186

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 186

ಸಾರ

ಯುಗಕ್ಷಯದ ಕುರಿತು ಯುಧಿಷ್ಠಿರನು ಮಾರ್ಕಂಡೇಯನನ್ನು ಪ್ರಶ್ನಿಸುವುದು (1-12). ಜನಾರ್ದನನೇ ಎಲ್ಲವಕ್ಕೂ ಕಾರಣ (13-17). ಯುಗಗಳ ಪ್ರಮಾಣ (18-21). ಯುಗಾಂತದ ವರ್ಣನೆ (22-55). ಪ್ರಲಯ (56-76). ಮಾರ್ಕಂಡೇಯನಿಗೆ ಬಾಲ ಮುಕುಂದನ ದರ್ಶನ (77-87). ಮುಕುಂದನ ದೇಹವನ್ನು ಪ್ರವೇಶಿಸಿ ಮಾರ್ಕಂಡೇಯನು ಸರ್ವಸ್ವವನ್ನೂ ನೋಡಿದುದು (88-115). ಮುಕುಂದನನ್ನು ಸ್ತುತಿಸಿದುದು (116-129).

03186001 ವೈಶಂಪಾಯನ ಉವಾಚ।
03186001a ತತಃ ಸ ಪುನರೇವಾಥ ಮಾರ್ಕಂಡೇಯಂ ಯಶಸ್ವಿನಂ।
03186001c ಪಪ್ರಚ್ಚ ವಿನಯೋಪೇತೋ ಧರ್ಮರಾಜೋ ಯುಧಿಷ್ಠಿರಃ।।

ವೈಶಂಪಾಯನನು ಹೇಳಿದನು: “ಆಗ ಯಶಸ್ವಿನಿ ಮಾರ್ಕಂಡೇಯನನ್ನು ಧರ್ಮರಾಜ ಯುಧಿಷ್ಠಿರನು ವಿನಯೋಪೇತನಾಗಿ ಪುನಃ ಹೀಗೆಂದು ಪ್ರಶ್ನಿಸಿದನು.

03186002a ನೈಕೇ ಯುಗಸಹಸ್ರಾಂತಾಸ್ತ್ವಯಾ ದೃಷ್ಟಾ ಮಹಾಮುನೇ।
03186002c ನ ಚಾಪೀಹ ಸಮಃ ಕಶ್ಚಿದಾಯುಷಾ ತವ ವಿದ್ಯತೇ।।
03186002e ವರ್ಜಯಿತ್ವಾ ಮಹಾತ್ಮಾನಂ ಬ್ರಾಹ್ಮಣಂ ಪರಮೇಷ್ಠಿನಂ।।

“ಮಹಾಮುನೇ! ನೀನು ಸಹಸ್ರಾರು ಯುಗಗಳ ಅಂತ್ಯವನ್ನು ನೋಡಿದ್ದೀಯೆ. ಬ್ರಾಹ್ಮಣ ಮಹಾತ್ಮ ಪರಮೇಷ್ಠಿಯನ್ನು ಬಿಟ್ಟು ಬೇರೆ ಯಾರೂ ನಿನ್ನಷ್ಟು ವಯಸ್ಸಿನವನು ಇಲ್ಲವೆಂದು ತಿಳಿದಿದೆ.

03186003a ಅನಂತರಿಕ್ಷೇ ಲೋಕೇಽಸ್ಮಿನ್ದೇವದಾನವವರ್ಜಿತೇ।
03186003c ತ್ವಮೇವ ಪ್ರಲಯೇ ವಿಪ್ರ ಬ್ರಹ್ಮಾಣಮುಪತಿಷ್ಠಸಿ।।

ಆಕಾಶವೇ ಇಲ್ಲದಿರುವಾಗ, ಈ ಲೋಕವು ದೇವದಾನವರಿಂದ ವರ್ಜಿತವಾದಾಗ ಪ್ರಲಯದಲ್ಲಿ ನೀನೇ ಬ್ರಹ್ಮನ ಬಳಿಯಲ್ಲಿರುತ್ತೀಯೆ.

03186004a ಪ್ರಲಯೇ ಚಾಪಿ ನಿರ್ವೃತ್ತೇ ಪ್ರಬುದ್ಧೇ ಚ ಪಿತಾಮಹೇ।
03186004c ತ್ವಮೇವ ಸೃಜ್ಯಮಾನಾನಿ ಭೂತಾನೀಹ ಪ್ರಪಶ್ಯಸಿ।।
03186005a ಚತುರ್ವಿಧಾನಿ ವಿಪ್ರರ್ಷೇ ಯಥಾವತ್ಪರಮೇಷ್ಠಿನಾ।
03186005c ವಾಯುಭೂತಾ ದಿಶಃ ಕೃತ್ವಾ ವಿಕ್ಷಿಪ್ಯಾಪಸ್ತತಸ್ತತಃ।।

ವಿಪ್ರರ್ಷೇ! ಪ್ರಲಯವು ಸಂಪೂರ್ಣವಾದಾಗ, ಪಿತಾಮಹನು ಪ್ರವೃದ್ಧನಾದಾಗ, ನೀರನ್ನು ಅಲ್ಲಲ್ಲಿ ಸರಿಸಿ ಆಕಾಶದಲ್ಲಿ ವಾಯುವನ್ನು ತುಂಬಿಸಿ ಪರಮೇಷ್ಠಿಯು ನಡೆಸುವ ಈ ಚತುರ್ವಿಧ ಭೂತಗಳ ಸೃಷ್ಠಿಗಳನ್ನು ಯಥಾವತ್ತಾಗಿ ನೀನೇ ನೋಡುತ್ತೀಯೆ.

03186006a ತ್ವಯಾ ಲೋಕಗುರುಃ ಸಾಕ್ಷಾತ್ಸರ್ವಲೋಕಪಿತಾಮಹಃ।
03186006c ಆರಾಧಿತೋ ದ್ವಿಜಶ್ರೇಷ್ಠ ತತ್ಪರೇಣ ಸಮಾಧಿನಾ।।

ದ್ವಿಜಶ್ರೇಷ್ಠ! ನೀನು ಲೋಕಗುರು, ಸಾಕ್ಷಾತ್ ಸರ್ವಲೋಕಪಿತಾಮಹನನ್ನು ತತ್ಪರನಾಗಿ ಸಮಾಧಿಯಲ್ಲಿದ್ದು ಆರಾಧಿಸುತ್ತೀಯೆ.

03186007a ತಸ್ಮಾತ್ಸರ್ವಾಂತಕೋ ಮೃತ್ಯುರ್ಜರಾ ವಾ ದೇಹನಾಶಿನೀ।
03186007c ನ ತ್ವಾ ವಿಶತಿ ವಿಪ್ರರ್ಷೇ ಪ್ರಸಾದಾತ್ಪರಮೇಷ್ಠಿನಃ।।

ಆದುದರಿಂದ ವಿಪ್ರರ್ಷೇ! ಪರಮೇಷ್ಠಿಯ ಪ್ರಸಾದದಿಂದ ಸರ್ವರ ಅಂತಕ ಮೃತ್ಯುವಾಗಲೀ ದೇಹನಾಶಿನೀ ವೃದ್ಧಾಪ್ಯವಾಗಲೀ ನಿನ್ನ ಬಳಿ ಬರುವುದಿಲ್ಲ.

03186008a ಯದಾ ನೈವ ರವಿರ್ನಾಗ್ನಿರ್ನ ವಾಯುರ್ನ ಚ ಚಂದ್ರಮಾಃ।
03186008c ನೈವಾಂತರಿಕ್ಷಂ ನೈವೋರ್ವೀ ಶೇಷಂ ಭವತಿ ಕಿಂ ಚನ।।
03186009a ತಸ್ಮಿನ್ನೇಕಾರ್ಣವೇ ಲೋಕೇ ನಷ್ಟೇ ಸ್ಥಾವರಜಂಗಮೇ।
03186009c ನಷ್ಟೇ ದೇವಾಸುರಗಣೇ ಸಮುತ್ಸನ್ನಮಹೋರಗೇ।।
03186010a ಶಯಾನಮಮಿತಾತ್ಮಾನಂ ಪದ್ಮೇ ಪದ್ಮನಿಕೇತನಂ।
03186010c ತ್ವಮೇಕಃ ಸರ್ವಭೂತೇಶಂ ಬ್ರಹ್ಮಾಣಮುಪತಿಷ್ಠಸಿ।।

ರವಿಯಿಲ್ಲದಿರುವಾಗ, ಅಗ್ನಿಯಿಲ್ಲದಿರುವಾಗ, ವಾಯು-ಚಂದ್ರಮರಿಲ್ಲದಿರುವಾಗ, ಅಂತರಿಕ್ಷವಿಲ್ಲದಿರುವಾಗ, ಭೂಮಿಯೂ ಇಲ್ಲದಿರುವಾಗ, ಏನೂ ಉಳಿದಿರದೇ ಇದ್ದಾಗ, ಆ ಒಂದೇ ನೀರಿನಲ್ಲಿ ಲೋಕಗಳಲ್ಲಿನ ಸ್ಥಾವರಜಂಗಮಗಳು ನಷ್ಟವಾದಾಗ, ದೇವಾಸುರಗಣಗಳು ಮಹಾ ಉರಗಗಳು ನಷ್ಟವಾದಾಗ, ಪದ್ಮದಲ್ಲಿ ಮಲಗಿರುವ ಅಮಿತಾತ್ಮ, ಪದ್ಮನಿಕೇತನ, ಸರ್ವಭೂತೇಶ, ಬ್ರಹ್ಮನನ್ನು ನೀನೊಬ್ಬನೇ ನೋಡುತ್ತೀಯೆ.

03186011a ಏತತ್ಪ್ರತ್ಯಕ್ಷತಃ ಸರ್ವಂ ಪೂರ್ವವೃತ್ತಂ ದ್ವಿಜೋತ್ತಮ।
03186011c ತಸ್ಮಾದಿಚ್ಚಾಮಹೇ ಶ್ರೋತುಂ ಸರ್ವಹೇತ್ವಾತ್ಮಿಕಾಂ ಕಥಾಂ।।

ದ್ವಿಜೋತ್ತಮ! ಹಿಂದೆ ನಡೆದುದೆಲ್ಲವೂ ನಿನ್ನ ಪ್ರತ್ಯಕ್ಷತೆಯಲ್ಲಿಯೇ ನಡೆದಿವೆ. ಆದುದರಿಂದ ಸರ್ವಕ್ಕೆ ಕಾರಣೀಭೂತವಾದ ಕಥೆಯನ್ನು ಕೇಳಲು ಬಯಸುತ್ತೇವೆ.

03186012a ಅನುಭೂತಂ ಹಿ ಬಹುಶಸ್ತ್ವಯೈಕೇನ ದ್ವಿಜೋತ್ತಮ।
03186012c ನ ತೇಽಸ್ತ್ಯವಿದಿತಂ ಕಿಂ ಚಿತ್ಸರ್ವಲೋಕೇಷು ನಿತ್ಯದಾ।।

ದ್ವಿಜೋತ್ತಮ! ನೀನೊಬ್ಬನೇ ಅದನ್ನು ಬಹಳ ಬಾರಿ ಅನುಭವಿಸಿದ್ದೀಯೆ. ಎಲ್ಲ ಲೋಕಗಳಲ್ಲಿಯೂ ನಿತ್ಯವೂ ನಡೆಯುವ ಯಾವುದೂ ನಿನಗೆ ತಿಳಿಯದೇ ಇರುವುದಿಲ್ಲ.”

03186013 ಮಾರ್ಕಂಡೇಯ ಉವಾಚ।
03186013a ಹಂತ ತೇ ಕಥಯಿಷ್ಯಾಮಿ ನಮಸ್ಕೃತ್ವಾ ಸ್ವಯಂಭುವೇ।
03186013c ಪುರುಷಾಯ ಪುರಾಣಾಯ ಶಾಶ್ವತಾಯಾವ್ಯಯಾಯ ಚ।।

ಮಾರ್ಕಂಡೇಯನು ಹೇಳಿದನು: “ಆಗಲಿ! ಆ ಸ್ವಯಂಭು, ಪುರುಷ, ಪುರಾಣ, ಶಾಶ್ವತ ಮತ್ತು ಅವ್ಯಯನಿಗೆ ನಮಸ್ಕರಿಸಿ ಹೇಳುತ್ತೇನೆ.

03186014a ಯ ಏಷ ಪೃಥುದೀರ್ಘಾಕ್ಷಃ ಪೀತವಾಸಾ ಜನಾರ್ದನಃ।
03186014c ಏಷ ಕರ್ತಾ ವಿಕರ್ತಾ ಚ ಸರ್ವಭಾವನಭೂತಕೃತ್।।

ಈ ಪೃಥುದೀರ್ಘಾಕ್ಷ, ಪೀತವಾಸ ಜನಾರ್ದನನೇ ಸರ್ವಭೂತಗಳ ಭಾವನೆಗಳನ್ನು ಮಾಡುವವನು. ಕರ್ತಾ ಮತ್ತು ವಿಕರ್ತನೂ ಕೂಡ.

03186015a ಅಚಿಂತ್ಯಂ ಮಹದಾಶ್ಚರ್ಯಂ ಪವಿತ್ರಮಪಿ ಚೋತ್ತಮಂ।
03186015c ಅನಾದಿನಿಧನಂ ಭೂತಂ ವಿಶ್ವಮಕ್ಷಯಮವ್ಯಯಂ।।

ಇವನೇ ಅಚಿಂತ್ಯ, ಮಹದಾಶ್ಚರ್ಯ, ಪವಿತ್ರ, ಉತ್ತಮ, ಅನಾಧಿನಿಧನ, ಅಕ್ಷಯ, ಅವ್ಯಯ ಮತ್ತು ವಿಶ್ವ.

