180

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಮಾರ್ಕಂಡೇಯಸಮಸ್ಯಾ ಪರ್ವ

ಅಧ್ಯಾಯ 180

ಸಾರ

ಕಾಮ್ಯಕ ವನಕ್ಕೆ ಪಾಂಡವರು ಹಿಂದಿರುಗಿದಾಗ ಅವರನ್ನು ಕಾಣಲು ಕೃಷ್ಣನು ಸತ್ಯಭಾಮೆಯೊಂದಿಗೆ ಆಗಮಿಸಿದುದು (1-14). ಕೃಷ್ಣ-ಯುಧಿಷ್ಠಿರರ ಸಂವಾದ (15-38). ಮಾರ್ಕಂಡೇಯನ ಆಗಮನ (39-43). ನಾರದನ ಆಗಮನ (44-46). ಯುಧಿಷ್ಠಿರನು ಕೇಳಿಕೊಳ್ಳಲು ಮಾರ್ಕಂಡೇಯನು ಕಥೆಗಳನ್ನು ಹೇಳಲು ಪ್ರಾರಂಭಿಸಿದುದು (47-49).

03180001 ವೈಶಂಪಾಯನ ಉವಾಚ।
03180001a ಕಾಮ್ಯಕಂ ಪ್ರಾಪ್ಯ ಕೌಂತೇಯಾ ಯುಧಿಷ್ಠಿರಪುರೋಗಮಾಃ।
03180001c ಕೃತಾತಿಥ್ಯಾ ಮುನಿಗಣೈರ್ನಿಷೇದುಃ ಸಹ ಕೃಷ್ಣಯಾ।।

ವೈಶಂಪಾಯನನು ಹೇಳಿದನು: “ಯುಧಿಷ್ಠಿರನ ನಾಯಕತ್ವದಲ್ಲಿ ಕೌಂತೇಯರು ಕಾಮ್ಯಕವನ್ನು ತಲುಪಿದಾಗ ಮುನಿಗಣಗಳಿಂದ ಸ್ವಾಗತಿಸಲ್ಪಟ್ಟರು ಮತ್ತು ಕೃಷ್ಣೆಯೊಂದಿಗೆ ಅಲ್ಲಿ ನೆಲೆಸಿದರು.

03180002a ತತಸ್ತಾನ್ಪರಿವಿಶ್ವಸ್ತಾನ್ವಸತಃ ಪಾಂಡುನಂದನಾನ್।
03180002c ಬ್ರಾಹ್ಮಣಾ ಬಹವಸ್ತತ್ರ ಸಮಂತಾತ್ಪರ್ಯವಾರಯನ್।।

ಅಲ್ಲಿ ಆ ಪಾಂಡುನಂದನರನ್ನು ಎಲ್ಲ ಕಡೆಯಿಂದಲೂ ಬಂದ ಬಹುಮಂದಿ ಬ್ರಾಹ್ಮಣರು ಸುತ್ತುವರೆದು ಸಲಹೆ-ಪ್ರೋತ್ಸಾಹಗಳನ್ನು ನೀಡುತ್ತಿದ್ದರು.

03180003a ಅಥಾಬ್ರವೀದ್ದ್ವಿಜಃ ಕಶ್ಚಿದರ್ಜುನಸ್ಯ ಪ್ರಿಯಃ ಸಖಾ।
03180003c ಏಷ್ಯತೀಹ ಮಹಾಬಾಹುರ್ವಶೀ ಶೌರಿರುದಾರಧೀಃ।।

ಒಮ್ಮೆ ಒಬ್ಬ ಬ್ರಾಹ್ಮಣನು ಹೇಳಿದನು: “ಅರ್ಜುನನ ಪ್ರಿಯ ಸಖ, ಮಹಾಬಾಹು, ಶೌರಿ ಉದಾರಧಿಯು ಇಲ್ಲಿಗೆ ಬರುತ್ತಿದ್ದಾನೆ.

03180004a ವಿದಿತಾ ಹಿ ಹರೇರ್ಯೂಯಮಿಹಾಯಾತಾಃ ಕುರೂದ್ವಹಾಃ।
03180004c ಸದಾ ಹಿ ದರ್ಶನಾಕಾಂಕ್ಷೀ ಶ್ರೇಯೋಽನ್ವೇಷೀ ಚ ವೋ ಹರಿಃ।।

ಕುರೂದ್ವಹ! ನೀನು ಮರಳಿ ಬಂದಿದ್ದೀಯೆ ಎಂದು ಹರಿಗೆ ತಿಳಿದಿದೆ. ನಿಮ್ಮ ಶ್ರೇಯಸ್ಸನ್ನೇ ಬಯಸುತ್ತಿರುವ ಹರಿಯು ನಿನ್ನನ್ನು ಕಾಣಲು ಸದಾ ಬಯಸುತ್ತಿದ್ದ.

03180005a ಬಹುವತ್ಸರಜೀವೀ ಚ ಮಾರ್ಕಂಡೇಯೋ ಮಹಾತಪಾಃ।
03180005c ಸ್ವಾಧ್ಯಾಯತಪಸಾ ಯುಕ್ತಃ ಕ್ಷಿಪ್ರಂ ಯುಷ್ಮಾನ್ಸಮೇಷ್ಯತಿ।।

ಮತ್ತು ಬಹಳ ವರ್ಷಗಳು ಜೀವಿಸುತ್ತಿರುವ ಸ್ವಾಧ್ಯಾಯ ಮತ್ತು ತಪಸ್ಸುಗಳಲ್ಲಿ ನಿರತನಾಗಿರುವ ಮಹಾತಪಸ್ವಿ ಮಾರ್ಕಂಡೇಯನು ಶೀಘ್ರದಲ್ಲಿಯೇ ನಿಮ್ಮನ್ನು ಬಂದು ಸೇರುತ್ತಾನೆ.”

