ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಅಜಗರ ಪರ್ವ
ಅಧ್ಯಾಯ 177
ಸಾರ
ವಿಷಯವನ್ನು ತಿಳಿದುಕೊಂಡ ಯುಧಿಷ್ಠಿರನು ತಾನು ಪ್ರಶ್ನೆಗಳಿಗೆ ಉತ್ತರಿಸುವುದಾಗಿ ಅಜಗರನಿಗೆ ಹೇಳುವುದು (1-14). ಅಜಗರನ ಪ್ರಶ್ನೆಗಳಿಗೆ ಯುಧಿಷ್ಠಿರನು ಸಮಂಜಸವಾದ ಉತ್ತರಗಳನ್ನು ಕೊಟ್ಟಿದುದು (15-33).
03177001 ವೈಶಂಪಾಯನ ಉವಾಚ।
03177001a ಯುಧಿಷ್ಠಿರಸ್ತಮಾಸಾದ್ಯ ಸರ್ಪಭೋಗಾಭಿವೇಷ್ಟಿತಂ।
03177001c ದಯಿತಂ ಭ್ರಾತರಂ ವೀರಮಿದಂ ವಚನಮಬ್ರವೀತ್।।
ವೈಶಂಪಾಯನನು ಹೇಳಿದನು: “ಸರ್ಪದ ಸುರುಳಿಯಿಂದ ಸುತ್ತುವರೆಯಲ್ಪಟ್ಟಿದ್ದ ತನ್ನ ಪ್ರೀತಿಯ ತಮ್ಮ ವೀರನ ಸಮೀಪ ಸಾರಿ ಯುಧಿಷ್ಠಿರನು ಈ ಮಾತುಗಳನ್ನಾಡಿದನು:
03177002a ಕುಂತೀಮಾತಃ ಕಥಮಿಮಾಮಾಪದಂ ತ್ವಮವಾಪ್ತವಾನ್।
03177002c ಕಶ್ಚಾಯಂ ಪರ್ವತಾಭೋಗಪ್ರತಿಮಃ ಪನ್ನಗೋತ್ತಮಃ।।
“ಕುಂತಿಯ ಮಗನೇ! ಈ ಆಪತ್ತಿನಲ್ಲಿ ಹೇಗೆ ಸಿಕ್ಕಿಕೊಂಡೆ? ಮತ್ತು ಪರ್ವತೋಪಾದಿಯಲ್ಲಿ ಕಾಣುತ್ತಿರುವ ಈ ಪನ್ನಗೋತ್ತಮನು ಯಾರು?”
03177003a ಸ ಧರ್ಮರಾಜಮಾಲಕ್ಷ್ಯ ಭ್ರಾತಾ ಭ್ರಾತರಮಗ್ರಜಂ।
03177003c ಕಥಯಾಮಾಸ ತತ್ಸರ್ವಂ ಗ್ರಹಣಾದಿ ವಿಚೇಷ್ಟಿತಂ।।
ಹಿರಿಯ ಅಣ್ಣ ಧರ್ಮರಾಜನನ್ನು ಕಂಡು ತಮ್ಮನು ಹೆಬ್ಬಾವು ಹಿಡಿದಿದುರಿಂದ ನಡೆದುದೆಲ್ಲವನ್ನೂ ಹೇಳಿದನು.
03177004 ಯುಧಿಷ್ಠಿರ ಉವಾಚ।
03177004a ದೇವೋ ವಾ ಯದಿ ವಾ ದೈತ್ಯ ಉರಗೋ ವಾ ಭವಾನ್ಯದಿ।
03177004c ಸತ್ಯಂ ಸರ್ಪ ವಚೋ ಬ್ರೂಹಿ ಪೃಚ್ಚತಿ ತ್ವಾಂ ಯುಧಿಷ್ಠಿರಃ।।
ಯುಧಿಷ್ಠಿರನು ಹೇಳಿದನು: “ಸರ್ಪವೇ! ನೀನು ದೇವನೋ, ದೈತ್ಯನೋ ಅಥವಾ ಉರಗನೋ ಸತ್ಯವನ್ನು ಹೇಳು. ಯುಧಿಷ್ಠಿರನು ನಿನ್ನನ್ನು ಕೇಳುತ್ತಿದ್ದಾನೆ.