03186016a ಏಷ ಕರ್ತಾ ನ ಕ್ರಿಯತೇ ಕಾರಣಂ ಚಾಪಿ ಪೌರುಷೇ।
03186016c ಯೋ ಹ್ಯೇನಂ ಪುರುಷಂ ವೇತ್ತಿ ದೇವಾ ಅಪಿ ನ ತಂ ವಿದುಃ।।

ಈ ಮಾಡುವವನು ಮಾಡಲ್ಪಟ್ಟವನಲ್ಲ. ಆದರೆ ಎಲ್ಲವಕ್ಕೂ ಕಾರಣ. ಈ ಪುರುಷನನ್ನು ಯಾರು ಅರಿತಿದ್ದಾರೆ ಎನ್ನುವುದು ದೇವತೆಗಳಿಗೂ ಗೊತ್ತಿಲ್ಲ.

03186017a ಸರ್ವಮಾಶ್ಚರ್ಯಮೇವೈತನ್ನಿರ್ವೃತ್ತಂ ರಾಜಸತ್ತಮ।
03186017c ಆದಿತೋ ಮನುಜವ್ಯಾಘ್ರ ಕೃತ್ಸ್ನಸ್ಯ ಜಗತಃ ಕ್ಷಯೇ।।
03186018a ಚತ್ವಾರ್ಯಾಹುಃ ಸಹಸ್ರಾಣಿ ವರ್ಷಾಣಾಂ ತತ್ಕೃತಂ ಯುಗಂ।
03186018c ತಸ್ಯ ತಾವಚ್ಚತೀ ಸಂಧ್ಯಾ ಸಂಧ್ಯಾಂಶಶ್ಚ ತತಃ ಪರಂ।।

ರಾಜಸತ್ತಮ! ಈ ಎಲ್ಲ ಆಶ್ಚರ್ಯಗಳೂ ಅವನಿಂದಲೇ ನಡೆಯುವವು. ಮನುಜವ್ಯಾಘ್ರ! ಆದಿಯಲ್ಲಿ, ಈ ಸಂಪೂರ್ಣ ಜಗತ್ತು ನಾಶವಾಗಲು, ನಾಲ್ಕುಸಾವಿರ ವರ್ಷಗಳ ಕೃತಯುಗವು ಬರುತ್ತದೆಯೆಂದೂ, ಅದರ ಮೊದಲು ಮತ್ತು ನಂತರ ನಾಲ್ಕುನೂರು ವರ್ಷಗಳ ಸಂಧ್ಯೆ ಇದೆಯೆಂದೂ ಹೇಳುತ್ತಾರೆ.

03186019a ತ್ರೀಣಿ ವರ್ಷಸಹಸ್ರಾಣಿ ತ್ರೇತಾಯುಗಮಿಹೋಚ್ಯತೇ।
03186019c ತಸ್ಯ ತಾವಚ್ಚತೀ ಸಂಧ್ಯಾ ಸಂಧ್ಯಾಂಶಶ್ಚ ತತಃ ಪರಂ।।

ತ್ರೇತಾಯುಗವು ಮೂರುಸಾವಿರ ವರ್ಷಗಳದ್ದೆಂದು ಹೇಳುತ್ತಾರೆ. ಅದರ ಮೊದಲು ಮತ್ತು ನಂತರ ಮೂರುನೂರಿನ ಸಂಧ್ಯೆಗಳಿವೆ.

03186020a ತಥಾ ವರ್ಷಸಹಸ್ರೇ ದ್ವೇ ದ್ವಾಪರಂ ಪರಿಮಾಣತಃ।
03186020c ತಸ್ಯಾಪಿ ದ್ವಿಶತೀ ಸಂಧ್ಯಾ ಸಂಧ್ಯಾಂಶಶ್ಚ ತತಃ ಪರಂ।।

ಹಾಗೆಯೇ ದ್ವಾಪರದ ಪರಿಮಾಣವು ಎರಡು ಸಾವಿರವರ್ಷಗಳು. ಅದಕ್ಕೆ ಕೂಡ ಪ್ರತಿ ಇನ್ನೂರು ವರ್ಷಗಳ ಮೊದಲಿನ ಸಂಧ್ಯೆ ಮತ್ತು ನಂತರದ ಸಂಧ್ಯೆಗಳಿವೆ.

03186021a ಸಹಸ್ರಮೇಕಂ ವರ್ಷಾಣಾಂ ತತಃ ಕಲಿಯುಗಂ ಸ್ಮೃತಂ।
03186021c ತಸ್ಯ ವರ್ಷಶತಂ ಸಂಧ್ಯಾ ಸಂಧ್ಯಾಂಶಶ್ಚ ತತಃ ಪರಂ।
03186021e ಸಂಧ್ಯಾಸಂಧ್ಯಾಂಶಯೋಸ್ತುಲ್ಯಂ ಪ್ರಮಾಣಮುಪಧಾರಯ।।

ಅನಂತರ ಕಲಿಯುಗವು ಒಂದು ಸಾವಿರ ವರ್ಷಗಳದ್ದೆಂದು ಹೇಳುತ್ತಾರೆ. ಅದರ ಪ್ರತಿ ನೂರು ವರ್ಷಗಳ ಮೊದಲಿನ ಸಂಧ್ಯೆ ಮತ್ತು ನಂತರದ ಸಂಧ್ಯೆಗಳಿವೆ. ಸಂಧ್ಯೆ ಅಸಂಧ್ಯೆಗಳ ಪ್ರಮಾಣವು ಸಮನಾಗಿರುವುದನ್ನು ಗಮನಿಸು.

03186022a ಕ್ಷೀಣೇ ಕಲಿಯುಗೇ ಚೈವ ಪ್ರವರ್ತತಿ ಕೃತಂ ಯುಗಂ।
03186022c ಏಷಾ ದ್ವಾದಶಸಾಹಸ್ರೀ ಯುಗಾಖ್ಯಾ ಪರಿಕೀರ್ತಿತಾ।।

ಕಲಿಯುಗವು ಮುಗಿದಾಗ ಕೃತಯುಗವು ಪುನಃ ಬರುತ್ತದೆ. ಈ ಹನ್ನೆರಡು ಸಾವಿರ ವರ್ಷಗಳನ್ನು ಯುಗವೆಂದು ಕರೆಯುತ್ತಾರೆ.

03186023a ಏತತ್ಸಹಸ್ರಪರ್ಯಂತಮಹೋ ಬ್ರಾಹ್ಮಮುದಾಹೃತಂ।
03186023c ವಿಶ್ವಂ ಹಿ ಬ್ರಹ್ಮಭವನೇ ಸರ್ವಶಃ ಪರಿವರ್ತತೇ।।
03186023e ಲೋಕಾನಾಂ ಮನುಜವ್ಯಾಘ್ರ ಪ್ರಲಯಂ ತಂ ವಿದುರ್ಬುಧಾಃ।।

ಅಂಥಹ ಒಂದು ಸಾವಿರ ಯುಗಗಳನ್ನು ಬ್ರಹ್ಮನ ಒಂದು ದಿನವೆಂದು ಹೇಳುತ್ತಾರೆ. ಮನುಜವ್ಯಾಘ್ರ! ಲೋಕಗಳು ಪ್ರಲಯವಾದಾಗ ವಿಶ್ವವೆಲ್ಲವೂ ಬ್ರಹ್ಮಭವನದಲ್ಲಿ ಸೇರುತ್ತವೆ ಎಂದು ತಿಳಿದವರಿಗೆ ತಿಳಿದಿದೆ.

03186024a ಅಲ್ಪಾವಶಿಷ್ಟೇ ತು ತದಾ ಯುಗಾಂತೇ ಭರತರ್ಷಭ।
03186024c ಸಹಸ್ರಾಂತೇ ನರಾಃ ಸರ್ವೇ ಪ್ರಾಯಶೋಽನೃತವಾದಿನಃ।।

ಭರತರ್ಷಭ! ಯುಗಾಂತದಲ್ಲಿ ಸ್ವಲ್ಪವೇ ಸಮಯವಿರುವಾಗ, ಕೊನೆಯ ಸಾವಿರ ವರ್ಷಗಳಲ್ಲಿ ಎಲ್ಲ ಮನುಷ್ಯರೂ ಪ್ರಾಯಶಃ ಸುಳ್ಳನ್ನೇ ಹೇಳುತ್ತಾರೆ.

03186025a ಯಜ್ಞಪ್ರತಿನಿಧಿಃ ಪಾರ್ಥ ದಾನಪ್ರತಿನಿಧಿಸ್ತಥಾ।
03186025c ವ್ರತಪ್ರತಿನಿಧಿಶ್ಚೈವ ತಸ್ಮಿನ್ಕಾಲೇ ಪ್ರವರ್ತತೇ।।

ಪಾರ್ಥ! ಆ ಕಾಲವು ಬಂದಾಗ ಪ್ರತಿನಿಧಿಗಳು ಯಜ್ಞಮಾಡುತ್ತಾರೆ, ಪ್ರತಿನಿಧಿಗಳು ದಾನಕೊಡುತ್ತಾರೆ, ಪ್ರತಿನಿಧಿಗಳು ವ್ರತಗಳನ್ನಾಚರಿಸುತ್ತಾರೆ.

03186026a ಬ್ರಾಹ್ಮಣಾಃ ಶೂದ್ರಕರ್ಮಾಣಸ್ತಥಾ ಶೂದ್ರಾ ಧನಾರ್ಜಕಾಃ।
03186026c ಕ್ಷತ್ರಧರ್ಮೇಣ ವಾಪ್ಯತ್ರ ವರ್ತಯಂತಿ ಗತೇ ಯುಗೇ।।

ಬ್ರಾಹ್ಮಣರು ಶೂದ್ರರ ಕೆಲಸವನ್ನು ಮಾಡುತ್ತಾರೆ. ಶೂದ್ರರು ಧನಾರ್ಜನೆ ಮಾಡುತ್ತಾರೆ ಅಥವಾ ಕ್ಷತ್ರಧರ್ಮದಂತೆ ನಡೆದುಕೊಳ್ಳುತ್ತಾರೆ.

03186027a ನಿವೃತ್ತಯಜ್ಞಸ್ವಾಧ್ಯಾಯಾಃ ಪಿಂಡೋದಕವಿವರ್ಜಿತಾಃ।
03186027c ಬ್ರಾಹ್ಮಣಾಃ ಸರ್ವಭಕ್ಷಾಶ್ಚ ಭವಿಷ್ಯಂತಿ ಕಲೌ ಯುಗೇ।।

ಕಲಿಯುಗದಲ್ಲಿ ಬ್ರಾಹ್ಮಣರು ಯಜ್ಞ-ಸ್ವಾಧ್ಯಾಯಗಳನ್ನು ಬಿಟ್ಟು, ಪಿಂಡೋದಕಗಳನ್ನು ತೊರೆದು, ಎಲ್ಲವನ್ನೂ ತಿನ್ನುವವರಾಗುತ್ತಾರೆ.

03186028a ಅಜಪಾ ಬ್ರಾಹ್ಮಣಾಸ್ತಾತ ಶೂದ್ರಾ ಜಪಪರಾಯಣಾಃ।
03186028c ವಿಪರೀತೇ ತದಾ ಲೋಕೇ ಪೂರ್ವರೂಪಂ ಕ್ಷಯಸ್ಯ ತತ್।।

ಮಗೂ! ಬ್ರಾಹ್ಮಣರು ಜಪಗಳನ್ನು ಮಾಡುವುದಿಲ್ಲ. ಶೂದ್ರರು ಜಪಪರಾಯಣರಾಗುತ್ತಾರೆ. ಈ ರೀತಿ ವಿಪರೀತವಾದಾಗ ಅದು ಲೋಕ ಕ್ಷಯವನ್ನು ಮುನ್ಸೂಚಿಸುತ್ತದೆ.

03186029a ಬಹವೋ ಮ್ಲೇಚ್ಚರಾಜಾನಃ ಪೃಥಿವ್ಯಾಂ ಮನುಜಾಧಿಪ।
03186029c ಮಿಥ್ಯಾನುಶಾಸಿನಃ ಪಾಪಾ ಮೃಷಾವಾದಪರಾಯಣಾಃ।।

ಮನುಜಾಧಿಪ! ಪಾಪ ಮತ್ತು ಸುಳ್ಳುವಾದಗಳಲ್ಲಿ ನಿರತರಾದ ಬಹುಮಂದಿ ಮ್ಲೇಚ್ಛರಾಜರು ಭೂಮಿಯನ್ನು ಸುಳ್ಳಿನ ಆಧಾರದ ಮೇಲೆ ಆಳುತ್ತಾರೆ.

03186030a ಆಂಧ್ರಾಃ ಶಕಾಃ ಪುಲಿಂದಾಶ್ಚ ಯವನಾಶ್ಚ ನರಾಧಿಪಾಃ।
03186030c ಕಾಂಬೋಜಾ ಔರ್ಣಿಕಾಃ ಶೂದ್ರಾಸ್ತಥಾಭೀರಾ ನರೋತ್ತಮ।।

ನರಾಧಿಪ! ಆಗ ಅಂಧ್ರರು, ಶಕರು, ಪುಲಿಂದರು, ಯವನರು, ಕಾಂಬೋಜರು, ಔರ್ಣಿಕರು ಮತ್ತು ಶೂದ್ರರು ಆಳುತ್ತಾರೆ.

03186031a ನ ತದಾ ಬ್ರಾಹ್ಮಣಃ ಕಶ್ಚಿತ್ಸ್ವಧರ್ಮಮುಪಜೀವತಿ।
03186031c ಕ್ಷತ್ರಿಯಾ ಅಪಿ ವೈಶ್ಯಾಶ್ಚ ವಿಕರ್ಮಸ್ಥಾ ನರಾಧಿಪ।।

ನರಾಧಿಪ! ಆಗ ಯಾವ ಬ್ರಾಹ್ಮಣನೂ ಸ್ವಧರ್ಮದಿಂದ ಉಪಜೀವಿಸುವುದಿಲ್ಲ. ಕ್ಷತ್ರಿಯರೂ ವೈಶ್ಯರೂ ಕೂಡ ತಪ್ಪು ಕೆಲಸಗಳನ್ನು ಮಾಡುತ್ತಿರುತ್ತಾರೆ.

