ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಮಾರ್ಕಂಡೇಯಸಮಸ್ಯಾ ಪರ್ವ
ಅಧ್ಯಾಯ 182
ಸಾರ
ಯುಧಿಷ್ಠಿರನು ದ್ವಿಜಮುಖ್ಯರ ಮಹಾತ್ಮೆಯನ್ನು ಕೇಳಲು ಮಾರ್ಕಂಡೇಯನು ತಾರ್ಕ್ಷ್ಯ ಅರಿಷ್ಟನೇಮಿಯ ಚರಿತೆಯನ್ನು ಹೇಳುವುದು (1-21).
03182001 ವೈಶಂಪಾಯನ ಉವಾಚ।
03182001a ಮಾರ್ಕಂಡೇಯಂ ಮಹಾತ್ಮಾನಮೂಚುಃ ಪಾಂಡುಸುತಾಸ್ತದಾ।
03182001c ಮಾಹಾತ್ಮ್ಯಂ ದ್ವಿಜಮುಖ್ಯಾನಾಂ ಶ್ರೋತುಮಿಚ್ಚಾಮ ಕಥ್ಯತಾಂ।।
ವೈಶಂಪಾಯನನು ಹೇಳಿದನು: “ಅನಂತರ ಮಹಾತ್ಮ ಮಾರ್ಕಂಡೇಯನಿಗೆ ಪಾಂಡುಸುತನು ಹೇಳಿದನು: “ದ್ವಿಜಮುಖ್ಯರ ಮಹಾತ್ಮೆಯನ್ನು ನಾವು ಕೇಳಬಯಸುತ್ತೇವೆ. ಹೇಳು.”
03182002a ಏವಮುಕ್ತಃ ಸ ಭಗವಾನ್ಮಾರ್ಕಂಡೇಯೋ ಮಹಾತಪಾಃ।
03182002c ಉವಾಚ ಸುಮಹಾತೇಜಾಃ ಸರ್ವಶಾಸ್ತ್ರವಿಶಾರದಃ।।
ಈ ಮಾತುಗಳಿಗೆ ಆ ಮಹಾತಪಸ್ವಿ, ಮಹಾತೇಜಸ್ವಿ, ಸರ್ವಶಾಸ್ತ್ರವಿಶಾರದ ಭಗವಾನ್ ಮಾರ್ಕಂಡೇಯನು ಹೇಳಿದನು:
03182003a ಹೈಹಯಾನಾಂ ಕುಲಕರೋ ರಾಜಾ ಪರಪುರಂಜಯಃ।
03182003c ಕುಮಾರೋ ರೂಪಸಂಪನ್ನೋ ಮೃಗಯಾಮಚರದ್ಬಲೀ।।
“ಹೈಹಯರ ಕುಲಕರ ಪರಪುರಂಜಯ ಕುಮಾರ ರೂಪಸಂಪನ್ನ ರಾಜನೊಬ್ಬನಿದ್ದನು. ಒಮ್ಮೆ ಅವನು ಬೇಟೆಗೆ ಹೋದನು.
03182004a ಚರಮಾಣಸ್ತು ಸೋಽರಣ್ಯೇ ತೃಣವೀರುತ್ಸಮಾವೃತೇ।
03182004c ಕೃಷ್ಣಾಜಿನೋತ್ತರಾಸಂಗಂ ದದರ್ಶ ಮುನಿಮಂತಿಕೇ।।
03182004e ಸ ತೇನ ನಿಹತೋಽರಣ್ಯೇ ಮನ್ಯಮಾನೇನ ವೈ ಮೃಗಂ।।
ಎತ್ತರಕ್ಕೆ ಬೆಳೆದಿದ್ದ ಹುಲ್ಲು ಮತ್ತು ಪೊದೆಗಳಿಂದ ಕೂಡಿದ್ದ ಆ ಅರಣ್ಯದಲ್ಲಿ ತಿರುಗುತ್ತಿರುವಾಗ ಹತ್ತಿರದಲ್ಲಿ ಕೃಷ್ಣಾಜಿನವನ್ನು ಮೇಲುಹೊದಿಗೆಯಾಗಿ ಹೊದೆದಿದ್ದ ಮುನಿಯೋರ್ವನನ್ನು ನೋಡಿ, ಅವನು ಜಿಂಕೆಯೆಂದು ತಿಳಿದು ಆ ಅರಣ್ಯದಲ್ಲಿಯೇ ಅವನನ್ನು ಕೊಂದನು.