03180006a ತಥೈವ ತಸ್ಯ ಬ್ರುವತಃ ಪ್ರತ್ಯದೃಷ್ಯತ ಕೇಶವಃ।
03180006c ಸೈನ್ಯಸುಗ್ರೀವಯುಕ್ತೇನ ರಥೇನ ರಥಿನಾಂ ವರಃ।।
03180007a ಮಘವಾನಿವ ಪೌಲೋಮ್ಯಾ ಸಹಿತಃ ಸತ್ಯಭಾಮಯಾ।
03180007c ಉಪಾಯಾದ್ದೇವಕೀಪುತ್ರೋ ದಿದೃಕ್ಷುಃ ಕುರುಸತ್ತಮಾನ್।।

ಅವನು ಹೀಗೆ ಹೇಳುತ್ತಿರುವಾಗಲೇ ಸೈನ್ಯ-ಸುಗ್ರೀವರನ್ನು ಕಟ್ಟಿದ ರಥದಲ್ಲಿ, ರಥಿಗಳಲ್ಲಿಯೇ ಶ್ರೇಷ್ಠ ಕೇಶವನು ಪೌಲೋಮಿಯ ಸಹಿತ ಇಂದ್ರನಂತೆ ಸತ್ಯಭಾಮೆಯ ಸಹಿತ ಅಲ್ಲಿ ಕಾಣಿಸಿಕೊಂಡನು. ದೇವಕೀಪುತ್ರನು ಕುರುಸತ್ತಮರನ್ನು ನೋಡಲೋಸುಗ ಬಂದನು.

03180008a ಅವತೀರ್ಯ ರಥಾತ್ಕೃಷ್ಣೋ ಧರ್ಮರಾಜಂ ಯಥಾವಿಧಿ।
03180008c ವವಂದೇ ಮುದಿತೋ ಧೀಮಾನ್ಭೀಮಂ ಚ ಬಲಿನಾಂ ವರಂ।।
03180009a ಪೂಜಯಾಮಾಸ ಧೌಮ್ಯಂ ಚ ಯಮಾಭ್ಯಾಮಭಿವಾದಿತಃ।
03180009c ಪರಿಷ್ವಜ್ಯ ಗುಡಾಕೇಶಂ ದ್ರೌಪದೀಂ ಪರ್ಯಸಾಂತ್ವಯತ್।।

ರಥದಿಂದ ಕೆಳಗಿಳಿದು ಕೃಷ್ಣನು ಯಥಾವಿಧಿಯಾಗಿ ಧೀಮಾನ್ ಧರ್ಮರಾಜನನ್ನು ಮತ್ತು ಬಲಿಗಳಲ್ಲಿಯೇ ಶ್ರೇಷ್ಠ ಭೀಮನನ್ನು ಸಂತೋಷದಿಂದ ನಮಸ್ಕರಿಸಿದನು. ಧೌಮ್ಯನನ್ನು ಪೂಜಿಸಿದನು. ಯಮಳರನ್ನು ಅಭಿವಂದಿಸಿದನು. ಗುಡಾಕೇಶನನ್ನು ಬಿಗಿದಪ್ಪಿದನು ಮತ್ತು ದ್ರೌಪದಿಯನ್ನು ಸಂತವಿಸಿದನು.

03180010a ಸ ದೃಷ್ಟ್ವಾ ಫಲ್ಗುನಂ ವೀರಂ ಚಿರಸ್ಯ ಪ್ರಿಯಮಾಗತಂ।
03180010c ಪರ್ಯಷ್ವಜತ ದಾಶಾರ್ಹಃ ಪುನಃ ಪುನರರಿಂದಮಂ।।

ಆಗ ತಾನೆ ಬಂದಿದ್ದ ವೀರ ಪ್ರಿಯ ಫಲ್ಗುನ ಅರಿಂದಮನನ್ನು ದಾಶಾರ್ಹನು ಪುನಃ ಪುನಃ ಅಪ್ಪಿಕೊಂಡನು.

03180011a ತಥೈವ ಸತ್ಯಭಾಮಾಪಿ ದ್ರೌಪದೀಂ ಪರಿಷಸ್ವಜೇ।
03180011c ಪಾಂಡವಾನಾಂ ಪ್ರಿಯಾಂ ಭಾರ್ಯಾಂ ಕೃಷ್ಣಸ್ಯ ಮಹಿಷೀ ಪ್ರಿಯಾ।।

ಹಾಗೆಯೇ ಕೃಷ್ಣನ ಪ್ರಿಯ ರಾಣಿ ಸತ್ಯಭಾಮೆಯೂ ಕೂಡ ಪಾಂಡವರ ಪ್ರಿಯ ಭಾರ್ಯೆ ದ್ರೌಪದಿಯನ್ನು ಆಲಂಗಿಸಿದಳು.

03180012a ತತಸ್ತೇ ಪಾಂಡವಾಃ ಸರ್ವೇ ಸಭಾರ್ಯಾಃ ಸಪುರೋಹಿತಾಃ।
03180012c ಆನರ್ಚುಃ ಪುಂಡರೀಕಾಕ್ಷಂ ಪರಿವವ್ರುಶ್ಚ ಸರ್ವಶಃ।।

ಅನಂತರ ಎಲ್ಲ ಪಾಂಡವರೂ ಪತ್ನಿಯನ್ನೊಡಗೂಡಿ, ಪುರೋಹಿತನೊಂದಿಗೆ ಆಗಮಿಸಿದ ಪುಂಡರೀಕಾಕ್ಷನನ್ನು ಅರ್ಚಿಸಿದರು ಮತ್ತು ಎಲ್ಲರೂ ಅವನನ್ನು ಸುತ್ತುವರೆದು ಕುಳಿತುಕೊಂಡರು.

03180013a ಕೃಷ್ಣಸ್ತು ಪಾರ್ಥೇನ ಸಮೇತ್ಯ ವಿದ್ವಾನ್। ಧನಂಜಯೇನಾಸುರತರ್ಜನೇನ।
03180013c ಬಭೌ ಯಥಾ ಭೂತಪತಿರ್ಮಹಾತ್ಮಾ। ಸಮೇತ್ಯ ಸಾಕ್ಷಾದ್ಭಗವಾನ್ಗುಹೇನ।।

ಭೂತಪತಿ ಮಹಾತ್ಮನು ಸಾಕ್ಷಾತ್ ಭಗವಾನ್ ಗುಹನನ್ನು ಸೇರಿದಂತೆ ವಿದ್ವಾನ್ ಕೃಷ್ಣನು ಧನಂಜಯ ಅಸುರತರ್ಜನ ಪಾರ್ಥನನ್ನು ಸೇರಿದನು.