03186032a ಅಲ್ಪಾಯುಷಃ ಸ್ವಲ್ಪಬಲಾ ಅಲ್ಪತೇಜಃಪರಾಕ್ರಮಾಃ।
03186032c ಅಲ್ಪದೇಹಾಲ್ಪಸಾರಾಶ್ಚ ತಥಾ ಸತ್ಯಾಲ್ಪಭಾಷಿಣಃ।।

ಜನರು ಅಲ್ಪಾಯುಷಿಗಳಾಗಿರುತ್ತಾರೆ. ಸ್ವಲ್ಪ ಬಲವುಳ್ಳವರಾಗಿರುತ್ತಾರೆ. ಅಲ್ಪತೇಜಸ್ವಿಗಳೂ, ಪರಾಕ್ರಮಿಗಳೂ ಆಗಿರುತ್ತಾರೆ. ಅಲ್ಪ ದೇಹಿಗಳೂ, ಅಲ್ಪಸಾರರೂ, ಹಾಗೆಯೇ ಅಲ್ಪ ಸತ್ಯಭಾಷಿಗಳೂ ಆಗಿರುತ್ತಾರೆ.

03186033a ಬಹುಶೂನ್ಯಾ ಜನಪದಾ ಮೃಗವ್ಯಾಲಾವೃತಾ ದಿಶಃ।
03186033c ಯುಗಾಂತೇ ಸಮನುಪ್ರಾಪ್ತೇ ವೃಥಾ ಚ ಬ್ರಹ್ಮಚಾರಿಣಃ।।
03186033e ಭೋವಾದಿನಸ್ತಥಾ ಶೂದ್ರಾ ಬ್ರಾಹ್ಮಣಾಶ್ಚಾರ್ಯವಾದಿನಃ।।

ಯುಗಾಂತವು ಹತ್ತಿರಬಂದಂತೆ ಜನಪದಗಳು ಬಹಳಷ್ಟಾಗಿ ಶೂನ್ಯವಾಗುತ್ತವೆ. ಪ್ರದೇಶವು ಮೃಗವ್ಯಾಲಗಳಿಂದ ಆವೃತವಾಗುತ್ತದೆ, ಮತ್ತು ಬ್ರಹ್ಮಚಾರಿಗಳು ಸುಳ್ಳಾಗುತ್ತಾರೆ. ಶೂದ್ರರು ಭೋ! ಎಂದು ಕರೆಯುತ್ತಾರೆ ಮತ್ತು ಬ್ರಾಹ್ಮಣರು ಆರ್ಯ! ಎಂದು ಕರೆಯುತ್ತಾರೆ.

03186034a ಯುಗಾಂತೇ ಮನುಜವ್ಯಾಘ್ರ ಭವಂತಿ ಬಹುಜಂತವಃ।
03186034c ನ ತಥಾ ಘ್ರಾಣಯುಕ್ತಾಶ್ಚ ಸರ್ವಗಂಧಾ ವಿಶಾಂ ಪತೇ।।
03186034e ರಸಾಶ್ಚ ಮನುಜವ್ಯಾಘ್ರ ನ ತಥಾ ಸ್ವಾದುಯೋಗಿನಃ।।

ವಿಶಾಂಪತೇ! ಮನುಷ್ಯವ್ಯಾಘ್ರ! ಯುಗಾಂತದಲ್ಲಿ ಜನಸಂಖ್ಯೆಯು ಹೆಚ್ಚಾಗುತ್ತದೆ, ಎಲ್ಲ ಸುಗಂಧಗಳೂ ದುರ್ಗಂಧಗಳೆಂತೆನಿಸಿಕೊಳ್ಳುತ್ತವೆ. ಮತ್ತು ಮನುಜವ್ಯಾಘ್ರ! ರಸಗಳು ಸ್ವಾದಿಸಲು ಬೇಡವಾಗುತ್ತವೆ.

03186035a ಬಹುಪ್ರಜಾ ಹ್ರಸ್ವದೇಹಾಃ ಶೀಲಾಚಾರವಿವರ್ಜಿತಾಃ।
03186035c ಮುಖೇಭಗಾಃ ಸ್ತ್ರಿಯೋ ರಾಜನ್ಭವಿಷ್ಯಂತಿ ಯುಗಕ್ಷಯೇ।।

ರಾಜನ್! ಯುಗಕ್ಷಯದಲ್ಲಿ ಸ್ತ್ರೀಯರು ಹೆಚ್ಚು ಮಕ್ಕಳನ್ನು ಹಡೆಯುವವರಾಗುತ್ತಾರೆ. ಸಣ್ಣದೇಹದವರು, ಶೀಲಾಚಾರ ವರ್ಜಿತರೂ, ಬಾಯಿಸಂಭೋಗ ಮಾಡುವವರೂ ಆಗುತ್ತಾರೆ.

03186036a ಅಟ್ಟಶೂಲಾ ಜನಪದಾಃ ಶಿವಶೂಲಾಶ್ಚತುಷ್ಪಥಾಃ।
03186036c ಕೇಶಶೂಲಾಃ ಸ್ತ್ರಿಯೋ ರಾಜನ್ಭವಿಷ್ಯಂತಿ ಯುಗಕ್ಷಯೇ।।

ರಾಜನ್! ಯುಗಕ್ಷಯದಲ್ಲಿ ಜನಪದಗಳಲ್ಲಿ ಬಹುಮಹಡಿಗಳ ಕಟ್ಟಡಗಳಾಗುತ್ತವೆ, ಚೌರಾಯಗಳಲ್ಲಿ ತೋಳಗಳು ಬರುತ್ತಿರುತ್ತವೆ ಮತ್ತು ಸ್ತ್ರೀಯರು ಕೂದಲುಗಳುಳ್ಳವರಾಗುತ್ತಾರೆ.

03186037a ಅಲ್ಪಕ್ಷೀರಾಸ್ತಥಾ ಗಾವೋ ಭವಿಷ್ಯಂತಿ ಜನಾಧಿಪ।
03186037c ಅಲ್ಪಪುಷ್ಪಫಲಾಶ್ಚಾಪಿ ಪಾದಪಾ ಬಹುವಾಯಸಾಃ।।

ಜನಾಧಿಪ! ಗೋವುಗಳು ಸ್ವಲ್ಪವೇ ಹಾಲು ಕೊಡುವಂಥವುಗಳಾಗುತ್ತವೆ. ಮರಗಳು ಕಾಗೆಗಳಿಂದ ತುಂಬಿಕೊಂಡಿದ್ದು ಸ್ವಲ್ಪವೇ ಪುಷ್ಪ-ಫಲಗಳನ್ನು ನೀಡುವಂಥವುಗಳಾಗುತ್ತವೆ.

03186038a ಬ್ರಹ್ಮವಧ್ಯಾವಲಿಪ್ತಾನಾಂ ತಥಾ ಮಿಥ್ಯಾಭಿಶಂಸಿನಾಂ।
03186038c ನೃಪಾಣಾಂ ಪೃಥಿವೀಪಾಲ ಪ್ರತಿಗೃಹ್ಣಂತಿ ವೈ ದ್ವಿಜಾಃ।।

ಪೃಥಿವೀಪಾಲ! ಬ್ರಹ್ಮವಧೆಯನ್ನು ಅಂಟಿಸಿಕೊಂಡಿರುವ, ಸುಳ್ಳು ಹೊಗಳಿಕೆಯ ನೃಪರಿಂದ ದ್ವಿಜರು ಸ್ವೀಕರಿಸುವರು.

03186039a ಲೋಭಮೋಹಪರೀತಾಶ್ಚ ಮಿಥ್ಯಾಧರ್ಮಧ್ವಜಾವೃತಾಃ।
03186039c ಭಿಕ್ಷಾರ್ಥಂ ಪೃಥಿವೀಪಾಲ ಚಂಚೂರ್ಯಂತೇ ದ್ವಿಜೈರ್ದಿಶಃ।।

ಪೃಥಿವೀಪಾಲ! ಲೋಭಮೋಹಗಳನ್ನು ಹೊದೆದುಕೊಂಡು, ಮಿಥ್ಯ ಧರ್ಮದ ಧ್ವಜವನ್ನು ಹಿಡಿದು, ಭಿಕ್ಷಾರ್ಥವಾಗಿ ದ್ವಿಜರು ದಿಕ್ಕು ದಿಕ್ಕುಗಳಲ್ಲಿಯೂ ಸುತ್ತಾಡುತ್ತಾರೆ.

03186040a ಕರಭಾರಭಯಾತ್ಪುಂಸೋ ಗೃಹಸ್ಥಾಃ ಪರಿಮೋಷಕಾಃ।
03186040c ಮುನಿಚ್ಚದ್ಮಾಕೃತಿಚ್ಚನ್ನಾ ವಾಣಿಜ್ಯಮುಪಜೀವತೇ।।

ತೆರಿಗೆಯ ಭಾರದ ಭಯದಿಂದ ಗೃಹಸ್ಥ ಪುರುಷರು ಕಳ್ಳರಾಗುತ್ತಾರೆ ಮತ್ತು ಮುನಿಗಳ ವೇಷಧರಿಸಿ ವಾಣಿಜ್ಯದಿಂದ ಉಪಜೀವನ ಮಾಡುತ್ತಾರೆ.

03186041a ಮಿಥ್ಯಾ ಚ ನಖರೋಮಾಣಿ ಧಾರಯಂತಿ ನರಾಸ್ತದಾ।
03186041c ಅರ್ಥಲೋಭಾನ್ನರವ್ಯಾಘ್ರ ವೃಥಾ ಚ ಬ್ರಹ್ಮಚಾರಿಣಃ।।

ನರವ್ಯಾಘ್ರ! ಜನರು ಸುಳ್ಳಿನ ಕೂದಲು ಮತ್ತು ಉಗುರುಗಳನ್ನು ಧರಿಸುತ್ತಾರೆ. ಬ್ರಹ್ಮಚಾರಿಗಳು ಹಣದ ಆಸೆಯಿಂದ ಸುಳ್ಳಾಗಿರುವರು.

03186042a ಆಶ್ರಮೇಷು ವೃಥಾಚಾರಾಃ ಪಾನಪಾ ಗುರುತಲ್ಪಗಾಃ।
03186042c ಐಹಲೌಕಿಕಮೀಹಂತೇ ಮಾಂಸಶೋಣಿತವರ್ಧನಂ।।

ಆಶ್ರಮಗಳಲ್ಲಿ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಮದ್ಯವನ್ನು ಕುಡಿಯುತ್ತಾರೆ. ಗುರುಪತ್ನಿಯರನ್ನು ಹಂಚಿಕೊಳ್ಳುತ್ತಾರೆ. ಈ ಲೋಕದ ಮಾಂಸ ರಕ್ತವನ್ನು ವೃದ್ಧಿಸುವ ಸುಖವನ್ನು ಗುರಿಯಾಗಿಟ್ಟುಕೊಳ್ಳುತ್ತಾರೆ.

03186043a ಬಹುಪಾಷಂಡಸಂಕೀರ್ಣಾಃ ಪರಾನ್ನಗುಣವಾದಿನಃ।
03186043c ಆಶ್ರಮಾ ಮನುಜವ್ಯಾಘ್ರ ನ ಭವಂತಿ ಯುಗಕ್ಷಯೇ।।

ಮನುಜವ್ಯಾಘ್ರ! ಯುಗಕ್ಷಯದಲ್ಲಿ ಬಹಳಮಂದಿ ಮೋಸಗಾರರಿರುವಲ್ಲಿ ಉತ್ತಮ ಊಟಗಳ ಕುರಿತು ಚರ್ಚಿಸುತ್ತಾರೆ. ಆಶ್ರಮಗಳೇ ಇರುವುದಿಲ್ಲ.

03186044a ಯಥರ್ತುವರ್ಷೀ ಭಗವಾನ್ನ ತಥಾ ಪಾಕಶಾಸನಃ।
03186044c ನ ತದಾ ಸರ್ವಬೀಜಾನಿ ಸಮ್ಯಗ್ರೋಹಂತಿ ಭಾರತ।।
03186044e ಅಧರ್ಮಫಲಮತ್ಯರ್ಥಂ ತದಾ ಭವತಿ ಚಾನಘ।।

ಭಾರತ! ಭಗವಾನ್ ಪಾಕಶಾಸನನು ಕಾಲಕ್ಕೆ ತಕ್ಕಂತೆ ಮಳೆಯನ್ನು ಸುರಿಸುವುದಿಲ್ಲ. ಆಗ ಬಿತ್ತಿದ ಎಲ್ಲ ಬೀಜಗಳು ಸರಿಯಾಗಿ ಬೆಳೆಯುವುದಿಲ್ಲ. ಅನಘ! ಮತ್ತು ಅಧರ್ಮದ ಫಲವು ಅಧಿಕವಾಗಿರುತ್ತದೆ.

03186045a ತಥಾ ಚ ಪೃಥಿವೀಪಾಲ ಯೋ ಭವೇದ್ಧರ್ಮಸಂಯುತಃ।
03186045c ಅಲ್ಪಾಯುಃ ಸ ಹಿ ಮಂತವ್ಯೋ ನ ಹಿ ಧರ್ಮೋಽಸ್ತಿ ಕಶ್ಚನ।।

ಪೃಥಿವೀಪಾಲ! ಧರ್ಮಸಮ್ಮತರು ಅಲ್ಪಾಯುಗಳಾಗುತ್ತಾರೆ. ಯಾಕೆಂದರೆ ಯಾವುದೇ ರೀತಿಯ ಧರ್ಮವೆನ್ನುವುದೇ ಇರುವುದಿಲ್ಲ.