03177005a ಕಿಮಾಹೃತ್ಯ ವಿದಿತ್ವಾ ವಾ ಪ್ರೀತಿಸ್ತೇ ಸ್ಯಾದ್ಭುಜಂಗಮ।
03177005c ಕಿಮಾಹಾರಂ ಪ್ರಯಚ್ಚಾಮಿ ಕಥಂ ಮುಂಚೇದ್ಭವಾನಿಮಂ।।
ಭುಜಂಗಮ! ಏನನ್ನು ತರುವುದರಿಂದ ಅಥವಾ ತಿಳಿಸುವುದರಿಂದ ನೀನು ಸಂತೋಷ ಹೊಂದುತ್ತೀಯೆ? ನಿನಗೆ ಯಾವ ಆಹಾರವನ್ನು ತಂದು ಕೊಟ್ಟರೆ ಇವನನ್ನು ಬಿಡುಗಡೆಮಾಡುತ್ತೀಯೆ?”
03177006 ಸರ್ಪ ಉವಾಚ।
03177006a ನಹುಷೋ ನಾಮ ರಾಜಾಹಮಾಸಂ ಪೂರ್ವಸ್ತವಾನಘ।
03177006c ಪ್ರಥಿತಃ ಪಂಚಮಃ ಸೋಮಾದಾಯೋಃ ಪುತ್ರೋ ನರಾಧಿಪ।।
ಸರ್ಪವು ಹೇಳಿತು: “ಅನಘ! ನರಾಧಿಪ! ನಾನು ಹಿಂದೆ ನಿನ್ನ ಪೂರ್ವಜ ನಹುಷ ಎಂಬ ಹೆಸರಿನ ರಾಜನಾಗಿದ್ದೆ. ಚಂದ್ರನಿಂದ ಐದನೆಯವನಾದ ಆಯುವಿನ ಮಗ.
03177007a ಕ್ರತುಭಿಸ್ತಪಸಾ ಚೈವ ಸ್ವಾಧ್ಯಾಯೇನ ದಮೇನ ಚ।
03177007c ತ್ರೈಲೋಕ್ಯೈಶ್ವರ್ಯಮವ್ಯಗ್ರಂ ಪ್ರಾಪ್ತೋ ವಿಕ್ರಮಣೇನ ಚ।।
ಕ್ರತು, ತಪಸ್ಸು, ಸ್ವಾಧ್ಯಾಯ, ದಮ ಮತ್ತು ವಿಕ್ರಮಗಳಿಂದ ಅವ್ಯಗ್ರ ತ್ರೈಲೋಕ್ಯದ ಅಧಿಪತ್ಯವನ್ನು ಪಡೆದೆನು.
03177008a ತದೈಶ್ವರ್ಯಂ ಸಮಾಸಾದ್ಯ ದರ್ಪೋ ಮಾಮಗಮತ್ತದಾ।
03177008c ಸಹಸ್ರಂ ಹಿ ದ್ವಿಜಾತೀನಾಮುವಾಹ ಶಿಬಿಕಾಂ ಮಮ।।
ಆ ಐಶ್ವರ್ಯವನ್ನು ಪಡೆದು ನನಗೆ ದರ್ಪವುಂಟಾಯಿತು. ಸಹಸ್ರಾರು ದ್ವಿಜರಿಗೆ ನನ್ನ ಶಿಬಿಕೆಯನ್ನು ಹೊರಲು ಹೇಳಿದೆನು.