03180014a ತತಃ ಸಮಸ್ತಾನಿ ಕಿರೀಟಮಾಲೀ। ವನೇಷು ವೃತ್ತಾನಿ ಗದಾಗ್ರಜಾಯ।
03180014c ಉಕ್ತ್ವಾ ಯಥಾವತ್ಪುನರನ್ವಪೃಚ್ಚತ್। ಕಥಂ ಸುಭದ್ರಾ ಚ ತಥಾಭಿಮನ್ಯುಃ।।

ಅನಂತರ ಕಿರೀಟಮಾಲಿಯು ವನದಲ್ಲಿ ನಡೆದುದೆಲ್ಲವನ್ನೂ ಗದಾಗ್ರಜನಿಗೆ ಹೇಳಿ ಹಾಗೆಯೇ ಪುನಃ ಸುಭದ್ರೆ ಮತ್ತು ಅಭಿಮನ್ಯು ಹೇಗಿದ್ದಾರೆಂದು ಕೇಳಿದನು.

03180015a ಸ ಪೂಜಯಿತ್ವಾ ಮಧುಹಾ ಯಥಾವತ್। ಪಾರ್ಥಾಂಶ್ಚ ಕೃಷ್ಣಾಂ ಚ ಪುರೋಹಿತಂ ಚ।
03180015c ಉವಾಚ ರಾಜಾನಮಭಿಪ್ರಶಂಸನ್। ಯುಧಿಷ್ಠಿರಂ ತತ್ರ ಸಹೋಪವಿಶ್ಯ।।
03180016a ಧರ್ಮಃ ಪರಃ ಪಾಂಡವ ರಾಜ್ಯಲಾಭಾತ್। ತಸ್ಯಾರ್ಥಮಾಹುಸ್ತಪ ಏವ ರಾಜನ್।
03180016c ಸತ್ಯಾರ್ಜವಾಭ್ಯಾಂ ಚರತಾ ಸ್ವಧರ್ಮಂ। ಜಿತಸ್ತವಾಯಂ ಚ ಪರಶ್ಚ ಲೋಕಃ।।

ಆ ಮಧುಹನು ಯಥಾವತ್ತಾಗಿ ಪಾರ್ಥರನ್ನು, ಕೃಷ್ಣೆಯನ್ನು ಮತ್ತು ಪುರೋಹಿತನನ್ನು ಪೂಜಿಸಿ ರಾಜ ಯುಧಿಷ್ಠಿರನನ್ನು ಪ್ರಶಂಸಿಸುತ್ತಾ ಅವನ ಬಳಿ ಕುಳಿತುಕೊಂಡನು. “ಪಾಂಡವ! ರಾಜ್ಯಲಾಭಕ್ಕಿಂತ ಧರ್ಮವು ದೊಡ್ಡದು. ರಾಜನ್! ತಪಸ್ಸು ಅದನ್ನು ಪಡೆಯಲು ಸಹಾಯಮಾಡುತ್ತದೆ ಎಂದು ಹೇಳುತ್ತಾರೆ. ಸ್ವಧರ್ಮದಲ್ಲಿ ಸತ್ಯನಾಗಿ ಆರ್ಜದಿಂದ ನಡೆದುಕೊಂಡು ನೀನು ಈ ಲೋಕವನ್ನೂ ಪರಲೋಕವನ್ನೂ ಗೆದ್ದಿದ್ದೀಯೆ.

03180017a ಅಧೀತಮಗ್ರೇ ಚರತಾ ವ್ರತಾನಿ। ಸಮ್ಯಗ್ಧನುರ್ವೇದಮವಾಪ್ಯ ಕೃತ್ಸ್ನಂ।
03180017c ಕ್ಷಾತ್ರೇಣ ಧರ್ಮೇಣ ವಸೂನಿ ಲಬ್ಧ್ವಾ। ಸರ್ವೇ ಹ್ಯವಾಪ್ತಾಃ ಕ್ರತವಃ ಪುರಾಣಾಃ।।

ಮೊದಲು ನೀನು ಅಗ್ರವ್ರತಗಳನ್ನು ನಡೆಸಿದೆ. ಅನಂತರ ಧನುರ್ವೇದವೆಲ್ಲವನ್ನೂ ಸಂಪೂರ್ಣವಾಗಿ ಪಡೆದೆ. ಕ್ಷಾತ್ರಧರ್ಮದಿಂದ ಸಂಪ್ತತ್ತನ್ನು ಪಡೆದು ಎಲ್ಲ ಪುರಾಣಕ್ರತುಗಳನ್ನೂ ಮಾಡಿದ್ದೀಯೆ.

03180018a ನ ಗ್ರಾಮ್ಯಧರ್ಮೇಷು ರತಿಸ್ತವಾಸ್ತಿ। ಕಾಮಾನ್ನ ಕಿಂ ಚಿತ್ಕುರುಷೇ ನರೇಂದ್ರ।
03180018c ನ ಚಾರ್ಥಲೋಭಾತ್ಪ್ರಜಹಾಸಿ ಧರ್ಮಂ। ತಸ್ಮಾತ್ಸ್ವಭಾವಾದಸಿ ಧರ್ಮರಾಜಃ।।

ನೀನು ಗ್ರಾಮ್ಯಧರ್ಮದಲ್ಲಿ ಸಂತೋಷಪಡಲಿಲ್ಲ ಮತ್ತು ನರೇಂದ್ರ! ಕಾಮಗಳನ್ನೂ ಅರಸಿ ಹೋಗಲಿಲ್ಲ. ಅರ್ಥಲೋಭದಿಂದ ಧರ್ಮವನ್ನು ಬಿಡಲಿಲ್ಲ. ಆದುದರಿಂದ ನೀನು ನಿಜವಾಗಿಯೂ ಧರ್ಮರಾಜ.

03180019a ದಾನಂ ಚ ಸತ್ಯಂ ಚ ತಪಶ್ಚ ರಾಜಂ। ಶ್ರದ್ಧಾ ಚ ಶಾಂತಿಶ್ಚ ಧೃತಿಃ ಕ್ಷಮಾ ಚ।
03180019c ಅವಾಪ್ಯ ರಾಷ್ಟ್ರಾಣಿ ವಸೂನಿ ಭೋಗಾನ್। ಏಷಾ ಪರಾ ಪಾರ್ಥ ಸದಾ ರತಿಸ್ತೇ।।

ರಾಜನ್! ರಾಷ್ಟ್ರ, ಸಂಪತ್ತು ಮತ್ತು ಭೋಗಗಳನ್ನು ಪಡೆಯುವುದಕ್ಕಿಂತ ಹೆಚ್ಚಿನದಾದ ದಾನ, ಸತ್ಯ, ತಪಸ್ಸು, ಶ್ರದ್ಧಾ, ಶಾಂತಿ, ಧೃತಿ, ಕ್ಷಮೆ ಇವುಗಳಲ್ಲಿ ನೀನು ಸದಾ ನಿರತನಾಗಿದ್ದೀಯೆ.