03186046a ಭೂಯಿಷ್ಠಂ ಕೂಟಮಾನೈಶ್ಚ ಪಣ್ಯಂ ವಿಕ್ರೀಣತೇ ಜನಾಃ।
03186046c ವಣಿಜಶ್ಚ ನರವ್ಯಾಘ್ರ ಬಹುಮಾಯಾ ಭವಂತ್ಯುತ।।

ಜನರು ತಮ್ಮ ವಸ್ತುಗಳನ್ನು ಹೆಚ್ಚಾಗಿ ಸುಳ್ಳು ಅಳತೆಗಳ ಮೂಲಕ ಮಾರುತ್ತಾರೆ. ನರವ್ಯಾಘ್ರ! ವರ್ತಕರು ಬಹಳಷ್ಟು ಮೋಸವುಳ್ಳವರಾಗಿರುತ್ತಾರೆ.

03186047a ಧರ್ಮಿಷ್ಠಾಃ ಪರಿಹೀಯಂತೇ ಪಾಪೀಯಾನ್ವರ್ಧತೇ ಜನಃ।
03186047c ಧರ್ಮಸ್ಯ ಬಲಹಾನಿಃ ಸ್ಯಾದಧರ್ಮಶ್ಚ ಬಲೀ ತಥಾ।।

ಧರ್ಮಿಷ್ಠರು ನಷ್ಟ ಹೊಂದುತ್ತಾರೆ. ಪಾಪಿ ಜನರು ಅಭಿವೃದ್ಧಿ ಹೊಂದುತ್ತಾರೆ. ಧರ್ಮದ ಬಲವು ಕುಂದುತ್ತದೆ ಮತ್ತು ಅಧರ್ಮವು ಬಲಶಾಲಿಯಾಗುತ್ತದೆ.

03186048a ಅಲ್ಪಾಯುಷೋ ದರಿದ್ರಾಶ್ಚ ಧರ್ಮಿಷ್ಠಾ ಮಾನವಾಸ್ತದಾ।
03186048c ದೀರ್ಘಾಯುಷಃ ಸಮೃದ್ಧಾಶ್ಚ ವಿಧರ್ಮಾಣೋ ಯುಗಕ್ಷಯೇ।।

ಯುಗಕ್ಷಯದಲ್ಲಿ ಧರ್ಮಿಷ್ಠ ಮಾನವರು ಅಲ್ಪಾಯುಷರೂ ದರಿದ್ರರೂ ಆಗಿರುತ್ತಾರೆ. ಅಧರ್ಮಿಗಳು ದೀರ್ಘಾಯುಷಿಗಳೂ ಶ್ರೀಮಂತರೂ ಆಗಿರುತ್ತಾರೆ.

03186049a ಅಧರ್ಮಿಷ್ಠೈರುಪಾಯೈಶ್ಚ ಪ್ರಜಾ ವ್ಯವಹರಂತ್ಯುತ।
03186049c ಸಂಚಯೇನಾಪಿ ಚಾಲ್ಪೇನ ಭವಂತ್ಯಾಢ್ಯಾ ಮದಾನ್ವಿತಾಃ।।

ಪ್ರಜೆಗಳು ಅಧರ್ಮ ಉಪಾಯಗಳಿಂದ ವ್ಯವಹರಿಸುತ್ತಾರೆ. ಅಲ್ಪ ಸಂಗ್ರಹಗಳಿದ್ದರೂ ಮದಾನ್ವಿತರಾಗಿ ಧನವಂತರಾಗುತ್ತಾರೆ.

03186050a ಧನಂ ವಿಶ್ವಾಸತೋ ನ್ಯಸ್ತಂ ಮಿಥೋ ಭೂಯಿಷ್ಠಶೋ ನರಾಃ।
03186050c ಹರ್ತುಂ ವ್ಯವಸಿತಾ ರಾಜನ್ಮಾಯಾಚಾರಸಮನ್ವಿತಾಃ।।

ರಾಜನ್! ತಮ್ಮಲ್ಲಿ ವಿಶ್ವಾಸದಿಂದ ಇಟ್ಟಿರುವ ಧನವನ್ನು ನರರು ಮೋಸದಿಂದ ಅಪಹರಿಸಲು ತೊಡಗಿರುತ್ತಾರೆ.

03186051a ಪುರುಷಾದಾನಿ ಸತ್ತ್ವಾನಿ ಪಕ್ಷಿಣೋಽಥ ಮೃಗಾಸ್ತಥಾ।
03186051c ನಗರಾಣಾಂ ವಿಹಾರೇಷು ಚೈತ್ಯೇಷ್ವಪಿ ಚ ಶೇರತೇ।।

ಮನುಷ್ಯರನ್ನು ತಿನ್ನುವ ಪಕ್ಷಿಗಳು ಮತ್ತು ಮೃಗಗಳು ನಗರಗಳ ಉದ್ಯಾನಗಳಲ್ಲಿ ಮತ್ತು ಚೈತ್ಯಗಳಲ್ಲಿ ಸಂಚರಿಸುತ್ತಿರುತ್ತವೆ.

03186052a ಸಪ್ತವರ್ಷಾಷ್ಟವರ್ಷಾಶ್ಚ ಸ್ತ್ರಿಯೋ ಗರ್ಭಧರಾ ನೃಪ।
03186052c ದಶದ್ವಾದಶವರ್ಷಾಣಾಂ ಪುಂಸಾಂ ಪುತ್ರಃ ಪ್ರಜಾಯತೇ।।

ನೃಪ! ಸ್ತ್ರೀಯರು ಏಳೆಂಟು ವರ್ಷಗಳಲ್ಲಿಯೇ ಗರ್ಭಧರಿಸಬಲ್ಲವರಾಗುತ್ತಾರೆ ಮತ್ತು ಹತ್ತು-ಹನ್ನೆರಡು ವರ್ಷಗಳಲ್ಲಿಯೇ ಗಂಡಸರು ಪುತ್ರರನ್ನು ಹುಟ್ಟಿಸುವವರಾಗುತ್ತಾರೆ.

03186053a ಭವಂತಿ ಷೋಡಶೇ ವರ್ಷೇ ನರಾಃ ಪಲಿತಿನಸ್ತಥಾ।
03186053c ಆಯುಃಕ್ಷಯೋ ಮನುಷ್ಯಾಣಾಂ ಕ್ಷಿಪ್ರಮೇವ ಪ್ರಪದ್ಯತೇ।।

ಅವರ ಹದಿನಾರನೆಯ ವರ್ಷದಲ್ಲಿಯೇ ನರರು ಹಣ್ಣಾಗುತ್ತಾರೆ ಮತ್ತು ಬೇಗನೇ ಆ ಮನುಷ್ಯರ ಆಯಸ್ಸು ಮುಗಿದುಹೋಗುತ್ತದೆ.

03186054a ಕ್ಷೀಣೇ ಯುಗೇ ಮಹಾರಾಜ ತರುಣಾ ವೃದ್ಧಶೀಲಿನಃ।
03186054c ತರುಣಾನಾಂ ಚ ಯಚ್ಚೀಲಂ ತದ್ವೃದ್ಧೇಷು ಪ್ರಜಾಯತೇ।।

ಮಹಾರಾಜ! ಯುಗವು ಕ್ಷೀಣವಾಗುವಾಗ ತರುಣರು ವೃದ್ಧರಂತೆ ನಡೆದುಕೊಳ್ಳುತ್ತಾರೆ ಮತ್ತು ವೃದ್ಧರು ತರುಣರ ನಡತೆಯನ್ನು ತಮ್ಮದಾಗಿಸಿಕೊಳ್ಳುತ್ತಾರೆ.

03186055a ವಿಪರೀತಾಸ್ತದಾ ನಾರ್ಯೋ ವಂಚಯಿತ್ವಾ ರಹಃ ಪತೀನ್।
03186055c ವ್ಯುಚ್ಚರಂತ್ಯಪಿ ದುಹ್ಶೀಲಾ ದಾಸೈಃ ಪಶುಭಿರೇವ ಚ।।

ನಾರಿಯರು ವಿಪರೀತರಾಗಿ, ತಮ್ಮ ಗಂಡಂದಿರನ್ನು ವಂಚಿಸಿ ಸೇವಕರೊಂದಿಗೆ ಮತ್ತು ಪಶುಗಳೊಂದಿಗೂ ಸಂಭೋಗಮಾಡುತ್ತಾರೆ.

03186056a ತಸ್ಮಿನ್ಯುಗಸಹಸ್ರಾಂತೇ ಸಂಪ್ರಾಪ್ತೇ ಚಾಯುಷಃ ಕ್ಷಯೇ।
03186056c ಅನಾವೃಷ್ಟಿರ್ಮಹಾರಾಜ ಜಾಯತೇ ಬಹುವಾರ್ಷಿಕೀ।।

ಮಹಾರಾಜ! ಆ ಸಹಸ್ರಯುಗಗಳ ಕೊನೆಯಲ್ಲಿ, ಆಯಸ್ಸಿನ ಕ್ಷಯವು ಬಂದೊದಗಿದಾಗ ಬಹಳ ವರ್ಷದ ಅನಾವೃಷ್ಠಿಯು ಉಂಟಾಗುತ್ತದೆ.

03186057a ತತಸ್ತಾನ್ಯಲ್ಪಸಾರಾಣಿ ಸತ್ತ್ವಾನಿ ಕ್ಷುಧಿತಾನಿ ಚ।
03186057c ಪ್ರಲಯಂ ಯಾಂತಿ ಭೂಯಿಷ್ಠಂ ಪೃಥಿವ್ಯಾಂ ಪೃಥಿವೀಪತೇ।।

ಪೃಥಿವೀಪತೇ! ಆಗ ಸತ್ವಗಳು ಕಳೆದು ಅಲ್ಪಸಾರವಿರುವ ಭೂಮಿಯ ಮೇಲಿರುವವುಗಳನ್ನು ಪ್ರಲಯವು ತೆಗೆದುಕೊಂಡು ಹೋಗುತ್ತದೆ.

03186058a ತತೋ ದಿನಕರೈರ್ದೀಪ್ತೈಃ ಸಪ್ತಭಿರ್ಮನುಜಾಧಿಪ।
03186058c ಪೀಯತೇ ಸಲಿಲಂ ಸರ್ವಂ ಸಮುದ್ರೇಷು ಸರಿತ್ಸು ಚ।।

ಮನುಜಾಧಿಪ! ಆಗ ಉರಿಯುತ್ತಿರುವ ಏಳು ದಿನಕರರು ಸಮುದ್ರ-ನದಿಗಳಲ್ಲಿರುವ ಎಲ್ಲ ನೀರನ್ನೂ ಕುಡಿಯುತ್ತಾರೆ.

03186059a ಯಚ್ಚ ಕಾಷ್ಠಂ ತೃಣಂ ಚಾಪಿ ಶುಷ್ಕಂ ಚಾರ್ದ್ರಂ ಚ ಭಾರತ।
03186059c ಸರ್ವಂ ತದ್ಭಸ್ಮಸಾದ್ಭೂತಂ ದೃಶ್ಯತೇ ಭರತರ್ಷಭ।।

ಭಾರತ! ಭರತರ್ಷಭ! ಕಟ್ಟಿಗೆಯಾಗಿರಲಿ ಹುಲ್ಲಾಗಿರಲಿ, ಒಣಗಿರಲಿ ಅಥವಾ ಒದ್ದೆಯಾಗಿರಲಿ, ಎಲ್ಲವೂ ಭಸ್ಮವಾಗುವುದು ಕಂಡುಬರುತ್ತದೆ.

03186060a ತತಃ ಸಂವರ್ತಕೋ ವಹ್ನಿರ್ವಾಯುನಾ ಸಹ ಭಾರತ।
03186060c ಲೋಕಮಾವಿಶತೇ ಪೂರ್ವಮಾದಿತ್ಯೈರುಪಶೋಷಿತಂ।।

ಭಾರತ! ಆಗ ಮೊದಲೇ ಆದಿತ್ಯರಿಂದ ಒಣಗಿ ಹೋಗಿದ್ದ ಲೋಕವನ್ನು ಸಂವರ್ತಕ ವಹ್ನಿಯು ವಾಯುವಿನೊಂದಿಗೆ ವ್ಯಾಪಿಸುತ್ತಾನೆ.

03186061a ತತಃ ಸ ಪೃಥಿವೀಂ ಭಿತ್ತ್ವಾ ಸಮಾವಿಶ್ಯ ರಸಾತಲಂ।
03186061c ದೇವದಾನವಯಕ್ಷಾಣಾಂ ಭಯಂ ಜನಯತೇ ಮಹತ್।।

ಆಗ ಅಗ್ನಿಯು ಭೂಮಿಯನ್ನು ಒಡೆದು ರಸಾತಲವನ್ನು ಹೊಕ್ಕು ದೇವ, ದಾನವ, ಯಕ್ಷರಲ್ಲಿ ಮಹಾ ಭಯವನ್ನು ಹುಟ್ಟಿಸುತ್ತದೆ.

03186062a ನಿರ್ದಹನ್ನಾಗಲೋಕಂ ಚ ಯಚ್ಚ ಕಿಂ ಚಿತ್ ಕ್ಷಿತಾವಿಹ।
03186062c ಅಧಸ್ತಾತ್ಪೃಥಿವೀಪಾಲ ಸರ್ವಂ ನಾಶಯತೇ ಕ್ಷಣಾತ್।।

ಪೃಥಿವೀಪಾಲ! ಅದು ನಾಗಲೋಕವನ್ನೂ ಮತ್ತು ಭೂಮಿಯ ಮೇಲಿರುವ ಎಲ್ಲವನ್ನೂ ಸುಟ್ಟು, ಕ್ಷಣದಲ್ಲಿ ಅದರ ಕೆಳಗಿರುವ ಎಲ್ಲವನ್ನೂ ನಾಶಪಡಿಸುತ್ತದೆ.

