188 ಭವಿಷ್ಯಕಥನಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 188

ಸಾರ

ಮಾರ್ಕಂಡೇಯನ ಮಾತನ್ನು ಕೇಳಿ ಪಾಂಡವರು ದ್ರೌಪದಿಯೊಡನೆ ತಮ್ಮೊಡನಿದ್ದ ಕೃಷ್ಣನನ್ನು ನಮಸ್ಕರಿಸುವುದು (1-2). ಯುಧಿಷ್ಠಿರನು ಕಲಿಯುಗದ ಕುರಿತು ಮಾರ್ಕಂಡೇಯನನ್ನು ಪುನಃ ಪ್ರಶ್ನಿಸುವುದು (3-8). ಯುಗಾಂತದ ಕಲಿಯುಗದ ವರ್ಣನೆ (9-86). ಪುನಃ ಕೃತಯುಗವು ಪ್ರಾರಂಭವಾಗುವುದು; ಕಲ್ಕಿ ವಿಷ್ಣುಯಶನೆಂಬ ಬ್ರಾಹ್ಮಣನು ಚಕ್ರವರ್ತಿಯಾಗಿ ಲೋಕಕ್ಕೆ ಶಾಂತಿಯನ್ನು ತರುವುದು (87-93).

03188001 ವೈಶಂಪಾಯನ ಉವಾಚ।
03188001a ಏವಮುಕ್ತಾಸ್ತು ತೇ ಪಾರ್ಥಾ ಯಮೌ ಚ ಪುರುಷರ್ಷಭೌ।
03188001c ದ್ರೌಪದ್ಯಾ ಕೃಷ್ಣಯಾ ಸಾರ್ಧಂ ನಮಶ್ಚಕ್ರುರ್ಜನಾರ್ದನಂ।।

ವೈಶಂಪಾಯನನು ಹೇಳಿದನು: “ಅವನು ಹೀಗೆ ಹೇಳಲು ಪಾರ್ಥರು ಮತ್ತು ಪುರುಷರ್ಷಭ ಯಮಳರು ದ್ರೌಪದಿ ಕೃಷ್ಣೆಯೊಡಗೂಡಿ ಜನಾರ್ದನನಿಗೆ ನಮಸ್ಕರಿಸಿದರು.

03188002a ಸ ಚೈತಾನ್ಪುರುಷವ್ಯಾಘ್ರ ಸಾಮ್ನಾ ಪರಮವಲ್ಗುನಾ।
03188002c ಸಾಂತ್ವಯಾಮಾಸ ಮಾನಾರ್ಹಾನ್ಮನ್ಯಮಾನೋ ಯಥಾವಿಧಿ।।

ಪುರುಷವ್ಯಾಘ್ರ! ಮಾನಾರ್ಹರೆಂದು ಮನ್ನಿಸಿದ ಅವರನ್ನು ಹಿಂದಿರುಗಿ ಅವನು ಪರಮ ಪ್ರೀತಿಯಿಂದ ಯಥಾವಿಧಿಯಾಗಿ ಸಂತವಿಸಿದನು.

03188003a ಯುಧಿಷ್ಠಿರಸ್ತು ಕೌಂತೇಯೋ ಮಾರ್ಕಂಡೇಯಂ ಮಹಾಮುನಿಂ।
03188003c ಪುನಃ ಪಪ್ರಚ್ಚ ಸಾಂರಾಜ್ಯೇ ಭವಿಷ್ಯಾಂ ಜಗತೋ ಗತಿಂ।।

ಕೌಂತೇಯ ಯುಧಿಷ್ಠಿರನಾದರೋ ಮಹಾಮುನಿ ಮಾರ್ಕಂಡೇಯನನ್ನು ತನ್ನ ಸಾಮ್ರಾಜ್ಯದ ಜಗತ್ತಿನ ಭವಿಷ್ಯದ ಗತಿಯ ಕುರಿತು ಪುನಃ ಪ್ರಶ್ನಿಸಿದನು.

03188004a ಆಶ್ಚರ್ಯಭೂತಂ ಭವತಃ ಶ್ರುತಂ ನೋ ವದತಾಂ ವರ।
03188004c ಮುನೇ ಭಾರ್ಗವ ಯದ್ವೃತ್ತಂ ಯುಗಾದೌ ಪ್ರಭವಾಪ್ಯಯೌ।।

“ಮಾತನಾಡುವವರಲ್ಲಿ ಶ್ರೇಷ್ಠ! ಮುನೇ! ಭಾರ್ಗವ! ನಾವು ನಿನ್ನಿಂದ ಆಶ್ಚರ್ಯವನ್ನುಂಟುಮಾಡುವ ಯುಗದ ಆದಿಯಲ್ಲಿ ಉಂಟಾಗುವ ಸೃಷ್ಟಿ ಮತ್ತು ಲಯಗಳ ಕುರಿತು ನಡೆದಂತೆ ಹೇಳಿದುದನ್ನು ಕೇಳಿದೆವು.

03188005a ಅಸ್ಮಿನ್ಕಲಿಯುಗೇಽಪ್ಯಸ್ತಿ ಪುನಃ ಕೌತೂಹಲಂ ಮಮ।
03188005c ಸಮಾಕುಲೇಷು ಧರ್ಮೇಷು ಕಿಂ ನು ಶೇಷಂ ಭವಿಷ್ಯತಿ।।

ನಾನು ಈ ಕಲಿಯುಗದ ಕುರಿತು ಪುನಃ ಕುತೂಹಲನಾಗಿದ್ದೇನೆ. ಧರ್ಮಗಳೆಲ್ಲವೂ ಸೇರಿ ಗೊಂದಲಗಳುಂಟಾದಾಗ ಏನು ಉಳಿಯುತ್ತದೆ?

03188006a ಕಿಂವೀರ್ಯಾ ಮಾನವಾಸ್ತತ್ರ ಕಿಮಾಹಾರವಿಹಾರಿಣಃ।
03188006c ಕಿಮಾಯುಷಃ ಕಿಂವಸನಾ ಭವಿಷ್ಯಂತಿ ಯುಗಕ್ಷಯೇ।।

ಯುಗಕ್ಷಯದಲ್ಲಿ ಮಾನವರು ಎಂಥಹ ವೀರ್ಯವನ್ನು ಪಡೆದಿರುತ್ತಾರೆ? ಎಂಥಹ ಆಹಾರ ವಿಹಾರಗಳನ್ನು ಮಾಡುತ್ತಾರೆ? ಅವರ ಆಯಸ್ಸು ಏನಿರುತ್ತದೆ? ಅವರ ಬಟ್ಟೆಗಳು ಏನಾಗಿರುತ್ತವೆ?

03188007a ಕಾಂ ಚ ಕಾಷ್ಠಾಂ ಸಮಾಸಾದ್ಯ ಪುನಃ ಸಂಪತ್ಸ್ಯತೇ ಕೃತಂ।
03188007c ವಿಸ್ತರೇಣ ಮುನೇ ಬ್ರೂಹಿ ವಿಚಿತ್ರಾಣೀಹ ಭಾಷಸೇ।।

ಯಾವ ಮಿತಿಯ ನಂತರ ಪುನಃ ಕೃತಯುಗವು ಹುಟ್ಟುತ್ತದೆ? ಮುನೇ! ವಿಸ್ತಾರವಾಗಿ ಹೇಳು. ನೀನು ವಿಚಿತ್ರವಾದ ವಿಷಯಗಳ ಕುರಿತು ಮಾತನಾಡುತ್ತೀಯೆ.”

03188008a ಇತ್ಯುಕ್ತಃ ಸ ಮುನಿಶ್ರೇಷ್ಠಃ ಪುನರೇವಾಭ್ಯಭಾಷತ।
03188008c ರಮಯನ್ವೃಷ್ಣಿಶಾರ್ದೂಲಂ ಪಾಂಡವಾಂಶ್ಚ ಮಹಾಮುನಿಃ।।

ಅವನು ಹೀಗೆ ಹೇಳಲು ಮುನಿಶ್ರೇಷ್ಠ ಮಹಾಮುನಿಯು ವೃಷ್ಣಿಶಾರ್ದೂಲನನ್ನೂ ಪಾಂಡವರನ್ನೂ ರಮಿಸಲು ಪುನಃ ಈ ಮಾತುಗಳನ್ನಾಡಿದನು.

03188009 ಮಾರ್ಕಂಡೇಯ ಉವಾಚ।
03188009a ಭವಿಷ್ಯಂ ಸರ್ವಲೋಕಸ್ಯ ವೃತ್ತಾಂತಂ ಭರತರ್ಷಭ।
03188009c ಕಲುಷಂ ಕಾಲಮಾಸಾದ್ಯ ಕಥ್ಯಮಾನಂ ನಿಬೋಧ ಮೇ।।

ಮಾರ್ಕಂಡೇಯನು ಹೇಳಿದನು: “ಭರತರ್ಷಭ! ಭವಿಷ್ಯದಲ್ಲಿ ಕಲುಷ ಕಾಲವು ಬರಲು ಸರ್ವಲೋಕದಲ್ಲಿ ಏನಾಗುತ್ತದೆ ಎನ್ನುವುದನ್ನು ಹೇಳುತ್ತೇನೆ.

03188010a ಕೃತೇ ಚತುಷ್ಪಾತ್ಸಕಲೋ ನಿರ್ವ್ಯಾಜೋಪಾಧಿವರ್ಜಿತಃ।
03188010c ವೃಷಃ ಪ್ರತಿಷ್ಠಿತೋ ಧರ್ಮೋ ಮನುಷ್ಯೇಷ್ವಭವತ್ಪುರಾ।।

ಹಿಂದೆ ಕೃತದಲ್ಲಿ ಧರ್ಮವು ಮನುಷ್ಯರಲ್ಲಿ, ನಾಲ್ಕೂ ಕಲೆಗಳಲ್ಲಿ ಗೊಂದಲಗಳಿಲ್ಲದೇ, ತಡೆಯಿಲ್ಲದೇ ಸರಿಯಾಗಿದ್ದು ನೆಲೆಗೊಂಡಿತ್ತು.

