೇಳಿದನು: “ನಾನು ಪುರುಷ, ಶಾಶ್ವತ, ದಿವ್ಯ, ಸೃಷ್ಟಾರ, ಜಗತ್ತಿನ ಪ್ರಭು, ಹರಿಯನ್ನು ನೋಡಿದೆ ಎನ್ನುವ ವರದಿಂದಲೇ ತುಂಬಿಹೋಗಿದ್ದೇನೆ.”
03192022 ವಿಷ್ಣುರುವಾಚ।
03192022a ಪ್ರೀತಸ್ತೇಽಹಮಲೌಲ್ಯೇನ ಭಕ್ತ್ಯಾ ಚ ದ್ವಿಜಸತ್ತಮ।
03192022c ಅವಶ್ಯಂ ಹಿ ತ್ವಯಾ ಬ್ರಹ್ಮನ್ಮತ್ತೋ ಗ್ರಾಹ್ಯೋ ವರೋ ದ್ವಿಜ।।
ವಿಷ್ಣುವು ಹೇಳಿದನು: “ದ್ವಿಜಸತ್ತಮ! ನಾನು ನಿನ್ನ ನಿಷ್ಟೆ ಮತ್ತು ಭಕ್ತಿಗಳಿಗೆ ಒಲಿದಿದ್ದೇನೆ. ದ್ವಿಜ! ಬ್ರಹ್ಮನ್! ಅವಶ್ಯವಾಗಿ ನೀನು ನನ್ನಿಂದ ವರವನ್ನು ಪಡೆಯಬೇಕು.”
03192023a ಏವಂ ಸಂಚಂದ್ಯಮಾನಸ್ತು ವರೇಣ ಹರಿಣಾ ತದಾ।
03192023c ಉತ್ತಂಕಃ ಪ್ರಾಂಜಲಿರ್ವವ್ರೇ ವರಂ ಭರತಸತ್ತಮ।।
ಭರತಸತ್ತಮ! ಈ ರೀತಿ ಹರಿಯು ಒತ್ತಾಯಿಸಿ ವರವನ್ನು ನೀಡಲು ಉಂತ್ತಂಕನು ಕೈಮುಗಿದು ವರವನ್ನು ಕೇಳಿದನು.
03192024a ಯದಿ ಮೇ ಭಗವಾನ್ಪ್ರೀತಃ ಪುಂಡರೀಕನಿಭೇಕ್ಷಣಃ।
03192024c ಧರ್ಮೇ ಸತ್ಯೇ ದಮೇ ಚೈವ ಬುದ್ಧಿರ್ಭವತು ಮೇ ಸದಾ।।
03192024e ಅಭ್ಯಾಸಶ್ಚ ಭವೇದ್ಭಕ್ತ್ಯಾ ತ್ವಯಿ ನಿತ್ಯಂ ಮಹೇಶ್ವರ।।
“ಭಗವನ್! ಪುಂಡರೀಕಾಕ್ಷ! ನನ್ನ ಮೇಲೆ ಪ್ರೀತನಾದರೆ ನನ್ನ ಬುದ್ಧಿಯು ಸದಾ ಧರ್ಮ, ಸತ್ಯ, ದಮಗಳಲ್ಲಿರಲಿ. ಮಹೇಶ್ವರ! ನಿತ್ಯವೂ ನಿನ್ನ ಭಕ್ತಿಯ ಅಭ್ಯಾಸದಲ್ಲಿರುವಂತಾಗಲಿ.”
03192025 ವಿಷ್ಣುರುವಾಚ।
03192025a ಸರ್ವಮೇತದ್ಧಿ ಭವಿತಾ ಮತ್ಪ್ರಸಾದಾತ್ತವ ದ್ವಿಜ।
03192025c ಪ್ರತಿಭಾಸ್ಯತಿ ಯೋಗಶ್ಚ ಯೇನ ಯುಕ್ತೋ ದಿವೌಕಸಾಂ।।
03192025e ತ್ರಯಾಣಾಮಪಿ ಲೋಕಾನಾಂ ಮಹತ್ಕಾರ್ಯಂ ಕರಿಷ್ಯಸಿ।।
ವಿಷ್ಣುವು ಹೇಳಿದನು: “ದ್ವಿಜ! ಇವೆಲ್ಲವೂ ನನ್ನ ಪ್ರಸಾದದಿಂದ ಆಗುತ್ತವೆ. ಯೋಗವು ನಿನಗೆ ತೋರಿಸಿಕೊಳ್ಳುತ್ತದೆ. ಅದರಿಂದ ಯುಕ್ತನಾಗಿ ದೇವತೆಗಳಿಗೆ ಮತ್ತು ಮೂರು ಲೋಕಗಳಿಗೆ ಮಹಾ ಕಾರ್ಯವನ್ನು ಮಾಡುತ್ತೀಯೆ.
