174 ಪುನರ್ದ್ವೈತವನಪ್ರವೇಶಃ

ಪ್ರವೇಶ

।। ಓಂ ಓಂ ನಮೋ ನಾರಾಯಣಾಯ।। ಶ್ರೀ ವೇದವ್ಯಾಸಾಯ ನಮಃ ।।

ಶ್ರೀ ಕೃಷ್ಣದ್ವೈಪಾಯನ ವೇದವ್ಯಾಸ ವಿರಚಿತ

ಶ್ರೀ ಮಹಾಭಾರತ

ಆರಣ್ಯಕ ಪರ್ವ

ಅಜಗರ ಪರ್ವ

ಅಧ್ಯಾಯ 174

ಸಾರ

ವೃಷಪರ್ವ ಮತ್ತು ಸುಬಾಹುಗಳ ರಾಜ್ಯಗಳನ್ನು ಭೇಟಿಮಾಡಿ ಯಮುನಾದ್ರಿಗೆ ಬಂದುದು (1-20). ಹನ್ನೆರಡನೆಯ ವರ್ಷ ಪುನಃ ದ್ವೈತವನಕ್ಕೆ ಬಂದುದು (21-24).

03174001 ವೈಶಂಪಾಯನ ಉವಾಚ।
03174001a ನಗೋತ್ತಮಂ ಪ್ರಸ್ರವಣೈರುಪೇತಂ। ದಿಶಾಂ ಗಜೈಃ ಕಿನ್ನರಪಕ್ಷಿಭಿಶ್ಚ।
03174001c ಸುಖಂ ನಿವಾಸಂ ಜಹತಾಂ ಹಿ ತೇಷಾಂ। ನ ಪ್ರೀತಿರಾಸೀದ್ ಭರತರ್ಷಭಾಣಾಂ।।

ವೈಶಂಪಾಯನನು ಹೇಳಿದನು: “ಝರಿಗಳಿಂದ ಕೂಡಿದ್ದ, ದಿಗ್ಗಜಗಳಿಂದ, ಕಿನ್ನರರಿಂದ ಮತ್ತು ಪಕ್ಷಿಗಳಿಂದ ಕೂಡಿದ್ದ, ಸುಖನಿವಾಸವಾಗಿದ್ದ ಆ ಉತ್ತಮ ಪರ್ವತವನ್ನು ಬಿಟ್ಟುಬರುವಾಗ ಭರತರ್ಷಭರು ಸಂತಸಗೊಳ್ಳಲಿಲ್ಲ.

03174002a ತತಸ್ತು ತೇಷಾಂ ಪುನರೇವ ಹರ್ಷಃ। ಕೈಲಾಸಮಾಲೋಕ್ಯ ಮಹಾನ್ಬಭೂವ।
03174002c ಕುಬೇರಕಾಂತಂ ಭರತರ್ಷಭಾಣಾಂ। ಮಹೀಧರಂ ವಾರಿಧರಪ್ರಕಾಶಂ।।

ಆದರೆ ಮರುಕ್ಷಣದಲ್ಲಿಯೇ ಕುಬೇರನಿಗೆ ಬಹುಪ್ರಿಯವಾಗಿದ್ದ ಕಪ್ಪಾದ ಮೋಡಗಳಿಂದ ಪ್ರಕಾಶಮಾನವಾಗಿ ಕಾಣುತ್ತಿದ್ದ ಕೈಲಾಸಪರ್ವತವನ್ನು ಕಂಡೊಡನೆಯೇ ಅವರ ಮನಸ್ಸು ಆಹ್ಲಾದಿತವಾಯಿತು.