03177009a ಐಶ್ವರ್ಯಮದಮತ್ತೋಽಹಮವಮನ್ಯ ತತೋ ದ್ವಿಜಾನ್।
03177009c ಇಮಾಮಗಸ್ತ್ಯೇನ ದಶಾಮಾನೀತಃ ಪೃಥಿವೀಪತೇ।।
03177010a ನ ತು ಮಾಮಜಹಾತ್ಪ್ರಜ್ಞಾ ಯಾವದದ್ಯೇತಿ ಪಾಂಡವ।
03177010c ತಸ್ಯೈವಾನುಗ್ರಹಾದ್ರಾಜನ್ನಗಸ್ತ್ಯಸ್ಯ ಮಹಾತ್ಮನಃ।।
ಪೃಥಿವೀಪತೇ! ಐಶ್ವರ್ಯಮದಮತ್ತನಾದ ನಾನು ದ್ವಿಜರನ್ನು ಈ ರೀತಿ ಅಪಮಾನಿಸಲು ಅಗಸ್ತ್ಯನು ನನಗೆ ಈ ದಶೆಯನ್ನಿತ್ತನು. ಪಾಂಡವ! ರಾಜನ್! ಆದರೂ ಅದೇ ಮಹಾತ್ಮ ಅಗಸ್ತ್ಯನ ಅನುಗ್ರಹದಿಂದ ನನ್ನ ಪ್ರಜ್ಞೆಯು ಮೊದಲಿನ ಹಾಗೆಯೇ ಇದೆ.
03177011a ಷಷ್ಠೇ ಕಾಲೇ ಮಮಾಹಾರಃ ಪ್ರಾಪ್ತೋಽಯಮನುಜಸ್ತವ।
03177011c ನಾಹಮೇನಂ ವಿಮೋಕ್ಷ್ಯಾಮಿ ನ ಚಾನ್ಯಮಭಿಕಾಮಯೇ।।
ದಿನದ ಆರನೆಯ ಗಳಿಗೆಯಲ್ಲಿ ನಿನ್ನ ಅನುಜನು ನನ್ನ ಆಹಾರವಾಗಿ ದೊರಕಿದನು. ನಾನು ಇವನನ್ನು ಬಿಡುವುದಿಲ್ಲ ಮತ್ತು ನನಗೆ ಬೇರೆ ಯಾವುದೇ ಆಹಾರದ ಬಯಕೆಯೂ ಇಲ್ಲ.
03177012a ಪ್ರಶ್ನಾನುಚ್ಚಾರಿತಾಂಸ್ತು ತ್ವಂ ವ್ಯಾಹರಿಷ್ಯಸಿ ಚೇನ್ಮಮ।
03177012c ಅಥ ಪಶ್ಚಾದ್ವಿಮೋಕ್ಷ್ಯಾಮಿ ಭ್ರಾತರಂ ತೇ ವೃಕೋದರಂ।।
ಆದರೆ ನಾನು ಕೇಳುವ ಪ್ರಶ್ನೆಗಳಿಗೆ ನೀನು ಉತ್ತರಿಸುವೆಯಾದರೆ ಅದರ ನಂತರ ನೀನು ನಿನ್ನ ತಮ್ಮ ವೃಕೋದರನನ್ನು ಬಿಡುಗಡೆಮಾಡಿಸಬಲ್ಲೆ.”
03177013 ಯುಧಿಷ್ಠಿರ ಉವಾಚ।
03177013a ಬ್ರೂಹಿ ಸರ್ಪ ಯಥಾಕಾಮಂ ಪ್ರತಿವಕ್ಷ್ಯಾಮಿ ತೇ ವಚಃ।
03177013c ಅಪಿ ಚೇಚ್ಛಕ್ನುಯಾಂ ಪ್ರೀತಿಮಾಹರ್ತುಂ ತೇ ಭುಜಂಗಮ।।
ಯುಧಿಷ್ಠಿರನು ಹೇಳಿದನು: “ಸರ್ಪವೇ! ನೀನು ಇಷ್ಟಪಟ್ಟ ಪ್ರಶ್ನೆಗಳನ್ನು ಕೇಳು. ನನಗೆ ಸಾಧ್ಯವಾದರೆ ಉತ್ತರಿಸುತ್ತೇನೆ. ಭುಜಂಗಮ! ಹೀಗೆ ನಿನ್ನ ಪ್ರೀತಿಯ ಪಾತ್ರನಾಗಬಲ್ಲೆ.
