ಪ್ರವೇಶ
।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।
ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ
ಶ್ರೀ ಮಹಾಭಾರತ
ಆರಣ್ಯಕ ಪರ್ವ
ಅಜಗರ ಪರ್ವ
ಅಧ್ಯಾಯ 176
ಸಾರ
ಭೀಮನು ತನ್ನ ಪರಿಚಯ ಮಾಡಿಕೊಂಡು ತನಗಿಂತಲೂ ಬಲಶಾಲಿಯಾಗಿರುವ ಆ ಅಜಗರವು ಯಾರೆಂದು ಕೇಳಿದುದು (1-8). ತನ್ನ ಸುರುಳಿಯಿಂದ ಭೀಮನನ್ನು ಸುತ್ತುತ್ತಾ ಅಜಗರವು ತಾನು ಭೀಮನ ವಂಶಜ ನಹುಷನೆಂದೂ, ಅಗಸ್ತ್ಯನ ಶಾಪದಿಂದ ಹಾವಾಗಿರುವನೆಂದೂ, ತಾನು ಕೇಳುವ ಪ್ರಶ್ನೆಗಳಿಗೆ ಯಾರು ಉತ್ತರವನ್ನು ಕೊಡುತ್ತಾರೋ ಅವರಿಂದ ಶಾಪವಿಮೋಚನೆಯಾಗುತ್ತದೆ ಎಂದೂ ಹೇಳಿದುದು (9-24). ಭೀಮನು ಶೋಕದಿಂದ ವಿಲಪಿಸುವುದು (25-39). ಅಪಶಕುನಗಳನ್ನು ಕಂಡ ಯುಧಿಷ್ಠಿರನು ಭೀಮನನ್ನು ಹುಡುಕಿಕೊಂಡು ಬರುವುದು (40-51).
03176001 ವೈಶಂಪಾಯನ ಉವಾಚ।
03176001a ಸ ಭೀಮಸೇನಸ್ತೇಜಸ್ವೀ ತಥಾ ಸರ್ಪವಶಂ ಗತಃ।
03176001c ಚಿಂತಯಾಮಾಸ ಸರ್ಪಸ್ಯ ವೀರ್ಯಮತ್ಯದ್ಭುತಂ ಮಹತ್।।
ವೈಶಂಪಾಯನನು ಹೇಳಿದನು: “ಹೀಗೆ ತೇಜಸ್ವಿ ಭೀಮಸೇನನು ಸರ್ಪದ ವಶನಾಗಲು ಅದರ ಅದ್ಭುತ ಮಹಾ ವೀರ್ಯದ ಕುರಿತು ಯೋಚಿಸಿದನು.
03176002a ಉವಾಚ ಚ ಮಹಾಸರ್ಪಂ ಕಾಮಯಾ ಬ್ರೂಹಿ ಪನ್ನಗ।
03176002c ಕಸ್ತ್ವಂ ಭೋ ಭುಜಗಶ್ರೇಷ್ಠ ಕಿಂ ಮಯಾ ಚ ಕರಿಷ್ಯಸಿ।।
ಆ ಮಹಾಸರ್ಪಕ್ಕೆ ಹೇಳಿದನು: “ಪನ್ನಗ! ನಿನಗಿಷ್ಟವಾದರೆ ನೀನು ಯಾರು ಎಂದು ಹೇಳು. ಭೋ! ಭುಜಗಶ್ರೇಷ್ಠ! ನನ್ನನ್ನು ಏನು ಮಾಡಲಿರುವೆ?
03176003a ಪಾಂಡವೋ ಭಿಮಸೇನೋಽಹಂ ಧರ್ಮರಾಜಾದನಂತರಃ।
03176003c ನಾಗಾಯುತಸಮಪ್ರಾಣಸ್ತ್ವಯಾ ನೀತಃ ಕಥಂ ವಶಂ।।
ನಾನು ಧರ್ಮರಾಜನ ಅನಂತರದವ. ಪಾಂಡವ ಭೀಮಸೇನ. ಆನೆಗಳ ಹಿಂಡಿನ ಪ್ರಮಾಣಕ್ಕೆ ಸಮನಾದವನು ನಿನ್ನ ವಶನಾದದ್ದು ಹೇಗೆ?
03176004a ಸಿಂಹಾಃ ಕೇಸರಿಣೋ ವ್ಯಾಘ್ರಾ ಮಹಿಷಾ ವಾರಣಾಸ್ತಥಾ।
03176004c ಸಮಾಗತಾಶ್ಚ ಬಹುಶೋ ನಿಹತಾಶ್ಚ ಮಯಾ ಮೃಧೇ।।
03176005a ದಾನವಾಶ್ಚ ಪಿಶಾಚಾಶ್ಚ ರಾಕ್ಷಸಾಶ್ಚ ಮಹಾಬಲಾಃ।
03176005c ಭುಜವೇಗಮಶಕ್ತಾ ಮೇ ಸೋಢುಂ ಪನ್ನಗಸತ್ತಮ।।
ಪನ್ನಗಸತ್ತಮ! ಬಹಳಷ್ಟು ಕೇಸರಿ ಸಿಂಹಗಳು, ಹುಲಿಗಳು, ಕಾಡೆಮ್ಮೆಗಳು, ಆನೆಗಳನ್ನು ನಾನು ಯುದ್ಧದಲ್ಲಿ ಎದುರಿಸಿ ಕೊಂದಿದ್ದೇನೆ. ದಾನವರೂ ಪಿಶಾಚಿಗಳೂ, ಮಹಾಬಲ ರಾಕ್ಷಸರೂ ನನ್ನ ಭುಜಗಳ ವೇಗವನ್ನು ಸಹಿಸಲು ಅಶಕ್ತರಾಗಿದ್ದರು.