03182005a ವ್ಯಥಿತಃ ಕರ್ಮ ತತ್ಕೃತ್ವಾ ಶೋಕೋಪಹತಚೇತನಃ।
03182005c ಜಗಾಮ ಹೈಹಯಾನಾಂ ವೈ ಸಕಾಶಂ ಪ್ರಥಿತಾತ್ಮನಾಂ।।
ಪೃಥಿವೀಪತೇ! ಆ ಕೆಲಸವನ್ನು ಮಾಡಿ ವ್ಯಥಿತನಾಗಿ ಶೋಕದಿಂದ ಚೇತನವನ್ನು ಕಳೆದುಕೊಂಡ ಅವನು ಪ್ರಥಿತಾತ್ಮ ಹೈಹಯರ ಬಳಿ ಹೋದನು.
03182006a ರಾಜ್ಞಾಂ ರಾಜೀವನೇತ್ರೋಸೌ ಕುಮಾರಃ ಪೃಥಿವೀಪತೇ।
03182006c ತೇಷಾಂ ಚ ತದ್ಯಥಾವೃತ್ತಂ ಕಥಯಾಮಾಸ ವೈ ತದಾ।।
ಆ ರಾಜೀವನೇತ್ರ, ಕುಮಾರ ರಾಜನು ಅವರಿಗೆ ನಡೆದ ಹಾಗೆ ಎಲ್ಲವನ್ನೂ ವರದಿಮಾಡಿದನು.
03182007a ತಂ ಚಾಪಿ ಹಿಂಸಿತಂ ತಾತ ಮುನಿಂ ಮೂಲಫಲಾಶಿನಂ।
03182007c ಶ್ರುತ್ವಾ ದೃಷ್ಟ್ವಾ ಚ ತೇ ತತ್ರ ಬಭೂವುರ್ದೀನಮಾನಸಾಃ।।
ಮಗೂ! ಫಲಮೂಲಗಳನ್ನು ಸೇವಿಸುತ್ತಿದ್ದ ಆ ಮುನಿಯು ಹಿಂಸೆಗೊಳಗಾಗಿದ್ದುದನ್ನು ಕೇಳಿ ಮತ್ತು ಅಲ್ಲಿ ನೋಡಿ ದುಃಖಪರರಾದರು.
03182008a ಕಸ್ಯಾಯಮಿತಿ ತೇ ಸರ್ವೇ ಮಾರ್ಗಮಾಣಾಸ್ತತಸ್ತತಃ।
03182008c ಜಗ್ಮುಶ್ಚಾರಿಷ್ಟನೇಮೇಸ್ತೇ ತಾರ್ಕ್ಷ್ಯಸ್ಯಾಶ್ರಮಮಂಜಸಾ।।
ಇವನು ಯಾರ ಮಗನೆಂದು ದಾರಿಯಲ್ಲಿ ಎಲ್ಲರೊಡನೆ ವಿಚಾರಿಸುತ್ತಾ ಅವರು ತಾರ್ಕ್ಷ್ಯ ಅರಿಷ್ಟನೇಮಿಯ ಆಶ್ರಮಕ್ಕೆ ಬಂದರು.
03182009a ತೇಽಭಿವಾದ್ಯ ಮಹಾತ್ಮಾನಂ ತಂ ಮುನಿಂ ಸಂಶಿತವ್ರತಂ।
03182009c ತಸ್ಥುಃ ಸರ್ವೇ ಸ ತು ಮುನಿಸ್ತೇಷಾಂ ಪೂಜಾಮಥಾಹರತ್।।
ಅವರು ಆ ಸಂಶಿತವ್ರತ ಮುನಿಗೆ ನಮಸ್ಕರಿಸಿದರು. ಆ ಮುನಿಯು ಅವರಿಗೆ ಪೂಜೆಯನ್ನು ತಿರುಗಿ ನೀಡುತ್ತಿರಲು ಅವರೆಲ್ಲರೂ ಅಲ್ಲಿಯೇ ನಿಂತುಕೊಂಡರು.