03188011a ಅಧರ್ಮಪಾದವಿದ್ಧಸ್ತು ತ್ರಿಭಿರಂಶೈಃ ಪ್ರತಿಷ್ಠಿತಃ।
03188011c ತ್ರೇತಾಯಾಂ ದ್ವಾಪರೇಽರ್ಧೇನ ವ್ಯಾಮಿಶ್ರೋ ಧರ್ಮ ಉಚ್ಯತೇ।।

ತ್ರೇತದಲ್ಲಿ ಧರ್ಮವು ಒಂದು ಕಾಲು ಭಾಗವನ್ನು ಕಳೆದುಕೊಂಡು, ಮೂರೇ ಅಂಶಗಳಲ್ಲಿ ಪ್ರತಿಷ್ಠಿತವಾಗಿತ್ತು. ದ್ವಾಪರದಲ್ಲಿ ಧರ್ಮ-ಅಧರ್ಮಗಳು ಅರ್ಧ ಮಿಶ್ರಿತವಾರುತ್ತದೆ ಎಂದು ಹೇಳುತ್ತಾರೆ.

03188012a ತ್ರಿಭಿರಂಶೈರಧರ್ಮಸ್ತು ಲೋಕಾನಾಕ್ರಮ್ಯ ತಿಷ್ಠತಿ।
03188012c ಚತುರ್ಥಾಂಶೇನ ಧರ್ಮಸ್ತು ಮನುಷ್ಯಾನುಪತಿಷ್ಠತಿ।।

ಈಗ ಮೂರು ಅಂಶಗಳಲ್ಲಿ ಅಧರ್ಮವು ಲೋಕಗಳನ್ನು ಆಕ್ರಮಿಸಿ ನಿಂತಿದೆ. ನಾಲ್ಕನೆಯ ಅಂಶದ ಧರ್ಮ ಮಾತ್ರ ಮನುಷ್ಯನಲ್ಲಿ ಉಳಿದುಕೊಂಡಿದೆ.

03188013a ಆಯುರ್ವೀರ್ಯಮಥೋ ಬುದ್ಧಿರ್ಬಲಂ ತೇಜಶ್ಚ ಪಾಂಡವ।
03188013c ಮನುಷ್ಯಾಣಾಮನುಯುಗಂ ಹ್ರಸತೀತಿ ನಿಬೋಧ ಮೇ।।

ಪಾಂಡವ! ಯುಗದಿಂದ ಇನ್ನೊಂದು ಯುಗದಲ್ಲಿ ಮನುಷ್ಯರ ಆಯಸ್ಸು, ವೀರ್ಯ, ಬುದ್ಧಿ ಮತ್ತು ತೇಜಸ್ಸುಗಳಲ್ಲಿ ಒಂದೊಂದು ಅಂಶ ಕಡಿಮೆಯಾಗುತ್ತಾ ಬರುತ್ತದೆಯೆಂದು ತಿಳಿ.

03188014a ರಾಜಾನೋ ಬ್ರಾಹ್ಮಣಾ ವೈಶ್ಯಾಃ ಶೂದ್ರಾಶ್ಚೈವ ಯುಧಿಷ್ಠಿರ।
03188014c ವ್ಯಾಜೈರ್ಧರ್ಮಂ ಚರಿಷ್ಯಂತಿ ಧರ್ಮವೈತಂಸಿಕಾ ನರಾಃ।।

ಯುಧಿಷ್ಠಿರ! ರಾಜರು, ಬ್ರಾಹ್ಮಣರು, ವೈಶ್ಯರು ಮತ್ತು ಶೂದ್ರರೂ ಕೂಡ ಧರ್ಮದಲ್ಲಿ ನಡೆಯುವವರಂತೆ ತೋರಿಸಿಕೊಳ್ಳುತ್ತಾರೆ. ಮನುಷ್ಯರು ಅಪ್ರಾಮಾಣಿಕರಾಗಿರುತ್ತಾರೆ.

03188015a ಸತ್ಯಂ ಸಂಕ್ಷೇಪ್ಸ್ಯತೇ ಲೋಕೇ ನರೈಃ ಪಂಡಿತಮಾನಿಭಿಃ।
03188015c ಸತ್ಯಹಾನ್ಯಾ ತತಸ್ತೇಷಾಮಾಯುರಲ್ಪಂ ಭವಿಷ್ಯತಿ।।

ಲೋಕದಲ್ಲಿ ಪಂಡಿತರೆಂದು ಅಭಿಮಾನಪಡುವ ನರರು ಸತ್ಯವನ್ನು ಚುಟುಕಾಗಿಸುತ್ತಾರೆ ಮತ್ತು ಇದರಿಂದ ಅವರ ಆಯಸ್ಸು ಕಡಿಮೆಯಾಗುತ್ತದೆ.

03188016a ಆಯುಷಃ ಪ್ರಕ್ಷಯಾದ್ವಿದ್ಯಾಂ ನ ಶಕ್ಷ್ಯಂತ್ಯುಪಶಿಕ್ಷಿತುಂ।
03188016c ವಿದ್ಯಾಹೀನಾನವಿಜ್ಞಾನಾಲ್ಲೋಭೋಽಪ್ಯಭಿಭವಿಷ್ಯತಿ।।

ಆಯಸ್ಸು ಕಡಿಮೆಯಾಗಿದ್ದುದರಿಂದ ಅವರು ಸಂಪೂರ್ಣವಾಗಿ ಅವರ ಜ್ಞಾನವನ್ನು ಕಲಿಸಿಕೊಡಲು ಶಕ್ಯರಾಗಿರುವುದಿಲ್ಲ. ವಿದ್ಯಾಹೀನರಾದವರು ಅಜ್ಞಾನದಿಂದ ಲೋಭಕ್ಕೊಳಗಾಗುತ್ತಾರೆ.

03188017a ಲೋಭಕ್ರೋಧಪರಾ ಮೂಢಾಃ ಕಾಮಸಕ್ತಾಶ್ಚ ಮಾನವಾಃ।
03188017c ವೈರಬದ್ಧಾ ಭವಿಷ್ಯಂತಿ ಪರಸ್ಪರವಧೇಪ್ಸವಃ।।

ಲೋಭಕ್ರೋಧಪರರಾದ, ಮೂಢರಾದ, ಕಾಮಾಸಕ್ತರಾದ ಮಾನವರು ಪರಸ್ಪರರ ಸಾವನ್ನು ಬಯಸಿ ವೈರಬದ್ಧರಾಗುತ್ತಾರೆ.

03188018a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾಃ ಸಂಕೀರ್ಯಂತಃ ಪರಸ್ಪರಂ।
03188018c ಶೂದ್ರತುಲ್ಯಾ ಭವಿಷ್ಯಂತಿ ತಪಹ್ಸತ್ಯವಿವರ್ಜಿತಾಃ।।

ಬ್ರಾಹ್ಮಣರು-ಕ್ಷತ್ರಿಯರು ಮತ್ತು ಪರಸ್ಪರರಲ್ಲಿ ವಿವಾಹವಾಗಿ ತಪಸ್ಸು ಮತ್ತು ಸತ್ಯಗಳನ್ನು ತೊರೆದು ಶೂದ್ರರ ಸಮನಾಗುತ್ತಾರೆ.

03188019a ಅಂತ್ಯಾ ಮಧ್ಯಾ ಭವಿಷ್ಯಂತಿ ಮಧ್ಯಾಶ್ಚಾಂತಾವಸಾಯಿನಃ।
03188019c ಈದೃಶೋ ಭವಿತಾ ಲೋಕೋ ಯುಗಾಂತೇ ಪರ್ಯುಪಸ್ಥಿತೇ।।

ಕೊನೆಯಲ್ಲಿದ್ದವರು ಮಧ್ಯಸ್ಥಾನದವರಾಗುತ್ತಾರೆ; ಮಧ್ಯದಲ್ಲಿದ್ದವರು ಕೊನೆಯ ಸ್ಥಾನಕ್ಕೆ ಇಳಿಯುತ್ತಾರೆ. ಯುಗಾಂತವು ಹತ್ತಿರಬರುವಾಗ ಈ ರೀತಿ ಲೋಕದಲ್ಲಿ ಆಗುತ್ತದೆ.

03188020a ವಸ್ತ್ರಾಣಾಂ ಪ್ರವರಾ ಶಾಣೀ ಧಾನ್ಯಾನಾಂ ಕೋರದೂಷಕಾಃ।
03188020c ಭಾರ್ಯಾಮಿತ್ರಾಶ್ಚ ಪುರುಷಾ ಭವಿಷ್ಯಂತಿ ಯುಗಕ್ಷಯೇ।।

ಯುಗಕ್ಷಯದಲ್ಲಿ ಸೆಣಬೇ ಅತಿಶ್ರೇಷ್ಠ ವಸ್ತ್ರವಾಗುತ್ತದೆ; ಬಡವರು ತಿನ್ನುವುದೇ ಅತಿ ಶ್ರೇಷ್ಠ ಬೆಳೆಯೆನಿಸಿಕೊಳ್ಳುತ್ತದೆ; ಮತ್ತು ಪುರುಷನೇ ಭಾರ್ಯೆಯ ಶತ್ರುವಾಗುತ್ತಾನೆ.

03188021a ಮತ್ಸ್ಯಾಮಿಷೇಣ ಜೀವಂತೋ ದುಹಂತಶ್ಚಾಪ್ಯಜೈಡಕಂ।
03188021c ಗೋಷು ನಷ್ಟಾಸು ಪುರುಷಾ ಭವಿಷ್ಯಂತಿ ಯುಗಕ್ಷಯೇ।।

ಯುಗಕ್ಷಯದಲ್ಲಿ ಗೋವುಗಳು ನಷ್ಟವಾಗಿ ಮನುಷ್ಯರು ಮೀನು ಮತ್ತು ಕೆಟ್ಟ ಮಾಂಸಗಳನ್ನು ತಿಂದು ಜೀವಿಸುವವರಾಗುತ್ತಾರೆ; ಆಡು-ಒಂಟೆಗಳ ಹಾಲನ್ನು ಕರೆಯುವವರಾಗುತ್ತಾರೆ.

03188022a ಅನ್ಯೋನ್ಯಂ ಪರಿಮುಷ್ಣಂತೋ ಹಿಂಸಯಂತಶ್ಚ ಮಾನವಾಃ।
03188022c ಅಜಪಾ ನಾಸ್ತಿಕಾಃ ಸ್ತೇನಾ ಭವಿಷ್ಯಂತಿ ಯುಗಕ್ಷಯೇ।।

ಯುಗಕ್ಷಯದಲ್ಲಿ ಮಾನವರು ಅನ್ಯೋನ್ಯರಿಂದ ಕದಿಯುತ್ತಾರೆ ಮತ್ತು ಅನ್ಯೋನ್ಯರನ್ನು ಹಿಂಸಿಸುತ್ತಾರೆ. ಅವರು ಅಜಪರೂ, ನಾಸ್ತಿಕರೂ ಆಗುತ್ತಾರೆ.