03174003a ಸಮುಚ್ಚ್ರಯಾನ್ಪರ್ವತಸನ್ನಿರೋಧಾನ್। ಗೋಷ್ಠಾನ್ಗಿರೀಣಾಂ ಗಿರಿಸೇತುಮಾಲಾಃ।
03174003c ಬಹೂನ್ಪ್ರಪಾತಾಂಶ್ಚ ಸಮೀಕ್ಷ್ಯ ವೀರಾಃ। ಸ್ಥಲಾನಿ ನಿಮ್ನಾನಿ ಚ ತತ್ರ ತತ್ರ।।

ಆ ವೀರರು ಪರ್ವತದ ದಾರಿಗಳನ್ನೂ, ಭಾರೀ ಕಣಿವೆಗಳನ್ನೂ, ಗುಡ್ಡಗಳ ರಾಶಿಯನ್ನೂ, ಗಿರಿಗಳ ನಡುವಿನ ಸೇತುವೆಗಳನ್ನೂ, ಬಹಳಷ್ಟು ಪ್ರಪಾತಗಳನ್ನೂ, ಮತ್ತು ‌ಅಲ್ಲಲ್ಲಿ ತಗ್ಗಿನ ಪ್ರದೇಶಗಳನ್ನೂ ನೋಡಿದರು.

03174004a ತಥೈವ ಚಾನ್ಯಾನಿ ಮಹಾವನಾನಿ। ಮೃಗದ್ವಿಜಾನೇಕಪಸೇವಿತಾನಿ।
03174004c ಆಲೋಕಯಂತೋಽಭಿಯಯುಃ ಪ್ರತೀತಾಸ್। ತೇ ಧನ್ವಿನಃ ಖಡ್ಗಧರಾ ನರಾಗ್ರ್ಯಾಃ।।

ಹಾಗೆಯೇ ಆ ನರವ್ಯಾಘ್ರರು ಧನುಸ್ಸು ಖಡ್ಗಗಳನ್ನು ಧರಿಸಿ ಅತಿ ವಿಶ್ವಾಸದಿಂದ ಇತರ ಮಹಾವನಗಳನ್ನೂ, ಮೃಗಗಳನ್ನೂ, ಆನೆಗಳನ್ನೂ ನೋಡುತ್ತಾ ಮುಂದುವರೆದರು.

03174005a ವನಾನಿ ರಮ್ಯಾಣಿ ಸರಾಂಸಿ ನದ್ಯೋ। ಗುಹಾ ಗಿರೀಣಾಂ ಗಿರಿಗಃವರಾಣಿ।
03174005c ಏತೇ ನಿವಾಸಾಃ ಸತತಂ ಬಭೂವುರ್। ನಿಶಾನಿಶಂ ಪ್ರಾಪ್ಯ ನರರ್ಷಭಾಣಾಂ।।

ಆ ನರರ್ಷಭರು ರಾತ್ರಿಯ ನಂತರ ರಾತ್ರಿಗಳಲ್ಲಿ ವನಗಳಲ್ಲಿ, ರಮ್ಯ ಸರೋವರ-ನದೀ ದಡಗಳಲ್ಲಿ, ಗಿರಿಗಳಲ್ಲಿ, ಗಿರಿಕಂದರಗಳಲ್ಲಿ ಶಿಬಿರಗಳನ್ನು ನಿರ್ಮಿಸಿ ವಾಸಿಸುತ್ತಾ ಮುಂದುವರೆದರು.

03174006a ತೇ ದುರ್ಗವಾಸಂ ಬಹುಧಾ ನಿರುಷ್ಯ। ವ್ಯತೀತ್ಯ ಕೈಲಾಸಮಚಿಂತ್ಯರೂಪಂ।
03174006c ಆಸೇದುರತ್ಯರ್ಥಮನೋರಮಂ ವೈ। ತಮಾಶ್ರಮಾಗ್ರ್ಯಂ ವೃಷಪರ್ವಣಸ್ತೇ।।

ಹಲವು ರಾತ್ರಿಗಳನ್ನು ಗಿರಿದುರ್ಗಗಳಲ್ಲಿ ಕಳೆಯುತ್ತಾ ಅಚಿಂತ್ಯ ರೂಪಿ ಕೈಲಾಸವನ್ನು ದಾಟಿ ಅವರು ಸುಂದರವೋ ಮನೋರಮವೂ ಆಗಿದ್ದ ವೃಷಪರ್ವಣನ ಆಶ್ರಮವನ್ನು ತಲುಪಿದರು.

