ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಅಜಗರ ಪರ್ವ
ಅಧ್ಯಾಯ 178
ಸಾರ
ಸರ್ಪನಿಂದ ಯುಧಿಷ್ಠಿರನು ಉಪದೇಶ ಪಡೆದುದು (1-44). ಅಜಗರನ ದೇಹವನ್ನು ತ್ಯಜಿಸಿ ನಹುಷನು ತ್ರಿದಿವಕ್ಕೆ ತೆರಳಿದುದು; ಭೀಮ-ಯುಧಿಷ್ಠಿರರು ಮರಳಿದುದು (45-50).
03178001 ಯುಧಿಷ್ಠಿರ ಉವಾಚ।
03178001a ಭವಾನೇತಾದೃಶೋ ಲೋಕೇ ವೇದವೇದಾಂಗಪಾರಗಃ।
03178001c ಬ್ರೂಹಿ ಕಿಂ ಕುರ್ವತಃ ಕರ್ಮ ಭವೇದ್ಗತಿರನುತ್ತಮಾ।।
ಯುಧಿಷ್ಠಿರನು ಹೇಳಿದನು: “ಈ ಲೋಕದಲ್ಲಿ ನೀನು ಎಷ್ಟೊಂದು ವೇದವೇದಾಂಗ ಪಾರಂಗತನಾಗಿದ್ದೀಯೆ. ಯಾವ ಕರ್ಮಗಳನ್ನು ಮಾಡಿ ಅನುತ್ತಮ ಗತಿಯನ್ನು ಪಡೆಯಬಹುದು ಎನ್ನುವುದನ್ನು ಹೇಳು.”
03178002 ಸರ್ಪ ಉವಾಚ।
03178002a ಪಾತ್ರೇ ದತ್ತ್ವಾ ಪ್ರಿಯಾಣ್ಯುಕ್ತ್ವಾ ಸತ್ಯಮುಕ್ತ್ವಾ ಚ ಭಾರತ।
03178002c ಅಹಿಂಸಾನಿರತಃ ಸ್ವರ್ಗಂ ಗಚ್ಚೇದಿತಿ ಮತಿರ್ಮಮ।।
ಸರ್ಪವು ಹೇಳಿತು: “ಭಾರತ! ಸಪಾತ್ರನಿಗೆ ದಾನವನ್ನು ನೀಡುವುದರಿಂದ, ಪ್ರಿಯವಾದ ಮಾತುಗಳನ್ನಾಡುವುದರಿಂದ, ಅಹಿಂಸೆಯಲ್ಲಿ ನಿರತನಾಗಿರುವುದರಿಂದ ಸ್ವರ್ಗಕ್ಕೆ ಹೋಗಬಹುದು ಎಂದು ನನ್ನ ಅಭಿಪ್ರಾಯ.”
03178003 ಯುಧಿಷ್ಠಿರ ಉವಾಚ।
03178003a ದಾನಾದ್ವಾ ಸರ್ಪ ಸತ್ಯಾದ್ವಾ ಕಿಮತೋ ಗುರು ದೃಶ್ಯತೇ।
03178003c ಅಹಿಂಸಾಪ್ರಿಯಯೋಶ್ಚೈವ ಗುರುಲಾಘವಮುಚ್ಯತಾಂ।।
ಯುಧಿಷ್ಠಿರನು ಹೇಳಿದನು: “ಸರ್ಪ! ದಾನ ಅಥವಾ ಸತ್ಯಗಳಲ್ಲಿ ಯಾವುದು ಹಿರಿಯದೆಂದು ನಿನಗೆ ಕಾಣಿಸುತ್ತದೆ? ಅಹಿಂಸೆ ಮತ್ತು ಪ್ರಿಯಮಾತುಗಳಲ್ಲಿರುವ ಹಿರಿತನ ಮತ್ತು ಲಘುತ್ವಗಳನ್ನು ಹೇಳು.”
03178004 ಸರ್ಪ ಉವಾಚ।
03178004a ದಾನೇ ರತತ್ವಂ ಸತ್ಯಂ ಚ ಅಹಿಂಸಾ ಪ್ರಿಯಮೇವ ಚ।
03178004c ಏಷಾಂ ಕಾರ್ಯಗರೀಯಸ್ತ್ವಾದ್ದೃಶ್ಯತೇ ಗುರುಲಾಘವಂ।।
ಸರ್ಪವು ಹೇಳಿತು: “ದಾನ, ಸತ್ಯವಂತನಾಗಿರುವುದು, ಅಹಿಂಸೆ ಮತ್ತು ಪ್ರಿಯಮಾತುಗಳು ಇವುಗಳ ಪರಿಣಾಮಗಳ ಮಹತ್ವದ ಆಧಾರದಮೇಲೆ ಗುರುತ್ವ ಲಘುತ್ವಗಳನ್ನು ಹೇಳಬಹುದು.
03178005a ಕಸ್ಮಾಚ್ಚಿದ್ದಾನಯೋಗಾದ್ಧಿ ಸತ್ಯಮೇವ ವಿಶಿಷ್ಯತೇ।
03178005c ಸತ್ಯವಾಕ್ಯಾಚ್ಚ ರಾಜೇಂದ್ರ ಕಿಂ ಚಿದ್ದಾನಂ ವಿಶಿಷ್ಯತೇ।।
ಯಾಕೆಂದರೆ ಕೆಲವೊಮ್ಮೆ ಕೆಲವು ರೀತಿಯ ದಾನಗಳಿಗಿಂತ ಸತ್ಯವೇ ವಿಶೇಷವಾಗುತ್ತದೆ. ರಾಜೇಂದ್ರ! ಕೆಲವೊಮ್ಮೆ ಸತ್ಯವಾಕ್ಯಕ್ಕಿಂತಲೂ ದಾನವೇ ವಿಶೇಷವಾಗುತ್ತದೆ.