03188023a ಸರಿತ್ತೀರೇಷು ಕುದ್ದಾಲೈರ್ವಾಪಯಿಷ್ಯಂತಿ ಚೌಷಧೀಃ।
03188023c ತಾಶ್ಚಾಪ್ಯಲ್ಪಫಲಾಸ್ತೇಷಾಂ ಭವಿಷ್ಯಂತಿ ಯುಗಕ್ಷಯೇ।।

ಯುಗಕ್ಷಯದಲ್ಲಿ ನದೀತೀರಗಳನ್ನು ಗುದ್ದಲಿಗಳಿಂದ ಅಗೆದು ಔಷಧಿಗಳನ್ನು ಬೆಳೆಸುತ್ತಾರೆ. ಆದರೆ ಅವುಗಳಲ್ಲಿಯೂ ಅಲ್ಪ ಫಲಗಳುಂಟಾಗುವಂತಾಗುತ್ತದೆ.

03188024a ಶ್ರಾದ್ಧೇ ದೈವೇ ಚ ಪುರುಷಾ ಯೇ ಚ ನಿತ್ಯಂ ಧೃತವ್ರತಾಃ।
03188024c ತೇಽಪಿ ಲೋಭಸಮಾಯುಕ್ತಾ ಭೋಕ್ಷ್ಯಂತೀಹ ಪರಸ್ಪರಂ।।

ಶ್ರಾದ್ಧ ಅಥವಾ ದೇವಪೂಜೆಗಳಲ್ಲಿ ನಿತ್ಯವೂ ಧೃತವ್ರತರಾಗಿದ್ದ ಪುರುಷರೂ ಕೂಡ ಲೋಭ ನಿರತರಾಗಿ ಪರಸ್ಪರರನ್ನು ಶೋಷಿಸುತ್ತಾರೆ.

03188025a ಪಿತಾ ಪುತ್ರಸ್ಯ ಭೋಕ್ತಾ ಚ ಪಿತುಃ ಪುತ್ರಸ್ತಥೈವ ಚ।
03188025c ಅತಿಕ್ರಾಂತಾನಿ ಭೋಜ್ಯಾನಿ ಭವಿಷ್ಯಂತಿ ಯುಗಕ್ಷಯೇ।।

ಯುಗಕ್ಷಯದಲ್ಲಿ ತಂದೆಯು ಮಗನನ್ನು ಮತ್ತು ಮಗನು ತಂದೆಯನ್ನು ಶೋಷಿಸುತ್ತಾನೆ. ಪರಸ್ಪರರನ್ನು ಬಳಸಿಕೊಳ್ಳುವುದರಲ್ಲಿ ಮಿತಿಮೀರುತ್ತಾರೆ.

03188026a ನ ವ್ರತಾನಿ ಚರಿಷ್ಯಂತಿ ಬ್ರಾಹ್ಮಣಾ ವೇದನಿಂದಕಾಃ।
03188026c ನ ಯಕ್ಷ್ಯಂತಿ ನ ಹೋಷ್ಯಂತಿ ಹೇತುವಾದವಿಲೋಭಿತಾಃ।।

ಬ್ರಾಹ್ಮಣರು ವೇದನಿಂದಕರಾಗಿ ವ್ರತಗಳನ್ನು ನಡೆಸುವುದಿಲ್ಲ; ಹೇತುವಾದುದರಿಂದ ಲೋಭಿತರಾಗಿ ಪೂಜೆಗಳನ್ನಾಗಲೀ ಯಜ್ಞಗಳನ್ನಾಗಲೀ ಮಾಡುವುದಿಲ್ಲ.

03188027a ನಿಮ್ನೇ ಕೃಷಿಂ ಕರಿಷ್ಯಂತಿ ಯೋಕ್ಷ್ಯಂತಿ ಧುರಿ ಧೇನುಕಾಃ।
03188027c ಏಕಹಾಯನವತ್ಸಾಂಶ್ಚ ವಾಹಯಿಷ್ಯಂತಿ ಮಾನವಾಃ।।

ಮಾನವರು ಕೆಳಭೂಮಿಗಳಲ್ಲಿ ಕೃಷಿ ಮಾಡುತ್ತಾರೆ; ಹಾಲುಕೊಡುವ ಹಸುಗಳನ್ನು ನೇಗಿಲಿಗೆ ಕಟ್ಟುತ್ತಾರೆ; ಮತ್ತು ಒಂದೇವರ್ಷದ ಕರುಗಳನ್ನು ವಾಹನಗಳನ್ನಾಗಿ ಬಳಸುತ್ತಾರೆ.

03188028a ಪುತ್ರಃ ಪಿತೃವಧಂ ಕೃತ್ವಾ ಪಿತಾ ಪುತ್ರವಧಂ ತಥಾ।
03188028c ನಿರುದ್ವೇಗೋ ಬೃಹದ್ವಾದೀ ನ ನಿಂದಾಮುಪಲಪ್ಸ್ಯತೇ।।

ಮಗನು ತಂದೆಯನ್ನು ಕೊಲ್ಲಬಹುದು ಮತ್ತು ಹಾಗೆಯೇ ತಂದೆಯೂ ಮಗನನ್ನು ಕೊಲ್ಲಬಹುದು. ಆದರೆ ನಿರುದ್ವೇಗರಾಗಿ ಬಹಳಷ್ಟು ವಾದಗಳಿಗೊಳಗಾಗಿ ಯಾರೂ ನಿಂದನೆಯನ್ನು ಹೊಂದುವುದಿಲ್ಲ.

03188029a ಮ್ಲೇಚ್ಚಭೂತಂ ಜಗತ್ಸರ್ವಂ ನಿಷ್ಕ್ರಿಯಂ ಯಜ್ಞವರ್ಜಿತಂ।
03188029c ಭವಿಷ್ಯತಿ ನಿರಾನಂದಮನುತ್ಸವಮಥೋ ತಥಾ।।

ಕ್ರಿಯೆಗಳನ್ನು ನಡೆಸದೇ, ಯಜ್ಞಗಳನ್ನು ಬಿಟ್ಟು, ಆನಂದವಿಲ್ಲದೇ, ಉತ್ಸವಗಳಿಲ್ಲದೇ ಇಡೀ ಜಗತ್ತೇ ಮ್ಲೇಚ್ಛವಾಗುತ್ತದೆ.

03188030a ಪ್ರಾಯಶಃ ಕೃಪಣಾನಾಂ ಹಿ ತಥಾ ಬಂಧುಮತಾಮಪಿ।
03188030c ವಿಧವಾನಾಂ ಚ ವಿತ್ತಾನಿ ಹರಿಷ್ಯಂತೀಹ ಮಾನವಾಃ।।

ಮಾನವರು ಪ್ರಾಯಶಃ ಬಡವರ, ಬಂಧುಗಳ ಮತ್ತು ವಿಧವೆಯರದ್ದೂ ಕೂಡ ವಿತ್ತಗಳನ್ನು ಅಪಹರಿಸುತ್ತಾರೆ.

03188031a ಅಲ್ಪವೀರ್ಯಬಲಾಃ ಸ್ತಬ್ಧಾ ಲೋಭಮೋಹಪರಾಯಣಾಃ।
03188031c ತತ್ಕಥಾದಾನಸಂತುಷ್ಟಾ ದುಷ್ಟಾನಾಮಪಿ ಮಾನವಾಃ।।
03188031e ಪರಿಗ್ರಹಂ ಕರಿಷ್ಯಂತಿ ಪಾಪಾಚಾರಪರಿಗ್ರಹಾಃ।।

ವೀರ್ಯಬಲಗಳನ್ನು ಕಳೆದುಕೊಂಡರೂ ಸೊಕ್ಕಾಗಿ ಲೋಭಮೋಹಪರಾಯಣರಾಗಿ, ಪಾಪಾಚಾರ ಪರಿಗ್ರಹರಾಗಿ ಮಾನವರು ದುಷ್ಟರಿಂದಲೂ ದಾನಗಳನ್ನು ಸ್ವೀಕರಿಸುತ್ತಾರೆ.

03188032a ಸಂಘಾತಯಂತಃ ಕೌಂತೇಯ ರಾಜಾನಃ ಪಾಪಬುದ್ಧಯಃ।
03188032c ಪರಸ್ಪರವಧೋದ್ಯುಕ್ತಾ ಮೂರ್ಖಾಃ ಪಂಡಿತಮಾನಿನಃ।।
03188032e ಭವಿಷ್ಯಂತಿ ಯುಗಸ್ಯಾಂತೇ ಕ್ಷತ್ರಿಯಾ ಲೋಕಕಂಟಕಾಃ।।

ಕೌಂತೇಯ! ಪಂಡಿತರೆಂದು ಜಂಬಪಡುವ ಮೂರ್ಖ, ಪಾಪಬುದ್ಧಿಯ ರಾಜರು ಪರಸ್ಪರರನ್ನು ವಧಿಸಲು ಉದ್ಯುಕ್ತರಾಗಿ ಹೊಡೆದಾಡುತ್ತಾರೆ. ಯುಗದ ಅಂತ್ಯದಲ್ಲಿ ಕ್ಷತ್ರಿಯರು ಲೋಕಕಂಟಕರಾಗುತ್ತಾರೆ.

03188033a ಅರಕ್ಷಿತಾರೋ ಲುಬ್ಧಾಶ್ಚ ಮಾನಾಹಂಕಾರದರ್ಪಿತಾಃ।
03188033c ಕೇವಲಂ ದಂಡರುಚಯೋ ಭವಿಷ್ಯಂತಿ ಯುಗಕ್ಷಯೇ।।

ಯುಗಕ್ಷಯದಲ್ಲಿ ಮಾನಾಹಂಕಾರ ದರ್ಪಿತರಾಗಿ, ದುರಾಸೆಯುಳ್ಳವರಾಗಿ ಅವರು ರಕ್ಷಣೆಯನ್ನು ನೀಡದೇ ಕೇವಲ ಶಿಕ್ಷೆ ನೀಡುವುದರಲ್ಲಿ ಆಸಕ್ತರಾಗುತ್ತಾರೆ.