03174007a ಸಮೇತ್ಯ ರಾಜ್ಞಾ ವೃಷಪರ್ವಣಸ್ತೇ। ಪ್ರತ್ಯರ್ಚಿತಾಸ್ತೇನ ಚ ವೀತಮೋಹಾಃ।
03174007c ಶಶಂಸಿರೇ ವಿಸ್ತರಶಃ ಪ್ರವಾಸಂ। ಶಿವಂ ಯಥಾವದ್ವೃಷಪರ್ವಣಸ್ತೇ।।

ರಾಜ ವೃಷಪರ್ವನನ್ನು ಭೇಟಿಮಾಡಿ, ಅವನಿಂದ ಸತ್ಕಾರಗೊಂಡು ಆಯಾಸವನ್ನು ಕಳೆದುಕೊಂಡು ಅವರು ವೃಷಪರ್ವನಿಗೆ ವಿಸ್ತಾರವಾಗಿ ಮತ್ತು ಯಥಾವತ್ತಾಗಿ ಅವರ ಮಂಗಳ ಪ್ರವಾಸದ ಕುರಿತು ಹೇಳಿಕೊಂಡರು.

03174008a ಸುಖೋಷಿತಾಸ್ತತ್ರ ತ ಏಕರಾತ್ರಂ। ಪುಣ್ಯಾಶ್ರಮೇ ದೇವಮಹರ್ಷಿಜುಷ್ಟೇ।
03174008c ಅಭ್ಯಾಯಯುಸ್ತೇ ಬದರೀಂ ವಿಶಾಲಾಂ। ಸುಖೇನ ವೀರಾಃ ಪುನರೇವ ವಾಸಂ।।

ದೇವ-ಮಹರ್ಷಿಗಳು ಅರಸುವ ಅವನ ಆ ಪುಣ್ಯಾಶ್ರಮದಲ್ಲಿ ಒಂದು ರಾತ್ರಿಯನ್ನು ಸುಖವಾಗಿ ಕಳೆದು ಆ ವೀರರು ವಿಶಾಲ ಬದರಿಯಲ್ಲಿ ಪುನಃ ವಾಸ್ತವ್ಯವನ್ನು ಮಾಡಿದರು.

03174009a ಊಷುಸ್ತತಸ್ತತ್ರ ಮಹಾನುಭಾವಾ। ನಾರಾಯಣಸ್ಥಾನಗತಾ ನರಾಗ್ರ್ಯಾಃ।
03174009c ಕುಬೇರಕಾಂತಾಂ ನಲಿನೀಂ ವಿಶೋಕಾಃ। ಸಂಪಶ್ಯಮಾನಾಃ ಸುರಸಿದ್ಧಜುಷ್ಟಾಂ।।

ಅನಂತರ ಆ ಮಹಾನುಭಾವ ನರವ್ಯಾಘ್ರರು ನಾರಾಯಣಸ್ಥಾನಕ್ಕೆ ಹೋಗಿ ಅಲ್ಲಿ ಕುಬೇರನಿಗೆ ಇಷ್ಟವಾದ ಶೋಕವನ್ನು ನಾಶಪಡಿಸಬಲ್ಲ, ಸುರರು ಮತ್ತು ಸಿದ್ಧರು ಬಯಸುವ ಸರೋವರವನ್ನು ನೋಡಿದರು.

03174010a ತಾಂ ಚಾಥ ದೃಷ್ಟ್ವಾ ನಲಿನೀಂ ವಿಶೋಕಾಃ। ಪಾಂಡೋಃ ಸುತಾಃ ಸರ್ವನರಪ್ರವೀರಾಃ।
03174010c ತೇ ರೇಮಿರೇ ನಂದನವಾಸಮೇತ್ಯ। ದ್ವಿಜರ್ಷಯೋ ವೀತಭಯಾ ಯಥೈವ।।

ಆ ಸರೋವರವನ್ನು ನೋಡಿ ನರಪ್ರವೀರ ಪಾಂಡುಸುತರೆಲ್ಲರೂ ನಂದನವನವನ್ನು ಸೇರಿದ ದ್ವಿಜರ್ಷಿಗಳು ಹೇಗೆ ವೀತಭಯರಾಗುತ್ತಾರೋ ಹಾಗೆ ವಿಶೋಕರಾಗಿ ರಮಿಸಿದರು.