03176006a ಕಿಂ ನು ವಿದ್ಯಾಬಲಂ ಕಿಂ ವಾ ವರದಾನಮಥೋ ತವ।
03176006c ಉದ್ಯೋಗಮಪಿ ಕುರ್ವಾಣೋ ವಶಗೋಽಸ್ಮಿ ಕೃತಸ್ತ್ವಯಾ।।
ನೀನು ಹೇಗೆತಾನೆ - ವಿದ್ಯಾಬಲದಿಂದಲೋ ಅಥವಾ ನಿನಗೆ ದೊರಕಿದ ವರದಾನದಿಂದಲೋ - ಶ್ರಮಿಸುತ್ತಿರುವ ನನ್ನನ್ನು ನಿನ್ನ ವಶದಲ್ಲಿರಿಸಿಕೊಂಡಿದ್ದೀಯೆ?
03176007a ಅಸತ್ಯೋ ವಿಕ್ರಮೋ ನೃಣಾಮಿತಿ ಮೇ ನಿಶ್ಚಿತಾ ಮತಿಃ।
03176007c ಯಥೇದಂ ಮೇ ತ್ವಯಾ ನಾಗ ಬಲಂ ಪ್ರತಿಹತಂ ಮಹತ್।।
ಆನೆಗಳಿಗಿದ್ದಷ್ಟು ಮಹಾಬಲವುಳ್ಳ ನನ್ನನ್ನು ನೀನು ತಡೆದಿದ್ದೀಯೆ ಎಂದರೆ ಮನುಷ್ಯರ ವಿಕ್ರಮವು ಸುಳ್ಳು ಎಂದು ನಿಶ್ಚಯವಾಗಿಯೂ ನನಗನ್ನಿಸುತ್ತದೆ.”
03176008a ಇತ್ಯೇವಂವಾದಿನಂ ವೀರಂ ಭೀಮಮಕ್ಲಿಷ್ಟಕಾರಿಣಂ।
03176008c ಭೋಗೇನ ಮಹತಾ ಸರ್ಪಃ ಸಮಂತಾತ್ಪರ್ಯವೇಷ್ಟಯತ್।।
ಈ ರೀತಿ ವೀರ ಅಕ್ಲಿಷ್ಟಕರ್ಮಿ ಭೀಮನು ಮಾತನಾಡುತ್ತಿರಲು ಸರ್ಪವು ಅವನನ್ನು ತನ್ನ ಮಹಾ ಸುರುಳಿಯಿಂದ ಸುತ್ತುವರೆಯಿತು.
03176009a ನಿಗೃಹ್ಯ ತಂ ಮಹಾಬಾಹುಂ ತತಃ ಸ ಭುಜಗಸ್ತದಾ।
03176009c ವಿಮುಚ್ಯಾಸ್ಯ ಭುಜೌ ಪೀನಾವಿದಂ ವಚನಮಬ್ರವೀತ್।।
ಅವನ ದಪ್ಪ ಬಾಹುಗಳನ್ನು ಮಾತ್ರ ಸ್ವತಂತ್ರವಾಗಿರಲು ಬಿಟ್ಟು ಆ ಮಹಾಬಾಹುವನ್ನು ನಿಗ್ರಹಿಸಿ ಈ ಮಾತುಗಳನ್ನಾಡಿತು:
03176010a ದಿಷ್ಟ್ಯಾ ತ್ವಂ ಕ್ಷುಧಿತಸ್ಯಾದ್ಯ ದೇವೈರ್ಭಕ್ಷೋ ಮಹಾಭುಜ।
03176010c ದಿಷ್ಟ್ಯಾ ಕಾಲಸ್ಯ ಮಹತಃ ಪ್ರಿಯಾಃ ಪ್ರಾಣಾ ಹಿ ದೇಹಿನಾಂ।।
“ದೇವತೆಗಳು ಮಹಾಭುಜ ನಿನ್ನನ್ನು ಇಂದು ಹಸಿವಿನಿಂದ ಬಳಲುತ್ತಿದ್ದ ನನಗೆ ಆಹಾರವಾಗಿ ಕಳುಹಿಸಿದ್ದುದು ಅದೃಷ್ಟವೇ ಸರಿ. ದೇಹಿಗಳಿಗೆ ಪ್ರಾಣವೇ ಪ್ರಿಯವಾಗಿರಲು ಬಹುಕಾಲದ ನಂತರ ನನಗೆ ಈ ಅದೃಷ್ಟವು ದೊರಕಿದೆ.
03176011a ಯಥಾ ತ್ವಿದಂ ಮಯಾ ಪ್ರಾಪ್ತಂ ಭುಜಂಗತ್ವಮರಿಂದಮ।
03176011c ತದವಶ್ಯಂ ಮಯಾ ಖ್ಯಾಪ್ಯಂ ತವಾದ್ಯ ಶೃಣು ಸತ್ತಮ।।
ಅರಿಂದಮ! ನನಗೆ ಹೇಗೆ ಭುಜಂಗತ್ವವು ಪ್ರಾಪ್ತವಾಯಿತು ಎನ್ನುವುದನ್ನು ಅವಶ್ಯವಾಗಿ ನನಗೆ ಹೇಳಬೇಕು. ಸತ್ತಮ! ಅದನ್ನು ಇಂದು ಕೇಳು.