03188034a ಆಕ್ರಮ್ಯಾಕ್ರಮ್ಯ ಸಾಧೂನಾಂ ದಾರಾಂಶ್ಚೈವ ಧನಾನಿ ಚ।
03188034c ಭೋಕ್ಷ್ಯಂತೇ ನಿರನುಕ್ರೋಶಾ ರುದತಾಮಪಿ ಭಾರತ।।

ಭಾರತ! ಅವರು ಸಾಧುಗಳ ಪತ್ನಿಯರನ್ನೂ ಸಂಪತ್ತುಗಳನ್ನೂ ಅತಿಕ್ರಮಿಸಿ ಅವರು ಅಳುತ್ತಿದ್ದರೂ ಅನುಕಂಪವಿಲ್ಲದೇ ಭೋಗಿಸುತ್ತಾರೆ.

03188035a ನ ಕನ್ಯಾಂ ಯಾಚತೇ ಕಶ್ಚಿನ್ನಾಪಿ ಕನ್ಯಾ ಪ್ರದೀಯತೇ।
03188035c ಸ್ವಯಂಗ್ರಾಹಾ ಭವಿಷ್ಯಂತಿ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರವಾಗುವಾಗ ಕನ್ಯೆಯನ್ನು ಯಾರೂ ಕೇಳುವುದಿಲ್ಲ; ಕನ್ಯೆಯನ್ನು ಯಾರೂ ಕೊಡುವುದೂ ಇಲ್ಲ. ಸ್ವಯಂ ತಾವೇ ಅವರನ್ನು ಹಿಡಿಯುವವರಾಗುತ್ತಾರೆ.

03188036a ರಾಜಾನಶ್ಚಾಪ್ಯಸಂತುಷ್ಟಾಃ ಪರಾರ್ಥಾನ್ಮೂಢಚೇತಸಃ।
03188036c ಸರ್ವೋಪಾಯೈರ್ಹರಿಷ್ಯಂತಿ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರವಾಗುವಾಗ ರಾಜರೂ ಕೂಡ ಮೂಢಚೇತಸರಾಗಿ ಅಸಂತುಷ್ಟರಾಗಿ ಪರರ ಸಂಪತ್ತನ್ನು ಸರ್ವ ಉಪಾಯಗಳಿಂದ ಅಪಹರಿಸುತ್ತಾರೆ.

03188037a ಮ್ಲೇಚ್ಚೀಭೂತಂ ಜಗತ್ಸರ್ವಂ ಭವಿಷ್ಯತಿ ಚ ಭಾರತ।
03188037c ಹಸ್ತೋ ಹಸ್ತಂ ಪರಿಮುಷೇದ್ಯುಗಾಂತೇ ಪರ್ಯುಪಸ್ಥಿತೇ।।

ಭಾರತ! ಯುಗಾಂತವು ಹತ್ತಿರವಾಗುವಾಗ ಒಂದು ಕೈ ಇನ್ನೊಂದು ಕೈಯಲ್ಲಿರುವುದನ್ನು ಕದಿಯುತ್ತದೆ; ಜಗತ್ತೆಲ್ಲವೂ ಮ್ಲೇಚ್ಛೀಭೂತವಾಗುತ್ತದೆ.

03188038a ಸತ್ಯಂ ಸಂಕ್ಷಿಪ್ಯತೇ ಲೋಕೇ ನರೈಃ ಪಂಡಿತಮಾನಿಭಿಃ।
03188038c ಸ್ಥವಿರಾ ಬಾಲಮತಯೋ ಬಾಲಾಃ ಸ್ಥವಿರಬುದ್ಧಯಃ।।

ಲೋಕದಲ್ಲಿ ಪಂಡಿತರೆಂದು ತಿಳಿದುಕೊಂಡಿರುವ ನರರು ಸತ್ಯವನ್ನು ಚುಟುಕುಗೊಳಿಸುತ್ತಾರೆ. ವಯಸ್ಸಾದವರು ಮಕ್ಕಳಂತೆ ಯೋಚಿಸುತ್ತಾರೆ ಮತ್ತು ಮಕ್ಕಳು ವಯಸ್ಸಾದವರ ಬುದ್ಧಿಯನ್ನು ಹೊಂದಿರುತ್ತಾರೆ.

03188039a ಭೀರವಃ ಶೂರಮಾನೀನಃ ಶೂರಾ ಭೀರುವಿಷಾದಿನಃ।
03188039c ನ ವಿಶ್ವಸಂತಿ ಚಾನ್ಯೋನ್ಯಂ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರವಾಗುವಾಗ ನಾಚಿಕೆ ಸ್ವಭಾವದವರು ಶೂರರೆಂದು ತಿಳಿದುಕೊಳ್ಳುತ್ತಾರೆ ಮತ್ತು ಶೂರರು ನಾಚಿಕೆ ಸ್ವಭಾವದವರಾಗಿ ಅನ್ಯೋನ್ಯರಲ್ಲಿ ವಿಶ್ವಾಸವಿರುವುದಿಲ್ಲ.

03188040a ಏಕಾಹಾರ್ಯಂ ಜಗತ್ಸರ್ವಂ ಲೋಭಮೋಹವ್ಯವಸ್ಥಿತಂ।
03188040c ಅಧರ್ಮೋ ವರ್ಧತಿ ಮಹಾನ್ನ ಚ ಧರ್ಮಃ ಪ್ರವರ್ತತೇ।।

ಲೋಭಮೋಹಗಳು ವ್ಯವಸ್ಥಿತಗೊಂಡಿರುವ ಜಗತ್ತಿನಲ್ಲಿ ಎಲ್ಲರೂ ಒಂದನ್ನೇ ತಿನ್ನುತ್ತಾರೆ. ಅಧರ್ಮವು ವರ್ಧಿಸುತ್ತದೆ. ಧರ್ಮವು ಯಾವುದೂ ಇರುವುದಿಲ್ಲ.

03188041a ಬ್ರಾಹ್ಮಣಾಃ ಕ್ಷತ್ರಿಯಾ ವೈಶ್ಯಾ ನ ಶಿಷ್ಯಂತಿ ಜನಾಧಿಪ।
03188041c ಏಕವರ್ಣಸ್ತದಾ ಲೋಕೋ ಭವಿಷ್ಯತಿ ಯುಗಕ್ಷಯೇ।।

ಜನಾಧಿಪ! ಯುಗಕ್ಷಯದಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಯಾರೂ ಉಳಿಯುವುದಿಲ್ಲ. ಆಗ ಲೋಕವು ಒಂದೇ ಜಾತಿಯದಾಗುತ್ತದೆ.

03188042a ನ ಕ್ಷಂಸ್ಯತಿ ಪಿತಾ ಪುತ್ರಂ ಪುತ್ರಶ್ಚ ಪಿತರಂ ತಥಾ।
03188042c ಭಾರ್ಯಾ ಚ ಪತಿಶುಶ್ರೂಷಾಂ ನ ಕರಿಷ್ಯತಿ ಕಾ ಚನ।।

ತಂದೆಯು ಮಗನನ್ನು ಮತ್ತು ಮಗನು ತಂದೆಯನ್ನು ಕ್ಷಮಿಸುವುದಿಲ್ಲ. ಪತ್ನಿಯರೂ ಕೂಡ ಪತಿಯ ಶುಶ್ರೂಷೆಯನ್ನು ಮಾಡುವುದಿಲ್ಲ.

03188043a ಯೇ ಯವಾನ್ನಾ ಜನಪದಾ ಗೋಧೂಮಾನ್ನಾಸ್ತಥೈವ ಚ।
03188043c ತಾನ್ದೇಶಾನ್ಸಂಶ್ರಯಿಷ್ಯಂತಿ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರವಾದಾಗ ಜನರು ಗೋಧಿ ಮತ್ತು ಬಾರ್ಲಿಗಳನ್ನು ತಿನ್ನುವ ದೇಶಗಳಿಗೆ ವಲಸೆ ಹೋಗುತ್ತಾರೆ.

03188044a ಸ್ವೈರಾಹಾರಾಶ್ಚ ಪುರುಷಾ ಯೋಷಿತಶ್ಚ ವಿಶಾಂ ಪತೇ।
03188044c ಅನ್ಯೋನ್ಯಂ ನ ಸಹಿಷ್ಯಂತಿ ಯುಗಾಂತೇ ಪರ್ಯುಪಸ್ಥಿತೇ।।

ವಿಶಾಂಪತೇ! ಬೇಕಾದುದನ್ನು ತಿಂದುಕೊಳ್ಳುತ್ತಾ, ಯುಗಾಂತವು ಹತ್ತಿರ ಬಂದಾಗ, ಪುರುಷರು ಮತ್ತು ಸ್ತ್ರೀಯರು ಅನ್ಯೋನ್ಯರನ್ನು ಸಹಿಸಿಕೊಂಡಿರುವುದಿಲ್ಲ.

03188045a ಮ್ಲೇಚ್ಚಭೂತಂ ಜಗತ್ಸರ್ವಂ ಭವಿಷ್ಯತಿ ಯುಧಿಷ್ಠಿರ।
03188045c ನ ಶ್ರಾದ್ಧೈರ್ಹಿ ಪಿತೄಂಶ್ಚಾಪಿ ತರ್ಪಯಿಷ್ಯಂತಿ ಮಾನವಾಃ।।

ಯುಧಿಷ್ಠಿರ! ಶ್ರಾದ್ಧಗಳ ಮೂಲಕ ಪಿತೃಗಳನ್ನು ತೃಪ್ತಿಪಡಿಸದೇ ಜಗತ್ತೆಲ್ಲವೂ ಮ್ಲೇಚ್ಛಭೂತವಾಗುತ್ತದೆ.

03188046a ನ ಕಶ್ಚಿತ್ಕಸ್ಯ ಚಿಚ್ಚ್ರೋತಾ ನ ಕಶ್ಚಿತ್ಕಸ್ಯ ಚಿದ್ಗುರುಃ।
03188046c ತಮೋಗ್ರಸ್ತಸ್ತದಾ ಲೋಕೋ ಭವಿಷ್ಯತಿ ನರಾಧಿಪ।।

ನರಾಧಿಪ! ಯಾರೂ ಯಾರೊಬ್ಬರ ವಿದ್ಯಾರ್ಥಿಯೂ ಯಾರೊಬ್ಬರ ಗುರುವೂ ಆಗಿರುವುದಿಲ್ಲ ಮತ್ತು ಆಗ ಲೋಕವು ಅಜ್ಞಾನದ ಕತ್ತಲೆಯಿಂದ ತುಂಬಿಹೋಗಿರುತ್ತದೆ.