03180020a ಯದಾ ಜನೌಘಃ ಕುರುಜಾಂಗಲಾನಾಂ। ಕೃಷ್ಣಾಂ ಸಭಾಯಾಮವಶಾಮಪಶ್ಯತ್।
03180020c ಅಪೇತಧರ್ಮವ್ಯವಹಾರವೃತ್ತಂ। ಸಹೇತ ತತ್ಪಾಂಡವ ಕಸ್ತ್ವದನ್ಯಃ।।

ಪಾಂಡವ! ಕುರುಜಂಗಲದವರು ಸೇರಿದ್ದಾಗ ದ್ರೌಪದಿಗೆ ಭಯವನ್ನೂ ದಾಸತ್ವವನ್ನೂ ನೀಡಿದ ಧರ್ಮವನ್ನೂ ವ್ಯವಹಾರದ ನಡತೆಯನ್ನೂ ತೊರೆದ ಆ ಪ್ರಕರಣವನ್ನು ನೀನಲ್ಲದೆ ಬೇರೆ ಯಾರು ತಾನೇ ಸಹಿಸಿಯಾರು?

03180021a ಅಸಂಶಯಂ ಸರ್ವಸಮೃದ್ಧಕಾಮಃ। ಕ್ಷಿಪ್ರಂ ಪ್ರಜಾಃ ಪಾಲಯಿತಾಸಿ ಸಮ್ಯಕ್।
03180021c ಇಮೇ ವಯಂ ನಿಗ್ರಹಣೇ ಕುರೂಣಾಂ। ಯದಿ ಪ್ರತಿಜ್ಞಾ ಭವತಃ ಸಮಾಪ್ತಾ।।

ನೀನು ಸರ್ವಕಾಮಗಳನ್ನೂ ಪೂರೈಸಿ ಕ್ಷಿಪ್ರವಾಗಿ ಪ್ರಜೆಗಳನ್ನು ಪಾಲಿಸುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ನಿನ್ನ ಪ್ರತಿಜ್ಞೆಯು ಸಮಾಪ್ತವಾದ ನಂತರ ನಾವು ಕುರುಗಳನ್ನು ನಿಗ್ರಹಿಸುತ್ತೇವೆ.”

03180022a ಧೌಮ್ಯಂ ಚ ಕೃಷ್ಣಾಂ ಚ ಯುಧಿಷ್ಠಿರಂ ಚ। ಯಮೌ ಚ ಭೀಮಂ ಚ ದಶಾರ್ಹಸಿಂಹಃ।
03180022c ಉವಾಚ ದಿಷ್ಟ್ಯಾ ಭವತಾಂ ಶಿವೇನ। ಪ್ರಾಪ್ತಃ ಕಿರೀಟೀ ಮುದಿತಃ ಕೃತಾಸ್ತ್ರಃ।।

ಅನಂತರ ಧೌಮ್ಯ, ಕೃಷ್ಣೆ, ಯುಧಿಷ್ಠಿರ, ಯಮಳರು ಮತ್ತು ಭೀಮನಿಗೆ ದಶಾರ್ಹಸಿಂಹನು “ನಿಮ್ಮ ಅದೃಷ್ಟದಿಂದ ಒಳ್ಳೆಯದಾಯಿತು! ಕಿರೀಟಿಯು ಅಸ್ತ್ರಗಳನ್ನು ಪಡೆದು ಸಂತೋಷದಿಂದ ಹಿಂದಿರುಗಿದ್ದಾನೆ” ಎಂದು ಹೇಳಿದನು.

03180023a ಪ್ರೋವಾಚ ಕೃಷ್ಣಾಮಪಿ ಯಾಜ್ಞಸೇನೀಂ। ದಶಾರ್ಹಭರ್ತಾ ಸಹಿತಃ ಸುಹೃದ್ಭಿಃ।
03180023c ಕೃಷ್ಣೇ ಧನುರ್ವೇದರತಿಪ್ರಧಾನಾಃ। ಸತ್ಯವ್ರತಾಸ್ತೇ ಶಿಶವಃ ಸುಶೀಲಾಃ।।
03180023e ಸದ್ಭಿಃ ಸದೈವಾಚರಿತಂ ಸಮಾಧಿಂ। ಚರಂತಿ ಪುತ್ರಾಸ್ತವ ಯಾಜ್ಞಸೇನಿ।।

ಅನಂತರ ದಾಶಾರ್ಹರ ದೊರೆ ತನ್ನ ಸ್ನೇಹಿತರೊಂದಿಗೆ ಯಾಜ್ಞಸೇನಿ ಕೃಷ್ಣೆಗೂ ಹೇಳಿದನು: “ಕೃಷ್ಣೇ! ನಿನ್ನ ಮಕ್ಕಳು ಸತ್ಯವ್ರತರಾಗಿ, ಸುಶೀಲರಾಗಿ ಧನುರ್ವೇದವನ್ನು ಪಡೆಯುವುದರಲ್ಲಿ ನಿರತರಾಗಿದ್ದಾರೆ. ಯಾಜ್ಞಸೇನಿ! ನಿನ್ನ ಮಕ್ಕಳು ಒಳ್ಳೆಯವರೊಡನೆ ಒಡನಾಡುತ್ತಾರೆ ಮತ್ತು ಸದಾ ಸಮಾಧಿಯನ್ನು ಆಚರಿಸುತ್ತಾರೆ.

03180024a ರಾಜ್ಯೇನ ರಾಷ್ಟ್ರೈಶ್ಚ ನಿಮಂತ್ರ್ಯಮಾಣಾಃ। ಪಿತ್ರಾ ಚ ಕೃಷ್ಣೇ ತವ ಸೋದರೈಶ್ಚ।
03180024c ನ ಯಜ್ಞಸೇನಸ್ಯ ನ ಮಾತುಲಾನಾಂ। ಗೃಹೇಷು ಬಾಲಾ ರತಿಮಾಪ್ನುವಂತಿ।।

ಕೃಷ್ಣೇ! ನಿನ್ನ ತಂದೆ ಮತ್ತು ಸೋದರರು ಅವರಿಗೆ ರಾಜ್ಯ ಮತ್ತು ರಾಷ್ಟ್ರಗಳನ್ನಿತ್ತು ನೋಡಿದರು. ಆದರೆ ಆ ಬಾಲಕರು ಯಜ್ಞಸೇನನ ಮತ್ತು ಮಾವಂದಿರ ಮನೆಯಲ್ಲಿ ಸಂತೋಷವನ್ನು ಹೊಂದಲಿಲ್ಲ.