03176012a ಇಮಾಮವಸ್ಥಾಂ ಸಂಪ್ರಾಪ್ತೋ ಹ್ಯಹಂ ಕೋಪಾನ್ಮನೀಷಿಣಾಂ।
03176012c ಶಾಪಸ್ಯಾಂತಂ ಪರಿಪ್ರೇಪ್ಸುಃ ಸರ್ಪಸ್ಯ ಕಥಯಾಮಿ ತತ್।।
ಮನೀಷಿಗಳ ಕೋಪದಿಂದ ನನಗೆ ಈ ಅವಸ್ಥೆಯು ಪ್ರಾಪ್ತವಾಯಿತು. ಈ ಶಾಪವನ್ನು ಕೊನೆಗಾಣಿಸುವ ಆಸೆಯಿಂದ ಈ ಸರ್ಪದ ಕಥೆಯನ್ನು ಹೇಳುತ್ತೇನೆ.
03176013a ನಹುಷೋ ನಾಮ ರಾಜರ್ಷಿರ್ವ್ಯಕ್ತಂ ತೇ ಶ್ರೋತ್ರಮಾಗತಃ।
03176013c ತವೈವ ಪೂರ್ವಃ ಪೂರ್ವೇಷಾಮಾಯೋರ್ವಂಶಕರಃ ಸುತಃ।।
ನಿನ್ನ ಪೂರ್ವಜ, ಆಯುವಿನ ವಂಶಕರ ಮಗ ನಹುಷನೆಂಬ ರಾಜರ್ಷಿಯ ಕುರಿತು ನೀನು ಕೇಳಿರಬಹುದು.
03176014a ಸೋಽಹಂ ಶಾಪಾದಗಸ್ತ್ಯಸ್ಯ ಬ್ರಾಹ್ಮಣಾನವಮನ್ಯ ಚ।
03176014c ಇಮಾಮವಸ್ಥಾಮಾಪನ್ನಃ ಪಶ್ಯ ದೈವಮಿದಂ ಮಮ।।
ಅವನೇ ನಾನು. ಅಗಸ್ತ್ಯನ ಶಾಪ ಮತ್ತು ಬ್ರಾಹ್ಮಣರಿಗೆ ನಾನು ಎಸಗಿದ ಅಪಮಾನಗಳಿಂದಾಗಿ ಈ ಅವಸ್ಥೆಯನ್ನು ಪಡೆದಿದ್ದೇನೆ. ನನ್ನ ಈ ದೈವವನ್ನು ನೋಡು1.
03176015a ತ್ವಾಂ ಚೇದವಧ್ಯಮಾಯಾಂತಮತೀವ ಪ್ರಿಯದರ್ಶನಂ।
03176015c ಅಹಮದ್ಯೋಪಯೋಕ್ಷ್ಯಾಮಿ ವಿಧಾನಂ ಪಶ್ಯ ಯಾದೃಶಂ।।
ಅತೀವ ಪ್ರಿಯದರ್ಶನನಾದ ಅವಧ್ಯನಾದ ನಿನ್ನನ್ನು ನಾನು ಇಂದು ನುಂಗುತ್ತೇನೆ ಎಂದರೆ ವಿಧಿಯು ಏನನ್ನು ನಡೆಸುತ್ತದೆ ಎನ್ನುವುದನ್ನು ನೋಡು!
03176016a ನ ಹಿ ಮೇ ಮುಚ್ಯತೇ ಕಶ್ಚಿತ್ಕಥಂ ಚಿದ್ಗ್ರಹಣಂ ಗತಃ।
03176016c ಗಜೋ ವಾ ಮಹಿಷೋ ವಾಪಿ ಷಷ್ಠೇ ಕಾಲೇ ನರೋತ್ತಮ।।
ನರೋತ್ತಮ! ದಿನದ ಈ ಆರನೆಯ ಗಳಿಗೆಯಲ್ಲಿ ನನ್ನ ಹಿಡಿತಕ್ಕೆ ಸಿಕ್ಕಿದ ಏನೂ ಆನೆಯಾಗಿರಲಿ ಅಥವಾ ಎಮ್ಮೆಯಾಗಿರಲಿ ನನ್ನಿಂದ ಬಿಡುಗಡೆಯನ್ನು ಹೊಂದುವುದಿಲ್ಲ.
03176017a ನಾಸಿ ಕೇವಲಸರ್ಪೇಣ ತಿರ್ಯಗ್ಯೋನಿಷು ವರ್ತತಾ।
03176017c ಗೃಹೀತಃ ಕೌರವಶ್ರೇಷ್ಠ ವರದಾನಮಿದಂ ಮಮ।।
ಕೌರವಶ್ರೇಷ್ಠ! ನೀನು ಎಲ್ಲ ಪ್ರಾಣಿಗಳಂತೆ ನಡೆಯುವ ಒಂದು ಕೇವಲ ಸರ್ಪದ ಹಿಡಿತಕ್ಕೆ ಸಿಕ್ಕಿಲ್ಲ. ನನಗೆ ವರದಾನವಿದೆ.
03176018a ಪತತಾ ಹಿ ವಿಮಾನಾಗ್ರಾನ್ಮಯಾ ಶಕ್ರಾಸನಾದ್ದ್ರುತಂ।
03176018c ಕುರು ಶಾಪಾಂತಮಿತ್ಯುಕ್ತೋ ಭಗವಾನ್ಮುನಿಸತ್ತಮಃ।।
ಯಾಕೆಂದರೆ ನಾನು ಶಕ್ರನು ಕುಳಿತುಕೊಳ್ಳುವ ಆ ಮಹಾ ವಿಮಾನದಿಂದ ವೇಗದಿಂದ ಕೆಳಗೆ ಬೀಳುತ್ತಿರುವಾಗ ಆ ಮುನಿಸತ್ತಮ ಭಗವಾನನಲ್ಲಿ ನನ್ನನ್ನು ಶಾಪದಿಂದ ವಿಮುಕ್ತನನ್ನಾಗಿ ಮಾಡು ಎಂದು ಕೇಳಿಕೊಂಡೆ.