03178006a ಏವಮೇವ ಮಹೇಷ್ವಾಸ ಪ್ರಿಯವಾಕ್ಯಾನ್ಮಹೀಪತೇ।
03178006c ಅಹಿಂಸಾ ದೃಶ್ಯತೇ ಗುರ್ವೀ ತತಶ್ಚ ಪ್ರಿಯಮಿಷ್ಯತೇ।।
ಮಹೇಷ್ವಾಸ! ಮಹೀಪತೇ! ಹಾಗೆಯೇ ಅಹಿಂಸೆಯು ಪ್ರಿಯವಾಕ್ಯಕ್ಕಿಂತ ಹೆಚ್ಚಿನದಾಗಿ ಕಾಣಿಸುತ್ತದೆ ಮತ್ತೆ ಕೆಲವೊಮ್ಮೆ ಪ್ರಿಯವಾಕ್ಯವೇ ಹೆಚ್ಚಿನದಾಗಿ ಕಾಣಿಸುತ್ತದೆ.
03178007a ಏವಮೇತದ್ಭವೇದ್ರಾಜನ್ಕಾರ್ಯಾಪೇಕ್ಷಮನಂತರಂ।
03178007c ಯದಭಿಪ್ರೇತಮನ್ಯತ್ತೇ ಬ್ರೂಹಿ ಯಾವದ್ಬ್ರವೀಮ್ಯಹಂ।।
ರಾಜನ್! ಹೀಗೆ ಇವೆಲ್ಲವೂ ಕಾರ್ಯದ ನಂತರದ ಪರಿಣಾಮದ ಮೇಲೆ ಅವಲಂಬಿತವಾಗಿರುತ್ತದೆ. ನಿನ್ನ ಮನಸ್ಸಿನಲ್ಲಿ ಬೇರೆ ಏನನ್ನಾದರೂ ಕೇಳಬೇಕೆಂದಿದ್ದರೆ ಕೇಳು. ಹೇಳುತ್ತೇನೆ.”
03178008 ಯುಧಿಷ್ಠಿರ ಉವಾಚ।
03178008a ಕಥಂ ಸ್ವರ್ಗೇ ಗತಿಃ ಸರ್ಪ ಕರ್ಮಣಾಂ ಚ ಫಲಂ ಧ್ರುವಂ।
03178008c ಅಶರೀರಸ್ಯ ದೃಶ್ಯೇತ ವಿಷಯಾಂಶ್ಚ ಬ್ರವೀಹಿ ಮೇ।।
ಯುಧಿಷ್ಠಿರನು ಹೇಳಿದನು: “ಸರ್ಪವೇ! ಸ್ವರ್ಗಕ್ಕೆ ಹೋಗಿರುವುದನ್ನು ಮತ್ತು ಕರ್ಮಗಳ ಫಲವನ್ನು ಅಶರೀರಿಯು ಹೇಗೆ ಗುರುತಿಸುತ್ತಾನೆ? ಈ ವಿಷಯದ ಕುರಿತು ನನಗೆ ಹೇಳಬೇಕು.”
03178009 ಸರ್ಪ ಉವಾಚ।
03178009a ತಿಸ್ರೋ ವೈ ಗತಯೋ ರಾಜನ್ಪರಿದೃಷ್ಟಾಃ ಸ್ವಕರ್ಮಭಿಃ।
03178009c ಮಾನುಷ್ಯಂ ಸ್ವರ್ಗವಾಸಶ್ಚ ತಿರ್ಯಗ್ಯೋನಿಶ್ಚ ತತ್ತ್ರಿಧಾ।।
ಸರ್ಪವು ಹೇಳಿತು: “ರಾಜನ್! ಸ್ವಕರ್ಮದಿಂದ ಈ ಮೂರು ಮಾರ್ಗಗಳಲ್ಲಿ ಸ್ವರ್ಗಕ್ಕೆ ಹೋಗಬಹುದು - ಮನುಷ್ಯನಾಗಿ ಹುಟ್ಟುವುದರಿಂದ, ಸ್ವರ್ಗದಲ್ಲಿ ವಾಸಿಸುವುದರಿಂದ ಮತ್ತು ಪ್ರಾಣಿಯಾಗಿ ಜನಿಸುವುದರಿಂದ.
03178010a ತತ್ರ ವೈ ಮಾನುಷಾಲ್ಲೋಕಾದ್ದಾನಾದಿಭಿರತಂದ್ರಿತಃ।
03178010c ಅಹಿಂಸಾರ್ಥಸಮಾಯುಕ್ತೈಃ ಕಾರಣೈಃ ಸ್ವರ್ಗಮಶ್ನುತೇ।।
ಅಲ್ಲಿಯೇ ದಾನಾದಿಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮತ್ತು ಅಹಿಂಸಾರ್ಥ ಸಮಾಯುಕ್ತರಾಗಿರುವುದರಿಂದ ಮಾನುಷಲೋಕದಿಂದ ಸ್ವರ್ಗವನ್ನು ಪಡೆಯುತ್ತಾರೆ.
03178011a ವಿಪರೀತೈಶ್ಚ ರಾಜೇಂದ್ರ ಕಾರಣೈರ್ಮಾನುಷೋ ಭವೇತ್।
03178011c ತಿರ್ಯಗ್ಯೋನಿಸ್ತಥಾ ತಾತ ವಿಶೇಷಶ್ಚಾತ್ರ ವಕ್ಷ್ಯತೇ।।
ರಾಜೇಂದ್ರ! ಅದಕ್ಕೆ ವಿಪರೀತಕಾರಣಗಳಿಂದ ಮನುಷ್ಯನು ಪ್ರಾಣಿಯೋನಿಯಲ್ಲಿ ಜನಿಸುತ್ತಾನೆ. ಮಗೂ! ನಾನು ಅದರ ವಿಶೇಷದ ಕುರಿತು ಹೇಳುತ್ತೇನೆ.