03180025a ಆನರ್ತಮೇವಾಭಿಮುಖಾಃ ಶಿವೇನ। ಗತ್ವಾ ಧನುರ್ವೇದರತಿಪ್ರಧಾನಾಃ।
03180025c ತವಾತ್ಮಜಾ ವೃಷ್ಣಿಪುರಂ ಪ್ರವಿಶ್ಯ। ನ ದೈವತೇಭ್ಯಃ ಸ್ಪೃಹಯಂತಿ ಕೃಷ್ಣೇ।।

ಅವರು ಸುರಕ್ಷಿತರಾಗಿ ಧನುರ್ವೇದದಲ್ಲಿ ವಿಶೇಷವಾಗಿ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕೋಸ್ಕರ ಆನರ್ತದ ಕಡೆ ಬಂದರು. ನಿನ್ನ ಮಕ್ಕಳು ವೃಷ್ಣಿಪುರವನ್ನು ಪ್ರವೇಶಿಸಿ ದೇವತೆಗಳಿಂದ ದೂಷಿತರಾಗುತ್ತಿಲ್ಲ ಕೃಷ್ಣೇ!

03180026a ಯಥಾ ತ್ವಮೇವಾರ್ಹಸಿ ತೇಷು ವೃತ್ತಿಂ। ಪ್ರಯೋಕ್ತುಮಾರ್ಯಾ ಚ ಯಥೈವ ಕುಂತೀ।
03180026c ತೇಷ್ವಪ್ರಮಾದೇನ ಸದಾ ಕರೋತಿ। ತಥಾ ಚ ಭೂಯಶ್ಚ ತಥಾ ಸುಭದ್ರಾ।।

ಅವರ ನಡತೆಗಳ ಕುರಿತು ನೀನು ಹೇಗೆ ಅಥವಾ ಆರ್ಯೆ ಕುಂತಿಯು ಮಾರ್ಗದರ್ಶನ ನೀಡಬಲ್ಲರೋ ಹಾಗೆ ಸುಭದ್ರೆಯು ನಿತ್ಯವೂ ಅವರನ್ನು ಅಪ್ರಮಾದದದಿಂದ ದೂರವಿಡುತ್ತಿದ್ದಾಳೆ.

03180027a ಯಥಾನಿರುದ್ಧಸ್ಯ ಯಥಾಭಿಮನ್ಯೋರ್। ಯಥಾ ಸುನೀಥಸ್ಯ ಯಥೈವ ಭಾನೋಃ।
03180027c ತಥಾ ವಿನೇತಾ ಚ ಗತಿಶ್ಚ ಕೃಷ್ಣೇ। ತವಾತ್ಮಜಾನಾಮಪಿ ರೌಕ್ಮಿಣೇಯಃ।।

ಕೃಷ್ಣೇ! ಅನಿರುದ್ಧನಿಗೆ ಹೇಗೋ, ಅಭಿಮನ್ಯುವಿಗೆ ಹೇಗೋ, ಸುನೀಥ ಮತ್ತು ಭಾನುಗಳಿಗೆ ಹೇಗೋ ಹಾಗೆ ನಿನ್ನ ಮಕ್ಕಳಿಗೂ ಕೂಡ ರೌಕ್ಮಿಣೇಯನು ಮಾರ್ಗದರ್ಶನ ನೀಡುತ್ತಿದ್ದಾನೆ.

03180028a ಗದಾಸಿಚರ್ಮಗ್ರಹಣೇಷು ಶೂರಾನ್। ಅಸ್ತ್ರೇಷು ಶಿಕ್ಷಾಸು ರಥಾಶ್ವಯಾನೇ।
03180028c ಸಮ್ಯಗ್ವಿನೇತಾ ವಿನಯತ್ಯತಂದ್ರೀಸ್। ತಾಂಶ್ಚಾಭಿಮನ್ಯುಃ ಸತತಂ ಕುಮಾರಃ।।

ಕುಮಾರ ಅಭಿಮನ್ಯುವು ಅವರಿಗೆ ಗದಾಯುದ್ಧದಲ್ಲಿ, ಖಡ್ಗಯುದ್ಧದಲ್ಲಿ, ಗುರಾಣಿಗಳನ್ನು ಹಿಡಿಯುವುದರಲ್ಲಿ, ಅಸ್ತ್ರಗಳ ಪ್ರಯೋಗದಲ್ಲಿ, ರಥ ಮತ್ತು ಅಶ್ವಗಳನ್ನೇರುವುದರಲ್ಲಿ ಸತತವೂ ಚೆನ್ನಾಗಿ ಮಾರ್ಗದರ್ಶನವನ್ನು ನೀಡುತ್ತಿದ್ದಾನೆ.

03180029a ಸ ಚಾಪಿ ಸಮ್ಯಕ್ಪ್ರಣಿಧಾಯ ಶಿಕ್ಷಾಂ। ಅಸ್ತ್ರಾಣಿ ಚೈಷಾಂ ಗುರುವತ್ಪ್ರದಾಯ।
03180029c ತವಾತ್ಮಜಾನಾಂ ಚ ತಥಾಭಿಮನ್ಯೋಃ। ಪರಾಕ್ರಮೈಸ್ತುಷ್ಯತಿ ರೌಕ್ಮಿಣೇಯಃ।।

ಅವನು ಗುರುವಿನಂತೆ ಅವರಿಗೆ ಚೆನ್ನಾಗಿ ತರಬೇತಿಯನ್ನೂ ಅಸ್ತ್ರಗಳನ್ನೂ ನೀಡಿದ್ದಾನೆ. ಈಗ ರೌಕ್ಮಿಣೇಯನು ನಿನ್ನ ಮಕ್ಕಳ ಮತ್ತು ಅಭಿಮನ್ಯುವಿನ ಪರಾಕ್ರಮಗಳಿಂದ ತೃಪ್ತನಾಗಿದ್ದಾನೆ.