03186063a ತತೋ ಯೋಜನವಿಂಶಾನಾಂ ಸಹಸ್ರಾಣಿ ಶತಾನಿ ಚ।
03186063c ನಿರ್ದಹತ್ಯಶಿವೋ ವಾಯುಃ ಸ ಚ ಸಂವರ್ತಕೋಽನಲಃ।।

ಆಗ ಸಂವರ್ತಕ ಅನಲನು ಅಮಂಗಳ ವಾಯುವಿನೊಂದಿಗೆ ಇಪ್ಪತ್ತು ಸಹಸ್ರ ನೂರು ಯೋಜನೆಗಳನ್ನು ಸುಟ್ಟುಹಾಕುತ್ತಾನೆ.

03186064a ಸದೇವಾಸುರಗಂಧರ್ವಂ ಸಯಕ್ಷೋರಗರಾಕ್ಷಸಂ।
03186064c ತತೋ ದಹತಿ ದೀಪ್ತಃ ಸ ಸರ್ವಮೇವ ಜಗದ್ವಿಭುಃ।।

ಆ ಜಗದ್ವಿಭುವು ಉರಿದು ದೇವಾಸುರಗಂಧರ್ವರನ್ನು ಯಕ್ಷ, ಉರಗ ರಾಕ್ಷಸರೊಂದಿಗೆ ಎಲ್ಲವನ್ನೂ ಸುಡುತ್ತಾನೆ.

03186065a ತತೋ ಗಜಕುಲಪ್ರಖ್ಯಾಸ್ತಡಿನ್ಮಾಲಾವಿಭೂಷಿತಾಃ।
03186065c ಉತ್ತಿಷ್ಠಂತಿ ಮಹಾಮೇಘಾ ನಭಸ್ಯದ್ಭುತದರ್ಶನಾಃ।।

ಆಗ ಆನೆಗಳ ಹಿಂಡುಗಳಂತಿರುವ ಮಿಂಚಿನ ಮಾಲೆಗಳಿಂದ ಅಲಂಕೃತವಾದ ಅಧ್ಭುತವಾಗಿ ಕಾಣುವ ಮಹಾಮೇಘಗಳು ಮೇಲೇರುತ್ತವೆ.

03186066a ಕೇ ಚಿನ್ನೀಲೋತ್ಪಲಶ್ಯಾಮಾಃ ಕೇ ಚಿತ್ಕುಮುದಸನ್ನಿಭಾಃ।
03186066c ಕೇ ಚಿತ್ಕಿಂಜಲ್ಕಸಂಕಾಶಾಃ ಕೇ ಚಿತ್ಪೀತಾಃ ಪಯೋಧರಾಃ।।
03186067a ಕೇ ಚಿದ್ಧಾರಿದ್ರಸಂಕಾಶಾಃ ಕಾಕಾಂಡಕನಿಭಾಸ್ತಥಾ।
03186067c ಕೇ ಚಿತ್ಕಮಲಪತ್ರಾಭಾಃ ಕೇ ಚಿದ್ಧಿಂಗುಲಕಪ್ರಭಾಃ।।
03186068a ಕೇ ಚಿತ್ಪುರವರಾಕಾರಾಃ ಕೇ ಚಿದ್ಗಜಕುಲೋಪಮಾಃ।
03186068c ಕೇ ಚಿದಂಜನಸಂಕಾಶಾಃ ಕೇ ಚಿನ್ಮಕರಸಂಸ್ಥಿತಾಃ।।

ಕೆಲವು ನೀಲಿ ಕಮಲಗಳಂತೆ ಕಪ್ಪಾಗಿದ್ದರೆ ಕೆಲವು ಕುಮುದಗಳಂತೆ ಬಿಳಿಯಾಗಿರುತ್ತವೆ. ಕೆಲವು ಕಿಂಜಲ್ಕಗಳಂತಿದ್ದರೆ ಕೆಲವು ಅರಿಶಿಣ ಬಣ್ಣದ ಮೋಡಗಳು. ಕೆಲವು ಆರಿದ್ರದಂತೆ ಕೆಂಪಾಗಿದ್ದರೆ ಕೆಲವು ಜೇನುಹುಳುಗಳಿದ್ದಂತೆ. ಕೆಲವು ಕಮಲದ ಎಸಳುಗಳಂತಿದ್ದರೆ ಕೆಲವು ಕುಂಕುಮದ ಬಣ್ಣದವುಗಳು. ಕೆಲವು ದೊಡ್ಡ ಪಟ್ಟಣಗಳ ಆಕಾರದಲ್ಲಿದ್ದರೆ ಕೆಲವು ಆನೆಗಳ ಹಿಂಡಿನಂತೆ. ಕೆಲವು ಕಾಡಿಗೆಯಷ್ಟು ಕಪ್ಪಾಗಿದ್ದರೆ ಕೆಲವು ಮೊಸಳೆಯ ಆಕಾರದಲ್ಲಿ.

03186068e ವಿದ್ಯುನ್ಮಾಲಾಪಿನದ್ಧಾಂಗಾಃ ಸಮುತ್ತಿಷ್ಠಂತಿ ವೈ ಘನಾಃ।।
03186069a ಘೋರರೂಪಾ ಮಹಾರಾಜ ಘೋರಸ್ವನನಿನಾದಿತಾಃ।

ಮಹಾರಾಜ! ವಿದ್ಯುತ್ತಿನ ಮಾಲೆಯನ್ನು ಧರಿಸಿ ಆ ಘನ ಘೋರರೂಪೀ ಮೋಡಗಳು, ಘೋರವಾಗಿ ಗುಡುಗನ್ನು ಮೊಳಗುತ್ತಾ ಮೇಲೇರುತ್ತವೆ.

03186069c ತತೋ ಜಲಧರಾಃ ಸರ್ವೇ ವ್ಯಾಪ್ನುವಂತಿ ನಭಸ್ತಲಂ।।
03186070a ತೈರಿಯಂ ಪೃಥಿವೀ ಸರ್ವಾ ಸಪರ್ವತವನಾಕರಾ।
03186070c ಆಪೂರ್ಯತೇ ಮಹಾರಾಜ ಸಲಿಲೌಘಪರಿಪ್ಲುತಾ।।

ಮಹಾರಾಜ! ಮೋಡಗಳು ನಭಸ್ಥಲವೆಲ್ಲವನ್ನೂ ವ್ಯಾಪಿಸುತ್ತವೆ. ಪರ್ವತ-ವನ-ಗಣಿಗಳೊಂದಿಗೆ ಪೃಥ್ವಿಯೆಲ್ಲವನ್ನೂ ತುಂಬಿ ನೀರಿನ ಪ್ರವಾಹವನ್ನು ಹರಿಸುತ್ತವೆ.

03186071a ತತಸ್ತೇ ಜಲದಾ ಘೋರಾ ರಾವಿಣಃ ಪುರುಷರ್ಷಭ।
03186071c ಸರ್ವತಃ ಪ್ಲಾವಯಂತ್ಯಾಶು ಚೋದಿತಾಃ ಪರಮೇಷ್ಠಿನಾ।।

ಪರಮೇಷ್ಠಿಯ ಆಜ್ಞೆಯಂತೆ ಆ ಘೋರವಾಗಿ ಗುಡುಗುವ ಮೋಡಗಳು ಎಲ್ಲೆಡೆಯೂ ಮಳೆಯನ್ನು ಸುರಿಸಿ ಪ್ರವಾಹವನ್ನುಂಟುಮಾಡುತ್ತವೆ.

03186072a ವರ್ಷಮಾಣಾ ಮಹತ್ತೋಯಂ ಪೂರಯಂತೋ ವಸುಂಧರಾಂ।
03186072c ಸುಘೋರಮಶಿವಂ ರೌದ್ರಂ ನಾಶಯಂತಿ ಚ ಪಾವಕಂ।।

ತಮ್ಮಲ್ಲಿಯ ಮಹಾನೀರನ್ನು ಸುರಿಸಿ ವಸುಂಧರೆಯನ್ನು ತುಂಬಿ, ಅತಿಘೋರವಾದ ಅಮಂಗಳ ರೌದ್ರ ಪಾವಕನನ್ನು ನಾಶಪಡಿಸುತ್ತವೆ.

03186073a ತತೋ ದ್ವಾದಶ ವರ್ಷಾಣಿ ಪಯೋದಾಸ್ತ ಉಪಪ್ಲವೇ।
03186073c ಧಾರಾಭಿಃ ಪೂರಯಂತೋ ವೈ ಚೋದ್ಯಮಾನಾ ಮಹಾತ್ಮನಾ।।

ಆಗ ಹನ್ನೆರಡು ವರ್ಷಗಳ ಕಾಲ ಮೋಡಗಳು ಮೇಲೆದ್ದು ಆ ಮಹಾತ್ಮನ ಪ್ರಚೋದನೆಗೊಳಲ್ಪಟ್ಟು ಮಳೆಸುರಿಸಿ ಪ್ರವಾಹಗಳನ್ನುಂಟುಮಾಡುತ್ತವೆ.

03186074a ತತಃ ಸಮುದ್ರಃ ಸ್ವಾಂ ವೇಲಾಮತಿಕ್ರಾಮತಿ ಭಾರತ।
03186074c ಪರ್ವತಾಶ್ಚ ವಿಶೀರ್ಯಂತೇ ಮಹೀ ಚಾಪಿ ವಿಶೀರ್ಯತೇ।।

ಆಗ ಭಾರತ! ಸಮುದ್ರವು ಉಬ್ಬರದ ಗತಿಯನ್ನು ಅತಿಕ್ರಮಿಸುತ್ತದೆ. ಪರ್ವತಗಳು ಮುರಿದು ಬೀಳುತ್ತವೆ ಮತ್ತು ಭೂಮಿ ಕೂಡ ಕುಸಿಯುತ್ತದೆ.

03186075a ಸರ್ವತಃ ಸಹಸಾ ಭ್ರಾಂತಾಸ್ತೇ ಪಯೋದಾ ನಭಸ್ತಲಂ।
03186075c ಸಂವೇಷ್ಟಯಿತ್ವಾ ನಶ್ಯಂತಿ ವಾಯುವೇಗಪರಾಹತಾಃ।।

ಆಗ ಎಲ್ಲ ಕಡೆಯಿಂದ ಭಿರುಗಾಳಿಯು ಬೀಸುತ್ತದೆ ಮತ್ತು ವಾಯುವೇಗಕ್ಕೆ ಸಿಲುಕಿದ ಮೋಡಗಳು ಚದುರಿ ನಾಶವಾಗುತ್ತವೆ.

03186076a ತತಸ್ತಂ ಮಾರುತಂ ಘೋರಂ ಸ್ವಯಂಭೂರ್ಮನುಜಾಧಿಪ।
03186076c ಆದಿಪದ್ಮಾಲಯೋ ದೇವಃ ಪೀತ್ವಾ ಸ್ವಪಿತಿ ಭಾರತ।।

ಮನುಜಾಧಿಪ! ಭಾರತ! ಆಗ ಆ ಘೋರ ವಾಯುವನ್ನು ಸ್ವಯಂಭು ದೇವನು ಕುಡಿದು ಆದಿಪದ್ಮಾಲಯದಲ್ಲಿ ನಿಲ್ಲುತ್ತಾನೆ.

03186077a ತಸ್ಮಿನ್ನೇಕಾರ್ಣವೇ ಘೋರೇ ನಷ್ಟೇ ಸ್ಥಾವರಜಂಗಮೇ।
03186077c ನಷ್ಟೇ ದೇವಾಸುರಗಣೇ ಯಕ್ಷರಾಕ್ಷಸವರ್ಜಿತೇ।।
03186078a ನಿರ್ಮನುಷ್ಯೇ ಮಹೀಪಾಲ ನಿಃಶ್ವಾಪದಮಹೀರುಹೇ।
03186078c ಅನಂತರಿಕ್ಷೇ ಲೋಕೇಽಸ್ಮಿನ್ಭ್ರಮಾಮ್ಯೇಕೋಽಹಮಾದೃತಃ।।

ಮಹೀಪಾಲ! ಯಾರೂ ಇಲ್ಲದ, ಸ್ಥಾವರ ಜಂಗಮಗಳು ನಷ್ಟವಾಗಿ ಹೋಗಿರುವ, ದೇವಾಸುರ ಗಣಗಳು ನಷ್ಟವಾಗಿ ಹೋಗಿದ್ದ, ಯಕ್ಷರಾಕ್ಷಸರಿಂದ ವರ್ಜಿತವಾಗಿದ್ದ, ಮನುಷ್ಯರಿಲ್ಲದ, ಪ್ರಾಣಿ-ವೃಕ್ಷಗಳಿಲ್ಲದ, ಅಂತರಿಕ್ಷವೇ ಇಲ್ಲದ ಈ ಲೋಕದಲ್ಲಿ ನಾನು ಏಕಾಂಗಿಯಾಗಿ ಚಿಂತಿಸುತ್ತಾ ತಿರುಗಾಡುತ್ತಿದ್ದೆ.

03186079a ಏಕಾರ್ಣವೇ ಜಲೇ ಘೋರೇ ವಿಚರನ್ಪಾರ್ಥಿವೋತ್ತಮ।
03186079c ಅಪಶ್ಯನ್ಸರ್ವಭೂತಾನಿ ವೈಕ್ಲವ್ಯಮಗಮಂ ಪರಂ।।

ಪಾರ್ಥಿವೋತ್ತಮ! ಈ ನಿರ್ಜನವಾದ ಘೋರ ಜಲರಾಶಿಯಮೇಲೆ ಸಂಚರಿಸುತ್ತಿರುವಾಗ, ಇದ್ದಿದ್ದ ಏನನ್ನೂ ಕಾಣದೇ ಅತೀವ ಭಯವು ನನ್ನನ್ನು ಆವರಿಸಿತು.