03178012a ಕಾಮಕ್ರೋಧಸಮಾಯುಕ್ತೋ ಹಿಂಸಾಲೋಭಸಮನ್ವಿತಃ।
03178012c ಮನುಷ್ಯತ್ವಾತ್ಪರಿಭ್ರಷ್ಟಸ್ತಿರ್ಯಗ್ಯೋನೌ ಪ್ರಸೂಯತೇ।।
ಕಾಮಕ್ರೋಧದಿಂದೊಡಗೂಡಿ ಹಿಂಸೆ ಮತ್ತು ಲೋಭಗಳನ್ನು ಹೊಂದಿದವನು ಮನುಷ್ಯತ್ವದಿಂದ ಪರಿಭ್ರಷ್ಟನಾಗಿ ತಿರ್ಯಗ್ಯೋನಿಗಳಲ್ಲಿ ಹುಟ್ಟುತ್ತಾನೆ.
03178013a ತಿರ್ಯಗ್ಯೋನ್ಯಾಂ ಪೃಥಗ್ಭಾವೋ ಮನುಷ್ಯತ್ವೇ ವಿಧೀಯತೇ।
03178013c ಗವಾದಿಭ್ಯಸ್ತಥಾಶ್ವೇಭ್ಯೋ ದೇವತ್ವಮಪಿ ದೃಶ್ಯತೇ।।
ಇದೇರೀತಿ ತ್ರಿರ್ಯಗ್ಯೋನಿಗಳಲ್ಲಿ ಹುಟ್ಟಿದವರು ಇವುಗಳಿಂದ ಮನುಷ್ಯತ್ವವನ್ನು ಪಡೆಯುತ್ತವೆ ಎಂದು ಹೇಳುತ್ತಾರೆ. ಗೋವುಗಳು, ಅಶ್ವಗಳು ದೇವತ್ವವನ್ನು ಪಡೆದುದು ಕಂಡುಬರುತ್ತವೆ.
03178014a ಸೋಽಯಮೇತಾ ಗತೀಃ ಸರ್ವಾ ಜಂತುಶ್ಚರತಿ ಕಾರ್ಯವಾನ್।
03178014c ನಿತ್ಯೇ ಮಹತಿ ಚಾತ್ಮಾನಮವಸ್ಥಾಪಯತೇ ನೃಪ।।
03178015a ಜಾತೋ ಜಾತಶ್ಚ ಬಲವಾನ್ಭುಂಕ್ತೇ ಚಾತ್ಮಾ ಸ ದೇಹವಾನ್।
03178015c ಫಲಾರ್ಥಸ್ತಾತ ನಿಷ್ಪೃಕ್ತಃ ಪ್ರಜಾಲಕ್ಷಣಭಾವನಃ।।
ಕರ್ವವನ್ನೆಸಗುವ ಎಲ್ಲ ಜಂತುಗಳೂ ಈ ಗತಿಯಲಿ ಚಲಿಸುತ್ತವೆ. ರಾಜನ್! ನಿತ್ಯವೂ ಮಹಾ ಆತ್ಮನನ್ನು ಸ್ಥಾಪಿಸುತ್ತಾರೆ. ಮಗೂ! ಜನ್ಮ ಜನ್ಮದಲ್ಲಿಯೂ ಬಲವಾನ್ ದೇಹವಾನ ಆತ್ಮವು ಫಲಾರ್ಥಗಳನ್ನು ಅನುಭವಿಸುತ್ತದೆ ಮತ್ತು ಆ ಪ್ರಾಣಿಯ ವೈಯಕ್ತಿಕ ಸ್ವರೂಪವನ್ನು ಹೊರಸೂಸುತ್ತದೆ.”
03178016 ಯುಧಿಷ್ಠಿರ ಉವಾಚ।
03178016a ಶಬ್ಧೇ ಸ್ಪರ್ಶೇ ಚ ರೂಪೇ ಚ ತಥೈವ ರಸಗಂಧಯೋಃ।
03178016c ತಸ್ಯಾಧಿಷ್ಠಾನಮವ್ಯಗ್ರಂ ಬ್ರೂಹಿ ಸರ್ಪ ಯಥಾತಥಂ।।
ಯುಧಿಷ್ಠಿರನು ಹೇಳಿದನು: “ಸರ್ಪವೇ! ಶಬ್ಧ, ಸ್ಪರ್ಶ, ರೂಪ, ರಸ ಮತ್ತು ಗಂಧಗಳಿಂದ ಆತ್ಮವು ಹೇಗೆ ವಿಕಾರಗಳಿಗೊಳಗಾಗದೇ ಇರುತ್ತದೆ ಎನ್ನುವುದನ್ನು ಯಥಾವತ್ತಾಗಿ ಹೇಳು.
03178017a ಕಿಂ ನ ಗೃಹ್ಣಾಸಿ ವಿಷಯಾನ್ಯುಗಪತ್ತ್ವಂ ಮಹಾಮತೇ।
03178017c ಏತಾವದುಚ್ಛತಾಂ ಚೋಕ್ತಂ ಸರ್ವಂ ಪನ್ನಗಸತ್ತಮ।।
ಮಹಾಮತೇ! ವಿಷಯಗಳನ್ನು ಒಟ್ಟಿಗೇ ಏಕೆ ಹಿಡಿದಿಟ್ಟುಕೊಂಡಿರುವುದಿಲ್ಲ? ಪನ್ನಗಸತ್ತಮ! ಸರ್ಪವೇ! ಇದರ ಕುರಿತು ಎಲ್ಲವನ್ನೂ ಹೇಳಬೇಕು.”
03178018 ಸರ್ಪ ಉವಾಚ।
03178018a ಯದಾತ್ಮದ್ರವ್ಯಮಾಯುಷ್ಮನ್ದೇಹಸಂಶ್ರಯಣಾನ್ವಿತಂ।
03178018c ಕರಣಾಧಿಷ್ಠಿತಂ ಭೋಗಾನುಪಭುಂಕ್ತೇ ಯಥಾವಿಧಿ।।
ಸರ್ಪವು ಹೇಳಿತು: “ಆಯುಷ್ಮನ್! ಆತ್ಮದ್ರವ್ಯವು ದೇಹವನ್ನು ಆಶ್ರಯಿಸಿ ಕರಣಗಳ ಮೂಲಕ ಯಥಾವಿಧಿಯಾಗಿ ಭೋಗಗಳನ್ನು ಭೋಗಿಸುತ್ತದೆ.