03174011a ತತಃ ಕ್ರಮೇಣೋಪಯಯುರ್ನೃವೀರಾ। ಯಥಾಗತೇನೈವ ಪಥಾ ಸಮಗ್ರಾಃ।
03174011c ವಿಹೃತ್ಯ ಮಾಸಂ ಸುಖಿನೋ ಬದರ್ಯಾಂ। ಕಿರಾತರಾಜ್ಞೋ ವಿಷಯಂ ಸುಬಾಹೋಃ।।

ಬದರಿಯಲ್ಲಿ ಅವರು ಒಂದು ತಿಂಗಳು ಸುಖದಿಂದ ಕಳೆದರು. ನಂತರ ಆ ವೀರರು ಕಿರಾತರಾಜ ಸುಬಾಹುವಿನ ರಾಜ್ಯವನ್ನು ಕ್ರಮೇಣವಾಗಿ ಹಿಂದೆ ಬಂದಿದ್ದ ದಾರಿಯನ್ನೇ ಅನುಸರಿಸಿ ಬಂದು ಸೇರಿದರು.

03174012a ಚೀನಾಂಸ್ತುಖಾರಾನ್ದರದಾನ್ಸದಾರ್ವಾನ್। ದೇಶಾನ್ಕುಣಿಂದಸ್ಯ ಚ ಭೂರಿರತ್ನಾನ್।
03174012c ಅತೀತ್ಯ ದುರ್ಗಂ ಹಿಮವತ್ಪ್ರದೇಶಂ। ಪುರಂ ಸುಬಾಹೋರ್ದದೃಶುರ್ನೃವೀರಾಃ।।

ಆ ವೀರರು ರತ್ನಭರಿತ ಚೀನ, ತುಖಾರ, ದರದ, ದಾರ್ವ ಮತ್ತು ಕುಣಿಂದ ದೇಶಗಳನ್ನು ದಾಟಿ, ಹಿಮಾಲಯದ ದುರ್ಗದ ಮೂಲಕ ಸುಬಾಹುವಿನ ಪುರವನ್ನು ತಲುಪಿದರು.

03174013a ಶ್ರುತ್ವಾ ಚ ತಾನ್ಪಾರ್ಥಿವಪುತ್ರಪೌತ್ರಾನ್। ಪ್ರಾಪ್ತಾನ್ಸುಬಾಹುರ್ವಿಷಯೇ ಸಮಗ್ರಾನ್।
03174013c ಪ್ರತ್ಯುದ್ಯಯೌ ಪ್ರೀತಿಯುತಃ ಸ ರಾಜಾ। ತಂ ಚಾಭ್ಯನಂದನ್ವೃಷಭಾಃ ಕುರೂಣಾಂ।।

ಆ ರಾಜಪುತ್ರರೂ ಪೌತ್ರರೂ ತನ್ನ ರಾಜ್ಯಕ್ಕೆ ಆಗಮಿಸಿದ್ದಾರೆಂದು ಕೇಳಿದ ರಾಜ ಸುಬಾಹುವು ಸಂತೋಷದಿಂದ ಹೊರಬಂದು ಸ್ವಾಗತಿಸಿದನು ಮತ್ತು ಕುರುವೃಷಭರು ಅವನನ್ನು ಅಭಿನಂದಿಸಿದರು.

03174014a ಸಮೇತ್ಯ ರಾಜ್ಞಾ ತು ಸುಬಾಹುನಾ ತೇ। ಸೂತೈರ್ವಿಶೋಕಪ್ರಮುಖೈಶ್ಚ ಸರ್ವೈಃ।
03174014c ಸಹೇಂದ್ರಸೇನೈಃ ಪರಿಚಾರಕೈಶ್ಚ। ಪೌರೋಗವೈರ್ಯೇ ಚ ಮಹಾನಸಸ್ಥಾಃ।।

ಅವರು ರಾಜ ಸುಬಾಹುವನ್ನು, ಮತ್ತು ವಿಶೋಕನ ನಾಯಕತ್ವದಲ್ಲಿದ್ದ ಎಲ್ಲ ಸೂತರನ್ನೂ, ಇಂದ್ರಸೇನನೊಂದಿಗೆ ಪರಿಚಾರಕರನ್ನೂ, ಅಡುಗೆ ಭಟ್ಟರನ್ನೂ ಮತ್ತು ಅವರ ಮೇಲ್ವಿಚಾರಕರನ್ನೂ ಭೇಟಿಮಾಡಿದರು.