03188047a ಪರಮಾಯುಶ್ಚ ಭವಿತಾ ತದಾ ವರ್ಷಾಣಿ ಷೋಡಶ।
03188047c ತತಃ ಪ್ರಾಣಾನ್ವಿಮೋಕ್ಷ್ಯಂತಿ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರಬಂದಾಗ ಜೀವವು ಹೆಚ್ಚಾಗಿ ಹದಿನಾರು ವರ್ಷಗಳು ಮಾತ್ರ ಇರುತ್ತದೆ. ಆಗಲೇ ಪ್ರಾಣವನ್ನು ಬಿಡುತ್ತಾರೆ.

03188048a ಪಂಚಮೇ ವಾಥ ಷಷ್ಠೇ ವಾ ವರ್ಷೇ ಕನ್ಯಾ ಪ್ರಸೂಯತೇ।
03188048c ಸಪ್ತವರ್ಷಾಷ್ಟವರ್ಷಾಶ್ಚ ಪ್ರಜಾಸ್ಯಂತಿ ನರಾಸ್ತದಾ।।

ಐದು ಅಥವಾ ಆರು ವರ್ಷಗಳಲ್ಲಿಯೇ ಕನ್ಯೆಯರು ಪ್ರಸವಿಸುತ್ತಾರೆ. ಮತ್ತು ಏಳೆಂಟು ವರ್ಷಗಳಲ್ಲಿಯೇ ಹುಡುಗರು ತಂದೆಯರಾಗುತ್ತಾರೆ.

03188049a ಪತ್ಯೌ ಸ್ತ್ರೀ ತು ತದಾ ರಾಜನ್ಪುರುಷೋ ವಾ ಸ್ತ್ರಿಯಂ ಪ್ರತಿ।
03188049c ಯುಗಾಂತೇ ರಾಜಶಾರ್ದೂಲ ನ ತೋಷಮುಪಯಾಸ್ಯತಿ।।

ರಾಜನ್! ರಾಜಶಾರ್ದೂಲ! ಯುಗಾಂತದಲ್ಲಿ ಪತಿ-ಪತ್ನಿಯರು ಪರಸ್ಪರರಲ್ಲಿ ತೃಪ್ತಿಯನ್ನು ಪಡೆಯುವುದಿಲ್ಲ.

03188050a ಅಲ್ಪದ್ರವ್ಯಾ ವೃಥಾಲಿಂಗಾ ಹಿಂಸಾ ಚ ಪ್ರಭವಿಷ್ಯತಿ।
03188050c ನ ಕಶ್ಚಿತ್ಕಸ್ಯ ಚಿದ್ದಾತಾ ಭವಿಷ್ಯತಿ ಯುಗಕ್ಷಯೇ।।

ಯುಗಕ್ಷಯದಲ್ಲಿ ಬಡವರಾಗಿರತ್ತಾರೆ, ಪ್ರಯೋಜನವಿಲ್ಲದ ಚಿಹ್ನೆಗಳನ್ನು ಧರಿಸುತ್ತಾರೆ, ಹಿಂಸೆಯು ಹುಟ್ಟುತ್ತದೆ, ಮತ್ತು ಯಾರೂ ಯಾರೊಬ್ಬರ ದಾತರೂ ಆಗಿರುವುದಿಲ್ಲ.

03188051a ಅಟ್ಟಶೂಲಾ ಜನಪದಾಃ ಶಿವಶೂಲಾಶ್ಚತುಷ್ಪಥಾಃ।
03188051c ಕೇಶಶೂಲಾಃ ಸ್ತ್ರಿಯಶ್ಚಾಪಿ ಭವಿಷ್ಯಂತಿ ಯುಗಕ್ಷಯೇ।।

ಯುಗಕ್ಷಯದಲ್ಲಿ ಜನಪದಗಳಲ್ಲಿ ಬಹುಮಹಡಿಗಳ ಕಟ್ಟಡಗಳಾಗುತ್ತವೆ, ಚೌರಾಯಗಳಲ್ಲಿ ತೋಳಗಳು ಬರುತ್ತಿರುತ್ತವೆ ಮತ್ತು ಸ್ತ್ರೀಯರು ಕೂದಲುಗಳುಳ್ಳವರಾಗುತ್ತಾರೆ.

03188052a ಮ್ಲೇಚ್ಚಾಃ ಕ್ರೂರಾಃ ಸರ್ವಭಕ್ಷಾ ದಾರುಣಾಃ ಸರ್ವಕರ್ಮಸು।
03188052c ಭಾವಿನಃ ಪಶ್ಚಿಮೇ ಕಾಲೇ ಮನುಷ್ಯಾ ನಾತ್ರ ಸಂಶಯಃ।।

ಕಾಲವು ಕೊನೆಗೊಳ್ಳುವಾಗ ಎಲ್ಲರೂ ಎಲ್ಲವನ್ನೂ ತಿನ್ನುವ ಕ್ರೂರ ಮ್ಲೇಚ್ಛರಾಗುತ್ತಾರೆ ಮತ್ತು ಎಲ್ಲ ಕರ್ಮಗಳಲ್ಲಿ ದಾರುಣರಾಗುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03188053a ಕ್ರಯವಿಕ್ರಯಕಾಲೇ ಚ ಸರ್ವಃ ಸರ್ವಸ್ಯ ವಂಚನಂ।
03188053c ಯುಗಾಂತೇ ಭರತಶ್ರೇಷ್ಠ ವೃತ್ತಿಲೋಭಾತ್ಕರಿಷ್ಯತಿ।।

ಭರತಶ್ರೇಷ್ಠ! ಯುಗಾಂತದಲ್ಲಿ, ಮಾರುವಾಗ ಮತ್ತು ಕೊಳ್ಳುವಾಗ ಎಲ್ಲರೂ, ವೃತ್ತಿಲೋಭದಿಂದ, ಎಲ್ಲದರಲ್ಲಿಯು ಮೋಸಮಾಡುತ್ತಾರೆ.

03188054a ಜ್ಞಾನಾನಿ ಚಾಪ್ಯವಿಜ್ಞಾಯ ಕರಿಷ್ಯಂತಿ ಕ್ರಿಯಾಸ್ತಥಾ।
03188054c ಆತ್ಮಚ್ಚಂದೇನ ವರ್ತಂತೇ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರವಾದಾಗ ಸರಿಯಾಗಿ ತಿಳಿದುಕೊಳ್ಳದೇ ಜ್ಞಾನಿಗಳು ಕ್ರಿಯೆಗಳನ್ನು ನಡೆಸುತ್ತಾರೆ; ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಾರೆ.

03188055a ಸ್ವಭಾವಾತ್ಕ್ರೂರಕರ್ಮಾಣಶ್ಚಾನ್ಯೋನ್ಯಮಭಿಶಂಕಿನಃ।
03188055c ಭವಿತಾರೋ ಜನಾಃ ಸರ್ವೇ ಸಂಪ್ರಾಪ್ತೇ ಯುಗಸಂಕ್ಷಯೇ।।

ಯುಗಕ್ಷಯವು ಬಂದಾಗ ಎಲ್ಲ ಜನರೂ ಸ್ವಭಾವತಃ ಕ್ರೂರಕರ್ಮಿಗಳಾಗಿದ್ದು ಅನ್ಯೋನ್ಯರನ್ನು ಶಂಕಿಸುವವರಾಗುತ್ತಾರೆ.

03188056a ಆರಾಮಾಂಶ್ಚೈವ ವೃಕ್ಷಾಂಶ್ಚ ನಾಶಯಿಷ್ಯಂತಿ ನಿರ್ವ್ಯಥಾಃ।
03188056c ಭವಿತಾ ಸಂಕ್ಷಯೋ ಲೋಕೇ ಜೀವಿತಸ್ಯ ಚ ದೇಹಿನಾಂ।।

ನಿರ್ವ್ಯರ್ಥವಾಗಿ ಉದ್ಯಾನವನಗಳನ್ನೂ ಮರಗಳನ್ನೂ ನಾಶಪಡಿಸುತ್ತಾರೆ. ಲೋಕದಲ್ಲಿ ದೇಹಧರಿಸಿರುವವರ ಜೀವಗಳು ನಾಶಹೊಂದುತ್ತವೆ.

03188057a ತಥಾ ಲೋಭಾಭಿಭೂತಾಶ್ಚ ಚರಿಷ್ಯಂತಿ ಮಹೀಮಿಮಾಂ।
03188057c ಬ್ರಾಹ್ಮಣಾಶ್ಚ ಭವಿಷ್ಯಂತಿ ಬ್ರಹ್ಮಸ್ವಾನಿ ಚ ಭುಂಜತೇ।।

ಲೋಭಕ್ಕೆ ದಾಸರಾಗಿ ಈ ಭೂಮಿಯಲ್ಲಿ ಸಂಚರಿಸುತ್ತಾರೆ. ಬ್ರಾಹ್ಮಣರೂ ಕೂಡ ಬ್ರಹ್ಮಸ್ವವನ್ನು ಭೋಗಿಸುತ್ತಾರೆ.

03188058a ಹಾಹಾಕೃತಾ ದ್ವಿಜಾಶ್ಚೈವ ಭಯಾರ್ತಾ ವೃಷಲಾರ್ದಿತಾಃ।
03188058c ತ್ರಾತಾರಮಲಭಂತೋ ವೈ ಭ್ರಮಿಷ್ಯಂತಿ ಮಹೀಮಿಮಾಂ।।

ದ್ವಿಜರೂ ಕೂಡ ಶೂದ್ರರಿಂದ ಆರ್ದಿತರಾಗಿ ಭಯಾರ್ತರಾಗಿ ತ್ರಾತರು ಯಾರನ್ನೂ ಪಡೆಯದೇ ಹಾಹಾಕಾರ ಮಾಡುತ್ತಾ ಭೂಮಿಯಲ್ಲಿ ತಿರುಗಾಡುತ್ತಿರುತ್ತಾರೆ.