03178019a ಜ್ಞಾನಂ ಚೈವಾತ್ರ ಬುದ್ಧಿಶ್ಚ ಮನಶ್ಚ ಭರತರ್ಷಭ।
03178019c ತಸ್ಯ ಭೋಗಾಧಿಕರಣೇ ಕರಣಾನಿ ನಿಬೋಧ ಮೇ।।
ಭರತರ್ಷಭ! ಜ್ಞಾನ, ಬುದ್ಧಿ, ಮನಸ್ಸು ಮತ್ತು ಕರಣಗಳು ಅದರ ಬೋಗಾಧಿಕರಣಗಳು ಎಂದು ನನ್ನಿಂದ ತಿಳಿ.
03178020a ಮನಸಾ ತಾತ ಪರ್ಯೇತಿ ಕ್ರಮಶೋ ವಿಷಯಾನಿಮಾನ್।
03178020c ವಿಷಯಾಯತನಸ್ಥೇನ ಭೂತಾತ್ಮಾ ಕ್ಷೇತ್ರನಿಃಸೃತಃ।।
ಮಗೂ! ಯಾವುದೇ ವಿಷಯಗಳ ಮೇಲಿ ಹರಿದಿರುವ ಮನಸ್ಸಿನ ಮೂಲಕ ಭೂತಾತ್ಮನು ತನ್ನ ಕ್ಷೇತ್ರವನ್ನು ಬಿಟ್ಟು ಒಂದೊಂದಾಗಿ ವಿಷಯಗಳನ್ನು ಅನುಭವಿಸುತ್ತಾನೆ.
03178021a ಅತ್ರ ಚಾಪಿ ನರವ್ಯಾಘ್ರ ಮನೋ ಜಂತೋರ್ವಿಧೀಯತೇ।
03178021c ತಸ್ಮಾದ್ಯುಗಪದಸ್ಯಾತ್ರ ಗ್ರಹಣಂ ನೋಪಪದ್ಯತೇ।।
ನರವ್ಯಾಘ್ರ! ಜಂತುವಿನ ಮನಸ್ಸು ಒಂದು ಕಾಲದಲ್ಲಿ ಒಂದೇ ಒಂದು ವಿಷಯದ ಕುರಿತು ಯೋಚಿಸಬಲ್ಲದು. ಅದು ಸಮಗ್ರವಾಗಿ ಎಲ್ಲವನ್ನೂ ಗ್ರಹಿಸಲು ಸಾಧ್ಯವಾಗುವುದಿಲ್ಲ.
03178022a ಸ ಆತ್ಮಾ ಪುರುಷವ್ಯಾಘ್ರ ಭ್ರುವೋರಂತರಮಾಶ್ರಿತಃ।
03178022c ದ್ರವ್ಯೇಷು ಸೃಜತೇ ಬುದ್ಧಿಂ ವಿವಿಧೇಷು ಪರಾವರಾಂ।।
ಪುರುಷವ್ಯಾಘ್ರ! ಹುಬ್ಬುಗಳ ಮಧ್ಯದಲ್ಲಿ ನೆಲೆಸಿರುವ ಆತ್ಮನು ವಿವಿಧ ದ್ರವ್ಯಗಳ ಮೇಲೆ ಬುದ್ಧಿಯನ್ನು ಬಿಡುತ್ತಾನೆ.
03178023a ಬುದ್ಧೇರುತ್ತರಕಾಲಂ ಚ ವೇದನಾ ದೃಶ್ಯತೇ ಬುಧೈಃ।
03178023c ಏಷ ವೈ ರಾಜಶಾರ್ದೂಲ ವಿಧಿಃ ಕ್ಷೇತ್ರಜ್ಞಭಾವನಃ।।
ರಾಜಶಾರ್ದೂಲ! ಬುದ್ಧಿಯ ನಂತರವೇ ವೇದನೆಯಾಗುತ್ತದೆ ಎಂದು ತಿಳಿದವರು ಕಂಡುಕೊಂಡಿದ್ದಾರೆ. ಇದೇ ಕ್ಷೇತ್ರಭಾವನನ ವಿಧಿ.”
03178024 ಯುಧಿಷ್ಠಿರ ಉವಾಚ।
03178024a ಮನಸಶ್ಚಾಪಿ ಬುದ್ಧೇಶ್ಚ ಬ್ರೂಹಿ ಮೇ ಲಕ್ಷಣಂ ಪರಂ।
03178024c ಏತದಧ್ಯಾತ್ಮವಿದುಷಾಂ ಪರಂ ಕಾರ್ಯಂ ವಿಧೀಯತೇ।।
ಯುಧಿಷ್ಠಿರನು ಹೇಳಿದನು: “ಮನಸ್ಸು ಮತ್ತು ಬುದ್ಧಿಗಳ ಪರಮ ಲಕ್ಷಣಗಳನ್ನು ನನಗೆ ಹೇಳು. ಇದು ಆಧ್ಯಾತ್ಮ ವಿದುಶರ ಪರಮ ಕಾರ್ಯವೆಂದು ತಿಳಿಯಲ್ಪಟ್ಟಿದೆ.”
03178025 ಸರ್ಪ ಉವಾಚ।
03178025a ಬುದ್ಧಿರಾತ್ಮಾನುಗಾ ತಾತ ಉತ್ಪಾತೇನ ವಿಧೀಯತೇ।
03178025c ತದಾಶ್ರಿತಾ ಹಿ ಸಂಜ್ಞೈಷಾ ವಿಧಿಸ್ತಸ್ಯೈಷಣೇ ಭವೇತ್।।
ಸರ್ಪವು ಹೇಳಿತು: “ಮಗೂ! ಉತ್ಪಾತದಿಂದ ಬುದ್ಧಿಯು ಆತ್ಮನನ್ನು ಹಿಂಬಾಲಿಸುತ್ತದೆ ಎಂದು ತಿಳಿದಿದೆ. ಈ ಸಂಜ್ಞೆಯು ಅದನ್ನೇ ಅಶ್ರಯಿಸುತ್ತದೆ ಮತ್ತು ವಿಧಿಯೂ ಇದರಿಂದಲೇ ಆಗುತ್ತದೆ.