03186080a ತತಃ ಸುದೀರ್ಘಂ ಗತ್ವಾ ತು ಪ್ಲವಮಾನೋ ನರಾಧಿಪ।
03186080c ಶ್ರಾಂತಃ ಕ್ವ ಚಿನ್ನ ಶರಣಂ ಲಭಾಮ್ಯಹಮತಂದ್ರಿತಃ।।

ನರಾಧಿಪ! ಈಸುತ್ತ ಬಹುದೂರ ಹೋದರೂ ಎಲ್ಲಿಯೂ ವಿಶ್ರಾಂತಿ ಪಡೆಯುವ ಆಶ್ರಯವು ದೊರೆಯದೇ ಮುಂದುವರೆಯುತ್ತಿದ್ದೆನು.

03186081a ತತಃ ಕದಾ ಚಿತ್ಪಶ್ಯಾಮಿ ತಸ್ಮಿನ್ಸಲಿಲಸಂಪ್ಲವೇ।
03186081c ನ್ಯಗ್ರೋಧಂ ಸುಮಹಾಂತಂ ವೈ ವಿಶಾಲಂ ಪೃಥಿವೀಪತೇ।।

ಪೃಥಿವೀಪತೇ! ಆಗ ಒಮ್ಮೆ ಆ ನೀರಿನ ರಾಶಿಯಲ್ಲಿ ಒಂದು ವಿಶಾಲವಾದ ಅತಿ ದೊಡ್ಡ ನ್ಯಗ್ರೋಧ ವೃಕ್ಷವನ್ನು ಕಾಣುತ್ತೇನೆ1.

03186082a ಶಾಖಾಯಾಂ ತಸ್ಯ ವೃಕ್ಷಸ್ಯ ವಿಸ್ತೀರ್ಣಾಯಾಂ ನರಾಧಿಪ।
03186082c ಪರ್ಯಂಕೇ ಪೃಥಿವೀಪಾಲ ದಿವ್ಯಾಸ್ತರಣಸಂಸ್ತೃತೇ।।
03186083a ಉಪವಿಷ್ಟಂ ಮಹಾರಾಜ ಪೂರ್ಣೇಂದುಸದೃಶಾನನಂ।
03186083c ಫುಲ್ಲಪದ್ಮವಿಶಾಲಾಕ್ಷಂ ಬಾಲಂ ಪಶ್ಯಾಮಿ ಭಾರತ।।

ನರಾಧಿಪ! ಪೃಥಿವೀಪಾಲ! ಆ ವೃಕ್ಷದ ವಿಶಾಲ ರೆಂಬೆಯ ಮೇಲೆ ದಿವ್ಯ ವಸ್ತುಗಳಿಂದ ಅಲಂಕೃತವಾದ ಪರ್ಯಂಕದಲ್ಲಿ ಮಲಗಿದ್ದ ಪೂರ್ಣಚಂದ್ರನತೆ ಮುಖವುಳ್ಳ, ಅರಳಿದ ಕಮಲದಂತೆ ವಿಶಾಲ ಕಣ್ಣುಗಳಿರುವ ಬಾಲಕನನ್ನು ನೋಡುತ್ತೇನೆ ಭಾರತ!

03186084a ತತೋ ಮೇ ಪೃಥಿವೀಪಾಲ ವಿಸ್ಮಯಃ ಸುಮಹಾನಭೂತ್।
03186084c ಕಥಂ ತ್ವಯಂ ಶಿಶುಃ ಶೇತೇ ಲೋಕೇ ನಾಶಮುಪಾಗತೇ।।

ಪೃಥಿವೀಪಾಲ! ಆಗ ನಾನು ಲೋಕಗಳೆಲ್ಲವೂ ನಾಶಹೊಂದಿರುವಾಗ ಈ ಶಿಶುವು ಇಲ್ಲಿ ಹೇಗೆ ಮಲಗಿದೆ? ಎಂದು ಮಹಾ ವಿಸ್ಮಯಗೊಂಡೆ.

03186085a ತಪಸಾ ಚಿಂತಯಂಶ್ಚಾಪಿ ತಂ ಶಿಶುಂ ನೋಪಲಕ್ಷಯೇ।
03186085c ಭೂತಂ ಭವ್ಯಂ ಭವಿಷ್ಯಚ್ಚ ಜಾನನ್ನಪಿ ನರಾಧಿಪ।।

ನರಾಧಿಪ! ತಪಸ್ಸಿನ ಮೂಲಕ ಚಿಂತಿಸಿದರೆ ಭೂತ. ವರ್ತಮಾನ ಭವಿಷ್ಯಗಳು ತಿಳಿದುಬಂದರೂ ಈ ಶಿಶುವನ್ನು ಅರಿಯದೇ ಹೋದೆನು.

03186086a ಅತಸೀಪುಷ್ಪವರ್ಣಾಭಃ ಶ್ರೀವತ್ಸಕೃತಲಕ್ಷಣಃ।
03186086c ಸಾಕ್ಷಾಲ್ಲಕ್ಷ್ಮ್ಯಾ ಇವಾವಾಸಃ ಸ ತದಾ ಪ್ರತಿಭಾತಿ ಮೇ।।

ಅವನ ವರ್ಣವು ಜೋಳದ ಹೂಗಳಿಂತಿದ್ದವು; ಅವನ ಎದೆಯ ಮೇಲೆ ಶ್ರೀವತ್ಸದ ಗುರುತಿತ್ತು; ಮತ್ತು ಸಾಕ್ಷಾತ್ ಲಕ್ಷ್ಮಿಯೇ ಅವನಲ್ಲಿ ವಾಸಿಸಿದ್ದಾಳೆಯೋ ಎಂಬಂತೆ ನನಗೆ ತೋರಿತು.

03186087a ತತೋ ಮಾಮಬ್ರವೀದ್ಬಾಲಃ ಸ ಪದ್ಮನಿಭಲೋಚನಃ।
03186087c ಶ್ರೀವತ್ಸಧಾರೀ ದ್ಯುತಿಮಾನ್ವಾಕ್ಯಂ ಶ್ರುತಿಸುಖಾವಹಂ।।

ಆಗ ಆ ಪದ್ಮನಿಭಲೋಚನ, ಶ್ರೀವತ್ಸಧಾರೀ, ದ್ಯುತಿಮಾನ್ ಬಾಲಕನು ನನಗೆ ಕೇಳಿದರೆ ಸುಖವನ್ನುಂಟುಮಾಡುವ ಈ ಮಾತುಗಳನ್ನಾಡಿದನು.

03186088a ಜಾನಾಮಿ ತ್ವಾ ಪರಿಶ್ರಾಂತಂ ತಾತ ವಿಶ್ರಾಮಕಾಂಕ್ಷಿಣಂ।
03186088c ಮಾರ್ಕಂಡೇಯ ಇಹಾಸ್ಸ್ವ ತ್ವಂ ಯಾವದಿಚ್ಚಸಿ ಭಾರ್ಗವ।।

“ಮಾರ್ಕಂಡೇಯ! ಮಗೂ! ಭಾರ್ಗವ! ನೀನು ಬಳಲಿದ್ದೀಯೆ ಮತ್ತು ವಿಶ್ರಾಂತಿಯನ್ನು ಬಯಸುತ್ತೀಯೆ ಎಂದು ನಾನು ತಿಳಿದಿದ್ದೇನೆ. ನಿನಗಿಷ್ಟವಾದಷ್ಟು ಸಮಯ ಇಲ್ಲಿ ಕುಳಿತುಕೋ!

03186089a ಅಭ್ಯಂತರಂ ಶರೀರಂ ಮೇ ಪ್ರವಿಶ್ಯ ಮುನಿಸತ್ತಮ।
03186089c ಆಸ್ಸ್ವ ಭೋ ವಿಹಿತೋ ವಾಸಃ ಪ್ರಸಾದಸ್ತೇ ಕೃತೋ ಮಯಾ।।

ಮುನಿಸತ್ತಮ! ನನ್ನ ಶರೀರವನ್ನು ಪ್ರವೇಶಿಸಿ ಅದರೊಳಗೆ ವಿಶ್ರಾಂತಿಪಡೆ. ಭೋ! ನಿನಗೆ ಪ್ರಸಾದವಾಗಿ ನಾನು ನಿನ್ನ ವಾಸಕ್ಕೆ ಜಾಗ ಮಾಡಿಕೊಡುತ್ತೇನೆ.”

03186090a ತತೋ ಬಾಲೇನ ತೇನೈವಮುಕ್ತಸ್ಯಾಸೀತ್ತದಾ ಮಮ।
03186090c ನಿರ್ವೇದೋ ಜೀವಿತೇ ದೀರ್ಘೇ ಮನುಷ್ಯತ್ವೇ ಚ ಭಾರತ।।

ಭಾರತ! ಆ ಬಾಲಕನು ಹೀಗೆ ಹೇಳಲು ನಾನು ನನ್ನ ದೀರ್ಘಕಾಲ ಜೀವಿಸಿದ ಮನುಷ್ಯತ್ವದಿಂದ ತುಂಬಾ ಬಳಲಿದೆನು.

03186091a ತತೋ ಬಾಲೇನ ತೇನಾಸ್ಯಂ ಸಹಸಾ ವಿವೃತಂ ಕೃತಂ।
03186091c ತಸ್ಯಾಹಮವಶೋ ವಕ್ತ್ರಂ ದೈವಯೋಗಾತ್ಪ್ರವೇಶಿತಃ।।

ಆಗ ಒಮ್ಮಿಂದೊಮ್ಮೆಲೇ ಬಾಲಕನ ಬಾಯಿಯು ಅಗಲವಾಗಿ ತೆರೆಯಿತು ಮತ್ತು ನಾನು ದೈವಯೋಗದಂತೆ, ನಿರ್ವಶನಾಗಿ ಆ ಬಾಯಿಯನ್ನು ಪ್ರವೇಶಿಸಿದೆ.

03186092a ತತಃ ಪ್ರವಿಷ್ಟಸ್ತತ್ಕುಕ್ಷಿಂ ಸಹಸಾ ಮನುಜಾಧಿಪ।
03186092c ಸರಾಷ್ಟ್ರನಗರಾಕೀರ್ಣಾಂ ಕೃತ್ಸ್ನಾಂ ಪಶ್ಯಾಮಿ ಮೇದಿನೀಂ।।

ಮನುಜಾಧಿಪ! ಆಗ ವೇಗವಾಗಿ ಅವನ ಒಡಲನ್ನು ಪ್ರವೇಶಿಸಲು ಅಲ್ಲಿ ರಾಷ್ಟ್ರ-ನಗರ-ನದಿಗಳಿಂದ ಕೂಡಿದ ಸಂಪೂರ್ಣ ಮೇದಿನಿಯನ್ನು ನೋಡುತ್ತೇನೆ.

03186093a ಗಂಗಾಂ ಶತದ್ರುಂ ಸೀತಾಂ ಚ ಯಮುನಾಮಥ ಕೌಶಿಕೀಂ।
03186093c ಚರ್ಮಣ್ವತೀಂ ವೇತ್ರವತೀಂ ಚಂದ್ರಭಾಗಾಂ ಸರಸ್ವತೀಂ।।
03186094a ಸಿಂಧುಂ ಚೈವ ವಿಪಾಶಾಂ ಚ ನದೀಂ ಗೋದಾವರೀಮಪಿ।
03186094c ವಸ್ವೋಕಸಾರಾಂ ನಲಿನೀಂ ನರ್ಮದಾಂ ಚೈವ ಭಾರತ।।
03186095a ನದೀಂ ತಾಮ್ರಾಂ ಚ ವೇಣ್ಣಾಂ ಚ ಪುಣ್ಯತೋಯಾಂ ಶುಭಾವಹಾಂ।
03186095c ಸುವೇಣಾಂ ಕೃಷ್ಣವೇಣಾಂ ಚ ಇರಾಮಾಂ ಚ ಮಹಾನದೀಂ।।
03186095e ಶೋಣಂ ಚ ಪುರುಷವ್ಯಾಘ್ರ ವಿಶಲ್ಯಾಂ ಕಂಪುನಾಮಪಿ।।
03186096a ಏತಾಶ್ಚಾನ್ಯಾಶ್ಚ ನದ್ಯೋಽಹಂ ಪೃಥಿವ್ಯಾಂ ಯಾ ನರೋತ್ತಮ।
03186096c ಪರಿಕ್ರಾಮನ್ಪ್ರಪಶ್ಯಾಮಿ ತಸ್ಯ ಕುಕ್ಷೌ ಮಹಾತ್ಮನಃ।।

ಭಾರತ! ಪುರುಷವ್ಯಾಘ್ರ! ನರೋತ್ತಮ! ಗಂಗಾ, ಶತದ್ರು, ಸೀತಾ, ಯಮುನಾ, ಕೌಶಿಕೀ, ಚರ್ಮಣ್ವತೀ, ವೇತ್ರವತಿ, ಚಂದ್ರಭಾಗ, ಸರಸ್ವತೀ, ಸಿಂಧು, ವಿಪಾಶ ಮುತ್ತು ನದೀ ಗೋದಾವರೀ, ವಸ್ವೋಕಸಾರ, ನಲಿನೀ, ನರ್ಮದಾ, ನದೀ ತಾಮ್ರ, ಪುಣ್ಯನೀರಿನ ಶುಭವನ್ನು ತರುವ ವೇಣ್ಣಾ, ಸುವೇಣ, ಕೃಷ್ಣವೇಣಾ, ಇರಾಮಾ, ಮಹಾನದೀ, ಶೋಣ, ವಿಶಲ್ಯಾ, ಕಂಪುನ ಮೊದಲಾದ ನದಿಗಳು ಮತ್ತು ಪೃಥ್ವಿಯಲ್ಲಿ ಹರಿಯುವ ಅನ್ಯ ನದಿಗಳನ್ನೂ ಆ ಮಹಾತ್ಮನ ಒಡಲಲ್ಲಿ ನೋಡುತ್ತೇನೆ.