03176019a ಸ ಮಾಮುವಾಚ ತೇಜಸ್ವೀ ಕೃಪಯಾಭಿಪರಿಪ್ಲುತಃ।
03176019c ಮೋಕ್ಷಸ್ತೇ ಭವಿತಾ ರಾಜನ್ಕಸ್ಮಾಚ್ಚಿತ್ಕಾಲಪರ್ಯಯಾತ್।।
ಆ ತೇಜಸ್ವಿಯು ಕೃಪೆಯಿಂದ ಆವೇಶಗೊಂಡು ರಾಜನ್! ಕೆಲವು ಕಾಲವು ಕಳೆದನಂತರ ನೀನು ಬಿಡುಗಡೆಹೊಂದುತ್ತೀಯೆ.
03176020a ತತೋಽಸ್ಮಿ ಪತಿತೋ ಭೂಮೌ ನ ಚ ಮಾಮಜಹಾತ್ಸ್ಮೃತಿಃ।
03176020c ಸ್ಮಾರ್ತಮಸ್ತಿ ಪುರಾಣಂ ಮೇ ಯಥೈವಾಧಿಗತಂ ತಥಾ।।
ಆಗ ನಾನು ಭೂಮಿಯ ಮೇಲೆ ಬಿದ್ದೆ. ಆದರೂ ನನ್ನ ನೆನಪು ಅಳಿಸಿಹೋಗಿಲ್ಲ. ಅಂದು ನಾನು ತಿಳಿದುಕೊಂಡಿದ್ದುದು ಪುರಾತನ ಕಾಲದಿಂದಲೂ ನನಗೆ ನೆನಪಿದೆ.
03176021a ಯಸ್ತು ತೇ ವ್ಯಾಹೃತಾನ್ಪ್ರಶ್ನಾನ್ಪ್ರತಿಬ್ರೂಯಾದ್ವಿಶೇಷವಿತ್।
03176021c ಸ ತ್ವಾಂ ಮೋಕ್ಷಯಿತಾ ಶಾಪಾದಿತಿ ಮಾಮಬ್ರವೀದೃಷಿಃ।।
“ನೀನು ಕೇಳುವ ಪ್ರಶ್ನೆಗಳಿಗೆ ಸರಿಯಾಗಿ ಯಾರು ಉತ್ತರವನ್ನು ಕೊಡುತ್ತಾನೋ ಅವನು ನಿನ್ನನ್ನು ಈ ಶಾಪದಿಂದ ಮುಕ್ತಿಯನ್ನು ಕೊಡುತ್ತಾನೆ” ಎಂದು ನನಗೆ ಆ ಋಷಿಯು ಹೇಳಿದ್ದನು.
03176022a ಗೃಹೀತಸ್ಯ ತ್ವಯಾ ರಾಜನ್ಪ್ರಾಣಿನೋಽಪಿ ಬಲೀಯಸಃ।
03176022c ಸತ್ತ್ವಭ್ರಂಶೋಽಧಿಕಸ್ಯಾಪಿ ಸರ್ವಸ್ಯಾಶು ಭವಿಷ್ಯತಿ।।
“ರಾಜನ್! ನಿನ್ನ ಹಿಡಿತಕ್ಕೆ ಸಿಕ್ಕ ಪ್ರಾಣಿಗಳು, ನಿನಗಿಂತಲೂ ಅಧಿಕ ಬಲಶಾಲಿಯಾಗಿದ್ದರೂ, ತಕ್ಷಣವೇ ಸತ್ವವನ್ನು ಕಳೆದುಕೊಳ್ಳುತ್ತವೆ.”
03176023a ಇತಿ ಚಾಪ್ಯಹಮಶ್ರೌಷಂ ವಚಸ್ತೇಷಾಂ ದಯಾವತಾಂ।
03176023c ಮಯಿ ಸಂಜಾತಹಾರ್ದಾನಾಮಥ ತೇಽಂತರ್ಹಿತಾ ದ್ವಿಜಾಃ।।
03176024a ಸೋಽಹಂ ಪರಮದುಷ್ಕರ್ಮಾ ವಸಾಮಿ ನಿರಯೇಽಶುಚೌ।
03176024c ಸರ್ಪಯೋನಿಮಿಮಾಂ ಪ್ರಾಪ್ಯ ಕಾಲಾಕಾಂಕ್ಷೀ ಮಹಾದ್ಯುತೇ।।
ಹೀಗೆ ನನಗೆ ಈ ದಯಾವಂತ ಮಾತುಗಳನ್ನು ಕೇಳಿಸಿ, ನನಗೆ ಇದು ನೆನಪಿನಲ್ಲಿರುವಂತೆ ಅನುಗ್ರಹಿಸಿ ಆ ದ್ವಿಜರು ಅಂತರ್ಹಿತರಾದರು. ಹೀಗೆ ನಾನು ಪರಮದುಷ್ಕರ್ಮಗಳನ್ನು ಮಾಡಿಕೊಂಡು ಅಶೌಚನಾಗಿ ಈ ಸರ್ಪಯೋನಿಯನ್ನು ಹೊಂದಿ ನರಕದಲ್ಲಿ ಬಿದ್ದಿದ್ದೇನೆ. ಮಹಾದ್ಯುತಿ! ಕಾಲವನ್ನು ಆಕಾಂಕ್ಷಿಸುತ್ತಿದ್ದೇನೆ.”