03188059a ಜೀವಿತಾಂತಕರಾ ರೌದ್ರಾಃ ಕ್ರೂರಾಃ ಪ್ರಾಣಿವಿಹಿಂಸಕಾಃ।
03188059c ಯದಾ ಭವಿಷ್ಯಂತಿ ನರಾಸ್ತದಾ ಸಂಕ್ಷೇಪ್ಸ್ಯತೇ ಯುಗಂ।।

ಯಾವಾಗ ನರರು ರೌದ್ರರೂ, ಕ್ರೂರರೂ, ಪ್ರಾಣಿಹಿಂಸಕರೂ, ಜೀವಿಗಳನ್ನು ಕೊಲ್ಲುವವರೂ ಆಗುತ್ತಾರೋ ಆಗ ಯುಗವು ಅಂತ್ಯಗೊಳ್ಳುತ್ತದೆ.

03188060a ಆಶ್ರಯಿಷ್ಯಂತಿ ಚ ನದೀಃ ಪರ್ವತಾನ್ವಿಷಮಾಣಿ ಚ।
03188060c ಪ್ರಧಾವಮಾನಾ ವಿತ್ರಸ್ತಾ ದ್ವಿಜಾಃ ಕುರುಕುಲೋದ್ವಹ।।

ಕುರುಕುಲೋದ್ವಹ! ಭಯಗೊಂಡು ಪಲಾಯನ ಮಾಡುವ ದ್ವಿಜರು ನದಿಗಳಲ್ಲಿ, ಪರ್ವತಗಳಲ್ಲಿ ಮತ್ತು ಕಣಿವೆಗಳಲ್ಲಿ ಆಶ್ರಯವನ್ನು ಹೊಂದುತ್ತಾರೆ.

03188061a ದಸ್ಯುಪ್ರಪೀಡಿತಾ ರಾಜನ್ಕಾಕಾ ಇವ ದ್ವಿಜೋತ್ತಮಾಃ।
03188061c ಕುರಾಜಭಿಶ್ಚ ಸತತಂ ಕರಭಾರಪ್ರಪೀಡಿತಾಃ।।

ರಾಜನ್! ದ್ವಿಜೋತ್ತಮರು ಕಾಗೆಗಳಂತೆ ದಸ್ಯುಗಳ ಪೀಡೆಗೊಳಗಾಗುತ್ತಾರೆ, ಮತ್ತು ಕೆಟ್ಟರಾಜರ ತೆರಿಗೆಯ ಭಾರದಿಂದಲೂ ಪೀಡಿತರಾಗಿರುತ್ತಾರೆ.

03188062a ಧೈರ್ಯಂ ತ್ಯಕ್ತ್ವಾ ಮಹೀಪಾಲ ದಾರುಣೇ ಯುಗಸಂಕ್ಷಯೇ।
03188062c ವಿಕರ್ಮಾಣಿ ಕರಿಷ್ಯಂತಿ ಶೂದ್ರಾಣಾಂ ಪರಿಚಾರಕಾಃ।।

ಮಹೀಪಾಲ! ದಾರುಣ ಯುಗಕ್ಷಯದಲ್ಲಿ ಧೈರ್ಯವನ್ನು ತೊರೆದು ಶೂದ್ರರ ಪರಿಚಾರಕರಾಗಿ ಕೆಟ್ಟ ಕರ್ಮಗಳನ್ನು ಮಾಡುವವರಾಗುತ್ತಾರೆ.

03188063a ಶೂದ್ರಾ ಧರ್ಮಂ ಪ್ರವಕ್ಷ್ಯಂತಿ ಬ್ರಾಹ್ಮಣಾಃ ಪರ್ಯುಪಾಸಕಾಃ।
03188063c ಶ್ರೋತಾರಶ್ಚ ಭವಿಷ್ಯಂತಿ ಪ್ರಾಮಾಣ್ಯೇನ ವ್ಯವಸ್ಥಿತಾಃ।।

ಶೂದ್ರರು ಧರ್ಮವನ್ನು ನಿರ್ಧರಿಸುವವರಾಗುತ್ತಾರೆ; ಬ್ರಾಹ್ಮಣರು ಅವರ ಸೇವಕರಾಗಿ, ಶಿಷ್ಯರಾಗಿ ಅವರ ಪ್ರಮಾಣದಂತೆ ನಡೆದುಕೊಳ್ಳುವವರಾಗುತ್ತಾರೆ.

03188064a ವಿಪರೀತಶ್ಚ ಲೋಕೋಽಯಂ ಭವಿಷ್ಯತ್ಯಧರೋತ್ತರಃ।
03188064c ಏಡೂಕಾನ್ ಪೂಜಯಿಷ್ಯಂತಿ ವರ್ಜಯಿಷ್ಯಂತಿ ದೇವತಾಃ।।
03188064e ಶೂದ್ರಾಃ ಪರಿಚರಿಷ್ಯಂತಿ ನ ದ್ವಿಜಾನ್ಯುಗಸಂಕ್ಷಯೇ।।

ಯುಗಕ್ಷಯದಲ್ಲಿ ಈ ಲೋಕವು ಅಡಿಮೇಲಾಗುತ್ತದೆ. ಜನರು ದೇವತೆಗಳನ್ನು ವರ್ಜಿಸಿ ಏಡೂಕಗಳನ್ನು ಪೂಜಿಸುವವರಾಗುತ್ತಾರೆ. ಶೂದ್ರರು ದ್ವಿಜರ ಸೇವೆಯನ್ನು ಮಾಡುವುದಿಲ್ಲ.

03188065a ಆಶ್ರಮೇಷು ಮಹರ್ಷೀಣಾಂ ಬ್ರಾಹ್ಮಣಾವಸಥೇಷು ಚ।
03188065c ದೇವಸ್ಥಾನೇಷು ಚೈತ್ಯೇಷು ನಾಗಾನಾಮಾಲಯೇಷು ಚ।।
03188066a ಏಡೂಕಚಿಹ್ನಾ ಪೃಥಿವೀ ನ ದೇವಗೃಹಭೂಷಿತಾ।
03188066c ಭವಿಷ್ಯತಿ ಯುಗೇ ಕ್ಷೀಣೇ ತದ್ಯುಗಾಂತಸ್ಯ ಲಕ್ಷಣಂ।।

ಯುಗವು ಕ್ಷೀಣವಾಗುವಾಗ ಮಹರ್ಷಿಗಳ ಆಶ್ರಮಗಳಲ್ಲಿ, ಬ್ರಾಹ್ಮಣರ ವಸತಿಗಳಲ್ಲಿ, ದೇವಸ್ಥಾನಗಳಲ್ಲಿ, ಚೈತ್ಯಗಳಲ್ಲಿ, ನಾಗಾಲಯಗಳಲ್ಲಿ ದೇವಗೃಹಗಳ ಭೂಷಣವಿಲ್ಲದೇ ಏಡೂಕಗಳ ಚಿಹ್ನೆಗಳಿರುತ್ತವೆ. ಇದೇ ಯುಗಾಂತದ ಲಕ್ಷಣವನ್ನು ಸೂಚಿಸುತ್ತದೆ.

03188067a ಯದಾ ರೌದ್ರಾ ಧರ್ಮಹೀನಾ ಮಾಂಸಾದಾಃ ಪಾನಪಾಸ್ತಥಾ।
03188067c ಭವಿಷ್ಯಂತಿ ನರಾ ನಿತ್ಯಂ ತದಾ ಸಂಕ್ಷೇಪ್ಸ್ಯತೇ ಯುಗಂ।।

ಯಾವಾಗ ನರರು ರೌದ್ರರಾಗಿ ನಿತ್ಯವೂ ಮಾಂಸಭಕ್ಷಕರೂ ಮದ್ಯವನ್ನು ಸೇವಿಸುವವರು ಆಗುತ್ತಾರೋ ಆಗ ಯುಗಕ್ಷಯವಾಗುತ್ತದೆ.

03188068a ಪುಷ್ಪೇ ಪುಷ್ಪಂ ಯದಾ ರಾಜನ್ಫಲೇ ಫಲಮುಪಾಶ್ರಿತಂ।
03188068c ಪ್ರಜಾಸ್ಯತಿ ಮಹಾರಾಜ ತದಾ ಸಂಕ್ಷೇಪ್ಸ್ಯತೇ ಯುಗಂ।।

ರಾಜನ್! ಮಹಾರಾಜ! ಯಾವಾಗ ಹೂವಿನಿಂದ ಹೂವು ಮತ್ತು ಹಣ್ಣಿನಿಂದ ಹಣ್ಣು ಹುಟ್ಟಿಕೊಳ್ಳುತ್ತದೆಯೋ ಆಗ ಯುಗಕ್ಷಯವಾಗುತ್ತದೆ.

03188069a ಅಕಾಲವರ್ಷೀ ಪರ್ಜನ್ಯೋ ಭವಿಷ್ಯತಿ ಗತೇ ಯುಗೇ।
03188069c ಅಕ್ರಮೇಣ ಮನುಷ್ಯಾಣಾಂ ಭವಿಷ್ಯತಿ ತದಾ ಕ್ರಿಯಾ।।
03188069e ವಿರೋಧಮಥ ಯಾಸ್ಯಂತಿ ವೃಷಲಾ ಬ್ರಾಹ್ಮಣೈಃ ಸಹ।।

ಯುಗವು ಕಳೆಯುವಾಗ ಪರ್ಜ್ಯನ್ಯವು ಕಾಲಕ್ಕೆ ಮಳೆಸುರಿಸುವುದಿಲ್ಲ. ಮನುಷ್ಯರ ಕ್ರಿಯೆಗಳು ಅಕ್ರಮವಾಗಿರುತ್ತವೆ. ಮತ್ತು ಶೂದ್ರರು ಬ್ರಾಹ್ಮಣರೊಂದಿಗೆ ವಿರೋಧದಲ್ಲಿರುತ್ತಾರೆ.

03188070a ಮಹೀ ಮ್ಲೇಚ್ಚಸಮಾಕೀರ್ಣಾ ಭವಿಷ್ಯತಿ ತತೋಽಚಿರಾತ್।
03188070c ಕರಭಾರಭಯಾದ್ವಿಪ್ರಾ ಭಜಿಷ್ಯಂತಿ ದಿಶೋ ದಶ।।

ಸ್ವಲ್ಪವೇ ಸಮಯದಲ್ಲಿ ಭೂಮಿಯು ಮ್ಲೇಚ್ಛ ಸಂಕೀರ್ಣವಾಗುತ್ತದೆ. ಕರಭಾರದ ಭಯದಿಂದ ವಿಪ್ರರು ಹತ್ತೂ ಕಡೆ ಪಲಾಯನಗೈಯುತ್ತಾರೆ.