03180030a ಯದಾ ವಿಹಾರಂ ಪ್ರಸಮೀಕ್ಷಮಾಣಾಃ। ಪ್ರಯಾಂತಿ ಪುತ್ರಾಸ್ತವ ಯಾಜ್ಞಸೇನಿ।
03180030c ಏಕೈಕಮೇಷಾಮನುಯಾಂತಿ ತತ್ರ। ರಥಾಶ್ಚ ಯಾನಾನಿ ಚ ದಂತಿನಶ್ಚ।।

ಯಾಜ್ಞಸೇನಿ! ಆಟಗಳನ್ನು ನೋಡಲು ವಿಹಾರಕ್ಕೆಂದು ಹೋದಾಗಲೆಲ್ಲಾ ನಿನ್ನ ಪುತ್ರರೊಡನೆ ಒಬ್ಬೊಬ್ಬರೊಡನೆಯೂ ಒಂದೊಂದು ರಥ, ಪಲ್ಲಕ್ಕಿ ಮತ್ತು ಸೈನಿಕರು ಅನುಸರಿಸುತ್ತಾರೆ.”

03180031a ಅಥಾಬ್ರವೀದ್ಧರ್ಮರಾಜಂ ತು ಕೃಷ್ಣೋ। ದಶಾರ್ಹಯೋಧಾಃ ಕುಕುರಾಂಧಕಾಶ್ಚ।
03180031c ಏತೇ ನಿದೇಶಂ ತವ ಪಾಲಯಂತಿ। ತಿಷ್ಠಂತಿ ಯತ್ರೇಚ್ಚಸಿ ತತ್ರ ರಾಜನ್।।

ಆಗ ಕೃಷ್ಣನು ಧರ್ಮರಾಜನಿಗೆ ಹೇಳಿದನು: “ರಾಜನ್! ದಾಶಾರ್ಹ, ಕುಕುರ ಮತ್ತು ಅಂಧಕ ಸೇನಾನಿಗಳು ನಿನ್ನ ಅಪ್ಪಣೆಯನ್ನು ಪಾಲಿಸಲು ಕಾದು ನಿಂತಿದ್ದಾರೆ.

03180032a ಆವರ್ತತಾಂ ಕಾರ್ಮುಕವೇಗವಾತಾ। ಹಲಾಯುಧಪ್ರಗ್ರಹಣಾ ಮಧೂನಾಂ।
03180032c ಸೇನಾ ತವಾರ್ಥೇಷು ನರೇಂದ್ರ ಯತ್ತಾ। ಸಸಾದಿಪತ್ತ್ಯಶ್ವರಥಾ ಸನಾಗಾ।।

ನರೇಂದ್ರ! ಬಿರುಗಾಳಿಯನ್ನೇ ಚದುರಿಸಬಲ್ಲ ಬಿಲ್ಲುಗಳನ್ನು ಧರಿಸಿದ ಹಲಾಯುಧನ ನಾಯಕತ್ವದಲ್ಲಿರುವ ಮಧುಗಳ ಸೇನೆಯು ಪದಾತಿಗಳು, ಅಶ್ವಗಳು, ರಥಗಳು ಮತ್ತು ಆನೆಗಳೊಂದಿಗೆ ನಿನಗೋಸ್ಕರವಾಗಿ ಸಿದ್ಧವಾಗಿದೆ.

03180033a ಪ್ರಸ್ಥಾಪ್ಯತಾಂ ಪಾಂಡವ ಧಾರ್ತರಾಷ್ಟ್ರಃ। ಸುಯೋಧನಃ ಪಾಪಕೃತಾಂ ವರಿಷ್ಠಃ।
03180033c ಸ ಸಾನುಬಂಧಃ ಸಸುಹೃದ್ಗಣಶ್ಚ। ಸೌಭಸ್ಯ ಸೌಭಾಧಿಪತೇಶ್ಚ ಮಾರ್ಗಂ।।

ಪಾಂಡವ! ಈಗ ಪಾಪಿಗಳಲ್ಲಿಯೇ ಪಾಪಿಷ್ಟನಾದ ಧಾರ್ತರಾಷ್ಟ್ರ ಸುಯೋಧನನು ಅವನ ಅನುಯಾಯಿಗಳು ಮತ್ತು ಮಿತ್ರರೊಂದಿಗೆ ಸೌಭದ ಮತ್ತು ಸೌಭಪತಿಯ ಮಾರ್ಗದಲ್ಲಿ ಹೋಗಲಿ.

03180034a ಕಾಮಂ ತಥಾ ತಿಷ್ಠ ನರೇಂದ್ರ ತಸ್ಮಿನ್। ಯಥಾ ಕೃತಸ್ತೇ ಸಮಯಃ ಸಭಾಯಾಂ।
03180034c ದಾಶಾರ್ಹಯೋಧೈಸ್ತು ಸಸಾದಿಯೋಧಂ। ಪ್ರತೀಕ್ಷತಾಂ ನಾಗಪುರಂ ಭವಂತಂ।।

ನರೇಂದ್ರ! ಸಭೆಯಲ್ಲಿ ಮಾಡಿಕೊಂಡ ಒಪ್ಪಂದದಂತೆ ನೀನು ನಡೆದುಕೊಳ್ಳಬಹುದು. ಆದರೆ ನಾಗಪುರವು ದಾಶಾರ್ಹ ಯೋಧರ ಗುಂಪಿನ ಆಕ್ರಮಣಕ್ಕೆ ಸಿದ್ಧವಾಗಿರಲಿ.

03180035a ವ್ಯಪೇತಮನ್ಯುರ್ವ್ಯಪನೀತಪಾಪ್ಮಾ। ವಿಹೃತ್ಯ ಯತ್ರೇಚ್ಚಸಿ ತತ್ರ ಕಾಮಂ।
03180035c ತತಃ ಸಮೃದ್ಧಂ ಪ್ರಥಮಂ ವಿಶೋಕಃ। ಪ್ರಪತ್ಸ್ಯಸೇ ನಾಗಪುರಂ ಸರಾಷ್ಟ್ರಂ।।

ನಿನ್ನ ಸಿಟ್ಟನ್ನು ಕಡಿಮೆಮಾಡಿಕೊಂಡ, ಪಾಪವನ್ನು ಕಳೆದುಕೊಂಡ ಮತ್ತು ನಿನಗಿಷ್ಟವಾದಲ್ಲೆಲ್ಲಾ ವಿಹರಿಸಿದನಂತರ ವಿಶೋಕನಾದ ನೀನು ನಿನ್ನ ಸಮೃದ್ಧ ರಾಷ್ಟ್ರದ ಪ್ರಥಮ ನಾಗಪುರಕ್ಕೆ ಹಿಂದಿರುಗುವೆ.”