03176025a ತಮುವಾಚ ಮಹಾಬಾಹುರ್ಭೀಮಸೇನೋ ಭುಜಂಗಮಂ।
03176025c ನ ತೇ ಕುಪ್ಯೇ ಮಹಾಸರ್ಪ ನ ಚಾತ್ಮಾನಂ ವಿಗರ್ಹಯೇ।।
ಆಗ ಮಹಾಬಾಹು ಭೀಮಸೇನನು ಹಾವಿಗೆ ಹೇಳಿದನು: “ಮಹಾಸರ್ಪ! ನಾನು ನಿನ್ನ ಮೇಲೆ ಕೋಪಗೊಂಡಿಲ್ಲ ಮತ್ತು ನನ್ನನ್ನು ಕೂಡ ಬೈದುಕೊಳ್ಳುವುದಿಲ್ಲ.
03176026a ಯಸ್ಮಾದಭಾವೀ ಭಾವೀ ವಾ ಮನುಷ್ಯಃ ಸುಖದುಃಖಯೋಃ।
03176026c ಆಗಮೇ ಯದಿ ವಾಪಾಯೇ ನ ತತ್ರ ಗ್ಲಪಯೇನ್ಮನಃ।।
ಬಂದು ಹೋಗುವ ಸುಖ ದುಃಖಗಳನ್ನು ಅನುಭವಿಸಲಿ ಅಥವಾ ಅನುಭವಿಸದೇ ಇರಲಿ. ಅದರಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಬೇಕಾಗಿಲ್ಲ.
03176027a ದೈವಂ ಪುರುಷಕಾರೇಣ ಕೋ ನಿವರ್ತಿತುಮರ್ಹತಿ।
03176027c ದೈವಮೇವ ಪರಂ ಮನ್ಯೇ ಪುರುಷಾರ್ಥೋ ನಿರರ್ಥಕಃ।।
03176028a ಪಶ್ಯ ದೈವೋಪಘಾತಾದ್ಧಿ ಭುಜವೀರ್ಯವ್ಯಪಾಶ್ರಯಂ।
03176028c ಇಮಾಮವಸ್ಥಾಂ ಸಂಪ್ರಾಪ್ತಮನಿಮಿತ್ತಮಿಹಾದ್ಯ ಮಾಂ।।
ದೈವವನ್ನು ಪುರುಷಕಾರಣದಿಂದ ಯಾರು ತಾನೇ ತಡೆಯಬಲ್ಲರು? ದೈವವೇ ಮೇಲು, ಪುರುಷಾರ್ಥವು ನಿರರ್ಥಕ. ನೋಡು! ಭುಜವೀರ್ಯವನ್ನು ಆಶ್ರಯಿಸಿದ್ದ ನಾನು ದುರ್ದೈವದಿಂದ ನನ್ನ ಏನೂ ಕಾರಣಗಳಿಲ್ಲದೇ ಈ ಅವಸ್ಥೆಯನ್ನು ಹೊಂದಿದ್ದೇನೆ.
03176029a ಕಿಂ ತು ನಾದ್ಯಾನುಶೋಚಾಮಿ ತಥಾತ್ಮಾನಂ ವಿನಾಶಿತಂ।
03176029c ಯಥಾ ತು ವಿಪಿನೇ ನ್ಯಸ್ತಾನ್ಭ್ರಾತೄನ್ರಾಜ್ಯಪರಿಚ್ಯುತಾನ್।।
ಆದರೆ ರಾಜ್ಯವನ್ನು ಕಳೆದುಕೊಂಡು ವಿಪಿನವನ್ನು ಸೇರಿರುವ ನನ್ನ ಭ್ರಾತೃಗಳ ಕುರಿತು ಶೋಚಿಸುವಷ್ಟು ನನ್ನ ವಿನಾಶದ ಕುರಿತು ಶೋಚಿಸುತ್ತಿಲ್ಲ.
03176030a ಹಿಮವಾಂಶ್ಚ ಸುದುರ್ಗೋಽಯಂ ಯಕ್ಷರಾಕ್ಷಸಸಂಕುಲಃ।
03176030c ಮಾಂ ಚ ತೇ ಸಮುದೀಕ್ಷಂತಃ ಪ್ರಪತಿಷ್ಯಂತಿ ವಿಹ್ವಲಾಃ।।
03176031a ವಿನಷ್ಟಮಥ ವಾ ಶ್ರುತ್ವಾ ಭವಿಷ್ಯಂತಿ ನಿರುದ್ಯಮಾಃ।
03176031c ಧರ್ಮಶೀಲಾ ಮಯಾ ತೇ ಹಿ ಬಾಧ್ಯಂತೇ ರಾಜ್ಯಗೃದ್ಧಿನಾ।।
ಯಕ್ಷ-ರಾಕ್ಷಸರ ಸಂಕುಲವಾದ ಈ ಹಿಮಾಲಯವು ತುಂಬಾ ಅಪಾಯಕಾರಿ. ನನ್ನನ್ನು ಈ ರೀತಿ ನೋಡಿದರೆ ಅವರು ವಿಹ್ವಲರಾಗಿ ಕೆಳಗುರುಳುತ್ತಾರೆ. ನಾನು ನಾಶಹೊಂದಿದ್ದೇನೆ ಎಂದು ತಿಳಿದ ಅವರು ಶ್ರಮವನ್ನು ತೊರೆಯುತ್ತಾರೆ. ಅವರೆಲ್ಲ ಧರ್ಮಶೀಲರು ರಾಜ್ಯದ ಆಸೆಬುರುಕನಾದ ನನ್ನಿಂದಲೇ ಬಾಧಿತರಾಗಿದ್ದಾರೆ.