03177014a ವೇದ್ಯಂ ಯದ್ಬ್ರಾಹ್ಮಣೇನೇಹ ತದ್ಭವಾನ್ವೇತ್ತಿ ಕೇವಲಂ।
03177014c ಸರ್ಪರಾಜ ತತಃ ಶ್ರುತ್ವಾ ಪ್ರತಿವಕ್ಷ್ಯಾಮಿ ತೇ ವಚಃ।।
ಬ್ರಾಹ್ಮಣನಿಗೆ ಏನು ತಿಳಿದಿದೆ ಎನ್ನುವುದು ನಿನಗೂ ತಿಳಿದಿದೆ. ಸರ್ಪರಾಜ! ನಿನ್ನನ್ನು ಕೇಳಿದ ನಂತರ ಉತ್ತರಿಸುತ್ತೇನೆ.”
03177015 ಸರ್ಪ ಉವಾಚ।
03177015a ಬ್ರಾಹ್ಮಣಃ ಕೋ ಭವೇದ್ರಾಜನ್ವೇದ್ಯಂ ಕಿಂ ಚ ಯುಧಿಷ್ಠಿರ।
03177015c ಬ್ರವೀಹ್ಯತಿಮತಿಂ ತ್ವಾಂ ಹಿ ವಾಕ್ಯೈರನುಮಿಮೀಮಹೇ।।
ಸರ್ಪವು ಹೇಳಿತು: “ರಾಜನ್! ಬ್ರಾಹ್ಮಣನು ಯಾರು? ಯುಧಿಷ್ಠಿರ! ಅವನಿಗೆ ಏನು ತಿಳಿದಿರಬಹುದು? ಹೇಳು. ನಿನ್ನ ಮಾತುಗಳಿಂದ ನೀನು ಬುದ್ಧಿವಂತನೆಂದು ನನಗನ್ನಿಸುತ್ತದೆ.”
03177016 ಯುಧಿಷ್ಠಿರ ಉವಾಚ।
03177016a ಸತ್ಯಂ ದಾನಂ ಕ್ಷಮಾ ಶೀಲಮಾನೃಶಂಸ್ಯಂ ದಮೋ ಘೃಣಾ।
03177016c ದೃಶ್ಯಂತೇ ಯತ್ರ ನಾಗೇಂದ್ರ ಸ ಬ್ರಾಹ್ಮಣ ಇತಿ ಸ್ಮೃತಃ।।
ಯುಧಿಷ್ಠಿರನು ಹೇಳಿದನು: “ನಾಗೇಂದ್ರ! ಸತ್ಯ, ದಾನ, ಕ್ಷಮೆ, ಶೀಲ, ಅನೃಶ, ದಮ, ಮತ್ತು ಘೃಣಗಳು ಯಾರಲ್ಲಿ ಕಂಡುಬರುತ್ತವೆಯೋ ಅವನನ್ನೇ ಬ್ರಾಹ್ಮಣನೆಂದು ಸ್ಮೃತಿಗಳು ಹೇಳುತ್ತವೆ.
03177017a ವೇದ್ಯಂ ಸರ್ಪ ಪರಂ ಬ್ರಹ್ಮ ನಿರ್ದುಃಖಮಸುಖಂ ಚ ಯತ್।
03177017c ಯತ್ರ ಗತ್ವಾ ನ ಶೋಚಂತಿ ಭವತಃ ಕಿಂ ವಿವಕ್ಷಿತಂ।।
ಸರ್ಪವೇ! ಅವನು ಸುಖ ಮತ್ತು ದುಃಖಗಳಿಗೂ ಅತೀತವಾದ, ಯಾರನ್ನು ಸೇರಿದರೆ ಶೋಕವಿಲ್ಲವೋ ಆ ಬ್ರಹ್ಮನನ್ನು ತಿಳಿದಿರಬಹುದು. ಇನ್ನು ಏನನ್ನು ಕೇಳಬಯಸುತ್ತೀಯೆ?”