03182010a ತೇ ತಂ ಊಚುರ್ಮಹಾತ್ಮಾನಂ ನ ವಯಂ ಸತ್ಕ್ರಿಯಾಂ ಮುನೇ।
03182010c ತ್ವತ್ತೋಽರ್ಹಾಃ ಕರ್ಮದೋಷೇಣ ಬ್ರಾಹ್ಮಣೋ ಹಿಂಸಿತೋ ಹಿ ನಃ।।
ಅನಂತರ ಅವರು ಆ ಮಹಾತ್ಮ ಮುನಿಗೆ ಹೇಳಿದರು: “ಮುನೇ! ನಿನ್ನ ಈ ಸತ್ಕ್ರಿಯೆಗೆ ನಾವು ಅರ್ಹರಲ್ಲ. ಕರ್ಮದೋಷದಿಂದ ನಾವು ಬ್ರಾಹ್ಮಣನನ್ನು ಹಿಂಸಿಸಲಿಲ್ಲವೇ?”
03182011a ತಾನಬ್ರವೀತ್ಸ ವಿಪ್ರರ್ಷಿಃ ಕಥಂ ವೋ ಬ್ರಾಹ್ಮಣೋ ಹತಃ।
03182011c ಕ್ವ ಚಾಸೌ ಬ್ರೂತ ಸಹಿತಾಃ ಪಶ್ಯಧ್ವಂ ಮೇ ತಪೋಬಲಂ।।
ಆ ವಿಪ್ರರ್ಷಿಯು ಅವರಿಗೆ ಹೇಳಿದನು: “ನೀವು ಹೇಗೆ ಬ್ರಾಹ್ಮಣನನ್ನು ಕೊಂದಿರಿ? ನೀವೆಲ್ಲರೂ ಹೇಳಿರಿ ಅವನೆಲ್ಲಿ? ನನ್ನ ತಪೋಬಲವನ್ನು ನೋಡಿರಿ.”
03182012a ತೇ ತು ತತ್ಸರ್ವಮಖಿಲಮಾಖ್ಯಾಯಾಸ್ಮೈ ಯಥಾತಥಂ।
03182012c ನಾಪಶ್ಯಂಸ್ತಮೃಷಿಂ ತತ್ರ ಗತಾಸುಂ ತೇ ಸಮಾಗತಾಃ।।
03182012e ಅನ್ವೇಷಮಾಣಾಃ ಸವ್ರೀಡಾಃ ಸ್ವಪ್ನವದ್ಗತಮಾನಸಾಃ।।
ಅವರು ಅವನಿಗೆ ನಡೆದುದೆಲ್ಲವನ್ನೂ ಹೇಳಿದರು. ಆದರೆ ಅವರೆಲ್ಲರೂ ಒಟ್ಟೆಗೆ ಅಲ್ಲಿಗೆ ಹೋದಾಗ ತೀರಿಕೊಂಡಿದ್ದ ಋಷಿಯು, ಎಷ್ಟೇ ಹುಡುಕಿದರೂ ಅವರಿಗೆ ಕಾಣಲಿಲ್ಲ. ಇದರಿಂದ ಅವರೆಲ್ಲರೂ ತಾವು ಸ್ವಪ್ನವನ್ನು ಕಾಣುತ್ತಿದ್ದೇವೋ ಎಂದು ನಾಚಿಕೊಂಡರು.
03182013a ತಾನಬ್ರವೀತ್ತತ್ರ ಮುನಿಸ್ತಾರ್ಕ್ಷ್ಯಃ ಪರಪುರಂಜಯಃ।
03182013c ಸ್ಯಾದಯಂ ಬ್ರಾಹ್ಮಣಃ ಸೋಽಥ ಯೋ ಯುಷ್ಮಾಭಿರ್ವಿನಾಶಿತಃ।।
03182013e ಪುತ್ರೋ ಹ್ಯಯಂ ಮಮ ನೃಪಾಸ್ತಪೋಬಲಸಮನ್ವಿತಃ।।
ಆಗ ಪರಪುರಂಜಯ ಮುನಿ ತಾರ್ಕ್ಷ್ಯನು ಅವರಿಗೆ ಹೇಳಿದನು: “ಇವನೇ ನೀವು ಕೊಂದಿರುವ ಬ್ರಾಹ್ಮಣನಿರಬಹುದೇ? ನೃಪರೇ! ಇವನು ನನ್ನ ಮಗ. ತಪೋಬಲಸಮನ್ವಿತ.”