03176032a ಅಥ ವಾ ನಾರ್ಜುನೋ ಧೀಮಾನ್ವಿಷಾದಮುಪಯಾಸ್ಯತಿ।
03176032c ಸರ್ವಾಸ್ತ್ರವಿದನಾಧೃಷ್ಯೋ ದೇವಗಂಧರ್ವರಾಕ್ಷಸೈಃ।।
ಅಥವಾ ಸರ್ವ ಅಸ್ತ್ರಗಳನ್ನು ತಿಳಿದ ದೇವ-ಗಂಧರ್ವ-ರಾಕ್ಷರಿಂದಲೂ ಗೆಲ್ಲಲಸಾದ್ಯ ಧೀಮಂತ ಅರ್ಜುನನು ವಿಷಾದಹೊಂದುತ್ತಾನೆ.
03176033a ಸಮರ್ಥಃ ಸ ಮಹಾಬಾಹುರೇಕಾಹ್ನಾ ಸುಮಹಾಬಲಃ।
03176033c ದೇವರಾಜಮಪಿ ಸ್ಥಾನಾತ್ಪ್ರಚ್ಯಾವಯಿತುಮೋಜಸಾ।।
03176034a ಕಿಂ ಪುನರ್ಧೃತರಾಷ್ಟ್ರಸ್ಯ ಪುತ್ರಂ ದುರ್ದ್ಯೂತದೇವಿನಂ।
03176034c ವಿದ್ವಿಷ್ಟಂ ಸರ್ವಲೋಕಸ್ಯ ದಂಭಲೋಭಪರಾಯಣಂ।।
ಆ ಮಹಾಬಾಹು ಸುಮಹಾಬಲನು ಒಬ್ಬನೇ ದೇವರಾಜನನ್ನೂ ಕೂಡ ಅವನ ಸ್ಥಾನದಿಂದ ಕೆಳಗುರುಳಿಸುವ ಓಜಸ್ಸನ್ನು ಪಡೆದಿದ್ದಾನೆ. ಕೆಟ್ಟ ದ್ಯೂತಕೋರನಾದ, ಲೋಕದಲ್ಲಿ ಯಾರಿಗೂ ಇಷ್ಟವಿರದ, ಲೋಭ-ಮೋಸಗಳಲ್ಲಿ ನಿರತ ಧೃತರಾಷ್ಟ್ರಪುತ್ರನಿನ್ನೇನು?
03176035a ಮಾತರಂ ಚೈವ ಶೋಚಾಮಿ ಕೃಪಣಾಂ ಪುತ್ರಗೃದ್ಧಿನೀಂ।
03176035c ಯಾಸ್ಮಾಕಂ ನಿತ್ಯಮಾಶಾಸ್ತೇ ಮಹತ್ತ್ವಮಧಿಕಂ ಪರೈಃ।।
ಪುತ್ರನ ಮೇಲೆ ಆಸೆಯನ್ನಿಟ್ಟಿರುವ, ನಾವು ಇತರರಿಗಿಂತ ಅಧಿಕ ಮಹತ್ವವುಳ್ಳವರಾಗಬೇಕೆಂದು ನಿತ್ಯವೂ ಆಶಿಸುತ್ತಿರುವ ನನ್ನ ಬಡ ತಾಯಿಯ ಕುರಿತೂ ಶೋಕಿಸುತ್ತೇನೆ.
03176036a ಕಥಂ ನು ತಸ್ಯಾನಾಥಾಯಾ ಮದ್ವಿನಾಶಾದ್ಭುಜಂಗಮ।
03176036c ಅಫಲಾಸ್ತೇ ಭವಿಷ್ಯಂತಿ ಮಯಿ ಸರ್ವೇ ಮನೋರಥಾಃ।।
ಭುಜಂಗಮ! ನನ್ನ ವಿನಾಶದಿಂದ ಅನಾಥಳಾದ ಅವಳು ನನ್ನ ಮೇಲೆ ಇಟ್ಟಿದ್ದ ಸರ್ವ ಮನೋರಥಗಳೂ ನಿಷ್ಫಲವಾಗುವುದಿಲ್ಲವೇ?
03176037a ನಕುಲಃ ಸಹದೇವಶ್ಚ ಯಮಜೌ ಗುರುವರ್ತಿನೌ।
03176037c ಮದ್ಬಾಹುಬಲಸಂಸ್ತಬ್ಧೌ ನಿತ್ಯಂ ಪುರುಷಮಾನಿನೌ।।
03176038a ನಿರುತ್ಸಾಹೌ ಭವಿಷ್ಯೇತೇ ಭ್ರಷ್ಟವೀರ್ಯಪರಾಕ್ರಮೌ।
03176038c ಮದ್ವಿನಾಶಾತ್ಪರಿದ್ಯೂನಾವಿತಿ ಮೇ ವರ್ತತೇ ಮತಿಃ।।
ಹಿರಿಯರಿಗೆ ವಿನೀತರಾದ ಯಮಳ ನಕುಲ ಸಹದೇವರು ನಿತ್ಯವೂ ನನ್ನ ಬಾಹುಬಲದ ಬೆಂಬಲದಿಂದ ಪುರುಷರೆನಿಸಿಕೊಂಡಿದ್ದರು. ಅವರು ನನ್ನ ವಿನಾಶದಿಂದ ಅನಾಥರಾಗಿ ವೀರಪರಾಕ್ರಮವನ್ನು ಕಳೆದುಕೊಂಡು ನಿರುತ್ಸಾಹರಾಗುತ್ತಾರೆ ಎಂದು ನನಗನ್ನಿಸುತ್ತದೆ.”