03178026a ಬುದ್ಧೇರ್ಗುಣವಿಧಿರ್ನಾಸ್ತಿ ಮನಸ್ತು ಗುಣವದ್ಭವೇತ್।
03178026c ಬುದ್ಧಿರುತ್ಪದ್ಯತೇ ಕಾರ್ಯೇ ಮನಸ್ತೂತ್ಪನ್ನಮೇವ ಹಿ।।
ಬುದ್ಧಿಯು ಗುಣಗಳ ಅಧೀನದಲ್ಲಿಲ್ಲ. ಆದರೆ ಮನಸ್ಸು ಗುಣಗಳ ಅಧೀನದಲ್ಲಿರುತ್ತದೆ. ಬುದ್ಧಿಯು ಕಾರ್ಯದಲ್ಲಿ ಹುಟ್ಟುತ್ತದೆ. ಮನಸ್ಸೂ ಅದರಿಂದಲೇ ಹುಟ್ಟುತ್ತದೆ.
03178027a ಏತದ್ವಿಶೇಷಣಂ ತಾತ ಮನೋಬುದ್ಧ್ಯೋರ್ಮಯೇರಿತಂ।
03178027c ತ್ವಮಪ್ಯತ್ರಾಭಿಸಂಬುದ್ಧಃ ಕಥಂ ವಾ ಮನ್ಯತೇ ಭವಾನ್।।
ಮಗೂ! ಮನಸ್ಸು ಮತ್ತು ಬುದ್ಧಿಯು ಹೇಗೆ ಬೇರೆ ಎನ್ನುವುದನ್ನು ನಾನು ನಿನಗೆ ಹೇಳಿದ್ದೇನೆ. ನೀನೂ ಕೂಡ ಈ ವಿಷಯದಲ್ಲಿ ಚೆನ್ನಾಗಿ ತಿಳಿದುಕೊಂಡಿದ್ದೀಯೆ. ನಿನ್ನ ಅಭಿಪ್ರಾಯವೇನು?”
03178028 ಯುಧಿಷ್ಠಿರ ಉವಾಚ।
03178028a ಅಹೋ ಬುದ್ಧಿಮತಾಂ ಶ್ರೇಷ್ಠ ಶುಭಾ ಬುದ್ಧಿರಿಯಂ ತವ।
03178028c ವಿದಿತಂ ವೇದಿತವ್ಯಂ ತೇ ಕಸ್ಮಾನ್ಮಾಮನುಪೃಚ್ಚಸಿ।।
ಯುಧಿಷ್ಠಿರನು ಹೇಳಿದನು: “ಅಹೋ! ಬುದ್ಧಿಮತರಲ್ಲಿ ಶ್ರೇಷ್ಠನೇ! ಇದರಲ್ಲಿ ನಿನ್ನ ಬುದ್ಧಿಯು ಸುಂದರವಾಗಿದೆ. ತಿಳಿಯಬೇಕಾದುದನ್ನು ನೀನು ತಿಳಿದಿರುವೆ. ನನ್ನನ್ನು ಏಕೆ ಕೇಳುತ್ತಿದ್ದೀಯೆ?
03178029a ಸರ್ವಜ್ಞಂ ತ್ವಾಂ ಕಥಂ ಮೋಹ ಆವಿಶತ್ಸ್ವರ್ಗವಾಸಿನಂ।
03178029c ಏವಮದ್ಭುತಕರ್ಮಾಣಮಿತಿ ಮೇ ಸಂಶಯೋ ಮಹಾನ್।।
ಸರ್ವಜ್ಞನಾದ, ಈ ರೀತಿ ಅದ್ಭುತಕರ್ಮಗಳನ್ನು ಮಾಡಿದ ನಿನ್ನನ್ನು ಸ್ವರ್ಗದಲ್ಲಿ ವಾಸಿಸುತ್ತಿರುವಾಗ ಮೋಹವು ಹೇಗೆ ಆವರಿಸಿತು? ಇದರಲ್ಲಿ ನನಗೆ ಮಹಾ ಸಂಶಯವಿದೆ.”
03178030 ಸರ್ಪ ಉವಾಚ।
03178030a ಸುಪ್ರಜ್ಞಮಪಿ ಚೇಚ್ಛೂರಂ ಋದ್ಧಿರ್ಮೋಹಯತೇ ನರಂ।
03178030c ವರ್ತಮಾನಃ ಸುಖೇ ಸರ್ವೋ ನಾವೈತೀತಿ ಮತಿರ್ಮಮ।।
ಸರ್ಪವು ಹೇಳಿತು: “ಎಷ್ಟೇ ಸುಪ್ರಜ್ಞನಾಗಿದ್ದರೂ ಮತ್ತು ಶೂರನಾಗಿದ್ದರೂ ಸಂಪತ್ತು ಮನುಷ್ಯನನ್ನು ಮೋಹಿಸುತ್ತದೆ. ನನ್ನ ಪ್ರಕಾರ ವರ್ತಮಾನದಲ್ಲಿ ಸುಖವಾಗಿರುವರೆಲ್ಲರೂ ವಿವೇಕದಲ್ಲಿ ಕಡಿಮೆಯಾಗುತ್ತಾರೆ.