03177018 ಸರ್ಪ ಉವಾಚ।
03177018a ಚಾತುರ್ವರ್ಣ್ಯಂ ಪ್ರಮಾಣಂ ಚ ಸತ್ಯಂ ಚ ಬ್ರಹ್ಮ ಚೈವ ಹ।
03177018c ಶೂದ್ರೇಷ್ವಪಿ ಚ ಸತ್ಯಂ ಚ ದಾನಮಕ್ರೋಧ ಏವ ಚ।।
03177018e ಆನೃಶಂಸ್ಯಮಹಿಂಸಾ ಚ ಘೃಣಾ ಚೈವ ಯುಧಿಷ್ಠಿರ।।
ಸರ್ಪವು ಹೇಳಿತು: “ಸತ್ಯ ಮತ್ತು ಬ್ರಹ್ಮವು ನಾಲ್ಕೂ ವರ್ಣದವರಿಗೆ ಪ್ರಮಾಣ. ಶೂದ್ರರೂ ಕೂಡ ಸತ್ಯವಂತರಾಗಿ, ದಾನವಂತರಾಗಿ, ಅಕ್ರೋಧರಾಗಿ, ಹತೋಟಿಯಲ್ಲಿಟ್ಟುಕೊಳ್ಳದೇ, ಸಹನಾಶೀಲರಾಗಿ, ಮೃದುವಾಗಿ, ಮತ್ತು ಅನುಕಂಪಿತರಾಗಿ ಇರಬಹುದು ಯುಧಿಷ್ಠಿರ!
03177019a ವೇದ್ಯಂ ಯಚ್ಚಾತ್ಥ ನಿರ್ದುಃಖಮಸುಖಂ ಚ ನರಾಧಿಪ।
03177019c ತಾಭ್ಯಾಂ ಹೀನಂ ಪದಂ ಚಾನ್ಯನ್ನ ತದಸ್ತೀತಿ ಲಕ್ಷಯೇ।।
ನರಾಧಿಪ! ತಿಳಿದುಕೊಳ್ಳುವಂತಹದ್ದು ಸುಖ ದುಃಖಗಳಿಗೆ ಅತೀತವಾದುದು ಎಂದು ನೀನು ಹೇಳಿದೆಯಲ್ಲ. ಆದರೆ ಯಾವುದೂ ಅವೆರಡನ್ನು ಬಿಟ್ಟಿಲ್ಲ. ಅಂಥಹುದು ಇದೆ ಎಂದು ನನಗೆ ಅನ್ನಿಸುವುದಿಲ್ಲ.”
03177020 ಯುಧಿಷ್ಠಿರ ಉವಾಚ।
03177020a ಶೂದ್ರೇ ಚೈತದ್ಭವೇಲ್ಲಕ್ಷ್ಯಂ ದ್ವಿಜೇ ತಚ್ಚ ನ ವಿದ್ಯತೇ।
03177020c ನ ವೈ ಶೂದ್ರೋ ಭವೇಚ್ಛೂದ್ರೋ ಬ್ರಾಹ್ಮಣೋ ನ ಚ ಬ್ರಾಹ್ಮಣಃ।।
ಯುಧಿಷ್ಠಿರನು ಹೇಳಿದನು: “ಶೂದ್ರನ ಲಕ್ಷಣಗಳು ಬ್ರಾಹ್ಮಣನಲ್ಲಿ ಕಾಣುವುದಿಲ್ಲ. ಆದರೆ ಶೂದ್ರನು ಶೂದ್ರನಾಗಿಯೇ ಇರುತ್ತಾನೆಂದಿಲ್ಲ ಮತ್ತು ಬ್ರಾಹ್ಮಣನು ಬ್ರಾಹ್ಮಣನಾಗಿಯೇ ಇರುತ್ತಾನೆಂದಿಲ್ಲ.