03176039a ಏವಂವಿಧಂ ಬಹು ತದಾ ವಿಲಲಾಪ ವೃಕೋದರಃ।
03176039c ಭುಜಂಗಭೋಗಸಂರುದ್ಧೋ ನಾಶಕಚ್ಚ ವಿಚೇಷ್ಟಿತುಂ।।
ಈ ವಿಧದಲ್ಲಿ ಹಾವಿನ ಸುರುಳಿಯಲ್ಲಿ ಸಿಕ್ಕಿಹಾಕಿಕೊಂಡು ಅಲುಗಾಡಲೂ ಅಶಕ್ತನಾದ ವೃಕೋದರನು ಬಹಳಷ್ಟು ವಿಲಪಿಸಿದನು.
03176040a ಯುಧಿಷ್ಠಿರಸ್ತು ಕೌಂತೇಯ ಬಭೂವಾಸ್ವಸ್ಥಚೇತನಃ।
03176040c ಅನಿಷ್ಟದರ್ಶನಾನ್ಘೋರಾನುತ್ಪಾತಾನ್ಪರಿಚಿಂತಯನ್।।
ಆಗ ಕೌಂತೇಯ ಯುಧಿಷ್ಠಿರನು ಅಸ್ವಸ್ಥಚೇತನನಾದನು. ಘೋರ ಉತ್ಪಾತಗಳನ್ನೂ ಅಪಶಕುನಗಳನ್ನೂ ನೋಡಿ ತುಂಬಾ ಚಿಂತಿತನಾದನು.
03176041a ದಾರುಣಂ ಹ್ಯಶಿವಂ ನಾದಂ ಶಿವಾ ದಕ್ಷಿಣತಃ ಸ್ಥಿತಾ।
03176041c ದೀಪ್ತಾಯಾಂ ದಿಶಿ ವಿತ್ರಸ್ತಾ ರೌತಿ ತಸ್ಯಾಶ್ರಮಸ್ಯ ಹ।।
ಅವನ ಆಶ್ರಮದ ಪಕ್ಕದಲ್ಲಿ ಆಕಾಶವು ಕೆಂಪಾದ ದಕ್ಷಿಣ ದಿಕ್ಕಿನಿಂದ ಒಂದು ಹೆಣ್ಣು ನರಿಯ ದಾರುಣ ಕೂಗು ಕೇಳಿಬಂದಿತು.
03176042a ಏಕಪಕ್ಷಾಕ್ಷಿಚರಣಾ ವರ್ತಿಕಾ ಘೋರದರ್ಶನಾ।
03176042c ರುಧಿರಂ ವಮಂತೀ ದದೃಶೇ ಪ್ರತ್ಯಾದಿತ್ಯಮಪಸ್ವರಾ।।
ಒಂದೇ ರೆಕ್ಕೆಯ, ಒಂದೇ ಕಣ್ಣಿನ, ಒಂದೇ ಕಾಲಿನ ಘೋರವಾಗಿ ಕಾಣುತ್ತಿದ್ದ ಬಾತುಕೋಳಿಯು ರಕ್ತವನ್ನು ಕಾರುತ್ತಾ ಸೂರ್ಯನ ದಿಕ್ಕಿನಲ್ಲಿ ಹೋಗುತ್ತಿರುವುದು ಕಂಡುಬಂದಿತು.
03176043a ಪ್ರವವಾವನಿಲೋ ರೂಕ್ಷಶ್ಚಂಡಃ ಶರ್ಕರಕರ್ಷಣಃ।
03176043c ಅಪಸವ್ಯಾನಿ ಸರ್ವಾಣಿ ಮೃಗಪಕ್ಷಿರುತಾನಿ ಚ।।
03176044a ಪೃಷ್ಠತೋ ವಾಯಸಃ ಕೃಷ್ಣೋ ಯಾಹಿ ಯಾಹೀತಿ ವಾಶತಿ।
ಧೂಳುತುಂಬಿದ ಬಿಸಿ ಒರಟು ಗಾಳಿಯು ಬೀಸಿತು. ಎಲ್ಲ ಮೃಗಪಕ್ಷಿಗಳು ಕಪ್ಪುಕಾಗೆಯ ಬೆನ್ನತ್ತಿ ಹೋಗು ಹೋಗು ಎಂದು ಕೂಗುತ್ತಿದ್ದವು.
03176044c ಮುಹುರ್ಮುಹುಃ ಪ್ರಸ್ಫುರತಿ ದಕ್ಷಿಣೋಽಸ್ಯ ಭುಜಸ್ತಥಾ।।
03176045a ಹೃದಯಂ ಚರಣಶ್ಚಾಪಿ ವಾಮೋಽಸ್ಯ ಪರಿವರ್ತತೇ।
03176045c ಸವ್ಯಸ್ಯಾಕ್ಷ್ಣೋ ವಿಕಾರಶ್ಚಾಪ್ಯನಿಷ್ಟಃ ಸಮಪದ್ಯತ।।
ಅವನ ಬಲತೋಳು ನಡುಗತೊಡಗಿತು, ಅವನ ಎದೆ ತತ್ತರಿಸಿತು, ಅವನ ಎಡಕಾಲು ಮಿಡಿಯಿತು, ಮತ್ತು ಅವನ ಎಡಕಣ್ಣು ಒಂದೇ ಸಮನೆ ಬಡಿಯತೊಡಗಿತು.