03178031a ಸೋಽಹಮೈಶ್ವರ್ಯಮೋಹೇನ ಮದಾವಿಷ್ಟೋ ಯುಧಿಷ್ಠಿರ।
03178031c ಪತಿತಃ ಪ್ರತಿಸಂಬುದ್ಧಸ್ತ್ವಾಂ ತು ಸಂಬೋಧಯಾಮ್ಯಹಂ।।
ಯುಧಿಷ್ಠಿರ! ಹಾಗೆಯೇ ನಾನು ಐಶ್ವರ್ಯಮೋಹದಿಂದ ಮದಾವಿಷ್ಟನಾಗಿ ಪತಿತನಾದೆ. ಸರಿಯಾಗಿ ತಿಳಿದುಕೊಂಡ ನಾನು ಈಗ ಸರಿಯಾದ ತಿಳುವಳಿಕೆಯನ್ನು ಕೊಡುತ್ತಿರುವೆನು.
03178032a ಕೃತಂ ಕಾರ್ಯಂ ಮಹಾರಾಜ ತ್ವಯಾ ಮಮ ಪರಂತಪ।
03178032c ಕ್ಷೀಣಃ ಶಾಪಃ ಸುಕೃಚ್ಚ್ರೋ ಮೇ ತ್ವಯಾ ಸಂಭಾಷ್ಯ ಸಾಧುನಾ।।
ಮಹಾರಾಜ! ಪರಂತಪ! ನಿನ್ನಂಥಹ ಸಾಧುವಿನೊಂದಿಗೆ ಸಂಭಾಷಿಸಿ ನನ್ನ ಈ ದಾರುಣ ಶಾಪವು ಕ್ಷೀಣವಾಯಿತು.
03178033a ಅಹಂ ಹಿ ದಿವಿ ದಿವ್ಯೇನ ವಿಮಾನೇನ ಚರನ್ಪುರಾ।
03178033c ಅಭಿಮಾನೇನ ಮತ್ತಃ ಸನ್ಕಂ ಚಿನ್ನಾನ್ಯಮಚಿಂತಯಂ।।
ಹಿಂದೆ ನಾನು ದಿವಿಯಲ್ಲಿ ದಿವ್ಯ ವಿಮಾನದಲ್ಲಿ ಸಂಚರಿಸುತ್ತಿರುವಾಗ ಅಭಿಮಾನದಿಂದ ಮತ್ತನಾಗಿ ಅನ್ಯರ ಕುರಿತು ಸ್ವಲ್ಪವೂ ಯೋಚಿಸುತ್ತಿರಲಿಲ್ಲ.
03178034a ಬ್ರಹ್ಮರ್ಷಿದೇವಗಂಧರ್ವಯಕ್ಷರಾಕ್ಷಸಕಿನ್ನರಾಃ।
03178034c ಕರಾನ್ಮಮ ಪ್ರಯಚ್ಚಂತಿ ಸರ್ವೇ ತ್ರೈಲೋಕ್ಯವಾಸಿನಃ।।
ಬ್ರಹ್ಮರ್ಷಿಗಳು, ದೇವತೆಗಳು, ಗಂಧರ್ವರು, ಯಕ್ಷರು, ರಾಕ್ಷಸರು, ಕಿನ್ನರರು ಮತ್ತು ಎಲ್ಲ ತ್ರೈಲೋಕ್ಯವಾಸಿಗಳೂ ನನಗೆ ಕರವನ್ನು ಪ್ರದಾನಿಸುತ್ತಿದ್ದರು.
03178035a ಚಕ್ಷುಷಾ ಯಂ ಪ್ರಪಶ್ಯಾಮಿ ಪ್ರಾಣಿನಂ ಪೃಥಿವೀಪತೇ।
03178035c ತಸ್ಯ ತೇಜೋ ಹರಾಮ್ಯಾಶು ತದ್ಧಿ ದೃಷ್ಟಿಬಲಂ ಮಮ।।
ಪೃಥಿವೀಪತೇ! ಯಾವ ಪ್ರಾಣಿಯ ಮೇಲೆ ನನ್ನ ಕಣ್ಣುಗಳು ಬೀಳುತ್ತಿದ್ದವೋ ಅದರ ತೇಜಸ್ಸನ್ನು ಅಪಹರಿಸುತ್ತಿದ್ದೆ. ನನ್ನ ದೃಷ್ಟಿಬಲವು ಅಂಥಹದಾಗಿತ್ತು.
03178036a ಬ್ರಹ್ಮರ್ಷೀಣಾಂ ಸಹಸ್ರಂ ಹಿ ಉವಾಹ ಶಿಬಿಕಾಂ ಮಮ।
03178036c ಸ ಮಾಮಪನಯೋ ರಾಜನ್ಭ್ರಂಶಯಾಮಾಸ ವೈ ಶ್ರಿಯಃ।।
ಸಹಸ್ರಾರು ಬ್ರಹ್ಮರ್ಷಿಗಳು ನನ್ನ ಶಿಬಿಕೆಯನ್ನು ಹೊರುತ್ತಿದ್ದರು. ರಾಜನ್! ಅವರಿಗೆ ನಾನು ಮಾಡಿದ ಅಪಮಾನವೇ ನನ್ನನ್ನು ಸಂಪತ್ತಿನಿಂದ ಕೆಳಗುರುಳಿಸಿತು.