03177021a ಯತ್ರೈತಲ್ಲಕ್ಷ್ಯತೇ ಸರ್ಪ ವೃತ್ತಂ ಸ ಬ್ರಾಹ್ಮಣಃ ಸ್ಮೃತಃ।
03177021c ಯತ್ರೈತನ್ನ ಭವೇತ್ಸರ್ಪ ತಂ ಶೂದ್ರಮಿತಿ ನಿರ್ದಿಶೇತ್।।
ಸರ್ಪವೇ! ಯಾರಲ್ಲಿ ಬ್ರಾಹ್ಮಣನ ಲಕ್ಷಣಗಳು ಕಾಣಿಸುತ್ತವೆಯೋ ಅವನೇ ಬ್ರಾಹ್ಮಣ ಎಂದು ಸ್ಮೃತಿಗಳು ಹೇಳುತ್ತವೆ. ಯಾರಲ್ಲಿ ಅವುಗಳು ಕಂಡುಬರುವುದಿಲ್ಲವೋ ಅವರನ್ನು ಶೂದ್ರರೆಂದು ಕರೆಯುತ್ತಾರೆ.
03177022a ಯತ್ಪುನರ್ಭವತಾ ಪ್ರೋಕ್ತಂ ನ ವೇದ್ಯಂ ವಿದ್ಯತೇತಿ ಹ।
03177022c ತಾಭ್ಯಾಂ ಹೀನಮತೀತ್ಯಾತ್ರ ಪದಂ ನಾಸ್ತೀತಿ ಚೇದಪಿ।।
03177023a ಏವಮೇತನ್ಮತಂ ಸರ್ಪ ತಾಭ್ಯಾಂ ಹೀನಂ ನ ವಿದ್ಯತೇ।
03177023c ಯಥಾ ಶೀತೋಷ್ಣಯೋರ್ಮಧ್ಯೇ ಭವೇನ್ನೋಷ್ಣಂ ನ ಶೀತತಾ।।
03177024a ಏವಂ ವೈ ಸುಖದುಃಖಾಭ್ಯಾಂ ಹೀನಮಸ್ತಿ ಪದಂ ಕ್ವ ಚಿತ್।
03177024c ಏಷಾ ಮಮ ಮತಿಃ ಸರ್ಪ ಯಥಾ ವಾ ಮನ್ಯತೇ ಭವಾನ್।।
ಈ ತಿಳಿಯುವ ವಸ್ತುವು ಇಲ್ಲವೇ ಇಲ್ಲ. ಯಾಕೆಂದರೆ ಸುಖ ದುಃಖಗಳಿಂದ ಮುಕ್ತವಾದ ಯಾವುದೂ ಇಲ್ಲವೆಂದು ನೀನು ಹೇಳಿದೆಯಲ್ಲ ಸರ್ಪ! ಇದು ನಿನ್ನ ಅಭಿಪ್ರಾಯ. ಆದರೆ ಶೀತ ಮತ್ತು ಉಷ್ಣದ ಮದ್ಯೆ ತಣ್ಣಗಾಗಿರದ ಮತ್ತು ಬಿಸಿಯೂ ಆಗಿರದ ವಸ್ತುಗಳು ಇರುವಂತೆ ಸುಖ ದುಃಖಗಳ ನಡುವೆಯೂ ಏನೋ ಇದೆ. ಇದು ನನ್ನ ಅಭಿಪ್ರಾಯ ಸರ್ಪವೇ! ಅಥವಾ ನೀನು ಏನು ಅಭಿಪ್ರಾಯಪಡುತ್ತೀಯೆ?”
03177025 ಸರ್ಪ ಉವಾಚ।
03177025a ಯದಿ ತೇ ವೃತ್ತತೋ ರಾಜನ್ಬ್ರಾಹ್ಮಣಃ ಪ್ರಸಮೀಕ್ಷಿತಃ।
03177025c ವ್ಯರ್ಥಾ ಜಾತಿಸ್ತದಾಯುಷ್ಮನ್ಕೃತಿರ್ಯಾವನ್ನ ದೃಶ್ಯತೇ।।
ಸರ್ಪವು ಹೇಳಿತು: “ರಾಜನ್! ನೀನು ವರ್ತನೆಯಿಂದ ಬ್ರಾಹ್ಮಣನ್ಯಾರೆಂದು ಗುರುತಿಸುವೆಯಾದರೆ ಜಾತಿಯು ವ್ಯರ್ಥ. ಕೇವಲ ವರ್ತನೆಯೇ ಸಾಕ್ಷಿ!”