03180036a ತತಸ್ತದಾಜ್ಞಾಯ ಮತಂ ಮಹಾತ್ಮಾ। ಯಥಾವದುಕ್ತಂ ಪುರುಷೋತ್ತಮೇನ।
03180036c ಪ್ರಶಸ್ಯ ವಿಪ್ರೇಕ್ಷ್ಯ ಚ ಧರ್ಮರಾಜಃ। ಕೃತಾಂಜಲಿಃ ಕೇಶವಮಿತ್ಯುವಾಚ।।

ಆ ಪುರುಷೋತ್ತಮನ ಮತವನ್ನು ಹೇಳಿದಹಾಗೆಯೇ ತಿಳಿದ ಮಹಾತ್ಮ ಧರ್ಮರಾಜನು ಅದನ್ನು ಒಪ್ಪಿಕೊಂಡು ಅಂಜಲೀಬದ್ದನಾಗಿ ಕೇಶವನಿಗೆ ಹೇಳಿದನು:

03180037a ಅಸಂಶಯಂ ಕೇಶವ ಪಾಂಡವಾನಾಂ। ಭವಾನ್ಗತಿಸ್ತ್ವಚ್ಚರಣಾ ಹಿ ಪಾರ್ಥಾಃ।
03180037c ಕಾಲೋದಯೇ ತಚ್ಚ ತತಶ್ಚ ಭೂಯಃ। ಕರ್ತಾ ಭವಾನ್ಕರ್ಮ ನ ಸಂಶಯೋಽಸ್ತಿ।।

“ಕೇಶವ! ನೀನು ಪಾಂಡವರ ಗತಿ ಎನ್ನುವುದರಲ್ಲಿ ಸಂಶಯವೇ ಇಲ್ಲ ಏಕೆಂದರೆ ಪಾರ್ಥರು ನಿನ್ನ ಶರಣುಬಂದಿದ್ದೇವೆ. ಕಾಲವು ಬಂದಾಗ ನೀನು ನಿನ್ನ ಕರ್ಮದಲ್ಲಿ ಯಶಸ್ವಿಯಾಗುತ್ತೀಯೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

03180038a ಯಥಾಪ್ರತಿಜ್ಞಂ ವಿಹೃತಶ್ಚ ಕಾಲಃ। ಸರ್ವಾಃ ಸಮಾ ದ್ವಾದಶ ನಿರ್ಜನೇಷು।
03180038c ಅಜ್ಞಾತಚರ್ಯಾಂ ವಿಧಿವತ್ಸಮಾಪ್ಯ। ಭವದ್ಗತಾಃ ಕೇಶವ ಪಾಂಡವೇಯಾಃ।।

ಕೇಶವ! ಪ್ರತಿಜ್ಞೆಮಾಡಿದಂತೆ ಎಲ್ಲ ಹನ್ನೆರಡು ವರ್ಷಗಳನ್ನು ನಿರ್ಜನಪ್ರದೇಶದಲ್ಲಿ ಕಳೆದು ಮತ್ತು ವಿಧಿವತ್ತಾಗಿ ಅಜ್ಞಾತವನ್ನೂ ಮುಗಿಸಿ ಕಾಲಬಂದಾಗ ಪಾಂಡವರು ನಿನ್ನ ಬಳಿ ಬರುತ್ತೇವೆ.””

03180039 ವೈಶಂಪಾಯನ ಉವಾಚ।
03180039a ತಥಾ ವದತಿ ವಾರ್ಷ್ಣೇಯೇ ಧರ್ಮರಾಜೇ ಚ ಭಾರತ।
03180039c ಅಥ ಪಶ್ಚಾತ್ತಪೋವೃದ್ಧೋ ಬಹುವರ್ಷಸಹಸ್ರಧೃಕ್।।
03180039e ಪ್ರತ್ಯದೃಷ್ಯತ ಧರ್ಮಾತ್ಮಾ ಮಾರ್ಕಂಡೇಯೋ ಮಹಾತಪಾಃ।।

ವೈಶಂಪಾಯನನು ಹೇಳಿದನು: “ಭಾರತ! ವಾರ್ಷ್ಣೇಯನು ಧರ್ಮರಾಜನಿಗೆ ಹೀಗೆ ಹೇಳಿದ ನಂತರ ಅಲ್ಲಿ ಸಹಸ್ರಾರು ವರ್ಷಗಳನ್ನು ಧರಿಸಿದ್ದ ತಪೋವೃದ್ಧ ಧರ್ಮಾತ್ಮ, ಮಹಾತಪಸ್ವಿ ಮಾರ್ಕಂಡೇಯನು ಕಾಣಿಸಿಕೊಂಡನು.

03180040a ತಮಾಗತಮೃಷಿಂ ವೃದ್ಧಂ ಬಹುವರ್ಷಸಹಸ್ರಿಣಂ।
03180040c ಆನರ್ಚುರ್ಬ್ರಾಹ್ಮಣಾಃ ಸರ್ವೇ ಕೃಷ್ಣಶ್ಚ ಸಹ ಪಾಂಡವೈಃ।।

ಎಲ್ಲ ಬ್ರಾಹ್ಮಣರೂ, ಕೃಷ್ಣನೊಂದಿಗೆ ಪಾಂಡವರೂ ಆಗಮಿಸಿದ ಅನೇಕ ಸಹಸ್ರವರ್ಷಗಳ ಆ ವೃದ್ಧ ಋಷಿಯನ್ನು ಸ್ವಾಗತಿಸಿದರು.

03180041a ತಮರ್ಚಿತಂ ಸುವಿಷ್ವಸ್ತಮಾಸೀನಮೃಷಿಸತ್ತಮಂ।
03180041c ಬ್ರಾಹ್ಮಣಾನಾಂ ಮತೇನಾಹ ಪಾಂಡವಾನಾಂ ಚ ಕೇಶವಃ।।

ಆ ಮುನಿಸತ್ತಮನನ್ನು ಅರ್ಚಿಸಿ, ವಿಶ್ರಾಮವನ್ನಿತ್ತು ಕುಳಿತುಕೊಂಡಿರಲು ಕೇಶವನು ಬ್ರಾಹ್ಮಣರ ಮತ್ತು ಪಾಂಡವರ ಮತವನ್ನು ಹೇಳಿದನು:

03180042a ಶುಶ್ರೂಷವಃ ಪಾಂಡವಾಸ್ತೇ ಬ್ರಾಹ್ಮಣಾಶ್ಚ ಸಮಾಗತಾಃ।
03180042c ದ್ರೌಪದೀ ಸತ್ಯಭಾಮಾ ಚ ತಥಾಹಂ ಪರಮಂ ವಚಃ।।

“ಪಾಂಡವರು ಮತ್ತು ಇಲ್ಲಿ ಸೇರಿದ ಬ್ರಾಹ್ಮಣರು, ದ್ರೌಪದೀ ಸತ್ಯಭಾಮೆಯರು ಮತ್ತು ನಾನೂ ಕೂಡ ನಿನ್ನ ಪರಮ ಮಾತುಗಳನ್ನು ಕೇಳಲು ಕಾತುರರಾಗಿದ್ದೇವೆ.