03174015a ಸುಖೋಷಿತಾಸ್ತತ್ರ ತ ಏಕರಾತ್ರಂ। ಸೂತಾನುಪಾದಾಯ ರಥಾಂಶ್ಚ ಸರ್ವಾನ್।
03174015c ಘಟೋತ್ಕಚಂ ಸಾನುಚರಂ ವಿಸೃಜ್ಯ। ತತೋಽಭ್ಯಯುರ್ಯಾಮುನಮದ್ರಿರಾಜಂ।।

ಅವರು ಅಲ್ಲಿ ಒಂದು ರಾತ್ರಿಯನ್ನು ಸುಖದಿಂದ ಕಳೆದರು. ಘಟೋತ್ಕಚ ಮತ್ತು ಅವನ ಅನುಚರರನ್ನು ಕಳುಹಿಸಿ ಎಲ್ಲ ರಥಗಳಿಗೂ ಸೂತರನ್ನು ಕೂಡಿಸಿಕೊಂಡು ಯಮುನಾದ್ರಿಯ ಕಡೆ ಹೊರಟರು.

03174016a ತಸ್ಮಿನ್ಗಿರೌ ಪ್ರಸ್ರವಣೋಪಪನ್ನೇ। ಹಿಮೋತ್ತರೀಯಾರುಣಪಾಂಡುಸಾನೌ।
03174016c ವಿಶಾಖಯೂಪಂ ಸಮುಪೇತ್ಯ ಚಕ್ರುಸ್। ತದಾ ನಿವಾಸಂ ಪುರುಷಪ್ರವೀರಾಃ।।

ಹರಿಯುತ್ತಿರುವ ಝರಿಗಳ ಮತ್ತು ಕೆಂಪು ಮತ್ತು ಬಿಳಿಬಣ್ಣಗಳ, ಉತ್ತರೀಯದಂತೆ ಹಿಮದಿಂದ ಆಚ್ಛಾದಿತವಾದ ಆ ಗಿರಿಯಮೇಲೆ ವಿಶಾಲವೆಂಬ ಯೂಪವನ್ನು ತಲುಪಿ ಅಲ್ಲಿ ಪುರುಷ ಪ್ರವೀರರು ನಿವಾಸಸ್ಥಾನವನ್ನು ರಚಿಸಿದರು.

03174017a ವರಾಹನಾನಾಮೃಗಪಕ್ಷಿಜುಷ್ಟಂ। ಮಹದ್ವನಂ ಚೈತ್ರರಥಪ್ರಕಾಶಂ।
03174017c ಶಿವೇನ ಯಾತ್ವಾ ಮೃಗಯಾಪ್ರಧಾನಾಃ। ಸಂವತ್ಸರಂ ತತ್ರ ವನೇ ವಿಜಃರುಃ।।

ಚೈತ್ರರಥನ ವನದಂತಿರುವ ಆ ಮಹಾವನದಲ್ಲಿ ಹಂದಿ ಮತ್ತು ನಾನಾ ಮೃಗಪಕ್ಷಿಗಳ ಸಂಕುಲವಿತ್ತು. ಅವರು ಏನೂ ಆತಂಕವಿಲ್ಲದೆ ಮೃಗಗಳನ್ನು ಬೇಟೆಯಾಡುತ್ತಿದ್ದರು. ಹೀಗೆ ಆ ವನದಲ್ಲಿ ಒಂದು ವರ್ಷವನ್ನು ಕಳೆದರು.