03178037a ತತ್ರ ಹ್ಯಗಸ್ತ್ಯಃ ಪಾದೇನ ವಹನ್ಸ್ಪೃಷ್ಟೋ ಮಯಾ ಮುನಿಃ।
03178037c ಅದೃಷ್ಟೇನ ತತೋಽಸ್ಮ್ಯುಕ್ತೋ ಧ್ವಂಸ ಸರ್ಪೇತಿ ವೈ ರುಷಾ।।
03178038a ತತಸ್ತಸ್ಮಾದ್ವಿಮಾನಾಗ್ರಾತ್ಪ್ರಚ್ಯುತಶ್ಚ್ಯುತಭೂಷಣಃ।
03178038c ಪ್ರಪತನ್ಬುಬುಧೇಽತ್ಮಾನಂ ವ್ಯಾಲೀಭೂತಮಧೋಮುಖಂ।।
ಅಲ್ಲಿ ಅಗಸ್ತ್ಯ ಮುನಿಯು ನನ್ನನ್ನು ಹೊತ್ತು ನಡೆಯುತ್ತಿರಲು ನಾನು ಅವನನ್ನು ಪಾದದಿಂದ ಒದೆದನು. ಆಗ “ಸರ್ಪ! ಧ್ವಂಸನಾಗು!” ಎಂದು ಸಿಟ್ಟಿನಿಂದ ನುಡಿದ ಅದೃಶ್ಯ ವಾಣಿಯು ಕೇಳಿಬಂದಿತು. ಅದೇ ಕ್ಷಣದಲ್ಲಿ ನನ್ನ ಕುಂದಿಲ್ಲದ ಆಭೂಷಣಗಳು ವಿಮಾನದಿಂದ ಕೆಳಗೆ ಬಿದ್ದಿತು. ನಾನೂ ಕೂಡ ಹೆಬ್ಬಾವಾಗಿ ಕೆಳಗೆ ಬೀಳುತ್ತಿರುವ ಅರಿವು ನನಗಾಯಿತು.
03178039a ಅಯಾಚಂ ತಮಹಂ ವಿಪ್ರಂ ಶಾಪಸ್ಯಾಂತೋ ಭವೇದಿತಿ।
03178039c ಅಜ್ಞಾನಾತ್ಸಂಪ್ರವೃತ್ತಸ್ಯ ಭಗವನ್ ಕ್ಷಂತುಮರ್ಹಸಿ।।
ನಾನು ಆ ವಿಪ್ರನಲ್ಲಿ ಯಾಚಿಸಿದೆ: “ಈ ಶಾಪಕ್ಕೆ ಕೊನೆಯಿರಲಿ! ಭಗವನ್! ಅಜ್ಞಾನದಿಂದ ನಡೆದುಕೊಂಡಿದ್ದುದನ್ನು ಕ್ಷಮಿಸಬೇಕು.”
03178040a ತತಃ ಸ ಮಾಮುವಾಚೇದಂ ಪ್ರಪತಂತಂ ಕೃಪಾನ್ವಿತಃ।
03178040c ಯುಧಿಷ್ಠಿರೋ ಧರ್ಮರಾಜಃ ಶಾಪಾತ್ತ್ವಾಂ ಮೋಕ್ಷಯಿಷ್ಯತಿ।।
ಬೀಳುತ್ತಿರುವಾಗಲೇ ಕೃಪಾನ್ವಿತನಾದ ಅವನು ನನಗೆ ಇದನ್ನು ಹೇಳಿದನು: “ಧರ್ಮರಾಜ ಯುಧಿಷ್ಠಿರನು ನಿನ್ನನ್ನು ಶಾಪದಿಂದ ಬೆಡುಗಡೆಮಾಡುತ್ತಾನೆ.
03178041a ಅಭಿಮಾನಸ್ಯ ಘೋರಸ್ಯ ಬಲಸ್ಯ ಚ ನರಾಧಿಪ।
03178041c ಫಲೇ ಕ್ಷೀಣೇ ಮಹಾರಾಜ ಫಲಂ ಪುಣ್ಯಮವಾಪ್ಸ್ಯಸಿ।।
ನರಾಧಿಪ! ಮಹಾರಾಜ! ನಿನ್ನ ಘೋರ ಅಭಿಮಾನ ಮತ್ತು ಬಲಗಳ ಫಲವು ಕ್ಷೀಣವಾದಾಗ ಪುಣ್ಯಫಲವನ್ನು ಹೊಂದುತ್ತೀಯೆ.”
03178042a ತತೋ ಮೇ ವಿಸ್ಮಯೋ ಜಾತಸ್ತದ್ದೃಷ್ಟ್ವಾ ತಪಸೋ ಬಲಂ।
03178042c ಬ್ರಹ್ಮ ಚ ಬ್ರಾಹ್ಮಣತ್ವಂ ಚ ಯೇನ ತ್ವಾಹಮಚೂಚುದಂ।।
ತಪಸ್ಸಿನ ಬಲವನ್ನು ನೋಡಿ ನಾನು ವಿಸ್ಮಿತನಾದೆನು. ಆದುದರಿಂದಲೇ ನಾನು ನಿನ್ನಲ್ಲಿ ಬ್ರಹ್ಮ ಮತ್ತು ಬ್ರಾಹ್ಮಣತ್ವದ ಕುರಿತು ಕೇಳಿದೆನು.
03178043a ಸತ್ಯಂ ದಮಸ್ತಪೋ ಯೋಗಮಹಿಂಸಾ ದಾನನಿತ್ಯತಾ।
03178043c ಸಾಧಕಾನಿ ಸದಾ ಪುಂಸಾಂ ನ ಜಾತಿರ್ನ ಕುಲಂ ನೃಪ।।
ನೃಪ! ಸತ್ಯ, ತಮ, ತಪಸ್ಸು, ಯೋಗ, ಅಹಿಂಸ, ನಿತ್ಯ ದಾನ ಇವು ಸದಾ ಪುರುಷನ ಸಾಧಕಗಳು. ಜಾತಿ ಅಥವಾ ಕುಲಗಳಲ್ಲ.
03178044a ಅರಿಷ್ಟ ಏಷ ತೇ ಭ್ರಾತಾ ಭೀಮೋ ಮುಕ್ತೋ ಮಹಾಭುಜಃ।
03178044c ಸ್ವಸ್ತಿ ತೇಽಸ್ತು ಮಹಾರಾಜ ಗಮಿಷ್ಯಾಮಿ ದಿವಂ ಪುನಃ।।
ನಿನ್ನ ತಮ್ಮ ಮಹಾಭುಜ ಭೀಮನು ಪೆಟ್ಟು ತಿನ್ನದೇ ಬಿಡುಗಡೆಹೊಂದಿದ್ದಾನೆ. ಮಹರಾಜ! ನಿನಗೆ ಮಂಗಳವಾಗಲಿ. ನಾನು ಪುನಃ ದೇವಲೋಕಕ್ಕೆ ಹೋಗುತ್ತೇನೆ.””