03180043a ಪುರಾವೃತ್ತಾಃ ಕಥಾಃ ಪುಣ್ಯಾಃ ಸದಾಚಾರಾಃ ಸನಾತನಾಃ।
03180043c ರಾಜ್ಞಾಂ ಸ್ತ್ರೀಣಾಮೃಷೀಣಾಂ ಚ ಮಾರ್ಕಂಡೇಯ ವಿಚಕ್ಷ್ವ ನಃ।।

ಮಾರ್ಕಂಡೇಯ! ಹಿಂದೆ ನಡೆದುಹೋದ ಪುಣ್ಯಕರ, ಸದಾಚಾರ, ಸನಾತನ ರಾಜರ, ಸ್ತ್ರೀಯರ, ಋಷಿಗಳ ಕಥೆಗಳನ್ನು ಹೇಳು.”

03180044a ತೇಷು ತತ್ರೋಪವಿಷ್ಟೇಷು ದೇವರ್ಷಿರಪಿ ನಾರದಃ।
03180044c ಆಜಗಾಮ ವಿಶುದ್ಧಾತ್ಮಾ ಪಾಂಡವಾನವಲೋಕಕಃ।।

ಅವರು ಅಲ್ಲಿ ಕುಳಿತುಕೊಂಡಿರಲು ವಿಶುದ್ಧಾತ್ಮ ದೇವರ್ಷಿ ನಾರದನೂ ಕೂಡ ಪಾಂಡವರನ್ನು ಕಾಣಲು ಅಲ್ಲಿಗೆ ಬಂದನು.

03180045a ತಮಪ್ಯಥ ಮಹಾತ್ಮಾನಂ ಸರ್ವೇ ತು ಪುರುಷರ್ಷಭಾಃ।
03180045c ಪಾದ್ಯಾರ್ಘ್ಯಾಭ್ಯಾಂ ಯಥಾನ್ಯಾಯಮುಪತಸ್ಥುರ್ಮನೀಷಿಣಂ।।

ಆ ಮಹಾತ್ಮನನ್ನು ಪುರುಷರ್ಷಭರೆಲ್ಲರೂ ಪಾದ್ಯ ಅರ್ಘ್ಯಗಳಿಂದ ಯಥಾನ್ಯಾಯವಾಗಿ ಸ್ವಾಗತಿಸಿದರು.

03180046a ನಾರದಸ್ತ್ವಥ ದೇವರ್ಷಿರ್ಜ್ಞಾತ್ವಾ ತಾಂಸ್ತು ಕೃತಕ್ಷಣಾನ್।
03180046c ಮಾರ್ಕಂಡೇಯಸ್ಯ ವದತಸ್ತಾಂ ಕಥಾಮನ್ವಮೋದತ।।

ಮಾರ್ಕಂಡೇಯನು ಮಾತನಾಡುವುದನ್ನು ಕೇಳಲು ಕಾದಿರುವರೆಂದು ತಿಳಿದ ದೇವರ್ಷಿ ನಾರದನು ಕಥೆಗಳನ್ನು ಅನುಮೋದಿಸಿದನು.

03180047a ಉವಾಚ ಚೈನಂ ಕಾಲಜ್ಞಃ ಸ್ಮಯನ್ನಿವ ಸ ನಾರದಃ।
03180047c ಬ್ರಹ್ಮರ್ಷೇ ಕಥ್ಯತಾಂ ಯತ್ತೇ ಪಾಂಡವೇಷು ವಿವಕ್ಷಿತಂ।।

ಕಾಲಜ್ಞ ಆ ನಾರದನು ಮುಗುಳ್ನಗುತ್ತಾ ಅವನಿಗೆ ಹೇಳಿದನು: “ಬ್ರಹ್ಮರ್ಷೇ! ಅವರಿಗೆ ಹೇಳಬೇಕೆಂದು ಬಯಸಿದುದನ್ನು ಪಾಂಡವರಿಗೆ ಹೇಳು.”

03180048a ಏವಮುಕ್ತಃ ಪ್ರತ್ಯುವಾಚ ಮಾರ್ಕಂಡೇಯೋ ಮಹಾತಪಾಃ।
03180048c ಕ್ಷಣಂ ಕುರುಧ್ವಂ ವಿಪುಲಮಾಖ್ಯಾತವ್ಯಂ ಭವಿಷ್ಯತಿ।।

ಹೀಗೆ ಹೇಳಲು ಮಹಾತಪಸ್ವಿ ಮಾರ್ಕಂಡೇಯನು ಉತ್ತರಿಸಿದನು: “ಸಮಯವನ್ನು ಮಾಡಿಕೋ. ಯಾಕೆಂದರೆ, ಅವರಿಗೆ ಬಹಳಷ್ಟು ಹೇಳಲಿಕ್ಕಿದೆ.”

03180049a ಏವಮುಕ್ತಾಃ ಕ್ಷಣಂ ಚಕ್ರುಃ ಪಾಂಡವಾಃ ಸಹ ತೈರ್ದ್ವಿಜೈಃ।
03180049c ಮಧ್ಯಂದಿನೇ ಯಥಾದಿತ್ಯಂ ಪ್ರೇಕ್ಷಂತಸ್ತಂ ಮಹಾಮುನಿಂ।।

ಅವನು ಹೀಗೆ ಹೇಳಲು ಅಲ್ಲಿದ್ದ ದ್ವಿಜರೊಂದಿಗೆ ಪಾಂಡವರು ಮಧ್ಯಾಹ್ನದ ಸೂರ್ಯನಂತೆ ಹೊಳೆಯುತ್ತಿರುವ ಮಹಾಮುನಿಯನ್ನು ಒಂದು ಕ್ಷಣ ನೋಡಿದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಮಾರ್ಕಂಡೇಯಸಮಸ್ಯಾಪರ್ವಣಿ ಅಶೀತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಮಾರ್ಕಂಡೇಯಸಮಸ್ಯಾಪರ್ವದಲ್ಲಿ ನೂರಾಎಂಭತ್ತನೆಯ ಅಧ್ಯಾಯವು.