03186097a ತತಃ ಸಮುದ್ರಂ ಪಶ್ಯಾಮಿ ಯಾದೋಗಣನಿಷೇವಿತಂ।
03186097c ರತ್ನಾಕರಮಮಿತ್ರಘ್ನ ನಿಧಾನಂ ಪಯಸೋ ಮಹತ್।।

ಅಮಿತ್ರಘ್ನ! ಆಗ ಮೀನುಗಳ ಗಣಗಳು ವಾಸಿಸುತ್ತಿರುವ ರತ್ನಾಕರ, ನೀರಿನ ನಿಧಾನ ಸಮುದ್ರವನ್ನು ನೋಡುತ್ತೇನೆ.

03186098a ತತಃ ಪಶ್ಯಾಮಿ ಗಗನಂ ಚಂದ್ರಸೂರ್ಯವಿರಾಜಿತಂ।
03186098c ಜಾಜ್ವಲ್ಯಮಾನಂ ತೇಜೋಭಿಃ ಪಾವಕಾರ್ಕಸಮಪ್ರಭೈಃ।।

ಆಗ ಚಂದ್ರಸೂರ್ಯರಿಂದ ವಿರಾಜಿತ, ಅಗ್ನಿಸೂರ್ಯರ ಪ್ರಭೆಯಂತೆ ತೇಜಸ್ಸಿನಿಂದ ಬೆಳಗುತ್ತಿರುವ ಗಗನವನ್ನು ನೋಡುತ್ತೇನೆ.

03186098e ಪಶ್ಯಾಮಿ ಚ ಮಹೀಂ ರಾಜನ್ಕಾನನೈರುಪಶೋಭಿತಾಂ।।
03186099a ಯಜಂತೇ ಹಿ ತದಾ ರಾಜನ್ಬ್ರಾಹ್ಮಣಾ ಬಹುಭಿಃ ಸವೈಃ।
03186099c ಕ್ಷತ್ರಿಯಾಶ್ಚ ಪ್ರವರ್ತಂತೇ ಸರ್ವವರ್ಣಾನುರಂಜನೇ।।

ರಾಜನ್! ಕಾನನಗಳಿಂದ ಶೋಭಿಸುವ ಭೂಮಿಯನ್ನೂ, ಬಹುಮಂದಿ ಬ್ರಾಹ್ಮಣರು ಸೋಮದಿಂದ ಯಾಜಿಸುವುದನ್ನು, ಕ್ಷತ್ರಿಯರು ಸರ್ವ ವರ್ಣದವರನ್ನು ರಂಜಿಸುವುದರಲ್ಲಿ ತೊಡಗಿರುವುದನ್ನು ನೋಡುತ್ತೇನೆ.

03186100a ವೈಶ್ಯಾಃ ಕೃಷಿಂ ಯಥಾನ್ಯಾಯಂ ಕಾರಯಂತಿ ನರಾಧಿಪ।
03186100c ಶುಶ್ರೂಷಾಯಾಂ ಚ ನಿರತಾ ದ್ವಿಜಾನಾಂ ವೃಷಲಾಸ್ತಥಾ।।

ನರಾಧಿಪ! ವೈಶ್ಯರು ಯಥಾನ್ಯಾಯವಾಗಿ ಕೃಷಿ ಮಾಡುತ್ತಿರುತ್ತಾರೆ ಮತ್ತು ಶೂದ್ರರು ದ್ವಿಜರ ಶುಶ್ರೂಷೆಯಲ್ಲಿ ನಿರತರಾಗಿರುತ್ತಾರೆ.

03186101a ತತಃ ಪರಿಪತನ್ರಾಜಂಸ್ತಸ್ಯ ಕುಕ್ಷೌ ಮಹಾತ್ಮನಃ।
03186101c ಹಿಮವಂತಂ ಚ ಪಶ್ಯಾಮಿ ಹೇಮಕೂಟಂ ಚ ಪರ್ವತಂ।।

ರಾಜನ್! ಆಗ ಆ ಮಹಾತ್ಮನ ಕುಕ್ಷಿಯಲ್ಲಿ ಸಂಚರಿಸುತ್ತಾ ಹಿಮಾಲಯ ಮತ್ತು ಹೇಮಕೂಟ ಪರ್ವತಗಳನ್ನು ನೋಡುತ್ತೇನೆ.

03186102a ನಿಷಧಂ ಚಾಪಿ ಪಶ್ಯಾಮಿ ಶ್ವೇತಂ ಚ ರಜತಾಚಿತಂ।
03186102c ಪಶ್ಯಾಮಿ ಚ ಮಹೀಪಾಲ ಪರ್ವತಂ ಗಂಧಮಾದನಂ।।

ನಿಷಧವನ್ನೂ ರಜತಾಚಿತ ಶ್ವೇತವನ್ನೂ ನಾನು ನೋಡುತ್ತೇನೆ. ಮಹೀಪಾಲ! ಗಂಧಮಾದನ ಪರ್ವತವನ್ನೂ ನೋಡುತ್ತೇನೆ.

03186103a ಮಂದರಂ ಮನುಜವ್ಯಾಘ್ರ ನೀಲಂ ಚಾಪಿ ಮಹಾಗಿರಿಂ।
03186103c ಪಶ್ಯಾಮಿ ಚ ಮಹಾರಾಜ ಮೇರುಂ ಕನಕಪರ್ವತಂ।।

ಮನುಜವ್ಯಾಘ್ರ! ಮಹಾರಾಜ! ಮಂದರವನ್ನೂ ಮಹಾಗಿರಿ ನೀಲವನ್ನೂ ಮೇರು ಕನಕಪರ್ವತವನ್ನೂ ನೋಡುತ್ತೇನೆ.

03186104a ಮಹೇಂದ್ರಂ ಚೈವ ಪಶ್ಯಾಮಿ ವಿಂಧ್ಯಂ ಚ ಗಿರಿಮುತ್ತಮಂ।
03186104c ಮಲಯಂ ಚಾಪಿ ಪಶ್ಯಾಮಿ ಪಾರಿಯಾತ್ರಂ ಚ ಪರ್ವತಂ।।

ಮಹೇಂದ್ರವನ್ನೂ, ಉತ್ತಮ ಗಿರಿ ವಿಂಧ್ಯವನ್ನೂ ನೋಡುತ್ತೇನೆ. ಸಂಚರಿಸುತ್ತಾ ನಾನು ಮಲಯ ಪರ್ವತವನ್ನೂ ನೋಡುತ್ತೇನೆ.

03186105a ಏತೇ ಚಾನ್ಯೇ ಚ ಬಹವೋ ಯಾವಂತಃ ಪೃಥಿವೀಧರಾಃ।
03186105c ತಸ್ಯೋದರೇ ಮಯಾ ದೃಷ್ಟಾಃ ಸರ್ವರತ್ನವಿಭೂಷಿತಾಃ।।

ಇವುಗಳನ್ನು ಮತ್ತು ಪೃಥ್ವಿಯಲ್ಲಿರುವ ಇನ್ನೂ ಇತರ ಬಹಳಷ್ಠು ರತ್ನಗಳಿಂದ ಅಲಂಕೃತಗೊಂಡ ಪರ್ವತಗಳನ್ನು ಎಲ್ಲವನ್ನೂ ಅವನ ಕುಕ್ಷಿಯಲ್ಲಿ ನೋಡುತ್ತೇನೆ.

03186106a ಸಿಂಹಾನ್ವ್ಯಾಘ್ರಾನ್ವರಾಹಾಂಶ್ಚ ನಾಗಾಂಶ್ಚ ಮನುಜಾಧಿಪ।
03186106c ಪೃಥಿವ್ಯಾಂ ಯಾನಿ ಚಾನ್ಯಾನಿ ಸತ್ತ್ವಾನಿ ಜಗತೀಪತೇ।।
03186106e ತಾನಿ ಸರ್ವಾಣ್ಯಹಂ ತತ್ರ ಪಶ್ಯನ್ಪರ್ಯಚರಂ ತದಾ।।

ಮನುಜಾಧಿಪ! ಜಗತೀಪತೇ! ಸಿಂಹಗಳು, ಹುಲಿಗಳು, ವರಾಹಗಳು, ನಾಗಗಳು ಮತ್ತು ಪೃಥ್ವಿಯಲ್ಲಿರುವ ಇತರ ಎಲ್ಲ ಸತ್ವಗಳನ್ನೂ ನಾನು ಅಲ್ಲಿ ಸಂಚರಿಸುತ್ತಿರುವಾಗ ನೋಡಿದೆನು.

03186107a ಕುಕ್ಷೌ ತಸ್ಯ ನರವ್ಯಾಘ್ರ ಪ್ರವಿಷ್ಟಃ ಸಂಚರನ್ದಿಶಃ।
03186107c ಶಕ್ರಾದೀಂಶ್ಚಾಪಿ ಪಶ್ಯಾಮಿ ಕೃತ್ಸ್ನಾನ್ದೇವಗಣಾಂಸ್ತಥಾ।।
03186108a ಗಂಧರ್ವಾಪ್ಸರಸೋ ಯಕ್ಷಾನೃಷೀಂಶ್ಚೈವ ಮಹೀಪತೇ।
03186108c ದೈತ್ಯದಾನವಸಂಘಾಂಶ್ಚ ಕಾಲೇಯಾಂಶ್ಚ ನರಾಧಿಪ।।
03186108e ಸಿಂಹಿಕಾತನಯಾಂಶ್ಚಾಪಿ ಯೇ ಚಾನ್ಯೇ ಸುರಶತ್ರವಃ।।

ನರವ್ಯಾಘ್ರ! ಮಹೀಪತೇ! ಅವನ ಕುಕ್ಷಿಯನ್ನು ಪ್ರವೇಶಿಸಿ ಎಲ್ಲ ದಿಕ್ಕುಗಳಲ್ಲಿಯೂ ಸಂಚರಿಸುತ್ತಾ ಶಕ್ರಾದಿ ಸರ್ವ ದೇವಗಣಗಳನ್ನೂ, ಗಂಧರ್ವ, ಅಪ್ಸರ, ಯಕ್ಷ, ಋಷಿ, ಸಿಂಹಿಕಾತನಯರನ್ನೂ ಮತ್ತು ಇತರ ಸುರರ ಶತ್ರುಗಳನ್ನೂ ನೋಡುತ್ತೇನೆ.

03186109a ಯಚ್ಚ ಕಿಂ ಚಿನ್ಮಯಾ ಲೋಕೇ ದೃಷ್ಟಂ ಸ್ಥಾವರಜಂಗಮಂ।
03186109c ತದಪಶ್ಯಮಹಂ ಸರ್ವಂ ತಸ್ಯ ಕುಕ್ಷೌ ಮಹಾತ್ಮನಃ।।

ನಾನು ಮೊದಲು ಲೋಕದಲ್ಲಿ ಏನೆಲ್ಲ ಸ್ಥಾವರಜಂಗಮಗಳನ್ನು ನೋಡಿದ್ದೆನೋ ಅವೆಲ್ಲವನ್ನೂ ಆ ಮಹಾತ್ಮನ ಕುಕ್ಷದಲ್ಲಿ ನೋಡಿದೆನು.

03186109e ಫಲಾಹಾರಃ ಪ್ರವಿಚರನ್ಕೃತ್ಸ್ನಂ ಜಗದಿದಂ ತದಾ।।
03186110a ಅಂತಃ ಶರೀರೇ ತಸ್ಯಾಹಂ ವರ್ಷಾಣಾಮಧಿಕಂ ಶತಂ।
03186110c ನ ಚ ಪಶ್ಯಾಮಿ ತಸ್ಯಾಹಮಂತಂ ದೇಹಸ್ಯ ಕುತ್ರ ಚಿತ್।।
03186111a ಸತತಂ ಧಾವಮಾನಶ್ಚ ಚಿಂತಯಾನೋ ವಿಶಾಂ ಪತೇ।

ವಿಶಾಂಪತೇ! ಫಲಾಹಾರಿಯಾಗಿ ಈ ಎಲ್ಲ ಜಗತ್ತನ್ನೂ ಅವನ ಶರೀರದ ಒಳಗೆ ನೂರಕ್ಕೂ ಹೆಚ್ಚು ವರ್ಷಗಳ ಪರ್ಯಂತ ಸಂಚರಿಸಿ ಶೋಧಿಸಿದರೂ ಸತತವಾಗಿ ಓಡಿ ಯೋಚಿಸುತ್ತಿದ್ದರೂ ಅವನ ದೇಹದ ಕೊನೆಯನ್ನು ಎಲ್ಲಿಯೂ ನೋಡುವುದಿಲ್ಲ.

03186111c ಆಸಾದಯಾಮಿ ನೈವಾಂತಂ ತಸ್ಯ ರಾಜನ್ಮಹಾತ್ಮನಃ।।
03186112a ತತಸ್ತಮೇವ ಶರಣಂ ಗತೋಽಸ್ಮಿ ವಿಧಿವತ್ತದಾ।
03186112c ವರೇಣ್ಯಂ ವರದಂ ದೇವಂ ಮನಸಾ ಕರ್ಮಣೈವ ಚ।।

ರಾಜನ್! ಆ ಮಹಾತ್ಮನ ಅಂತ್ಯವನ್ನು ತಲುಪಲಿಕ್ಕಾಗದೇ ಆ ವರೇಣ್ಯ, ವರದ ದೇವನನ್ನೇ ವಿಧಿವತ್ತಾಗಿ ಮನಸ್ಸು ಕರ್ಮಗಳಿಂದ ಶರಣು ಹೋಗುತ್ತೇನೆ.