03192026a ಉತ್ಸಾದನಾರ್ಥಂ ಲೋಕಾನಾಂ ಧುಂಧುರ್ನಾಮ ಮಹಾಸುರಃ।
03192026c ತಪಸ್ಯತಿ ತಪೋ ಘೋರಂ ಶೃಣು ಯಸ್ತಂ ಹನಿಷ್ಯತಿ।।
ಲೋಕಗಳನ್ನು ಉರುಳಿಸುವ ಸಲುವಾಗಿ ಧುಂಧು ಎಂಬ ಮಹಾಸುರನು ಘೋರವಾದ ತಪಸ್ಸನ್ನು ತಪಿಸುತ್ತಿದ್ದಾನೆ. ಅವನನ್ನು ನೀನು ಸಂಹರಿಸುತ್ತೀಯೆ. ಕೇಳು.
03192027a ಬೃಹದಶ್ವ ಇತಿ ಖ್ಯಾತೋ ಭವಿಷ್ಯತಿ ಮಹೀಪತಿಃ।
03192027c ತಸ್ಯ ಪುತ್ರಃ ಶುಚಿರ್ದಾಂತಃ ಕುವಲಾಶ್ವ ಇತಿ ಶ್ರುತಃ।।
ಬೃಹದಶ್ವ ಎಂದು ಖ್ಯಾತನಾದ ರಾಜನಾಗುತ್ತಾನೆ. ಅವನ ಮಗನು ಶುಚಿಯು, ದಾಂತನೂ ಆದ ಕುವಲಾಶ್ವನೆಂದು.
03192028a ಸ ಯೋಗಬಲಮಾಸ್ಥಾಯ ಮಾಮಕಂ ಪಾರ್ಥಿವೋತ್ತಮಃ।
03192028c ಶಾಸನಾತ್ತವ ವಿಪ್ರರ್ಷೇ ಧುಂಧುಮಾರೋ ಭವಿಷ್ಯತಿ।।
ಆ ಪಾರ್ಥಿವೋತ್ತಮನು ನನ್ನ ಯೋಗಬಲವನ್ನು ಆಶ್ರಯಿಸಿ ನಿನ್ನ ಶಾಸನದಂತೆ ಧುಂಧುಮಾರನಾಗುತ್ತಾನೆ.””
03192029 ಮಾರ್ಕಂಡೇಯ ಉವಾಚ।
03192029a ಉತ್ತಂಕಮೇವಮುಕ್ತ್ವಾ ತು ವಿಷ್ಣುರಂತರಧೀಯತ।
ಮಾರ್ಕಂಡೇಯನು ಹೇಳಿದನು: “ಉತ್ತಂಕನಿಗೆ ಹೀಗೆ ಹೇಳಿ ವಿಷ್ಣುವು ಅಂತರ್ಧಾನನಾದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಧುಂಧುಮಾರೋಪಾಖ್ಯಾನೇ ದ್ವಿನವತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಧುಂಧುಮಾರೋಪಾಖ್ಯಾನದಲ್ಲಿ ನೂರಾತೊಂಭತ್ತೆರಡನೆಯ ಅಧ್ಯಾಯವು.
-
ಧುಂಧುಮಾರನ ಕಥೆಯು ಮುಂದೆ ಅಶ್ವಮೇಧ ಪರ್ವದಲ್ಲಿ ಉತ್ತಂಕ ಚರಿತೆಯಲ್ಲಿ ಪುನಃ ಬರುತ್ತದೆ. ↩︎