03178045 ವೈಶಂಪಾಯನ ಉವಾಚ।
03178045a ಇತ್ಯುಕ್ತ್ವಾಜಗರಂ ದೇಹಂ ತ್ಯಕ್ತ್ವಾ ಸ ನಹುಷೋ ನೃಪಃ।
03178045c ದಿವ್ಯಂ ವಪುಃ ಸಮಾಸ್ಥಾಯ ಗತಸ್ತ್ರಿದಿವಮೇವ ಹ।।
03178046a ಯುಧಿಷ್ಠಿರೋಽಪಿ ಧರ್ಮಾತ್ಮಾ ಭ್ರಾತ್ರಾ ಭೀಮೇನ ಸಂಗತಃ।
03178046c ಧೌಮ್ಯೇನ ಸಹಿತಃ ಶ್ರೀಮಾನಾಶ್ರಮಂ ಪುನರಭ್ಯಗಾತ್।।
ವೈಶಂಪಾಯನನು ಹೇಳಿದನು: “ಹೀಗೆ ಹೇಳಿ ನೃಪ ನಹುಷನು ಅಜಗರನ ದೇಹವನ್ನು ತ್ಯಜಿಸಿ ದಿವ್ಯ ದೇಹವನ್ನು ಧರಿಸಿ ತ್ರಿದಿವಕ್ಕೆ ಹೋದನು. ಧರ್ಮಾತ್ಮ ಶ್ರೀಮಾನ್ ಯುಧಿಷ್ಠಿರನೂ ಕೂಡ ತಮ್ಮ ಭೀಮನನ್ನು ಸೇರಿ, ಧೌಮ್ಯನ ಸಹಿತ ಆಶ್ರಮಕ್ಕೆ ಮರಳಿ ಹೋದನು.
03178047a ತತೋ ದ್ವಿಜೇಭ್ಯಃ ಸರ್ವೇಭ್ಯಃ ಸಮೇತೇಭ್ಯೋ ಯಥಾತಥಂ।
03178047c ಕಥಯಾಮಾಸ ತತ್ಸರ್ವಂ ಧರ್ಮರಾಜೋ ಯುಧಿಷ್ಠಿರಃ।।
ಆಗ ಧರ್ಮರಾಜ ಯುಧಿಷ್ಠಿರನು ಅವೆಲ್ಲವನ್ನೂ ಯಥಾವತ್ತಾಗಿ ಅಲ್ಲಿ ಸೇರಿದ್ದ ಎಲ್ಲ ಬ್ರಾಹ್ಮಣರಿಗೆ ವರದಿಮಾಡಿದನು.
03178048a ತಚ್ಛೃತ್ವಾ ತೇ ದ್ವಿಜಾಃ ಸರ್ವೇ ಭ್ರಾತರಶ್ಚಾಸ್ಯ ತೇ ತ್ರಯಃ।
03178048c ಆಸನ್ಸುವ್ರೀಡಿತಾ ರಾಜನ್ದ್ರೌಪದೀ ಚ ಯಶಸ್ವಿನೀ।।
ರಾಜನ್! ಅದನ್ನು ಕೇಳಿದ ದ್ವಿಜರೆಲ್ಲರೂ, ಅವನ ಮೂವರು ತಮ್ಮಂದಿರೂ, ಮತ್ತು ಯಶಸ್ವಿನಿ ದ್ರೌಪದಿಯೂ ಕೂಡ ಸುವ್ರೀಡರಾದರು.
03178049a ತೇ ತು ಸರ್ವೇ ದ್ವಿಜಶ್ರೇಷ್ಠಾಃ ಪಾಂಡವಾನಾಂ ಹಿತೇಪ್ಸಯಾ।
03178049c ಮೈವಮಿತ್ಯಬ್ರುವನ್ಭೀಮಂ ಗರ್ಹಯಂತೋಽಸ್ಯ ಸಾಹಸಂ।।
03178050a ಪಾಂಡವಾಸ್ತು ಭಯಾನ್ಮುಕ್ತಂ ಪ್ರೇಕ್ಷ್ಯ ಭೀಮಂ ಮಹಾಬಲಂ।
03178050c ಹರ್ಷಮಾಹಾರಯಾಂ ಚಕ್ರುರ್ವಿಜಹ್ರುಶ್ಚ ಮುದಾ ಯುತಾಃ।।
ಪಾಂಡವರ ಹಿತವನ್ನೇ ಬಯಸುತ್ತಿದ್ದ ಆ ಎಲ್ಲ ದ್ವಿಜಶ್ರೇಷ್ಠರೂ ಭೀಮನ ಸಾಹಸವನ್ನು ಹಳಿದರು ಮತ್ತು ಹಾಗೆ ಮಾಡಬಾರದೆಂದು ಹೇಳಿದರು. ಪಾಂಡವರಾದರೋ ಮಹಾಬಲ ಭೀಮನು ಭಯದಿಂದ ಮುಕ್ತನಾದುದನ್ನು ನೋಡಿ ತಮ್ಮ ಹರ್ಷವನ್ನು ತೋರಿಕೊಂಡರು ಮತ್ತು ಒಟ್ಟಿಗೇ ಸಂತೋಷಪಟ್ಟರು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವಣಿ ಭೀಮಮೋಚನೇ ಅಷ್ಟಸಪ್ತತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವದಲ್ಲಿ ಭೀಮಮೋಚನದಲ್ಲಿ ನೂರಾಎಪ್ಪತ್ತೆಂಟನೆಯ ಅಧ್ಯಾಯವು.
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವವು.
ಇದೂವರೆಗಿನ ಒಟ್ಟು ಮಹಾಪರ್ವಗಳು-2/18, ಉಪಪರ್ವಗಳು-36/100, ಅಧ್ಯಾಯಗಳು-475/1995, ಶ್ಲೋಕಗಳು-15720/73784.