03176046a ಸ ಧರ್ಮರಾಜೋ ಮೇಧಾವೀ ಶಂಕಮಾನೋ ಮಹದ್ಭಯಂ।
03176046c ದ್ರೌಪದೀಂ ಪರಿಪಪ್ರಚ್ಚ ಕ್ವ ಭೀಮ ಇತಿ ಭಾರತ।।
ಭಾರತ! ಮಹಾಭಯವನ್ನು ಶಂಕಿಸಿ ಆ ಮೇಧಾವಿ ಧರ್ಮರಾಜನು “ಭೀಮನೆಲ್ಲಿ?” ಎಂದು ದ್ರೌಪದಿಯನ್ನು ಕೇಳಿದನು.
03176047a ಶಶಂಸ ತಸ್ಮೈ ಪಾಂಚಾಲೀ ಚಿರಯಾತಂ ವೃಕೋದರಂ।
03176047c ಸ ಪ್ರತಸ್ಥೇ ಮಹಾಬಾಹುರ್ಧೌಮ್ಯೇನ ಸಹಿತೋ ನೃಪಃ।।
ಅವನಿಗೆ ಪಾಂಚಾಲಿಯು “ವೃಕೋದರನು ಹೋಗಿ ತುಂಬಾ ಹೊತ್ತಾಯಿತು” ಎಂದಳು. ಆಗ ಮಹಾಬಾಹು ನೃಪನು ಧೌಮ್ಯನನ್ನು ಜೊತೆಗೆ ಕರೆದುಕೊಂಡು ಹೊರಟನು.
03176048a ದ್ರೌಪದ್ಯಾ ರಕ್ಷಣಂ ಕಾರ್ಯಮಿತ್ಯುವಾಚ ಧನಂಜಯಂ।
03176048c ನಕುಲಂ ಸಹದೇವಂ ಚ ವ್ಯಾದಿದೇಶ ದ್ವಿಜಾನ್ಪ್ರತಿ।।
ದ್ರೌಪದಿಯ ರಕ್ಷಣಕಾರ್ಯವು ನಿನ್ನದು ಎಂದು ಧನಂಜಯನಿಗೆ ಹೇಳಿದನು ಹಾಗೂ ನಕುಲ ಸಹದೇವರಿಗೆ ದ್ವಿಜರ ಕುರಿತು ಆದೇಶವನ್ನಿತ್ತನು.
03176049a ಸ ತಸ್ಯ ಪದಮುನ್ನೀಯ ತಸ್ಮಾದೇವಾಶ್ರಮಾತ್ಪ್ರಭುಃ।
03176049c ದದರ್ಶ ಪೃಥಿವೀಂ ಚಿಹ್ನೈರ್ಭೀಮಸ್ಯ ಪರಿಚಿಹ್ನಿತಾಂ।।
ರಾಜನು ಆಶ್ರಮದಿಂದ ಅವನ ಹೆಜ್ಜೆಗಳ ಗುರುತನ್ನು ಹಿಡಿದು ಹೊರಟನು ಮತ್ತು ನೆಲದ ಮೇಲೆ ಅವನು ಹೋದ ದಾರಿಯ ಗುರುತುಗಳನ್ನು ಕಂಡು ಮುಂದುವರೆದನು.
03176050a ಧಾವತಸ್ತಸ್ಯ ವೀರಸ್ಯ ಮೃಗಾರ್ಥೇ ವಾತರಂಹಸಃ।
03176050c ಊರುವಾತವಿನಿರ್ಭಗ್ನಾನ್ದ್ರುಮಾನ್ವ್ಯಾವರ್ಜಿತಾನ್ಪಥಿ।।
ಆ ವಾತರಂಹಸ ವೀರನು ಬೇಟೆಯಾಡುತ್ತಾ ಓಡುವಾಗ ಅವನ ತೊಡೆಗೆ ತಾಗಿ ಸೊಟ್ಟಾದ ಮತ್ತು ಮುರಿದುಬಿದ್ದಿದ್ದ ಮರಗಳನ್ನು ಕಂಡನು.
03176051a ಸ ಗತ್ವಾ ತೈಸ್ತದಾ ಚಿಹ್ನೈರ್ದದರ್ಶ ಗಿರಿಗಹ್ವರೇ।
03176051c ಗೃಹೀತಂ ಭುಜಗೇಂದ್ರೇಣ ನಿಶ್ಚೇಷ್ಟಮನುಜಂ ತಥಾ।।
ಈ ಗುರುತುಗಳನ್ನೇ ಹಿಡಿದು ಹೋಗಿ ಆ ಗಿರಿಗಹ್ವರದಲ್ಲಿ ಭುಜಗೇಂದ್ರನ ಹಿಡಿತಕ್ಕೆ ಸಿಲುಕಿ ನಿಶ್ಚೇಷ್ಟನಾಗಿದ್ದ ಅನುಜನನ್ನು ನೋಡಿದನು.”
ಸಮಾಪ್ತಿ
ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವಣಿ ಯುಧಿಷ್ಠಿರಭೀಮದರ್ಶನೇ ಷಟ್ಸಪ್ತತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವದಲ್ಲಿ ಯುಧಿಷ್ಠಿರಭೀಮದರ್ಶನದಲ್ಲಿ ನೂರಾಎಪ್ಪತ್ತಾರನೆಯ ಅಧ್ಯಾಯವು.
-
ನಹುಷನಿಗೆ ಅಗಸ್ತ್ಯನಿಂದ ದೊರೆತ ಶಾಪದ ಕುರಿತು ವಿಸ್ತಾರವಾದ ಕಥೆಯು ಉದ್ಯೋಗಪರ್ವದಲ್ಲಿದೆ. ↩︎