03182014a ತೇ ತು ದೃಷ್ಟ್ವೈವ ತಮೃಷಿಂ ವಿಸ್ಮಯಂ ಪರಮಂ ಗತಾಃ।
03182014c ಮಹದಾಶ್ಚರ್ಯಮಿತಿ ವೈ ವಿಬ್ರುವಾಣಾ ಮಹೀಪತೇ।।
ಅವರು ಆ ಋಷಿಯನ್ನು ನೋಡಿ ಪರಮ ವಿಸ್ಮಿತರಾದರು. ಮಹೀಪತೇ! “ಮಹಾ ಆಶ್ಚರ್ಯವಿದು” ಎಂದು ಹೇಳಿದರು.
03182015a ಮೃತೋ ಹ್ಯಯಮತೋ ದೃಷ್ಟಃ ಕಥಂ ಜೀವಿತಮಾಪ್ತವಾನ್।
03182015c ಕಿಮೇತತ್ತಪಸೋ ವೀರ್ಯಂ ಯೇನಾಯಂ ಜೀವಿತಃ ಪುನಃ।।
03182015e ಶ್ರೋತುಮಿಚ್ಚಾಮ ವಿಪ್ರರ್ಷೇ ಯದಿ ಶ್ರೋತವ್ಯಮಿತ್ಯುತ।।
“ಅವನು ತೀರಿಕೊಂಡಿದ್ದುದನ್ನು ನಾವು ನೋಡಿದ್ದೇವೆ. ಅವನು ಹೇಗೆ ಪುನಃ ಜೀವಂತನಾಗಿ ಬಂದಿದ್ದಾನೆ? ಅವನು ಪುನಃ ಜೀವಿತನಾಗಲು ತಪಸ್ಸಿನ ವೀರ್ಯವು ಕಾರಣವೇ? ವಿಪ್ರರ್ಷೇ! ನಿನಗೆ ಇದನ್ನು ತಿಳಿಸಬೇಕೆಂದಿದ್ದರೆ ನಾವು ಕೇಳಬಯಸುತ್ತೇವೆ.”
03182016a ಸ ತಾನುವಾಚ ನಾಸ್ಮಾಕಂ ಮೃತ್ಯುಃ ಪ್ರಭವತೇ ನೃಪಾಃ।
03182016c ಕಾರಣಂ ವಃ ಪ್ರವಕ್ಷ್ಯಾಮಿ ಹೇತುಯೋಗಂ ಸಮಾಸತಃ।।
ಆಗ ಅವನು ಹೇಳಿದನು: “ನೃಪರೇ! ಮೃತ್ಯುವು ನಮ್ಮ ಮೇಲೆ ಪ್ರಭಾವಬೀರುವುದಿಲ್ಲ. ಇದರ ಕುರಿತು ಸಂಕ್ಷಿಪ್ತವಾಗಿ ಕಾರಣವನ್ನು ಹೇಳುತ್ತೇನೆ.
03182017a ಸತ್ಯಮೇವಾಭಿಜಾನೀಮೋ ನಾನೃತೇ ಕುರ್ಮಹೇ ಮನಃ।
03182017c ಸ್ವಧರ್ಮಮನುತಿಷ್ಠಾಮಸ್ತಸ್ಮಾನ್ಮೃತ್ಯುಭಯಂ ನ ನಃ।।
ನಾವು ಸತ್ಯವನ್ನು ಮಾತ್ರ ಗುರುತಿಸುತ್ತೇವೆ. ನಾವು ಸುಳ್ಳನ್ನು ಮನಸ್ಸಿನಲ್ಲಿಯೂ ಯೋಚಿಸುವುದಿಲ್ಲ. ನಾವು ಸ್ವಧರ್ಮದಲ್ಲಿಯೇ ನಿರತರಾಗಿದ್ದೇವೆ. ಆದುದರಿಂದ ನಮಗೆ ಮೃತ್ಯುಭಯವಿಲ್ಲ.