03174018a ತತ್ರಾಸಸಾದಾತಿಬಲಂ ಭುಜಂಗಂ। ಕ್ಷುಧಾರ್ದಿತಂ ಮೃತ್ಯುಮಿವೋಗ್ರರೂಪಂ।
03174018c ವೃಕೋದರಃ ಪರ್ವತಕಂದರಾಯಾಂ। ವಿಷಾದಮೋಹವ್ಯಥಿತಾಂತರಾತ್ಮಾ।।

ಅಲ್ಲಿಯೇ ವೃಕೋದರನು ಪರ್ವತ ಕಂದರದಲ್ಲಿ ಹಸಿವಿನಿಂದ ಬಳಲಿದ್ದ, ಅತಿಬಲಶಾಲಿ, ಮೃತ್ಯುವಿನಂತೆ ಉಗ್ರವಾಗಿ ತೋರುತ್ತಿದ್ದ, ಅಂತರಾತ್ಮವು ವಿಷಾದ ಮತ್ತು ಮೋಹಗಳಿಂದ ವ್ಯತಿಥವಾಗಿದ್ದ ಸರ್ಪವನ್ನು ಕಂಡನು.

03174019a ದ್ವೀಪೋಽಭವದ್ಯತ್ರ ವೃಕೋದರಸ್ಯ। ಯುಧಿಷ್ಠಿರೋ ಧರ್ಮಭೃತಾಂ ವರಿಷ್ಠಃ।
03174019c ಅಮೋಕ್ಷಯದ್ಯಸ್ತಮನಂತತೇಜಾ। ಗ್ರಾಹೇಣ ಸಂವೇಷ್ಟಿತಸರ್ವಗಾತ್ರಂ।।

ಅಲ್ಲಿದ್ದ ಒಂದು ದ್ವೀಪದಲ್ಲಿ ಧರ್ಮಭೃತರಲ್ಲಿ ವರಿಷ್ಠ, ಅನಂತ ತೇಜಸ್ವಿ ಯುಧಿಷ್ಠಿರನು ದೇಹದ ಎಲ್ಲ ಅಂಗಾಂಗಗಳೂ ಹಿಡಿದವನ ಹಿಡಿತಕ್ಕೆ ಸಿಕ್ಕಾಗ ಅವನನ್ನು ಬಿಡುಗಡೆ ಮಾಡಿಸಿದನು.

03174020a ತೇ ದ್ವಾದಶಂ ವರ್ಷಮಥೋಪಯಾಂತಂ। ವನೇ ವಿಹರ್ತುಂ ಕುರವಃ ಪ್ರತೀತಾಃ।
03174020c ತಸ್ಮಾದ್ವನಾಚ್ಚೈತ್ರರಥಪ್ರಕಾಶಾಚ್। ಚ್ರಿಯಾ ಜ್ವಲಂತಸ್ತಪಸಾ ಚ ಯುಕ್ತಾಃ।।

ಅವರು ಅಲ್ಲಿ ಹನ್ನೆರಡನೆಯ ವರ್ಷವು ಉರುಳಿ ಬರಲು ವನದಲ್ಲಿ ವಿಹರಿಸುತ್ತಾ ಕಳೆದರು. ಅನಂತರ ತಪಸ್ಸು ಮತ್ತು ಶ್ರೀಯಿಂದ ಬೆಳಗುತ್ತಾ ಚೈತ್ರರಥನ ವನದಂತಿದ್ದ ಆ ವನವನ್ನು ಬಿಟ್ಟರು.

03174021a ತತಶ್ಚ ಯಾತ್ವಾ ಮರುಧನ್ವಪಾರ್ಶ್ವಂ। ಸದಾ ಧನುರ್ವೇದರತಿಪ್ರಧಾನಾಃ।
03174021c ಸರಸ್ವತೀಮೇತ್ಯ ನಿವಾಸಕಾಮಾಃ। ಸರಸ್ತತೋ ದ್ವೈತವನಂ ಪ್ರತೀಯುಃ।।

ಸದಾ ಧನುರ್ವೇದವನ್ನೇ ಅತಿ ಪ್ರಧಾನವಾಗಿಟ್ಟುಕೊಂಡಿದ್ದ ಅವರು ಅನಂತರ ಮರುಭೂಮಿಯ ಪಕ್ಕಕ್ಕೆ ಹೋಗಿ, ಅಲ್ಲಿಂದ ಸರಸ್ವತೀ ತೀರಕ್ಕೆ ಬಂದು ಅಲ್ಲಿ ದ್ವೈತವನದಲ್ಲಿದ್ದ ಸರೋವರದ ಬಳಿ ಬಂದರು.