03177026 ಯುಧಿಷ್ಠಿರ ಉವಾಚ।
03177026a ಜಾತಿರತ್ರ ಮಹಾಸರ್ಪ ಮನುಷ್ಯತ್ವೇ ಮಹಾಮತೇ।
03177026c ಸಂಕರಾತ್ಸರ್ವವರ್ಣಾನಾಂ ದುಷ್ಪರೀಕ್ಷ್ಯೇತಿ ಮೇ ಮತಿಃ।।
03177027a ಸರ್ವೇ ಸರ್ವಾಸ್ವಪತ್ಯಾನಿ ಜನಯಂತಿ ಯದಾ ನರಾಃ।
03177027c ವಾಮ್ಮೈಥುನಮಥೋ ಜನ್ಮ ಮರಣಂ ಚ ಸಮಂ ನೃಣಾಂ।।
ಯುಧಿಷ್ಠಿರನು ಹೇಳಿದನು: “ಮಹಾಸರ್ಪವೇ! ಮಹಾಮತೇ! ಮನುಷ್ಯರಲ್ಲಿ ಜಾತಿಯನ್ನು ನಿರ್ಧರಿಸುವುದು ಬಹು ಕಷ್ಟ. ಯಾಕೆಂದರೆ ಸಂಕರದಿಂದ ಮನುಷ್ಯನು ಎಲ್ಲ ವರ್ಣದವರಲ್ಲಿಯೂ ಮಕ್ಕಳನ್ನು ಪಡೆಯುತ್ತಾನೆ ಎಂದು ನನ್ನ ಅನಿಸಿಕೆ. ನರರಲ್ಲಿ ಎಲ್ಲರೂ ಎಲ್ಲರಿಂದಲೂ ಮಕ್ಕಳನ್ನು ಪಡೆಯುತ್ತಾರಾದುದರಿಂದ ಮಾತು, ಮೈಥುನ, ಜನ್ಮ ಮತ್ತು ಮರಣಗಳು ಎಲ್ಲರಿಗೂ ಸಮಾನ.
03177028a ಇದಮಾರ್ಷಂ ಪ್ರಮಾಣಂ ಚ ಯೇ ಯಜಾಮಹ ಇತ್ಯಪಿ।
03177028c ತಸ್ಮಾಚ್ಛೀಲಂ ಪ್ರಧಾನೇಷ್ಟಂ ವಿದುರ್ಯೇ ತತ್ತ್ವದರ್ಶಿನಃ।।
ಇದು “ಯೇ ಯಜಾಮಹೇ” ಎಂಬ ಋಷಿಗಳ ಪ್ರಮಾಣದಲ್ಲಿಯೂ ಇದೆ. ಆದುದರಿಂದ ಶೀಲವೇ ಪ್ರಧಾನವೆಂದು ತತ್ವದರ್ಶಿಗಳು ತಿಳಿದಿದ್ದಾರೆ.
03177029a ಪ್ರಾಮ್ನಾಭಿವರ್ಧನಾತ್ಪುಂಸೋ ಜಾತಕರ್ಮ ವಿಧೀಯತೇ।
03177029c ತತ್ರಾಸ್ಯ ಮಾತಾ ಸಾವಿತ್ರೀ ಪಿತಾ ತ್ವಾಚಾರ್ಯ ಉಚ್ಯತೇ।।
ಹೊಕ್ಕಳುಬಳ್ಳಿ ಕತ್ತರಿಸುವ ಮೊದಲೇ ಜಾತಕರ್ಮವನ್ನು ನಡೆಸುತ್ತಾರೆ. ಅಲ್ಲಿ ತಾಯಿಯೇ ಸಾವಿತ್ರಿ ಮತ್ತು ತಂದೆಯೇ ಆಚಾರ್ಯನೆಂದು ಹೇಳುತ್ತಾರೆ.