03182018a ಯದ್ಬ್ರಾಹ್ಮಣಾನಾಂ ಕುಶಲಂ ತದೇಷಾಂ ಕಥಯಾಮಹೇ।
03182018c ನೈಷಾಂ ದುಶ್ಚರಿತಂ ಬ್ರೂಮಸ್ತಸ್ಮಾನ್ಮೃತ್ಯುಭಯಂ ನ ನಃ।।
ಯಾವುದು ಬ್ರಾಹ್ಮಣರಿಗೆ ಕುಶಲವೋ ಅದನ್ನೇ ನಾವು ಮಾತನಾಡುತ್ತೇವೆ. ಅವರ ದುಶ್ಚರಿತಗಳ ಕುರಿತು ಮಾತನಾಡುವುದಿಲ್ಲ. ಆದುದರಿಂದ ನಮಗೆ ಮೃತ್ಯುಭಯವಿಲ್ಲ.
03182019a ಅತಿಥೀನನ್ನಪಾನೇನ ಭೃತ್ಯಾನತ್ಯಶನೇನ ಚ।
03182019c ತೇಜಸ್ವಿದೇಶವಾಸಾಚ್ಚ ತಸ್ಮಾನ್ಮೃತ್ಯುಭಯಂ ನ ನಃ।।
ಅನ್ನಪಾನೀಯಗಳಿಂದ ಅತಿಥಿಗಳನ್ನು ಸತ್ಕರಿಸುತ್ತೇವೆ. ಭೃತ್ಯರಿಗೆ ಅತಿಯಾಗಿ ಉಣಿಸುತ್ತೇವೆ. ತೇಜಸ್ವಿಗಳ ದೇಶದಲ್ಲಿ ವಾಸಿಸುತ್ತೇವೆ. ಆದುದರಿಂದ ನಮಗೆ ಮೃತ್ಯುಭಯವಿಲ್ಲ.
03182020a ಏತದ್ವೈ ಲೇಶಮಾತ್ರಂ ವಃ ಸಮಾಖ್ಯಾತಂ ವಿಮತ್ಸರಾಃ।
03182020c ಗಚ್ಚಧ್ವಂ ಸಹಿತಾಃ ಸರ್ವೇ ನ ಪಾಪಾದ್ಭಯಮಸ್ತಿ ವಃ।।
ಇದನ್ನು ಸ್ವಲ್ಪವಾಗಿಯೇ ನಿಮಗೆ ಹೇಳಿದ್ದೇನೆ. ಈಗ ಮತ್ಸರವಿಲ್ಲದೇ ಎಲ್ಲರೂ ಒಟ್ಟಿಗೇ ಹಿಂದಿರುಗಿ. ಪಾಪದ ಭಯವಿಲ್ಲದಿರಲಿ.”
03182021a ಏವಮಸ್ತ್ವಿತಿ ತೇ ಸರ್ವೇ ಪ್ರತಿಪೂಜ್ಯ ಮಹಾಮುನಿಂ।
03182021c ಸ್ವದೇಶಮಗಮನ್ ಹೃಷ್ಟಾ ರಾಜಾನೋ ಭರತರ್ಷಭ।।
ಭರತರ್ಷಭ! “ಹಾಗೆಯೇ ಆಗಲಿ” ಎಂದು ಹೇಳಿ ಅವರು ಎಲ್ಲ ರಾಜರೂ ಆ ಮಹಾಮುನಿಯನ್ನು ಪೂಜಿಸಿ ಸಂತೋಷದಿಂದ ಸ್ವರಾಜ್ಯಕ್ಕೆ ಮರಳಿದರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಬ್ರಾಹ್ಮಣಮಾಹಾತ್ಮಕಥನೇ ದ್ವಿಶೀತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ಬ್ರಾಹ್ಮಣಮಾಹಾತ್ಮಕಥನದಲ್ಲಿ ನೂರಾಎಂಭತ್ತೆರಡನೆಯ ಅಧ್ಯಾಯವು.