03186113a ತತೋಽಹಂ ಸಹಸಾ ರಾಜನ್ವಾಯುವೇಗೇನ ನಿಹ್ಸೃತಃ।
03186113c ಮಹಾತ್ಮನೋ ಮುಖಾತ್ತಸ್ಯ ವಿವೃತಾತ್ಪುರುಷೋತ್ತಮ।।
03186114a ತತಸ್ತಸ್ಯೈವ ಶಾಖಾಯಾಂ ನ್ಯಗ್ರೋಧಸ್ಯ ವಿಶಾಂ ಪತೇ।
03186114c ಆಸ್ತೇ ಮನುಜಶಾರ್ದೂಲ ಕೃತ್ಸ್ನಮಾದಾಯ ವೈ ಜಗತ್।।
03186115a ತೇನೈವ ಬಾಲವೇಷೇಣ ಶ್ರೀವತ್ಸಕೃತಲಕ್ಷಣಂ।
03186115c ಆಸೀನಂ ತಂ ನರವ್ಯಾಘ್ರ ಪಶ್ಯಾಮ್ಯಮಿತತೇಜಸಂ।।

ರಾಜನ್! ಪುರುಷೋತ್ತಮ! ವಿಶಾಂಪತೇ! ಮನುಜಶಾರ್ದೂಲ! ನರವ್ಯಾಘ್ರ! ಆಗ ಒಮ್ಮಿಂದೊಮ್ಮೆಲೇ ವಾಯುವೇಗದಲ್ಲಿ ತೆರೆದಿದ್ದ ಆ ಮಹಾತ್ಮನ ಬಾಯಿಯ ಮೂಲಕ ಹೊರಬಿದ್ದು ಅಲ್ಲಿಯೇ ನ್ಯಗ್ರೋಧದ ರೆಂಬೆಯ ಮೇಲೆ ಸಂಪರ್ಣ ಜಗತ್ತನ್ನೇ ಹಿಡಿದು ಅದೇ ಶ್ರೀವತ್ಸದಿಂದ ಮಾಡಲ್ಪಟ್ಟ ಗುರುತುಳ್ಳ ಬಾಲವೇಷದಲ್ಲಿ ಕುಳಿತಿರುವ ಅಮಿತತೇಜಸ್ವಿಯನ್ನು ನೋಡುತ್ತೇನೆ.

03186116a ತತೋ ಮಾಮಬ್ರವೀದ್ವೀರ ಸ ಬಾಲಃ ಪ್ರಹಸನ್ನಿವ।
03186116c ಶ್ರೀವತ್ಸಧಾರೀ ದ್ಯುತಿಮಾನ್ಪೀತವಾಸಾ ಮಹಾದ್ಯುತಿಃ।।

ವೀರ! ಆಗ ಆ ಶ್ರೀವತ್ಸಧಾರೀ ದ್ಯುತಿಮಾನ್ ಪೀತವಾಸಾ ಮಹಾದ್ಯುತಿ ಬಾಲಕನು ಮುಗುಳ್ನಗುತ್ತಾ ನನಗೆ ಹೇಳಿದನು:

03186117a ಅಪೀದಾನೀಂ ಶರೀರೇಽಸ್ಮಿನ್ಮಾಮಕೇ ಮುನಿಸತ್ತಮ।
03186117c ಉಷಿತಸ್ತ್ವಂ ಸುವಿಶ್ರಾಂತೋ ಮಾರ್ಕಂಡೇಯ ಬ್ರವೀಹಿ ಮೇ।।

“ಮುನಿಸತ್ತಮ! ಮಾರ್ಕಂಡೇಯ! ಈ ನನ್ನ ಶರೀರದಲ್ಲಿ ವಾಸಿಸಿ ವಿಶ್ರಾಂತಿಯನ್ನು ಪಡೆದೆಯೇ? ನನಗೆ ಹೇಳು!”

03186118a ಮುಹೂರ್ತಾದಥ ಮೇ ದೃಷ್ಟಿಃ ಪ್ರಾದುರ್ಭೂತಾ ಪುನರ್ನವಾ।
03186118c ಯಯಾ ನಿರ್ಮುಕ್ತಮಾತ್ಮಾನಮಪಶ್ಯಂ ಲಬ್ಧಚೇತಸಂ।।

ಮುಹೂರ್ತದಲ್ಲಿಯೇ ನನಗೊಂದು ದಿವ್ಯದೃಷ್ಠಿಯು ಗೋಚರವಾಗಿ ನಿರ್ಮುಕ್ತನಾದ ಚೇತನವನ್ನು ಪಡೆದಿರುವ ಆತ್ಮವನ್ನು ನೋಡಿದೆನು.

03186119a ತಸ್ಯ ತಾಮ್ರತಲೌ ತಾತ ಚರಣೌ ಸುಪ್ರತಿಷ್ಠಿತೌ।
03186119c ಸುಜಾತೌ ಮೃದುರಕ್ತಾಭಿರಂಗುಲೀಭಿರಲಂಕೃತೌ।।
03186120a ಪ್ರಯತೇನ ಮಯಾ ಮೂರ್ಧ್ನಾ ಗೃಹೀತ್ವಾ ಹ್ಯಭಿವಂದಿತೌ।
03186120c ದೃಷ್ಟ್ವಾಪರಿಮಿತಂ ತಸ್ಯ ಪ್ರಭಾವಮಮಿತೌಜಸಃ।।

ಅಪರಿಮಿತ ಪ್ರಭಾವವುಳ್ಳ ಆ ಅಮಿತೌಜಸನನ್ನು ನೋಡಿ ಅವನ ಸುಪ್ರತಿಷ್ಟವಾಗಿದ್ದ ಕೆಂಪು ಹಿಮ್ಮಡಿಗಳ, ಮೃದು ಕೆಂಪು ಬೆರಳುಗಳ ಆ ಕೋಮಲ ಚರಣಗರೆಡನ್ನೂ ಹಿಡಿದು ತಲೆಬಾಗಿ ನಮಸ್ಕರಿಸಿದೆನು.

03186121a ವಿನಯೇನಾಂಜಲಿಂ ಕೃತ್ವಾ ಪ್ರಯತ್ನೇನೋಪಗಮ್ಯ ಚ।
03186121c ದೃಷ್ಟೋ ಮಯಾ ಸ ಭೂತಾತ್ಮಾ ದೇವಃ ಕಮಲಲೋಚನಃ।।

ವಿನಯದಿಂದ ಅಂಜಲೀಬದ್ಧನಾಗಿ, ಪ್ರಯತ್ನದಿಂದ ಅವನ ಬಳಿ ಹೋಗಿ ಆ ಭೂತಾತ್ಮ, ದೇವ ಕಮಲಲೋಚನನನ್ನು ನೋಡಿದೆನು.

03186122a ತಮಹಂ ಪ್ರಾಂಜಲಿರ್ಭೂತ್ವಾ ನಮಸ್ಕೃತ್ಯೇದಮಬ್ರುವಂ।
03186122c ಜ್ಞಾತುಮಿಚ್ಚಾಮಿ ದೇವ ತ್ವಾಂ ಮಾಯಾನ್ಚೇಮಾಂ ತವೋತ್ತಮಾಂ।।

ಅಂಜಲೀಬದ್ಧನಾಗಿ ಅವನನ್ನು ನಮಸ್ಕರಿಸಿ ಹೇಳಿದೆನು: “ದೇವ! ನಿನ್ನನ್ನು ಮತ್ತು ನಿನ್ನ ಈ ಉತ್ತಮ ಮಾಯೆಯನ್ನು ತಿಳಿಯ ಬಯಸುತ್ತೇನೆ.

03186123a ಆಸ್ಯೇನಾನುಪ್ರವಿಷ್ಟೋಽಹಂ ಶರೀರಂ ಭಗವನ್ಸ್ತವ।
03186123c ದೃಷ್ಟವಾನಖಿಲಾಽಲ್ಲೋಕಾನ್ಸಮಸ್ತಾಂ ಜಠರೇ ತವ।।

ಭಗವನ್! ನಿನ್ನ ಈ ಶರೀರವನ್ನು ಪ್ರವೇಶಿಸಿ ನಿನ್ನ ಜಠರದಲ್ಲಿ ಸಮಸ್ತ ಅಖಿಲ ಲೋಕಗಳನ್ನೂ ನೋಡಿದೆನು.

03186124a ತವ ದೇವ ಶರೀರಸ್ಥಾ ದೇವದಾನವರಾಕ್ಷಸಾಃ।
03186124c ಯಕ್ಷಗಂಧರ್ವನಾಗಾಶ್ಚ ಜಗತ್ಸ್ಥಾವರಜಂಗಮಂ।।

ದೇವ! ನಿನ್ನ ಶರೀರದಲ್ಲಿ ದೇವದಾನವ ರಾಕ್ಷಸರೂ ಯಕ್ಷಗಂಧರ್ವ ನಾಗರೂ ಜಗತ್ತಿನ ಸ್ಥಾವರ ಜಂಗಮಗಳೂ ಇವೆ.

03186125a ತ್ವತ್ಪ್ರಸಾದಾಚ್ಚ ಮೇ ದೇವ ಸ್ಮೃತಿರ್ನ ಪರಿಹೀಯತೇ।
03186125c ದ್ರುತಮಂತಃ ಶರೀರೇ ತೇ ಸತತಂ ಪರಿಧಾವತಃ।।

ದೇವ! ನಿನ್ನ ಪ್ರಸಾದದಿಂದ ನನ್ನ ನೆನಪನ್ನು ನಾನು ಕಳೆದುಕೊಳ್ಳಲಿಲ್ಲ. ಬೇಗನೇ ಓಡುತ್ತಾ ನಿನ್ನ ಶರೀರದಲ್ಲಿ ಸತತವಾಗಿ ತಿರುಗಾಡಿದೆ.

03186126a ಇಚ್ಚಾಮಿ ಪುಂಡರೀಕಾಕ್ಷ ಜ್ಞಾತುಂ ತ್ವಾಹಮನಿಂದಿತ।
03186126c ಇಹ ಭೂತ್ವಾ ಶಿಶುಃ ಸಾಕ್ಷಾತ್ಕಿಂ ಭವಾನವತಿಷ್ಠತೇ।।

ಪುಂಡರೀಕಾಕ್ಷ! ಅನಿಂದಿತ! ನೀನು ಇಲ್ಲಿ ಏಕೆ ಸಾಕ್ಷಾತ್ ಶಿಶುವಾಗಿ ನಿಂತಿರುವೆ ಎಂದು ತಿಳಿಯ ಬಯಸುತ್ತೇನೆ.

03186126e ಪೀತ್ವಾ ಜಗದಿದಂ ವಿಶ್ವಮೇತದಾಖ್ಯಾತುಮರ್ಹಸಿ।।
03186127a ಕಿಮರ್ಥಂ ಚ ಜಗತ್ಸರ್ವಂ ಶರೀರಸ್ಥಂ ತವಾನಘ।

ಅನಘ! ಈ ವಿಶ್ವ ಜಗತ್ತನ್ನು ಕುಡಿದು ಏಕೆ ಜಗತ್ತೆಲ್ಲವೂ ನಿನ್ನ ಶರೀರದಲ್ಲಿದೆ ಎನ್ನುವುದನ್ನು ಹೇಳಬೇಕು.

03186127c ಕಿಯಂತಂ ಚ ತ್ವಯಾ ಕಾಲಮಿಹ ಸ್ಥೇಯಮರಿಂದಮ।।
03186128a ಏತದಿಚ್ಚಾಮಿ ದೇವೇಶ ಶ್ರೋತುಂ ಬ್ರಾಹ್ಮಣಕಾಮ್ಯಯಾ।
03186128c ತ್ವತ್ತಃ ಕಮಲಪತ್ರಾಕ್ಷ ವಿಸ್ತರೇಣ ಯಥಾತಥಂ।।
03186128e ಮಹದ್ಧ್ಯೇತದಚಿಂತ್ಯಂ ಚ ಯದಹಂ ದೃಷ್ಟವಾನ್ಪ್ರಭೋ।।

ಅರಿಂದಮ! ಎಷ್ಟು ಕಾಲದವರೆಗೆ ನೀನು ಇಲ್ಲಿರುವೆ? ದೇವೇಶ! ಕಮಲಪತ್ರಾಕ್ಷ! ನಿನ್ನಿಂದ ವಿಸ್ತಾರವಾಗಿ ಹೇಗಿದೆಯೋ ಹಾಗೆ ಬ್ರಹ್ಮವನ್ನು ಕೇಳಲು ಬಯಸುತ್ತೇನೆ. ಪ್ರಭೋ! ನಾನು ಏನನ್ನು ಕಂಡೆನೋ ಅದು ನನ್ನ ಅರಿವಿಗೆ ಸಿಲುಕದಂಥಹುದು.”

03186129a ಇತ್ಯುಕ್ತಃ ಸ ಮಯಾ ಶ್ರೀಮಾನ್ದೇವದೇವೋ ಮಹಾದ್ಯುತಿಃ।
03186129c ಸಾಂತ್ವಯನ್ಮಾಮಿದಂ ವಾಕ್ಯಮುವಾಚ ವದತಾಂ ವರಃ।।

ನಾನು ಹೀಗೆ ಹೇಳಲು ಶ್ರೀಮಾನ್, ದೇವದೇವ, ಮಹಾದ್ಯುತಿ ವರದರಲ್ಲಿ ವರದನು ನನ್ನನ್ನು ಸಂತವಿಸುತ್ತಾ ಈ ಮಾತುಗಳನ್ನಾಡಿದನು.

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಷಟ್‌ಶೀತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ನೂರಾಎಂಭತ್ತಾರನೆಯ ಅಧ್ಯಾಯವು.


  1. ಈ ಶ್ಲೋಕದ ನಂತರ ಹಲವಾರು ಕಡೆಗಳಲ್ಲಿ “ಪಶ್ಯಾಮಿ” ಮೊದಲಾದ ಭವಿಷ್ಯಕಾಲದ ಕ್ರಿಯಾಶಬ್ಧಗಳ ಬಳಕೆಯಿರುವುದನ್ನು ಗಮನಿಸಬೇಕು. ↩︎