03188071a ನಿರ್ವಿಶೇಷಾ ಜನಪದಾ ನರಾವೃಷ್ಟಿಭಿರರ್ದಿತಾಃ।
03188071c ಆಶ್ರಮಾನಭಿಪತ್ಸ್ಯಂತಿ ಫಲಮೂಲೋಪಜೀವಿನಃ।।

ಯಾವುದೂ ಬಿಡದೇ ಎಲ್ಲ ಜನಪದಗಳೂ ಅನಾವೃಷ್ಟಿಯಿಂದ ಪೀಡಿತರಾಗಿ, ಫಲಮೂಲಗಳಿಂದಲೇ ಉಪಜೀವನ ಮಾಡಿಕೊಂಡು ಆಶ್ರಮಗಳ ಮೇಲೆ ಅವಲಂಬಿಸಿರುತ್ತಾರೆ.

03188072a ಏವಂ ಪರ್ಯಾಕುಲೇ ಲೋಕೇ ಮರ್ಯಾದಾ ನ ಭವಿಷ್ಯತಿ।
03188072c ನ ಸ್ಥಾಸ್ಯಂತ್ಯುಪದೇಶೇ ಚ ಶಿಷ್ಯಾ ವಿಪ್ರಿಯಕಾರಿಣಃ।।
03188073a ಆಚಾರ್ಯೋಪನಿಧಿಶ್ಚೈವ ವತ್ಸ್ಯತೇ ತದನಂತರಂ।
03188073c ಅರ್ಥಯುಕ್ತ್ಯಾ ಪ್ರವತ್ಸ್ಯಂತಿ ಮಿತ್ರಸಂಬಂಧಿಬಾಂಧವಾಃ।।
03188073e ಅಭಾವಃ ಸರ್ವಭೂತಾನಾಂ ಯುಗಾಂತೇ ಚ ಭವಿಷ್ಯತಿ।।

ಈ ರೀತಿಯ ಕಷ್ಟಕಾಲದಲ್ಲಿ ಲೋಕದಲ್ಲಿ ಮರ್ಯಾದೆಯೇ ಇರುವುದಿಲ್ಲ. ಶಿಷ್ಯರು ಉಪದೇಶದಂತೆ ನಡೆದುಕೊಳ್ಳದೇ ವಿರುದ್ಧರಾಗಿರುತ್ತಾರೆ. ಅನಂತರ ಆಚಾರ್ಯರು ವತ್ಸರು ಮತ್ತು ಸ್ನೇಹಿತರಿಲ್ಲದೆಯೇ ಇರುತ್ತಾರೆ. ಮಿತ್ರರು, ಸಂಬಂಧಿಗಳು ಮತ್ತು ಬಾಂಧವರು ಹಣಕ್ಕಾಗಿ ಬಿಟ್ಟು ಹೋಗುತ್ತಾರೆ. ಯುಗಾಂತದಲ್ಲಿ ಸರ್ವಭೂತಗಳಿಗೆ ಅಭಾವವುಂಟಾಗುತ್ತದೆ.

03188074a ದಿಶಃ ಪ್ರಜ್ವಲಿತಾಃ ಸರ್ವಾ ನಕ್ಷತ್ರಾಣಿ ಚಲಾನಿ ಚ।
03188074c ಜ್ಯೋತೀಂಷಿ ಪ್ರತಿಕೂಲಾನಿ ವಾತಾಃ ಪರ್ಯಾಕುಲಾಸ್ತಥಾ।।
03188074e ಉಲ್ಕಾಪಾತಾಶ್ಚ ಬಹವೋ ಮಹಾಭಯನಿದರ್ಶಕಾಃ।।

ದಿಕ್ಕುಗಳು ಪ್ರಜ್ವಲಿಸುತ್ತವೆ; ಎಲ್ಲ ನಕ್ಷತ್ರಗಳೂ ಚಲಿಸುತ್ತವೆ; ತಾರೆಗಳು ಅನಿಷ್ಟವನ್ನು ಸೂಚಿಸುತ್ತವೆ; ಗಾಳಿಯು ವಿನಾಶಕಾರಿಯಾಗುತ್ತದೆ; ಮತ್ತು ಮಹಾಭಯವನ್ನು ತೋರಿಸುವ ಬಹಳಷ್ಟು ಉಲ್ಕಾಪಾತಗಳಾಗುತ್ತವೆ.

03188075a ಷಡ್ಭಿರನ್ಯೈಶ್ಚ ಸಹಿತೋ ಭಾಸ್ಕರಃ ಪ್ರತಪಿಷ್ಯತಿ।
03188075c ತುಮುಲಾಶ್ಚಾಪಿ ನಿರ್ಹ್ರಾದಾ ದಿಗ್ದಾಹಾಶ್ಚಾಪಿ ಸರ್ವಶಃ।।
03188075e ಕಬಂಧಾಂತರ್ಹಿತೋ ಭಾನುರುದಯಾಸ್ತಮಯೇ ತದಾ।।

ಭಾಸ್ಕರನು ಇತರ ಆರರೊಂದಿಗೆ ಉರಿಯುತ್ತಾನೆ; ಎಲ್ಲೆಡೆಯಲ್ಲಿಯೂ ಗುಡುಗಿನ ತುಮುಲಗಳುಂಟಾಗುತ್ತವೆ; ಉದಯ ಮತ್ತು ಅಸ್ತಗಳಲ್ಲಿ ಸೂರ್ಯನನ್ನು ಮೋಡಗಳು ಕವಿದಿರುತ್ತವೆ.

03188076a ಅಕಾಲವರ್ಷೀ ಚ ತದಾ ಭವಿಷ್ಯತಿ ಸಹಸ್ರದೃಕ್।
03188076c ಸಸ್ಯಾನಿ ಚ ನ ರೋಕ್ಷ್ಯಂತಿ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರವಾದಾಗ ಸಹಸ್ರಾಕ್ಷನು ಕಾಲಕ್ಕೆ ಸರಿಯಾಗಿ ಮಳೆಸುರಿಸುವುದಿಲ್ಲ. ಸಸ್ಯಗಳು ಬೆಳೆಯುವುದಿಲ್ಲ.

03188077a ಅಭೀಕ್ಷ್ಣಂ ಕ್ರೂರವಾದಿನ್ಯಃ ಪರುಷಾ ರುದಿತಪ್ರಿಯಾಃ।
03188077c ಭರ್ತೄಣಾಂ ವಚನೇ ಚೈವ ನ ಸ್ಥಾಸ್ಯಂತಿ ತದಾ ಸ್ತ್ರಿಯಃ।।

ಸ್ತ್ರೀಯರು ಗಡುಸಾಗಿರುತ್ತಾರೆ, ಕ್ರೂರವಾಗಿ ಮಾತನ್ನಾಡುತ್ತಾರೆ, ಮತ್ತು ಅವರ ಗಂಡಂದಿರ ಮಾತಿನಂತೆ ನಡೆದುಕೊಳ್ಳುವುದಿಲ್ಲ.

03188078a ಪುತ್ರಾಶ್ಚ ಮಾತಾಪಿತರೌ ಹನಿಷ್ಯಂತಿ ಯುಗಕ್ಷಯೇ।
03188078c ಸೂದಯಿಷ್ಯಂತಿ ಚ ಪತೀನ್ಸ್ತ್ರಿಯಃ ಪುತ್ರಾನಪಾಶ್ರಿತಾಃ।।

ಯುಗಕ್ಷಯದಲ್ಲಿ ಮಕ್ಕಳು ತಂದೆತಾಯಂದಿರನ್ನು ಕೊಲ್ಲುತ್ತಾರೆ; ಸ್ತ್ರೀಯರು ಗಂಡಂದಿರನ್ನು ಕೊಂದು ಮಕ್ಕಳ ಆಶ್ರಯದಲ್ಲಿರುತ್ತಾರೆ.

03188079a ಅಪರ್ವಣಿ ಮಹಾರಾಜ ಸೂರ್ಯಂ ರಾಹುರುಪೈಷ್ಯತಿ।
03188079c ಯುಗಾಂತೇ ಹುತಭುಕ್ಚಾಪಿ ಸರ್ವತಃ ಪ್ರಜ್ವಲಿಷ್ಯತಿ।।

ಮಹಾರಾಜ! ಯುಗಾಂತದಲ್ಲಿ ಅಕಾಲದಲ್ಲಿ ಸೂರ್ಯ-ರಾಹುಗಳ ಗ್ರಹಣವಾಗುತ್ತದೆ; ಮತ್ತು ಎಲ್ಲಾಕಡೆಯಲ್ಲಿಯೂ ಅಗ್ನಿಯು ಪ್ರಜ್ವಲಿಸುತ್ತಿರುತ್ತದೆ.

03188080a ಪಾನೀಯಂ ಭೋಜನಂ ಚೈವ ಯಾಚಮಾನಾಸ್ತದಾಧ್ವಗಾಃ।
03188080c ನ ಲಪ್ಸ್ಯಂತೇ ನಿವಾಸಂ ಚ ನಿರಸ್ತಾಃ ಪಥಿ ಶೇರತೇ।।

ಪರ್ಯಟಕರು ನೀರು, ಭೋಜನಗಳನ್ನು ಕೇಳಿದರೂ ದೊರೆಯದೇ ಇದ್ದಾಗ ಆಶ್ರಯಗಳಿಲ್ಲದೇ ರಸ್ತೆಗಳಲ್ಲಿಯೇ ವಾಸಿಸುತ್ತಾರೆ.

03188081a ನಿರ್ಘಾತವಾಯಸಾ ನಾಗಾಃ ಶಕುನಾಃ ಸಮೃಗದ್ವಿಜಾಃ।
03188081c ರೂಕ್ಷಾ ವಾಚೋ ವಿಮೋಕ್ಷ್ಯಂತಿ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರವಾದಾಗ ಅಪಶಕುನದ ಕಾಗೆಗಳು, ಹಾವುಗಳು, ಪಕ್ಷಿಗಳು, ಮೃಗಗಳು ಮತ್ತು ಪ್ರಾಣಿಗಳು ಘೋರವಾಗಿ ಕಿರುಚುವರು.

03188082a ಮಿತ್ರಸಂಬಂಧಿನಶ್ಚಾಪಿ ಸಂತ್ಯಕ್ಷ್ಯಂತಿ ನರಾಸ್ತದಾ।
03188082c ಜನಂ ಪರಿಜನಂ ಚಾಪಿ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರವಾದಾಗ ಮಿತ್ರರು ಮತ್ತು ಸಂಬಂಧಿಗಳು ತಮ್ಮ ಜನರನ್ನು ಮತ್ತು ಪರಿಸರಗಳನ್ನು ತೊರೆಯುತ್ತಾರೆ.