03177030a ವೃತ್ತ್ಯಾ ಶೂದ್ರಸಮೋ ಹ್ಯೇಷ ಯಾವದ್ವೇದೇ ನ ಜಾಯತೇ।
03177030c ಅಸ್ಮಿನ್ನೇವಂ ಮತಿದ್ವೈಧೇ ಮನುಃ ಸ್ವಾಯಂಭುವೋಽಬ್ರವೀತ್।।
ಯಾರು ವೇದಗಳಿಂದ ಜನಿಸುವುದಿಲ್ಲವೋ ಅವನು ನಡತೆಯಲ್ಲಿ ಶೂದ್ರನ ಸಮ. ಇದರಲ್ಲಿ ದ್ವಂದ್ವವಾದ ಅಭಿಪ್ರಾಯವಿದ್ದರೆ ಇದನ್ನು ಸ್ವಯಂಭು ಮನುವೇ ಹೇಳಿದ್ದಾನೆ.
03177031a ಕೃತಕೃತ್ಯಾಃ ಪುನರ್ವರ್ಣಾ ಯದಿ ವೃತ್ತಂ ನ ವಿದ್ಯತೇ।
03177031c ಸಂಕರಸ್ತತ್ರ ನಾಗೇಂದ್ರ ಬಲವಾನ್ಪ್ರಸಮೀಕ್ಷಿತಃ।।
ನಾಗೇಂದ್ರ! ಮಾಡುವ ಕಾರ್ಯಗಳ ಆಧಾರದ ಮೇಲೆ ವರ್ಣಗಳಾಗಿವೆ. ವರ್ತನೆಯೇ ಇಲ್ಲದಿದ್ದರೆ ಅತಿದೊಡ್ಡ ಸಂಕರವಾಗುತ್ತದೆ ಎಂದು ಕಂಡಿದ್ದಾರೆ.
03177032a ಯತ್ರೇದಾನೀಂ ಮಹಾಸರ್ಪ ಸಂಸ್ಕೃತಂ ವೃತ್ತಮಿಷ್ಯತೇ।
03177032c ತಂ ಬ್ರಾಹ್ಮಣಮಹಂ ಪೂರ್ವಮುಕ್ತವಾನ್ಭುಜಗೋತ್ತಮ।।
ಭುಜಗೋತ್ತಮ! ಮಹಾಸರ್ಪ! ಸಂಸ್ಕೃತ ನಡತೆಯುಳ್ಳವನನ್ನು, ನಾನು ಮೊದಲೇ ಹೇಳಿದ ಹಾಗೆ, ಬ್ರಾಹ್ಮಣನೆನ್ನುತ್ತಾರೆ.”
03177033 ಸರ್ಪ ಉವಾಚ।
03177033a ಶ್ರುತಂ ವಿದಿತವೇದ್ಯಸ್ಯ ತವ ವಾಕ್ಯಂ ಯುಧಿಷ್ಠಿರ।
03177033c ಭಕ್ಷಯೇಯಮಹಂ ಕಸ್ಮಾದ್ಭ್ರಾತರಂ ತೇ ವೃಕೋದರಂ।।
ಸರ್ಪವು ಹೇಳಿತು: “ಯುಧಿಷ್ಠಿರ! ತಿಳಿಯಬೇಕಾದ್ದನ್ನು ತಿಳಿದಿರುವ ನಿನ್ನ ಮಾತುಗಳನ್ನು ಕೇಳಿದ ನಂತರವೂ ನಾನು ಹೇಗೆ ತಾನೆ ನಿನ್ನ ತಮ್ಮ ವೃಕೋದರನನ್ನು ಭಕ್ಷಿಸಲಿ?”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವಣಿ ಯುಧಿಷ್ಠಿರಸರ್ಪಸಂವಾದೇ ಸಪ್ತಸಪ್ತತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವದಲ್ಲಿ ಯುಧಿಷ್ಠಿರಸರ್ಪಸಂವಾದಲ್ಲಿ ನೂರಾಎಪ್ಪತ್ತೇಳನೆಯ ಅಧ್ಯಾಯವು.