03174022a ಸಮೀಕ್ಷ್ಯ ತಾನ್ದ್ವೈತವನೇ ನಿವಿಷ್ಟಾನ್। ನಿವಾಸಿನಸ್ತತ್ರ ತತೋಽಭಿಜಗ್ಮುಃ।
03174022c ತಪೋದಮಾಚಾರಸಮಾಧಿಯುಕ್ತಾಸ್। ತೃಣೋದಪಾತ್ರಾಹರಣಾಶ್ಮಕುಟ್ಟಾಃ।।

ದ್ವೈತವನಕ್ಕೆ ಅವರ ಬರವನ್ನು ಕಂಡು ಅಲ್ಲಿರುವ ತಪಸ್ಸು, ದಮ, ಆಚಾರ ಮತ್ತು ಸಮಾಧಿಯುಕ್ತ ನಿವಾಸಿಗಳು ಹುಲ್ಲು, ನೀರು, ಪಾತ್ರ, ಆಹಾರ, ಮತ್ತು ಒರಲುಗಳೊಂದಿಗೆ ಆಗಮಿಸಿದರು.

03174023a ಪ್ಲಕ್ಷಾಕ್ಷರೌಹೀತಕವೇತಸಾಶ್ಚ। ಸ್ನುಹಾ ಬದರ್ಯಃ ಖದಿರಾಃ ಶಿರೀಷಾಃ।
03174023c ಬಿಲ್ವೇಂಗುದಾಃ ಪೀಲುಶಮೀಕರೀರಾಃ। ಸರಸ್ವತೀತೀರರುಹಾ ಬಭೂವುಃ।।

ಅತ್ತಿಯ ಮರಗಳು, ರುದ್ರಾಕ್ಷದ ಮರಗಳು, ರೋಹೀತಕಗಳು, ಬಿದಿರು, ಬದರಿ, ಖದಿರ, ಶಿರೀಷ, ಬಿಲ್ವ, ಇಂಗುದ, ಪೀಲೂ, ಶಮೀಕರೀ ಮೊದರಾದ ವೃಕ್ಷಗಳು ಸರಸ್ವತೀ ತೀರದಲ್ಲಿ ತುಂಬಿಕೊಂಡಿದ್ದವು.

03174024a ತಾಂ ಯಕ್ಷಗಂಧರ್ವಮಹರ್ಷಿಕಾಂತಾಂ। ಆಯಾಗಭೂತಾಮಿವ ದೇವತಾನಾಂ।
03174024c ಸರಸ್ವತೀಂ ಪ್ರೀತಿಯುತಾಶ್ಚರಂತಃ। ಸುಖಂ ವಿಜಹ್ರುರ್ನರದೇವಪುತ್ರಾಃ।।

ಆ ರಾಜಪುತ್ರರು ಯಕ್ಷ, ಗಂಧರ್ವ ಮತ್ತು ಮಹರ್ಷಿಗಳ ಪ್ರೀತಿಪಾತ್ರರಾಗಿ ದೇವತೆಗಳದ್ದೇ ಯಾಗಭೂಮಿಯಾಗಿದ್ದ ಆ ಸರಸ್ವತೀ ತೀರದಲ್ಲಿ ಸಂತೋಷದಿಂದ ಸಂಚರಿಸುತ್ತಾ ಸುಖವಾಗಿ ಕಾಲಕಳೆದರು.”

ಸಮಾಪ್ತಿ

ಇತಿ ಶ್ರೀ ಮಹಾಭಾರತೇ ಆರಣ್ಯಕಪರ್ವಣಿ ಅಜಗರಪರ್ವಣಿ ಪುನರ್ದ್ವೈತವನಪ್ರವೇಶೇ ಚತುಃಸಪ್ತತ್ಯಧಿಕಶತತಮೋಽಧ್ಯಾಯ:।
ಇದು ಮಹಾಭಾರತದ ಆರಣ್ಯಕಪರ್ವದಲ್ಲಿ ಅಜಗರಪರ್ವದಲ್ಲಿ ಪುನರ್ದ್ವೈತವನಪ್ರವೇಶದಲ್ಲಿ ನೂರಾಎಪ್ಪತ್ನಾಲ್ಕನೆಯ ಅಧ್ಯಾಯವು.