03188083a ಅಥ ದೇಶಾನ್ದಿಶಶ್ಚಾಪಿ ಪತ್ತನಾನಿ ಪುರಾಣಿ ಚ।
03188083c ಕ್ರಮಶಃ ಸಂಶ್ರಯಿಷ್ಯಂತಿ ಯುಗಾಂತೇ ಪರ್ಯುಪಸ್ಥಿತೇ।।

ಯುಗಾಂತವು ಹತ್ತಿರವಾದಾಗ ಅವರು ದೇಶಗಳು, ದಿಶಗಳು, ಪಟ್ಟಣಗಳು, ಮತ್ತು ಪುರಗಳಲ್ಲಿ ಕ್ರಮಶವಾಗಿ ಆಶ್ರಯಪಡೆಯುತ್ತಾರೆ.

03188084a ಹಾ ತಾತ ಹಾ ಸುತೇತ್ಯೇವಂ ತದಾ ವಾಚಃ ಸುದಾರುಣಾಃ।
03188084c ವಿಕ್ರೋಶಮಾನಶ್ಚಾನ್ಯೋನ್ಯಂ ಜನೋ ಗಾಂ ಪರ್ಯಟಿಷ್ಯತಿ।।

ಹಾ ತಂದೇ! ಹಾ ಮಗನೇ! ಎಂದು ಸುದಾರುಣವಾಗಿ ಅನ್ಯೋನ್ಯರನ್ನು ಕೂಗಿ ಕರೆಯುತ್ತಾ ಜನರು ಭೂಮಿಯಮೇಲೆ ತಿರುಗುತ್ತಿರುತ್ತಾರೆ.

03188085a ತತಸ್ತುಮುಲಸಂಘಾತೇ ವರ್ತಮಾನೇ ಯುಗಕ್ಷಯೇ।
03188085c ದ್ವಿಜಾತಿಪೂರ್ವಕೋ ಲೋಕಃ ಕ್ರಮೇಣ ಪ್ರಭವಿಷ್ಯತಿ।।

ತುಮುಲಗಳೊಂದಿಗೆ ವರ್ತಮಾನದಲ್ಲಿ ಯುಗಕ್ಷಯವಾಗಲು ಬ್ರಾಹ್ಮಣರಿಂದ ಪ್ರಾರಂಭವಾಗಿ ಲೋಕವು ಕ್ರಮೇಣವಾಗಿ ಪುನಃ ಹುಟ್ಟಿಕೊಳ್ಳುತ್ತದೆ.

03188086a ತತಃ ಕಾಲಾಂತರೇಽನ್ಯಸ್ಮಿನ್ಪುನರ್ಲೋಕವಿವೃದ್ಧಯೇ।
03188086c ಭವಿಷ್ಯತಿ ಪುನರ್ದೈವಮನುಕೂಲಂ ಯದೃಚ್ಚಯಾ।।

ಈ ಕಾಲಾಂತರದಲ್ಲಿ ಪುನಃ ಲೋಕವು ವರ್ಧಿಸುತ್ತದೆ. ಪುನಃ ದೈವವು ಅಭಿವೃದ್ಧಿಗೆ ಅನುಕೂಲ ಮಾಡಿಕೊಡುತ್ತದೆ.

03188087a ಯದಾ ಚಂದ್ರಶ್ಚ ಸೂರ್ಯಶ್ಚ ತಥಾ ತಿಷ್ಯಬೃಹಸ್ಪತೀ।
03188087c ಏಕರಾಶೌ ಸಮೇಷ್ಯಂತಿ ಪ್ರಪತ್ಸ್ಯತಿ ತದಾ ಕೃತಂ।।

ಯಾವಾಗ ಚಂದ್ರ, ಸೂರ್ಯ, ತಿಷ್ಯ ಮತ್ತು ಬೃಹಸ್ಪತಿಗಳು ಒಂದೇ ರಾಶಿಯಲ್ಲಿ ಸೇರುತ್ತಾರೋ ಆಗ ಕೃತಯುಗವು ಪುನಃ ಪ್ರಾರಂಭವಾಗುತ್ತದೆ.

03188088a ಕಾಲವರ್ಷೀ ಚ ಪರ್ಜನ್ಯೋ ನಕ್ಷತ್ರಾಣಿ ಶುಭಾನಿ ಚ।
03188088c ಪ್ರದಕ್ಷಿಣಾ ಗ್ರಹಾಶ್ಚಾಪಿ ಭವಿಷ್ಯಂತ್ಯನುಲೋಮಗಾಃ।।
03188088e ಕ್ಷೇಮಂ ಸುಭಿಕ್ಷಮಾರೋಗ್ಯಂ ಭವಿಷ್ಯತಿ ನಿರಾಮಯಂ।।

ಪರ್ಜ್ಯನ್ಯನು ಕಾಲಕ್ಕೆ ಮಳೆಸುರಿಸುತ್ತಾನೆ. ನಕ್ಷತ್ರಗಳು ಶುಭವನ್ನುಂಟುಮಾಡುತ್ತವೆ. ಪ್ರದಕ್ಷಿಣೆಮಾಡುವ ಗ್ರಹಗಳೂ ಕೂಡ ಏಳ್ಗೆಯನ್ನು ಸೂಚಿಸುತ್ತವೆ. ಕ್ಷೇಮ, ಸುಭಿಕ್ಷ, ಆರೋಗ್ಯಗಳಿಂದ ನಿರಾಮಯವಾಗುತ್ತದೆ.

03188089a ಕಲ್ಕಿರ್ವಿಷ್ಣುಯಶಾ ನಾಮ ದ್ವಿಜಃ ಕಾಲಪ್ರಚೋದಿತಃ।
03188089c ಉತ್ಪತ್ಸ್ಯತೇ ಮಹಾವೀರ್ಯೋ ಮಹಾಬುದ್ಧಿಪರಾಕ್ರಮಃ।।
03188090a ಸಂಭೂತಃ ಸಂಭಲಗ್ರಾಮೇ ಬ್ರಾಹ್ಮಣಾವಸಥೇ ಶುಭೇ।
03188090c ಮನಸಾ ತಸ್ಯ ಸರ್ವಾಣಿ ವಾಹನಾನ್ಯಾಯುಧಾನಿ ಚ।।
03188090e ಉಪಸ್ಥಾಸ್ಯಂತಿ ಯೋಧಾಶ್ಚ ಶಸ್ತ್ರಾಣಿ ಕವಚಾನಿ ಚ।।

ಕಾಲದ ಪ್ರಚೋದನೆಯಿಂದ ಕಲ್ಕಿ ವಿಷ್ಣುಯಶ ಎಂಬ ಹೆಸರಿನ ಮಹಾವೀರ್ಯ ಮಹಾಬುದ್ಧಿ ಪರಾಕ್ರಮಿಯಾದ ದ್ವಿಜನು ಸಂಭಲಗ್ರಾಮದಲ್ಲಿ ಶುಭವಾದ ಬ್ರಾಹ್ಮಣ ಗೃಹದಲ್ಲಿ ಹುಟ್ಟುತ್ತಾನೆ. ಅವನ ಮನಸ್ಸಿನಂತೆ ಸರ್ವ ವಾಹನಗಳೂ, ಆಯುಧಗಳೂ, ಯೋಧರೂ, ಶಸ್ತ್ರಗಳೂ ಕವಚಗಳೂ ನಿಯಂತ್ರಣದಲ್ಲಿರುತ್ತವೆ.

03188091a ಸ ಧರ್ಮವಿಜಯೀ ರಾಜಾ ಚಕ್ರವರ್ತೀ ಭವಿಷ್ಯತಿ।
03188091c ಸ ಚೇಮಂ ಸಂಕುಲಂ ಲೋಕಂ ಪ್ರಸಾದಮುಪನೇಷ್ಯತಿ।।

ಅವನು ಧರ್ಮವಿಜಯೀ ರಾಜಾ ಚಕ್ರವರ್ತಿಯಾಗುತ್ತಾನೆ. ಅವನು ಈ ಸಂಕುಲಕ್ಕೆ ಸಿಲುಕಿದ ಲೋಕವನ್ನು ಶಾಂತಗೊಳಿಸುತ್ತಾನೆ.

03188092a ಉತ್ಥಿತೋ ಬ್ರಾಹ್ಮಣೋ ದೀಪ್ತಃ ಕ್ಷಯಾಂತಕೃದುದಾರಧೀಃ।
03188092c ಸ ಸಂಕ್ಷೇಪೋ ಹಿ ಸರ್ವಸ್ಯ ಯುಗಸ್ಯ ಪರಿವರ್ತಕಃ।।

ಮೇಲೆದ್ದ ಆ ಉದಾರಮನಸ್ಸಿನ ಬ್ರಾಹ್ಮಣನು ದೀಪ್ತನಾಗಿ ಕ್ಷಯವನ್ನು ಕೊನೆಗೊಳಿಸಿ, ಸರ್ವರ ವಿನಾಶಕಾರಿಯೂ ಯುಗದ ಪರಿವರ್ತಕನೂ ಆಗುತ್ತಾನೆ.

03188093a ಸ ಸರ್ವತ್ರ ಗತಾನ್ಕ್ಷುದ್ರಾನ್ಬ್ರಾಹ್ಮಣೈಃ ಪರಿವಾರಿತಃ।
03188093c ಉತ್ಸಾದಯಿಷ್ಯತಿ ತದಾ ಸರ್ವಾನ್ಮ್ಲೇಚ್ಚಗಣಾನ್ದ್ವಿಜಃ।।

ಬ್ರಾಹ್ಮಣರಿಂದ ಪರಿವಾರಿತನಾಗಿ ಆ ದ್ವಿಜನು ಎಲ್ಲ ಮ್ಲೇಚ್ಛಗಣಗಳನ್ನು ಎಲ್ಲೇ ಇದ್ದರೂ ಕಿತ್ತೊಗೆಯುತ್ತಾನೆ.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಭವಿಷ್ಯಕಥನೇ ಅಷ್ಟಶೀತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಭವಿಷ್ಯಕಥನದಲ್ಲಿ ನೂರಾಎಂಭತ್ತೆಂಟನೆಯ ಅಧ್ಯಾಯವು.